Bhishma Parva: Chapter 44

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೪

ತುಮುಲಯುದ್ಧದ ವರ್ಣನೆ (೧-೪೮).

06044001 ಸಂಜಯ ಉವಾಚ|

06044001a ರಾಜಂ ಶತಸಹಸ್ರಾಣಿ ತತ್ರ ತತ್ರ ತದಾ ತದಾ|

06044001c ನಿರ್ಮರ್ಯಾದಂ ಪ್ರಯುದ್ಧಾನಿ ತತ್ತೇ ವಕ್ಷ್ಯಾಮಿ ಭಾರತ||

ಸಂಜಯನು ಹೇಳಿದನು: “ರಾಜನ್! ಭಾರತ! ಅಲ್ಲಲ್ಲಿ ಆಗಾಗ ನೂರಾರು ಸಹಸ್ರಾರು ಮರ್ಯಾದೆಯಿಲ್ಲದೇ ನಡೆಯುತ್ತಿದ್ದ ಯುದ್ಧದ ಕುರಿತು ಹೇಳುತ್ತೇನೆ.

06044002a ನ ಪುತ್ರಃ ಪಿತರಂ ಜಜ್ಞೇ ನ ಪಿತಾ ಪುತ್ರಮೌರಸಂ|

06044002c ನ ಭ್ರಾತಾ ಭ್ರಾತರಂ ತತ್ರ ಸ್ವಸ್ರೀಯಂ ನ ಚ ಮಾತುಲಃ||

06044003a ಮಾತುಲಂ ನ ಚ ಸ್ವಸ್ರೀಯೋ ನ ಸಖಾಯಂ ಸಖಾ ತಥಾ|

06044003c ಆವಿಷ್ಟಾ ಇವ ಯುಧ್ಯಂತೇ ಪಾಂಡವಾಃ ಕುರುಭಿಃ ಸಹ||

ಮಕ್ಕಳು ತಂದೆಯನ್ನು, ತಂದೆಯರು ತಮ್ಮ ಔರಸ ಪುತ್ರರನ್ನು, ಸಹೋದರರು ಸಹೋದರರನ್ನು, ಅಳಿಯರು ಮಾವಂದಿರನ್ನು, ಮಾವಂದಿರು ಅಳಿಯರನ್ನು, ಸಖನು ಸಖನನ್ನು ಗುರುತಿಸಲಿಲ್ಲ. ಪಾಂಡವರು ಕುರುಗಳೊಂದಿಗೆ ಆವಿಷ್ಟರಾದವರಂತೆ ಯುದ್ಧಮಾಡಿದರು.

06044004a ರಥಾನೀಕಂ ನರವ್ಯಾಘ್ರಾಃ ಕೇ ಚಿದಭ್ಯಪತನ್ರಥೈಃ|

06044004c ಅಭಜ್ಯಂತ ಯುಗೈರೇವ ಯುಗಾನಿ ಭರತರ್ಷಭ||

ಭರತರ್ಷಭ! ನೊಗಗಳು ನೊಗಗಳಿಗೆ ಹೊಡೆದು ಕೆಲವು ನರವ್ಯಾಘ್ರರು ರಥಗಳು ಮುರಿದು ಕೆಳಗೆ ಬಿದ್ದರು.

06044005a ರಥೇಷಾಶ್ಚ ರಥೇಷಾಭಿಃ ಕೂಬರಾ ರಥಕೂಬರೈಃ|

06044005c ಸಂಹತಾಃ ಸಂಹತೈಃ ಕೇ ಚಿತ್ಪರಸ್ಪರಜಿಘಾಂಸವಃ||

ರಥದ ಚಕ್ರಗಳೊಂದಿಗೆ ರಥಚಕ್ರಗಳು ತಾಗಿದವು. ಇನ್ನು ಕೆಲವರು ಗುಂಪು ಗುಂಪಾಗಿ ಪರಸ್ಪರರನ್ನು ಕೊಲ್ಲಲು ಹೋರಾಡಿದರು.

06044006a ನ ಶೇಕುಶ್ಚಲಿತುಂ ಕೇ ಚಿತ್ಸಂನಿಪತ್ಯ ರಥಾ ರಥೈಃ|

06044006c ಪ್ರಭಿನ್ನಾಸ್ತು ಮಹಾಕಾಯಾಃ ಸಂನಿಪತ್ಯ ಗಜಾ ಗಜೈಃ||

06044007a ಬಹುಧಾದಾರಯನ್ಕ್ರುದ್ಧಾ ವಿಷಾಣೈರಿತರೇತರಂ|

ಕೆಲವು ರಥಗಳು ಇತರ ರಥಗಳಿಂದ ತಡೆಗಟ್ಟಲ್ಪಟ್ಟು ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಮದವೊಡೆದ ಮಹಾಕಾಯ ಗಜಗಳು ಗಜಗಳನ್ನು ಎದುರಿಸಿ ಸಿಟ್ಟಿಗೆದ್ದು ಕ್ರುದ್ಧರಾಗಿ ತಮ್ಮ ದಂತಗಳಿಂದ ಪರಸ್ಪರರನ್ನು ಇರಿದವು.

