ಭೀಷ್ಮ ಪರ್ವ: ಭೀಷ್ಮವಧ ಪರ್ವ
Contents
Toggle೧೧೫
ಯುದ್ಧನಿಲ್ಲಿಸಿ ಪಾಂಡವ-ಕೌರವ ಯೋಧರು ಬಿದ್ದಿದ್ದ ಭೀಷ್ಮನ ಬಳಿ ಬಂದುದು (೧-೨೯). ಅರ್ಜುನನು ಭೀಷ್ಮನಿಗೆ ತಲೆದಿಂಬನ್ನು ಒದಗಿಸಿದ್ದುದು (೩೦-೪೬). ಉತ್ತರಾಯಣದ ವರೆಗೆ ಕಾಯುತ್ತೇನೆಂದು ಹೇಳಿ ಭೀಷ್ಮನು ತನ್ನ ಗಾಯಗಳಿಗೆ ಚಿಕಿತ್ಸೆಮಾಡಲು ಬಂದ ವೈದ್ಯರನ್ನು ಹಿಂದೆ ಕಳುಹಿಸಿದುದು (೪೭-೫೬). ಕೃಷ್ಣ-ಯುಧಿಷ್ಠಿರರ ಸಂವಾದ (೫೭-೬೫).
06115001 ಧೃತರಾಷ್ಟ್ರ ಉವಾಚ|
06115001a ಕಥಮಾಸಂಸ್ತದಾ ಯೋಧಾ ಹೀನಾ ಭೀಷ್ಮೇಣ ಸಂಜಯ|
06115001c ಬಲಿನಾ ದೇವಕಲ್ಪೇನ ಗುರ್ವರ್ಥೇ ಬ್ರಹ್ಮಚಾರಿಣಾ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಬಲಿ, ದೇವಕಲ್ಪ, ಹಿರಿಯರಿಗಾಗಿ ಬ್ರಹ್ಮಚಾರಿಯಾಗಿದ್ದ ಭೀಷ್ಮನಿಲ್ಲದೇ ಯೋಧರು ಹೇಗಿದ್ದರು?
06115002a ತದೈವ ನಿಹತಾನ್ಮನ್ಯೇ ಕುರೂನನ್ಯಾಂಶ್ಚ ಪಾರ್ಥಿವಾನ್|
06115002c ನ ಪ್ರಾಹರದ್ಯದಾ ಭೀಷ್ಮೋ ಘೃಣಿತ್ವಾದ್ದ್ರುಪದಾತ್ಮಜೇ||
ದ್ರುಪದಾತ್ಮಜನನ್ನು ಭೀಷ್ಮನು ದೀನನಾಗಿ ಹೊಡೆಯದೇ ಇದ್ದಾಗಲೇ ನಾನು ಕುರುಗಳು ಅನ್ಯ ಪಾರ್ಥಿವರೂ ಹತರಾದರೆಂದೇ ಭಾವಿಸಿದ್ದೆ.
06115003a ತತೋ ದುಃಖತರಂ ಮನ್ಯೇ ಕಿಮನ್ಯತ್ಪ್ರಭವಿಷ್ಯತಿ|
06115003c ಯದದ್ಯ ಪಿತರಂ ಶ್ರುತ್ವಾ ನಿಹತಂ ಮಮ ದುರ್ಮತೇಃ||
ಇಂದು ನನ್ನ ತಂದೆಯು ಹತನಾದನೆಂದು ಕೇಳಿದುದಕ್ಕಿಂತ ಇನ್ನೂ ಹೆಚ್ಚಿನ ದುಃಖವಾದರೂ ಈ ದುರ್ಮತಿಗೆ ಆಗಲು ಹೇಗೆ ಸಾಧ್ಯ?
06115004a ಅಶ್ಮಸಾರಮಯಂ ನೂನಂ ಹೃದಯಂ ಮಮ ಸಂಜಯ|
06115004c ಶ್ರುತ್ವಾ ವಿನಿಹತಂ ಭೀಷ್ಮಂ ಶತಧಾ ಯನ್ನ ದೀರ್ಯತೇ||
ಸಂಜಯ! ನನ್ನ ಈ ಹೃದಯವು ಉಕ್ಕಿನ ಸಾರದಿಂದೊಡಗೂಡಿರಬೇಕು. ಭೀಷ್ಮನು ಹತನಾದನೆಂದು ಕೇಳಿಯೂ ಇದು ನೂರಾಗಿ ಒಡೆದು ಹೋಗುತ್ತಿಲ್ಲವಲ್ಲ!
06115005a ಪುನಃ ಪುನರ್ನ ಮೃಷ್ಯಾಮಿ ಹತಂ ದೇವವ್ರತಂ ರಣೇ|
06115005c ನ ಹತೋ ಜಾಮದಗ್ನ್ಯೇನ ದಿವ್ಯೈರಸ್ತ್ರೈಃ ಸ್ಮ ಯಃ ಪುರಾ||
ಹಿಂದೆ ಜಾಮದಗ್ನಿಯಿಂದ ದಿವ್ಯಾಸ್ತ್ರಗಳಿಗೂ ಹತನಾಗಿರದಿದ್ದ ದೇವವ್ರತನು ರಣದಲ್ಲಿ ಹತನಾದನೆಂದು ಕೇಳಿ ಪುನಃ ಪುನಃ ಸಹನೆಯನ್ನು ಕಳೆದುಕೊಳ್ಳುತ್ತಿದ್ದೇನೆ.
06115006a ಯದದ್ಯ ನಿಹತೇನಾಜೌ ಭೀಷ್ಮೇಣ ಜಯಮಿಚ್ಛತಾ|
06115006c ಚೇಷ್ಟಿತಂ ನರಸಿಂಹೇನ ತನ್ಮೇ ಕಥಯ ಸಂಜಯ||
ಸಂಜಯ! ಇಂದು ಹತನಾದ ಜಯವನ್ನು ಇಚ್ಛಿಸಿದ್ದ ನರಸಿಂಹ ಭೀಷ್ಮನು ಏನೇನು ಮಾಡಿದನೆಂದು ನನಗೆ ಹೇಳು.”
06115007 ಸಂಜಯ ಉವಾಚ|
06115007a ಸಾಯಾಹ್ನೇ ನ್ಯಪತದ್ ಭೂಮೌ ಧಾರ್ತರಾಷ್ಟ್ರಾನ್ವಿಷಾದಯನ್|
06115007c ಪಾಂಚಾಲಾನಾಂ ದದದ್ಧರ್ಷಂ ಕುರುವೃದ್ಧಃ ಪಿತಾಮಹಃ||
ಸಂಜಯನು ಹೇಳಿದನು: “ಕುರುವೃದ್ಧ ಪಿತಾಮಹನು ಆ ಸಾಯಂಕಾಲ ಧಾರ್ತರಾಷ್ಟ್ರರನ್ನು ವಿಷಾದಗೊಳಿಸಿ ಪಾಂಚಾಲರನ್ನು ಸಂತೋಷಗೊಳಿಸಿ ಭೂಮಿಯ ಮೇಲೆ ಬಿದ್ದನು.
