Bhishma Parva: Chapter 19

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೧೯

ಪಾಂಡವರ ಸೇನಾವ್ಯೂಹ (೧-೧೬). ಪಾಂಡವ ಸೇನೆಯ ವರ್ಣನೆ (೧೭-೪೪).

06019001 ಧೃತರಾಷ್ಟ್ರ ಉವಾಚ|

06019001a ಅಕ್ಷೌಹಿಣ್ಯೋ ದಶೈಕಾಂ ಚ ವ್ಯೂಢಾಂ ದೃಷ್ಟ್ವಾ ಯುಧಿಷ್ಠಿರಃ|

06019001c ಕಥಮಲ್ಪೇನ ಸೈನ್ಯೇನ ಪ್ರತ್ಯವ್ಯೂಹತ ಪಾಂಡವಃ||

ಧೃತರಾಷ್ಟ್ರನು ಹೇಳಿದನು: “ಹನ್ನೊಂದು ಅಕ್ಷೌಹಿಣೀ ಸೇನೆಯು ವ್ಯೂಹಗೊಂಡಿದುದನ್ನು ನೋಡಿದ ಪಾಂಡವ ಯುಧಿಷ್ಠಿರನು ಕಡಿಮೆ ಸೇನೆಯಿಂದ ಹೇಗೆ ಪ್ರತಿವ್ಯೂಹವನ್ನು ರಚಿಸಿದನು?

06019002a ಯೋ ವೇದ ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ|

06019002c ಕಥಂ ಭೀಷ್ಮಂ ಸ ಕೌಂತೇಯಃ ಪ್ರತ್ಯವ್ಯೂಹತ ಪಾಂಡವಃ||

ಮಾನುಷ, ದೈವ, ಗಾಂಧರ್ವ, ಆಸುರ ವ್ಯೂಹಗಳನ್ನು ತಿಳಿದಿದ್ದ ಭೀಷ್ಮನನ್ನು ಎದುರಿಸಿ ಕೌಂತೇಯ ಪಾಂಡವನು ಹೇಗೆ ವ್ಯೂಹವನ್ನು ರಚಿಸಿದನು?”

06019003 ಸಂಜಯ ಉವಾಚ|

06019003a ಧಾರ್ತರಾಷ್ಟ್ರಾಣ್ಯನೀಕಾನಿ ದೃಷ್ಟ್ವಾ ವ್ಯೂಢಾನಿ ಪಾಂಡವಃ|

06019003c ಅಭ್ಯಭಾಷತ ಧರ್ಮಾತ್ಮಾ ಧರ್ಮರಾಜೋ ಧನಂಜಯಂ||

ಸಂಜಯನು ಹೇಳಿದನು: “ಧಾರ್ತರಾಷ್ಟ್ರರ ಸೇನೆಗಳೂ ವ್ಯೂಹಗೊಂಡಿದನ್ನು ನೋಡಿದ ಪಾಂಡವ ಧರ್ಮಾತ್ಮ ಧರ್ಮರಾಜನು ಧನಂಜಯನಿಗೆ ಹೇಳಿದನು:

06019004a ಮಹರ್ಷೇರ್ವಚನಾತ್ತಾತ ವೇದಯಂತಿ ಬೃಹಸ್ಪತೇಃ|

06019004c ಸಂಹತಾನ್ಯೋಧಯೇದಲ್ಪಾನ್ಕಾಮಂ ವಿಸ್ತಾರಯೇದ್ಬಹೂನ್||

“ಅಯ್ಯಾ! ಮಹರ್ಷಿ ಬೃಹಸ್ಪತಿಯ ಮಾತುಗಳಂತೆ ಕಡಿಮೆಯಿರುವ ಸೇನೆಯು ಒಂದಕ್ಕೊಂದು ತಾಗಿಕೊಂಡು ಸಂಹತವಾಗಿರಬೇಕು. ದೊಡ್ಡ ಸೇನೆಯು ಬೇಕಾದಷ್ಟು ವಿಸ್ತಾರವಾಗಿ ಹರಡಿಕೊಳ್ಳಬಹುದು.

06019005a ಸೂಚೀಮುಖಮನೀಕಂ ಸ್ಯಾದಲ್ಪಾನಾಂ ಬಹುಭಿಃ ಸಹ|

06019005c ಅಸ್ಮಾಕಂ ಚ ತಥಾ ಸೈನ್ಯಮಲ್ಪೀಯಃ ಸುತರಾಂ ಪರೈಃ||

ದೊಡ್ಡ ಸೇನೆಯೊಂದಿಗೆ ಯುದ್ಧಮಾಡುವಾಗ ಸಣ್ಣಸೇನೆಯ ಮುಖವು ಸೂಜಿಯ ಮೊನೆಯಂತಿರಬೇಕು. ಹೇಗೆ ನೋಡಿದರೂ ನಮ್ಮ ಸೇನೆಯು ಶತ್ರುಸೈನ್ಯಕ್ಕಿಂತ ಸಣ್ಣದು.

