Bhishma Parva: Chapter 105

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೫

ಭೀಷ್ಮ-ದುರ್ಯೋಧನರ ಸಂವಾದ (೧-೨೭). ಭೀಷ್ಮನ ಪರಾಕ್ರಮ (೨೮-೩೭).

06105001 ಧೃತರಾಷ್ಟ್ರ ಉವಾಚ|

06105001a ಕಥಂ ಶಿಖಂಡೀ ಗಾಂಗೇಯಮಭ್ಯಧಾವತ್ಪಿತಾಮಹಂ|

06105001c ಪಾಂಚಾಲ್ಯಃ ಸಮರೇ ಕ್ರುದ್ಧೋ ಧರ್ಮಾತ್ಮಾನಂ ಯತವ್ರತಂ||

ಧೃತರಾಷ್ಟ್ರನು ಹೇಳಿದನು: “ಶಿಖಂಡಿ ಪಾಂಚಾಲ್ಯನು ಸಮರದಲ್ಲಿ ಕ್ರುದ್ಧನಾಗಿ ಹೇಗೆ ಪಿತಾಮಹ ಯತವ್ರತ ಧರ್ಮಾತ್ಮ ಗಾಂಗೇಯನನ್ನು ಎದುರಿಸಿದನು?

06105002a ಕೇಽರಕ್ಷನ್ಪಾಂಡವಾನೀಕೇ ಶಿಖಂಡಿನಂ ಉದಾಯುಧಂ|

06105002c ತ್ವರಮಾಣಾಸ್ತ್ವರಾಕಾಲೇ ಜಿಗೀಷಂತೋ ಮಹಾರಥಾಃ||

ಆಯುಧವನ್ನು ಎತ್ತಿಹಿಡಿದ ಶಿಖಂಡಿಯನ್ನು ಪಾಂಡವರ ಸೇನೆಯಲ್ಲಿ ಯಾವ ಮಹಾರಥರು ವಿಜಯವನ್ನು ಬಯಸಿ ತ್ವರೆಮಾಡಿ ಆ ವರಕಾಲದಲ್ಲಿ ರಕ್ಷಿಸಿದರು?

06105003a ಕಥಂ ಶಾಂತನವೋ ಭೀಷ್ಮಃ ಸ ತಸ್ಮಿನ್ದಶಮೇಽಹನಿ|

06105003c ಅಯುಧ್ಯತ ಮಹಾವೀರ್ಯಃ ಪಾಂಡವೈಃ ಸಹಸೃಂಜಯೈಃ||

ಶಾಂತನವ ಭೀಷ್ಮನು ಆ ಹತ್ತನೇ ದಿವಸ ಸೃಂಜಯರೊಡನಿರುವ ಮಹಾವೀರ್ಯ ಪಾಂಡವರೊಂದಿಗೆ ಹೇಗೆ ಯುದ್ಧ ಮಾಡಿದನು?

06105004a ನ ಮೃಷ್ಯಾಮಿ ರಣೇ ಭೀಷ್ಮಂ ಪ್ರತ್ಯುದ್ಯಾತಂ ಶಿಖಂಡಿನಂ|

06105004c ಕಚ್ಚಿನ್ನ ರಥಭಂಗೋಽಸ್ಯ ಧನುರ್ವಾಶೀರ್ಯತಾಸ್ಯತಃ||

ರಣದಲ್ಲಿ ಭೀಷ್ಮನನ್ನು ಶಿಖಂಡಿಯು ಸೋಲಿಸಿದನು ಎನ್ನುವುದನ್ನು ನನಗೆ ಊಹಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಗ ಅವನ ರಥವು ತುಂಡಾಗಿರಲಿಲ್ಲ ಅಥವಾ ಧನುಸ್ಸು ಮುರಿದಿರಲಿಲ್ಲ ತಾನೇ?”