06115008a ಸ ಶೇತೇ ಶರತಲ್ಪಸ್ಥೋ ಮೇದಿನೀಮಸ್ಪೃಶಂಸ್ತದಾ|
06115008c ಭೀಷ್ಮೋ ರಥಾತ್ಪ್ರಪತಿತಃ ಪ್ರಚ್ಯುತೋ ಧರಣೀತಲೇ||
ರಥದಿಂದ ಜಾರಿ ಧರಣೀ ತಲದಲ್ಲಿ ಬಿದ್ದ ಭೀಷ್ಮನು ಮೇದಿನಿಗೆ ತಾಗದಹಾಗೆ ಶರತಲ್ಪದ ಮೇಲೆ ಮಲಗಿದನು.
06115009a ಹಾ ಹೇತಿ ತುಮುಲಃ ಶಬ್ದೋ ಭೂತಾನಾಂ ಸಮಪದ್ಯತ|
06115009c ಸೀಮಾವೃಕ್ಷೇ ನಿಪತಿತೇ ಕುರೂಣಾಂ ಸಮಿತಿಕ್ಷಯೇ||
ಕುರುಗಳ ಸೀಮಾವೃಕ್ಷದಂತಿದ್ದ ಅವನು ಬೀಳಲು “ಹಾ! ಹಾ!” ಎಂದು ಭೂತಗಳ ತುಮುಲ ಶಬ್ಧವುಂಟಾಯಿತು.
06115010a ಉಭಯೋಃ ಸೇನಯೋ ರಾಜನ್ ಕ್ಷತ್ರಿಯಾನ್ಭಯಮಾವಿಶತ್|
06115010c ಭೀಷ್ಮಂ ಶಾಂತನವಂ ದೃಷ್ಟ್ವಾ ವಿಶೀರ್ಣಕವಚಧ್ವಜಂ|
06115010e ಕುರವಃ ಪರ್ಯವರ್ತಂತ ಪಾಂಡವಾಶ್ಚ ವಿಶಾಂ ಪತೇ||
ವಿಶಾಂಪತೇ! ರಾಜನ್! ಎರಡೂ ಸೇನೆಗಳ ಕ್ಷತ್ರಿಯರನ್ನು ಭಯವು ಆವೇಶಗೊಂಡಿತು. ಹರಿದ ಕವಚ ಧ್ವಜಗಳ ಶಾಂತನವ ಭೀಷ್ಮನನ್ನು ನೋಡಿ ಕುರುಗಳೂ ಪಾಂಡವರೂ ಅವನನ್ನು ಸುತ್ತುವರೆದರು.
06115011a ಖಂ ತಮೋವೃತಮಾಸೀಚ್ಚ ನಾಸೀದ್ಭಾನುಮತಃ ಪ್ರಭಾ|
06115011c ರರಾಸ ಪೃಥಿವೀ ಚೈವ ಭೀಷ್ಮೇ ಶಾಂತನವೇ ಹತೇ||
ಶಾಂತನವ ಭೀಷ್ಮನು ಹತನಾಗಲು ಆಕಾಶದಲ್ಲಿ ಅಂಧಕಾರವು ಕವಿಯಿತು. ಭಾನುಮತನು ಪ್ರಭಾಹೀನನಾದನು. ಭೂಮಿಯೂ ಕೂಡ ಭಯಂಕರ ಶಬ್ಧಮಾಡಿತು.
06115012a ಅಯಂ ಬ್ರಹ್ಮವಿದಾಂ ಶ್ರೇಷ್ಠೋ ಅಯಂ ಬ್ರಹ್ಮವಿದಾಂ ಗತಿಃ|
06115012c ಇತ್ಯಭಾಷಂತ ಭೂತಾನಿ ಶಯಾನಂ ಭರತರ್ಷಭಂ||
“ಇವನು ಬ್ರಹ್ಮವಿದರಲ್ಲಿ ಶ್ರೇಷ್ಠನು. ಇವನು ಬ್ರಹ್ಮವಿದರ ಗತಿ.” ಎಂದು ಮಲಗಿದ್ದ ಭರತರ್ಷಭನ ಕುರಿತು ಭೂತಗಳು ಮಾತನಾಡಿಕೊಳ್ಳುತ್ತಿದ್ದವು.
06115013a ಅಯಂ ಪಿತರಮಾಜ್ಞಾಯ ಕಾಮಾರ್ತಂ ಶಂತನುಂ ಪುರಾ|
06115013c ಊರ್ಧ್ವರೇತಸಮಾತ್ಮಾನಂ ಚಕಾರ ಪುರುಷರ್ಷಭಃ||
“ಹಿಂದೆ ಈ ಪುರುಷರ್ಷಭನು ತಂದೆ ಶಂತನುವು ಕಾಮಾರ್ತನಾಗಿದ್ದಾನೆಂದು ತಿಳಿದು ತನ್ನನ್ನು ಊರ್ಧ್ವರೇತಸನನ್ನಾಗಿ ಮಾಡಿಕೊಂಡನು.”
06115014a ಇತಿ ಸ್ಮ ಶರತಲ್ಪಸ್ಥಂ ಭರತಾನಾಮಮಧ್ಯಮಂ|
06115014c ಋಷಯಃ ಪರ್ಯಧಾವಂತ ಸಹಿತಾಃ ಸಿದ್ಧಚಾರಣೈಃ||
ಹೀಗೆ ಹೇಳುತ್ತ ಶರತಲ್ಪಸ್ಥನಾಗಿದ್ದ ಆ ಭರತರ ಪ್ರಮುಖನ ಕುರಿತಾಗಿ ಸಿದ್ಧ-ಚಾರಣರ ಸಹಿತ ಋಷಿಗಳು ಧಾವಿಸಿ ಬಂದರು.
06115015a ಹತೇ ಶಾಂತನವೇ ಭೀಷ್ಮೇ ಭರತಾನಾಂ ಪಿತಾಮಹೇ|
06115015c ನ ಕಿಂ ಚಿತ್ಪ್ರತ್ಯಪದ್ಯಂತ ಪುತ್ರಾಸ್ತವ ಚ ಭಾರತ||
ಭಾರತ! ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾಗಲು ನಿನ್ನ ಪುತ್ರರು ಏನು ಮಾಡಲೂ ಕೂಡ ತಿಳಿಯದಾದರು.
06115016a ವಿವರ್ಣವದನಾಶ್ಚಾಸನ್ಗತಶ್ರೀಕಾಶ್ಚ ಭಾರತ|
06115016c ಅತಿಷ್ಠನ್ವ್ರೀಡಿತಾಶ್ಚೈವ ಹ್ರಿಯಾ ಯುಕ್ತಾ ಹ್ಯಧೋಮುಖಾಃ||
ಭಾರತ! ಕಾಂತಿಯು ತೊಲಗಿ ವಿಷಣ್ಣವದನರಾದರು. ಲಜ್ಜಿತರಾಗಿ, ನಾಚಿಕೆಯಿಂದ ತಲೆಯನ್ನು ಕೆಳಮಾಡಿ ನಿಂತಿದ್ದರು.