06019006a ಏತದ್ವಚನಮಾಜ್ಞಾಯ ಮಹರ್ಷೇರ್ವ್ಯೂಹ ಪಾಂಡವ|

06019006c ತಚ್ಚ್ರುತ್ವಾ ಧರ್ಮರಾಜಸ್ಯ ಪ್ರತ್ಯಭಾಷತ ಫಲ್ಗುಣಃ||

ಪಾಂಡವ! ಮಹರ್ಷಿಯ ಈ ಮಾತನ್ನು ತಿಳಿದುಕೊಂಡು ವ್ಯೂಹವನ್ನು ರಚಿಸು.” ಧರ್ಮರಾಜನನ್ನು ಕೇಳಿ ಫಲ್ಗುಣನು ಉತ್ತರಿಸಿದನು.

06019007a ಏಷ ವ್ಯೂಹಾಮಿ ತೇ ರಾಜನ್ವ್ಯೂಹಂ ಪರಮದುರ್ಜಯಂ|

06019007c ಅಚಲಂ ನಾಮ ವಜ್ರಾಖ್ಯಂ ವಿಹಿತಂ ವಜ್ರಪಾಣಿನಾ||

“ರಾಜನ್! ವಜ್ರವೆಂಬ ಹೆಸರಿನಿಂದ ಕರೆಯಲ್ಪಡುವ, ವಜ್ರಪಾಣಿಯೇ ಹೇಳಿಕೊಟ್ಟಿರುವ, ಪರಮ ದುರ್ಜಯವಾದ ವಜ್ರವೆಂಬ ವ್ಯೂಹವನ್ನು ನಿನಗಾಗಿ ರಚಿಸುತ್ತೇನೆ.

06019008a ಯಃ ಸ ವಾತ ಇವೋದ್ಧೂತಃ ಸಮರೇ ದುಃಸಹಃ ಪರೈಃ|

06019008c ಸ ನಃ ಪುರೋ ಯೋತ್ಸ್ಯತಿ ವೈ ಭೀಮಃ ಪ್ರಹರತಾಂ ವರಃ||

ಒಡೆದುಹೋದ ಭಿರುಗಾಳಿಯಂತೆ ಮುನ್ನುಗ್ಗುವ, ಸಮರದಲ್ಲಿ ಶತ್ರುಗಳಿಗೆ ದುಃಸ್ಸಹನಾದ, ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ಇದರ ಮುಂದೆ ನಿಂತು ಹೋರಾಡುತ್ತಾನೆ.

06019009a ತೇಜಾಂಸಿ ರಿಪುಸೈನ್ಯಾನಾಂ ಮೃದ್ನನ್ಪುರುಷಸತ್ತಮಃ|

06019009c ಅಗ್ರೇಽಗ್ರಣೀರ್ಯಾಸ್ಯತಿ ನೋ ಯುದ್ಧೋಪಾಯವಿಚಕ್ಷಣಃ||

ಯುದ್ಧದ ಉಪಾಯಗಳನ್ನು ಕಂಡುಕೊಂಡಿರುವ ಆ ಪುರುಷಸತ್ತಮನು ತನ್ನ ತೇಜಸ್ಸಿನಿಂದಲೇ ರಿಪು ಸೇನೆಗಳನ್ನು ಸದೆಬಡಿಯುತ್ತಾ ಮುಂದೆ ನಮ್ಮ ಅಗ್ರಣಿಯಾಗಿ ಹೋರಾಡುತ್ತಾನೆ.

06019010a ಯಂ ದೃಷ್ಟ್ವಾ ಪಾರ್ಥಿವಾಃ ಸರ್ವೇ ದುರ್ಯೋಧನಪುರೋಗಮಾಃ|

06019010c ನಿವರ್ತಿಷ್ಯಂತಿ ಸಂಭ್ರಾಂತಾಃ ಸಿಂಹಂ ಕ್ಷುದ್ರಮೃಗಾ ಇವ||

ಅವನನ್ನು ನೋಡಿ ದುರ್ಯೋಧನನ ನಾಯಕತ್ವದಲ್ಲಿರುವ ಪಾರ್ಥಿವರೆಲ್ಲರೂ ಸಿಂಹನನ್ನು ಕಂಡ ಕ್ಷುದ್ರಮೃಗಗಳಂತೆ ಸಂಭ್ರಾಂತರಾಗಿ ಹಿಂದೆಸರಿಯುತ್ತಾರೆ.

