Bhishma Parva: Chapter 16

ಭೀಷ್ಮ ಪರ್ವ: ಭಗವದ್ಗೀತಾ ಪರ್ವ

೧೬

ಸಂಜಯನು ಯುದ್ಧದ ವರ್ಣನೆಯನ್ನು ಪ್ರಾರಂಭಿಸಿದುದು (೧-೧೦). ದುರ್ಯೋಧನನು ಸರ್ವಪ್ರಯತ್ನದಿಂದ ಭೀಷ್ಮನನ್ನು ರಕ್ಷಿಸಲು ಮತ್ತು ಶಿಖಂಡಿಯನ್ನು ವಧಿಸಲು ದುಃಶಾಸನನಿಗೆ ಹೇಳಿದುದು (೧೧-೨೦). ಸೈನ್ಯವರ್ಣನೆ (೨೧-೪೬).

06016001 ಸಂಜಯ ಉವಾಚ|

06016001a ತ್ವದ್ಯುಕ್ತೋಽಯಮನುಪ್ರಶ್ನೋ ಮಹಾರಾಜ ಯಥಾರ್ಹಸಿ|

06016001c ನ ತು ದುರ್ಯೋಧನೇ ದೋಷಮಿಮಮಾಸಕ್ತುಮರ್ಹಸಿ||

ಸಂಜಯನು ಹೇಳಿದನು: “ಮಹಾರಾಜ! ಅರ್ಹನಾಗಿರುವ ನೀನು ಕೇಳುತ್ತಿರುವ ಈ ಪ್ರಶ್ನೆಗಳು ನಿನಗೆ ತಕ್ಕುದಾಗಿಯೇ ಇವೆ. ಆದರೆ ಈ ದೋಷವನ್ನು ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ.

06016002a ಯ ಆತ್ಮನೋ ದುಶ್ಚರಿತಾದಶುಭಂ ಪ್ರಾಪ್ನುಯಾನ್ನರ|

06016002c ಏನಸಾ ತೇನ ನಾನ್ಯಂ ಸ ಉಪಾಶಂಕಿತುಮರ್ಹತಿ||

ತನ್ನ ದುಶ್ಚರಿತಗಳಿಂದಾಗಿ ಅಶುಭವನ್ನು ಪಡೆದ ನರನು ಅದು ಅನ್ಯನು ಮಾಡಿದ್ದು ಎಂದು ಹೊರಿಸಬಾರದು.

06016003a ಮಹಾರಾಜ ಮನುಷ್ಯೇಷು ನಿಂದ್ಯಂ ಯಃ ಸರ್ವಮಾಚರೇತ್|

06016003c ಸ ವಧ್ಯಃ ಸರ್ವಲೋಕಸ್ಯ ನಿಂದಿತಾನಿ ಸಮಾಚರನ್||

ಮಹಾರಾಜ! ಇತರರಿಗೆ ಯಾರು ಎಲ್ಲ ರೀತಿಯಲ್ಲಿ ನಿಂದನೀಯವಾಗಿ ನಡೆದುಕೊಳ್ಳುತ್ತಾನೋ ಅದನ್ನು ಮಾಡಿದವನು ಸರ್ವಲೋಕಗಳ ನಿಂದನೆಗೆ ಮತ್ತು ವಧೆಗೆ ಅರ್ಹ.

06016004a ನಿಕಾರೋ ನಿಕೃತಿಪ್ರಜ್ಞೈಃ ಪಾಂಡವೈಸ್ತ್ವತ್ಪ್ರತೀಕ್ಷಯಾ|

06016004c ಅನುಭೂತಃ ಸಹಾಮಾತ್ಯೈಃ ಕ್ಷಾಂತಂ ಚ ಸುಚಿರಂ ವನೇ||

ಮೋಸಗಳನ್ನು ಅರಿಯದೇ ಇದ್ದ ಪಾಂಡವರು ನಿನ್ನನ್ನು ನೋಡಿಕೊಂಡು ಅಮಾತ್ಯರೊಂದಿಗೆ ಕ್ಷಾಂತರಾಗಿ ಬಹುಕಾಲ ವನದಲ್ಲಿ ಅನುಭವಿಸಿದರು.