06044007c ಸತೋಮರಪತಾಕೈಶ್ಚ ವಾರಣಾಃ ಪರವಾರಣೈಃ||

06044008a ಅಭಿಸೃತ್ಯ ಮಹಾರಾಜ ವೇಗವದ್ಭಿರ್ಮಹಾಗಜೈಃ|

06044008c ದಂತೈರಭಿಹತಾಸ್ತತ್ರ ಚುಕ್ರುಶುಃ ಪರಮಾತುರಾಃ||

ಮಹಾರಾಜ! ತೋಮರ-ಪತಾಕೆಗಳನ್ನುಳ್ಳ ಆನೆಗಳು ಶತ್ರುಗಳ ಆನೆಗಳನ್ನು ಎದುರಿಸಿ, ಮಹಾಗಜಗಳ ದಂತಗಳಿಂದ ವೇಗದಿಂದ ಸೀಳಲ್ಪಟ್ಟು ಪರಮ ನೋವಿನಿಂದ ಕೂಗಿದವು.

06044009a ಅಭಿನೀತಾಶ್ಚ ಶಿಕ್ಷಾಭಿಸ್ತೋತ್ತ್ರಾಂಕುಶಸಮಾಹತಾಃ|

06044009c ಸುಪ್ರಭಿನ್ನಾಃ ಪ್ರಭಿನ್ನಾನಾಂ ಸಮ್ಮುಖಾಭಿಮುಖಾ ಯಯುಃ||

ಅಂಕುಶಗಳಿಂದ ಉತ್ತಮ ಶಿಕ್ಷಣವನ್ನು ಪಡೆದ, ಚೆನ್ನಾಗಿ ನಡೆದುಕೊಳ್ಳುತ್ತಿದ್ದ, ಮದವೊಡೆಯದೇ ಇದ್ದ ಆನೆಗಳು ಮದವೊಡೆದ ಆನೆಗಳನ್ನು ಎದುರಾದವು.

06044010a ಪ್ರಭಿನ್ನೈರಪಿ ಸಂಸಕ್ತಾಃ ಕೇ ಚಿತ್ತತ್ರ ಮಹಾಗಜಾಃ|

06044010c ಕ್ರೌಂಚವನ್ನಿನದಂ ಮುಕ್ತ್ವಾ ಪ್ರಾದ್ರವಂತ ತತಸ್ತತಃ||

ಕೆಲವು ಮದವೊಡೆದ ಗಜಗಳೂ ಕೂಡ ಇತರ ಮಹಾಗಜಗಳನ್ನು ಎದುರಿಸಿ ಕ್ರೌಂಚಪಕ್ಷಿಗಳಂತೆ ರೋದಿಸುತ್ತಾ ಅಲ್ಲಲ್ಲಿ ಮಾವುತರಿಲ್ಲದೇ ಓಡುತ್ತಿದ್ದವು.

06044011a ಸಮ್ಯಕ್ಪ್ರಣೀತಾ ನಾಗಾಶ್ಚ ಪ್ರಭಿನ್ನಕರಟಾಮುಖಾಃ|

06044011c ಋಷ್ಟಿತೋಮರನಾರಾಚೈರ್ನಿರ್ವಿದ್ಧಾ ವರವಾರಣಾಃ||

06044012a ವಿನೇದುರ್ಭಿನ್ನಮರ್ಮಾಣೋ ನಿಪೇತುಶ್ಚ ಗತಾಸವಃ|

06044012c ಪ್ರಾದ್ರವಂತ ದಿಶಃ ಕೇ ಚಿನ್ನದಂತೋ ಭೈರವಾನ್ರವಾನ್||

ಚೆನ್ನಾಗಿ ಪಳಗಿದ, ಕರಟವೊಡೆದು ಸುರಿಯುತ್ತಿದ್ದ ಮದಿಸಿದ ವರವಾರಣ ಆನೆಗಳು ಖಡ್ಗ, ತೋಮರ, ನಾರಾಚಗಳಿಂದ ಹೊಡೆಯಲ್ಪಟ್ಟು ತುಂಡು ತುಂಡಾಗಿ ಕೆಳಗೆ ಉರುಳಿ ಅಸುವನ್ನು ನೀಗಿದವು. ಕೆಲವು ಭೈರವ ಕೂಗನ್ನು ಕೂಗುತ್ತಾ ದಿಕ್ಕಾಪಾಲಾಗಿ ಓಡಿದವು.

