ಹತ್ತನೆಯ ದಿನದ ಯುದ್ಧ: ಭೀಷ್ಮ ವಧೆ
ವಿಮಲ ಪ್ರಭಾತದಲ್ಲಿ ಸೂರ್ಯೋದಯವಾಗುತ್ತಲೇ ಭೇರಿ ಮೃದಂಗ ಮತ್ತು ಡೋಲುಗಳನ್ನು ಬಾರಿಸಲು, ಮೊಸರಿನಂತೆ ಬಿಳುಪಾಗಿದ್ದ ಶಂಖಗಳನ್ನು ಎಲ್ಲೆಡೆಯೂ ಊದುತ್ತಿರಲು ಶಿಖಂಡಿಯನ್ನು ಮುಂದಿರಿಸಿಕೊಂಡು ಪಾಂಡವರು ಯುದ್ಧಕ್ಕೆ ಹೊರಟರು. ಸರ್ವಶತ್ರುಗಳನ್ನೂ ವಿನಾಶಗೊಳಿಸಬಲ್ಲ ವ್ಯೂಹವನ್ನು ರಚಿಸಿ ಶಿಖಂಡಿಯು ಸರ್ವ ಸೇನೆಗಳ ಅಗ್ರಸ್ಥಾನದಲ್ಲಿದ್ದನು. ಅವನ ಚಕ್ರಗಳನ್ನು ಭೀಮಸೇನ-ಧನಂಜಯರು ರಕ್ಷಿಸುತ್ತಿದ್ದರು. ಹಿಂಬದಿಯಲ್ಲಿ ದ್ರೌಪದಿಯ ಮಕ್ಕಳೂ, ಸೌಭದ್ರನೂ ಇದ್ದರು. ಸಾತ್ಯಕಿ ಮತ್ತು ಚೇಕಿತಾನರು ಅವರನ್ನು ರಕ್ಷಿಸುತ್ತಿದ್ದರು. ಅವರ ಹಿಂದೆ ಪಾಂಚಾಲರಿಂದ ರಕ್ಷಿತನಾದ ಧೃಷ್ಟದ್ಯುಮ್ನನಿದ್ದನು. ಅನಂತರ ಯುಧಿಷ್ಠಿರನು ಯಮಳರ ಸಹಿತ ಸಿಂಹನಾದ ಗೈಯುತ್ತಾ ಹೊರಟನು. ಅವರ ಹಿಂದೆ ತನ್ನ ಸೈನ್ಯದಿಂದ ಸಂವೃತನಾಗಿ ವಿರಾಟನೂ ಅವನ ನಂತರ ದ್ರುಪದನೂ ಹೊರಟರು. ಐವರು ಕೇಕಯ ಸಹೋದರರೂ, ವೀರ್ಯವಾನ್ ಧೃಷ್ಟಕೇತುವೂ ಪಾಂಡುಸೇನೆಯ ಜಘನಪ್ರದೇಶವನ್ನು ಕಾಯುತ್ತಿದ್ದರು. ಈ ರೀತಿ ಮಹಾಸೈನ್ಯವನ್ನು ಮಹಾವ್ಯೂಹವನ್ನಾಗಿ ರಚಿಸಿ ಪಾಂಡವರು ಸಂಗ್ರಾಮದಲ್ಲಿ ತಮ್ಮ ಜೀವವನ್ನು ತೊರೆದು ಕೌರವ ಸೇನೆಯನ್ನು ಎದುರಿಸಿದರು.
ಹಾಗೆಯೇ ಕುರುಗಳು ಧೃತರಾಷ್ಟನ ದುರಾಧರ್ಷ ಸುಮಹಾಬಲ ಮಕ್ಕಳಿಂದ, ಅನಂತರ ಮಹೇಷ್ವಾಸ ದ್ರೋಣ ಮತ್ತು ಅವನ ಮಹಾರಥ ಮಗನಿಂದ ರಕ್ಷಿಸಲ್ಪಟ್ಟ ಮಹಾಬಲ ಭೀಷ್ಮನನ್ನು ಸರ್ವ ಸೈನ್ಯಗಳ ಅಗ್ರನನ್ನಾಗಿ ಮಾಡಿಕೊಂಡು ಪಾಂಡವರನ್ನು ಎದುರಿಸಿ ಹೋದರು. ಅವರ ನಂತರ ಗಜಸೇನೆಯಿಂದ ಸಂವೃತನಾದ ಭಗದತ್ತನಿದ್ದನು. ಭಗದತ್ತನನ್ನು ಅನುಸರಿಸಿ ಕೃಪ ಮತ್ತು ಕೃತವರ್ಮರಿಬ್ಬರಿದ್ದರು. ಅನಂತರ ಕಾಂಬೋಜರಾಜ ಬಲವಾನ್ ಸುದಕ್ಷಿಣ, ಮಾಗಧ, ಜಯತ್ಸೇನ, ಸೌಬಲ, ಬೃಹದ್ಬಲರಿದ್ದರು. ಅನಂತರ ಸುಶರ್ಮನೇ ಮೊದಲಾದ ಇತರ ಮಹೇಷ್ವಾಸ ನೃಪರು ಕೌರವ ಸೇನೆಯ ಹಿಂಬಾಗವನ್ನು ಪಾಲಿಸುತ್ತಿದ್ದರು. ದಿವಸಗಳು ಕಳೆದಂತೆಲ್ಲ ಭೀಷ್ಮ ಶಾಂತನವನು ಯುದ್ಧದಲ್ಲಿ ಅಸುರ, ಪೈಶಾಚ ಮತ್ತು ರಾಕ್ಷಸವ್ಯೂಹಗಳನ್ನು ರಚಿಸುತ್ತಿದ್ದನು. ಆಗ ಕೌರವರ ಮತ್ತು ಪಾಂಡವರ ನಡುವೆ ಅನ್ಯೋನ್ಯರನ್ನು ಸಂಹರಿಸುವ, ಯಮರಾಷ್ಟ್ರವನ್ನು ವರ್ಧಿಸುವ ಯುದ್ಧವು ಪ್ರಾರಂಭವಾಯಿತು.
ಅರ್ಜುನ ಪ್ರಮುಖ ಪಾರ್ಥರು ಶಿಖಂಡಿಯನ್ನು ಮುಂದಿರಿಸಿಕೊಂಡು ವಿವಿಧ ಶರಗಳನ್ನು ಬೀರುತ್ತಾ ಯುದ್ಧದಲ್ಲಿ ಭೀಷ್ಮನನ್ನು ಎದುರಿಸಿದರು. ಅಲ್ಲಿ ಭೀಮನ ಶರಗಳಿಂದ ಪೀಡಿತರಾದ ಕೌರವರು ರಕ್ತದಿಂದ ತೋಯ್ದು ಅಸುನೀಗಿ ಪರಲೋಕಕ್ಕೆ ನಡೆದರು. ನಕುಲ, ಸಹದೇವ ಮತ್ತು ಮಹಾರಥ ಸಾತ್ಯಕಿಯರು ಕೌರವ ಸೇನೆಯ ಮೇಲೆರಗಿ ಓಜಸ್ಸಿನಿಂದ ಬಹಳವಾಗಿ ಪೀಡಿಸಿದರು. ಅವರಿಂದ ವಧಿಸಲ್ಪಡುತ್ತಿದ್ದ ಕೌರವರು ಪಾಂಡವರ ಮಹಾಸೇನೆಯನ್ನು ತಡೆಯಲು ಅಶಕ್ಯರಾದರು. ಆಗ ಮಹಾರಥರಿಂದ ವಧಿಸಲ್ಪಡುತ್ತಿರುವ ಕೌರವ ಸೇನೆಯು ಎಲ್ಲ ದಿಕ್ಕುಗಳಲ್ಲಿ ಪಲಾಯನ ಮಾಡತೊಡಗಿತು. ಪಾಂಡವರಿಂದಲೂ ಸೃಂಜಯರಿಂದಲೂ ನಿಶಿತ ಬಾಣಗಳಿಂದ ವಧಿಸಲ್ಪಡುತ್ತಿರುವ ಕೌರವರು ರಕ್ಷಕರನ್ನೇ ಕಾಣದಾದರು. ಪ್ರಹೃಷ್ಟಮನಸ್ಕರಾದ ಶೂರ ಪಾಂಡವರು ದುರ್ಯೋಧನನ ಸೇನೆಯನ್ನು ಸಂಹರಿಸುತ್ತಾ ಮುಂದುವರೆದರು. ರಣದಲ್ಲಿ ಶತ್ರುಗಳಿಂದ ಸೈನ್ಯಾಘಾತವನ್ನೂ, ನರ-ವಾರಣ-ವಾಜಿಗಳ ವಿನಾಶವನ್ನೂ ಭೀಷ್ಮನು ಸಹಿಸಿಕೊಳ್ಳಲಿಲ್ಲ. ಆ ಮಹೇಷ್ವಾಸ ದುರ್ಧರ್ಷನು ತನ್ನ ಜೀವವನ್ನೂ ತೊರೆದು ಪಾಂಡವರನ್ನು, ಪಾಂಚಾಲರನ್ನು ಮತ್ತು ಸೃಂಜಯರನ್ನು ಎದುರಿಸಿದನು. ಅವನು ರಣದಲ್ಲಿ ಶಸ್ತ್ರಗಳನ್ನು ಪ್ರಯೋಗಿಸಿ ವತ್ಸದಂತ, ನಾರಾಚ, ನಿಶಿತ ಅಂಜಲಿಕಗಳು ಮತ್ತು ಸಾಯಕಗಳಿಂದ ಮಹಾರಥ ಪಾಂಡವರ ಐವರು ಪ್ರಮುಖರನ್ನು ತಡೆದನು. ಆ ಪುರುಷರ್ಷಭನು ಕ್ರುದ್ಧನಾಗಿ ಬಹಳಷ್ಟು ಅಮಿತ ಆನೆ-ಅಶ್ವಗಳನ್ನು ಸಂಹರಿಸಿದನು. ಅವನು ರಥಿಗಳನ್ನು ರಥಗಳಿಂದ, ಅಶ್ವಾರೋಹಿಗಳನ್ನು ಅಶ್ವಗಳ ಬೆನ್ನಮೇಲಿಂದ, ಗಜಾರೋಹಿಗಳನ್ನು ಆನೆಗಳ ಮೇಲಿಂದ ಉರುಳಿಸಿ ಶತ್ರುಗಳಲ್ಲಿ ಭಯವನ್ನುಂಟುಮಾಡಿದನು. ಸಮರದಲ್ಲಿ ತ್ವರೆಮಾಡುತ್ತಿದ್ದ ಆ ಮಹಾರಥ ಭೀಷ್ಮನೊಬ್ಬನನ್ನೇ ಪಾಂಡವರು ವಜ್ರಪಾಣಿಯನ್ನು ಅಸುರರು ಹೇಗೋ ಹಾಗೆ ಸುತ್ತುವರೆದು ಮುತ್ತಿಗೆ ಹಾಕಿದರು.
ತಾಗಲು ಇಂದ್ರನ ವಜ್ರದಂತಿರುವ ನಿಶಿತ ಶರಗಳನ್ನು ಎಲ್ಲ ಕಡೆಗಳಿಂದಲೂ ಪ್ರಯೋಗಿಸುತ್ತಿರುವ ಅವನು ಘೋರ ರೂಪವನ್ನು ತಾಳಿಕೊಂಡಿರುವಂತೆ ಕಂಡನು. ಸಂಗ್ರಾಮದಲ್ಲಿ ಯುದ್ಧ ಮಾಡುತ್ತಿದ್ದ ಅವನ ಮಹಾ ಧನುಸ್ಸು ಇಂದ್ರನ ಧನುಸ್ಸಿನಂತೆ ನಿತ್ಯವೂ ಮಂಡಲಾಕಾರದಲ್ಲಿದ್ದುದು ಕಂಡುಬಂದಿತು. ಸಮರದಲ್ಲಿ ಅವನ ಕರ್ಮವನ್ನು ನೋಡಿ ಧೃತರಾಷ್ಟ್ರನ ಪುತ್ರರು ಪರಮ ವಿಸ್ಮಿತರಾಗಿ ಪಿತಾಮಹನನ್ನು ಗೌರವಿಸಿದರು. ಪಾರ್ಥರು ವಿಮನಸ್ಕರಾಗಿ ರಣದಲ್ಲಿ ಯುದ್ಧ ಮಾಡುತ್ತಿದ್ದ ಶೂರ ವಿಪ್ರಚಿತ್ತಿಯನ್ನು ಅಮರರು ಹೇಗೋ ಹಾಗೆ ಭೀಷ್ಮನನ್ನು ನೋಡುತ್ತಿದ್ದರು. ಬಾಯ್ತೆರೆದ ಅಂತಕನಂತಿದ್ದ ಅವನನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಅಂದಿನ ಹತ್ತನೆಯ ದಿವಸದಂದು ಭೀಷ್ಮನು ತನ್ನ ನಿಶಿತ ಬಾಣಗಳಿಂದ ಬೆಂಕಿಯು ಕಾಡನ್ನು ಸುಡುವಂತೆ ಶಿಖಂಡಿಯ ರಥಸೇನೆಯನ್ನು ಸುಟ್ಟುಹಾಕಿದನು. ಶಿಖಂಡಿಯು ಕಾಲನು ಸೃಷ್ಟಿಸಿದ ಅಂತಕನಂತೆ ಕ್ರುದ್ಧನಾಗಿ ಅವನನ್ನು ಸ್ತನಾಂತರದಲ್ಲಿ ಮೂರು ಸರ್ಪವಿಷದಂತಿರುವ ಬಾಣಗಳಿಂದ ಹೊಡೆದನು. ಆಳವಾಗಿ ಚುಚ್ಚಿದ ಬಾಣಗಳು ಶಿಖಂಡಿಯವು ಎಂದು ನೋಡಿದ ಭೀಷ್ಮನು ಸಂಕ್ರುದ್ಧನಾದರೂ ತಿರುಗಿ ಹೊಡೆಯದೇ ನಗುತ್ತಾ ಹೇಳಿದನು: “ನನ್ನನ್ನು ನೀನು ಹೊಡೆಯಲು ಬಯಸುತ್ತೀಯೋ ಇಲ್ಲವೋ ನಾನು ಎಂದೂ ನಿನ್ನೊಡನೆ ಯುದ್ಧ ಮಾಡುವುದಿಲ್ಲ. ಏಕೆಂದರೆ ಧಾತ್ರನು ನಿನ್ನನ್ನು ಹೇಗೆ ಮಾಡಿದ್ದನೋ ಅದೇ ಶಿಖಂಡಿನಿಯು ನೀನು.”
ಅವನ ಆ ಮಾತನ್ನು ಕೇಳಿ ಕ್ರೋಧಮೂರ್ಛಿತನಾದ ಶಿಖಂಡಿಯು ಕಟವಾಯಿಯನ್ನು ನೆಕ್ಕುತ್ತಾ ಭೀಷ್ಮನಿಗೆ ಹೇಳಿದನು: “ಮಹಾಬಾಹೋ! ಕ್ಷತ್ರಿಯರ ಕ್ಷಯಂಕರನಾದ ನಿನ್ನನ್ನು ನಾನು ಬಲ್ಲೆ. ನೀನು ಜಾಮದಗ್ನಿಯೊಡನೆಯೂ ಯುದ್ಧಮಾಡಿದ್ದೆಯೆಂದು ಕೇಳಿದ್ದೇನೆ. ನಿನ್ನ ಪ್ರಭಾವವು ದಿವ್ಯವಾದುದೆಂದು ನಾನು ಬಹಳ ಕೇಳಿದ್ದೇನೆ. ನಿನ್ನ ಪ್ರಭಾವವನ್ನು ತಿಳಿದೂ ನಾನು ಇಂದು ನಿನ್ನೊಡನೆ ಯುದ್ಧಮಾಡಲು ಬಯಸುತ್ತೇನೆ. ಪಾಂಡವರಿಗೂ ಮತ್ತು ನನಗೂ ಪ್ರಿಯವಾದುದನ್ನು ಮಾಡಲು ನಾನು ಇಂದು ರಣದಲ್ಲಿ ನಿನ್ನೊಡನೆ ಹೋರಾಡುತ್ತೇನೆ. ನಾನು ಖಂಡಿತವಾಗಿಯೂ ನಿನ್ನನ್ನು ಕೊಲ್ಲುತ್ತೇನೆ. ನಿನ್ನ ಮುಂದೆಯೇ ಈ ಸತ್ಯವನ್ನು ಆಣೆಯಿಟ್ಟು ಹೇಳುತ್ತಿದ್ದೇನೆ. ನನ್ನ ಈ ಮಾತನ್ನು ಕೇಳಿ ಏನು ಒಳ್ಳೆಯದೆಂದು ಯೋಚಿಸುತ್ತೀಯೋ ಹಾಗೆ ಮಾಡು. ಭೀಷ್ಮ! ನೀನು ನನ್ನನ್ನು ಹೊಡೆಯಲು ಇಚ್ಛಿಸುತ್ತೀಯೋ ಅಥವಾ ಇಲ್ಲವೋ ನೀನು ಮಾತ್ರ ನನ್ನಿಂದ ಜೀವಂತ ಉಳಿಯಲಾರೆ! ಕೊನೆಯದಾಗಿ ಈ ಲೋಕವನ್ನು ನೋಡಿಕೋ!”
ಹೀಗೆ ಹೇಳಿ ಅವನು ರಣದಲ್ಲಿ ಭೀಷ್ಮನನ್ನು ವಾಕ್ಯಸಾಯಕಗಳಲ್ಲದೇ ಐದು ನತಪರ್ವಗಳಿಂದ ಹೊಡೆದನು. ಅವನ ಆ ಮಾತನ್ನು ಕೇಳಿ ಪರಂತಪ ಸವ್ಯಸಾಚಿಯು ಇದೇ ಸಮಯವೆಂದು ಯೋಚಿಸಿ ಶಿಖಂಡಿಯುನ್ನು ಪ್ರಚೋದಿಸಿದನು: “ನಾನು ನಿನ್ನ ಹಿಂದಿನಿಂದ ಶತ್ರುವನ್ನು ಶರಗಳಿಂದ ಹೊಡೆಯುತ್ತೇನೆ. ಸರಂಬ್ಧನಾಗಿ ಆ ಭೀಮಪರಾಕ್ರಮ ಭೀಷ್ಮನನ್ನು ಆಕ್ರಮಿಸು. ಈ ಮಹಾಬಲನು ನಿನ್ನನ್ನು ಪೀಡಿಸಲು ಅಶಕ್ತನು. ಆದುದರಿಂದ ಇಂದು ಭೀಷ್ಮನ ಮೇಲೆ ಆಕ್ರಮಣ ಮಾಡು. ಒಂದು ವೇಳೆ ನೀನು ಇಂದು ಭೀಷ್ಮನನ್ನು ಕೊಲ್ಲದೇ ಹಿಂದಿರುಗಿದರೆ ನನ್ನೊಡನೆ ನೀನೂ ಕೂಡ ಲೋಕದ ಅಪಹಾಸ್ಯಕ್ಕೆ ಈಡಾಗುತ್ತೀಯೆ. ಈ ಪರಮ ಆಹವದಲ್ಲಿ ನಾವು ಅಪಹಾಸ್ಯಕ್ಕೆ ಒಳಗಾಗದಂತೆ ಮಾಡು. ರಣದಲ್ಲಿ ಪಿತಾಮಹನನ್ನು ಕೊಲ್ಲುವ ಪ್ರಯತ್ನವನ್ನು ಮಾಡು. ಎಲ್ಲ ರಥಿಗಳನ್ನೂ ತಡೆಹಿಡಿದು ನಾನು ನಿನ್ನ ಯುದ್ಧದಲ್ಲಿ ರಕ್ಷಣೆಯನ್ನು ಮಾಡುತ್ತೇನೆ. ಪಿತಾಮಹನನ್ನು ಸಾಧಿಸು. ದ್ರೋಣ, ದ್ರೋಣಪುತ್ರ, ಕೃಪ, ಸುಯೋಧನ, ಚಿತ್ರಸೇನ, ವಿಕರ್ಣ, ಸೈಂಧವ ಜಯದ್ರಥ, ಅವಂತಿಯ ವಿಂದಾನುವಿಂದರು, ಕಾಂಬೋಜದ ಸುದಕ್ಷಿಣ, ಶೂರ ಭಗದತ್ತ, ಮಹಾರಥ ಮಾಗಧ, ರಣಶೂರ ಸೌಮದತ್ತಿ, ರಾಕ್ಷಸ ಆರ್ಶ್ಯಶೃಂಗಿ, ತ್ರಿಗರ್ತರಾಜ, ಮತ್ತು ರಣದಲ್ಲಿ ಸರ್ವ ಮಹಾರಥರನ್ನು ಸಮುದ್ರದ ಅಲೆಗಳನ್ನು ದಡವು ಹೇಗೋ ಹಾಗೆ ತಡೆದು ನಿಲ್ಲಿಸುತ್ತೇನೆ. ಇಲ್ಲಿ ನಿಂತಿರುವ ಸರ್ವ ಸೈನಿಕರೊಂದಿಗೆ ಕುರುಗಳನ್ನು ತಡೆಯುತ್ತೇನೆ. ರಣದಲ್ಲಿ ಪಿತಾಮಹನನ್ನು ಸಂಹರಿಸು!”
ಭೀಷ್ಮ-ದುರ್ಯೋಧನರ ಸಂವಾದ
ಪಿತಾಮಹನನ್ನು ಮುಂದಿರಿಸಿಕೊಂಡು ಕೌರವರ ಕಡೆಯ ಅನೇಕ ಶತ ಸಹಸ್ರ ಮಹಾರಥರು ಸುಸಜ್ಜಿತವಾದ ರಥ, ಆನೆ ಮತ್ತು ಕುದುರೆಗಳ ಗಣಗಳೊಂದಿಗೆ ಯುದ್ಧಕ್ಕೆ ಧಾವಿಸಿದರು. ತನ್ನ ಸೇನೆಯನ್ನು ಪಾಂಡವ ಜಯಂತನು ಪೀಡಿಸುತ್ತಿರುವುದನ್ನು ನೋಡಿ ದುರ್ಯೋಧನನು ತುಂಬಾ ಪೀಡಿತನಾಗಿ ಭೀಷ್ಮನಿಗೆ ಹೇಳಿದನು: “ಅಯ್ಯಾ! ಈ ಪಾಂಡುಸುತ ಕೃಷ್ಣಸಾರಥಿ ಶ್ವೇತಾಶ್ವನು ಅಗ್ನಿಯು ಕಾನನದಂತೆ ನನ್ನವರೆಲ್ಲರನ್ನೂ ಸುಡುತ್ತಿದ್ದಾನೆ. ಗಾಂಗೇಯ! ನೋಡು! ಪಾಂಡವನಿಂದ ವಧಿಸಲ್ಪಡುತ್ತಿರುವ ಸೇನೆಗಳು ಎಲ್ಲಕಡೆ ಓಡಿಹೋಗುತ್ತಿವೆ. ಕಾನನದಲ್ಲಿ ಪಾಲಕನು ಪಶುಗಣಗಳನ್ನು ಹೇಗೆ ಕೊಲ್ಲುತ್ತಾನೋ ಹಾಗೆ ನನ್ನ ಸೈನ್ಯವೂ ಕೊಲ್ಲಲ್ಪಡುತ್ತಿದೆ. ಧನಂಜಯನ ಶರಗಳಿಂದ ಭಗ್ನವಾಗಿ ಇಲ್ಲಿ ಅಲ್ಲಿ ಓಡಿಹೋಗುತ್ತಿರುವ ನನ್ನ ಸೇನೆಯನ್ನು ಈ ದುರಾಧರ್ಷ ಭೀಮನು ಓಡಿಸುತ್ತಿದ್ದಾನೆ. ಸಾತ್ಯಕಿ, ಚೇಕಿತಾನ, ಪಾಂಡವ ಮಾದ್ರೀಪುತ್ರರೀರ್ವರು ಮತ್ತು ವಿಕ್ರಾಂತ ಅಭಿಮನ್ಯುವು ನನ್ನ ಸೇನೆಯನ್ನು ಸುಡುತ್ತಿದ್ದಾರೆ. ಮಹಾಬಲರಿಬ್ಬರು ಧೃಷ್ಟದ್ಯುಮ್ನ ಮತ್ತು ರಾಕ್ಷಸ ಘಟೋತ್ಕಚರು ವೇಗದಿಂದ ನನ್ನ ಸೈನ್ಯವನ್ನು ಓಡಿಸುತ್ತಿದ್ದಾರೆ. ಈ ಮಹಾಬಲರಿಂದ ಸೈನ್ಯವೆಲ್ಲವೂ ವಧಿಸಲ್ಪಡುತ್ತಿರಲು ನಾನು ಯುದ್ಧದಲ್ಲಿ ದೇವತುಲಪರಾಕ್ರಮಿಯಾದ ನೀನಲ್ಲದೇ ಅನ್ಯ ಗತಿಯನ್ನೂ ಸ್ಥಾನವನ್ನೂ ಕಾಣುತ್ತಿಲ್ಲ. ನೀನೊಬ್ಬನೇ ಸಾಕು. ಬೇಗನೆ ಪೀಡಿತರಾಗುತ್ತಿರುವವರ ಗತಿಯಾಗು!”
ಹೀಗೆ ಹೇಳಲು ದೇವವ್ರತ ಶಂತನುಸುತನು ಒಂದು ಕ್ಷಣ ಆಲೋಚಿಸಿ, ತನ್ನಲ್ಲಿಯೇ ನಿಶ್ಚಯ ಮಾಡಿಕೊಂಡು, ಸಮಾಧಾನಗೊಳಿಸುತ್ತಾ ದುರ್ಯೋಧನನಿಗೆ ಹೀಗೆ ಹೇಳಿದನು: “ದುರ್ಯೋಧನ! ಇದನ್ನು ತಿಳಿದು ಸ್ಥಿರನಾಗು. ಹಿಂದೆ ನಾನು ನಿನಗೆ ಪ್ರತಿಜ್ಞೆಮಾಡಿದ್ದೆ. ಪ್ರತಿದಿನವೂ ಹತ್ತು ಸಾವಿರ ಮಹಾತ್ಮ ಕ್ಷತ್ರಿಯರನ್ನು ಸಂಹರಿಸಿ ಸಂಗ್ರಾಮದಿಂದ ಹಿಂದಿರುಗುತ್ತೇನೆ ಎಂದು. ಹೇಳಿದಂತೆಯೇ ಆ ಕೆಲಸವನ್ನು ನಾನು ಮಾಡಿ ಮುಗಿಸಿದ್ದೇನೆ. ಇಂದು ಕೂಡ ಮಹಾಹವದಲ್ಲಿ ಮಹಾಕರ್ಮವನ್ನು ಮಾಡುತ್ತೇನೆ. ಇಂದು ನಾನು ನಿಹತನಾಗಿ ಮಲಗುತ್ತೇನೆ ಅಥವಾ ಪಾಂಡವರನ್ನು ಕೊಲ್ಲುತ್ತೇನೆ. ಊಟವನ್ನು ಉಂಡಿದುದರಿಂದ ನನಗೆ ನಿನ್ನ ಮೇಲಿರುವ ಮಹಾ ಋಣದಿಂದ ಇಂದು ಸೇನೆಯ ಮುಂದೆ ಸತ್ತು ನನ್ನನ್ನು ಬಿಡುಗಡೆಗೊಳಿಸಿಕೊಳ್ಳುತ್ತೇನೆ.”
ಹೀಗೆ ಹೇಳಿ ದುರಾಧರ್ಷ ಭರತಶ್ರೇಷ್ಠನು ಕ್ಷತ್ರಿಯರನ್ನು ಶರಗಳಿಂದ ಸುಡುತ್ತಾ ಪಾಂಡವರ ಸೇನೆಯನ್ನು ತಲುಪಿದನು. ಸೇನೆಯ ಮಧ್ಯೆ ನಾಗದ ವಿಷದಂತೆ ಕ್ರುದ್ಧನಾಗಿ ನಿಂತಿದ್ದ ಗಾಂಗೇಯನನ್ನು ಪಾಂಡವರು ಸುತ್ತುವರೆದರು. ಆ ಹತ್ತನೆಯ ದಿನ ಅವನು ನೂರು ಸಾವಿರರನ್ನು ಕೊಂದು ತನ್ನ ಶಕ್ತಿಯನ್ನು ಪ್ರದರ್ಶಿಸಿದನು. ಪಾಂಚಲರ ಕಡೆಯಲ್ಲಿದ್ದ ಶ್ರೇಷ್ಠ ರಾಜಪುತ್ರ ಮಹಾಬಲರನ್ನು ಅವನು ಸೂರ್ಯನು ನೀರಿನಿಂದ ತೇವಾಂಶವನ್ನು ಹೀರಿಕೊಳ್ಳುವಂತೆ ಹೀರಿಕೊಂಡನು. ತರಸ್ವಿಗಳಾಗಿದ್ದ ಹತ್ತು ಸಾವಿರ ಆನೆಗಳನ್ನು, ಪುನಃ ಹತ್ತು ಸಾವಿರ ಆರೋಹಿಗಳೊಂದಿಗೆ ಕುದುರೆಗಳನ್ನು, ಮತ್ತು ಎರಡು ಲಕ್ಷ ಪದಾತಿಗಳನ್ನು ಸಂಪೂರ್ಣವಾಗಿ ಸಂಹರಿಸಿ ಆ ನರೋತ್ತಮ ಭೀಷ್ಮನು ರಣದಲ್ಲಿ ಧೂಮವಿಲ್ಲದ ಪಾವಕನಂತೆ ಪ್ರಜ್ವಲಿಸಿದನು. ಉತ್ತರಾಯಣದ ಮಾರ್ಗದಲ್ಲಿರುವ ಭಾಸ್ಕರನಂತೆ ಸುಡುತ್ತಿರುವ ಅವನನ್ನು ಪಾಂಡವೇಯರಲ್ಲಿ ಯಾರೂ ಕೂಡ ನೋಡಲೂ ಬಯಸುತ್ತಿರಲಿಲ್ಲ. ಆ ಮಹೇಷ್ವಾಸನಿಂದ ಪೀಡಿತರಾದ ಮಹಾರಥ ಸೃಂಜಯರೂ ಪಾಂಡವರೂ ಭೀಷ್ಮನನ್ನು ವಧಿಸಲೆಂದು ಆಕ್ರಮಣ ಮಾಡಿದರು. ಬಹುಸೇನೆಗಳಿಂದ ಆಕ್ರಮಣಿಸಲ್ಪಟ್ಟ ಮಹಾಬಾಹು ಭೀಷ್ಮ ಶಾಂತನವನು ಮೇಘಗಳಿಂದ ಮುತ್ತಲ್ಪಟ್ಟ ಶೈಲದಂತೆ ತೋರಿದನು. ದುರ್ಯೋಧನನಾದರೋ ಗಾಂಗೇಯನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಆ ಮಹಾ ಸೇನೆಯೊಂದಿಗೆ ಯುದ್ಧದಲ್ಲಿ ತೊಡಗಿದನು.
ಅರ್ಜುನ-ದುಃಶಾಸನರ ಯುದ್ಧ
ಅರ್ಜುನನಾದರೋ ರಣದಲ್ಲಿ ಭೀಷ್ಮನ ವಿಕ್ರಮವನ್ನು ನೋಡಿ ಶಿಖಂಡಿಗೆ ಹೇಳಿದನು: “ಈಗಲೇ ಪಿತಾಮಹನನ್ನು ಕೊಲ್ಲು! ಭೀಷ್ಮನಿಗೆ ಸ್ವಲ್ಪವೂ ಇಂದು ಭಯಪಾಡಬೇಕಾದುದಿಲ್ಲ. ನಾನು ಉತ್ತಮ ರಥದಿಂದ ಇವನನ್ನು ತೀಕ್ಷ್ಣ ಶರಗಳಿಂದ ಬೀಳಿಸುತ್ತೇನೆ.” ಪಾರ್ಥನು ಹೀಗೆ ಹೇಳಲು ಪಾರ್ಥನ ಮಾತನ್ನು ಕೇಳಿ ಶಿಖಂಡಿಯು ಗಾಂಗೇಯನನ್ನು ಆಕ್ರಮಣಿಸಿದನು. ಪಾರ್ಥನ ಮಾತನ್ನು ಕೇಳಿ ಹರ್ಷಿತರಾದ ಧೃಷ್ಟದ್ಯುಮ್ನ ಮತ್ತು ಸೌಭದ್ರರು ಭೀಷ್ಮನ ಮೇಲೆ ಆಕ್ರಮಣ ಮಾಡಿದರು. ದುರ್ಯೋಧನನು ನೋಡುತ್ತಿದ್ದಂತೆಯೇ ವೃದ್ಧರಾದ ವಿರಾಟ-ದ್ರುಪದರೂ ಕುಂತಿಭೋಜನೂ ಗಾಂಗೇಯನನ್ನು ಎದುರಿಸಿದರು. ಪಾರ್ಥನು ಹೇಳಿದುದನ್ನು ಕೇಳಿ ನಕುಲ ಸಹದೇವರೂ ವೀರ್ಯವಾನ್ ಧರ್ಮರಾಜನೂ ಹಾಗೆಯೇ ಇತರ ಎಲ್ಲ ಸೇನೆಗಳೂ ಗಾಂಗೇಯನನ್ನು ಮುತ್ತಿಗೆ ಹಾಕಿದರು. ಆಗ ಕೌರವರ ಮತ್ತು ಒಟ್ಟಾಗಿ ಸೇರಿದ್ದ ಪಾಂಡವ ಮಹಾರಥರ ನಡುವೆ ಯಥಾಶಕ್ತಿಯಾದ ಯಥೋತ್ಸಾಹಿತ ಪ್ರತಿಯುದ್ಧವು ನಡೆಯಿತು.
ಹೋರಿಯನ್ನು ವ್ಯಾಘ್ರದ ಮರಿಯೊಂದು ಕಚ್ಚಲು ಹೋಗುವಂತೆ ರಣದಲ್ಲಿ ಭೀಷ್ಮನನ್ನು ತಲುಪಲು ಹೋಗುತ್ತಿದ್ದ ಚೇಕಿತಾನನನ್ನು ಚಿತ್ರಸೇನನು ಎದುರಿಸಿದನು. ಭೀಷ್ಮನ ಬಳಿ ಹೋಗುತ್ತಿದ್ದ ಧೃಷ್ಟದ್ಯುಮ್ನನನ್ನು ತ್ವರೆಮಾಡಿ ರಣದಲ್ಲಿ ಪ್ರಯತ್ನಪಟ್ಟು ಕೃತವರ್ಮನು ತಡೆದನು. ಗಾಂಗೇಯನ ವಧೆಯನ್ನು ಇಚ್ಛಿಸಿ ಸುಸಂಕ್ರುದ್ಧನಾಗಿ ತ್ವರೆಮಾಡುತ್ತಿದ್ದ ಭೀಮಸೇನನನ್ನು ಸೌಮದತ್ತಿಯು ತಡೆದನು. ಹಾಗೆಯೇ ಅನೇಕ ಸಾಯಕಗಳನ್ನು ಬೀರುತ್ತಿದ್ದ ನಕುಲನನ್ನು ಭೀಷ್ಮನ ಜೀವಿತವನ್ನು ಇಚ್ಛಿಸಿ ವಿಕರ್ಣನು ತಡೆದನು. ಯುದ್ಧದಲ್ಲಿ ಭೀಷ್ಮನ ರಥದ ಕಡೆ ಹೋಗಲು ಪ್ರಯತ್ನಿಸುತ್ತಿದ್ದ ಸಹದೇವನನ್ನು ಸಂಕ್ರುದ್ಧನಾದ ಶಾರದ್ವತ ಕೃಪನು ತಡೆದನು. ಭೀಷ್ಮನ ನಿಧನವನ್ನು ತರಲು ಹೋಗುತ್ತಿದ್ದ ಕ್ರೂರಕರ್ಮಿ ಭೈಮಸೇನಿ ಮಹಾಬಲ ರಾಕ್ಷಸನನ್ನು ಬಲೀ ದುರ್ಮುಖನು ಎದುರಿಸಿದನು. ಸಾತ್ಯಕಿಯನ್ನು ಆರ್ಶ್ಯಶೃಂಗಿಯು ತಡೆದನು. ಭೀಷ್ಮರಥದ ಕಡೆ ಹೋಗುತ್ತಿದ್ದ ಅಭಿಮನ್ಯುವನ್ನು ಕಾಂಬೋಜ ರಾಜ ಸುದಕ್ಷಿಣನು ತಡೆದನು. ಒಟ್ಟಿಗಿದ್ದ ವೃದ್ಧ ವಿರಾಟ-ದ್ರುಪದರನ್ನು ಕ್ರುದ್ಧನಾದ ಅಶ್ವತ್ಥಾಮನು ತಡೆಹಿಡಿದನು. ಹಾಗೆಯೇ ಭೀಷ್ಮನ ವಧಾಕಾಂಕ್ಷಿಯಾಗಿದ್ದ ಜ್ಯೇಷ್ಠ ಪಾಂಡುಸುತ ಧರ್ಮಪುತ್ರನನ್ನು ಭಾರದ್ವಾಜನು ಪ್ರಯತ್ನಪಟ್ಟು ತಡೆದನು. ಶಿಖಂಡಿಯನ್ನು ಮುಂದಿರಿಸಿಕೊಂಡು ರಭಸದಿಂದ ಯುದ್ಧದಲ್ಲಿ ದಶದಿಕ್ಕುಗಳನ್ನೂ ಸುಡುತ್ತಾ ಭೀಷ್ಮನೆಡೆಗೆ ಬರುತ್ತಿದ್ದ ಅರ್ಜುನನನ್ನು ಮಹೇಷ್ವಾಸ ದುಃಶಾಸನನು ತಡೆದನು. ಕೌರವರ ಅನ್ಯ ಯೋಧರೂ ಕೂಡ ಭೀಷ್ಮಾಭಿಮುಖವಾಗಿ ಬರುತ್ತಿದ್ದ ಮಹಾರಥ ಪಾಂಡವರನ್ನು ತಡೆದರು. ಧೃಷ್ಟದ್ಯುಮ್ನನಾದರೋ ಸೇನೆಗಳಿಗೆ ಪುನಃ ಪುನಃ ಕೂಗಿ ಹೇಳುತ್ತಿದ್ದನು: “ಸಂರಬ್ಧರಾಗಿ ಮಹಾಬಲ ಭೀಷ್ಮನೊಬ್ಬನನ್ನೇ ಆಕ್ರಮಣಿಸಿರಿ. ಈ ಕುರುನಂದನ ಅರ್ಜುನನು ರಣದಲ್ಲಿ ಭೀಷ್ಮನೊಡನೆ ಯುದ್ಧ ಮಾಡುತ್ತಾನೆ. ನೀವೂ ಕೂಡ ಭೀಷ್ಮನೊಡನೆ ಯುದ್ಧ ಮಾಡಿ. ಭಯಪಡಬೇಡಿ. ಅವನಿರುವಾಗ ಭೀಷ್ಮನು ನಿಮ್ಮನ್ನು ತಲುಪಲಾರನು. ಅರ್ಜುನನನ್ನು ಸಮರದಲ್ಲಿ ವಾಸವನೂ ಕೂಡ ಯುದ್ಧದಲ್ಲಿ ಎದುರಿಸಲು ಉತ್ಸಾಹಿಸುವುದಿಲ್ಲ. ಇನ್ನು ರಣದಲ್ಲಿ ಶಕ್ತಿಯನ್ನು ಕಳೆದುಕೊಂಡ ಅಲ್ಪಜೀವಿತನಾದ ಭೀಷ್ಮನೆಲ್ಲಿ?” ಹೀಗೆ ಸೇನಾಪತಿಯನ್ನು ಕೇಳಿ ಪಾಂಡವರ ಮಹಾರಥರು ಸಂಹೃಷ್ಟರಾಗಿ ಗಾಂಗೇಯನ ರಥದ ಕಡೆ ಧಾವಿಸಿದರು. ಪ್ರಲಯಕಾಲದ ಜಲಪ್ರವಾಹದಂತೆ ಮುನ್ನುಗ್ಗಿ ಬರುತ್ತಿದ್ದ ಅವರನ್ನು ಸಂಹೃಷ್ಟರಾದ ಕೌರವ ಪುರುಷರ್ಷಭರು ತಡೆದು ನಿಲ್ಲಿಸಿದರು.
