Bhishma Parva: Chapter 106

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೬

ಭೀಷ್ಮನ ಮೇಲೆ ಆಕ್ರಮಿಸುತ್ತಿದ್ದ ಪಾಂಡವ ಮಹಾರಥರನ್ನು ಕೌರವ ಮಹಾರಥರು ತಡೆದು ಯುದ್ಧಮಾಡಿದುದು (೧-೨೩). ಅರ್ಜುನ-ದುಃಶಾಸನರ ಯುದ್ಧ (೨೪-೪೫).

06106001 ಸಂಜಯ ಉವಾಚ|

06106001a ಅರ್ಜುನಸ್ತು ರಣೇ ರಾಜನ್ದೃಷ್ಟ್ವಾ ಭೀಷ್ಮಸ್ಯ ವಿಕ್ರಮಂ|

06106001c ಶಿಖಂಡಿನಮಥೋವಾಚ ಸಮಭ್ಯೇಹಿ ಪಿತಾಮಹಂ||

ಸಂಜಯನು ಹೇಳಿದನು: “ರಾಜನ್! ಅರ್ಜುನನಾದರೋ ರಣದಲ್ಲಿ ಭೀಷ್ಮನ ವಿಕ್ರಮವನ್ನು ನೋಡಿ ಶಿಖಂಡಿಗೆ ಹೇಳಿದನು: “ಈಗಲೇ ಪಿತಾಮಹನನ್ನು ಕೊಲ್ಲು!

06106002a ನ ಚಾಪಿ ಭೀಸ್ತ್ವಯಾ ಕಾರ್ಯಾ ಭೀಷ್ಮಾದದ್ಯ ಕಥಂ ಚನ|

06106002c ಅಹಮೇನಂ ಶರೈಸ್ತೀಕ್ಷ್ಣೈಃ ಪಾತಯಿಷ್ಯೇ ರಥೋತ್ತಮಾತ್||

ಭೀಷ್ಮನಿಗೆ ಸ್ವಲ್ಪವೂ ಇಂದು ಭಯಪಾಡಬೇಕಾದುದಿಲ್ಲ. ನಾನು ಉತ್ತಮ ರಥದಿಂದ ಇವನನ್ನು ತೀಕ್ಷ್ಣ ಶರಗಳಿಂದ ಬೀಳಿಸುತ್ತೇನೆ.”

06106003a ಏವಮುಕ್ತಸ್ತು ಪಾರ್ಥೇನ ಶಿಖಂಡೀ ಭರತರ್ಷಭ|

06106003c ಅಭ್ಯದ್ರವತ ಗಾಂಗೇಯಂ ಶ್ರುತ್ವಾ ಪಾರ್ಥಸ್ಯ ಭಾಷಿತಂ||

ಭರತರ್ಷಭ! ಪಾರ್ಥನು ಹೀಗೆ ಹೇಳಲು ಪಾರ್ಥನ ಮಾತನ್ನು ಕೇಳಿ ಶಿಖಂಡಿಯು ಗಾಂಗೇಯನನ್ನು ಆಕ್ರಮಣಿಸಿದನು.

06106004a ಧೃಷ್ಟದ್ಯುಮ್ನಸ್ತಥಾ ರಾಜನ್ಸೌಭದ್ರಶ್ಚ ಮಹಾರಥಃ|

06106004c ಹೃಷ್ಟಾವಾದ್ರವತಾಂ ಭೀಷ್ಮಂ ಶ್ರುತ್ವಾ ಪಾರ್ಥಸ್ಯ ಭಾಷಿತಂ||

ರಾಜನ್! ಆಗ ಪಾರ್ಥನ ಮಾತನ್ನು ಕೇಳಿ ಹರ್ಷಿತರಾದ ಧೃಷ್ಟದ್ಯುಮ್ನ ಮತ್ತು ಸೌಭದ್ರರು ಭೀಷ್ಮನ ಮೇಲೆ ಆಕ್ರಮಣ ಮಾಡಿದರು.

06106005a ವಿರಾಟದ್ರುಪದೌ ವೃದ್ಧೌ ಕುಂತಿಭೋಜಶ್ಚ ದಂಶಿತಃ|

06106005c ಅಭ್ಯದ್ರವತ ಗಾಂಗೇಯಂ ಪುತ್ರಸ್ಯ ತವ ಪಶ್ಯತಃ||

ನಿನ್ನ ಮಗನು ನೋಡುತ್ತಿದ್ದಂತೆಯೇ ವೃದ್ಧರಾದ ವಿರಾಟ-ದ್ರುಪದರೂ ಕುಂತಿಭೋಜನೂ ಗಾಂಗೇಯನನ್ನು ಎದುರಿಸಿದರು.