06105005 ಸಂಜಯ ಉವಾಚ|

06105005a ನಾಶೀರ್ಯತ ಧನುಸ್ತಸ್ಯ ರಥಭಂಗೋ ನ ಚಾಪ್ಯಭೂತ್|

06105005c ಯುಧ್ಯಮಾನಸ್ಯ ಸಂಗ್ರಾಮೇ ಭೀಷ್ಮಸ್ಯ ಭರತರ್ಷಭ|

06105005e ನಿಘ್ನತಃ ಸಮರೇ ಶತ್ರೂನ್ ಶರೈಃ ಸನ್ನತಪರ್ವಭಿಃ||

ಸಂಜಯನು ಹೇಳಿದನು: “ಭರತರ್ಷಭ! ಸಂಗ್ರಾಮದಲ್ಲಿ ಯುದ್ಧ ಮಾಡಿ ಸಮರದಲ್ಲಿ ಶತ್ರುಗಳನ್ನು ಸನ್ನತಪರ್ವ ಶರಗಳಿಂದ ಸಂಹರಿಸುತ್ತಿದ್ದ ಭೀಷ್ಮನ ಧನುಸ್ಸೂ ತುಂಡಾಗಿರಲಿಲ್ಲ ಮತ್ತು ರಥವೂ ಮುರಿದಿರಲಿಲ್ಲ.

06105006a ಅನೇಕಶತಸಾಹಸ್ರಾಸ್ತಾವಕಾನಾಂ ಮಹಾರಥಾಃ|

06105006c ರಥದಂತಿಗಣಾ ರಾಜನ್ ಹಯಾಶ್ಚೈವ ಸುಸಜ್ಜಿತಾಃ|

06105006e ಅಭ್ಯವರ್ತಂತ ಯುದ್ಧಾಯ ಪುರಸ್ಕೃತ್ಯ ಪಿತಾಮಹಂ||

ರಾಜನ್! ಪಿತಾಮಹನನ್ನು ಮುಂದಿರಿಸಿಕೊಂಡು ನಿನ್ನವರಾದ ಅನೇಕ ಶತ ಸಹಸ್ರ ಮಹಾರಥರು ಸುಸಜ್ಜಿತವಾದ ರಥ, ಆನೆ ಮತ್ತು ಕುದುರೆಗಳ ಗಣಗಳೊಂದಿಗೆ ಯುದ್ಧಕ್ಕೆ ಧಾವಿಸಿದರು.

06105007a ಯಥಾಪ್ರತಿಜ್ಞಂ ಕೌರವ್ಯ ಸ ಚಾಪಿ ಸಮಿತಿಂಜಯಃ|

06105007c ಪಾರ್ಥಾನಾಮಕರೋದ್ಭೀಷ್ಮಃ ಸತತಂ ಸಮಿತಿಕ್ಷಯಂ||

ಕೌರವ್ಯ! ಪ್ರತಿಜ್ಞೆಮಾಡಿದ್ದಂತೆ ಸಮಿತಿಂಜಯ ಭೀಷ್ಮನು ಸತತವೂ ಪಾಂಡವರ ಸಮಿತಿಕ್ಷಯವನ್ನು ಮಾಡುತ್ತಿದ್ದನು.

06105008a ಯುಧ್ಯಮಾನಂ ಮಹೇಷ್ವಾಸಂ ವಿನಿಘ್ನಂತಂ ಪರಾಂ ಶರೈಃ|

06105008c ಪಾಂಚಾಲಾಃ ಪಾಂಡವೈಃ ಸಾರ್ಧಂ ಸರ್ವ ಏವಾಭ್ಯವಾರಯನ್||

ಶರಗಳಿಂದ ಶತ್ರುಗಳನ್ನು ವಧಿಸುತ್ತಾ ಯುದ್ಧಮಾಡುತ್ತಿದ್ದ ಆ ಮಾಹೇಷ್ವಾಸನನ್ನು ಪಾಂಚಾಲರು ಪಾಂಡವರೊಂದಿಗೆ ಎಲ್ಲರೂ ಆಕ್ರಮಿಸಿದರು.