06016005a ಹಯಾನಾಂ ಚ ಗಜಾನಾಂ ಚ ಶೂರಾಣಾಂ ಚಾಮಿತೌಜಸಾಂ|

06016005c ಪ್ರತ್ಯಕ್ಷಂ ಯನ್ಮಯಾ ದೃಷ್ಟಂ ದೃಷ್ಟಂ ಯೋಗಬಲೇನ ಚ||

06016006a ಶೃಣು ತತ್ಪೃಥಿವೀಪಾಲ ಮಾ ಚ ಶೋಕೇ ಮನಃ ಕೃಥಾಃ|

06016006c ದಿಷ್ಟಮೇತತ್ಪುರಾ ನೂನಮೇವಂಭಾವಿ ನರಾಧಿಪ||

ಮಹೀಪಾಲ! ಯೋಗಬಲದಿಂದ ನಾನು ಪ್ರತ್ಯಕ್ಷವಾಗಿ ಕಂಡ ಕುದುರೆಗಳ, ಆನೆಗಳ, ಅಮಿತೌಜಸ ಶೂರರ ದೃಶ್ಯಗಳನ್ನು ನೋಡಿರುವುದನ್ನು ಕೇಳು. ಮನಸ್ಸನ್ನು ಶೋಕಕ್ಕೊಳಪಡಿಸಬೇಡ. ನರಾಧಿಪ! ಇದು ಹೀಗೆಯೇ ಆಗುತ್ತದೆಯೆಂದು ಹಿಂದೆಯೇ ದೈವ ನಿರ್ಧಿತವಾಗಿತ್ತು.

06016007a ನಮಸ್ಕೃತ್ವಾ ಪಿತುಸ್ತೇಽಹಂ ಪಾರಾಶರ್ಯಾಯ ಧೀಮತೇ|

06016007c ಯಸ್ಯ ಪ್ರಸಾದಾದ್ದಿವ್ಯಂ ಮೇ ಪ್ರಾಪ್ತಂ ಜ್ಞಾನಮನುತ್ತಮಂ||

ಯಾರ ಪ್ರಸಾದದಿಂದ ನನಗೆ ಈ ದಿವ್ಯವಾದ ಅನುತ್ತಮ ಜ್ಞಾನವು ಪ್ರಾಪ್ತವಾಯಿತೋ ಆ ನಿನ್ನ ತಂದೆ ಧೀಮತ ಪಾರಶರ್ಯನಿಗೆ ನಮಸ್ಕರಿಸುತ್ತೇನೆ.

06016008a ದೃಷ್ಟಿಶ್ಚಾತೀಂದ್ರಿಯಾ ರಾಜನ್ದೂರಾಚ್ಚ್ರವಣಮೇವ ಚ|

06016008c ಪರಚಿತ್ತಸ್ಯ ವಿಜ್ಞಾನಮತೀತಾನಾಗತಸ್ಯ ಚ||

06016009a ವ್ಯುತ್ಥಿತೋತ್ಪತ್ತಿವಿಜ್ಞಾನಮಾಕಾಶೇ ಚ ಗತಿಃ ಸದಾ|

06016009c ಶಸ್ತ್ರೈರಸಂಗೋ ಯುದ್ಧೇಷು ವರದಾನಾನ್ಮಹಾತ್ಮನಃ||

ರಾಜನ್! ಅತೀಂದ್ರಿಯ ದೃಷ್ಟಿ, ದೂರದ್ದನ್ನೂ ಕೇಳುವ, ಇನ್ನೊಬ್ಬರ ಚಿತ್ತವನ್ನು ಅತೀತವನ್ನೂ ಅನಾಗತವನ್ನೂ ತಿಳಿಯುವ ವಿಶೇಷ ಜ್ಞಾನ, ಸದಾ ಆಕಾಶದಲ್ಲಿಯೂ ಸಂಚರಿಸಬಲ್ಲ, ಯುದ್ಧದಲ್ಲಿ ಶಸ್ತ್ರಗಳು ತಾಗದ ವರದಾನವನ್ನು ನಾನು ಆ ಮಹಾತ್ಮನಿಂದ ಪಡೆದೆ.

06016010a ಶೃಣು ಮೇ ವಿಸ್ತರೇಣೇದಂ ವಿಚಿತ್ರಂ ಪರಮಾದ್ಭುತಂ|

06016010c ಭಾರತಾನಾಂ ಮಹದ್ಯುದ್ಧಂ ಯಥಾಭೂಲ್ಲೋಮಹರ್ಷಣ||

ವಿಚಿತ್ರವಾದ, ಪರಮಾದ್ಭುತವಾದ, ಲೋಮಹರ್ಷಣವಾದ ಈ ಭಾರತರ ಮಹಾಯುದ್ಧವನ್ನು ನಡೆದ ಹಾಗೆ ನನ್ನಿಂದ ಕೇಳು.

