Anushasana Parva: Chapter 89

ಅನುಶಾಸನ ಪರ್ವ: ದಾನಧರ್ಮ ಪರ್ವ

೮೯

ವಿಭಿನ್ನ ನಕ್ಷತ್ರಗಳಲ್ಲಿ ಶ್ರಾದ್ಧಮಾಡುವುದರಿಂದ ಪ್ರಾಪ್ತವಾಗುವ ಫಲಗಳ ವರ್ಣನೆ: ಯಮ-ಶಶಬಿಂದು ಸಂವಾದ (೧-೧೫).

13089001 ಭೀಷ್ಮ ಉವಾಚ|

13089001a ಯಮಸ್ತು ಯಾನಿ ಶ್ರಾದ್ಧಾನಿ ಪ್ರೋವಾಚ ಶಶಬಿಂದವೇ|

13089001c ತಾನಿ ಮೇ ಶೃಣು ಕಾಮ್ಯಾನಿ ನಕ್ಷತ್ರೇಷು ಪೃಥಕ್ ಪೃಥಕ್||

ಭೀಷ್ಮನು ಹೇಳಿದನು: “ಯಮನಾದರರೋ ಶಶಬಿಂದುವಿಗೆ ಬೇರೆ ಬೇರೆ ನಕ್ಷತ್ರಗಳಲ್ಲಿ ಮಾಡಿದ ಶ್ರಾದ್ಧಗಳು ಯಾವ ಕಾಮನೆಗಳನ್ನು ಪೂರೈಸುತ್ತವೆ ಎನ್ನುವುದನ್ನು ಹೇಳಿದನು.

13089002a ಶ್ರಾದ್ಧಂ ಯಃ ಕೃತ್ತಿಕಾಯೋಗೇ ಕುರ್ವೀತ ಸತತಂ ನರಃ|

13089002c ಅಗ್ನೀನಾಧಾಯ ಸಾಪತ್ಯೋ ಯಜೇತ ವಿಗತಜ್ವರಃ||

ಕೃತ್ತಿಕಾ ಯೋಗ[1]ದಲ್ಲಿ ಅಗ್ನಿಯನ್ನು ಸ್ಥಾಪಿಸಿ ಪುತ್ರಸಹಿತ ಪಿತೃಗಳಿಗೆ ಶ್ರಾದ್ಧವನ್ನು ಯಜನ ಮಾಡುವ ನರನು ಚಿಂತೆ-ರೋಗಗಳಿಂದ ವಿಮುಕ್ತನಾಗುತ್ತಾನೆ[2].

13089003a ಅಪತ್ಯಕಾಮೋ ರೋಹಿಣ್ಯಾಮೋಜಸ್ಕಾಮೋ ಮೃಗೋತ್ತಮೇ|

13089003c ಕ್ರೂರಕರ್ಮಾ ದದಚ್ಚ್ರಾದ್ಧಮಾರ್ದ್ರಾಯಾಂ ಮಾನವೋ ಭವೇತ್||

ಸಂತಾನವನ್ನು ಅಪೇಕ್ಷಿಸುವವನು ರೋಹಿಣೀ ನಕ್ಷತ್ರದಲ್ಲಿಯೂ, ಓಜಸ್ಸನ್ನು ಬಯಸುವವನು ಉತ್ತಮ ಮೃಗಾ ನಕ್ಷತ್ರದಲ್ಲಿಯೂ ಶ್ರಾದ್ಧಮಾಡಬೇಕು. ಆರ್ದ್ರಾನಕ್ಷತ್ರದಲ್ಲಿ ಶ್ರಾದ್ಧಮಾಡುವ ಮಾನವನು ಕ್ರೂರಕರ್ಮಿಯಾಗುತ್ತಾನೆ.

13089004a ಕೃಷಿಭಾಗೀ ಭವೇನ್ಮರ್ತ್ಯಃ[3] ಕುರ್ವನ್ ಶ್ರಾದ್ಧಂ ಪುನರ್ವಸೌ|

13089004c ಪುಷ್ಟಿಕಾಮೋಽಥ ಪುಷ್ಯೇಣ ಶ್ರಾದ್ಧಮೀಹೇತ ಮಾನವಃ||

ಪುನರ್ವಸು ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಿ ಕೃಷೀಭಾಗಿಯಾಗುತ್ತಾನೆ. ಪುಷ್ಟಿಯನ್ನು ಬಯಸುವ ಮಾನವನು ಪುಷ್ಯಾ ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಬೇಕು.

