Ashramavasika Parva: Chapter 15

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೫

ಪೌರಜನರಲ್ಲಿ ಧೃತರಾಷ್ಟ್ರನ ನಿವೇದನೆ (೧-೫). ಪೌರಜನರ ಪರವಾಗಿ ಸಾಂಬನೆಂಬ ಬ್ರಾಹ್ಮಣನು ಧೃತರಾಷ್ಟ್ರನನ್ನು ಸಂತವಿಸಿ ಮಾತನಾಡಿದುದು (೬-೨೬).

15015001 ವೈಶಂಪಾಯನ ಉವಾಚ|

15015001a ಏವಮುಕ್ತಾಸ್ತು ತೇ ತೇನ ಪೌರಜಾನಪದಾ ಜನಾಃ|

15015001c ವೃದ್ಧೇನ ರಾಜ್ಞಾ ಕೌರವ್ಯ ನಷ್ಟಸಂಜ್ಞಾ ಇವಾಭವನ್||

ವೈಶಂಪಾಯನನು ಹೇಳಿದನು: “ವೃದ್ಧ ರಾಜನು ಹೀಗೆ ಹೇಳಲು ಪೌರ-ಗ್ರಾಮೀಣ ಜನರು ಮೂರ್ಛೆಗೊಂಡವರಂತೆ ಸ್ತಬ್ಧರಾದರು.

15015002a ತೂಷ್ಣೀಂಭೂತಾಂಸ್ತತಸ್ತಾಂಸ್ತು ಬಾಷ್ಪಕಂಠಾನ್ಮಹೀಪತಿಃ|

15015002c ಧೃತರಾಷ್ಟ್ರೋ ಮಹೀಪಾಲಃ ಪುನರೇವಾಭ್ಯಭಾಷತ||

ಕಣ್ಣೀರಿನಿಂದ ಗಂಟಲು ತುಂಬಿ ಸ್ತಬ್ಧರಾಗಿದ್ದ ಅವರನ್ನು ಕುರಿತು ಮಹೀಪಾಲ ಮಹೀಪತಿ ಧೃತರಾಷ್ಟ್ರನೇ ಪುನಃ ಹೇಳಿದನು:

15015003a ವೃದ್ಧಂ ಮಾಂ ಹತಪುತ್ರಂ ಚ ಧರ್ಮಪತ್ನ್ಯಾ ಸಹಾನಯಾ|

15015003c ವಿಲಪಂತಂ ಬಹುವಿಧಂ ಕೃಪಣಂ ಚೈವ ಸತ್ತಮಾಃ||

15015004a ಪಿತ್ರಾ ಸ್ವಯಮನುಜ್ಞಾತಂ ಕೃಷ್ಣದ್ವೈಪಾಯನೇನ ವೈ|

15015004c ವನವಾಸಾಯ ಧರ್ಮಜ್ಞಾ ಧರ್ಮಜ್ಞೇನ ನೃಪೇಣ ಚ||

“ಸಜ್ಜನರೇ! ಧರ್ಮಜ್ಞರೇ! ವೃದ್ಧನೂ, ಪುತ್ರರನ್ನು ಕಳೆದುಕೊಂಡಿರುವವನೂ, ಧರ್ಮಪತ್ನಿಯೊಡನೆ ಬಹುವಿಧವಾಗಿ ರೋದಿಸುತ್ತಿರುವವನೂ, ಕೃಪಣನೂ ಆದ ನಾನು ವನವಾಸಕ್ಕೆ ನನ್ನ ತಂದೆ ಸ್ವಯಂ ಕೃಷ್ಣದ್ವೈಪಾಯನನಿಂದ ಮತ್ತು ಧರ್ಮಜ್ಞ ನೃಪನಿಂದ ಅನುಮತಿಯನ್ನು ಪಡೆದಿದ್ದೇನೆ.

15015005a ಸೋಽಹಂ ಪುನಃ ಪುನರ್ಯಾಚೇ ಶಿರಸಾವನತೋಽನಘಾಃ|

15015005c ಗಾಂಧಾರ್ಯಾ ಸಹಿತಂ ತನ್ಮಾಂ ಸಮನುಜ್ಞಾತುಮರ್ಹಥ||

ಅನಘರೇ! ಪುನಃ ಪುನಃ ನಿಮ್ಮೆದಿರು ಶಿರಸಾ ಬಾಗುತ್ತಿದ್ದೇನೆ. ಗಾಂಧಾರಿಯ ಸಹಿತ ನನಗೆ ಅನುಮತಿಯನ್ನು ನೀಡಬೇಕು!”

