Bhishma Parva: Chapter 107

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೭

ಸಾತ್ಯಕಿಯೊಡನೆ ಅಲಂಬುಷ-ಭಗದತ್ತರ ಯುದ್ಧ (೧-೧೬). ವಿರಾಟ-ದ್ರುಪದರೊಡನೆ ಅಶ್ವತ್ಥಾಮನ ಯುದ್ಧ (೧೭-೨೬). ಕೃಪ-ಸಹದೇವ, ವಿಕರ್ಣ-ನಕುಲ, ದುರ್ಮುಖ-ಘಟೋತ್ಕಚ, ಕೃತವರ್ಮ-ಧೃಷ್ಟದ್ಯುಮ್ನ, ಭೂರಿಶ್ರವ-ಭೀಮಸೇನ, ದ್ರೋಣ-ಯುಧಿಷ್ಠಿರ, ಚಿತ್ರಸೇನ-ಚೇಕಿತಾನ, ಮತ್ತು ದುಃಶಾಸನ-ಅರ್ಜುನರ ದ್ವಂದ್ವಯುದ್ಧಗಳು; ಕೌರವ ಸೇನೆಯನ್ನು ವಧಿಸುತ್ತಾ ಪಾಂಡವ ಸೇನೆಯು ಭೀಷ್ಮನ ಕಡೆ ಮುಂದುವರೆದುದು (೨೭-೫೫).

06107001 ಸಂಜಯ ಉವಾಚ|

06107001a ಸಾತ್ಯಕಿಂ ದಂಶಿತಂ ಯುದ್ಧೇ ಭೀಷ್ಮಾಯಾಭ್ಯುದ್ಯತಂ ತದಾ|

06107001c ಆರ್ಶ್ಯಶೃಂಗಿರ್ಮಹೇಷ್ವಾಸೋ ವಾರಯಾಮಾಸ ಸಂಯುಗೇ||

ಸಂಜಯನು ಹೇಳಿದನು: “ಭೀಷ್ಮನೊಂದಿಗೆ ಯುದ್ಧಮಾಡಲು ಕವಚವನ್ನು ಧರಿಸಿ ಬರುತ್ತಿದ್ದ ಸಾತ್ಯಕಿಯನ್ನು ಸಂಯುಗದಲ್ಲಿ ಮಹೇಷ್ವಾಸ ಆರ್ಶ್ಯಶೃಂಗಿ (ಅಲಂಬುಷನು) ಯು ತಡೆದನು.

06107002a ಮಾಧವಸ್ತು ಸುಸಂಕ್ರುದ್ಧೋ ರಾಕ್ಷಸಂ ನವಭಿಃ ಶರೈಃ|

06107002c ಆಜಘಾನ ರಣೇ ರಾಜನ್ಪ್ರಹಸನ್ನಿವ ಭಾರತ||

ಭಾರತ! ಮಾಧವನಾದರೋ ಸುಸಂಕ್ರುದ್ಧನಾಗಿ ರಣದಲ್ಲಿ ನಕ್ಕವನಂತೆ ರಾಕ್ಷಸನನ್ನು ಒಂಭತ್ತು ಶರಗಳಿಂದ ಹೊಡೆದನು.

06107003a ತಥೈವ ರಾಕ್ಷಸೋ ರಾಜನ್ಮಾಧವಂ ನಿಶಿತೈಃ ಶರೈಃ|

06107003c ಅರ್ದಯಾಮಾಸ ರಾಜೇಂದ್ರ ಸಂಕ್ರುದ್ಧಃ ಶಿನಿಪುಂಗವಂ||

ರಾಜನ್! ರಾಜೇಂದ್ರ! ಹಾಗೆಯೇ ರಾಕ್ಷಸನೂ ಕೂಡ ಸಂಕ್ರುದ್ಧನಾಗಿ ಶಿನಿಪುಂಗವ ಮಾಧವನನ್ನು ನಿಶಿತ ಶರಗಳಿಂದ ಹೊಡೆದನು.

06107004a ಶೈನೇಯಃ ಶರಸಂಘಂ ತು ಪ್ರೇಷಯಾಮಾಸ ಸಂಯುಗೇ|

06107004c ರಾಕ್ಷಸಾಯ ಸುಸಂಕ್ರುದ್ಧೋ ಮಾಧವಃ ಪರವೀರಹಾ||

ಸಂಯುಗದಲ್ಲಿ ಪರವೀರಹ ಮಾಧವ ಶೈನೇಯನು ಸುಸಂಕ್ರುದ್ಧನಾಗಿ ರಾಕ್ಷಸನ ಮೇಲೆ ಶರಸಂಘಗಳನ್ನು ಪ್ರಯೋಗಿಸಿದನು.

06107005a ತತೋ ರಕ್ಷೋ ಮಹಾಬಾಹುಂ ಸಾತ್ಯಕಿಂ ಸತ್ಯವಿಕ್ರಮಂ|

06107005c ವಿವ್ಯಾಧ ವಿಶಿಖೈಸ್ತೀಕ್ಷ್ಣೈಃ ಸಿಂಹನಾದಂ ನನಾದ ಚ||

ಆಗ ರಾಕ್ಷಸನು ಮಹಾಬಾಹು ಸತ್ಯವಿಕ್ರಮಿ ಸಾತ್ಯಕಿಯನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆದು ಸಿಂಹನಾದಗೈದನು.

06107006a ಮಾಧವಸ್ತು ಭೃಶಂ ವಿದ್ಧೋ ರಾಕ್ಷಸೇನ ರಣೇ ತದಾ|

06107006c ಧೈರ್ಯಮಾಲಂಬ್ಯ ತೇಜಸ್ವೀ ಜಹಾಸ ಚ ನನಾದ ಚ||

ರಣದಲ್ಲಿ ರಾಕ್ಷಸನಿಂದ ತುಂಬಾ ಗಾಯಗೊಂಡ ಮಾಧವನಾದರೋ ಧೈರ್ಯದಿಂದ ಅವನನ್ನು ಹೊಡೆದನು ಮತ್ತು ಜೋರಾಗಿ ಕೂಗಿದನು.

