Bhishma Parva: Chapter 116

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೧೬

ಅರ್ಜುನನು ಗಾಂಗೇಯನಿಗೆ ಪಾನೀಯವನ್ನಿತ್ತಿದುದು (೧-೩೫). ದುರ್ಯೋಧನನಿಗೆ ಭೀಷ್ಮನ ಉಪದೇಶ (೩೬-೫೧).

06116001 ಸಂಜಯ ಉವಾಚ|

06116001a ವ್ಯುಷ್ಟಾಯಾಂ ತು ಮಹಾರಾಜ ರಜನ್ಯಾಂ ಸರ್ವಪಾರ್ಥಿವಾಃ|

06116001c ಪಾಂಡವಾ ಧಾರ್ತರಾಷ್ಟ್ರಾಶ್ಚ ಅಭಿಜಗ್ಮುಃ ಪಿತಾಮಹಂ||

ಸಂಜಯನು ಹೇಳಿದನು: “ಮಹಾರಾಜ! ರಾತ್ರಿಯು ಕಳೆಯಲು ಸರ್ವ ಪಾರ್ಥಿವರೂ, ಪಾಂಡವ-ಧಾರ್ತರಾಷ್ಟ್ರರು ಪಿತಾಮಹನಲ್ಲಿಗೆ ಆಗಮಿಸಿದರು.

06116002a ತಂ ವೀರಶಯನೇ ವೀರಂ ಶಯಾನಂ ಕುರುಸತ್ತಮಂ|

06116002c ಅಭಿವಾದ್ಯೋಪತಸ್ಥುರ್ವೈ ಕ್ಷತ್ರಿಯಾಃ ಕ್ಷತ್ರಿಯರ್ಷಭಂ||

ಆ ವೀರಶಯನದಲ್ಲಿ ಮಲಗಿದ್ದ ವೀರ ಕ್ಷತ್ರಿಯರ್ಷಭ ಕುರುಸತ್ತಮನನ್ನು ಅಭಿವಾದಿಸಲು ಕ್ಷತ್ರಿಯರು ಉಪಸ್ಥಿತರಾದರು.

06116003a ಕನ್ಯಾಶ್ಚಂದನಚೂರ್ಣೈಶ್ಚ ಲಾಜೈಮಾಲ್ಯೈಶ್ಚ ಸರ್ವಶಃ|

06116003c ಸ್ತ್ರಿಯೋ ಬಾಲಾಸ್ತಥಾ ವೃದ್ಧಾಃ ಪ್ರೇಕ್ಷಕಾಶ್ಚ ಪೃಥಗ್ಜನಾಃ|

06116003e ಸಮಭ್ಯಯುಃ ಶಾಂತನವಂ ಭೂತಾನೀವ ತಮೋನುದಂ||

ಕನ್ಯೆಯರು ಚಂದನ-ಚೂರ್ಣ-ಲಾಜ-ಮಾಲೆಗಳೆಲ್ಲವನ್ನು ತಂದು, ಸ್ತ್ರೀಯರು, ಬಾಲರು, ವೃದ್ಧರು, ಅನೇಕ ಪ್ರೇಕ್ಷಕ ಜನರೂ ಉದಯಿಸುತ್ತಿರುವ ಸೂರ್ಯನ ಬಳಿ ಭೂತಗಳು ಸಾಗುವಂತೆ ಶಾಂತನವನ ಬಳಿ ಬಂದರು.

06116004a ತೂರ್ಯಾಣಿ ಗಣಿಕಾ ವಾರಾಸ್ತಥೈವ ನಟನರ್ತಕಾಃ|

06116004c ಉಪಾನೃತ್ಯಂ ಜಗುಶ್ಚೈವ ವೃದ್ಧಂ ಕುರುಪಿತಾಮಹಂ||

ವಾದ್ಯಗಾರರು, ವರ್ತಕರು, ವೇಶ್ಯೆಯರು, ನಟನರ್ತಕರು, ಶಿಲ್ಪಿಗಳು ವೃದ್ಧ ಕುರುಪಿತಾಮಹನಲ್ಲಿಗೆ ಬಂದರು.

06116005a ಉಪಾರಮ್ಯ ಚ ಯುದ್ಧೇಭ್ಯಃ ಸನ್ನಾಹಾನ್ವಿಪ್ರಮುಚ್ಯ ಚ|

06116005c ಆಯುಧಾನಿ ಚ ನಿಕ್ಷಿಪ್ಯ ಸಹಿತಾಃ ಕುರುಪಾಂಡವಾಃ||

06116006a ಅನ್ವಾಸತ ದುರಾಧರ್ಷಂ ದೇವವ್ರತಮರಿಂದಮಂ|

06116006c ಅನ್ಯೋನ್ಯಂ ಪ್ರೀತಿಮಂತಸ್ತೇ ಯಥಾಪೂರ್ವಂ ಯಥಾವಯಃ||

ಕೌರವಪಾಂಡವರು ಇಬ್ಬರೂ ಯುದ್ಧವನ್ನು ನಿಲ್ಲಿಸಿ, ಸನ್ನಾಹಗಳನ್ನು ಕಳಚಿ, ಆಯುಧಗಳನ್ನು ಬದಿಗಿಟ್ಟು ಒಟ್ಟಿಗೇ ಯಥಾಪೂರ್ವವಾಗಿ ವಯಸ್ಸಿಗೆ ತಕ್ಕಂತೆ ಅನ್ಯೋನ್ಯರಿಗೆ ಪ್ರೀತಿ ತೋರಿಸಿ ಆ ದುರಾಧರ್ಷ, ಅರಿಂದಮ ದೇವವ್ರತನ ಬಳಿ ಕುಳಿತುಕೊಂಡರು.

