Bhishma Parva: Chapter 108

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೮

ದ್ರೋಣನು ಅಶ್ವತ್ಥಾಮನಿಗೆ ಕಾಣುವ ನಿಮಿತ್ತಗಳು ಭೀಷ್ಮನ ಪತನವನ್ನು ಸೂಚಿಸುತ್ತವೆಯೆಂದೂ ತಾವು ಜೀವದ ಅಸೆ ತೊರೆದು ಯುದ್ಧಮಾಡಬೇಕೆಂದೂ ಹೇಳಿದುದು (೧-೪೧).

06108001 ಸಂಜಯ ಉವಾಚ|

06108001a ಅಥ ವೀರೋ ಮಹೇಷ್ವಾಸೋ ಮತ್ತವಾರಣವಿಕ್ರಮಃ|

06108001c ಸಮಾದಾಯ ಮಹಚ್ಚಾಪಂ ಮತ್ತವಾರಣವಾರಣಂ||

06108002a ವಿಧುನ್ವಾನೋ ಧನುಃ ಶ್ರೇಷ್ಠಂ ದ್ರಾವಯಾಣೋ ಮಹಾರಥಾನ್|

06108002c ಪೃತನಾಂ ಪಾಂಡವೇಯಾನಾಂ ಪಾತಯಾನೋ ಮಹಾರಥಃ||

ಸಂಜಯನು ಹೇಳಿದನು: “ಆಗ ವೀರ ಮಹೇಷ್ವಾಸ, ಮತ್ತವಾರಣವಿಕ್ರಮಿ ಮಹಾರಥ ದ್ರೋಣನು ಮತ್ತವಾರಣವನ್ನೂ ತಡೆಯಬಹುದಾದಂತ ಮಹಾಚಾಪವನ್ನು ಎತ್ತಿ ಹಿಡಿದು ಆ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಮಹಾರಥ ಪಾಂಡವೇಯರ ಸೇನೆಯ ಮೇಲೆ ಎರಗಿದನು.

06108003a ನಿಮಿತ್ತಾನಿ ನಿಮಿತ್ತಜ್ಞಃ ಸರ್ವತೋ ವೀಕ್ಷ್ಯ ವೀರ್ಯವಾನ್|

06108003c ಪ್ರತಪಂತಮನೀಕಾನಿ ದ್ರೋಣಃ ಪುತ್ರಮಭಾಷತ||

ಸೇನೆಗಳ ಮೇಲೆ ಆಕ್ರಮಣಮಾಡುವಾಗ ಎಲ್ಲಕಡೆ ನಿಮಿತ್ತಗಳನ್ನು ವೀಕ್ಷಿಸಿ ವೀರ್ಯವಾನ್ ನಿಮಿತ್ತಜ್ಞ ದ್ರೋಣನು ಮಗನಿಗೆ ಹೇಳಿದನು:

06108004a ಅಯಂ ಸ ದಿವಸಸ್ತಾತ ಯತ್ರ ಪಾರ್ಥೋ ಮಹಾರಥಃ|

06108004c ಜಿಘಾಂಸುಃ ಸಮರೇ ಭೀಷ್ಮಂ ಪರಂ ಯತ್ನಂ ಕರಿಷ್ಯತಿ||

“ಮಗು! ಇಂದಿನ ದಿವಸ ಮಹಾರಥ ಪಾರ್ಥನು ಸಮರದಲ್ಲಿರುವ ಭೀಷ್ಮನನ್ನು ಕೊಲ್ಲಲು ಪರಮ ಯತ್ನವನ್ನು ಮಾಡುತ್ತಾನೆ.

06108005a ಉತ್ಪತಂತಿ ಹಿ ಮೇ ಬಾಣಾ ಧನುಃ ಪ್ರಸ್ಫುರತೀವ ಮೇ|

06108005c ಯೋಗಮಸ್ತ್ರಾಣಿ ಗಚ್ಛಂತಿ ಕ್ರೂರೇ ಮೇ ವರ್ತತೇ ಮತಿಃ||

ನನ್ನ ಬಾಣಗಳು ಕುಪ್ಪಳಿಸುತ್ತಿವೆ. ನನ್ನ ಧನುಸ್ಸು ಆಕಳಿಸುವಂತಿದೆ. ಅಸ್ತ್ರಗಳು ವ್ಯರ್ಥವಾಗುತ್ತಿವೆ. ನನ್ನ ಬುದ್ಧಿಯು ಕ್ರೂರವಾಗಿ ವರ್ತಿಸುತ್ತಿದೆ.

