Ashramavasika Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ಧೃತರಾಷ್ಟ್ರ ಶುಶ್ರೂಷಾ

ಪುತ್ರವಿಹೀನ ಧೃತರಾಷ್ಟ್ರನನ್ನು ನೋಯಿಸಬಾರದೆಂಬ ಯುಧಿಷ್ಠಿರನ ಶಾಸನದಂತೆ ಭೀಮಸೇನನನ್ನು ಬಿಟ್ಟು ಬೇರೆ ಎಲ್ಲ ಪಾಂಡವರೂ, ಕುಂತಿ ಮತ್ತು ಇತರ ಕುರು ಸ್ತ್ರೀಯರೂ ಧೃತರಾಷ್ಟ್ರ-ಗಾಂಧಾರಿಯರ ಸೇವೆಗೈದುದು; ಯುದ್ಧ ಮುಗಿದು ೧೫ ವರ್ಷಗಳು ಕಳೆದುದು (೧-೨೫).

15001001 ಜನಮೇಜಯ ಉವಾಚ|

15001001a ಪ್ರಾಪ್ಯ ರಾಜ್ಯಂ ಮಹಾಭಾಗಾಃ ಪಾಂಡವಾ ಮೇ ಪಿತಾಮಹಾಃ|

15001001c ಕಥಮಾಸನ್ಮಹಾರಾಜೇ ಧೃತರಾಷ್ಟ್ರೇ ಮಹಾತ್ಮನಿ||

ಜನಮೇಜಯನು ಹೇಳಿದನು: “ನನ್ನ ಪಿತಾಮಹ ಮಹಾಭಾಗ್ಯಶಾಲೀ ಪಾಂಡವರು ರಾಜ್ಯವನ್ನು ಪಡೆದುಕೊಂಡ ನಂತರ ಮಹಾತ್ಮ ಮಹಾರಾಜ ಧೃತರಾಷ್ಟ್ರನೊಡನೆ ಹೇಗಿದ್ದರು?

15001002a ಸ ಹಿ ರಾಜಾ ಹತಾಮಾತ್ಯೋ ಹತಪುತ್ರೋ ನಿರಾಶ್ರಯಃ|

15001002c ಕಥಮಾಸೀದ್ಧತೈಶ್ವರ್ಯೋ ಗಾಂಧಾರೀ ಚ ಯಶಸ್ವಿನೀ||

ಆ ರಾಜನಾದರೋ ಅಮಾತ್ಯರನ್ನು ಮತ್ತು ಪುತ್ರರನ್ನು ಕಳೆದುಕೊಂಡು ನಿರಾಶ್ರಯನಾಗಿದ್ದನು. ಯಶಸ್ವಿನೀ ಗಾಂಧಾರಿಯು ಐಶ್ವರ್ಯವನ್ನು ಕಳೆದುಕೊಂಡು ಹೇಗಿದ್ದಳು?

15001003a ಕಿಯಂತಂ ಚೈವ ಕಾಲಂ ತೇ ಪಿತರೋ ಮಮ ಪೂರ್ವಕಾಃ|

15001003c ಸ್ಥಿತಾ ರಾಜ್ಯೇ ಮಹಾತ್ಮಾನಸ್ತನ್ಮೇ ವ್ಯಾಖ್ಯಾತುಮರ್ಹಸಿ||

ನನ್ನ ಪೂರ್ವಪಿತಾಮಹರು ಎಷ್ಟುಕಾಲ ರಾಜ್ಯವನ್ನಾಳಿದರು? ಮಹಾತ್ಮನ್! ಇದನ್ನು ನನಗೆ ಹೇಳಬೇಕು!”

15001004 ವೈಶಂಪಾಯನ ಉವಾಚ|

15001004a ಪ್ರಾಪ್ಯ ರಾಜ್ಯಂ ಮಹಾತ್ಮಾನಃ ಪಾಂಡವಾ ಹತಶತ್ರವಃ|

15001004c ಧೃತರಾಷ್ಟ್ರಂ ಪುರಸ್ಕೃತ್ಯ ಪೃಥಿವೀಂ ಪರ್ಯಪಾಲಯನ್||

ವೈಶಂಪಾಯನನು ಹೇಳಿದನು: “ಶತ್ರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದುಕೊಂಡ ಮಹಾತ್ಮ ಪಾಂಡವರು ಧೃತರಾಷ್ಟ್ರನನ್ನೇ ಮುಂದೆಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು.