06116007a ಸಾ ಪಾರ್ಥಿವಶತಾಕೀರ್ಣಾ ಸಮಿತಿರ್ಭೀಷ್ಮಶೋಭಿತಾ|

06116007c ಶುಶುಭೇ ಭಾರತೀ ದೀಪ್ತಾ ದಿವೀವಾದಿತ್ಯಮಂಡಲಂ||

ನೂರಾರು ಪಾರ್ಥಿವರಿಂದ ಕೂಡಿದ ಭೀಷ್ಮನಿಂದ ಶೋಭಿತವಾದ ಆ ಭಾರತೀ ಸಮಿತಿಯು ದಿವಿಯಲ್ಲಿನ ಆದಿತ್ಯಮಂಡಲದಂತೆ ಬೆಳಗಿ ಶೋಭಿಸಿತು.

06116008a ವಿಬಭೌ ಚ ನೃಪಾಣಾಂ ಸಾ ಪಿತಾಮಹಮುಪಾಸತಾಂ|

06116008c ದೇವಾನಾಮಿವ ದೇವೇಶಂ ಪಿತಾಮಹಮುಪಾಸತಾಂ||

ಪಿತಾಮಹನನ್ನು  ಉಪಾಸಿಸುತ್ತಿದ್ದ ಆ ನೃಪರು ದೇವೇಶ ಪಿತಾಮಹನನ್ನು ಉಪಾಸಿಸುವ ದೇವತೆಗಳಂತೆ ಶೋಭಿಸಿದರು.

06116009a ಭೀಷ್ಮಸ್ತು ವೇದನಾಂ ಧೈರ್ಯಾನ್ನಿಗೃಹ್ಯ ಭರತರ್ಷಭ|

06116009c ಅಭಿತಪ್ತಃ ಶರೈಶ್ಚೈವ ನಾತಿಹೃಷ್ಟಮನಾಬ್ರವೀತ್||

ಭರತರ್ಷಭ! ಭೀಷ್ಮನಾದರೋ ಧೈರ್ಯದಿಂದ ವೇದನೆಗಳನ್ನು ನಿಗ್ರಹಿಸಿಕೊಂಡು, ಶರಗಳಿಂದ ಅಭಿತಪ್ತನಾಗಿ, ಅಷ್ಟೊಂದು ಸಂತೋಷವಿಲ್ಲದೇ ಹೇಳಿದನು:

06116010a ಶರಾಭಿತಪ್ತಕಾಯೋಽಹಂ ಶರಸಂತಾಪಮೂರ್ಚಿತಃ|

06116010c ಪಾನೀಯಮಭಿಕಾಂಕ್ಷೇಽಹಂ ರಾಜ್ಞಸ್ತಾನ್ಪ್ರತ್ಯಭಾಷತ||

“ಶರಗಳಿಂದ ಗಾಯಗೊಂಡು ನನ್ನ ದೇಹವು ಸುಡುತ್ತಿದೆ. ಶರಗಳ ಸಂತಾಪದಿಂದ ಮೂರ್ಛಿತನಾಗಿದ್ದೇನೆ. ಪಾನೀಯವನ್ನು ಬಯಸುತ್ತಿದ್ದೇನೆ” ಎಂದು ಆ ರಾಜರಿಗೆ ಹೇಳಿದನು.

06116011a ತತಸ್ತೇ ಕ್ಷತ್ರಿಯಾ ರಾಜನ್ಸಮಾಜಹ್ರುಃ ಸಮಂತತಃ|

06116011c ಭಕ್ಷ್ಯಾನುಚ್ಚಾವಚಾಂಸ್ತತ್ರ ವಾರಿಕುಂಭಾಂಶ್ಚ ಶೀತಲಾನ್||

ಆಗ ರಾಜನ್! ಅಲ್ಲಿದ್ದ ಕ್ಷತ್ರಿಯರು ಬೇಗನೇ ಶುಚಿರುಚಿಯಾದ ಭಕ್ಷ್ಯಗಳನ್ನು ಶೀತಲ ಸಿಹಿನೀರಿನ ಬಿಂದಿಗೆಗಳನ್ನೂ ತರಿಸಿದರು.

06116012a ಉಪನೀತಂ ಚ ತದ್ದೃಷ್ಟ್ವಾ ಭೀಷ್ಮಃ ಶಾಂತನವೋಽಬ್ರವೀತ್|

06116012c ನಾದ್ಯ ತಾತ ಮಯಾ ಶಕ್ಯಂ ಭೋಗಾನ್ಕಾಂಶ್ಚನ ಮಾನುಷಾನ್||

06116013a ಉಪಭೋಕ್ತುಂ ಮನುಷ್ಯೇಭ್ಯಃ ಶರಶಯ್ಯಾಗತೋ ಹ್ಯಹಂ|

06116013c ಪ್ರತೀಕ್ಷಮಾಣಸ್ತಿಷ್ಠಾಮಿ ನಿವೃತ್ತಿಂ ಶಶಿಸೂರ್ಯಯೋಃ||

ತಂದಿರುವ ಅವುಗಳನ್ನು ನೋಡಿ ಶಾಂತನವ ಭೀಷ್ಮನು ಹೇಳಿದನು: “ಅಯ್ಯಾ! ಇಂದು ನಾನು ಮನುಷ್ಯರ ಯಾವ ಭೋಗಗಳನ್ನೂ ಭೋಗಿಸಲು ಶಕ್ಯನಿಲ್ಲ. ಮನುಷ್ಯನಿಂದ ಬೇರೆಯಾಗಿ ಶರಶಯ್ಯಗತನಾಗಿದ್ದೇನೆ. ಶಶಿಸೂರ್ಯರು ಹಿಂದಿರುಗುವುದನ್ನು ಕಾಯುತ್ತಾ ಇದ್ದೇನೆ.”

06116014a ಏವಮುಕ್ತ್ವಾ ಶಾಂತನವೋ ದೀನವಾಕ್ಸರ್ವಪಾರ್ಥಿವಾನ್|

06116014c ಧನಂಜಯಂ ಮಹಾಬಾಹುಮಭ್ಯಭಾಷತ ಭಾರತ||

ಹೀಗೆ ದೀನ ಮಾತುಗಳನ್ನು ಸರ್ವ ಪಾರ್ಥಿವರಿಗೆ ಹೇಳಿ ಭಾರತ! ಮಹಾಬಾಹು ಧನಂಜಯನಿಗೆ ಹೇಳಿದನು.