06044013a ಗಜಾನಾಂ ಪಾದರಕ್ಷಾಸ್ತು ವ್ಯೂಢೋರಸ್ಕಾಃ ಪ್ರಹಾರಿಣಃ|

06044013c ಋಷ್ಟಿಭಿಶ್ಚ ಧನುರ್ಭಿಶ್ಚ ವಿಮಲೈಶ್ಚ ಪರಶ್ವಧೈಃ||

06044014a ಗದಾಭಿರ್ಮುಸಲೈಶ್ಚೈವ ಭಿಂಡಿಪಾಲೈಃ ಸತೋಮರೈಃ|

06044014c ಆಯಸೈಃ ಪರಿಘೈಶ್ಚೈವ ನಿಸ್ತ್ರಿಂಶೈರ್ವಿಮಲೈಃ ಶಿತೈಃ||

06044015a ಪ್ರಗೃಹೀತೈಃ ಸುಸಂರಬ್ಧಾ ಧಾವಮಾನಾಸ್ತತಸ್ತತಃ|

06044015c ವ್ಯದೃಶ್ಯಂತ ಮಹಾರಾಜ ಪರಸ್ಪರಜಿಘಾಂಸವಃ||

ಮಹಾರಾಜ! ವಿಶಾಲ ಎದೆಯ, ಪ್ರಹಾರಿ ಗಜಗಳ ಪಾದರಕ್ಷಕರಾದರೋ ಖಡ್ಗ, ಧನುಸ್ಸು, ಹೊಳೆಯುತ್ತಿರುವ ಪರಶು, ಗದೆ, ಮುಸಲ, ಭಿಂಡಿಪ, ತೋಮರ, ಆಯಸ, ಪರಿಘ, ಹರಿತವಾಗಿ ಹೊಳೆಯುತ್ತಿದ್ದ ತ್ರಿಶೂಲಗಳನ್ನು ಹಿಡಿದು ಕ್ರುದ್ಧರಾಗಿ ಅಲ್ಲಿಂದಲ್ಲಿಗೆ ಓಡುತ್ತಾ ಪರಸ್ಪರರನ್ನು ಕೊಲ್ಲುತ್ತಿರುವುದು ಕಂಡುಬಂದಿತು.

06044016a ರಾಜಮಾನಾಶ್ಚ ನಿಸ್ತ್ರಿಂಶಾಃ ಸಂಸಿಕ್ತಾ ನರಶೋಣಿತೈಃ|

06044016c ಪ್ರತ್ಯದೃಶ್ಯಂತ ಶೂರಾಣಾಮನ್ಯೋನ್ಯಮಭಿಧಾವತಾಂ||

ಆ ಶೂರರು ಅನ್ಯೋನ್ಯರನ್ನು ಹೊಡೆದು ಕೊಲ್ಲುತ್ತಿರುವಾಗ ನರರಕ್ತದಿಂದ ತೋಯ್ದ ಆ ಆಯುಧಗಳು ಪ್ರಕಾಶಮಾನವಾಗಿ ಹೊಳೆಯುತ್ತಿವೆಯೋ ಎನ್ನುವಂತೆ ಕಂಡವು.

06044017a ಅವಕ್ಷಿಪ್ತಾವಧೂತಾನಾಮಸೀನಾಂ ವೀರಬಾಹುಭಿಃ|

06044017c ಸಂಜಜ್ಞೇ ತುಮುಲಃ ಶಬ್ದಃ ಪತತಾಂ ಪರಮರ್ಮಸು||

ವೀರಬಾಹುಗಳು ಖಡ್ಗಗಳನ್ನು ಬೀಸುವ ಮತ್ತು ಶತ್ರುಗಳ ಮರ್ಮಾಂಗಗಳ ಮೇಲೆ ಬೀಳಿಸುವ ಶಬ್ಧವು ಜೋರಾಗಿ ಕೇಳತೊಡಗಿತು.

06044018a ಗದಾಮುಸಲರುಗ್ಣಾನಾಂ ಭಿನ್ನಾನಾಂ ಚ ವರಾಸಿಭಿಃ|

06044018c ದಂತಿದಂತಾವಭಿನ್ನಾನಾಂ ಮೃದಿತಾನಾಂ ಚ ದಂತಿಭಿಃ||

06044019a ತತ್ರ ತತ್ರ ನರೌಘಾಣಾಂ ಕ್ರೋಶತಾಂ ಇತರೇತರಂ|

06044019c ಶುಶ್ರುವುರ್ದಾರುಣಾ ವಾಚಃ ಪ್ರೇತಾನಾಮಿವ ಭಾರತ||

ಭಾರತ! ಗದೆ-ಮುಸಲಗಳಿಂದ ಪುಡಿಯಾದ, ಉತ್ತಮ ಖಡ್ಗಗಳಿಂದ ತುಂಡಾದ, ಆನೆಗಳ ದಂತಗಳಿಂದ ಇರಿಯಲ್ಪಟ್ಟ, ಆನೆಗಳಿಂದ ತುಳಿಯಲ್ಪಟ್ಟ ನರರ ಆಕ್ರೋಶವು ಅಲ್ಲಲ್ಲಿ ಬೇರೆ ಬೇರೆಯಾಗಿ ಕೇಳಿಬಂದವು. ಆ ದಾರುಣ ಕೂಗು ಪ್ರೇತಗಳ ಕೂಗುಗಳಂತಿದ್ದವು.

06044020a ಹಯೈರಪಿ ಹಯಾರೋಹಾಶ್ಚಾಮರಾಪೀಡಧಾರಿಭಿಃ|

06044020c ಹಂಸೈರಿವ ಮಹಾವೇಗೈರನ್ಯೋನ್ಯಮಭಿದುದ್ರುವುಃ||

ಚಾಮರ-ಪೀಡಧಾರಿ ಹಯಾರೋಹಿ ಅಶ್ವಗಳೂ ಕೂಡ ಹಂಸಗಳಂತೆ ಮಹಾವೇಗದಿಂದ ಪರಸ್ಪರರನ್ನು ಆಕ್ರಮಿಸಿದವು.

