|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleಭೀಷ್ಮ ಪರ್ವ: ಭೀಷ್ಮವಧ ಪರ್ವ
೪೧
ಯುಧಿಷ್ಠಿರನು ಭೀಷ್ಮಾದಿಗಳನ್ನು ಸಮ್ಮಾನಿಸಿದುದು
ರಣರಂಗದಲ್ಲಿ ರಥದಿಂದಿಳಿದು ಕವಚ-ಆಯುಧಗಳನ್ನು ಕಳಚಿ ಯುಧಿಷ್ಠಿರನು ಕೌರವ ಸೇನೆಯ ಕಡೆ ಕಾಲ್ನಡುಗೆಯಲ್ಲಿ ನಡೆಯಲು ವಿಸ್ಮಯಗೊಂಡು ಅವನ ತಮ್ಮಂದಿರು ಕೃಷ್ಣನನ್ನೊಡಗೂಡಿ ಹಿಂಬಾಲಿಸಿದುದು (೧-೩೦). ಭೀಷ್ಮನನ್ನು ನಮಸ್ಕರಿಸಿ ಯುಧಿಷ್ಠಿರನು ವಿಜಯದ ಆಶೀರ್ವಾದವನ್ನು ಕೇಳಿದುದು (೩೧-೪೪). ಯುಧಿಷ್ಠಿರನು ದ್ರೋಣನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (೪೫-೬೨). ಯುಧಿಷ್ಠಿರನು ಕೃಪನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (೬೩-೭೧). ಯುಧಿಷ್ಠಿರನು ಶಲ್ಯನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (೭೨-೮೨). ಕೃಷ್ಣನು ಕರ್ಣನನ್ನು ಭೇಟಿಯಾಗಿ ಪಾಂಡವರ ಪರವಾಗಿ ಯುದ್ಧಮಾಡಲು ಕೇಳುವುದು (೮೩-೮೮). ಯುಯುತ್ಸುವು ಪಾಂಡವರ ಸೇನೆಯನ್ನು ಸೇರಿದುದು (೮೯-೯೫). ಯುಧಿಷ್ಠಿರನನ್ನು ಎರಡೂ ಪಕ್ಷಗಳ ಯೋಧರು ಮೆಚ್ಚಿ ಹೊಗಳಿದುದು (೯೬-೧೦೪).
06041001 ಸಂಜಯ ಉವಾಚ|
06041001a ತತೋ ಧನಂಜಯಂ ದೃಷ್ಟ್ವಾ ಬಾಣಗಾಂಡೀವಧಾರಿಣಂ|
06041001c ಪುನರೇವ ಮಹಾನಾದಂ ವ್ಯಸೃಜಂತ ಮಹಾರಥಾಃ||
ಸಂಜಯನು ಹೇಳಿದನು: “ಆಗ ಧನಂಜಯನು ಬಾಣಗಾಂಡೀವಗಳನ್ನು ಧರಿಸಿದುದನ್ನು ನೋಡಿ ಮಹಾರಥಿಗಳು ಪುನಃ ಮಹಾನಾದಗೈದರು.
06041002a ಪಾಂಡವಾಃ ಸೋಮಕಾಶ್ಚೈವ ಯೇ ಚೈಷಾಮನುಯಾಯಿನಃ|
06041002c ದಧ್ಮುಶ್ಚ ಮುದಿತಾಃ ಶಂಖಾನ್ವೀರಾಃ ಸಾಗರಸಂಭವಾನ್||
ಆ ವೀರ ಪಾಂಡವರು, ಸೋಮಕರು ಮತ್ತು ಅವರ ಅನುಯಾಯಿಗಳು ಸಾಗರ ಸಂಭವ ಶಂಖಗಳನ್ನು ಹರ್ಷಿತರಾಗಿ ಊದಿದರು.
06041003a ತತೋ ಭೇರ್ಯಶ್ಚ ಪೇಶ್ಯಶ್ಚ ಕ್ರಕಚಾ ಗೋವಿಷಾಣಿಕಾಃ|
06041003c ಸಹಸೈವಾಭ್ಯಹನ್ಯಂತ ತತಃ ಶಬ್ದೋ ಮಹಾನಭೂತ್||
ಆಗ ಭೇರಿಗಳು, ಪೇಶಿಗಳು, ಕ್ರಕಚಗಳು, ಗೋವಿಷಾಣಿಕಗಳು ಒಟ್ಟಿಗೇ ಮೊಳಗಿ ಮಹಾ ಶಬ್ಧವುಂಟಾಯಿತು.
06041004a ಅಥ ದೇವಾಃ ಸಗಂಧರ್ವಾಃ ಪಿತರಶ್ಚ ಜನೇಶ್ವರ|
06041004c ಸಿದ್ಧಚಾರಣಸಂಘಾಶ್ಚ ಸಮೀಯುಸ್ತೇ ದಿದೃಕ್ಷಯಾ||
ಆಗ ಜನೇಶ್ವರ! ದೇವತೆಗಳು, ಒಟ್ಟಿಗೇ ಗಂಧರ್ವರು, ಪಿತೃಗಳು, ಮತ್ತು ಸಿದ್ಧಚಾರಣ ಸಂಘಗಳು ನೋಡಲು ಆಕಾಶದಲ್ಲಿ ಒಂದುಗೂಡಿದರು.
06041005a ಋಷಯಶ್ಚ ಮಹಾಭಾಗಾಃ ಪುರಸ್ಕೃತ್ಯ ಶತಕ್ರತುಂ|
06041005c ಸಮೀಯುಸ್ತತ್ರ ಸಹಿತಾ ದ್ರಷ್ಟುಂ ತದ್ವೈಶಸಂ ಮಹತ್||
ಮಹಾಭಾಗ ಋಷಿಗಳೂ ಕೂಡ ಶತಕ್ರತುವನ್ನು ಮುಂದಿಟ್ಟುಕೊಂಡು ಒಟ್ಟಿಗೇ ಆ ಮಹಾ ಯುದ್ಧವನ್ನು ನೋಡಲು ಒಂದುಗೂಡಿದರು.
06041006a ತತೋ ಯುಧಿಷ್ಠಿರೋ ದೃಷ್ಟ್ವಾ ಯುದ್ಧಾಯ ಸುಸಮುದ್ಯತೇ|
06041006c ತೇ ಸೇನೇ ಸಾಗರಪ್ರಖ್ಯೇ ಮುಹುಃ ಪ್ರಚಲಿತೇ ನೃಪ||
06041007a ವಿಮುಚ್ಯ ಕವಚಂ ವೀರೋ ನಿಕ್ಷಿಪ್ಯ ಚ ವರಾಯುಧಂ|
06041007c ಅವರುಹ್ಯ ರಥಾತ್ತೂರ್ಣಂ ಪದ್ಭ್ಯಾಮೇವ ಕೃತಾಂಜಲಿಃ||
06041008a ಪಿತಾಮಹಮಭಿಪ್ರೇಕ್ಷ್ಯ ಧರ್ಮರಾಜೋ ಯುಧಿಷ್ಠಿರಃ|
06041008c ವಾಗ್ಯತಃ ಪ್ರಯಯೌ ಯೇನ ಪ್ರಾಙ್ಮುಖೋ ರಿಪುವಾಹಿನೀಂ||
ನೃಪ! ಆಗ ಯುದ್ಧಕ್ಕೆ ಸುಸಮುದ್ಯತವಾಗಿ ಸಾಗರದಂತೆ ಮುಂದೆ ಚಲಿಸುತ್ತಿದ್ದ ಆ ಸೇನೆಗಳನ್ನು ನೋಡಿ ವೀರ ಯುಧಿಷ್ಠಿರನು ಕವಚವನ್ನು ಕಳಚಿ, ಶ್ರೇಷ್ಠ ಆಯುಧವನ್ನು ಕೆಳಗಿಟ್ಟು, ಬೇಗನೆ ರಥದಿಂದ ಕೆಳಗಿಳಿದು, ಕಾಲ್ನಡುಗೆಯಲ್ಲಿಯೇ, ಕೈಗಳನ್ನು ಮುಗಿದು ನಡೆದನು. ಧರ್ಮರಾಜ ಯುಧಿಷ್ಠಿರನು ರಿಪುವಾಹಿನಿಯಲ್ಲಿದ್ದ ಪಿತಾಮಹನನ್ನೇ ನೋಡಿ ಮಾತನಾಡಲು ಪೂರ್ವಾಭಿಮುಖವಾಗಿ ನಡೆದನು.
06041009a ತಂ ಪ್ರಯಾಂತಮಭಿಪ್ರೇಕ್ಷ್ಯ ಕುಂತೀಪುತ್ರೋ ಧನಂಜಯಃ|
06041009c ಅವತೀರ್ಯ ರಥಾತ್ತೂರ್ಣಂ ಭ್ರಾತೃಭಿಃ ಸಹಿತೋಽನ್ವಯಾತ್||
ಅವನು ಹೋಗುತ್ತಿರುವುದನ್ನು ನೋಡಿ ಕುಂತೀಪುತ್ರ ಧನಂಜಯನು ಕೂಡಲೇ ತನ್ನ ರಥದಿಂದ ಕೆಳಗಿಳಿದು ಇತರ ಸಹೋದರರೊಂದಿಗೆ ಅವನನ್ನು ಅನುಸರಿಸಿ ನಡೆದನು.
06041010a ವಾಸುದೇವಶ್ಚ ಭಗವಾನ್ಪೃಷ್ಠತೋಽನುಜಗಾಮ ಹ|
06041010c ಯಥಾಮುಖ್ಯಾಶ್ಚ ರಾಜಾನಸ್ತಮನ್ವಾಜಗ್ಮುರುತ್ಸುಕಾಃ||
ಭಗವಾನ್ ವಾಸುದೇವನೂ ಹಿಂದೆ ನಡೆದನು. ಹಾಗೆಯೇ ಉತ್ಸುಕ ಮುಖ್ಯ ರಾಜರೂ ಹಿಂಬಾಲಿಸಿದರು.
06041011 ಅರ್ಜುನ ಉವಾಚ|
06041011a ಕಿಂ ತೇ ವ್ಯವಸಿತಂ ರಾಜನ್ಯದಸ್ಮಾನಪಹಾಯ ವೈ|
06041011c ಪದ್ಭ್ಯಾಮೇವ ಪ್ರಯಾತೋಽಸಿ ಪ್ರಾಙ್ಮುಖೋ ರಿಪುವಾಹಿನೀಂ||
ಅರ್ಜುನನು ಹೇಳಿದನು: “ರಾಜನ್! ಇದೇನು ಮಾಡುತ್ತಿದ್ದೀಯೆ? ನಮ್ಮನ್ನು ತೊರೆದು ಕಾಲ್ನಡುಗೆಯಲ್ಲಿಯೇ ಪೂರ್ವಾಭಿಮುಖವಾಗಿ ಶತ್ರುಸೇನೆಗಳ ಕಡೆ ಹೋಗುತ್ತಿರುವೆಯಲ್ಲಾ?”
