Ashramavasika Parva: Chapter 45

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ: ನಾರದಾಗಮನ ಪರ್ವ

೪೫

ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ

ಹಸ್ತಿನಾಪುರಕ್ಕ ನಾರದನ ಆಗಮನ; ಯುಧಿಷ್ಠಿರನು ಧೃತರಾಷ್ಟ್ರಾದಿಗಳ ಕುರಿತು ಅವನಲ್ಲಿ ಪ್ರಶ್ನಿಸಿದುದು (೧-೮). ಧೃತರಾಷ್ಟ್ರ-ಗಾಂಧಾರೀ-ಕುಂತಿಯರು ದಾವಾಗ್ನಿಯಲ್ಲಿ ಸುಟ್ಟುಹೋದುದನ್ನು ನಾರದನು ತಿಳಿಸುವುದು (೯-೩೮). ಯುಧಿಷ್ಠಿರಾದಿಗಳ ಶೋಕ (೩೯-೪೪).

15045001 ವೈಶಂಪಾಯನ ಉವಾಚ|

15045001a ದ್ವಿವರ್ಷೋಪನಿವೃತ್ತೇಷು ಪಾಂಡವೇಷು ಯದೃಚ್ಚಯಾ|

15045001c ದೇವರ್ಷಿರ್ನಾರದೋ ರಾಜನ್ನಾಜಗಾಮ ಯುಧಿಷ್ಠಿರಮ್||

ವೈಶಂಪಾಯನನು ಹೇಳಿದನು: “ಪಾಂಡವರು ಹಿಂದಿರುಗಿ ಎರಡು ವರ್ಷಗಳಾದನಂತರ ದೇವರ್ಷಿ ನಾರದನು ರಾಜ ಯುಧಿಷ್ಠಿರನಲ್ಲಿಗೆ ಆಗಮಿಸಿದನು.

15045002a ತಮಭ್ಯರ್ಚ್ಯ ಮಹಾಬಾಹುಃ ಕುರುರಾಜೋ ಯುಧಿಷ್ಠಿರಃ|

15045002c ಆಸೀನಂ ಪರಿವಿಶ್ವಸ್ತಂ ಪ್ರೋವಾಚ ವದತಾಂ ವರಃ||

ಮಹಾಬಾಹು ಕುರುರಾಜ ಯುಧಿಷ್ಠಿರನು ಅವನನ್ನು ಅರ್ಚಿಸಿದನು. ವಿಶ್ರಮಿಸಿಕೊಂಡು ಆಸನದಲ್ಲಿ ಕುಳಿತಿದ್ದ ನಾರದನಿಗೆ ವಾಗ್ಮಿಶ್ರೇಷ್ಠ ಯುಧಿಷ್ಠಿರನು ಹೇಳಿದನು:

15045003a ಚಿರಸ್ಯ ಖಲು ಪಶ್ಯಾಮಿ ಭಗವಂತಮುಪಸ್ಥಿತಮ್|

15045003c ಕಚ್ಚಿತ್ತೇ ಕುಶಲಂ ವಿಪ್ರ ಶುಭಂ ವಾ ಪ್ರತ್ಯುಪಸ್ಥಿತಮ್||

15045004a ಕೇ ದೇಶಾಃ ಪರಿದೃಷ್ಟಾಸ್ತೇ ಕಿಂ ಚ ಕಾರ್ಯಂ ಕರೋಮಿ ತೇ|

15045004c ತದ್ಬ್ರೂಹಿ ದ್ವಿಜಮುಖ್ಯ ತ್ವಮಸ್ಮಾಕಂ ಚ ಪ್ರಿಯೋಽತಿಥಿಃ||

“ವಿಪ್ರ! ಬಹುದಿನಗಳ ನಂತರ ನಿಮ್ಮ ಆಗಮನವನ್ನು ನಾನು ಕಾಣುತ್ತಿದ್ದೇನೆ. ನೀವು ಕುಶಲರಾಗಿದ್ದೀರಿ ತಾನೇ? ಎಲ್ಲವೂ ಶುಭವಾಗಿದೆಯಲ್ಲವೇ? ಇಲ್ಲಿ ಬರುವ ಮೊದಲು ಯಾವ ಪ್ರದೇಶಗಳನ್ನು ನೋಡಿದ್ದಿರಿ? ನಿಮಗೆ ನಾನು ಯಾವ ಕಾರ್ಯವನ್ನು ಮಾಡಲಿ? ದ್ವಿಜಮುಖ್ಯ! ಅದನ್ನು ಹೇಳಿ. ಏಕೆಂದರೆ ನೀವು ನಮಗೆ ಅತ್ಯಂತ ಪ್ರಿಯರಾದ ಅತಿಥಿಗಳು!”