06115017a ಪಾಂಡವಾಶ್ಚ ಜಯಂ ಲಬ್ಧ್ವಾ ಸಂಗ್ರಾಮಶಿರಸಿ ಸ್ಥಿತಾಃ|
06115017c ಸರ್ವೇ ದಧ್ಮುರ್ಮಹಾಶಂಖಾನ್ ಹೇಮಜಾಲಪರಿಷ್ಕೃತಾನ್||
ಪಾಂಡವರಾದರೋ ಜಯವನ್ನು ಗಳಿಸಿ ಸಂಗ್ರಾಮದ ಅಗ್ರಭಾಗದಲ್ಲಿ ನಿಂತು ಎಲ್ಲರೂ ಸುವರ್ಣಮಯ ಜಾಲಗಳಿಂದ ಅಲಂಕೃತ ಮಹಾ ಶಂಖಗಳನ್ನು ಊದಿದರು.
06115018a ಭೃಶಂ ತೂರ್ಯನಿನಾದೇಷು ವಾದ್ಯಮಾನೇಷು ಚಾನಘ|
06115018c ಅಪಶ್ಯಾಮ ರಣೇ ರಾಜನ್ಭೀಮಸೇನಂ ಮಹಾಬಲಂ|
06115018e ಆಕ್ರೀಡಮಾನಂ ಕೌಂತೇಯಂ ಹರ್ಷೇಣ ಮಹತಾ ಯುತಂ||
06115019a ನಿಹತ್ಯ ಸಮರೇ ಶತ್ರೂನ್ಮಹಾಬಲಸಮನ್ವಿತಾನ್|
ರಾಜನ್! ಅನಘ! ಸಮರದಲ್ಲಿ ಮಹಾಬಲಸಮನ್ವಿತ ಶತ್ರುಗಳನ್ನು ಹನನಗೊಳಿಸಿ ಅತಿಯಾದ ತೂರ್ಯನಿನಾದಗಳು ವಾದ್ಯಗಳು ಮೊಳಗಲು ರಣದಲ್ಲಿ ಮಹಾಬಲ ಕೌಂತೇಯ ಭೀಮಸೇನನು ಮಹಾ ಹರ್ಷದಿಂದ ಕೂಡಿದವನಾಗಿ ಆಟವಾಡುತ್ತಿರುವುದು ಕಂಡುಬಂದಿತು.
06115019c ಸಮ್ಮೋಹಶ್ಚಾಪಿ ತುಮುಲಃ ಕುರೂಣಾಮಭವತ್ತದಾ||
06115020a ಕರ್ಣದುರ್ಯೋಧನೌ ಚಾಪಿ ನಿಃಶ್ವಸೇತಾಂ ಮುಹುರ್ಮುಹುಃ|
06115020c ತಥಾ ನಿಪತಿತೇ ಭೀಷ್ಮೇ ಕೌರವಾಣಾಂ ಧುರಂಧರೇ|
06115020e ಹಾಹಾಕಾರಮಭೂತ್ಸರ್ವಂ ನಿರ್ಮರ್ಯಾದಮವರ್ತತ||
ಕುರುಗಳಲ್ಲಿಯೂ ಕೂಡ ಸಮ್ಮೋಹದ ತುಮುಲವುಂಟಾಯಿತು. ಕರ್ಣ-ದುರ್ಯೋಧನರೂ ಕೌರವರ ಧುರಂಧರರೂ ಭೀಷ್ಮನು ಬೀಳಲು ಪುನಃ ಪುನಃ ಸಿಟ್ಟುಸಿರು ಬಿಡುತ್ತಿದ್ದರು. ಎಲ್ಲಕಡೆ ಹಾಹಾಕಾರವೆದ್ದಿತು. ಎಲ್ಲರೂ ಲೋಕಮರ್ಯಾದೆಯನ್ನು ತೊರೆದು ವರ್ತಿಸತೊಡಗಿದರು.
06115021a ದೃಷ್ಟ್ವಾ ಚ ಪತಿತಂ ಭೀಷ್ಮಂ ಪುತ್ರೋ ದುಃಶಾಸನಸ್ತವ|
06115021c ಉತ್ತಮಂ ಜವಮಾಸ್ಥಾಯ ದ್ರೋಣಾನೀಕಂ ಸಮಾದ್ರವತ್||
ಭೀಷ್ಮನು ಬಿದ್ದುದನ್ನು ನೋಡಿ ನಿನ್ನ ಪುತ್ರ ದುಃಶಾಸನನು ಉತ್ತಮ ವೇಗದಲ್ಲಿ ದ್ರೋಣನ ಸೇನೆಯತ್ತ ಧಾವಿಸಿ ಹೋದನು.
06115022a ಭ್ರಾತ್ರಾ ಪ್ರಸ್ಥಾಪಿತೋ ವೀರಃ ಸ್ವೇನಾನೀಕೇನ ದಂಶಿತಃ|
06115022c ಪ್ರಯಯೌ ಪುರುಷವ್ಯಾಘ್ರಃ ಸ್ವಸೈನ್ಯಮಭಿಚೋದಯನ್||
ಅಣ್ಣನಿಂದ ಕಳುಹಿಸಲ್ಪಟ್ಟ ಆ ವೀರ ಪುರುಷವ್ಯಾಘ್ರನು ತನ್ನ ಸೇನೆಯು ದುಃಖಿಸುತ್ತಿರಲು ಅದನ್ನು ಪ್ರಚೋದಿಸುತ್ತಾ ಹೊರಟನು.
06115023a ತಮಾಯಾಂತಮಭಿಪ್ರೇಕ್ಷ್ಯ ಕುರವಃ ಪರ್ಯವಾರಯನ್|
06115023c ದುಃಶಾಸನಂ ಮಹಾರಾಜ ಕಿಮಯಂ ವಕ್ಷ್ಯತೀತಿ ವೈ||
ಮಹಾರಾಜ! ಬರುತ್ತಿರುವ ದುಃಶಾಸನನನ್ನು ನೋಡಿ ಏನಾಯಿತು ಹೇಳು ಎಂದು ಕುರುಗಳು ಅವನನ್ನು ಸುತ್ತುವರೆದರು.
06115024a ತತೋ ದ್ರೋಣಾಯ ನಿಹತಂ ಭೀಷ್ಮಮಾಚಷ್ಟ ಕೌರವಃ|
06115024c ದ್ರೋಣಸ್ತದಪ್ರಿಯಂ ಶ್ರುತ್ವಾ ಸಹಸಾ ನ್ಯಪತದ್ರಥಾತ್||
ಆಗ ಕೌರವನು ಭೀಷ್ಮನು ನಿಹತನಾದುದನ್ನು ದ್ರೋಣನಿಗೆ ಹೇಳಿದನು. ಆ ಅಪ್ರಿಯವಾದುದನ್ನು ಕೇಳಿದ ತಕ್ಷಣ ದ್ರೋಣನು ರಥದಿಂದ ಕೆಳಗೆ ಬಿದ್ದನು.
06115025a ಸ ಸಂಜ್ಞಾಮುಪಲಭ್ಯಾಥ ಭಾರದ್ವಾಜಃ ಪ್ರತಾಪವಾನ್|
06115025c ನಿವಾರಯಾಮಾಸ ತದಾ ಸ್ವಾನ್ಯನೀಕಾನಿ ಮಾರಿಷ||
ಆಗ ಸಂಜ್ಞೆಗಳನ್ನು ಹಿಂದೆ ಪಡೆದು ಪ್ರತಾಪವಾನ ಭಾರದ್ವಾಜನು ತನ್ನ ಸೇನೆಗಳು ಯುದ್ಧವನ್ನು ನಿಲ್ಲಿಸುವಂತೆ ಮಾಡಿದನು.