06116015a ಅಥೋಪೇತ್ಯ ಮಹಾಬಾಹುರಭಿವಾದ್ಯ ಪಿತಾಮಹಂ|

06116015c ಅತಿಷ್ಠತ್ಪ್ರಾಂಜಲಿಃ ಪ್ರಹ್ವಃ ಕಿಂ ಕರೋಮೀತಿ ಚಾಬ್ರವೀತ್||

ಕೂಡಲೇ ಮಾಹಾಬಾಹುವು ಪಿತಾಮಹನಿಗೆ ಅಂಜಲೀಬದ್ಧನಾಗಿ ನಮಸ್ಕರಿಸಿ ನಿಂತು ಏನು ಮಾಡಲಿ? ಎಂದು ಕೇಳಿದನು.

06116016a ತಂ ದೃಷ್ಟ್ವಾ ಪಾಂಡವಂ ರಾಜನ್ನಭಿವಾದ್ಯಾಗ್ರತಃ ಸ್ಥಿತಂ|

06116016c ಅಭ್ಯಭಾಷತ ಧರ್ಮಾತ್ಮಾ ಭೀಷ್ಮಃ ಪ್ರೀತೋ ಧನಂಜಯಂ||

ರಾಜನ್! ಕೈಮುಗಿದು ಮುಂದೆ ನಿಂತಿದ್ದ ಆ ಪಾಂಡವನನ್ನು ನೋಡಿ ಧರ್ಮಾತ್ಮ ಭೀಷ್ಮನು ಪ್ರೀತನಾಗಿ ಧನಂಜಯನಿಗೆ ಹೇಳಿದನು:

06116017a ದಹ್ಯತೇಽದಃ ಶರೀರಂ ಮೇ ಸಂಸ್ಯೂತೋಽಸ್ಮಿ ಮಹೇಷುಭಿಃ|

06116017c ಮರ್ಮಾಣಿ ಪರಿದೂಯಂತೇ ವದನಂ ಮಮ ಶುಷ್ಯತಿ||

“ನನ್ನ ಈ ಶರೀರವು ಸುಡುತ್ತಿದೆ. ಈ ಮಹಾ ಶರಗಳು ಎಲ್ಲೆಲ್ಲಿಯೂ ನನ್ನನ್ನು ಚುಚ್ಚುತ್ತಿವೆ. ನನ್ನ ಮರ್ಮಸ್ಥಾನಗಳು ತುಂಬಾ ನೋಯುತ್ತಿವೆ. ನನ್ನ ಬಾಯಿಯು ಒಣಗಿದೆ.

06116018a ಹ್ಲಾದನಾರ್ಥಂ ಶರೀರಸ್ಯ ಪ್ರಯಚ್ಛಾಪೋ ಮಮಾರ್ಜುನ|

06116018c ತ್ವಂ ಹಿ ಶಕ್ತೋ ಮಹೇಷ್ವಾಸ ದಾತುಮಂಭೋ ಯಥಾವಿಧಿ||

ಅರ್ಜುನ! ಶರೀರದ ಆಹ್ಲಾದಕ್ಕಾಗಿ ನನಗೆ ನೀರನ್ನು ಕೊಡು. ಮಹೇಷ್ವಾಸ! ಯಥಾವಿಧಿಯಾಗಿ ನೀರನ್ನು ಕೊಡಲು ನೀನೇ ಶಕ್ತ.”

06116019a ಅರ್ಜುನಸ್ತು ತಥೇತ್ಯುಕ್ತ್ವಾ ರಥಮಾರುಹ್ಯ ವೀರ್ಯವಾನ್|

06116019c ಅಧಿಜ್ಯಂ ಬಲವತ್ಕೃತ್ವಾ ಗಾಂಡೀವಂ ವ್ಯಾಕ್ಷಿಪದ್ಧನುಃ||

ಹಾಗೆಯೇ ಆಗಲೆಂದು ವೀರ್ಯವಾನ್ ಅರ್ಜುನನು ರಥವನ್ನೇರಿ ಗಾಂಡೀವವನ್ನು ಬಲವನ್ನುಪಯೋಗಿಸಿ ಹೆದೆಯೇರಿಸಿ ಠೇಂಕರಿಸಿದನು.

06116020a ತಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

06116020c ವಿತ್ರೇಸುಃ ಸರ್ವಭೂತಾನಿ ಶ್ರುತ್ವಾ ಸರ್ವೇ ಚ ಪಾರ್ಥಿವಾಃ||

ಸಿಡಿಲಿನ ಧ್ವನಿಯಂತಿದ್ದ ಧನುಸ್ಸಿನ ಠೇಂಕಾರ ಶಬ್ಧವನ್ನು ಕೇಳಿ ಅಲ್ಲಿದ್ದ ಎಲ್ಲ ಭೂತಗಳೂ ಎಲ್ಲ ರಾಜರೂ ಭಯಗೊಂಡರು.

06116021a ತತಃ ಪ್ರದಕ್ಷಿಣಂ ಕೃತ್ವಾ ರಥೇನ ರಥಿನಾಂ ವರಃ|

06116021c ಶಯಾನಂ ಭರತಶ್ರೇಷ್ಠಂ ಸರ್ವಶಸ್ತ್ರಭೃತಾಂ ವರಂ||

06116022a ಸಂಧಾಯ ಚ ಶರಂ ದೀಪ್ತಮಭಿಮಂತ್ರ್ಯ ಮಹಾಯಶಾಃ|

06116022c ಪರ್ಜನ್ಯಾಸ್ತ್ರೇಣ ಸಮ್ಯೋಜ್ಯ ಸರ್ವಲೋಕಸ್ಯ ಪಶ್ಯತಃ|

06116022e ಅವಿಧ್ಯತ್ಪೃಥಿವೀಂ ಪಾರ್ಥಃ ಪಾರ್ಶ್ವೇ ಭೀಷ್ಮಸ್ಯ ದಕ್ಷಿಣೇ||

ಆಗ ಆ ರಥಿಗಳಲ್ಲಿ ಶ್ರೇಷ್ಠ ಮಹಾಯಶ ಪಾರ್ಥನು ರಥದಿಂದಲೇ ಮಲಗಿದ್ದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಭರತಶ್ರೇಷ್ಠನಿಗೆ ಪ್ರದಕ್ಷಿಣೆ ಮಾಡಿ, ಉರಿಯುತ್ತಿರುವ ಶರವನ್ನು ಅಭಿಮಂತ್ರಿಸಿ ಪರ್ಜನ್ಯಾಸ್ತ್ರವನ್ನು ಸಂಯೋಜಿಸಿ ಸರ್ವಲೋಕಗಳೂ ನೋಡುತ್ತಿರಲು ಭೀಷ್ಮನ ಬಲಭಾಗದಲ್ಲಿ ಭೂಮಿಗೆ ಹೊಡೆದನು.