15001005a ಧೃತರಾಷ್ಟ್ರಮುಪಾತಿಷ್ಠದ್ವಿದುರಃ ಸಂಜಯಸ್ತಥಾ|

15001005c ಯುಯುತ್ಸುಶ್ಚಾಪಿ ಮೇಧಾವೀ ವೈಶ್ಯಾಪುತ್ರಃ ಸ ಕೌರವಃ||

ವಿದುರ, ಸಂಜಯ ಮತ್ತು ಆ ವೈಶ್ಯಾಪುತ್ರ ಕೌರವ ಮೇಧಾವೀ ಯುಯುತ್ಸುವೂ ಕೂಡ ಧೃತರಾಷ್ಟ್ರನ ಸೇವೆಗೈಯುತ್ತಿದ್ದರು.

15001006a ಪಾಂಡವಾಃ ಸರ್ವಕಾರ್ಯಾಣಿ ಸಂಪೃಚ್ಚಂತಿ ಸ್ಮ ತಂ ನೃಪಮ್|

15001006c ಚಕ್ರುಸ್ತೇನಾಭ್ಯನುಜ್ಞಾತಾ ವರ್ಷಾಣಿ ದಶ ಪಂಚ ಚ||

ಪಾಂಡವರು ಸರ್ವಕಾರ್ಯಗಳಲ್ಲಿಯೂ ಆ ನೃಪನ ಸಲಹೆಯನ್ನು ಕೇಳುತ್ತಿದ್ದರು ಮತ್ತು ಅವನ ಅನುಜ್ಞೆಯಂತೆಯೇ ಎಲ್ಲವನ್ನೂ ಮಾಡುತ್ತಿದ್ದರು. ಹೀಗೆ ಅವರು ಹದಿನೈದು ವರ್ಷಗಳನ್ನು ಕಳೆದರು.

15001007a ಸದಾ ಹಿ ಗತ್ವಾ ತೇ ವೀರಾಃ ಪರ್ಯುಪಾಸಂತ ತಂ ನೃಪಮ್|

15001007c ಪಾದಾಭಿವಂದನಂ ಕೃತ್ವಾ ಧರ್ಮರಾಜಮತೇ ಸ್ಥಿತಾಃ|

15001007e ತೇ ಮೂರ್ಧ್ನಿ ಸಮುಪಾಘ್ರಾತಾಃ ಸರ್ವಕಾರ್ಯಾಣಿ ಚಕ್ರಿರೇ||

ಧರ್ಮರಾಜನ ಅಭಿಪ್ರಾಯದಂತೆ ನಿತ್ಯವೂ ಆ ವೀರರು ಹೋಗಿ ನೃಪನಿಗೆ ಪಾದಾಭಿವಂದನೆಯನ್ನು ಮಾಡಿ ಅವನ ಸೇವೆಗೈಯುತ್ತಿದ್ದರು. ಧೃತರಾಷ್ಟ್ರನೂ ಕೂಡ ಅವರನ್ನು ಹಿಡಿದೆತ್ತಿ ನೆತ್ತಿಯನ್ನು ಆಘ್ರಾಣಿಸುತ್ತಿದ್ದನು. ಹೀಗೆ ಅವರು ಅವನ ಎಲ್ಲ ಕಾರ್ಯಗಳನ್ನೂ ಮಾಡುತ್ತಿದ್ದರು.

15001008a ಕುಂತಿಭೋಜಸುತಾ ಚೈವ ಗಾಂಧಾರೀಮನ್ವವರ್ತತ|

15001008c ದ್ರೌಪದೀ ಚ ಸುಭದ್ರಾ ಚ ಯಾಶ್ಚಾನ್ಯಾಃ ಪಾಂಡವಸ್ತ್ರಿಯಃ|

15001008e ಸಮಾಂ ವೃತ್ತಿಮವರ್ತಂತ ತಯೋಃ ಶ್ವಶ್ರ್ವೋರ್ಯಥಾವಿಧಿ||

ಕುಂತಿಭೋಜನ ಮಗಳೂ ಕೂಡ ಗಾಂಧಾರಿಯ ಸೇವೆಯಲ್ಲಿ ನಿರತಳಾಗಿದ್ದಳು. ದ್ರೌಪದೀ, ಸುಭದ್ರಾ ಮತ್ತು ಅನ್ಯ ಪಾಂಡವಸ್ತ್ರೀಯರೂ ಕೂಡ ತಮ್ಮ ಇಬ್ಬರೂ ಅತ್ತೆಯಂದಿರನ್ನೂ ಸಮಾನ ಭಾವದಿಂದ ಕಾಣುತ್ತಾ ಯಥಾವಿಧಿಯಾಗಿ ಅವರ ಸೇವೆ ಗೈಯುತ್ತಿದ್ದರು.