ಭೀಷ್ಮನ ಜೀವಿತಾಕಾಂಕ್ಷಿಯಾದ ಮಹಾರಥ ದುಃಶಾಸನನು ಭಯವನ್ನು ತ್ಯಜಿಸಿ ಧನಂಜಯನನ್ನು ಎದುರಿಸಿದನು. ಹಾಗೆಯೇ ಗಾಂಗೇಯನ ರಥದ ಕಡೆ ಬರುತ್ತಿದ್ದ ಶೂರ ಪಾಂಡವರೂ ಕೂಡ ಧೃತರಾಷ್ಟ್ರನ ಮಹಾರಥ ಮಕ್ಕಳನ್ನು ಎದುರಿಸಿದರು. ಅಲ್ಲಿ ಒಂದು ಚಿತ್ರರೂಪದ ಅದ್ಭುತವು ನಡೆಯಿತು. ದುಃಶಾಸನನ ರಥವನ್ನು ತಲುಪಿದ ಪಾರ್ಥನು ಮುಂದುವರೆಯಲಿಲ್ಲ. ದಡವು ಹೇಗೆ ಮಹಾಸಾಗರದಲ್ಲಿ ಕ್ಷೋಭೆಗೊಂಡ ಅಲೆಗಳನ್ನು ತಡೆಹಿಡಿಯುತ್ತದೆಯೋ ಹಾಗೆ ದುಃಶಾಸನನು ಕ್ರುದ್ಧನಾಗಿ ಪಾಂಡವನನ್ನು ತಡೆದನು. ಇಬ್ಬರೂ ರಥಿಗಳಲ್ಲಿ ಶ್ರೇಷ್ಠರು. ಇಬ್ಬರೂ ದುರ್ಜಯರು. ಇಬ್ಬರೂ ಕಾಂತಿ-ದೀಪ್ತಗಳಲ್ಲಿ ಚಂದ್ರಾರ್ಕಸದೃಶರು. ಅವರಿಬ್ಬರೂ ಕುಪಿತರಾಗಿ ಅನ್ಯೋನ್ಯರ ವಧಾಕಾಂಕ್ಷಿಗಳಾಗಿ ಮಹಾಯುದ್ಧದಲ್ಲಿ ಹಿಂದೆ ಮಘ-ಶಕ್ರರಂತೆ ಎದುರಾದರು. ದುಃಶಾಸನನು ಪಾಂಡವನನ್ನು ಮೂರು ವಿಶಿಖಗಳಿಂದ ಮತ್ತು ವಾಸುದೇವನನ್ನು ಇಪ್ಪತರಿಂದ ಹೊಡೆದನು. ವಾರ್ಷ್ಣೆಯನು ಪೀಡಿತನಾದುದನ್ನು ನೋಡಿ ಸಿಟ್ಟಿಗೆದ್ದ ಅರ್ಜುನನು ದುಃಶಾಸನನನ್ನು ನೂರು ನಾರಾಚಗಳಿಂದ ಹೊಡೆದನು. ಅವು ಅವನ ಕವಚವನ್ನು ಸೀಳಿ ರಕ್ತವನ್ನು ಕುಡಿದವು. ಕ್ರುದ್ಧನಾಗಿ ದುಃಶಾಸನನು ಪಾರ್ಥನ ಹಣೆಗೆ ಐದು ಸನ್ನತಪರ್ವ ಶರಗಳಿಂದ ಹೊಡೆದನು. ಲಾಲಾಟಕ್ಕೆ ಚುಚ್ಚಿಕೊಂಡಿದ್ದ ಆ ಮೂರು ಬಾಣಗಳಿಂದ ಪಾಂಡವೋತ್ತಮನು ಮೂರು ಎತ್ತರ ಶೃಂಗಗಳಿಂದ ಕೂಡಿದ ಮೇರುವಿನಂತೆ ಶೋಭಿಸಿದನು. ಅ ಧನ್ವಿಯಿಂದ ಅತಿಯಾಗಿ ಹೊಡೆಯಲ್ಪಟ್ಟ ಮಹೇಷ್ವಾಸ ಪಾರ್ಥನು ರಣದಲ್ಲಿ ಕಿಂಶುಕ ಪುಷ್ಪದಂತೆ ವಿರಾಜಿಸಿದನು.
ಆಗ ಕ್ರುದ್ಧನಾದ ಪಾಂಡವನು ದುಃಶಾಸನನನ್ನು ಅಮವಾಸ್ಯೆಯಂದು ಸಂಕ್ರುದ್ಧ ಉಗ್ರ ರಾಹುವು ನಿಶಾಕರನನ್ನು ಹೇಗೋ ಹಾಗೆ ಪೀಡಿಸತೊಡಗಿದನು. ಬಲವತ್ತಾಗಿ ಪೀಡೆಗೊಳಗದ ದುಃಶಾಸನನು ಪಾರ್ಥನನ್ನು ಶಿಲಾಶಿತ ಕಂಕಪತ್ರಗಳಿಂದ ಹೊಡೆದನು. ಪರಾಕ್ರಮೀ ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ತ್ವರೆಮಾಡಿ ನಂತರ ಅವನನ್ನೂ ಒಂಭತ್ತು ಶರಗಳಿಂದ ಹೊಡೆದನು. ಭೀಷ್ಮನ ಮುಂದೆ ನಿಂತಿದ್ದ ಅವನು ಬೇರೊಂದು ಬಿಲ್ಲನ್ನು ಎತ್ತಿಕೊಂಡು ಅರ್ಜುನನನ್ನು ಇಪ್ಪತ್ತೈದು ಬಾಣಗಳಿಂದ ಬಾಹು-ಎದೆಗಳಿಗೆ ಹೊಡೆದನು. ಆಗ ಶತ್ರುಕರ್ಶನ ಪಾಂಡವನು ಅವನ ಮೇಲೆ ಕ್ರುದ್ಧನಾಗಿ ಅನೇಕ ಯಮದಂಡಗಳಂತಿರುವ ಘೋರ ವಿಶಿಖಗಳನ್ನು ಪ್ರಯೋಗಿಸಿದನು. ತಲುಪುವುದರೊಳಗೇ ಆ ಬಾಣಗಳನ್ನು ದುಃಶಾಸನನು ತುಂಡರಿಸಿದನು. ಪ್ರಯತ್ನಿಸುತ್ತಿರುವ ಪಾರ್ಥನ ಅದೊಂದು ಅದ್ಭುತವಾಯಿತು. ಪಾರ್ಥನೂ ಕೂಡ ದುಃಶಾಸನನನ್ನು ನಿಶಿತ ಬಾಣಗಳಿಂದ ಹೊಡೆದನು. ಆಗ ಕ್ರುದ್ಧನಾದ ಪಾರ್ಥನು ಬಿಲ್ಲಿಗೆ ಸ್ವರ್ಣಪುಂಖ ಶಿಲಾಶಿತ ಶರಗಳನ್ನು ಹೂಡಿ ಪ್ರಯೋಗಿಸಿದನು. ಸರೋವರವನ್ನು ಸೇರಿ ಹಂಸಗಳು ಹೇಗೋ ಹಾಗೆ ಅವು ಆ ಮಹಾತ್ಮನ ದೇಹದ ಒಳಹೊಕ್ಕವು. ಮಹಾತ್ಮ ಪಾಂಡವನಿಂದ ಪೀಡಿತನಾದ ದುಃಶಾಸನನು ಪಾರ್ಥನನ್ನು ರಣದಲ್ಲಿಯೇ ಬಿಟ್ಟು ಕೂಡಲೇ ಭೀಷ್ಮನ ರಥವನ್ನು ಆಶ್ರಯಿಸಿದನು. ಅಗಾಧವಾಗಿ ಗಾಯಗೊಂಡಿದ್ದ ಅವನಿಗೆ ಭೀಷ್ಮನು ನೆರಳಾದನು. ಪುನಃ ಎಚ್ಚೆತ್ತು ದುಃಶಾಸನನು ಅವನನ್ನು ತಡೆಯಲು ಪ್ರಯತ್ನಿಸಿದನು. ಹಿಂದೆ ವೃತ್ರನು ಪುರಂದರನನ್ನು ಹೇಗೋ ಹಾಗೆ ಅವನು ಮಹಾವೀರ್ಯದಿಂದ ನಿಶಿತ ಬಾಣಗಳಿಂದ ಪಾರ್ಥನನ್ನು ಹೊಡೆದನು. ಆದರೆ ಅರ್ಜುನನು ವಿವ್ಯಥನಾಗಲಿಲ್ಲ.
ದ್ವಂದ್ವ ಯುದ್ಧ
ಭೀಷ್ಮನೊಂದಿಗೆ ಯುದ್ಧಮಾಡಲು ಕವಚವನ್ನು ಧರಿಸಿ ಬರುತ್ತಿದ್ದ ಸಾತ್ಯಕಿಯನ್ನು ಮಹೇಷ್ವಾಸ ಆರ್ಶ್ಯಶೃಂಗಿ (ಅಲಂಬುಷನು) ಯು ತಡೆದನು. ಮಾಧವನಾದರೋ ಸುಸಂಕ್ರುದ್ಧನಾಗಿ ರಣದಲ್ಲಿ ನಕ್ಕವನಂತೆ ರಾಕ್ಷಸನನ್ನು ಒಂಭತ್ತು ಶರಗಳಿಂದ ಹೊಡೆದನು. ಹಾಗೆಯೇ ರಾಕ್ಷಸನೂ ಕೂಡ ಸಂಕ್ರುದ್ಧನಾಗಿ ಶಿನಿಪುಂಗವ ಮಾಧವನನ್ನು ನಿಶಿತ ಶರಗಳಿಂದ ಹೊಡೆದನು. ಪರವೀರಹ ಮಾಧವ ಶೈನೇಯನು ಸುಸಂಕ್ರುದ್ಧನಾಗಿ ರಾಕ್ಷಸನ ಮೇಲೆ ಶರಸಂಘಗಳನ್ನು ಪ್ರಯೋಗಿಸಿದನು. ಆಗ ರಾಕ್ಷಸನು ಮಹಾಬಾಹು ಸತ್ಯವಿಕ್ರಮಿ ಸಾತ್ಯಕಿಯನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆದು ಸಿಂಹನಾದಗೈದನು. ರಾಕ್ಷಸನಿಂದ ತುಂಬಾ ಗಾಯಗೊಂಡ ಮಾಧವನಾದರೋ ಧೈರ್ಯದಿಂದ ಅವನನ್ನು ಹೊಡೆದನು ಮತ್ತು ಜೋರಾಗಿ ಕೂಗಿದನು. ಆಗ ಭಗದತ್ತನು ಕ್ರುದ್ಧನಾಗಿ ಮಹಾಗಜವನ್ನು ಅಂಕುಶದಿಂದ ಚುಚ್ಚುವಂತೆ ಮಾಧವನನ್ನು ನಿಶಿತ ಶರಗಳಿಂದ ಪೀಡಿಸಿದನು. ಆಗ ರಥಿಗಳಲ್ಲಿ ಶ್ರೇಷ್ಠ ಶೈನೇಯನು ಯುದ್ಧದಲ್ಲಿ ರಾಕ್ಷಸನನ್ನು ಬಿಟ್ಟು ಪ್ರಾಗ್ಜ್ಯೋತಿಷನ ಮೇಲೆ ಸನ್ನತಪರ್ವ ಶರಗಳನ್ನು ಎಸೆದನು. ರಾಜಾ ಪ್ರಾಗ್ಜ್ಯೋತಿಷನು ಮಾಧವನ ಮಹಾಧನುವನ್ನು ಕೈಚಳಕದಿಂದ ಶಿತಧಾರ ಭಲ್ಲದಿಂದ ಕತ್ತರಿಸಿದನು. ಆಗ ವೇಗದಿಂದ ಪರವೀರಹನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ರಣದಲ್ಲಿ ಕ್ರುದ್ಧನಾಗಿ ಭಗದತ್ತನನ್ನು ನಿಶಿತ ಶರಗಳಿಂದ ಹೊಡೆದನು. ಸಾತ್ಯಕಿಯ ಆ ಪ್ರಹಾರದಿಂದ ಅತಿಯಾಗಿ ಗಾಯಗೊಂಡ ಮಹೇಷ್ವಾಸನು ಕಟವಾಯಿಗಳನ್ನು ನೆಕ್ಕುತ್ತ ಕನಕವೈಡೂರ್ಯಭೂಷಿತವಾದ ಉಕ್ಕಿನ ದೃಢವಾದ ಯಮದಂಡದಂತಿದ್ದ ಘೋರ ಶಕ್ತಿಯನ್ನು ಸಾತ್ಯಕಿಯ ಮೇಲೆ ಎಸೆದನು. ಅವನ ಬಾಹುಬಲದಿಂದ ಎಸೆಯಲ್ಪಟ್ಟು ವೇಗದಿಂದ ಬರುತ್ತಿದ್ದ ಅದನ್ನು ಸಾತ್ಯಕಿಯು ಸಾಯಕಗಳಿಂದ ಮೂರುಭಾಗಗಳನ್ನಾಗಿ ತುಂಡರಿಸಿದನು. ಅದು ಪ್ರಭೆಯನ್ನು ಕಳೆದುಕೊಂಡು ಮಹಾ ಉಲ್ಕೆಯಂತೆ ಭೂಮಿಯ ಮೇಲೆ ಬಿದ್ದಿತು. ಶಕ್ತಿಯನ್ನು ನಾಶಪಡಿಸಿದದನ್ನು ನೋಡಿ ದುರ್ಯೋಧನನು ದೊಡ್ಡ ರಥಸೇನೆಯಿಂದ ಮಾಧವನನ್ನು ತಡೆದನು. ಮಹಾರಥ ವಾರ್ಷ್ಣೇಯನನ್ನು ಸುತ್ತುವರೆದು ದುರ್ಯೋಧನನು ತುಂಬಾ ಹರ್ಷಿತನಾಗಿ ತನ್ನ ತಮ್ಮಂದಿರಿಗೆಲ್ಲರಿಗೆ ಹೇಳಿದನು: “ಕೌರವ್ಯರೇ! ಸಾತ್ಯಕಿಯು ಯುದ್ಧದಲ್ಲಿ ಜೀವಂತವಾಗಿ ಹಿಂದಿರುಗದಂತೆ ಮಹಾ ಒಮ್ಮುಖವಾಗಿ ನೀವೆಲ್ಲ ಯುದ್ಧಮಾಡಿ. ಇವನು ಹತನಾದರೆ ಪಾಂಡವರ ಮಹಾಬಲವು ಹತವಾದಂತೆ ಎಂದು ನನಗನ್ನಿಸುತ್ತದೆ.”
ಹಾಗೆಯೇ ಆಗಲೆಂದು ಅವನ ಮಾತನ್ನು ಸ್ವೀಕರಿಸಿ ಮಹಾರಥರು ಭೀಷ್ಮನನ್ನು ಎದುರಿಸಲು ಹೋಗುತ್ತಿದ್ದ ಶೈನೇಯನೊಂದಿಗೆ ಯುದ್ಧಮಾಡಗಿದರು. ಭೀಷ್ಮನೆಡೆಗೆ ಬರುತ್ತಿದ್ದ ಅಭಿಮನ್ಯುವನ್ನು ಬಲವಾನ್ ಕಾಂಬೋಜರಾಜನು ತಡೆದನು. ಆರ್ಜುನಿಯು ಆ ನೃಪತಿಯನ್ನು ಸನ್ನತಪರ್ವ ಶರಗಳಿಂದ ಹೊಡೆದು ಪುನಃ ಅವನನ್ನು ಅರವತ್ನಾಲ್ಕು ಬಾಣಗಳಿಂದ ಹೊಡೆದನು. ಭೀಷ್ಮನ ಜೀವಿತವನ್ನು ಬಯಸಿದ ಸುದಕ್ಷಿಣನಾದರೋ ಕಾರ್ಷ್ಣಿಯನ್ನು ಐದರಿಂದ ಮತ್ತು ಸಾರಥಿಯನ್ನು ಒಂಭತ್ತರಿಂದ ಹೊಡೆದನು. ಶತ್ರುತಾಪನ ಶಿಖಂಡಿಯು ಗಾಂಗೇಯನನ್ನು ಎದುರಿಸಿದಾಗ ಇವರಿಬ್ಬರ ನಡುವೆ ಪರಾಕ್ರಮದ ಮಹಾ ಯದ್ಧವು ನಡೆಯಿತು. ಮಹಾರಥ ವೃದ್ಧ ವಿರಾಟ-ದ್ರುಪದರು ಸಂರಬ್ಧರಾಗಿ ಮಹಾಸೇನೆಯನ್ನು ತಡೆಯುತ್ತಾ ಭೀಷ್ಮನ ಕಡೆಗೆ ಮುನ್ನುಗ್ಗಿದರು. ಆಗ ರಥಸತ್ತಮ ಅಶ್ವತ್ಥಾಮನು ಕ್ರುದ್ಧನಾಗಿ ಅಲ್ಲಿಗೆ ಬರಲು ಅವನು ಮತ್ತು ಅವರ ನಡುವೆ ಯುದ್ಧವು ನಡೆಯಿತು. ವಿರಾಟನು ಆಹವಶೋಭಿ, ಮಹೇಷ್ವಾಸ, ಪ್ರಯತ್ನಿಸುತ್ತಿದ್ದ ದ್ರೌಣಿಯನ್ನು ಹತ್ತು ಭಲ್ಲೆಗಳಿಂದ ಹೊಡೆದನು. ದ್ರುಪದನೂ ಕೂಡ ಭೀಷ್ಮನ ಮುಂದೆ ನಿಂತಿದ್ದ ಗುರುಪುತ್ರನನ್ನು ಎದುರಿಸಿ ಅವನನ್ನು ಮೂರು ನಿಶಿತ ಬಾಣಗಳಿಂದ ಹೊಡೆದನು. ಅಶ್ವತ್ಥಾಮನು ಭೀಷ್ಮನ ಕಡೆ ಮುನ್ನುಗ್ಗುತ್ತಿರುವ ವೃದ್ಧ ವಿರಾಟ-ದ್ರುಪದರನ್ನು ಹತ್ತು ಶರಗಳಿಂದ ಹೊಡೆದನು. ಆಗ ಆ ಇಬ್ಬರು ವೃದ್ಧರು ಘೋರ ಸಾಯಕಗಳಿಂದ ದ್ರೌಣಿಯನ್ನು ತಿರುಗಿ ಹೊಡೆಯುವ ಮಹಾ ಅದ್ಭುತವು ಕಂಡಿತು.
ವನದಲ್ಲಿ ಮದಿಸಿದ ಆನೆಯ ಮೇಲೆ ಮತ್ತೊಂದು ಆನೆಯು ಎರಗುವಂತೆ ಮುನ್ನುಗ್ಗುತ್ತಿದ್ದ ಸಹದೇವನನ್ನು ಶಾರದ್ವತ ಕೃಪನು ಎದುರಿಸಿದನು. ಕೃಪನು ಮಹಾರಥ ಮಾದ್ರೀಪುತ್ರನನ್ನು ಬೇಗನೇ ಎಪ್ಪತ್ತು ರುಕ್ಮಭೂಷಣ ಬಾಣಗಳಿಂದ ಹೊಡೆದನು. ಅವನ ಚಾಪವನ್ನು ಮಾದ್ರೀಸುತನು ಸಾಯಕಗಳಿಂದ ಎರಡಾಗಿ ತುಂಡರಿಸಿದನು. ಕೂಡಲೇ ಧನುಸ್ಸನ್ನು ತುಂಡರಿಸಿ ಅವನನ್ನು ಒಂಭತ್ತು ಶರಗಳಿಂದ ಹೊಡೆದನು. ಅವನು ಭಾರಸಾಧನದ ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಸುಸಂಹೃಷ್ಟನಾಗಿ, ಭೀಷ್ಮನ ಜೀವಿತವನ್ನು ಇಚ್ಛಿಸಿ ಕ್ರುದ್ಧನಾಗಿ ಮಾದ್ರೀಪುತ್ರನನ್ನು ಹತ್ತು ನಿಶಿತ ಬಾಣಗಳಿಂದ ಅವನ ಎದೆಗೆ ಗುರಿಯಿಟ್ಟು ಹೊಡೆದನು. ಹಾಗೆಯೇ ಪಾಂಡವನೂ ಕೂಡ ಭೀಷ್ಮನ ವಧೆಯನ್ನು ಬಯಸಿ ಕ್ರುದ್ಧನಾಗಿ ಅಮರ್ಷಣ ಶಾರದ್ವತನ ಎದೆಗೆ ಹೊಡೆದನು. ಅವರಿಬ್ಬರ ಯುದ್ಧವು ಘೋರರೂಪಿಯೂ ಭಯಾವಹವೂ ಆಗಿದ್ದಿತು. ಆದರೆ ಭೀಷ್ಮನ ಜೀವವನ್ನು ರಕ್ಷಿಸುತ್ತಾ ಶತ್ರುತಾಪನ ವಿಕರ್ಣನು ಅರವತ್ತು ಸಾಯಕಗಳಿಂದ ರಣದಲ್ಲಿ ಕ್ರುದ್ಧನಾದ ನಕುಲನನ್ನು ಹೊಡೆದನು. ವಿಕರ್ಣನಿಂದ ತುಂಬಾ ಗಾಯಗೊಂಡ ನಕುಲನೂ ಕೂಡ ವಿಕರ್ಣನನ್ನು ಎಪ್ಪತ್ತೇಳು ಶಿಲೀ ಮುಖಗಳಿಂದ ಹೊಡೆದನು. ಗೋಹಟ್ಟಿಯಲ್ಲಿ ಗೋವಿಗಾಗಿ ಹೋರಿಗಳೆರಡು ಹೋರಾಡುವಂತೆ ಭೀಷ್ಮನ ಕಾರಣದಿಂದ ಆ ಇಬ್ಬರು ಪರಂತಪರೂ ನರಶಾರ್ದೂಲ ವೀರರೂ ಅನ್ಯೋನ್ಯರನ್ನು ಗಾಯಗೊಳಿಸಿದರು.
ಭೀಷ್ಮನನ್ನು ಉದ್ದೇಶಿಸಿ ಕೌರವ ಸೇನೆಯನ್ನು ನಾಶಪಡಿಸುತ್ತಾ ರಣದಲ್ಲಿ ಮುನ್ನುಗ್ಗಿ ಬರುತ್ತಿದ್ದ ಘಟೋತ್ಕಚನನ್ನು ದುರ್ಮುಖನು ಎದುರಿಸಿದನು. ಆಗ ಹೈಡಿಂಬಿಯಾದರೋ ಕ್ರುದ್ಧನಾಗಿ ಶತ್ರುತಾಪನ ದುರ್ಮುಖನನ್ನು ತೊಂಭತ್ತು ನಿಶಿತ ಶರಗಳಿಂದ ಎದೆಗೆ ಗುರಿಯಿಟ್ಟು ಹೊಡೆದನು. ಭೀಮಸೇನಸುತನನ್ನೂ ಕೂಡ ವೀರ ದುರ್ಮುಖನು ಅರವತ್ತು ಸುಮುಖ ಶರಗಳಿಂದ ಹೊಡೆದು ಹರ್ಷದಿಂದ ಕೂಗಿದನು.
ಭೀಷ್ಮನ ವಧೆಯನ್ನು ಬಯಸಿ ಮುಂದೆ ಬರುತ್ತಿದ್ದ ಧೃಷ್ಟದ್ಯುಮ್ನನನ್ನು ಭೀಷ್ಮನ ಜೀವವನ್ನು ರಕ್ಷಿಸುತ್ತಾ ಹಾರ್ದಿಕ್ಯನು ತಡೆದನು. ವಾರ್ಷ್ಣೇಯನು ಶೂರ ಪಾರ್ಷತನನ್ನು ಐದು ಆಯಸಗಳಿಂದ ಹೊಡೆದು ಒಡನೆಯೇ ಪುನಃ ಸ್ತನಾಂತರಕ್ಕೆ ಐವತ್ತು ಬಾಣಗಳಿಂದ ಹೊಡೆದನು. ಹಾಗೆಯೇ ಪಾರ್ಷತನು ಹಾರ್ದಿಕ್ಯನನ್ನು ಒಂಭತ್ತು ನಿಶಿತ ತೀಕ್ಷ್ಣ ಕಂಕಪತ್ರಗಳಿಂದ ಮುಚ್ಚಲ್ಪಟ್ಟ ಶರಗಳಿಂದ ಹೊಡೆದನು. ಆಗ ಭೀಷ್ಮನಿಗಾಗಿ ಮಹಾರಣದಲ್ಲಿ ವೃತ್ರ-ಮಹೇಂದ್ರರ ನಡುವೆ ನಡೆದಂತೆ ಅನ್ಯೋನ್ಯರಲ್ಲಿ ನಾನು ಹೆಚ್ಚು ತಾನು ಹೆಚ್ಚು ಎಂದು ಹೊಡೆದಾಡಿದ ಯುದ್ಧವು ನಡೆಯಿತು.
ಭೀಷ್ಮನ ಕಡೆಗೆ ಬರುತ್ತಿದ್ದ ಮಹಾಬಲ ಭೀಮಸೇನನಿಗೆ ತಕ್ಷಣವೇ ಭೂರಿಶ್ರವನು “ನಿಲ್ಲು! ನಿಲ್ಲು!” ಎಂದು ಹೇಳಿದನು. ಆಗ ಸೌಮದತ್ತಿಯು ಭೀಮಸೇನನನ್ನು ಸ್ತನಾಂತರದಲ್ಲಿ ಸುತೀಕ್ಷ್ಣ ರುಕ್ಮಪುಂಖ ನಾರಾಚಗಳಿಂದ ಹೊಡೆದನು. ಹಿಂದೆ ಸ್ಕಂದನು ಶಕ್ತಿಯಿಂದ ಹೊಡೆದಾಗ ಕ್ರೌಂಚ ಪರ್ವತವು ಶೋಭಿಸಿದಂತೆ ಪ್ರತಾಪವಾನ್ ಭೀಮಸೇನನು ಎದೆಗೆ ಹೊಡೆತವನ್ನು ತಿಂದು ಶೋಭಿಸಿದನು. ಅವರಿಬ್ಬರೂ ಸೂರ್ಯಸಂಕಾಶದ ಕಮ್ಮಾರರಿಂದ ಹದಗೊಳಿಸಲ್ಪಟ್ಟ ಬಾಣಗಳಿಂದ ಅನ್ಯೋನ್ಯರನ್ನು ಕ್ರುದ್ಧರಾಗಿ ಪುನಃ ಪುನಃ ಹೊಡೆದು ಗಾಯಗೊಳಿಸಿದರು. ಭೀಷ್ಮವಧಾಕಾಂಕ್ಷಿಯಾದ ಭೀಮನು ಮಹಾರಥ ಸೌಮದತ್ತಿಯನ್ನು ಮತ್ತು ಹಾಗೆಯೇ ಭೀಷ್ಮನ ಜಯವನ್ನು ಆಶಿಸಿದ್ದ ಸೌಮದತ್ತಿಯು ಪಾಂಡವನನ್ನೂ ಮಾಡಿದುದಕ್ಕೆ ಪ್ರತಿಮಾಡುತ್ತಾ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದರು.
ಮಹಾ ಸೇನೆಯಿಂದ ಆವೃತನಾಗಿ ಭೀಷ್ಮಾಭಿಮುಖನಾಗಿ ಬರುತ್ತಿದ್ದ ಯುಧಿಷ್ಠಿರನನ್ನು ಭಾರದ್ವಾಜನು ತಡೆದನು. ಮೋಡದ ಗುಡುಗಿನಂತಿದ್ದ ದ್ರೋಣನ ರಥನಿರ್ಘೋಷವನ್ನು ಕೇಳಿ ಪ್ರಭದ್ರಕನು ಥರಥರಿಸಿದನು. ದ್ರೋಣನಿಂದ ತಡೆಯಲ್ಪಟ್ಟ ಪಾಂಡುಪುತ್ರನ ಆ ಮಹಾ ಸೇನೆಯು ಒಂದು ಹೆಜ್ಜೆಯೂ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ.
ಕ್ರುದ್ಧನಾಗಿ ಭೀಷ್ಮನ ಕಡೆ ಬರುತ್ತಿದ್ದ ಚೇಕಿತಾನನನ್ನು ಧೃತರಾಷ್ಟ್ರನ ಮಗ ಕ್ರುದ್ಧರೂಪಿ ಚಿತ್ರಸೇನನು ತಡೆದನು. ಭೀಷ್ಮನ ಕಾರಣದಿಂದ ಪರಾಕ್ರಾಂತನಾಗಿದ್ದ ಮಹಾರಥ ಚಿತ್ರಸೇನನು ಚೇಕಿತಾನನೊಂದಿಗೆ ಪರಮ ಶಕ್ತಿಯಿಂದ ಯುದ್ಧಮಾಡಿದನು. ಹಾಗೆಯೇ ಚೇಕಿತಾನನೂ ಕೂಡ ಚಿತ್ರಸೇನನೊಡನೆ ಹೋರಾಡಿದನು. ಆಗ ಅಲ್ಲಿ ಪರಾಕ್ರಮಯುಕ್ತ ಮಹಾಯುದ್ಧವು ನಡೆಯಿತು.
ಅರ್ಜುನನನ್ನು ತಡೆಯಲು ಬಹುವಾಗಿ ಪ್ರಯತ್ನಿಸುತ್ತಿದ್ದ ದುಃಶಾಸನನನ್ನು ವಿಮುಖನನ್ನಾಗಿ ಮಾಡಿ ಅವನು ಕೌರವ ಸೇನೆಯುನ್ನು ಮರ್ದಿಸಿದನು. ಶತ್ರುಗಳು ಭೀಷ್ಮನನ್ನು ಕೊಲ್ಲಬಾರದೆಂದು ನಿಶ್ಚಯಿಸಿ ದುಃಶಾಸನನೂ ಕೂಡ ಪರಮ ಶಕ್ತಿಯಿಂದ ಪಾರ್ಥನನ್ನು ತಡೆದನು. ಅಲ್ಲಲ್ಲಿ ದುರ್ಯೋಧನನ ಸೇನೆಯನ್ನು ವಧಿಸುತ್ತಾ ಆ ಶ್ರೇಷ್ಠ ರಥರು ಮುಂದುವರೆದರು.
ದ್ರೋಣ-ಅಶ್ವತ್ಥಾಮರ ಸಂವಾದ
ಆಗ ವೀರ ಮಹೇಷ್ವಾಸ, ಮತ್ತವಾರಣವಿಕ್ರಮಿ ಮಹಾರಥ ದ್ರೋಣನು ಮತ್ತವಾರಣವನ್ನೂ ತಡೆಯಬಹುದಾದಂತ ಮಹಾಚಾಪವನ್ನು ಎತ್ತಿ ಹಿಡಿದು ಆ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಮಹಾರಥ ಪಾಂಡವೇಯರ ಸೇನೆಯ ಮೇಲೆ ಎರಗಿದನು. ಸೇನೆಗಳ ಮೇಲೆ ಆಕ್ರಮಣಮಾಡುವಾಗ ಎಲ್ಲಕಡೆ ನಿಮಿತ್ತಗಳನ್ನು ವೀಕ್ಷಿಸಿ ವೀರ್ಯವಾನ್ ನಿಮಿತ್ತಜ್ಞ ದ್ರೋಣನು ಮಗನಿಗೆ ಹೇಳಿದನು: “ಮಗು! ಇಂದಿನ ದಿವಸ ಮಹಾರಥ ಪಾರ್ಥನು ಸಮರದಲ್ಲಿರುವಲ್ಲಿ ಭೀಷ್ಮನನ್ನು ಕೊಲ್ಲಲು ಪರಮ ಯತ್ನವನ್ನು ಮಾಡುತ್ತಾನೆ. ನನ್ನ ಬಾಣುಗಳು ಕುಪ್ಪಳಿಸುತ್ತಿವೆ. ನನ್ನ ಧನುಸ್ಸು ಆಕಳಿಸುವಂತಿದೆ. ಅಸ್ತ್ರಗಳು ವ್ಯರ್ಥವಾಗುತ್ತಿವೆ. ನನ್ನ ಬುದ್ಧಿಯು ಕ್ರೂರವಾಗಿ ವರ್ತಿಸುತ್ತಿದೆ. ಘೋರ ಮೃಗಪಕ್ಷಿಗಳು ದಿಕ್ಕುಗಳಲ್ಲಿ ಕೂಗುತ್ತಿವೆ. ಭಾರತರ ಸೇನೆಯ ಕಡೆ ಕೆಳಗಿನಿಂದ ಹದ್ದುಗಳು ಅದೃಶ್ಯವಾಗುತ್ತಿವೆ. ಆದಿತ್ಯನು ಪ್ರಭೆಯನ್ನು ಕಳೆದುಕೊಂಡಿರುವಂತಿದೆ. ಎಲ್ಲಕಡೆ ದಿಕ್ಕುಗಳು ಕೆಂಪಾಗಿವೆ. ಭೂಮಿಯು ಕಿರುಚಿತ್ತಿರುವಂತಿದೆ. ಕಂಪಿಸುತ್ತಿದೆ. ಕಂಕಗಳು, ಹದ್ದುಗಳು ಮತ್ತು ಬಲಾಕಗಳು ಮತ್ತೆ ಮತ್ತೆ ಕೂಗುತ್ತಿವೆ. ನರಿಗಳು ಅಶಿವವಾಗಿ ಕೂಗುತ್ತಾ ಮಹಾ ಭಯವನ್ನು ಸೂಚಿಸುತ್ತಿವೆ. ಆದಿತ್ಯಮಂಡಲದ ಮಧ್ಯದಿಂದ ಮಹಾ ಉಲ್ಕೆಯೊಂದು ಬಿದ್ದಿತು. ಪರಿಘ ನಕ್ಷತ್ರವು ಶಿರವಿಲ್ಲದೇ ಸೂರ್ಯನ್ನು ಆವರಿಸಿ ನಿಂತಿದೆ. ಕ್ಷತ್ರಿಯರ ದೇಹ ಕತ್ತರಿಸುವ ಘೋರ ಭಯವನ್ನು ಸೂಚಿಸುತ್ತಾ ಚಂದ್ರ-ಭಾಸ್ಕರರು ಘೋರರೂಪವನ್ನು ತಾಳಿದ್ದಾರೆ. ಕೌರವೇಂದ್ರನ ದೇವಾಲಯಗಳಲ್ಲಿರುವ ದೇವತೆಗಳು ಕಂಪಿಸುತ್ತಿವೆ, ನಗುತ್ತಿವೆ, ಕುಣಿಯುತ್ತಿವೆ ಮತ್ತು ರೋದಿಸುತ್ತಿವೆ. ಭಗವಾನ್ ಚಂದ್ರಮನು ಕೊಂಬುಗಳು ಕೆಳಗಾಗಿ ಕಾಣಿಸುತ್ತಿದ್ದಾನೆ. ಧಾರ್ತರಾಷ್ಟ್ರನ ಸೇನೆಯಲ್ಲಿ ನರೇಂದ್ರರ ಮುಖಗಳು ಮಾಸಿದಂತೆ ಕಾಣುತ್ತಿವೆ. ಅವರ ಕವಚಗಳು ಹೊಳೆಯುತ್ತಿಲ್ಲ. ಎರಡೂ ಸೇನೆಗಳಲ್ಲಿ ಎಲ್ಲ ಕಡೆಗಳಿಂದ ಪಾಂಚಜನ್ಯದ ಮಹಾ ನಿರ್ಘೋಷ ಮತ್ತು ಗಾಂಡೀವದ ಟೇಂಕಾರವು ಕೇಳಿ ಬರುತ್ತಿದೆ. ನಿಶ್ಚಯವಾಗಿಯೂ ಸಂಯುಗದಲ್ಲಿ ಬೀಭತ್ಸುವು ಉತ್ತಮ ಅಸ್ತ್ರಗಳನ್ನು ಬಳಸಿ ರಣದಲ್ಲಿ ಇತರರನ್ನು ತಪ್ಪಿಸಿಕೊಂಡು ಪಿತಾಮಹನ ಹತ್ತಿರ ಹೋಗುತ್ತಾನೆ. ಭೀಷ್ಮಾರ್ಜುನರ ಸಮಾಗಮವನ್ನು ಯೋಚಿಸಿಯೇ ನನ್ನ ಮನಸ್ಸು ಸುಡುತ್ತಿದೆ ಮತ್ತು ರೋಮಕೂಪಗಳು ಹರ್ಷಿತಗೊಳ್ಳುತ್ತಿವೆ. ಆ ಪಾಪಚೇತಸ ನಿಕೃತಿಪ್ರಜ್ಞ ಪಾಂಚಲ್ಯನನ್ನು ರಣದಲ್ಲಿ ಮುಂದಿರಿಸಿಕೊಂಡು ಪಾರ್ಥನು ಭೀಷ್ಮನೊಂದಿಗೆ ಯುದ್ಧಮಾಡಲು ಹೋಗಿದ್ದಾನೆ. ಹಿಂದೆ ಭೀಷ್ಮನು ಈ ಶಿಖಂಡಿನಿಯನ್ನು ನಾನು ಕೊಲ್ಲುವುದಿಲ್ಲವೆಂದು ಹೇಳಿದ್ದನು. ಏಕೆಂದರೆ ಸ್ತ್ರೀಯೆಂದು ಧಾತ್ರುವಿಂದ ವಿಹಿತಳಾಗಿ ದೈವವಶಾತ್ ಪುನಃ ಪುರುಷನಾಗಿದ್ದಾನೆ. ಮಹಾರಥ ಯಾಜ್ಞಸೇನಿಯು ಅಮಂಗಲಧ್ವಜನೂ ಆಗಿದ್ದಾನೆ. ಅಪಗಾಸುತನು ಆ ಅಮಂಗಲ ಕೇತುವನ್ನು ಪ್ರಹರಿಸುವುದಿಲ್ಲ. ಇದನ್ನು ಯೋಚಿಸಿ ನನ್ನ ಪ್ರಜ್ಞೆಯು ತುಂಬಾ ಸಡಿಲವಾಗುತ್ತಿದೆ. ಇಂದು ರಣದಲ್ಲಿ ಪಾರ್ಥನು ಕುರುವೃದ್ಧನನ್ನು ಆಕ್ರಮಿಸಿದ್ದಾನೆ. ಯುಧಿಷ್ಠಿರನ ಕ್ರೋಧ, ಭೀಮಾರ್ಜುನರ ಸಮಾಗಮ, ನನ್ನ ಅಸ್ತ್ರಗಳ ಸಂಭ್ರಮ ಇವುಗಳಿಂದ ಪ್ರಜೆಗಳಿಗೆ ಅಶುಭವು ನಿಶ್ಚಯ. ಪಾಂಡವನು ಮನಸ್ವೀ, ಬಲವಾನ, ಶೂರ, ಕೃತಾಸ್ತ್ರ, ದೃಢವಿಕ್ರಮಿ, ಬಹುದೂರ ಹೊಡೆಯಬಲ್ಲವನು, ದೃಢವಾಗಿ ಹಿಡಿಯಬಲ್ಲನು, ಮತ್ತು ನಿಮಿತ್ತಗಳನ್ನು ಅರಿತವನು. ಅವನು ಸಮರದಲ್ಲಿ ವಾಸವನೊಂದಿಗೆ ದೇವತೆಗಳಿಗೂ ಅಜೇಯನು. ಪಾಂಡವನು ಬಲವಾನ್, ಬುದ್ಧಿಮಾನ್, ಕ್ಲೇಶಗಳನ್ನು ಗೆದ್ದವನು, ಯೋಧರಲ್ಲಿ ಶ್ರೇಷ್ಠ, ರಣದಲ್ಲಿ ನಿತ್ಯವೂ ವಿಜಯಿ ಮತ್ತು ಭೈರವನು. ಅವನ ಮಾರ್ಗದಲ್ಲಿಯೇ ಹೋಗಿ ಯತವ್ರತನಲ್ಲಿಗೆ ಹೋಗು. ಅಲ್ಲಿ ಆಗುವ ವೈಶಮವನ್ನು ನೋಡು. ಶೂರರ ಹೇಮಚಿತ್ರಗಳ, ಮಹಾ ಶುಭ ಕವಚಗಳು ಸನ್ನತಪರ್ವ ಶರ್ಯಗಳಿಂದ ಸೀಳಲ್ಪಡುತ್ತವೆ. ಧ್ವಜಾಗ್ರಗಳು, ತೋಮರಗಳು ಮತ್ತು ಧನುಸ್ಸುಗಳು ತುಂಡಾಗುತ್ತವೆ. ಸಂಕ್ರುದ್ಧನಾದ ಕಿರೀಟಿಯು ವಿಮಲ ಪ್ರಾಸಗಳನ್ನೂ, ತೀಕ್ಷ್ಣ ಶಕ್ತಿಗಳನ್ನೂ, ಆನೆಗಳ ಕನಕೋಜ್ಜ್ವಲ ವೈಜಂತಿಗಳನ್ನೂ ಛಿದ್ರಗೊಳಿಸುತ್ತಾನೆ.
“ಪುತ್ರ! ಉಪಜೀವನ ಮಾಡುತ್ತಿರುವ ನಮಗೆ ನಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುವ ಕಾಲವಿದಲ್ಲ. ಸ್ವರ್ಗ, ಯಶಸ್ಸು ಮತ್ತು ವಿಜಯಗಳನ್ನು ಮುಂದಿರಿಸಿಕೊಂಡು ಹೋಗು. ಹಯ-ನಾಗ-ರಥಗಳಿಂದ ಕೂಡಿದ ಈ ಮಹಾಘೋರ ಸುದುಸ್ತರ ಸಂಗ್ರಾಮನದಿಯನ್ನು ಕಪಿಧ್ವಜನು ತನ್ನ ರಥದಿಂದ ದಾಟುತ್ತಾನೆ. ಬ್ರಹ್ಮಣ್ಯತೆ, ದಮ, ದಾನ, ತಪಸ್ಸು, ಮತ್ತು ಮಹಾ ಚಾರಿತ್ರ್ಯಗಳನ್ನು ಧನಂಜಯ, ಬಲವಾನ್ ಭೀಮಸೇನ, ಮತ್ತು ಪಾಂಡವ ಮಾದ್ರೀಪುತ್ರರೀರ್ವರ ಭ್ರಾತ, ಯಾರ ನಾಥನಾಗಿ ವಾರ್ಷ್ಣೇಯ ವಾಸುದೇವನೋ ಆ ಧರ್ಮರಾಜನಲ್ಲಿ ಕಾಣುತ್ತವೆ. ಅದೇ ಪ್ರಭುವಿನ ಕೋಪವು, ತಪಸ್ಸಿನಿಂದ ದಗ್ಧಶರೀರನ ಕೋಪವು ಭಾರತರನ್ನು ಮತ್ತು ದುರ್ಮತಿ ಧಾರ್ತರಾಷ್ಟ್ರನನ್ನು ಸುಡುತ್ತದೆ. ವಾಸುದೇವನನ್ನು ಆಶ್ರಯಿಸಿ ಪಾರ್ಥನು ಧಾರ್ತರಾಷ್ಟ್ರರ ಸರ್ವ ಸೈನ್ಯಗಳನ್ನು ಎಲ್ಲಕಡೆಯಿಂದ ಸೀಳಿಕೊಂಡು ಬರುವುದು ಕಾಣುತ್ತದೆ. ಮಹಾ ತಿಮಿಂಗಿಲವು ದೊಡ್ಡ ಅಲೆಗಳ ಮಹಾ ಸಮುದ್ರವನ್ನು ಹೇಗೋ ಹಾಗೆ ಕಿರೀಟಿಯು ಈ ಸೈನ್ಯವನ್ನು ಕ್ಷೋಭೆಗೊಳಿಸುವುದನ್ನು ನೋಡು. ಸೇನೆಯ ಮುಂಭಾಗದಲ್ಲಿ ಹಾಹಾಕಿಲಿಕಿಲ ಶಬ್ಧಗಳು ಕೇಳಿಬರುತ್ತಿವೆ. ಪಾಂಚಾಲದಾಯದನಲ್ಲಿಗೆ ಹೋಗು. ನಾನು ಯುಧಿಷ್ಠಿರನೊಂದಿಗೆ ಯುದ್ಧಮಾಡುತ್ತೇನೆ. ಎಲ್ಲಕಡೆಗಳಲ್ಲಿಯೂ ಅತಿರಥರು ನಿಂತಿರುವ ಅಮಿತ ತೇಜಸ್ವಿ ರಾಜನ ವ್ಯೂಹದ ಒಳಭಾಗವು ಸಮುದ್ರ ಕುಕ್ಷಿಯಂತೆ ದುರ್ಲಭವಾಗಿದೆ. ರಾಜ ಮನುಜೇಶ್ವರನನ್ನು ಸಾತ್ಯಕಿ, ಅಭಿಮನ್ಯು, ಧೃಷ್ಟದ್ಯುಮ್ನ, ವೃಕೋದರರು ಮತ್ತು ಯಮಳರು ರಕ್ಷಿಸುತ್ತಿದ್ದಾರೆ. ಇಗೋ! ಉಪೇಂದ್ರಸದೃಶನಾದ ಶ್ಯಾಮವರ್ಣಿ ಮಹಾಶಾಲದಂತೆ ಎತ್ತರನಾಗಿರುವ ಈ ಎರಡನೆಯ ಫಲ್ಗುನಿಯು ಸೇನೆಗಳೊಂದಿಗೆ ಹೋಗುತ್ತಿದ್ದಾನೆ. ಉತ್ತಮ ಅಸ್ತ್ರಗಳನ್ನೂ ಮಹಾಧನುಸ್ಸನ್ನೂ ಹಿಡಿದು ಹೋಗಿ ರಾಜನ ಪಕ್ಕದಲ್ಲಿರುವ ವೃಕೋದರನೊಡನೆ ಯುದ್ಧಮಾಡು. ತನ್ನ ಪ್ರಿಯಪುತ್ರನು ಶಾಶ್ವತ ವರ್ಷಗಳು ಜೀವಿತನಾಗಿರಬೇಕೆಂದು ಯಾರು ತಾನೇ ಇಚ್ಛಿಸುವುದಿಲ್ಲ? ಕ್ಷತ್ರಧರ್ಮವನ್ನು ಪುರಸ್ಕರಿಸಿ ನಿನ್ನನ್ನು ಯುದ್ಧಕ್ಕೆ ನಿಯೋಜಿಸುತ್ತಿದ್ದೇನೆ. ರಣದಲ್ಲಿ ಈ ಭೀಷ್ಮನೂ ಸಹ ಮಹಾಸೇನೆಯನ್ನು ದಹಿಸುವನು. ಇವನು ಯುದ್ಧದಲ್ಲಿ ಯಮ ಮತ್ತು ವರುಣರ ಸದೃಶನು.”