06019011a ತಂ ಸರ್ವೇ ಸಂಶ್ರಯಿಷ್ಯಾಮಃ ಪ್ರಾಕಾರಮಕುತೋಭಯಂ|

06019011c ಭೀಮಂ ಪ್ರಹರತಾಂ ಶ್ರೇಷ್ಠಂ ವಜ್ರಪಾಣಿಮಿವಾಮರಾಃ||

ನಾವೆಲ್ಲರೂ ಗೋಡೆಯಂತಿರುವ ಆ ಪ್ರಹರಿಗಳಲ್ಲಿ ಶ್ರೇಷ್ಠ ಭೀಮನ ಹಿಂದೆ, ವಜ್ರಪಾಣಿಯ ಹಿಂದೆ ಅಮರರು ಹೇಗೋ ಹಾಗೆ ಅಭಯರಾಗಿ ಆಶ್ರಯ ಪಡೆಯೋಣ.

06019012a ನ ಹಿ ಸೋಽಸ್ತಿ ಪುಮಾಽಲ್ಲೋಕೇ ಯಃ ಸಂಕ್ರುದ್ಧಂ ವೃಕೋದರಂ|

06019012c ದ್ರಷ್ಟುಮತ್ಯುಗ್ರಕರ್ಮಾಣಂ ವಿಷಹೇತ ನರರ್ಷಭಂ||

ಆ ನರರ್ಷಭ ಉಗ್ರಕರ್ಮಿ ಸಂಕ್ರುದ್ಧ ವೃಕೋದರನನ್ನು ನೋಡಿ ಉಸಿರನ್ನು ಹಿಡಿದುಕೊಂಡಿರಬಹುದಾದ ಪುರುಷರು ಈ ಲೋಕದಲ್ಲಿ ಯಾರೂ ಇಲ್ಲ.

06019013a ಭೀಮಸೇನೋ ಗದಾಂ ಬಿಭ್ರದ್ವಜ್ರಸಾರಮಯೀಂ ದೃಢಾಂ|

06019013c ಚರನ್ವೇಗೇನ ಮಹತಾ ಸಮುದ್ರಮಪಿ ಶೋಷಯೇತ್||

ವಜ್ರಸಾರದಿಂದ ತುಂಬಿದ ದೃಢ ಗದೆಯನ್ನು ಬೀಸಿ ಭೀಮಸೇನನು ಮಹಾವೇಗದಿಂದ ನಡೆದು ಸಮುದ್ರವನ್ನು ಕೂಡ ಬತ್ತಿಸಬಲ್ಲನು.

06019014a ಕೇಕಯಾ ಧೃಷ್ಟಕೇತುಶ್ಚ ಚೇಕಿತಾನಶ್ಚ ವೀರ್ಯವಾನ್|

06019014c ಏತ ತಿಷ್ಠಂತಿ ಸಾಮಾತ್ಯಾಃ ಪ್ರೇಕ್ಷಕಾಸ್ತೇ ನರೇಶ್ವರ||

06019015a ಧೃತರಾಷ್ಟ್ರಸ್ಯ ದಾಯಾದಾ ಇತಿ ಬೀಭತ್ಸುರಬ್ರವೀತ್|

ಕೇಕಯರು, ಧೃಷ್ಟಕೇತು ಮತ್ತು ವೀರ್ಯವಾನ ಚೇಕಿತಾನರು ಅಮಾತ್ಯರೊಂದಿಗೆ ನರೇಶ್ವರ! ಧೃತರಾಷ್ಟ್ರನ ದಾಯಾದಾ ನಿನ್ನನ್ನು ನೋಡಿಕೊಳ್ಳಲು ನಿಂತಿರುತ್ತಾರೆ.” ಹೀಗೆ ಬೀಭತ್ಸುವು ಹೇಳಿದನು.

06019015c ಬ್ರುವಾಣಂ ತು ತಥಾ ಪಾರ್ಥಂ ಸರ್ವಸೈನ್ಯಾನಿ ಮಾರಿಷ|

06019015e ಅಪೂಜಯಂಸ್ತದಾ ವಾಗ್ಭಿರನುಕೂಲಾಭಿರಾಹವೇ||

ಮಾರಿಷ! ಹಾಗೆ ಹೇಳಿದ ಪಾರ್ಥನನ್ನು ಸರ್ವಸೇನೆಗಳೂ ಅನುಕೂಲಕರ ಮಾತುಗಳಿಂದ ರಣರಂಗದಲ್ಲಿ ಗೌರವಿಸಿದರು.

06019016a ಏವಮುಕ್ತ್ವಾ ಮಹಾಬಾಹುಸ್ತಥಾ ಚಕ್ರೇ ಧನಂಜಯಃ|

06019016c ವ್ಯೂಹ್ಯ ತಾನಿ ಬಲಾನ್ಯಾಶು ಪ್ರಯಯೌ ಫಲ್ಗುನಸ್ತದಾ||

ಹೀಗೆ ಹೇಳಿದ ಹಾಗೆಯೇ ಮಹಾಬಾಹು ಧನಂಜಯನು ಮಾಡಿದನು. ಆ ಸೇನೆಗಳನ್ನು ವ್ಯೂಹದಲ್ಲಿ ರಚಿಸಿ ಫಲ್ಗುನನು ಮುಂದುವರೆದನು.