06107007a ಭಗದತ್ತಸ್ತತಃ ಕ್ರುದ್ಧೋ ಮಾಧವಂ ನಿಶಿತೈಃ ಶರೈಃ|

06107007c ತಾಡಯಾಮಾಸ ಸಮರೇ ತೋತ್ತ್ರೈರಿವ ಮಹಾಗಜಂ||

ಆಗ ಭಗದತ್ತನು ಕ್ರುದ್ಧನಾಗಿ ಮಹಾಗಜವನ್ನು ಅಂಕುಶದಿಂದ ಚುಚ್ಚುವಂತೆ ಮಾಧವನನ್ನು ನಿಶಿತ ಶರಗಳಿಂದ ಪೀಡಿಸಿದನು.

06107008a ವಿಹಾಯ ರಾಕ್ಷಸಂ ಯುದ್ಧೇ ಶೈನೇಯೋ ರಥಿನಾಂ ವರಃ|

06107008c ಪ್ರಾಗ್ಜ್ಯೋತಿಷಾಯ ಚಿಕ್ಷೇಪ ಶರಾನ್ಸನ್ನತಪರ್ವಣಃ||

ಆಗ ರಥಿಗಳಲ್ಲಿ ಶ್ರೇಷ್ಠ ಶೈನೇಯನು ಯುದ್ಧದಲ್ಲಿ ರಾಕ್ಷಸನನ್ನು ಬಿಟ್ಟು ಪ್ರಾಗ್ಜ್ಯೋತಿಷನ ಮೇಲೆ ಸನ್ನತಪರ್ವ ಶರಗಳನ್ನು ಎಸೆದನು.

06107009a ತಸ್ಯ ಪ್ರಾಗ್ಜ್ಯೋತಿಷೋ ರಾಜಾ ಮಾಧವಸ್ಯ ಮಹದ್ಧನುಃ|

06107009c ಚಿಚ್ಛೇದ ಶಿತಧಾರೇಣ ಭಲ್ಲೇನ ಕೃತಹಸ್ತವತ್||

ರಾಜಾ ಪ್ರಗ್ಜ್ಯೋತಿಷನು ಮಾಧವನ ಮಹಾಧನುವನ್ನು ಕೈಚಳಕದಿಂದ ಶಿತಧಾರ ಭಲ್ಲದಿಂದ ಕತ್ತರಿಸಿದನು.

06107010a ಅಥಾನ್ಯದ್ಧನುರಾದಾಯ ವೇಗವತ್ಪರವೀರಹಾ|

06107010c ಭಗದತ್ತಂ ರಣೇ ಕ್ರುದ್ಧೋ ವಿವ್ಯಾಧ ನಿಶಿತೈಃ ಶರೈಃ||

ಆಗ ವೇಗದಿಂದ ಪರವೀರಹನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ರಣದಲ್ಲಿ ಕ್ರುದ್ಧನಾಗಿ ಭಗದತ್ತನನ್ನು ನಿಶಿತ ಶರಗಳಿಂದ ಹೊಡೆದನು.

06107011a ಸೋಽತಿವಿದ್ಧೋ ಮಹೇಷ್ವಾಸಃ ಸೃಕ್ಕಿಣೀ ಸಂಲಿಹನ್ಮುಹುಃ|

06107011c ಶಕ್ತಿಂ ಕನಕವೈಡೂರ್ಯಭೂಷಿತಾಮಾಯಸೀಂ ದೃಢಾಂ|

06107011e ಯಮದಂಡೋಪಮಾಂ ಘೋರಾಂ ಪ್ರಾಹಿಣೋತ್ಸಾತ್ಯಕಾಯ ವೈ||

ಸಾತ್ಯಕಿಯ ಆ ಪ್ರಹಾರದಿಂದ ಅತಿಯಾಗಿ ಗಾಯಗೊಂಡ ಆ ಮಹೇಷ್ವಾಸನು ಕಟವಾಯಿಗಳನ್ನು ನೆಕ್ಕುತ್ತ ಕನಕವೈಡೂರ್ಯಭೂಷಿತ ಉಕ್ಕಿನ ದೃಢ ಯಮದಂಡದಂತಿದ್ದ ಘೋರ ಶಕ್ತಿಯನ್ನು ಸಾತ್ಯಕಿಯ ಮೇಲೆ ಎಸೆದನು.

06107012a ತಾಮಾಪತಂತೀಂ ಸಹಸಾ ತಸ್ಯ ಬಾಹೋರ್ಬಲೇರಿತಾಂ|

06107012c ಸಾತ್ಯಕಿಃ ಸಮರೇ ರಾಜಂಸ್ತ್ರಿಧಾ ಚಿಚ್ಛೇದ ಸಾಯಕೈಃ|

06107012e ಸಾ ಪಪಾತ ತದಾ ಭೂಮೌ ಮಹೋಲ್ಕೇವ ಹತಪ್ರಭಾ||

ರಾಜನ್! ಅವನ ಬಾಹುಬಲದಿಂದ ಎಸೆಯಲ್ಪಟ್ಟು ವೇಗದಿಂದ ಬರುತ್ತಿದ್ದ ಅದನ್ನು ಸಮರದಲ್ಲಿ ಸಾತ್ಯಕಿಯು ಸಾಯಕಗಳಿಂದ ಮೂರುಭಾಗಗಳನ್ನಾಗಿ ತುಂಡರಿಸಿದನು. ಅದು ಪ್ರಭೆಯನ್ನು ಕಳೆದುಕೊಂಡು ಮಹಾ ಉಲ್ಕೆಯಂತೆ ಭೂಮಿಯ ಮೇಲೆ ಬಿದ್ದಿತು.