06115026a ವಿನಿವೃತ್ತಾನ್ಕುರೂನ್ದೃಷ್ಟ್ವಾ ಪಾಂಡವಾಪಿ ಸ್ವಸೈನಿಕಾನ್|
06115026c ದೂತೈಃ ಶೀಘ್ರಾಶ್ವಸಮ್ಯುಕ್ತೈರವಹಾರಮಕಾರಯನ್||
ಕುರುಗಳು ವಿನಿವೃತ್ತರಾದುದನ್ನು ಕಂಡು ಪಾಂಡವರು ಕೂಡ ಶೀಘ್ರಗ ದೂತರನ್ನು ಕಳುಹಿಸಿ ಎಲ್ಲ ವಲಯಗಳಲ್ಲಿಯೂ ಯುದ್ಧವನ್ನು ನಿಲ್ಲಿಸುವಂತೆ ಮಾಡಿದರು.
06115027a ವಿನಿವೃತ್ತೇಷು ಸೈನ್ಯೇಷು ಪಾರಂಪರ್ಯೇಣ ಸರ್ವಶಃ|
06115027c ವಿಮುಕ್ತಕವಚಾಃ ಸರ್ವೇ ಭೀಷ್ಮಮೀಯುರ್ನರಾಧಿಪಾಃ||
ಎರಡು ಸೇನೆಗಳು ವಿನಿವೃತ್ತರಾದ ನಂತರ ಪರಂಪರೆಯಂತೆ ಎಲ್ಲ ನರಾಧಿಪರೂ ಕವಚಗಳನ್ನು ಬಿಚ್ಚಿಟ್ಟು ಭೀಷ್ಮನ ಬಳಿ ಬಂದರು.
06115028a ವ್ಯುಪಾರಮ್ಯ ತತೋ ಯುದ್ಧಾದ್ಯೋಧಾಃ ಶತಸಹಸ್ರಶಃ|
06115028c ಉಪತಸ್ಥುರ್ಮಹಾತ್ಮಾನಂ ಪ್ರಜಾಪತಿಮಿವಾಮರಾಃ||
ಆಗ ನೂರಾರು ಸಹಸ್ರಾರು ಯೋಧರು ಯುದ್ಧದಿಂದ ಹಿಂದಿರುಗಿ ಅಮರರು ಪ್ರಜಾಪತಿಯನ್ನು ಹೇಗೋ ಹಾಗೆ ಆ ಮಹಾತ್ಮನ ಬಳಿಸಾರಿದರು.
06115029a ತೇ ತು ಭೀಷ್ಮಂ ಸಮಾಸಾದ್ಯ ಶಯಾನಂ ಭರತರ್ಷಭಂ|
06115029c ಅಭಿವಾದ್ಯ ವ್ಯತಿಷ್ಠಂತ ಪಾಂಡವಾಃ ಕುರುಭಿಃ ಸಹ||
ಮಲಗಿದ್ದ ಆ ಭರತರ್ಷಭ ಭೀಷ್ಮನ ಬಳಿಬಂದು ಪಾಂಡವರೂ ಕುರುಗಳೂ ಒಟ್ಟಿಗೇ ಅಭಿವಂದಿಸಿ ನಿಂತುಕೊಂಡರು.
06115030a ಅಥ ಪಾಂಡೂನ್ಕುರೂಂಶ್ಚೈವ ಪ್ರಣಿಪತ್ಯಾಗ್ರತಃ ಸ್ಥಿತಾನ್|
06115030c ಅಭ್ಯಭಾಷತ ಧರ್ಮಾತ್ಮಾ ಭೀಷ್ಮಃ ಶಾಂತನವಸ್ತದಾ||
ಕೈಮುಗಿದು ಮುಂದೆ ನಿಂತಿದ್ದ ಪಾಂಡವರನ್ನೂ ಕುರುಗಳನ್ನೂ ಉದ್ದೇಶಿಸಿ ಧರ್ಮಾತ್ಮ ಭೀಷ್ಮ ಶಾಂತನವನು ಹೀಗೆ ಹೇಳಿದನು:
06115031a ಸ್ವಾಗತಂ ವೋ ಮಹಾಭಾಗಾಃ ಸ್ವಾಗತಂ ವೋ ಮಹಾರಥಾಃ|
06115031c ತುಷ್ಯಾಮಿ ದರ್ಶನಾಚ್ಚಾಹಂ ಯುಷ್ಮಾಕಮಮರೋಪಮಾಃ||
“ಮಹಾಭಾಗರೇ! ನಿಮಗೆ ಸ್ವಾಗತ! ಮಹಾರಥರೇ! ನಿಮಗೆ ಸ್ವಾಗತ! ಅಮರೋಪಮರಾಗಿರುವ ನಿಮ್ಮ ದರ್ಶನದಿಂದ ನಾನು ತೃಪ್ತನಾಗಿದ್ದೇನೆ.”
06115032a ಅಭಿನಂದ್ಯ ಸ ತಾನೇವಂ ಶಿರಸಾ ಲಂಬತಾಬ್ರವೀತ್|
06115032c ಶಿರೋ ಮೇ ಲಂಬತೇಽತ್ಯರ್ಥಂ ಉಪಧಾನಂ ಪ್ರದೀಯತಾಂ||
ಈ ರೀತಿ ಅವರನ್ನು ಅಭಿನಂದಿಸಿ ಅವನು ತನ್ನ ತಲೆಯು ಜೋಲಾಡುತ್ತಿರಲು “ನನ್ನ ಶಿರವು ಜೋಲಾಡುತ್ತಿದೆ. ಇದಕ್ಕೆ ಉಪಧಾನವನ್ನು ನೀಡಿ!” ಎಂದು ಹೇಳಿದನು.
06115033a ತತೋ ನೃಪಾಃ ಸಮಾಜಹ್ರುಸ್ತನೂನಿ ಚ ಮೃದೂನಿ ಚ|
06115033c ಉಪಧಾನಾನಿ ಮುಖ್ಯಾನಿ ನೈಚ್ಛತ್ತಾನಿ ಪಿತಾಮಹಃ||
ಆಗ ನೃಪರು ಕೋಮಲವೂ ಮೃದುವೂ ಆದ ಹಲವು ತಲೆದಿಂಬುಗಳನ್ನು ತಂದರು. ಆದರೆ ಪಿತಾಮಹನು ಅವುಗಳ್ಯಾವುದನ್ನೂ ಇಷ್ಟಪಡಲಿಲ್ಲ.
06115034a ಅಬ್ರವೀಚ್ಚ ನರವ್ಯಾಘ್ರಃ ಪ್ರಹಸನ್ನಿವ ತಾನ್ನೃಪಾನ್|
06115034c ನೈತಾನಿ ವೀರಶಯ್ಯಾಸು ಯುಕ್ತರೂಪಾಣಿ ಪಾರ್ಥಿವಾಃ||
ನರವ್ಯಾಘ್ರನು ನಗುತ್ತಾ ಆ ನೃಪರಿಗೆ ಹೇಳಿದನು: “ಪಾರ್ಥಿವರೇ! ವೀರಶಯ್ಯೆಗೆ ಇವು ತಕ್ಕುದಾದವಲ್ಲ!”