ಭೀಮ ಪರಾಕ್ರಮ
ಭಗದತ್ತ, ಕೃಪ, ಶಲ್ಯ, ಸಾತ್ವತ ಕೃತವರ್ಮ, ಅವಂತಿಯ ವಿಂದಾನುವಿಂದರು, ಸೈಂಧವ ಜಯದ್ರಥ, ಚಿತ್ರಸೇನ, ವಿಕರ್ಣ ಮತ್ತು ಯುವ ದುರ್ಮರ್ಷಣ ಈ ಹತ್ತು ಕೌರವರ ಕಡೆಯ ಯೋಧರು ನಾನಾದೇಶಗಳಿಂದ ಒಟ್ಟುಗೂಡಿಸಿದ ಮಹಾಸೇನೆಯೊಂದಿಗೆ ಭೀಷ್ಮನ ಮಹಾ ಯಶಸ್ಸನ್ನು ಬಯಸುತ್ತಾ ಭೀಮನ ಮೇಲೆ ಆಕ್ರಮಣಮಾಡಿದರು. ಶಲ್ಯನು ಒಂಭತ್ತು ಬಾಣಗಳಿಂದಲೂ, ಕೃತವರ್ಮನು ಮೂರು ಬಾಣಗಳಿಂದಲೂ, ಮತ್ತು ಕೃಪನು ಒಂಭತ್ತು ಶರಗಳಿಂದಲೂ ಭೀಮಸೇನನನ್ನು ಹೊಡೆದರು. ಚಿತ್ರಸೇನ, ವಿಕರ್ಣ ಮತ್ತು ಭಗದತ್ತರೂ ಕೂಡ ಹತ್ತು ಹತ್ತು ಭಲ್ಲೆಗಳಿಂದ ಭೀಮಸೇನನನ್ನು ಹೊಡೆದರು. ಸೈಂಧವನು ಮೂರು ಬಾಣಗಳಿಂದ ಅವನ ಜತ್ರುದೇಶವನ್ನೂ, ಅವಂತಿಯ ವಿಂದಾನುವಿಂದರಿಬ್ಬರು ಐದೈದು ಶರಗಳಿಂದಲೂ ಮತ್ತು ದುರ್ಮರ್ಷಣನು ಇಪ್ಪತ್ತು ನಿಶಿತ ಶರಗಳಿಂದ ಪಾಂಡವನನ್ನು ಹೊಡೆದರು. ಧಾರ್ತರಾಷ್ಟ್ರನ ಆ ಎಲ್ಲ ಮಹಾರಥರನ್ನೂ, ಸರ್ವಲೋಕ ಪ್ರವೀರರನ್ನೂ ಮಹಾಬಲ ಭೀಮಸೇನನು ಅನೇಕ ಬಾಣಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಹೊಡೆದನು. ಐವತ್ತರಿಂದ ಶಲ್ಯನನ್ನು ಮತ್ತು ಎಂಟರಿಂದ ಕೃತವರ್ಮನನ್ನು ಹೊಡೆದು ಕೃಪನ ಚಾಪವನ್ನು ಬಾಣದೊಂದಿಗೆ ಮಧ್ಯದಲ್ಲಿಯೇ ಕತ್ತರಿಸಿದನು. ಧನ್ನುಸ್ಸು ತುಂಡಾದವನನ್ನು ಪುನಃ ಐದರಿಂದ ಹೊಡೆದನು. ಹಾಗೆಯೇ ವಿಂದಾನುವಿಂದರನ್ನು ಮೂರರಿಂದ, ದುರ್ಮರ್ಷಣನನ್ನು ಇಪ್ಪತ್ತರಿಂದ ಮತ್ತು ಚಿತ್ರಸೇನನನ್ನು ಐದರಿಂದ ಹೊಡೆದನು. ವಿಕರ್ಣನನ್ನು ಹತ್ತು ಮತ್ತು ಜಯದ್ರಥನನ್ನು ಐದು ಬಾಣಗಳಿಂದ ಹೊಡೆದು ಭೀಮನು ಪುನಃ ಸೈಂಧವನನ್ನು ಮೂರರಿಂದ ಹೊಡೆದನು. ಆಗ ರಥಿಗಳಲ್ಲಿ ಶ್ರೇಷ್ಠ ಗೌತಮನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸಂರಬ್ಧನಾಗಿ ಭೀಮನನ್ನು ಹತ್ತು ನಿಶಿತ ಶರಗಳಿಂದ ಹೊಡೆದನು. ಅನೇಕ ಬಾಣಗಳಿಂದ ಚುಚ್ಚಲ್ಪಟ್ಟ ಮಹಾಗಜದಂತೆ ಪ್ರತಾಪವಾನ್ ಮಹಾಬಾಹು ಭೀಮಸೇನನು ಕ್ರುದ್ಧನಾಗಿ ಗೌತಮನನ್ನು ಅನೇಕ ಶರಗಳಿಂದ ಪ್ರಹರಿಸಿದನು. ಮತ್ತು ಆ ಕಾಲಾಂತಕ ಸಮದ್ಯುತಿಯು ಮೂರು ಶರಗಳಿಂದ ಸೈಂಧವನ ಸಾರಥಿಯನ್ನೂ ಕುದುರೆಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು. ತಕ್ಷಣವೇ ಕುದುರೆಗಳನ್ನು ಕಳೆದುಕೊಂಡ ರಥದಿಂದ ಕೆಳಗೆ ಧುಮುಕಿ ಆ ಮಹಾರಥನು ಭೀಮಸೇನನ ಮೇಲೆ ನಿಶಿತ ಶರಗಳನ್ನು ಪ್ರಯೋಗಿಸಿದನು. ಭರತಶ್ರೇಷ್ಠ ಭೀಮನು ಭಲ್ಲಗಳೆರಡರಿಂದ ಮಹಾತ್ಮ ಸೈಂಧವನ ಧನುಸ್ಸನ್ನು ಮಧ್ಯದಲ್ಲಿಯೇ ಎರಡು ಭಾಗಗಳನ್ನಾಗಿ ತುಂಡರಿಸಿದನು. ಧನುಸ್ಸು ತುಂಡಾಗಲು, ಕುದುರೆಗಳು ಹತವಾಗಿ, ಸಾರಥಿಯೂ ಹತನಾಗಿ ವಿರಥನಾಗಿದ್ದ ಅವನು ಅವಸರದಿಂದ ಚಿತ್ರಸೇನನ ರಥವನ್ನೇರಿದನು.
ಅಲ್ಲಿ ರಣದಲ್ಲಿ ಪಾಂಡವನು ಒಂದು ಅದ್ಭುತ ಕರ್ಮವನ್ನೇ ಮಾಡಿದನು: ಎಲ್ಲ ಲೋಕಗಳೂ ನೋಡುತ್ತಿದ್ದಂತೆಯೇ ಆ ಮಹಾರಥನು ಮಹಾರಥರನ್ನು ತಡೆದು ಸೈಂಧವನನ್ನು ವಿರಥನನ್ನಾಗಿ ಮಾಡಿದನು. ಭೀಮಸೇನನ ವಿಕ್ರಮವನ್ನು ಅತೀವವಾಗಿ ಸಹಿಸಿಕೊಳ್ಳಲಾರದ ಶಲ್ಯನು ಕಮ್ಮಾರನಿಂದ ಹದಗೊಳಿಸಲ್ಪಟ್ಟ ಏಳು ತೀಕ್ಷ್ಣಶರಗಳನ್ನು ಹೂಡಿ ಭೀಮನನ್ನು ಹೊಡೆದು ನಿಲ್ಲು ನಿಲ್ಲು ಎಂದು ಕೂಗಿದನು. ಶಲ್ಯನ ಕಾರಣದಿಂದಾಗಿ ಅರಿಂದಮರಾದ ಕೃಪ, ಕೃತವರ್ಮ, ಭಗದತ್ತ, ಅವಂತಿಯ ವಿಂದಾನುವಿಂದರು, ಚಿತ್ರಸೇನ, ದುರ್ಮರ್ಷಣ, ವಿಕರ್ಣ, ವೀರ್ಯವಾನ್ ಸಿಂಧುರಾಜ ಇವರು ತಕ್ಷಣವೇ ಭೀಮನನ್ನು ಪ್ರಹರಿಸಿದರು.
ಅವನಾದರೋ ಅವರನ್ನು ಐದೈದು ಶರಗಳಿಂದ ತಿರುಗಿ ಹೊಡೆದನು ಮತ್ತು ಶಲ್ಯನನ್ನು ಏಳರಿಂದ ಮತ್ತು ಪುನಃ ಹತ್ತು ಶರಗಳಿಂದ ಹೊಡೆದನು. ಶಲ್ಯನು ಅವನನ್ನು ಒಂಭತ್ತರಿಂದ ಮತ್ತು ಪುನಃ ಐದರಿಂದ ಹೊಡೆದು, ಅವನ ಸಾರಥಿಯನ್ನು ಕವಚವನ್ನು ಗಾಢವಾಗಿ ಹೊಗುವಂತೆ ಭಲ್ಲದಿಂದ ಹೊಡೆದನು. ವಿಶೋಕನು ಪೆಟ್ಟುತಿಂದುದನ್ನು ವೀಕ್ಷಿಸಿ ಪ್ರತಾಪವಾನ್ ಭೀಮಸೇನನು ಮದ್ರರಾಜನನ್ನು ಮೂರು ಬಾಣಗಳಿಂದ ತೋಳುಗಳಿಗೂ ವಕ್ಷಸ್ಥಳಕ್ಕೂ ಪ್ರಹರಿಸಿದನು. ಹಾಗೆಯೇ ಅವನು ಇತರ ಮಹೇಷ್ವಾಸರನ್ನೂ ನೇರವಾಗಿ ಹೋಗುವ ಮೂರು ಮೂರು ಬಾಣಗಳಿಂದ ಪ್ರಹರಿಸಿ ಸಿಂಹದಂತೆ ಗರ್ಜಿಸಿದನು. ಪ್ರಯತ್ನಿಸುತ್ತಿದ್ದ ಆ ಮಹೇಷ್ವಾಸರೂ ಯುದ್ಧದುರ್ಮದ ಪಾಂಡವನನ್ನು ಬಗ್ಗಿರದೇ ಇರುವ ಅಗ್ರಭಾಗಗಳನ್ನು ಹೊಂದಿದ ಮೂರು ಮೂರು ಬಾಣಗಳಿಂದ ಅವನ ಮರ್ಮಸ್ಥಾನಗಳಲ್ಲಿ ಹೊಡೆದರು. ಹೀಗೆ ಅತಿಯಾಗಿ ನೋವುಂಟಾಗುವಂತೆ ಹೊಡೆಯಲ್ಪಟ್ಟರೂ ಭೀಮಸೇನನು ಮೋಡಗಳು ಮಳೆನೀರನ್ನು ಸುರಿದರೂ ಪರ್ವತವು ಹೇಗೆ ವಿಚಲಿತವಾಗಿರುವುದಿಲ್ಲವೋ ಹಾಗೆ ವಿವ್ಯಥನಾಗಿದ್ದನು. ಆ ಮಹಾಯಶನು ಶಲ್ಯನನ್ನು ಒಂಭತ್ತು ಬಾಣಗಳಿಂದ ಜೋರಾಗಿ ಹೊಡೆದು, ದೃಢನಾದ ಪ್ರಾಗ್ಜ್ಯೋತಿಷನನ್ನು ನೂರರಿಂದ ಹೊಡೆದನು. ಆಗ ಹಸ್ತಪಳಗಿದ ಆ ಮಹಾತ್ಮನು ಸುತೀಕ್ಷ್ಣವಾದ ಕ್ಷುರಪ್ರದಿಂದ ಸಾತ್ವತನ ಚಾಪವನ್ನು ಬಾಣಗಳೊಂದಿಗೆ ಕತ್ತರಿಸಿದನು. ತಕ್ಷಣವೇ ಇನ್ನೊಂದು ಧನುಸ್ಸನ್ನು ಹಿಡಿದು ಕೃತವರ್ಮನು ನಾರಾಚದಿಂದ ವೃಕೋದರನನ್ನು ಹುಬ್ಬುಗಳ ನಡುವೆ ತಾಗುವಂತೆ ಹೊಡೆದನು. ಭೀಮನಾದರೋ ಸಮರದಲ್ಲಿ ಒಂಭತ್ತು ಆಯಸಗಳಿಂದ ಶಲ್ಯನನ್ನು ಹೊಡೆದು ಭಗದತ್ತನನ್ನು ಮೂರರಿಂದಲೂ, ಕೃತವರ್ಮನನ್ನು ಎಂಟರಿಂದಲೂ, ಎರೆಡೆರರಿಂದ ಗೌತಮರೇ ಮೊದಲಾದ ರಥರನ್ನು ಹೊಡೆದನು.
ಅವರು ಸಮರದಲ್ಲಿ ಅವನನ್ನು ನಿಶಿತಶರಗಳಿಂದ ಹೊಡೆದರು. ಸುತ್ತಲೂ ಎಲ್ಲಕಡೆಗಳಿಂದಲೂ ಮಹಾರಥರಿಂದ ಪೀಡಿತನಾದರೂ ಕೂಡ ಭೀಮಸೇನನು ಅವರನ್ನು ತೃಣಸಮಾನರೆಂದು ಪರಿಗಣಿಸಿ ವ್ಯಥೆಯಿಲ್ಲದೇ ಹೋರಾಡುತ್ತಿದ್ದನು. ಆ ರಥಿಗಳಲ್ಲಿ ಶ್ರೇಷ್ಠರೂ ಕೂಡ ಅವ್ಯಗ್ರರಾಗಿ ಭೀಮನ ಮೇಲೆ ನೂರಾರು ಸಹಸ್ರಾರು ನಿಶಿತ ಶರಗಳನ್ನು ಪ್ರಯೋಗಿಸುತ್ತಿದ್ದರು.
ಅವನ ಮೇಲೆ ವೀರ ಮಹಾರಥ ಭಗದತ್ತನು ಮಹಾವೇಗದ, ಸ್ವರ್ಣದಂಡದ, ಮಹಾಅಮೂಲ್ಯವಾದ ಶಕ್ತಿಯನ್ನು ಎಸೆದನು. ಹಾಗೆಯೇ ರಾಜ ಮಹಾಭುಜ ಸೈಂಧವನು ತೋಮರವನ್ನೂ, ಕೃಪನು ಶತಘ್ನಿಯನ್ನೂ ಮತ್ತು ಶಲ್ಯನು ಬಾಣವನ್ನೂ ಎಸೆದರು. ಇತರ ಮಹೇಷ್ವಾಸರೂ ಐದೈದು ಶಿಲೀಮುಖಿಗಳನ್ನು ಭೀಮಸೇನನನ್ನು ಅನುಲಕ್ಷಿಸಿ ಬಲಪೂರ್ವಕವಾಗಿ ಪ್ರಯೋಗಿಸಿದರು. ಅನಿಲಾತ್ಮಜನು ತೋಮರವನ್ನು ಕ್ಷುರಪ್ರದಿಂದ ಎರಡು ಮಾಡಿದನು. ಮೂರು ಬಾಣಗಳಿಂದ ಪಟ್ಟಿಶವನ್ನೂ ಕೂಡ ಎಳ್ಳಿನ ಗಿಡದಂತೆ ತುಂಡರಿಸಿದನು. ಅವನು ಒಂಭತ್ತು ಕಂಕಪತ್ರಿಗಳಿಂದ ಶತಘ್ನಿಯನ್ನು ತುಂಡರಿಸಿದನು ಮತ್ತು ಆ ಮಹಾಬಲನು ಮದ್ರರಾಜನು ಪ್ರಯೋಗಿಸಿದ್ದ ಶರವನ್ನೂ ಕತ್ತರಿಸಿ ರಣದಲ್ಲಿ ಭಗದತ್ತನು ಕಳುಹಿಸಿದ್ದ ಶಕ್ತಿಯನ್ನೂ ಕೂಡಲೇ ಕತ್ತರಿಸಿದನು. ಹಾಗೆಯೇ ರಣಶ್ಲಾಘೀ ಭೀಮಸೇನನು ಇತರರ ಘೋರ ಶರಗಳು ಒಂದೊಂದನ್ನೂ ಮೂರು ಮೂರು ಸನ್ನತಪರ್ವ ಶರಗಳಿಂದ ತುಂಡರಿಸಿದನು. ಆ ಎಲ್ಲ ಮಹೇಷ್ವಾಸರನ್ನೂ ಮೂರು ಮೂರು ಶರಗಳಿಂದ ಹೊಡೆದನು.
ಶತ್ರುಯೋಧರನ್ನು ಸಾಯಕಗಳಿಂದ ಸಂಹರಿಸುತ್ತಿದ್ದ ಮಹಾರಥ ಭೀಮನನ್ನು ನೋಡಿ ಆ ಮಹಾರಣವು ನಡೆಯುತ್ತಿರುವಲ್ಲಿಗೆ ಧನಂಜಯನು ರಥದಲ್ಲಿ ಧಾವಿಸಿ ಬಂದನು. ಅಲ್ಲಿ ಒಟ್ಟಿಗೇ ಹೋರಾಡುತ್ತಿದ್ದ ಆ ವೀರ ಮಹಾತ್ಮ ಪಾಂಡವರಿಬ್ಬರನ್ನೂ ನೋಡಿ ಕೌರವರು ಜಯದ ಆಸೆಯನ್ನೇ ಬಿಟ್ಟುಬಿಟ್ಟರು. ಭೀಷ್ಮನ ನಿಧನಾಕಾಂಕ್ಷಿಯಾಗಿ ಶಿಖಂಡಿಯನ್ನು ಮುಂದಿಟ್ಟುಕೊಂಡು ಮಹಾರಥ ಭೀಷ್ಮನೊಡನೆ ಯುದ್ಧ ಮಾಡುತ್ತಿದ್ದ ಬೀಭತ್ಸು ಅರ್ಜುನನು ಭೀಮನು ನಿನ್ನವರಾದ ಯಾವ ಹತ್ತು ಯೋಧರೊಡನೇ ಹೋರಾಡುತ್ತಿದ್ದನೋ ಅವರನ್ನು ರಣದಲ್ಲಿ ಎದುರಿಸಿ, ಭೀಮನ ಹಿತವನ್ನು ಬಯಸಿ ಅವರ ಮೇಲೆ ಪ್ರಹರಿಸಿದನು.
ಆಗ ರಾಜಾ ದುರ್ಯೋಧನನು ಅರ್ಜುನ ಭೀಮಸೇನರಿಬ್ಬರ ವಧೆಗಾಗಿ ಸುಶರ್ಮನನ್ನು ಪ್ರಚೋದಿಸಿದನು. “ಸುಶರ್ಮನ್! ಹೋಗು! ಸೇನೆಗಳಿಂದ ಪರಿವಾರಿತರಾಗಿರುವ ಅವರಿಬ್ಬರು ಪಾಂಡುಸುತ ಧನಂಜಯ-ವೃಕೋದರರನ್ನು ಕೊಲ್ಲು!” ಅವನ ಆ ಶಾಸನವನ್ನು ಕೇಳಿ ಪ್ರಸ್ಥಲಾಧಿಪ ತ್ರಿಗರ್ತನು ರಣದಲ್ಲಿ ಧನ್ವಿ ಭೀಮಾರ್ಜುನರಿಬ್ಬರನ್ನೂ ಅನೇಕ ಸಾವಿರ ರಥಗಳಿಂದ ಎಲ್ಲಕಡೆಗಳಿಂದ ಸುತ್ತುವರೆದನು. ಆಗ ಶತ್ರುಗಳೊಂದಿಗೆ ಅರ್ಜುನನ ಯುದ್ಧವು ಪ್ರಾರಂಭವಾಯಿತು.
ಭೀಮಾರ್ಜುನ ಪರಾಕ್ರಮ
ಅರ್ಜುನನಾದರೋ ಸಮರದಲ್ಲಿ ಪ್ರಯತ್ನಿಸುತ್ತಿದ್ದ ಮಹಾರಥ ಶಲ್ಯನನ್ನು ಸನ್ನತಪರ್ವ ಶರಗಳಿಂದ ಹೊಡೆದನು. ಸುಶರ್ಮನನ್ನೂ ಕೃಪನನ್ನೂ ಮೂರು ಬಾಣಗಳಿಂದ ಹೊಡೆದನು. ಪ್ರಗ್ಜ್ಯೋತಿಷನನ್ನು, ಸೈಂಧವ ಜಯದ್ರಥನನ್ನು, ಚಿತ್ರಸೇನನನ್ನು, ವಿಕರ್ಣನನ್ನು, ಕೃತವರ್ಮನನ್ನು ಕೂಡ, ದುರ್ಮರ್ಷಣನನ್ನು, ಮತ್ತು ಅವಂತಿಯ ಮಹಾರಥರೀರ್ವರನ್ನು ಒಬ್ಬೊಬ್ಬರನ್ನೂ ಮೂರು ಮೂರು ಕಂಕಬರ್ಹಿಣ ಬಾಣಗಳಿಂದ ಹೊಡೆದು ಆ ಅತಿರಥನು ಕೌರವ ವಾಹಿನಿಯನ್ನು ಪೀಡಿಸಿದನು. ಚಿತ್ರಸೇನರಥದಲ್ಲಿ ನಿಂತ ಜಯದ್ರಥನು ಪಾರ್ಥನನ್ನು ಸಾಯಕಗಳಿಂದ ಭೇದಿಸಿ, ತಕ್ಷಣವೇ ಭೀಮನನ್ನು ಹೊಡೆದನು. ಶಲ್ಯ ಮತ್ತು ರಥಿಗಳಲ್ಲಿ ಶ್ರೇಷ್ಠ ಕೃಪರು ಮಹಾಬಾಹು ಜಿಷ್ಣುವನ್ನು ಅನೇಕ ಮರ್ಮಭೇದಿಗಳಿಂದ ಹೊಡೆದರು. ಚಿತ್ರಸೇನನೇ ಮೊದಲಾದ ಧೃತರಾಷ್ಟ್ರನ ಮಕ್ಕಳು ಕೂಡ ಬೇಗನೇ ಐದು ಐದು ನಿಶಿತ ಶರಗಳಿಂದ ಅರ್ಜುನ ಮತ್ತು ಭೀಮಸೇನರನ್ನು ಹೊಡೆದರು. ಅಲ್ಲಿ ರಥಿಗಳಲ್ಲಿ ಶ್ರೇಷ್ಠರಾದ ಆ ಇಬ್ಬರು ಕೌಂತೇಯ ಭರತರ್ಷಭರೂ ತ್ರಿಗರ್ತರ ಮಹಾಬಲವನ್ನು ಪೀಡಿಸುತ್ತಿದ್ದರು. ಸುಶರ್ಮನೂ ಕೂಡ ಪಾರ್ಥನನ್ನು ಅನೇಕ ರಾಯಸಗಳಿಂದ ಹೊಡೆದು ನಭಸ್ತಲವನ್ನೂ ಮೊಳಗಿಸುತ್ತಾ ಮಹಾ ಕೂಗನ್ನು ಕೂಗಿದನು. ಅನ್ಯ ಶೂರ ರಥಿಗಳೂ ಭೀಮಸೇನ-ಧನಂಜಯರನ್ನು ರುಕ್ಮಪುಂಖ, ತೀಕ್ಷ್ಣವಾದ, ನಿಶಿತ ಬಾಣಗಳಿಂದ ಹೊಡೆದರು.
ಆ ರಥಿಗಳ ಮಧ್ಯೆ ರಥಿಗಳಲ್ಲಿ ಶ್ರೇಷ್ಠರಾದ, ರಥೋದಾರರಾದ, ಚಿತ್ರರೂಪರಾದ ಕೌಂತೇಯರಿಬ್ಬರೂ ಗೋವುಗಳ ಮಧ್ಯೆ ಬಲೋತ್ಕಟ ಸಿಂಹಗಳಂತೆ ಆಸೆತೋರಿಸಿ ಆಟವಾಡುತ್ತಿದ್ದರು. ಆ ಇಬ್ಬರು ವೀರರು ರಣದಲ್ಲಿ ಅನೇಕ ವೀರರ ಧನುಸ್ಸುಗಳನ್ನೂ ಶಿರಗಳನ್ನೂ ತುಂಡರಿಸಿ, ನೂರಾರು ನರರ ಶಿರಗಳನ್ನು ಕಡಿದುರುಳಿಸಿದರು. ಆ ಮಹಾಯುದ್ಧದಲ್ಲಿ ಅನೇಕ ರಥಗಳು ತುಂದವು. ನೂರಾರು ಕುದುರೆಗಳು ಹತವಾದವು. ಗಜಾರೋಹರೊಂದಿಗೆ ಗಜಗಳು ನೆಲಕ್ಕುರುಳಿದವು. ಅನೇಕ ರಥಿಗಳು, ಅಶ್ವಾರೋಹಿಗಳು ಕೊಲ್ಲಲ್ಪಟ್ಟು ಅಲ್ಲಲ್ಲಿ ಎಲ್ಲ ಕಡೆ ಬಿದ್ದಿರುವುದು ಕಂಡಿತು. ಹತರಾದ ಗಜ ಪದಾತಿಗಳಿಂದ, ಸಂಹರಿಸಲ್ಪಟ್ಟ ಕುದುರೆಗಳ ಸಮೂಹಗಳಿಂದ, ಭಗ್ನವಾಗಿದ್ದ ಅನೇಕ ರಥಗಳಿಂದ ಮೇದಿನಿಯು ತುಂಬಿಹೋಗಿತ್ತು. ಹರಿದು ಕೆಳಗೆ ಬಿದ್ದಿದ್ದ ಅನೇಕ ಬಣ್ಣಗಳ ಧ್ವಜಗಳಿಂದ, ಚತ್ರಗಳಿಂದ, ಅಂಕುಶಗಳಿಂದ, ಪರಿಸ್ತೋಮಗಳಿಂದ, ಚಿನ್ನದ ಕೇಯೂರ-ಅಂಗದ- ಹಾರಗಳಿಂದ, ಉಷ್ಣೀಷ-ಅಪವಿದ್ಧಗಳಿಂದ, ಚಾಮರ-ವ್ಯಜನಗಳಿಂದ ಅಲ್ಲಲ್ಲಿ ಬಿದ್ದಿದ್ದ ನರೇಂದ್ರರ ತುಂಡಾದ ಬಾಹುಗಳಿಂದ, ಹೊಟ್ಟೆಗಳಳಿಂದ, ತೊಡೆಗಳಿಂದ ಮೇದಿನಿಯು ಹರಡಿ ಹೋಗಿತ್ತು.
ಭೀಮಾರ್ಜುನರ ಸಮಾಗಮವನ್ನು ನೋಡಿ ಧೃತರಾಷ್ಟ್ರನ ಪುತ್ರರಾದರೋ ಮಹಾಭಯದಿಂದ ಗಾಂಗೇಯನ ರಥದ ಹಿಂದೆ ಹೋಗಿ ಅಡಗಿಕೊಂಡರು. ಕೃಪ, ಕೃತವರ್ಮ, ಸೈಂಧವ ಜಯದ್ರಥ, ಅವಂತಿಯ ವಿಂದಾನುವಿಂದರು ಹಿಮ್ಮೆಟ್ಟಲಿಲ್ಲ. ಆಗ ಮಹೇಷ್ವಾಸ ಭೀಮ ಮತ್ತು ಮಹಾರಥ ಫಲ್ಗುನರು ಘೋರವಾದ ಕೌರವರ ಸೇನೆಯನ್ನು ರಣದಲ್ಲಿ ನಾಶಗೊಳಿಸತೊಡಗಿದರು. ಆಗ ತಕ್ಷಣವೇ ರಾಜರು ಹತ್ತುಸಾವಿರ ಲಕ್ಷಗಟ್ಟಲೆ ಬಾಣಗಳನ್ನು ಧನಂಜಯನ ರಥದಮೇಲೆ ಸುರಿದರು. ಆ ಶರಜಾಲಗಳನ್ನು ತಡೆದು ಪಾರ್ಥನು ಸೇರಿರುವ ಮಹಾರಥರನ್ನು ಒಟ್ಟಿಗೇ ಮೃತ್ಯುವಿಗೆ ಕಳುಹಿಸಿದನು. ಆಡುತ್ತಿರುವಂತೆ ಮಹಾರಥ ಶಲ್ಯನು ಕ್ರುದ್ಧನಾಗಿ ಉರಸಿ, ಭಲ್ಲ ಮತ್ತು ಸನ್ನತಪರ್ವಗಳಿಂದ ಜಿಷ್ಣುವನ್ನು ಹೊಡೆದು ಗಾಯಗೊಳಿಸಿದನು. ಪಾರ್ಥನು ಐದು ಬಾಣಗಳಿಂದ ಅವನ ಧನುಸ್ಸನ್ನು ಮತ್ತು ಹಸ್ತಾವಾಪವನ್ನು ಕತ್ತರಿಸಿ, ತೀಕ್ಷ್ಣವಾದ ಸಾಯಕಗಳಿಂದ ಜೋರಾಗಿ ಅವನ ಮರ್ಮಗಳಿಗೆ ಹೊಡೆದನು. ಮದ್ರೇಶ್ವರನು ಇನ್ನೊಂದು ಭಾರಸಾಧನ ಧನುಸ್ಸನ್ನು ಎತ್ತಿಕೊಂಡು ರೋಷಿತನಾಗಿ ಮೂರು ಶರಗಳಿಂದ ಜಿಷ್ಣುವನ್ನೂ, ಐದರಿಂದ ವಾಸುದೇವನನ್ನೂ, ಒಂಭತ್ತು ಬಾಣಗಳಿಂದ ಭೀಮಸೇನನ ಭುಜ-ತೊಡೆಗಳಿಗೆ ಹೊಡೆದನು.
ಆಗ ಮಹಾರಥ ದ್ರೋಣ-ಮಾಗಧರು ದುರ್ಯೋಧನನ್ನೊಡಗೂಡಿ ಎಲ್ಲಿ ಮಹಾರಥರಾದ ಪಾರ್ಥ ಮತ್ತು ಪಾಂಡವ ಭೀಮಸೇನರು ಕೌರವ ಮಹಾಸೇನೆಯನ್ನು ಸಂಹರಿಸುತ್ತಿರುವ ಪ್ರದೇಶಕ್ಕೆ ಬಂದರು. ಯುವಕ ಜಯತ್ಸೇನನು ಭೀಮಾಯುಧ ಭೀಮನನ್ನು ಎಂಟು ನಿಶಿತ ಬಾಣಗಳಿಂದ ಹೊಡೆದನು. ಅವನನ್ನು ಭೀಮನು ಹತ್ತು ಭಲ್ಲಗಳಿಂದ ಹೊಡೆದು ಪುನಃ ಏಳರಿಂದ ಹೊಡೆದನು. ಮತ್ತು ಅವನ ಸಾರಥಿಯನ್ನು ಭಲ್ಲದಿಂದ ಹೊಡೆದು ರಥನೀಡದಿಂದ ಉರುಳಿಸಿದನು. ಉದ್ಭ್ರಾಂತ ಕುದುರೆಗಳು ಎಲ್ಲಕಡೆ ಓಡುತ್ತಾ ಎಲ್ಲ ಸೈನ್ಯಗಳು ನೋಡುತ್ತಿದ್ದಂತೆ ಮಾಗಧನನ್ನು ಎತ್ತಿಕೊಂಡು ಹೋದವು. ದ್ರೋಣನು ಅಂತರವನ್ನು ಪಡೆದು ಭೀಮಸೇನನನ್ನು ಅರವತ್ತೈದು ಆಯಸಗಳ ಚೆನ್ನಾಗಿ ಹರಿತಮಾಡಿದ ಶಿಲೀಮುಖ ಬಾಣಗಳಿಂದ ಹೊಡೆದನು. ಪಿತೃಸಮ ಗುರುವನ್ನು ಸಮರಶ್ಲಾಘೀ ಭೀಮನು ಒಂಭತ್ತು ಭಲ್ಲೆಗಳಿಂದ ಮತ್ತು ನಂತರ ಅರವತ್ತರಿಂದ ಹೊಡೆದನು. ಅರ್ಜುನನಾದರೋ ಸುಶರ್ಮನನ್ನು ಅನೇಕ ಆಯಸಗಳಿಂದ ಹೊಡೆದು ಗಾಳಿಯು ದೊಡ್ಡ ದೊಡ್ಡ ಮೋಡಗಳನ್ನು ಹೇಗೋ ಹಾಗೆ ಅವನ ಸೇನೆಯನ್ನು ಚದುರಿಸಿದನು. ಆಗ ಭೀಷ್ಮ, ಸೌಬಲ ಮತ್ತು ಬೃಹದ್ಬಲರು ಭೀಮಸೇನ-ಧನಂಜಯರನ್ನು ಧಾವಿಸಿ ಎದುರಿಸಿದರು. ಬಾಯಿಕಳೆದ ಅಂತಕನಿಂತಿದ್ದ ಭೀಷ್ಮನನ್ನು ಪಾಂಡವ ಶೂರರೂ ಪಾರ್ಷತ ಧೃಷ್ಟದ್ಯುಮ್ನನೂ ಎದುರಿಸಿದರು. ಶಿಖಂಡಿಯಾದರೋ ಸಂಹೃಷ್ಟನಾಗಿ ಭಯವನ್ನು ತ್ಯಜಿಸಿ ಭಾರತರ ಪಿತಾಮಹ ಯತವ್ರತನನ್ನು ಸಮೀಪಿಸಿ ಎದುರಿಸಿದನು. ಯುಧಿಷ್ಠಿರ ಪ್ರಮುಖರಾದ ಪಾರ್ಥರು ಸೃಂಜಯರೊಡನೆ ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎದರಿಸಿ ಯದ್ಧಮಾಡಿದರು. ಹಾಗೆಯೇ ಕೌರವರೆಲ್ಲರೂ ಯತವ್ರತನನ್ನು ಮುಂದಿರಿಸಿಕೊಂಡು ಶಿಖಂಡಿಪ್ರಮುಖ ಪಾರ್ಥರೊಡನೆ ಯುದ್ಧಮಾಡಿದರು. ಆಗ ಅಲ್ಲಿ ಭೀಷ್ಮನ ವಿಜಯಕ್ಕಾಗಿ ಪಾಂಡುಸುತರೊಂದಿಗೆ ಕೌರವರ ಭಯಾವಹ ಯುದ್ಧವು ನಡೆಯಿತು. ಭೀಷ್ಮನು ಕೌರವರ ಪಣವಾದನು. ಏಕೆಂದರೆ ಅಲ್ಲಿ ವಿಜಯ ಅಥವ ಸೋಲಿನ ದ್ಯೂತವು ನಡೆದಿತ್ತು.
ಧೃಷ್ಟದ್ಯುಮ್ನನು ಸರ್ವ ಸೇನೆಗಳನ್ನೂ “ನರಸತ್ತಮರೇ! ಗಾಂಗೇಯನನ್ನು ಆಕ್ರಮಿಸಿ! ಭಯಪಡಬೇಡಿ!” ಎಂದು ಹುರಿದುಂಬಿಸಿದನು. ಸೇನಾಪತಿಯ ಮಾತನ್ನು ಕೇಳಿ ತಕ್ಷಣವೇ ಪಾಂಡವರ ಸೇನೆಯು ಪ್ರಾಣವನ್ನೂ ತೊರೆದು ಭೀಷ್ಮನ ಮೇಲೆರಗಿತು. ರಥಿಗಳಲ್ಲಿ ಶ್ರೇಷ್ಠ ಭೀಷ್ಮನೂ ಕೂಡ ಮೇಲೆ ಬೀಳುತ್ತಿರುವ ಆ ಸೇನೆಯನ್ನು ಮಹಾಸಾಗರವನ್ನು ಖಂಡವು ಹೇಗೋ ಹಾಗೆ ತಡೆ ಹಿಡಿದನು.
ಭೀಷ್ಮನು ಯುಧಿಷ್ಠಿರನಿಗೆ ತನ್ನನ್ನು ವಧಿಸಲು ಆದೇಶವಿತ್ತುದುದು
ಅನುದಿನವೂ ಕಿರೀಟಿಯು ಕೌರವ ಮಹಾರಥರನ್ನು ಪರಮಾಸ್ತ್ರಗಳಿಂದ ಪರಲೋಕಕ್ಕ್ಕೆ ಕಳುಹಿಸುತ್ತಿದ್ದನು. ಕೌರವ್ಯ ಸಮಿತಿಂಜಯ ಭೀಷ್ಮನೂ ಕೂಡ ಪ್ರತಿಜ್ಞೆಮಾಡಿದಂತೆ ಸತತವಾಗಿ ಪಾಂಡವರ ಸೇನಾನಾಶವನ್ನು ಮಾಡಿದನು. ಕುರುಗಳ ಸಹಿತ ಯುದ್ಧಮಾಡುತ್ತಿರುವ ಮಹಾರಥ ಭೀಷ್ಮ ಮತ್ತು ಪಾಂಚಾಲರನ್ನು ಸೇರಿ ಯುದ್ಧಮಾಡುತ್ತಿರುವ ಅರ್ಜುನನ್ನು ನೋಡಿ ಜನರು ಸಂಶಯಪಟ್ಟರು. ಆ ಹತ್ತನೆಯ ದಿವಸವಾದರೋ ಭೀಷ್ಮಾರ್ಜುನರ ಸಮಾಗಮದಲ್ಲಿ ಸತತವಾದ ಮಹಾರೌದ್ರ ಸೇನೆಗಳ ವಿನಾಶವು ನಡೆಯಿತು. ಪರಂತಪ ಪರಮಾಸ್ತ್ರವಿದು ಭೀಷ್ಮ ಶಾಂತನವನು ಹತ್ತು ಸಾವಿರಕ್ಕೂ ಹೆಚ್ಚು ಯೋಧರನ್ನು ಸಂಹರಿಸಿದನು. ಕೊನೆಯವರೆಗೂ ಅವರ ನಾಮ ಗೋತ್ರಗಳು ತಿಳಿಯದೇ ಇದ್ದ, ಪಲಾಯನ ಮಾಡದೇ ಇದ್ದ ಶೂರರು ಭೀಷ್ಮನಿಂದ ಅಲ್ಲಿ ಹತರಾದರು. ಹತ್ತನೆಯ ದಿವಸ ಧರ್ಮಾತ್ಮಾ ಪರಂತಪ ಭೀಷ್ಮನು ಪಾಂಡವ ವಾಹಿನಿಯನ್ನು ಪರಿತಪಿಸಿ ಕೊನೆಗೆ ತನ್ನ ಜೀವಿತದಿಂದ ನಿರ್ವೇದಹೊಂದಿದನು. ರಣದಲ್ಲಿ ಹೋರಾಡುತ್ತಿರುವಾಗ ಬೇಗನೆ ತನ್ನ ವಧೆಯಾಗಬೇಕೆಂದು ಇಚ್ಛಿಸಿ, ಮಾನವಶ್ರೇಷ್ಠರನ್ನು ಇನ್ನು ಕೊಲ್ಲಬಾರದೆಂದು ಆಲೋಚಿಸಿ ಮಹಾಬಾಹು ದೇವವ್ರತನು ಸಮೀಪದಲ್ಲಿದ್ದ ಪಾಂಡವನಿಗೆ ಹೇಳಿದನು: “ಯುಧಿಷ್ಠಿರ! ಮಗೂ! ಧರ್ಮವನ್ನೂ ಸ್ವರ್ಗವನ್ನೂ ನೀಡುವ ನನ್ನ ಮಾತುಗಳನ್ನು ಕೇಳು. ಈ ದೇಹದಿಂದ ತುಂಬಾ ನಿರ್ವಿಣ್ಣನಾಗಿದ್ದೇನೆ. ಅನೇಕ ಪ್ರಾಣಿಗಳನ್ನು ರಣದಲ್ಲಿ ಕೊಲ್ಲುವುದರಲ್ಲಿಯೇ ನನ್ನ ಕಾಲವು ಕಳೆದು ಹೋಯಿತು. ಆದುದರಿಂದ ನನಗೆ ಪ್ರಿಯವಾದುದನ್ನು ಮಾಡಲು ಬಯಸಿದರೆ ಪಾರ್ಥನನ್ನು, ಪಾಂಚಾಲರನ್ನು ಮತ್ತು ಸೃಂಜಯರನ್ನು ಮುಂದಿಟ್ಟುಕೊಂಡು ನನ್ನ ವಧೆಗೆ ಪ್ರಯತ್ನ ಮಾಡು.”