15045005 ನಾರದ ಉವಾಚ|

15045005a ಚಿರದೃಷ್ಟೋಽಸಿ ಮೇ ರಾಜನ್ನಾಗತೋಽಸ್ಮಿ ತಪೋವನಾತ್|

15045005c ಪರಿದೃಷ್ಟಾನಿ ತೀರ್ಥಾನಿ ಗಂಗಾ ಚೈವ ಮಯಾ ನೃಪ||

ನಾರದನು ಹೇಳಿದನು: “ರಾಜನ್! ನಿನ್ನನ್ನು ನೋಡಿ ಬಹಳ ಸಮಯವಾಯಿತೆಂದೇ ತಪೋವನದಿಂದ ನಾನು ಬಂದೆನು. ನೃಪ! ಬರುವಾಗ ತೀರ್ಥಗಳನ್ನೂ ಗಂಗೆಯನ್ನೂ ನೋಡಿದೆನು.”

15045006 ಯುಧಿಷ್ಠಿರ ಉವಾಚ|

15045006a ವದಂತಿ ಪುರುಷಾ ಮೇಽದ್ಯ ಗಂಗಾತೀರನಿವಾಸಿನಃ|

15045006c ಧೃತರಾಷ್ಟ್ರಂ ಮಹಾತ್ಮಾನಮಾಸ್ಥಿತಂ ಪರಮಂ ತಪಃ||

ಯುಧಿಷ್ಠಿರನು ಹೇಳಿದನು: "ಗಂಗಾತೀರ ನಿವಾಸಿ ಪುರುಷರು ಮಹಾತ್ಮ ಧೃತರಾಷ್ಟ್ರನು ಅಲ್ಲಿ ಪರಮ ತಪಸ್ಸಿನಲ್ಲಿ ನಿರತನಾಗಿರುವನೆಂದು ಹೇಳುತ್ತಾರೆ.

15045007a ಅಪಿ ದೃಷ್ಟಸ್ತ್ವಯಾ ತತ್ರ ಕುಶಲೀ ಸ ಕುರೂದ್ವಹಃ|

15045007c ಗಾಂಧಾರೀ ಚ ಪೃಥಾ ಚೈವ ಸೂತಪುತ್ರಶ್ಚ ಸಂಜಯಃ||

ನೀವೇನಾದರೂ ಅಲ್ಲಿ ಆ ಕುರೂದ್ವಹನನ್ನು ಕಂಡಿರೇ? ಧೃತರಾಷ್ಟ್ರ, ಗಾಂಧಾರೀ, ಪೃಥೆ, ಮತ್ತು ಸೂತಪುತ್ರ ಸಂಜಯರು ಕುಶಲರಾಗಿರುವರೇ?

15045008a ಕಥಂ ಚ ವರ್ತತೇ ಚಾದ್ಯ ಪಿತಾ ಮಮ ಸ ಪಾರ್ಥಿವಃ|

15045008c ಶ್ರೋತುಮಿಚ್ಚಾಮಿ ಭಗವನ್ಯದಿ ದೃಷ್ಟಸ್ತ್ವಯಾ ನೃಪಃ||

ಭಗವನ್! ಇಂದು ನನ್ನ ತಂದೆ ಆ ಪಾರ್ಥಿವನು ಹೇಗಿದ್ದಾನೆ? ನೀವು ಆ ನೃಪನನ್ನು ಕಂಡಿದ್ದರೆ ಅವನ ಕುರಿತು ಕೇಳಲು ಬಯಸುತ್ತೇನೆ.”

15045009 ನಾರದ ಉವಾಚ|

15045009a ಸ್ಥಿರೀಭೂಯ ಮಹಾರಾಜ ಶೃಣು ಸರ್ವಂ ಯಥಾತಥಮ್|

15045009c ಯಥಾ ಶ್ರುತಂ ಚ ದೃಷ್ಟಂ ಚ ಮಯಾ ತಸ್ಮಿಂಸ್ತಪೋವನೇ||

ನಾರದನು ಹೇಳಿದನು: "ಮಹಾರಾಜ! ಆ ತಪೋವನದಲ್ಲಿ ನಾನು ನೋಡಿದುದನ್ನು ಮತ್ತು ಕೇಳಿದುದನ್ನು ಎಲ್ಲವನ್ನೂ ಯಥಾವತ್ತಾಗಿ ಸ್ಥಿರಚಿತ್ತನಾಗಿ ಕೇಳು!

15045010a ವನವಾಸನಿವೃತ್ತೇಷು ಭವತ್ಸು ಕುರುನಂದನ|

15045010c ಕುರುಕ್ಷೇತ್ರಾತ್ಪಿತಾ ತುಭ್ಯಂ ಗಂಗಾದ್ವಾರಂ ಯಯೌ ನೃಪ||

15045011a ಗಾಂಧಾರ್ಯಾ ಸಹಿತೋ ಧೀಮಾನ್ವಧ್ವಾ ಕುಂತ್ಯಾ ಸಮನ್ವಿತಃ|

15045011c ಸಂಜಯೇನ ಚ ಸೂತೇನ ಸಾಗ್ನಿಹೋತ್ರಃ ಸಯಾಜಕಃ||

ಕುರುನಂದನ! ನೀವು ವನವಾಸದಿಂದ ಹಿಂದಿರುಗಿದ ನಂತರ ನಿನ್ನ ತಂದೆ ಧೀಮಾನ್ ನೃಪನು ಗಂಧಾರೀ, ತಮ್ಮನ ಪತ್ನಿ ಕುಂತಿ, ಸೂತ ಸಂಜಯ, ಯಾಜಕರು ಮತ್ತು ಅಗ್ನಿಹೋತ್ರಗಳೊಂದಿಗೆ ಕುರುಕ್ಷೇತ್ರದಿಂದ ಗಂಗಾದ್ವಾರಕ್ಕೆ ಹೋದನು.

