Ashramavasika Parva: Chapter 24

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೨೪

ಧೃತರಾಷ್ಟ್ರ-ಗಾಂಧಾರಿಯರ ಮಾತನ್ನೂ ಕೇಳದೇ ಕುಂತಿಯು ವನಕ್ಕೆ ನಿರ್ಗಮಿಸಲು ಮುಂದುವರಿದುದು (೧-೧೧). ಧೃತರಾಷ್ಟ್ರನ ವನವಾಸದ ಮೊದಲ ರಾತ್ರಿ (೧೨-೨೪).

15024001 ವೈಶಂಪಾಯನ ಉವಾಚ|

15024001a ಕುಂತ್ಯಾಸ್ತು ವಚನಂ ಶ್ರುತ್ವಾ ಪಾಂಡವಾ ರಾಜಸತ್ತಮ|

15024001c ವ್ರೀಡಿತಾಃ ಸಂನ್ಯವರ್ತಂತ ಪಾಂಚಾಲ್ಯಾ ಸಹಿತಾನಘಾಃ||

ವೈಶಂಪಾಯನನು ಹೇಳಿದನು: “ಕುಂತಿಯ ಆ ಮಾತನ್ನು ಕೇಳಿ ರಾಜಸತ್ತಮ ಪಾಂಡವನು ನಾಚಿಕೆಗೊಂಡು ಪಾಂಚಾಲೀ ಮತ್ತು ಅನಘ ತಮ್ಮಂದಿರೊಡನೆ ಹಿಂದಿರುಗಿದನು.

15024002a ತತಃ ಶಬ್ದೋ ಮಹಾನಾಸೀತ್ಸರ್ವೇಷಾಮೇವ ಭಾರತ|

15024002c ಅಂತಃಪುರಾಣಾಂ ರುದತಾಂ ದೃಷ್ಟ್ವಾ ಕುಂತೀಂ ತಥಾಗತಾಮ್||

ಭಾರತ! ಹಾಗೆ ಕುಂತಿಯು ಹೊರಟಾಗ ಅಂತಃಪುರದ ಸ್ತ್ರೀಯರೆಲ್ಲರ ಜೋರಾದ ರೋದನವು ಕೇಳಿಬಂದಿತು.

15024003a ಪ್ರದಕ್ಷಿಣಮಥಾವೃತ್ಯ ರಾಜಾನಂ ಪಾಂಡವಾಸ್ತದಾ|

15024003c ಅಭಿವಾದ್ಯ ನ್ಯವರ್ತಂತ ಪೃಥಾಂ ತಾಮನಿವರ್ತ್ಯ ವೈ||

ಆಗ ಪಾಂಡವರು ರಾಜನಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಹಿಂದಿರುಗಿದರು. ಪೃಥೆಯು ಮಾತ್ರ ಹಿಂದಿರುಗಲಿಲ್ಲ.

15024004a ತತೋಽಬ್ರವೀನ್ಮಹಾರಾಜೋ ಧೃತರಾಷ್ಟ್ರೋಽಂಬಿಕಾಸುತಃ|

15024004c ಗಾಂಧಾರೀಂ ವಿದುರಂ ಚೈವ ಸಮಾಭಾಷ್ಯ ನಿಗೃಹ್ಯ ಚ||

ಆಗ ಮಹಾರಾಜ ಅಂಬಿಕಾಸುತ ಧೃತರಾಷ್ಟ್ರನು ಗಾಂಧಾರೀ ಮತ್ತು ವಿದುರರ ಕೈಹಿಡಿದು ಹೇಳಿದನು:

15024005a ಯುಧಿಷ್ಠಿರಸ್ಯ ಜನನೀ ದೇವೀ ಸಾಧು ನಿವರ್ತ್ಯತಾಮ್|

15024005c ಯಥಾ ಯುಧಿಷ್ಠಿರಃ ಪ್ರಾಹ ತತ್ಸರ್ವಂ ಸತ್ಯಮೇವ ಹಿ||

“ಯುಧಿಷ್ಠಿರನ ಜನನಿ ದೇವೀ ಸಾಧ್ವಿಯು ಹಿಂದಿರುಗಲಿ. ಯುಧಿಷ್ಠಿರನು ಹೇಳಿದುದೆಲ್ಲವೂ ಸತ್ಯವೇ ಸರಿ!