ಅವನ ಆ ಅಭಿಪ್ರಾಯವನ್ನು ತಿಳಿದುಕೊಂಡು ಸತ್ಯದರ್ಶನ ಪಾಂಡವನು ಸೃಂಜಯರೊಡಗೂಡಿ ಸಂಗ್ರಾಮದಲ್ಲಿ ಭೀಷ್ಮನನ್ನು ಎದುರಿಸಿದನು. ಭೀಷ್ಮನ ಆ ಮಾತನ್ನು ಕೇಳಿ ಧೃಷ್ಟದ್ಯುಮ್ನ ಮತ್ತು ಪಾಂಡವ ಯುಧಿಷ್ಠಿರರು ತಮ್ಮ ಚತುರ್ಬಲವನ್ನು ಪ್ರಚೋದಿಸಿದರು: “ಮುನ್ನುಗ್ಗಿ ಭೀಷ್ಮನೊಂದಿಗೆ ಯುದ್ಧಮಾಡಿ! ಸತ್ಯಸಂಧ ರಿಪುಜಿಷ್ಣು ಜಿಷ್ಣುವಿನಂತೆ ರಕ್ಷಿತರಾಗಿ ಸಂಯುಗದಲ್ಲಿ ವಿಜಯಿಗಳಾಗಿ! ಈ ವಾಹಿನೀಪತಿ ಮಹೇಷ್ವಾಸ ಪಾರ್ಷತನೂ ಭೀಮಸೇನನೂ ಸಮರದಲ್ಲಿ ನಿಮ್ಮನ್ನು ನಿಶ್ಚಯವಾಗಿಯೂ ಪಾಲಿಸುತ್ತಾರೆ. ಭೀಷ್ಮನಿಗೆ ಸ್ವಲ್ಪವೂ ಹೆದರದೇ ಕರ್ತವ್ಯವೆಂದು ಯುದ್ಧಮಾಡಿ. ಶಿಖಂಡಿಯನ್ನು ಮುಂದಿಟ್ಟುಕೊಂಡು ಖಂಡಿತವಾಗಿಯೂ ಭೀಷ್ಮನನ್ನು ಜಯಿಸುತ್ತೇವೆ!”
ಹೀಗೆ ಒಪ್ಪಂದವನ್ನು ಮಾಡಿಕೊಂಡು ಹತ್ತನೆಯ ದಿನ ಪಾಂಡವರು ಬ್ರಹ್ಮಲೋಕಪರರಾಗಿ ಕ್ರೋಧ ಮೂರ್ಛಿತರಾದರು. ಶಿಖಂಡಿಯನ್ನೂ ಪಾಂಡವ ಧನಂಜಯನನ್ನೂ ಮುಂದಿಟ್ಟುಕೊಂಡು ಭೀಷ್ಮನನ್ನು ಕೆಡುವಲು ಪರಮ ಯತ್ನದಲ್ಲಿ ತೊಡಗಿದರು. ಆಗ ದುರ್ಯೋಧನನಿಂದ ನಿರ್ದೇಷಿಸಲ್ಪಟ್ಟ ನಾನಾ ಜನಪದೇಶ್ವರರು ದ್ರೋಣ ಪುತ್ರನ ಸಹಾಯದಿಂದ ಮಹಾಬಲಶಾಲಿ ಸೇನೆಗಳೊಂದಿಗೆ, ಬಲವಾನ್ ದುಃಶಾಸನ ಮತ್ತು ಎಲ್ಲ ಸಹೋದರರೊಂದಿಗೆ ಸಮರದ ಮಧ್ಯದಲ್ಲಿದ್ದ ಭೀಷ್ಮನನ್ನು ರಕ್ಷಿಸುವುದರಲ್ಲಿ ತೊಡಗಿದರು. ಆಗ ಕೌರವರ ಶೂರರು ಯತವ್ರತನನ್ನು ಮುಂದಿರಿಸಿಕೊಂಡು ಶಿಖಂಡಿಪ್ರಮುಖರಾದ ಪಾರ್ಥರನ್ನು ಎದುರಿಸಿ ಯುದ್ಧಮಾಡಿದರು.
ಚೇದಿ ಮತ್ತು ಪಾಂಚಾಲರನ್ನು ಒಡಗೂಡಿ, ಶಿಖಂಡಿಯನ್ನು ಮುಂದಿಟ್ಟುಕೊಂಡು ವಾನರಧ್ವಜನು ಶಾಂತನವ ಭೀಷ್ಮನಲ್ಲಿಗೆ ಬಂದನು. ದ್ರೋಣಪುತ್ರನು ಶಿನಿಯನ್ನು, ಧೃಷ್ಟಕೇತುವ ಪೌರವನನ್ನು, ಯುಧಾಮನ್ಯುವು ದುರ್ಯೋಧನನೊಂದಿಗೆ ಯುದ್ಧಮಾಡಿದರು. ಸೇನೆಗಳೊಂದಿಗೆ ಪರಂತಪ ವಿರಾಟನು ವೃದ್ದಕ್ಷತ್ರನ ಮಗ ಜಯದ್ರಥನನ್ನು ಎದುರಿಸಿದನು. ಸೇನೆಯೊಡನಿದ್ದ ಮಹೇಷ್ವಾಸ ಮದ್ರರಾಜನನ್ನು ಯುಧಿಷ್ಠಿರ ಮತ್ತು ಭೀಮಸೇನನು ಗಜಸೇನೆಗಳನ್ನು ಎದುರಿಸಿದರು. ದೂರಸರಿಸಲು ಅಸಾಧ್ಯನಾದ, ತಡೆಯಲು ಅಸಾಧ್ಯನಾದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನೊಂದಿಗೆ ಯದ್ಧಮಾಡಲು ಸೋಮಕರೊಂದಿಗೆ ಪಾಂಚಾಲ್ಯನು ಬಂದನು. ಸಿಂಹಕೇತು ಅರಿಂದಮ ಬೃಹದ್ಬಲನು ಕರ್ಣಿಕಾರಧ್ವಜ, ರಾಜಪುತ್ರ ಸೌಭದ್ರನನ್ನು ಎದುರಿಸಿದನು. ಶಿಖಂಡಿಯನ್ನು ಮತ್ತು ಪಾಂಡವ ಧನಂಜಯನನ್ನು ಕೊಲ್ಲಲು ಧೃತರಾಷ್ಟ್ರನ ಪುತ್ರರು ರಾಜರೊಂದಿಗೆ ಅವರ ಸಮೀಪ ಬಂದರು. ಅತಿ ಮಹಾಭಯಂಕರ ಯುದ್ಧದಲ್ಲಿ ಪರಾಕ್ರಮದಿಂದ ಮೇಲೆ ಬೀಳುತ್ತಿದ್ದ ಸೇನೆಗಳಿಂದ ಮೇದಿನಿಯು ಕಂಪಿಸಿತು. ರಣದಲ್ಲಿ ಶಾಂತನವನನ್ನು ನೋಡಿ ಕೌರವರ ಸೇನೆಗಳು ಮತ್ತು ಶತ್ರುಗಳ ಸೇನೆಗಳ ನಡುವೆ ಯುದ್ಧವು ನಡೆಯಿತು. ಆಗ ಅನ್ಯೋನ್ಯರ ಮೇಲೆ ಆಕ್ರಮಿಸಿ ಬರಲು ಪ್ರಯತ್ನಿಸುತ್ತಿದ್ದ ಅವರ ಮಹಾ ಶಬ್ಧವು ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿತು. ಶಂಖ-ದುಂದುಭಿಗಳ ಘೋಷ, ಆನೆಗಳ ಘೀಳಿಡುವಿಕೆ ಮತ್ತು ಸೈನ್ಯಗಳ ಸಿಂಹನಾದಗಳು ದಾರುಣವೆನಿಸಿದವು. ಎಲ್ಲ ನರೇಂದ್ರರ ಚಂದ್ರಾರ್ಕಸದೃಶ ಪ್ರಭೆಯಿದ್ದ ವೀರ ಅಂಗದ ಕಿರೀಟಗಳು ನಿಷ್ಪ್ರಭೆಗೊಂಡವು. ಮೇಲೆದ್ದ ಧೂಳು ಶಸ್ತ್ರಗಳ ವಿದ್ಯುತ್ತಿನಿಂದ ಆವೃತವಾಗಿ, ಧನುಸ್ಸುಗಳ ನಿರ್ಘೋಷಗಳೊಂದಿಗೆ ದಾರುಣವಾದವು. ಎರಡೂ ಸೇನೆಗಳಲ್ಲಿ ಬಾಣ, ಶಂಖ, ಪ್ರಣಾದ ಮತ್ತು ಭೇರಿಗಳ ಮಹಾಸ್ವನಗಳು ರಥಘೋಷದೊಂದಿಗೆ ಸೇರಿಕೊಂಡವು. ಪ್ರಾಸ-ಶಕ್ತಿ-ಋಷ್ಟಿ ಸಂಘಗಳಿಂದ ಮತ್ತು ಬಾಣಗಳ ರಾಶಿಯಿಂದ ಸೇರಿ ಸೇನೆಗಳಲ್ಲಿ ಆಕಾಶದಲ್ಲಿ ಬೆಳಕೇ ಇಲ್ಲದಂತಾಯಿತು. ಮಹಾಹವದಲ್ಲಿ ರಥಿಕರು ಮತ್ತು ಅಶ್ವಾರೋಹಿಗಳು ಅನ್ಯೋನ್ಯರನ್ನು ಯುದ್ಧಮಾಡುತ್ತಿದ್ದರು. ಆನೆಗಳು ಆನೆಗಳನ್ನು ಮತ್ತು ಪದಾತಿಗಳು ಪದಾತಿಗಳನ್ನು ಸಂಹರಿಸಿದರು. ಮಾಂಸದ ತುಂಡಿಗಾಗಿ ಗಿಡುಗಗಳು ಹೋರಾಡುವಂತೆ ಭೀಷ್ಮನ ಸಲುವಾಗಿ ಪಾಂಡವರೊಂದಿಗೆ ಕುರುಗಳ ಆ ಮಹಾಯುದ್ಧವು ನಡೆಯಿತು. ರಣರಂಗದಲ್ಲಿ ಅನ್ಯೋನ್ಯರನ್ನು ವಧಿಸಲು ಬಯಸಿದ ಅವರೀರ್ವರ ಸಮಾಗಮವು ಘೋರ ಯುದ್ಧವಾಯಿತು.
ಸಂಕುಲ ಯುದ್ಧ
ಪರಾಕ್ರಮಿ ಅಭಿಮನ್ಯುವು ಭೀಷ್ಮನನ್ನು ರಕ್ಷಿಸಲು ಅಪಾರ ಸೇನಾ ಸಮೇತನಾಗಿ ಬಂದ ದುರ್ಯೋಧನನನ್ನು ಎದುರಿಸಿ ಯುದ್ಧಮಾಡಿದನು. ಕ್ರುದ್ಧನಾದ ದುರ್ಯೋಧನನು ಕಾರ್ಷ್ಣಿ ಅಭಿಮನ್ಯುವನ್ನು ಒಂಭತ್ತು ನತಪರ್ವ ಬಾಣಗಳಿಂದ ಮತ್ತು ಪುನಃ ಮೂರು ಶರಗಳಿಂದ ಹೊಡೆದನು. ಸಂಕ್ರುದ್ಧನಾದ ಕಾರ್ಷ್ಣಿಯು ದುರ್ಯೋಧನನ ಮೇಲೆ ಮೃತ್ಯುವಿನ ಸೋದರಿಯಂತೆ ಘೋರವಾಗಿದ್ದ ಶಕ್ತಿಯನ್ನು ಪ್ರಯೋಗಿಸಿದನು. ವೇಗವಾಗಿ ಬೀಳುತ್ತಿದ್ದ ಆ ಘೋರರೂಪಿಯನ್ನು ಮಹಾರಥ ದುರ್ಯೋಧನನು ಕ್ಷುರಪ್ರದಿಂದ ಎರಡಾಗಿ ತುಂಡರಿಸಿದನು. ಆ ಶಕ್ತಿಯು ಬಿದ್ದುದನ್ನು ನೋಡಿದ ಕಾರ್ಷ್ಣಿಯು ಪರಮಕುಪಿತನಾಗಿ ದುರ್ಯೋಧನನ ವಕ್ಷಸ್ಥಲ ಮತ್ತು ಬಾಹುಗಳನ್ನು ಮೂರು ಬಾಣಗಳಿಂದ ಪ್ರಹರಿಸಿದನು. ಪುನಃ ಅವನು ಹತ್ತು ಘೋರ ಶರಗಳಿಂದ ಅಮರ್ಷಣ ದುರ್ಯೋಧನನ ಎದೆಗೆ ಹೊಡೆದನು. ಆ ಯುದ್ಧವು ಘೋರವೂ ಚಿತ್ರರೂಪವೂ ಆಗಿದ್ದು, ನೋಡುವವರಲ್ಲಿ ಪ್ರೀತಿಯನ್ನುಂಟುಮಾಡುತ್ತಿತ್ತು. ಸರ್ವ ಪಾರ್ಥಿವರೂ ಗೌರವಿಸುವಂತಿತ್ತು. ಭೀಷ್ಮನ ನಿಧನ ಮತ್ತು ಪಾರ್ಥನ ವಿಜಯಕ್ಕಾಗಿ ಆ ಸೌಭದ್ರ-ಕುರುಪುಂಗವ ವೀರರಿಬ್ಬರೂ ರಣದಲ್ಲಿ ಹೋರಾಡಿದರು.
ಪರಂತಪ ಬ್ರಾಹ್ಮಣಪುಂಗವ ದ್ರೌಣಿಯು ಕ್ರುದ್ಧನಾಗಿ ರಭಸದಿಂದ ನಾರಾಚಗಳಿಂದ ಸಾತ್ಯಕಿಯನ್ನು ಎದೆಯ ಮೇಲೆ ಹೊಡೆದನು. ಅಮೇಯಾತ್ಮ ಶೈನಿಯೂ ಕೂಡ ಒಂಭತ್ತು ಕಂಕಪತ್ರಿಗಳಿಂದ ಗುರುಪುತ್ರನ ಸರ್ವ ಮರ್ಮಾಂಗಗಳಿಗೂ ಹೊಡೆದನು. ಅಶ್ವತ್ಥಾಮನಾದರೋ ಸಮರದಲ್ಲಿ ವೇಗಶಾಲಿ ಸಾತ್ಯಕಿಯನ್ನು ಒಂಭತ್ತು ಬಾಣಗಳಿಂದ ಹೊಡೆದು ಪುನಃ ಮೂವತ್ತು ಬಾಣಗಳಿಂದ ಅವನ ಎದೆ-ಬಾಹುಗಳನ್ನು ಹೊಡೆದನು. ದ್ರೋಣಪುತ್ರನಿಂದ ಈ ರೀತಿ ಪೆಟ್ಟುತಿಂದ ಮಹೇಷ್ವಾಸ ಮಹಾಯಶಸ್ವಿ ಸಾತ್ವತನು ದ್ರೋಣಪುತ್ರನನ್ನು ಮೂರು ಬಾಣಗಳಿಂದ ಗಾಯಗೊಳಿಸಿದನು.
ಪೌರವನು ಮಹಾರಥ ಮಹೇಷ್ವಾಸ ಧೃಷ್ಟಕೇತುವನ್ನು ಬಹಳ ಶರಗಳಿಂದ ಹೊಡೆದು ಗಾಯಗೊಳಿಸಿದನು. ಹಾಗೆಯೇ ಯುದ್ಧದಲ್ಲಿ ಮಹಾರಥ ಸುಮಹಾಬಲ ಧೃಷ್ಟಕೇತುವು ಪೌರವನನ್ನು ಮೂವತ್ತು ನಿಶಿತ ಬಾಣಗಳಿಂದ ಹೊಡೆದನು. ಮಹಾರಥ ಪೌರವನಾದರೋ ಧೃಷ್ಟಕೇತುವಿನ ಧನುಸ್ಸನ್ನು ತುಂಡರಿಸಿ, ಬಲವತ್ತಾದ ಕೂಗನ್ನು ಕೂಗಿ, ಹತ್ತು ಶರಗಳಿಂದ ಅವನನ್ನು ಹೊಡೆದನು. ಆಗ ಅವನು ಇನ್ನೊಂದು ಕಾರ್ಮುಕವನ್ನು ಎತ್ತಿಕೊಂಡು ಎಪ್ಪತ್ತ್ಮೂರು ಶಿಲೀಮುಖ ಶರಗಳಿಂದ ಪೌರವನನ್ನು ಗಾಯಗೊಳಿಸಿದನು. ಅಲ್ಲಿ ಅವರಿಬ್ಬರು ಮಹೇಷ್ವಾಸರೂ, ಮಹಾಬಲಿಷ್ಟರೂ, ಮಹಾರಥರು ಮಹಾ ಶರವರ್ಷಗಳನ್ನು ಪರಸ್ಪರರ ಮೇಲೆ ಸುರಿಸಿದರು. ಅವರಿಬ್ಬರು ಮಹಾರಥರೂ ಅನ್ಯೋನ್ಯರ ಧನುಸ್ಸುಗಳನ್ನು ಕತ್ತರಿಸಿ, ಕುದುರೆಗಳನ್ನು ಕೊಂದು ವಿರಥರಾಗಿ ಖಡ್ಗಯುದ್ಧದಲ್ಲಿ ತೊಡಗಿದರು. ಅವರಿಬ್ಬರೂ ನೂರು ಚಂದ್ರರ ಮತ್ತು ನೂರು ನಕ್ಷತ್ರಗಳ ಚಿತ್ರಗಳಿಂದ ಕೂಡಿದ, ಎತ್ತಿನ ಚರ್ಮದಿಂದ ಮಾಡಿದ ಗುರಾಣಿಗಳನ್ನೂ ಮಹಾಪ್ರಭೆಯುಳ್ಳ ಖಡ್ಗಗಳನ್ನೂ ಹಿಡಿದಿದ್ದರು. ಮಹಾವನದಲ್ಲಿ ಸಿಂಹಿಯನ್ನು ಕೂಡಲು ಕಾದಾಡುವ ಎರಡು ಸಿಂಹಗಳಂತೆ ಅವರಿಬ್ಬರೂ ವಿಜಯವನ್ನು ಬಯಸಿ ಅನ್ಯೋನ್ಯರಮೇಲೆ ಖಡ್ಗದಿಂದ ಪ್ರಹರಿಸಿದರು. ಮುಂದೆ ಹೋಗುವುದು, ಹಿಂದೆ ಸರಿಯುವುದು, ಮತ್ತು ಮಂಡಲಾಕಾರದಲ್ಲಿ ಸುತ್ತುವುದು ಹೀಗೆ ವಿಚಿತ್ರ ನಡಿಗೆಗಳಿಂದ ತಮ್ಮ ಕೌಶಲಗಳನ್ನು ಪ್ರದರ್ಶಿಸುತ್ತಿದ್ದರು ಮತ್ತು ಪರಸ್ಪರರನ್ನು ಆಹ್ವಾನಿಸುತ್ತಿದ್ದರು. ಪೌರವನು ಸಂಕ್ರುದ್ಧನಾಗಿ ಮಹಾ ಖಡ್ಗದಿಂದ ಧೃಷ್ಟಕೇತುವಿನ ಕಿವಿಯ ಭಾಗಕ್ಕೆ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು. ಚೇದಿರಾಜನೂ ಕೂಡ ಪುರುಷರ್ಷಭ ಪೌರವನನ್ನು ಮಹಾಖಡ್ಗದ ಹರಿತ ಭಾಗದಿಂದ ಕುತ್ತಿಗೆಯ ಮೇಲೆ ಹೊಡೆದನು. ಆ ಮಹಾಹವದಲ್ಲಿ ಅವರಿಬ್ಬರು ಅರಿಂದಮರೂ ಅನ್ಯೋನ್ಯರನ್ನು ಎದುರಿಸಿ ಅನ್ಯೋನ್ಯರನ್ನು ವೇಗವಾಗಿ ಹೊಡೆದು ಕೆಳಗೆ ಬಿದ್ದರು. ಆಗ ಧೃತರಾಷ್ಟ್ರನ ಮಗ ಜಯತ್ಸೇನನು ಪೌರವನನ್ನು ತನ್ನ ರಥದಮೇಲೆ ಕುಳ್ಳಿರಿಸಿಕೊಂಡು ರಣರಂಗದ ಆಚೆ ಕೊಂಡೊಯ್ದನು. ಧೃಷ್ಟಕೇತುವನ್ನು ಸಮರದಲ್ಲಿ ಪರಂತಪ, ಪ್ರತಾಪವಾನ್, ಮಾದ್ರೀಪುತ್ರ ಸಹದೇವನು ರಣದಿಂದ ಆಚೆ ಕರೆದುಕೊಂಡು ಹೋದನು.
ಚಿತ್ರಸೇನನು ಸುಶರ್ಮನನ್ನು ಒಂಭತ್ತು ಆಶುಗಗಳಿಂದ ಹೊಡೆದು, ಪುನಃ ಅರವತ್ತು ಬಾಣಗಳಿಂದಲೂ ಮತ್ತೆ ಪುನಃ ಎಂಭತ್ತು ಬಾಣಗಳಿಂದಲೂ ಹೊಡೆದನು. ಆದರೆ ಸುಶರ್ಮನು ಕ್ರುದ್ಧನಾಗಿ ಧೃತರಾಷ್ಟ್ರನ ಮಗನನ್ನು ಇಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು. ಚಿತ್ರಸೇನನು ಕ್ರುದ್ಧನಾಗಿ ಮೂವತ್ತು ನತಪರ್ವಗಳಿಂದ ಅವನನ್ನು ಹೊಡೆದನು. ಅವನೂ ಕೂಡ ಯಶಸ್ಸು ಮಾನಗಳನ್ನು ಹೆಚ್ಚಿಸುತ್ತಾ ಅವನನ್ನು ತಿರುಗಿ ಹೊಡೆದನು.
ರಾಜಪುತ್ರ ಸೌಭದ್ರಿಯು ಬೃಹದ್ಬಲನನ್ನು ಎದುರಿಸಿದನು. ಕೋಸಲೇಂದ್ರನು ಆರ್ಜುನಿಯನ್ನು ಐದು ಆಯಸಗಳಿಂದ ಗಾಯಗೊಳಿಸಿದನು. ಪುನಃ ಅವನನ್ನು ಇಪ್ಪತ್ತು ಸನ್ನತಪರ್ವ ಶರಗಳಿಂದ ಹೊಡೆದನು. ಸೌಭದ್ರಿಯು ಬೃಹದ್ಬಲನನ್ನು ಒಂಭತ್ತು ಆಯಸಗಳಿಂದ ಹೊಡೆದನು ಮತ್ತು ನಡುಗದೇ ಪುನಃ ಪುನಃ ಹೊಡೆದನು. ಫಾಲ್ಗುಣಿಯು ಪುನಃ ಕೌಸಲ್ಯನ ಧನುವನ್ನು ತುಂಡುಮಾಡಿ ಮೂವತ್ತು ಕಂಕಪತ್ರಿ ಶರಗಳಿಂದ ಅವನನ್ನು ಗಾಯಗೊಳಿಸಿದನು. ರಾಜಪುತ್ರ ಬೃಹದ್ಬಲನು ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ಕ್ರುದ್ಧನಾಗಿ ಫಾಲ್ಗುನಿಯನ್ನು ಬಹಳ ಶರಗಳಿಂದ ಹೊಡೆದನು. ಭೀಷ್ಮನಿಗಾಗಿ ನಡೆದ ಆ ಕ್ರೋಧ ಚಿತ್ರಯೋಧಿಗಳ ಮಹಾಯುದ್ಧ ಸಮರವು ದೇವಾಸುರರ ಯುದ್ಧದಲ್ಲಿ ಮಯ-ವಾಸವರ ನಡುವೆ ನಡೆದಂತೆ ನಡೆಯಿತು.
ವಜ್ರಪಾಣಿ ಶಕ್ರನು ಉತ್ತಮ ಪರ್ವತಗಳನ್ನು ಸೀಳುತ್ತಿರುವಂತೆ ಭೀಮಸೇನನು ಗಜಸೇನೆಯೊಡನೆ ಯುದ್ಧಮಾಡುತ್ತಾ ಬಹುವಾಗಿ ಶೋಭಿಸಿದನು. ಭೀಮನಿಂದ ವಧಿಸಲ್ಪಟ್ಟ ಗಿರಿಸನ್ನಿಭ ಮಾತಂಗಗಳು ಚೀತ್ಕಾರಗಳಿಂದ ಭೂಮಿಯಲ್ಲಿ ಪ್ರತಿಧ್ವನಿಗಳನ್ನುಂಟುಮಾಡುತ್ತಾ ಕೆಳಗೆ ಬೀಳುತ್ತಿದ್ದವು. ದೊಡ್ಡದಾದ ಇದ್ದಲಿನ ರಾಶಿಯಂತಿದ್ದ ಪರ್ವತಾಕಾರದ ಆನೆಗಳು ಭೂಮಿಯ ಮೇಲೆ ಬಿದ್ದು ರಣರಂಗವು ಪರ್ವತಗಳಿಂದ ವ್ಯಾಪ್ಯವಾಗಿದೆಯೋ ಎಂಬಂತೆ ತೋರುತ್ತಿತ್ತು.
ಮಹೇಷ್ವಾಸ ಯುಧಿಷ್ಠಿರನು ಮಹಾ ಸೇನೆಯಿಂದ ರಕ್ಷಿತನಾಗಿ ಬಾಣಗಳಿಂದ ಮದ್ರರಾಜನನ್ನು ಪೀಡಿಸುತ್ತಿದ್ದನು. ಭೀಷ್ಮನಿಗಾಗಿ ಸಂರಬ್ಧನಾಗಿ ಪರಾಕ್ರಮೀ ಮದ್ರೇಶ್ವರನು ಮಹಾರಥ ಧರ್ಮಪುತ್ರನನ್ನು ಪೀಡಿಸಿದನು. ರಾಜಾ ಸೈಂಧವನು ವಿರಾಟನನ್ನು ಒಂಭತ್ತು ಸನ್ನತಪರ್ವಗಳಿಂದ ಹೊಡೆದು ಪುನಃ ಮೂರು ತೀಕ್ಷ್ಣ ಸಾಯಕಗಳಿಂದ ಗಾಯಗೊಳಿಸಿದನು. ವಿರಾಟನೂ ಕೂಡ ಮೂವತ್ತು ನಿಶಿತಬಾಣಗಳಿಂದ ಸೈಂಧವನ ಎದೆಗೆ ಹೊಡೆದನು. ಚಿತ್ರ ಧನುಸ್ಸುಗಳನ್ನೂ, ಚಿತ್ರ ಕವಚಗಳನ್ನೂ, ಚಿತ್ರ ಆಯುಧ ಧ್ವಜಗಳನ್ನೂ ಪಡೆದಿದ್ದ ಆ ಚಿತ್ರರೂಪೀ ಮತ್ಸ್ಯ-ಸೈಂಧವರು ಸಂಗ್ರಾಮದಲ್ಲಿ ರಾಜಿಸಿದರು. ದ್ರೋಣನು ಪಾಂಚಾಲಪುತ್ರನನ್ನು ಎದುರಿಸಿ ಸನ್ನತಪರ್ವ ಶರಗಳಿಂದ ಮಹಾಯುದ್ಧವನ್ನು ನಡೆಸಿದನು. ಆಗ ದ್ರೋಣನು ಪಾರ್ಷತನ ಮಹಾಧನುಸ್ಸನ್ನು ತುಂಡುಮಾಡಿ ಪಾರ್ಷತನ್ನು ಐವತ್ತು ಬಾಣಗಳಿಂದ ಹೊಡೆದನು. ಪರವೀರಹ ಪಾರ್ಷತನು ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ದ್ರೋಣನಮೇಲೆ ಯುದ್ಧದಲ್ಲಿ ಹರಿತ ಸಾಯಕಗಳನ್ನು ಪ್ರಯೋಗಿಸಿದನು. ಆ ಶರಗಳನ್ನು ಶರಸಂಘಗಳಿಂದ ತಡೆದು ಮಹಾರಥ ದ್ರೋಣನು ದ್ರುಪದಪುತ್ರನನ್ನು ಐದು ಸಾಯಕಗಳಿಂದ ಹೊಡೆದನು. ಅದರಿಂದ ಕ್ರುದ್ಧನಾದ ಪರವೀರಹ ಪಾರ್ಷತನು ರಣದಲ್ಲಿ ದ್ರೋಣನ ಮೇಲೆ ಯಮದಂಡದಂತಿರುವ ಗದೆಯನ್ನು ಎಸೆದನು. ಬೀಳುತ್ತಿರುವ ಆ ಹೇಮಪಟ್ಟವಿಭೂಷಿತ ಗದೆಯನ್ನು ಕೂಡಲೇ ದ್ರೋಣನು ಐವತ್ತು ಬಾಣಗಳಿಂದ ತಡೆದನು. ದ್ರೋಣದ ಚಾಪದಿಂದ ಹೊರಟ ಆ ಶರಗಳಿಂದ ಅದು ಅನೇಕ ಚೂರುಗಳಾಗಿ ಒಡೆದು ನೆಲದ ಮೇಲೆ ಉದುರಿ ಬಿದ್ದಿತು. ಗದೆಯು ನಾಶವಾದುದನ್ನು ನೋಡಿ ಶತ್ರುಸೂದನ ಪಾರ್ಷತನು ದ್ರೋಣನ ಮೇಲೆ ಸರ್ವಪಾರಶವೀ ಶುಭ ಶಕ್ತಿಯನ್ನು ಎಸೆದನು. ಅದನ್ನು ದ್ರೋಣನು ಒಂಭತ್ತು ಬಾಣಗಳಿಂದ ಯುದ್ಧದಲ್ಲಿ ತುಂಡರಿಸಿದನು ಮತ್ತು ಮಹೇಷ್ವಾಸ ಪಾರ್ಷತನ್ನು ಪೀಡಿಸಿದನು. ಈ ರೀತಿ ಭೀಷ್ಮನಿಗಾಗಿ ಘೋರರೂಪವೂ ಭಯಾನಕವೂ ಆದ ಮಹಾ ಯುದ್ಧವು ದ್ರೋಣ-ಪಾರ್ಷತರ ನಡುವೆ ನಡೆಯಿತು.
ಅರ್ಜುನನು ಗಾಂಗೇಯನನ್ನು ನಿಶಿತ ಶರಗಳಿಂದ ಪೀಡಿಸುತ್ತಾ ವನದಲ್ಲಿ ಮದಿಸಿದ ಸಲಗವು ಇನ್ನೊಂದನ್ನು ಎದುರಿಸುವಂತೆ ಎದುರಿಸಿದನು. ಆಗ ಪ್ರತಾಪವಾನ್ ಭಗದತ್ತನು ಗಂಡಸ್ಥಳದ ಮೂರು ಕಡೆಗಳಿಂದ ಮದೋದಕವನ್ನು ಸುರಿಸುತ್ತಿದ್ದ ಕೊಬ್ಬಿದ ಆನೆಯ ಮೇಲೆ ಕುಳಿತು ಪಾರ್ಥನನ್ನು ಆಕ್ರಮಿಸಿದನು. ಒಮ್ಮೆಲೇ ತನ್ನ ಮೇಲೆ ಬೀಳುತ್ತಿರುವ ಆ ಮಹೇಂದ್ರನ ಐರವಾತದಂತಿರುವ ಆನೆಯನ್ನು ಬೀಭತ್ಸುವು ಪರಮ ಯತ್ನದಿಂದ ಎದುರಿಸಿದನು. ಆಗ ಆನೆಯ ಮೇಲಿದ್ದ ಪ್ರತಾಪವಾನ್ ರಾಜಾ ಭಗದತ್ತನು ಅರ್ಜುನನನ್ನು ಶರವರ್ಷಗಳಿಂದ ತಡೆದನು. ಅರ್ಜುನನಾದರೋ ಬರುತ್ತಿದ್ದ ಆನೆಯನ್ನು ಬೆಳ್ಳಿಯಂತೆ ವಿಮಲವಾಗಿದ್ದ ತೀಕ್ಷ್ಣ ರಾಯಸಗಳಿಂದ ಹೊಡೆದನು. ಕೌಂತೇಯನು ಶಿಖಂಡಿಯನ್ನು “ಭೀಷ್ಮನ ಹತ್ತಿರ ಬಾ! ಬಾ!” ಎಂದು ಪ್ರಜೋದಿಸುತ್ತ “ಅವನನ್ನು ಕೊಲ್ಲು!” ಎಂದನು. ಆಗ ಪ್ರಾಗ್ಜ್ಯೋತಿಷದ ಭಗದತ್ತನು ಪಾಂಡುಪೂರ್ವಜ ಪಾಂಡವನನ್ನು ಬಿಟ್ಟು ಅವಸರದಲ್ಲಿ ದ್ರುಪದನ ರಥದ ಕಡೆ ನಡೆದನು.
ಆಗ ಅರ್ಜುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎದುರಿಸಿದನು. ಕೌರವರ ಶೂರರು ಎಲ್ಲರೂ ಕೂಗುತ್ತಾ ರಭಸದಿಂದ ರಣದಲ್ಲಿ ಧಾವಿಸಿ ಪಾಂಡವನನ್ನು ಎದುರಿಸಿದರು. ಅದು ಅದ್ಭುತವಾಗಿತ್ತು. ಆಗ ಅರ್ಜುನನು ಧೃತರಾಷ್ಟ್ರನ ಪುತ್ರರ ನಾನಾವಿಧದ ಸೇನೆಗಳನ್ನು ಗಾಳಿಯು ಆಕಾಶದಲ್ಲಿರುವ ಮೋಡಗಳನ್ನು ಹೇಗೋ ಹಾಗೆ ಚದುರಿಸಿದನು. ಶಿಖಂಡಿಯಾದರೋ ಅವ್ಯಗ್ರನಾಗಿ ಭರತರ ಪಿತಾಮನನನ್ನು ಬೇಗನೆ ಅನೇಕ ಬಾಣಗಳಿಂದ ಹೊಡೆದನು.
ಪಾರ್ಥನನ್ನು ಅನುಸರಿಸಿ ಬಂದ ಸೋಮಕರನ್ನು ಭೀಷ್ಮನು ಸಂಹರಿಸಿದನು ಮತ್ತು ಆ ಮಹಾರಥನು ಪಾಂಡವರ ಸೈನ್ಯವನ್ನು ತಡೆದನು. ಅವನ ರಥವೇ ಅಗ್ನಿಗಾರವಾಗಿತ್ತು. ಧನುಸ್ಸೇ ಅಗ್ನಿಯ ಜ್ವಾಲೆಯಾಗಿತ್ತು. ಖಡ್ಗ-ಶಕ್ತಿ-ಗದೆಗಳು ಇಂಧನವಾಗಿದ್ದವು. ಶರಸಂಘಗಳು ಮಹಾಜ್ವಾಲೆಯಾಗಿತ್ತು. ಕ್ಷತ್ರಿಯರು ಸಮರದಲ್ಲಿ ದಹಿಸುತ್ತಿದ್ದರು. ಹೇಗೆ ಮಹಾ ಅಗ್ನಿಯು ಗಾಳಿಯೊಡಗೂಡಿ ಒಣಹುಲ್ಲನ್ನು ಸುಟ್ಟುಹಾಕುವುದೋ ಹಾಗೆ ಭೀಷ್ಮನೂ ಕೂಡ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ಬೆಳಗಿದನು. ಮಹಾಯಶ ಭೀಷ್ಮನು ಸಿಂಹಗರ್ಜನೆ ಮಾಡಿ ಸುವರ್ಣಪುಂಖಗಳ ನಿಶಿತ ಸನ್ನತಪರ್ವ ಶರಗಳಿಂದ ದಿಕ್ಕು-ಉಪದಿಕ್ಕುಗಳನ್ನೂ ತುಂಬಿಸಿದನು. ರಥರನ್ನು, ಸವಾರರೊಂದಿಗೆ ಆನೆಗಳನ್ನೂ ಉರುಳಿಸಿ ಆ ರಥಸಮೂಹವನ್ನು ಬೋಳಾದ ತಾಳೆಮರಗಳ ವನದಂತೆ ಮಾಡಿದನು. ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಭೀಷ್ಮನು ಮನುಷ್ಯರು, ರಥಗಳು, ಆನೆಗಳು ಮತ್ತು ಕುದುರೆಗಳು ಇಲ್ಲದಂತೆಯೇ ಮಾಡಿದನು. ಸಿಡಿಲಿನ ಶಬ್ಧದಂತಿದ್ದ ಅವನ ಧನುಸ್ಸಿನ ಶಿಂಜಿನಿಯ ಟೇಂಕಾರವನ್ನು ಕೇಳಿ ಎಲ್ಲೆಡೆಯೂ ಸೈನಿಕರು ಕಂಪಿಸಿದರು. ಭೀಷ್ಮನ ಚಾಪದಿಂದ ಹೊರಟ ಶರಗಳು ಶರೀರಗಳನ್ನು ಚುಚ್ಚದೇ ವ್ಯರ್ಥವಾಗಿ ಬೀಳುತ್ತಿರಲಿಲ್ಲ. ಮನುಷ್ಯರೇ ಇಲ್ಲದಿದ್ದ ರಣದಲ್ಲಿ ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ ರಥಗಳು ಓಡುತ್ತಿರುವುದು ಕಂಡುಬರುತ್ತಿತ್ತು.
ಬಾಯಿಕಳೆದ ಅಂತಕನಂತಿದ್ದ ಭೀಷ್ಮನನ್ನು ಸಂಗ್ರಾಮದಲ್ಲಿ ಎದುರಿಸಿ ಹದಿನಾಲ್ಕು ಸಾವಿರ ಮಹಾರಥ, ಸಮಾಖ್ಯಾತ, ಕುಲಪುತ್ರರು, ತನುವನ್ನೇ ತ್ಯಜಿಸಿ ಬಂದ ಚೇದಿ-ಕಾಶಿ-ಕರೂಷಣರು ಕುದುರೆ-ರಥ-ಆನೆಗಳೊಂದಿಗೆ ಪರಲೋಕಗಳಿಗೆ ತೆರಳಿದರು. ರಣದಲ್ಲಿ ಭೀಷ್ಮನನ್ನು ಎದುರಿಸಿಯೂ ಜೀವವನ್ನು ಉಳಿಸಿಕೊಳ್ಳುತ್ತೇನೆ ಎನ್ನುವ ಯಾವ ಸೋಮಕ ಮಹಾರಥನೂ ಅಲ್ಲಿರಲಿಲ್ಲ.ಭೀಷ್ಮನ ವಿಕ್ರಮವನ್ನು ನೋಡಿ ರಣದಲ್ಲಿದ್ದ ಯೋಧರೆಲ್ಲರನ್ನೂ ಪ್ರೇತರಾಜನ ಪುರದ ಕಡೆಗೆ ಕಳುಹಿಸಿಯಾಯಿತೆಂದು ಜನರು ಅಂದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ವೀರ ಪಾಂಡುಸುತ ಕೃಷ್ಣಸಾರಥಿ ಶ್ವೇತಾಶ್ವನನ್ನು ಮತ್ತು ಅವನಿಂದ ಪಾಲಿತಗೊಂಡ ಅಮಿತೌಜಸ ಪಾಂಚಾಲ್ಯ ಶಿಖಂಡಿಯನ್ನು ಬಿಟ್ಟು ಬೇರೆ ಯಾವ ಮಹಾರಥನೂ ಅವನನ್ನು ಎದುರಿಸಲು ಮುಂದೆ ಬರಲಿಲ್ಲ.
ಶಿಖಂಡಿಯಾದರೋ ರಣದ ಮಹಾಹವದಲ್ಲಿ ಭೀಷ್ಮನ ಬಳಿಹೋಗಿ ಇಪ್ಪತ್ತು ಬಾಣಗಳಿಂದ ಹೊಡೆದನು. ಕೇವಲ ಕಣ್ಣುನೋಟದಿಂದಲೇ ದಹಿಸಿಬಿಡುವನೋ ಎನ್ನುವಂತೆ ಗಾಂಗೇಯನು ಸಿಟ್ಟಿನಿಂದ ಉರಿಯುವ ಕಣ್ಣುಗಳಿಂದ ಶಿಖಂಡಿಯನ್ನು ನೋಡಿದನು. ಅವನ ಸ್ತ್ರೀತ್ವವನ್ನು ನೆನಪಿಸಿಕೊಂಡು ಸರ್ವಲೋಕಗಳೂ ನೋಡುತ್ತಿರಲು ಭೀಷ್ಮನು ಅವನು ಹೊಡೆದರೂ ಅವನನ್ನು ತಿರುಗಿ ಹೊಡೆಯಲಿಲ್ಲ. ಅರ್ಜುನನಾದರೋ ಶಿಖಂಡಿಗೆ ಹೇಳಿದನು: “ತ್ವರೆಮಾಡು! ಪಿತಾಮಹನನ್ನು ಬೇಗನೇ ಕೊಲ್ಲು! ಏನನ್ನು ನೋಡುತ್ತಿದ್ದೀಯೆ? ಮಹಾರಥ ಭೀಷ್ಮನನ್ನು ಕೊಲ್ಲು! ಏಕೆಂದರೆ ನೀನಲ್ಲದೇ ಯುಧಿಷ್ಠಿರನ ಸೇನೆಯಲ್ಲಿ ಪಿತಾಮಹ ಭೀಷ್ಮನೊಡನೆ ಯುದ್ಧಮಾಡಬಲ್ಲ ಬೇರೆ ಅನ್ಯರನ್ನು ನಾನು ಕಾಣೆ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.”