15001009a ಶಯನಾನಿ ಮಹಾರ್ಹಾಣಿ ವಾಸಾಂಸ್ಯಾಭರಣಾನಿ ಚ|

15001009c ರಾಜಾರ್ಹಾಣಿ ಚ ಸರ್ವಾಣಿ ಭಕ್ಷ್ಯಭೋಜ್ಯಾನ್ಯನೇಕಶಃ|

15001009e ಯುಧಿಷ್ಠಿರೋ ಮಹಾರಾಜ ಧೃತರಾಷ್ಟ್ರೇಽಭ್ಯುಪಾಹರತ್||

ಮಹಾರಾಜ ಯುಧಿಷ್ಠಿರನು ಧೃತರಾಷ್ಟ್ರನಿಗೆ ರಾಜಾರ್ಹವಾದ ಮಹಾಬೆಲೆಬಾಳುವ ಶಯನಗಳನ್ನೂ, ಸರ್ವ ವಸ್ತ್ರಾಭರಣಗಳನ್ನೂ, ಅನೇಕ ಭಕ್ಷ್ಯ-ಭೋಜ್ಯಗಳನ್ನೂ ನೀಡುತ್ತಿದ್ದನು.

15001010a ತಥೈವ ಕುಂತೀ ಗಾಂಧಾರ್ಯಾಂ ಗುರುವೃತ್ತಿಮವರ್ತತ|

15001010c ವಿದುರಃ ಸಂಜಯಶ್ಚೈವ ಯುಯುತ್ಸುಶ್ಚೈವ ಕೌರವಃ|

15001010e ಉಪಾಸತೇ ಸ್ಮ ತಂ ವೃದ್ಧಂ ಹತಪುತ್ರಂ ಜನಾಧಿಪಮ್||

ಹಾಗೆಯೇ ಕುಂತಿಯೂ ಗುರುಭಾವದಿಂದ ಗಾಂಧಾರಿಯ ಸೇವೆಗೈಯುತ್ತಿದ್ದಳು. ಪುತ್ರರನ್ನು ಕಳೆದುಕೊಂಡ ವೃದ್ಧ ಜನಾಧಿಪನನ್ನು ವಿದುರ, ಸಂಜಯ ಮತ್ತು ಕೌರವ ಯುಯುತ್ಸು ಸೇವೆಗೈಯುತ್ತಿದ್ದರು.

15001011a ಸ್ಯಾಲೋ ದ್ರೋಣಸ್ಯ ಯಶ್ಚೈಕೋ ದಯಿತೋ ಬ್ರಾಹ್ಮಣೋ ಮಹಾನ್|

15001011c ಸ ಚ ತಸ್ಮಿನ್ಮಹೇಷ್ವಾಸಃ ಕೃಪಃ ಸಮಭವತ್ತದಾ||

ದ್ರೋಣನ ಓರ್ವನೇ ಬಾವನಾದ, ಮಹಾನ್ ಬ್ರಾಹ್ಮಣನ ಪುತ್ರ ಮಹೇಷ್ವಾಸ ಕೃಪನೂ ಕೂಡ ಅವನೊಡನೆ ಸಮಭಾವದಿಂದಿರುತ್ತಿದ್ದನು.

15001012a ವ್ಯಾಸಶ್ಚ ಭಗವಾನ್ನಿತ್ಯಂ ವಾಸಂ ಚಕ್ರೇ ನೃಪೇಣ ಹ|

15001012c ಕಥಾಃ ಕುರ್ವನ್ಪುರಾಣರ್ಷಿರ್ದೇವರ್ಷಿನೃಪರಕ್ಷಸಾಮ್||

ಭಾಗವಾನ್ ವ್ಯಾಸನೂ ಕೂಡ ನಿತ್ಯವೂ ನೃಪನ ಬಳಿಯೇ ವಾಸವಾಗಿದ್ದುಕೊಂಡು ದೇವರ್ಷಿ-ನೃಪ-ರಾಕ್ಷಸರ ಪುರಾಣ ಕಥೆಗಳನ್ನು ಹೇಳುತ್ತಿದ್ದನು.