06108006a ದಿಕ್ಷು ಶಾಂತಾಸು ಘೋರಾಣಿ ವ್ಯಾಹರಂತಿ ಮೃಗದ್ವಿಜಾಃ|

06108006c ನೀಚೈರ್ಗೃಧ್ರಾ ನಿಲೀಯಂತೇ ಭಾರತಾನಾಂ ಚಮೂಂ ಪ್ರತಿ||

ಘೋರ ಮೃಗಪಕ್ಷಿಗಳು ದಿಕ್ಕುಗಳಲ್ಲಿ ಕೂಗುತ್ತಿವೆ. ಭಾರತರ ಸೇನೆಯ ಕಡೆ ಕೆಳಗಿನಿಂದ ಹದ್ದುಗಳು ಅದೃಶ್ಯವಾಗುತ್ತಿವೆ.

06108007a ನಷ್ಟಪ್ರಭ ಇವಾದಿತ್ಯಃ ಸರ್ವತೋ ಲೋಹಿತಾ ದಿಶಃ|

06108007c ರಸತೇ ವ್ಯಥತೇ ಭೂಮಿರನುಷ್ಟನತಿ ವಾಹನಂ||

ಆದಿತ್ಯನು ಪ್ರಭೆಯನ್ನು ಕಳೆದುಕೊಂಡಿರುವಂತಿದೆ. ಎಲ್ಲಕಡೆ ದಿಕ್ಕುಗಳು ಕೆಂಪಾಗಿವೆ. ಭೂಮಿಯು ಕಿರುಚಿತ್ತಿರುವಂತಿದೆ. ಕಂಪಿಸುತ್ತಿದೆ.

06108008a ಕಂಕಾ ಗೃಧ್ರಾ ಬಲಾಕಾಶ್ಚ ವ್ಯಾಹರಂತಿ ಮುಹುರ್ಮುಹುಃ|

06108008c ಶಿವಾಶ್ಚಾಶಿವನಿರ್ಘೋಷಾ ವೇದಯಂತ್ಯೋ ಮಹದ್ಭಯಂ||

ಕಂಕಗಳು, ಹದ್ದುಗಳು ಮತ್ತು ಬಲಾಕಗಳು ಮತ್ತೆ ಮತ್ತೆ ಕೂಗುತ್ತಿವೆ. ನರಿಗಳು ಅಶಿವವಾಗಿ ಕೂಗುತ್ತಾ ಮಹಾ ಭಯವನ್ನು ಸೂಚಿಸುತ್ತಿವೆ.

06108009a ಪಪಾತ ಮಹತೀ ಚೋಲ್ಕಾ ಮಧ್ಯೇನಾದಿತ್ಯಮಂಡಲಾತ್|

06108009c ಸಕಬಂಧಶ್ಚ ಪರಿಘೋ ಭಾನುಮಾವೃತ್ಯ ತಿಷ್ಠತಿ||

ಆದಿತ್ಯಮಂಡಲದ ಮಧ್ಯದಿಂದ ಮಹಾ ಉಲ್ಕೆಯೊಂದು ಬಿದ್ದಿತು. ಪರಿಘ ನಕ್ಷತ್ರವು ಶಿರವಿಲ್ಲದೇ ಸೂರ್ಯನ್ನು ಆವರಿಸಿ ನಿಂತಿದೆ.

06108010a ಪರಿವೇಷಸ್ತಥಾ ಘೋರಶ್ಚಂದ್ರಭಾಸ್ಕರಯೋರಭೂತ್|

06108010c ವೇದಯಾನೋ ಭಯಂ ಘೋರಂ ರಾಜ್ಞಾಂ ದೇಹಾವಕರ್ತನಂ||

ಕ್ಷತ್ರಿಯರ ದೇಹ ಕತ್ತರಿಸುವ ಘೋರ ಭಯವನ್ನು ಸೂಚಿಸುತ್ತಾ ಚಂದ್ರ-ಭಾಸ್ಕರರು ಘೋರರೂಪವನ್ನು ತಾಳಿದ್ದಾರೆ.

