ಹದಿಮೂರನೇ ದಿನದ ಯುದ್ಧ - ೨: ಅರ್ಜುನನ ಪ್ರತಿಜ್ಞೆ, ಪಾಶುಪತ ಪುನಃ ಪ್ರಾಪ್ತಿ
ಯುಧಿಷ್ಠಿರ ವಿಲಾಪ
ಆ ರಥಯೂಥಪ ವೀರ ಸೌಭದ್ರನು ಹತನಾಗಲು ಎಲ್ಲರೂ ರಥದಿಂದ ಕೆಳಗಿಳಿದು, ಧನುಸ್ಸುಗಳನ್ನು ಕೆಳಗಿಟ್ಟು, ರಾಜಾ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು. ಸೌಭದ್ರನ ಕುರಿತೇ ಚಿಂತಿಸುತ್ತಾ ಅವರು ಮನಸ್ಸುಗಳನ್ನು ಕಳೆದುಕೊಂಡಿದ್ದರು. ಆಗ ಯುಧಿಷ್ಠಿರನು ತಮ್ಮನ ಮಗ ಮಹಾರಥ ವೀರ ಅಭಿಮನ್ಯುವು ಹತನಾದುದಕ್ಕೆ ತುಂಬಾ ದುಃಖಿತನಾಗಿ ವಿಲಪಿಸಿದನು: “ನನಗೆ ಪ್ರಿಯವಾದುದನ್ನು ಮಾಡಲು ಬಯಸಿ ಒಡೆಯಲು ಅಸಾಧ್ಯವಾದ ದ್ರೋಣನ ಸೇನೆಗಳ ವ್ಯೂಹವನ್ನು ಭೇದಿಸಿ ಇವನು ಗೋವುಗಳ ಮಧ್ಯೆ ಸಿಂಹದಂತೆ ಪ್ರವೇಶಿಸಿದನು. ಈ ಶೂರನು ರಣದಲ್ಲಿ ಎದುರಾಗಿ ಬಂದ ಮಹೇಷ್ವಾಸ ಕೃತಾಸ್ತ್ರ ಯುದ್ಧ ದುರ್ಮದರನ್ನು ಪ್ರಭಗ್ನರನ್ನಾಗಿಸಿ ಹಿಮ್ಮೆಟ್ಟುವಂತೆ ಮಾಡಿದನು. ನಮ್ಮ ಅತ್ಯಂತ ಶತ್ರುವಾದ ದುಃಶಾಸನನು ಯುದ್ಧದಲ್ಲಿ ಎದುರಾಗಲು ಅವನನ್ನು ಕ್ಷಿಪ್ರವಾಗಿ ಶರಗಳಿಂದ ಮೂರ್ಛಿತನನ್ನಾಗಿ ಮಾಡಿ ವಿಮುಖನನ್ನಾಗಿ ಮಾಡಿದನು. ಆ ವೀರ ಕಾರ್ಷ್ಣಿಯು ದುಸ್ತರವಾದ ದ್ರೋಣನ ಸೇನೆಯೆಂಬ ಮಹಾಸಾಗರವನ್ನು ದಾಟಿ ದೌಃಶಾಸನಿಯಿಂದ ವೈವಸ್ವತ ಪುರಕ್ಕೆ ಕಳುಹಿಸಲ್ಪಟ್ಟನು. ಸೌಭದ್ರನು ನಿಹತನಾದ ವಿಷಯವನ್ನು ಕೌಂತೇಯ ಅರ್ಜುನನಿಗೆ ಅಥವಾ ಪ್ರಿಯ ಪುತ್ರನನ್ನು ಕಾಣದ ಸುಭದ್ರೆಗೆ ಹೇಗೆ ತಾನೇ ಹೇಳಲಿ? ಇಂದು ನಾವು ಹೃಷೀಕೇಶ-ಧನಂಜಯರಿಗೆ ಯಾವ ಅಶ್ಲಿಷ್ಟವಾದ ಅಸಮಂಜಸವಾದ, ಅಪ್ರಿಯ ಮಾತುಗಳನ್ನು ಹೇಳಬಲ್ಲೆವು? ನನಗಿಷ್ಟವಾದ ಜಯವನ್ನು ಬಯಸಿ ನಾನೇ ಸುಭದ್ರೆಗೂ, ಕೇಶವಾರ್ಜುನರಿಗೂ ಅಪ್ರಿಯವಾದ ಈ ಕೃತ್ಯವನ್ನೆಸಗಿದ್ದೇನೆ! ಲುಬ್ಧನಾದವನಿಗೆ ಅವನ ದೋಷಗಳು ಕಾಣುವುದಿಲ್ಲ. ಮೋಹದಿಂದ ಲೋಭವು ಉಂಟಾಗುತ್ತದೆ. ಮಧುವನ್ನು ಅರಸುವವರು ಅವರ ಮುಂದಿರುವ ಪ್ರಪಾತವನ್ನು ಕಾಣುವುದಿಲ್ಲ. ನಾನೂ ಅವರಂತೆಯೇ! ಯಾರಿಗೆ ಭೋಜನ, ವಾಹನ, ಹಾಸಿಗೆಗಳನ್ನೂ ಭೂಷಣಗಳನ್ನೂ ಇತ್ತು ಪುರಸ್ಕರಿಸಬೇಕಾಗಿತ್ತೋ ಆ ನಮ್ಮ ಬಾಲಕನನ್ನು ಯುದ್ಧದಲ್ಲಿ ಮುಂದೆ ಕಳುಹಿಸಿದೆನಲ್ಲ! ಹೇಗೆ ತಾನೇ ಅಂತಹ ವಿಷಮ ಪರಿಸ್ಥಿತಿಯಲ್ಲಿ ಅಂತಹ ಬಾಲಕ, ತರುಣ, ಯುದ್ಧದಲ್ಲಿ ಪಳಗಿಲ್ಲದ ಅವನು ಕ್ಷೇಮದಿಂದ ಇದ್ದಾನು? ಒಳ್ಳೆಯ ಕುದುರೆಯಂತೆ ತನ್ನ ಮೇಲೇರಿರುವವನಿಗೆ ಆಪತ್ತಾಗುವ ಮೊದಲೇ ತನ್ನನ್ನು ತಾನೇ ಬಲಿಯಾಗಿತ್ತನು! ಅಯ್ಯೋ! ಇಂದು ನಾವು ಕೋಪದಿಂದ ಉರಿಯುತ್ತಿರುವ ಬೀಭತ್ಸುವಿನ ಶೋಕದ ದೃಷ್ಟಿಯಿಂದ ಸುಟ್ಟು ನೆಲದಮೇಲೆ ಮಲಗುವವರಿದ್ದೇವೆ! ಅಲುಬ್ಧನಾದ, ಮತಿವಂತನಾದ, ಲಜ್ಜಾವಂತನಾದ, ಕ್ಷಮಾವಂತನಾದ, ರೂಪವಾನ್, ಬಲಶಾಲೀ, ಸುಂದರ, ಮನ್ನಿಸುವ, ಧೀರ, ಪ್ರಿಯ, ಸತ್ಯಪರಾಯಣ, ಯಾವ ಮಹತ್ತರ ಕರ್ಮಿಯ ಕರ್ಮಗಳನ್ನು ದೇವತೆಗಳೂ ಶ್ಲಾಘಿಸುತ್ತಾರೋ, ನಿವಾತಕವಚರನ್ನು ಮತ್ತು ಕಾಲಕೇಯರನ್ನು ಸಂಹರಿಸಿದ ವೀರ್ಯವಾನ್, ಮಹೇಂದ್ರನ ಶತ್ರುಗಳಾದ ಹಿರಣ್ಯಪುರವಾಸಿಗಳನ್ನು ಮತ್ತು ಪೌಲೋಮರನ್ನು ಗಣಗಳೊಂದಿಗೆ ನಿಮಿಷಮಾತ್ರದಲ್ಲಿ ಸಂಹರಿಸಿದ, ಭಯಾರ್ಥಿಗಳಾದ ಶತ್ರುಗಳಿಗೂ ಅಭಯವನ್ನೀಡುವ ಪ್ರಭು, ಮದ್ಯಾತ್ಮಜನ ಭಯವನ್ನು ನಾವು ಸಹಿಸಿಕೊಳ್ಳಲಾರೆವು! ಧಾರ್ತರಾಷ್ಟ್ರನ ಮಹಾಸೇನೆಗೆ ಮಹಾ ಭಯವು ಬಂದೊದಗಿದೆ. ಪುತ್ರವಧೆಯಿಂದ ಕ್ರುದ್ಧನಾದ ಪಾರ್ಥನು ಕೌರವರನ್ನು ಸದೆಬಡಿಯುತ್ತಾನೆ. ಕ್ಷುದ್ರರ ಸಹಾಯವನ್ನು ಹೊಂದಿರುವ ಆ ಕ್ಷುದ್ರ ದುರ್ಯೋಧನನು ತನ್ನ ಪಕ್ಷವು ಆಪತ್ತಿನಲ್ಲಿರುವುದನ್ನು ನೋಡಿ ಶೋಕದಿಂದ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಎನ್ನುವುದು ವ್ಯಕ್ತವಾಗುತ್ತಿದೆ. ಈ ಅಪ್ರತಿಮ ವೀರ ಪೌರುಷವಿದ್ದಿದ್ದ ದೇವವರನ ಮಗನ ಮಗನು ಬಿದ್ದಿರುವುದನ್ನು ನೋಡಿದರೆ ನನಗೆ ಜಯವೂ, ರಾಜ್ಯವೂ, ಚಾಮರತ್ವವೂ, ಸುರರ ಲೋಕವೂ ಸಂತೋಷವನ್ನುಂಟುಮಾಡುವುದಿಲ್ಲ!”
