Ashramavasika Parva: Chapter 13

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೧೩

ಧೃತರಾಷ್ಟ್ರನು ಯುಧಿಷ್ಠಿರನಿಗೆ ತನ್ನ ಉಪದೇಶವನ್ನು ಸಮಾಪ್ತಗೊಳಿಸಿ ಕಳುಹಿಸಿದುದು (೧-೫). ಧೃತರಾಷ್ಟ್ರನ ಇಚ್ಛೆಯಂತೆ ಯುಧಿಷ್ಠಿರನು ಪೌರಜನರನ್ನು ಕರೆಯಿಸಿದುದು (೬-೧೦). ಪೌರಜನರಲ್ಲಿ ಧೃತರಾಷ್ಟ್ರನ ನಿವೇದನೆ (೧೧-೨೨).

15013001 ಯುಧಿಷ್ಠಿರ ಉವಾಚ|

15013001a ಏವಮೇತತ್ಕರಿಷ್ಯಾಮಿ ಯಥಾತ್ಥ ಪೃಥಿವೀಪತೇ|

15013001c ಭೂಯಶ್ಚೈವಾನುಶಾಸ್ಯೋಽಹಂ ಭವತಾ ಪಾರ್ಥಿವರ್ಷಭ||

ಯುಧಿಷ್ಠಿರನು ಹೇಳಿದನು: “ಪೃಥಿವೀಪತೇ! ನೀನು ಹೇಳಿದಂತೆಯೇ ಮಾಡುತ್ತೇನೆ. ಪಾರ್ಥಿವರ್ಷಭ! ನಿನ್ನಿಂದ ಇನ್ನೂ ಹೆಚ್ಚಿನ ಉಪದೇಶವನ್ನು ನಾನು ಬಯಸುತ್ತೇನೆ.

15013002a ಭೀಷ್ಮೇ ಸ್ವರ್ಗಮನುಪ್ರಾಪ್ತೇ ಗತೇ ಚ ಮಧುಸೂದನೇ|

15013002c ವಿದುರಸಂಜಯೇ ಚೈವ ಕೋಽನ್ಯೋ ಮಾಂ ವಕ್ತುಮರ್ಹತಿ||

ಭೀಷ್ಮನು ಸ್ವರ್ಗಕ್ಕೆ ಮತ್ತು ಮಧುಸೂದನನು ದ್ವಾರಕೆಗೆ ತೆರಳಿದ ನಂತರ ಹಾಗೂ ವಿದುರ-ಸಂಜಯರು ನಿನ್ನ ಬಳಿಯಲ್ಲಿಯೇ ಇರುವಾಗ ನೀನಲ್ಲದೆ ಬೇರೆ ಯಾರು ನನಗೆ ಉಪದೇಶಗಳ ಮಾತನಾಡುವವರಿದ್ದಾರೆ?

15013003a ಯತ್ತು ಮಾಮನುಶಾಸ್ತೀಹ ಭವಾನದ್ಯ ಹಿತೇ ಸ್ಥಿತಃ|

15013003c ಕರ್ತಾಸ್ಮ್ಯೇತನ್ಮಹೀಪಾಲ ನಿರ್ವೃತೋ ಭವ ಭಾರತ||

ಮಹೀಪಾಲ! ಭಾರತ! ನನಗೆ ಹಿತಕರನಾಗಿದ್ದುಕೊಂಡು ಇಂದು ನನಗೆ ನೀನು ಏನೆಲ್ಲ ಉಪದೇಶಿಸಿರುವೆಯೋ ಅವನ್ನು ನಾನು ಪರಿಪಾಲಿಸುತ್ತೇನೆ. ಸಮಾಧಾನಗೊಳ್ಳು!””