06016011a ತೇಷ್ವನೀಕೇಷು ಯತ್ತೇಷು ವ್ಯೂಢೇಷು ಚ ವಿಧಾನತಃ|

06016011c ದುರ್ಯೋಧನೋ ಮಹಾರಾಜ ದುಃಶಾಸನಮಥಾಬ್ರವೀತ್||

ಮಹಾರಾಜ! ಆ ಸೇನೆಗಳನ್ನು ವಿಧಾನತಃ ವ್ಯೂಹಗಳಲ್ಲಿ ರಚಿಸುವಾಗ ದುರ್ಯೋಧನನು ದುಃಶಾಸನನಿಗೆ ಹೀಗೆ ಹೇಳಿದನು:

06016012a ದುಃಶಾಸನ ರಥಾಸ್ತೂರ್ಣಂ ಯುಜ್ಯಂತಾಂ ಭೀಷ್ಮರಕ್ಷಿಣಃ|

06016012c ಅನೀಕಾನಿ ಚ ಸರ್ವಾಣಿ ಶೀಘ್ರಂ ತ್ವಮನುಚೋದಯ||

“ದುಃಶಾಸನ! ಈ ರಥಗಳನ್ನು ತಕ್ಷಣವೇ ಭೀಷ್ಮನ ರಕ್ಷಣೆಗೆ ಬಳಸು. ಎಲ್ಲ ಸೇನೆಗಳನ್ನೂ ಶೀಘ್ರವಾಗಿ ಪ್ರಚೋದಿಸು.

06016013a ಅಯಂ ಮಾ ಸಮನುಪ್ರಾಪ್ತೋ ವರ್ಷಪೂಗಾಭಿಚಿಂತಿತಃ|

06016013c ಪಾಂಡವಾನಾಂ ಸಸೈನ್ಯಾನಾಂ ಕುರೂಣಾಂ ಚ ಸಮಾಗಮಃ||

ಬಹಳ ವರ್ಷಗಳಿಂದ ಬಯಸುತ್ತಿರುವ, ಸೇನೆಗಳೊಂದಿಗೆ ಪಾಂಡವರ ಮತ್ತು  ಕೌರವರ ಸಮಾಗಮದ ಆ ಅವಕಾಶವು ಈಗ ಬಂದೊದಗಿದೆ.

06016014a ನಾತಃ ಕಾರ್ಯತಮಂ ಮನ್ಯೇ ರಣೇ ಭೀಷ್ಮಸ್ಯ ರಕ್ಷಣಾತ್|

06016014c ಹನ್ಯಾದ್ಗುಪ್ತೋ ಹ್ಯಸೌ ಪಾರ್ಥಾನ್ಸೋಮಕಾಂಶ್ಚ ಸಸೃಂಜಯಾನ್||

ಭೀಷ್ಮನ ರಕ್ಷಣೆಯನ್ನು ಬಿಟ್ಟು ಬೇರೆ ಯಾವ ಕೆಲಸವೂ ಮುಖ್ಯವಾದುದಲ್ಲವೆಂದು ತಿಳಿದಿದ್ದೇನೆ. ಏಕೆಂದರೆ ಉಳಿಸಿಕೊಂಡರೆ ಇವನು ಸೋಮಕ-ಸೃಂಜಯರೊಂದಿಗೆ ಪಾರ್ಥರನ್ನು ಸಂಹರಿಸುತ್ತಾನೆ.

06016015a ಅಬ್ರವೀಚ್ಚ ವಿಶುದ್ಧಾತ್ಮಾ ನಾಹಂ ಹನ್ಯಾಂ ಶಿಖಂಡಿನಂ|

06016015c ಶ್ರೂಯತೇ ಸ್ತ್ರೀ ಹ್ಯಸೌ ಪೂರ್ವಂ ತಸ್ಮಾದ್ವರ್ಜ್ಯೋ ರಣೇ ಮಮ||

“ನಾನು ಶಿಖಂಡಿಯನ್ನು ಸಂಹರಿಸುವುದಿಲ್ಲ. ಅವನು ಹಿಂದೆ ಸ್ತ್ರೀಯಾಗಿದ್ದನೆಂದು ಹೇಳುತ್ತಾರೆ. ಆದುದರಿಂದ ರಣದಲ್ಲಿ ನಾನು ಅವನನ್ನು ವರ್ಜಿಸುತ್ತೇನೆ” ಎಂದು ಆ ವಿಶುದ್ಧಾತ್ಮನು ಹೇಳಿದ್ದನು.

06016016a ತಸ್ಮಾದ್ಭೀಷ್ಮೋ ರಕ್ಷಿತವ್ಯೋ ವಿಶೇಷೇಣೇತಿ ಮೇ ಮತಿಃ|

06016016c ಶಿಖಂಡಿನೋ ವಧೇ ಯತ್ತಾಃ ಸರ್ವೇ ತಿಷ್ಠಂತು ಮಾಮಕಾಃ||

ಆದುದರಿಂದ ವಿಶೇಷವಾಗಿ ಭೀಷ್ಮನನ್ನು ರಕ್ಷಿಸಬೇಕೆಂದು ನನ್ನ ವಿಚಾರ. ನನ್ನವರೆಲ್ಲರೂ ಶಿಖಂಡಿಯ ವಧೆಗೆ ನಿಲ್ಲಲಿ.