ಅರ್ಜುನನ ಕೋಪ
ಪ್ರಾಣವಿರುವವರ ಕ್ಷಯಕರವಾದ ಆ ಹಗಲು ಕಳೆದು ಆದಿತ್ಯನು ಅಸ್ತಂಗತನಾಗಲು ಶ್ರೀಮಾನ್ ಸಂಧ್ಯಾಕಾಲವು ಸರಿದು ಬಂದಿತು. ಸೈನ್ಯಗಳು ವಿಶ್ರಾಂತಿಗೆಂದು ತೆರಳಿದವು. ಜಿಷ್ಣು ಕಪಿಧ್ವಜನು ಸಂಶಪ್ತರ ಸೇನೆಗಳನ್ನು ದಿವ್ಯಾಸ್ತ್ರಗಳಿಂದ ಸಂಹರಿಸಿ ಚೈತ್ರರಥವನ್ನೇರಿ ತನ್ನ ಶಿಬಿರದ ಕಡೆ ಹೊರಟನು. ಹೋಗುವಾಗ ಅವನು ಗದ್ಗದ ಕಂಠದವನಾಗಿ ಗೋವಿಂದನಿಗೆ ಹೇಳಿದನು: “ಕೇಶವ! ಅಚ್ಯುತ! ಇದೇನು ನನ್ನ ಹೃದಯವು ಭಯಗೊಂಡಿದೆ. ಮಾತುಗಳು ತೊದಲುತ್ತಿವೆ. ಅನಿಷ್ಟಸೂಚಕವಾಗಿ ಸ್ಪಂದಿಸುತ್ತಿವೆ. ಶರೀರವು ಆಯಾಸಗೊಂಡಿದೆ! ಯಾವುದೋ ಅನಿಷ್ಟದ ಚಿಂತೆಯು ನನ್ನ ಮನಸ್ಸನ್ನು ಕಾಡುತ್ತಿದೆ. ಹೃದಯವನ್ನು ಸುತ್ತಿಕೊಂಡಿದೆ. ಭೂಮಿಯಲ್ಲಿ ಮತ್ತು ದಿಕ್ಕುಗಳಲ್ಲಿ ಕಾಣುವ ಉಗ್ರ ಉತ್ಪಾತಗಳು ನನಗೆ ಭಯವನ್ನುಂಟು ಮಾಡುತ್ತಿವೆ. ಬಹುಪ್ರಕಾರವಾಗಿ ಕಾಣಿಸಿಕೊಳ್ಳುವ ಈ ಎಲ್ಲವೂ ಅಮಂಗಳವನ್ನೇ ಸೂಚಿಸುತ್ತಿವೆ. ಅಮಾತ್ಯಸಹಿತನಾಗಿ ನನ್ನ ಗುರು ರಾಜನು ಕುಶಲದಿಂದಿರಬಹುದೇ?”
ವಾಸುದೇವನು ಹೇಳಿದನು: “ಅಮಾತ್ಯರೊಂದಿಗೆ ನಿನ್ನ ಅಣ್ಣನು ಕುಶಲದಿಂದಿರುವನು. ಶೋಕಿಸಬೇಡ! ಬೇರೆ ಯಾವುದೋ ಅನಿಷ್ಟವು ಸಂಭವಿಸಿರಬಹುದು!”
ಆಗ ಆ ವೀರರಿಬ್ಬರೂ ವೀರರು ಅವಸಾನರಾದ ರಣಭೂಮಿಯಲ್ಲಿಯೇ ಸಂಧ್ಯಾವಂದನೆಗಳನ್ನು ಮುಗಿಸಿ, ರಥದಲ್ಲಿ ಕುಳಿತು, ರಣದಲ್ಲಿ ನಡೆದುದರ ಕುರಿತು ಮಾತನಾಡಿಕೊಳ್ಳುತ್ತಾ ಪ್ರಯಾಣಿಸಿದರು. ಸುದುಷ್ಕರ ಕರ್ಮಗಳನ್ನೆಸಗಿ ವಾಸುದೇವಾರ್ಜುನರು ಆನಂದವನ್ನು ಕಳೆದುಕೊಂಡಿದ್ದ ಕಾಂತಿಹೀನವಾಗಿದ್ದ ತಮ್ಮ ಶಿಬಿರವನ್ನು ತಲುಪಿದರು. ಆಗ ನಾಶಗೊಂಡಂತಿದ್ದ ತನ್ನ ಶಿಬಿರವನ್ನು ನೋಡಿ ಪರವೀರಹ ಬೀಭತ್ಸುವು ಅಸ್ವಸ್ಥಹೃದಯನಾಗಿ ಕೃಷ್ಣನಿಗೆ ಹೇಳಿದನು: “ಜನಾರ್ದನ! ಇಂದು ದುಂದುಭಿ ನಿರ್ಘೋಷಗಳಿಂದ, ಶಂಖ ಮತ್ತು ಡಂಬರುಗಳಿಂದ ಕೂಡಿದ ಮಂಗಳವಾದ್ಯಗಳು ಮೊಳಗುತ್ತಿಲ್ಲ. ತಾಳ ಮೃದಂಗಗಳೊಂದಿಗೆ ವೀಣಾವಾದನವೂ ನಡೆಯುತ್ತಿಲ್ಲ! ನನ್ನ ಶಿಬಿರದ ಬಂದಿಗಳು ಮಂಗಲ ಗೀತೆಗಳನ್ನು ಹಾಡುತ್ತಿಲ್ಲ, ಮತ್ತು ರಮ್ಯವಾದ ಸ್ತುತಿಯುಕ್ತವಾದವುಗಳನ್ನು ಓದುತ್ತಿಲ್ಲ! ಯೋಧರೂ ಕೂಡ ನನ್ನನ್ನು ನೋಡಿ ಮುಖಕೆಳಗೆ ಮಾಡಿ ಹೋಗುತ್ತಿದ್ದಾರೆ. ಹಿಂದೆ ಅವರು ನನಗೆ ನಮಸ್ಕರಿಸಿ ಯುದ್ಧವಾರ್ತೆಗಳನ್ನು ಹೇಳುತ್ತಿದ್ದರು! ಮಾಧವ! ನಿಶ್ಚಯವಾಗಿಯೂ ನನ್ನ ಅಣ್ಣಂದಿರಿಬ್ಬರೂ ಕುಶಲವಾಗಿರುವರೇ? ನನ್ನವರ ವ್ಯಾಕುಲತೆಯನ್ನು ನೋಡಿ ಈ ಭಾವವು ನನ್ನಿಂದ ದೂರವಾಗುತ್ತಿಲ್ಲ. ಅಚ್ಯುತ! ಪಾಂಚಾಲರಾಜನ, ವಿರಾಟನ ಎಲ್ಲ ಯೋಧರೂ ಸಮಗ್ರವಾಗಿ ಕುಶಲದಿಂದಿರುವರೇ? ಇಂದು ಸಹೋದರರೊಂದಿಗೆ ಅತಿ ಸಂತೋಷದಿಂದ ನಗು ನಗುತ್ತಾ ಸೌಭದ್ರನು ಯುದ್ಧದಿಂದ ಹಿಂದಿರುಗಿದ ನನ್ನನ್ನು ಉಚಿತವಾಗಿ ಎದಿರುಗೊಳ್ಳುತ್ತಲೂ ಇಲ್ಲ!”
ಹೀಗೆ ಮಾತನಾಡಿಕೊಳ್ಳುತ್ತಾ ಅವರಿಬ್ಬರೂ ತಮ್ಮ ಶಿಬಿರವನ್ನು ಪ್ರವೇಶಿಸಿ ಅಲ್ಲಿ ತುಂಬಾ ಅಸ್ವಸ್ಥರಾಗಿದ್ದ ಚೇತನವನ್ನು ಕಳೆದುಕೊಂಡಿದ್ದ ಪಾಂಡವರನ್ನು ಕಂಡರು. ವಿಮನಸ್ಕರಾಗಿದ್ದ ಸಹೋದರರನ್ನೂ ಮಕ್ಕಳನ್ನೂ ನೋಡಿ ಅಲ್ಲಿ ಸೌಭದ್ರನನ್ನು ಕಾಣದೇ ವಾನರಧ್ವಜನು ಈ ಮಾತನ್ನಾಡಿದನು: “ನೀವೆಲ್ಲರೂ ಮುಖವರ್ಣಗಳನ್ನು ಕಳೆದುಕೊಂಡು ಅಪ್ರಸನ್ನರಾಗಿರುವವರಂತೆ ಕಾಣುತ್ತಿದ್ದೀರಿ. ಅಭಿಮನ್ಯುವೂ ನನಗೆ ಕಾಣುತ್ತಿಲ್ಲ. ನನ್ನೊಡನೆ ಸಂತೋಷದಿಂದ ಮಾತನಾಡುತ್ತಿಲ್ಲ! ದ್ರೋಣನು ಚಕ್ರವ್ಯೂಹವನ್ನು ನಿರ್ಮಿಸಿದನೆಂದು ನಾನು ಕೇಳಿದ್ದೆ. ಸೌಭದ್ರನಲ್ಲದೇ ನಿಮ್ಮಲ್ಲಿ ಯಾರಿಗೂ ಯುದ್ಧದಲ್ಲಿ ಅದನ್ನು ಭೇದಿಸುವುದು ತಿಳಿದಿರಲಿಲ್ಲ. ನಾನಾದರೋ ಅವನಿಗೆ ವ್ಯೂಹವನ್ನು ಪ್ರವೇಶಿಸುವುದರ ಹೊರತಾಗಿ ನಿರ್ಗಮಿಸುವುದರ ಕುರಿತು ಉಪದೇಶಿಸಿರಲಿಲ್ಲ. ನಿಮ್ಮಲ್ಲಿ ಯಾರೂ ಅವನು ಶತ್ರುವ್ಯೂಹವನ್ನು ಪ್ರವೇಶಿಸುವಂತೆ ಮಾಡಿಲ್ಲ ತಾನೇ? ಮಹೇಷ್ವಾಸ ಪರವೀರಹ ಸೌಭದ್ರನು ಯುದ್ಧದಲ್ಲಿ ಶತ್ರುಗಳ ಸೇನೆಯನ್ನು ಬಹುವಾಗಿ ಭೇದಿಸಿ ಕೊನೆಗೆ ಅಲ್ಲಿಯೇ ಹತನಾಗಿ ಮಲಗಿಲ್ಲ ತಾನೇ? ಲೋಹಿತಾಕ್ಷ, ಮಹಾಬಾಹು, ಪರ್ವತಗಳಲ್ಲಿ ಹುಟ್ಟಿದ ಸಿಂಹದಂತಿದ್ದ, ಉಪೇಂದ್ರನಂತಿದ್ದ ಅವನು ಯುದ್ಧಮಾಡುತ್ತಾ ಹೇಗೆ ಹತನಾದನೆಂದು ಹೇಳಿ! ನನಗೆ ಸದಾ ಪ್ರಿಯನಾದ ಸುಕುಮಾರ, ಮಹೇಷ್ವಾಸ, ವಾಸವನ ಮಗನ ಮಗನು ಯುದ್ಧದಲ್ಲಿ ಹೇಗೆ ಹತನಾದನು ಹೇಳಿ! ವಾರ್ಷ್ಣೇಯಿಯ ಮಗ, ಶೂರ, ಸತತವೂ ನನ್ನಿಂದ ಮುದ್ದಿಸಲ್ಪಡುತ್ತಿದ್ದ, ತಾಯಿ ಕುಂತಿಗೂ ನಿತ್ಯವೂ ಪ್ರಿಯನಾದ ಅವನನ್ನು ಕಾಲಚೋದಿತನಾದ ಯಾರು ವಧಿಸಿದರು? ವಿಕ್ರಮ-ಕೀರ್ತಿ-ಮಹಾತ್ಮೆಗಳಲ್ಲಿ ವೃಷ್ಣಿಸಿಂಹ ಕೇಶವನಂತಿರುವ ಆ ಮಹಾತ್ಮನು ಯುದ್ಧದಲ್ಲಿ ಹೇಗೆ ಹತನಾದನು ಹೇಳಿ! ನಿತ್ಯವೂ ಸುಭದ್ರೆಯ, ದ್ರೌಪದಿಯ ಮತ್ತು ಕೇಶವನ ಪ್ರಿಯನಾದ ನನ್ನ ಮಗನನ್ನು ನಾನೇನಾದರೂ ಕಾಣದೇ ಇದ್ದರೆ ನಾನೂ ಕೂಡ ಯಮಸಾದನಕ್ಕೆ ಹೋಗುತ್ತೇನೆ! ಮೃದುವಾದ ಗುಂಗುರು ಕೂದಲುಳ್ಳ, ಜಿಂಕೆಯ ಮರಿಯ ಕಣ್ಣುಗಳುಳ್ಳ, ಮತ್ತಗಜದ ನಡುಗೆಯ, ಎಳೆಯ ಸಾಲವೃಕ್ಷದಂತೆ ಎತ್ತರನಾಗಿದ್ದ, ನಗುನಗುತ್ತಲೇ ಮಾತನಾಡುವ, ಶಾಂತಸ್ವಭಾವದ, ಸದಾ ಹಿರಿಯರ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದ, ಬಾಲಕನಾಗಿದ್ದರೂ ಅಬಾಲರ ಕೃತ್ಯವನ್ನೆಸಗುತ್ತಿದ್ದ, ಪ್ರಿಯವಾಗಿ ಮಾತನಾಡುವ, ಮಾತ್ಸ್ಯರ್ಯವಿಲ್ಲದ, ಬಾಲಕ, ಮಹೋತ್ಸಾಹಿ, ಮಹಾಬಾಹು, ದೀರ್ಘರಾಜೀವಲೋಚನ, ಭಕ್ತಾನುಕಂಪೀ, ಶಾಂತ, ನೀಚರನ್ನು ಅನುಸರಿಸದ, ಕೃತಜ್ಞ, ಜ್ಞಾನಸಂಪನ್ನ, ಕೃತಾಸ್ತ್ರ, ಯುದ್ಧದಲ್ಲಿ ಪಲಾಯನ ಮಾಡದ, ಯುದ್ಧದ ಪ್ರಶಂಸಕ, ನಿತ್ಯವೂ ಶತ್ರುಗಳಿಗೆ ಭಯವನ್ನುಂಟುಮಾಡುತ್ತಿದ್ದ, ತನ್ನವರಿಗೆ ಪ್ರಿಯವೂ ಹಿತವೂ ಆದ ಕಾರ್ಯಗಳಲ್ಲಿ ನಿರತನಾದ, ಪಿತೃಗಳ ಜಯವನ್ನು ಆಶಿಸಿದ, ತನಗೆ ಮೊದಲು ಹೊಡೆಯದೇ ಇದ್ದವನನ್ನು ಹೊಡೆಯದ, ಸಂಗ್ರಾಮದಲ್ಲಿ ಸಂಭ್ರಮವನ್ನು ಕಳೆದುಕೊಳ್ಳದ ಆ ನನ್ನ ಮಗನನ್ನು ನಾನೇನಾದರೂ ಕಾಣದೇ ಇದ್ದರೆ ನಾನೂ ಕೂಡ ಯಮಸಾದನಕ್ಕೆ ಹೋಗುತ್ತೇನೆ! ಸುಂದರ ಹಣೆಯುಳ್ಳ, ಸುಂದರ ಮುಂಗುರುಳುಗಳುಳ್ಳ, ಸುಂದರ ಹುಬ್ಬು, ಕಣ್ಣು, ಹಲ್ಲುಗಳನ್ನುಳ್ಳ ಆ ಮುಖವನ್ನು ಕಾಣದ ನನ್ನ ಹೃದಯಕ್ಕೆ ಶಾಂತಿಯೆಲ್ಲಿ? ವೀಣಾವಾದನದಂತೆ ಸುಖವನ್ನು ನೀಡುವ, ಗಂಡು ಕೋಗಿಲೆಯ ಧ್ವನಿಯುಳ್ಳ ಅವನ ರಮ್ಯ ಸ್ವರವನ್ನು ಕೇಳದ ನನ್ನ ಹೃದಯಕ್ಕೆ ಶಾಂತಿಯೆಲ್ಲಿ? ತ್ರಿದಶರಿಗೂ ದುರ್ಲಭವಾದ ಆ ಅಪ್ರತಿಮ ರೂಪಿ ವೀರನ ರೂಪವನ್ನು ಕಾಣದ ನನ್ನ ಹೃದಯಕ್ಕೆ ಇಂದು ಶಾಂತಿಯೆಲ್ಲಿ? ಅಭಿವಾದನದಲ್ಲಿ ದಕ್ಷನಾದ ಪಿತೃಗಳ ವಚನರತನಾದ ಅವನನ್ನು ಇಂದು ನಾನು ಕಾಣದೇ ಇದ್ದರೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿ? ಸುಕುಮಾರನಾದ, ಸದಾ ವೀರನಾದ, ಮಹಾಬೆಲೆಬಾಳುವ ಹಾಸಿಗೆಗಳ ಮೇಲೆ ಮಲಗಲು ಅರ್ಹನಾದ ಅವನು ತನಗೆ ಶ್ರೇಷ್ಠ ರಕ್ಷಕರಿದ್ದರೂ ಇಂದು ಅನಾಥನಂತೆ ನೆಲದ ಮೇಲೆ ಮಲಗಿದ್ದಾನಲ್ಲ! ಹಿಂದೆ ಶಯನದಲ್ಲಿ ಪರಮ ಸ್ತ್ರೀಯರು ಬಂದು ಉಪಾಸಿಸುತ್ತಿದ್ದ ಅವನ ಅಂಗಾಂಗಳಲ್ಲಿ ಬಾಣಗಳು ಚುಚ್ಚಿಕೊಂಡಿರುವಾಗ ಈಗ ಅಮಂಗಳ ನರಿಗಳು ಉಪಾಸಿಸುತ್ತಿವೆಯಲ್ಲ! ಹಿಂದೆ ಮಲಗಿರುವಾಗ ಯಾರನ್ನು ಸೂತಮಾಗದಬಂಧಿಗಳು ಎಚ್ಚರಿಸುತ್ತಿದ್ದರೋ ಅವನನ್ನು ಇಂದು ನರಿ-ನಾಯಿಗಳು ವಿಕೃತ ಸ್ವರಗಳಲ್ಲಿ ಎಚ್ಚರಿಸಲು ಪ್ರಯತ್ನಿಸುತ್ತಿರುವವಲ್ಲ! ಯಾರ ಶುಭ ವದನವು ಚತ್ರಗಳ ಛಾಯೆಗಳಡಿಯಲ್ಲಿ ರಕ್ಷಿತವಾಗಿತ್ತೋ ಅದು ಇಂದು ರಣದಲ್ಲಿ ಧೂಳು ಮುಕ್ಕಿ ಮಾಸಿದೆಯಲ್ಲ! ಹಾ ಪುತ್ರ! ಸತತವೂ ಪುತ್ರನನ್ನು ನೋಡುತ್ತಿದ್ದರೂ ತೃಪ್ತನಾಗದ ಈ ಭಾಗ್ಯಹೀನನನ್ನು ಕಾಲವು ಏಕೆ ಬಲವಂತವಾಗಿ ಕೊಂಡೊಯ್ಯುತ್ತಿಲ್ಲ? ಸುಕೃತಿಗಳು ಸದಾ ಹೋಗಲು ಬಯಸುವ ಯಮಸದನವು ಇಂದು ನಿನ್ನಿಂದಾಗಿ ಇನ್ನೂ ಹೆಚ್ಚು ರಮ್ಯವೂ ಪ್ರಕಾಶವುಳ್ಳದ್ದೂ ಆಗಿ ವಿರಾಜಿಸುತ್ತಿರಬಹುದು. ನಿನ್ನನ್ನು ಪ್ರಿಯ ಅತಿಥಿಯನ್ನಾಗಿ ಪಡೆದು ವೈವಸ್ವತ, ವರುಣ, ಶತಕ್ರತು ಮತ್ತು ಧನೇಶ್ವರರು ನಿನ್ನನ್ನು ಗೌರವಿಸುತ್ತಿರಬಹುದು.”