15013004 ವೈಶಂಪಾಯನ ಉವಾಚ|

15013004a ಏವಮುಕ್ತಃ ಸ ರಾಜರ್ಷಿರ್ಧರ್ಮರಾಜೇನ ಧೀಮತಾ|

15013004c ಕೌಂತೇಯಂ ಸಮನುಜ್ಞಾತುಮಿಯೇಷ ಭರತರ್ಷಭ||

ವೈಶಂಪಾಯನನು ಹೇಳಿದನು: “ಭರತರ್ಷಭ! ಧೀಮಂತ ರಾಜನು ರಾಜರ್ಷಿಗೆ ಹೀಗೆ ಹೇಳಲು ಕೌಂತೇಯನಿಗೆ ಹೊರಡಲು ಸೂಚಿಸಿ ಧೃತರಾಷ್ಟ್ರನು ಹೀಗೆಂದನು:

15013005a ಪುತ್ರ ವಿಶ್ರಮ್ಯತಾಂ ತಾವನ್ಮಮಾಪಿ ಬಲವಾನ್ಶ್ರಮಃ|

15013005c ಇತ್ಯುಕ್ತ್ವಾ ಪ್ರಾವಿಶದ್ರಾಜಾ ಗಾಂಧಾರ್ಯಾ ಭವನಂ ತದಾ||

“ಪುತ್ರ! ನೀನಿನ್ನು ಹೊರಡು! ನಾನೂ ಕೂಡ ಬಹಳ ಬಳಲಿದ್ದೇನೆ!” ಹೀಗೆ ಹೇಳಿ ರಾಜನು ಗಾಂಧಾರಿಯ ಭವನವನ್ನು ಪ್ರವೇಶಿಸಿದನು.

15013006a ತಮಾಸನಗತಂ ದೇವೀ ಗಾಂಧಾರೀ ಧರ್ಮಚಾರಿಣೀ|

15013006c ಉವಾಚ ಕಾಲೇ ಕಾಲಜ್ಞಾ ಪ್ರಜಾಪತಿಸಮಂ ಪತಿಮ್||

ಅವನು ಆಸನದಲ್ಲಿ ಕುಳಿತುಕೊಂಡ ನಂತರ ದೇವೀ ಧರ್ಮಚಾರಿಣೀ ಕಾಲಜ್ಞೆ ಗಾಂಧಾರಿಯು ಪ್ರಜಾಪತಿಯ ಸಮನಾಗಿದ್ದ ತನ್ನ ಪತಿಗೆ ಹೇಳಿದಳು:

15013007a ಅನುಜ್ಞಾತಃ ಸ್ವಯಂ ತೇನ ವ್ಯಾಸೇನಾಪಿ ಮಹರ್ಷಿಣಾ|

15013007c ಯುಧಿಷ್ಠಿರಸ್ಯಾನುಮತೇ ಕದಾರಣ್ಯಂ ಗಮಿಷ್ಯಸಿ||

“ಸ್ವಯಂ ಮಹರ್ಷಿ ವ್ಯಾಸನಿಂದಲೂ ನಿನಗೆ ಅನುಜ್ಞೆಯಾಗಿದೆ. ಯುಧಿಷ್ಠಿರನೂ ಅನುಮತಿಯನ್ನಿತ್ತಿದ್ದಾನೆ. ಯಾವಾಗ ಅರಣ್ಯಕ್ಕೆ ಹೊರಡುವೆ?”

15013008 ಧೃತರಾಷ್ಟ್ರ ಉವಾಚ|

15013008a ಗಾಂಧಾರ್ಯಹಮನುಜ್ಞಾತಃ ಸ್ವಯಂ ಪಿತ್ರಾ ಮಹಾತ್ಮನಾ|

15013008c ಯುಧಿಷ್ಠಿರಸ್ಯಾನುಮತೇ ಗಂತಾಸ್ಮಿ ನಚಿರಾದ್ವನಮ್||

ಧೃತರಾಷ್ಟ್ರನು ಹೇಳಿದನು: “ಗಾಂಧಾರೀ! ಮಹಾತ್ಮ ಸ್ವಯಂ ಪಿತನಿಂದ ನಾನು ಅನುಜ್ಞಾತನಾಗಿದ್ದೇನೆ. ಯುಧಿಷ್ಠಿರನ ಅನುಮತಿಯೂ ದೊರಕಿದೆ. ಬೇಗನೇ ಅರಣಕ್ಕೆ ಹೊರಡುತ್ತೇನೆ.