06019017a ಸಂಪ್ರಯಾತಾನ್ಕುರೂನ್ದೃಷ್ಟ್ವಾ ಪಾಂಡವಾನಾಂ ಮಹಾಚಮೂಃ|

06019017c ಗಂಗೇವ ಪೂರ್ಣಾ ಸ್ತಿಮಿತಾ ಸ್ಯಂದಮಾನಾ ವ್ಯದೃಶ್ಯತ||

ಕುರುಗಳ ಸೇನೆಯನ್ನು ಗುರಿಯನ್ನಾಗಿಟ್ಟುಕೊಂಡು ಹೋಗುತ್ತಿದ್ದ ಪಾಂಡವರ ಮಹಾಸೇನೆಯು ನೆರೆಬಂದ ಗಂಗೆಯು ಹರಿದು ಬರುತ್ತಿರುವಂತೆ ಕಂಡಿತು.

06019018a ಭೀಮಸೇನೋಽಗ್ರಣೀಸ್ತೇಷಾಂ ಧೃಷ್ಟದ್ಯುಮ್ನಶ್ಚ ಪಾರ್ಷತಃ|

06019018c ನಕುಲಃ ಸಹದೇವಶ್ಚ ಧೃಷ್ಟಕೇತುಶ್ಚ ವೀರ್ಯವಾನ್||

ಅವರ ಅಗ್ರಣಿಗಳಾಗಿ ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ನಕುಲ, ಸಹದೇವರು ಮತ್ತು ವೀರ್ಯವಾನ್ ಧೃಷ್ಟಕೇತು ಇದ್ದರು.

06019019a ಸಮುದ್ಯೋಜ್ಯ ತತಃ ಪಶ್ಚಾದ್ರಾಜಾಪ್ಯಕ್ಷೌಹಿಣೀವೃತಃ|

06019019c ಭ್ರಾತೃಭಿಃ ಸಹ ಪುತ್ರೈಶ್ಚ ಸೋಽಭ್ಯರಕ್ಷತ ಪೃಷ್ಠತಃ||

ಅವರ ನಂತರ ಅವರನ್ನು ಹಿಂದಿನಿಂದ ರಕ್ಷಿಸುತ್ತ, ಒಂದು ಅಕ್ಷೌಹಿಣೀ ಸೇನೆಯೊಂದಿಗೆ, ಸಹೋದರರು ಮತ್ತು ಮಕ್ಕಳನ್ನು ಕೂಡಿಕೊಂಡು ರಾಜ ವಿರಾಟನು ಹೊರಟನು.

06019020a ಚಕ್ರರಕ್ಷೌ ತು ಭೀಮಸ್ಯ ಮಾದ್ರೀಪುತ್ರೌ ಮಹಾದ್ಯುತೀ|

06019020c ದ್ರೌಪದೇಯಾಃ ಸಸೌಭದ್ರಾಃ ಪೃಷ್ಠಗೋಪಾಸ್ತರಸ್ವಿನಃ||

ಮಹಾದ್ಯುತೀ ಭೀಮನ ಚಕ್ರಗಳನ್ನು ಮಾದ್ರೀಪುತ್ರರು ರಕ್ಷಿಸುತ್ತಿದ್ದರು. ಸೌಭದ್ರಿಯೊಂದಿಗೆ ದ್ರೌಪದೇಯರು ಆ ತರಸ್ವಿನಿಯನ್ನು ಹಿಂದಿನಿಂದ ರಕ್ಷಿಸುತ್ತಿದ್ದರು.

06019021a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಸ್ತೇಷಾಂ ಗೋಪ್ತಾ ಮಹಾರಥಃ|

06019021c ಸಹಿತಃ ಪೃತನಾಶೂರೈ ರಥಮುಖ್ಯೈಃ ಪ್ರಭದ್ರಕೈಃ||

ಅವರನ್ನು ಮಹಾರಥಿ ಪಾಂಚಾಲ ಧೃಷ್ಟದ್ಯುಮ್ನನು ಪ್ರಭದ್ರಕ ರಥಮುಖ್ಯರ, ಶೂರರ ಸೇನೆಯೊಂದಿಗೆ ರಕ್ಷಿಸಿದನು.

06019022a ಶಿಖಂಡೀ ತು ತತಃ ಪಶ್ಚಾದರ್ಜುನೇನಾಭಿರಕ್ಷಿತಃ|

06019022c ಯತ್ತೋ ಭೀಷ್ಮವಿನಾಶಾಯ ಪ್ರಯಯೌ ಭರತರ್ಷಭ||

ಭರತರ್ಷಭ! ಅವರ ನಂತರ ಅರ್ಜುನನಿಂದ ರಕ್ಷಿತನಾಗಿ ಶಿಖಂಡಿಯು ಭೀಷ್ಮನ ವಿನಾಶಕ್ಕೆ ಮುಂದುವರೆದನು.