06041012 ಭೀಮಸೇನ ಉವಾಚ|
06041012a ಕ್ವ ಗಮಿಷ್ಯಸಿ ರಾಜೇಂದ್ರ ನಿಕ್ಷಿಪ್ತಕವಚಾಯುಧಃ|
06041012c ದಂಶಿತೇಷ್ವರಿಸೈನ್ಯೇಷು ಭ್ರಾತೄನುತ್ಸೃಜ್ಯ ಪಾರ್ಥಿವ||
ಭೀಮಸೇನನು ಹೇಳಿದನು: “ರಾಜೇಂದ್ರ! ಪಾರ್ಥಿವ! ಕವಚಾಯುಧಗಳನ್ನು ಕೆಳಗಿಟ್ಟು, ಕವಚಗಳಿಂದ ಕೂಡಿದ ಅರಿಸೇನೆಗಳ ಕಡೆ ತಮ್ಮಂದಿರನ್ನು ತೊರೆದು ಎಲ್ಲಿಗೆ ಹೋಗುತ್ತಿದ್ದೀಯೆ?”
06041013 ನಕುಲ ಉವಾಚ|
06041013a ಏವಂಗತೇ ತ್ವಯಿ ಜ್ಯೇಷ್ಠೇ ಮಮ ಭ್ರಾತರಿ ಭಾರತ|
06041013c ಭೀರ್ಮೇ ಮೇ ದುನೋತಿ ಹೃದಯಂ ಬ್ರೂಹಿ ಗಂತಾ ಭವಾನ್ಕ್ವ ನು||
ನಕುಲನು ಹೇಳಿದನು: “ಭಾರತ! ನೀನು ನನ್ನ ಹಿರಿಯಣ್ಣ. ಈ ರೀತಿ ನೀನು ಹೋಗುತ್ತಿರುವುದರಿಂದ ಭೀತಿಯು ನನ್ನ ಹೃದಯವನ್ನು ನೋಯಿಸುತ್ತಿದೆ. ಹೇಳು! ನೀನು ಎಲ್ಲಿಗೆ ಹೋಗುತ್ತಿರುವೆ?”
06041014 ಸಹದೇವ ಉವಾಚ|
06041014a ಅಸ್ಮಿನ್ರಣಸಮೂಹೇ ವೈ ವರ್ತಮಾನೇ ಮಹಾಭಯೇ|
06041014c ಯೋದ್ಧವ್ಯೇ ಕ್ವ ನು ಗಂತಾಸಿ ಶತ್ರೂನಭಿಮುಖೋ ನೃಪ||
ಸಹದೇವನು ಹೇಳಿದನು: “ಸದ್ಯದಲ್ಲಿಯೇ ಮಹಾಭಯಂಕರ ಯುದ್ಧಮಾಡಲಿಕ್ಕಿರುವ ಈ ರಣಸಮೂಹದಲ್ಲಿ ಶತ್ರುಗಳ ಕಡೆ ಎಲ್ಲಿಗೆ ಹೋಗುತ್ತೀಯೆ ನೃಪ!””
06041015 ಸಂಜಯ ಉವಾಚ|
06041015a ಏವಮಾಭಾಷ್ಯಮಾಣೋಽಪಿ ಭ್ರಾತೃಭಿಃ ಕುರುನಂದನ|
06041015c ನೋವಾಚ ವಾಗ್ಯತಃ ಕಿಂ ಚಿದ್ಗಚ್ಛತ್ಯೇವ ಯುಧಿಷ್ಠಿರಃ||
ಸಂಜಯನು ಹೇಳಿದನು: “ಕುರುನಂದನ! ತಮ್ಮಂದಿರು ಈ ರೀತಿ ಕೇಳುತ್ತಿದ್ದರೂ ಯುಧಿಷ್ಠಿರನು ಏನನ್ನೂ ಮಾತನಾಡದೇ ಮುಂದುವರೆದನು.
06041016a ತಾನುವಾಚ ಮಹಾಪ್ರಾಜ್ಞೋ ವಾಸುದೇವೋ ಮಹಾಮನಾಃ|
06041016c ಅಭಿಪ್ರಾಯೋಽಸ್ಯ ವಿಜ್ಞಾತೋ ಮಯೇತಿ ಪ್ರಹಸನ್ನಿವ||
ಮಹಾಪ್ರಾಜ್ಞ ಮಹಾಮನಸ್ವಿ ವಾಸುದೇವನು ಅವರಿಗೆ ನಗುತ್ತಾ “ಇವನ ಅಭಿಪ್ರಾಯವು ನನಗೆ ತಿಳಿದಿದೆ” ಎಂದನು.
06041017a ಏಷ ಭೀಷ್ಮಂ ತಥಾ ದ್ರೋಣಂ ಗೌತಮಂ ಶಲ್ಯಮೇವ ಚ|
06041017c ಅನುಮಾನ್ಯ ಗುರೂನ್ಸರ್ವಾನ್ಯೋತ್ಸ್ಯತೇ ಪಾರ್ಥಿವೋಽರಿಭಿಃ||
“ಈ ಪಾರ್ಥಿವನು ಭೀಷ್ಮ, ದ್ರೋಣ, ಗೌತಮ ಮತ್ತು ಶಲ್ಯರೇ ಮೊದಲಾದ ಗುರುಗಳನ್ನು ಗೌರವಿಸಿ ಎಲ್ಲ ಶತ್ರುಗಳೊಂದಿಗೆ ಹೋರಾಡುತ್ತಾನೆ.
06041018a ಶ್ರೂಯತೇ ಹಿ ಪುರಾಕಲ್ಪೇ ಗುರೂನನನುಮಾನ್ಯ ಯಃ|
06041018c ಯುಧ್ಯತೇ ಸ ಭವೇದ್ವ್ಯಕ್ತಮಪಧ್ಯಾತೋ ಮಹತ್ತರೈಃ||
ಗುರುಗಳನ್ನು ಗೌರವಿಸಿ ನಮಸ್ಕರಿಸಿ ಯಾರು ಯುದ್ಧಮಾಡುತ್ತಾನೋ ಅವನು ಮಹತ್ತರ ಆಪತ್ತುಗಳನ್ನೂ ಜಯಿಸುತ್ತಾನೆಂದು ಹಿಂದಿನ ಕಲ್ಪಗಳಿಂದ ಕೇಳುತ್ತೇವೆ.
06041019a ಅನುಮಾನ್ಯ ಯಥಾಶಾಸ್ತ್ರಂ ಯಸ್ತು ಯುಧ್ಯೇನ್ಮಹತ್ತರೈಃ|
06041019c ಧ್ರುವಸ್ತಸ್ಯ ಜಯೋ ಯುದ್ಧೇ ಭವೇದಿತಿ ಮತಿರ್ಮಮ||
ತನಗಿಂತಲೂ ಮಹತ್ತರರನ್ನು ಯಥಾಶಾಸ್ತ್ರವಾಗಿ ನಮಸ್ಕರಿಸಿ ಯುದ್ಧಮಾಡುವವನಿಗೆ ಯುದ್ಧದಲ್ಲಿ ಜಯವು ಖಂಡಿತವಾದುದು ಎಂದು ನನಗನ್ನಿಸುತ್ತದೆ.”
06041020a ಏವಂ ಬ್ರುವತಿ ಕೃಷ್ಣೇ ತು ಧಾರ್ತರಾಷ್ಟ್ರಚಮೂಂ ಪ್ರತಿ|
06041020c ಹಾಹಾಕಾರೋ ಮಹಾನಾಸೀನ್ನಿಃಶಬ್ದಾಸ್ತ್ವಪರೇಽಭವನ್||
ಕೃಷ್ಣನು ಹೀಗೆ ಹೇಳಲು ಧಾರ್ತರಾಷ್ಟ್ರನ ಸೇನೆಯಲ್ಲಿ ಮಹಾ ಹಾಹಾಕಾರವಾಯಿತು. ಇನ್ನೊಂದು ಕಡೆಯಲ್ಲಿ ನಿಃಶಬ್ಧವಾಯಿತು.
06041021a ದೃಷ್ಟ್ವಾ ಯುಧಿಷ್ಠಿರಂ ದೂರಾದ್ಧಾರ್ತರಾಷ್ಟ್ರಸ್ಯ ಸೈನಿಕಾಃ|
06041021c ಮಿಥಃ ಸಂಕಥಯಾಂ ಚಕ್ರುರ್ನೇಶೋಽಸ್ತಿ ಕುಲಪಾಂಸನಃ||
ದೂರದಿಂದಲೇ ಯುಧಿಷ್ಠಿರನನ್ನು ನೋಡಿ ಧಾರ್ತರಾಷ್ಟ್ರನ ಸೈನಿಕರು ತಮ್ಮೊಂದಿಗೇ ಮಾತನಾಡಿಕೊಂಡರು: “ಇವನು ಕುಲಪಾಂಸನ!
06041022a ವ್ಯಕ್ತಂ ಭೀತ ಇವಾಭ್ಯೇತಿ ರಾಜಾಸೌ ಭೀಷ್ಮಮಂತಿಕಾತ್|
06041022c ಯುಧಿಷ್ಠಿರಃ ಸಸೋದರ್ಯಃ ಶರಣಾರ್ಥಂ ಪ್ರಯಾಚಕಃ||
ಈ ರಾಜನು ಹೆದರಿಕೊಂಡಿದ್ದಾನೆ ಎನ್ನುವುದು ವ್ಯಕ್ತವಾಗುತ್ತಿದೆ. ಯುಧಿಷ್ಠಿರನು ಸೋದರರೊಂದಿಗೆ ಶರಣಾಗಲು ಬೇಡಿಕೊಂಡು ಭೀಷ್ಮನಲ್ಲಿಗೆ ಬರುತ್ತಿದ್ದಾನೆ.
06041023a ಧನಂಜಯೇ ಕಥಂ ನಾಥೇ ಪಾಂಡವೇ ಚ ವೃಕೋದರೇ|
06041023c ನಕುಲೇ ಸಹದೇವೇ ಚ ಭೀತೋಽಭ್ಯೇತಿ ಚ ಪಾಂಡವಃ||
ಧನಂಜಯ, ಪಾಂಡವ ವೃಕೋದರ, ನಕುಲ ಸಹದೇವರು ನಾಯಕರಾಗಿರುವಾಗ ಈ ಪಾಂಡವನು ಏಕೆ ಭೀತನಾಗಿದ್ದಾನೆ?
06041024a ನ ನೂನಂ ಕ್ಷತ್ರಿಯಕುಲೇ ಜಾತಃ ಸಂಪ್ರಥಿತೇ ಭುವಿ|
06041024c ಯಥಾಸ್ಯ ಹೃದಯಂ ಭೀತಮಲ್ಪಸತ್ತ್ವಸ್ಯ ಸಂಯುಗೇ||
ಭುವಿಯಲ್ಲಿ ಪ್ರಸಿದ್ಧನಾದರೂ, ಯುದ್ಧದ ಕುರಿತು ಹೃದಯದಲ್ಲಿ ಭೀತಿಪಡುತ್ತಿರುವ ಈ ಅಲ್ಪಸತ್ವನು ಕ್ಷತ್ರಿಯಕುಲದಲ್ಲಿಯೇ ಜನಿಸಿರಲಿಕ್ಕಿಲ್ಲ!”