15015006a ಶ್ರುತ್ವಾ ತು ಕುರುರಾಜಸ್ಯ ವಾಕ್ಯಾನಿ ಕರುಣಾನಿ ತೇ|

15015006c ರುರುದುಃ ಸರ್ವತೋ ರಾಜನ್ಸಮೇತಾಃ ಕುರುಜಾಂಗಲಾಃ||

ರಾಜನ್! ಕುರುರಾಜನ ಈ ಕರುಣಾಜನಕ ಮಾತುಗಳನ್ನು ಕೇಳಿ ಕುರುಜಾಂಗಲದ ಸರ್ವರೂ ಒಟ್ಟಿಗೇ ರೋದಿಸಿದರು.

15015007a ಉತ್ತರೀಯೈಃ ಕರೈಶ್ಚಾಪಿ ಸಂಚಾದ್ಯ ವದನಾನಿ ತೇ|

15015007c ರುರುದುಃ ಶೋಕಸಂತಪ್ತಾ ಮುಹೂರ್ತಂ ಪಿತೃಮಾತೃವತ್||

ಉತ್ತರೀಯಗಳಿಂದ ಮತ್ತು ಕೈಗಳಿಂದ ಮುಖಗಳನ್ನು ಮುಚ್ಚಿಕೊಳ್ಳುತ್ತಾ ಶೋಕಸಂತಪ್ತರಾದ ಅವರು ತಾಯಿ-ತಂದೆಯರಂತೆ ಒಂದು ಕ್ಷಣ ರೋದಿಸಿದರು.

15015008a ಹೃದಯೈಃ ಶೂನ್ಯಭೂತೈಸ್ತೇ ಧೃತರಾಷ್ಟ್ರಪ್ರವಾಸಜಮ್|

15015008c ದುಃಖಂ ಸಂಧಾರಯಂತಃ ಸ್ಮ ನಷ್ಟಸಂಜ್ಞಾ ಇವಾಭವನ್||

ಧೃತರಾಷ್ಟ್ರನ ವನಪ್ರವಾಸದ ದುಃಖವನ್ನು ತುಂಬಿಕೊಂಡಿದ್ದ ಅವರು ಹೃದಯಶೂನ್ಯರಾಗಿ ಮೂರ್ಛಿತರಾಗಿರುವರೋ ಎಂಬಂತೆ ಕಾಣುತ್ತಿದ್ದರು.

15015009a ತೇ ವಿನೀಯ ತಮಾಯಾಸಂ ಕುರುರಾಜವಿಯೋಗಜಮ್|

15015009c ಶನೈಃ ಶನೈಸ್ತದಾನ್ಯೋನ್ಯಮಬ್ರುವನ್ಸ್ವಮತಾನ್ಯುತ||

ಅನಂತರ ಕುರುರಾಜನ ವಿಯೋಗದಿಂದುಂಟಾಗುವ ದುಃಖವನ್ನು ದೂರಮಾಡಿಕೊಂಡು ಮೆಲ್ಲನೇ ಅನ್ಯೋನ್ಯರಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳತೊಡಗಿದರು.

15015010a ತತಃ ಸಂಧಾಯ ತೇ ಸರ್ವೇ ವಾಕ್ಯಾನ್ಯಥ ಸಮಾಸತಃ|

15015010c ಏಕಸ್ಮಿನ್ಬ್ರಾಹ್ಮಣೇ ರಾಜನ್ನಾವೇಶ್ಯೋಚುರ್ನರಾಧಿಪಮ್||

ರಾಜನ್! ಆಗ ಅವರೆಲ್ಲರೂ ಒಂದು ನಿರ್ಧಾರಕ್ಕೆ ಬಂದು ಅದನ್ನು ಓರ್ವ ಬ್ರಾಹ್ಮಣನ ಮೂಲಕ ನರಾಧಿಪನಿಗೆ ತಿಳಿಸಿದರು.

15015011a ತತಃ ಸ್ವಚರಣೇ ವೃದ್ಧಃ ಸಂಮತೋಽರ್ಥವಿಶಾರದಃ|

15015011c ಸಾಂಬಾಖ್ಯೋ ಬಹ್ವೃಚೋ ರಾಜನ್ವಕ್ತುಂ ಸಮುಪಚಕ್ರಮೇ||

ರಾಜನ್! ಆಗ ಸದಾಚಾರನೂ, ಅರ್ಥವಿಶಾರದನೂ, ಋಗ್ವೇದಪಾರಂಗತನೂ, ಮಾನನೀಯನೂ ಆದ ಸಾಂಬ ಎಂಬ ಹೆಸರಿನ ವೃದ್ಧನು ಹೇಳಲು ಉಪಕ್ರಮಿಸಿದನು.