06106006a ನಕುಲಃ ಸಹದೇವಶ್ಚ ಧರ್ಮರಾಜಶ್ಚ ವೀರ್ಯವಾನ್|

06106006c ತಥೇತರಾಣಿ ಸೈನ್ಯಾನಿ ಸರ್ವಾಣ್ಯೇವ ವಿಶಾಂ ಪತೇ|

06106006e ಸಮಾದ್ರವಂತ ಗಾಂಗೇಯಂ ಶ್ರುತ್ವಾ ಪಾರ್ಥಸ್ಯ ಭಾಷಿತಂ||

ವಿಶಾಂಪತೇ! ಪಾರ್ಥನು ಹೇಳಿದುದನ್ನು ಕೇಳಿ ನಕುಲ ಸಹದೇವರೂ ವೀರ್ಯವಾನ್ ಧರ್ಮರಾಜನೂ ಹಾಗೆಯೇ ಇತರ ಎಲ್ಲ ಸೇನೆಗಳೂ ಗಾಂಗೇಯನನ್ನು ಮುತ್ತಿಗೆ ಹಾಕಿದರು.

06106007a ಪ್ರತ್ಯುದ್ಯಯುಸ್ತಾವಕಾಶ್ಚ ಸಮೇತಾಸ್ತಾನ್ಮಹಾರಥಾನ್|

06106007c ಯಥಾಶಕ್ತಿ ಯಥೋತ್ಸಾಹಂ ತನ್ಮೇ ನಿಗದತಃ ಶೃಣು||

ಆಗ ನಿನ್ನವರ ಮತ್ತು ಒಟ್ಟಾಗಿ ಸೇರಿದ್ದ ಅವರ ಮಹಾರಥರ ನಡುವೆ ಯಥಾಶಕ್ತಿ ಯಥೋತ್ಸಾಹಿತ ಪ್ರತಿಯುದ್ಧವು ನಡೆಯಿತು. ಅದನ್ನು ನಿನಗೆ ಹೇಳುತ್ತೇನೆ. ಕೇಳು.

06106008a ಚಿತ್ರಸೇನೋ ಮಹಾರಾಜ ಚೇಕಿತಾನಂ ಸಮಭ್ಯಯಾತ್|

06106008c ಭೀಷ್ಮಪ್ರೇಪ್ಸುಂ ರಣೇ ಯಾಂತಂ ವೃಷಂ ವ್ಯಾಘ್ರಶಿಶುರ್ಯಥಾ||

ಮಹಾರಾಜ! ಹೋರಿಯನ್ನು ವ್ಯಾಘ್ರದ ಮರಿಯೊಂದು ಕಚ್ಚಲು ಹೋಗುವಂತೆ ರಣದಲ್ಲಿ ಭೀಷ್ಮನನ್ನು ತಲುಪಲು ಹೋಗುತ್ತಿದ್ದ ಚೇಕಿತಾನನನ್ನು ಚಿತ್ರಸೇನನು ಎದುರಿಸಿದನು.

06106009a ಧೃಷ್ಟದ್ಯುಮ್ನಂ ಮಹಾರಾಜ ಭೀಷ್ಮಾಂತಿಕಮುಪಾಗತಂ|

06106009c ತ್ವರಮಾಣೋ ರಣೇ ಯತ್ತಂ ಕೃತವರ್ಮಾ ನ್ಯವಾರಯತ್||

ಮಹಾರಾಜ! ಭೀಷ್ಮನ ಬಳಿ ಹೋಗುತ್ತಿದ್ದ ಧೃಷ್ಟದ್ಯುಮ್ನನನ್ನು ತ್ವರೆಮಾಡಿ ರಣದಲ್ಲಿ ಪ್ರಯತ್ನಪಟ್ಟು ಕೃತವರ್ಮನು ತಡೆದನು.

06106010a ಭೀಮಸೇನಂ ಸುಸಂಕ್ರುದ್ಧಂ ಗಾಂಗೇಯಸ್ಯ ವಧೈಷಿಣಂ|

06106010c ತ್ವರಮಾಣೋ ಮಹಾರಾಜ ಸೌಮದತ್ತಿರ್ನ್ಯವಾರಯತ್||

ಮಹಾರಾಜ! ಗಾಂಗೇಯನ ವಧೆಯನ್ನು ಇಚ್ಛಿಸಿ ಸುಸಂಕ್ರುದ್ಧನಾಗಿ ತ್ವರೆಮಾಡುತ್ತಿದ್ದ ಭೀಮಸೇನನನ್ನು ಸೌಮದತ್ತಿಯು ತಡೆದನು.

06106011a ತಥೈವ ನಕುಲಂ ವೀರಂ ಕಿರಂತಂ ಸಾಯಕಾನ್ಬಹೂನ್|

06106011c ವಿಕರ್ಣೋ ವಾರಯಾಮಾಸ ಇಚ್ಛನ್ಭೀಷ್ಮಸ್ಯ ಜೀವಿತಂ||

ಹಾಗೆಯೇ ಅನೇಕ ಸಾಯಕಗಳನ್ನು ಬೀರುತ್ತಿದ್ದ ನಕುಲನನ್ನು ಭೀಷ್ಮನ ಜೀವಿತವನ್ನು ಇಚ್ಛಿಸಿ ವಿಕರ್ಣನು ತಡೆದನು.