ಪಾರ್ಥನು ಹೀಗೆ ಹೇಳಲು ಶಿಖಂಡಿಯು ನಾನಾವಿಧದ ಶರಗಳಿಂದ ಬೇಗನೇ ಪಿತಾಮಹನನ್ನು ಹೊಡೆದನು. ಆ ಬಾಣಗಳ ಕುರಿತು ಯೋಚಿಸದೇ ದೇವವ್ರತನು ಕ್ರುದ್ಧನಾದ ಅರ್ಜುನನನ್ನು ಸಾಯಕಗಳಿಂದ ತಡೆದನು. ಹಾಗೆಯೇ ಪಾಂಡವರ ಸೇನೆಗಳೆಲ್ಲವನ್ನೂ ಮಹಾರಥನು ತೀಕ್ಷ್ಣ ಶರಗಳಿಂದ ಪರಲೋಕಕ್ಕೆ ಕಳುಹಿಸಿದನು. ಹಾಗೆಯೇ ಪಾಂಡವನೂ ಕೂಡ ಮಹಾ ಸೇನೆಯೊಂದಿಗೆ ಆವೃತನಾಗಿ ಭೀಷ್ಮನನ್ನು ಮೋಡಗಳು ದಿವಾಕರನನ್ನು ಹೇಗೋ ಹಾಗೆ ಮುಚ್ಚಿದನು. ಎಲ್ಲಕಡೆಗಳಿಂದಲೂ ಸುತ್ತುವರೆದಿದ್ದ ಆ ಭಾರತನು ಬೆಂಕಿಯು ವನವನ್ನು ಸುಡುವಂತೆ ಶೂರರನ್ನು ಸುಟ್ಟುಹಾಕಿದನು.
ಅಲ್ಲಿ ದುಃಶಾಸನನ ಅದ್ಭುತ ಪೌರುಷವು ಕಂಡುಬಂದಿತು. ಅವನು ಪಾರ್ಥನೊಂದಿಗೆ ಯುದ್ಧಮಾಡುತ್ತಿದ್ದನು ಮತ್ತು ಯತವ್ರತನನ್ನು ರಕ್ಷಿಸುತ್ತಿದ್ದನು. ಮಹಾತ್ಮ ಧನ್ವಿ ದುಃಶಾಸನನ ಕೃತ್ಯದಿಂದ ಸರ್ವ ಲೋಕಗಳೂ ಸಂತೋಷಗೊಂಡವು. ಅವನೊಬ್ಬನೇ ಅನುಯಾಯಿಗಳೊಂದಿಗೆ ಪಾರ್ಥರನ್ನು ಎದುರಿಸಿ ಯುದ್ಧ ಮಾಡುತ್ತಿದ್ದನು. ಯುದ್ಧದಲ್ಲಿ ಪ್ರಚಂಡಪರಾಕ್ರಮಿಯಾಗಿದ್ದ ಅವನನ್ನು ಪಾಂಡವರೂ ಕೂಡ ತಡೆಯಲು ಸಮರ್ಥರಾಗಲಿಲ್ಲ. ಸಮರದಲ್ಲಿ ದುಃಶಾಸನನಿಂದ ರಥಿಗಳು ವಿರಥರಾದರು. ಮಹಾಬಲ ಆನೆಗಳೂ, ಅವುಗಳನ್ನು ಏರಿದವರೂ ತೀಕ್ಷ್ಣಶರಗಳಿಂದ ಒಡೆದು ನೆಲದ ಮೇಲೆ ಬಿದ್ದರು. ಹಾಗೆಯೇ ಅನ್ಯ ಆನೆಗಳು ಶರಗಳಿಂದ ಪೀಡಿತವಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದವು. ಹೇಗೆ ಅಗ್ನಿಯು ಇಂಧನಕ್ಕೆ ತಾಗಿ ಇನ್ನೂ ಹೆಚ್ಚು ಹತ್ತಿ ಉರಿಯುವುದೋ ಹಾಗೆ ದುಃಶಾಸನನು ಪಾಂಡವರನ್ನು ದಹಿಸುತ್ತಾ ಇನ್ನೂ ಹತ್ತಿ ಉರಿದನು. ಮಹೇಂದ್ರತನಯ ಶ್ವೇತಾಶ್ವ ಕೃಷ್ಣಸಾರಥಿಯನ್ನು ಬಿಟ್ಟರೆ ಪಾಂಡವರಲ್ಲಿ ಬೇರೆ ಯಾವ ಮಹಾರಥನೂ ಆ ಭಾರತ ಮಹಾಮಾತ್ರನನ್ನು ಎದುರಿಸಿ ಯುದ್ಧಮಾಡಲು ಅಥವಾ ಜಯಿಸಲು ಉತ್ಸುಕರಾಗಿರಲಿಲ್ಲ. ಸರ್ವಸೈನ್ಯಗಳೂ ನೋಡುತ್ತಿದ್ದಂತೆಯೇ ವಿಜಯ ಅರ್ಜುನನು ಅವನನ್ನು ಗೆದ್ದು ಒಡನೆಯೇ ಭೀಷ್ಮನನ್ನು ಆಕ್ರಮಿಸಿದನು. ಸೋತಿದ್ದರೂ ರಣೋತ್ಕಟ ದುಃಶಾಸನನು ಭೀಷ್ಮನ ಬಾಹುಗಳನ್ನು ಆಶ್ರಯಿಸಿ ಪುನಃ ಪುನಃ ದಣಿವಾರಿಸಿಕೊಂಡು ಯುದ್ಧಮಾಡುತ್ತಲೇ ಇದ್ದನು. ಅರ್ಜುನನೊಡನೆಯೂ ಯುದ್ಧಮಾಡುತ್ತಾ ಅವನು ರಣದಲ್ಲಿ ರಾಜಿಸಿದನು.
ಶಿಖಂಡಿಯಾದರೋ ರಣದಲ್ಲಿ ಸರ್ಪವಿಷಗಳಿಗೆ ಸಮವಾದ ತೀಕ್ಷ್ಣ ಶರಗಳಿಂದ ಒಂದೇ ಸಮನ ಪಿತಾಮಹನನ್ನು ಹೊಡೆಯುತ್ತಲೇ ಇದ್ದನು. ಆದರೆ ಅವುಗಳು ಭೀಷ್ಮನಿಗೆ ನೋವನ್ನುಂಟುಮಾಡುತ್ತಿರಲಿಲ್ಲ. ಗಾಂಗೇಯನು ನಗುತ್ತಲೇ ಆ ಬಾಣಗಳನ್ನು ಸ್ವೀಕರಿಸುತ್ತಿದ್ದನು. ಬೇಸಗೆಯ ಬಿಸಿಲಿನಿಂದ ಬಳಲಿದವನು ಹೇಗೆ ನೀರಿನ ಮಳೆಯನ್ನು ಬಯಸುತ್ತಾನೋ ಹಾಗೆ ಗಾಂಗೇಯನು ಶಿಖಂಡಿಯ ಶರಧಾರೆಗಳನ್ನು ಸ್ವೀಕರಿಸಿದನು. ಘೋರ ಆಹವದಲ್ಲಿ ಭೀಷ್ಮನು ಮಹಾತ್ಮ ಪಾಂಡವರ ಸೇನೆಗಳನ್ನು ದಹಿಸುತ್ತಿರುವುದನ್ನು ಕ್ಷತ್ರಿಯರು ನೋಡಿದರು. ಆಗ ದುಃಶಾಸನನು ಎಲ್ಲ ಸೈನ್ಯಗಳಿಗೂ ಹೇಳಿದನು: “ಸಂಗ್ರಾಮದಲ್ಲಿ ಫಲ್ಗುನನನ್ನು ರಥಗಳಿಂದ ಎಲ್ಲ ಕಡೆಗಳಿಂದಲೂ ಆಕ್ರಮಿಸಿರಿ. ಧರ್ಮವಿದು ಭೀಷ್ಮನು ಸಮರದಲ್ಲಿ ನಮ್ಮೆಲ್ಲರನ್ನೂ ಪಾಲಿಸುತ್ತಾನೆ. ಆದುದರಿಂದ ಪಾಂಡವನ ಭಯವನ್ನು ತೊರೆದು ಅವನೊಡನೆ ಯುದ್ಧಮಾಡಿ. ಈ ತಾಲಧ್ವಜನು ಉರಿಯುತ್ತಾ ರಣದಲ್ಲಿ ಸರ್ವ ಧಾರ್ತರಾಷ್ಟ್ರರನ್ನು ಪಾಲಿಸುತ್ತಾ ಅವರ ಕವಚ-ರಕ್ಷಕನಾಗಿ ನಿಂತಿದ್ದಾನೆ. ತ್ರಿದಶರೂ ಕೂಡ ಪ್ರಯತ್ನಿಸಿದರೂ ಈ ಭೀಷ್ಮನನ್ನೆದುರಿಸಿ ಯುದ್ಧಮಾಡಲಾರರು. ಇನ್ನು ಬಲಶಾಲಿಗಳಾಗಿದ್ದರೂ ಸಾವಿರುವ ಮಹಾತ್ಮ ಪಾಂಡವರು ಯಾವ ಲೆಕ್ಕಕ್ಕೆ? ಆದುದರಿಂದ ಹೇ ಯೋಧರೇ! ಅರ್ಜುನನೊಡನೆ ಯುದ್ಧವು ಸನ್ನಿಹಿತವಾಗಿರುವಾಗ ಓಡಿ ಹೋಗಬೇಡಿ. ಇಂದು ನಾನು ನೀವೆಲ್ಲ ವಸುಧಾಧಿಪರೊಡನೆ ಎಲ್ಲಕಡೆಗಳಿಂದ ಮುತ್ತಿಗೆ ಹಾಕಿ ಫಲ್ಗುನನೊಂದಿಗೆ ಯುದ್ಧಮಾಡುತ್ತೇನೆ.”
ದುಃಶಾಸನನ ಆ ಮಾತನ್ನು ಕೇಳಿ ಬಲವಂತರಾದ ಮಹಾರಥ ಧನ್ವಿಗಳು ಅರ್ಜುನನ ಮೇಲೆ ಆಕ್ರಮಿಸಿದರು. ವಿದೇಹರು, ಕಲಿಂಗರು, ದಾಶೇರಕಗಣಗಳೊಂದಿಗೆ ನಿಷಾದರು ಮತ್ತು ಸೌವೀರರು ಅವನ ಮೇಲೆರಗಿದರು. ಬಾಹ್ಲೀಕರು, ದರದರು, ಪೂರ್ವದವರು, ಉತ್ತರದವರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಯರು, ವಸಾಯತರು, ಶಾಲ್ವರು, ತ್ರಿಗರ್ತರು, ಅಂಬಷ್ಠರು, ಕೇಕಯರು ಒಟ್ಟಿಗೇ ರಣದಲ್ಲಿ ಪತಂಗಗಳು ಬೆಂಕಿಯನ್ನು ಹೇಗೋ ಹಾಗೆ ಪಾರ್ಥನನ್ನು ಮುತ್ತಿದರು. ಆಗ ಧನಂಜಯನು ದಿವ್ಯಾಸ್ತ್ರಗಳನ್ನು ಸ್ಮರಿಸಿ ಆ ಎಲ್ಲ ಮಹಾರಥರನ್ನೂ ಸೇನೆಗಳೊಂದಿಗೆ ನಾಶಪಡಿಸಿದನು. ತನ್ನ ಶರಪ್ರತಾಪದಿಂದ ಮಹಾಬಲ ಬೀಭತ್ಸುವು ಮಹಾವೇಗವುಳ್ಳ ಅಸ್ತ್ರಗಳಿಂದ ಅಗ್ನಿಯು ಪತಂಗಗಳನ್ನು ಸುಡುವಂತೆ ಸುಟ್ಟುಹಾಕಿದನು. ಆ ದೃಢಧನ್ವಿಯ ಗಾಂಡೀವವು ಸಹಸ್ರಬಾಣಗಳನ್ನು ಸೃಷ್ಟಿಸುತ್ತಾ ಆಕಾಶದಲ್ಲಿ ಮಿಂಚಿನಂತೆ ಹೊಳೆಯಿತು. ಶರಾರ್ತರಾದ ಆ ರಾಜರು ರಥಧ್ವಜಗಳು ಮುರಿದು ವಾನರಧ್ವಜನನ್ನು ಎದುರಿಸಲಾರದಂತಾದರು. ಕಿರೀಟಿಯ ಶರಗಳಿಂದ ಹೊಡೆಯಲ್ಪಟ್ಟು ರಥಿಗಳು ಧ್ವಜಗಳೊಂದಿಗೆ, ಅಶ್ವಾರೋಹಿಗಳು ಅಶ್ವಗಳೊಂದಿಗೆ, ಗಜಾರೋಹಿಗಳು ಆನೆಗಳೊಂದಿಗೆ ಬಿದ್ದರು. ಅರ್ಜುನನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಶರಗಳಿಂದ ಭೂಮಿಯು ತುಂಬಿಹೋಯಿತು. ಅನೇಕ ಸೇನೆಗಳೊಂದಿಗೆ ರಾಜರು ಎಲ್ಲಕಡೆ ಓಡಿ ಹೋದರು. ಆಗ ಮಹಾಬಾಹು ಪಾರ್ಥನು ಸೇನೆಗಳನ್ನು ಪಲಾಯನಗೊಳಿಸಿ ದುಃಶಾಸನನ ಮೇಲೆ ಸಾಯಕಗಳನ್ನು ಕಳುಹಿಸಿದನು. ಅವು ದುಃಶಾಸನನನ್ನು ಹೊಕ್ಕು ಬಿಲದೊಳಗಿ ಹೊಗುವ ಸರ್ಪಗಳಂತೆ ನೆಲವನ್ನು ಮುಕ್ಕಿದವು. ಅವನ ಕುದುರೆಗಳು ಮತ್ತು ಸಾರಥಿಯು ಸತ್ತು ಬಿದ್ದರು. ಪ್ರಭುವು ವಿವಿಂಶತಿಯನ್ನು ಇಪ್ಪತ್ತು ಬಾಣಗಳಿಂದ ವಿರಥನನ್ನಾಗಿ ಮಾಡಿ ಪುನಃ ಐದು ನತಪರ್ವಗಳಿಂದ ತುಂಬಾ ಗಾಯಗೊಳಿಸಿದನು. ಕೃಪ, ಶಲ್ಯ, ವಿಕರ್ಣರನ್ನೂ ಅನೇಕ ಆಯಸಗಳಿಂದ ಹೊಡೆದು ಶ್ವೇತವಾಹನ ಕೌಂತೇಯನು ಅವರನ್ನೂ ಕೂಡ ವಿರಥರನ್ನಾಗಿ ಮಾಡಿದನು. ಹೀಗೆ ವಿರಥರಾದ ಐವರು - ಕೃಪ, ಶಲ್ಯ, ದುಃಶಾಸನ, ವಿಕರ್ಣ ಮತ್ತು ವಿವಿಂಶತಿ – ಸವ್ಯಸಾಚಿಯಿಂದ ಸೋಲಲ್ಪಟ್ಟು ಸಮರದಿಂದ ಪಲಾಯನಗೈದರು.
ಹಾಗೆ ಪೂರ್ವಾಹ್ಣದಲ್ಲಿ ಮಹಾರಥರನ್ನು ಪರಾಜಯಗೊಳಿಸಿ ರಣದಲ್ಲಿ ಪಾರ್ಥನು ಹೊಗೆಯಿಲ್ಲದ ಬೆಂಕಿಯಂತೆ ಪ್ರಜ್ವಲಿಸಿದನು. ಹಾಗೆಯೇ ಭಾಸ್ಕರನ ಕಿರಣಗಳಂತಹ ಶರವರ್ಷಗಳಿಂದ ಅನ್ಯ ಪಾರ್ಥಿವರನ್ನೂ ಉರುಳಿಸಿದನು. ಆಗ ಶರವರ್ಷಗಳಿಂದ ಮಹಾರಥರನ್ನು ಪರಾಙ್ಮುಖಗೊಳಿಸಿ ಪಾಂಡವರ ಮತ್ತು ಕುರುಸೇನೆಗಳ ಮಧ್ಯೆ ರಕ್ತವೇ ನೀರಾಗಿರುವ ಮಹಾನದಿಯನ್ನು ಹರಿಸಿದನು. ರಥಿಗಳು ಅನೇಕ ಆನೆಗಳನ್ನೂ ರಥ ಸಂಘಗಳನ್ನೂ ಸಂಹರಿಸುತ್ತಿದ್ದರು. ಆನೆಗಳು ರಥಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ ಸಂಹರಿಸುತ್ತಿದ್ದವು. ಗಜ-ಅಶ್ವ-ರಥಯೋಧಿಗಳ ಶರೀರ ಮತ್ತು ಶಿರಗಳು ತುಂಡು ತುಂಡಾಗಿ ಎಲ್ಲಾಕಡೆ ಬಿದ್ದಿದ್ದವು. ಬಿದ್ದಿರುವ ಮತ್ತು ಬೀಳುತ್ತಿರುವ ಕುಂಡಲ-ಅಂಗದ ಧಾರಿ ಮಹಾರಥ ರಾಜಪುತ್ರರಿಂದ ರಣಭೂಮಿಯು ತುಂಬಿಹೋಗಿತ್ತು. ರಥಗಳ ಗಾಲಿಗೆ ಸಿಲುಕಿ ತುಂಡಾಗಿದ್ದರು. ಆನೆಗಳ ತುಳಿತಕ್ಕೆ ಸಿಲುಕಿ ನುಜ್ಜಾಗಿದ್ದರು. ಅಶ್ವಗಳು ಮತ್ತು ಅಶ್ವಾರೋಹಿಗಳೊಂದಿಗೆ ಪದಾತಿಗಳು ಕಂಡುಬಂದರು. ಗಜ-ಅಶ್ವ-ರಥ ಸಂಘಗಳು ಎಲ್ಲಕಡೆ ಮುರಿದು ಬಿದ್ದಿದ್ದವು. ಭೂಮಿಯು ಮುರಿದ ರಥ, ಚಕ್ರ, ನೊಗ ಮತ್ತು ಧ್ವಜಗಳಿಂದ ಹರಡಿಹೋಗಿತ್ತು. ಅಶ್ವ-ರಥಿ ಸೇನೆಗಳ ರಕ್ತದಿಂದ ತೋಯ್ದು ಹೋಡಿದ್ದ ಆ ರಣಭೂಮಿಯು ಶರದೃತುವಿನ ಕೆಂಪುಬಣ್ಣದ ಆಕಾಶದಂತೆ ಶೋಭಿಸಿತು. ನಾಯಿಗಳು, ಕಾಗೆಗಳು, ಹದ್ದುಗಳು, ತೋಳಗಳು, ನರಿಗಳು ಇವೇ ಮೊದಲಾದ ವಿಕಾಸ್ವರದ ಮೃಗಪಕ್ಷಿಗಳು ಭಕ್ಷಗಳನ್ನುಂಡು ಕೂಗಾಡಿದವು. ರಾಕ್ಷಸರು ಮತ್ತು ಭೂತಗಳು ಗರ್ಜಿಸುತ್ತಿರುವುದು ಕಂಡುಬರಲು ಎಲ್ಲ ದಿಕ್ಕುಗಳಲ್ಲಿ ನಾನಾ ವಿಧದ ಗಾಳಿಗಳು ಬೀಸಿದವು. ಕಾಂಚನದ ಮಾಲೆಗಳೂ, ಬೆಲೆಬಾಳುವ ಪತಾಕೆಗಳೂ ಗಾಳಿಯೊಂದಿಗೆ ಒಂದು ಕಡೆಯಿಂದ ಇನ್ನೊಂದು ಕಡೆ ಹಾರಾಡುತ್ತಿದ್ದುದು ಕಾಣುತ್ತಿತ್ತು. ಸಹಸ್ರಾರು ಬಿಳಿಯ ಛತ್ರಗಳೂ, ಧ್ವಜಗಳೊಂದಿಗೆ ಮಹಾರಥಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಹರಡಿ ಬಿದ್ದಿರುವುದು ಕಾಣುತ್ತಿತ್ತು. ಶರಗಳಿಂದ ಪೀಡಿತರಾಗಿ ಆನೆಗಳು ಪತಾಕೆಗಳೊಂದಿಗೆ ದಿಕ್ಕಾಪಾಲಾದವು. ಗದ-ಶಕ್ತಿ-ಧನುಸ್ಸುಗಳನ್ನು ಹಿಡಿದಿದ್ದ ಕ್ಷತ್ರಿಯರು ಭೂಮಿಯ ಮೇಲೆ ಎಲ್ಲ ಕಡೆ ಬಿದ್ದಿರುವುದು ಕಾಣುತ್ತಿತ್ತು.
ಆಗ ಭೀಷ್ಮನು ದಿವ್ಯ ಅಸ್ತ್ರವನ್ನು ಪ್ರಕಟಿಸುತ್ತ ಸರ್ವಧನ್ವಿಗಳೂ ನೋಡುತ್ತಿದ್ದಂತೆ, ಕೌಂತೇಯನನ್ನು ಆಕ್ರಮಿಸಿದನು. ಆದರೆ ರಣದಲ್ಲಿ ಅವನನ್ನು ಕವಚಧಾರಿಯಾದ ಶಿಖಂಡಿಯು ಎದುರಿಸಲು ಭೀಷ್ಮನು ಪಾವಕೋಪಮವಾದ ಆ ಅಸ್ತ್ರವನ್ನು ಹಿಂತೆಗೆದುಕೊಂಡನು. ಇದೇ ಸಮಯದಲ್ಲಿ ಕೌಂತೇಯ ಶ್ವೇತವಾಹನನು ಪಿತಾಮಹನನ್ನು ದಿಗ್ಭ್ರಮೆಗೊಳಿಸುತ್ತಾ ಕೌರವ ಸೇನೆಯನ್ನು ಸಂಹರಿಸಿದನು.
ಭೀಷ್ಮಪರಾಕ್ರಮ
ಈ ರೀತಿ ವ್ಯೂಹಗೊಂಡ ಸೇನೆಗಳು ಪಲಾಯನ ಮಾಡದೇ ನಿಂತುಕೊಂಡು ಎಲ್ಲರೂ ಬ್ರಹ್ಮಲೋಕಪರರಾಗಿ ಸೇರಿದ್ದರು. ಆಗ ಸೇನೆ ಸೇನೆಗಳೊಡನೆ ಸಂಕುಲಯುದ್ಧವು ಪ್ರಾರಂಭವಾಯಿತು. ರಥಿಕರು ರಥಿಕರೊಡನೆ, ಪದಾತಿಗಳು ಪದಾತಿಗಳೊಡನೆ, ಅಶ್ವಯೋಧರು ಅಶ್ವಯೋಧರೊಡನೆ ಮತ್ತು ಗಜಯೋಧರು ಗಜಯೋಧರೊಡನೆ ಯುದ್ಧಮಾಡಲಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಸೇನೆಗಳ ಮಧ್ಯೆ ಮಹಾ ರೌದ್ರ ಯುದ್ಧವುಂಟಾಯಿತು. ಎಲ್ಲೆಡೆಯಲ್ಲಿಯೂ ಚದುರಿಹೋಗಿದ್ದ ನರ-ರಥ-ಅಶ್ವ-ಗಜಸೇನೆಗಳ ನಡುವೆ ನಡೆದ ಆ ಮಹಾರೌದ್ರ ಕ್ಷಯಕಾರಕ ಯುದ್ಧದಲ್ಲಿ ಪರಸ್ಪರರ ನಡುವೆ ವ್ಯತ್ಯಾಸವೇ ಇಲ್ಲದಂತಾಯಿತು. ಆಗ ಶೂರರಾದ ಶಲ್ಯ, ಕೃಪ, ಚಿತ್ರಸೇನ, ದುಃಶಾಸನ, ವಿಕರ್ಣರು ಕಾಂತಿಯುಕ್ತ ರಥಗಳನ್ನೇರಿ ರಣದಲ್ಲಿ ಪಾಂಡವರ ಸೇನೆಗಳನ್ನು ನಡುಗಿಸಿದರು. ಆ ಮಹಾತ್ಮರಿಂದ ವಧಿಸಲ್ಪಡುತ್ತಿದ್ದ ಪಾಂಡವಸೇನೆಯು ಚಂಡಮಾರುತಕ್ಕೆ ಸಿಲುಕಿ ನೀರಿನ ಮೇಲಿರುವ ದೋಣಿಯು ಎಲ್ಲೆಲ್ಲೋ ಸೆಳೆದೊಯ್ಯಲ್ಪಡುವಂತೆ ದಿಕ್ಕುಪಾಲಾಯಿತು. ಹೇಗೆ ಶಿಶಿರ ಋತುವಿನ ಛಳಿಯು ಗೋವುಗಳ ಮರ್ಮಾಂಗಗಳನ್ನು ಕತ್ತರಿಸುವುದೋ ಹಾಗೆ ಭೀಷ್ಮನು ಪಾಂಡುಸುತರ ಮರ್ಮಾಂಗಗಳನ್ನು ಕತ್ತರಿಸುತ್ತಿದ್ದನು. ಹಾಗೆಯೇ ಮಹಾತ್ಮ ಪಾರ್ಥನೂ ಕೂಡ ಕೌರವ ಸೇನೆಯಲ್ಲಿ ದೊಡ್ಡ ದೊಡ್ಡ ಮೋಡಗಳಂತಿದ್ದ ಬಹಳಷ್ಟು ಆನೆಗಳನ್ನು ಬೀಳಿಸಿದನು. ಪಾರ್ಥನು ಸಹಸ್ರಾರು ನಾರಾಚ ಬಾಣಗಳಿಂದ ಹೊಡೆದು ನರಯೂಥಪರನ್ನು ಮಣ್ಣುಮುಕ್ಕಿಸಿದುದು ಕಾಣುತ್ತಿತ್ತು. ಯುದ್ಧದಲ್ಲಿ ಭೀಷ್ಮನ ಮತ್ತು ಪಾಂಡವ ಧನಂಜಯನ ವಿಕ್ರಾಂತದಿಂದ ಆ ಮಹಾಭಯಂಕರ ವೀರವರಕ್ಷಯದಲ್ಲಿ ಬಾಣಗಳಿಂದ ಹೊಡೆಯಲ್ಪಟ್ಟು ಆರ್ತಸ್ವರದಲ್ಲಿ ಕೂಗಿ ಮಹಾಗಜಗಳೂ, ಆಭರಣಗಳನ್ನು ಧರಿಸಿದ್ದ ಮಹಾತ್ಮರ ಶರೀರಗಳೂ, ಕರ್ಣಕುಂಡಲಗಳನ್ನು ಧರಿಸಿದ್ದ ಶಿರಸ್ಸುಗಳೂ ಅಲ್ಲಲ್ಲಿ ಬಿದ್ದಿದ್ದವು.
ಯುದ್ಧದಲ್ಲಿ ಪಿತಾಮಹನ ಪರಾಕ್ರಮವನ್ನು ನೋಡಿ ಬ್ರಹ್ಮಲೋಕಪುರಸ್ಕೃತರಾದ ಕೌರವ್ಯರು ಯುದ್ಧದಿಂದ ಹಿಂದಿರುಗಲಿಲ್ಲ. ಸ್ವರ್ಗವನ್ನೇ ಗುರಿಯನ್ನಾಗಿರಿಸಿಕೊಂಡ ಯುದ್ಧದಲ್ಲಿ ಸಾವನ್ನು ಇಚ್ಛಿಸುತ್ತಾ ಆ ವೀರವರಕ್ಷಯದಲ್ಲಿ ಪಾಂಡವರ ಮೇಲೆ ಆಕ್ರಮಣ ಮಾಡಿದರು. ಶೂರ ಪಾಂಡವರೂ ಕೂಡ ಧೃತರಾಷ್ಟ್ರನ ಪುತ್ರರು ಹಿಂದೆ ಮಾಡಿಕೊಟ್ಟ ಬಹುವಿಧದ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ, ಬ್ರಹ್ಮಲೋಕಪುರಸ್ಕೃತರಾಗಿ ರಣದಲ್ಲಿ ಭಯವನ್ನು ತೊರೆದು ಧೃತರಾಷ್ಟ್ರನ ಮಕ್ಕಳನ್ನೂ ಅವರ ಕಡೆಯವರನ್ನೂ ಎದುರಿಸಿ ಸಂತೋಷದಿಂದ ಹೋರಾಡಿದರು. ಮಹಾರಥಿ ಸೇನಾಪತಿಯು ಸೇನೆಗಳಿಗೆ “ಸೋಮಕರೂ ಸೃಜಯರೂ ಒಟ್ಟಿಗೇ ಗಾಂಗೇಯನನ್ನು ಆಕ್ರಮಿಸಿರಿ!” ಎಂದು ಆಜ್ಞೆಯಿತ್ತನು. ಸೇನಾಪತಿಯ ಮಾತನ್ನು ಕೇಳಿ ಸೃಂಜಯರೊಂದಿಗೆ ಸೋಮಕರು ಶಸ್ತ್ರವೃಷ್ಟಿಗಳಿಂದ ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದರು. ಹೀಗೆ ಹೊಡೆಯಲ್ಪಡಲು ಶಾಂತನವನು ಕ್ರುದ್ಧನಾಗಿ ಸೃಂಜಯರೊಡನೆ ಯುದ್ಧಮಾಡಿದನು.
ಹಿಂದೆ ಧೀಮತ ರಾಮನಿಂದ ಆ ಕೀರ್ತಿವಂತನು ಪರಾನೀಕವಿನಾಶಿನೀ ಎಂಬ ಅಸ್ತ್ರದ ಶಿಕ್ಷೆಯನ್ನು ಪಡೆದಿದ್ದನು. ಅದೇ ಶಿಕ್ಷೆಯನ್ನು ಅವಲಂಬಿಸಿ ಪರವೀರಹ ವೃದ್ಧ ಕುರುಪಿತಾಮಹ ಭೀಷ್ಮನು ಪ್ರತಿದಿನವೂ ಪಾರ್ಥರ ಹತ್ತುಸಾವಿರರನ್ನು ಕೊಂದು ಪರವೀರರ ಬಲಕ್ಷಯವನ್ನುಂಟುಮಾಡುತ್ತಿದ್ದನು. ಪ್ರಾಪ್ತವಾದ ಆ ಹತ್ತನೆಯ ದಿವಸದಲ್ಲಿ ಭೀಷ್ಮನೊಬ್ಬನೇ ಮತ್ಸ್ಯ-ಪಾಂಚಾಲರೊಡನೆಯ ಅಸಂಖ್ಯ ಗಜಾಶ್ವಗಳನ್ನು ಕೊಂದು ಏಳು ಮಹಾರಥರನ್ನು ಸಂಹರಿಸಿದನು. ಶಿಕ್ಷಾಬಲದಿಂದ ಪ್ರಪಿತಾಮಹನು ಐದು ಸಾವಿರ ರಥಿಗಳನ್ನು ಸಂಹರಿಸಿ ಮಹಾಯುದ್ಧದಲ್ಲಿ ಹದಿನಾಲ್ಕು ಸಾವಿರ ಪದಾತಿಗಳನ್ನೂ, ಸಾವಿರ ಆನೆಗಳನ್ನೂ, ಮತ್ತು ಹತ್ತುಸಾವಿರ ಅಶ್ವಸೈನಿಕರನ್ನೂ ಸಂಹರಿಸಿದನು. ಆಗ ಸರ್ವಮಹೀಪಾಲರ ವರೂಥಿನಿಯನ್ನು ಕ್ಷೋಭೆಗೊಳಿಸಿ ವಿರಾಟನ ಪ್ರೀತಿಯ ತಮ್ಮ ಶತಾನೀಕನನ್ನು ಉರುಳಿಸಿದನು. ಶತಾನೀಕನನ್ನು ಸಂಹರಿಸಿ ಪ್ರತಾಪವಾನ್ ಭೀಷ್ಮನು ಸಹಸ್ರಾರು ರಾಜರನ್ನು ಭಲ್ಲೆಗಳಿಂದ ಉರುಳಿಸಿದನು. ಯಾರು ಪಾರ್ಥ ಧನಂಜಯನನ್ನು ಸೇರಿ ಭೀಷ್ಮನನ್ನು ಎದುರಿಸುತ್ತಿದ್ದರೋ ಆ ಎಲ್ಲ ರಾಜರೂ ಯಮಸಾದನವನ್ನು ಸೇರಿದರು. ಹೀಗೆ ಹತ್ತೂ ದಿಕ್ಕುಗಳಿಂದಲೂ ಶರಜಾಲಗಳಿಂದ ಸುತ್ತುವರೆದು ಭೀಷ್ಮನು ಪಾರ್ಥರ ಸೇನೆಯನ್ನು ಸೋಲಿಸಿ ತನ್ನ ಸೇನಾಗ್ರದಲ್ಲಿ ನಿಂತಿದ್ದನು. ಆ ಹತ್ತನೆಯ ದಿನದಲ್ಲಿ ಮಹಾಕರ್ಮವನ್ನೆಸಗಿ ಅವನು ಧನುಸ್ಸನ್ನು ಹಿಡಿದು ಎರಡು ಸೇನೆಗಳ ಮಧ್ಯೆ ನಿಂತಿದ್ದನು. ಗ್ರೀಷ್ಮಋತುವಿನಲ್ಲಿ ನಡುನೆತ್ತಿಗೆ ಬಂದು ಸುಡುತ್ತಿರುವ ಭಾಸ್ಕರನನ್ನು ಆಕಾಶದಲ್ಲಿ ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ ರಾಜರು ಅವನನ್ನು ನೋಡಲೂ ಶಕ್ಯರಾಗಲಿಲ್ಲ. ಸಂಯುಗದಲ್ಲಿ ಶಕ್ರನು ಹೇಗೆ ದೈತ್ಯಸೇನೆಯನ್ನು ತಡೆದು ನಿಲ್ಲಿಸಿದನೋ ಹಾಗೆ ಭೀಷ್ಮನು ಪಾಂಡವರ ಸೇನೆಯನ್ನು ತಡೆದು ನಿಲ್ಲಿಸಿದನು.
ಅವನ ಆ ಪರಾಕ್ರಾಂತವನ್ನು ನೋಡಿದ ದೇವಕೀಪುತ್ರ ಮಧುಸೂದನನು ಧನಂಜಯನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು: “ಸೇನೆಗಳ ಮಧ್ಯೆ ನಿಂತಿರುವ ಈ ಶಾಂತನವ ಭೀಷ್ಮನನ್ನು ಬಲವನ್ನುಪಯೋಗಿಸಿ ಸಂಹರಿಸಿದರೆ ನಿನಗೆ ವಿಜಯವಾಗುತ್ತದೆ. ಯಾವ ಸ್ಥಳದಲ್ಲಿ ಈ ನಮ್ಮ ಸೇನೆಯು ಭೀಷ್ಮನಿಂದ ಬೇರೆಯಾಗಿದೆಯೋ ಅದೇ ಸ್ಥಳದಲ್ಲಿ ನೀನು ಭೀಷ್ಮನನ್ನು ಹಿಂದೆ-ಮುಂದೆ ಹೋಗದಂತೆ ಬಲಪೂರ್ವಕವಾಗಿ ನಿರ್ಬಂಧಿಸು.”
ತಕ್ಷಣವೇ ಪ್ರಚೋದಿತನಾದ ವಾನರಧ್ವಜನು ಧ್ವಜ, ರಥ ಮತ್ತು ಕುದುರೆಗಳೊಂದಿಗೆ ಭೀಷ್ಮನನ್ನು ಶರಗಳಿಂದ ಮುಚ್ಚಿಬಿಟ್ಟನು. ಆ ಕುರುಮುಖ್ಯರ ಋಷಭನೂ ಕೂಡ ಪಾಂಡವನು ಪ್ರಯೋಗಿಸಿದ ಬಾಣ ಸಮೂಹಗಳನ್ನು ಬಾಣಸಮೂಹಗಳನ್ನು ಪ್ರಯೋಗಿಸಿ ಕತ್ತರಿಸಿ ಚೂರು ಚೂರು ಮಾಡಿದನು. ಆಗ ಪಾಂಚಾಲರಾಜ, ವೀರ್ಯವಾನ್ ಧೃಷ್ಟಕೇತು, ಪಾಂಡವ ಭೀಮ, ಪಾರ್ಷತ ಧೃಷ್ಟದ್ಯುಮ್ನ, ಯಮಳರು, ಚೇಕಿತಾನ, ಐವರು ಕೇಕಯರು, ಸಾತ್ಯಕಿ, ಸೌಭದ್ರಿ, ಘಟೋತ್ಕಚ, ದ್ರೌಪದೇಯರು, ಶಿಖಂಡಿ, ವೀರ್ಯವಾನ್ ಕುಂತಿಬೋಜ, ಸುಶರ್ಮ, ವಿರಾಟ, ಮಹಾಬಲಿ ಪಾಂಡವೇಯ ಇವರು ಮತ್ತು ಇನ್ನೂ ಬಹಳಷ್ಟು ಇತರರು ಭೀಷ್ಮನ ಬಾಣಗಳಿಂದ ಪೀಡಿತರಾಗಿ ಶೋಕಸಾಗರದಲ್ಲಿ ಮುಳುಗಿರಲು ಫಲ್ಗುನನು ಅವರನ್ನು ಮೇಲೆತ್ತಿದನು. ಕಿರೀಟಿಯಿಂದ ರಕ್ಷಿತನಾದ ಶಿಖಂಡಿಯು ವೇಗದಿಂದ ಪರಮಾಯುಧವನ್ನು ಹಿಡಿದು ಭೀಷ್ಮನ ಮೇಲೆ ಪ್ರಯೋಗಿಸಿದನು. ಆಗ ರಣವಿಭಾಗಗಳನ್ನು ತಿಳಿದಿದ್ದ ಅಪರಾಜಿತ ಬೀಭತ್ಸುವು ಭೀಷ್ಮನ ಅನುಚರರೆಲ್ಲರನ್ನೂ ಸಂಹರಿಸಿ ಭೀಷ್ಮನನ್ನೇ ಆಕ್ರಮಣಿಸಿದನು. ದೃಢಧನ್ವಿಯಿಂದ ರಕ್ಷಿತರಾಗಿ ಸಾತ್ಯಕಿ, ಚೇಕಿತಾನ, ಪಾರ್ಷತ ಧೃಷ್ಟದ್ಯುಮ್ನ, ವಿರಾಟ, ದ್ರುಪದ, ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ಭೀಷ್ಮನ ಮೇಲೆಯೇ ಆಕ್ರಮಣ ಮಾಡಿದರು. ಅಭಿಮನ್ಯುವಾದರೋ ದ್ರೌಪದಿಯ ಐವರು ಮಕ್ಕಳೊಂದಿಗೆ ಮಹಾಯುಧಗಳನ್ನು ಹಿಡಿದು ಭೀಷ್ಮನನ್ನು ಆಕ್ರಮಣಿಸಿದರು. ಆ ಎಲ್ಲ ದೃಢಧನ್ವಿಗಳೂ ಪಲಾಯನ ಮಾಡದೇ ಬಹಳ ಕೃತಮಾರ್ಗಣ ಬಾಣಗಳಿಂದ ಭೀಷ್ಮನನ್ನು ಚುಚ್ಚಿದರು. ಆದರೆ ಪಿತಾಮನನು ಆಟವಾಡುತ್ತಿರುವನೋ ಎನ್ನುವಂತೆ ತನ್ನನ್ನು ಎದುರಿಸಿ ಬರುತ್ತಿದ್ದ ಪಾರ್ಥಿವೋತ್ತಮರು ಬಿಟ್ಟ ಆ ಬಾಣಗಣಗಳನ್ನು ತಡೆದು ಶರವಿಘಾತ ಮಾಡಿದನು ಮತ್ತು ಪಾಂಡವರ ಸೇನೆಯನ್ನು ದುಃಖಕ್ಕೀಡುಮಾಡಿದನು.
ಆದರೆ ಅವನ ಸ್ತ್ರೀತ್ವವನ್ನು ಸ್ಮರಿಸಿ, ಪುನಃ ಪುನಃ ಮುಗುಳ್ನಗುತ್ತಾ ಭೀಷ್ಮನು ಪಾಂಚಾಲ್ಯ ಶಿಖಂಡಿಯ ಮೇಲೆ ಬಾಣಪ್ರಯೋಗ ಮಾಡಲಿಲ್ಲ, ಮತ್ತು ಆ ಮಹಾರಥನು ದ್ರುಪದನ ಸೇನೆಯ ಏಳು ರಥರನ್ನು ಸಂಹರಿಸಿದನು. ಆಗ ತಕ್ಷಣವೇ ಒಂಟಿಯಾದ ಭೀಷ್ಮನೊಡನೆ ಹೋರಾಡುತ್ತಿದ್ದ ಮತ್ಸ್ಯ-ಪಾಂಚಾಲ-ಚೇದಿಗಳ ಸೇನೆಯಲ್ಲಿ ಕಿಲಕಿಲ ಶಬ್ಧವುಂಟಾಯಿತು. ಅವರ ಶ್ರೇಷ್ಠ ಅಶ್ವ-ರಥ-ವ್ರಾತ-ವಾರಣಗಳಿಂದ ಮತ್ತು ಪದಾತಿಗಳಿಂದ ರಣದಲ್ಲಿ ರಿಪುಗಳನ್ನು ಸುಡುತ್ತಿದ್ದ ಭಾಗೀರಥೀಪುತ್ರ ಭೀಷ್ಮನೊಬ್ಬನನ್ನೇ ದಿವಾಕರನನ್ನು ಮೇಘಗಳಂತೆ ಮುತ್ತಿಗೆ ಹಾಕಿದರು. ಆಗ ದೇವಾಸುರರ ನಡುವಿನಂತಿದ್ದ ಅವರ ಆ ಯುದ್ಧದಲ್ಲಿ ಶಿಖಂಡಿಯನ್ನು ಮುಂದಿರಿಸಿಕೊಂಡು ಕಿರೀಟಿಯು ಭೀಷ್ಮನನ್ನು ಗಾಯಗೊಳಿಸಿದನು.