06041025a ತತಸ್ತೇ ಕ್ಷತ್ರಿಯಾಃ ಸರ್ವೇ ಪ್ರಶಂಸಂತಿ ಸ್ಮ ಕೌರವಾನ್|
06041025c ಹೃಷ್ಟಾಃ ಸುಮನಸೋ ಭೂತ್ವಾ ಚೈಲಾನಿ ದುಧುವುಃ ಪೃಥಕ್||
ಆಗ ಆ ಕ್ಷತ್ರಿಯರೆಲ್ಲರೂ ಕೌರವರನ್ನು ಪ್ರಶಂಸಿಸಿದರು. ಸಂತೋಷದಿಂದ ಸುಮನಸ್ಕರಾಗಿ ತಮ್ಮ ಅಂಗವಸ್ತ್ರಗಳನ್ನು ಪುನಃ ಪುನಃ ಮೇಲೆತ್ತಿ ಬೀಸಿದರು.
06041026a ವ್ಯನಿಂದಂತ ತತಃ ಸರ್ವೇ ಯೋಧಾಸ್ತತ್ರ ವಿಶಾಂ ಪತೇ|
06041026c ಯುಧಿಷ್ಠಿರಂ ಸಸೋದರ್ಯಂ ಸಹಿತಂ ಕೇಶವೇನ ಹ||
ವಿಶಾಂಪತೇ! ಆಗ ಅಲ್ಲಿರುವ ಯೋಧರೆಲ್ಲರೂ ಸೋದರರೊಂದಿಗೆ ಯುಧಿಷ್ಠಿರನನ್ನೂ ಜೊತೆಗೆ ಕೇಶವನನ್ನೂ ನಿಂದಿಸಿದರು.
06041027a ತತಸ್ತತ್ಕೌರವಂ ಸೈನ್ಯಂ ಧಿಕ್ಕೃತ್ವಾ ತು ಯುಧಿಷ್ಠಿರಂ|
06041027c ನಿಃಶಬ್ದಮಭವತ್ತೂರ್ಣಂ ಪುನರೇವ ವಿಶಾಂ ಪತೇ||
ವಿಶಾಂಪತೇ! ಆಗ ಯುಧಿಷ್ಠಿರನನ್ನು ಧಿಕ್ಕರಿಸಿ ಕೌರವ ಸೈನ್ಯವು ಪುನಃ ನಿಃಶಬ್ಧವಾಯಿತು.
06041028a ಕಿಂ ನು ವಕ್ಷ್ಯತಿ ರಾಜಾಸೌ ಕಿಂ ಭೀಷ್ಮಃ ಪ್ರತಿವಕ್ಷ್ಯತಿ|
06041028c ಕಿಂ ಭೀಮಃ ಸಮರಶ್ಲಾಘೀ ಕಿಂ ನು ಕೃಷ್ಣಾರ್ಜುನಾವಿತಿ||
06041029a ವಿವಕ್ಷಿತಂ ಕಿಮಸ್ಯೇತಿ ಸಂಶಯಃ ಸುಮಹಾನಭೂತ್|
06041029c ಉಭಯೋಃ ಸೇನಯೋ ರಾಜನ್ಯುಧಿಷ್ಠಿರಕೃತೇ ತದಾ||
ಯುಧಿಷ್ಠಿರನು ಹೀಗೆ ಮಾಡಲು ಎರಡೂ ಸೇನೆಗಳಲ್ಲಿ “ರಾಜನು ಏನು ಹೇಳುತ್ತಾನೆ? ಭೀಷ್ಮನು ಏನೆಂದು ಉತ್ತರಿಸುತ್ತಾನೆ? ಸಮರಶ್ಲಾಘೀ ಭೀಮ ಮತ್ತು ಕೃಷ್ಣಾರ್ಜುನರು ಏನು ಹೇಳುತ್ತಾರೆ?” ಎಂದು ಮಹಾ ಸಂಶಯವುಂಟಾಯಿತು.
06041030a ಸ ವಿಗಾಹ್ಯ ಚಮೂಂ ಶತ್ರೋಃ ಶರಶಕ್ತಿಸಮಾಕುಲಾಂ|
06041030c ಭೀಷ್ಮಮೇವಾಭ್ಯಯಾತ್ತೂರ್ಣಂ ಭ್ರಾತೃಭಿಃ ಪರಿವಾರಿತಃ||
ಅವನು ಶರ-ಶಕ್ತಿಗಳಿಂದ ಕೂಡಿದ್ದ ಶತ್ರುಗಳ ಸೇನೆಯನ್ನು ಪ್ರವೇಶಿಸಿ, ತಮ್ಮಂದಿರಿಂದ ಸುತ್ತುವರೆಯಲ್ಪಟ್ಟು ಭೀಷ್ಮನನ್ನು ಸಮೀಪಿಸಿದನು.
06041031a ತಂ ಉವಾಚ ತತಃ ಪಾದೌ ಕರಾಭ್ಯಾಂ ಪೀಡ್ಯ ಪಾಂಡವಃ|
06041031c ಭೀಷ್ಮಂ ಶಾಂತನವಂ ರಾಜಾ ಯುದ್ಧಾಯ ಸಮುಪಸ್ಥಿತಂ||
ಆಗ ರಾಜಾ ಪಾಂಡವನು ಯುದ್ಧಕ್ಕೆ ಸಿದ್ಧನಾಗಿದ್ದ ಶಾಂತನವ ಭೀಷ್ಮನ ಪಾದಗಳನ್ನು ಕೈಗಳಿಂದ ಹಿಡಿದುಕೊಂಡು ಹೇಳಿದನು:
06041032 ಯುಧಿಷ್ಠಿರ ಉವಾಚ|
06041032a ಆಮಂತ್ರಯೇ ತ್ವಾಂ ದುರ್ಧರ್ಷ ಯೋತ್ಸ್ಯೇ ತಾತ ತ್ವಯಾ ಸಹ|
06041032c ಅನುಜಾನೀಹಿ ಮಾಂ ತಾತ ಆಶಿಷಶ್ಚ ಪ್ರಯೋಜಯ||
ಯುಧಿಷ್ಠಿರನು ಹೇಳಿದನು: “ತಾತ! ದುರ್ಧರ್ಷ! ನಿನ್ನೊಡನೆ ಯುದ್ಧಮಾಡಲು ಕರೆಸಿಕೊಂಡಿರುವೆ! ಅನುಜ್ಞೆಯನ್ನು ನೀಡು. ತಾತ! ಜಯವಾಗಲೆಂದು ಆಶೀರ್ವದಿಸು!”
06041033 ಭೀಷ್ಮ ಉವಾಚ|
06041033a ಯದ್ಯೇವಂ ನಾಭಿಗಚ್ಛೇಥಾ ಯುಧಿ ಮಾಂ ಪೃಥಿವೀಪತೇ|
06041033c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಭಾರತ||
ಭೀಷ್ಮನು ಹೇಳಿದನು: “ಭಾರತ! ಪೃಥಿವೀಪತೇ! ಮಹಾರಾಜ! ಹೀಗೆ ನೀನು ನನ್ನ ಬಳಿ ಬರದೇ ಇದ್ದಿದ್ದರೆ ನಿನಗೆ ಪರಾಭವವಾಗಲೆಂದು ಶಪಿಸುತ್ತಿದ್ದೆ.
06041034a ಪ್ರೀತೋಽಸ್ಮಿ ಪುತ್ರ ಯುಧ್ಯಸ್ವ ಜಯಮಾಪ್ನುಹಿ ಪಾಂಡವ|
06041034c ಯತ್ತೇಽಭಿಲಷಿತಂ ಚಾನ್ಯತ್ತದವಾಪ್ನುಹಿ ಸಂಯುಗೇ||
ಪುತ್ರ! ಪಾಂಡವ! ಪ್ರೀತನಾಗಿದ್ದೇನೆ. ಯುದ್ಧಮಾಡು. ಜಯವನ್ನು ಹೊಂದು. ಯುದ್ಧದಲ್ಲಿ ನಿನಗೆ ಅನ್ಯ ಏನೆಲ್ಲ ಅಭಿಲಾಷೆಗಳಿವೆಯೋ ಅವುಗಳನ್ನೂ ಪಡೆಯುತ್ತೀಯೆ.
06041035a ವ್ರಿಯತಾಂ ಚ ವರಃ ಪಾರ್ಥ ಕಿಮಸ್ಮತ್ತೋಽಭಿಕಾಂಕ್ಷಸಿ|
06041035c ಏವಂ ಗತೇ ಮಹಾರಾಜ ನ ತವಾಸ್ತಿ ಪರಾಜಯಃ||
ಪಾರ್ಥ! ನನ್ನಿಂದ ಏನನ್ನು ಬಯಸುತ್ತೀಯೋ ಆ ವರವನ್ನು ಕೇಳು. ಮಹಾರಾಜ! ಇದೇ ರೀತಿ ನಡೆದರೆ ನಿನಗೆ ಪರಾಜಯವಿಲ್ಲ.
06041036a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|
06041036c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041037a ಅತಸ್ತ್ವಾಂ ಕ್ಲೀಬವದ್ವಾಕ್ಯಂ ಬ್ರವೀಮಿ ಕುರುನಂದನ|
06041037c ಹೃತೋಽಸ್ಮ್ಯರ್ಥೇನ ಕೌರವ್ಯ ಯುದ್ಧಾದನ್ಯತ್ಕಿಮಿಚ್ಛಸಿ||
ಕುರುನಂದನ! ಆದುದರಿಂದ ಈ ಕ್ಲೀಬವಾಕ್ಯವನ್ನು ಹೇಳುತ್ತಿದ್ದೇನೆ. ಧನದಿಂದ ನಾನು ಅಪಹೃತನಾಗಿದ್ದೇನೆ. ಕೌರವ್ಯ! ಯುದ್ಧದಿಂದ ಬೇರೆ ಏನನ್ನು ಇಚ್ಛಿಸುತ್ತೀಯೆ?”
06041038 ಯುಧಿಷ್ಠಿರ ಉವಾಚ|
06041038a ಮಂತ್ರಯಸ್ವ ಮಹಾಪ್ರಾಜ್ಞ ಹಿತೈಷೀ ಮಮ ನಿತ್ಯಶಃ|
06041038c ಯುಧ್ಯಸ್ವ ಕೌರವಸ್ಯಾರ್ಥೇ ಮಮೈಷ ಸತತಂ ವರಃ||
ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ನಿತ್ಯವೂ ನನ್ನ ಹಿತೈಷಿಯಾಗಿ ಸಲಹೆ ನೀಡುತ್ತಿರು. ಸತತವೂ ಕೌರವನಿಗೋಸ್ಕರ ಯುದ್ಧಮಾಡು. ಇದೇ ನನ್ನ ವರ.”