06107013a ಶಕ್ತಿಂ ವಿನಿಹತಾಂ ದೃಷ್ಟ್ವಾ ಪುತ್ರಸ್ತವ ವಿಶಾಂ ಪತೇ|

06107013c ಮಹತಾ ರಥವಂಶೇನ ವಾರಯಾಮಾಸ ಮಾಧವಂ||

ವಿಶಾಂಪತೇ! ಶಕ್ತಿಯನ್ನು ನಾಶಪಡಿಸಿದುದನ್ನು ನೋಡಿ ನಿನ್ನ ಮಗನು ದೊಡ್ಡ ರಥಸೇನೆಯಿಂದ ಮಾಧವನನ್ನು ತಡೆದನು.

06107014a ತಥಾ ಪರಿವೃತಂ ದೃಷ್ಟ್ವಾ ವಾರ್ಷ್ಣೇಯಾನಾಂ ಮಹಾರಥಂ|

06107014c ದುರ್ಯೋಧನೋ ಭೃಶಂ ಹೃಷ್ಟೋ ಭ್ರಾತೄನ್ಸರ್ವಾನುವಾಚ ಹ||

ಮಹಾರಥ ವಾರ್ಷ್ಣೇಯನನ್ನು ಸುತ್ತುವರೆದು ದುರ್ಯೋಧನನು ತುಂಬಾ ಹರ್ಷಿತನಾಗಿ ತನ್ನ ತಮ್ಮಂದಿರಿಗೆಲ್ಲರಿಗೆ ಹೇಳಿದನು:

06107015a ತಥಾ ಕುರುತ ಕೌರವ್ಯಾ ಯಥಾ ವಃ ಸಾತ್ಯಕೋ ಯುಧಿ|

06107015c ನ ಜೀವನ್ಪ್ರತಿನಿರ್ಯಾತಿ ಮಹತೋಽಸ್ಮಾದ್ರಥವ್ರಜಾತ್|

06107015e ಅಸ್ಮಿನ್ ಹತೇ ಹತಂ ಮನ್ಯೇ ಪಾಂಡವಾನಾಂ ಮಹದ್ಬಲಂ||

“ಕೌರವ್ಯರೇ! ಸಾತ್ಯಕಿಯು ಯುದ್ಧದಲ್ಲಿ ಜೀವಂತವಾಗಿ ಹಿಂದಿರುಗದಂತೆ ಮಹಾ ಒಮ್ಮುಖವಾಗಿ ನೀವೆಲ್ಲ ಯುದ್ಧಮಾಡಿ. ಇವನು ಹತನಾದರೆ ಪಾಂಡವರ ಮಹಾಬಲವು ಹತವಾದಂತೆ ಎಂದು ನನಗನ್ನಿಸುತ್ತದೆ.”

06107016a ತತ್ತಥೇತಿ ವಚಸ್ತಸ್ಯ ಪರಿಗೃಹ್ಯ ಮಹಾರಥಾಃ|

06107016c ಶೈನೇಯಂ ಯೋಧಯಾಮಾಸುರ್ಭೀಷ್ಮಸ್ಯ ಪ್ರಮುಖೇ ತದಾ||

ಹಾಗೆಯೇ ಆಗಲೆಂದು ಅವನ ಮಾತನ್ನು ಸ್ವೀಕರಿಸಿ ಮಹಾರಥರು ಭೀಷ್ಮನನ್ನು ಎದುರಿಸಲು ಹೋಗುತ್ತಿದ್ದ ಶೈನೇಯನೊಂದಿಗೆ ಯುದ್ಧಮಾಡಗಿದರು.

06107017a ಅಭಿಮನ್ಯುಂ ತದಾಯಾಂತಂ ಭೀಷ್ಮಾಯಾಭ್ಯುದ್ಯತಂ ಮೃಧೇ|

06107017c ಕಾಂಬೋಜರಾಜೋ ಬಲವಾನ್ವಾರಯಾಮಾಸ ಸಂಯುಗೇ||

ಸಮರದಲ್ಲಿ ಭೀಷ್ಮನೆಡೆಗೆ ಬರುತ್ತಿದ್ದ ಅಭಿಮನ್ಯುವನ್ನು ಬಲವಾನ್ ಕಾಂಬೋಜರಾಜನು ಸಂಯುಗದಲ್ಲಿ ತಡೆದನು.

06107018a ಆರ್ಜುನಿರ್ನೃಪತಿಂ ವಿದ್ಧ್ವಾ ಶರೈಃ ಸನ್ನತಪರ್ವಭಿಃ|

06107018c ಪುನರೇವ ಚತುಃಷಷ್ಟ್ಯಾ ರಾಜನ್ವಿವ್ಯಾಧ ತಂ ನೃಪಂ||

ಆರ್ಜುನಿಯು ಆ ನೃಪತಿಯನ್ನು ಸನ್ನತಪರ್ವ ಶರಗಳಿಂದ ಹೊಡೆದು ಪುನಃ ಅವನನ್ನು ಅರವತ್ನಾಲ್ಕು ಬಾಣಗಳಿಂದ ಹೊಡೆದನು.

06107019a ಸುದಕ್ಷಿಣಸ್ತು ಸಮರೇ ಕಾರ್ಷ್ಣಿಂ ವಿವ್ಯಾಧ ಪಂಚಭಿಃ|

06107019c ಸಾರಥಿಂ ಚಾಸ್ಯ ನವಭಿರಿಚ್ಛನ್ಭೀಷ್ಮಸ್ಯ ಜೀವಿತಂ||

ಭೀಷ್ಮನ ಜೀವಿತವನ್ನು ಬಯಸಿದ ಸುದಕ್ಷಿಣನಾದರೋ ಸಮರದಲ್ಲಿ ಕಾರ್ಷ್ಣಿಯನ್ನು ಐದರಿಂದ ಮತ್ತು ಸಾರಥಿಯನ್ನು ಒಂಭತ್ತರಿಂದ ಹೊಡೆದನು.