15015012a ಅನುಮಾನ್ಯ ಮಹಾರಾಜಂ ತತ್ಸದಃ ಸಂಪ್ರಭಾಷ್ಯ ಚ|

15015012c ವಿಪ್ರಃ ಪ್ರಗಲ್ಭೋ ಮೇಧಾವೀ ಸ ರಾಜಾನಮುವಾಚ ಹ||

ಮಹಾರಾಜನನ್ನು ವಿನಯದಿಂದ ಗೌರವಿಸುತ್ತಾ ಸದಸ್ಯರನ್ನು ಸಂತೋಷಗೊಳಿಸುತ್ತಾ ಆ ಮೇಧಾವೀ ವಾಗ್ಮಿ ವಿಪ್ರನು ರಾಜನಿಗೆ ಹೇಳಿದನು:

15015013a ರಾಜನ್ವಾಕ್ಯಂ ಜನಸ್ಯಾಸ್ಯ ಮಯಿ ಸರ್ವಂ ಸಮರ್ಪಿತಮ್|

15015013c ವಕ್ಷ್ಯಾಮಿ ತದಹಂ ವೀರ ತಜ್ಜುಷಸ್ವ ನರಾಧಿಪ||

“ರಾಜನ್! ವೀರ! ನರಾಧಿಪ! ಈ ಜನರೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿರುವರು. ಅದನ್ನು ನಾನು ನಿನಗೆ ಹೇಳುತ್ತಿದ್ದೇನೆ. ಕೇಳು!

15015014a ಯಥಾ ವದಸಿ ರಾಜೇಂದ್ರ ಸರ್ವಮೇತತ್ತಥಾ ವಿಭೋ|

15015014c ನಾತ್ರ ಮಿಥ್ಯಾ ವಚಃ ಕಿಂ ಚಿತ್ಸುಹೃತ್ತ್ವಂ ನಃ ಪರಸ್ಪರಮ್||

ರಾಜೇಂದ್ರ! ವಿಭೋ! ನೀನು ಹೇಳಿದುದೆಲ್ಲವೂ ಸರಿಯಾಗಿಯೇ ಇದೆ. ಪರಸ್ಪರರಲ್ಲಿ ಸೌಹಾರ್ದತೆಯಿದೆ ಎನ್ನುವುದರಲ್ಲಿ ಸ್ವಲ್ಪವೂ ಸುಳ್ಳಿಲ್ಲ!

15015015a ನ ಜಾತ್ವಸ್ಯ ತು ವಂಶಸ್ಯ ರಾಜ್ಞಾಂ ಕಶ್ಚಿತ್ಕದಾ ಚನ|

15015015c ರಾಜಾಸೀದ್ಯಃ ಪ್ರಜಾಪಾಲಃ ಪ್ರಜಾನಾಮಪ್ರಿಯೋ ಭವೇತ್||

ಈ ರಾಜರ ವಂಶದಲ್ಲಿ ಎಂದೂ ಪ್ರಜೆಗಳಿಗೆ ಅಪ್ರಿಯನಾದ ಪ್ರಜಾಪಾಲಕ ರಾಜನು ಇರಲಿಲ್ಲ!

15015016a ಪಿತೃವದ್ಭ್ರಾತೃವಚ್ಚೈವ ಭವಂತಃ ಪಾಲಯಂತಿ ನಃ|

15015016c ನ ಚ ದುರ್ಯೋಧನಃ ಕಿಂ ಚಿದಯುಕ್ತಂ ಕೃತವಾನ್ನೃಪ||

ನೀವುಗಳು ನಮ್ಮನ್ನು ತಂದೆಯಂತೆ ಮತ್ತು ಸಹೋದರರಂತೆ ಪಾಲಿಸುತ್ತಿದ್ದೀರಿ. ನೃಪ! ದುರ್ಯೋಧನನು ಕೂಡ ಏನೊಂದೂ ಅಯುಕ್ತ ಕಾರ್ಯವನ್ನು ಮಾಡಿಲ್ಲ.