06016017a ತಥಾ ಪ್ರಾಚ್ಯಾಃ ಪ್ರತೀಚ್ಯಾಶ್ಚ ದಾಕ್ಷಿಣಾತ್ಯೋತ್ತರಾಪಥಾಃ|

06016017c ಸರ್ವಶಸ್ತ್ರಾಸ್ತ್ರಕುಶಲಾಸ್ತೇ ರಕ್ಷಂತು ಪಿತಾಮಹಂ||

ಹಾಗೆಯೇ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳಿಂದ ಬಂದ ಸರ್ವ ಶಸ್ತ್ರಾಸ್ತ್ರಕುಶಲರೂ ಪಿತಾಮಹನನ್ನು ರಕ್ಷಿಸಲಿ.

06016018a ಅರಕ್ಷ್ಯಮಾಣಂ ಹಿ ವೃಕೋ ಹನ್ಯಾತ್ಸಿಂಹಂ ಮಹಾಬಲಂ|

06016018c ಮಾ ಸಿಂಹಂ ಜಂಬುಕೇನೇವ ಘಾತಯಾಮಃ ಶಿಖಂಡಿನಾ||

ಸಿಂಹವು ಮಹಾಬಲಶಾಲಿಯಾಗಿದ್ದರೂ ರಕ್ಷಣೆಯಿಲ್ಲದಿದ್ದರೆ ತೋಳವು ಕೊಂದುಹಾಕುತ್ತದೆ. ನರಿಯಂತಿರುವ ಶಿಖಂಡಿಯಿಂದ ಕೊಲ್ಲಲ್ಪಡದಂತೆ ಈ ಸಿಂಹವನ್ನು ರಕ್ಷಿಸೋಣ.

06016019a ವಾಮಂ ಚಕ್ರಂ ಯುಧಾಮನ್ಯುರುತ್ತಮೌಜಾಶ್ಚ ದಕ್ಷಿಣಂ|

06016019c ಗೋಪ್ತಾರೌ ಫಲ್ಗುನಸ್ಯೈತೌ ಫಲ್ಗುನೋಽಪಿ ಶಿಖಂಡಿನಃ||

ಯುಧಾಮನ್ಯುವು ಎಡ ಚಕ್ರವನ್ನೂ ಉತ್ತಮೌಜಸನು ಬಲ ಚಕ್ರವನ್ನೂ ರಕ್ಷಿಸುತ್ತಿದ್ದಾರೆ. ಶಿಖಂಡಿಯನ್ನು ರಕ್ಷಿಸುವ ಫಲ್ಗುನನಂತೆ ಈ ಇಬ್ಬರು.

06016020a ಸಂರಕ್ಷ್ಯಮಾಣಃ ಪಾರ್ಥೇನ ಭೀಷ್ಮೇಣ ಚ ವಿವರ್ಜಿತಃ|

06016020c ಯಥಾ ನ ಹನ್ಯಾದ್ಗಾಂಗೇಯಂ ದುಃಶಾಸನ ತಥಾ ಕುರು||

ದುಃಶಾಸನ! ಪಾರ್ಥನಿಂದ ಸಂರಕ್ಷಿಸಲ್ಪಟ್ಟ ಮತ್ತು ಭೀಷ್ಮನಿಂದ ವಿವರ್ಜಿತನಾದ ಅವನು ಗಾಂಗೇಯನನ್ನು ಕೊಲ್ಲದಹಾಗೆ ಮಾಡು.”

06016021a ತತೋ ರಜನ್ಯಾಂ ವ್ಯುಷ್ಟಾಯಾಂ ಶಬ್ದಃ ಸಮಭವನ್ಮಹಾನ್|

06016021c ಕ್ರೋಶತಾಂ ಭೂಮಿಪಾಲಾನಾಂ ಯುಜ್ಯತಾಂ ಯುಜ್ಯತಾಮಿತಿ||

ಆಗ ರಾತ್ರಿಯು ಕಳೆಯಲು “ಹೊರಡಿ! ಹೊರಡಿ!” ಎಂಬ ಭೂಮಿಪಾಲರ ಕೂಗಿನ ಮಹಾ ಶಬ್ಧವುಂಟಾಯಿತು.

06016022a ಶಂಖದುಂದುಭಿನಿರ್ಘೋಷೈಃ ಸಿಂಹನಾದೈಶ್ಚ ಭಾರತ|

06016022c ಹಯಹೇಷಿತಶಬ್ದೈಶ್ಚ ರಥನೇಮಿಸ್ವನೈಸ್ತಥಾ||

06016023a ಗಜಾನಾಂ ಬೃಂಹತಾಂ ಚೈವ ಯೋಧಾನಾಂ ಚಾಭಿಗರ್ಜತಾಂ|

06016023c ಕ್ಷ್ವೇಡಿತಾಸ್ಫೋಟಿತೋತ್ಕ್ರುಷ್ಟೈಸ್ತುಮುಲಂ ಸರ್ವತೋಽಭವತ್||

ಎಲ್ಲ ಕಡೆಗಳಿಂದಲೂ ಶಂಖ-ದುಂದುಭಿಗಳ ನಿರ್ಘೋಷ, ಸಿಂಹನಾದ, ಕುದುರೆಗಳ ಹೀಂಕಾರದ ಶಬ್ಧ, ರಥಚಕ್ರಗಳ ಶಬ್ಧ, ಆನೆಗಳ ಘೀಳು, ಯೋಧರ ಗರ್ಜನೆ, ಚಪ್ಪಳೆ, ತೋಳುಗಳನ್ನು ಚಪ್ಪರಿಸುವ ಶಬ್ಧ ಹೀಗೆ ತುಮುಲವುಂಟಾಯಿತು.