06041039 ಭೀಷ್ಮ ಉವಾಚ|
06041039a ರಾಜನ್ಕಿಮತ್ರ ಸಾಹ್ಯಂ ತೇ ಕರೋಮಿ ಕುರುನಂದನ|
06041039c ಕಾಮಂ ಯೋತ್ಸ್ಯೇ ಪರಸ್ಯಾರ್ಥೇ ಬ್ರೂಹಿ ಯತ್ತೇ ವಿವಕ್ಷಿತಂ||
ಭೀಷ್ಮನು ಹೇಳಿದನು: “ರಾಜನ್! ಕುರುನಂದನ! ಇದರಲ್ಲಿ ನಿನಗೆ ಏನು ಸಹಾಯಮಾಡಲಿ? ನಿನ್ನ ಶತ್ರುಗಳಿಗಾಗಿ ಹೋರಾಡುತ್ತಿದ್ದೇನೆ. ನಿನ್ನ ಬಯಕೆಯೇನೆನ್ನುವುದನ್ನು ಹೇಳು!”
06041040 ಯುಧಿಷ್ಠಿರ ಉವಾಚ|
06041040a ಕಥಂ ಜಯೇಯಂ ಸಂಗ್ರಾಮೇ ಭವಂತಮಪರಾಜಿತಂ|
06041040c ಏತನ್ಮೇ ಮಂತ್ರಯ ಹಿತಂ ಯದಿ ಶ್ರೇಯಃ ಪ್ರಪಶ್ಯಸಿ||
ಯುಧಿಷ್ಠಿರನು ಹೇಳಿದನು: “ಅಪರಾಜಿತನಾದ ನಿನ್ನನ್ನು ಸಂಗ್ರಾಮದಲ್ಲಿ ಹೇಗೆ ಜಯಿಸಬಹುದು? ನಿನಗೆ ಶ್ರೇಯಸ್ಕರವೆಂದು ಕಂಡರೆ ನನಗೆ ಹಿತವಾದ ಈ ಸಲಹೆಯನ್ನು ನೀಡು.”
06041041 ಭೀಷ್ಮ ಉವಾಚ|
06041041a ನ ತಂ ಪಶ್ಯಾಮಿ ಕೌಂತೇಯ ಯೋ ಮಾಂ ಯುಧ್ಯಂತಮಾಹವೇ|
06041041c ವಿಜಯೇತ ಪುಮಾನ್ಕಶ್ಚಿದಪಿ ಸಾಕ್ಷಾಚ್ಚತಕ್ರತುಃ||
ಭೀಷ್ಮನು ಹೇಳಿದನು: “ಕೌಂತೇಯ! ಆಹವದಲ್ಲಿ ನನ್ನೊಂದಿಗೆ ಯುದ್ಧಮಾಡಿ ಗೆಲ್ಲುವ ಯಾವ ಪುರುಷನನ್ನೂ, ಸಾಕ್ಷಾತ್ ಶತಕ್ರತುವೂ ಕೂಡ, ನಾನು ಕಾಣುವುದಿಲ್ಲ.”
06041042 ಯುಧಿಷ್ಠಿರ ಉವಾಚ|
06041042a ಹಂತ ಪೃಚ್ಛಾಮಿ ತಸ್ಮಾತ್ತ್ವಾಂ ಪಿತಾಮಹ ನಮೋಽಸ್ತು ತೇ|
06041042c ಜಯೋಪಾಯಂ ಬ್ರವೀಹಿ ತ್ವಮಾತ್ಮನಃ ಸಮರೇ ಪರೈಃ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ನಿನಗೆ ನಮಸ್ಕಾರಗಳು! ಅದನ್ನು ಪುನಃ ನಿನ್ನಲ್ಲಿ ಕೇಳುತ್ತಿದ್ದೇನೆ. ಸಮರದಲ್ಲಿ ಶತ್ರುಗಳು ನಿನ್ನನ್ನು ಗೆಲ್ಲುವ ಉಪಾಯವನ್ನು ಹೇಳು.”
06041043 ಭೀಷ್ಮ ಉವಾಚ|
06041043a ನ ಶತ್ರುಂ ತಾತ ಪಶ್ಯಾಮಿ ಸಮರೇ ಯೋ ಜಯೇತ ಮಾಂ|
06041043c ನ ತಾವನ್ಮೃತ್ಯುಕಾಲೋ ಮೇ ಪುನರಾಗಮನಂ ಕುರು||
ಭೀಷ್ಮನು ಹೇಳಿದನು: “ಮಗೂ! ಸಮರದಲ್ಲಿ ನನ್ನನ್ನು ಜಯಿಸಬಲ್ಲ ಶತ್ರುವನ್ನು ನಾನು ಕಾಣುವುದಿಲ್ಲ. ನನ್ನ ಮೃತ್ಯುಕಾಲವು ಇನ್ನೂ ಬಂದಿಲ್ಲ. ಪುನಃ ಬರುವುದನ್ನು ಮಾಡು!””
06041044 ಸಂಜಯ ಉವಾಚ|
06041044a ತತೋ ಯುಧಿಷ್ಠಿರೋ ವಾಕ್ಯಂ ಭೀಷ್ಮಸ್ಯ ಕುರುನಂದನ|
06041044c ಶಿರಸಾ ಪ್ರತಿಜಗ್ರಾಹ ಭೂಯಸ್ತಮಭಿವಾದ್ಯ ಚ||
ಸಂಜಯನು ಹೇಳಿದನು: “ಕುರುನಂದನ! ಆಗ ಭೀಷ್ಮನ ವಾಕ್ಯವನ್ನು ಶಿರಸಾ ಸ್ವೀಕರಿಸಿ ಯುಧಿಷ್ಠಿರನು ಪುನಃ ಅವನನ್ನು ವಂದಿಸಿದನು.
06041045a ಪ್ರಾಯಾತ್ಪುನರ್ಮಹಾಬಾಹುರಾಚಾರ್ಯಸ್ಯ ರಥಂ ಪ್ರತಿ|
06041045c ಪಶ್ಯತಾಂ ಸರ್ವಸೈನ್ಯಾನಾಂ ಮಧ್ಯೇನ ಭ್ರಾತೃಭಿಃ ಸಹ||
ಅನಂತರ ಆ ಮಹಾಬಾಹುವು ಸರ್ವಸೈನ್ಯಗಳಿಗೂ ಕಾಣಿಸುವಂತೆ ಮಧ್ಯದಲ್ಲಿ ತಮ್ಮಂದಿರನ್ನೊಡಗೂಡಿ ಆಚಾರ್ಯನ ರಥದ ಕಡೆ ನಡೆದನು.
06041046a ಸ ದ್ರೋಣಮಭಿವಾದ್ಯಾಥ ಕೃತ್ವಾ ಚೈವ ಪ್ರದಕ್ಷಿಣಂ|
06041046c ಉವಾಚ ವಾಚಾ ದುರ್ಧರ್ಷಮಾತ್ಮನಿಃಶ್ರೇಯಸಂ ವಚಃ||
ಅವನು ಆ ದುರ್ಧರ್ಷ ದ್ರೋಣನನ್ನು ಪ್ರದಕ್ಷಿಣೆಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ನೀಡುವಂತಹ ಮಾತುಗಳನ್ನಾಡಿದನು.
06041047a ಆಮಂತ್ರಯೇ ತ್ವಾಂ ಭಗವನ್ಯೋತ್ಸ್ಯೇ ವಿಗತಕಲ್ಮಷಃ|
06041047c ಜಯೇಯಂ ಚ ರಿಪೂನ್ಸರ್ವಾನನುಜ್ಞಾತಸ್ತ್ವಯಾ ದ್ವಿಜ||
“ಭಗವನ್! ವಿಗತಕಲ್ಮಶನಾದ ನಿನ್ನೊಡನೆ ಯುದ್ಧಮಾಡಲು ಆಮಂತ್ರಿತನಾಗಿದ್ದೇನೆ. ದ್ವಿಜ! ನಿನ್ನಿಂದ ಅನುಜ್ಞಾತನಾಗಿ ಸರ್ವ ಶತ್ರುಗಳನ್ನೂ ಗೆಲ್ಲಬಲ್ಲೆನು.”
06041048 ದ್ರೋಣ ಉವಾಚ|
06041048a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ|
06041048c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಸರ್ವಶಃ||
ದ್ರೋಣನು ಹೇಳಿದನು: “ಮಹಾರಾಜ! ಯುದ್ಧದ ನಿಶ್ಚಯವನ್ನು ಮಾಡಿ ಒಂದುವೇಳೆ ನೀನು ನನ್ನಲ್ಲಿಗೆ ಬಾರದೇ ಇದ್ದಿದ್ದರೆ ನಾನು ನಿನಗೆ ಎಲ್ಲೆಡೆಯಿಂದ ಪರಾಭವವಾಗಲೆಂದು ಶಪಿಸುತ್ತಿದ್ದೆ.
06041049a ತದ್ಯುಧಿಷ್ಠಿರ ತುಷ್ಟೋಽಸ್ಮಿ ಪೂಜಿತಶ್ಚ ತ್ವಯಾನಘ|
06041049c ಅನುಜಾನಾಮಿ ಯುಧ್ಯಸ್ವ ವಿಜಯಂ ಸಮವಾಪ್ನುಹಿ||
ಅನಘ! ಯುಧಿಷ್ಠಿರ! ನಿನ್ನಿಂದ ಪೂಜಿತನಾಗಿ ತುಷ್ಟನಾಗಿದ್ದೇನೆ. ಅನುಮತಿಯನ್ನಿತ್ತಿದ್ದೇನೆ. ಯುದ್ಧ ಮಾಡು! ವಿಜಯವನ್ನು ಹೊಂದುವೆ!
06041050a ಕರವಾಣಿ ಚ ತೇ ಕಾಮಂ ಬ್ರೂಹಿ ಯತ್ತೇಽಭಿಕಾಂಕ್ಷಿತಂ|
06041050c ಏವಂ ಗತೇ ಮಹಾರಾಜ ಯುದ್ಧಾದನ್ಯತ್ಕಿಮಿಚ್ಛಸಿ||
ಈಗ ನಿನಗಿಷ್ಟವಾದುದನ್ನು ಮಾಡಲು ಬಿಡು. ನೀನು ಏನನ್ನು ಬಯಸುತ್ತೀಯೆ ಹೇಳು. ಮಹಾರಾಜ! ಹೀಗಿರುವಾಗ ಯುದ್ಧದಲ್ಲಿ ಸಹಾಯವನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?
06041051a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|
06041051c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041052a ಅತಸ್ತ್ವಾಂ ಕ್ಲೀಬವದ್ಬ್ರೂಮೋ ಯುದ್ಧಾದನ್ಯತ್ಕಿಮಿಚ್ಛಸಿ|
06041052c ಯೋತ್ಸ್ಯಾಮಿ ಕೌರವಸ್ಯಾರ್ಥೇ ತವಾಶಾಸ್ಯೋ ಜಯೋ ಮಯಾ||
ಆದುದರಿಂದ ನಾನು ಒಬ್ಬ ಶಂಡನಂತೆ ಯುದ್ಧದಲ್ಲಿ ಸಹಾಯವಲ್ಲದೇ ಬೇರೆ ಏನನ್ನು ಬಯಸುತ್ತೀಯೆಂದು ಕೇಳುತ್ತಿದ್ದೇನೆ. ನಾನು ಕೌರವನಿಗಾಗಿ ಹೋರಾಡುತ್ತೇನೆ. ಆದರೆ ನನ್ನ ಆಸೆಯು ನಿನ್ನ ಜಯದ ಕುರಿತಾಗಿದೆ.”