06044021a ತೈರ್ವಿಮುಕ್ತಾ ಮಹಾಪ್ರಾಸಾ ಜಾಂಬೂನದವಿಭೂಷಣಾಃ|

06044021c ಆಶುಗಾ ವಿಮಲಾಸ್ತೀಕ್ಷ್ಣಾಃ ಸಂಪೇತುರ್ಭುಜಗೋಪಮಾಃ||

ಅವರು ಪ್ರಯೋಗಿಸಿದ ಬಂಗಾರ ವಿಭೂಷಿತ ಮಹಾಪ್ರಾಸಗಳು ಮತ್ತು ಶುಭ್ರ ತೀಕ್ಷ್ಣ ಬಾಣಗಳು ಹಾವುಗಳಂತೆ ಹಾರಾಡತೊಡಗಿದವು.

06044022a ಅಶ್ವೈರಗ್ರ್ಯಜವೈಃ ಕೇ ಚಿದಾಪ್ಲುತ್ಯ ಮಹತೋ ರಥಾನ್|

06044022c ಶಿರಾಂಸ್ಯಾದದಿರೇ ವೀರಾ ರಥಿನಾಮಶ್ವಸಾದಿನಃ||

ಕೆಲವು ಅಶ್ವಾರೋಹಿಗಳು ವೇಗವಾಗಿ ಹೋಗುತ್ತಿರುವಾಗ ಮಹಾ ರಥಗಳಲ್ಲಿರುವ ವೀರ ರಥಿಗಳ ಶಿರಗಳನ್ನು ಕತ್ತರಿಸಿದರು.

06044023a ಬಹೂನಪಿ ಹಯಾರೋಹಾನ್ಭಲ್ಲೈಃ ಸಂನತಪರ್ವಭಿಃ|

06044023c ರಥೀ ಜಘಾನ ಸಂಪ್ರಾಪ್ಯ ಬಾಣಗೋಚರಮಾಗತಾನ್||

ಬಾಣಗಳ ಗೋಚರದಲ್ಲಿ ಬಂದ ಬಹಳಷ್ಟು ಅಶ್ವಾರೋಹಿಗಳನ್ನೂ ಕೂಡ ರಥದಲ್ಲಿರುವವರು ಭಲ್ಲ-ಸಂನತಪರ್ವಗಳಿಂದ ಸಂಹರಿಸಿದರು.

06044024a ನಗಮೇಘಪ್ರತೀಕಾಶಾಶ್ಚಾಕ್ಷಿಪ್ಯ ತುರಗಾನ್ಗಜಾಃ|

06044024c ಪಾದೈರೇವಾವಮೃದ್ನಂತ ಮತ್ತಾಃ ಕನಕಭೂಷಣಾಃ||

ಹೊಸದಾಗಿ ಉದಯಿಸುತ್ತಿದ್ದ ಮೇಘಗಳಂತಿದ್ದ ಮದಿಸಿದ ಕನಕಭೂಷಣ ಆನೆಗಳು ಕುದುರೆಗಳನ್ನು ತಮ್ಮ ಕಾಲುಗಳಿಂದಲೇ ತುಳಿದು ಸಾಯಿಸಿದವು.

06044025a ಪಾಟ್ಯಮಾನೇಷು ಕುಂಭೇಷು ಪಾರ್ಶ್ವೇಷ್ವಪಿ ಚ ವಾರಣಾಃ|

06044025c ಪ್ರಾಸೈರ್ವಿನಿಹತಾಃ ಕೇ ಚಿದ್ವಿನೇದುಃ ಪರಮಾತುರಾಃ||

ಕುಂಭಗಳ ಮೇಲೆ ಮತ್ತು ಪಾರ್ಶ್ವಗಳಲ್ಲಿ ಪ್ರಾಸಗಳಿಂದ ಪೆಟ್ಟುತಿಂದ ಕೆಲವು ಆನೆಗಳು ಪರಮ ನೋವಿನಿಂದ ಕೂಗಿದವು.

06044026a ಸಾಶ್ವಾರೋಹಾನ್ ಹಯಾನ್ಕೇ ಚಿದುನ್ಮಥ್ಯ ವರವಾರಣಾಃ|

06044026c ಸಹಸಾ ಚಿಕ್ಷಿಪುಸ್ತತ್ರ ಸಂಕುಲೇ ಭೈರವೇ ಸತಿ||

ಆ ಗೊಂದಲದಲ್ಲಿ ಕೆಲವು ವರವಾರಣಗಳು ಅಶ್ವಾರೋಹಿಗಳನ್ನೂ ಅಶ್ವಗಳನ್ನೂ ಮೇಲೆ ಹಾರಿಸಿ ತಕ್ಷಣವೇ ನೆಲಕ್ಕೆ ಹಾಕಿ ಭೈರವ ಕೂಗನ್ನು ಕೂಗುತ್ತಿದ್ದವು.