15045012a ಆತಸ್ಥೇ ಸ ತಪಸ್ತೀವ್ರಂ ಪಿತಾ ತವ ತಪೋಧನಃ|

15045012c ವೀಟಾಂ ಮುಖೇ ಸಮಾಧಾಯ ವಾಯುಭಕ್ಷೋಽಭವನ್ಮುನಿಃ||

ಅಲ್ಲಿ ತಪೋಧನ ಮುನಿಯಾದ ನಿನ್ನ ತಂದೆಯು ಮರದ ಚೂರುಗಳನ್ನು ಬಾಯಿಯಲ್ಲಿಟ್ಟುಕೊಂಡು ಗಾಳಿಯನ್ನೇ ಆಹಾರವನ್ನಾಗಿ ಸೇವಿಸುತ್ತಾ ತೀವ್ರವಾದ ತಪಸ್ಸನ್ನು ಆಚರಿಸಿದನು.

15045013a ವನೇ ಸ ಮುನಿಭಿಃ ಸರ್ವೈಃ ಪೂಜ್ಯಮಾನೋ ಮಹಾತಪಾಃ|

15045013c ತ್ವಗಸ್ಥಿಮಾತ್ರಶೇಷಃ ಸ ಷಣ್ಮಾಸಾನಭವನ್ನೃಪಃ||

ಚರ್ಮ ಮತ್ತು ಮೂಳೆಗಳು ಮಾತ್ರ ಉಳಿದಿದ್ದ ಆ ಮಹಾತಪಸ್ವಿ ನೃಪನು ವನದಲ್ಲಿ ಸರ್ವ ಮುನಿಗಳಿಂದಲೂ ಗೌರವಿಸಲ್ಪಟ್ಟಿದ್ದನು. ಹಾಗೆ ಆರು ತಿಂಗಳುಗಳು ಕಳೆದವು.

15045014a ಗಾಂಧಾರೀ ತು ಜಲಾಹಾರಾ ಕುಂತೀ ಮಾಸೋಪವಾಸಿನೀ|

15045014c ಸಂಜಯಃ ಷಷ್ಠಭಕ್ತೇನ ವರ್ತಯಾಮಾಸ ಭಾರತ||

ಭಾರತ! ಗಾಂಧಾರಿಯು ನೀರನ್ನು ಮಾತ್ರ ಸೇವಿಸುತ್ತಿದ್ದಳು. ಕುಂತಿಯು ತಿಂಗಳಿಗೊಮ್ಮೆ ಆಹಾರವನ್ನು ತೆಗೆದುಕೊಳ್ಳುತ್ತಿದ್ದಳು. ಸಂಜಯನು ಆರುಹೊತ್ತಿಗೊಮ್ಮೆ (ಪ್ರತಿ ಎರಡನೆಯ ರಾತ್ರಿಗೊಮ್ಮೆ) ಆಹಾರ ಸೇವನೆ ಮಾಡುತ್ತಿದ್ದನು.

15045015a ಅಗ್ನೀಂಸ್ತು ಯಾಜಕಾಸ್ತತ್ರ ಜುಹುವುರ್ವಿಧಿವತ್ಪ್ರಭೋ|

15045015c ದೃಶ್ಯತೋಽದೃಶ್ಯತಶ್ಚೈವ ವನೇ ತಸ್ಮಿನ್ನೃಪಸ್ಯ ಹ||

ಪ್ರಭೋ! ಯಾಜಕರು ಅಗ್ನಿಯಲ್ಲಿ ವಿಧಿವತ್ತಾಗಿ ಹೋಮಮಾಡುತ್ತಿದ್ದರು. ನೃಪ ಧೃತರಾಷ್ಟ್ರನು ಆ ವನದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುತ್ತಿದ್ದನು. ಇನ್ನು ಕೆಲವೊಮ್ಮೆ ಅದೃಶ್ಯನಾಗಿಬಿಡುತ್ತಿದ್ದನು.

15045016a ಅನಿಕೇತೋಽಥ ರಾಜಾ ಸ ಬಭೂವ ವನಗೋಚರಃ|

15045016c ತೇ ಚಾಪಿ ಸಹಿತೇ ದೇವ್ಯೌ ಸಂಜಯಶ್ಚ ತಮನ್ವಯುಃ||

ಹೀಗೆ ನೆಲೆಯಿಲ್ಲದೇ ಆ ರಾಜನು ವನದಲ್ಲಿ ಸುತ್ತಾಡುತ್ತಿದ್ದನು. ಆ ದೇವಿಯರಿಬ್ಬರೂ ಸಂಜಯನೊಂದಿಗೆ ಅವನನ್ನೇ ಅನುಸರಿಸಿ ಹೋಗುತ್ತಿದ್ದರು.