15024006a ಪುತ್ರೈಶ್ವರ್ಯಂ ಮಹದಿದಮಪಾಸ್ಯ ಚ ಮಹಾಫಲಮ್|

15024006c ಕಾ ನು ಗಚ್ಚೇದ್ವನಂ ದುರ್ಗಂ ಪುತ್ರಾನುತ್ಸೃಜ್ಯ ಮೂಢವತ್||

ಮಹಾಫಲವುಳ್ಳ ಈ ಮಹಾ ಪುತ್ರೈಶ್ವರ್ಯ ಮತ್ತು ಪುತ್ರರನ್ನು ತೊರೆದು ಮೂಢರಂತೆ ಯಾರು ತಾನೇ ದುರ್ಗಮ ವನಕ್ಕೆ ತೆರಳುತ್ತಾರೆ?

15024007a ರಾಜ್ಯಸ್ಥಯಾ ತಪಸ್ತಪ್ತಂ ದಾನಂ ದತ್ತಂ ವ್ರತಂ ಕೃತಮ್|

15024007c ಅನಯಾ ಶಕ್ಯಮದ್ಯೇಹ ಶ್ರೂಯತಾಂ ಚ ವಚೋ ಮಮ||

ರಾಜ್ಯದಲ್ಲಿದ್ದುಕೊಂಡೇ ತಪಸ್ಸನ್ನು ತಪಿಸಬಹುದು, ದಾನಗಳನ್ನು ನೀಡಬಹುದು ಮತ್ತು ವ್ರತಗಳನ್ನು ಆಚರಿಸಲು ಇವಳಿಗೆ ಶಕ್ಯವಾಗುತ್ತದೆ. ನನ್ನ ಮಾತನ್ನು ಕೇಳಿರಿ.

15024008a ಗಾಂಧಾರಿ ಪರಿತುಷ್ಟೋಽಸ್ಮಿ ವಧ್ವಾಃ ಶುಶ್ರೂಷಣೇನ ವೈ|

15024008c ತಸ್ಮಾತ್ತ್ವಮೇನಾಂ ಧರ್ಮಜ್ಞೇ ಸಮನುಜ್ಞಾತುಮರ್ಹಸಿ||

ಗಾಂಧಾರೀ! ಸೊಸೆ ಕುಂತಿಯ ಶುಶ್ರೂಷಣೆಯಿಂದ ನಾನು ಪರಿತುಷ್ಟನಾಗಿದ್ದೇನೆ. ಧರ್ಮಜ್ಞೇ! ಆದುದರಿಂದ ನೀನು ಅವಳಿಗೆ ಹಿಂದಿರುಗಲು ಅನುಮತಿಯನ್ನು ನೀಡಬೇಕು!”

15024009a ಇತ್ಯುಕ್ತಾ ಸೌಬಲೇಯೀ ತು ರಾಜ್ಞಾ ಕುಂತೀಮುವಾಚ ಹ|

15024009c ತತ್ಸರ್ವಂ ರಾಜವಚನಂ ಸ್ವಂ ಚ ವಾಕ್ಯಂ ವಿಶೇಷವತ್||

ಇದನ್ನು ಕೇಳಿ ಸೌಬಲೇಯಿಯು ರಾಜನ ಮಾತನ್ನು ಕುಂತಿಗೆ ಹೇಳಿದಳು. ರಾಜನ ಮಾತುಗಳೆಲ್ಲವನ್ನು ಮಾತ್ರವಲ್ಲದೇ ವಿಶೇಷವಾಗಿ ತನ್ನ ಮಾತನ್ನೂ ಅವಳಿಗೆ ತಿಳಿಸಿದಳು.

15024010a ನ ಚ ಸಾ ವನವಾಸಾಯ ದೇವೀಂ ಕೃತಮತಿಂ ತದಾ|

15024010c ಶಕ್ನೋತ್ಯುಪಾವರ್ತಯಿತುಂ ಕುಂತೀಂ ಧರ್ಮಪರಾಂ ಸತೀಮ್||

ಆದರೆ ವನವಾಸದ ದೃಢನಿಶ್ಚಯವನ್ನು ಮಾಡಿದ್ದ ಆ ದೇವೀ ಧರ್ಮಪರ ಸತಿ ಕುಂತಿಯನ್ನು ಹಿಂದಿರುಗುವಂತೆ ಮಾಡಲು ಅವಳಿಗೂ ಶಕ್ಯವಾಗಲಿಲ್ಲ.