06107020a ತದ್ಯುದ್ಧಮಾಸೀತ್ಸುಮಹತ್ತಯೋಸ್ತತ್ರ ಪರಾಕ್ರಮೇ|

06107020c ಯದಭ್ಯಧಾವದ್ಗಾಂಗೇಯಂ ಶಿಖಂಡೀ ಶತ್ರುತಾಪನಃ||

ಶತ್ರುತಾಪನ ಶಿಖಂಡಿಯು ಗಾಂಗೇಯನನ್ನು ಎದುರಿಸಿದಾಗ ಇವರಿಬ್ಬರ ನಡುವೆ ಪರಾಕ್ರಮದ ಮಹಾ ಯದ್ಧವು ನಡೆಯಿತು.

06107021a ವಿರಾಟದ್ರುಪದೌ ವೃದ್ಧೌ ವಾರಯಂತೌ ಮಹಾಚಮೂಂ|

06107021c ಭೀಷ್ಮಂ ಚ ಯುಧಿ ಸಂರಬ್ಧಾವಾದ್ರವಂತೌ ಮಹಾರಥೌ||

ಮಹಾರಥ ವೃದ್ಧ ವಿರಾಟದ್ರುಪದರು ಯುದ್ಧದಲ್ಲಿ ಸಂರಬ್ಧರಾಗಿ ಮಹಾಸೇನೆಯನ್ನು ತಡೆಯುತ್ತಾ ಭೀಷ್ಮನ ಕಡೆಗೆ ಮುನ್ನುಗ್ಗಿದರು.

06107022a ಅಶ್ವತ್ಥಾಮಾ ತತಃ ಕ್ರುದ್ಧಃ ಸಮಾಯಾದ್ರಥಸತ್ತಮಃ|

06107022c ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ||

ಭಾರತ! ಆಗ ರಥಸತ್ತಮ ಅಶ್ವತ್ಥಾಮನು ಕ್ರುದ್ಧನಾಗಿ ಅಲ್ಲಿಗೆ ಬರಲು ಅವನು ಮತ್ತು ಅವರ ನಡುವೆ ಯುದ್ಧವು ನಡೆಯಿತು.

06107023a ವಿರಾಟೋ ದಶಭಿಭಲ್ಲೈರಾಜಘಾನ ಪರಂತಪ|

06107023c ಯತಮಾನಂ ಮಹೇಷ್ವಾಸಂ ದ್ರೌಣಿಮಾಹವಶೋಭಿನಂ||

ಪರಂತಪ! ವಿರಾಟನು ಆಹವಶೋಭಿ, ಮಹೇಷ್ವಾಸ, ಪ್ರಯತ್ನಿಸುತ್ತಿದ್ದ ದ್ರೌಣಿಯನ್ನು ಹತ್ತು ಭಲ್ಲಗಳಿಂದ ಹೊಡೆದನು.

06107024a ದ್ರುಪದಶ್ಚ ತ್ರಿಭಿರ್ಬಾಣೈರ್ವಿವ್ಯಾಧ ನಿಶಿತೈಸ್ತಥಾ|

06107024c ಗುರುಪುತ್ರಂ ಸಮಾಸಾದ್ಯ ಭೀಷ್ಮಸ್ಯ ಪುರತಃ ಸ್ಥಿತಂ||

ದ್ರುಪದನೂ ಕೂಡ ಭೀಷ್ಮನ ಮುಂದೆ ನಿಂತಿದ್ದ ಗುರುಪುತ್ರನನ್ನು ಎದುರಿಸಿ ಅವನನ್ನು ಮೂರು ನಿಶಿತ ಬಾಣಗಳಿಂದ ಹೊಡೆದನು.

06107025a ಅಶ್ವತ್ಥಾಮಾ ತತಸ್ತೌ ತು ವಿವ್ಯಾಧ ದಶಭಿಃ ಶರೈಃ|

06107025c ವಿರಾಟದ್ರುಪದೌ ವೃದ್ಧೌ ಭೀಷ್ಮಂ ಪ್ರತಿ ಸಮುದ್ಯತೌ||

ಅಶ್ವತ್ಥಾಮನು ಭೀಷ್ಮನ ಕಡೆ ಮುನ್ನುಗ್ಗುತ್ತಿರುವ ವೃದ್ಧ ವಿರಾಟ-ದ್ರುಪದರನ್ನು ಹತ್ತು ಶರಗಳಿಂದ ಹೊಡೆದನು.

06107026a ತತ್ರಾದ್ಭುತಮಪಶ್ಯಾಮ ವೃದ್ಧಯೋಶ್ಚರಿತಂ ಮಹತ್|

06107026c ಯದ್ದ್ರೌಣೇಃ ಸಾಯಕಾನ್ಘೋರಾನ್ಪ್ರತ್ಯವಾರಯತಾಂ ಯುಧಿ||

ಆಗ ಯುದ್ಧದಲ್ಲಿ ಆ ಇಬ್ಬರು ವೃದ್ಧರು ಘೋರ ಸಾಯಕಗಳಿಂದ ದ್ರೌಣಿಯನ್ನು ತಿರುಗಿ ಹೊಡೆಯುವ ಮಹಾ ಅದ್ಭುತವನ್ನು ನೋಡಿದೆವು.

06107027a ಸಹದೇವಂ ತಥಾ ಯಾಂತಂ ಕೃಪಃ ಶಾರದ್ವತೋಽಭ್ಯಯಾತ್|

06107027c ಯಥಾ ನಾಗೋ ವನೇ ನಾಗಂ ಮತ್ತೋ ಮತ್ತಮುಪಾದ್ರವತ್||

ವನದಲ್ಲಿ ಮದಿಸಿದ ಆನೆಯ ಮೇಲೆ ಮತ್ತೊಂದು ಆನೆಯು ಎರಗುವಂತೆ ಮುನ್ನುಗ್ಗುತ್ತಿದ್ದ ಸಹದೇವನನ್ನು ಶಾರದ್ವತ ಕೃಪನು ಎದುರಿಸಿದನು.