15015017a ಯಥಾ ಬ್ರವೀತಿ ಧರ್ಮಜ್ಞೋ ಮುನಿಃ ಸತ್ಯವತೀಸುತಃ|

15015017c ತಥಾ ಕುರು ಮಹಾರಾಜ ಸ ಹಿ ನಃ ಪರಮೋ ಗುರುಃ||

ಮಹಾರಾಜ! ಧರ್ಮಜ್ಞ ಮುನಿ ಸತ್ಯವತೀಸುತನು ಹೇಗೆ ಹೇಳುತ್ತಾನೋ ಹಾಗೆಯೇ ಮಾಡು! ಅವನೇ ನಮಗೆ ಪರಮ ಗುರುವು!

15015018a ತ್ಯಕ್ತಾ ವಯಂ ತು ಭವತಾ ದುಃಖಶೋಕಪರಾಯಣಾಃ|

15015018c ಭವಿಷ್ಯಾಮಶ್ಚಿರಂ ರಾಜನ್ಭವದ್ಗುಣಶತೈರ್ಹೃತಾಃ||

ರಾಜನ್! ನಿನ್ನಿಂದ ತ್ಯಕ್ತರಾದ ನಾವು ಬಹುಕಾಲದವರೆಗೆ ದುಃಖಶೋಕಪರಾಯಣರಾಗಿ ನಿನ್ನ ನೂರಾರು ಗುಣಗಳನ್ನು ಸ್ಮರಿಸಿಕೊಳ್ಳುತ್ತಿರುತ್ತೇವೆ.

15015019a ಯಥಾ ಶಂತನುನಾ ಗುಪ್ತಾ ರಾಜ್ಞಾ ಚಿತ್ರಾಂಗದೇನ ಚ|

15015019c ಭೀಷ್ಮವೀರ್ಯೋಪಗೂಢೇನ ಪಿತ್ರಾ ಚ ತವ ಪಾರ್ಥಿವ||

15015020a ಭವದ್ಬುದ್ಧಿಯುಜಾ ಚೈವ ಪಾಂಡುನಾ ಪೃಥಿವೀಕ್ಷಿತಾ|

15015020c ತಥಾ ದುರ್ಯೋಧನೇನಾಪಿ ರಾಜ್ಞಾ ಸುಪರಿಪಾಲಿತಾಃ||

ಪಾರ್ಥಿವ! ರಾಜಾ ಶಂತನುವು ಹೇಗೆ ನಮ್ಮನ್ನು ರಕ್ಷಿಸಿದನೋ, ಭೀಷ್ಮನ ವೀರ್ಯದಿಂದ ರಕ್ಷಿತನಾದ ಚಿತ್ರಾಂಗದನು ನಮ್ಮನ್ನು ಹೇಗೆ ರಕ್ಷಿಸಿದನೋ ಮತ್ತು ನಿನ್ನ ಮೇಲ್ವಿಚಾರಣೆಯಲ್ಲಿ ಪಾಂಡುವು ನಮ್ಮನ್ನು ಹೇಗೆ ಸಂರಕ್ಷಿಸಿದನೋ ಹಾಗೆ ರಾಜಾ ದುರ್ಯೋಧನನೂ ಕೂಡ ನಮ್ಮನ್ನು ಚೆನ್ನಾಗಿ ಪರಿಪಾಲಿಸುತ್ತಿದ್ದನು.

15015021a ನ ಸ್ವಲ್ಪಮಪಿ ಪುತ್ರಸ್ತೇ ವ್ಯಲೀಕಂ ಕೃತವಾನ್ನೃಪ|

15015021c ಪಿತರೀವ ಸುವಿಶ್ವಸ್ತಾಸ್ತಸ್ಮಿನ್ನಪಿ ನರಾಧಿಪೇ|

15015021e ವಯಮಾಸ್ಮ ಯಥಾ ಸಮ್ಯಗ್ಭವತೋ ವಿದಿತಂ ತಥಾ||

ನೃಪ! ನಿನ್ನ ಮಗನು ನಮ್ಮ ವಿಷಯದಲ್ಲಿ ಸ್ವಲ್ಪವೂ ಅನ್ಯಾಯವನ್ನು ಮಾಡಲಿಲ್ಲ. ನಾವೂ ಕೂಡ ತಂದೆಯಂತೆ ಆ ನರಾಧಿಪನಲ್ಲಿ ವಿಶ್ವಾಸವನ್ನಿಟ್ಟಿದ್ದೆವು. ಅವನ ರಾಜ್ಯಭಾರದಲ್ಲಿ ನಾವೆಲ್ಲರೂ ಸುಖವಾಗಿಯೇ ಇದ್ದೆವು. ಇವೆಲ್ಲವೂ ನಿನಗೆ ತಿಳಿದೇ ಇದೆ.