15024011a ತಸ್ಯಾಸ್ತು ತಂ ಸ್ಥಿರಂ ಜ್ಞಾತ್ವಾ ವ್ಯವಸಾಯಂ ಕುರುಸ್ತ್ರಿಯಃ|

15024011c ನಿವೃತ್ತಾಂಶ್ಚ ಕುರುಶ್ರೇಷ್ಠಾನ್ದೃಷ್ಟ್ವಾ ಪ್ರರುರುದುಸ್ತದಾ||

ಅವಳ ನಿಶ್ಚಯವು ಸ್ಥಿರವಾಗಿರುವುದನ್ನು ತಿಳಿದು ಕುರುಶ್ರೇಷ್ಠರು ನಿರಾಶರಾಗಿ ಹಿಂದಿರುಗುತ್ತಿರುವುದನ್ನು ನೋಡಿ ಕುರುಸ್ತ್ರೀಯರು ರೋದಿಸಿದರು.

15024012a ಉಪಾವೃತ್ತೇಷು ಪಾರ್ಥೇಷು ಸರ್ವೇಷ್ವಂತಃಪುರೇಷು ಚ|

15024012c ಯಯೌ ರಾಜಾ ಮಹಾಪ್ರಾಜ್ಞೋ ಧೃತರಾಷ್ಟ್ರೋ ವನಂ ತದಾ||

ಸರ್ವ ಪಾರ್ಥರೂ ಮತ್ತು ಅಂತಃಪುರದವರೂ ಹಿಂದಿರುಗಿದ ನಂತರ ಮಹಾಪ್ರಾಜ್ಞ ರಾಜಾ ಧೃತರಾಷ್ಟ್ರನು ವನಕ್ಕೆ ಹೋದನು.

15024013a ಪಾಂಡವಾ ಅಪಿ ದೀನಾಸ್ತೇ ದುಃಖಶೋಕಪರಾಯಣಾಃ|

15024013c ಯಾನೈಃ ಸ್ತ್ರೀಸಹಿತಾಃ ಸರ್ವೇ ಪುರಂ ಪ್ರವಿವಿಶುಸ್ತದಾ||

ಪಾಂಡವರೂ ಕೂಡ ದುಃಖಶೋಕಪರಾಯಣರಾಗಿ ದೀನರಾಗಿ ಸ್ತ್ರೀಗಳೆಲ್ಲರ ಸಹಿತ ಯಾನಗಳಲ್ಲಿ ಪುರವನ್ನು ಪ್ರವೇಶಿಸಿದರು.

15024014a ತದಹೃಷ್ಟಮಿವಾಕೂಜಂ ಗತೋತ್ಸವಮಿವಾಭವತ್|

15024014c ನಗರಂ ಹಾಸ್ತಿನಪುರಂ ಸಸ್ತ್ರೀವೃದ್ಧಕುಮಾರಕಮ್||

ಹಸ್ತಿನಾಪುರ ನಗರದ ಸ್ತ್ರೀ-ವೃದ್ಧ-ಕುಮಾರಕರೆಲ್ಲರಿಗೂ ಹರ್ಷವೇ ಇಲ್ಲದಂತಾಯಿತು. ಉತ್ಸವಾದಿಗಳು ನಡೆಯಲಿಲ್ಲ.

15024015a ಸರ್ವೇ ಚಾಸನ್ನಿರುತ್ಸಾಹಾಃ ಪಾಂಡವಾ ಜಾತಮನ್ಯವಃ|

15024015c ಕುಂತ್ಯಾ ಹೀನಾಃ ಸುದುಃಖಾರ್ತಾ ವತ್ಸಾ ಇವ ವಿನಾಕೃತಾಃ||

ಎಲ್ಲರೂ ನಿರುತ್ಸಾಹರಾಗಿದ್ದರು. ಕುಂತಿಯಿಲ್ಲದೇ ಪಾಂಡವರು ಹಸುವಿಲ್ಲದ ಕರುಗಳಂತೆ ಅತ್ಯಂತ ದುಃಖಾರ್ತರಾಗಿದ್ದರು.