15001013a ಧರ್ಮಯುಕ್ತಾನಿ ಕಾರ್ಯಾಣಿ ವ್ಯವಹಾರಾನ್ವಿತಾನಿ ಚ|

15001013c ಧೃತರಾಷ್ಟ್ರಾಭ್ಯನುಜ್ಞಾತೋ ವಿದುರಸ್ತಾನ್ಯಕಾರಯತ್||

ವಿದುರನು ಧೃತರಾಷ್ಟ್ರನ ಆಜ್ಞೆಯನ್ನನುಸರಿಸಿ ಧರ್ಮಯುಕ್ತವಾದ ವ್ಯಾವಹಾರಿಕ ಕಾರ್ಯಗಳನ್ನು ಮಾಡಿಸುತ್ತಿದ್ದನು.

15001014a ಸಾಮಂತೇಭ್ಯಃ ಪ್ರಿಯಾಣ್ಯಸ್ಯ ಕಾರ್ಯಾಣಿ ಸುಗುರೂಣ್ಯಪಿ|

15001014c ಪ್ರಾಪ್ಯಂತೇಽರ್ಥೈಃ ಸುಲಘುಭಿಃ ಪ್ರಭಾವಾದ್ವಿದುರಸ್ಯ ವೈ||

ವಿದುರನ ಉತ್ತಮ ಗುಣ-ನೀತಿಗಳಿಂದಾಗಿ ಸಾಮಂತರೂ ಕೂಡ ಧೃತರಾಷ್ಟ್ರನಿಗೆ ಪ್ರಿಯವಾದ ಕಾರ್ಯಗಳನ್ನು ಸ್ವಲ್ಪವೇ ವೆಚ್ಚದಲ್ಲಿ ಮಾಡಿಮುಗಿಸುತ್ತಿದ್ದರು.

15001015a ಅಕರೋದ್ಬಂಧಮೋಕ್ಷಾಂಶ್ಚ ವಧ್ಯಾನಾಂ ಮೋಕ್ಷಣಂ ತಥಾ|

15001015c ನ ಚ ಧರ್ಮಾತ್ಮಜೋ ರಾಜಾ ಕದಾ ಚಿತ್ಕಿಂ ಚಿದಬ್ರವೀತ್||

ಧೃತರಾಷ್ಟ್ರನು ಬಂಧನದಲ್ಲಿದ್ದವರನ್ನು ಬಿಡುಗಡೆ ಮಾಡಿಸುತ್ತಿದ್ದನು ಮತ್ತು ಮರಣದಂಡನೆಗೆ ಗುರಿಯಾದವರಿಗೆ ಪ್ರಾಣದಾನಮಾಡುತ್ತಿದ್ದನು. ಆದರೂ ರಾಜಾ ಧರ್ಮಸುತನು ಯಾವಾಗಲೂ ಏನನ್ನೂ ಹೇಳುತ್ತಿರಲಿಲ್ಲ.

15001016a ವಿಹಾರಯಾತ್ರಾಸು ಪುನಃ ಕುರುರಾಜೋ ಯುಧಿಷ್ಠಿರಃ|

15001016c ಸರ್ವಾನ್ಕಾಮಾನ್ಮಹಾತೇಜಾಃ ಪ್ರದದಾವಂಬಿಕಾಸುತೇ||

ಮಹಾತೇಜಸ್ವೀ ಕುರುರಾಜ ಯುಧಿಷ್ಠಿರನು ಧೃತರಾಷ್ಟ್ರನ ವಿಹಾರಕ್ಕಾಗಿ ಅವನು ಅಪೇಕ್ಷಿಸಿದ ಸರ್ವ ಕಾಮನಾವಸ್ತುಗಳನ್ನೂ ಒದಗಿಸಿಕೊಡುತ್ತಿದ್ದನು.