06106012a ಸಹದೇವಂ ತಥಾ ಯಾಂತಂ ಯತ್ತಂ ಭೀಷ್ಮರಥಂ ಪ್ರತಿ|

06106012c ವಾರಯಾಮಾಸ ಸಂಕ್ರುದ್ಧಃ ಕೃಪಃ ಶಾರದ್ವತೋ ಯುಧಿ||

ಯುದ್ಧದಲ್ಲಿ ಭೀಷ್ಮನ ರಥದ ಕಡೆ ಹೋಗಲು ಪ್ರಯತ್ನಿಸುತ್ತಿದ್ದ ಸಹದೇವನನ್ನು ಸಂಕ್ರುದ್ಧ ಶಾರದ್ವತ ಕೃಪನು ತಡೆದನು.

06106013a ರಾಕ್ಷಸಂ ಕ್ರೂರಕರ್ಮಾಣಂ ಭೈಮಸೇನಿಂ ಮಹಾಬಲಂ|

06106013c ಭೀಷ್ಮಸ್ಯ ನಿಧನಂ ಪ್ರೇಪ್ಸುಂ ದುರ್ಮುಖೋಽಭ್ಯದ್ರವದ್ಬಲೀ||

ಭೀಷ್ಮನ ನಿಧನವನ್ನು ತರಲು ಹೋಗುತ್ತಿದ್ದ ಕ್ರೂರಕರ್ಮಿ ಭೈಮಸೇನಿ ಮಹಾಬಲ ರಾಕ್ಷಸನನ್ನು ಬಲೀ ದುರ್ಮುಖನು ಎದುರಿಸಿದನು.

06106014a ಸಾತ್ಯಕಿಂ ಸಮರೇ ಕ್ರುದ್ಧಮಾರ್ಶ್ಯಶೃಂಗಿರವಾರಯತ್|

06106014c ಅಭಿಮನ್ಯುಂ ಮಹಾರಾಜ ಯಾಂತಂ ಭೀಷ್ಮರಥಂ ಪ್ರತಿ|

06106014e ಸುದಕ್ಷಿಣೋ ಮಹಾರಾಜ ಕಾಂಬೋಜಃ ಪ್ರತ್ಯವಾರಯತ್||

ಮಹಾರಾಜ! ಸಮರದಲ್ಲಿ ಸಾತ್ಯಕಿಯನ್ನು ಆರ್ಶ್ಯಶೃಂಗಿಯು ತಡೆದನು. ಭೀಷ್ಮರಥದ ಕಡೆ ಹೋಗುತ್ತಿದ್ದ ಅಭಿಮನ್ಯುವನ್ನು ಕಾಂಬೋಜ ರಾಜ ಸುದಕ್ಷಿಣನು ತಡೆದನು.

06106015a ವಿರಾಟದ್ರುಪದೌ ವೃದ್ಧೌ ಸಮೇತಾವರಿಮರ್ದನೌ|

06106015c ಅಶ್ವತ್ಥಾಮಾ ತತಃ ಕ್ರುದ್ಧೋ ವಾರಯಾಮಾಸ ಭಾರತ||

ಭಾರತ! ಒಟ್ಟಿಗಿದ್ದ ವೃದ್ಧ ವಿರಾಟ-ದ್ರುಪದರನ್ನು ಕ್ರುದ್ಧ ಅಶ್ವತ್ಥಾಮನು ತಡೆಹಿಡಿದನು.

06106016a ತಥಾ ಪಾಂಡುಸುತಂ ಜ್ಯೇಷ್ಠಂ ಭೀಷ್ಮಸ್ಯ ವಧಕಾಂಕ್ಷಿಣಂ|

06106016c ಭಾರದ್ವಾಜೋ ರಣೇ ಯತ್ತೋ ಧರ್ಮಪುತ್ರಮವಾರಯತ್||

ಹಾಗೆಯೇ ಭೀಷ್ಮನ ವಧಾಕಾಂಕ್ಷಿಯಾಗಿದ್ದ ಜ್ಯೇಷ್ಠ ಪಾಂಡುಸುತ ಧರ್ಮಪುತ್ರನನ್ನು ರಣದಲ್ಲಿ ಭಾರದ್ವಾಜನು ಪ್ರಯತ್ನಪಟ್ಟು ತಡೆದನು.