06116023a ಉತ್ಪಪಾತ ತತೋ ಧಾರಾ ವಿಮಲಾ ವಾರಿಣಃ ಶಿವಾ|

06116023c ಶೀತಸ್ಯಾಮೃತಕಲ್ಪಸ್ಯ ದಿವ್ಯಗಂಧರಸಸ್ಯ ಚ||

ಆಗ ಒಡನೆಯೇ ಶುದ್ಧ, ಮಂಗಳ, ಶೀತಲ, ಅಮೃತಕಲ್ಪ, ದಿವ್ಯ ಗಂಧರಸಗಳಿಂದ ಕೂಡಿದ ನೀರು ಬುಗ್ಗೆಯಂತೆ ಹೊರಚಿಮ್ಮಿತು.

06116024a ಅತರ್ಪಯತ್ತತಃ ಪಾರ್ಥಃ ಶೀತಯಾ ವಾರಿಧಾರಯಾ|

06116024c ಭೀಷ್ಮಂ ಕುರೂಣಾಂ ಋಷಭಂ ದಿವ್ಯಕರ್ಮಪರಾಕ್ರಮಃ||

ಆ ಶೀತಲ ನೀರ ಧಾರೆಯಿಂದ ದಿವ್ಯಪರಾಕ್ರಮಿ ಪಾರ್ಥನು ಕುರು‌ಋಷಭ ಭೀಷ್ಮನನ್ನು ತೃಪ್ತಿಗೊಳಿಸಿದನು.

06116025a ಕರ್ಮಣಾ ತೇನ ಪಾರ್ಥಸ್ಯ ಶಕ್ರಷ್ಯೇವ ವಿಕುರ್ವತಃ|

06116025c ವಿಸ್ಮಯಂ ಪರಮಂ ಜಗ್ಮುಸ್ತತಸ್ತೇ ವಸುಧಾಧಿಪಾಃ||

ಶಕ್ರನಂತೆಯೇ ಮಾಡಿದ ಪಾರ್ಥನ ಆ ಕರ್ಮದಿಂದ ಅಲ್ಲಿದ್ದ ವಸುಧಾಧಿಪರು ಪರಮ ವಿಸ್ಮಿತರಾದರು.

06116026a ತತ್ಕರ್ಮ ಪ್ರೇಕ್ಷ್ಯ ಬೀಭತ್ಸೋರತಿಮಾನುಷಮದ್ಭುತಂ|

06116026c ಸಂಪ್ರಾವೇಪಂತ ಕುರವೋ ಗಾವಃ ಶೀತಾರ್ದಿತಾ ಇವ||

ಬೀಭತ್ಸುವಿನ ಆ ಅತಿಮಾನುಷ ಅದ್ಭುತ ಕರ್ಮವನ್ನು ನೋಡಿ ಕುರುಗಳು ಶೀತದಿಂದ ಪೀಡಿತ ಹಸುಗಳಂತೆ ನಡುಗಿದರು.

06116027a ವಿಸ್ಮಯಾಚ್ಚೋತ್ತರೀಯಾಣಿ ವ್ಯಾವಿಧ್ಯನ್ಸರ್ವತೋ ನೃಪಾಃ|

06116027c ಶಂಖದುಂದುಭಿನಿರ್ಘೋಷೈಸ್ತುಮುಲಂ ಸರ್ವತೋಽಭವತ್||

ವಿಸ್ಮಯದಿಂದ ಎಲ್ಲಕಡೆ ನೃಪರು ಉತ್ತರೀಯಗಳನ್ನು ಹಾರಿಸಿದರು. ಎಲ್ಲಕಡೆ ಶಂಖ ದುಂದುಭಿಗಳ ನಿರ್ಘೋಷದ ತುಮುಲವುಂಟಾಯಿತು.

06116028a ತೃಪ್ತಃ ಶಾಂತನವಶ್ಚಾಪಿ ರಾಜನ್ಬೀಭತ್ಸುಮಬ್ರವೀತ್|

06116028c ಸರ್ವಪಾರ್ಥಿವವೀರಾಣಾಂ ಸನ್ನಿಧೌ ಪೂಜಯನ್ನಿವ||

ರಾಜನ್! ಶಾಂತನವನೂ ಕೂಡ ತೃಪ್ತನಾಗಿ ಬೀಭತ್ಸುವಿಗೆ ಸರ್ವಪಾರ್ಥಿವವೀರರ ಸನ್ನಿಧಿಯಲ್ಲಿ ಗೌರವಿಸುವಂತೆ ಹೇಳಿದನು:

06116029a ನೈತಚ್ಚಿತ್ರಂ ಮಹಾಬಾಹೋ ತ್ವಯಿ ಕೌರವನಂದನ|

06116029c ಕಥಿತೋ ನಾರದೇನಾಸಿ ಪೂರ್ವರ್ಷಿರಮಿತದ್ಯುತಿಃ||

“ಮಹಾಬಾಹೋ! ಕೌರವನಂದನ! ನಿನ್ನಲ್ಲಿ ಇದು ಇದೆಯೆಂದರೆ ವಿಚಿತ್ರವೇನೂ ಅಲ್ಲ. ಹಿಂದೆ ಅಮಿತದ್ಯುತಿ ಋಷಿಯಾಗಿದ್ದೆ ಎಂದು ನಾರದನು ಹೇಳಿದ್ದನು.