15045017a ಸಂಜಯೋ ನೃಪತೇರ್ನೇತಾ ಸಮೇಷು ವಿಷಮೇಷು ಚ|

15045017c ಗಾಂಧಾರ್ಯಾಸ್ತು ಪೃಥಾ ರಾಜಂಶ್ಚಕ್ಷುರಾಸೀದನಿಂದಿತಾ||

ಹಳ್ಳತಿಟ್ಟುಗಳಲ್ಲಿ ಸಂಜಯನು ನೃಪತಿಯನ್ನು ಕೊಂಡೊಯ್ಯುತ್ತಿದ್ದನು. ರಾಜನ್! ಅನಿಂದಿತೆ ಪೃಥೆಯು ಗಾಂಧಾರಿಯ ಕಣ್ಣಾಗಿದ್ದಳು.

15045018a ತತಃ ಕದಾ ಚಿದ್ಗಂಗಾಯಾಃ ಕಚ್ಚೇ ಸ ನೃಪಸತ್ತಮಃ|

15045018c ಗಂಗಾಯಾಮಾಪ್ಲುತೋ ಧೀಮಾನಾಶ್ರಮಾಭಿಮುಖೋಽಭವತ್||

ಗಂಗಾತೀರದಲ್ಲಿರುವಾಗ ಒಮ್ಮೆ ಆ ಧೀಮಾನ್ ನೃಪಸತ್ತಮನು ಗಂಗೆಯಲ್ಲಿ ಮಿಂದು ಆಶ್ರಮದ ಕಡೆ ಹೋಗುತ್ತಿದ್ದನು.

15045019a ಅಥ ವಾಯುಃ ಸಮುದ್ಭೂತೋ ದಾವಾಗ್ನಿರಭವನ್ಮಹಾನ್|

15045019c ದದಾಹ ತದ್ವನಂ ಸರ್ವಂ ಪರಿಗೃಹ್ಯ ಸಮಂತತಃ||

ಆಗ ಭಿರುಗಾಳಿಯು ಬೀಸಿ ಮಹಾ ಕಾಡ್ಗಿಚ್ಚು ಹತ್ತಿಕೊಂಡಿತು. ಅದು ವನದಲ್ಲಿದ್ದ ಎಲ್ಲವನ್ನೂ ಸುಟ್ಟು ಭಸ್ಮಮಾಡಿತು.

15045020a ದಹ್ಯತ್ಸು ಮೃಗಯೂಥೇಷು ದ್ವಿಜಿಹ್ವೇಷು ಸಮಂತತಃ|

15045020c ವರಾಹಾಣಾಂ ಚ ಯೂಥೇಷು ಸಂಶ್ರಯತ್ಸು ಜಲಾಶಯಾನ್||

ಆ ದಾವಾಗ್ನಿಯು ವನದಲ್ಲಿದ್ದ ಮೃಗಸಮೂಹಗಳನ್ನೂ, ಸರ್ಪಗಳನ್ನೂ ಭಸ್ಮಮಾಡಿತು. ಆನೆಗಳ ಹಿಂಡುಗಳು ನೀರಿನಲ್ಲಿ ಆಶ್ರಯವನ್ನು ಪಡೆಯುತ್ತಿದ್ದವು.

15045021a ಸಮಾವಿದ್ಧೇ ವನೇ ತಸ್ಮಿನ್ಪ್ರಾಪ್ತೇ ವ್ಯಸನ ಉತ್ತಮೇ|

15045021c ನಿರಾಹಾರತಯಾ ರಾಜಾ ಮಂದಪ್ರಾಣವಿಚೇಷ್ಟಿತಃ||

15045021e ಅಸಮರ್ಥೋಽಪಸರಣೇ ಸುಕೃಶೌ ಮಾತರೌ ಚ ತೇ||

ವನವು ಹತ್ತಿಕೊಂಡು ಉರಿಯುತ್ತಿರುವ ಆ ಮಹಾ ಸಂಕಟವಾದಾಗ ನಿರಾಹಾರಿಯಾಗಿದ್ದ ರಾಜನ ಪ್ರಾಣಶಕ್ತಿಯು ಕುಂದಿಹೋಗಿದ್ದು ಏನನ್ನೂ ಮಾಡಲಿಕ್ಕಾಗದೇ ಹೋದನು. ತುಂಬಾ ಕೃಶರಾಗಿದ್ದ ನಿನ್ನ ಇಬ್ಬರು ತಾಯಂದಿರು ಕೂಡ ಆ ದಾವಾಗ್ನಿಯಿಂದ ತಪ್ಪಿಸಿಕೊಂಡು ಹೋಗಲು ಅಸಮರ್ಥರಾದರು.

15045022a ತತಃ ಸ ನೃಪತಿರ್ದೃಷ್ಟ್ವಾ ವಹ್ನಿಮಾಯಾಂತಮಂತಿಕಾತ್|

15045022c ಇದಮಾಹ ತತಃ ಸೂತಂ ಸಂಜಯಂ ಪೃಥಿವೀಪತೇ||

ಪೃಥಿವೀಪತೇ! ಬೆಂಕಿಯು ತನ್ನ ಹತ್ತಿರ ಬರುತ್ತಿರುವುದನ್ನು ಕಂಡು ನೃಪತಿಯು ಸೂತ ಸಂಜಯನಿಗೆ ಇಂತೆಂದನು:

15045023a ಗಚ್ಚ ಸಂಜಯ ಯತ್ರಾಗ್ನಿರ್ನ ತ್ವಾಂ ದಹತಿ ಕರ್ಹಿ ಚಿತ್|

15045023c ವಯಮತ್ರಾಗ್ನಿನಾ ಯುಕ್ತಾ ಗಮಿಷ್ಯಾಮಃ ಪರಾಂ ಗತಿಮ್||

"ಸಂಜಯ! ಹೋಗು! ಅಗ್ನಿಯು ನಿನ್ನನ್ನು ಸುಡದಿರುವಲ್ಲಿಗೆ ಎಲ್ಲಿಯಾದರೂ ಹೋಗು! ನಾವು ಇಲ್ಲಿ ಅಗ್ನಿಯಲ್ಲಿ ಸೇರಿ ಪರಮ ಗತಿಯನ್ನು ಸೇರುತ್ತೇವೆ!"

15045024a ತಮುವಾಚ ಕಿಲೋದ್ವಿಗ್ನಃ ಸಂಜಯೋ ವದತಾಂ ವರಃ|

15045024c ರಾಜನ್ಮೃತ್ಯುರನಿಷ್ಟೋಽಯಂ ಭವಿತಾ ತೇ ವೃಥಾಗ್ನಿನಾ||

ಅತ್ಯಂತ ಉದ್ವಿಗ್ನನಾಗಿದ್ದ ಮಾತುಗಾರರರಲ್ಲಿ ಶ್ರೇಷ್ಠ ಸಂಜಯನು ಅವನಿಗೆ ಉತ್ತರಿಸಿದನು: "ರಾಜನ್! ವೃಥಾ ಅಗ್ನಿಯಲ್ಲಿ ಸುಟ್ಟು ಮೃತ್ಯುವನ್ನು ಪಡೆಯುವುದು ನಿನಗೆ ಅನಿಷ್ಟವಾದುದು.

15045025a ನ ಚೋಪಾಯಂ ಪ್ರಪಶ್ಯಾಮಿ ಮೋಕ್ಷಣೇ ಜಾತವೇದಸಃ|

15045025c ಯದತ್ರಾನಂತರಂ ಕಾರ್ಯಂ ತದ್ಭವಾನ್ವಕ್ತುಮರ್ಹತಿ||

ಆದರೆ ಅಗ್ನಿಯಿಂದ ತಪ್ಪಿಸಿಕೊಳ್ಳುವ ಯಾವ ಉಪಾಯವನ್ನೂ ಕಾಣುತ್ತಿಲ್ಲ. ಮುಂದೆ ಏನನ್ನು ಮಾಡಬೇಕೆಂದು ನೀನು ಹೇಳಬೇಕು!"

15045026a ಇತ್ಯುಕ್ತಃ ಸಂಜಯೇನೇದಂ ಪುನರಾಹ ಸ ಪಾರ್ಥಿವಃ|

15045026c ನೈಷ ಮೃತ್ಯುರನಿಷ್ಟೋ ನೋ ನಿಃಸೃತಾನಾಂ ಗೃಹಾತ್ಸ್ವಯಮ್||

ಸಂಜಯನು ಹೀಗೆ ಹೇಳಲು ರಾಜನು ಪುನಃ ಹೇಳಿದನು: "ಸ್ವ-ಇಚ್ಛೆಯಿಂದಲೇ ಮನೆಯಿಂದ ಹೊರಹೊರಟ ನಮಗೆ ಈ ಮೃತ್ಯುವು ಅನಿಷ್ಟವೆನಿಸುವುದಿಲ್ಲ.

15045027a ಜಲಮಗ್ನಿಸ್ತಥಾ ವಾಯುರಥ ವಾಪಿ ವಿಕರ್ಶನಮ್|

15045027c ತಾಪಸಾನಾಂ ಪ್ರಶಸ್ಯಂತೇ ಗಚ್ಚ ಸಂಜಯ ಮಾಚಿರಮ್||

ಜಲ-ಅಗ್ನಿ-ವಾಯು ಅಥವಾ ಉಪವಾಸ ಇವು ತಾಪಸಿಗಳಿಗೆ ಪ್ರಶಸ್ತವಾದವುಗಳು. ಆದುದರಿಂದ ಸಂಜಯ ನೀನು ಹೊರಟುಹೋಗು! ತಡಮಾಡಬೇಡ!"