ಹೀಗೆ ಹಡಗು ಮುರಿದ ವರ್ತಕನಂತೆ ಬಹುವಿಧಗಳಲ್ಲಿ ವಿಲಪಿಸಿ, ಮಹಾ ದುಃಖದಿಂದ ಆವಿಷ್ಟನಾಗಿ ಅರ್ಜುನನು ಯುಧಿಷ್ಠಿರನನ್ನು ಕೇಳಿದನು: “ಪಾಂಡುನಂದನ! ಆ ನರರ್ಷಭನು ಶತ್ರುಗಳೊಂದಿಗೆ ಕದನ ಮಾಡುತ್ತಾ ರಣದಲ್ಲಿ ಶತ್ರುಗಳಿಗೆ ಎದುರಾಗಿ ಯುದ್ಧಮಾಡುತ್ತಿರುವಾಗಲೇ ಸ್ವರ್ಗಗತನಾದನೇ? ಬಹುಸಂಖ್ಯಾತರಾದ ಪ್ರಯತ್ನಶೀಲರಾದ ನರರ್ಷಭರೊಡನೆ ಯುದ್ಧಮಾಡುತ್ತಿರುವಾಗ ಅಸಹಾಯಕನಾಗಿದ್ದಾಗ ಸಹಾಯಕ್ಕಾಗಿ ಖಂಡಿತವಾಗಿಯೂ ನನ್ನನ್ನು ಅವನು ಸ್ಮರಿಸಿಕೊಂಡಿರಬೇಕು. ಶರಗಳಿಂದ ಪೀಡಿತನಾದಾಗ ಆ ಬಾಲ ಕಂದನು ಈಗ ನಾನು ರಕ್ಷಣೆಗೆ ಬರಬಹುದು ಎಂದು ವಿಲಪಿಸುತ್ತಿರುವಾಗಲೇ ಕ್ರೂರಿಗಳಾದ ಬಹುಜನರಿಂದ ಹತನಾಗಿರಬಹುದು ಎಂದು ಭಾವಿಸುತ್ತೇನೆ. ಅಥವಾ ನನ್ನ ಮಗ, ಮಾಧವನ ಅಳಿಯ ಮತ್ತು ಸುಭದ್ರೆಗೆ ಹುಟ್ಟಿದವನ ಕುರಿತು ಹೀಗೆ ಮಾತನಾಡುವುದು ಸರಿಯಲ್ಲ! ನಿಜವಾಗಿಯೂ ನನ್ನ ಹೃದಯವು ವಜ್ರದ ಸಾರದಿಂದ ಮಾಡಿದ್ದಿರಬೇಕು. ದೀರ್ಘಬಾಹು ಆ ರಕ್ತಾಕ್ಷನನ್ನು ಕಾಣದೇ ಒಡೆದು ಹೋಗುತ್ತಿಲ್ಲವಲ್ಲ! ಹೇಗೆ ತಾನೇ ಕ್ರೂರಿಗಳಾದ ಮಹೇಷ್ವಾಸರು ಇನ್ನೂ ಬಾಲಕನಾಗಿದ್ದ ನನ್ನ ಮಗ, ವಾಸುದೇವನ ಅಳಿಯನ ಮೇಲೆ ಮರ್ಮಭೇದೀ ಶರಗಳನ್ನು ಪ್ರಯೋಗಿಸಿದರು? ನಿತ್ಯವೂ ಶತ್ರುಗಳನ್ನು ಸಂಹರಿಸಿ ಬರುತ್ತಿದ್ದಾಗ ಆ ಅದೀನಾತ್ಮನು ಸಂತೋಷದಿಂದ ಹಾರಿಬಂದು ನನ್ನನ್ನು ಅಭಿನಂದಿಸುತ್ತಿದ್ದನು. ಇಂದು ಏಕೆ ಅವನು ನನ್ನನ್ನು ನೋಡುತ್ತಿಲ್ಲ? ಅವನು ರಕ್ತದಿಂದ ತೋಯ್ದು ಭೂಮಿಯ ಮೇಲೆ ಬೀಳಿಸಲ್ಪಟ್ಟ ಆದಿತ್ಯನಂತೆ ತನ್ನ ಶರೀರಕಾಂತಿಯಿಂದ ರಣಾಂಗಣವನ್ನೇ ಶೋಭಾಯಮಾನವನ್ನಾಗಿ ಮಾಡುತ್ತಾ ಅಲ್ಲಿಯೇ ಮಲಗಿರಬಹುದೇ? ಅಭಿಮನ್ಯುವು ರಣದಲ್ಲಿ ಹತನಾದುದನ್ನು ಕೇಳಿ ಶೋಕಾರ್ತಳಾಗಿ ಪ್ರಾಣವನ್ನೇ ಬಿಡುವ ಸುಭದ್ರೆಗೆ ನಾನು ಏನು ಹೇಳಲಿ? ಅವನನ್ನು ಕಾಣದೇ ದುಃಖಾರ್ತಳಾದ ದ್ರೌಪದಿಗೆ ನಾನು ಏನು ಹೇಳಲಿ? ಶೋಕಕರ್ಶಿತಳಾಗಿ ರೋದಿಸುತ್ತಿರುವ ನನ್ನ ಸೊಸೆಯನ್ನು ನೋಡಿಯೂ ನನ್ನ ಹೃದಯವು ಸಹಸ್ರ ಚೂರುಗಳಾಗಿ ಒಡೆಯಲಿಲ್ಲವೆಂದರೆ ಅದು ಖಂಡಿತವಾಗಿಯೂ ವಜ್ರಸಾರಮಯವಾಗಿದ್ದಿರಬೇಕು! ಹೃಷ್ಟರಾದ ಧಾರ್ತರಾಷ್ಟ್ರರ ಸಿಂಹನಾದವು ನನಗೆ ಕೇಳಿಸಿತು. ಯುಯುತ್ಸುವು ವೀರರನ್ನು ನಿಂದಿಸಿದುದೂ ಕೃಷ್ಣನಿಗೆ ಕೇಳಿಸಿತು. “ಮಹಾರಥರೇ! ಅಧರ್ಮಜ್ಞರೇ! ಬೀಭತ್ಸುವನ್ನು ಎದುರಿಸಲು ಸಾಧ್ಯವಾಗದೇ ನೀವೆಲ್ಲ ಬಾಲಕನನ್ನು ವಧಿಸಿ ಸಂತೋಷಪಡುವಿರೇಕೆ? ಪಾರ್ಥನ ಬಲವನ್ನು ನೀವು ನೋಡುವಿರಿ! ರಣದಲ್ಲಿ ಕೇಶವಾರ್ಜುನರಿಗೆ ವಿಪ್ರಿಯವಾದುದನ್ನು ಮಾಡಿ ಸಂತೋಷದಿಂದ ಸಿಂಹನಾದವನ್ನು ಮಾಡುತ್ತಿರುವ ನಿಮಗೆ ಶೋಕಕಾಲವು ಉಪಸ್ಥಿತವಾಗಿದೆ. ಪಾಪಕರ್ಮದ ಫಲವು ಕ್ಷಿಪ್ರವಾಗಿ ನಿಮಗೆ ಬರಲಿದೆ. ತೀವ್ರವಾದ ಅಧರ್ಮವನ್ನೆಸಗಿರುವವರಿಗೆ ಅದರ ಫಲವು ಹೇಗೆ ತಡವಾಗಿ ದೊರೆಯುತ್ತದೆ?”
“ಹೀಗೆ ಹೇಳಿ ಆ ಮಹಾಮತಿ ವೈಶ್ಯಾಪುತ್ರನು ಕೋಪ-ದುಃಖಸಮನ್ವಿತನಾಗಿ ಶಸ್ತ್ರಗಳನ್ನು ಬಿಸುಟು ರಣವನ್ನು ಬಿಟ್ಟು ಹೋದನು. ಕೃಷ್ಣ! ಈ ವಿಷಯವನ್ನು ನೀನು ರಣಾಂಗಣದಲ್ಲಿಯೇ ಏಕೆ ನನಗೆ ಹೇಳಲಿಲ್ಲ? ಆಗಲೇ ನಾನು ಆ ಎಲ್ಲ ಕ್ರೂರ ಮಹಾರಥರನ್ನೂ ಸುಟ್ಟುಬಿಡುತ್ತಿರಲಿಲ್ಲವೇ?”
ಆಗ ಪುತ್ರಶೋಕವೆಂಬ ದುಃಖಸಾಗರದಲ್ಲಿ ಮುಳುಗಿಹೋಗಿದ್ದ, ತೀವ್ರಶೋಕಸಮನ್ವಿತನಾದ ಅವನನ್ನು ಬಿಗಿದಪ್ಪಿ ವಾಸುದೇವ ಕೃಷ್ಣನು “ಹೀಗೆ ದುಃಖಿಸಬೇಡ!” ಎಂದು ಹೇಳಿದನು: “ಯುದ್ಧದಿಂದ ಓಡಿಹೋಗದೇ ಇರುವ ಎಲ್ಲ ಶೂರರಿಗೂ, ವಿಶೇಷವಾಗಿ ಯುದ್ಧವೇ ಜೀವನವಾಗಿರುವ ಕ್ಷತ್ರಿಯರಿಗೆ, ಕೊನೆಗೆ ಇದೇ ದಾರಿ! ಯುದ್ಧದಿಂದ ಹಿಂದಿರುಗದೇ ಯುದ್ಧಾಸಕ್ತರಾದ ಶೂರರಿಗೂ ಇದೇ ಮಾರ್ಗವು ಧರ್ಮಶಾಸ್ತ್ರಜ್ಞರಿಂದ ವಿಹಿತವಾಗಿದೆ. ಹಿಂದಿರುಗದ ಶೂರರಿಗೆ ಯುದ್ಧದಲ್ಲಿ ಮರಣವು ನಿಶ್ಚಿತವಾದುದು. ಅಭಿಮನ್ಯುವು ಪುಣ್ಯಕೃತರ ಲೋಕಕ್ಕೆ ಹೋಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಸಂಗ್ರಾಮದದಲ್ಲಿ ಎದುರುಮುಖರಾಗಿದ್ದಾಗ ಸಾವನ್ನು ಪಡೆಯಬೇಕು ಎನ್ನುವುದು ಎಲ್ಲ ವೀರರ ಬಯಕೆಯಾಗಿರುತ್ತದೆ. ಅವನಾದರೋ ರಣದಲ್ಲಿ ಮಹಾಬಲಶಾಲಿಗಳಾದ ವೀರ ರಾಜಪುತ್ರರನ್ನು ಸಂಹರಿಸಿ ವೀರರು ಬಯಸುವ, ರಣದಲ್ಲಿ ಎದುರುಮುಖನಾಗಿರುವಾಗ, ಮೃತ್ಯುವನ್ನು ಪಡೆದಿದ್ದಾನೆ. ಶೋಕಿಸಬೇಡ! ರಣದಲ್ಲಿ ನಾಶವು ಕ್ಷತ್ರಿಯರ ಧರ್ಮವೆಂದು ಸನಾತನ ಧರ್ಮವನ್ನು ಮಾಡಿದವರು ಹಿಂದೆಯೇ ಮಾಡಿದ್ದಾರೆ. ನೀನು ಶೋಕಸಮಾವಿಷ್ಟನಾದೆಯೆಂದರೆ ಈ ನಿನ್ನ ಸಹೋದರರು, ನೃಪರು, ಸುಹೃದಯರು ಎಲ್ಲರೂ ದೀನರಾಗುತ್ತಾರೆ. ಇವರನ್ನು ನೀನು ಸಮಾಧಾನಪೂರ್ವಕ ಆಶ್ವಾಸನೆಯ ಮಾತುಗಳಿಂದ ಸಂತೈಸು. ತಿಳಿಯಬೇಕಾದುದನ್ನು ತಿಳಿದಿರುವ ನೀನು ಶೋಕಿಸುವುದು ಸರಿಯಲ್ಲ!”