06105009a ದಶಮೇಽಹನಿ ಸಂಪ್ರಾಪ್ತೇ ತತಾಪ ರಿಪುವಾಹಿನೀಂ|

06105009c ಕೀರ್ಯಮಾಣಾಂ ಶಿತೈರ್ಬಾಣೈಃ ಶತಶೋಽಥ ಸಹಸ್ರಶಃ||

06105010a ನ ಹಿ ಭೀಷ್ಮಂ ಮಹೇಷ್ವಾಸಂ ಪಾಂಡವಾಃ ಪಾಂಡುಪೂರ್ವಜ|

06105010c ಅಶಕ್ನುವನ್ರಣೇ ಜೇತುಂ ಪಾಶಹಸ್ತಮಿವಾಂತಕಂ||

ಪಾಂಡುಪೂರ್ವಜ! ಹತ್ತನೆಯ ದಿನವು ಪ್ರಾರಂಭವಾಗಲು ರಿಪುವಾಹಿನಿಯನ್ನು ನೂರಾರು ಸಹಸ್ರಾರು ನಿಶಿತ ಬಾಣಗಳನ್ನು ತೂರಿ ಸುಡುತ್ತಿದ್ದ ಮಹೇಷ್ವಾಸ ಭೀಷ್ಮನನ್ನು ಪಾಂಡವರು ಪಾಶಹಸ್ತ ಅಂತಕನನ್ನು ಹೇಗೋ ಹಾಗೆ ರಣದಲ್ಲಿ ಗೆಲ್ಲಲು ಅಶಕ್ತರಾದರು.

06105011a ಅಥೋಪಾಯಾನ್ಮಹಾರಾಜ ಸವ್ಯಸಾಚೀ ಪರಂತಪಃ|

06105011c ತ್ರಾಸಯನ್ರಥಿನಃ ಸರ್ವಾನ್ಬೀಭತ್ಸುರಪರಾಜಿತಃ||

06105012a ಸಿಂಹವದ್ವಿನದನ್ನುಚ್ಚೈರ್ಧನುರ್ಜ್ಯಾಂ ವಿಕ್ಷಿಪನ್ಮುಹುಃ|

06105012c ಶರೌಘಾನ್ವಿಸೃಜನ್ಪಾರ್ಥೋ ವ್ಯಚರತ್ಕಾಲವದ್ರಣೇ||

ಮಹಾರಾಜ! ಆಗ ಉಪಾಯದಂತೆ ಪರಂತಪ ಸವ್ಯಸಾಚಿ ಬೀಭತ್ಸು ಅಪರಾಜಿತನು ಸಿಂಹದಂತೆ ಗರ್ಜಿಸುತ್ತಾ ಧನುಸ್ಸನ್ನು ಪುನಃ ಪುನಃ ಎಳೆದು ಟೇಂಕರಿಸುತ್ತಾ ಸರ್ವ ರಥಿಗಳನ್ನೂ ನಡುಗಿಸುತ್ತಾ ಶರೌಘಗಳನ್ನು ಸೃಷ್ಟಿಸುತ್ತಾ ಕಾಲನಂತೆ ರಣದಲ್ಲಿ ಚರಿಸಿದನು.

06105013a ತಸ್ಯ ಶಬ್ದೇನ ವಿತ್ರಸ್ತಾಸ್ತಾವಕಾ ಭರತರ್ಷಭ|

06105013c ಸಿಂಹಸ್ಯೇವ ಮೃಗಾ ರಾಜನ್ವ್ಯದ್ರವಂತ ಮಹಾಭಯಾತ್||

ಭರತರ್ಷಭ! ರಾಜನ್! ಅವನ ಶಬ್ಧದಿಂದ ನಡುಗಿದ ನಿನ್ನವರು ಸಿಂಹನನ್ನು ನೋಡಿದ ಜಿಂಕೆಗಳಂತೆ ಮಹಾಭಯದಿಂದ ಓಡಿಹೋದರು.