15013009a ಅಹಂ ಹಿ ನಾಮ ಸರ್ವೇಷಾಂ ತೇಷಾಂ ದುರ್ದ್ಯೂತದೇವಿನಾಮ್|

15013009c ಪುತ್ರಾಣಾಂ ದಾತುಮಿಚ್ಚಾಮಿ ಪ್ರೇತ್ಯಭಾವಾನುಗಂ ವಸು|

15013009e ಸರ್ವಪ್ರಕೃತಿಸಾಂನಿಧ್ಯಂ ಕಾರಯಿತ್ವಾ ಸ್ವವೇಶ್ಮನಿ||

ಎಲ್ಲ ಪ್ರಜೆಗಳನ್ನೂ ನನ್ನ ಹತ್ತಿರ ಮನೆಗೆ ಕರೆಯಿಸಿಕೊಂಡು ಜೂಜುಕೋರರಾಗಿದ್ದ ನನ್ನ ಮಕ್ಕಳೆಲ್ಲರ ಪರಲೋಕಪ್ರಾಪ್ತಿಗಾಗಿ ಧನವನ್ನು ದಾನಮಾಡಲು ಬಯಸುತ್ತೇನೆ.””

15013010 ವೈಶಂಪಾಯನ ಉವಾಚ|

15013010a ಇತ್ಯುಕ್ತ್ವಾ ಧರ್ಮರಾಜಾಯ ಪ್ರೇಷಯಾಮಾಸ ಪಾರ್ಥಿವಃ|

15013010c ಸ ಚ ತದ್ವಚನಾತ್ಸರ್ವಂ ಸಮಾನಿನ್ಯೇ ಮಹೀಪತಿಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಪಾರ್ಥಿವನು ಧರ್ಮರಾಜನಿಗೆ ಹೇಳಿ ಕಳುಹಿಸಿದನು. ಅವನ ವಚನದಂತೆ ಮಹೀಪತಿ ಯುಧಿಷ್ಠಿರನು ಎಲ್ಲರನ್ನೂ ಕರೆಯಿಸಿದನು.

15013011a ತತೋ ನಿಷ್ಕ್ರಮ್ಯ ನೃಪತಿಸ್ತಸ್ಮಾದಂತಃಪುರಾತ್ತದಾ|

15013011c ಸರ್ವಂ ಸುಹೃಜ್ಜನಂ ಚೈವ ಸರ್ವಾಶ್ಚ ಪ್ರಕೃತೀಸ್ತಥಾ|

15013011e ಸಮವೇತಾಂಶ್ಚ ತಾನ್ಸರ್ವಾನ್ಪೌರಜಾನಪದಾನಥ||

15013012a ಬ್ರಾಹ್ಮಣಾಂಶ್ಚ ಮಹೀಪಾಲಾನ್ನಾನಾದೇಶಸಮಾಗತಾನ್|

15013012c ತತಃ ಪ್ರಾಹ ಮಹಾತೇಜಾ ಧೃತರಾಷ್ಟ್ರೋ ಮಹೀಪತಿಃ||

ಅನಂತರ ಮಹಾತೇಜಸ್ವೀ ಮಹೀಪತಿ ನೃಪತಿ ಧೃತರಾಷ್ಟ್ರನು ಅಂತಃಪುರದಿಂದ ಹೊರಬಂದು ಅಲ್ಲಿ ಬಂದು ಸೇರಿದ್ದ ಎಲ್ಲ ಪೌರ-ಗ್ರಾಮೀಣ ಜನರನ್ನೂ, ಎಲ್ಲ ಸುಹೃಜ್ಜನರನ್ನೂ, ಎಲ್ಲ ಪ್ರಜೆಗಳನ್ನೂ, ನಾನಾ ದೇಶಗಳಿಂದ ಬಂದು ಸೇರಿದ್ದ ಬ್ರಾಹ್ಮಣ-ಮಹೀಪಾಲರನ್ನೂ ನೋಡಿ ಹೇಳಿದನು:

15013013a ಶೃಣ್ವಂತ್ಯೇಕಾಗ್ರಮನಸೋ ಬ್ರಾಹ್ಮಣಾಃ ಕುರುಜಾಂಗಲಾಃ|

15013013c ಕ್ಷತ್ರಿಯಾಶ್ಚೈವ ವೈಶ್ಯಾಶ್ಚ ಶೂದ್ರಾಶ್ಚೈವ ಸಮಾಗತಾಃ||

“ಇಲ್ಲಿ ಬಂದು ಸೇರಿರುವ ಕುರುಜಾಂಗಲದ ಬ್ರಾಹ್ಮಣರೇ, ಕ್ಷತ್ರಿಯರೇ, ವೈಶ್ಯರೇ ಮತ್ತು ಶೂದ್ರರೇ! ಏಕಾಗ್ರಚಿತ್ತದಿಂದ ಕೇಳಿರಿ!