06016024a ಉದತಿಷ್ಠನ್ಮಹಾರಾಜ ಸರ್ವಂ ಯುಕ್ತಮಶೇಷತಃ|

06016024c ಸೂರ್ಯೋದಯೇ ಮಹತ್ಸೈನ್ಯಂ ಕುರುಪಾಂಡವಸೇನಯೋಃ|

06016024e ತವ ರಾಜೇಂದ್ರ ಪುತ್ರಾಣಾಂ ಪಾಂಡವಾನಾಂ ತಥೈವ ಚ||

ಮಹಾರಾಜ! ರಾಜೇಂದ್ರ! ಸೂರ್ಯನು ಉದಯಿಸಿದಾಗ ಕುರುಪಾಂಡವ ಸೇನೆಗಳ, ನಿನ್ನ ಪುತ್ರರ ಮತ್ತು ಪಾಂಡವರ ಆ ಮಹಾಸೇನೆಯು ಸಂಪೂರ್ಣವಾಗಿ  ಕಾಣಿಸಿಕೊಂಡವು.

06016025a ತತ್ರ ನಾಗಾ ರಥಾಶ್ಚೈವ ಜಾಂಬೂನದಪರಿಷ್ಕೃತಾಃ|

06016025c ವಿಭ್ರಾಜಮಾನಾ ದೃಶ್ಯಂತೇ ಮೇಘಾ ಇವ ಸವಿದ್ಯುತಃ||

ಅಲ್ಲಿ ಬಂಗಾರದಿಂದ ಅಲಂಕರಿಸಿಸಲ್ಪಟ್ಟ ಆನೆಗಳು ಮತ್ತು ರಥಗಳು ವಿದ್ಯುತ್ತಿನಿಂದೊಡಗೂಡಿದ ಮೋಡಗಳಂತೆ ಹೊಳೆದು ಕಾಣುತ್ತಿದ್ದವು.

06016026a ರಥಾನೀಕಾನ್ಯದೃಶ್ಯಂತ ನಗರಾಣೀವ ಭೂರಿಶಃ|

06016026c ಅತೀವ ಶುಶುಭೇ ತತ್ರ ಪಿತಾ ತೇ ಪೂರ್ಣಚಂದ್ರವತ್||

ಬಹುಸಂಖ್ಯೆಯಲ್ಲಿದ ಆ ರಥಗಳ ಸೇನೆಗಳು ನಗರಗಳಂತೆ ತೋರುತ್ತಿದ್ದವು. ಅಲ್ಲಿ ನಿನ್ನ ತಂದೆಯು ಪೂರ್ಣಚಂದ್ರನಂತೆ ಅತೀವವಾಗಿ ಶೋಭಿಸುತ್ತಿದ್ದನು.

06016027a ಧನುರ್ಭಿರೃಷ್ಟಿಭಿಃ ಖಡ್ಗೈರ್ಗದಾಭಿಃ ಶಕ್ತಿತೋಮರೈಃ|

06016027c ಯೋಧಾಃ ಪ್ರಹರಣೈಃ ಶುಭ್ರೈಃ ಸ್ವೇಷ್ವನೀಕೇಷ್ವವಸ್ಥಿತಾಃ||

ಯೋಧರು ಧನುಸ್ಸು, ಖಡ್ಗ, ಗದೆ, ಶಕ್ತಿ, ತೋಮರ ಮೊದಲಾದ ಶುಭ್ರ ಪ್ರಹರಣಗಳನ್ನು ಹಿಡಿದು ತಮ್ಮ ತಮ್ಮ ಸೇನೆಗಳಲ್ಲಿ ನಿಂತಿದ್ದರು.

06016028a ಗಜಾ ರಥಾಃ ಪದಾತಾಶ್ಚ ತುರಗಾಶ್ಚ ವಿಶಾಂ ಪತೇ|

06016028c ವ್ಯತಿಷ್ಠನ್ವಾಗುರಾಕಾರಾಃ ಶತಶೋಽಥ ಸಹಸ್ರಶಃ||

ವಿಶಾಂಪತೇ! ಆನೆಗಳು, ರಥಗಳು, ಪದಾತಿಗಳು ಮತ್ತು ತುರಗಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಾಗುರದ ಆಕಾರದಲ್ಲಿ ರಚಿಸಲ್ಪಟ್ಟಿದ್ದರು.