06105014a ಜಯಂತಂ ಪಾಂಡವಂ ದೃಷ್ಟ್ವಾ ತ್ವತ್ಸೈನ್ಯಂ ಚಾಭಿಪೀಡಿತಂ|

06105014c ದುರ್ಯೋಧನಸ್ತತೋ ಭೀಷ್ಮಮಬ್ರವೀದ್ಭೃಶಪೀಡಿತಃ||

ತನ್ನ ಸೇನೆಯನ್ನು ಪಾಂಡವ ಜಯಂತನು ಪೀಡಿಸುತ್ತಿರುವುದನ್ನು ನೋಡಿ ದುರ್ಯೋಧನನು ತುಂಬಾ ಪೀಡಿತನಾಗಿ ಭೀಷ್ಮನಿಗೆ ಹೇಳಿದನು:

06105015a ಏಷ ಪಾಂಡುಸುತಸ್ತಾತ ಶ್ವೇತಾಶ್ವಃ ಕೃಷ್ಣಸಾರಥಿಃ|

06105015c ದಹತೇ ಮಾಮಕಾನ್ಸರ್ವಾನ್ಕೃಷ್ಣವರ್ತ್ಮೇವ ಕಾನನಂ||

“ಅಯ್ಯಾ! ಈ ಪಾಂಡುಸುತ ಕೃಷ್ಣಸಾರಥಿ ಶ್ವೇತಾಶ್ವನು ಅಗ್ನಿಯು ಕಾನನದಂತೆ ನನ್ನವರೆಲ್ಲರನ್ನೂ ಸುಡುತ್ತಿದ್ದಾನೆ.

06105016a ಪಶ್ಯ ಸೈನ್ಯಾನಿ ಗಾಂಗೇಯ ದ್ರವಮಾಣಾನಿ ಸರ್ವಶಃ|

06105016c ಪಾಂಡವೇನ ಯುಧಾಂ ಶ್ರೇಷ್ಠ ಕಾಲ್ಯಮಾನಾನಿ ಸಂಯುಗೇ||

ಗಾಂಗೇಯ! ಯೋಧರಲ್ಲಿ ಶ್ರೇಷ್ಠ! ನೋಡು! ಸಂಯುಗದಲ್ಲಿ ಪಾಂಡವನಿಂದ ವಧಿಸಲ್ಪಡುತ್ತಿರುವ ಸೇನೆಗಳು ಎಲ್ಲಕಡೆ ಓಡಿಹೋಗುತ್ತಿವೆ.

06105017a ಯಥಾ ಪಶುಗಣಾನ್ಪಾಲಃ ಸಂಕಾಲಯತಿ ಕಾನನೇ|

06105017c ತಥೇದಂ ಮಾಮಕಂ ಸೈನ್ಯಂ ಕಾಲ್ಯತೇ ಶತ್ರುತಾಪನ||

ಶತ್ರುತಾಪನ! ಕಾನನದಲ್ಲಿ ಪಾಲಕನು ಪಶುಗಣಗಳನ್ನು ಹೇಗೆ ಕೊಲ್ಲುತ್ತಾನೋ ಹಾಗೆ ನನ್ನ ಸೈನ್ಯವೂ ಕೊಲ್ಲಲ್ಪಡುತ್ತಿದೆ.

06105018a ಧನಂಜಯಶರೈರ್ಭಗ್ನಂ ದ್ರವಮಾಣಮಿತಸ್ತತಃ|

06105018c ಭೀಮೋ ಹ್ಯೇಷ ದುರಾಧರ್ಷೋ ವಿದ್ರಾವಯತಿ ಮೇ ಬಲಂ||

ಧನಂಜಯನ ಶರಗಳಿಂದ ಭಗ್ನವಾಗಿ ಇಲ್ಲಿ ಅಲ್ಲಿ ಓಡಿಹೋಗುತ್ತಿರುವ ನನ್ನ ಸೇನೆಯನ್ನು ಈ ದುರಾಧರ್ಷ ಭೀಮನು ಓಡಿಸುತ್ತಿದ್ದಾನೆ.