15045028a ಇತ್ಯುಕ್ತ್ವಾ ಸಂಜಯಂ ರಾಜಾ ಸಮಾಧಾಯ ಮನಸ್ತದಾ|

15045028c ಪ್ರಾಙ್ಮುಖಃ ಸಹ ಗಾಂಧಾರ್ಯಾ ಕುಂತ್ಯಾ ಚೋಪಾವಿಶತ್ತದಾ||

ಸಂಜಯನಿಗೆ ಹೀಗೆ ಹೇಳಿ ರಾಜನು ಮನಸ್ಸನ್ನು ಏಕಾಗ್ರಗೊಳಿಸಿ ಕುಂತಿ ಮತ್ತು ಗಾಂಧಾರಿಯರೊಡನೆ ಪೂರ್ವಾಭಿಮುಖವಾಗಿ ಕುಳಿತುಕೊಂಡನು.

15045029a ಸಂಜಯಸ್ತಂ ತಥಾ ದೃಷ್ಟ್ವಾ ಪ್ರದಕ್ಷಿಣಮಥಾಕರೋತ್|

15045029c ಉವಾಚ ಚೈನಂ ಮೇಧಾವೀ ಯುಂಕ್ಷ್ವಾತ್ಮಾನಮಿತಿ ಪ್ರಭೋ||

ಅದನ್ನು ನೋಡಿ ಮೇಧಾವೀ ಸಂಜಯನು ಅವರಿಗೆ ಪ್ರದಕ್ಷಿಣೆ ಮಾಡಿ "ಪ್ರಭೋ! ಮನಸ್ಸನ್ನು ಆತ್ಮನಲ್ಲಿ ಸಂಯೋಜಿಸು!" ಎಂದು ಹೇಳಿದನು.

15045030a ಋಷಿಪುತ್ರೋ ಮನೀಷೀ ಸ ರಾಜಾ ಚಕ್ರೇಽಸ್ಯ ತದ್ವಚಃ|

15045030c ಸನ್ನಿರುಧ್ಯೇಂದ್ರಿಯಗ್ರಾಮಮಾಸೀತ್ಕಾಷ್ಠೋಪಮಸ್ತದಾ||

ಅವನ ಮಾತಿನಂತೆ ಋಷಿಪುತ್ರ ಮನೀಷೀ ರಾಜಾ ಧೃತರಾಷ್ಟ್ರನು ಇಂದ್ರಿಯಗಳನ್ನು ನಿರೋಧಿಸಿ ಮನಸ್ಸನ್ನು ಆತ್ಮನಲ್ಲಿ ಲೀನಗೊಳಿಸಿ ಕಟ್ಟಿಗೆಯಂತೆ ನಿಶ್ಚೇಷ್ಟನಾದನು.

15045031a ಗಾಂಧಾರೀ ಚ ಮಹಾಭಾಗಾ ಜನನೀ ಚ ಪೃಥಾ ತವ|

15045031c ದಾವಾಗ್ನಿನಾ ಸಮಾಯುಕ್ತೇ ಸ ಚ ರಾಜಾ ಪಿತಾ ತವ||

ಮಹಾಭಾಗೆ ಗಾಂಧಾರಿ, ನಿನ್ನ ಜನನಿ ಪೃಥೆ ಮತ್ತು ನಿನ್ನ ತಂದೆ ರಾಜನೂ ಕೂಡ ದಾವಾಗ್ನಿಯಲ್ಲಿ ಒಂದಾದರು.

15045032a ಸಂಜಯಸ್ತು ಮಹಾಮಾತ್ರಸ್ತಸ್ಮಾದ್ದಾವಾದಮುಚ್ಯತ|

15045032c ಗಂಗಾಕೂಲೇ ಮಯಾ ದೃಷ್ಟಸ್ತಾಪಸೈಃ ಪರಿವಾರಿತಃ||

ಮಹಾಮಾತ್ರ ಸಂಜಯನಾದರೋ ದಾವಾಗ್ನಿಯಿಂದ ತಪ್ಪಿಸಿಕೊಂಡನು. ತಾಪಸರಿಂದ ಸುತ್ತುವರೆದು ಕುಳಿತಿದ್ದ ಅವನನ್ನು ನಾನು ಗಂಗಾಕೂಲದಲ್ಲಿ ನೋಡಿದೆನು.

15045033a ಸ ತಾನಾಮಂತ್ರ್ಯ ತೇಜಸ್ವೀ ನಿವೇದ್ಯೈತಚ್ಚ ಸರ್ವಶಃ|

15045033c ಪ್ರಯಯೌ ಸಂಜಯಃ ಸೂತೋ ಹಿಮವಂತಂ ಮಹೀಧರಮ್||

ತೇಜಸ್ವಿ ಸೂತ ಸಂಜಯನು ಇವೆಲ್ಲವನ್ನೂ ಅವರಿಗೆ ತಿಳಿಸಿ ಹೇಳಿ ಹಿಮವತ್ಪರ್ವತಕ್ಕೆ ಹೊರಟುಹೋದನು.