06116030a ವಾಸುದೇವಸಹಾಯಸ್ತ್ವಂ ಮಹತ್ಕರ್ಮ ಕರಿಷ್ಯಸಿ|

06116030c ಯನ್ನೋತ್ಸಹತಿ ದೇವೇಂದ್ರಃ ಸಹ ದೇವೈರಪಿ ಧ್ರುವಂ||

ದೇವತೆಗಳೊಂದಿಗೆ ದೇವೇಂದ್ರನೂ ಸಹ ಮಾಡಲಾಗದಂತಹ ಮಹಾ ಕಾರ್ಯವನ್ನು ವಾಸುದೇವನ ಸಹಾಯದಿಂದ ನೀನು ಮಾಡುತ್ತೀಯೆ.

06116031a ವಿದುಸ್ತ್ವಾಂ ನಿಧನಂ ಪಾರ್ಥ ಸರ್ವಕ್ಷತ್ರಸ್ಯ ತದ್ವಿದಃ|

06116031c ಧನುರ್ಧರಾಣಾಮೇಕಸ್ತ್ವಂ ಪೃಥಿವ್ಯಾಂ ಪ್ರವರೋ ನೃಷು||

ಪಾರ್ಥ! ತಿಳಿದವರು ನಿನ್ನನ್ನು ಎಲ್ಲ ಕ್ಷತ್ರಿಯರಿಗೂ ಮೃತ್ಯುಸ್ವರೂಪನೆಂದು ಹೇಳುತ್ತಾರೆ. ಧನುರ್ಧರರಲ್ಲಿ ಪ್ರಧಾನನು ನೀನು. ಪೃಥ್ವಿಯಲ್ಲಿ ನರರಲ್ಲಿ ಪ್ರವರ.

06116032a ಮನುಷ್ಯಾ ಜಗತಿ ಶ್ರೇಷ್ಠಾಃ ಪಕ್ಷಿಣಾಂ ಗರುಡೋ ವರಃ|

06116032c ಸರಸಾಂ ಸಾಗರಃ ಶ್ರೇಷ್ಠೋ ಗೌರ್ವರಿಷ್ಠಾ ಚತುಷ್ಪದಾಂ||

06116033a ಆದಿತ್ಯಸ್ತೇಜಸಾಂ ಶ್ರೇಷ್ಠೋ ಗಿರೀಣಾಂ ಹಿಮವಾನ್ವರಃ|

06116033c ಜಾತೀನಾಂ ಬ್ರಾಹ್ಮಣಃ ಶ್ರೇಷ್ಠಃ ಶ್ರೇಷ್ಠಸ್ತ್ವಮಸಿ ಧನ್ವಿನಾಂ||

ಜಗತ್ತಿನಲ್ಲಿ ಮನುಷ್ಯನು ಶ್ರೇಷ್ಠ. ಪಕ್ಷಿಗಳಲ್ಲಿ ಗರುಡನು ಶ್ರೇಷ್ಠ. ಜಲಾಶಯಗಳಲ್ಲಿ ಸಾಗರವು ಶ್ರೇಷ್ಠ. ನಾಲ್ಕು ಪಾದಗಳಿರುವವುಗಳಲ್ಲಿ ಗೋವು ಶ್ರೇಷ್ಠ. ಆದಿತ್ಯನು ತೇಜಸ್ಸುಳ್ಳವುಗಳಲ್ಲಿ ಶ್ರೇಷ್ಠ. ಗಿರಿಗಳಲ್ಲಿ ಹಿಮವತನು ಶ್ರೇಷ್ಠ. ಜಾತಿಗಳಲ್ಲಿ ಬ್ರಾಹ್ಮಣನು ಶ್ರೇಷ್ಠ. ಧನ್ವಿಗಳಲ್ಲಿ ನೀನು ಶ್ರೇಷ್ಠ.

06116034a ನ ವೈ ಶ್ರುತಂ ಧಾರ್ತರಾಷ್ಟ್ರೇಣ ವಾಕ್ಯಂ

         ಸಂಬೋಧ್ಯಮಾನಂ ವಿದುರೇಣ ಚೈವ|

06116034c ದ್ರೋಣೇನ ರಾಮೇಣ ಜನಾರ್ದನೇನ

         ಮುಹುರ್ಮುಹುಃ ಸಂಜಯೇನಾಪಿ ಚೋಕ್ತಂ||

ಧಾರ್ತರಾಷ್ಟ್ರನು ನಾನು ಹೇಳಿದ ಮಾತುಗಳನ್ನು, ವಿದುರ, ದ್ರೋಣ, ರಾಮ, ಜನಾರ್ದನ ಮತ್ತು ಸಂಜಯನೂ ಕೂಡ ಪುನಃ ಪುನಃ ಹೇಳಿದುದನ್ನು ಕೇಳಲಿಲ್ಲ.

06116035a ಪರೀತಬುದ್ಧಿರ್ಹಿ ವಿಸಂಜ್ಞಕಲ್ಪೋ

         ದುರ್ಯೋಧನೋ ನಾಭ್ಯನಂದದ್ವಚೋ ಮೇ|

06116035c ಸ ಶೇಷ್ಯತೇ ವೈ ನಿಹತಶ್ಚಿರಾಯ

         ಶಾಸ್ತ್ರಾತಿಗೋ ಭೀಮಬಲಾಭಿಭೂತಃ||

ದುರ್ಯೋಧನನು ವಿಪರೀತ ಬುದ್ಧಿಯುಳ್ಳವ. ಮೂಢನಂತಿದ್ದಾನೆ. ನನ್ನ ಮಾತುಗಳನ್ನು ಗೌರವಿಸುವುದಿಲ್ಲ. ಶಾಸ್ತ್ರಗಳನ್ನು ಮೀರಿ ನಡೆಯುವ ಅವನು ಭೀಮನ ಬಲದಿಂದ ನಿಹತನಾಗಿ ಬಹುಕಾಲದ ವರೆಗೆ ಮಲಗುತ್ತಾನೆ.”