06106017a ಅರ್ಜುನಂ ರಭಸಂ ಯುದ್ಧೇ ಪುರಸ್ಕೃತ್ಯ ಶಿಖಂಡಿನಂ|

06106017c ಭೀಷ್ಮಪ್ರೇಪ್ಸುಂ ಮಹಾರಾಜ ತಾಪಯಂತಂ ದಿಶೋ ದಶ|

06106017e ದುಃಶಾಸನೋ ಮಹೇಷ್ವಾಸೋ ವಾರಯಾಮಾಸ ಸಂಯುಗೇ||

ಮಹಾರಾಜ! ಶಿಖಂಡಿಯನ್ನು ಮುಂದಿರಿಸಿಕೊಂಡು ರಭಸದಿಂದ ಯುದ್ಧದಲ್ಲಿ ದಶದಿಕ್ಕುಗಳನ್ನೂ ಸುಡುತ್ತಾ ಭೀಷ್ಮನೆಡೆಗೆ ಬರುತ್ತಿದ್ದ ಅರ್ಜುನನನ್ನು ಸಂಯುಗದಲ್ಲಿ ಮಹೇಷ್ವಾಸ ದುಃಶಾಸನನು ತಡೆದನು.

06106018a ಅನ್ಯೇ ಚ ತಾವಕಾ ಯೋಧಾಃ ಪಾಂಡವಾನಾಂ ಮಹಾರಥಾನ್|

06106018c ಭೀಷ್ಮಾಯಾಭಿಮುಖಂ ಯಾತಾನ್ವಾರಯಾಮಾಸುರಾಹವೇ||

ನಿನ್ನ ಅನ್ಯ ಯೋಧರೂ ಕೂಡ ಭೀಷ್ಮಾಭಿಮುಖವಾಗಿ ಬರುತ್ತಿದ್ದ ಮಹಾರಥ ಪಾಂಡವರನ್ನು ಆಹವದದಲ್ಲಿ ತಡೆದರು.

06106019a ಧೃಷ್ಟದ್ಯುಮ್ನಸ್ತು ಸೈನ್ಯಾನಿ ಪ್ರಾಕ್ರೋಶತ ಪುನಃ ಪುನಃ|

06106019c ಅಭಿದ್ರವತ ಸಂರಬ್ಧಾ ಭೀಷ್ಮಮೇಕಂ ಮಹಾಬಲಂ||

ಧೃಷ್ಟದ್ಯುಮ್ನನಾದರೋ ಸೇನೆಗಳಿಗೆ ಪುನಃ ಪುನಃ ಕೂಗಿ ಹೇಳುತ್ತಿದ್ದನು: “ಸಂರಬ್ಧರಾಗಿ ಮಹಾಬಲ ಭೀಷ್ಮನೊಬ್ಬನನ್ನೇ ಆಕ್ರಮಣಿಸಿರಿ.

06106020a ಏಷೋಽರ್ಜುನೋ ರಣೇ ಭೀಷ್ಮಂ ಪ್ರಯಾತಿ ಕುರುನಂದನಃ|

06106020c ಅಭಿದ್ರವತ ಮಾ ಭೈಷ್ಟ ಭೀಷ್ಮೋ ನ ಪ್ರಾಪ್ಸ್ಯತೇ ಹಿ ವಃ||

ಈ ಕುರುನಂದನ ಅರ್ಜುನನು ರಣದಲ್ಲಿ ಭೀಷ್ಮನೊಡನೆ ಯುದ್ಧ ಮಾಡುತ್ತಾನೆ. ನೀವೂ ಕೂಡ ಭೀಷ್ಮನೊಡನೆ ಯುದ್ಧ ಮಾಡಿ. ಭಯಪಡಬೇಡಿ. ಅವನಿರುವಾಗ ಭೀಷ್ಮನು ನಿಮ್ಮನ್ನು ತಲುಪಲಾರನು.

06106021a ಅರ್ಜುನಂ ಸಮರೇ ಯೋದ್ಧುಂ ನೋತ್ಸಹೇತಾಪಿ ವಾಸವಃ|

06106021c ಕಿಮು ಭೀಷ್ಮೋ ರಣೇ ವೀರಾ ಗತಸತ್ತ್ವೋಽಲ್ಪಜೀವಿತಃ||

ವೀರರೇ! ಅರ್ಜುನನನ್ನು ಸಮರದಲ್ಲಿ ವಾಸವನೂ ಕೂಡ ಯುದ್ಧದಲ್ಲಿ ಎದುರಿಸಲು ಉತ್ಸಾಹಿಸುವುದಿಲ್ಲ. ಇನ್ನು ರಣದಲ್ಲಿ ಶಕ್ತಿಯನ್ನು ಕಳೆದುಕೊಂಡ ಅಲ್ಪಜೀವಿತನಾದ ಭೀಷ್ಮನೆಲ್ಲಿ?”

06106022a ಇತಿ ಸೇನಾಪತೇಃ ಶ್ರುತ್ವಾ ಪಾಂಡವಾನಾಂ ಮಹಾರಥಾಃ|

06106022c ಅಭ್ಯದ್ರವಂತ ಸಂಹೃಷ್ಟಾ ಗಾಂಗೇಯಸ್ಯ ರಥಂ ಪ್ರತಿ||

ಹೀಗೆ ಸೇನಾಪತಿಯನ್ನು ಕೇಳಿ ಪಾಂಡವರ ಮಹಾರಥರು ಸಂಹೃಷ್ಟರಾಗಿ ಗಾಂಗೇಯನ ರಥದ ಕಡೆ ಧಾವಿಸಿದರು.