15045034a ಏವಂ ಸ ನಿಧನಂ ಪ್ರಾಪ್ತಃ ಕುರುರಾಜೋ ಮಹಾಮನಾಃ|

15045034c ಗಾಂಧಾರೀ ಚ ಪೃಥಾ ಚೈವ ಜನನ್ಯೌ ತೇ ನರಾಧಿಪ||

ನರಾಧಿಪ! ಹೀಗೆ ಮಹಾಮನಸ್ವಿ ಕುರುರಾಜ, ಗಾಂಧಾರೀ ಮತ್ತು ನಿನ್ನ ಜನನಿ ಪೃಥೆಯರು ನಿಧನಹೊಂದಿದರು.

15045035a ಯದೃಚ್ಚಯಾನುವ್ರಜತಾ ಮಯಾ ರಾಜ್ಞಃ ಕಲೇವರಮ್|

15045035c ತಯೋಶ್ಚ ದೇವ್ಯೋರುಭಯೋರ್ದೃಷ್ಟಾನಿ ಭರತರ್ಷಭ||

ಭರತರ್ಷಭ! ನಾನು ಅರಣ್ಯದಲ್ಲಿ ಸಂಚರಿಸುತ್ತಿರುವಾಗ ಆಕಸ್ಮಿಕವಾಗಿ ರಾಜನ ಮತ್ತು ಆ ಇಬ್ಬರು ದೇವಿಯರ ಕಳೇಬರಗಳನ್ನು ನೋಡಿದೆನು.

15045036a ತತಸ್ತಪೋವನೇ ತಸ್ಮಿನ್ಸಮಾಜಗ್ಮುಸ್ತಪೋಧನಾಃ|

15045036c ಶ್ರುತ್ವಾ ರಾಜ್ಞಸ್ತಥಾ ನಿಷ್ಠಾಂ ನ ತ್ವಶೋಚನ್ಗತಿಂ ಚ ತೇ||

ಆಗ ಆ ತಪೋವನದಲ್ಲಿದ್ದ ತಪೋಧನರು ಅಲ್ಲಿಗೆ ಆಗಮಿಸಿದರು. ರಾಜನ ಕುರಿತು ಕೇಳಿದ ಆ ನಿಷ್ಠಾವಂತರು ಅವನ ಮರಣದ ಕುರಿತು ಶೋಕಿಸಲಿಲ್ಲ.

15045037a ತತ್ರಾಶ್ರೌಷಮಹಂ ಸರ್ವಮೇತತ್ಪುರುಷಸತ್ತಮ|

15045037c ಯಥಾ ಚ ನೃಪತಿರ್ದಗ್ಧೋ ದೇವ್ಯೌ ತೇ ಚೇತಿ ಪಾಂಡವ||

ಪುರುಷಸತ್ತಮ! ಪಾಂಡವ! ಅಲ್ಲಿಯೇ ನಾನು ರಾಜ ಮತ್ತು ಇಬ್ಬರು ದೇವಿಯರ ಕುರಿತು ಎಲ್ಲವನ್ನೂ ಕೇಳಿದೆನು.

15045038a ನ ಶೋಚಿತವ್ಯಂ ರಾಜೇಂದ್ರ ಸ್ವಂತಃ ಸ ಪೃಥಿವೀಪತಿಃ|

15045038c ಪ್ರಾಪ್ತವಾನಗ್ನಿಸಂಯೋಗಂ ಗಾಂಧಾರೀ ಜನನೀ ಚ ತೇ||

ರಾಜೇಂದ್ರ! ಆ ರಾಜ, ಗಾಂಧಾರೀ ಮತ್ತು ನಿನ್ನ ಜನನಿಯರು ಸ್ವಯಂ ತಾವೇ ಅಗ್ನಿಯಲ್ಲಿ ಸೇರಿಕೊಂಡಿದುದರಿಂದ ಅವರ ಕುರಿತು ನೀನು ಶೋಕಿಸಬಾರದು.""

15045039 ವೈಶಂಪಾಯನ ಉವಾಚ|

15045039a ಏತಚ್ಚ್ರುತ್ವಾ ತು ಸರ್ವೇಷಾಂ ಪಾಂಡವಾನಾಂ ಮಹಾತ್ಮನಾಮ್|

15045039c ನಿರ್ಯಾಣಂ ಧೃತರಾಷ್ಟ್ರಸ್ಯ ಶೋಕಃ ಸಮಭವನ್ ಮಹಾನ್||

ವೈಶಂಪಾಯನನು ಹೇಳಿದನು: "ಧೃತರಾಷ್ಟ್ರನ ನಿರ್ಯಾಣದ ಕುರಿತು ಕೇಳಿ ಆ ಎಲ್ಲ ಮಹಾತ್ಮ ಪಾಂಡವರಿಗೂ ಮಹಾಶೋಕವುಂಟಾಯಿತು.