ಹೀಗೆ ಅದ್ಭುತ ಕರ್ಮಿ ಕೃಷ್ಣನಿಂದ ಸಂತೈಸಲ್ಪಡಲು ಪಾರ್ಥನು ಗದ್ಗದನಾಗಿ ಸಹೋದರರೆಲ್ಲರಿಗೂ ಹೇಳಿದನು: “ಆ ದೀರ್ಘಬಾಹು, ವಿಶಾಲ ಭುಜದ, ದೀರ್ಘರಾಜೀವ ಲೋಚನ ಅಭಿಮನ್ಯುವು ಹೇಗೆ ನಡೆದುಕೊಂಡನೆನ್ನುವುದನ್ನು ಕೇಳಲು ಬಯಸುತ್ತೇನೆ. ನನ್ನ ಮಗನ ವೈರಿಯನ್ನು ಸಂಗ್ರಾಮದಲ್ಲಿ ನಾನು ಅವನ ಅನುಬಂಧರನ್ನೂ ಕೂಡಿ, ಅವನ ಆನೆ-ಕುದುರೆ-ರಥಗಳೊಂದಿಗೆ ಭಸ್ಮಮಾಡುತ್ತೇನೆ. ಆದರೆ ಕೃತಾಸ್ತ್ರರೂ ಶಸ್ತ್ರಪಾಣಿಗಳೂ ಆಗಿರುವ ನೀವೆಲ್ಲರೂ ಇರುವಾಗ ರಣದಲ್ಲಿ ವಜ್ರಪಾಣಿಯೇ ಎದುರಾಗಿದ್ದರೂ ಸೌಭದ್ರನು ಹೇಗೆ ನಿಧನನಾದನು? ಪಾಂಡವ-ಪಾಂಚಾಲರು ನನ್ನ ಮಗನನ್ನು ರಕ್ಷಿಸಲು ಅಸಮರ್ಥರೆಂದು ನನಗೆ ಮೊದಲೇ ತಿಳಿದಿದ್ದರೆ ಅವನನ್ನು ರಕ್ಷಿಸಲು ನಾನೇ ಬರುತ್ತಿದ್ದೆ. ರಥದಮೇಲೆ ನಿಂತು ಶರವರ್ಷಗಳನ್ನು ಪ್ರಯೋಗಿಸುತ್ತಿರುವ ನಿಮ್ಮನ್ನು ತೃಣೀಕರಿಸಿ ನಮ್ಮ ಶತ್ರುಗಳು ಹೇಗೆ ಅಭಿಮನ್ಯುವನ್ನು ಕೊಂದರು? ಅಯ್ಯೋ! ನಿಮ್ಮಲ್ಲಿ ಪೌರುಷವೂ ಇಲ್ಲ. ಪರಾಕ್ರಮವೂ ಇಲ್ಲ! ನೀವು ನೋಡುತ್ತಿರುವಾಗಲೇ ಸಮರದಲ್ಲಿ ಅಭಿಮನ್ಯುವನ್ನು ಕೆಳಗುರುಳಿಸಿದಲ್ಲ! ನನ್ನನ್ನು ನಾನೇ ನಿಂದಿಸಿಕೊಳ್ಳಬೇಕು. ತಿಳಿಯದೇ ನಿಮ್ಮಂತಹ ದುರ್ಬಲ, ದೃಢನಿಶ್ಚಯವಿಲ್ಲದ ಹೇಡಿಗಳಿಗೆ ಅವನನ್ನು ಒಪ್ಪಿಸಿ ಹೋದೆನಲ್ಲಾ! ಅಯ್ಯೋ! ನಿಮ್ಮ ಈ ಕವಚ-ಶಸ್ತ್ರ-ಆಯುಧಗಳು ಕೇವಲ ಭೂಷಣಕ್ಕಾಗಿಯೇ? ಸಂಸತ್ತುಗಳಲ್ಲಿ ಮಾತುಗಳನ್ನಾಡುವ ನೀವು ನನ್ನ ಮಗನನ್ನು ರಕ್ಷಿಸಲಿಲ್ಲ!”
ಹೀಗೆ ಹೇಳಿ ಅವನು ಶ್ರೇಷ್ಠ ಚಾಪವನ್ನೂ ಖಡ್ಗವನ್ನೂ ಹಿಡಿದು ಮೇಲೆದ್ದು ನಿಂತನು. ಆಗ ಬೀಭತ್ಸುವನ್ನು ತಲೆಯೆತ್ತಿ ನೋಡಲು ಯಾರಿಗೂ ಸಾಧ್ಯವಾಗಲಿಲ್ಲ. ಅಂತಕನಂತೆ ಕ್ರುದ್ಧನಾದ, ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತಾ ಪುತ್ರಶೋಕಾಭಿಸಂತಪ್ತನಾಗಿ ಅವನ ಮುಖವು ಕಣ್ಣೀರಿನಿಂದ ತುಂಬಿಹೋಗಿತ್ತು. ಅವನು ಅಂತಹ ಪರಿಸ್ಥಿತಿಯಲ್ಲಿದ್ದಾಗ ಅರ್ಜುನನನ್ನು ನೋಡಲು ವಾಸುದೇವ ಮತ್ತು ಜ್ಯೇಷ್ಠ ಪಾಂಡುನಂದನನ ಹೊರತಾಗಿ ಬೇರೆ ಯಾವ ಸುಹೃದರಿಗೂ ಸಾಧ್ಯವಾಗಲಿಲ್ಲ. ಸರ್ವಾವಸ್ಥೆಗಳಲ್ಲಿ ಅರ್ಜುನನ ಹಿತವನ್ನೂ ಮನಸ್ಸನ್ನೂ ಅನುಸರಿಸುವುದರಿಂದ, ಆದರ-ಗೌರವಗಳಿಂದ ಮತ್ತು ಪ್ರಿಯತ್ವದಿಂದ ಅವರಿಬ್ಬರು ಮಾತ್ರ ಅವನಲ್ಲಿ ಮಾತನಾಡಬಲ್ಲವರಾಗಿದ್ದರು. ಆಗ ಪುತ್ರಶೋಕದಿಂದ ತುಂಬಾ ಪೀಡಿತ ಮನಸ್ಕನಾಗಿದ್ದ ಕ್ರುದ್ಧನಾಗಿದ್ದ ಆ ರಾಜೀವಲೋಚನನಿಗೆ ರಾಜ ಯುಧಿಷ್ಠಿರನು ಹೇಳಿದನು:
“ಮಹಾಬಾಹೋ! ಸಂಶಪ್ತಕರ ಸೇನೆಯ ಕಡೆ ನೀನು ಹೋದನಂತರ ನನ್ನನ್ನು ಹಿಡಿಯಲು ಆಚಾರ್ಯನು ತೀವ್ರ ಪ್ರಯತ್ನವನ್ನು ಮಾಡಿದನು. ಹಾಗೆ ರಣದಲ್ಲಿ ಪ್ರಯತ್ನಿಸುತ್ತಿದ್ದ ದ್ರೋಣನ ಆ ರಥಸೇನೆಯ ವ್ಯೂಹವನ್ನು ನಾವು ಪ್ರತಿವ್ಯೂಹದೊಂದಿಗೆ ಎಲ್ಲಕಡೆಗಳಲ್ಲಿಯೂ ತಡೆದೆವು. ರಥಿಕರು ಅವನನ್ನು ತಡೆಯುತ್ತಿದ್ದರು ಮತ್ತು ನಾನು ಸುರಕ್ಷಿತವಾಗಿದ್ದೆ. ಆದರೆ ಅವನು ನಮ್ಮನ್ನು ನಿಶಿತ ಶರಗಳಿಂದ ಪೀಡಿಸುತ್ತಿದ್ದನು. ದ್ರೋಣನಿಂದ ಪೀಡಿತರಾದ ನಾವು ದ್ರೋಣನ ಸೇನೆಯ ಕಡೆ ನೋಡಲೂ ಕೂಡ ಅಸಮರ್ಥರಾದೆವು. ಹಾಗಿರುವಾಗ ಅದನ್ನು ಭೇದಿಸುವುದಾದರೂ ಹೇಗೆ ಸಾಧ್ಯವಿತ್ತು? ಆಗ ವೀರ್ಯಗಳೆಲ್ಲದರಲ್ಲಿ ನಿನಗೆ ಸಮನಾದ ಸೌಭದ್ರಾತ್ಮಜನಿಗೆ ನಾವು “ಮಗೂ! ಸೇನೆಯನ್ನು ಭೇದಿಸು!” ಎಂದು ಕೇಳಿಕೊಂಡೆವು. ಹಾಗೆ ನಮ್ಮಿಂದ ಪ್ರೇರಿತನಾದ ಆ ವೀರ್ಯವಾನನು ಉತ್ತಮ ಥಳಿಯ ಕುದುರೆಯಂತೆ ಸಹಿಸಲು ಕಷ್ಟವಾದರೂ ಆ ಭಾರವನ್ನು ಹೊರಲು ಮುಂದಾದನು. ನಿನ್ನ ಅಸ್ತ್ರೋಪದೇಶದಿಂದ ಮತ್ತು ವೀರ್ಯದಿಂದ ಸಮನ್ವಿತನಾದ ಆ ಬಾಲಕನು ಗರುಡನು ಸಾಗರವನ್ನು ಹೇಗೋ ಹಾಗೆ ಆ ಸೇನೆಯನ್ನು ಪ್ರವೇಶಿಸಿದನು. ಅವನು ಪ್ರವೇಶಿಸಿದ ಮಾರ್ಗದಿಂದಲೇ ವ್ಯೂಹವನ್ನು ಪ್ರವೇಶಿಸಲು ಇಚ್ಚಿಸಿ ನಾವೆಲ್ಲರೂ ಸಾತ್ವತೀಪುತ್ರ ವೀರನನ್ನು ಅನುಸರಿಸಿ ಹೋದೆವು. ಆಗ ಕ್ಷುದ್ರ ರಾಜ ಸೈಂಧವ ಜಯದ್ರಥನು ರುದ್ರನ ವರದಾನದಿಂದ ನಮ್ಮೆಲ್ಲರನ್ನೂ ತಡೆದನು. ಆಗ ದ್ರೋಣ, ಕೃಪ, ಕರ್ಣ, ದ್ರೌಣಿ, ಬೃಹದ್ಬಲ ಮತ್ತು ಕೃತವರ್ಮ ಈ ಷಡ್ರಥರು ಸೌಭದ್ರನನ್ನು ಸುತ್ತುವರೆದರು. ಅವರೆಲ್ಲ ಮಹಾರಥರಿಂದ ಯುದ್ಧದಲ್ಲಿ ಸುತ್ತುವರೆಯಲ್ಪಟ್ಟು ಪರಮ ಶಕ್ತಿಯಿಂದ ಹೋರಾಡುತ್ತಿದ್ದ ಆ ಬಾಲಕನನ್ನು ಅನೇಕರು ವಿರಥರನ್ನಾಗಿ ಮಾಡಿದರು. ಆಗ ಪರಮ ಸಂಕಟವನ್ನು ಅನುಭವಿಸಿದ ದೌಃಶಾಸನಿಯು ಆ ವಿರಥನಾದವನನ್ನು ಕ್ಷಿಪ್ರವಾಗಿ ಗದೆಯಿಂದ ಪ್ರಹರಿಸಿ ಸಂಹರಿಸಿದನು. ಅವನಾದರೋ ಸಹಸ್ರಾರು ಆನೆ-ಕುದುರೆ-ರಥಾರೂಢರನ್ನು ಸಂಹರಿಸಿ, ಅನೇಕ ನೂರು ಅಗ್ರ ವೀರ ರಾಜಪುತ್ರರನ್ನು ಸಂಹರಿಸಿ, ರಾಜ ಬೃಹದ್ಬಲನನ್ನೂ ಸ್ವರ್ಗಕ್ಕೆ ಕಳುಹಿಸಿ ನಂತರ ಮೃತ್ಯುವಶನಾದನು. ನಮ್ಮ ಶೋಕವನ್ನು ಹೆಚ್ಚಿಸಿದ ಆ ಪುರುಷವ್ಯಾಘ್ರನು ಈ ರೀತಿ ನಡೆದುಕೊಂಡು ಸ್ವರ್ಗಲೋಕವನ್ನು ಪಡೆದನು.”