06044027a ಸಾಶ್ವಾರೋಹಾನ್ವಿಷಾಣಾಗ್ರೈರುತ್ಕ್ಷಿಪ್ಯ ತುರಗಾನ್ದ್ವಿಪಾಃ|

06044027c ರಥೌಘಾನವಮೃದ್ನಂತಃ ಸಧ್ವಜಾನ್ಪರಿಚಕ್ರಮುಃ||

ಅಶ್ವಾರೋಹಿಗಳೊಡನೆ ಅಶ್ವಗಳನ್ನೂ ದಂತಗಳಿಂದ ಮೇಲೆತ್ತಿ ಕೆಳಗೆ ಹಾಕಿ ಆನೆಗಳು ಧ್ವಜಗಳೊಂದಿಗೆ ರಥಗಳನ್ನೂ ಧ್ವಂಸಮಾಡಿ ನಡೆದವು.

06044028a ಪುಂಸ್ತ್ವಾದಭಿಮದತ್ವಾಚ್ಚ ಕೇ ಚಿದತ್ರ ಮಹಾಗಜಾಃ|

06044028c ಸಾಶ್ವಾರೋಹಾನ್ ಹಯಾನ್ಜಘ್ನುಃ ಕರೈಃ ಸಚರಣೈಸ್ತಥಾ||

ಕೆಲವು ಮದಸೋರುತ್ತಿದ್ದ ಮದಿಸಿದ ಮಹಾಗಜಗಳು ಅಶ್ವಾರೋಹಿಗಳೊಡನೆ ಕುದುರೆಗಳನ್ನೂ ತಮ್ಮ ಸೊಂಡಿಲು-ಕಾಲುಗಳಿಂದ ಸಂಹರಿಸಿದವು.

06044029a ಕೇ ಚಿದಾಕ್ಷಿಪ್ಯ ಕರಿಣಃ ಸಾಶ್ವಾನಪಿ ರಥಾನ್ಕರೈಃ|

06044029c ವಿಕರ್ಷಂತೋ ದಿಶಃ ಸರ್ವಾಃ ಸಮೀಯುಃ ಸರ್ವಶಬ್ದಗಾಃ||

ಕೆಲವು ಆನೆಗಳು ತಮ್ಮ ಸೊಂಡಿಲುಗಳಿಂದ ಕುದುರೆಗಳೊಂದಿಗೆ ರಥಗಳನ್ನೂ ಎಳೆದುಕೊಂಡು ಕೂಗುತ್ತಾ ಎಲ್ಲ ದಿಕ್ಕುಗಳಲ್ಲಿ ಓಡಿ ಹೋದವು.

06044030a ಆಶುಗಾ ವಿಮಲಾಸ್ತೀಕ್ಷ್ಣಾಃ ಸಂಪೇತುರ್ಭುಜಗೋಪಮಾಃ|

06044030c ನರಾಶ್ವಕಾಯಾನ್ನಿರ್ಭಿದ್ಯ ಲೌಹಾನಿ ಕವಚಾನಿ ಚ||

ಶುಭ್ರ ತೀಕ್ಷ್ಣ ಆಶುಗಗಳು ಹಾವುಗಳಂತೆ ಹಾರಾಡಿ ಮನುಷ್ಯರ ಮತ್ತು ಕುದುರೆಗಳ ಲೋಹದ ಕವಚಗಳನ್ನೂ ಭೇದಿಸಿ ದೇಹಗಳನ್ನು ಚುಚ್ಚಿದವು.

06044031a ನಿಪೇತುರ್ವಿಮಲಾಃ ಶಕ್ತ್ಯೋ ವೀರಬಾಹುಭಿರರ್ಪಿತಾಃ|

06044031c ಮಹೋಲ್ಕಾಪ್ರತಿಮಾ ಘೋರಾಸ್ತತ್ರ ತತ್ರ ವಿಶಾಂ ಪತೇ||

ವಿಶಾಂಪತೇ! ವೀರಬಾಹುಗಳಿಂದ ಪ್ರಯೋಗಿಸಲ್ಪಟ್ಟ ಶುಭ್ರ ಶಕ್ತ್ಯಾಯುಧಗಳು ಅಲ್ಲಲ್ಲಿ ಮಹಾ ಉಲ್ಕೆಗಳಂತೆ ಘೋರವಾಗಿ ಬೀಳುತ್ತಿದ್ದವು.

06044032a ದ್ವೀಪಿಚರ್ಮಾವನದ್ಧೈಶ್ಚ ವ್ಯಾಘ್ರಚರ್ಮಶಯೈರಪಿ|

06044032c ವಿಕೋಶೈರ್ವಿಮಲೈಃ ಖಡ್ಗೈರಭಿಜಘ್ನುಃ ಪರಾನ್ರಣೇ||

ಚಿರತೆ ಮತ್ತು ಹುಲಿಯ ಚರ್ಮಗಳಿಂದ ಮಾಡಿದ ಚೀಲಗಳಲ್ಲಿ ಇರಿಸಿದ್ದ ವಿಮಲ ಖಡ್ಗಗಳಿಂದ ಶತ್ರುಗಳನ್ನು ರಣದಲ್ಲಿ ಸಂಹರಿಸಿದರು.