06019023a ಪೃಷ್ಠಗೋಪೋಽರ್ಜುನಸ್ಯಾಪಿ ಯುಯುಧಾನೋ ಮಹಾರಥಃ|

06019023c ಚಕ್ರರಕ್ಷೌ ತು ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ||

ಅರ್ಜುನನ ಹಿಂದೆ ಮಹಾರಥಿ ಯುಯುಧಾನನಿದ್ದನು. ಅರ್ಜುನನ ರಥಚಕ್ರಗಳನ್ನು ಪಾಂಚಾಲ ಯುಧಾಮನ್ಯು-ಉತ್ತಮೌಜಸರು ರಕ್ಷಿಸುತ್ತಿದ್ದರು.

06019024a ರಾಜಾ ತು ಮಧ್ಯಮಾನೀಕೇ ಕುಂತೀಪುತ್ರೋ ಯುಧಿಷ್ಠಿರಃ|

06019024c ಬೃಹದ್ಭಿಃ ಕುಂಜರೈರ್ಮತ್ತೈಶ್ಚಲದ್ಭಿರಚಲೈರಿವ||

ಸೇನೆಯ ಮಧ್ಯೆ ಕುಂತೀಪುತ್ರ ರಾಜಾ ಯುಧಿಷ್ಠಿರನು ಅಚಲ ಪರ್ವತಗಳು ಚಲಿಸುತ್ತಿರುವವೋ ಎಂಬಂತಿದ್ದ ಅನೇಕ ಮದಿಸಿದ ಆನೆಗೊಳಡನಿದ್ದನು.

06019025a ಅಕ್ಷೌಹಿಣ್ಯಾ ಚ ಪಾಂಚಾಲ್ಯೋ ಯಜ್ಞಸೇನೋ ಮಹಾಮನಾಃ|

06019025c ವಿರಾಟಮನ್ವಯಾತ್ಪಶ್ಚಾತ್ಪಾಂಡವಾರ್ಥೇ ಪರಾಕ್ರಮೀ||

ಮಹಾಮನಸ್ವಿ ಪರಾಕ್ರಮೀ ಪಾಂಚಾಲ್ಯ ಯಜ್ಞಸೇನನು ಪಾಂಡವನಿಗಾಗಿ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ವಿರಾಟನನ್ನು ಅನುಸರಿಸಿ ಹೋಗುತ್ತಿದ್ದನು.

06019026a ತೇಷಾಮಾದಿತ್ಯಚಂದ್ರಾಭಾಃ ಕನಕೋತ್ತಮಭೂಷಣಾಃ|

06019026c ನಾನಾಚಿಹ್ನಧರಾ ರಾಜನ್ರಥೇಷ್ವಾಸನ್ಮಹಾಧ್ವಜಾಃ||

ರಾಜನ್! ಆ ರಾಜರ ರಥಗಳ ಮೇಲೆ ನಾನಾ ಚಿಹ್ನೆಗಳನ್ನು ಧರಿಸಿದ, ಉತ್ತಮ ಕನಕ ಭೂಷಣಗಳ ಮತ್ತು ಆದಿತ್ಯ-ಚಂದ್ರರ ಕಾಂತಿಯುಳ್ಳ ಮಹಾಧ್ವಜಗಳಿದ್ದವು.

06019027a ಸಮುತ್ಸರ್ಪ್ಯ ತತಃ ಪಶ್ಚಾದ್ಧೃಷ್ಟದ್ಯುಮ್ನೋ ಮಹಾರಥಃ|

06019027c ಭ್ರಾತೃಭಿಃ ಸಹ ಪುತ್ರೈಶ್ಚ ಸೋಽಭ್ಯರಕ್ಷದ್ಯುಧಿಷ್ಠಿರಂ||

ಅವರು ಮುಂದುವರೆದ ನಂತರ ಮಹಾರಥಿ ಧೃಷ್ಟದ್ಯುಮ್ನನು ಸಹೋದರರು ಮತ್ತು ಪುತ್ರರೊಡಗೂಡಿ ಯುಧಿಷ್ಠಿರನನ್ನು ಹಿಂದಿನಿಂದ ರಕ್ಷಿಸಿದನು.

06019028a ತ್ವದೀಯಾನಾಂ ಪರೇಷಾಂ ಚ ರಥೇಷು ವಿವಿಧಾನ್ಧ್ವಜಾನ್|

06019028c ಅಭಿಭೂಯಾರ್ಜುನಸ್ಯೈಕೋ ಧ್ವಜಸ್ತಸ್ಥೌ ಮಹಾಕಪಿಃ||

ನಿನ್ನ ಮತ್ತು ಅವರ ರಥಗಳಲ್ಲಿರುವ ವಿವಿಧ ಧ್ವಜಗಳಲ್ಲಿ ಅರ್ಜುನನೊಬ್ಬನದೇ ಧ್ವಜದಲ್ಲಿದ್ದ ಮಹಾಕಪಿಯು ಎದ್ದು ಕಾಣಿಸುತ್ತಿದ್ದನು.