06106023a ಆಗಚ್ಛತಸ್ತಾನ್ಸಮರೇ ವಾರ್ಯೋಘಾನ್ಪ್ರಬಲಾನಿವ|

06106023c ನ್ಯವಾರಯಂತ ಸಂಹೃಷ್ಟಾಸ್ತಾವಕಾಃ ಪುರುಷರ್ಷಭಾಃ||

ಪ್ರಲಯಕಾಲದ ಜಲಪ್ರವಾಹದಂತೆ ಮುನ್ನುಗ್ಗಿ ಬರುತ್ತಿದ್ದ ಅವರನ್ನು ಸಂಹೃಷ್ಟರಾದ ನಿನ್ನವರ ಪುರುಷರ್ಷಭರು ತಡೆದು ನಿಲ್ಲಿಸಿದರು.

06106024a ದುಃಶಾಸನೋ ಮಹಾರಾಜ ಭಯಂ ತ್ಯಕ್ತ್ವಾ ಮಹಾರಥಃ|

06106024c ಭೀಷ್ಮಸ್ಯ ಜೀವಿತಾಕಾಂಕ್ಷೀ ಧನಂಜಯಮುಪಾದ್ರವತ್||

ಮಹಾರಾಜ! ಭೀಷ್ಮನ ಜೀವಿತಾಕಾಂಕ್ಷಿಯಾದ ಮಹಾರಥ ದುಃಶಾಸನನು ಭಯವನ್ನು ತ್ಯಜಿಸಿ ಧನಂಜಯನನ್ನು ಎದುರಿಸಿದನು.

06106025a ತಥೈವ ಪಾಂಡವಾಃ ಶೂರಾ ಗಾಂಗೇಯಸ್ಯ ರಥಂ ಪ್ರತಿ|

06106025c ಅಭ್ಯದ್ರವಂತ ಸಂಗ್ರಾಮೇ ತವ ಪುತ್ರಾನ್ಮಹಾರಥಾನ್||

ಹಾಗೆಯೇ ಗಾಂಗೇಯನ ರಥದ ಕಡೆ ಬರುತ್ತಿದ್ದ ಶೂರ ಪಾಂಡವರೂ ಕೂಡ ಸಂಗ್ರಾಮದಲ್ಲಿ ನಿನ್ನ ಮಹಾರಥ ಮಕ್ಕಳನ್ನು ಎದುರಿಸಿದರು.

06106026a ತತ್ರಾದ್ಭುತಮಪಶ್ಯಾಮ ಚಿತ್ರರೂಪಂ ವಿಶಾಂ ಪತೇ|

06106026c ದುಃಶಾಸನರಥಂ ಪ್ರಾಪ್ತೋ ಯತ್ಪಾರ್ಥೋ ನಾತ್ಯವರ್ತತ||

ವಿಶಾಂಪತೇ! ಅಲ್ಲಿ ನಾವು ಚಿತ್ರರೂಪದ ಅದ್ಭುತವನ್ನು ನೋಡಿದೆವು. ದುಃಶಾಸನನ ರಥವನ್ನು ತಲುಪಿದ ಪಾರ್ಥನು ಮುಂದುವರೆಯಲಿಲ್ಲ.

06106027a ಯಥಾ ವಾರಯತೇ ವೇಲಾ ಕ್ಷುಭಿತಂ ವೈ ಮಹಾರ್ಣವಂ|

06106027c ತಥೈವ ಪಾಂಡವಂ ಕ್ರುದ್ಧಂ ತವ ಪುತ್ರೋ ನ್ಯವಾರಯತ್||

ದಡವು ಹೇಗೆ ಮಹಾಸಾಗರದಲ್ಲಿ ಕ್ಷೋಭೆಗೊಂಡ ಅಲೆಗಳನ್ನು ತಡೆಹಿಡಿಯುತ್ತದೆಯೋ ಹಾಗೆ ನಿನ್ನ ಪುತ್ರನು ಕ್ರುದ್ಧನಾಗಿ ಪಾಂಡವನನ್ನು ತಡೆದನು.