ಅರ್ಜುನನು ಭೀಷ್ಮನನ್ನು ಹೊಡೆದು ಶರಶಯ್ಯೆಯ ಮೇಲೆ ಮಲಗಿಸಿದುದು
ಹೀಗೆ ಆ ಪಾಂಡವರೆಲ್ಲರೂ ಸಮರದಲ್ಲಿ ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಹೊಡೆಯತೊಡಗಿದರು. ಶತಘ್ನಿ, ಸುಘೋರ, ಪಟ್ಟಿಶ, ಪರಶು, ಮುದ್ಗರ, ಮುಸಲ, ಪ್ರಾಸ, ಕ್ಷಿಪಣಿಗಳಿಂದ, ಕನಕಪುಂಖಗಳ ಶರಗಳಿಂದ, ಕಂಪಿಸುತ್ತಿರುವ ಶಕ್ತಿ ತೋಮರಗಳಿಂದ, ನಾರಾಚ, ವತ್ಸದಂತ ಮತ್ತು ಭುಶುಂಡಿಗಳಿಂದ ಎಲ್ಲ ಕಡೆಗಳಿಂದ ಎಲ್ಲ ಸೃಂಜಯರೂ ಸೇರಿಕೊಂಡು ಭೀಷ್ಮನನ್ನು ಹೊಡೆದರು. ಅವು ದೇಹವನ್ನು ಹೊಕ್ಕು ಬಹುವಾಗಿ ತ್ರಾಣಪೀಡಿತನಾದರೂ ಮರ್ಮಗಳನ್ನು ಭೇದಿಸಿದರೂ ಗಾಂಗೇಯನು ವ್ಯಥೆಪಡಲಿಲ್ಲ. ಆದರೆ ಭೀಷ್ಮನು ಶತ್ರುಗಳಿಗೆ ಯುಗಾಂತದ ಅಗ್ನಿಯ ಸಮನಾಗಿ ತೋರಿದನು. ಉರಿಯುತ್ತಿರುವ ಅವನ ಶರಚಾಪಗಳೇ ಶಿಖೆಗಳಾಗಿದ್ದವು, ಬಾಣ ಪ್ರಯೋಗದ ವೇಗವೇ ಅಗ್ನಿಯ ಸಖ ಮಾರುತದಂತಿತ್ತು. ಅವನ ರಥ ಚಕ್ರಗಳ ಸಂನಾದವು ಅಗ್ನಿಯಿಂದ ಹೊರಡುವ ಚಟ ಚಟ ಶಬ್ಧವಾಗಿತ್ತು. ಮಹಾ ಅಸ್ತ್ರಗಳಿಂದಲೇ ಅಗ್ನಿಯು ಉದಯಿಸುವಂತಿದ್ದವು. ಬಣ್ಣದ ಚಾಪವೇ ಮಹಾಜ್ವಾಲೆಯಾಗಿತ್ತು. ವೀರರ ಕ್ಷಯವೆಂಬುದೇ ಇಂಧನವಾಗಿತ್ತು. ಆ ರಥಸಮೂಹಗಳ ನಡುವಿನಿಂದ ನುಸುಳಿ ಹೊರಬಂದು ಅವನು ಪುನಃ ನರೇಂದ್ರರ ಮಧ್ಯದಲ್ಲಿ ಚಲಿಸುವುದು ಕಾಣುತ್ತಿತ್ತು. ಅವನು ವೇಗವಾಗಿ ಪಾಂಚಾಲರಾಜನನ್ನೂ ಧೃಷ್ಟಕೇತುವನ್ನೂ ಲಕ್ಷಿಸದೇ ಪಾಂಡವರ ಸೇನೆಯ ಮಧ್ಯಕ್ಕೆ ಬಂದು ಧಾಳಿಯಿಟ್ಟನು. ಮಹಾವೇಗದಿಂದ ಮತ್ತು ಭೀಮಘೋಷದಿಂದ ಅವನು ವೈರಿಗಳ ಕವಚಗಳನ್ನೂ ಭೇದಿಸಬಲ್ಲ ಆರು ಭಾಸ್ಕರ ಪ್ರತಿಮ ಶರಗಳಿಂದ ಈ ಆರರನ್ನು – ಸಾತ್ಯಕಿ, ಭೀಮ, ಪಾಂಡವ ಧನಂಜಯ, ದ್ರುಪದ, ವಿರಾಟ ಮತ್ತು ಪಾರ್ಷತ ಧೃಷ್ಟದ್ಯುಮ್ನರನ್ನು ಹೊಡೆದನು. ಅವನ ಆ ನಿಶಿತ ಬಾಣಗಳಿಂದ ತಪ್ಪಿಸಿಕೊಂಡು ಮಹಾರಥರು ಹತ್ತು ಹತ್ತು ಬಾಣಗಳಿಂದ ಭೀಷ್ಮನನ್ನು ಹೊಡೆದರು. ಮಹಾವ್ರತ ಶಿಖಂಡಿಯು ಪ್ರಯೋಗಿಸಿದ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳು ಭೀಷ್ಮನ ದೇಹವನ್ನು ಪ್ರವೇಶಿಸಿದವು.
ಆಗ ಕಿರೀಟಿಯು ಸಂರಬ್ಧನಾಗಿ ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎದುರಿಸಿ ಅವನ ಧನುಸ್ಸನ್ನು ಕತ್ತರಿಸಿದನು. ಭೀಷ್ಮನ ಧನುಶ್ಚೇದನವನ್ನು ಸಹಿಸಲಾರದೇ ಮಹಾರಥರಾದ ದ್ರೋಣ, ಕೃತವರ್ಮ, ಸೈಂಧವ ಜಯದ್ರಥ, ಭೂರಿಶ್ರವ, ಶಲ, ಶಲ್ಯ ಮತ್ತು ಭಗದತ್ತ ಈ ಏಳು ಮಂದಿ ಪರಮ ಕೃದ್ಧರಾಗಿ ಕಿರೀಟಿಯ ಮೇಲೆ ಆಕ್ರಮಣ ಮಾಡಿದರು. ಆ ಮಹಾರಥರು ಉತ್ತಮ ದಿವ್ಯ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಕ್ರುದ್ಧರಾಗಿ ಅವನ ಮೇಲೆ ಎರಗಿ ಪಾಂಡವನನ್ನು ಮುಸುಕು ಹಾಕಿದರು. ಅವರು ಫಲ್ಗುನನ ಮೇಲೆರಗಿದುದರ ಶಬ್ಧವು ಯುಗಕ್ಷಯದಲ್ಲಿ ಮೇಲುಕ್ಕಿ ಬರುತ್ತಿದ್ದ ಸಮುದ್ರದ ಶಬ್ಧದಂತಿತ್ತು. ಫಲ್ಗುನನ ರಥದ ಬಳಿ “ಸಂಹರಿಸಿ! ಸೆರೆಹಿಡಿಯಿರಿ! ಹೊಡೆಯಿರಿ! ಕತ್ತರಿಸಿ!” ಎಂಬ ಕೂಗಿನ ತುಮುಲ ಶಬ್ಧವು ಕೇಳಿಬಂದಿತು. ಆ ತುಮುಲ ಶಬ್ಧವನ್ನು ಕೇಳಿ ಪಾಂಡವರ ಮಹಾರಥಿಗಳು ಫಲ್ಗುನನನ್ನು ರಕ್ಷಿಸಲು ಧಾವಿಸಿಬಂದರು. ಚಿತ್ರಕಾರ್ಮುಕಗಳನ್ನು ಹಿಡಿದಿದ್ದ ಸಾತ್ಯಕಿ, ಭೀಮಸೇನ, ಧೃಷ್ಟದ್ಯುಮ್ನ, ವಿರಾಟ-ದ್ರುಪದರಿಬ್ಬರೂ, ರಾಕ್ಷಸ ಘಟೋತ್ಕಚ, ಸಂಕ್ರುದ್ಧ ಅಭಿಮನ್ಯು ಈ ಏಳು ಮಂದಿ ಕ್ರೋಧಮೂರ್ಛಿತರು ತ್ವರೆಮಾಡಿ ಅಲ್ಲಿಗೆ ಧಾವಿಸಿದರು. ಸಂಗ್ರಾಮದಲ್ಲಿ ದೇವತೆಗಳು ಮತ್ತು ದಾನವರ ಹಾಗೆ ಅವರ ಮಧ್ಯೆ ಲೋಮಹರ್ಣಣ ತುಮುಲ ಯುದ್ಧವು ನಡೆಯಿತು. ರಥಶ್ರೇಷ್ಠ ಶಿಖಂಡಿಯಾದರೋ ಕಿರೀಟಿಯಿಂದ ರಕ್ಷಿಸಲ್ಪಟ್ಟು ಧನುಸ್ಸನ್ನು ಕತ್ತರಿಸಲ್ಪಟ್ಟಿದ್ದ ಭೀಷ್ಮನನ್ನು ಹತ್ತು ಬಾಣಗಳಿಂದಲೂ, ಸಾರಥಿಯನ್ನು ಹತ್ತು ಬಾಣಗಳಿಂದಲೂ ಹೊಡೆದು ಒಂದರಿಂದ ಧ್ವಜವನ್ನು ತುಂಡರಿಸಿದನು. ಆಗ ಗಾಂಗೇಯನು ಇನ್ನೊಂದು ವೇಗವತ್ತರ ಧನುಸ್ಸನ್ನು ತೆಗೆದುಕೊಂಡು ಶಿಂಜಿನಿಯನ್ನು ಬಿಗಿದು ಸಿದ್ಧಮಾಡುವುದರಲ್ಲಿ ಫಲ್ಗುನನು ಅದನ್ನೂ ಕೂಡ ಮೂರು ನಿಶಿತ ಬಾಣಗಳಿಂದ ಕತ್ತರಿಸಿಬಿಟ್ಟನು. ಹೀಗೆ ಕ್ರುದ್ಧ ಪಾಂಡವ ಪರಂತಪ ಸವ್ಯಸಾಚಿಯು ಗಾಂಗೇಯನು ಹೊಸ ಹೊಸ ಧನುಸ್ಸನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಪುನಃ ಪುನಃ ಅವುಗಳನ್ನು ಕತ್ತರಿಸಿ ಹಾಕಿದನು. ಧನುಸ್ಸನ್ನು ತುಂಡರಿಸಿಕೊಂಡು ಸಂಕ್ರುದ್ಧನಾದ ಅವನು ನಾಲಿಗೆಯಿಂದ ತನ್ನ ಕಟಬಾಯಿಯನ್ನು ನೆಕ್ಕುತ್ತಾ, ಪರ್ವತವನ್ನೂ ಸೀಳಬಲ್ಲ ಶಕ್ತಿಯನ್ನು ಹಿಡಿದು ಸಂಕ್ರುದ್ಧನಾಗಿ ಅದನ್ನು ಅರ್ಜುನನ ರಥದ ಮೇಲೆ ಎಸೆದನು.
ವಜ್ರಾಯುಧದಂತೆ ಪ್ರಜ್ವಲಿಸುತ್ತಿರುವ ಅದು ತನ್ನ ಮೇಲೆ ಬೀಳಲಿರುವುದನ್ನು ನೋಡಿ ಸಂಕ್ರುದ್ಧ ಪಾಂಡವನಂದನನು ಐದು ನಿಶಿತ ಭಲ್ಲೆಗಳನ್ನು ತೆಗೆದುಕೊಂಡು ಭೀಷ್ಮನ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ಆ ಶಕ್ತಿಯನ್ನು ಐದು ಬಾಣಗಳಿಂದ ಐದು ಭಾಗಗಳಾಗಿ ತುಂಡರಿಸಿದನು. ಸಂಕ್ರುದ್ಧ ಕಿರೀಟಿಯಿಂದ ತುಂಡರಿಸಲ್ಪಟ್ಟ ಅದು ಮೇಘಮಂಡಲದಿಂದ ತುಂಡಾಗಿ ಕೆಳಗೆ ಬೀಳುವ ಮಿಂಚಿನಂತೆ ಬಿದ್ದಿತು. ಆ ಶಕ್ತಿಯು ತುಂಡಾಗಿದ್ದುದನ್ನು ನೋಡಿ ಕ್ರೋಧಸಮನ್ವಿತ ವೀರ ಪರಪುರಂಜಯ ಭೀಷ್ಮನು ಬುದ್ಧಿಯಿಂದ ಚಿಂತಿಸತೊಡಗಿದನು: “ಒಂದುವೇಳೆ ಇವರ ರಕ್ಷಕನು ಮಹಾಬಲ ವಿಷ್ವಕ್ಸೇನನಾಗಿರದಿದ್ದರೆ ಈ ಪಾಂಡವರೆಲ್ಲರನ್ನೂ ಒಂದೇ ಒಂದು ಧನುಸ್ಸಿನಿಂದ ಸಂಹರಿಸಲು ನಾನು ಶಕ್ತನಿದ್ದೆ. ಈ ಎರಡು ಕಾರಣಗಳನ್ನಿಟ್ಟುಕೊಂಡು ನಾನು ಪಾಂಡವರೊಂದಿಗೆ ಹೋರಾಡುವುದಿಲ್ಲ – ಪಾಂಡವರು ಅವಧ್ಯರೆನ್ನುವುದು ಮತ್ತು ಶಿಖಂಡಿಯ ಸ್ತ್ರೀ ಭಾವತ್ವ. ಹಿಂದೆ ಕಾಲೀ ಸತ್ಯವತಿಯನ್ನು ತಂದಿತ್ತಾಗ ಸಂತೋಷಗೊಂಡ ತಂದೆಯು ನನಗೆ ಸ್ಚಚ್ಛಂದ ಮರಣ ಮತ್ತು ರಣದಲ್ಲಿ ಅವಧ್ಯತ್ವವನ್ನು ಪಾಲಿಸಿದ್ದನು. ಆ ಮೃತ್ಯುವಿನ ಕಾಲವು ನನಗೆ ಬಂದೊದಗಿದೆ ಎಂದು ತಿಳಿದುಕೊಳ್ಳುತ್ತೇನೆ.”
ಅಮಿತತೇಜಸ ಭೀಷ್ಮನ ಈ ಅಭಿಪ್ರಾಯವನ್ನು ತಿಳಿದ ಆಕಾಶದಲ್ಲಿದ್ದ ಋಷಿಗಳೂ ವಸುಗಳೂ ಭೀಷ್ಮನಿಗೆ ಹೇಳಿದರು: “ವೀರ! ನೀನು ಏನನ್ನು ನಿರ್ಧರಿಸಿದ್ದೀಯೋ ಅದು ನಮಗೂ ಬಹಳ ಪ್ರಿಯವಾಗಿದೆ. ಹಾಗೆಯೇ ಮಾಡು. ಯುದ್ಧದಿಂದ ಬುದ್ಧಿಯನ್ನು ಹಿಂತೆಗೆದುಕೋ!”
ಅವರ ಮಾತುಗಳು ಮುಗಿಯುತ್ತಿದ್ದಂತೆಯೇ ಮಂಗಳಕರವಾದ, ಅನುಕೂಲವಾದ, ಸುಗಂಧಯುಕ್ತವಾದ ಗಾಳಿಯು ತುಂತುರು ಹನಿಗಳೊಡನೆ ಬೀಸಿತು. ದೇವದುಂದುಭಿಗಳೂ ಗಟ್ಟಿಯಾಗಿ ಮೊಳಗಿದವು. ಭೀಷ್ಮನ ಮೇಲೆ ಪುಷ್ಪವೃಷ್ಟಿಯೂ ಸುರಿಯಿತು. ಅವರ ಸಂವಾದವನ್ನು ಅಲ್ಲಿರುವ ಬೇರೆ ಯಾರೂ ಕೇಳಿಸಿಕೊಳ್ಳಲಿಲ್ಲ. ಮಹಾಬಾಹು ಭೀಷ್ಮನನ್ನು ಬಿಟ್ಟು ಮುನಿಯ ತೇಜಸ್ಸಿನಿಂದ ಸಂಜಯನು ಮಾತ್ರ ಅದನ್ನು ಕೇಳಿಸಿಕೊಂಡನು. ಸರ್ವಲೋಕಪ್ರಿಯನಾದ ಭೀಷ್ಮನು ರಥದಿಂದ ಬೀಳುವವನಿದ್ದಾನೆ ಎಂದು ತ್ರಿದಶರಿಗೂ ಮಹಾ ಸಂಭ್ರಮವಾಯಿತು. ಮಹಾಮನಸ್ಕರಾದ ದೇವಗಣಗಳ ಈ ಮಾತನ್ನು ಕೇಳಿ ಶಾಂತನವ ಭೀಷ್ಮನು ಸರ್ವಾವರಣಗಳನ್ನೂ ಭೇದಿಸುವ ಹರಿತ ಬಾಣಗಳಿಂದ ಚುಚ್ಚಲ್ಪಟ್ಟರೂ ಬೀಭತ್ಸುವನ್ನು ತಡೆಯಲಿಲ್ಲ. ಆಗ ಶಿಖಂಡಿಯು ಕ್ರುದ್ಧನಾಗಿ ಭರತರ ಪಿತಾಮಹನ ವಕ್ಷಸ್ಥಲಕ್ಕೆ ಒಂಭತ್ತು ನಿಶಿತ ಬಾಣಗಳಿಂದ ಹೊಡೆದನು. ಭೂಕಂಪವಾದರೂ ಚಲಿಸದ ಪರ್ವತದಂತೆ ಕುರು ಪಿತಾಮಹ ಭೀಷ್ಮನು ಯುದ್ಧದಲ್ಲಿ ಅವನಿಂದ ಹೊಡೆಯಲ್ಪಟ್ಟರೂ ವಿಚಲಿತನಾಗಲಿಲ್ಲ.
ಆಗ ನಸುನಕ್ಕು ಬೀಭತ್ಸುವು ತನ್ನ ಗಾಂಡೀವ ಧನುಸ್ಸನ್ನು ಠೇಂಕರಿಸಿ ಗಾಂಗೇಯನನ್ನು ಇಪ್ಪತ್ತೈದು ಕ್ಷುದ್ರಕಗಳಿಂದ ಪ್ರಹರಿಸಿದನು. ಪುನಃ ಸಂಕ್ರುದ್ಧನಾದ ಧನಂಜಯನು ತ್ವರೆಮಾಡಿ ನೂರು ಬಾಣಗಳನ್ನು ಪ್ರಯೋಗಿಸಿ ಅವನ ಶರೀರದ ಎಲ್ಲ ಭಾಗಗಳನ್ನೂ ಮರ್ಮಸ್ಥಾನಗಳನ್ನೂ ಗಾಯಗೊಳಿಸಿದನು. ಈ ರೀತಿ ಮಹಾರಣದಲ್ಲಿದ್ದ ಅನ್ಯರೂ ಚೆನ್ನಾಗಿ ಅವನನ್ನು ಹೊಡೆಯುತ್ತಿರಲು ಅವೆಲ್ಲವನ್ನು ಅವನು ರುಕ್ಮಪುಂಖ ಶಿಲಾಶಿತ ಬಾಣಗಳಿಂದ ನಿರಸನಗೊಳಿಸಿದನು. ಆಗ ಸಂರಬ್ಧನಾದ ಕಿರೀಟಿಯು ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನ ಮೇಲೆ ಧಾಳಿಯಿಟ್ಟು ಅವನ ಧನುಸ್ಸನ್ನು ತುಂಡರಿಸಿದನು. ಆಗ ಅವನು ಅವನನ್ನು ಹತ್ತು ಬಾಣಗಳಿಂದ ಹೊಡೆದು, ಒಂದರಿಂದ ಧ್ವಜವನ್ನು ಕತ್ತರಿಸಿ, ಹತ್ತು ಬಾಣಗಳಿಂದ ಸಾರಥಿಯನ್ನು ತತ್ತರಿಸಿದನು. ಅನಂತರ ಗಾಂಗೇಯನು ಬಲವತ್ತರವಾದ ಇನ್ನೊಂದು ಧನುಸ್ಸನ್ನು ತೆಗೆದುಕೊಳ್ಳಲು ಅದನ್ನೂ ಸಹ ನಿಶಿತವಾದ ಮೂರು ಭಲ್ಲೆಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿದನು. ಆ ಮಹಾರಣದಲ್ಲಿ ಬಿಲ್ಲುಗಳನ್ನು ತೆಗೆದುಕೊಂಡ ಹಾಗೆ ನಿಮಿಷಮಾತ್ರದಲ್ಲಿ ಅದನ್ನು ತುಂಡರಿಸುತ್ತಿದ್ದನು. ಹೀಗೆ ಬಹಳಷ್ಟು ಧನುಸ್ಸುಗಳನ್ನೂ ಅವನು ತುಂಡರಿಸಿದನು. ಆಗ ಶಾಂತನವ ಭೀಷ್ಮನು ಬೀಭತ್ಸುವನ್ನು ವಿರೋಧಿಸಲಿಲ್ಲ. ಆಗಲೂ ಕೂಡ ಅವನನ್ನು ಇಪ್ಪತ್ತೈದು ಕ್ಷುದ್ರಕಗಳಿಂದ ಹೊಡೆಯಲಾಯಿತು. ಆಗ ಅತಿಯಾಗಿ ಗಾಯಗೊಂಡ ಆ ಮಹೇಷ್ವಾಸನು ದುಃಶಾಸನನಿಗೆ ಹೇಳಿದನು: “ಈ ಪಾಂಡವರ ಮಹಾರಥಿ ಪಾರ್ಥನು ಕ್ರುದ್ಧನಾಗಿ ರಣದಲ್ಲಿ ಅನೇಕ ಸಹಸ್ರ ಬಾಣಗಳಿಂದ ನನ್ನನ್ನೇ ಹೊಡೆಯುತ್ತಿದ್ದಾನೆ. ಸಮರದಲ್ಲಿ ಇವನನ್ನು ಗೆಲ್ಲಲು ವಜ್ರಭೃತನಿಗೂ ಶಕ್ಯವಿಲ್ಲ. ನನ್ನನ್ನು ಕೂಡ ವೀರ ದೇವ-ದಾನವ-ರಾಕ್ಷಸರು ಕೂಡಿದರೂ ಜಯಿಸಲು ಶಕ್ತರಿಲ್ಲ. ಇನ್ನು ದುರ್ಬಲರಾದ ಮನುಷ್ಯರು ಯಾವ ಲೆಕ್ಕಕ್ಕೆ?”
ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗಲೇ ಫಲ್ಗುನನು ಶಿಖಂಡಿಯನ್ನು ಮುಂದೆ ನಿಲ್ಲಿಸಿಕೊಂಡು ಭೀಷ್ಮನನ್ನು ನಿಶಿತ ಶರಗಳಿಂದ ಹೊಡೆದನು. ಆಗ ಅವನು ಪುನಃ ನಸುನಗುತ್ತಾ ದುಃಶಾಸನನಿಗೆ ಹೇಳಿದನು: “ಗಾಂಡೀವಧನ್ವಿಯ ನಿಶಿತ ಬಾಣಗಳಿಂದ ತುಂಬಾ ವೇದನೆಯಾಗುತ್ತಿದೆ. ವಜ್ರದ ಮೊನೆಯಂತೆ ತಾಗುತ್ತಿರುವ ಈ ಮೊನಚಾದ ಬಾಣಗಳು ದೇಹವನ್ನು ಪ್ರವೇಶಿಸುತ್ತಿವೆ. ಅವಿಚ್ಛಿನ್ನವಾಗಿ ಬಿಡಲ್ಪಡುವ ಈ ಬಾಣಗಳು ಶಿಖಂಡಿಯವಲ್ಲ! ಸುದೃಢವಾದ ಕವಚಗಳನ್ನು ಭೇದಿಸಿ ಇವು ದೇಹವನ್ನು ಹೊಗುತ್ತಿವೆ. ಮುಸಲದಂತೆ ನನ್ನನ್ನು ಗಾಯಗೊಳಿಸುತ್ತಿರುವ ಈ ಬಾಣಗಳು ಶಿಖಂಡಿಯವಲ್ಲ! ಬ್ರಹ್ಮದಂಡದ ಸಮನಾಗಿ ತಾಗುವ, ವಜ್ರವೇಗದ, ದುರಾಸದ ಬಾಣಗಳು ನನ್ನ ಪ್ರಾಣಗಳನ್ನು ಕಾಡುತ್ತಿವೆ. ಇವು ಶಿಖಂಡಿಯವಲ್ಲ! ನಾಲಿಗೆಗಳನ್ನು ಹೊರಚಾಚಿದ ಸಂಕ್ರುದ್ಧ ಪ್ರಚಂಡವಿಷಸರ್ಪಗಳಂತೆ ನನ್ನ ಮರ್ಮಗಳನ್ನು ಪ್ರವೇಶಿಸುತ್ತಿವೆ. ಈ ಬಾಣಗಳು ಶಿಖಂಡಿಯವಲ್ಲ! ಇಲ್ಲಿಗೇ ಬಂದಿರುವ ಯಮದೂದರಂತೆ ನನ್ನ ಪ್ರಾಣಗಳನ್ನು ನಾಶಪಡಿಸುತ್ತಿವೆ. ಗದೆ-ಪರಿಘದಂತೆ ತಾಗುತ್ತಿರುವ ಈ ಬಾಣಗಳು ಶಿಖಂಡಿಯವಲ್ಲ! ಮಾಘಮಾಸದಲ್ಲಿ ಏಡಿಗಳಂತೆ ನನ್ನ ಅಂಗಾಂಗಗಳನ್ನು ಒಡೆಯುತ್ತಿವೆ. ಈ ಬಾಣಗಳು ಅರ್ಜುನನವು. ಈ ಬಾಣಗಳು ಶಿಖಂಡಿಯವಲ್ಲ! ವೀರ ಗಾಂಡೀವಧನ್ವಿ ಕಪಿಧ್ವಜ ಜಿಷ್ಣುವನ್ನು ಬಿಟ್ಟು ಈ ಸರ್ವರಲ್ಲಿ ಬೇರೆ ಯಾವ ನರಾಧಿಪನೂ ನನಗೆ ದುಃಖವನ್ನುಂಟುಮಾಡಲಾರನು.”
ಹೀಗೆ ಹೇಳುತ್ತಿರುವ ಶಾಂತನವನು ಪಾಂಡವನನ್ನು ಸುಟ್ಟುಬಿಡುತ್ತಾನೋ ಎನ್ನುವಂತೆ ಪರಮಕ್ರುದ್ಧನಾಗಿ ಉರಿಯುತ್ತಿರುವ ಮೊನೆಯುಳ್ಳ ಶಕ್ತಿಯನ್ನು ಬಿಸುಟನು. ಕುರುವೀರರೆಲ್ಲರೂ ನೋಡುತ್ತಿದ್ದಂತೆಯೇ ಅರ್ಜುನನು ಅದನ್ನು ಅಲ್ಲಿ ಮೂರು ವಿಶಿಖೆಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿ ಕೆಳಗೆ ಬೀಳಿಸಿದನು. ಆಗ ಗಾಂಗೇಯನು ಕಡೆಯದಾಗಿ ಮೃತ್ಯುವಾಗಲಿ ಅಥವಾ ಜಯವಾಗಲೆಂದು ಸುವರ್ಣಭೂಷಿತವಾದ ಖಡ್ಗವನ್ನು ಮತ್ತು ಗುರಾಣಿಯನ್ನು ಕೈಗೆ ತೆಗೆದುಕೊಂಡನು. ರಥದಿಂದ ಕೆಳಗಿಳಿದು ಬರುತ್ತಿದ್ದ ಅವನ ಗುರಾಣಿಯನ್ನು ಅರ್ಜುನನು ನೂರಾರು ಚೂರುಗಳನ್ನಾಗಿ ಮಾಡಿ ಹಾಕಿದನು. ಅದು ಒಂದು ಅದ್ಭುತವಾಗಿತ್ತು. ಆಗ ಯುಧಿಷ್ಠಿರನು ಸಿಂಹದಂತೆ ಗರ್ಜಿಸಿ ತನ್ನ ಸೇನೆಗಳನ್ನು ಪ್ರಚೋದಿಸಿದನು: “ಗಾಂಗೇಯನ ಬಳಿ ಧಾವಿಸಿ! ನೀವು ಅವನಿಗಾಗಿ ಸ್ವಲ್ಪವೂ ಭಯಪಡಕೂಡದು!” ಆಗ ಅವರು ತೋಮರ, ಪ್ರಾಸ, ಬಾಣ, ಪಟ್ಟಿಶ, ಖಡ್ಗ, ನಿಶಿತ ನಾರಾಚ, ವತ್ಸದಂತ, ಭಲ್ಲ – ಇವೇ ಮೊದಲಾದ ಶಸ್ತ್ರಗಳನ್ನು ಹಿಡಿದು ಭೀಷ್ಮನೊಬ್ಬನನ್ನೇ ಆಕ್ರಮಣಿಸಿದರು. ಪಾಂಡವರ ಸೇನೆಯಲ್ಲಿ ಘೋರ ಸಿಂಹನಾದವು ಕೇಳಿಬಂದಿತು. ಭೀಷ್ಮನ ಜಯವನ್ನು ಬಯಸಿದ್ದ ಧೃತರಾಷ್ಟ್ರನ ಪುತ್ರರೂ ಕೂಡ ಅವನೊಬ್ಬನನ್ನೇ ಸುತ್ತುವರೆದು ಸಿಂಹನಾದಗೈದರು.
ಆಗ ಹತ್ತನೇ ದಿನದ ಯುದ್ಧದಲ್ಲಿ, ಭೀಷ್ಮಾರ್ಜುನರ ಸಮಾಗಮದಲ್ಲಿ, ಶತ್ರುಗಳೊಂದಿಗೆ ಕೌರವರ ತುಮುಲ ಯುದ್ಧವು ನಡೆಯಿತು. ಗಂಗೆಯು ಸಮುದ್ರವನ್ನು ಸೇರುವ ಸಮಯದಲ್ಲಿ ಮುಹೂರ್ತಕಾಲ ಸುಳಿಯುಂಟಾಗುವಂತೆ ನಡೆಯಿತು. ಯುದ್ಧಮಾಡುತ್ತಿರುವ ಸೈನಿಕರು ಪರಸ್ಪರರನ್ನು ಸಂಹರಿಸಿದರು. ರಕ್ತದಿಂದ ತೋಯ್ದು ಹೋಗಿದ್ದ ಭೂಮಿಯು ಭಯಂಕರವಾಗಿ ತೋರಿತು. ಸಮಪ್ರದೇಶ, ತಗ್ಗು ಪ್ರದೇಶಗಳು ಯಾವುದೆಂದು ತಿಳಿಯಲಾರದೇ ಹೋದವು. ಆ ಹತ್ತನೆಯ ದಿವಸ ಮರ್ಮಗಳನ್ನು ಭೇದಿಸಿದ ನೋವುಗಳುಳ್ಳವನಾಗಿದ್ದರೂ ಭೀಷ್ಮನು ಹತ್ತು ಸಾವಿರ ಯೋಧರನ್ನು ಕೊಂದು ರಣದಲ್ಲಿ ನಿಂತಿದ್ದನು. ಆಗ ಸೇನೆಯ ಮುಖದಲ್ಲಿ ನಿಂತಿದ್ದ ಪಾರ್ಥ ಧನಂಜಯನು ಕುರುಸೈನ್ಯವನ್ನು ಮಧ್ಯದಿಂದ ಓಡಿಸಲಾರಂಬಿಸಿದನು. ಆಗ ಕೌರವರು ಕುಂತೀಪುತ್ರ ಧನಂಜಯನ ಶ್ವೇತಹಯಗಳಿಗೆ ಮತ್ತು ಪೀಡಿಸುತ್ತಿರುವ ನಿಶಿತ ಶಸ್ತ್ರಗಳಿಂದ ಮಹಾರಣದಿಂದ ಪಲಾಯನಮಾಡಿದರು. ಆದರೆ ಸೌವೀರರು, ಕಿತವರು, ಪ್ರಾಚ್ಯರು, ಪ್ರತೀಚ್ಯರು, ಔತ್ತರೇಯರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಯರು, ವಸಾತಯರು, ಶಾಲ್ವಶ್ರಯರು, ತ್ರಿಗರ್ತರು, ಅಂಬಷ್ಠರು, ಮತ್ತು ಕೇಕಯರು ಈ ಹನ್ನೆರಡು ಜನಪದದವರು ಯುದ್ಧಮಾಡುತ್ತಿರುವ ಕಿರೀಟಿಯ ಶರಗಳಿಂದ ಪೀಡಿತರಾಗಿದ್ದರೂ ಕೂಡ ಸಂಗ್ರಾಮದಲ್ಲಿ ಭೀಷ್ಮನನ್ನು ಬಿಟ್ಟು ಓಡಲಿಲ್ಲ. ಆಗ ಅವರೆಲ್ಲ ಬಹಳ ಜನರು ಅವನೊಬ್ಬನನ್ನೇ ಎಲ್ಲಕಡೆಗಳಿಂದ ಸುತ್ತುವರೆದು ಆಕ್ರಮಿಸಿ ಶರವರ್ಷದಿಂದ ಅವನನ್ನು ಮುಚ್ಚಿದರು. “ಬೀಳಿಸಿರಿ! ಸೆರೆಹಿಡಿಯಿರಿ! ಯುದ್ಧಮಾಡಿರಿ! ಕತ್ತರಿಸಿ!” ಇವೇ ಮುಂತಾದ ತುಮುಲ ಶಬ್ಧಗಳು ಭೀಷ್ಮನ ರಥದ ಬಳಿಯಿಂದ ಕೇಳಿಬಂದವು.
ನೂರಾರು ಸಹಸ್ರಾರು ಶರಗಳಿಂದ ಹೊಡೆಯಲ್ಪಟ್ಟ ಭೀಷ್ಮನ ದೇಹದಲ್ಲಿ ಹೊಡೆಯಲ್ಪಡದ ಒಂದು ಅಂಗುಲದಷ್ಟು ಜಾಗವೂ ಇರಲಿಲ್ಲ. ಈ ವಿಧವಾಗಿ ಅವನು ಮೊನಚಾದ ಕೊನೆಗಳನ್ನುಳ್ಳ ಫಲ್ಗುನನ ಬಾಣಗಳಿಂದ ಚೂರ್ಣೀಕೃತನಾಗಿ, ದಿನಕರನು ಮುಳುಗುವುದಕ್ಕೆ ಸ್ವಲ್ಪಹೊತ್ತು ಮುಂಚೆ, ಧೃತರಾಷ್ಟ್ರನ ಮಕ್ಕಳು ನೋಡುತ್ತಿದ್ದಂತೆಯೇ, ತಲೆಯನ್ನು ಪೂರ್ವದಿಕ್ಕಿಗೆ ಹಾಕಿ ರಥದಿಂದ ಬಿದ್ದನು. ರಥದಿಂದ ಭೀಷ್ಮನು ಬೀಳುತ್ತಿರಲು “ಹಾ! ಹಾ!” ಎಂದು ದಿವಿಯಲ್ಲಿ ದೇವತೆಗಳ ಮತ್ತು ಎಲ್ಲ ಪಾರ್ಥಿವರ ಮಹಾ ಕೂಗು ಕೇಳಿಬಂದಿತು. ಮಹಾತ್ಮ ಪಿತಾಮಹನು ಬೀಳುತ್ತಿರುವುದನ್ನು ನೋಡಿ ಭೀಷ್ಮನೊಂದಿಗೆ ಕೌರವರೆಲ್ಲರ ಹೃದಯಗಳೂ ಕುಸಿದು ಬಿದ್ದವು. ಎಲ್ಲ ಧನುಷ್ಮತರಿಗೂ ಕೇತುಪ್ರಾಯನಾಗಿದ್ದ ಆ ಮಹಾಬಾಹುವು ಇಂದ್ರಧ್ವಜವು ಕೆಳಗೆ ಬೀಳುವಂತೆ ಶಬ್ಧಮಾಡುತ್ತ ಕೆಳಗೆ ಬಿದ್ದನು. ಆದರೆ ಶರಸಮೂಹಗಳಿಂದ ಸಮಾವೃತನಾಗಿದ್ದ ಅವನ ಶರೀರವು ಧರಣಿಯನ್ನು ಸ್ಪರ್ಷಿಸಲಿಲ್ಲ. ರಥದಿಂದ ಬಿದ್ದು ಶರತಲ್ಪದಲ್ಲಿ ಮಲಗಿದ್ದ ಮಹೇಷ್ವಾಸ ಪುರುಷರ್ಷಭನನ್ನು ಯಾವುದೋ ಒಂದು ದಿವ್ಯ ಭಾವವು ಸಮಾವೇಶಗೊಂಡಿತು. ಪರ್ಜನ್ಯನು ಮಳೆಸುರಿಸಿದನು. ಮೇದಿನಿಯು ಕಂಪಿಸಿದಳು. ಅವನು ಬೀಳಲು ದಿವಾಕರನೂ ವಾಲಿದಂತೆ ಕಂಡುಬಂದಿತು. ಇನ್ನೂ ಸಂಜ್ಞೆಯಿದ್ದು ಕಾಲವನ್ನು ಚಿಂತಿಸುತ್ತಿದ್ದ ಆ ವೀರನು ಅಂತರಿಕ್ಷದಲ್ಲಿ ಎಲ್ಲಕಡೆ ನಡೆಯುತ್ತಿದ್ದ ದಿವ್ಯ ಮಾತುಗಳನ್ನು ಕೇಳಿದನು: “ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ, ನರವ್ಯಾಘ್ರ ಮಹಾತ್ಮ ಗಾಂಗೇಯನು ಹೇಗೆ ದಕ್ಷಿಣಾಯನವು ಪ್ರಾಪ್ತವಾಗಿರುವಾಗ ಕಾಲವಶನಾಗುತ್ತಾನೆ?”
ಅದನ್ನು ಕೇಳಿ ಗಾಂಗೇಯನು “ಇನ್ನೂ ಇದ್ದೇನೆ!” ಎಂದು ಹೇಳಿದನು. ಭೂತಲದ ಮೇಲೆ ಬಿದ್ದರೂ ಉತ್ತರಾಯಣವನ್ನು ಪ್ರತೀಕ್ಷಿಸುತ್ತಾ ಕುರುಪಿತಾಮಹ ಭೀಷ್ಮನು ಪ್ರಾಣಗಳನ್ನು ಹಿಡಿದಿಟ್ಟುಕೊಂಡಿದ್ದನು. ಅವನ ಆ ಮತವನ್ನು ತಿಳಿದ ಹಿಮವತನ ಸುತೆ ಗಂಗೆಯು ಹಂಸರೂಪದಲ್ಲಿ ಮಹರ್ಷಿಗಳನ್ನು ಅಲ್ಲಿಗೆ ಕಳುಹಿಸಿದಳು. ಆಗ ಮಾನಸ ಸರೋವರದಲ್ಲಿ ವಾಸಿಸುತ್ತಿದ್ದ ಸಂಪಾತಿ ಹಂಸಗಳು ಒಟ್ಟುಗೂಡಿ ತ್ವರೆಮಾಡಿ ಕುರುಪಿತಾಮಹ ಭೀಷ್ಮನನ್ನು ನೋಡಲು ಎಲ್ಲಿ ನರಶ್ರೇಷ್ಠ ಪಿತಾಮಹನು ಶರತಲ್ಪದಲ್ಲಿ ಮಲಗಿದ್ದನೋ ಅಲ್ಲಿಗೆ ಆಗಮಿಸಿದರು. ಆ ಹಂಸರೂಪಿ ಮುನಿಗಳು ಭೀಷ್ಮನ ಬಳಿಸಾರಿ ಶರತಲ್ಪಸ್ಥನಾಗಿದ್ದ ಕುರುಪಿತಾಮಹ ಭೀಷ್ಮನನ್ನು ಕಂಡರು. ಆ ಮಹಾತ್ಮನನ್ನು ನೋಡಿ ಮನೀಷಿಣರು ಪ್ರದಕ್ಷಿಣೆ ಮಾಡಿ ಭಾಸ್ಕರನ ದಕ್ಷಿಣಾಯನದ ಕುರಿತು ಪರಸ್ಪರರಲ್ಲಿ ಸಮಾಲೋಚಿಸಿ ಭರತಶ್ರೇಷ್ಠ ಗಾಂಗೇಯನಿಗೆ ಹೇಳಿದರು: “ಭೀಷ್ಮನು ಮಹಾತ್ಮನಾಗಿದ್ದುಕೊಂಡು ದಕ್ಷಿಣಾಯನದಲ್ಲಿ ಹೇಗೆ ತಾನೇ ಮೃತ್ಯುವಶನಾಗುತ್ತಾನೆ?” ಎಂದು ಹೇಳಿಕೊಳ್ಳುತ್ತಾ ಹಂಸಗಳು ದಕ್ಷಿಣಾಭಿಮುಖವಾಗಿ ಹೋದವು. ಅವರನ್ನು ನೋಡಿ ಆ ಮಹಾಬುದ್ಧಿ ಶಾಂತನವನೂ ಕೂಡ ಯೋಚಿಸಿ ಅವರಿಗೆ ಹೇಳಿದನು: “ಆದಿತ್ಯನು ದಕ್ಷಿಣಾವೃತ್ತದಲ್ಲಿರುವಾಗ ನಾನು ಯಾವ ಕಾರಣಕ್ಕೂ ಹೋಗುವುದಿಲ್ಲ. ಇದು ನನ್ನ ಮನಸ್ಸಿನಲ್ಲಿದೆ. ಆದಿತ್ಯನು ಉತ್ತರಾವೃತ್ತಕ್ಕೆ ಬಂದಾಗಲೇ ನಾನು ನನ್ನ ಪುರಾತನ ಸ್ಥಾನವ್ಯಾವುದೋ ಅಲ್ಲಿಗೆ ಹೋಗುತ್ತೇನೆ. ಹಂಸಗಳೇ! ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಉತ್ತರಾಯಣದ ಪ್ರತೀಕ್ಷೆಯಿಂದ ಪ್ರಾಣಗಳನ್ನು ಧಾರಣೆಮಾಡಿಕೊಂಡಿರುತ್ತೇನೆ. ಏಕೆಂದರೆ ಪ್ರಾಣಗಳನ್ನು ಬಿಡುವ ನಿಯಂತ್ರಣ ಶಕ್ತಿಯು ನನ್ನಲ್ಲಿದೆ. ಅದರಿಂದ ಉತ್ತರಾಯಣದ ವರೆಗೆ ಪ್ರಾಣಗಳನ್ನು ಧರಿಸಿಕೊಂಡಿರುತೇನೆ. ಇಚ್ಛಂದ ಮರಣಿಯಾಗು ಎಂದು ನನಗೆ ನನ್ನ ಮಹಾತ್ಮ ಪಿತನು ವರವನ್ನಿತ್ತಿದ್ದನು. ಅದೇ ವರದಂತೆಯೇ ಆಗುತ್ತದೆ. ಪ್ರಾಣವನ್ನು ಬಿಡಲು ಸರಿಯಾದ ಸಮಯದ ವರೆಗೆ ಪ್ರಾಣಗಳನ್ನು ಧಾರಣೆಮಾಡಿಕೊಂಡಿರುತ್ತೇನೆ.”