06019029a ಪಾದಾತಾಸ್ತ್ವಗ್ರತೋಽಗಚ್ಛನ್ನಸಿಶಕ್ತ್ಯೃಷ್ಟಿಪಾಣಯಃ|

06019029c ಅನೇಕಶತಸಾಹಸ್ರಾ ಭೀಮಸೇನಸ್ಯ ರಕ್ಷಿಣಃ||

ಭೀಮಸೇನನ ರಕ್ಷಣೆಗೆಂದು ಖಡ್ಗ-ಶಕ್ತಿ-ಋಷ್ಟಿಪಾಣಿಗಳಾದ ಅನೇಕ ಶತಸಹಸ್ರ ಪದಾತಿಗಳು ಮುಂದೆ ಹೋಗುತ್ತಿದ್ದರು.

06019030a ವಾರಣಾ ದಶಸಾಹಸ್ರಾಃ ಪ್ರಭಿನ್ನಕರಟಾಮುಖಾಃ|

06019030c ಶೂರಾ ಹೇಮಮಯೈರ್ಜಾಲೈರ್ದೀಪ್ಯಮಾನಾ ಇವಾಚಲಾಃ||

06019031a ಕ್ಷರಂತ ಇವ ಜೀಮೂತಾ ಮದಾರ್ದ್ರಾಃ ಪದ್ಮಗಂಧಿನಃ|

06019031c ರಾಜಾನಮನ್ವಯುಃ ಪಶ್ಚಾಚ್ಚಲಂತ ಇವ ಪರ್ವತಾಃ||

ಮದದ ನೀರು ಸುರಿಯುತ್ತಿರುವ, ಶೂರ, ಹೇಮಮಯಜಾಲಗಳಿಂದ ಬೆಳಗುತ್ತಿರುವ ಪರ್ವತಗಳಂತಿದ್ದ, ಮಳೆಸುರಿಸುವ ಮೋಡಗಳಂತಿದ್ದ, ಕಮಲಗಳ ಸುಗಂಧವನ್ನು ಸೂಸುತ್ತಿದ್ದ, ಚಲಿಸುತ್ತಿರುವ ಪರ್ವತಗಳಂತಿದ್ದ ಹತ್ತು ಸಾವಿರ ಆನೆಗಳು ರಾಜನನ್ನು ಹಿಂಬಾಲಿಸಿದವು.

06019032a ಭೀಮಸೇನೋ ಗದಾಂ ಭೀಮಾಂ ಪ್ರಕರ್ಷನ್ಪರಿಘೋಪಮಾಂ|

06019032c ಪ್ರಚಕರ್ಷ ಮಹತ್ಸೈನ್ಯಂ ದುರಾಧರ್ಷೋ ಮಹಾಮನಾಃ||

ಪರಿಘದಂತಿದ್ದ ಉಗ್ರ ಗದೆಯನ್ನು ಬೀಸುತ್ತ ದುರಾಧರ್ಷ ಮಹಾಮನಸ್ವಿ ಭೀಮಸೇನನು ಮಹಾ ಸೇನೆಯನ್ನು ಪುಡಿಮಾಡುವಂತಿದ್ದನು.

06019033a ತಮರ್ಕಮಿವ ದುಷ್ಪ್ರೇಕ್ಷ್ಯಂ ತಪಂತಂ ರಶ್ಮಿಮಾಲಿನಂ|

06019033c ನ ಶೇಕುಃ ಸರ್ವತೋ ಯೋಧಾಃ ಪ್ರತಿವೀಕ್ಷಿತುಮಂತಿಕೇ||

ಕಿರಣಮಾಲಿನಿ ಸುಡುತ್ತಿರುವ ಸೂರ್ಯನನ್ನು ನೋಡುವುದು ಹೇಗೆ ಕಷ್ಟವೋ ಹಾಗೆ ಸರ್ವ ಯೋಧರೂ ಅವನನ್ನು ನೇರವಾಗಿ ನೋಡಲು ಅಶಕ್ಯರಾದರು.