06116036a ತತಃ ಶ್ರುತ್ವಾ ತದ್ವಚಃ ಕೌರವೇಂದ್ರೋ

         ದುರ್ಯೋಧನೋ ದೀನಮನಾ ಬಭೂವ|

06116036c ತಮಬ್ರವೀಚ್ಚಾಂತನವೋಽಭಿವೀಕ್ಷ್ಯ

         ನಿಬೋಧ ರಾಜನ್ಭವ ವೀತಮನ್ಯುಃ||

ಅವನ ಆ ಮಾತುಗಳನ್ನು ಕೇಳಿ ಕೌರವೇಂದ್ರ ದುರ್ಯೋಧನನು ದೀನ ಮನಸ್ಕನಾದನು. ಅದನ್ನು ತಿಳಿದ ಶಾಂತನವನು ಅವನ ಕಡೆ ತಿರುಗಿ ಹೇಳಿದನು: “ರಾಜನ್! ಕೇಳು. ಕೋಪವನ್ನು ದೂರಮಾಡು.

06116037a ದೃಷ್ಟಂ ದುರ್ಯೋಧನೇದಂ ತೇ ಯಥಾ ಪಾರ್ಥೇನ ಧೀಮತಾ|

06116037c ಜಲಸ್ಯ ಧಾರಾ ಜನಿತಾ ಶೀತಸ್ಯಾಮೃತಗಂಧಿನಃ|

06116037e ಏತಸ್ಯ ಕರ್ತಾ ಲೋಕೇಽಸ್ಮಿನ್ನಾನ್ಯಃ ಕಶ್ಚನ ವಿದ್ಯತೇ||

ದುರ್ಯೋಧನ! ಧೀಮತ ಪಾರ್ಥನು ಶೀತಲ ಅಮೃತ ಗಂಧಿ ನೀರಿನ ಧಾರೆಯನ್ನು ಹುಟ್ಟಿಸಿದುದನ್ನು ನೀನೇ ನೋಡಿದೆ. ಇದನ್ನು ಮಾಡುವವರು ಈ ಲೋಕದಲ್ಲಿ ಬೇರೆ ಯಾರು ಇದ್ದುದೂ ತಿಳಿದಿಲ್ಲ.

06116038a ಆಗ್ನೇಯಂ ವಾರುಣಂ ಸೌಮ್ಯಂ ವಾಯವ್ಯಮಥ ವೈಷ್ಣವಂ|

06116038c ಐಂದ್ರಂ ಪಾಶುಪತಂ ಬ್ರಾಹ್ಮಂ ಪಾರಮೇಷ್ಠ್ಯಂ ಪ್ರಜಾಪತೇಃ||

06116038e ಧಾತುಸ್ತ್ವಷ್ಟುಶ್ಚ ಸವಿತುರ್ದಿವ್ಯಾನ್ಯಸ್ತ್ರಾಣಿ ಸರ್ವಶಃ||

06116039a ಸರ್ವಸ್ಮಿನ್ಮಾನುಷೇ ಲೋಕೇ ವೇತ್ತ್ಯೇಕೋ ಹಿ ಧನಂಜಯಃ|

ಆಗ್ನೇಯ, ವಾರುಣ, ಸೌಮ್ಯ, ವಾಯುವ್ಯ, ವೈಷ್ಣವ, ಐಂದ್ರ, ಪಾಶುಪದ, ಪಾರಮೇಷ್ಠ್ಯ, ಪ್ರಜಾಪದಿ, ಧಾತು, ತ್ವಷ್ಟು, ಸವಿತು ಎಲ್ಲ ದಿವ್ಯಾಸ್ತ್ರಗಳೂ ಮಾನುಷಲೋಕದಲ್ಲೆಲ್ಲಾ ಧನಂಜಯನಿಗೆ ಮಾತ್ರ ತಿಳಿದಿದೆ.

06116039c ಕೃಷ್ಣೋ ವಾ ದೇವಕೀಪುತ್ರೋ ನಾನ್ಯೋ ವೈ ವೇದ ಕಶ್ಚನ|

06116039e ನ ಶಕ್ಯಾಃ ಪಾಂಡವಾಸ್ತಾತ ಯುದ್ಧೇ ಜೇತುಂ ಕಥಂ ಚನ||

ದೇವಕೀಪುತ್ರ ಕೃಷ್ಣನನ್ನು ಬಿಟ್ಟು ಇದು ಬೇರೆಯಾರಿಗೂ ತಿಳಿದಿಲ್ಲ. ಮಗೂ! ಪಾಂಡವರನ್ನು ಯುದ್ಧದಲ್ಲಿ ಗೆಲ್ಲಲು ಎಂದೂ ಶಕ್ಯವಿಲ್ಲ.

06116040a ಅಮಾನುಷಾಣಿ ಕರ್ಮಾಣಿ ಯಸ್ಯೈತಾನಿ ಮಹಾತ್ಮನಃ|

06116040c ತೇನ ಸತ್ತ್ವವತಾ ಸಂಖ್ಯೇ ಶೂರೇಣಾಹವಶೋಭಿನಾ|

06116040e ಕೃತಿನಾ ಸಮರೇ ರಾಜನ್ಸಂಧಿಸ್ತೇ ತಾತ ಯುಜ್ಯತಾಂ||

ರಾಜನ್! ಮಗೂ ಯಾರು ಅಮಾನುಷ ಕರ್ಮಗಳನ್ನು ಮಾಡಿದ್ದಾನೋ ಆ ಮಹಾತ್ಮ, ಸತ್ತ್ವವತ, ಸಮರದಲ್ಲಿ ಶೂರ, ಆಹವಶೋಭಿ, ಸಮರ ಕೌಶಲನೊಡನೆ ಸಂಧಿಯನ್ನು ಮಾಡಿಕೋ.