06115035a ತತೋ ವೀಕ್ಷ್ಯ ನರಶ್ರೇಷ್ಠಮಭ್ಯಭಾಷತ ಪಾಂಡವಂ|
06115035c ಧನಂಜಯಂ ದೀರ್ಘಬಾಹುಂ ಸರ್ವಲೋಕಮಹಾರಥಂ||
ಆಗ ಸರ್ವಲೋಕಮಹಾರಥ ದೀರ್ಘಬಾಹು ಪಾಂಡವ ನರಶ್ರೇಷ್ಠ ಧನಂಜಯನನ್ನು ವೀಕ್ಷಿಸಿ ಹೇಳಿದನು:
06115036a ಧನಂಜಯ ಮಹಾಬಾಹೋ ಶಿರಸೋ ಮೇಽಸ್ಯ ಲಂಬತಃ|
06115036c ದೀಯತಾಂ ಉಪಧಾನಂ ವೈ ಯದ್ಯುಕ್ತಮಿಹ ಮನ್ಯಸೇ||
“ಧನಂಜಯ ಮಹಾಬಾಹೋ! ನನ್ನ ಈ ಶಿರಸ್ಸು ಜೋಲಾಡುತ್ತಿದೆ. ಇದಕ್ಕೆ ಯುಕ್ತವಾದುದು ಏನೆಂದು ನೀನು ಯೋಚಿಸುತ್ತೀಯೋ ಅಂತಹ ತಲೆದಿಂಬನ್ನು ನೀಡು!”
06115037a ಸ ಸಂನ್ಯಸ್ಯ ಮಹಚ್ಚಾಪಮಭಿವಾದ್ಯ ಪಿತಾಮಹಂ|
06115037c ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ಇದಂ ವಚನಮಬ್ರವೀತ್||
ಅವನು ಮಹಾಚಾಪವನ್ನು ಕೆಳಗಿಟ್ಟು, ಪಿತಾಮಹನನ್ನು ನಮಸ್ಕರಿಸಿ, ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಈ ಮಾತನ್ನಾಡಿದನು:
06115038a ಆಜ್ಞಾಪಯ ಕುರುಶ್ರೇಷ್ಠ ಸರ್ವಶಸ್ತ್ರಭೃತಾಂ ವರ|
06115038c ಪ್ರೇಷ್ಯೋಽಹಂ ತವ ದುರ್ಧರ್ಷ ಕ್ರಿಯತಾಂ ಕಿಂ ಪಿತಾಮಹ||
“ಕುರುಶ್ರೇಷ್ಠ! ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ! ಆಜ್ಞಾಪಿಸು! ದುರ್ಧರ್ಷ! ಪಿತಾಮಹ! ನಾನು ನಿನ್ನ ಸೇವಕ. ಏನು ಮಾಡಲಿ?”
06115039a ತಮಬ್ರವೀಚ್ಚಾಂತನವಃ ಶಿರೋ ಮೇ ತಾತ ಲಂಬತೇ|
06115039c ಉಪಧಾನಂ ಕುರುಶ್ರೇಷ್ಠ ಫಲ್ಗುನೋಪನಯಸ್ವ ಮೇ|
06115039e ಶಯನಸ್ಯಾನುರೂಪಂ ಹಿ ಶೀಘ್ರಂ ವೀರ ಪ್ರಯಚ್ಛ ಮೇ||
ಶಾಂತನವನು ಅವನಿಗೆ ಹೇಳಿದನು: “ಮಗೂ! ನನ್ನ ಶಿರವು ಜೋಲಾಡುತ್ತಿದೆ. ಕುರುಶ್ರೇಷ್ಠ! ಫಲ್ಗುನ! ನನಗೆ ತಲೆದಿಂಬನ್ನು ಮಾಡಿಕೊಡು. ವೀರ! ಈ ಶಯನಕ್ಕೆ ಅನುರೂಪವಾದುದನ್ನು ಶೀಘ್ರವಾಗಿ ನೀಡು!
06115040a ತ್ವಂ ಹಿ ಪಾರ್ಥ ಮಹಾಬಾಹೋ ಶ್ರೇಷ್ಠಃ ಸರ್ವಧನುಷ್ಮತಾಂ|
06115040c ಕ್ಷತ್ರಧರ್ಮಸ್ಯ ವೇತ್ತಾ ಚ ಬುದ್ಧಿಸತ್ತ್ವಗುಣಾನ್ವಿತಃ||
ಪಾರ್ಥ! ಮಹಾಬಾಹೋ! ಏಕೆಂದರೆ ನೀನು ಸರ್ವಧನುಷ್ಮತರಲ್ಲಿ ಶ್ರೇಷ್ಠ. ಕ್ಷತ್ರಧರ್ಮವನ್ನು ತಿಳಿದಿರುವೆ. ಬುದ್ಧಿಸತ್ತ್ವಗುಣಾನ್ವಿತನಾಗಿರುವೆ.”
06115041a ಫಲ್ಗುನಸ್ತು ತಥೇತ್ಯುಕ್ತ್ವಾ ವ್ಯವಸಾಯಪುರೋಜವಃ|
06115041c ಪ್ರಗೃಹ್ಯಾಮಂತ್ರ್ಯ ಗಾಂಡೀವಂ ಶರಾಂಶ್ಚ ನತಪರ್ವಣಃ||
ಫಲ್ಗುನನಾದರೋ ಹಾಗೆಯೇ ಆಗಲೆಂದು ಹೇಳಿ ಅವನ ಹೇಳಿಕೆಯನ್ನು ಪೂರೈಸಲು ತೊಡಗಿದನು. ಗಾಂಡೀವವನ್ನು ಹಿಡಿದು ನತಪರ್ವಣ ಶರಗಳನ್ನು ಅಭಿಮಂತ್ರಿಸಿದನು.
06115042a ಅನುಮಾನ್ಯ ಮಹಾತ್ಮಾನಂ ಭರತಾನಾಮಮಧ್ಯಮಂ|
06115042c ತ್ರಿಭಿಸ್ತೀಕ್ಷ್ಣೈರ್ಮಹಾವೇಗೈರುದಗೃಹ್ಣಾಚ್ಚಿರಃ ಶರೈಃ||
ಭರತರ ಪ್ರಮುಖ ಆ ಮಹಾತ್ಮನ ಅನುಮತಿಯನ್ನು ಪಡೆದು ಮಹಾವೇಗದ ಮೂರು ತೀಕ್ಷ್ಣ ಬಾಣಗಳಿಂದ ಅವನ ಶಿರವನ್ನು ಮೇಲಕ್ಕೆತ್ತಿಸಿದನು.