13089005a ಆಶ್ಲೇಷಾಯಾಂ ದದಚ್ಚ್ರಾದ್ಧಂ ವೀರಾನ್ಪುತ್ರಾನ್ ಪ್ರಜಾಯತೇ|

13089005c ಜ್ಞಾತೀನಾಂ ತು ಭವೇಚ್ಚ್ರೇಷ್ಠೋ ಮಘಾಸು ಶ್ರಾದ್ಧಮಾವಪನ್||

ಆಶ್ಲೇಷಾ ನಕ್ಷತ್ರದಲ್ಲಿ ಶ್ರಾದ್ಧವನ್ನಿತ್ತವನು ವೀರಪುತ್ರರನ್ನು ಹುಟ್ಟಿಸುವನು. ಮಘಾ ನಕ್ಷತ್ರದಲ್ಲಿ ಶ್ರಾದ್ಧಮಾಡಿ ಜ್ಞಾತಿಬಾಂಧವರಲ್ಲಿ ಶ್ರೇಷ್ಠನಾಗುತ್ತಾನೆ.

13089006a ಫಲ್ಗುನೀಷು ದದಚ್ಚ್ರಾದ್ಧಂ ಸುಭಗಃ ಶ್ರಾದ್ಧದೋ ಭವೇತ್|

13089006c ಅಪತ್ಯಭಾಗುತ್ತರಾಸು ಹಸ್ತೇನ ಫಲಭಾಗ್ಭವೇತ್||

ಪೂರ್ವಫಾಲ್ಗುನೀ ನಕ್ಷತ್ರದಲ್ಲಿ ಮಾಡಿದ ಶ್ರಾದ್ಧದಿಂದ ಭಾಗ್ಯಶಾಲಿಯಾಗುತ್ತಾನೆ. ಉತ್ತರಫಾಲ್ಗುನೀ ನಕ್ಷತ್ರದಲ್ಲಿ ಶ್ರಾದ್ಧಮಾಡಿದವನು ಪುತ್ರವಂತನಾಗುತ್ತಾನೆ. ಹಸ್ತಾನಕ್ಷತ್ರದಲ್ಲಿ ಶ್ರಾದ್ಧಮಾಡಿದವನು ಅಭೀಷ್ಟ ಫಲಭಾಗಿಯಾಗುತ್ತಾನೆ.

13089007a ಚಿತ್ರಾಯಾಂ ತು ದದಚ್ಚ್ರಾದ್ಧಂ ಲಭೇದ್ರೂಪವತಃ ಸುತಾನ್|

13089007c ಸ್ವಾತಿಯೋಗೇ ಪಿತೄನರ್ಚ್ಯ ವಾಣಿಜ್ಯಮುಪಜೀವತಿ||

ಚಿತ್ರಾನಕ್ಷತ್ರದಲ್ಲಿ ಶ್ರಾದ್ಧವನ್ನಿತ್ತವನಿಗೆ ರೂಪವಂತ ಸುತರು ದೊರೆಯುತ್ತಾರೆ. ಸ್ವಾತೀನಕ್ಷತ್ರದಲ್ಲಿ ಪಿತೃಗಳನ್ನು ಅರ್ಚಿಸಿದವನು ವಾಣಿಜ್ಯವೃತ್ತಿಯಿಂದ ಜೀವಿಸುತ್ತಾನೆ.

13089008a ಬಹುಪುತ್ರೋ ವಿಶಾಖಾಸು ಪಿತ್ರ್ಯಮೀಹನ್ ಭವೇನ್ನರಃ|

13089008c ಅನುರಾಧಾಸು ಕುರ್ವಾಣೋ ರಾಜಚಕ್ರಂ ಪ್ರವರ್ತಯೇತ್||

ವಿಶಾಖಾ ನಕ್ಷತ್ರದಲ್ಲಿ ಪಿತೃಶ್ರಾದ್ಧವನ್ನು ಮಾಡಿದ ನರನು ಬಹುಪುತ್ರನಾಗುತ್ತಾನೆ. ಅನುರಾಧಾ ನಕ್ಷತ್ರದಲ್ಲಿ ಮಾಡುವವನು ರಾಜಚಕ್ರವನ್ನು ನಡೆಸುತ್ತಾನೆ[4].