15001017a ಆರಾಲಿಕಾಃ ಸೂಪಕಾರಾ ರಾಗಖಾಂಡವಿಕಾಸ್ತಥಾ|

15001017c ಉಪಾತಿಷ್ಠಂತ ರಾಜಾನಂ ಧೃತರಾಷ್ಟ್ರಂ ಯಥಾ ಪುರಾ||

ಹಿಂದಿನಂತೆ ಆರಾಲಿಕರು[1], ಸೂಪಕಾರರು[2] ಮತ್ತು ರಾಗಖಾಂಡವಿಕರು[3] ರಾಜ ಧೃತರಾಷ್ಟ್ರನ ಜೊತೆಯಲ್ಲಿಯೇ ಇರುತ್ತಿದ್ದರು.

15001018a ವಾಸಾಂಸಿ ಚ ಮಹಾರ್ಹಾಣಿ ಮಾಲ್ಯಾನಿ ವಿವಿಧಾನಿ ಚ|

15001018c ಉಪಾಜಹ್ರುರ್ಯಥಾನ್ಯಾಯಂ ಧೃತರಾಷ್ಟ್ರಸ್ಯ ಪಾಂಡವಾಃ||

ಪಾಂಡವರು ಯಥಾನ್ಯಾಯವಾಗಿ ಧೃತರಾಷ್ಟ್ರನಿಗೆ ಬಹುಮೂಲ್ಯವಾದ ವಸ್ತ್ರಗಳನ್ನೂ, ವಿವಿಧ ಮಾಲೆಗಳನ್ನೂ ತಂದುಕೊಡುತ್ತಿದ್ದರು.

15001019a ಮೈರೇಯಂ ಮಧು ಮಾಂಸಾನಿ ಪಾನಕಾನಿ ಲಘೂನಿ ಚ|

15001019c ಚಿತ್ರಾನ್ಭಕ್ಷ್ಯವಿಕಾರಾಂಶ್ಚ ಚಕ್ರುರಸ್ಯ ಯಥಾ ಪುರಾ||

ಹಿಂದಿನಂತೆಯೇ ಪಾಂಡವರು ಧೃತರಾಷ್ಟ್ರನಿಗೆ ಮೈರೇಯ[4]ಗಳನ್ನೂ, ಮಧು-ಮಾಂಸಗಳನ್ನೂ, ಲಘು ಪಾನಕಗಳನ್ನೂ, ವಿಚಿತ್ರ ಭಕ್ಷ್ಯಗಳನ್ನೂ ಒದಗಿಸುತ್ತಿದ್ದರು.

15001020a ಯೇ ಚಾಪಿ ಪೃಥಿವೀಪಾಲಾಃ ಸಮಾಜಗ್ಮುಃ ಸಮಂತತಃ|

15001020c ಉಪಾತಿಷ್ಠಂತ ತೇ ಸರ್ವೇ ಕೌರವೇಂದ್ರಂ ಯಥಾ ಪುರಾ||

ಹಿಂದಿನಂತೆಯೇ ಸುತ್ತಲಿನ ಪೃಥಿವೀಪಾಲರು ಎಲ್ಲರೂ ಬಂದು ಕೌರವೇಂದ್ರ ಧೃತರಾಷ್ಟ್ರನಿಗೆ ಗೌರವವನ್ನು ಸಲ್ಲಿಸುತ್ತಿದ್ದರು.

15001021a ಕುಂತೀ ಚ ದ್ರೌಪದೀ ಚೈವ ಸಾತ್ವತೀ ಚೈವ ಭಾಮಿನೀ|

15001021c ಉಲೂಪೀ ನಾಗಕನ್ಯಾ ಚ ದೇವೀ ಚಿತ್ರಾಂಗದಾ ತಥಾ||

15001022a ಧೃಷ್ಟಕೇತೋಶ್ಚ ಭಗಿನೀ ಜರಾಸಂಧಸ್ಯ ಚಾತ್ಮಜಾ|

15001022c ಕಿಂಕರಾಃ ಸ್ಮೋಪತಿಷ್ಠಂತಿ ಸರ್ವಾಃ ಸುಬಲಜಾಂ ತಥಾ||

ಕುಂತೀ, ದ್ರೌಪದೀ, ಭಾಮಿನೀ ಸಾತ್ವತೀ (ಸುಭದ್ರಾ), ನಾಗಕನ್ಯೆ ಉಲೂಪಿ, ದೇವೀ ಚಿತ್ರಾಂಗದಾ, ಧೃಷ್ಟಕೇತುವಿನ ತಂಗಿ[5], ಜರಾಸಂಧ ಪುತ್ರಿ[6] ಇವರು ಎಲ್ಲರೂ ಸುಬಲನ ಪುತ್ರಿ ಗಾಂಧಾರಿಗೆ ಸೇವಕಿಯರಂತೆಯೇ ಸೇವೆಸಲ್ಲಿಸುತ್ತಿದ್ದರು.