06107028a ಕೃಪಶ್ಚ ಸಮರೇ ರಾಜನ್ಮಾದ್ರೀಪುತ್ರಂ ಮಹಾರಥಂ|

06107028c ಆಜಘಾನ ಶರೈಸ್ತೂರ್ಣಂ ಸಪ್ತತ್ಯಾ ರುಕ್ಮಭೂಷಣೈಃ||

ರಾಜನ್! ಸಮರದಲ್ಲಿ ಕೃಪನು ಮಹಾರಥ ಮಾದ್ರೀಪುತ್ರನನ್ನು ಬೇಗನೇ ಎಪ್ಪತ್ತು ರುಕ್ಮಭೂಷಣ ಬಾಣಗಳಿಂದ ಹೊಡೆದನು.

06107029a ತಸ್ಯ ಮಾದ್ರೀಸುತಶ್ಚಾಪಂ ದ್ವಿಧಾ ಚಿಚ್ಛೇದ ಸಾಯಕೈಃ|

06107029c ಅಥೈನಂ ಚಿನ್ನಧನ್ವಾನಂ ವಿವ್ಯಾಧ ನವಭಿಃ ಶರೈಃ||

ಅವನ ಚಾಪವನ್ನು ಮಾದ್ರೀಸುತನು ಸಾಯಕಗಳಿಂದ ಎರಡಾಗಿ ತುಂಡರಿಸಿದನು. ಕೂಡಲೇ ಧನುಸ್ಸನ್ನು ತುಂಡರಿಸಿ ಅವನನ್ನು ಒಂಭತ್ತು ಶರಗಳಿಂದ ಹೊಡೆದನು.

06107030a ಸೋಽನ್ಯತ್ಕಾರ್ಮುಕಮಾದಾಯ ಸಮರೇ ಭಾರಸಾಧನಂ|

06107030c ಮಾದ್ರೀಪುತ್ರಂ ಸುಸಂಹೃಷ್ಟೋ ದಶಭಿರ್ನಿಶಿತೈಃ ಶರೈಃ|

06107030e ಆಜಘಾನೋರಸಿ ಕ್ರುದ್ಧ ಇಚ್ಛನ್ಭೀಷ್ಮಸ್ಯ ಜೀವಿತಂ||

ಅವನು ಸಮರದಲ್ಲಿ ಭಾರಸಾಧನದ ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಸುಸಂಹೃಷ್ಟನಾಗಿ, ಭೀಷ್ಮನ ಜೀವಿತವನ್ನು ಇಚ್ಛಿಸಿ ಕ್ರುದ್ಧನಾಗಿ ಮಾದ್ರೀಪುತ್ರನನ್ನು ಹತ್ತು ನಿಶಿತ ಬಾಣಗಳಿಂದ ಅವನ ಎದೆಗೆ ಗುರಿಯಿಟ್ಟು ಹೊಡೆದನು.

06107031a ತಥೈವ ಪಾಂಡವೋ ರಾಜನ್ ಶಾರದ್ವತಮಮರ್ಷಣಂ|

06107031c ಆಜಘಾನೋರಸಿ ಕ್ರುದ್ಧೋ ಭೀಷ್ಮಸ್ಯ ವಧಕಾಂಕ್ಷಯಾ|

06107031e ತಯೋರ್ಯುದ್ಧಂ ಸಮಭವದ್ಘೋರರೂಪಂ ಭಯಾವಹಂ||

ರಾಜನ್! ಹಾಗೆಯೇ ಪಾಂಡವನೂ ಕೂಡ ಭೀಷ್ಮನ ವಧೆಯನ್ನು ಬಯಸಿ ಕ್ರುದ್ಧನಾಗಿ ಅಮರ್ಷಣ ಶಾರದ್ವತನ ಎದೆಗೆ ಹೊಡೆದನು. ಅವರಿಬ್ಬರ ಯುದ್ಧವು ಘೋರರೂಪಿಯೂ ಭಯಾವಹವೂ ಆಗಿದ್ದಿತು.

06107032a ನಕುಲಂ ತು ರಣೇ ಕ್ರುದ್ಧಂ ವಿಕರ್ಣಃ ಶತ್ರುತಾಪನಃ|

06107032c ವಿವ್ಯಾಧ ಸಾಯಕೈಃ ಷಷ್ಟ್ಯಾ ರಕ್ಷನ್ಭೀಷ್ಮಸ್ಯ ಜೀವಿತಂ||

ಆದರೆ ಭೀಷ್ಮನ ಜೀವವನ್ನು ರಕ್ಷಿಸುತ್ತಾ ಶತ್ರುತಾಪನ ವಿಕರ್ಣನು ಅರವತ್ತು ಸಾಯಕಗಳಿಂದ ರಣದಲ್ಲಿ ಕ್ರುದ್ಧನಾದ ನಕುಲನನ್ನು ಹೊಡೆದನು.

06107033a ನಕುಲೋಽಪಿ ಭೃಶಂ ವಿದ್ಧಸ್ತವ ಪುತ್ರೇಣ ಧನ್ವಿನಾ|

06107033c ವಿಕರ್ಣಂ ಸಪ್ತಸಪ್ತತ್ಯಾ ನಿರ್ಬಿಭೇದ ಶಿಲೀಮುಖೈಃ||

ನಿನ್ನ ಪುತ್ರ ಧನ್ವಿಯಿಂದ ತುಂಬಾ ಗಾಯಗೊಂಡ ನಕುಲನೂ ಕೂಡ ವಿಕರ್ಣನನ್ನು ಎಪ್ಪತ್ತೇಳು ಶಿಲೀ ಮುಖಗಳಿಂದ ಹೊಡೆದನು.

06107034a ತತ್ರ ತೌ ನರಶಾರ್ದೂಲೌ ಭೀಷ್ಮಹೇತೋಃ ಪರಂತಪೌ|

06107034c ಅನ್ಯೋನ್ಯಂ ಜಘ್ನತುರ್ವೀರೌ ಗೋಷ್ಠೇ ಗೋವೃಷಭಾವಿವ||

ಗೋಹಟ್ಟಿಯಲ್ಲಿ ಗೋವಿಗಾಗಿ ಹೋರಿಗಳೆರಡು ಹೋರಾಡುವಂತೆ ಭೀಷ್ಮನ ಕಾರಣದಿಂದ ಆ ಇಬ್ಬರು ಪರಂತಪರೂ ನರಶಾರ್ದೂಲ ವೀರರೂ ಅನ್ಯೋನ್ಯರನ್ನು ಗಾಯಗೊಳಿಸಿದರು.