13089009a ಆದಿಪತ್ಯಂ ವ್ರಜೇನ್ಮರ್ತ್ಯೋ ಜ್ಯೇಷ್ಠಾಯಾಮಪವರ್ಜಯನ್|

13089009c ನರಃ ಕುರುಕುಲಶ್ರೇಷ್ಠ ಶ್ರದ್ಧಾದಮಪುರಃಸರಃ[5]||

ಕುರುಕುಲಶ್ರೇಷ್ಠ! ಜ್ಯೇಷ್ಠಾನಕ್ಷತ್ರದಲ್ಲಿ ಶ್ರದ್ಧೆ-ಇಂದ್ರಿಯಸಂಯಮಗಳಿಂದ ಪಿಂಡಪ್ರದಾನಮಾಡುವ ಮನುಷ್ಯನು ಆದಿಪತ್ಯವನ್ನು ಪಡೆಯುತ್ತಾನೆ.

13089010a ಮೂಲೇ ತ್ವಾರೋಗ್ಯಮರ್ಚ್ಚೇತ ಯಶೋಽಷಾಢಾಸ್ವನುತ್ತಮಮ್|

13089010c ಉತ್ತರಾಸು ತ್ವಷಾಢಾಸು ವೀತಶೋಕಶ್ಚರೇನ್ಮಹೀಮ್||

ಮೂಲಾನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಆರೋಗ್ಯವಂತನಾಗುತ್ತಾನೆ. ಪೂರ್ವಾಷಾಢಾ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಉತ್ತಮ ಯಶಸ್ಸನ್ನು ಪಡೆಯುತ್ತಾನೆ. ಉತ್ತರಾಷಾಢಾ ನಕ್ಷರದಲ್ಲಿ ಶ್ರಾದ್ಧಮಾಡುವವನು ಶೋಕರಹಿತನಾಗಿ ಪೃಥ್ವಿಯಲ್ಲಿ ಸಂಚರಿಸುತ್ತಾನೆ.

13089011a ಶ್ರಾದ್ಧಂ ತ್ವಭಿಜಿತಾ ಕುರ್ವನ್ವಿದ್ಯಾಂ ಶ್ರೇಷ್ಠಾಮವಾಪ್ನುಯಾತ್[6]|

13089011c ಶ್ರವಣೇ ತು ದದಚ್ಚ್ರಾದ್ಧಂ ಪ್ರೇತ್ಯ ಗಚ್ಚೇತ್ಪರಾಂ ಗತಿಮ್[7]||

ಅಭಿಜಿತ್ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಶ್ರೇಷ್ಠವಿದ್ಯೆಯನ್ನು ಪಡೆಯುತ್ತಾನೆ. ಶ್ರವಣಾ ನಕ್ಷತ್ರದಲ್ಲಿ  ಶ್ರಾದ್ಧವನ್ನು ನೀಡಿದವನು ಮರಣಾನಂತರ ಪರಮ ಗತಿಯಲ್ಲಿ ಹೋಗುತ್ತಾನೆ.

13089012a ರಾಜ್ಯಭಾಗೀ ಧನಿಷ್ಠಾಯಾಂ ಪ್ರಾಪ್ನುಯಾನ್ನಾಪದಂ[8] ನರಃ|

13089012c ನಕ್ಷತ್ರೇ ವಾರುಣೇ ಕುರ್ವನ್ ಭಿಷಕ್ಸಿದ್ಧಿಮವಾಪ್ನುಯಾತ್||

ಧನಿಷ್ಠಾನಕ್ಷತ್ರದಲ್ಲಿ ಶ್ರಾದ್ಧಮಾಡಿದ ನರನು ರಾಜ್ಯಭಾಗಿಯಾಗುತ್ತಾನೆ. ವಾರುಣೀ[9] ನಕ್ಷತ್ರದಲ್ಲಿ ಶ್ರಾದ್ಧಮಾಡಿದವನು ವೈದ್ಯನಾಗಿ ಸಿದ್ಧಿಯನ್ನು ಪಡೆಯುತ್ತಾನೆ.

13089013a ಪೂರ್ವಪ್ರೋಷ್ಠಪದಾಃ ಕುರ್ವನ್ಬಹು ವಿಂದೇದಜಾವಿಕಮ್|

13089013c ಉತ್ತರಾಸ್ವಥ ಕುರ್ವಾಣೋ ವಿಂದತೇ ಗಾಃ ಸಹಸ್ರಶಃ||

ಪೂರ್ವಭಾದ್ರಪದ ನಕ್ಷತ್ರದಲ್ಲಿ ಮಾಡುವವನು ಬಹುಸಂಖ್ಯಾತ ಆಡು-ಕುರಿಗಳನ್ನು ಹೊಂದುತ್ತಾನೆ. ಉತ್ತರ ಭಾದ್ರಪದದಲ್ಲಿ ಮಾಡುವವನು ಸಹಸ್ರಾರು ಗೋವುಗಳನ್ನು ಹೊಂದುತ್ತಾನೆ.