06019034a ವಜ್ರೋ ನಾಮೈಷ ತು ವ್ಯೂಹೋ ದುರ್ಭಿದಃ ಸರ್ವತೋಮುಖಃ|

06019034c ಚಾಪವಿದ್ಯುದ್ಧ್ವಜೋ ಘೋರೋ ಗುಪ್ತೋ ಗಾಂಡೀವಧನ್ವನಾ||

ಸರ್ವತೋಮುಖವಾದ, ಭೇದಿಸಲು ಕಷ್ಟವಾದ, ಚಾಪವಿದ್ಯುಧ್ವಜದ ವಜ್ರವೆಂಬ ಹೆಸರಿನ ಈ ವ್ಯೂಹವನ್ನು ಘೋರ ಗಾಂಡೀವಧನ್ವಿಯು ರಕ್ಷಿಸುತ್ತಿದ್ದನು.

06019035a ಯಂ ಪ್ರತಿವ್ಯೂಹ್ಯ ತಿಷ್ಠಂತಿ ಪಾಂಡವಾಸ್ತವ ವಾಹಿನೀಂ|

06019035c ಅಜೇಯೋ ಮಾನುಷೇ ಲೋಕೇ ಪಾಂಡವೈರಭಿರಕ್ಷಿತಃ||

ಹೀಗೆ ನಿನ್ನ ಸೇನೆಗೆ ಪ್ರತಿವ್ಯೂಹವನ್ನು ರಚಿಸಿ ಪಾಂಡವರು ಕಾಯುತ್ತಿದ್ದರು. ಪಾಂಡವರಿಂದ ರಕ್ಷಿತವಾದ ಆ ಸೇನೆಯು ಮನುಷ್ಯ ಲೋಕದಲ್ಲಿ ಅಜೇಯವಾಗಿದ್ದಿತು.

06019036a ಸಂಧ್ಯಾಂ ತಿಷ್ಠತ್ಸು ಸೈನ್ಯೇಷು ಸೂರ್ಯಸ್ಯೋದಯನಂ ಪ್ರತಿ|

06019036c ಪ್ರಾವಾತ್ಸಪೃಷತೋ ವಾಯುರನಭ್ರೇ ಸ್ತನಯಿತ್ನುಮಾನ್||

ಸೇನೆಗಳು ಸಂಧ್ಯೆಯಲ್ಲಿ ಸೂರ್ಯೋದಯವನ್ನು ಕಾಯುತ್ತಿರಲು ಮೋಡಗಳಿಲ್ಲದ ಆಕಾಶದಿಂದ ತುಂತುರು ಹನಿಗಳು ಬಿದ್ದವು ಮತ್ತು ಗುಡುಗಿನ ಶಬ್ಧವು ಕೇಳಿಬಂದಿತು.

06019037a ವಿಷ್ವಗ್ವಾತಾಶ್ಚ ವಾಂತ್ಯುಗ್ರಾ ನೀಚೈಃ ಶರ್ಕರಕರ್ಷಿಣಃ|

06019037c ರಜಶ್ಚೋದ್ಧೂಯಮಾನಂ ತು ತಮಸಾಚ್ಚಾದಯಜ್ಜಗತ್||

ಎಲ್ಲ ಕಡೆಯಿಂದಲೂ ಒಣ ಹವೆಯು ಬೀಸತೊಡಗಿತು. ಅದು ನೆಲದಿಂದ ಮೊನಚಾದ ಕಲ್ಲಿನ ಹರಳುಗಳನ್ನು ಮೇಲೆಬ್ಬಿಸಿ ಹರಡಿತು. ಮತ್ತು ದಟ್ಟವಾದ ಧೂಳು ಮೇಲೆದ್ದು ಕತ್ತಲೆ ಆವರಿಸಿತು.

06019038a ಪಪಾತ ಮಹತೀ ಚೋಲ್ಕಾ ಪ್ರಾಙ್ಮುಖೀ ಭರತರ್ಷಭ|

06019038c ಉದ್ಯಂತಂ ಸೂರ್ಯಮಾಹತ್ಯ ವ್ಯಶೀರ್ಯತ ಮಹಾಸ್ವನಾ||

ಭರತರ್ಷಭ! ಪೂರ್ವದಲ್ಲಿ ಮಹಾ ಉಲ್ಕೆಗಳು ಬಿದ್ದವು ಮತ್ತು ಉದಯಿಸುತ್ತಿರುವ ಸೂರ್ಯನನ್ನು ಹೊಡೆದು ಮಹಾ ಶಬ್ಧದೊಂದಿಗೆ ಒಡೆದು ಚೂರಾಗುತ್ತಿದ್ದವು.

06019039a ಅಥ ಸಜ್ಜೀಯಮಾನೇಷು ಸೈನ್ಯೇಷು ಭರತರ್ಷಭ|

06019039c ನಿಷ್ಪ್ರಭೋಽಭ್ಯುದಿಯಾತ್ಸೂರ್ಯಃ ಸಘೋಷೋ ಭೂಶ್ಚಚಾಲ ಹ|

06019039e ವ್ಯಶೀರ್ಯತ ಸನಾದಾ ಚ ತದಾ ಭರತಸತ್ತಮ||

ಭರತರ್ಷಭ! ಭರತಸತ್ತಮ! ಸೇನೆಗಳು ಈ ರೀತಿ ಸಜ್ಜಾಗಿರುವಾಗ ಕಾಂತಿಯನ್ನು ಕಳೆದುಕೊಂಡ ಸೂರ್ಯನು ಉದಯಿಸಿದನು. ಶಬ್ಧದೊಂದಿಗೆ ಭೂಮಿಯು ನಡುಗಿತು, ಮತ್ತು ಶಬ್ಧದೊಂದಿಗೆ ಬಿರಿಯಿತು.