ಹೀಗೆ ಆ ಹಂಸಗಳಿಗೆ ಹೇಳಿ ಶರತಲ್ಪದಲ್ಲಿ ಮಲಗಿದನು. ಈ ರೀತಿ ಮಹೌಜಸ ಶೃಂಗಪ್ರಾಯ ಭೀಷ್ಮನು ಬೀಳಲು ಪಾಂಡವರು ಮತ್ತು ಸೃಂಜಯರು ಸಿಂಹನಾದಗೈದರು. ಭರತರ ಮಧ್ಯಗನಾಗಿದ್ದ ಆ ಮಹಾಸತ್ತ್ವನು ಹತನಾಗಲು ಧೃತರಾಷ್ಟ್ರನ ಪುತ್ರರಿಗೆ ಮುಂದೇನು ಮಾಡಬೇಕೆಂದು ತೋಚದಾಯಿತು. ಕುರುಗಳಲ್ಲಿ ಸಮ್ಮೋಹವೂ ತುಮುಲವೂ ಉಂಟಾಯಿತು. ದುರ್ಯೋಧನನ ನಾಯಕತ್ವದಲ್ಲಿದ್ದ ನೃಪರು ನಿಟ್ಟುಸಿರು ಬಿಡುತ್ತಾ ಅಳತೊಡಗಿದರು. ವಿಷಾದರಾಗಿ, ಗರಬಡಿದವರಂತೆ, ಬಹುಕಾಲ ಹಾಗೆಯೇ ನಿಂತುಕೊಂಡರು. ಅವರಿಗೆ ಯುದ್ಧಮಾಡಲೂ ಕೂಡ ಮನಸ್ಸು ಬರಲಿಲ್ಲ. ಸಂಧಿವಾತ ಹಿಡಿದವರಂತೆ ಪಾಂಡವರನ್ನು ಆಕ್ರಮಣಿಸಲೂ ಇಲ್ಲ. ಅವಧ್ಯನಾದ ಮಹೌಜಸ ಶಂತನು ಪುತ್ರ ಭೀಷ್ಮನು ಹತನಾಗಲು ಕುರುಗಳಲ್ಲಿ ಅಗಾಧ ಅಭಾವವಾಯಿತೆಂದು ವಿಚಾರಿಸಿದರು. ಅವರು ಪ್ರವೀರರನ್ನು ಕಳೆದುಕೊಂಡರು. ನಿಶಿತ ಶರಗಳಿಂದ ತುಂಡರಿಸಲ್ಪಟ್ಟರು. ಸವ್ಯಸಾಚಿಯಿಂದ ನಿರ್ಜಿತರಾಗಿ ಏನು ಮಾಡಬೇಕೆಂದು ತಿಳಿಯದವರಾದರು. ಪಾಂಡವರಾದರೋ ಜಯವನ್ನು ಪಡೆದು ಪರಲೋಕಗಳಲ್ಲಿಯೂ ಉತ್ತಮ ಗತಿಗಳನ್ನು ಪಡೆದರು. ಪರಿಘಬಾಹುಗಳಾದ ಎಲ್ಲರೂ ಮಹಾಶಂಖಗಳನ್ನು ಊದಿದರು. ಪಾಂಚಾಲರೊಂದಿಗೆ ಸೋಮಕರೂ ಹರ್ಷಿಸಿದರು. ಸಹಸ್ರಾರು ಜಯಘೋಷಗಳಿಂದ ಆನಂದಿಸುತ್ತಿರಲು ಸುಮಹಾಬಲ ಭೀಮಸೇನನು ತೋಳುಗಳನ್ನು ಗಟ್ಟಿಯಾಗಿ ತಟ್ಟುತ್ತಾ ಕುಣಿದಾಡಿದನು. ಗಾಂಗೇಯನು ಬೀಳಲು ಎರಡೂ ಸೇನೆಗಳಲ್ಲಿ ವೀರರು ಶಸ್ತ್ರಗಳನ್ನು ಕೆಳಗಿಟ್ಟು ಎಲ್ಲ ಕಡೆಗಳಿಂದ ಧಾವಿಸಿಬಂದರು.
ಕೆಲವರು ಜೋರಾಗಿ ಅಳುತ್ತಿದ್ದರು. ಕೆಲವರು ಕೆಳಗೆ ಬಿದ್ದರು. ಇನ್ನು ಕೆಲವರು ಮೂರ್ಛೆಗೊಂಡರು. ಅನ್ಯರು ಕ್ಷತ್ರ ಧರ್ಮವನ್ನು ನಿಂದಿಸಿದರು. ಇನ್ನು ಕೆಲವರು ಭೀಷ್ಮನನ್ನು ಗೌರವಿಸಿದರು. ಋಷಿಗಳೂ ಪಿತೃಗಳೂ ಆ ಮಹಾವ್ರತನನ್ನು ಪ್ರಶಂಸಿಸಿದರು. ಭರತರ ಪೂರ್ವಜರೂ ಕೂಡ ಅವನನ್ನು ಪ್ರಶಂಸಿಸಿದರು. ವೀರ್ಯವಾನ್ ಧೀಮಾನ್ ಶಾಂತನವನು ಮಹೋಪನಿಷಧದ ಯೋಗವನ್ನು ಆಶ್ರಯಿಸಿ ಜಪಿಸುತ್ತಾ ಕಾಲಾಕಾಂಕ್ಷಿಯಾಗಿ ಸ್ಥಿತನಾದನು.
ಅರ್ಜುನನು ಭೀಷ್ಮನಿಗೆ ತಲೆದಿಂಬನ್ನು ಒದಗಿಸಿದ್ದುದು
ಕುರುವೃದ್ಧ ಪಿತಾಮಹನು ಆ ಸಾಯಂಕಾಲ ಧಾರ್ತರಾಷ್ಟ್ರರನ್ನು ವಿಷಾದಗೊಳಿಸಿ ಪಾಂಚಾಲರನ್ನು ಸಂತೋಷಗೊಳಿಸಿ ಭೂಮಿಯ ಮೇಲೆ ಬಿದ್ದನು. ರಥದಿಂದ ಜಾರಿ ಧರಣೀ ತಲದಲ್ಲಿ ಬಿದ್ದ ಭೀಷ್ಮನು ಮೇದಿನಿಗೆ ತಾಗದಹಾಗೆ ಶರತಲ್ಪತ ಮೇಲೆ ಮಲಗಿದನು. ಕುರುಗಳ ಸೀಮಾವೃಕ್ಷದಂತಿದ್ದ ಅವನು ಬೀಳಲು “ಹಾ! ಹಾ!” ಎಂದು ಭೂತಗಳ ತುಮುಲ ಶಬ್ಧವುಂಟಾಯಿತು. ಎರಡೂ ಸೇನೆಗಳ ಕ್ಷತ್ರಿಯರನ್ನು ಭಯವು ಆವೇಶಗೊಂಡಿತು. ಹರಿದ ಕವಚ ಧ್ವಜಗಳ ಶಾಂತನವ ಭೀಷ್ಮನನ್ನು ನೋಡಿ ಕುರುಗಳೂ ಪಾಂಡವರೂ ಅವನನ್ನು ಸುತ್ತುವರೆದರು. ಶಾಂತನವ ಭೀಷ್ಮನು ಹತನಾಗಲು ಆಕಾಶದಲ್ಲಿ ಅಂಧಕಾರವು ಕವಿಯಿತು. ಭಾನುಮತನು ಪ್ರಭಾಹೀನನಾದನು. ಭೂಮಿಯೂ ಕೂಡ ಭಯಂಕರ ಶಬ್ಧಮಾಡಿತು. “ಇವನು ಬ್ರಹ್ಮವಿದರಲ್ಲಿ ಶ್ರೇಷ್ಠನು. ಇವನು ಬ್ರಹ್ಮವಿದರ ಗತಿ.” ಎಂದು ಮಲಗಿದ್ದ ಭರತರ್ಷಭನ ಕುರಿತು ಭೂತಗಳು ಮಾತನಾಡಿಕೊಳ್ಳುತ್ತಿದ್ದವು. “ಹಿಂದೆ ಈ ಪುರುಷರ್ಷಭನು ತಂದೆ ಶಂತನುವು ಕಾಮಾರ್ತನಾಗಿದ್ದಾನೆಂದು ತಿಳಿದು ತನ್ನನ್ನು ಊರ್ಧ್ವರೇತಸನನ್ನಾಗಿ ಮಾಡಿಕೊಂಡನು.” ಹೀಗೆ ಹೇಳುತ್ತ ಶರತಲ್ಪಸ್ಥನಾಗಿದ್ದ ಭರತರ ಪ್ರಮುಖನಾಗಿದ್ದ ಅವನ ಕುರಿತಾಗಿ ಸಿದ್ಧ-ಚಾರಣರ ಸಹಿತ ಋಷಿಗಳು ಧಾವಿಸಿ ಬಂದರು.
ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾಗಲು ಧೃತರಾಷ್ಟ್ರನ ಪುತ್ರರು ಏನು ಮಾಡಲೂ ಕೂಡ ತಿಳಿಯದಾದರು. ಕಾಂತಿಯು ತೊಲಗಿ ವಿಷಣ್ಣವದನರಾದರು. ಲಜ್ಜಿತರಾಗಿ, ನಾಚಿಕೆಯಿಂದ ತಲೆಯನ್ನು ಕೆಳಮಾಡಿ ನಿಂತಿದ್ದರು. ಪಾಂಡವರಾದರೋ ಜಯವನ್ನು ಗಳಿಸಿ ಸಂಗ್ರಾಮದ ಅಗ್ರಭಾಗದಲ್ಲಿ ನಿಂತು ಎಲ್ಲರೂ ಸುವರ್ಣಮಯ ಜಾಲಗಳಿಂದ ಅಲಂಕೃತವಾದ ಮಹಾ ಶಂಖಗಳನ್ನು ಊದಿದರು. ಮಹಾಬಲಸಮನ್ವಿತರಾದ ಶತ್ರುಗಳನ್ನು ಹನನಗೊಳಿಸಿ ಅತಿಯಾದ ತೂರ್ಯನಿನಾದಗಳು ವಾದ್ಯಗಳು ಮೊಳಗಲು ಮಹಾಬಲ ಕೌಂತೇಯ ಭೀಮಸೇನನು ಮಹಾ ಹರ್ಷದಿಂದ ಕೂಡಿದವನಾಗಿ ಆಟವಾಡುತ್ತಿರುವುದು ಕಂಡುಬಂದಿತು. ಕುರುಗಳಲ್ಲಿಯೂ ಕೂಡ ಸಮ್ಮೋಹದ ತುಮುಲವುಂಟಾಯಿತು. ಕರ್ಣ-ದುರ್ಯೋಧನರೂ ಕೌರವರ ಧುರಂಧರರೂ ಭೀಷ್ಮನು ಬೀಳಲು ಪುನಃ ಪುನಃ ಸಿಟ್ಟುಸಿರು ಬಿಡುತ್ತಿದ್ದರು. ಎಲ್ಲಕಡೆ ಹಾಹಾಕಾರವೆದ್ದಿತು. ಎಲ್ಲರೂ ಲೋಕಮರ್ಯಾದೆಯನ್ನು ತೊರೆದು ವರ್ತಿಸತೊಡಗಿದರು.
ಭೀಷ್ಮನು ಬಿದ್ದುದನ್ನು ನೋಡಿ ದುಃಶಾಸನನು ಉತ್ತಮ ವೇಗದಲ್ಲಿ ದ್ರೋಣನ ಸೇನೆಯತ್ತ ಧಾವಿಸಿ ಹೋದನು. ಅಣ್ಣನಿಂದ ಕಳುಹಿಸಲ್ಪಟ್ಟ ಆ ವೀರ ಪುರುಷವ್ಯಾಘ್ರನು ತನ್ನ ಸೇನೆಯು ದುಃಖಿಸುತ್ತಿರಲು ಅದನ್ನು ಪ್ರಚೋದಿಸುತ್ತಾ ಹೊರಟನು. ಬರುತ್ತಿರುವ ದುಃಶಾಸನನನ್ನು ನೋಡಿ ಏನಾಯಿತು ಹೇಳು ಅವನನ್ನು ಸುತ್ತುವರೆದರು. ಆಗ ಕೌರವನು ಭೀಷ್ಮನು ನಿಹತನಾದುದನ್ನು ದ್ರೋಣನಿಗೆ ಹೇಳಿದನು. ಆ ಅಪ್ರಿಯವಾದುದನ್ನು ಕೇಳಿದ ತಕ್ಷಣ ದ್ರೋಣನು ರಥದಿಂದ ಕೆಳಗೆ ಬಿದ್ದನು. ಸಂಜ್ಞೆಗಳನ್ನು ಹಿಂದೆ ಪಡೆದು ಪ್ರತಾಪವಾನ ಭಾರದ್ವಾಜನು ತನ್ನ ಸೇನೆಗಳು ಯುದ್ಧವನ್ನು ನಿಲ್ಲಿಸುವಂತೆ ಮಾಡಿದನು. ಕುರುಗಳು ವಿನಿವೃತ್ತರಾದುದನ್ನು ಕಂಡು ಪಾಂಡವರು ಕೂಡ ಶೀಘ್ರಗ ದೂತರನ್ನು ಕಳುಹಿಸಿ ಎಲ್ಲ ವಲಯಗಳಲ್ಲಿಯೂ ಯುದ್ಧವನ್ನು ನಿಲ್ಲಿಸುವಂತೆ ಮಾಡಿದರು.
ಎರಡು ಸೇನೆಗಳು ವಿನಿವೃತ್ತರಾದ ನಂತರ ಪರಂಪರೆಯಂತೆ ಎಲ್ಲ ನರಾಧಿಪರೂ ಕವಚಗಳನ್ನು ಬಿಚ್ಚಿಟ್ಟು ಭೀಷ್ಮನ ಬಳಿ ಬಂದರು. ಆಗ ನೂರಾರು ಸಹಸ್ರಾರು ಯೋಧರು ಯುದ್ಧದಿಂದ ಹಿಂದಿರುಗಿ ಅಮರರು ಪ್ರಜಾಪತಿಯನ್ನು ಹೇಗೋ ಹಾಗೆ ಆ ಮಹಾತ್ಮನ ಬಳಿಸಾರಿದರು. ಮಲಗಿದ್ದ ಆ ಭರತರ್ಷಭ ಭೀಷ್ಮನ ಬಳಿಬಂದು ಪಾಂಡವರೂ ಕುರುಗಳೂ ಒಟ್ಟಿಗೇ ಅಭಿವಂದಿಸಿ ನಿಂತುಕೊಂಡರು. ಕೈಮುಗಿದು ಮುಂದೆ ನಿಂತಿದ್ದ ಪಾಂಡವರನ್ನೂ ಕುರುಗಳನ್ನೂ ಉದ್ದೇಶಿಸಿ ಧರ್ಮಾತ್ಮ ಭೀಷ್ಮ ಶಾಂತನವನು ಹೀಗೆ ಹೇಳಿದನು: “ಮಹಾಭಾಗರೇ! ನಿಮಗೆ ಸ್ವಾಗತ! ನಿಮಗೆ ಸ್ವಾಗತ! ಅಮರೋಪಮರಾಗಿರುವ ನಿಮ್ಮ ದರ್ಶನದಿಂದ ನಾನು ತೃಪ್ತನಾಗಿದ್ದೇನೆ.”
ಈ ರೀತಿ ಅವರನ್ನು ಅಭಿನಂದಿಸಿ ಅವನು ತನ್ನ ತಲೆಯು ಜೋಲಾಡುತ್ತಿರಲು “ನನ್ನ ಶಿರವು ಜೋಲಾಡುತ್ತಿದೆ. ಇದಕ್ಕೆ ಉಪಧಾನವನ್ನು ನೀಡಿ!” ಎಂದು ಹೇಳಿದನು. ಆಗ ನೃಪರು ಕೋಮಲವೂ ಮೃದುವೂ ಆದ ಹಲವು ತಲೆದಿಂಬುಗಳನ್ನು ತಂದರು. ಆದರೆ ಪಿತಾಮಹನು ಅವುಗಳ್ಯಾವುದನ್ನೂ ಇಷ್ಟಪಡಲಿಲ್ಲ. ನರವ್ಯಾಘ್ರನು ನಗುತ್ತಾ ಆ ನೃಪರಿಗೆ ಹೇಳಿದನು: “ಪಾರ್ಥಿವರೇ! ವೀರಶಯ್ಯೆಗೆ ಇವು ತಕ್ಕುದಾದವಲ್ಲ!” ಆಗ ಸರ್ವಲೋಕಮಹಾರಥ ದೀರ್ಘಬಾಹು ಪಾಂಡವ ನರಶ್ರೇಷ್ಠ ಧನಂಜಯನನ್ನು ವೀಕ್ಷಿಸಿ ಹೇಳಿದನು: “ಧನಂಜಯ ಮಹಾಬಾಹೋ! ನನ್ನ ಈ ಶಿರಸ್ಸು ಜೋಲಾಡುತ್ತಿದೆ. ಇದಕ್ಕೆ ಯುಕ್ತವಾದುದು ಏನೆಂದು ನೀನು ಯೋಚಿಸುತ್ತೀಯೋ ಅಂತಹ ತಲೆದಿಂಬನ್ನು ನೀಡು!”
ಅವನು ಮಹಾಚಾಪವನ್ನು ಕೆಳಗಿಟ್ಟು, ಪಿತಾಮಹನನ್ನು ನಮಸ್ಕರಿಸಿ, ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಈ ಮಾತನ್ನಾಡಿದನು: “ಕುರುಶ್ರೇಷ್ಠ! ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ! ಆಜ್ಞಾಪಿಸು! ದುರ್ಧರ್ಷ! ಪಿತಾಮಹ! ನಾನು ನಿನ್ನ ಸೇವಕ. ಏನು ಮಾಡಲಿ?”
ಶಾಂತನವನು ಅವನಿಗೆ ಹೇಳಿದನು: “ಮಗೂ! ನನ್ನ ಶಿರವು ಜೋಲಾಡುತ್ತಿದೆ. ನನಗೆ ತಲೆದಿಂಬನ್ನು ಮಾಡಿಕೊಡು. ಈ ಶಯನಕ್ಕೆ ಅನುರೂಪವಾದುದನ್ನು ಶೀಘ್ರವಾಗಿ ನೀಡು! ಏಕೆಂದರೆ ನೀನು ಸರ್ವಧನುಷ್ಮತರಲ್ಲಿ ಶ್ರೇಷ್ಠ. ಕ್ಷತ್ರಧರ್ಮವನ್ನು ತಿಳಿದಿರುವೆ. ಬುದ್ಧಿಸತ್ತ್ವಗುಣಾನ್ವಿತನಾಗಿರುವೆ.”
ಫಲ್ಗುನನಾದರೋ ಹಾಗೆಯೇ ಆಗಲೆಂದು ಹೇಳಿ ಅವನ ಹೇಳಿಕೆಯನ್ನು ಪೂರೈಸಲು ತೊಡಗಿದನು. ಗಾಂಡೀವವನ್ನು ಹಿಡಿದು ನತಪರ್ವಣ ಶರಗಳನ್ನು ಅಭಿಮಂತ್ರಿಸಿದನು. ಭರತರ ಪ್ರಮುಖನಾದ ಮಹಾತ್ಮನ ಅನುಮತಿಯನ್ನು ಪಡೆದು ಮಹಾವೇಗದ ಮೂರು ತೀಕ್ಷ್ಣ ಬಾಣಗಳಿಂದ ಅವನ ಶಿರವನ್ನು ಮೇಲಕ್ಕೆತ್ತಿಸಿದನು. ಅಭಿಪ್ರಾಯವನ್ನು ತಿಳಿದುಕೊಂಡ ಧರ್ಮಾತ್ಮ ಸವ್ಯಸಾಚಿಯಿಂದ ಧರ್ಮಾರ್ಥತತ್ತ್ವವಿದು ಭರತಶ್ರೇಷ್ಠ ಭೀಷ್ಮನು ಸಂತುಷ್ಟನಾದನು. ನೀಡಿದ ತಲೆದಿಂಬಿಗಾಗಿ ಕುಂತೀಪುತ್ರ ಯೋಧರಲ್ಲಿ ಶ್ರೇಷ್ಠ, ಸುಹೃದಯರ ಪ್ರೀತಿವರ್ಧಕ ಧನಂಜಯನನ್ನು ಪ್ರತಿನಂದಿಸಿದನು: “ಪಾಂಡವ! ಹಾಸಿಗೆಗೆ ತಕ್ಕುದಾದ ತಲೆದಿಂಬನ್ನೇ ಒದಗಿಸಿಕೊಟ್ಟಿದ್ದೀಯೆ. ಬೇರೆ ಏನನ್ನಾದರೂ ಕೊಟ್ಟಿದ್ದರೆ ಸಿಟ್ಟಿನಿಂದ ನಾನು ನಿನ್ನನ್ನು ಶಪಿಸುತ್ತಿದ್ದೆ. ಧರ್ಮದಲ್ಲಿ ನಿಷ್ಠೆಯನ್ನಿಟ್ಟಿರುವ ಕ್ಷತ್ರಿಯರು ಇದೇ ರೀತಿಯ ಶರತಲ್ಪದ ಮೇಲೆ ಮಲಗಬೇಕು.”
ಬೀಭತ್ಸುವಿಗೆ ಹೀಗೆ ಹೇಳಿ ಪಾಂಡವರ ಹತ್ತಿರ ನಿಂತಿದ್ದ ಎಲ್ಲ ರಾಜರು ಮತ್ತು ರಾಜಪುತ್ರರಿಗೆ ಹೇಳಿದನು: ”ನೃಪರೇ! ಈ ಹಾಸಿಗೆಯನ್ನು ನೋಡಿ. ಈ ಶಯ್ಯೆಯಲ್ಲಿಯೇ ನಾನು ರವಿಯ ಆವರ್ತನದವರೆಗೆ ಮಲಗಿರುತ್ತೇನೆ. ಯಾವಾಗ ವೈಶ್ರವಣನಿರುವ ದಿಕ್ಕಿಗೆ ಉತ್ತಮ ತೇಜಸ್ಸಿನ ರಥದಲ್ಲಿ ಕಿರಣಗಳಿಂದ ಲೋಕಗಳನ್ನು ಸುಡುತ್ತಾ ದಿವಾಕರನು ಹೋಗುತ್ತಾನೋ ಆವಾಗ ನಾನು ಸುಹೃದವೂ ಸುಪ್ರಿಯವೂ ಆದ ಪ್ರಾಣಗಳನ್ನು ಬಿಡುತ್ತೇನೆ. ನಾನಿರುವ ಇಲ್ಲಿ ಸುತ್ತಲೂ ಕಂದಕವನ್ನು ತೋಡಿರಿ. ನೂರಾರು ಶರಗಳಿಂದ ಚುಚ್ಚಲ್ಪಟ್ಟ ನಾನು ಇಲ್ಲಿಯೇ ವಿವಸ್ವತನನ್ನು ಧ್ಯಾನಿಸುತ್ತಿರುತ್ತೇನೆ. ಪಾರ್ಥಿವರೇ! ಈಗಲಾದರೂ ನೀವು ವೈರತ್ವವನ್ನು ಬಿಸುಟು ಯುದ್ಧದಿಂದ ವಿರತರಾಗಿರಿ!”
ಆಗ ಶರೀರದಲ್ಲಿ ಚುಚ್ಚುಕೊಂಡಿರುವ ಬಾಣಗಳನ್ನು ತೆಗೆಯುವುದರಲ್ಲಿ ಕುಶಲರಾದ ಸಕಲವಿಧದ ಉಪಕರಣಗಳಿಂದಲೂ ಯುಕ್ತರಾದ ಕುಶಲರೂ ಸುಶಿಕ್ಷಿತರೂ ಆದ ವೈದ್ಯರು ಬಂದರು. ಅವರನ್ನು ನೋಡಿ ಜಾಹ್ನವೀ ಪುತ್ರನು ಈ ಮಾತುಗಳನ್ನು ಹೇಳಿದನು: “ಈ ಚಿಕಿತ್ಸಕರಿಗೆ ಕೊಡಬೇಕಾದುದನ್ನು ಕೊಟ್ಟು ಗೌರವಿಸಿ ಕಳುಹಿಸಿಕೊಡಿ. ನಾನು ಈ ಅವಸ್ಥೆಯಲ್ಲಿರುವಾಗ ವೈದ್ಯರಿಗೆ ಇಲ್ಲಿ ಯಾವ ಕೆಲಸವೂ ಇಲ್ಲ. ಕ್ಷತ್ರಧರ್ಮವು ಪ್ರಶಂಸೆಮಾಡುವ ಉತ್ತಮ ಗತಿಯನ್ನು ನಾನು ಹೊಂದಿದ್ದೇನೆ. ಮಹೀಪಾಲರೇ! ಶರತಲ್ಪಗತನಾಗಿರುವ ನನಗೆ ಇದು ಧರ್ಮವಾಗುವುದಿಲ್ಲ. ಈ ಬಾಣಗಳೊಂದಿಗೇ ಅಂತ್ಯದಲ್ಲಿ ದಗ್ಧನಾಗಬೇಕೆಂದು ಇಚ್ಚಿಸುತ್ತೇನೆ.”
ಅವನ ಆ ಮಾತನ್ನು ಕೇಳಿ ದುರ್ಯೋಧನನು ಯಥಾರ್ಹವಾಗಿ ವೈದ್ಯರನ್ನು ಗೌರವಿಸಿ ಕಳುಹಿಸಿಕೊಟ್ಟನು. ಅಮಿತತೇಜಸ್ವಿ ಭೀಷ್ಮನ ಪರಮ ಧರ್ಮನಿಷ್ಠೆಯನ್ನು ನೋಡಿ ನಾನಾ ಜನಪದೇಶ್ವರರು ವಿಸ್ಮಯಗೊಂಡರು. ಅವನಿಗೆ ತಲೆದಿಂಬನ್ನು ಮಾಡಿಕೊಟ್ಟು ಪಾಂಡವರು ಮತ್ತು ಕೌರವರ ಸಹಿತ ಎಲ್ಲ ಮಹಾರಥರೂ ಶುಭ ಶಯನದಲ್ಲಿ ಮಲಗಿದ್ದ ಮಹಾತ್ಮ ಭೀಷ್ಮನ ಬಳಿಸಾರಿ ಪ್ರದಕ್ಷಿಣೆಗಳನ್ನು ಮಾಡಿ ಅಭಿವಂದಿಸಿದರು. ಭೀಷ್ಮನಿಗೆ ಎಲ್ಲ ಕಡೆಗಳಿಂದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಸಾಯಾಂಕಾಲ ರಕ್ತಸಿಕ್ತರಾದ ವೀರರು ತಮ್ಮ ತಮ್ಮ ಶಿಬಿರಗಳನ್ನು ಸ್ಮರಿಸಿಕೊಳ್ಳುತ್ತಾ ಪರಮ ಆತುರದಿಂದ ಬಿಡಾರಗಳಿಗೆ ತೆರಳಿದರು. ಭೀಷ್ಮನ ಪತನದಿಂದ ಹೃಷ್ಟರಾಗಿ, ಪರಮ ಪ್ರೀತರಾಗಿದ್ದ ಮಹಾರಥ ಪಾಂಡವರ ಬಳಿಬಂದು ಯಾದವನು ಕಾಲಕ್ಕೆ ತಕ್ಕಂತೆ ಧರ್ಮಪುತ್ರ ಯುಧಿಷ್ಠಿರನಿಗೆ ಹೇಳಿದನು: “ಕೌರವ್ಯ! ಅದೃಷ್ಟವಷಾತ್ ವಿಜಯಿಯಾಗಿರುವೆ. ಅದೃಷ್ಟವಷಾತ್ ಭೀಷ್ಮನು ಕೆಳಗುರುಳಿದನು. ಈ ಸತ್ಯಸಂಧ ಮಹಾರಥನು, ಸರ್ವಶಸ್ತ್ರಪಾರಗನು ಮನುಷ್ಯರಿಂದ ಅಥವಾ ದೇವತೆಗಳಿಂದ ಅವಧ್ಯ. ಕೇವಲ ದೃಷ್ಟಿಪಾತದಿಂದಲೇ ಇತರರನ್ನು ಧ್ವಂಸಮಾಡಬಲ್ಲ ನಿನ್ನನ್ನು ಸಮೀಪಿಸಿದ ಅವನು ನಿನ್ನ ಘೋರ ದೃಷ್ಟಿಯಿಂದಲೇ ದಗ್ಧನಾದನು.”
ಹೀಗೆ ಹೇಳಿದ ಜನಾರ್ದನನಿಗೆ ಧರ್ಮರಾಜನು ಉತ್ತರಿಸಿದನು: “ನಿನ್ನ ಪ್ರಸಾದದಿಂದ ಜಯ. ನಿನ್ನ ಕ್ರೋಧದಿಂದ ಪರಾಜಯ. ಭಕ್ತರಿಗೆ ಅಭಯಂಕರನಾಗಿರುವ ಕೃಷ್ಣ! ನೀನೇ ನಮಗೆ ಶರಣ್ಯ. ಕೇಶವ! ನೀನು ಯಾರವನಾಗಿರುವೆಯೋ ಅವರಿಗೆ ಜಯವೊದಗಿದರೆ ಆಶ್ಚರ್ಯವೇನಿಲ್ಲ. ಸಮರದಲ್ಲಿ ನಿತ್ಯವೂ ನೀನು ನಮಗೆ ರಕ್ಷಕ. ನಿತ್ಯವೂ ನೀನು ನಮ್ಮ ಹಿತರತ. ಸರ್ವಥಾ ನಿನ್ನನ್ನು ಪಡೆದಿರುವಾಗ ಇದು ಆಶ್ಚರ್ಯವೇನಲ್ಲ ಎಂದು ನನಗನ್ನಿಸುತ್ತದೆ.”
ಹೀಗೆ ಹೇಳಿದುದಕ್ಕೆ ಮುಗುಳ್ನಕ್ಕು ಜನಾರ್ದನನು “ಪಾರ್ಥಿವೋತ್ತಮ! ಈ ಮಾತು ನಿನಗೆ ಯುಕ್ತರೂಪವೇ ಆಗಿದೆ” ಎಂದು ಉತ್ತರಿಸಿದನು.
ಅರ್ಜುನನು ಗಾಂಗೇಯನಿಗೆ ಪಾನೀಯವನ್ನಿತ್ತಿದುದು; ದುರ್ಯೋಧನನಿಗೆ ಭೀಷ್ಮನ ಉಪದೇಶ
ರಾತ್ರಿಯು ಬರಲು ಸರ್ವ ಪಾರ್ಥಿವರೂ, ಪಾಂಡವ-ಧಾರ್ತರಾಷ್ಟ್ರರು ಪಿತಾಮಹನಲ್ಲಿಗೆ ಆಗಮಿಸಿದರು. ಆ ವೀರಶಯನದಲ್ಲಿ ಮಲಗಿದ್ದ ವೀರ ಕ್ಷತ್ರಿಯರ್ಷಭ ಕುರುಸತ್ತಮನನ್ನು ಅಭಿವಾದಿಸಲು ಕ್ಷತ್ರಿಯರು ಉಪಸ್ಥಿತರಾದರು. ಕನ್ಯೆಯರು ಚಂದನ-ಚೂರ್ಣ-ಲಾಜ-ಮಾಲೆಗಳೆಲ್ಲವನ್ನು ತಂದು, ಸ್ತ್ರೀಯರು, ಬಾಲರು, ವೃದ್ಧರು, ಅನೇಕ ಪ್ರೇಕ್ಷಕ ಜನರೂ ಉದಯಿಸುತ್ತಿರುವ ಸೂರ್ಯನ ಬಳಿ ಭೂತಗಳು ಸಾಗುವಂತೆ ಶಾಂತನವನ ಬಳಿ ಬಂದರು. ವಾದ್ಯಗಾರರು, ವರ್ತಕರು, ವೇಶ್ಯೆಯರು, ನಟನರ್ತಕರು, ಶಿಲ್ಪಿಗಳು ವೃದ್ಧ ಕುರುಪಿತಾಮಹನಲ್ಲಿಗೆ ಬಂದರು. ಕೌರವ-ಪಾಂಡವರು ಇಬ್ಬರೂ ಯುದ್ಧವನ್ನು ನಿಲ್ಲಿಸಿ, ಸನ್ನಾಹಗಳನ್ನು ಕಳಚಿ, ಆಯುಧಗಳನ್ನು ಬದಿಗಿಟ್ಟು ಒಟ್ಟಿಗೇ ಯಥಾಪೂರ್ವವಾಗಿ ವಯಸ್ಸಿಗೆ ತಕ್ಕಂತೆ ಅನ್ಯೋನ್ಯರಿಗೆ ಪ್ರೀತಿ ತೋರಿಸಿ ಆ ದುರಾಧರ್ಷ, ಅರಿಂದಮ ದೇವವ್ರತನ ಬಳಿ ಕುಳಿತುಕೊಂಡರು. ನೂರಾರು ಪಾರ್ಥಿವರಿಂದ ಕೂಡಿದ ಭೀಷ್ಮನಿಂದ ಶೋಭಿತವಾದ ಆ ಭಾರತೀ ಸಮಿತಿಯು ದಿವಿಯಲ್ಲಿನ ಆದಿತ್ಯಮಂಡಲದಂತೆ ಬೆಳಗಿ ಶೋಭಿಸಿತು. ಪಿತಾಮಹನನ್ನು ಉಪಾಸಿಸುತ್ತಿದ್ದ ಆ ನೃಪರು ದೇವೇಶ ಪಿತಾಮಹನನ್ನು ಉಪಾಸಿಸುವ ದೇವತೆಗಳಂತೆ ಶೋಭಿಸಿದರು. ಭೀಷ್ಮನಾದರೋ ಧೈರ್ಯದಿಂದ ವೇದನೆಗಳನ್ನು ನಿಗ್ರಹಿಸಿಕೊಂಡು, ಶರಗಳಿಂದ ಅಭಿತಪ್ತನಾಗಿ, ಅಷ್ಟೊಂದು ಸಂತೋಷವಿಲ್ಲದೇ ಹೇಳಿದನು: “ಶರಗಳಿಂದ ಗಾಯಗೊಂಡು ನನ್ನ ದೇಹವು ಸುಡುತ್ತಿದೆ. ಶರಗಳ ಸಂತಾಪದಿಂದ ಮೂರ್ಛಿತನಾಗಿದ್ದೇನೆ. ಪಾನೀಯವನ್ನು ಬಯಸುತ್ತಿದ್ದೇನೆ” ಎಂದು ಆ ರಾಜರಿಗೆ ಹೇಳಿದನು. ಆಗ ಅಲ್ಲಿದ್ದ ಕ್ಷತ್ರಿಯರು ಬೇಗನೇ ಶುಚಿರುಚಿಯಾದ ಭಕ್ಷ್ಯಗಳನ್ನು ಶೀತಲ ಸಿಹಿನೀರಿನ ಬಿಂದಿಗೆಗಳನ್ನೂ ತರಿಸಿದರು. ತಂದಿರುವ ಅವುಗಳನ್ನು ನೋಡಿ ಶಾಂತನವ ಭೀಷ್ಮನು ಹೇಳಿದನು: “ಅಯ್ಯಾ! ಇಂದು ನಾನು ಮನುಷ್ಯರ ಯಾವ ಭೋಗಗಳನ್ನೂ ಭೋಗಿಸಲು ಶಕ್ಯನಿಲ್ಲ. ಮನುಷ್ಯನಿಂದ ಬೇರೆಯಾಗಿ ಶರಶಯ್ಯಗತನಾಗಿದ್ದೇನೆ. ಶಶಿಸೂರ್ಯರು ಹಿಂದಿರುಗುವುದನ್ನು ಕಾಯುತ್ತಾ ಇದ್ದೇನೆ.”
ಹೀಗೆ ದೀನ ಮಾತುಗಳನ್ನು ಸರ್ವ ಪಾರ್ಥಿವರಿಗೆ ಹೇಳಿ ಮಹಾಬಾಹು ಧನಂಜಯನಿಗೆ ಹೇಳಿದನು. ಕೂಡಲೇ ಮಾಹಾಬಾಹುವು ಪಿತಾಮಹನಿಗೆ ಅಂಜಲೀಬದ್ಧನಾಗಿ ನಮಸ್ಕರಿಸಿ ನಿಂತು ಏನು ಮಾಡಲಿ? ಎಂದು ಕೇಳಿದನು. ಕೈಮುಗಿದು ಮುಂದೆ ನಿಂತಿದ್ದ ಆ ಪಾಂಡವನನ್ನು ನೋಡಿ ಧರ್ಮಾತ್ಮ ಭೀಷ್ಮನು ಪ್ರೀತನಾಗಿ ಧನಂಜಯನಿಗೆ ಹೇಳಿದನು: “ನನ್ನ ಈ ಶರೀರವು ಸುಡುತ್ತಿದೆ. ಈ ಮಹಾ ಶರಗಳು ಎಲ್ಲೆಲ್ಲಿಯೂ ನನ್ನನ್ನು ಚುಚ್ಚುತ್ತಿವೆ. ನನ್ನ ಮರ್ಮಸ್ಥಾನಗಳು ತುಂಬಾ ನೋಯುತ್ತಿವೆ. ನನ್ನ ಬಾಯಿಯು ಒಣಗಿದೆ. ಅರ್ಜುನ! ಶರೀರದ ಆಹ್ಲಾದಕ್ಕಾಗಿ ನನಗೆ ನೀರನ್ನು ಕೊಡು. ಯಥಾವಿಧಿಯಾಗಿ ನೀರನ್ನು ಕೊಡಲು ನೀನೇ ಶಕ್ತ.”