06115043a ಅಭಿಪ್ರಾಯೇ ತು ವಿದಿತೇ ಧರ್ಮಾತ್ಮಾ ಸವ್ಯಸಾಚಿನಾ|
06115043c ಅತುಷ್ಯದ್ಭರತಶ್ರೇಷ್ಠೋ ಭೀಷ್ಮೋ ಧರ್ಮಾರ್ಥತತ್ತ್ವವಿತ್||
ಅಭಿಪ್ರಾಯವನ್ನು ತಿಳಿದುಕೊಂಡ ಧರ್ಮಾತ್ಮ ಸವ್ಯಸಾಚಿಯಿಂದ ಧರ್ಮಾರ್ಥತತ್ತ್ವವಿದು ಭರತಶ್ರೇಷ್ಠ ಭೀಷ್ಮನು ಸಂತುಷ್ಟನಾದನು.
06115044a ಉಪಧಾನೇನ ದತ್ತೇನ ಪ್ರತ್ಯನಂದದ್ಧನಂಜಯಂ|
06115044c ಕುಂತೀಪುತ್ರಂ ಯುಧಾಂ ಶ್ರೇಷ್ಠಂ ಸುಹೃದಾಂ ಪ್ರೀತಿವರ್ಧನಂ||
ನೀಡಿದ ತಲೆದಿಂಬಿಗಾಗಿ ಕುಂತೀಪುತ್ರ ಯೋಧರಲ್ಲಿ ಶ್ರೇಷ್ಠ, ಸುಹೃದಯರ ಪ್ರೀತಿವರ್ಧಕ ಧನಂಜಯನನ್ನು ಪ್ರತಿನಂದಿಸಿದನು:
06115045a ಅನುರೂಪಂ ಶಯಾನಸ್ಯ ಪಾಂಡವೋಪಹಿತಂ ತ್ವಯಾ|
06115045c ಯದ್ಯನ್ಯಥಾ ಪ್ರವರ್ತೇಥಾಃ ಶಪೇಯಂ ತ್ವಾಮಹಂ ರುಷಾ||
“ಪಾಂಡವ! ಹಾಸಿಗೆಗೆ ತಕ್ಕುದಾದ ತಲೆದಿಂಬನ್ನೇ ಒದಗಿಸಿಕೊಟ್ಟಿದ್ದೀಯೆ. ಬೇರೆ ಏನನ್ನಾದರೂ ಕೊಟ್ಟಿದ್ದರೆ ಸಿಟ್ಟಿನಿಂದ ನಾನು ನಿನ್ನನ್ನು ಶಪಿಸುತ್ತಿದ್ದೆ.
06115046a ಏವಮೇತನ್ಮಹಾಬಾಹೋ ಧರ್ಮೇಷು ಪರಿನಿಷ್ಠಿತಂ|
06115046c ಸ್ವಪ್ತವ್ಯಂ ಕ್ಷತ್ರಿಯೇಣಾಜೌ ಶರತಲ್ಪಗತೇನ ವೈ||
ಮಹಾಬಾಹೋ! ಧರ್ಮದಲ್ಲಿ ನಿಷ್ಠೆಯನ್ನಿಟ್ಟಿರುವ ಕ್ಷತ್ರಿಯರು ಇದೇ ರೀತಿಯ ಶರತಲ್ಪದ ಮೇಲೆ ಮಲಗಬೇಕು.”
06115047a ಏವಮುಕ್ತ್ವಾ ತು ಬೀಭತ್ಸುಂ ಸರ್ವಾಂಸ್ತಾನಬ್ರವೀದ್ವಚಃ|
06115047c ರಾಜ್ಞಶ್ಚ ರಾಜಪುತ್ರಾಂಶ್ಚ ಪಾಂಡವೇನಾಭಿ ಸಂಸ್ಥಿತಾನ್||
ಬೀಭತ್ಸುವಿಗೆ ಹೀಗೆ ಹೇಳಿ ಪಾಂಡವರ ಹತ್ತಿರ ನಿಂತಿದ್ದ ಎಲ್ಲ ರಾಜರು ಮತ್ತು ರಾಜಪುತ್ರರಿಗೆ ಹೇಳಿದನು:
06115048a ಶಯೇಯಮಸ್ಯಾಂ ಶಯ್ಯಾಯಾಂ ಯಾವದಾವರ್ತನಂ ರವೇಃ|
06115048c ಯೇ ತದಾ ಪಾರಯಿಷ್ಯಂತಿ ತೇ ಮಾಂ ದ್ರಕ್ಷ್ಯಂತಿ ವೈ ನೃಪಾಃ||
“ನೃಪರೇ! ಈ ಹಾಸಿಗೆಯನ್ನು ನೋಡಿ. ಈ ಶಯ್ಯೆಯಲ್ಲಿಯೇ ನಾನು ರವಿಯ ಆವರ್ತನದವರೆಗೆ ಮಲಗಿರುತ್ತೇನೆ.
06115049a ದಿಶಂ ವೈಶ್ರವಣಾಕ್ರಾಂತಾಂ ಯದಾ ಗಂತಾ ದಿವಾಕರಃ|
06115049c ಅರ್ಚಿಷ್ಮಾನ್ಪ್ರತಪಽಲ್ಲೋಕಾನ್ರಥೇನೋತ್ತಮತೇಜಸಾ|
06115049e ವಿಮೋಕ್ಷ್ಯೇಽಹಂ ತದಾ ಪ್ರಾಣಾನ್ಸುಹೃದಃ ಸುಪ್ರಿಯಾನಪಿ||
ಯಾವಾಗ ವೈಶ್ರವಣನಿರುವ ದಿಕ್ಕಿಗೆ ಉತ್ತಮ ತೇಜಸ್ಸಿನ ರಥದಲ್ಲಿ ಕಿರಣಗಳಿಂದ ಲೋಕಗಳನ್ನು ಸುಡುತ್ತಾ ದಿವಾಕರನು ಹೋಗುತ್ತಾನೋ ಆವಾಗ ನಾನು ಸುಹೃದವೂ ಸುಪ್ರಿಯವೂ ಆದ ಪ್ರಾಣಗಳನ್ನು ಬಿಡುತ್ತೇನೆ.
06115050a ಪರಿಖಾ ಖನ್ಯತಾಮತ್ರ ಮಮಾವಸದನೇ ನೃಪಾಃ|
06115050c ಉಪಾಸಿಷ್ಯೇ ವಿವಸ್ವಂತಮೇವಂ ಶರಶತಾಚಿತಃ|
06115050e ಉಪಾರಮಧ್ವಂ ಸಂಗ್ರಾಮಾದ್ವೈರಾಣ್ಯುತ್ಸೃಜ್ಯ ಪಾರ್ಥಿವಾಃ||
ನೃಪರೇ! ನಾನಿರುವ ಇಲ್ಲಿ ಸುತ್ತಲೂ ಕಂದಕವನ್ನು ತೋಡಿರಿ. ನೂರಾರು ಶರಗಳಿಂದ ಚುಚ್ಚಲ್ಪಟ್ಟ ನಾನು ಇಲ್ಲಿಯೇ ವಿವಸ್ವತನನ್ನು ಧ್ಯಾನಿಸುತ್ತಿರುತ್ತೇನೆ. ಪಾರ್ಥಿವರೇ! ಈಗಲಾದರೂ ನೀವು ವೈರತ್ವವನ್ನು ಬಿಸುಟು ಯುದ್ಧದಿಂದ ವಿರತರಾಗಿರಿ!”