15001023a ಯಥಾ ಪುತ್ರವಿಯುಕ್ತೋಽಯಂ ನ ಕಿಂ ಚಿದ್ದುಃಖಮಾಪ್ನುಯಾತ್|

15001023c ಇತಿ ರಾಜಾನ್ವಶಾದ್ಭ್ರಾತೄನ್ನಿತ್ಯಮೇವ ಯುಧಿಷ್ಠಿರಃ||

“ಪುತ್ರರಿಂದ ವಿಹೀನನಾಗಿರುವ ಇವನಿಗೆ ಸ್ವಲ್ಪವೂ ದುಃಖವನ್ನು ತರಬಾರದು!” ಎಂದು ರಾಜಾ ಯುಧಿಷ್ಠಿರನು ನಿತ್ಯವೂ ತನ್ನ ಸಹೋದರರಿಗೆ ಆಜ್ಞೆಮಾಡುತ್ತಿದ್ದನು.

15001024a ಏವಂ ತೇ ಧರ್ಮರಾಜಸ್ಯ ಶ್ರುತ್ವಾ ವಚನಮರ್ಥವತ್|

15001024c ಸವಿಶೇಷಮವರ್ತಂತ ಭೀಮಮೇಕಂ ವಿನಾ ತದಾ||

ಅರ್ಥವತ್ತಾದ ಧರ್ಮರಾಜನ ಈ ಮಾತನ್ನು, ಭೀಮನೊಬ್ಬನನ್ನು ಬಿಟ್ಟು, ಎಲ್ಲರೂ ಪಾಲಿಸುತ್ತಿದ್ದರು.

15001025a ನ ಹಿ ತತ್ತಸ್ಯ ವೀರಸ್ಯ ಹೃದಯಾದಪಸರ್ಪತಿ|

15001025c ಧೃತರಾಷ್ಟ್ರಸ್ಯ ದುರ್ಬುದ್ಧೇರ್ಯದ್ವೃತ್ತಂ ದ್ಯೂತಕಾರಿತಮ್||

ಧೃತರಾಷ್ಟ್ರನ ದುರ್ಬುದ್ಧಿಯಿಂದ ನಡೆದ ದ್ಯೂತವು ಆ ವೀರ ಭೀಮಸೇನನ ಹೃದಯದಿಂದ ಅಳಿದುಹೋಗಿರಲೇ ಇಲ್ಲ.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಶುಶ್ರೂಷೇ ಪ್ರಥಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಶುಶ್ರೂಷ ಎನ್ನುವ ಮೊದಲನೇ ಅಧ್ಯಾಯವು.

[1] ಆರಾಲಿಕಾಃ – ಅಡಿಗೆಯವರು; ಆರಾ ಎಂಬ ಶಬ್ಧದಿಂದ ಕಾಯಿ-ಪಲ್ಯೆಗಳನ್ನು ಕತ್ತರಿಸುವವರು, ತರಕಾರಿಗಳನ್ನು ಹೆಚ್ಚುವವರು ಎಂದರ್ಥ

[2] ಸೂಪಕಾರರು ಎಂದರೆ ಸಾರು-ತೊವ್ವೆ ಮುಂತಾದುವನ್ನು ಮಾಡುವವರು

[3] ರಾಗಖಂಡವಿಕಾಃ – ರಾಗಖಂಡವೆಂಬ ಭಕ್ಷ್ಯ ಅಥವಾ ಭಕ್ಷ್ಯಗಳನ್ನು ತಯಾರಿಸುವವರು

[4] ಕಬ್ಬಿನರಸ, ಪುಷ್ಪರಸ ಇತ್ಯಾದಿಗಳಿಂದ ತಯಾರಿಸಿದ ಮದ್ಯ

[5] ಯುಧಿಷ್ಠಿರನ ಪತ್ನಿ

[6] ಸಹದೇವನ ಪತ್ನಿ

Comments are closed.