06105019a ಸಾತ್ಯಕಿಶ್ಚೇಕಿತಾನಶ್ಚ ಮಾದ್ರೀಪುತ್ರೌ ಚ ಪಾಂಡವೌ|

06105019c ಅಭಿಮನ್ಯುಶ್ಚ ವಿಕ್ರಾಂತೋ ವಾಹಿನೀಂ ದಹತೇ ಮಮ||

ಸಾತ್ಯಕಿ, ಚೇಕಿತಾನ, ಪಾಂಡವ ಮಾದ್ರೀಪುತ್ರರೀರ್ವರು ಮತ್ತು ವಿಕ್ರಾಂತ ಅಭಿಮನ್ಯುವು ನನ್ನ ಸೇನೆಯನ್ನು ಸುಡುತ್ತಿದ್ದಾರೆ.

06105020a ಧೃಷ್ಟದ್ಯುಮ್ನಸ್ತಥಾ ಶೂರೋ ರಾಕ್ಷಸಶ್ಚ ಘಟೋತ್ಕಚಃ|

06105020c ವ್ಯದ್ರಾವಯೇತಾಂ ಸಹಸಾ ಸೈನ್ಯಂ ಮಮ ಮಹಾಬಲೌ||

ಮಹಾಬಲ ಧೃಷ್ಟದ್ಯುಮ್ನ ಮತ್ತು ರಾಕ್ಷಸ ಘಟೋತ್ಕಚರು ವೇಗದಿಂದ ನನ್ನ ಸೈನ್ಯವನ್ನು ಓಡಿಸುತ್ತಿದ್ದಾರೆ.

06105021a ವಧ್ಯಮಾನಸ್ಯ ಸೈನ್ಯಸ್ಯ ಸರ್ವೈರೇತೈರ್ಮಹಾಬಲೈಃ|

06105021c ನಾನ್ಯಾಂ ಗತಿಂ ಪ್ರಪಶ್ಯಾಮಿ ಸ್ಥಾನೇ ಯುದ್ಧೇ ಚ ಭಾರತ||

06105022a ಋತೇ ತ್ವಾಂ ಪುರುಷವ್ಯಾಘ್ರ ದೇವತುಲ್ಯಪರಾಕ್ರಮ|

06105022c ಪರ್ಯಾಪ್ತಶ್ಚ ಭವಾನ್ ಕ್ಷಿಪ್ರಂ ಪೀಡಿತಾನಾಂ ಗತಿರ್ಭವ||

ಭಾರತ! ಪುರುಷವ್ಯಾಘ್ರ! ಈ ಮಹಾಬಲರಿಂದ ಸೈನ್ಯವೆಲ್ಲವೂ ವಧಿಸಲ್ಪಡುತ್ತಿರಲು ನಾನು ಯುದ್ಧದಲ್ಲಿ ದೇವತುಲಪರಾಕ್ರಮಿಯಾದ ನೀನಲ್ಲದೇ ಅನ್ಯ ಗತಿಯನ್ನೂ ಸ್ಥಾನವನ್ನೂ ಕಾಣುತ್ತಿಲ್ಲ. ನೀನೊಬ್ಬನೇ ಸಾಕು. ಬೇಗನೆ ಪೀಡಿತರಾಗುತ್ತಿರುವವರ ಗತಿಯಾಗು!”

06105023a ಏವಮುಕ್ತೋ ಮಹಾರಾಜ ಪಿತಾ ದೇವವ್ರತಸ್ತವ|

06105023c ಚಿಂತಯಿತ್ವಾ ಮುಹೂರ್ತಂ ತು ಕೃತ್ವಾ ನಿಶ್ಚಯಮಾತ್ಮನಃ|

06105023e ತವ ಸಂಧಾರಯನ್ಪುತ್ರಮಬ್ರವೀಚ್ಚಂತನೋಃ ಸುತಃ||

ಮಹಾರಾಜ! ಹೀಗೆ ಹೇಳಲು ನಿನ್ನ ಪಿತ ದೇವವ್ರತ ಶಂತನುಸುತನು ಒಂದು ಕ್ಷಣ ಆಲೋಚಿಸಿ, ತನ್ನಲ್ಲಿಯೇ ನಿಶ್ಚಯ ಮಾಡಿಕೊಂಡು, ಸಮಾಧಾನಗೊಳಿಸುತ್ತಾ ನಿನ್ನ ಪುತ್ರನಿಗೆ ಹೀಗೆ ಹೇಳಿದನು:

06105024a ದುರ್ಯೋಧನ ವಿಜಾನೀಹಿ ಸ್ಥಿರೋ ಭವ ವಿಶಾಂ ಪತೇ|

06105024c ಪೂರ್ವಕಾಲಂ ತವ ಮಯಾ ಪ್ರತಿಜ್ಞಾತಂ ಮಹಾಬಲ||

“ವಿಶಾಂಪತೇ! ದುರ್ಯೋಧನ! ಮಹಾಬಲ! ಇದನ್ನು ತಿಳಿದು ಸ್ಥಿರನಾಗು. ಹಿಂದೆ ನಾನು ನಿನಗೆ ಪ್ರತಿಜ್ಞೆಮಾಡಿದ್ದೆ.

06105025a ಹತ್ವಾ ದಶ ಸಹಸ್ರಾಣಿ ಕ್ಷತ್ರಿಯಾಣಾಂ ಮಹಾತ್ಮನಾಂ|

06105025c ಸಂಗ್ರಾಮಾದ್ವ್ಯಪಯಾತವ್ಯಮೇತತ್ಕರ್ಮ ಮಮಾಹ್ನಿಕಂ|

06105025e ಇತಿ ತತ್ಕೃತವಾಂಶ್ಚಾಹಂ ಯಥೋಕ್ತಂ ಭರತರ್ಷಭ||

ಭರತರ್ಷಭ! ಪ್ರತಿದಿನವೂ ಹತ್ತು ಸಾವಿರ ಮಹಾತ್ಮ ಕ್ಷತ್ರಿಯರನ್ನು ಸಂಹರಿಸಿ ಸಂಗ್ರಾಮದಿಂದ ಹಿಂದಿರುಗುತ್ತೇನೆ ಎಂದು. ನಾನು ಹೇಳಿದಂತೆಯೇ ಆ ಕೆಲಸವನ್ನು ನಾನು ಮಾಡಿ ಮುಗಿಸಿದ್ದೇನೆ.

06105026a ಅದ್ಯ ಚಾಪಿ ಮಹತ್ಕರ್ಮ ಪ್ರಕರಿಷ್ಯೇ ಮಹಾಹವೇ|

06105026c ಅಹಂ ವಾ ನಿಹತಃ ಶೇಷ್ಯೇ ಹನಿಷ್ಯೇ ವಾದ್ಯ ಪಾಂಡವಾನ್||

ಇಂದು ಕೂಡ ಮಹಾಹವದಲ್ಲಿ ಮಹಾಕರ್ಮವನ್ನು ಮಾಡುತ್ತೇನೆ. ಇಂದು ನಾನು ನಿಹತನಾಗಿ ಮಲಗುತ್ತೇನೆ ಅಥವಾ ಪಾಂಡವರನ್ನು ಕೊಲ್ಲುತ್ತೇನೆ.

06105027a ಅದ್ಯ ತೇ ಪುರುಷವ್ಯಾಘ್ರ ಪ್ರತಿಮೋಕ್ಷ್ಯೇ ಋಣಂ ಮಹತ್|

06105027c ಭರ್ತೃಪಿಂಡಕೃತಂ ರಾಜನ್ನಿಹತಃ ಪೃತನಾಮುಖೇ||

ಪುರುಷವ್ಯಾಘ್ರ! ರಾಜನ್! ಊಟವನ್ನು ಉಂಡಿದುದರಿಂದ ನನಗೆ ನಿನ್ನ ಮೇಲಿರುವ ಮಹಾ ಋಣದಿಂದ ಇಂದು ಸೇನೆಯ ಮುಂದೆ ಸತ್ತು ನನ್ನನ್ನು ಬಿಡುಗಡೆಗೊಳಿಸಿಕೊಳ್ಳುತ್ತೇನೆ.”