06115051a ಉಪಾತಿಷ್ಠನ್ನಥೋ ವೈದ್ಯಾಃ ಶಲ್ಯೋದ್ಧರಣಕೋವಿದಾಃ|
06115051c ಸರ್ವೋಪಕರಣೈರ್ಯುಕ್ತಾಃ ಕುಶಲಾಸ್ತೇ ಸುಶಿಕ್ಷಿತಾಃ||
ಆಗ ಶರೀರದಲ್ಲಿ ಚುಚ್ಚುಕೊಂಡಿರುವ ಬಾಣಗಳನ್ನು ತೆಗೆಯುವುದರಲ್ಲಿ ಕುಶಲರಾದ ಸಕಲವಿಧದ ಉಪಕರಣಗಳಿಂದಲೂ ಯುಕ್ತರಾದ ಕುಶಲರೂ ಸುಶಿಕ್ಷಿತರೂ ಆದ ವೈದ್ಯರು ಬಂದರು.
06115052a ತಾನ್ದೃಷ್ಟ್ವಾ ಜಾಹ್ನವೀಪುತ್ರಃ ಪ್ರೋವಾಚ ವಚನಂ ತದಾ|
06115052c ದತ್ತದೇಯಾ ವಿಸೃಜ್ಯಂತಾಂ ಪೂಜಯಿತ್ವಾ ಚಿಕಿತ್ಸಕಾಃ||
ಅವರನ್ನು ನೋಡಿ ಜಾಹ್ನವೀ ಪುತ್ರನು ಈ ಮಾತುಗಳನ್ನು ಹೇಳಿದನು: “ಈ ಚಿಕಿತ್ಸಕರಿಗೆ ಕೊಡಬೇಕಾದುದನ್ನು ಕೊಟ್ಟು ಗೌರವಿಸಿ ಕಳುಹಿಸಿಕೊಡಿ.
06115053a ಏವಂಗತೇ ನ ಹೀದಾನೀಂ ವೈದ್ಯೈಃ ಕಾರ್ಯಮಿಹಾಸ್ತಿ ಮೇ|
06115053c ಕ್ಷತ್ರಧರ್ಮಪ್ರಶಸ್ತಾಂ ಹಿ ಪ್ರಾಪ್ತೋಽಸ್ಮಿ ಪರಮಾಂ ಗತಿಂ||
ನಾನು ಈ ಅವಸ್ಥೆಯಲ್ಲಿರುವಾಗ ವೈದ್ಯರಿಗೆ ಇಲ್ಲಿ ಯಾವ ಕೆಲಸವೂ ಇಲ್ಲ. ಕ್ಷತ್ರಧರ್ಮವು ಪ್ರಶಂಸೆಮಾಡುವ ಉತ್ತಮ ಗತಿಯನ್ನು ನಾನು ಹೊಂದಿದ್ದೇನೆ.
06115054a ನೈಷ ಧರ್ಮೋ ಮಹೀಪಾಲಾಃ ಶರತಲ್ಪಗತಸ್ಯ ಮೇ|
06115054c ಏತೈರೇವ ಶರೈಶ್ಚಾಹಂ ದಗ್ಧವ್ಯೋಽಂತೇ ನರಾಧಿಪಾಃ||
ಮಹೀಪಾಲರೇ! ಶರತಲ್ಪಗತನಾಗಿರುವ ನನಗೆ ಇದು ಧರ್ಮವಾಗುವುದಿಲ್ಲ. ನರಾಧಿಪರೇ! ಈ ಬಾಣಗಳೊಂದಿಗೇ ಅಂತ್ಯದಲ್ಲಿ ದಗ್ಧನಾಗಬೇಕೆಂದು ಇಚ್ಚಿಸುತ್ತೇನೆ.”
06115055a ತಚ್ಚ್ರುತ್ವಾ ವಚನಂ ತಸ್ಯ ಪುತ್ರೋ ದುರ್ಯೋಧನಸ್ತವ|
06115055c ವೈದ್ಯಾನ್ವಿಸರ್ಜಯಾಮಾಸ ಪೂಜಯಿತ್ವಾ ಯಥಾರ್ಹತಃ||
ಅವನ ಆ ಮಾತನ್ನು ಕೇಳಿ ನಿನ್ನ ಪುತ್ರ ದುರ್ಯೋಧನನು ಯಥಾರ್ಹವಾಗಿ ವೈದ್ಯರನ್ನು ಗೌರವಿಸಿ ಕಳುಹಿಸಿಕೊಟ್ಟನು.
06115056a ತತಸ್ತೇ ವಿಸ್ಮಯಂ ಜಗ್ಮುರ್ನಾನಾಜನಪದೇಶ್ವರಾಃ|
06115056c ಸ್ಥಿತಿಂ ಧರ್ಮೇ ಪರಾಂ ದೃಷ್ಟ್ವಾ ಭೀಷ್ಮಸ್ಯಾಮಿತತೇಜಸಃ||
ಅಮಿತತೇಜಸ್ವಿ ಭೀಷ್ಮನ ಪರಮ ಧರ್ಮನಿಷ್ಠೆಯನ್ನು ನೋಡಿ ನಾನಾ ಜನಪದೇಶ್ವರರು ವಿಸ್ಮಯಗೊಂಡರು.
06115057a ಉಪಧಾನಂ ತತೋ ದತ್ತ್ವಾ ಪಿತುಸ್ತವ ಜನೇಶ್ವರ|
06115057c ಸಹಿತಾಃ ಪಾಂಡವಾಃ ಸರ್ವೇ ಕುರವಶ್ಚ ಮಹಾರಥಾಃ||
06115058a ಉಪಗಮ್ಯ ಮಹಾತ್ಮಾನಂ ಶಯಾನಂ ಶಯನೇ ಶುಭೇ|
06115058c ತೇಽಭಿವಾದ್ಯ ತತೋ ಭೀಷ್ಮಂ ಕೃತ್ವಾ ಚಾಭಿಪ್ರದಕ್ಷಿಣಂ||
ಜನೇಶ್ವರ! ನಿನ್ನ ತಂದೆಗೆ ತಲೆದಿಂಬನ್ನು ಮಾಡಿಕೊಟ್ಟು ಪಾಂಡವರು ಮತ್ತು ಕೌರವರ ಸಹಿತ ಎಲ್ಲ ಮಹಾರಥರೂ ಶುಭ ಶಯನದಲ್ಲಿ ಮಲಗಿದ್ದ ಮಹಾತ್ಮ ಭೀಷ್ಮನ ಬಳಿಸಾರಿ ಪ್ರದಕ್ಷಿಣೆಗಳನ್ನೂ ಮಾಡಿ ಅಭಿವಂದಿಸಿದರು.
06115059a ವಿಧಾಯ ರಕ್ಷಾಂ ಭೀಷ್ಮಸ್ಯ ಸರ್ವ ಏವ ಸಮಂತತಃ|
06115059c ವೀರಾಃ ಸ್ವಶಿಬಿರಾಣ್ಯೇವ ಧ್ಯಾಯಂತಃ ಪರಮಾತುರಾಃ||
06115059e ನಿವೇಶಾಯಾಭ್ಯುಪಾಗಚ್ಛನ್ಸಾಯಾಹ್ನೇ ರುಧಿರೋಕ್ಷಿತಾಃ||
ಭೀಷ್ಮನಿಗೆ ಎಲ್ಲ ಕಡೆಗಳಿಂದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಸಾಯಂಕಾಲ ರಕ್ತಸಿಕ್ತರಾದ ವೀರರು ತಮ್ಮ ತಮ್ಮ ಶಿಬಿರಗಳನ್ನು ಸ್ಮರಿಸಿಕೊಳ್ಳುತ್ತಾ ಪರಮ ಆತುರದಿಂದ ಬಿಡಾರಗಳಿಗೆ ತೆರಳಿದರು.