06106028a ಉಭೌ ಹಿ ರಥಿನಾಂ ಶ್ರೇಷ್ಠಾವುಭೌ ಭಾರತ ದುರ್ಜಯೌ|

06106028c ಉಭೌ ಚಂದ್ರಾರ್ಕಸದೃಶೌ ಕಾಂತ್ಯಾ ದೀಪ್ತ್ಯಾ ಚ ಭಾರತ||

06106029a ತೌ ತಥಾ ಜಾತಸಂರಂಭಾವನ್ಯೋನ್ಯವಧಕಾಂಕ್ಷಿಣೌ|

06106029c ಸಮೀಯತುರ್ಮಹಾಸಂಖ್ಯೇ ಮಯಶಕ್ರೌ ಯಥಾ ಪುರಾ||

ಭಾರತ! ಇಬ್ಬರೂ ರಥಿಗಳಲ್ಲಿ ಶ್ರೇಷ್ಠರು. ಇಬ್ಬರೂ ದುರ್ಜಯರು. ಭಾರತ! ಇಬ್ಬರೂ ಕಾಂತಿ ಮತ್ತು ದೀಪ್ತದಲ್ಲಿ ಚಂದ್ರಾರ್ಕಸದೃಶರು. ಅವರಿಬ್ಬರೂ ಆಗ ಕುಪಿತರಾಗಿ ಅನ್ಯೋನ್ಯರ ವಧಾಕಾಂಕ್ಷಿಗಳಾಗಿ ಮಹಾಯುದ್ಧದಲ್ಲಿ ಹಿಂದೆ ಮಹ-ಶಕ್ರರಂತೆ ಎದುರಾದರು.

06106030a ದುಃಶಾಸನೋ ಮಹಾರಾಜ ಪಾಂಡವಂ ವಿಶಿಖೈಸ್ತ್ರಿಭಿಃ|

06106030c ವಾಸುದೇವಂ ಚ ವಿಂಶತ್ಯಾ ತಾಡಯಾಮಾಸ ಸಂಯುಗೇ||

ಮಹಾರಾಜ! ದುಃಶಾಸನನು ಸಂಯುಗದಲ್ಲಿ ಪಾಂಡವನನ್ನು ಮೂರು ವಿಶಿಖಗಳಿಂದ ಮತ್ತು ವಾಸುದೇವನನ್ನು ಇಪ್ಪತ್ತರಿಂದ ಹೊಡೆದನು.

06106031a ತತೋಽರ್ಜುನೋ ಜಾತಮನ್ಯುರ್ವಾರ್ಷ್ಣೇಯಂ ವೀಕ್ಷ್ಯ ಪೀಡಿತಂ|

06106031c ದುಃಶಾಸನಂ ಶತೇನಾಜೌ ನಾರಾಚಾನಾಂ ಸಮಾರ್ಪಯತ್|

06106031e ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ||

ಆಗ ವಾರ್ಷ್ಣೆಯನು ಪೀಡಿತನಾದುದನ್ನು ನೋಡಿ ಸಿಟ್ಟಿಗೆದ್ದ ಅರ್ಜುನನು ದುಃಶಾಸನನನ್ನು ನೂರು ನಾರಾಚಗಳಿಂದ ಹೊಡೆದನು. ಅವು ಆಹವದಲ್ಲಿ ಅವನ ಕವಚವನ್ನು ಸೀಳಿ ರಕ್ತವನ್ನು ಕುಡಿದವು.

06106032a ದುಃಶಾಸನಸ್ತತಃ ಕ್ರುದ್ಧಃ ಪಾರ್ಥಂ ವಿವ್ಯಾಧ ಪಂಚಭಿಃ|

06106032c ಲಲಾಟೇ ಭರತಶ್ರೇಷ್ಠ ಶರೈಃ ಸನ್ನತಪರ್ವಭಿಃ||

ಭರತಶ್ರೇಷ್ಠ! ಆಗ ಕ್ರುದ್ಧನಾಗಿ ದುಃಶಾಸನನು ಪಾರ್ಥನ ಹಣೆಗೆ ಐದು ಸನ್ನತಪರ್ವ ಶರಗಳಿಂದ ಹೊಡೆದನು.

06106033a ಲಲಾಟಸ್ಥೈಸ್ತು ತೈರ್ಬಾಣೈಃ ಶುಶುಭೇ ಪಾಂಡವೋತ್ತಮಃ|

06106033c ಯಥಾ ಮೇರುರ್ಮಹಾರಾಜ ಶೃಂಗೈರತ್ಯರ್ಥಮುಚ್ಛ್ರಿತೈಃ||

ಮಹಾರಾಜ! ಲಲಾಟಕ್ಕೆ ಚುಚ್ಚಿಕೊಂಡಿದ್ದ ಆ ಮೂರು ಬಾಣಗಳಿಂದ ಪಾಂಡವೋತ್ತಮನು ಮೂರು ಎತ್ತರ ಶೃಂಗಗಳಿಂದ ಕೂಡಿದ ಮೇರುವಿನಂತೆ ಶೋಭಿಸಿದನು.

06106034a ಸೋಽತಿವಿದ್ಧೋ ಮಹೇಷ್ವಾಸಃ ಪುತ್ರೇಣ ತವ ಧನ್ವಿನಾ|

06106034c ವ್ಯರಾಜತ ರಣೇ ಪಾರ್ಥಃ ಕಿಂಶುಕಃ ಪುಷ್ಪವಾನಿವ||

ನಿನ್ನ ಪುತ್ರ ಧನ್ವಿಯಿಂದ ಅತಿಯಾಗಿ ಹೊಡೆಯಲ್ಪಟ್ಟ ಮಹೇಷ್ವಾಸ ಪಾರ್ಥನು ರಣದಲ್ಲಿ ಕಿಂಶುಕ ಪುಷ್ಪದಂತೆ ವಿರಾಜಿಸಿದನು.