06107035a ಘಟೋತ್ಕಚಂ ರಣೇ ಯತ್ತಂ ನಿಘ್ನಂತಂ ತವ ವಾಹಿನೀಂ|

06107035c ದುರ್ಮುಖಃ ಸಮರೇ ಪ್ರಾಯಾದ್ಭೀಷ್ಮಹೇತೋಃ ಪರಾಕ್ರಮೀ||

ಭೀಷ್ಮನನ್ನು ಉದ್ದೇಶಿಸಿ ನಿನ್ನ ಸೇನೆಯನ್ನು ನಾಶಪಡಿಸುತ್ತಾ ರಣದಲ್ಲಿ ಮುನ್ನುಗ್ಗಿ ಬರುತ್ತಿದ್ದ ಘಟೋತ್ಕಚನನ್ನು ಸಮರದಲ್ಲಿ ದುರ್ಮುಖನು ಎದುರಿಸಿದನು.

06107036a ಹೈಡಿಂಬಸ್ತು ತತೋ ರಾಜನ್ದುರ್ಮುಖಂ ಶತ್ರುತಾಪನಂ|

06107036c ಆಜಘಾನೋರಸಿ ಕ್ರುದ್ಧೋ ನವತ್ಯಾ ನಿಶಿತೈಃ ಶರೈಃ||

ಆಗ ರಾಜನ್! ಹೈಡಿಂಬಿಯಾದರೋ ಕ್ರುದ್ಧನಾಗಿ ಶತ್ರುತಾಪನ ದುರ್ಮುಖನನ್ನು ತೊಂಭತ್ತು ನಿಶಿತ ಶರಗಳಿಂದ ಎದೆಗೆ ಗುರಿಯಿಟ್ಟು ಹೊಡೆದನು.

06107037a ಭೀಮಸೇನಸುತಂ ಚಾಪಿ ದುರ್ಮುಖಃ ಸುಮುಖೈಃ ಶರೈಃ|

06107037c ಷಷ್ಟ್ಯಾ ವೀರೋ ನದನ್ ಹೃಷ್ಟೋ ವಿವ್ಯಾಧ ರಣಮೂರ್ಧನಿ||

ಭೀಮಸೇನಸುತನನ್ನೂ ಕೂಡ ವೀರ ದುರ್ಮುಖನು ಅರವತ್ತು ಸುಮುಖ ಶರಗಳಿಂದ ರಣಮೂರ್ದನಿಯಲ್ಲಿ ಹೊಡೆದು ಹರ್ಷದಿಂದ ಕೂಗಿದನು.

06107038a ಧೃಷ್ಟದ್ಯುಮ್ನಂ ರಣೇ ಯಾಂತಂ ಭೀಷ್ಮಸ್ಯ ವಧಕಾಂಕ್ಷಿಣಂ|

06107038c ಹಾರ್ದಿಕ್ಯೋ ವಾರಯಾಮಾಸ ರಕ್ಷನ್ಭೀಷ್ಮಸ್ಯ ಜೀವಿತಂ||

ಭೀಷ್ಮನ ವಧೆಯನ್ನು ಬಯಸಿ ರಣದಲ್ಲಿ ಮುಂದೆ ಬರುತ್ತಿದ್ದ ಧೃಷ್ಟದ್ಯುಮ್ನನನ್ನು ಭೀಷ್ಮನ ಜೀವವನ್ನು ರಕ್ಷಿಸುತ್ತಾ ಹಾರ್ದಿಕ್ಯನು ತಡೆದನು.

06107039a ವಾರ್ಷ್ಣೇಯಃ ಪಾರ್ಷತಂ ಶೂರಂ ವಿದ್ಧ್ವಾ ಪಂಚಭಿರಾಯಸೈಃ|

06107039c ಪುನಃ ಪಂಚಾಶತಾ ತೂರ್ಣಮಾಜಘಾನ ಸ್ತನಾಂತರೇ||

ವಾರ್ಷ್ಣೇಯನು ಶೂರ ಪಾರ್ಷತನನ್ನು ಐದು ಆಯಸಗಳಿಂದ ಹೊಡೆದು ಒಡನೆಯೇ ಪುನಃ ಸ್ತನಾಂತರಕ್ಕೆ ಐವತ್ತು ಬಾಣಗಳಿಂದ ಹೊಡೆದನು.

06107040a ತಥೈವ ಪಾರ್ಷತೋ ರಾಜನ್ ಹಾರ್ದಿಕ್ಯಂ ನವಭಿಃ ಶರೈಃ|

06107040c ವಿವ್ಯಾಧ ನಿಶಿತೈಸ್ತೀಕ್ಷ್ಣೈಃ ಕಂಕಪತ್ರಪರಿಚ್ಛದೈಃ||

ಹಾಗೆಯೇ ರಾಜನ್! ಪಾರ್ಷತನು ಹಾರ್ದಿಕ್ಯನನ್ನು ಒಂಭತ್ತು ನಿಶಿತ ತೀಕ್ಷ್ಣ ಕಂಕಪತ್ರಗಳಿಂದ ಮುಚ್ಚಲ್ಪಟ್ಟ ಶರಗಳಿಂದ ಹೊಡೆದನು.

06107041a ತಯೋಃ ಸಮಭವದ್ಯುದ್ಧಂ  

         ಭೀಷ್ಮಹೇತೋರ್ಮಹಾರಣೇ|

06107041c ಅನ್ಯೋನ್ಯಾತಿಶಯೈರ್ಯುಕ್ತಂ ಯಥಾ   ವೃತ್ರಮಹೇಂದ್ರಯೋಃ||

ಆಗ ಭೀಷ್ಮನಿಗಾಗಿ ಮಹಾರಣದಲ್ಲಿ ವೃತ್ರ-ಮಹೇಂದ್ರರ ನಡುವೆ ನಡೆದಂತೆ ಅನ್ಯೋನ್ಯರಲ್ಲಿ ನಾನು ಹೆಚ್ಚು ತಾನು ಹೆಚ್ಚು ಎಂದು ಹೊಡೆದಾಡಿದ ಯುದ್ಧವು ನಡೆಯಿತು.