06016029a ಧ್ವಜಾ ಬಹುವಿಧಾಕಾರಾ ವ್ಯದೃಶ್ಯಂತ ಸಮುಚ್ಛ್ರಿತಾಃ|

06016029c ಸ್ವೇಷಾಂ ಚೈವ ಪರೇಷಾಂ ಚ ದ್ಯುತಿಮಂತಃ ಸಹಸ್ರಶಃ||

ನಮ್ಮಲ್ಲಿ ಮತ್ತು ಅವರಲ್ಲಿ ಸಹಸ್ರಾರು ಹೊಳೆಯುತ್ತಿರುವ ಬಹುವಿಧದ ಆಕಾರಗಳ ಧ್ವಜಗಳು ಹಾರಾಡುತ್ತಿರುವುದು ಕಂಡುಬಂದವು.

06016030a ಕಾಂಚನಾ ಮಣಿಚಿತ್ರಾಂಗಾ ಜ್ವಲಂತ ಇವ ಪಾವಕಾಃ|

06016030c ಅರ್ಚಿಷ್ಮಂತೋ ವ್ಯರೋಚಂತ ಧ್ವಜಾ ರಾಜ್ಞಾಂ ಸಹಸ್ರಶಃ||

ಕಾಂಚನ ಮಣಿಗಳಿಂದ ಅಲಂಕರಿಸಲ್ಪಟ್ಟ, ಅಗ್ನಿಯಂತೆ ಬೆಳಗುತ್ತಿರುವ ಆ ಕವಚಧಾರಿ ರಾಜರ ಸಹಸ್ರಾರು ಧ್ವಜಗಳು ಮಿಂಚುತ್ತಿದ್ದವು.

06016031a ಮಹೇಂದ್ರಕೇತವಃ ಶುಭ್ರಾ ಮಹೇಂದ್ರಸದನೇಷ್ವಿವ|

06016031c ಸನ್ನದ್ಧಾಸ್ತೇಷು ತೇ ವೀರಾ ದದೃಶುರ್ಯುದ್ಧಕಾಂಕ್ಷಿಣಃ||

ಮಹೇಂದ್ರನ ಸದನಕ್ಕೆ ಕಟ್ಟಿದ ಶುಭ್ರವಾದ ಮಹೇಂದ್ರ ಧ್ವಜಗಳಂತೆ ಯುದ್ಧಕಾಂಕ್ಷಿಣರಾದ, ಸನ್ನದ್ಧರಾದ ಆ ವೀರರು ಕಾಣುತ್ತಿದ್ದರು.

06016032a ಉದ್ಯತೈರಾಯುಧೈಶ್ಚಿತ್ರಾಸ್ತಲಬದ್ಧಾಃ ಕಲಾಪಿನಃ|

06016032c ಋಷಭಾಕ್ಷಾ ಮನುಷ್ಯೇಂದ್ರಾಶ್ಚಮೂಮುಖಗತಾ ಬಭುಃ||

ಚರ್ಮದ ಕೈಬಂದಿಗಳನ್ನು ಧರಿಸಿ ಆಯುಧಗಳನ್ನು ಮೇಲೆತ್ತಿ ಹಿಡಿದು, ಮುಖಗಳನ್ನು ಮೇಲೆಮಾಡಿಕೊಂಡು ಆ ಋಷಭಾಕ್ಷ ಮನುಷ್ಯೇಂದ್ರರು ಸೇನೆಗಳ ಮುಂದೆ ನಿಂತಿದ್ದರು.