06019040a ನಿರ್ಘಾತಾ ಬಹವೋ ರಾಜನ್ದಿಕ್ಷು ಸರ್ವಾಸು ಚಾಭವನ್|

06019040c ಪ್ರಾದುರಾಸೀದ್ರಜಸ್ತೀವ್ರಂ ನ ಪ್ರಾಜ್ಞಾಯತ ಕಿಂ ಚನ||

ರಾಜನ್! ಆಗ ಬಹಳಷ್ಟು ಗುಡುಗಿನ ಶಬ್ಧವು ಎಲ್ಲ ಕಡೆಗಳಿಂದ ಕೇಳಿ ಬಂದಿತು. ಧೂಳು ಎಷ್ಟು ದಟ್ಟವಾಗಿತ್ತೆಂದರೆ ಏನೂ ಕೂಡ ಕಾಣುತ್ತಿರಲಿಲ್ಲ.

06019041a ಧ್ವಜಾನಾಂ ಧೂಯಮಾನಾನಾಂ ಸಹಸಾ ಮಾತರಿಶ್ವನಾ|

06019041c ಕಿಂಕಿಣೀಜಾಲನದ್ಧಾನಾಂ ಕಾಂಚನಸ್ರಗ್ವತಾಂ ರವೈಃ||

06019042a ಮಹತಾಂ ಸಪತಾಕಾನಾಮಾದಿತ್ಯಸಮತೇಜಸಾಂ|

06019042c ಸರ್ವಂ ಝಣಝಣೀಭೂತಮಾಸೀತ್ತಾಲವನೇಷ್ವಿವ||

ಕಿಂಕಿಣೀಜಾಲಗಳಿಂದ ಕಟ್ಟಲ್ಪಟ್ಟ, ಕಾಂಚನ ಮಾಲೆಗಳಿಂದ ಅಲಂಕರಿಸಲ್ಪಟ್ಟ, ಆದಿತ್ಯ ಸಮ ತೇಜಸ್ಸುಳ್ಳ ಆ ಎತ್ತರ ಧ್ವಜಗಳು ಗಾಳಿಯ ವೇಗಕ್ಕೆ ಅಲುಗಾಡಿ ತಾಲವೃಕ್ಷದ ಅಡವಿಯಂತೆ ಎಲ್ಲವೂ ಝಣಝಣಿಸಿದವು.

06019043a ಏವಂ ತೇ ಪುರುಷವ್ಯಾಘ್ರಾಃ ಪಾಂಡವಾ ಯುದ್ಧನಂದಿನಃ|

06019043c ವ್ಯವಸ್ಥಿತಾಃ ಪ್ರತಿವ್ಯೂಹ್ಯ ತವ ಪುತ್ರಸ್ಯ ವಾಹಿನೀಂ||

ಹೀಗೆ ಆ ಯುದ್ಧನಂದಿನ ಪುರುಷವ್ಯಾಘ್ರ ಪಾಂಡವರು ನಿನ್ನ ಪುತ್ರನ ವಾಹಿನಿಗೆ ಪ್ರಹಿವ್ಯೂಹವನ್ನು ರಚಿಸಿ ವ್ಯವಸ್ಥಿತರಾದರು.

06019044a ಸ್ರಂಸಂತ ಇವ ಮಜ್ಜಾನೋ ಯೋಧಾನಾಂ ಭರತರ್ಷಭ|

06019044c ದೃಷ್ಟ್ವಾಗ್ರತೋ ಭೀಮಸೇನಂ ಗದಾಪಾಣಿಮವಸ್ಥಿತಂ||

ಭರತರ್ಷಭ! ಗದಾಪಾಣಿಯಾಗಿ ಮುಂದೆ ನಿಂತಿದ್ದ ಭೀಮಸೇನನು ಯೋಧರ ಮಜ್ಜೆಗಳನ್ನೇ ಹೀರಿಕೊಳ್ಳುತ್ತಾನೋ ಎಂದು ತೋರುತ್ತಿದ್ದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಪಾಂಡವಸೈನ್ಯವ್ಯೂಹೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಪಾಂಡವಸೈನ್ಯವ್ಯೂಹವೆಂಬ ಹತ್ತೊಂಭತ್ತನೇ ಅಧ್ಯಾಯವು.

Image result for flowers against white background

Comments are closed.