06107042a ಭೀಮಸೇನಮಥಾಯಾಂತಂ ಭೀಷ್ಮಂ ಪ್ರತಿ ಮಹಾಬಲಂ|

06107042c ಭೂರಿಶ್ರವಾಭ್ಯಯಾತ್ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್||

ಭೀಷ್ಮನ ಕಡೆಗೆ ಬರುತ್ತಿದ್ದ ಮಹಾಬಲ ಭೀಮಸೇನನಿಗೆ ತಕ್ಷಣವೇ ಭೂರಿಶ್ರವನು “ನಿಲ್ಲು! ನಿಲ್ಲು!” ಎಂದು ಹೇಳಿದನು.

06107043a ಸೌಮದತ್ತಿರಥೋ ಭೀಮಮಾಜಘಾನ ಸ್ತನಾಂತರೇ|

06107043c ನಾರಾಚೇನ ಸುತೀಕ್ಷ್ಣೇನ ರುಕ್ಮಪುಂಖೇನ ಸಂಯುಗೇ||

ಆಗ ಸಂಯುಗದಲ್ಲಿ ಸೌಮದತ್ತಿಯು ಭೀಮಸೇನನನ್ನು ಸ್ತನಾಂತರದಲ್ಲಿ ಸುತೀಕ್ಷ್ಣ ರುಕ್ಮಪುಂಖ ನಾರಾಚಗಳಿಂದ ಹೊಡೆದನು.

06107044a ಉರಃಸ್ಥೇನ ಬಭೌ ತೇನ ಭೀಮಸೇನಃ ಪ್ರತಾಪವಾನ್|

06107044c ಸ್ಕಂದಶಕ್ತ್ಯಾ ಯಥಾ ಕ್ರೌಂಚಃ ಪುರಾ ನೃಪತಿಸತ್ತಮ||

ನೃಪತಿ ಸತ್ತಮ! ಹಿಂದೆ ಸ್ಕಂದನು ಶಕ್ತಿಯಿಂದ ಹೊಡೆದಾಗ ಕ್ರೌಂಚ ಪರ್ವತವು ಶೋಭಿಸಿದಂತೆ ಪ್ರತಾಪವಾನ್ ಭೀಮಸೇನನು ಎದೆಗೆ ಹೊಡೆತವನ್ನು ತಿಂದು ಶೋಭಿಸಿದನು.

06107045a ತೌ ಶರಾನ್ಸೂರ್ಯಸಂಕಾಶಾನ್ಕರ್ಮಾರಪರಿಮಾರ್ಜಿತಾನ್|

06107045c ಅನ್ಯೋನ್ಯಸ್ಯ ರಣೇ ಕ್ರುದ್ಧೌ ಚಿಕ್ಷಿಪಾತೇ ಮುಹುರ್ಮುಹುಃ||

ಅವರಿಬ್ಬರೂ ಕಮ್ಮಾರರಿಂದ ಹದಗೊಳಿಸಲ್ಪಟ್ಟ ಸೂರ್ಯಸಂಕಾಶ ಬಾಣಗಳಿಂದ ಅನ್ಯೋನ್ಯರನ್ನು ರಣದಲ್ಲಿ ಕ್ರುದ್ಧರಾಗಿ ಪುನಃ ಪುನಃ ಹೊಡೆದು ಗಾಯಗೊಳಿಸಿದರು.

06107046a ಭೀಮೋ ಭೀಷ್ಮವಧಾಕಾಂಕ್ಷೀ ಸೌಮದತ್ತಿಂ ಮಹಾರಥಂ|

06107046c ತಥಾ ಭೀಷ್ಮಜಯೇ ಗೃಧ್ನುಃ ಸೌಮದತ್ತಿಶ್ಚ ಪಾಂಡವಂ|

06107046e ಕೃತಪ್ರತಿಕೃತೇ ಯತ್ತೌ ಯೋಧಯಾಮಾಸತೂ ರಣೇ||

ಭೀಷ್ಮವಧಾಕಾಂಕ್ಷಿಯಾದ ಭೀಮನು ಮಹಾರಥ ಸೌಮದತ್ತಿಯನ್ನು ಮತ್ತು ಹಾಗೆಯೇ ಭೀಷ್ಮನ ಜಯವನ್ನು ಆಶಿಸಿದ್ದ ಸೌಮದತ್ತಿಯು ಪಾಂಡವನನ್ನೂ ರಣದಲ್ಲಿ ಮಾಡಿದುದಕ್ಕೆ ಪ್ರತಿಮಾಡುತ್ತಾ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದರು.

06107047a ಯುಧಿಷ್ಠಿರಂ ಮಹಾರಾಜ ಮಹತ್ಯಾ ಸೇನಯಾ ವೃತಂ|

06107047c ಭೀಷ್ಮಾಯಾಭಿಮುಖಂ ಯಾಂತಂ ಭಾರದ್ವಾಜೋ ನ್ಯವಾರಯತ್||

ಮಹಾರಾಜ! ಮಹಾ ಸೇನೆಯಿಂದ ಆವೃತನಾಗಿ ಭೀಷ್ಮಾಭಿಮುಖನಾಗಿ ಬರುತ್ತಿದ್ದ ಯುಧಿಷ್ಠಿರನನ್ನು ಭಾರದ್ವಾಜನು ತಡೆದನು.