06108011a ದೇವತಾಯತನಸ್ಥಾಶ್ಚ ಕೌರವೇಂದ್ರಸ್ಯ ದೇವತಾಃ|

06108011c ಕಂಪಂತೇ ಚ ಹಸಂತೇ ಚ ನೃತ್ಯಂತಿ ಚ ರುದಂತಿ ಚ||

ಕೌರವೇಂದ್ರನ ದೇವಾಲಯಗಳಲ್ಲಿರುವ ದೇವತೆಗಳು ಕಂಪಿಸುತ್ತಿವೆ, ನಗುತ್ತಿವೆ, ಕುಣಿಯುತ್ತಿವೆ ಮತ್ತು ರೋದಿಸುತ್ತಿವೆ.

06108012a ಅಪಸವ್ಯಂ ಗ್ರಹಾಶ್ಚಕ್ರುರಲಕ್ಷ್ಮಾಣಂ ನಿಶಾಕರಂ|

06108012c ಅವಾಕ್ಶಿರಾಶ್ಚ ಭಗವಾನುದತಿಷ್ಠತ ಚಂದ್ರಮಾಃ||

ಭಗವಾನ್ ಚಂದ್ರಮನು ಕೊಂಬುಗಳು ಕೆಳಗಾಗಿ ಕಾಣಿಸುತ್ತಿದ್ದಾನೆ.

06108013a ವಪೂಂಷಿ ಚ ನರೇಂದ್ರಾಣಾಂ ವಿಗತಾನೀವ ಲಕ್ಷಯೇ|

06108013c ಧಾರ್ತರಾಷ್ಟ್ರಸ್ಯ ಸೈನ್ಯೇಷು ನ ಚ ಭ್ರಾಜಂತಿ ದಂಶಿತಾಃ||

ಧಾರ್ತರಾಷ್ಟ್ರನ ಸೇನೆಯಲ್ಲಿ ನರೇಂದ್ರರ ಮುಖಗಳು ಮಾಸಿದಂತೆ ಕಾಣುತ್ತಿವೆ. ಅವರ ಕವಚಗಳು ಹೊಳೆಯುತ್ತಿಲ್ಲ.

06108014a ಸೇನಯೋರುಭಯೋಶ್ಚೈವ ಸಮಂತಾಚ್ಚ್ರೂಯತೇ ಮಹಾನ್|

06108014c ಪಾಂಚಜನ್ಯಸ್ಯ ನಿರ್ಘೋಷೋ ಗಾಂಡೀವಸ್ಯ ಚ ನಿಸ್ವನಃ||

ಎರಡೂ ಸೇನೆಗಳಲ್ಲಿ ಎಲ್ಲ ಕಡೆಗಳಿಂದ ಪಾಂಚಜನ್ಯದ ಮಹಾ ನಿರ್ಘೋಷ ಮತ್ತು ಗಾಂಡೀವದ ಟೇಂಕಾರವು ಕೇಳಿ ಬರುತ್ತಿದೆ.

06108015a ಧ್ರುವಮಾಸ್ಥಾಯ ಬೀಭತ್ಸುರುತ್ತಮಾಸ್ತ್ರಾಣಿ ಸಂಯುಗೇ|

06108015c ಅಪಾಸ್ಯಾನ್ಯಾನ್ರಣೇ ಯೋಧಾನಭ್ಯಸ್ಯತಿ ಪಿತಾಮಹಂ||

ನಿಶ್ಚಯವಾಗಿಯೂ ಸಂಯುಗದಲ್ಲಿ ಬೀಭತ್ಸುವು ಉತ್ತಮ ಅಸ್ತ್ರಗಳನ್ನು ಬಳಸಿ ರಣದಲ್ಲಿ ಇತರರನ್ನು ತಪ್ಪಿಸಿಕೊಂಡು ಪಿತಾಮಹನ ಹತ್ತಿರ ಹೋಗುತ್ತಾನೆ.

06108016a ಹೃಷ್ಯಂತಿ ರೋಮಕೂಪಾನಿ ಸೀದತೀವ ಚ ಮೇ ಮನಃ|

06108016c ಚಿಂತಯಿತ್ವಾ ಮಹಾಬಾಹೋ ಭೀಷ್ಮಾರ್ಜುನಸಮಾಗಮಂ||

ಮಹಾಬಾಹೋ! ಭೀಷ್ಮಾರ್ಜುನರ ಸಮಾಗಮವನ್ನು ಯೋಚಿಸಿಯೇ ನನ್ನ ಮನಸ್ಸು ಸುಡುತ್ತಿದೆ ಮತ್ತು ರೋಮಕೂಪಗಳು ಹರ್ಷಿತಗೊಳ್ಳುತ್ತಿವೆ.