06115060a ನಿವಿಷ್ಟಾನ್ಪಾಂಡವಾಂಶ್ಚಾಪಿ ಪ್ರೀಯಮಾಣಾನ್ಮಹಾರಥಾನ್|
06115060c ಭೀಷ್ಮಸ್ಯ ಪತನಾದ್ಧೃಷ್ಟಾನುಪಗಮ್ಯ ಮಹಾರಥಾನ್||
06115060e ಉವಾಚ ಯಾದವಃ ಕಾಲೇ ಧರ್ಮಪುತ್ರಂ ಯುಧಿಷ್ಠಿರಂ||
ಭೀಷ್ಮನ ಪತನದಿಂದ ಹೃಷ್ಟರಾಗಿ, ಪರಮ ಪ್ರೀತರಾಗಿದ್ದ ಮಹಾರಥ ಪಾಂಡವರ ಬಳಿಬಂದು ಯಾದವನು ಕಾಲಕ್ಕೆ ತಕ್ಕಂತೆ ಧರ್ಮಪುತ್ರ ಯುಧಿಷ್ಠಿರನಿಗೆ ಹೇಳಿದನು:
06115061a ದಿಷ್ಟ್ಯಾ ಜಯಸಿ ಕೌರವ್ಯ ದಿಷ್ಟ್ಯಾ ಭೀಷ್ಮೋ ನಿಪಾತಿತಃ|
06115061c ಅವಧ್ಯೋ ಮಾನುಷೈರೇಷ ಸತ್ಯಸಂಧೋ ಮಹಾರಥಃ||
06115062a ಅಥ ವಾ ದೈವತೈಃ ಪಾರ್ಥ ಸರ್ವಶಸ್ತ್ರಾಸ್ತ್ರಪಾರಗಃ|
06115062c ತ್ವಾಂ ತು ಚಕ್ಷುರ್ಹಣಂ ಪ್ರಾಪ್ಯ ದಗ್ಧೋ ಘೋರೇಣ ಚಕ್ಷುಷಾ||
“ಕೌರವ್ಯ! ಅದೃಷ್ಟವಷಾತ್ ವಿಜಯಿಗಾಗಿರುವೆ. ಅದೃಷ್ಟವಷಾತ್ ಭೀಷ್ಮನು ಕೆಳಗುರುಳಿದನು. ಪಾರ್ಥ! ಈ ಸತ್ಯಸಂಧ ಮಹಾರಥನು, ಸರ್ವಶಸ್ತ್ರಪಾರಗನು ಮನುಷ್ಯರಿಂದ ಅಥವಾ ದೇವತೆಗಳಿಂದ ಅವಧ್ಯ. ಕೇವಲ ದೃಷ್ಟಿಪಾತದಿಂದಲೇ ಇತರರನ್ನು ಧ್ವಂಸಮಾಡಬಲ್ಲ ನಿನ್ನನ್ನು ಸಮೀಪಿಸಿದ ಅವನು ನಿನ್ನ ಘೋರ ದೃಷ್ಟಿಯಿಂದಲೇ ದಗ್ಧನಾದನು.”
06115063a ಏವಮುಕ್ತೋ ಧರ್ಮರಾಜಃ ಪ್ರತ್ಯುವಾಚ ಜನಾರ್ದನಂ|
06115063c ತವ ಪ್ರಸಾದಾದ್ವಿಜಯಃ ಕ್ರೋಧಾತ್ತವ ಪರಾಜಯಃ||
06115063e ತ್ವಂ ಹಿ ನಃ ಶರಣಂ ಕೃಷ್ಣ ಭಕ್ತಾನಾಮಭಯಂಕರಃ||
ಹೀಗೆ ಹೇಳಿದ ಜನಾರ್ದನನಿಗೆ ಧರ್ಮರಾಜನು ಉತ್ತರಿಸಿದನು: “ನಿನ್ನ ಪ್ರಸಾದದಿಂದ ಜಯ. ನಿನ್ನ ಕ್ರೋಧದಿಂದ ಪರಾಜಯ. ಭಕ್ತರಿಗೆ ಅಭಯಂಕರನಾಗಿರುವ ಕೃಷ್ಣ! ನೀನೇ ನಮಗೆ ಶರಣ್ಯ.
06115064a ಅನಾಶ್ಚರ್ಯೋ ಜಯಸ್ತೇಷಾಂ ಯೇಷಾಂ ತ್ವಮಸಿ ಕೇಶವ|
06115064c ರಷ್ಕಿತಾ ಸಮರೇ ನಿತ್ಯಂ ನಿತ್ಯಂ ಚಾಪಿ ಹಿತೇ ರತಃ|
06115064e ಸರ್ವಥಾ ತ್ವಾಂ ಸಮಾಸಾದ್ಯ ನಾಶ್ಚರ್ಯಮಿತಿ ಮೇ ಮತಿಃ||
ಕೇಶವ! ನೀನು ಯಾರವನಾಗಿರುವೆಯೋ ಅವರಿಗೆ ಜಯವೊದಗಿದರೆ ಆಶ್ಚರ್ಯವೇನಿಲ್ಲ. ಸಮರದಲ್ಲಿ ನಿತ್ಯವೂ ನೀನು ನಮಗೆ ರಕ್ಷಕ. ನಿತ್ಯವೂ ನೀನು ನಮ್ಮ ಹಿತರತ. ಸರ್ವಥಾ ನಿನ್ನನ್ನು ಪಡೆದಿರುವಾಗ ಇದು ಆಶ್ಚರ್ಯವೇನಲ್ಲ ಎಂದು ನನಗನ್ನಿಸುತ್ತದೆ.”
06115065a ಏವಮುಕ್ತಃ ಪ್ರತ್ಯುವಾಚ ಸ್ಮಯಮಾನೋ ಜನಾರ್ದನಃ|
06115065c ತ್ವಯ್ಯೇವೈತದ್ಯುಕ್ತರೂಪಂ ವಚನಂ ಪಾರ್ಥಿವೋತ್ತಮ||
ಹೀಗೆ ಹೇಳಿದುದಕ್ಕೆ ಮುಗುಳ್ನಕ್ಕು ಜನಾರ್ದನನು “ಪಾರ್ಥಿವೋತ್ತಮ! ಈ ಮಾತು ನಿನಗೆ ಯುಕ್ತರೂಪವೇ ಆಗಿದೆ” ಎಂದು ಉತ್ತರಿಸಿದನು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮೋಪಧಾನದಾನೇ ಪಂಚದಶಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮೋಪಧಾನದಾನ ಎನ್ನುವ ನೂರಾಹದಿನೈದನೇ ಅಧ್ಯಾಯವು.