06107048a ದ್ರೋಣಸ್ಯ ರಥನಿರ್ಘೋಷಂ ಪರ್ಜನ್ಯನಿನದೋಪಮಂ|

06107048c ಶ್ರುತ್ವಾ ಪ್ರಭದ್ರಕಾ ರಾಜನ್ಸಮಕಂಪಂತ ಮಾರಿಷ||

ರಾಜನ್! ಮಾರಿಷ! ಮೋಡದ ಗುಡುಗಿನಂತಿದ್ದ ದ್ರೋಣನ ರಥನಿರ್ಘೋಷವನ್ನು ಕೇಳಿ ಪ್ರಭದ್ರಕನು ಥರಥರಿಸಿದನು.

06107049a ಸಾ ಸೇನಾ ಮಹತೀ ರಾಜನ್ಪಾಂಡುಪುತ್ರಸ್ಯ ಸಂಯುಗೇ|

06107049c ದ್ರೋಣೇನ ವಾರಿತಾ ಯತ್ತಾ ನ ಚಚಾಲ ಪದಾತ್ಪದಂ||

ರಾಜನ್! ಸಂಯುಗದಲ್ಲಿ ದ್ರೋಣನಿಂದ ತಡೆಯಲ್ಪಟ್ಟ ಪಾಂಡುಪುತ್ರನ ಆ ಮಹಾ ಸೇನೆಯು ಒಂದು ಹೆಜ್ಜೆಯೂ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.

06107050a ಚೇಕಿತಾನಂ ರಣೇ ಕ್ರುದ್ಧಂ ಭೀಷ್ಮಂ ಪ್ರತಿ ಜನೇಶ್ವರ|

06107050c ಚಿತ್ರಸೇನಸ್ತವ ಸುತಃ ಕ್ರುದ್ಧರೂಪಮವಾರಯತ್||

ಜನೇಶ್ವರ! ಕ್ರುದ್ಧನಾಗಿ ರಣದಲ್ಲಿ ಭೀಷ್ಮನ ಕಡೆ ಬರುತ್ತಿದ್ದ ಚೇಕಿತಾನನನ್ನು ನಿನ್ನ ಮಗ ಕ್ರುದ್ಧರೂಪಿ ಚಿತ್ರಸೇನನು ತಡೆದನು.

06107051a ಭೀಷ್ಮಹೇತೋಃ ಪರಾಕ್ರಾಂತಶ್ಚಿತ್ರಸೇನೋ ಮಹಾರಥಃ|

06107051c ಚೇಕಿತಾನಂ ಪರಂ ಶಕ್ತ್ಯಾ ಯೋಧಯಾಮಾಸ ಭಾರತ||

ಭಾರತ! ಭೀಷ್ಮನ ಕಾರಣದಿಂದ ಪರಾಕ್ರಾಂತನಾಗಿದ್ದ ಮಹಾರಥ ಚಿತ್ರಸೇನನು ಚೇಕಿತಾನನೊಂದಿಗೆ ಪರಮ ಶಕ್ತಿಯಿಂದ ಯುದ್ಧಮಾಡಿದನು.

06107052a ತಥೈವ ಚೇಕಿತಾನೋಽಪಿ ಚಿತ್ರಸೇನಮಯೋಧಯತ್|

06107052c ತದ್ಯುದ್ಧಮಾಸೀತ್ಸುಮಹತ್ತಯೋಸ್ತತ್ರ ಪರಾಕ್ರಮೇ||

ಹಾಗೆಯೇ ಚೇಕಿತಾನನೂ ಕೂಡ ಚಿತ್ರಸೇನನೊಡನೆ ಹೋರಾಡಿದನು. ಆಗ ಅಲ್ಲಿ ಪರಾಕ್ರಮಯುಕ್ತ ಮಹಾಯುದ್ಧವು ನಡೆಯಿತು.

06107053a ಅರ್ಜುನೋ ವಾರ್ಯಮಾಣಸ್ತು ಬಹುಶಸ್ತನಯೇನ ತೇ|

06107053c ವಿಮುಖೀಕೃತ್ಯ ಪುತ್ರಂ ತೇ ತವ ಸೇನಾಂ ಮಮರ್ದ ಹ||

ಅರ್ಜುನನನ್ನು ತಡೆಯಲು ಬಹುವಾಗಿ ಪ್ರಯತ್ನಿಸುತ್ತಿದ್ದ ನಿನ್ನ ಮಗನನ್ನು ವಿಮುಖನನ್ನಾಗಿ ಮಾಡಿ ಅವನು ನಿನ್ನ ಸೇನೆಯುನ್ನು ಮರ್ದಿಸಿದನು.

06107054a ದುಃಶಾಸನೋಽಪಿ ಪರಯಾ ಶಕ್ತ್ಯಾ ಪಾರ್ಥಮವಾರಯತ್|

06107054c ಕಥಂ ಭೀಷ್ಮಂ ಪರೋ ಹನ್ಯಾದಿತಿ ನಿಶ್ಚಿತ್ಯ ಭಾರತ||

ಭಾರತ! ಶತ್ರುಗಳು ಭೀಷ್ಮನನ್ನು ಕೊಲ್ಲಬಾರದೆಂದು ನಿಶ್ಚಯಿಸಿ ದುಃಶಾಸನನೂ ಕೂಡ ಪರಮ ಶಕ್ತಿಯಿಂದ ಪಾರ್ಥನನ್ನು ತಡೆದನು.

06107055a ಸಾ ವಧ್ಯಮಾನಾ ಸಮರೇ ಪುತ್ರಸ್ಯ ತವ ವಾಹಿನೀ|

06107055c ಲೋಡ್ಯತೇ ರಥಿಭಿಃ ಶ್ರೇಷ್ಠೈಸ್ತತ್ರ ತತ್ರೈವ ಭಾರತ||

ಭಾರತ! ಅಲ್ಲಲ್ಲಿ ಸಮರದಲ್ಲಿ ನಿನ್ನ ಮಗನ ಸೇನೆಯನ್ನು ವಧಿಸುತ್ತಾ ಆ ಶ್ರೇಷ್ಠ ರಥರು ಮುಂದುವರೆದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಂದ್ವಯುದ್ಧೇ ಸಪ್ತಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ನೂರಾಏಳನೇ ಅಧ್ಯಾಯವು.

Image result for indian motifs against white background

Comments are closed.