15045040a ಅಂತಃಪುರಾಣಾಂ ಚ ತದಾ ಮಹಾನಾರ್ತಸ್ವರೋಽಭವತ್|

15045040c ಪೌರಾಣಾಂ ಚ ಮಹಾರಾಜ ಶ್ರುತ್ವಾ ರಾಜ್ಞಸ್ತದಾ ಗತಿಮ್||

ಮಹಾರಾಜ! ರಾಜನ ಮರಣವಾರ್ತೆಯನ್ನು ಕೇಳಿ ಅಂತಃಪುರದಲ್ಲಿ ಮತ್ತು ಪೌರಜನರಲ್ಲಿ ಮಹಾ ಆರ್ತನಾದವುಂಟಾಯಿತು.

15045041a ಅಹೋ ಧಿಗಿತಿ ರಾಜಾ ತು ವಿಕ್ರುಶ್ಯ ಭೃಶದುಃಖಿತಃ|

15045041c ಊರ್ಧ್ವಬಾಹುಃ ಸ್ಮರನ್ಮಾತುಃ ಪ್ರರುರೋದ ಯುಧಿಷ್ಠಿರಃ||

15045041e ಭೀಮಸೇನಪುರೋಗಾಶ್ಚ ಭ್ರಾತರಃ ಸರ್ವ ಏವ ತೇ||

ಅತ್ಯಂತ ದುಃಖಿತನಾದ ರಾಜಾ ಯುಧಿಷ್ಠಿರನು ತನ್ನ ತಾಯಿಯನ್ನು ಸ್ಮರಿಸಿಕೊಂಡು ಬಾಹುಗಳೆರಡನ್ನೂ ಮೇಲಕ್ಕೆತ್ತಿ "ಅಯ್ಯೋ! ನನಗೆ ಧಿಕ್ಕಾರವಿರಲಿ!" ಎಂದು ಕೂಗಿಕೊಳ್ಳುತ್ತಾ ರೋದಿಸಿದನು. ಭೀಮಸೇನನೇ ಮೊದಲಾದ ಎಲ್ಲ ಸಹೋದರರೂ ರೋದಿಸಿದರು.

15045042a ಅಂತಃಪುರೇಷು ಚ ತದಾ ಸುಮಹಾನ್ರುದಿತಸ್ವನಃ|

15045042c ಪ್ರಾದುರಾಸೀನ್ಮಹಾರಾಜ ಪೃಥಾಂ ಶ್ರುತ್ವಾ ತಥಾಗತಾಮ್||

ಮಹಾರಾಜ! ಪೃಥೆಯು ಮರಣಹೊಂದಿದನ್ನು ಕೇಳಿ ಅಂತಃಪುರದಲ್ಲಿಯೂ ಮಹಾ ರೋದನವು ಕೇಳಿಬಂದಿತು.

15045043a ತಂ ಚ ವೃದ್ಧಂ ತಥಾ ದಗ್ಧಂ ಹತಪುತ್ರಂ ನರಾಧಿಪಮ್|

15045043c ಅನ್ವಶೋಚಂತ ತೇ ಸರ್ವೇ ಗಾಂಧಾರೀಂ ಚ ತಪಸ್ವಿನೀಮ್||

ಪುತ್ರರನ್ನು ಕಳೆದುಕೊಂಡ ವೃದ್ಧ ನರಾಧಿಪ ಮತ್ತು ತಪಸ್ವಿನೀ ಗಾಂಧಾರಿಯ ಕುರಿತು ಎಲ್ಲರೂ ಶೋಕಿಸಿದರು.

15045044a ತಸ್ಮಿನ್ನುಪರತೇ ಶಬ್ದೇ ಮುಹೂರ್ತಾದಿವ ಭಾರತ|

15045044c ನಿಗೃಹ್ಯ ಬಾಷ್ಪಂ ಧೈರ್ಯೇಣ ಧರ್ಮರಾಜೋಽಬ್ರವೀದಿದಮ್||

ಭಾರತ! ಸ್ವಲ್ಪ ಹೊತ್ತು ಕಳೆದನಂತರ ಶೋಕಶಬ್ಧವು ಕಡಿಮೆಯಾಗಲು ಧರ್ಮರಾಜನು ಧೈರ್ಯದಿಂದ ಕಣ್ಣೀರನ್ನು ತಡೆಹಿಡಿದು ಈ ರೀತಿ ಹೇಳಿದನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ನಾರದಾಗಮನಪರ್ವಣಿ ದಾವಾಗ್ನಿನಾ ಧೃತರಾಷ್ಟ್ರಾದಿದಾಹೇ ಪಂಚಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನಾರದಾಗಮನಪರ್ವದಲ್ಲಿ ದಾವಾಗ್ನಿನಾ ಧೃತರಾಷ್ಟ್ರಾದಿದಾಹ ಎನ್ನುವ ನಲ್ವತ್ತೈದನೇ ಅಧ್ಯಾಯವು.

Related image

Comments are closed.