15024016a ಧೃತರಾಷ್ಟ್ರಸ್ತು ತೇನಾಹ್ನಾ ಗತ್ವಾ ಸುಮಹದಂತರಮ್|

15024016c ತತೋ ಭಾಗೀರಥೀತೀರೇ ನಿವಾಸಮಕರೋತ್ ಪ್ರಭುಃ||

ಪ್ರಭು ಧೃತರಾಷ್ಟ್ರನಾದರೋ ಆ ದಿನ ಬಹಳ ದೂರ ನಡೆದು ಭಾಗೀರಥೀತೀರದಲ್ಲಿ ನಿವಾಸವನ್ನು ಮಾಡಿದನು.

15024017a ಪ್ರಾದುಷ್ಕೃತಾ ಯಥಾನ್ಯಾಯಮಗ್ನಯೋ ವೇದಪಾರಗೈಃ|

15024017c ವ್ಯರಾಜಂತ ದ್ವಿಜಶ್ರೇಷ್ಠೈಸ್ತತ್ರ ತತ್ರ ತಪೋಧನೈಃ|

15024017e ಪ್ರಾದುಷ್ಕೃತಾಗ್ನಿರಭವತ್ ಸ ಚ ವೃದ್ಧೋ ನರಾಧಿಪಃ||

ಅಲ್ಲಲ್ಲಿ ಇದ್ದ ದ್ವಿಜಶ್ರೇಷ್ಠ ತಪೋಧನರು ಮತ್ತು ವೇದಪಾರಂಗತರು ಪ್ರತಿಷ್ಠಾಪಿಸಿದ್ದ ಅಗ್ನಿಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು. ವೃದ್ಧ ನರಾಧಿಪನು ಅಲ್ಲಿಯೇ ಅಗ್ನಿಯನ್ನು ಪ್ರತಿಷ್ಠಾಪಿಸಿದನು.

15024018a ಸ ರಾಜಾಗ್ನೀನ್ಪರ್ಯುಪಾಸ್ಯ ಹುತ್ವಾ ಚ ವಿಧಿವತ್ತದಾ|

15024018c ಸಂಧ್ಯಾಗತಂ ಸಹಸ್ರಾಂಶುಮುಪಾತಿಷ್ಠತ ಭಾರತ||

ಭಾರತ! ರಾಜನು ವಿಧಿವತ್ತಾಗಿ ಮೂರು ಅಗ್ನಿಗಳಲ್ಲಿ ಆಹುತಿಗಳನ್ನಿತ್ತು ಉಪಾಸನೆ ಮಾಡಿದನು. ಸಂಧ್ಯಾಗತ ಸಹಸ್ರಾಂಶು ಸೂರ್ಯನನ್ನೂ ಉಪಾಸಿಸಿದನು.

15024019a ವಿದುರಃ ಸಂಜಯಶ್ಚೈವ ರಾಜ್ಞಃ ಶಯ್ಯಾಂ ಕುಶೈಸ್ತತಃ|

15024019c ಚಕ್ರತುಃ ಕುರುವೀರಸ್ಯ ಗಾಂಧಾರ್ಯಾಶ್ಚಾವಿದೂರತಃ||

ವಿದುರ ಮತ್ತು ಸಂಜಯರು ಕುಶಗಳಿಂದ ರಾಜನ ಹಾಸಿಗೆಯನ್ನೂ, ಕುರುವೀರನ ಹತ್ತಿರದಲ್ಲಿಯೇ ಗಾಂಧಾರಿಯ ಹಾಸಿಗೆಯನ್ನೂ ಮಾಡಿದರು.

15024020a ಗಾಂಧಾರ್ಯಾಃ ಸಂನಿಕರ್ಷೇ ತು ನಿಷಸಾದ ಕುಶೇಷ್ವಥ|

15024020c ಯುಧಿಷ್ಠಿರಸ್ಯ ಜನನೀ ಕುಂತೀ ಸಾಧುವ್ರತೇ ಸ್ಥಿತಾ||

ಗಾಂಧಾರಿಯ ಪಕ್ಕದಲ್ಲಿಯೇ ಕುಶದ ಹಾಸಿಗೆಯ ಮೇಲೆ ಯುಧಿಷ್ಠಿರನ ಜನನಿ ಸಾಧುವ್ರತೇ ಕುಂತಿಯು ಮಲಗಿದಳು.