06044033a ಅಭಿಪ್ಲುತಮಭಿಕ್ರುದ್ಧಮೇಕಪಾರ್ಶ್ವಾವದಾರಿತಂ|

06044033c ವಿದರ್ಶಯಂತಃ ಸಂಪೇತುಃ ಖಡ್ಗಚರ್ಮಪರಶ್ವಧೈಃ||

ಒಂದು ಭಾಗ ಕತ್ತರಿಸಲ್ಪಟ್ಟವರೂ ಕೂಡ ಕ್ರುದ್ಧರಾಗಿ ಖಡ್ಗ-ಚರ್ಮ-ಪರಶುಗಳಿಂದ ಶತ್ರುಗಳನ್ನು ಹೊಡೆಯುತ್ತಿರುವುದು ಕಂಡುಬಂದಿತು.

06044034a ಶಕ್ತಿಭಿರ್ದಾರಿತಾಃ ಕೇ ಚಿತ್ಸಂಚಿನ್ನಾಶ್ಚ ಪರಶ್ವಧೈಃ|

06044034c ಹಸ್ತಿಭಿರ್ಮೃದಿತಾಃ ಕೇ ಚಿತ್ ಕ್ಷುಣ್ಣಾಶ್ಚಾನ್ಯೇ ತುರಂಗಮೈಃ||

06044035a ರಥನೇಮಿನಿಕೃತ್ತಾಶ್ಚ ನಿಕೃತ್ತಾ ನಿಶಿತೈಃ ಶರೈಃ|

06044035c ವಿಕ್ರೋಶಂತಿ ನರಾ ರಾಜಂಸ್ತತ್ರ ತತ್ರ ಸ್ಮ ಬಾಂಧವಾನ್||

ಕೆಲವರು ಶಕ್ತಿಯಿಂದ ಸೀಳಲ್ಪಟ್ಟರೆ ಕೆಲವರು ಪರಶುವಿನಿಂದ ತುಂಡಾದರು. ಕೆಲವರು ಆನೆಗಳ ತುಳಿತಕ್ಕೆ ಸಿಲುಕಿದರೆ ಇನ್ನು ಕೆಲವರು ಕುದುರೆಗಳಿಂದ ಒದೆಯಲ್ಪಟ್ಟು ಬಿದ್ದಿದ್ದರು. ಕೆಲವರು ರಥಚಕ್ರಕ್ಕೆ ಸಿಲುಕಿ ತುಂಡಾದರೆ ಕೆಲವರು ನಿಶಿತ ಬಾಣಗಳಿಂದ ತುಂಡಾಗಿದ್ದರು. ರಾಜನ್! ಅಲ್ಲಲ್ಲಿ ನರರು ಬಾಂಧವರನ್ನು ಕೂಗಿ ಕರೆಯುತ್ತಿದ್ದರು.

06044036a ಪುತ್ರಾನನ್ಯೇ ಪಿತೄನನ್ಯೇ ಭ್ರಾತೄಂಶ್ಚ ಸಹ ಬಾಂಧವೈಃ|

06044036c ಮಾತುಲಾನ್ಭಾಗಿನೇಯಾಂಶ್ಚ ಪರಾನಪಿ ಚ ಸಂಯುಗೇ||

06044037a ವಿಕೀರ್ಣಾಂತ್ರಾಃ ಸುಬಹವೋ ಭಗ್ನಸಕ್ಥಾಶ್ಚ ಭಾರತ|

06044037c ಬಾಹುಭಿಃ ಸುಭುಜಾಚ್ಛಿನ್ನೈಃ ಪಾರ್ಶ್ವೇಷು ಚ ವಿದಾರಿತಾಃ|

06044037e ಕ್ರಂದಂತಃ ಸಮದೃಶ್ಯಂತ ತೃಷಿತಾ ಜೀವಿತೇಪ್ಸವಃ||

ಅಂಗಗಳನ್ನು ಕಳೆದುಕೊಂಡ, ದೇಹಗಳು ತುಂಡಾದ, ಬಾಹುಗಳೂ ಭುಜಗಳೂ ತುಂಡಾಗಿದ್ದ, ಪಕ್ಕೆಗಳು ಸೀಳಿಹೋದ ಅವರು ಕೆಲವರು ಜೀವವನ್ನು ಉಳಿಸಿಕೊಳ್ಳಲು ಬಯಸಿ ತಂದೆಯರನ್ನು, ಕೆಲವರು ಮಕ್ಕಳನ್ನು, ಕೆಲವರು ಬಾಂಧವರೊಂದಿಗೆ ಸಹೋದರರನ್ನು, ಮಾವಂದಿರನ್ನು, ಅಳಿಯರನ್ನು, ಇತರರನ್ನೂ ಸಂಯುಗದಲ್ಲಿ ಕೂಗಿ ಕರೆಯುವ ಆಕ್ರಂದನವು ಎಲ್ಲೆಡೆಯೂ ಕೇಳಿಸಿತು.