13089014a ಬಹುರೂಪ್ಯಕೃತಂ[10] ವಿತ್ತಂ ವಿಂದತೇ ರೇವತೀಂ ಶ್ರಿತಃ|

13089014c ಅಶ್ವಾಂಶ್ಚಾಶ್ವಯುಜೇ ವೇತ್ತಿ ಭರಣೀಷ್ವಾಯುರುತ್ತಮಮ್||

ರೇವತೀ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಬೆಳ್ಳಿಯ ಸಂಪತ್ತನ್ನು ಪಡೆಯುತ್ತಾನೆ. ಅಶ್ವಿನೀ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಕುದುರೆಗಳನ್ನು ಹೊಂದುತ್ತಾನೆ. ಭರಣೀ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಉತ್ತಮ ಆಯುಷ್ಯವನ್ನು ಹೊಂದುತ್ತಾನೆ.

13089015a ಇಮಂ ಶ್ರಾದ್ಧವಿಧಿಂ ಶ್ರುತ್ವಾ ಶಶಬಿಂದುಸ್ತಥಾಕರೋತ್|

13089015c ಅಕ್ಲೇಶೇನಾಜಯಚ್ಚಾಪಿ ಮಹೀಂ ಸೋಽನುಶಶಾಸ ಹ||

ಈ ಶ್ರಾದ್ಧವಿಧಿಯನ್ನು ಕೇಳಿ ಶಶಬಿಂದುವು ಹಾಗೆಯೇ ಮಾಡಿ, ಸ್ವಲ್ಪವೂ ಕ್ಲೇಶವಿಲ್ಲದೇ ಪೃಥ್ವಿಯನ್ನು ಜಯಿಸಿ ಆಳಿದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರಾದ್ಧಕಲ್ಪೇ ಏಕೋನನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.

Violet Heather Flowers. Small Violet, Pink Flowers. White Background. Stock Photo, Picture And Royalty Free Image. Image 47100710.

[1] ಕೃತ್ತಿಕಾ ನಕ್ಷತ್ರವಿದ್ದ ದಿನದಲ್ಲಿ (ಭಾರತ ದರ್ಶನ).

[2] ಕೃತ್ತಿಕಾ ನಕ್ಷತ್ರವಿದ್ದ ದಿನದಲ್ಲಿ ಶ್ರಾದ್ಧಮಾಡುವವನು ಪುತ್ರವಂತನಾಗಿ, ರೋಗಗಳಿಂದಲೂ ಚಿಂತೆಗಳಿಂದಲೂ ವಿಮುಕ್ತನಾಗಿ ಅಗ್ನ್ಯಾಧಾನವನ್ನು ಮಾಡಿ ಯಾಗಗಳನ್ನು ಮಾಡುತ್ತಾನೆ (ಭಾರತ ದರ್ಶನ).

[3] ಧನಕಾಮೋ ಭವೇನ್ಮರ್ತ್ಯಃ (ಗೀತಾ ಪ್ರೆಸ್).

[4] ರಾಜ್ಯಮಂಡಲದ ಶಾಸಕನಾಗುತ್ತಾನೆ (ಭಾರತ ದರ್ಶನ).

[5] ಋದ್ಧೋ ದಮಪುರಃಸರಃ| (ಭಾರತ ದರ್ಶನ).

[6] ಭಿಷಕ್ಸಿದ್ಧಿಮಾಪ್ನುಯಾತ್ (ಭಾರತ ದರ್ಶನ).

[7] ಗಚ್ಛೇತ್ಸ ಸದ್ಗತಿಮ್| (ಭಾರತ ದರ್ಶನ).

[8] ನಿಯತಂ (ಭಾರತ ದರ್ಶನ).

[9] ಶತಭಿಷಾ ನಕ್ಷತ್ರ (ಭಾರತ ದರ್ಶನ).

[10] ಬಹುಕುಪ್ಯಕೃತಂ (ಭಾರತ ದರ್ಶನ).

Comments are closed.