15015022a ತಥಾ ವರ್ಷಸಹಸ್ರಾಯ ಕುಂತೀಪುತ್ರೇಣ ಧೀಮತಾ|

15015022c ಪಾಲ್ಯಮಾನಾ ಧೃತಿಮತಾ ಸುಖಂ ವಿಂದಾಮಹೇ ನೃಪ||

ನೃಪ! ಹಾಗೆಯೇ ಧೀಮಂತ ಧೃತಿಮತ ಕುಂತೀಪುತ್ರನ ಆಳ್ವಿಕೆಯಲ್ಲಿ ಸಾವಿರ ವರ್ಷಗಳ ಕಾಲ ಸುಖವಾಗಿರಬೇಕೆಂದು ಬಯಸಿದ್ದೇವೆ.

15015023a ರಾಜರ್ಷೀಣಾಂ ಪುರಾಣಾನಾಂ ಭವತಾಂ ವಂಶಧಾರಿಣಾಮ್|

15015023c ಕುರುಸಂವರಣಾದೀನಾಂ ಭರತಸ್ಯ ಚ ಧೀಮತಃ||

15015024a ವೃತ್ತಂ ಸಮನುಯಾತ್ಯೇಷ ಧರ್ಮಾತ್ಮಾ ಭೂರಿದಕ್ಷಿಣಃ|

15015024c ನಾತ್ರ ವಾಚ್ಯಂ ಮಹಾರಾಜ ಸುಸೂಕ್ಷ್ಮಮಪಿ ವಿದ್ಯತೇ||

ಮಹಾರಾಜ! ಈ ಧರ್ಮಾತ್ಮಾ ಭೂರಿದಕ್ಷಿಣ ಯುಧಿಷ್ಠಿರನು ನಿನ್ನ ಪುರಾಣ ವಂಶಧಾರಿಗಳಾದ ರಾಜರ್ಷಿ ಕುರು, ಸಂವರಣ ಮತ್ತು ಧೀಮಂತ ಭರತ ಮೊದಲಾದವರ ಆಚಾರಗಳನ್ನು ಅನುಸರಿಸುತ್ತಿದ್ದಾನೆ. ಅವನಲ್ಲಿ ನಾವು ಹೇಳಬಹುದಾದ ಸೂಕ್ಷ್ಮ ದೋಷವೂ ಇಲ್ಲ.

15015025a ಉಷಿತಾಃ ಸ್ಮ ಸುಖಂ ನಿತ್ಯಂ ಭವತಾ ಪರಿಪಾಲಿತಾಃ|

15015025c ಸುಸೂಕ್ಷ್ಮಂ ಚ ವ್ಯಲೀಕಂ ತೇ ಸಪುತ್ರಸ್ಯ ನ ವಿದ್ಯತೇ||

ನೀನು ಆಳುತ್ತಿರುವಾಗ ಕೂಡ ನಾವು ನಿತ್ಯವೂ ಸುಖವಾಗಿಯೇ ಇದ್ದೆವು. ನಿನ್ನ ಪುತ್ರನಲ್ಲಿ ಕೂಡ ಸೂಕ್ಷ್ಮವಾದ ಅನ್ಯಾಯವೇನನ್ನೂ ನಾವು ತಿಳಿದಿಲ್ಲ.

15015026a ಯತ್ತು ಜ್ಞಾತಿವಿಮರ್ದೇಽಸ್ಮಿನ್ನಾತ್ಥ ದುರ್ಯೋಧನಂ ಪ್ರತಿ|

15015026c ಭವಂತಮನುನೇಷ್ಯಾಮಿ ತತ್ರಾಪಿ ಕುರುನಂದನ||

ಕುರುನಂದನ! ಜ್ಞಾತಿವಧೆಯ ವಿಷಯದಲ್ಲಿ ದುರ್ಯೋಧನನ ಕುರಿತು ನೀನು ಏನು ಹೇಳಿದೆಯೋ ಅದಕ್ಕೂ ಸಮಾಧಾನಕರವಾದ ಕೆಲವು ಮಾತುಗಳನ್ನು ಹೇಳುತ್ತೇನೆ.””

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಪ್ರಕೃತಿಸಾಂತ್ವನೇ ಪಂಚದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಪ್ರಕೃತಿಸಾಂತ್ವನ ಎನ್ನುವ ಹದಿನೈದನೇ ಅಧ್ಯಾಯವು.

Related image

Comments are closed.