ಅರ್ಜುನನ ಪ್ರತಿಜ್ಞೆ
ಧರ್ಮರಾಜನು ಆಡಿದ ಮಾತನ್ನು ಕೇಳಿ ಅರ್ಜುನನು “ಹಾ ಪುತ್ರ!” ಎಂದು ನಿಟ್ಟುಸಿರು ಬಿಡುತ್ತಾ ವ್ಯಥಿತನಾಗಿ ಭೂಮಿಯ ಮೇಲೆ ಬಿದ್ದನು. ಎಲ್ಲರೂ ವಿಷಣ್ಣವದನರಾಗಿ ಧನಂಜಯನ್ನು ಹಿಡಿದು, ದೀನರಾಗಿ ಎವೆಯಿಕ್ಕದೇ ಪರಸ್ಪರರನ್ನು ನೋಡುತ್ತಿದ್ದರು. ಆಗ ಸಂಜ್ಞೆಗಳನ್ನು ಪಡೆದ ವಾಸವಿಯು ಕ್ರೋಧಮೂರ್ಛಿತನಾಗಿ, ಜ್ವರದಲ್ಲಿರುವವನಂತೆ ಕಂಪಿಸುತ್ತಾ, ಪುನಃ ಪುನಃ ನಿಟ್ಟುಸಿರು ಬಿಡುತ್ತಾ, ಕೈಯಿಂದ ಕೈಯನ್ನು ಉಜ್ಜುತ್ತಾ, ಕಣ್ಣುಗಳಲ್ಲಿ ನೀರು ತುಂಬಿಸಿಕೊಂಡು ಉನ್ಮತ್ತನಾದವನಂತೆ ಯಾವುದೋ ದಿಕ್ಕನ್ನು ದಿಟ್ಟಿಸಿ ನೋಡುತ್ತಾ ಈ ಮಾತನ್ನಾಡಿದನು:
“ನಿಮ್ಮೆಲ್ಲರ ನಡುವೆ ಈ ಸತ್ಯಪ್ರತಿಜ್ಞೆಯನ್ನು ಮಾಡುತ್ತೇನೆ! ನಾಳೆ ನಾನು ಜಯದ್ರಥನನ್ನು ಸಂಹರಿಸುತ್ತೇನೆ! ಭಯದಿಂದ ಭೀತನಾಗಿ ಅವನು ಧಾರ್ತರಾಷ್ಟ್ರರನ್ನು ಬಿಟ್ಟು ಓಡಿ ಹೋಗದಿದ್ದರೆ, ನನ್ನ ಅಥವಾ ಪುರುಷೋತ್ತಮ ಕೃಷ್ಣನ ಅಥವಾ ಮಹಾರಾಜ ನಿನ್ನ ಶರಣು ಹೋಗದಿದ್ದರೆ ನಾಳೆ ನಾನು ಜಯದ್ರಥನನ್ನು ಕೊಲ್ಲುತ್ತೇನೆ! ಧಾರ್ತರಾಷ್ಟ್ರರಿಗೆ ಪ್ರಿಯಂಕರನಾದ, ಸೌಹಾರ್ದತೆಯನ್ನು ಮರೆತಿರುವ, ಬಾಲವಧೆಗೆ ಕಾರಣನಾದ ಆ ಪಾಪಿ ಜಯದ್ರಥನನ್ನು ನಾಳೆ ನಾನು ವಧಿಸುತ್ತೇನೆ! ಯುದ್ಧದಲ್ಲಿ ಅವನನ್ನು ರಕ್ಷಣೆಮಾಡಲು ಯಾವ ಕೆಲವರು ನನ್ನೊಡನೆ ಹೋರಾಡುತ್ತಾರೋ ಅವರು ವೀರರಾದ ದ್ರೋಣ-ಕೃಪರೇ ಆಗಿದ್ದರೂ, ಅವರನ್ನು ಶರಗಳಿಂದ ಮುಚ್ಚಿಬಿಡುತ್ತೇನೆ! ಒಂದುವೇಳೆ ಸಂಗ್ರಾಮದಲ್ಲಿ ಇದನ್ನು ನಾನು ಮಾಡದೇ ಇದ್ದರೆ ಶೂರರಿಗೆ ಸಮ್ಮತವಾದ ಪುಣ್ಯಕೃತರ ಲೋಕಗಳು ನನಗೆ ದೊರೆಯದಿರಲಿ! ಮಾತಾಪಿತೃಗಳನ್ನು ಹತ್ಯೆಮಾಡಿದವರಿಗೆ, ಗುರುಪತ್ನಿಯನ್ನು ಭೋಗಿಸಿದವರಿಗೆ, ಚಾಡಿಕೋರರಿಗೆ, ಸಾಧುಗಳನ್ನು ನಿಂದಿಸಿದವರಿಗೆ, ಇತರರ ಮೇಲೆ ಮಿಥ್ಯಾಪವಾದವನ್ನು ಹೊರಿಸುವವರಿಗೆ, ವಿಶ್ವಾಸದಿಂದ ಇಟ್ಟ ನಿಧಿಯನ್ನು ಅಪಹರಿಸಿದವರಿಗೆ, ವಿಶ್ವಾಸಘಾತಿಗಳಿಗೆ, ಇನ್ನೊಬ್ಬರು ಭೋಗಿಸಿದ ಸ್ತ್ರೀಯನ್ನು ಕೂಡುವವನಿಗೆ, ಯಾವಾಗಲೂ ಪಾಪಕರವಾದ ಮಾತುಗಳನ್ನೇ ಆಡುವವರಿಗೆ, ಬ್ರಹ್ಮಹತ್ಯೆಯನ್ನು ಮಾಡಿದವರಿಗೆ, ಗೋಹತ್ಯೆಯನ್ನು ಮಾಡಿದವರಿಗೆ, ಪಾಯಸ-ಗೋಧಿಯ ಅನ್ನ-ಕಾಯಿ-ಪಲ್ಯೆಗಳು-ತಿಲಾನ್ನ-ಹೋಳಿಗೆ-ಮಾಂಸ ಇವುಗಳನ್ನು ನಿವೇದಿಸದೇ ಭಕ್ಷಿಸುವವನಿಗೆ ಯಾವ ನರಕ ಲೋಕಗಳು ಪ್ರಾಪ್ತವಾಗುವವೋ ಅವುಗಳಿಗೆ ನಾನು ನಾಳೆ ಜಯದ್ರಥನನ್ನು ಕೊಲ್ಲದೇ ಇದ್ದರೆ ಹೋಗುತ್ತೇನೆ. ವೇದಾಧ್ಯಾಯಿಯಾದ ಮತ್ತು ಅತ್ಯಂತ ಕಠೋರ ನಿಷ್ಠೆಯಲ್ಲಿರುವ ದ್ವಿಜೋತ್ತಮನನ್ನು, ವೃದ್ಧರನ್ನು, ಸಾಧುಗಳನ್ನು, ಮತ್ತು ಗುರುಗಳನ್ನು ಅವಮಾನಿಸುವನಿಗೆ; ಬ್ರಾಹ್ಮಣನನ್ನೂ, ಗೋವನ್ನೂ, ಅಗ್ನಿಯನ್ನೂ ಕಾಲಿನಿಂದ ಒದೆಯುವವನಿಗೆ; ನೀರಿನಲ್ಲಿ ಕಫ, ಮಲ ಅಥವಾ ಮೂತ್ರಗಳನ್ನು ವಿಸರ್ಜಿಸುವವನಿಗೆ ಯಾವ ಘೋರ ಗತಿಯು ಪ್ರಾಪ್ತವಾಗುವುದೋ ಅದು ನನಗೂ ಕೂಡ ಜಯದ್ರಥನನ್ನು ಕೊಲ್ಲದೇ ಇದ್ದರೆ ಪ್ರಾಪ್ತವಾಗುತ್ತದೆ. ನಗ್ನರಾಗಿ ಸ್ನಾನಮಾಡುವವರಿಗೆ, ಅತಿಥಿಯನ್ನು ನಿಂದಿಸಿ ಕಳುಹಿಸುವವರಿಗೆ, ಲಂಚತಿನ್ನುವವರಿಗೆ, ಸುಳ್ಳುಹೇಳುವವರಿಗೆ, ವಂಚನೆಮಾಡುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗೆ, ಇತರರ ಮೇಲೆ ಮಿಥ್ಯಾರೋಪ ಮಾಡುವವರಿಗೆ, ಸೇವಕರ ಆಜ್ಞೆಯಂತೆ ನಡೆಯುವವರಿಗೆ, ಮಕ್ಕಳು-ಹೆಂಡತಿ-ಆಶ್ರಿತರೊಂದಿಗೆ ಹಂಚಿಕೊಳ್ಳದೇ ಮೃಷ್ಟಾನ್ನವನ್ನು ಭುಂಜಿಸುವವನಿಗೆ ಯಾವ ಘೋರ ಗತಿಗಳು ಪ್ರಾಪ್ತವಾಗುವವೋ ಅವು ನನಗೂ ಕೂಡ ಜಯದ್ರಥನನ್ನು ನಾನು ಸಂಹರಿಸದೇ ಇದ್ದರೆ ಪ್ರಾಪ್ತವಾಗುತ್ತವೆ. ಆಶ್ರಯದಲ್ಲಿರುವವರನ್ನು ತ್ಯಜಿಸಿ ಅವರ ಪೋಷಣೆಯನ್ನು ಮಾಡದ ಕ್ರೂರಿಗೆ, ಉಪಕಾರಮಾಡಿದವರನ್ನು ನಿಂದಿಸುವವರಿಗೆ, ಯೋಗ್ಯನಾಗಿರುವ ಪಕ್ಕದ ಮನೆಯವನನ್ನು ಶ್ರಾದ್ಧಕ್ಕೆ ಕರೆಯದೇ ಇರುವವನಿಗೆ, ಅನರ್ಹ ಶೂದ್ರಳನ್ನು ವಿವಾಹವಾದ ಬ್ರಾಹ್ಮಣನನ್ನು ಶ್ರಾದ್ಧಕ್ಕೆ ಕರೆಯುವವನಿಗೆ, ಮದ್ಯಪಾನ ಮಾಡುವವನಿಗೆ, ಧರ್ಮಮರ್ಯಾದೆಯನ್ನು ಮೀರಿದವನಿಗೆ, ಕೃತಘ್ನನಿಗೆ, ಭ್ರಾತೃನಿಂದಕನಿಗೆ ದೊರೆಯುವ ಗತಿಯು ಒಂದುವೇಳೆ ನಾನು ಜಯದ್ರಥನನ್ನು ಕೊಲ್ಲದೇ ಇದ್ದರೆ ಕ್ಷಿಪ್ರವಾಗಿ ನನಗಾಗಲಿ. ಈ ಹಿಂದೆ ಹೇಳಿದವರನ್ನು ಬಿಟ್ಟು ಇನ್ನೂ ಇತರ ಪಾಪಕರ್ಮಿಗಳಿಗೆ ಪ್ರಾಪ್ತವಾಗುವ ಗತಿಯು ಒಂದು ವೇಳೆ ಈ ರಾತ್ರಿಯನ್ನು ಕಳೆದ ನಾಳೆ ನಾನು ಜಯದ್ರಥನನ್ನು ಸಂಹರಿಸದಿದ್ದರೆ ನನಗಾಗಲಿ.