06041053 ಯುಧಿಷ್ಠಿರ ಉವಾಚ|
06041053a ಜಯಮಾಶಾಸ್ಸ್ವ ಮೇ ಬ್ರಹ್ಮನ್ಮಂತ್ರಯಸ್ವ ಚ ಮದ್ಧಿತಂ|
06041053c ಯುಧ್ಯಸ್ವ ಕೌರವಸ್ಯಾರ್ಥೇ ವರ ಏಷ ವೃತೋ ಮಯಾ||
ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ನನ್ನ ಜಯವನ್ನು ಬಯಸು. ನನ್ನ ಹಿತದಲ್ಲಿ ಸಲಹೆ ನೀಡು. ಕೌರವನ ಕಡೆಯಿಂದ ಯುದ್ಧಮಾಡು. ಇದು ನಾನು ಆರಿಸಿಕೊಳ್ಳುವ ವರ.”
06041054 ದ್ರೋಣ ಉವಾಚ|
06041054a ಧ್ರುವಸ್ತೇ ವಿಜಯೋ ರಾಜನ್ಯಸ್ಯ ಮಂತ್ರೀ ಹರಿಸ್ತವ|
06041054c ಅಹಂ ಚ ತ್ವಾಭಿಜಾನಾಮಿ ರಣೇ ಶತ್ರೂನ್ವಿಜೇಷ್ಯಸಿ||
ದ್ರೋಣನು ಹೇಳಿದನು: “ರಾಜನ್! ಹರಿಯೇ ಮಂತ್ರಿಯಾಗಿರುವ ನಿನಗೆ ವಿಜಯವು ನಿಶ್ಚಯಿಸಿದ್ದು. ನನಗೂ ಕೂಡ ತಿಳಿದಿದೆ. ರಣದಲ್ಲಿ ಶತ್ರುಗಳನ್ನು ಜಯಿಸುತ್ತೀಯೆ.
06041055a ಯತೋ ಧರ್ಮಸ್ತತಃ ಕೃಷ್ಣೋ ಯತಃ ಕೃಷ್ಣಸ್ತತೋ ಜಯಃ|
06041055c ಯುಧ್ಯಸ್ವ ಗಚ್ಛ ಕೌಂತೇಯ ಪೃಚ್ಛ ಮಾಂ ಕಿಂ ಬ್ರವೀಮಿ ತೇ||
ಧರ್ಮವು ಎಲ್ಲಿದೆಯೋ ಅಲ್ಲಿ ಕೃಷ್ಣ. ಕೃಷ್ಣನೆಲ್ಲಿರುವನೋ ಅಲ್ಲಿ ಜಯ. ಕೌಂತೇಯ! ಹೋಗು. ಯುದ್ಧಮಾಡು. ಕೇಳು. ಇನ್ನೇನು ಹೇಳಲಿ?”
06041056 ಯುಧಿಷ್ಠಿರ ಉವಾಚ|
06041056a ಪೃಚ್ಛಾಮಿ ತ್ವಾಂ ದ್ವಿಜಶ್ರೇಷ್ಠ ಶೃಣು ಮೇ ಯದ್ವಿವಕ್ಷಿತಂ|
06041056c ಕಥಂ ಜಯೇಯಂ ಸಂಗ್ರಾಮೇ ಭವಂತಮಪರಾಜಿತಂ||
ಯುಧಿಷ್ಠಿರನು ಹೇಳಿದನು: “ದ್ವಿಜಶ್ರೇಷ್ಠ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಹೇಳುವುದನ್ನು ಕೇಳು. ಸಂಗ್ರಾಮದಲ್ಲಿ ನಾವು ಹೇಗೆ ನಿನ್ನನ್ನು ಸೋಲಿಸಿ ಜಯವನ್ನು ಪಡೆಯಬಹುದು?”
06041057 ದ್ರೋಣ ಉವಾಚ|
06041057a ನ ತೇಽಸ್ತಿ ವಿಜಯಸ್ತಾವದ್ಯಾವದ್ಯುಧ್ಯಾಮ್ಯಹಂ ರಣೇ|
06041057c ಮಮಾಶು ನಿಧನೇ ರಾಜನ್ಯತಸ್ವ ಸಹ ಸೋದರೈಃ||
ದ್ರೋಣನು ಹೇಳಿದನು: “ರಾಜನ್! ರಣದಲ್ಲಿ ನಾನು ಯುದ್ಧ ಮಾಡುತ್ತಿರುವವರೆಗೆ ನಿನಗೆ ವಿಜಯವಿಲ್ಲ. ಸೋದರರೊಂದಿಗೆ ಬೇಗನೆ ನನ್ನ ಸಾವಿಗೆ ಪ್ರಯತ್ನಿಸು.”
06041058 ಯುಧಿಷ್ಠಿರ ಉವಾಚ|
06041058a ಹಂತ ತಸ್ಮಾನ್ಮಹಾಬಾಹೋ ವಧೋಪಾಯಂ ವದಾತ್ಮನಃ|
06041058c ಆಚಾರ್ಯ ಪ್ರಣಿಪತ್ಯೈಷ ಪೃಚ್ಛಾಮಿ ತ್ವಾಂ ನಮೋಽಸ್ತು ತೇ||
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಹಾಗಿದ್ದರೆ ನಿನ್ನ ವಧೆಯ ಉಪಾಯವನ್ನು ಹೇಳು. ಆಚಾರ್ಯ! ನಿನಗೆ ನಮಸ್ಕಾರಗಳು. ಇದನ್ನು ತಿಳಿಸಿಕೊಡು. ಕೇಳಿಕೊಳ್ಳುತ್ತಿದ್ದೇನೆ.”
06041059 ದ್ರೋಣ ಉವಾಚ|
06041059a ನ ಶತ್ರುಂ ತಾತ ಪಶ್ಯಾಮಿ ಯೋ ಮಾಂ ಹನ್ಯಾದ್ರಣೇ ಸ್ಥಿತಂ|
06041059c ಯುಧ್ಯಮಾನಂ ಸುಸಂರಬ್ಧಂ ಶರವರ್ಷೌಘವರ್ಷಿಣಂ||
ದ್ರೋಣನು ಹೇಳಿದನು: “ಮಗೂ! ರಣದಲ್ಲಿ ನಿಂತಿರುವ, ಸುಸಂರಬ್ಧನಾಗಿ ಶರವರ್ಷಗಳನ್ನು ಸುರಿಸುತ್ತಾ ಯುದ್ಧಮಾಡುತ್ತಿರುವ ನನ್ನನ್ನು ಕೊಲ್ಲುವ ಯಾವ ಶತ್ರುವನ್ನೂ ನಾನು ಕಾಣೆ!
06041060a ಋತೇ ಪ್ರಾಯಗತಂ ರಾಜನ್ನ್ಯಸ್ತಶಸ್ತ್ರಮಚೇತನಂ|
06041060c ಹನ್ಯಾನ್ಮಾಂ ಯುಧಿ ಯೋಧಾನಾಂ ಸತ್ಯಮೇತದ್ಬ್ರವೀಮಿ ತೇ||
ರಾಜನ್! ಶಸ್ತ್ರಗಳನ್ನು ಕೆಳಗಿಟ್ಟು, ಅಚೇತನನಾಗಿ ಪ್ರಾಯಗತನಾದ ನನ್ನನ್ನು ಮಾತ್ರ ಯುದ್ಧದಲ್ಲಿ ಯೋಧರು ಕೊಲ್ಲಬಹುದು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
06041061a ಶಸ್ತ್ರಂ ಚಾಹಂ ರಣೇ ಜಹ್ಯಾಂ ಶ್ರುತ್ವಾ ಸುಮಹದಪ್ರಿಯಂ|
06041061c ಶ್ರದ್ಧೇಯವಾಕ್ಯಾತ್ಪುರುಷಾದೇತತ್ಸತ್ಯಂ ಬ್ರವೀಮಿ ತೇ||
ನನಗೆ ಶ್ರದ್ಧೆಯಿರುವವನ ಕ್ರೂರವಾದ ಸುಮಹಾ ಅಪ್ರಿಯ ವಾಕ್ಯಗಳನ್ನು ಕೇಳಿ ನಾನು ರಣದಲ್ಲಿ ಶಸ್ತ್ರಗಳನ್ನು ತ್ಯಜಿಸಿಯೇನು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.””
06041062 ಸಂಜಯ ಉವಾಚ
06041062a ಏತಚ್ಚ್ರುತ್ವಾ ಮಹಾರಾಜ ಭಾರದ್ವಾಜಸ್ಯ ಧೀಮತಃ|
06041062c ಅನುಮಾನ್ಯ ತಮಾಚಾರ್ಯಂ ಪ್ರಾಯಾಚ್ಚಾರದ್ವತಂ ಪ್ರತಿ||
ಸಂಜಯನು ಹೇಳಿದನು: “ಮಹಾರಾಜ! ಭಾರದ್ವಾಜನ ಈ ಮಾತನ್ನು ಕೇಳಿ ಧೀಮತನು ಆಚಾರ್ಯನ ಅನುಮತಿಯನ್ನು ಪಡೆದು ಶಾರದ್ವತನ ಕಡೆ ನಡೆದನು.
06041063a ಸೋಽಭಿವಾದ್ಯ ಕೃಪಂ ರಾಜಾ ಕೃತ್ವಾ ಚಾಪಿ ಪ್ರದಕ್ಷಿಣಂ|
06041063c ಉವಾಚ ದುರ್ಧರ್ಷತಮಂ ವಾಕ್ಯಂ ವಾಕ್ಯವಿಶಾರದಃ||
ಆ ವಾಕ್ಯವಿಶಾರದ ರಾಜನು ಕೃಪನನ್ನೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಆ ದುರ್ಧರ್ಷತಮನಿಗೆ ಈ ಮಾತನ್ನಾಡಿದನು:
06041064a ಅನುಮಾನಯೇ ತ್ವಾಂ ಯೋತ್ಸ್ಯಾಮಿ ಗುರೋ ವಿಗತಕಲ್ಮಷಃ|
06041064c ಜಯೇಯಂ ಚ ರಿಪೂನ್ಸರ್ವಾನನುಜ್ಞಾತಸ್ತ್ವಯಾನಘ||
“ಗುರೋ! ಕಲ್ಮಷಗಳನ್ನು ಕಳೆದುಕೊಂಡು ನಿನ್ನೊಂದಿಗೆ ಯುದ್ಧಮಾಡುತ್ತೇನೆ. ಅಪ್ಪಣೆ ಕೊಡಬೇಕು. ಅನಘ! ಈ ರಿಪುಗಳೆಲ್ಲರನ್ನೂ ಜಯಿಸುತ್ತೇನೆ. ಅನುಜ್ಞೆ ನೀಡಬೇಕು!”
06041065 ಕೃಪ ಉವಾಚ|
06041065a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ|
06041065c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಸರ್ವಶಃ||
ಕೃಪನು ಹೇಳಿದನು: “ಯುದ್ಧವನ್ನು ನಿಶ್ಚಯಿಸಿ ನೀನು ನನ್ನ ಬಳಿ ಬರದೇ ಇದ್ದಿದ್ದರೆ ಮಹಾರಾಜ! ನಾನು ನಿನ್ನ ಸರ್ವಶಃ ಸೋಲಾಗಲೆಂದು ಶಪಿಸುತ್ತಿದ್ದೆ.