06108017a ತಂ ಚೈವ ನಿಕೃತಿಪ್ರಜ್ಞಂ ಪಾಂಚಾಲ್ಯಂ ಪಾಪಚೇತಸಂ|

06108017c ಪುರಸ್ಕೃತ್ಯ ರಣೇ ಪಾರ್ಥೋ ಭೀಷ್ಮಸ್ಯಾಯೋಧನಂ ಗತಃ||

ಆ ಪಾಪಚೇತಸ ನಿಕೃತಿಪ್ರಜ್ಞ ಪಾಂಚಾಲ್ಯನನ್ನು ರಣದಲ್ಲಿ ಮುಂದಿರಿಸಿಕೊಂಡು ಪಾರ್ಥನು ಭೀಷ್ಮನೊಂದಿಗೆ ಯುದ್ಧಮಾಡಲು ಹೋಗಿದ್ದಾನೆ.

06108018a ಅಬ್ರವೀಚ್ಚ ಪುರಾ ಭೀಷ್ಮೋ ನಾಹಂ ಹನ್ಯಾಂ ಶಿಖಂಡಿನಂ|

06108018c ಸ್ತ್ರೀ ಹ್ಯೇಷಾ ವಿಹಿತಾ ಧಾತ್ರಾ ದೈವಾಚ್ಚ ಸ ಪುನಃ ಪುಮಾನ್||

ಹಿಂದೆ ಭೀಷ್ಮನು ಈ ಶಿಖಂಡಿನಿಯನ್ನು ನಾನು ಕೊಲ್ಲುವುದಿಲ್ಲವೆಂದು ಹೇಳಿದ್ದನು. ಏಕೆಂದರೆ ಸ್ತ್ರೀಯೆಂದು ಧಾತ್ರುವಿಂದ ವಿಹಿತಳಾಗಿ ದೈವವಶಾತ್ ಪುನಃ ಪುರುಷನಾಗಿದ್ದಾನೆ.

06108019a ಅಮಂಗಲ್ಯಧ್ವಜಶ್ಚೈವ ಯಾಜ್ಞಸೇನಿರ್ಮಹಾರಥಃ|

06108019c ನ ಚಾಮಂಗಲಕೇತೋಃ ಸ ಪ್ರಹರೇದಾಪಗಾಸುತಃ||

ಮಹಾರಥ ಯಾಜ್ಞಸೇನಿಯು ಅಮಂಗಲಧ್ವಜನೂ[1] ಆಗಿದ್ದಾನೆ. ಅಪಗಾಸುತನು ಆ ಅಮಂಗಲ ಕೇತುವನ್ನು ಪ್ರಹರಿಸುವುದಿಲ್ಲ.

06108020a ಏತದ್ವಿಚಿಂತಯಾನಸ್ಯ ಪ್ರಜ್ಞಾ ಸೀದತಿ ಮೇ ಭೃಶಂ|

06108020c ಅದ್ಯೈವ ತು ರಣೇ ಪಾರ್ಥಃ ಕುರುವೃದ್ಧಮುಪಾದ್ರವತ್||

ಇದನ್ನು ಯೋಚಿಸಿ ನನ್ನ ಪ್ರಜ್ಞೆಯು ತುಂಬಾ ಸಡಿಲವಾಗುತ್ತಿದೆ. ಇಂದು ರಣದಲ್ಲಿ ಪಾರ್ಥನು ಕುರುವೃದ್ಧನನ್ನು ಆಕ್ರಮಿಸುತ್ತಾನೆ.

06108021a ಯುಧಿಷ್ಠಿರಸ್ಯ ಚ ಕ್ರೋಧೋ ಭೀಷ್ಮಾರ್ಜುನಸಮಾಗಮಃ|

06108021c ಮಮ ಚಾಸ್ತ್ರಾಭಿಸಂರಂಭಃ ಪ್ರಜಾನಾಮಶುಭಂ ಧ್ರುವಂ||

ಯುಧಿಷ್ಠಿರನ ಕ್ರೋಧ, ಭೀಮಾರ್ಜುನರ ಸಮಾಗಮ, ನನ್ನ ಅಸ್ತ್ರಗಳ ಸಂಭ್ರಮ ಇವುಗಳಿಂದ ಪ್ರಜೆಗಳಿಗೆ ಅಶುಭವು ನಿಶ್ಚಯ.