06105028a ಇತ್ಯುಕ್ತ್ವಾ ಭರತಶ್ರೇಷ್ಠಃ ಕ್ಷತ್ರಿಯಾನ್ಪ್ರತಪಂ ಶರೈಃ|

06105028c ಆಸಸಾದ ದುರಾಧರ್ಷಃ ಪಾಂಡವಾನಾಮನೀಕಿನೀಂ||

ಹೀಗೆ ಹೇಳಿ ದುರಾಧರ್ಷ ಭರತಶ್ರೇಷ್ಠನು ಕ್ಷತ್ರಿಯರನ್ನು ಶರಗಳಿಂದ ಸುಡುತ್ತಾ ಪಾಂಡವರ ಸೇನೆಯನ್ನು ತಲುಪಿದನು.

06105029a ಅನೀಕಮಧ್ಯೇ ತಿಷ್ಠಂತಂ ಗಾಂಗೇಯಂ ಭರತರ್ಷಭ|

06105029c ಆಶೀವಿಷವಿವ ಕ್ರುದ್ಧಂ ಪಾಂಡವಾಃ ಪರ್ಯವಾರಯನ್||

ಭರತರ್ಷಭ! ಸೇನೆಯ ಮಧ್ಯೆ ನಾಗದ ವಿಷದಂತೆ ಕ್ರುದ್ಧನಾಗಿ ನಿಂತಿದ್ದ  ಗಾಂಗೇಯನನ್ನು ಪಾಂಡವರು ಸುತ್ತುವರೆದರು.

06105030a ದಶಮೇಽಹನಿ ತಸ್ಮಿಂಸ್ತು ದರ್ಶಯನ್ ಶಕ್ತಿಮಾತ್ಮನಃ|

06105030c ರಾಜನ್ ಶತಸಹಸ್ರಾಣಿ ಸೋಽವಧೀತ್ಕುರುನಂದನ||

ರಾಜನ್! ಕುರುನಂದನ! ಆ ಹತ್ತನೆಯ ದಿನ ಅವನು ನೂರು ಸಾವಿರರನ್ನು ಕೊಂದು ತನ್ನ ಶಕ್ತಿಯನ್ನು ಪ್ರದರ್ಶಿಸಿದನು.

06105031a ಪಂಚಾಲಾನಾಂ ಚ ಯೇ ಶ್ರೇಷ್ಠಾ ರಾಜಪುತ್ರಾ ಮಹಾಬಲಾಃ|

06105031c ತೇಷಾಮಾದತ್ತ ತೇಜಾಂಸಿ ಜಲಂ ಸೂರ್ಯ ಇವಾಂಶುಭಿಃ||

ಪಾಂಚಾಲರ ಕಡೆಯಲ್ಲಿದ್ದ ಶ್ರೇಷ್ಠ ರಾಜಪುತ್ರ ಮಹಾಬಲರನ್ನು ಇವನು ಸೂರ್ಯನು ನೀರಿನಿಂದ ತೇವಾಂಶವನ್ನು ಹೀರಿಕೊಳ್ಳುವಂತೆ ಹೀರಿಕೊಂಡನು.