06041066a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|
06041066c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041067a ತೇಷಾಮರ್ಥೇ ಮಹಾರಾಜ ಯೋದ್ಧವ್ಯಂ ಇತಿ ಮೇ ಮತಿಃ|
06041067c ಅತಸ್ತ್ವಾಂ ಕ್ಲೀಬವದ್ಬ್ರೂಮಿ ಯುದ್ಧಾದನ್ಯತ್ಕಿಮಿಚ್ಛಸಿ||
ಮಹಾರಾಜ! ಅವರ ಉದ್ದೇಶಕ್ಕೆ ಹೋರಾಡಬೇಕೆಂದು ನನ್ನ ಅಭಿಪ್ರಾಯವಿದೆ. ಆದುದರಿಂದ ಶಂಡನಂತೆ ಹೇಳುತ್ತಿದ್ದೇನೆ. ನಿನ್ನ ಪರವಾಗಿ ಯುದ್ಧಮಾಡುವುದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?”
06041068 ಯುಧಿಷ್ಠಿರ ಉವಾಚ|
06041068a ಹಂತ ಪೃಚ್ಛಾಮಿ ತೇ ತಸ್ಮಾದಾಚಾರ್ಯ ಶೃಣು ಮೇ ವಚಃ|
ಯುಧಿಷ್ಠಿರನು ಹೇಳಿದನು: “ಆಚಾರ್ಯ! ಅದು ಹಾಗಿದೆಯೆಂದೇ ನಿನ್ನನ್ನು ಕೇಳಿಕೊಳ್ಳುತ್ತೇನೆ. ನನ್ನ ಮಾತನ್ನು ಕೇಳು.””
06041069 ಸಂಜಯ ಉವಾಚ|
06041069a ಇತ್ಯುಕ್ತ್ವಾ ವ್ಯಥಿತೋ ರಾಜಾ ನೋವಾಚ ಗತಚೇತನಃ|
06041069c ತಂ ಗೌತಮಃ ಪ್ರತ್ಯುವಾಚ ವಿಜ್ಞಾಯಾಸ್ಯ ವಿವಕ್ಷಿತಂ|
06041069e ಅವಧ್ಯೋಽಹಂ ಮಹೀಪಾಲ ಯುಧ್ಯಸ್ವ ಜಯಮಾಪ್ನುಹಿ||
ಸಂಜಯನು ಹೇಳಿದನು: “ಇದನ್ನು ಹೇಳಿ ವ್ಯಥಿತನಾದ ರಾಜನು ಚೇತನವನ್ನು ಕಳೆದುಕೊಂಡು ಏನನ್ನೂ ಹೇಳದೇ ಸುಮ್ಮನಾದನು. ಆದರೆ ಅವನು ಹೇಳಬಯಸಿದುದನ್ನು ತಿಳಿದುಕೊಂಡ ಗೌತಮನು ಉತ್ತರಿಸಿದನು: “ಮಹೀಪಾಲ! ನಾನು ಅವಧ್ಯ! ಯುದ್ಧಮಾಡು! ಜಯವನ್ನು ಹೊಂದು!
06041070a ಪ್ರೀತಸ್ತ್ವಭಿಗಮೇನಾಹಂ ಜಯಂ ತವ ನರಾಧಿಪ|
06041070c ಆಶಾಸಿಷ್ಯೇ ಸದೋತ್ಥಾಯ ಸತ್ಯಮೇತದ್ಬ್ರವೀಮಿ ತೇ||
ನೀನು ಬಂದಿದುದರಿಂದ ಪ್ರೀತನಾಗಿದ್ದೇನೆ. ನರಾಧಿಪ! ಪ್ರತಿದಿನ ಬೆಳಿಗ್ಗೆ ಎದ್ದು ನಿನ್ನ ಜಯಕ್ಕಾಗಿ ಆಶಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.”
06041071a ಏತಚ್ಚ್ರುತ್ವಾ ಮಹಾರಾಜ ಗೌತಮಸ್ಯ ವಚಸ್ತದಾ|
06041071c ಅನುಮಾನ್ಯ ಕೃಪಂ ರಾಜಾ ಪ್ರಯಯೌ ಯೇನ ಮದ್ರರಾಟ್||
ಮಹಾರಾಜ! ಗೌತಮನಾಡಿದ ಈ ಮಾತುಗಳನ್ನು ಕೇಳಿ ರಾಜನು ಕೃಪನಿಂದ ಅನುಮತಿಯನ್ನು ಪಡೆದು ಮದ್ರರಾಜನಿರುವಲ್ಲಿಗೆ ಹೋದನು.
06041072a ಸ ಶಲ್ಯಮಭಿವಾದ್ಯಾಥ ಕೃತ್ವಾ ಚಾಭಿಪ್ರದಕ್ಷಿಣಂ|
06041072c ಉವಾಚ ರಾಜಾ ದುರ್ಧರ್ಷಮಾತ್ಮನಿಃಶ್ರೇಯಸಂ ವಚಃ||
ಆಗ ಅವನು ಆ ದುರ್ಧರ್ಷ ಶಲ್ಯನಿಗೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ಕೊಡುವ ಈ ಮಾತುಗಳನ್ನು ಹೇಳಿದನು:
06041073a ಅನುಮಾನಯೇ ತ್ವಾಂ ಯೋತ್ಸ್ಯಾಮಿ ಗುರೋ ವಿಗತಕಲ್ಮಷಃ|
06041073c ಜಯೇಯಂ ಚ ಮಹಾರಾಜ ಅನುಜ್ಞಾತಸ್ತ್ವಯಾ ರಿಪೂನ್||
“ಗುರೋ! ವಿಗತಕಲ್ಮಶನಾಗಿ ನಿನ್ನೊಡನೆ ಯುದ್ಧ ಮಾಡುತ್ತೇನೆ. ಮಹಾರಾಜ! ರಿಪುಗಳನ್ನು ಜಯಿಸಲು ನಿನ್ನ ಅನುಜ್ಞೆಯನ್ನು ನೀಡು!”
06041074 ಶಲ್ಯ ಉವಾಚ|
06041074a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ|
06041074c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ವೈ ರಣೇ||
ಶಲ್ಯನು ಹೇಳಿದನು: “ಯುದ್ಧ ಮಾಡಲು ನಿಶ್ಚಯ ಮಾಡಿ ನೀನು ನನ್ನಲ್ಲಿಗೆ ಬರದಿದ್ದರೆ ಮಹಾರಾಜ! ರಣದಲ್ಲಿ ನಿನ್ನ ಪರಾಭವವಾಗಲೆಂದು ಶಪಿಸುತ್ತಿದ್ದೆ.
06041075a ತುಷ್ಟೋಽಸ್ಮಿ ಪೂಜಿತಶ್ಚಾಸ್ಮಿ ಯತ್ಕಾಂಕ್ಷಸಿ ತದಸ್ತು ತೇ|
06041075c ಅನುಜಾನಾಮಿ ಚೈವ ತ್ವಾಂ ಯುಧ್ಯಸ್ವ ಜಯಮಾಪ್ನುಹಿ||
ನಿನ್ನಿಂದ ತೃಪ್ತನಾಗಿದ್ದೇನೆ. ಗೌರವಿಸಲ್ಪಟ್ಟಿದ್ದೇನೆ. ಏನನ್ನು ಬಯಸುತ್ತೀಯೋ ಅದು ನಿನ್ನದಾಗಲಿ! ನಿನಗೆ ಅಪ್ಪಣೆಯನ್ನೂ ಕೊಡುತ್ತಿದ್ದೇನೆ. ಯುದ್ಧಮಾಡು. ಜಯವನ್ನು ಪಡೆ.
06041076a ಬ್ರೂಹಿ ಚೈವ ಪರಂ ವೀರ ಕೇನಾರ್ಥಃ ಕಿಂ ದದಾಮಿ ತೇ|
06041076c ಏವಂ ಗತೇ ಮಹಾರಾಜ ಯುದ್ಧಾದನ್ಯತ್ಕಿಮಿಚ್ಛಸಿ||
ವೀರ! ಬೇರೆ ಏನಾದರೂ ಕೇಳುವುದಿದ್ದರೆ ಹೇಳು. ನಿನಗೆ ಏನನ್ನು ಕೊಡಲಿ? ಮಹಾರಾಜ! ಹೀಗಿರುವಾಗ ಯುದ್ಧದಲ್ಲಿ ಸಹಾಯವೊಂದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?
06041077a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|
06041077c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041078a ಕರಿಷ್ಯಾಮಿ ಹಿ ತೇ ಕಾಮಂ ಭಾಗಿನೇಯ ಯಥೇಪ್ಸಿತಂ|
06041078c ಬ್ರವೀಮ್ಯತಃ ಕ್ಲೀಬವತ್ತ್ವಾಂ ಯುದ್ಧಾದನ್ಯತ್ಕಿಮಿಚ್ಛಸಿ||
ತಂಗಿಯ ಮಗನೇ! ನೀನು ಏನನ್ನು ಬಯಸುತ್ತೀಯೋ ಅದನ್ನು ಮಾಡುತ್ತೇನೆ. ಶಂಡನಂತೆ ಹೇಳುತ್ತಿದ್ದೇನೆ. ಯುದ್ಧದಲ್ಲಿ ಸಹಾಯದ ಹೊರತು ಏನನ್ನು ಬಯಸುತ್ತೀಯೆ?”
06041079 ಯುಧಿಷ್ಠಿರ ಉವಾಚ|
06041079a ಮಂತ್ರಯಸ್ವ ಮಹಾರಾಜ ನಿತ್ಯಂ ಮದ್ಧಿತಮುತ್ತಮಂ|
06041079c ಕಾಮಂ ಯುಧ್ಯ ಪರಸ್ಯಾರ್ಥೇ ವರಮೇತದ್ವೃಣೋಮ್ಯಹಂ||
ಯುಧಿಷ್ಠಿರನು ಹೇಳಿದನು: “ಮಹಾರಾಜ! ನಿತ್ಯವೂ ನನ್ನ ಹಿತದಲ್ಲಿ ಉತ್ತಮ ಸಲಹೆಗಳನ್ನು ನೀಡು. ಬೇಕಾದರೆ ಶತ್ರುಗಳಿಗಾಗಿ ಯುದ್ಧಮಾಡು. ಇದೇ ನಾನು ಆರಿಸಿಕೊಳ್ಳುವ ವರ.”
06041080 ಶಲ್ಯ ಉವಾಚ|
06041080a ಬ್ರೂಹಿ ಕಿಮತ್ರ ಸಾಹ್ಯಂ ತೇ ಕರೋಮಿ ನೃಪಸತ್ತಮ|
06041080c ಕಾಮಂ ಯೋತ್ಸ್ಯೇ ಪರಸ್ಯಾರ್ಥೇ ವೃತೋಽಸ್ಮ್ಯರ್ಥೇನ ಕೌರವೈಃ||
ಶಲ್ಯನು ಹೇಳಿದನು: “ನೃಪಸತ್ತಮ! ಹೇಳು! ಇದರಲ್ಲಿ ನಿನಗೆ ನಾನು ಏನು ಸಹಾಯವನ್ನು ಮಾಡಬೇಕು? ಕೌರವರು ಧನವನ್ನಿತ್ತು ನನ್ನನ್ನು ಆರಿಸಿಕೊಂಡಿರುವುದರಿಂದ ಅವರಿಗಾಗಿ ನಾನು ಯುದ್ಧಮಾಡಲು ಬಯಸುತ್ತೇನೆ.”