06108022a ಮನಸ್ವೀ ಬಲವಾನ್ ಶೂರಃ ಕೃತಾಸ್ತ್ರೋ ದೃಢವಿಕ್ರಮಃ|

06108022c ದೂರಪಾತೀ ದೃಢೇಷುಶ್ಚ ನಿಮಿತ್ತಜ್ಞಶ್ಚ ಪಾಂಡವಃ||

06108023a ಅಜೇಯಃ ಸಮರೇ ಚೈವ ದೇವೈರಪಿ ಸವಾಸವೈಃ|

06108023c ಬಲವಾನ್ಬುದ್ಧಿಮಾಂಶ್ಚೈವ ಜಿತಕ್ಲೇಶೋ ಯುಧಾಂ ವರಃ||

06108024a ವಿಜಯೀ ಚ ರಣೇ ನಿತ್ಯಂ ಭೈರವಾಸ್ತ್ರಶ್ಚ ಪಾಂಡವಃ|

06108024c ತಸ್ಯ ಮಾರ್ಗಂ ಪರಿಹರನ್ದ್ರುತಂ ಗಚ್ಛ ಯತವ್ರತಂ||

ಪಾಂಡವನು ಮನಸ್ವೀ, ಬಲವಾನ, ಶೂರ, ಕೃತಾಸ್ತ್ರ, ದೃಢವಿಕ್ರಮಿ, ಬಹುದೂರ ಹೊಡೆಯಬಲ್ಲವನು, ದೃಢವಾಗಿ ಹಿಡಿಯಬಲ್ಲನು, ಮತ್ತು ನಿಮಿತ್ತಗಳನ್ನು ಅರಿತವನು. ಅವನು ಸಮರದಲ್ಲಿ ವಾಸವನೊಂದಿಗೆ ದೇವತೆಗಳಿಗೂ ಅಜೇಯನು. ಪಾಂಡವನು ಬಲವಾನ್, ಬುದ್ಧಿಮಾನ್, ಕ್ಲೇಶಗಳನ್ನು ಗೆದ್ದವನು, ಯೋಧರಲ್ಲಿ ಶ್ರೇಷ್ಠ, ರಣದಲ್ಲಿ ನಿತ್ಯವೂ ವಿಜಯಿ ಮತ್ತು ಭೈರವನು. ಅವನ ಮಾರ್ಗದಲ್ಲಿಯೇ ಹೋಗಿ ಯತವ್ರತನಲ್ಲಿಗೆ ಹೋಗು.

06108025a ಪಶ್ಯ ಚೈತನ್ಮಹಾಬಾಹೋ ವೈಶಸಂ ಸಮುಪಸ್ಥಿತಂ|

06108025c ಹೇಮಚಿತ್ರಾಣಿ ಶೂರಾಣಾಂ ಮಹಾಂತಿ ಚ ಶುಭಾನಿ ಚ||

06108026a ಕವಚಾನ್ಯವದೀರ್ಯಂತೇ ಶರೈಃ ಸನ್ನತಪರ್ವಭಿಃ|

06108026c ಚಿದ್ಯಂತೇ ಚ ಧ್ವಜಾಗ್ರಾಣಿ ತೋಮರಾಣಿ ಧನೂಂಷಿ ಚ||

ಮಹಾಬಾಹೋ! ಅಲ್ಲಿ ಆಗುವ ವೈಶಮವನ್ನು ನೋಡು. ಶೂರರ ಹೇಮಚಿತ್ರಗಳ, ಮಹಾ ಶುಭ ಕವಚಗಳು ಸನ್ನತಪರ್ವ ಶರಗಳಿಂದ ಸೀಳಲ್ಪಡುತ್ತವೆ. ಧ್ವಜಾಗ್ರಗಳು, ತೋಮರಗಳು ಮತ್ತು ಧನುಸ್ಸುಗಳು ತುಂಡಾಗುತ್ತವೆ.