06116041a ಯಾವತ್ಕೃಷ್ಣೋ ಮಹಾಬಾಹುಃ ಸ್ವಾಧೀನಃ ಕುರುಸಂಸದಿ|

06116041c ತಾವತ್ಪಾರ್ಥೇನ ಶೂರೇಣ ಸಂಧಿಸ್ತೇ ತಾತ ಯುಜ್ಯತಾಂ||

ಮಗೂ! ಎಲ್ಲಿಯವರೆಗೆ ಮಹಾಬಾಹು ಕೃಷ್ಣನು ಕುರುಸಂಸದಿಯ ಸ್ವಧೀನದಲ್ಲಿರುತ್ತಾನೋ ಅಲ್ಲಿಯವರೆಗೆ ಶೂರ ಪಾರ್ಥನೊಂದಿಗೆ ಸಂಧಿಯನ್ನು ಮಾಡಿಕೋ.

06116042a ಯಾವಚ್ಚಮೂಂ ನ ತೇ ಶೇಷಾಂ ಶರೈಃ ಸನ್ನತಪರ್ವಭಿಃ|

06116042c ನಾಶಯತ್ಯರ್ಜುನಸ್ತಾವತ್ಸಂಧಿಸ್ತೇ ತಾತ ಯುಜ್ಯತಾಂ||

ಮಗೂ! ಅರ್ಜುನನ ಸನ್ನತಪರ್ವ ಶರಗಳಿಂದ ನಿನ್ನ ಸೇನೆಯು ನಿಃಶೇಷವಾಗಿ ನಾಶವಾಗುವುದರೊಳಗೆ ನೀನು ಸಂಧಿಯನ್ನು ಮಾಡಿಕೋ.

06116043a ಯಾವತ್ತಿಷ್ಠಂತಿ ಸಮರೇ ಹತಶೇಷಾಃ ಸಹೋದರಾಃ|

06116043c ನೃಪಾಶ್ಚ ಬಹವೋ ರಾಜನ್‌ಸ್ತಾವತ್ಸಂಧಿಃ ಪ್ರಯುಜ್ಯತಾಂ||

ರಾಜನ್! ಸಮರದಲ್ಲಿ ಸಹೋದರರು ಮತ್ತು ಬಹಳಷ್ಟು ನೃಪರು ಇನ್ನೂ ಹತಶೇಷರಾಗಿರುವಾಗಲೇ ಸಂಧಿಯನ್ನು ಮಾಡಿಕೋ.

06116044a ನ ನಿರ್ದಹತಿ ತೇ ಯಾವತ್ಕ್ರೋಧದೀಪ್ತೇಕ್ಷಣಶ್ಚಮೂಂ|

06116044c ಯುಧಿಷ್ಠಿರೋ ಹಿ ತಾವದ್ವೈ ಸಂಧಿಸ್ತೇ ತಾತ ಯುಜ್ಯತಾಂ||

ಮಗೂ! ಯುಧಿಷ್ಠಿರನ ಕ್ರೋಧದಿಂದ ಉರಿಯುವ ದೃಷ್ಟಿಯು ನಿನ್ನ ಸೇನೆಯನ್ನು ಸುಡುವುದರೊಳಗೇ ನೀನು ಸಂಧಿಯನ್ನು ಮಾಡಿಕೋ.

06116045a ನಕುಲಃ ಸಹದೇವಶ್ಚ ಭೀಮಸೇನಶ್ಚ ಪಾಂಡವಃ|

06116045c ಯಾವಚ್ಚಮೂಂ ಮಹಾರಾಜ ನಾಶಯಂತಿ ನ ಸರ್ವಶಃ|

06116045e ತಾವತ್ತೇ ಪಾಂಡವೈಃ ಸಾರ್ಧಂ ಸೌಭ್ರಾತ್ರಂ ತಾತ ರೋಚತಾಂ||

ಮಗೂ! ಮಹಾರಾಜ! ನಕುಲ, ಸಹದೇವ ಮತ್ತು ಪಾಂಡವ ಭೀಮಸೇನರು ನಿನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಗೊಳಿಸುವ ಮೊದಲು ಪಾಂಡವರೊಡನೆ ಸೌಭ್ರಾತೃತ್ವವನ್ನು ಬಯಸು.

06116046a ಯುದ್ಧಂ ಮದಂತಮೇವಾಸ್ತು ತಾತ ಸಂಶಾಮ್ಯ ಪಾಂಡವೈಃ|

06116046c ಏತತ್ತೇ ರೋಚತಾಂ ವಾಕ್ಯಂ ಯದುಕ್ತೋಽಸಿ ಮಯಾನಘ|

06116046e ಏತತ್ ಕ್ಷೇಮಮಹಂ ಮನ್ಯೇ ತವ ಚೈವ ಕುಲಸ್ಯ ಚ||

ಮಗೂ! ನನ್ನೊಂದಿಗೇ ಯುದ್ಧವು ಅಂತ್ಯಗೊಳ್ಳಲಿ. ಪಾಂಡವರೊಂದಿಗೆ ಸಂಧಿಮಾಡಿಕೋ. ಅನಘ! ನಾನು ಹೇಳಿದ ಈ ಮಾತುಗಳನ್ನು ನೀನು ಇಷ್ಟಪಡಬೇಕು. ಇದು ನಿನಗೂ ಕುಲಕ್ಕೂ ಕ್ಷೇಮವಾದುದೆಂದು ನನಗನ್ನಿಸುತ್ತದೆ.

06116047a ತ್ಯಕ್ತ್ವಾ ಮನ್ಯುಮುಪಶಾಮ್ಯಸ್ವ ಪಾರ್ಥೈಃ

         ಪರ್ಯಾಪ್ತಮೇತದ್ಯತ್ಕೃತಂ ಫಲ್ಗುನೇನ|

06116047c ಭೀಷ್ಮಸ್ಯಾಂತಾದಸ್ತು ವಃ ಸೌಹೃದಂ ವಾ

         ಸಂಪ್ರಶ್ಲೇಷಃ ಸಾಧು ರಾಜನ್ಪ್ರಸೀದ||

ರಾಜನ್! ಕೋಪವನ್ನು ತೊರೆದು ಪಾರ್ಥರೊಂದಿಗೆ ಸಂಧಿ ಮಾಡಿಕೋ. ಫಲ್ಗುನನ ಕೃತಕರ್ಮಗಳು ಪರ್ಯಾಪ್ತವಾಗಲಿ. ಭೀಷ್ಮನ ಅಂತ್ಯದೊಡನೆ ನಿಮ್ಮಲ್ಲಿ ಸೌಹಾರ್ದತೆಯುಂಟಾಗಲಿ. ಉಳಿದವರಾದರೂ ಚೆನ್ನಾಗಿರಲಿ. ಪ್ರಸೀದನಾಗು.