06041081 ಯುಧಿಷ್ಠಿರ ಉವಾಚ|
06041081a ಸ ಏವ ಮೇ ವರಃ ಸತ್ಯ ಉದ್ಯೋಗೇ ಯಸ್ತ್ವಯಾ ಕೃತಃ|
06041081c ಸೂತಪುತ್ರಸ್ಯ ಸಂಗ್ರಾಮೇ ಕಾರ್ಯಸ್ತೇಜೋವಧಸ್ತ್ವಯಾ||
ಯುಧಿಷ್ಠಿರನು ಹೇಳಿದನು: “ಉದ್ಯೋಗದ ಸಮಯದಲ್ಲಿ ನೀನು ನನಗೆ ಏನು ವರವನ್ನು ನೀಡಿದ್ದೆಯೋ ಅದನ್ನೇ ಸತ್ಯವಾಗಿಸು. ಸಂಗ್ರಾಮದಲ್ಲಿ ಸೂತಪುತ್ರನ ತೇಜೋವಧೆಯನ್ನು ಮಾಡು!”
06041082 ಶಲ್ಯ ಉವಾಚ|
06041082a ಸಂಪತ್ಸ್ಯತ್ಯೇಷ ತೇ ಕಾಮಃ ಕುಂತೀಪುತ್ರ ಯಥೇಪ್ಸಿತಃ|
06041082c ಗಚ್ಛ ಯುಧ್ಯಸ್ವ ವಿಸ್ರಬ್ಧಂ ಪ್ರತಿಜಾನೇ ಜಯಂ ತವ||
ಶಲ್ಯನು ಹೇಳಿದನು: “ಕುಂತೀಪುತ್ರ! ನೀನು ಬಯಸಿದ ಹಾಗೆ ಇದು ನಡೆಯುತ್ತದೆ. ಹೋಗು! ವಿಸ್ರಬ್ಧನಾಗಿ ಯುದ್ಧಮಾಡು. ನಿನಗೆ ಜಯದ ಭರವಸೆಯನ್ನು ನೀಡುತ್ತೇನೆ!””
06041083 ಸಂಜಯ ಉವಾಚ|
06041083a ಅನುಮಾನ್ಯಾಥ ಕೌಂತೇಯೋ ಮಾತುಲಂ ಮದ್ರಕೇಶ್ವರಂ|
06041083c ನಿರ್ಜಗಾಮ ಮಹಾಸೈನ್ಯಾದ್ಭ್ರಾತೃಭಿಃ ಪರಿವಾರಿತಃ||
ಸಂಜಯನು ಹೇಳಿದನು: “ಆಗ ಮಾತುಲ ಮಾದ್ರಕೇಶ್ವರನಿಂದ ಅನುಮತಿಯನ್ನು ಪಡೆದು ಕೌಂತೇಯನು ಸಹೋದರರಿಂದ ಪರಿವಾರಿತನಾಗಿ ಆ ಮಹಾಸೇನೆಯಿಂದ ನಿರ್ಗಮಿಸಿದನು.
06041084a ವಾಸುದೇವಸ್ತು ರಾಧೇಯಮಾಹವೇಽಭಿಜಗಾಮ ವೈ|
06041084c ತತ ಏನಮುವಾಚೇದಂ ಪಾಂಡವಾರ್ಥೇ ಗದಾಗ್ರಜಃ||
ಅಷ್ಟರಲ್ಲಿ ಗದಾಗ್ರಜ ವಾಸುದೇವನು ರಾಧೇಯನನ್ನು ರಣರಂಗದಲ್ಲಿ ಭೇಟಿಯಾಗಿ, ಪಾಂಡವರ ಪರವಾಗಿ ಇದನ್ನು ಹೇಳಿದನು:
06041085a ಶ್ರುತಂ ಮೇ ಕರ್ಣ ಭೀಷ್ಮಸ್ಯ ದ್ವೇಷಾತ್ಕಿಲ ನ ಯೋತ್ಸ್ಯಸಿ|
06041085c ಅಸ್ಮಾನ್ವರಯ ರಾಧೇಯ ಯಾವದ್ಭೀಷ್ಮೋ ನ ಹನ್ಯತೇ||
“ಕರ್ಣ! ಭೀಷ್ಮನ ದ್ವೇಷದಿಂದಾಗಿ ನೀನು ಯುದ್ಧಮಾಡುತ್ತಿಲ್ಲವೆಂದು ನಾನು ಕೇಳಿದ್ದೇನೆ. ಭೀಷ್ಮನು ಸಾಯುವವರೆಗೆ ರಾಧೇಯ! ನಮ್ಮನ್ನು ವರಿಸು!
06041086a ಹತೇ ತು ಭೀಷ್ಮೇ ರಾಧೇಯ ಪುನರೇಷ್ಯಸಿ ಸಂಯುಗೇ|
06041086c ಧಾರ್ತರಾಷ್ಟ್ರಸ್ಯ ಸಾಹಾಯ್ಯಂ ಯದಿ ಪಶ್ಯಸಿ ಚೇತ್ಸಮಂ||
ರಾಧೇಯ! ಭೀಷ್ಮನ ಮೃತ್ಯುವಾದ ಬಳಿಕ ಯುದ್ಧದಲ್ಲಿ ನಿನಗೆ ಸರಿಯೆಂದು ಹೇಗನಿಸುತ್ತದೆಯೋ ಹಾಗೆ ಧಾರ್ತರಾಷ್ಟ್ರನ ಸಹಾಯವನ್ನು ಮಾಡುವಿಯಂತೆ!”
06041087 ಕರ್ಣ ಉವಾಚ|
06041087a ನ ವಿಪ್ರಿಯಂ ಕರಿಷ್ಯಾಮಿ ಧಾರ್ತರಾಷ್ಟ್ರಸ್ಯ ಕೇಶವ|
06041087c ತ್ಯಕ್ತಪ್ರಾಣಂ ಹಿ ಮಾಂ ವಿದ್ಧಿ ದುರ್ಯೋಧನಹಿತೈಷಿಣಂ||
ಕರ್ಣನು ಹೇಳಿದನು: “ಕೇಶವ! ಧಾರ್ತರಾಷ್ಟ್ರನಿಗೆ ವಿಪ್ರಿಯವಾಗಿ ಮಾಡಲಾರೆ. ದುರ್ಯೋಧನನ ಹಿತೈಷಿಣಿಯಾಗಿ ಪ್ರಾಣವನ್ನೇ ತ್ಯಜಿಸುತ್ತೇನೆ. ನಿನಗಿದು ತಿಳಿದೇ ಇದೆ.””
06041088 ಸಂಜಯ ಉವಾಚ|
06041088a ತಚ್ಚ್ರುತ್ವಾ ವಚನಂ ಕೃಷ್ಣಃ ಸಮ್ನ್ಯವರ್ತತ ಭಾರತ|
06041088c ಯುಧಿಷ್ಠಿರಪುರೋಗೈಶ್ಚ ಪಾಂಡವೈಃ ಸಹ ಸಂಗತಃ||
ಸಂಜಯನು ಹೇಳಿದನು: “ಭಾರತ! ಅವನ ಆ ಮಾತನ್ನು ಕೇಳಿ ಕೃಷ್ಣನು ಯುಧಿಷ್ಠಿರನನ್ನು ಮುಂದಿರಿಸಿಕೊಂಡು ಹಿಂದಿರುಗುತ್ತಿದ್ದ ಪಾಂಡವರೊಂದಿಗೆ ಕೂಡಿಕೊಂಡನು.
06041089a ಅಥ ಸೈನ್ಯಸ್ಯ ಮಧ್ಯೇ ತು ಪ್ರಾಕ್ರೋಶತ್ಪಾಂಡವಾಗ್ರಜಃ|
06041089c ಯೋಽಸ್ಮಾನ್ವೃಣೋತಿ ತದಹಂ ವರಯೇ ಸಾಹ್ಯಕಾರಣಾತ್||
ಆಗ ಸೈನ್ಯದ ಮಧ್ಯೆ ಪಾಂಡವಾಗ್ರಜನು ಕೂಗಿ ಹೇಳಿದನು: “ಯಾರಾದರೂ ನಮ್ಮ ಪಕ್ಷವನ್ನು ಸೇರಬೇಕೆಂದಿದ್ದರೆ ನಾನು ಅವನನ್ನು ನನ್ನ ಸಹಾಯಕನೆಂದು ಸ್ವೀಕರಿಸುತ್ತೇನೆ!”
06041090a ಅಥ ತಾನ್ಸಮಭಿಪ್ರೇಕ್ಷ್ಯ ಯುಯುತ್ಸುರಿದಮಬ್ರವೀತ್|
06041090c ಪ್ರೀತಾತ್ಮಾ ಧರ್ಮರಾಜಾನಂ ಕುಂತೀಪುತ್ರಂ ಯುಧಿಷ್ಠಿರಂ||
ಆಗ ಯುಯುತ್ಸುವು ಅವರನ್ನು ನೋಡಿ, ಪ್ರೀತಾತ್ಮಾ ಧರ್ಮರಾಜ ಕುಂತೀಪುತ್ರ ಯುಧಿಷ್ಠಿರನಿಗೆ ಇದನ್ನು ಹೇಳಿದನು:
06041091a ಅಹಂ ಯೋತ್ಸ್ಯಾಮಿ ಮಿಷತಃ ಸಂಯುಗೇ ಧಾರ್ತರಾಷ್ಟ್ರಜಾನ್|
06041091c ಯುಷ್ಮದರ್ಥೇ ಮಹಾರಾಜ ಯದಿ ಮಾಂ ವೃಣುಷೇಽನಘ||
“ಮಹಾರಾಜ! ಅನಘ! ನೀನು ನನ್ನನ್ನು ಸ್ವೀಕರಿಸಿದರೆ ನಾನು ಬಹಿರಂಗವಾಗಿ ಧಾರ್ತರಾಷ್ಟ್ರರ ವಿರುದ್ಧವಾಗಿ ನಿನ್ನ ಪರವಾಗಿ ರಣದಲ್ಲಿ ಹೋರಾಡುತ್ತೇನೆ.”
06041092 ಯುಧಿಷ್ಠಿರ ಉವಾಚ|
06041092a ಏಹ್ಯೇಹಿ ಸರ್ವೇ ಯೋತ್ಸ್ಯಾಮಸ್ತವ ಭ್ರಾತೄನಪಂಡಿತಾನ್|
06041092c ಯುಯುತ್ಸೋ ವಾಸುದೇವಶ್ಚ ವಯಂ ಚ ಬ್ರೂಮ ಸರ್ವಶಃ||
ಯುಧಿಷ್ಠಿರನು ಹೇಳಿದನು: “ಬಾ! ಬಾ ಯುಯುತ್ಸೋ! ನಾವೆಲ್ಲರೂ ನಿನ್ನ ಈ ಅಪಂಡಿತ ಸಹೋದರರನ್ನು ಎದುರಿಸಿ ಯುದ್ಧಮಾಡೋಣ! ವಾಸುದೇವನೊಂದಿಗೆ ನಾವೆಲ್ಲರೂ ಹೇಳುತ್ತಿದ್ದೇವೆ.