06044038a ತೃಷ್ಣಾಪರಿಗತಾಃ ಕೇ ಚಿದಲ್ಪಸತ್ತ್ವಾ ವಿಶಾಂ ಪತೇ|

06044038c ಭೂಮೌ ನಿಪತಿತಾಃ ಸಂಖ್ಯೇ ಜಲಮೇವ ಯಯಾಚಿರೇ||

ವಿಶಾಂಪತೇ! ಕೆಲವರು ಬಾಯಾರಿಕೆಯಿಂದ ಬಳಲಿ, ಕ್ಷೀಣಶಕ್ತಿಯುಳ್ಳವರಾಗಿ, ಯುದ್ಧದಲ್ಲಿ ಭೂಮಿಯ ಮೇಲೆ ಬಿದ್ದು ನೀರನ್ನೇ ಯಾಚಿಸುತ್ತಿದ್ದರು.

06044039a ರುಧಿರೌಘಪರಿಕ್ಲಿನ್ನಾಃ ಕ್ಲಿಶ್ಯಮಾನಾಶ್ಚ ಭಾರತ|

06044039c ವ್ಯನಿಂದನ್ಭೃಶಮಾತ್ಮಾನಂ ತವ ಪುತ್ರಾಂಶ್ಚ ಸಂಗತಾನ್||

ಭಾರತ! ರಕ್ತದ ಪ್ರವಾಹದಿಂದ ತೋಯ್ದು ಹೋಗಿದ್ದ ಮತ್ತು ನೋವಿನಿಂದ ಬಹಳ ಸಂಕಟಪಡುತ್ತಿದ್ದವರು ತಮ್ಮನ್ನು ತಾವೇ ಮತ್ತು ಅಲ್ಲಿದ್ದ ನಿನ್ನ ಪುತ್ರರನ್ನೂ ಬಹುವಾಗಿ ನಿಂದಿಸಿದರು.

06044040a ಅಪರೇ ಕ್ಷತ್ರಿಯಾಃ ಶೂರಾಃ ಕೃತವೈರಾಃ ಪರಸ್ಪರಂ|

06044040c ನೈವ ಶಸ್ತ್ರಂ ವಿಮುಂಚಂತಿ ನೈವ ಕ್ರಂದಂತಿ ಮಾರಿಷ|

ಮಾರಿಷ! ಇತರ ಶೂರ ಕ್ಷತ್ರಿಯರು ಪರಸ್ಪರರ ಮೇಲೆ ವೈರವನ್ನೇ ಸಾಧಿಸುತ್ತಾ ಶಸ್ತ್ರಗಳನ್ನು ಬಿಡುತ್ತಿರಲಿಲ್ಲ. ನೋವಿನಿಂದ ಅಳುತ್ತಲೂ ಇರಲಿಲ್ಲ.

06044040e ತರ್ಜಯಂತಿ ಚ ಸಂಹೃಷ್ಟಾಸ್ತತ್ರ ತತ್ರ ಪರಸ್ಪರಂ||

06044041a ನಿರ್ದಶ್ಯ ದಶನೈಶ್ಚಾಪಿ ಕ್ರೋಧಾತ್ಸ್ವದಶನಚ್ಚದಾನ್|

06044041c ಭ್ರುಕುಟೀಕುಟಿಲೈರ್ವಕ್ತ್ರೈಃ ಪ್ರೇಕ್ಷಂತೇ ಚ ಪರಸ್ಪರಂ||

ಕೆಲವರು ಯುದ್ಧಮಾಡುವುದರಲ್ಲಿಯೇ ಸಂತುಷ್ಟರಾಗಿ ಪರಸ್ಪರರನ್ನು ಪೀಡಿಸುತ್ತಿದ್ದರು. ಕಟ-ಕಟಾಯಿಸಿ ಹಲ್ಲುಗಳನ್ನು ಪ್ರದರ್ಶಿಸುತ್ತಿದ್ದರು. ಕೋಪದಿಂದ ಅವುಡುಕಚ್ಚುತ್ತಿದ್ದರು. ಗಂಟಿಕ್ಕಿದ ಹುಬ್ಬುಗಳ ಮುಖಗಳ ಕ್ರೂರದೃಷ್ಟಿಯಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದರು.

06044042a ಅಪರೇ ಕ್ಲಿಶ್ಯಮಾನಾಸ್ತು ವ್ರಣಾರ್ತಾಃ ಶರಪೀಡಿತಾಃ|

06044042c ನಿಷ್ಕೂಜಾಃ ಸಮಪದ್ಯಂತ ದೃಢಸತ್ತ್ವಾ ಮಹಾಬಲಾಃ||

ಇನ್ನು ಕೆಲವು ದೃಢಸತ್ತ್ವ ಮಹಾಬಲಶಾಲಿಗಳು ಶರಪೀಡಿತರಾಗಿ ಗಾಯಗಳಿಂದ ಆರ್ತರಾಗಿ ಕಷ್ಟದಲ್ಲಿದ್ದರೂ ಕೂಡ ಮೌನಿಗಳಾಗಿ ಅದನ್ನು ಸಹಿಸಿಕೊಂಡಿದ್ದರು.