06106035a ದುಃಶಾಸನಂ ತತಃ ಕ್ರುದ್ಧಃ ಪೀಡಯಾಮಾಸ ಪಾಂಡವಃ|

06106035c ಪರ್ವಣೀವ ಸುಸಂಕ್ರುದ್ಧೋ ರಾಹುರುಗ್ರೋ ನಿಶಾಕರಂ||

ಆಗ ಕ್ರುದ್ಧನಾದ ಪಾಂಡವನು ದುಃಶಾಸನನನ್ನು ಅಮವಾಸ್ಯೆಯಂದು ಸಂಕ್ರುದ್ಧನಾದ ಉಗ್ರ ರಾಹುವು ನಿಶಾಕರನನ್ನು ಹೇಗೋ ಹಾಗೆ ಪೀಡಿಸತೊಡಗಿದನು.

06106036a ಪೀಡ್ಯಮಾನೋ ಬಲವತಾ ಪುತ್ರಸ್ತವ ವಿಶಾಂ ಪತೇ|

06106036c ವಿವ್ಯಾಧ ಸಮರೇ ಪಾರ್ಥಂ ಕಂಕಪತ್ರೈಃ ಶಿಲಾಶಿತೈಃ||

ವಿಶಾಂಪತೇ! ಬಲವತ್ತಾಗಿ ಪೀಡೆಗೊಳಗಾದ ನಿನ್ನ ಮಗನು ಸಮರದಲ್ಲಿ ಪಾರ್ಥನನ್ನು ಶಿಲಾಶಿತ ಕಂಕಪತ್ರಗಳಿಂದ ಹೊಡೆದನು.

06106037a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ತ್ವರಮಾಣಃ ಪರಾಕ್ರಮೀ|

06106037c ಆಜಘಾನ ತತಃ ಪಶ್ಚಾತ್ಪುತ್ರಂಟ್ತೇ ನವಭಿಃ ಶರೈಃ||

ಪರಾಕ್ರಮೀ ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ತ್ವರೆಮಾಡಿ ನಂತರ ನಿನ್ನ ಪುತ್ರನನ್ನೂ ಒಂಭತ್ತು ಶರಗಳಿಂದ ಹೊಡೆದನು.

06106038a ಸೋಽನ್ಯತ್ಕಾರ್ಮುಕಮಾದಾಯ ಭೀಷ್ಮಸ್ಯ ಪ್ರಮುಖೇ ಸ್ಥಿತಃ|

06106038c ಅರ್ಜುನಂ ಪಂಚವಿಂಶತ್ಯಾ ಬಾಹ್ವೋರುರಸಿ ಚಾರ್ಪಯತ್||

ಭೀಷ್ಮನ ಮುಂದೆ ನಿಂತಿದ್ದ ಅವನು ಬೇರೊಂದು ಬಿಲ್ಲನ್ನು ಎತ್ತಿಕೊಂಡು ಅರ್ಜುನನನ್ನು ಇಪ್ಪತ್ತೈದು ಬಾಣಗಳಿಂದ ಬಾಹು-ಎದೆಗಳಿಗೆ ಹೊಡೆದನು.

06106039a ತಸ್ಯ ಕ್ರುದ್ಧೋ ಮಹಾರಾಜ ಪಾಂಡವಃ ಶತ್ರುಕರ್ಶನಃ|

06106039c ಅಪ್ರೈಷೀದ್ವಿಶಿಖಾನ್ಘೋರಾನ್ಯಮದಂಡೋಪಮಾನ್ಬಹೂನ್||

ಮಹಾರಾಜ! ಆಗ ಶತ್ರುಕರ್ಶನ ಪಾಂಡವನು ಅವನ ಮೇಲೆ ಕ್ರುದ್ಧನಾಗಿ ಅನೇಕ ಯಮದಂಡಗಳಂತಿರುವ ಘೋರ ವಿಶಿಖಗಳನ್ನು ಪ್ರಯೋಗಿಸಿದನು.

06106040a ಅಪ್ರಾಪ್ತಾನೇವ ತಾನ್ಬಾಣಾಂಶ್ಚಿಚ್ಛೇದ ತನಯಸ್ತವ|

06106040c ಯತಮಾನಸ್ಯ ಪಾರ್ಥಸ್ಯ ತದದ್ಭುತಮಿವಾಭವತ್|

06106040e ಪಾರ್ಥಂ ಚ ನಿಶಿತೈರ್ಬಾಣೈರವಿಧ್ಯತ್ತನಯಸ್ತವ||

ತಲುಪುವುದರೊಳಗೇ ಆ ಬಾಣಗಳನ್ನು ನಿನ್ನ ಮಗನು ತುಂಡರಿಸಿದನು. ಪ್ರಯತ್ನಿಸುತ್ತಿದ್ದ ಪಾರ್ಥನ ಅದೊಂದು ಅದ್ಭುತವಾಯಿತು. ಪಾರ್ಥನೂ ಕೂಡ ನಿನ್ನ ಮಗನನ್ನು ನಿಶಿತ ಬಾಣಗಳಿಂದ ಹೊಡೆದನು.