06016033a ಶಕುನಿಃ ಸೌಬಲಃ ಶಲ್ಯಃ ಸೈಂಧವೋಽಥ ಜಯದ್ರಥಃ|

06016033c ವಿಂದಾನುವಿಂದಾವಾವಂತ್ಯೌ ಕಾಂಬೋಜಶ್ಚ ಸುದಕ್ಷಿಣಃ||

06016034a ಶ್ರುತಾಯುಧಶ್ಚ ಕಾಲಿಂಗೋ ಜಯತ್ಸೇನಶ್ಚ ಪಾರ್ಥಿವಃ|

06016034c ಬೃಹದ್ಬಲಶ್ಚ ಕೌಶಲ್ಯಃ ಕೃತವರ್ಮಾ ಚ ಸಾತ್ವತಃ||

06016035a ದಶೈತೇ ಪುರುಷವ್ಯಾಘ್ರಾಃ ಶೂರಾಃ ಪರಿಘಬಾಹವಃ|

06016035c ಅಕ್ಷೌಹಿಣೀನಾಂ ಪತಯೋ ಯಜ್ವಾನೋ ಭೂರಿದಕ್ಷಿಣಾಃ||

ಸೌಬಲ ಶಕುನಿ, ಶಲ್ಯ, ಸೈಂಧವ ಜಯದ್ರಥ, ಅವಂತಿಯ ವಿಂದ-ಅನುವಿಂದರಿಬ್ಬರು, ಕಾಂಬೋಜದ ಸುದಕ್ಷಿಣ, ಶ್ರುತಾಯುಧ, ಕಲಿಂಗದ ರಾಜ ಜಯತ್ಸೇನ, ಕೌಶಲ್ಯ, ಬೃಹದ್ಬಲ, ಸಾತ್ವತ ಕೃತವರ್ಮ – ಈ ಹತ್ತು ಪರಿಘದಂತಹ ಬಾಹುಗಳಿದ್ದ, ಭೂರಿದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡಿದ್ದ ಪುರುಷವ್ಯಾಘ್ರ ಶೂರರು ಅಕ್ಷೌಹಿಣಿಗಳ ನಾಯಕರಾಗಿದ್ದರು.

06016036a ಏತೇ ಚಾನ್ಯೇ ಚ ಬಹವೋ ದುರ್ಯೋಧನವಶಾನುಗಾಃ|

06016036c ರಾಜಾನೋ ರಾಜಪುತ್ರಾಶ್ಚ ನೀತಿಮಂತೋ ಮಹಾಬಲಾಃ||

06016037a ಸನ್ನದ್ಧಾಃ ಸಮದೃಶ್ಯಂತ ಸ್ವೇಷ್ವನೀಕೇಷ್ವವಸ್ಥಿತಾಃ|

06016037c ಬದ್ಧಕೃಷ್ಣಾಜಿನಾಃ ಸರ್ವೇ ಧ್ವಜಿನೋ ಮುಂಜಮಾಲಿನಃ||

ಇವರು ಇನ್ನೂ ಇತರ ಬಹಳಷ್ಟು ದುರ್ಯೋಧನನ ವಶಾನುಗ ನೀತಿಮಂತ ಮತ್ತು ಮಹಾಬಲ ರಾಜರು ಮತ್ತು ರಾಜಪುತ್ರರು ಎಲ್ಲರೂ ಕೃಷ್ಣಾಜಿನಗಳನ್ನು ಕಟ್ಟಿ, ಧ್ವಜ, ಮಾಲೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಸೇನೆಗಳಲ್ಲಿ ಯುದ್ಧ ಸನ್ನದ್ಧರಾಗಿರುವುದು ಕಂಡಿತು.

06016038a ಸೃಷ್ಟಾ ದುರ್ಯೋಧನಸ್ಯಾರ್ಥೇ ಬ್ರಹ್ಮಲೋಕಾಯ ದೀಕ್ಷಿತಾಃ|

06016038c ಸಮೃದ್ಧಾ ದಶ ವಾಹಿನ್ಯಃ ಪರಿಗೃಹ್ಯ ವ್ಯವಸ್ಥಿತಾಃ||

ಈ ಹತ್ತು ಸಮೃದ್ಧ ವಾಹಿನಿಗಳಲ್ಲಿದ್ದ ಅವರು ಸಂತೋಷದಿಂದ ದುರ್ಯೋಧನನಿಗಾಗಿ ಬ್ರಹ್ಮಲೋಕಕ್ಕೆ ಹೋಗಲು ದೀಕ್ಷಿತರಾಗಿದ್ದರು.

06016039a ಏಕಾದಶೀ ಧಾರ್ತರಾಷ್ಟ್ರೀ ಕೌರವಾಣಾಂ ಮಹಾಚಮೂಃ|

06016039c ಅಗ್ರತಃ ಸರ್ವಸೈನ್ಯಾನಾಂ ಯತ್ರ ಶಾಂತನವೋಽಗ್ರಣೀಃ||

ಹನ್ನೊಂದನೆಯದು ಎಲ್ಲ ಸೇನೆಗಳ ಮುಂದೆ ಇದ್ದ, ಶಾಂತನವನು ಅಗ್ರಣಿಯಾಗಿದ್ದ ಧಾರ್ತರಾಷ್ಟ್ರೀ ಕೌರವರ ಮಹಾಸೇನೆಯಾಗಿತ್ತು.

06016040a ಶ್ವೇತೋಷ್ಣೀಷಂ ಶ್ವೇತಹಯಂ ಶ್ವೇತವರ್ಮಾಣಮಚ್ಯುತಂ|

06016040c ಅಪಶ್ಯಾಮ ಮಹಾರಾಜ ಭೀಷ್ಮಂ ಚಂದ್ರಮಿವೋದಿತಂ||

ಮಹಾರಾಜ! ಬಿಳಿಯ ಮುಂಡಾಸು, ಬಿಳಿಯ ಕುದುರೆ, ಬಿಳಿಯ ಕವಚಗಳಿಂದ ಆ ಅಚ್ಯುತ ಭೀಷ್ಮನು ಉದಯಿಸುತ್ತಿರುವ ಚಂದ್ರಮನಂತೆ ತೋರಿದನು.