06108027a ಪ್ರಾಸಾಶ್ಚ ವಿಮಲಾಸ್ತೀಕ್ಷ್ಣಾಃ ಶಕ್ತ್ಯಶ್ಚ ಕನಕೋಜ್ಜ್ವಲಾಃ|

06108027c ವೈಜಯಂತ್ಯಶ್ಚ ನಾಗಾನಾಂ ಸಂಕ್ರುದ್ಧೇನ ಕಿರೀಟಿನಾ||

ಸಂಕ್ರುದ್ಧನಾದ ಕಿರೀಟಿಯು ವಿಮಲ ಪ್ರಾಸಗಳನ್ನೂ, ತೀಕ್ಷ್ಣ ಶಕ್ತಿಗಳನ್ನೂ, ಆನೆಗಳ ಕನಕೋಜ್ಜ್ವಲ ವೈಜಂತಿಗಳನ್ನೂ ಛಿದ್ರಗೊಳಿಸುತ್ತಾನೆ.

06108028a ನಾಯಂ ಸಂರಕ್ಷಿತುಂ ಕಾಲಃ ಪ್ರಾಣಾನ್ಪುತ್ರೋಪಜೀವಿಭಿಃ|

06108028c ಯಾಹಿ ಸ್ವರ್ಗಂ ಪುರಸ್ಕೃತ್ಯ ಯಶಸೇ ವಿಜಯಾಯ ಚ||

ಪುತ್ರ! ಉಪಜೀವನ ಮಾಡುತ್ತಿರುವ ನಮಗೆ ನಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುವ ಕಾಲವಿದಲ್ಲ. ಸ್ವರ್ಗ, ಯಶಸ್ಸು ಮತ್ತು ವಿಜಯಗಳನ್ನು ಮುಂದಿರಿಸಿಕೊಂಡು ಹೋಗು.

06108029a ಹಯನಾಗರಥಾವರ್ತಾಂ ಮಹಾಘೋರಾಂ ಸುದುಸ್ತರಾಂ|

06108029c ರಥೇನ ಸಂಗ್ರಾಮನದೀಂ ತರತ್ಯೇಷ ಕಪಿಧ್ವಜಃ||

ಹಯ-ನಾಗ-ರಥಗಳಿಂದ ಕೂಡಿದ ಈ ಮಹಾಘೋರ ಸುದುಸ್ತರ ಸಂಗ್ರಾಮನದಿಯನ್ನು ಕಪಿಧ್ವಜನು ತನ್ನ ರಥದಿಂದ ದಾಟುತ್ತಾನೆ.

06108030a ಬ್ರಹ್ಮಣ್ಯತಾ ದಮೋ ದಾನಂ ತಪಶ್ಚ ಚರಿತಂ ಮಹತ್|

06108030c ಇಹೈವ ದೃಶ್ಯತೇ ರಾಜ್ಞೋ ಭ್ರಾತಾ ಯಸ್ಯ ಧನಂಜಯಃ||

06108031a ಭೀಮಸೇನಶ್ಚ ಬಲವಾನ್ಮಾದ್ರೀಪುತ್ರೌ ಚ ಪಾಂಡವೌ|

06108031c ವಾಸುದೇವಶ್ಚ ವಾರ್ಷ್ಣೇಯೋ ಯಸ್ಯ ನಾಥೋ ವ್ಯವಸ್ಥಿತಃ||

ಬ್ರಹ್ಮಣ್ಯತೆ, ದಮ, ದಾನ, ತಪಸ್ಸು, ಮತ್ತು ಮಹಾ ಚಾರಿತ್ರ್ಯಗಳನ್ನು ಧನಂಜಯ, ಬಲವಾನ್ ಭೀಮಸೇನ, ಮತ್ತು ಪಾಂಡವ ಮಾದ್ರೀಪುತ್ರರೀರ್ವರ ಭ್ರಾತ, ಯಾರ ನಾಥನು ವಾರ್ಷ್ಣೇಯ ವಾಸುದೇವನೋ ಆ ಧರ್ಮರಾಜನಲ್ಲಿ ಕಾಣುತ್ತವೆ.