06106041a ತತಃ ಕ್ರುದ್ಧೋ ರಣೇ ಪಾರ್ಥಃ ಶರಾನ್ಸಂಧಾಯ ಕಾರ್ಮುಕೇ|

06106041c ಪ್ರೇಷಯಾಮಾಸ ಸಮರೇ ಸ್ವರ್ಣಪುಂಖಾಂ ಶಿಲಾಶಿತಾನ್||

ಆಗ ರಣದಲ್ಲಿ ಕ್ರುದ್ಧನಾದ ಪಾರ್ಥನು ಬಿಲ್ಲಿಗೆ ಸ್ವರ್ಣಪುಂಖ ಶಿಲಾಶಿತ ಶರಗಳನ್ನು ಹೂಡಿ ಸಮರದಲ್ಲಿ ಪ್ರಯೋಗಿಸಿದನು.

06106042a ನ್ಯಮಜ್ಜಂಸ್ತೇ ಮಹಾರಾಜ ತಸ್ಯ ಕಾಯೇ ಮಹಾತ್ಮನಃ|

06106042c ಯಥಾ ಹಂಸಾ ಮಹಾರಾಜ ತಡಾಗಂ ಪ್ರಾಪ್ಯ ಭಾರತ||

ಮಹಾರಾಜ! ಭಾರತ! ಸರೋವರವನ್ನು ಸೇರಿ ಹಂಸಗಳು ಹೇಗೋ ಹಾಗೆ ಅವು ಆ ಮಹಾತ್ಮನ ದೇಹದ ಒಳಹೊಕ್ಕವು.

06106043a ಪೀಡಿತಶ್ಚೈವ ಪುತ್ರಸ್ತೇ ಪಾಂಡವೇನ ಮಹಾತ್ಮನಾ|

06106043c ಹಿತ್ವಾ ಪಾರ್ಥಂ ರಣೇ ತೂರ್ಣಂ ಭೀಷ್ಮಸ್ಯ ರಥಮಾಶ್ರಯತ್|

06106043e ಅಗಾಧೇ ಮಜ್ಜತಸ್ತಸ್ಯ ದ್ವೀಪೋ ಭೀಷ್ಮೋಽಭವತ್ತದಾ||

ಮಹಾತ್ಮ ಪಾಂಡವನಿಂದ ಪೀಡಿತನಾದ ನಿನ್ನ ಮಗನು ಪಾರ್ಥನನ್ನು ರಣದಲ್ಲಿಯೇ ಬಿಟ್ಟು ಕೂಡಲೇ ಭೀಷ್ಮನ ರಥವನ್ನು ಆಶ್ರಯಿಸಿದನು. ಅಗಾಧವಾಗಿ ಗಾಯಗೊಂಡಿದ್ದ ಅವನಿಗೆ ಭೀಷ್ಮನು ನೆರಳಾದನು.

06106044a ಪ್ರತಿಲಭ್ಯ ತತಃ ಸಂಜ್ಞಾಂ ಪುತ್ರಸ್ತವ ವಿಶಾಂ ಪತೇ|

06106044c ಅವಾರಯತ್ತತಃ ಶೂರೋ ಭೂಯ ಏವ ಪರಾಕ್ರಮೀ||

ವಿಶಾಂಪತೇ! ಪುನಃ ಎಚ್ಚೆತ್ತು ನಿನ್ನ ಮಗ ಶೂರ ಪರಾಕ್ರಮಿಯು ಪುನಃ ಅವನನ್ನು ತಡೆಯಲು ಪ್ರಯತ್ನಿಸಿದನು.

06106045a ಶರೈಃ ಸುನಿಶಿತೈಃ ಪಾರ್ಥಂ ಯಥಾ ವೃತ್ರಃ ಪುರಂದರಂ|

06106045c ನಿರ್ಬಿಭೇದ ಮಹಾವೀರ್ಯೋ ವಿವ್ಯಥೇ ನೈವ ಚಾರ್ಜುನಾತ್||

ಹಿಂದೆ ವೃತ್ರನು ಪುರಂದರನನ್ನು ಹೇಗೋ ಹಾಗೆ ಅವನು ಮಹಾವೀರ್ಯದಿಂದ ನಿಶಿತ ಬಾಣಗಳಿಂದ ಪಾರ್ಥನನ್ನು ಹೊಡೆದನು. ಆದರೆ ಅರ್ಜುನನು ವಿವ್ಯಥನಾಗಲಿಲ್ಲ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅರ್ಜುನದುಃಶಾಸನಸಮಾಗಮೇ ಷಡಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅರ್ಜುನದುಃಶಾಸನಸಮಾಗಮ ಎನ್ನುವ ನೂರಾಆರನೇ ಅಧ್ಯಾಯವು.

Image result for indian motifs against white background

Comments are closed.