06105032a ಹತ್ವಾ ದಶ ಸಹಸ್ರಾಣಿ ಕುಂಜರಾಣಾಂ ತರಸ್ವಿನಾಂ|

06105032c ಸಾರೋಹಾಣಾಂ ಮಹಾರಾಜ ಹಯಾನಾಂ ಚಾಯುತಂ ಪುನಃ||

06105033a ಪೂರ್ಣೇ ಶತಸಹಸ್ರೇ ದ್ವೇ ಪದಾತೀನಾಂ ನರೋತ್ತಮಃ|

06105033c ಪ್ರಜಜ್ವಾಲ ರಣೇ ಭೀಷ್ಮೋ ವಿಧೂಮ ಇವ ಪಾವಕಃ||

ಮಹಾರಾಜ! ತರಸ್ವಿಗಳಾಗಿದ್ದ ಹತ್ತು ಸಾವಿರ ಆನೆಗಳನ್ನು, ಪುನಃ ಹತ್ತು ಸಾವಿರ ಆರೋಹಿಗಳೊಂದಿಗೆ ಕುದುರೆಗಳನ್ನು, ಮತ್ತು ಎರಡು ಲಕ್ಷ ಪದಾತಿಗಳನ್ನು ಸಂಪೂರ್ಣವಾಗಿ ಸಂಹರಿಸಿ ಆ ನರೋತ್ತಮ ಭೀಷ್ಮನು ರಣದಲ್ಲಿ ಧೂಮವಿಲ್ಲದ ಪಾವಕನಂತೆ ಪ್ರಜ್ವಲಿಸಿದನು.

06105034a ನ ಚೈನಂ ಪಾಂಡವೇಯಾನಾಂ ಕೇ ಚಿಚ್ಚೇಕುರ್ನಿರೀಕ್ಷಿತುಂ|

06105034c ಉತ್ತರಂ ಮಾರ್ಗಮಾಸ್ಥಾಯ ತಪಂತಮಿವ ಭಾಸ್ಕರಂ||

ಉತ್ತರಾಯಣದ ಮಾರ್ಗದಲ್ಲಿರುವ ಭಾಸ್ಕರನಂತೆ ಸುಡುತ್ತಿರುವ ಅವನನ್ನು ಪಾಂಡವೇಯರಲ್ಲಿ ಯಾರೂ ಕೂಡ ನೋಡಲೂ ಬಯಸುತ್ತಿರಲಿಲ್ಲ.

06105035a ತೇ ಪಾಂಡವೇಯಾಃ ಸಂರಬ್ಧಾ ಮಹೇಷ್ವಾಸೇನ ಪೀಡಿತಾಃ|

06105035c ವಧಾಯಾಭ್ಯದ್ರವನ್ಭೀಷ್ಮಂ ಸೃಂಜಯಾಶ್ಚ ಮಹಾರಥಾಃ||

ಆ ಮಹೇಷ್ವಾಸನಿಂದ ಪೀಡಿತರಾದ ಭೀಷ್ಮನನ್ನು ಸಂರಬ್ಧ ಮಹಾರಥ ಸೃಂಜಯರೂ ಪಾಂಡವರೂ ವಧಿಸಲೆಂದು ಆಕ್ರಮಣ ಮಾಡಿದರು.

06105036a ಸ ಯುಧ್ಯಮಾನೋ ಬಹುಭಿರ್ಭೀಷ್ಮಃ ಶಾಂತನವಸ್ತದಾ|

06105036c ಅವಕೀರ್ಣೋ ಮಹಾಬಾಹುಃ ಶೈಲೋ ಮೇಘೈರಿವಾಸಿತೈಃ||

ಬಹುಸೇನೆಗಳಿಂದ ಆಕ್ರಮಣಿಸಲ್ಪಟ್ಟ ಮಹಾಬಾಹು ಭೀಷ್ಮ ಶಾಂತನವನು ಮೇಘಗಳಿಂದ ಮುತ್ತಲ್ಪಟ್ಟ ಶೈಲದಂತೆ ತೋರಿದನು.

06105037a ಪುತ್ರಾಸ್ತು ತವ ಗಾಂಗೇಯಂ ಸಮಂತಾತ್ಪರ್ಯವಾರಯನ್|

06105037c ಮಹತ್ಯಾ ಸೇನಯಾ ಸಾರ್ಧಂ ತತೋ ಯುದ್ಧಮವರ್ತತ||

ನಿನ್ನ ಮಗನಾದರೋ ಗಾಂಗೇಯನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಆ ಮಹಾ ಸೇನೆಯೊಂದಿಗೆ ಯುದ್ಧದಲ್ಲಿ ತೊಡಗಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಪಂಚಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ನೂರಾಐದನೇ ಅಧ್ಯಾಯವು.

Image result for indian motifs against white background

Comments are closed.