15024021a ತೇಷಾಂ ಸಂಶ್ರವಣೇ ಚಾಪಿ ನಿಷೇದುರ್ವಿದುರಾದಯಃ|

15024021c ಯಾಜಕಾಶ್ಚ ಯಥೋದ್ದೇಶಂ ದ್ವಿಜಾ ಯೇ ಚಾನುಯಾಯಿನಃ||

ಅವರಿಗೆ ಕೇಳಿಸುವಷ್ಟು ದೂರದಲ್ಲಿಯೇ ವಿದುರಾದಿಗಳು, ಯಾಜಕರು, ಮತ್ತು ಅನುಯಾಯಿಗಳಾಗಿ ಬಂದ ದ್ವಿಜರು ಸ್ಥಳವಿದ್ದ ಹಾಗೆ ಮಲಗಿಕೊಂಡರು.

15024022a ಪ್ರಾಧೀತದ್ವಿಜಮುಖ್ಯಾ ಸಾ ಸಂಪ್ರಜ್ವಾಲಿತಪಾವಕಾ|

15024022c ಬಭೂವ ತೇಷಾಂ ರಜನೀ ಬ್ರಾಹ್ಮೀವ ಪ್ರೀತಿವರ್ಧನೀ||

ಸ್ವಾಧ್ಯಾಯದಲ್ಲಿ ನಿರತರಾಗಿದ ಬ್ರಾಹ್ಮಣರಿಂದ ಮತ್ತು ಪ್ರಜ್ವಲಿಸುತ್ತಿದ್ದ ಪಾವಕಗಳಿಂದ ಅ ರಜನಿಯು ಅವರಿಗೆ ಬ್ರಾಹ್ಮೀ ರಾತ್ರಿಯಂತೆ ಸಂತೋಷವನ್ನುಂಟು ಮಾಡಿತು.

15024023a ತತೋ ರಾತ್ರ್ಯಾಂ ವ್ಯತೀತಾಯಾಂ ಕೃತಪೂರ್ವಾಹ್ಣಿಕಕ್ರಿಯಾಃ|

15024023c ಹುತ್ವಾಗ್ನಿಂ ವಿಧಿವತ್ ಸರ್ವೇ ಪ್ರಯಯುಸ್ತೇ ಯಥಾಕ್ರಮಮ್|

15024023e ಉದಙ್ಮುಖಾ ನಿರೀಕ್ಷಂತ ಉಪವಾಸಪರಾಯಣಾಃ||

ರಾತ್ರಿಯು ಕಳೆಯಲು ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ವಿಧಿವತ್ತಾಗಿ ಅಗ್ನಿಗಳಲ್ಲಿ ಹೋಮಮಾಡಿ, ಎಲ್ಲರೂ ಯಥಾಕ್ರಮವಾಗಿ ಪ್ರಯಾಣ ಬೆಳೆಸಿದರು. ಉಪವಾಸವ್ರತನಿಷ್ಠರಾಗಿದ್ದ ಅವರು ಉತ್ತರಾಭಿಮುಖವಾಗಿ ಹೊರಟರು.

15024024a ಸ ತೇಷಾಮತಿದುಃಖೋಽಭೂನ್ನಿವಾಸಃ ಪ್ರಥಮೇಽಹನಿ|

15024024c ಶೋಚತಾಂ ಶೋಚ್ಯಮಾನಾನಾಂ ಪೌರಜಾನಪದೈರ್ಜನೈಃ||

ಶೋಕ ಪಡುತ್ತಿದ್ದ ನಗರ-ಗ್ರಾಮೀಣ ಜನರನ್ನು ನೋಡಿ ಶೋಕಿಸುತ್ತಿದ್ದ ಅವರಿಗೆ ಆ ಮೊದಲನೆಯ ದಿನವು ಅತಿದುಃಖಕರವಾಗಿತ್ತು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಚತುರ್ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಇಪ್ಪತ್ನಾಲ್ಕನೇ ಅಧ್ಯಾಯವು.

Related image

Comments are closed.