06044043a ಅನ್ಯೇ ತು ವಿರಥಾಃ ಶೂರಾ ರಥಮನ್ಯಸ್ಯ ಸಂಯುಗೇ|

06044043c ಪ್ರಾರ್ಥಯಾನಾ ನಿಪತಿತಾಃ ಸಂಕ್ಷುಣ್ಣಾ ವರವಾರಣೈಃ|

06044043e ಅಶೋಭಂತ ಮಹಾರಾಜ ಪುಷ್ಪಿತಾ ಇವ ಕಿಂಶುಕಾಃ||

ಅನ್ಯ ಶೂರರು ವಿರಥರಾಗಿ ಇನ್ನೊಂದು ರಥವನ್ನೇರಲು ಪ್ರಾರ್ಥಿಸಿಕೊಳ್ಳುವಾಗಲೇ, ಸಂಯುಗದಲ್ಲಿ ಓಡಿಬರುತ್ತಿದ್ದ ವರವಾರಣಗಳಿಂದ ಬೀಳಿಸಲ್ಪಟ್ಟು ಕಾಲಿಗೆ ಸಿಕ್ಕಿ ಮುದ್ದೆಯಾಗುತ್ತಿದ್ದರು. ಆಗ ಮಹಾರಾಜ! ಅವರು ಹೂಗಳಿಂದ ಕೂಡಿದ ಕಿಂಶುಕವೃಕ್ಷಗಳಂತೆ ಶೋಭಿಸುತ್ತಿದ್ದರು.

06044044a ಸಂಬಭೂವುರನೀಕೇಷು ಬಹವೋ ಭೈರವಸ್ವನಾಃ|

06044044c ವರ್ತಮಾನೇ ಮಹಾಭೀಮೇ ತಸ್ಮಿನ್ವೀರವರಕ್ಷಯೇ||

ಆ ವೀರವರಕ್ಷಯ ಮಹಾಭಯಂಕರ ಯುದ್ಧವು ನಡೆಯುತ್ತಿರಲು ಎರಡೂ ಸೇನೆಗಳಿಂದ ಬಹಳ ಭೈರವ ಕೂಗುಗಳು ಕೇಳಿಬರುತ್ತಿದ್ದವು.

06044045a ಅಹನತ್ತು ಪಿತಾ ಪುತ್ರಂ ಪುತ್ರಶ್ಚ ಪಿತರಂ ರಣೇ|

06044045c ಸ್ವಸ್ರೀಯೋ ಮಾತುಲಂ ಚಾಪಿ ಸ್ವಸ್ರೀಯಂ ಚಾಪಿ ಮಾತುಲಃ||

06044046a ಸಖಾಯಂ ಚ ಸಖಾ ರಾಜನ್ಸಂಬಂಧೀ ಬಾಂಧವಂ ತಥಾ|

06044046c ಏವಂ ಯುಯುಧಿರೇ ತತ್ರ ಕುರವಃ ಪಾಂಡವೈಃ ಸಹ||

ರಾಜನ್! ರಣದಲ್ಲಿ ತಂದೆಯು ಪುತ್ರನನ್ನು, ಪುತ್ರನು ತಂದೆಯನ್ನು, ಅಳಿಯನು ಮಾವನನ್ನು, ಮಾವನು ಅಳಿಯನನ್ನು, ಸಖನನ್ನು ಸಖನು, ಸಂಬಂಧಿಯು ಬಾಂಧವನನ್ನು ಕೊಂದರು. ಹೀಗೆ ಅಲ್ಲಿ ಕುರುಗಳು ಪಾಂಡವರೊಂದಿಗೆ ಯುದ್ಧ ಮಾಡಿದರು.

06044047a ವರ್ತಮಾನೇ ಭಯೇ ತಸ್ಮಿನ್ನಿರ್ಮರ್ಯಾದೇ ಮಹಾಹವೇ|

06044047c ಭೀಷ್ಮಮಾಸಾದ್ಯ ಪಾರ್ಥಾನಾಂ ವಾಹಿನೀ ಸಮಕಂಪತ||

ಮರ್ಯಾದೆಗಳಿಲ್ಲದ ಆ ಮಹಾಹವದಲ್ಲಿ ಭೀಷ್ಮನ ಬಳಿಬಂದ ಪಾರ್ಥರ ಸೇನೆಯು ಭಯದಿಂದ ಕಂಪಿಸಿತು.

06044048a ಕೇತುನಾ ಪಂಚತಾರೇಣ ತಾಲೇನ ಭರತರ್ಷಭ|

06044048c ರಾಜತೇನ ಮಹಾಬಾಹುರುಚ್ಛ್ರಿತೇನ ಮಹಾರಥೇ|

06044048e ಬಭೌ ಭೀಷ್ಮಸ್ತದಾ ರಾಜಂಶ್ಚಂದ್ರಮಾ ಇವ ಮೇರುಣಾ||

ರಾಜನ್! ಭರತರ್ಷಭ! ಆಗ ಐದು ನಕ್ಷತ್ರಗಳ ಮತ್ತು ತಾಲವೃಕ್ಷ ಚಿಹ್ನೆಯ ಧ್ವಜಪಟವು ಬೆಳ್ಳಿಯ ಧ್ವಜಕಂಬದಲ್ಲಿ ಹಾರಾಡುತ್ತಿರಲು ಮಹಾಬಾಹು ಭೀಷ್ಮನು ಆ ಮಹಾರಥದಲ್ಲಿ ಮೇರುಪರ್ವತದಲ್ಲಿರುವ ಚಂದ್ರಮನಂತೆ ಪ್ರಕಾಶಿಸಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಚತುಶ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.