15013014a ಭವಂತಃ ಕುರವಶ್ಚೈವ ಬಹುಕಾಲಂ ಸಹೋಷಿತಾಃ|

15013014c ಪರಸ್ಪರಸ್ಯ ಸುಹೃದಃ ಪರಸ್ಪರಹಿತೇ ರತಾಃ||

ನೀವು ಮತ್ತು ಕುರುಗಳು ಬಹುಕಾಲದಿಂದ ಜೊತೆಯಲ್ಲಿಯೇ ಇರುವಿರಿ. ಪರಸ್ಪರರ ಸುಹೃದಯರೂ ಪರಸ್ಪರರ ಹಿತಾಸಕ್ತಿಯುಳ್ಳವರೂ ಆಗಿರುವಿರಿ.

15013015a ಯದಿದಾನೀಮಹಂ ಬ್ರೂಯಾಮಸ್ಮಿನ್ಕಾಲ ಉಪಸ್ಥಿತೇ|

15013015c ತಥಾ ಭವದ್ಭಿಃ ಕರ್ತವ್ಯಮವಿಚಾರ್ಯ ವಚೋ ಮಮ||

ಈ ಸಮಯದಲ್ಲಿ ನಾನು ನಿಮಗೆ ಏನನ್ನೋ ಹೇಳಬೇಕೆಂದು ಕರೆಯಿಸಿದ್ದೇನೆ. ಆದುದರಿಂದ ವಿಚಾರಮಾಡದೇ ನಾನು ಹೇಳುವಂತೆ ಮಾಡಬೇಕು!

15013016a ಅರಣ್ಯಗಮನೇ ಬುದ್ಧಿರ್ಗಾಂಧಾರೀಸಹಿತಸ್ಯ ಮೇ|

15013016c ವ್ಯಾಸಸ್ಯಾನುಮತೇ ರಾಜ್ಞಸ್ತಥಾ ಕುಂತೀಸುತಸ್ಯ ಚ|

15013016e ಭವಂತೋಽಪ್ಯನುಜಾನಂತು ಮಾ ವೋಽನ್ಯಾ ಭೂದ್ವಿಚಾರಣಾ||

ಗಾಂಧಾರಿಯೊಡನೆ ಅರಣ್ಯಕ್ಕೆ ಹೋಗಬೇಕೆಂದು ನಾನು ನಿಶ್ಚಯಿಸಿದ್ದೇನೆ. ವ್ಯಾಸ ಮತ್ತು ರಾಜ ಕುಂತೀಸುತನ ಅನುಮತಿಯಾಗಿದೆ. ನೀವೂ ಕೂಡ ನನಗೆ ಅನುಮತಿಯನ್ನು ನೀಡಬೇಕು. ಈ ವಿಷಯದಲ್ಲಿ ನೀವು ಅನ್ಯಥಾ ವಿಚಾರಿಸಬಾರದು!

15013017a ಅಸ್ಮಾಕಂ ಭವತಾಂ ಚೈವ ಯೇಯಂ ಪ್ರೀತಿರ್ಹಿ ಶಾಶ್ವತೀ|

15013017c ನ ಚಾನ್ಯೇಷ್ವಸ್ತಿ ದೇಶೇಷು ರಾಜ್ಞಾಮಿತಿ ಮತಿರ್ಮಮ||

ನಮ್ಮ ಮತ್ತು ನಿಮ್ಮ ನಡುವೆ ಶಾಶ್ವತ ಪ್ರೀತಿಯಿದೆ. ಅನ್ಯ ದೇಶಗಳ ಜನರಿಗೂ ಅವರ ರಾಜರಿಗೂ ಹೀಗಿಲ್ಲವೆಂದು ನನ್ನ ಅಭಿಪ್ರಾಯ.

15013018a ಶ್ರಾಂತೋಽಸ್ಮಿ ವಯಸಾನೇನ ತಥಾ ಪುತ್ರವಿನಾಕೃತಃ|

15013018c ಉಪವಾಸಕೃಶಶ್ಚಾಸ್ಮಿ ಗಾಂಧಾರೀಸಹಿತೋಽನಘಾಃ||

ಪುತ್ರರಿಂದ ವಿಹೀನನಾಗಿ ಮಾಡಲ್ಪಟ್ಟ ನಾನು ವೃದ್ಧಾಪ್ಯದಿಂದ ಬಳಲಿದ್ದೇನೆ. ಅನಘರೇ! ಗಾಂಧಾರಿಯ ಸಹಿತ ಉಪವಾಸಗಳನ್ನು ಮಾಡಿ ಕೃಶನೂ ಆಗಿದ್ದೇನೆ.