06108032a ತಸ್ಯೈಷ ಮನ್ಯುಪ್ರಭವೋ ಧಾರ್ತರಾಷ್ಟ್ರಸ್ಯ ದುರ್ಮತೇಃ|

06108032c ತಪೋದಗ್ಧಶರೀರಸ್ಯ ಕೋಪೋ ದಹತಿ ಭಾರತಾನ್||

ಅದೇ ಪ್ರಭುವಿನ ಕೋಪವು, ತಪಸ್ಸಿನಿಂದ ದಗ್ಧಶರೀರನ ಕೋಪವು ಭಾರತರನ್ನು ಮತ್ತು ದುರ್ಮತಿ ಧಾರ್ತರಾಷ್ಟ್ರನನ್ನು ಸುಡುತ್ತದೆ.

06108033a ಏಷ ಸಂದೃಶ್ಯತೇ ಪಾರ್ಥೋ ವಾಸುದೇವವ್ಯಪಾಶ್ರಯಃ|

06108033c ದಾರಯನ್ಸರ್ವಸೈನ್ಯಾನಿ ಧಾರ್ತರಾಷ್ಟ್ರಾಣಿ ಸರ್ವಶಃ||

ವಾಸುದೇವನನ್ನು ಆಶ್ರಯಿಸಿ ಪಾರ್ಥನು ಧಾರ್ತರಾಷ್ಟ್ರರ ಸರ್ವ ಸೈನ್ಯಗಳನ್ನು ಎಲ್ಲಕಡೆಯಿಂದ ಸೀಳಿಕೊಂಡು ಬರುವುದು ಕಾಣುತ್ತದೆ.

06108034a ಏತದಾಲೋಕ್ಯತೇ ಸೈನ್ಯಂ ಕ್ಷೋಭ್ಯಮಾಣಂ ಕಿರೀಟಿನಾ|

06108034c ಮಹೋರ್ಮಿನದ್ಧಂ ಸುಮಹತ್ತಿಮಿನೇವ ನದೀಮುಖಂ||

ಮಹಾ ತಿಮಿಂಗಿಲವು ದೊಡ್ಡ ಅಲೆಗಳ ಮಹಾ ಸಮುದ್ರವನ್ನು ಹೇಗೋ ಹಾಗೆ ಕಿರೀಟಿಯು ಈ ಸೈನ್ಯವನ್ನು ಕ್ಷೋಭೆಗೊಳಿಸುವುದನ್ನು ನೋಡು.

06108035a ಹಾಹಾಕಿಲಕಿಲಾಶಬ್ದಾಃ ಶ್ರೂಯಂತೇ ಚ ಚಮೂಮುಖೇ|

06108035c ಯಾಹಿ ಪಾಂಚಾಲದಾಯಾದಮಹಂ ಯಾಸ್ಯೇ ಯುಧಿಷ್ಠಿರಂ||

ಸೇನೆಯ ಮುಂಭಾಗದಲ್ಲಿ ಹಾಹಾಕಿಲಿಕಿಲ ಶಬ್ಧಗಳು ಕೇಳಿಬರುತ್ತಿವೆ. ಪಾಂಚಾಲದಾಯದನಲ್ಲಿಗೆ ಹೋಗು. ನಾನು ಯುಧಿಷ್ಠಿರನೊಂದಿಗೆ ಯುದ್ಧಮಾಡುತ್ತೇನೆ.

06108036a ದುರ್ಲಭಂ ಹ್ಯಂತರಂ ರಾಜ್ಞೋ ವ್ಯೂಹಸ್ಯಾಮಿತತೇಜಸಃ|

06108036c ಸಮುದ್ರಕುಕ್ಷಿಪ್ರತಿಮಂ ಸರ್ವತೋಽತಿರಥೈಃ ಸ್ಥಿತೈಃ||

ಎಲ್ಲಕಡೆಗಳಲ್ಲಿಯೂ ಅತಿರಥರು ನಿಂತಿರುವ ಅಮಿತ ತೇಜಸ್ವಿ ರಾಜನ ವ್ಯೂಹದ ಒಳಭಾಗವು ಸಮುದ್ರ ಕುಕ್ಷಿಯಂತೆ ದುರ್ಲಭವಾಗಿದೆ.

06108037a ಸಾತ್ಯಕಿಶ್ಚಾಭಿಮನ್ಯುಶ್ಚ ಧೃಷ್ಟದ್ಯುಮ್ನವೃಕೋದರೌ|

06108037c ಪರಿರಕ್ಷಂತಿ ರಾಜಾನಂ ಯಮೌ ಚ ಮನುಜೇಶ್ವರಂ||

ರಾಜ ಮನುಜೇಶ್ವರನನ್ನು ಸಾತ್ಯಕಿ, ಅಭಿಮನ್ಯು, ಧೃಷ್ಟದ್ಯುಮ್ನ, ವೃಕೋದರರು ಮತ್ತು ಯಮಳರು ರಕ್ಷಿಸುತ್ತಿದ್ದಾರೆ.