06016041a ಹೇಮತಾಲಧ್ವಜಂ ಭೀಷ್ಮಂ ರಾಜತೇ ಸ್ಯಂದನೇ ಸ್ಥಿತಂ|

06016041c ಶ್ವೇತಾಭ್ರ ಇವ ತೀಕ್ಷ್ಣಾಂಶುಂ ದದೃಶುಃ ಕುರುಪಾಂಡವಾಃ||

ಬಂಗಾರದ ತಾಲಧ್ವಜವಿರುವ ಬೆಳ್ಳಿಯ ರಥದ ಮೇಲೆ ನಿಂತಿದ್ದ ಭೀಷ್ಮನು ಕುರುಪಾಂಡವರಿಗೆ ಬಿಳಿಯ ಮೋಡಗಳ ಮಧ್ಯೆ ಇರುವ ಸೂರ್ಯನಂತೆ ಕಂಡನು.

06016042a ದೃಷ್ಟ್ವಾ ಚಮೂಮುಖೇ ಭೀಷ್ಮಂ ಸಮಕಂಪಂತ ಪಾಂಡವಾಃ|

06016042c ಸೃಂಜಯಾಶ್ಚ ಮಹೇಷ್ವಾಸಾ ಧೃಷ್ಟದ್ಯುಮ್ನಪುರೋಗಮಾಃ||

ಸೇನೆಗಳ ಮುಂದೆ ಇರುವ ಭೀಷ್ಮನನ್ನು ನೋಡಿ ಮಹೇಷ್ವಾಸ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಡವರು ಮತ್ತು ಸೃಂಜಯರು ನಡುಗಿದರು.

06016043a ಜೃಂಭಮಾಣಂ ಮಹಾಸಿಂಹಂ ದೃಷ್ಟ್ವಾ ಕ್ಷುದ್ರಮೃಗಾ ಯಥಾ|

06016043c ಧೃಷ್ಟದ್ಯುಮ್ನಮುಖಾಃ ಸರ್ವೇ ಸಮುದ್ವಿವಿಜಿರೇ ಮುಹುಃ||

ಬಾಯಿಕಳೆದ ಮಹಾಸಿಂಹವನ್ನು ನೋಡಿ ಕ್ಷುದ್ರಮೃಗಗಳು ಹೇಗೋ ಹಾಗೆ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಎಲ್ಲರೂ ಭೀತರಾಗಿ ಪುನಃ ಪುನಃ ನಡುಗಿದರು.

06016044a ಏಕಾದಶೈತಾಃ ಶ್ರೀಜುಷ್ಟಾ ವಾಹಿನ್ಯಸ್ತವ ಭಾರತ|

06016044c ಪಾಂಡವಾನಾಂ ತಥಾ ಸಪ್ತ ಮಹಾಪುರುಷಪಾಲಿತಾಃ||

ಭಾರತ! ಇವು ಶ್ರೀಜುಷ್ಟವಾಗಿರುವ ನಿನ್ನ ಹನ್ನೊಂದು ವಾಹಿನಿಗಳು. ಹಾಗೆಯೇ ಮಹಾಪುರುಷ ಪಾಂಡವರಿಂದ ಪಾಲಿತವಾದ ಏಳಿದ್ದವು.

06016045a ಉನ್ಮತ್ತಮಕರಾವರ್ತೌ ಮಹಾಗ್ರಾಹಸಮಾಕುಲೌ|

06016045c ಯುಗಾಂತೇ ಸಮುಪೇತೌ ದ್ವೌ ದೃಶ್ಯೇತೇ ಸಾಗರಾವಿವ||

ಪರಸ್ಪರರನ್ನು ಎದುರಿಸಿ ಸೇರಿದ್ದ ಆ ಎರಡೂ ಸೇನೆಗಳೂ ಮಹಾ ಮೊಸಳೆಗಳಿಂದ ಕೂಡಿದ, ಉನ್ಮತ್ತ ಮಸಳೆಗಳಿಂದ ಕೂಡಿದ ಯುಗಾಂತದ ಸಾಗರಗಳಂತೆ ಕಂಡವು.

06016046a ನೈವ ನಸ್ತಾದೃಶೋ ರಾಜನ್ದೃಷ್ಟಪೂರ್ವೋ ನ ಚ ಶ್ರುತಃ|

06016046c ಅನೀಕಾನಾಂ ಸಮೇತಾನಾಂ ಸಮವಾಯಸ್ತಥಾವಿಧಃ||

ರಾಜನ್! ಈ ತರಹ ಸೇನೆಗಳು ಯುದ್ಧಕ್ಕಾಗಿ ಈ ವಿಧದಲ್ಲಿ ಸೇರಿರುವುದನ್ನು ಇದಕ್ಕೂ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ಷೋಡಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಹದಿನಾರನೇ ಅಧ್ಯಾಯವು.

Image result for flowers against white background

Comments are closed.