06116048a ರಾಜ್ಯಸ್ಯಾರ್ಧಂ ದೀಯತಾಂ ಪಾಂಡವಾನಾಂ

         ಇಂದ್ರಪ್ರಸ್ಥಂ ಧರ್ಮರಾಜೋಽನುಶಾಸ್ತು|

06116048c ಮಾ ಮಿತ್ರಧ್ರುಕ್ಪಾರ್ಥಿವಾನಾಂ ಜಘನ್ಯಃ

         ಪಾಪಾಂ ಕೀರ್ತಿಂ ಪ್ರಾಪ್ಸ್ಯಸೇ ಕೌರವೇಂದ್ರ||

ಪಾಂಡವರ ಅರ್ಧರಾಜ್ಯವನ್ನು ನೀಡು. ಇಂದ್ರಪ್ರಸ್ಥವನ್ನು ಧರ್ಮರಾಜನು ಆಳಲಿ. ಕೌರವೇಂದ್ರ! ಇದರಿಂದ ನೀನು ಪಾರ್ಥಿವರಲ್ಲಿ ಮಿತ್ರದ್ರೋಹೀ, ಪಾಪಿ ಎಂಬ ಕೀರ್ತಿಯನ್ನು ಪಡೆಯುವುಲ್ಲ.

06116049a ಮಮಾವಸಾನಾಚ್ಚಾಂತಿರಸ್ತು ಪ್ರಜಾನಾಂ

         ಸಂಗಚ್ಛಂತಾಂ ಪಾರ್ಥಿವಾಃ ಪ್ರೀತಿಮಂತಃ|

06116049c ಪಿತಾ ಪುತ್ರಂ ಮಾತುಲಂ ಭಾಗಿನೇಯೋ

         ಭ್ರಾತಾ ಚೈವ ಭ್ರಾತರಂ ಪ್ರೈತು ರಾಜನ್||

ನನ್ನ ಅವಸಾನದಿಂದ ಪ್ರಜೆಗಳಲ್ಲಿ ಶಾಂತಿಯು ನೆಲೆಸಲಿ. ಪಾರ್ಥಿವರು ಪ್ರೀತಿಮಂತರಾಗಿ ತಮ್ಮ ತಮ್ಮಲ್ಲಿಗೆ ಹಿಂದಿರುಗಲಿ. ರಾಜನ್! ತಂದೆಯು ಮಗನನ್ನು, ಮಾವನು ಅಳಿಯನನ್ನು, ಅಣ್ಣನು ತಮ್ಮನನ್ನು ಸೇರಲಿ.

06116050a ನ ಚೇದೇವಂ ಪ್ರಾಪ್ತಕಾಲಂ ವಚೋ ಮೇ

         ಮೋಹಾವಿಷ್ಟಃ ಪ್ರತಿಪತ್ಸ್ಯಸ್ಯಬುದ್ಧ್ಯಾ|

06116050c ಭೀಷ್ಮಸ್ಯಾಂತಾದೇತದಂತಾಃ ಸ್ಥ ಸರ್ವೇ

         ಸತ್ಯಾಮೇತಾಂ ಭಾರತೀಮೀರಯಾಮಿ||

ಕಾಲಕ್ಕೆ ತಕ್ಕುದಾದ ನನ್ನ ಈ ಮಾತುಗಳನ್ನು ನೀನು ಕೇಳದೆಯೇ ಹೋದರೆ ಮೋಹಾವಿಷ್ಟನಾಗಿ ಅಬುದ್ಧಿಯಿಂದ ಪರಿತಪಿಸುತ್ತೀಯೆ. ಭೀಷ್ಮನ ಈ ಅಂತ್ಯವು ನಿಮ್ಮೆಲ್ಲರಿಗೂ ಅಂತ್ಯವೆನಿಸುತ್ತದೆ. ಸತ್ಯವನ್ನೇ ಹೇಳುತ್ತಿದ್ದೇನೆ.”

06116051a ಏತದ್ವಾಕ್ಯಂ ಸೌಹೃದಾದಾಪಗೇಯೋ

         ಮಧ್ಯೇ ರಾಜ್ಞಾಂ ಭಾರತಂ ಶ್ರಾವಯಿತ್ವಾ|

06116051c ತೂಷ್ಣೀಮಾಸೀಚ್ಚಲ್ಯಸಂತಪ್ತಮರ್ಮಾ

         ಯತ್ವಾತ್ಮಾನಂ ವೇದನಾಂ ಸಂನ್ನಿಗೃಹ್ಯ||

ಈ ಮಾತನ್ನು ಆಪಗೇಯನು ರಾಜರ ಮಧ್ಯದಲ್ಲಿ ಭಾರತನಿಗೆ ಕೇಳಿಸಿ, ಶರಗಳಿಂದ ಚುಚ್ಚಲ್ಪಟ್ಟು ಸಂತಪ್ತವಾದ ಮರ್ಮಗಳ ವೇದನೆಯನ್ನು ನಿಗ್ರಹಿಸಿಕೊಂಡು ಆತ್ಮನನ್ನು ಯೋಜಿಸಿ ಸುಮ್ಮನಾದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದುರ್ಯೋಧನಂಪ್ರತಿ ಭೀಷ್ಮವಾಕ್ಯೇ ಷೋಡಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದುರ್ಯೋಧನಂಪ್ರತಿಭೀಷ್ಮವಾಕ್ಯ ಎನ್ನುವ ನೂರಾಹದಿನಾರನೇ ಅಧ್ಯಾಯವು.

Image result for indian motifs against white background

Comments are closed.