15013019a ಯುಧಿಷ್ಠಿರಗತೇ ರಾಜ್ಯೇ ಪ್ರಾಪ್ತಶ್ಚಾಸ್ಮಿ ಸುಖಂ ಮಹತ್|

15013019c ಮನ್ಯೇ ದುರ್ಯೋಧನೈಶ್ವರ್ಯಾದ್ವಿಶಿಷ್ಟಮಿತಿ ಸತ್ತಮಾಃ||

ರಾಜ್ಯವು ಯುಧಿಷ್ಠಿರನಿಗೆ ಸೇರಿದಾಗಲೂ ನಾನು ಮಹಾ ಸುಖವನ್ನು ಅನುಭವಿಸಿದ್ದೇನೆ. ಸತ್ತಮರೇ! ದುರ್ಯೋಧನನು ಐಶ್ವರ್ಯಸಂಪನ್ನನಾಗಿದ್ದಾಗ ನಾನು ಸುಖವಾಗಿದ್ದುದಕ್ಕಿಂತಲೂ ಈಗ ಹೆಚ್ಚು ಸುಖಿಯಾಗಿದ್ದೇನೆಂದು ನನಗನ್ನಿಸುತ್ತದೆ.

15013020a ಮಮ ತ್ವಂಧಸ್ಯ ವೃದ್ಧಸ್ಯ ಹತಪುತ್ರಸ್ಯ ಕಾ ಗತಿಃ|

15013020c ಋತೇ ವನಂ ಮಹಾಭಾಗಾಸ್ತನ್ಮಾನುಜ್ಞಾತುಮರ್ಹಥ||

ಅಂಧನೂ, ವೃದ್ಧನೂ, ಪುತ್ರರನ್ನು ಕಳೆದುಕೊಂಡವನೂ ಆದ ನನ್ನಂಥವನಿಗೆ ವನದ ಹೊರತಾಗಿ ಬೇರೆ ಏನು ಗತಿ? ಮಹಾಭಾಗರೇ! ನನಗೆ ಅನುಮತಿಯನ್ನು ನೀಡಬೇಕು!”

15013021a ತಸ್ಯ ತದ್ವಚನಂ ಶ್ರುತ್ವಾ ಸರ್ವೇ ತೇ ಕುರುಜಾಂಗಲಾಃ|

15013021c ಬಾಷ್ಪಸಂದಿಗ್ಧಯಾ ವಾಚಾ ರುರುದುರ್ಭರತರ್ಷಭ||

ಭರತರ್ಷಭ! ಅವನ ಆ ಮಾತನ್ನು ಕೇಳಿ ಕುರುಜಾಂಗಲದ ಅವರೆಲ್ಲರೂ ಕಣ್ಣೀರುಸುರಿಸುತ್ತಾ ಗಳಗಳನೆ ಅಳತೊಡಗಿದರು.

15013022a ತಾನವಿಬ್ರುವತಃ ಕಿಂ ಚಿದ್ದುಃಖಶೋಕಪರಾಯಣಾನ್|

15013022c ಪುನರೇವ ಮಹಾತೇಜಾ ಧೃತರಾಷ್ಟ್ರೋಽಬ್ರವೀದಿದಮ್||

ಏನೊಂದನ್ನೂ ಹೇಳದೇ ಶೋಕಪರಾಯಣರಾಗಿ ದುಃಖಿಸುತ್ತಿದ್ದ ಅವರಿಗೆ ಮಹಾತೇಜಸ್ವಿ ಧೃತರಾಷ್ಟ್ರನು ಪುನಃ ಇಂತೆಂದನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಕೃತವನಾಗಮನಪ್ರಾರ್ಥನೇ ತ್ರಯೋದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಕೃತವನಾಗಮನಪ್ರಾರ್ಥನ ಎನ್ನುವ ಹದಿಮೂರನೇ ಅಧ್ಯಾಯವು.

Related image

Comments are closed.