“ಈ ನನ್ನ ಮತ್ತೊಂದು ಪ್ರತಿಜ್ಞೆಯನ್ನು ಕೇಳಿರಿ! ಒಂದುವೇಳೆ ಆ ಪಾಪಿಯು ಹತನಾಗದೇ ಸೂರ್ಯನು ಅಸ್ತನಾದನೆಂದಾದರೆ ಇಲ್ಲಿಯೇ ನಾನು ಉರಿಯುತ್ತಿರುವ ಅಗ್ನಿಯನ್ನು ಪ್ರವೇಶಿಸುತ್ತೇನೆ! ಅಸುರರು, ಸುರರು, ಮನುಷ್ಯರು, ಪಕ್ಷಿಗಳು, ಉರಗಗಳು, ಪಿತೃಗಣಗಳು, ನಿಶಾಚರರು, ಬ್ರಹ್ಮರ್ಷಿಗಳು, ದೇವರ್ಷಿಗಳು, ಈ ಚರಾಚರ ಜಗತ್ತು, ಇವುಗಳಲ್ಲದೇ ಇನ್ನೂ ಯಾವ ಶಕ್ತಿಗಳಿವೆಯೋ ಅವುಗಳೆಲ್ಲವೂ ಸೇರಿದರೂ ನನ್ನ ಶತ್ರುವನ್ನು ರಕ್ಷಿಸಲಾರರು. ಅವನು ಪಾತಾಳಕ್ಕೇ ಹೋಗಲಿ, ಅಲ್ಲಿಂದ ಮುಂದಕ್ಕೂ ಹೋಗಲಿ, ಆಕಾಶಕ್ಕೇ ಹೋಗಲಿ, ದೇವಲೋಕಕ್ಕೆ ಹೋಗಲಿ, ದೈತ್ಯರ ಪಟ್ಟಣಕ್ಕಾದರೂ ಹೋಗಲಿ – ಬೆಳಗಾದೊಡನೆಯೇ ನಾನು ಅಲ್ಲಿಯೇ ಹೋಗಿ ನೂರಾರು ಬಾಣಗಳಿಂದ ನನ್ನ ಶತ್ರುವಿನ ಶಿರವನ್ನು ಹಾರಿಸುತ್ತೇನೆ!”
ಹೀಗೆ ಹೇಳಿ ಅವನು ಗಾಂಡೀವವನ್ನು ಎರಡೂ ಕೈಗಳಿಂದ ಟೇಂಕರಿಸಿದನು. ಆ ಧನುಸ್ಸಿನ ಘೋಷವು ಎಲ್ಲವನ್ನೂ ಅತಿಕ್ರಮಿಸಿ ದಿಕ್ಕುಗಳನ್ನು ಮುಟ್ಟಿತು. ಅರ್ಜುನನು ಪ್ರತಿಜ್ಞೆಮಾಡಲು ಜನಾರ್ದನನು ಪಾಂಚಜನ್ಯವನ್ನೂ ಸಂಕ್ರುದ್ಧನಾದ ಧನಂಜಯನು ದೇವದತ್ತವನ್ನೂ ಊದಿದರು. ಅಚ್ಯುತನ ಬಾಯಿಯ ವಾಯುವಿನಿಂದ ಪಾಂಚಜನ್ಯದ ಉದರಭಾಗವು ಸಂಪೂರ್ಣವಾಗಿ ತುಂಬಿ, ಅಲ್ಲಿಂದ ಹೊರಬಂದ ಶಬ್ಧವು ಪಾತಾಲ, ಆಕಾಶ, ದಿಕ್ಕುಗಳು ಮತ್ತು ದಿಕ್ಪಾಲಕರಿಂದ ಕೂಡಿದ ಸಂಪೂರ್ಣ ಜಗತ್ತು ಇವೆಲ್ಲವನ್ನೂ ಯುಗಾಂತವೋ ಎಂಬಂತೆ ನಡುಗಿಸಿತು. ಆ ಮಹಾತ್ಮನು ಪ್ರತಿಜ್ಞೆಮಾಡಲು ಎಲ್ಲಕಡೆ ವಾದ್ಯ ಘೋಷಗಳು ಮೊಳಗಿದವು ಮತ್ತು ಪಾಂಡವರು ಸಿಂಹನಾದಗೈದರು.
ಜಯದ್ರಥನಿಗೆ ಕೌರವರು ನೀಡಿದ ಆಶ್ವಾಸನೆ
ಪುತ್ರಶೋಕದಿಂದಿದ್ದ ಪಾಂಡವರ ಆ ಮಹಾಶಬ್ಧವನ್ನು ಚಾರರಿಂದ ಕೇಳಿ ಜಯದ್ರಥನು ಸಂಕಟದಿಂದ ಮೇಲೆದ್ದನು. ಶೋಕಸಮ್ಮೂಢಹೃದಯನಾಗಿ, ದುಃಖದಿಂದ ತುಂಬಾ ಪೀಡಿತನಾಗಿ, ವಿಪುಲವಾದ ಅಗಾಧ ಶೋಕಸಾಗರದಲ್ಲಿ ಮುಳುಗಿದವನಾಗಿ, ಸೈಂಧವನು ರಾಜರ ಸಭೆಗೆ ನಡೆದನು. ಅಲ್ಲಿ ನರದೇವರ ಮುಂದೆ ಅವನು ವಿಲಪಿಸಿದನು. ಅಭಿಮನ್ಯುವಿನ ತಂದೆಗೆ ಹೆದರಿ ಭಯಪಡುತ್ತಾ ಈ ಮಾತನ್ನಾಡಿದನು: “ಪಾಂಡುವಿನ ಕ್ಷೇತ್ರದಲ್ಲಿ ಕಾಮಿ ಶಕ್ರನಿಂದ ಯಾವನು ಹುಟ್ಟಿದ್ದಾನೋ ಆ ದುರ್ಬುದ್ಧಿಯು ನನ್ನನ್ನೊಬ್ಬನನ್ನೇ ಯಮಕ್ಷಯಕ್ಕೆ ಕಳುಹಿಸಲು ಇಚ್ಛಿಸಿದ್ದಾನೆ. ಬದುಕಿರುವ ಇಚ್ಛೆಯೆಂದ ನಾನು ನನ್ನ ಮನೆಗೆ ತೆರಳುತ್ತೇನೆ. ನಿಮಗೆ ಮಂಗಳವಾಗಲಿ! ಕ್ಷತ್ರಿಯರ್ಷಭರೇ! ಅಥವಾ ಅವನಿಗೆ ಸರಿಸಾಟಿಯಾದ ಬಲದಿಂದ ನನ್ನನ್ನು ರಕ್ಷಿಸಬೇಕು. ಪಾರ್ಥನ ಪ್ರತಿಜ್ಞೆಗೆ ಪ್ರತಿಯಾಗಿ ವೀರರಾದ ನೀವು ನನಗೆ ಅಭಯವನ್ನು ನೀಡಬೇಕು. ದ್ರೋಣ, ದುರ್ಯೋಧನ, ಕೃಪ, ಕರ್ಣ, ಮದ್ರೇಶ, ಬಾಹ್ಲಿಕರು ಮತ್ತು ದುಃಶಾಸನಾದಿಗಳು ಕಂಟಕವೊದಗಿರುವ ನನ್ನನ್ನು ಯಮನ ಬಾಧೆಯಿಂದಲೂ ಪಾರುಮಾಡಬಲ್ಲರು. ಹಾಗಿರುವಾಗ ನನ್ನೊಬ್ಬನನ್ನೇ ಕೊಲ್ಲಲು ಬಯಸಿರುವ ಫಲ್ಗುನನು ಯಾವ ಲೆಖ್ಕಕ್ಕೆ? ಭೂಮಂಡಲಕ್ಕೇ ಒಡೆಯರಾಗಿರುವ ನೀವೆಲ್ಲರೂ ಸೇರಿ ನನ್ನೊಬ್ಬನನ್ನು ರಕ್ಷಿಸಲಾರರೇ? ಪಾಂಡವೇಯರ ಹರ್ಷದ ಕೂಗನ್ನು ಕೇಳಿ ನನಗೆ ಮಹಾಭಯವಾಗುತ್ತಿದೆ. ಪಾರ್ಥಿವರೇ! ಸಾಯುವವನಿಗಾಗುವಂತೆ ನನ್ನ ಅಂಗಗಳು ಶಿಥಿಲಗೊಳ್ಳುತ್ತಿವೆ. ಗಾಂಡೀವ ಧನ್ವಿಯು ಪ್ರತಿಜ್ಞೆ ಮಾಡಿದುದರಿಂದ ನನ್ನ ವಧೆಯು ನಿಶ್ಚಿತವಾಗಿಬಿಟ್ಟಿದೆ. ಆದುದರಿಂದಲೇ ಶೋಕಪಡಬೇಕಾಗಿದ್ದ ಸಮಯದಲ್ಲಿಯೂ ಪಾಂಡವರು ಸಂತೋಷದಿಂದ ಕೂಗುತ್ತಿದ್ದಾರೆ. “ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಇದನ್ನು ಸುಳ್ಳಾಗಿಸಲು ಉತ್ಸುಕರಿಲ್ಲದಿರುವಾಗ ಇನ್ನು ನರಾಧಿಪರು ಯಾವ ಲೆಖ್ಕಕ್ಕೆ?” ಎಂದು ಹೇಳಿಕೊಳ್ಳುತ್ತಿದ್ದಾರೆ. ಆದುದರಿಂದ ನನಗೆ ಅನುಜ್ಞೆಯನ್ನು ನೀಡಿ. ನಿಮಗೆ ಮಂಗಳವಾಗಲಿ! ಪಾಂಡವರು ಪತ್ತೇ ಹಚ್ಚದ ಹಾಗೆ ಕಣ್ಣುತಪ್ಪಿಸಿಕೊಂಡು ಹೋಗುತ್ತೇನೆ!”