06041093a ವೃಣೋಮಿ ತ್ವಾಂ ಮಹಾಬಾಹೋ ಯುಧ್ಯಸ್ವ ಮಮ ಕಾರಣಾತ್|
06041093c ತ್ವಯಿ ಪಿಂಡಶ್ಚ ತಂತುಶ್ಚ ಧೃತರಾಷ್ಟ್ರಸ್ಯ ದೃಶ್ಯತೇ||
ಮಹಾಬಾಹೋ! ನಿನ್ನನ್ನು ಸ್ವೀಕರಿಸಿದ್ದೇನೆ. ನನ್ನ ಕಾರಣಕ್ಕಾಗಿ ಯುದ್ಧಮಾಡು. ನೀನೇ ಧೃತರಾಷ್ಟ್ರನ ವಂಶದ ತಂತುವೂ ಅವನಿಗೆ ಪಿಂಡವನ್ನು ನೀಡುವವನೂ ಎಂದು ತೋರುತ್ತಿದ್ದೀಯೆ.
06041094a ಭಜಸ್ವಾಸ್ಮಾನ್ರಾಜಪುತ್ರ ಭಜಮಾನಾನ್ಮಹಾದ್ಯುತೇ|
06041094c ನ ಭವಿಷ್ಯತಿ ದುರ್ಬುದ್ಧಿರ್ಧಾರ್ತರಾಷ್ಟ್ರೋಽತ್ಯಮರ್ಷಣಃ||
ರಾಜಪುತ್ರ! ಮಹಾದ್ಯುತೇ! ನಾವು ನಿನ್ನನ್ನು ಸ್ವೀಕರಿಸುವಂತೆ ನೀನೂ ನಮ್ಮನ್ನು ಸ್ವೀಕರಿಸು. ಅತ್ಯಮರ್ಷಣ ದುರ್ಬುದ್ಧಿ ಧಾರ್ತರಾಷ್ಟ್ರನು ಇಲ್ಲವಾಗುತ್ತಾನೆ!””
06041095 ಸಂಜಯ ಉವಾಚ|
06041095a ತತೋ ಯುಯುತ್ಸುಃ ಕೌರವ್ಯಃ ಪರಿತ್ಯಜ್ಯ ಸುತಾಂಸ್ತವ|
06041095c ಜಗಾಮ ಪಾಂಡುಪುತ್ರಾಣಾಂ ಸೇನಾಂ ವಿಶ್ರಾವ್ಯ ದುಂದುಭಿಂ||
ಸಂಜಯನು ಹೇಳಿದನು: “ಆಗ ಕೌರವ್ಯ ಯುಯುತ್ಸುವು, ದುಂದುಭಿಗಳು ಕೇಳುತ್ತಿರಲು, ನಿನ್ನ ಮಗನನ್ನು ತ್ಯಜಿಸಿ ಪಾಂಡುಪುತ್ರರ ಸೇನೆಗೆ ಹೋದನು.
06041096a ತತೋ ಯುಧಿಷ್ಠಿರೋ ರಾಜಾ ಸಂಪ್ರಹೃಷ್ಟಃ ಸಹಾನುಜೈಃ|
06041096c ಜಗ್ರಾಹ ಕವಚಂ ಭೂಯೋ ದೀಪ್ತಿಮತ್ಕನಕೋಜ್ಜ್ವಲಂ||
ಆಗ ರಾಜಾ ಯುಧಿಷ್ಠಿರನು ಸಂಪ್ರಹೃಷ್ಟನಾಗಿ ಅನುಜರೊಂದಿಗೆ ಪುನಃ ಬೆಳಗುತ್ತಿದ್ದ ಕನಕೋಜ್ಜ್ವಲ ಕವಚವನ್ನು ಧರಿಸಿದನು.
06041097a ಪ್ರತ್ಯಪದ್ಯಂತ ತೇ ಸರ್ವೇ ರಥಾನ್ಸ್ವಾನ್ಪುರುಷರ್ಷಭಾಃ|
06041097c ತತೋ ವ್ಯೂಹಂ ಯಥಾಪೂರ್ವಂ ಪ್ರತ್ಯವ್ಯೂಹಂತ ತೇ ಪುನಃ||
ಆ ಎಲ್ಲ ಪುರುಷರ್ಷಭರೂ ತಮ್ಮ ತಮ್ಮ ರಥಗಳನ್ನೇರಿ ಮೊದಲಿನಂತೆಯೇ ಪುನಃ ವ್ಯೂಹಗಳನ್ನು ರಚಿಸಿಕೊಂಡರು.
06041098a ಅವಾದಯನ್ದುಂದುಭೀಂಶ್ಚ ಶತಶಶ್ಚೈವ ಪುಷ್ಕರಾನ್|
06041098c ಸಿಂಹನಾದಾಂಶ್ಚ ವಿವಿಧಾನ್ವಿನೇದುಃ ಪುರುಷರ್ಷಭಾಃ||
ಆ ಪುರುಷರ್ಷಭರು ನೂರಾರು ದುಂದುಭಿಗಳನ್ನೂ ನೂರಾರು ಪುಷ್ಕರಗಳನ್ನೂ ಮೊಳಗಿಸಿದರು. ವಿವಿಧ ಸಿಂಹನಾದಗಳನ್ನೂ ಗೈದರು.
06041099a ರಥಸ್ಥಾನ್ಪುರುಷವ್ಯಾಘ್ರಾನ್ಪಾಂಡವಾನ್ಪ್ರೇಕ್ಷ್ಯ ಪಾರ್ಥಿವಾಃ|
06041099c ಧೃಷ್ಟದ್ಯುಮ್ನಾದಯಃ ಸರ್ವೇ ಪುನರ್ಜಹೃಷಿರೇ ಮುದಾ||
ರಥದ ಮೇಲೇರಿದ್ದ ಆ ಪುರುಷವ್ಯಾಘ್ರ ಪಾಂಡವರನ್ನು ಪುನಃ ಕಂಡು ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥಿವರೆಲ್ಲರೂ ಸಂತೋಷಭರಿತರಾದರು.
06041100a ಗೌರವಂ ಪಾಂಡುಪುತ್ರಾಣಾಂ ಮಾನ್ಯಾನ್ಮಾನಯತಾಂ ಚ ತಾನ್|
06041100c ದೃಷ್ಟ್ವಾ ಮಹೀಕ್ಷಿತಸ್ತತ್ರ ಪೂಜಯಾಂ ಚಕ್ರಿರೇ ಭೃಶಂ||
ಗೌರವಿಸಬೇಕಾದವರನ್ನು ಗೌರವಿಸಿದ ಪಾಂಡುಪುತ್ರರ ಗೌರವವನ್ನು ನೋಡಿ ಅಲ್ಲಿದ್ದ ಮಹೀಕ್ಷಿತರು ಅವರನ್ನು ತುಂಬಾ ಗೌರವಿಸಿದರು.
06041101a ಸೌಹೃದಂ ಚ ಕೃಪಾಂ ಚೈವ ಪ್ರಾಪ್ತಕಾಲಂ ಮಹಾತ್ಮನಾಂ|
06041101c ದಯಾಂ ಚ ಜ್ಞಾತಿಷು ಪರಾಂ ಕಥಯಾಂ ಚಕ್ರಿರೇ ನೃಪಾಃ||
ಆ ಮಹಾತ್ಮರ ಕಾಲಕ್ಕೆ ತಕ್ಕುದಾದ ಸೌಹಾರ್ದತೆ, ಕೃಪೆ, ಮತ್ತು ಕುಲದವರ ಮೇಲಿದ್ದ ಅವರ ದಯೆಯ ಕುರಿತು ಇತರ ನೃಪರು ಮಾತನಾಡಿಕೊಂಡರು.
06041102a ಸಾಧು ಸಾಧ್ವಿತಿ ಸರ್ವತ್ರ ನಿಶ್ಚೇರುಃ ಸ್ತುತಿಸಂಹಿತಾಃ|
06041102c ವಾಚಃ ಪುಣ್ಯಾಃ ಕೀರ್ತಿಮತಾಂ ಮನೋಹೃದಯಹರ್ಷಿಣೀಃ||
ಎಲ್ಲಾ ಕಡೆಗಳಿಂದಲೂ “ಸಾಧು! ಸಾಧು!” ಎಂದು ಮನಸ್ಸು ಮತ್ತು ಹೃದಯಗಳಿಗೆ ಹರ್ಷವನ್ನು ಕೊಡುವ ಆ ಕೀರ್ತಿಮತರ ಪುಣ್ಯ ಹೊಗಳಿಕೆಯ ಮಾತುಗಳೇ ಕೇಳಿಬಂದವು.
06041103a ಮ್ಲೇಚ್ಛಾಶ್ಚಾರ್ಯಾಶ್ಚ ಯೇ ತತ್ರ ದದೃಶುಃ ಶುಶ್ರುವುಸ್ತದಾ|
06041103c ವೃತ್ತಂ ತತ್ಪಾಂಡುಪುತ್ರಾಣಾಂ ರುರುದುಸ್ತೇ ಸಗದ್ಗದಾಃ||
ಮ್ಲೇಚ್ಛರಾಗಿರಲಿ ಅಥವಾ ಆರ್ಯರಾಗಿರಲಿ ಯಾರೆಲ್ಲ ಅಲ್ಲಿ ಪಾಂಡುಪುತ್ರರ ಆ ನಡತೆಯನ್ನು ನೋಡಿದರೋ ಅಥವಾ ಕೇಳಿದರೋ ಅವರು ಗದ್ಗದರಾಗಿ ಕಣ್ಣೀರಿಟ್ಟರು.
06041104a ತತೋ ಜಘ್ನುರ್ಮಹಾಭೇರೀಃ ಶತಶಶ್ಚೈವ ಪುಷ್ಕರಾನ್|
06041104c ಶಂಖಾಂಶ್ಚ ಗೋಕ್ಷೀರನಿಭಾನ್ದಧ್ಮುರ್ಹೃಷ್ಟಾ ಮನಸ್ವಿನಃ||
ಆಗ ಆ ಮನಸ್ವಿಗಳು ಹರ್ಷಿತರಾಗಿ ನೂರಾರು ಮಹಾ ಭೇರಿಗಳನ್ನೂ ನೂರಾರು ಪುಷ್ಕರಗಳನ್ನೂ ಬಾರಿಸಿದರು ಮತ್ತು ಆಕಳ ಹಾಲಿನ ಬಣ್ಣದ ಶಂಖಗಳನ್ನೂ ಊದಿದರು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾದಿಸಮ್ಮಾನನೇ ಏಕಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾದಿಸಮ್ಮಾನನವೆಂಬ ನಲ್ವತ್ತೊಂದನೇ ಅಧ್ಯಾಯವು.