06108038a ಉಪೇಂದ್ರಸದೃಶಃ ಶ್ಯಾಮೋ ಮಹಾಶಾಲ ಇವೋದ್ಗತಃ|

06108038c ಏಷ ಗಚ್ಛತ್ಯನೀಕಾನಿ ದ್ವಿತೀಯ ಇವ ಫಲ್ಗುನಃ||

ಇಗೋ! ಉಪೇಂದ್ರಸದೃಶನಾದ ಶ್ಯಾಮವರ್ಣಿ ಮಹಾಶಾಲದಂತೆ ಎತ್ತರನಾಗಿರುವ ಈ ಎರಡನೆಯ ಫಲ್ಗುನಿಯು ಸೇನೆಗಳೊಂದಿಗೆ ಹೋಗುತ್ತಿದ್ದಾನೆ.

06108039a ಉತ್ತಮಾಸ್ತ್ರಾಣಿ ಚಾದತ್ಸ್ವ ಗೃಹೀತ್ವಾನ್ಯನ್ಮಹದ್ಧನುಃ|

06108039c ಪಾರ್ಶ್ವತೋ ಯಾಹಿ ರಾಜಾನಂ ಯುಧ್ಯಸ್ವ ಚ ವೃಕೋದರಂ||

ವತ್ಸ! ಉತ್ತಮ ಅಸ್ತ್ರಗಳನ್ನೂ ಮಹಾಧನುಸ್ಸನ್ನೂ ಹಿಡಿದು ಹೋಗಿ ರಾಜನ ಪಕ್ಕದಲ್ಲಿರುವ ವೃಕೋದರನೊಡನೆ ಯುದ್ಧಮಾಡು.

06108040a ಕೋ ಹಿ ನೇಚ್ಛೇತ್ಪ್ರಿಯಂ ಪುತ್ರಂ ಜೀವಂತಂ ಶಾಶ್ವತೀಃ ಸಮಾಃ|

06108040c ಕ್ಷತ್ರಧರ್ಮಂ ಪುರಸ್ಕೃತ್ಯ ತತಸ್ತ್ವಾ ವಿನಿಯುಜ್ಞಹೇ||

ತನ್ನ ಪ್ರಿಯಪುತ್ರನು ಶಾಶ್ವತ ವರ್ಷಗಳು ಜೀವಿತನಾಗಿರಬೇಕೆಂದು ಯಾರು ತಾನೇ ಇಚ್ಛಿಸುವುದಿಲ್ಲ? ಕ್ಷತ್ರಧರ್ಮವನ್ನು ಪುರಸ್ಕರಿಸಿ ನಿನ್ನನ್ನು ಯುದ್ಧಕ್ಕೆ ನಿಯೋಜಿಸುತ್ತಿದ್ದೇನೆ.

06108041a ಏಷ ಚಾಪಿ ರಣೇ ಭೀಷ್ಮೋ ದಹತೇ ವೈ ಮಹಾಚಮೂಂ|

06108041c ಯುದ್ಧೇ ಸುಸದೃಶಸ್ತಾತ ಯಮಸ್ಯ ವರುಣಸ್ಯ ಚ||

ರಣದಲ್ಲಿ ಈ ಭೀಷ್ಮನೂ ಸಹ ಮಹಾಸೇನೆಯನ್ನು ದಹಿಸುವನು. ಮಗೂ! ಇವನು ಯುದ್ಧದಲ್ಲಿ ಯಮ ಮತ್ತು ವರುಣರ ಸದೃಶನು.””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ರೋಣಾಶ್ವತ್ಥಾಮಸಂವಾದೇ ಅಷ್ಟಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ರೋಣಾಶ್ವತ್ಥಾಮಸಂವಾದ ಎನ್ನುವ ನೂರಾಎಂಟನೇ ಅಧ್ಯಾಯವು.

Image result for indian motifs against white background

[1] ಹರಳುಗಿಡದ ಚಿಹ್ನೆಯು ಶಿಖಂಡಿಯ ಧ್ವಜದಲ್ಲಿದೆ.

Comments are closed.