ಹಾಗೆಯೇ ಆಗಲೆಂದು ವೀರ್ಯವಾನ್ ಅರ್ಜುನನು ರಥವನ್ನೇರಿ ಗಾಂಡೀವವನ್ನು ಬಲವನ್ನುಪಯೋಗಿಸಿ ಹೆದೆಯೇರಿಸಿ ಠೇಂಕರಿಸಿದನು. ಸಿಡಿಲಿನ ಧ್ವನಿಯಂತಿದ್ದ ಧನುಸ್ಸಿನ ಠೇಂಕಾರ ಶಬ್ಧವನ್ನು ಕೇಳಿ ಅಲ್ಲಿದ್ದ ಎಲ್ಲ ಭೂತಗಳೂ ಎಲ್ಲ ರಾಜರೂ ಭಯಗೊಂಡರು. ಆಗ ಆ ರಥಿಗಳಲ್ಲಿ ಶ್ರೇಷ್ಠ ಮಹಾಯಶ ಪಾರ್ಥನು ರಥದಿಂದ ಮಲಗಿದ್ದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಭರತಶ್ರೇಷ್ಠನಿಗೆ ಪ್ರದಕ್ಷಿಣೆ ಮಾಡಿ, ಉರಿಯುತ್ತಿರುವ ಶರವನ್ನು ಅಭಿಮಂತ್ರಿಸಿ ಪರ್ಜನ್ಯಾಸ್ತ್ರವನ್ನು ಸಂಯೋಜಿಸಿ ಸರ್ವಲೋಕಗಳೂ ನೋಡುತ್ತಿರಲು ಭೀಷ್ಮನ ಬಲಭಾಗದಲ್ಲಿ ಭೂಮಿಗೆ ಹೊಡೆದನು. ಆಗ ಒಡನೆಯೇ ಶುದ್ಧವಾದ, ಮಂಗಳವಾದ, ಶೀತಲವಾದ, ಅಮೃತಕಲ್ಪವಾದ, ದಿವ್ಯ ಗಂಧರಸಗಳಿಂದ ಕೂಡಿದ ನೀರು ಬುಗ್ಗೆಯಂತೆ ಹೊರಚಿಮ್ಮಿತು. ಆ ಶೀತಲ ನೀರ ಧಾರೆಯಿಂದ ದಿವ್ಯಪರಾಕ್ರಮಿ ಪಾರ್ಥನು ಕುರುಋಷಭ ಭೀಷ್ಮನನ್ನು ತೃಪ್ತಿಗೊಳಿಸಿದನು. ಶಕ್ರನಂತೆಯೇ ಮಾಡಿದ ಪಾರ್ಥನ ಆ ಕರ್ಮದಿಂದ ಅಲ್ಲಿದ್ದ ವಸುಧಾಧಿಪರು ಪರಮ ವಿಸ್ಮಿತರಾದರು. ಬೀಭತ್ಸುವಿನ ಆ ಅತಿಮಾನುಷ ಅದ್ಭುತ ಕರ್ಮವನ್ನು ನೋಡಿ ಕುರುಗಳು ಛಳಿಯಿಂದ ಪೀಡಿತಗೊಂಡ ಹಸುಗಳಂತೆ ನಡುಗಿದರು. ವಿಸ್ಮಯದಿಂದ ಎಲ್ಲಕಡೆ ನೃಪರು ಉತ್ತರೀಯಗಳನ್ನು ಹಾರಿಸಿದರು. ಎಲ್ಲಕಡೆ ಶಂಖ ದುಂದುಭಿಗಳ ನಿರ್ಘೋಷದ ತುಮುಲವುಂಟಾಯಿತು. ಶಾಂತನವನೂ ಕೂಡ ತೃಪ್ತನಾಗಿ ಬೀಭತ್ಸುವಿಗೆ ಸರ್ವಪಾರ್ಥಿವವೀರರ ಸನ್ನಿಧಿಯಲ್ಲಿ ಗೌರವಿಸುವಂತೆ ಹೇಳಿದನು: “ಮಹಾಬಾಹೋ! ಕೌರವನಂದನ! ನಿನ್ನಲ್ಲಿ ಇದು ಇದೆಯೆಂದರೆ ವಿಚಿತ್ರವೇನೂ ಅಲ್ಲ. ಹಿಂದೆ ಅಮಿತದ್ಯುತಿ ಋಷಿಯಾಗಿದ್ದೆ ಎಂದು ನಾರದನು ಹೇಳಿದ್ದನು. ದೇವತೆಗಳೊಂದಿಗೆ ದೇವೇಂದ್ರನೂ ಸಹ ಮಾಡಲಾಗದಂತಹ ಮಹಾ ಕಾರ್ಯವನ್ನು ವಾಸುದೇವನ ಸಹಾಯದಿಂದ ನೀನು ಮಾಡುತ್ತೀಯೆ. ಪಾರ್ಥ! ತಿಳಿದವರು ನಿನ್ನನ್ನು ಎಲ್ಲ ಕ್ಷತ್ರಿಯರಿಗೂ ಮೃತ್ಯುಸ್ವರೂಪನೆಂದು ಹೇಳುತ್ತಾರೆ. ಧನುರ್ಧರರಲ್ಲಿ ಪ್ರಧಾನನು ನೀನು. ಪೃಥ್ವಿಯಲ್ಲಿ ನರರಲ್ಲಿ ಪ್ರವರ. ಜಗತ್ತಿನಲ್ಲಿ ಮನುಷ್ಯನು ಶ್ರೇಷ್ಠ. ಪಕ್ಷಿಗಳಲ್ಲಿ ಗರುಡನು ಶ್ರೇಷ್ಠ. ಜಲಾಶಯಗಳಲ್ಲಿ ಸಾಗರವು ಶ್ರೇಷ್ಠ. ನಾಲ್ಕು ಪಾದಗಳಿರುವವುಗಳಲ್ಲಿ ಗೋವು ಶ್ರೇಷ್ಠ. ಆದಿತ್ಯನು ತೇಜಸ್ಸುಳ್ಳವುಗಳಲ್ಲಿ ಶ್ರೇಷ್ಠ. ಗಿರಿಗಳಲ್ಲಿ ಹಿಮವತನು ಶ್ರೇಷ್ಠ. ಜಾತಿಗಳಲ್ಲಿ ಬ್ರಾಹ್ಮಣನು ಶ್ರೇಷ್ಠ. ಧನ್ವಿಗಳಲ್ಲಿ ನೀನು ಶ್ರೇಷ್ಠ. ಧಾರ್ತರಾಷ್ಟ್ರನು ನಾನು ಹೇಳಿದ ಮಾತುಗಳನ್ನು, ವಿದುರ, ದ್ರೋಣ, ರಾಮ, ಜನಾರ್ದನ ಮತ್ತು ಸಂಜಯನೂ ಕೂಡ ಪುನಃ ಪುನಃ ಹೇಳಿದುದನ್ನು ಕೇಳಲಿಲ್ಲ. ದುರ್ಯೋಧನನು ವಿಪರೀತ ಬುದ್ಧಿಯುಳ್ಳವ. ಮೂಢನಂತಿದ್ದಾನೆ. ನನ್ನ ಮಾತುಗಳನ್ನು ಗೌರವಿಸುವುದಿಲ್ಲ. ಶಾಸ್ತ್ರಗಳನ್ನು ಮೀರಿ ನಡೆಯುವ ಅವನು ಭೀಮನ ಬಲದಿಂದ ನಿಹತನಾಗಿ ಬಹುಕಾಲದವರೆಗೆ ಮಲಗುತ್ತಾನೆ.”
ಅವನ ಆ ಮಾತುಗಳನ್ನು ಕೇಳಿ ಕೌರವೇಂದ್ರ ದುರ್ಯೋಧನನು ದೀನ ಮನಸ್ಕನಾದನು. ಅದನ್ನು ತಿಳಿದ ಶಾಂತನವನು ಅವನ ಕಡೆ ತಿರುಗಿ ಹೇಳಿದನು: “ರಾಜನ್! ಕೇಳು. ಕೋಪವನ್ನು ದೂರಮಾಡು. ದುರ್ಯೋಧನ! ಧೀಮತ ಪಾರ್ಥನು ಶೀತನ ಅಮೃತ ಗಂಧಿ ನೀರಿನ ಧಾರೆಯನ್ನು ಹುಟ್ಟಿಸಿದುದನ್ನು ನೀನೇ ನೋಡಿದೆ. ಇದನ್ನು ಮಾಡುವವರು ಈ ಲೋಕದಲ್ಲಿ ಬೇರೆ ಯಾರು ಇದ್ದುದೂ ತಿಳಿದಿಲ್ಲ. ಆಗ್ನೇಯ, ವಾರುಣ, ಸೌಮ್ಯ, ವಾಯುವ್ಯ, ವೈಷ್ಣವ, ಐಂದ್ರ, ಪಾಶುಪದ, ಪಾರಮೇಷ್ಠ್ಯ, ಪ್ರಜಾಪದಿ, ಧಾತು, ತ್ವಷ್ಟು, ಸವಿತು ಎಲ್ಲ ದಿವ್ಯಾಸ್ತ್ರಗಳೂ ಮಾನುಷಲೋಕದಲ್ಲೆಲ್ಲಾ ಧನಂಜಯನಿಗೆ ಮಾತ್ರ ತಿಳಿದಿದೆ. ದೇವಕೀಪುತ್ರ ಕೃಷ್ಣನನ್ನು ಬಿಟ್ಟು ಇದು ಬೇರೆಯಾರಿಗೂ ತಿಳಿದಿಲ್ಲ. ಮಗೂ! ಪಾಂಡವರನ್ನು ಯುದ್ಧದಲ್ಲಿ ಗೆಲ್ಲಲು ಎಂದೂ ಶಕ್ಯವಿಲ್ಲ. ಯಾರು ಅಮಾನುಷ ಕರ್ಮಗಳನ್ನು ಮಾಡಿದ್ದಾನೋ ಆ ಮಹಾತ್ಮ, ಸತ್ತ್ವವತ, ಸಮರದಲ್ಲಿ ಶೂರ, ಆಹವಶೋಭಿ, ಸಮರ ಕೌಶಲನೊಡನೆ ಸಂಧಿಯನ್ನು ಮಾಡಿಕೋ. ಎಲ್ಲಿಯವರೆಗೆ ಮಹಾಬಾಹು ಕೃಷ್ಣನು ಕುರುಸಂಸದಿಯ ಸ್ವಧೀನದಲ್ಲಿರುತ್ತಾನೋ ಅಲ್ಲಿಯವರೆಗೆ ಶೂರ ಪಾರ್ಥನೊಂದಿಗೆ ಸಂಧಿಯನ್ನು ಮಾಡಿಕೋ. ಅರ್ಜುನನ ಸನ್ನತಪರ್ವ ಶರಗಳಿಂದ ನಿನ್ನ ಸೇನೆಯು ನಿಃಶೇಷವಾಗಿ ನಾಶವಾಗುವುದರೊಳಗೆ ನೀನು ಸಂಧಿಯನ್ನು ಮಾಡಿಕೋ. ಸಮರದಲ್ಲಿ ಸಹೋದರರು ಮತ್ತು ಬಹಳಷ್ಟು ನೃಪರು ಇನ್ನೂ ಹತಶೇಷರಾಗಿರುವಾಗಲೇ ಸಂಧಿಯನ್ನು ಮಾಡಿಕೋ. ಯುಧಿಷ್ಠಿರನ ಕ್ರೊಧದಿಂದ ಉರಿಯುವ ದೃಷ್ಟಿಯು ನಿನ್ನ ಸೇನೆಯನ್ನು ಸುಡುವುದರೊಳಗೇ ನೀನು ಸಂಧಿಯನ್ನು ಮಾಡಿಕೋ. ನಕುಲ, ಸಹದೇವ ಮತ್ತು ಪಾಂಡವ ಭೀಮಸೇನರು ನಿನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಗೊಳಿಸುವ ಮೊದಲು ಪಾಂಡವರೊದನೆ ಸೌಭ್ರಾತೃತ್ವವನ್ನು ಬಯಸು. ನನ್ನೊಂದಿಗೇ ಯುದ್ಧವು ಅಂತ್ಯಗೊಳ್ಳಲಿ. ಪಾಂಡವರೊಂದಿಗೆ ಸಂಧಿಮಾಡಿಕೋ. ನಾನು ಹೇಳಿದ ಈ ಮಾತುಗಳನ್ನು ನೀನು ಇಷ್ಟಪಡಬೇಕು. ಇದು ನಿನಗೂ ಕುಲಕ್ಕೂ ಕ್ಷೇಮವಾದುದೆಂದು ನನಗನ್ನಿಸುತ್ತದೆ. ಕೋಪವನ್ನು ತೊರೆದು ಪಾರ್ಥರೊಂದಿಗೆ ಸಂಧಿ ಮಾಡಿಕೋ. ಫಲ್ಗುನನ ಕೃತಕರ್ಮಗಳು ಪರ್ಯಾಪ್ತವಾಗಲಿ. ಭೀಷ್ಮನ ಅಂತ್ಯದೊಡನೆ ನಿಮ್ಮಲ್ಲಿ ಸೌಹಾರ್ದತೆಯುಂಟಾಗಲಿ. ಉಳಿದವರಾದರೂ ಚೆನ್ನಾಗಿರಲಿ. ಪ್ರಸೀದನಾಗು. ಪಾಂಡವರ ಅರ್ಧರಾಜ್ಯವನ್ನು ನೀಡು. ಇಂದ್ರಪ್ರಸ್ಥವನ್ನು ಧರ್ಮರಾಜನು ಆಳಲಿ. ಇದರಿಂದ ನೀನು ಪಾರ್ಥಿವರಲ್ಲಿ ಮಿತ್ರದ್ರೋಹೀ, ಪಾಪಿ ಎಂಬ ಕೀರ್ತಿಯನ್ನು ಪಡೆಯುವುಲ್ಲ. ನನ್ನ ಅವಸಾನದಿಂದ ಪ್ರಜೆಗಳಲ್ಲಿ ಶಾಂತಿಯು ನೆಲೆಸಲಿ. ಪಾರ್ಥಿವರು ಪ್ರೀತಿಮಂತರಾಗಿ ತಮ್ಮ ತಮ್ಮಲ್ಲಿಗೆ ಹಿಂದಿರುಗಲಿ. ತಂದೆಯು ಮಗನನ್ನು, ಮಾವನು ಅಳಿಯನನ್ನು, ಅಣ್ಣನು ತಮ್ಮನನ್ನು ಸೇರಲಿ. ಕಾಲಕ್ಕೆ ತಕ್ಕುದಾದ ನನ್ನ ಈ ಮಾತುಗಳನ್ನು ನೀನು ಕೇಳದೆಯೇ ಹೋದರೆ ಮೋಹಾವಿಷ್ಟನಾಗಿ ಅಬುದ್ಧಿಯಿಂದ ಪರಿತಪಿಸುತ್ತೀಯೆ. ಭೀಷ್ಮನ ಈ ಅಂತ್ಯವು ನಿಮ್ಮೆಲ್ಲರಿಗೂ ಅಂತ್ಯವೆನಿಸುತ್ತದೆ. ಸತ್ಯವನ್ನೇ ಹೇಳುತ್ತಿದ್ದೇನೆ.”
ಈ ಮಾತನ್ನು ಆಪಗೇಯನು ರಾಜರ ಮಧ್ಯದಲ್ಲಿ ಭಾರತನಿಗೆ ಕೇಳಿಸಿ, ಶರಗಳಿಂದ ಚುಚ್ಚಲ್ಪಟ್ಟು ಸಂತಪ್ತವಾದ ಮರ್ಮಗಳ ವೇದನೆಯನ್ನು ನಿಗ್ರಹಿಸಿಕೊಂಡು ಆತ್ಮನನ್ನು ಯೋಜಿಸಿ ಸುಮ್ಮನಾದನು.
ಭೀಷ್ಮ-ಕರ್ಣರ ಸಂವಾದ
ಶಂತನುನಂದನ ಭೀಷ್ಮನು ಸುಮ್ಮನಾಗಲು ಅಲ್ಲಿದ್ದ ಪಾರ್ಥಿವರೆಲ್ಲರೂ ತಮ್ಮ ತಮ್ಮ ಡೇರೆಗಳಿಗೆ ಪುನಃ ತೆರಳಿದರು. ಭೀಷ್ಮನು ಹತನಾದನೆಂದು ಕೇಳಿದ ಪುರುಷರ್ಷಭ ರಾಧೇಯನು ಸಂತ್ರಾತನಾಗಿ ತ್ವರೆಮಾಡಿ ಅವನಿರುವಲ್ಲಿಗೆ ಆಗಮಿಸಿದನು. ಅಲ್ಲಿ ಅವನು ದೇವ ಕಾರ್ತಿಕೇಯನು ಹುಟ್ಟಿದಾಗ ದರ್ಬೆಯ ಹಾಸಿನ ಮೇಲೆ ಮಲಗಿದ್ದಂತೆ ಶರ ಶಯ್ಯೆಯ ಮೇಲೆ ಮಲಗಿದ್ದ ಆ ಪ್ರಭು ಮಹಾತ್ಮನನ್ನು ನೋಡಿದನು. ಅಶ್ರುಕಂಠನಾಗಿದ್ದ ಮಹಾದ್ಯುತಿ ವೃಷಸೇನನು ಕಣ್ಣು ಮುಚ್ಚಿ ಮಲಗಿದ್ದ ಆ ವೀರನ ಪಾದಗಳ ಮೇಲೆ ಬಿದ್ದನು. “ಕುರುಶ್ರೇಷ್ಠ! ನಾನು ರಾಧೇಯ! ನೋಡಿದಾಗಲೆಲ್ಲಾ ನೀನು ನನ್ನನ್ನು ಅತ್ಯಂತ ಕೀಳುಮಾಡಿ ದ್ವೇಷಿಸುತ್ತಿದ್ದವನು.” ಎಂದು ಅವನಲ್ಲಿ ಮಾತನಾಡಿದನು.
ಅದನ್ನು ಕೇಳಿ ಕುರುವೃದ್ಧನು ಪ್ರಯತ್ನಪಟ್ಟು ಕಣ್ಣುಗಳನ್ನು ತೆರೆದು, ಮೆಲ್ಲನೇ ಅವನನ್ನು ನೋಡಿ ಸ್ನೇಹಭಾವದಿಂದ ಈ ಮಾತನ್ನಾಡಿದನು. ತನ್ನ ರಕ್ಷಕರನ್ನು ಕಳುಹಿಸಿ ಏಕಾಂತವಾಗಿದೆಯೆಂದು ಖಚಿತಪಡಿಸಿಕೊಂಡು, ತಂದೆಯು ಮಗನನ್ನು ಹೇಗೋ ಹಾಗೆ ಗಾಂಗೇಯನು ಒಂದೇ ತೋಳಿನಿಂದ ಅವನನ್ನು ಆಲಂಗಿಸಿಸಿದನು. “ಬಾ! ಬಾ! ನೀನು ಯಾವಾಗಲೂ ನನ್ನೊಡನೆ ಸ್ಪರ್ಧಿಸುತ್ತಿದ್ದೆ. ಇಲ್ಲಿಗೆ ನೀನು ಬಾರದೇ ಇದ್ದಿದ್ದರೆ ನಿನಗೆ ಖಂಡಿತವಾಗಿಯೂ ಶ್ರೇಯಸ್ಸಾಗುತ್ತಿರಲಿಲ್ಲ. ನೀನು ಕೌಂತೇಯ. ರಾಧೇಯನಲ್ಲವೆಂದು ನನಗೆ ನಾರದನಿಂದ ತಿಳಿದಿತ್ತು. ಕೃಷ್ಣದ್ವೈಪಾಯನ ಮತ್ತು ಕೇಶವನಿಗೂ ಇದು ತಿಳಿದಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಮಗೂ! ನಿನ್ನ ಮೇಲೆ ನನಗೆ ದ್ವೇಷವೇನೂ ಇಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಿನ್ನ ತೇಜೋವಧೆಗೋಸ್ಕರ ಕಠೋರ ಮಾತುಗಳನ್ನಾಡುತ್ತಿದ್ದೆ. ಏಕೆಂದರೆ ನೀನು ಅಕಸ್ಮಾತ್ತಾಗಿ (ವಿನಾಕಾರಣ) ಪಾಂಡವರನ್ನು ದ್ವೇಷಿಸುತ್ತಿರುವೆ ಎಂದು ನನ್ನ ಅಭಿಪ್ರಾಯವಾಗಿತ್ತು. ಸೂರ್ಯನಂದನ! ಇದರಿಂದಾಗಿ ನಾನು ನಿನ್ನ ಮೇಲೆ ಬಹಳಷ್ಟು ಬಾರಿ ಕಠೋರನಾಗಿದ್ದೆ. ಸಮರದಲ್ಲಿ ನಿನ್ನ ವೀರ್ಯವನ್ನು, ಶತ್ರುಗಳಿಗೆ ನೀನು ದುಃಸಹನೆನ್ನುವುದನ್ನು, ಬ್ರಾಹ್ಮಣ್ಯತ್ವವನ್ನೂ, ಶೌರ್ಯವನ್ನೂ, ದಾನವನ್ನೂ, ಪರಮ ಗತಿಯನ್ನೂ ನಾನು ತಿಳಿದುಕೊಂಡಿದ್ದೇನೆ. ಅಮರೋಪಮನಾಗಿರುವ ನಿನ್ನಂತಹ ಪುರುಷರು ಯಾರೂ ಇಲ್ಲ. ಕುಲಭೇದವನ್ನು ನೀನು ತರುತ್ತಿರುವೆಯೆಂದು ತಿಳಿದು ಸದಾ ಕಠೋರವಾಗಿ ಮಾತನಾಡುತ್ತಿದ್ದೆ. ಧನುರ್ವಿದ್ಯೆಯಲ್ಲಿ, ಬಿಲ್ಲನ್ನು ಸಂಧಾನಮಾಡುವುದರಲ್ಲಿ, ಲಾಘವದಲ್ಲಿ ಮತ್ತು ಅಸ್ತ್ರಬಲದಲ್ಲಿ ನೀನು ಫಲ್ಗುನ ಮತ್ತು ಮಹಾತ್ಮ ಕೃಷ್ಣನ ಸದೃಶನಾಗಿದ್ದೀಯೆ. ಕರ್ಣ! ರಾಜಪುರಕ್ಕೆ ಹೋಗಿ ನೀನು ಧನುಷ್ಮತನು ಒಬ್ಬನೇ ಕುರುರಾಜನಿಗೋಸ್ಕರ ರಾಜರನ್ನು ಅಪಮಾನಗೊಳಿಸಿದೆ. ಹಾಗೆಯೇ ದುರಾಸದ ಬಲವಾನ್ ಜರಾಸಂಧನು ಸಮರದಲ್ಲಿ ಸಮರಶ್ಲಾಘಿಯಾದ ನಿನ್ನ ಸರಿಸಮನಾಗಿರಲಿಲ್ಲ. ಬ್ರಹ್ಮಣ್ಯನಾಗಿರುವೆ. ಸತ್ಯವಾದಿಯಾಗಿರುವ. ತೇಜಸ್ಸಿನಲ್ಲಿ ಸೂರ್ಯನಂತಿರುವ. ದೇವಗರ್ಭನಾಗಿರುವೆ. ಸಮರಲ್ಲಿ ಅಜಿತನಾಗಿರುವೆ. ಭೂಮಿಯಲ್ಲಿ ಮನುಷ್ಯರಿಗಿಂತ ಅಧಿಕನಾಗಿರುವೆ. ಹಿಂದೆ ನಿನ್ನ ಮೇಲೆ ಇರಿಸಿಕೊಂಡಿದ್ದ ಕೋಪವನ್ನು ಇಂದು ನಾನು ತ್ಯಜಿಸುತ್ತಿದ್ದೇನೆ. ಪುರುಷ ಕೃತ್ಯದಿಂದ ದೈವವನ್ನು ಬದಲಾಯಿಸಲು ಶಕ್ಯವಿಲ್ಲ. ವೀರ ಪಾಂಡವರು ನಿನ್ನ ಸೋದರರು. ನೀನು ಅವರ ಅಣ್ಣ. ನನಗೆ ಪ್ರಿಯವಾದುದನ್ನು ಮಾಡಬೇಕೆಂದು ನೀನು ಬಯಸುವೆಯಾದರೆ ಅವರೊಂದಿಗೆ ಸೇರು. ನನ್ನ ಪತನದೊಂದಿಗೆ ವೈರತ್ವವು ಕೊನೆಗೊಳ್ಳಲಿ. ಪೃಥ್ವಿಯ ಸರ್ವ ರಾಜರೂ ಇಂದು ನಿರಾಮಯರಾಗಲಿ.”
ಕರ್ಣನು ಹೇಳಿದನು: “ಮಹಾಪ್ರಾಜ್ಞ! ಈ ಎಲ್ಲವೂ ನನಗೆ ತಿಳಿದಿದೆ. ನೀನು ಹೇಳಿದುದರಲ್ಲಿ ಸಂಶಯವಿಲ್ಲ. ನಾನು ಕೌಂತೇಯು. ಸೂತಜನಲ್ಲ. ಆದರೆ ನಾನು ಕುಂತಿಯಿಂದ ತಿರಸ್ಕರಿಸಲ್ಪಟ್ಟು ಸೂತನಿಂದ ವರ್ಧಿತನಾದೆ. ದುರ್ಯೋಧನನ ಐಶ್ವರ್ಯವನ್ನು ಭೋಗಿಸಿ ಅದನ್ನು ಸುಳ್ಳಾಗಿಸಲು ಮನಸ್ಸಿಲ್ಲ. ಸಂಪತ್ತು, ಶರೀರ, ಮಕ್ಕಳು, ಪತ್ನಿಯರು, ಯಶಸ್ಸು ಎಲ್ಲವನ್ನೂ ದುರ್ಯೋಧನನಿಗಾಗಿ ತ್ಯಜಿಸಿದ್ದೇನೆ. ಸುಯೋಧನನನ್ನು ಆಶ್ರಯಿಸಿ ನಾನು ನಿತ್ಯವೂ ಪಾಂಡವರನ್ನು ಕುಪಿತರನ್ನಾಗಿ ಮಾಡಿದ್ದೇನೆ. ಆಗುವಂಥಹುದು ಬಹುಷಃ ಅವಶ್ಯಕವಾಗಿದೆ ಮತ್ತು ತಡೆಯಲು ಸಾಧ್ಯವಿಲ್ಲ. ಪುರುಷ ಪ್ರಯತ್ನದಿಂದ ದೈವವನ್ನು ಬದಲಾಯಿಸಲು ಯಾರಿಗೆ ಉತ್ಸಾಹವಿದೆ? ನಿಮಿತ್ತಗಳು ಪೃಥ್ವಿಯ ಕ್ಷಯವನ್ನು ಸೂಚಿಸುತ್ತಿವೆ. ಸಂಸದಿಯಲ್ಲಿ ನೀನು ಇವುಗಳ ಕುರಿತು ತೋರಿಸಿದ್ದೀಯೆ, ಮಾತನಾಡಿದ್ದೀಯೆ. ಪಾಂಡವರು ಮತ್ತು ವಾಸುದೇವ ಇವರು ಅಜೇಯ ಪುರುಷರೆಂದು ನನಗೆ ಎಲ್ಲವೂ ತಿಳಿದಿದೆ. ಅವರೊಂದಿಗೆ ಯುದ್ಧಮಾಡಲು ಬಯಸುತ್ತೇನೆ. ತಾತ! ಪ್ರೀತಿಮನಸ್ಕನಾಗಿ ನನಗೆ ಸದಾ ಯುದ್ಧಮಾಡಲು ಅನುಮತಿಯನ್ನು ನೀಡು. ನಿನ್ನ ಅನುಮತಿಯಂತೆ ನಾನು ಯುದ್ಧಮಾಡಬಲ್ಲೆ ಎಂದು ನನ್ನ ಅಭಿಪ್ರಾಯ. ನಾನು ಏನೆಲ್ಲ ಕೆಟ್ಟ ಮಾತುಗಳನ್ನು ಆಡಿದ್ದೆನೋ, ಅಪಮಾನಗೊಳಿಸಿದ್ದೆನೋ, ಚಪಲತೆಯಿಂದ ಜಗಳವಾಡಿದ್ದೆನೋ ನನ್ನಿಂದಾದ ಅವೆಲ್ಲವನ್ನು ನೀನು ಕ್ಷಮಿಸಬೇಕು.”
ಭೀಷ್ಮನು ಹೇಳಿದನು: “ಕರ್ಣ! ಈ ಸುದಾರುಣ ವೈರವನ್ನು ಕೊಡವಿ ಹಾಕಲು ಶಕ್ಯವಿಲ್ಲವೆಂದಾದರೆ ನಿನಗೆ ಅನುಮತಿಯನ್ನು ಕೊಡುತ್ತೇನೆ. ಸ್ವರ್ಗವನ್ನು ಬಯಸಿ ಯುದ್ಧಮಾಡು. ಉತ್ತಮರ ನಡತೆಯಲ್ಲಿ ನಡೆದುಕೊಂಡು ಯಥಾ ಶಕ್ತಿಯಾಗಿ, ಉತ್ಸಾಹವಿದ್ದಷ್ಟು, ಸಿಟ್ಟನ್ನು ಬಿಟ್ಟು, ದುಡುಕದೇ ನೃಪನ ಕೆಲಸವನ್ನು ಮಾಡು. ನಾನು ನಿನಗೆ ಅನುಜ್ಞೆಯನ್ನು ನೀಡುತ್ತೇನೆ. ಏನು ಇಚ್ಛಿಸಿದ್ದೀಯೋ ಅದನ್ನು ಪಡೆ. ಕ್ಷತ್ರಧರ್ಮದಿಂದ ಲೋಕಗಳನ್ನು ಜಯಿಸುತ್ತೀಯೆ. ಸಂಶಯವಿಲ್ಲ. ಬಲವೀರ್ಯಗಳನ್ನು ಆಶ್ರಯಿಸಿ ನಿರಹಂಕಾರನಾಗಿ ಯುದ್ಧಮಾಡು. ಏಕೆಂದರೆ ಧರ್ಮಯುದ್ಧವೇ ಕ್ಷತ್ರಿಯನಿಗೆ ಶ್ರೇಯಸ್ಕರವು. ಬೇರೆ ಏನೂ ತಿಳಿದಿಲ್ಲ. ಶಾಂತಿಯನ್ನು ತರಲು ನಾನು ದೀರ್ಘಕಾಲ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ಅದನ್ನು ಮಾಡಲು ಶಕ್ಯನಾಗಲಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.”
ಹೀಗೆ ಹೇಳಿದ ಗಾಂಗೇಯನನ್ನು ವಂದಿಸಿ, ಪ್ರಸನ್ನಗೊಳಿಸಿ ರಾಧೇಯನು ರಥವನ್ನೇರಿ ದುರ್ಯೋಧನನ ಬಳಿಗೆ ಹೊರಟನು.
ರಣದಲ್ಲಿ ಭೀಷ್ಮನು ಹತನಾದುದನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು
ಯುದ್ಧಪ್ರಾರಂಭವಾದ ಹತ್ತನೆಯ ದಿನದ ರಾತ್ರಿ ಭೂತ-ಭವ್ಯ-ಭವಿಷ್ಯಗಳೆಲ್ಲವನ್ನೂ ತಿಳಿದಿದ್ದ ಪ್ರತ್ಯಕ್ಷದರ್ಶೀ ಗಾವಲ್ಗಣೀ ಸಂಜಯನು ರಣಭೂಮಿಯಿಂದ ಬಂದನು. ದುಃಖಿತನಾಗಿ ಯೋಚನೆಯಲ್ಲಿ ಮುಳುಗಿದ್ದ ಧೃತರಾಷ್ಟ್ರನಿಗೆ ಭಾರತ ಪಿತಾಮಹ ಭೀಷ್ಮನು ಹತನಾದನೆಂದು ಹೇಳಿದನು. “ಮಹಾರಾಜ! ನಿನಗೆ ನಮಸ್ಕಾರ. ನಾನು ಸಂಜಯ. ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾದನು. ಸರ್ವಯೋಧರಲ್ಲಿ ಶ್ರೇಷ್ಠನಾದ, ಸರ್ವ ಧನುಷ್ಮತರ ಧಾಮ ಕುರುಪಿತಾಮಹನು ಇಂದು ಶರತಲ್ಪಗತನಾಗಿದ್ದಾನೆ. ಯಾರ ವೀರ್ಯವನ್ನು ಆಶ್ರಯಿಸಿ ನಿನ್ನ ಪುತ್ರರು ದ್ಯೂತವನ್ನಾಡಿದ್ದರೋ ಆ ಭೀಷ್ಮನು ಯುದ್ಧದಲ್ಲಿ ಶಿಖಂಡಿಯಿಂದ ಹತನಾಗಿ ಮಲಗಿದ್ದಾನೆ. ಕಾಶಿಪುರಿಯಲ್ಲಿ ಮಹಾಮೃಧದಲ್ಲಿ ಸೇರಿದ್ದ ಎಲ್ಲ ಪೃಥಿವೀಪಾಲರನ್ನೂ ಒಬ್ಬನೇ ರಥದಲ್ಲಿದ್ದು ಗೆದ್ದ ಮಹಾರಥಿ, ಜಾಮದಗ್ನಿ ರಾಮನಿಗೂ ರಣದಲ್ಲಿ ಅಯೋಧ್ಯನಾದ ವಸುಸಂಭವ, ಜಾಮದಗ್ನಿಯಿಂದ ಹತನಾಗದೇ ಇದ್ದ ಭೀಷ್ಮನು ಇಂದು ಶಿಖಂಡಿಯಿಂದ ಹತನಾಗಿದ್ದಾನೆ. ಶೌರ್ಯದಲ್ಲಿ ಮಹೇಂದ್ರಸದೃಶನಾದ, ಸ್ಥೈರ್ಯದಲ್ಲಿ ಹಿಮಾಚಲದಂತಿರುವ, ಗಾಂಭೀರ್ಯದಲ್ಲಿ ಸಮುದ್ರದಂತಿರುವ, ಸಹಿಷ್ಣುತ್ವದಲ್ಲಿ ಧರೆಯ ಸಮನಾಗಿರುವ, ಆ ಶರದಂಷ್ಟ್ರ, ಧನುರ್ವಕ್ತ್ರ, ಖಡ್ಗಜಿಹ್ವ, ದುರಾಸದ, ನರಸಿಂಹ ನಿನ್ನ ಪಿತ ಭೀಷ್ಮನು ಇಂದು ಪಾಂಚಾಲ್ಯನಿಂದ ಹೊಡೆದುರಿಳಿಸಲ್ಪಟ್ಟಿದ್ದಾನೆ. ರಣದಲ್ಲಿ ಮುನ್ನುಗ್ಗುತ್ತಿರುವ ಯಾರನ್ನು ನೋಡಿ ಪಾಂಡವರ ಮಹಾಸೇನೆಯು ಸಿಂಹವನ್ನು ನೋಡಿದ ಗೋವುಗಳ ಹಿಂಡಿನಂತೆ ಭಯೋದ್ವಿಗ್ನವಾಗಿ ನಡುಗುತ್ತಿತ್ತೋ ಆ ಭೀಷ್ಮನು ನಿನ್ನ ಸೇನೆಗಳನ್ನು ಹತ್ತು ಹಗಲು-ರಾತ್ರಿ ಪರಿರಕ್ಷಿಸಿ, ಸುದುಷ್ಕರ ಕೃತ್ಯಗಳನ್ನೆಸಗಿ ಅಸ್ತನಾದ ಆದಿತ್ಯನಂತೆ ಹೊರಟುಹೋದನು. ಶಕ್ರನಂತೆ ಸಹಸ್ರಾರು ಬಾಣಗಳನ್ನು ಸುರಿಸಿ, ಯುದ್ಧದ ಹತ್ತು ದಿನಗಳ ಪ್ರತಿದಿನವೂ ಹತ್ತು ಸಾವಿರ ಯೋಧರನ್ನು ಸಂಹರಿಸಿ ಭೀಷ್ಮನು ಅನರ್ಹನಾಗಿದ್ದರೂ, ನಿನ್ನ ದುರ್ಮಂತ್ರದಿಂದ ಭಿರುಗಾಳಿಗೆ ಸಿಲುಕಿದ ಮರದಂತೆ ಕೆಳಗುರಿಳಿಸಲ್ಪಟ್ಟು ಭೂಮಿಯ ಮೇಲೆ ಮಲಗಿದ್ದಾನೆ.”
ಧೃತರಾಷ್ಟ್ರನು ಹೇಳಿದನು: “ಕುರುಗಳ ಋಷಭ ಭೀಷ್ಮನು ಶಿಖಂಡಿಯಿಂದ ಹೇಗೆ ಹತನಾದನು? ವಾಸವೋಪಮನಾದ ನನ್ನ ಪಿತನು ರಥದಿಂದ ಹೇಗೆ ಬಿದ್ದನು? ಸಂಜಯ! ತಂದೆಗಾಗಿ ಬ್ರಹ್ಮಚರ್ಯವನ್ನು ಪಾಲಿಸಿದ, ದೇವತೆಗಳಂತೆ ಬಲಶಾಲಿಯಾಗಿದ್ದ ಭೀಷ್ಮನಿಲ್ಲದೇ ನನ್ನ ಪುತ್ರರು ಹೇಗಿದ್ದಾರೆ? ಆ ಮಹಾಸತ್ವ, ಮಹೇಷ್ವಾಸ, ಮಹಾಬಲಿ, ಮಹಾರಥಿ, ನರವ್ಯಾಘ್ರನು ಹತನಾಗಲು ಅವರ ಮನಸ್ಸು ಹೇಗಿದೆ? ಕುರುಗಳ ಋಷಭ, ವೀರ, ಯುದ್ಧದಲ್ಲಿ ಕಂಪಿಸದ, ಪುರುಷರ್ಷಭನು ಹತನಾಗಿದ್ದಾನೆಂದು ನನಗೆ ಏನು ಹೇಳಿದೆಯೋ ಅದರಿಂದ ನನ್ನನ್ನು ಪರಮ ದುಃಖವು ಆವರಿಸಿದೆ. ಅವನನ್ನು ಯಾರು ಅನುಸರಿಸಿ ಹೋಗುತ್ತಿದ್ದರು? ಯಾರು ಮುಂದಿದ್ದರು? ಯಾರು ಅವನ ಪಕ್ಕದಲ್ಲಿದ್ದರು? ಮತ್ತು ಯಾರು ಅವನೊಂದಿಗೆ ಹೋಗುತ್ತಿದ್ದರು? ಶತ್ರುಗಳ ಸೇನೆಯನ್ನು ಹೊಗುವಾಗ ಆ ರಥಶಾರ್ದೂಲ, ಅಚ್ಯುತ, ಕ್ಷತ್ರಿಯರ್ಷಭನನ್ನು ಯಾವ ಶೂರರು ಹಿಂದಿನಿಂದ ರಕ್ಷಣೆಗೆಂದು ಅನುಸರಿಸುತ್ತಿದ್ದರು? ಸೂರ್ಯನು ಕತ್ತಲೆಯನ್ನು ಕಳೆಯುವಂತೆ ಶತ್ರುಸೈನ್ಯವನ್ನು ಕಳೆಯುತ್ತಿರುವ ಆ ಅಮಿತ್ರಹ, ಸಹಸ್ರರಶ್ಮಿಪ್ರತಿಮನು ಶತ್ರುಗಳಲ್ಲಿ ಭಯವನ್ನು ತಂದು ರಣದಲ್ಲಿ ಕೌರವಶಾಸನದಂತೆ ದುಷ್ಕರ ಕರ್ಮಗಳನ್ನು ಮಾಡಿದನು. ಯುದ್ಧದಲ್ಲಿ ಸೇನೆಗಳನ್ನು ಮುತ್ತಿಗೆ ಹಾಕುವಾಗ ದುರಾಧರ್ಷ ಕೃತ್ಯವನ್ನು ಮಾಡುವ ಅವನನ್ನು ಯಾರು ತಡೆಗಟ್ಟಿ ಕೊನೆಗೊಳಿಸಿದರು? ಪಾಂಡವರು ಯುದ್ಧದಲ್ಲಿ ಶಾಂತನವನನ್ನು ಹೇಗೆ ತಡೆದರು? ಸೇನೆಗಳನ್ನು ಕಡಿಯುತ್ತಿರುವ ಆ ಶರದಂಷ್ಟ್ರ, ತರಸ್ವಿ, ಚಾಪದಂತೆ ಬಾಯಿತೆರೆದುಕೊಂಡಿದ್ದ, ಘೋರ ಖಡ್ಗದಂಥಹ ನಾಲಗೆಯುಳ್ಳ, ದುರಾಸದ, ಅನ್ಯರನ್ನು ಮೀರಿಸಿದ್ದ, ಪುರುಷವ್ಯಾಘ್ರ, ಹ್ರೀಮಂತ, ಅಪರಾಜಿತ ಆ ಅಜಿತನನ್ನು ಯುದ್ಧದಲ್ಲಿ ಕೌಂತೇಯರು ಹೇಗೆ ಉರುಳಿಸಿದರು?”
ಧೃತರಾಷ್ಟ್ರನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಸಂಜಯನು ಮಹಾಭಾರತ ಯುದ್ಧದ ಮೊದಲ ಹತ್ತು ದಿನಗಳ ಆಗುಹೋಗುಗಳನ್ನು ವರ್ಣಿಸತೊಡಗಿದನು.
ಸಂಜಯನು ಹೇಳಿದನು: “ಮಹಾರಾಜ! ಅರ್ಹನಾಗಿರುವ ನೀನು ಕೇಳುತ್ತಿರುವ ಈ ಪ್ರಶ್ನೆಗಳು ನಿನಗೆ ತಕ್ಕುದಾಗಿಯೇ ಇವೆ. ಆದರೆ ಈ ದೋಷವನ್ನು ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ. ತನ್ನ ದುಶ್ಚರಿತಗಳಿಂದಾಗಿ ಅಶುಭವನ್ನು ಪಡೆದ ನರನು ಅದು ಅನ್ಯನು ಮಾಡಿದ್ದು ಎಂದು ಹೊರಿಸಬಾರದು. ಇತರರಿಗೆ ಯಾರು ಎಲ್ಲ ರೀತಿಯಲ್ಲಿ ನಿಂದನೀಯವಾಗಿ ನಡೆದುಕೊಳ್ಳುತ್ತಾನೋ ಅದನ್ನು ಮಾಡಿದವನು ಸರ್ವಲೋಕಗಳ ನಿಂದನೆಗೆ ಮತ್ತು ವಧೆಗೆ ಅರ್ಹ. ಮೋಸಗಳನ್ನು ಅರಿಯದೇ ಇದ್ದ ಪಾಂಡವರು ನಿನ್ನನ್ನು ನೋಡಿಕೊಂಡು ಅಮಾತ್ಯರೊಂದಿಗೆ ಕ್ಷಾಂತರಾಗಿ ಬಹುಕಾಲ ವನದಲ್ಲಿ ಅನುಭವಿಸಿದರು. ಯೋಗಬಲದಿಂದ ನಾನು ಪ್ರತ್ಯಕ್ಷವಾಗಿ ಕಂಡ ಕುದುರೆಗಳ, ಆನೆಗಳ, ಅಮಿತೌಜಸ ಶೂರರ ದೃಶ್ಯಗಳನ್ನು ನೋಡಿರುವುದನ್ನು ಕೇಳು. ಮನಸ್ಸನ್ನು ಶೋಕಕ್ಕೊಳಪಡಿಸಬೇಡ. ನರಾಧಿಪ! ಇದು ಹೀಗೆಯೇ ಆಗುತ್ತದೆಯೆಂದು ಹಿಂದೆಯೇ ದೈವ ನಿರ್ಧಿತವಾಗಿತ್ತು. ಯಾರ ಪ್ರಸಾದದಿಂದ ನನಗೆ ಈ ದಿವ್ಯವಾದ ಅನುತ್ತಮ ಜ್ಞಾನವು ಪ್ರಾಪ್ತವಾಯಿತೋ ಆ ನಿನ್ನ ತಂದೆ ಧೀಮತ ಪಾರಶರ್ಯನಿಗೆ ನಮಸ್ಕರಿಸುತ್ತೇನೆ. ಅತೀಂದ್ರಿಯ ದೃಷ್ಟಿ, ದೂರದ್ದನ್ನೂ ಕೇಳುವ, ಇನ್ನೊಬ್ಬರ ಚಿತ್ತವನ್ನು – ಅತೀತವನ್ನೂ ಅನಾಗತವನ್ನೂ – ತಿಳಿಯುವ ವಿಶೇಷ ಜ್ಞಾನ, ಸದಾ ಆಕಾಶದಲ್ಲಿಯೂ ಸಂಚರಿಸಬಲ್ಲ, ಯುದ್ಧದಲ್ಲಿ ಶಸ್ತ್ರಗಳು ತಾಗದ ವರದಾನವನ್ನು ನಾನು ಆ ಮಹಾತ್ಮನಿಂದ ಪಡೆದೆ. ವಿಚಿತ್ರವಾದ, ಪರಮಾದ್ಭುತವಾದ, ಲೋಮಹರ್ಷಣವಾದ ಈ ಭಾರತರ ಮಹಾಯುದ್ಧವನ್ನು ನಡೆದ ಹಾಗೆ ನನ್ನಿಂದ ಕೇಳು.”
ಆಗ ಸಂಜಯನು ಧೃತರಾಷ್ಟ್ರನಿಗೆ ಮೊದಲ ಹತ್ತು ದಿನಗಳ ಯುದ್ಧದವನ್ನು ಯಥಾವತ್ತಾಗಿ ವರ್ಣಿಸಿದನು.