ತನ್ನ ಕಾರ್ಯಸಾಧನೆಯೇ ಹೆಚ್ಚಿನದೆಂದು ತಿಳಿದ ರಾಜಾ ದುರ್ಯೋಧನನು ಹೀಗೆ ಭಯದಿಂದ ವ್ಯಾಕುಲಗೊಂಡ ಬುದ್ಧಿಯುಳ್ಳವನಾಗಿ ವಿಲಪಿಸುತ್ತಿದ್ದ ಅವನಿಗೆ ಹೇಳಿದನು: “ನರವ್ಯಾಘ್ರ! ಹೆದರಬೇಡ! ಕ್ಷತ್ರಿಯ ವೀರರ ಮಧ್ಯೆ ನಿಂತಿರುವ ನಿನ್ನೊಡನೆ ಹೋರಾಡಲು ಯಾರು ತಾನೇ ಬಯಸುತ್ತಾರೆ? ನಾನು, ವೈಕರ್ತನ ಕರ್ಣ, ಚಿತ್ರಸೇನ, ವಿವಿಂಶತಿ, ಭೂರಿಶ್ರವ, ಶಲ, ಶಲ್ಯ, ವೃಷಸೇನ, ಪುರುಮಿತ್ರ, ಜಯ, ಭೋಜ, ಕಾಂಭೋಜ, ಸುದಕ್ಷಿಣ, ಸತ್ಯವ್ರತ, ವಿಕರ್ಣ, ದುರ್ಮುಖ, ಜೊತೆಗೆ ದುಃಶಾಸನ, ಸುಬಾಹು, ಕಲಿಂಗ, ಯುಧಾಯುಧ, ಅವಂತಿಯ ವಿಂದಾನುವಿಂದರು, ದ್ರೋಣ, ದ್ರೌಣಿ, ಸೌಬಲ, ರಥಿಗಳಲ್ಲಿ ಶ್ರೇಷ್ಠ, ಅಮಿತದ್ಯುತಿ, ಶೂರ ಸ್ವಯಂ ನೀನು ಹೇಗೆ ಪಾಂಡವೇಯರಿಂದ ಭಯವನ್ನು ಕಾಣುತ್ತಿರುವೆ? ನನ್ನ ಈ ಹನ್ನೊಂದು ಅಕ್ಷೌಹಿಣೀ ಸೇನೆಗಳೂ ನಿನ್ನ ರಕ್ಷಣೆಯನ್ನೇ ಗುರಿಯಾಗಿಟ್ಟುಕೊಂಡು ಪ್ರಯತ್ನಿಸಿ ಹೋರಾಡುತ್ತದೆ. ಸೈಂಧವ! ನೀನು ಭಯಪಟ್ಟುಕೊಳ್ಳಬೇಡ! ನಿನ್ನ ಭಯವನ್ನು ಹೊರಹಾಕು!”
ದುರ್ಯೋಧನನಿಂದ ಹೀಗೆ ಆಶ್ವಾಸನೆಯನ್ನು ಪಡೆದ ಸೈಂಧವನು ಅವನೊಡನೆ ರಾತ್ರಿ ದ್ರೋಣನ ಬಳಿ ಹೋದನು. ಅಲ್ಲಿ ಅವನು ದ್ರೋಣನಿಗೆ ಕಾಲುಮುಟ್ಟಿ ನಮಸ್ಕರಿಸಿ ಅವನ ಅನುಮತಿಯನ್ನು ಪಡೆದು ಸಮೀಪದಲ್ಲಿ ಕುಳಿತು ವಿನಯಾನ್ವಿತನಾಗಿ ಕೇಳಿದನು: “ಭಗವನ್! ಲಕ್ಷ್ಯಭೇದನದಲ್ಲಿ, ದೂರ ಎಸೆಯುವುದರಲ್ಲಿ, ಕೈಚಳಕದಲ್ಲಿ, ದೃಢವಾಗಿ ಹೊಡೆಯುವುದರಲ್ಲಿ ನನಗೆ ಮತ್ತು ಫಲ್ಗುನನಿಗೆ ಇರುವ ವ್ಯತ್ಯಾಸವನ್ನು ಹೇಳಿ. ಆಚಾರ್ಯ! ಧನುರ್ವಿದ್ಯೆಯಲ್ಲಿ ನನಗೂ ಅರ್ಜುನನಿಗೂ ಇರುವ ವ್ಯತ್ಯಾಸವನ್ನು ಯಥಾವತ್ತಾಗಿ ತಿಳಿಯ ಬಯಸುತ್ತೇನೆ. ಇದನ್ನು ನಿಮಗೆ ತಿಳಿದಹಾಗೆ ಹೇಳಿ.”
ದ್ರೋಣನು ಹೇಳಿದನು: “ಅಯ್ಯಾ! ನಾನು ನಿನಗೆ ಮತ್ತು ಅರ್ಜುನ ಇಬ್ಬರಿಗೂ ಸಮನಾಗಿಯೇ ಆಚಾರ್ಯತ್ವವನ್ನು ಮಾಡಿದ್ದೇನೆ. ಆದರೆ, ಯೋಗ ಮತ್ತು ಪಟ್ಟ ದುಃಖಗಳಿಂದಾಗಿ ಅರ್ಜುನನು ನಿನಗಿಂತಲೂ ಅಧಿಕನು. ಆದರೆ ನೀನು ಯುದ್ಧದಲ್ಲಿ ಎಂದೂ ಪಾರ್ಥನಿಗೆ ಹೆದರಬೇಕಾಗಿಲ್ಲ. ಈ ಭಯದಿಂದ ನಾನು ನಿನ್ನನ್ನು ರಕ್ಷಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ನನ್ನ ಬಾಹುಗಳಿಂದ ರಕ್ಷಿಸಲ್ಪಟ್ಟವನನ್ನು ಅಮರರೂ ಕೂಡ ಆಳಲಾರರು! ಪಾರ್ಥನು ಸೀಳಲಾರದಂಥಹ ವ್ಯೂಹವನ್ನು ರಚಿಸುತ್ತೇನೆ. ಆದುದರಿಂದ ಪಿತೃಪೈತಾಮಹರ ಮಾರ್ಗವನ್ನು ಅನುಸರಿಸಿ, ಸ್ವಧರ್ಮವನ್ನು ಪಾಲಿಸಿ, ಯುದ್ಧಮಾಡು! ನೀನು ಭಯಪಡಬೇಡ! ವೇದಗಳನ್ನು ವಿಧಿವತ್ತಾಗಿ ಅಧ್ಯಯನ ಮಾಡಿ ಅಗ್ನಿಯಲ್ಲಿ ನೀನು ಆಹುತಿಗಳನ್ನಿತ್ತಿರುವೆ. ಬಹಳಷ್ಟು ಯಜ್ಞಗಳನ್ನೂ ಇಷ್ಟಿಗಳನ್ನೂ ಮಾಡಿರುವೆ. ಆದುದರಿಂದ ನಿನಗೆ ಮೃತ್ಯುಭಯದ ಭಯವು ಇರಬಾರದು. ಮಂದ ಮನುಷ್ಯರಿಗೆ ದುರ್ಲಭವಾದ ಮಹಾಭಾಗ್ಯವನ್ನು ನೀನು ಪಡೆದಿರುವೆ. ಭುಜವೀರ್ಯದಿಂದ ದಿವ್ಯ ಲೋಕಗಳನ್ನು ಗೆದ್ದು ಅನುತ್ತಮವಾದುದನ್ನು ಪಡೆಯುತ್ತೀಯೆ. ಕೌರವರು, ಪಾಂಡವರು, ವೃಷ್ಣಿಗಳು ಮತ್ತು ಅನ್ಯ ಮಾನವರು, ಪುತ್ರನೊಂದಿಗೆ ನಾನೂ ಕೂಡ ಚಿರರಲ್ಲ. ಇದರ ಕುರಿತು ಯೋಚಿಸು. ಒಬ್ಬೊಬ್ಬರಾಗಿ ನಾವೆಲ್ಲರೂ ಬಲಶಾಲಿ ಕಾಲನಿಂದ ಹತರಾಗಿ ತಮ್ಮ ತಮ್ಮ ಕರ್ಮಗಳಿಗನುಗುಣವಾದ ಪರಲೋಕಕ್ಕೆ ಹೋಗುತ್ತೇವೆ. ತಪಸ್ಸನ್ನು ತಪಿಸಿ ತಪಸ್ವಿಗಳು ಯಾವ ಲೋಕಗಳನ್ನು ಪಡೆಯುತ್ತಾರೋ ಆ ಲೋಕಗಳನ್ನೇ ಕ್ಷತ್ರಧರ್ಮಾಶ್ರಿತರಾದ ಶೂರ ಕ್ಷತ್ರಿಯರು ಪಡೆಯುತ್ತಾರೆ.”
ಭಾರದ್ವಾಜನಿಂದ ಹೀಗೆ ಆಶ್ವಾಸಿತನಾದ ಸೈಂದವನು ಆ ಭಯವನ್ನು ತೊರೆದು ಪಾರ್ಥನೊಂದಿಗೆ ಯುದ್ಧಮಾಡುವ ಮನಸ್ಸು ಮಾಡಿಕೊಂಡನು.
ಅರ್ಜುನನ ವಾಕ್ಯ
ಪಾರ್ಥನು ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಲು ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು: “ಸಹೋದರರ ಅಭಿಪ್ರಾಯಗಳನ್ನು ತಿಳಿಯದೆಯೇ ನೀನು “ನಾಳೆ ಸೈಂಧವನನ್ನು ಕೊಲ್ಲುತ್ತೇನೆ!” ಎಂದು ಅತಿಸಾಹಸ ಕಾರ್ಯವನ್ನು ಮಾತಿನ ಮೂಲಕ ಕೇಳಿಸಿಬಿಟ್ಟೆಯಲ್ಲ! ನನ್ನೊಡನೆ ಕೂಡ ವಿಚಾರಿಸದೇ ನೀನು ಅತಿಭಾರವಾದ ಈ ಕಾರ್ಯವನ್ನು ವಹಿಸಿಕೊಂಡಿರುವೆ. ಈಗ ನಾವು ಸರ್ವಲೋಕದ ಅಪಹಾಸ್ಯಕ್ಕೆ ಒಳಗಾಗದಂತೆ ಹೇಗೆ ಮುಂದುವರೆಯಬೇಕು? ಧಾರ್ತರಾಷ್ಟ್ರನ ಶಿಬಿರಕ್ಕೆ ನಾನು ಕಳುಹಿಸಿದ ಚರರು ಶೀಘ್ರವಾಗಿ ಬಂದು ಅಲ್ಲಿ ನಡೆದುದನ್ನು ನನಗೆ ತಿಳಿಸಿದ್ದಾರೆ. ನೀನು ಸಿಂಧುರಾಜವಧೆಯ ಪ್ರತಿಜ್ಞೆ ಮಾಡಿದಾಗ ಇಲ್ಲಿ ಆದ ಮಹಾ ಸಿಂಹನಾದವನ್ನು ಅವರು ಕೇಳಿದರು. ಆ ಶಬ್ಧದಿಂದ ಭಯಗೊಂಡ ಸೈಂಧವನೊಂದಿಗೆ ಧಾರ್ತರಾಷ್ಟ್ರರು ಇದು ಅಕಸ್ಮಾತ್ತಾಗಿ ಕೇಳಿಬಂದ ಸಿಂಹನಾದವಲ್ಲವೆಂದು ಅಭಿಪ್ರಾಯಪಟ್ಟು ಒಟ್ಟು ಗೂಡಿದರು. ಕೌರವರ ಸೇನೆಗಳಲ್ಲಿಯೂ ಆನೆ-ಕುದುರೆ-ಪದಾತಿಗಳ ಮತ್ತು ರಥಘೋಷದ ಭೈರವ ಶಬ್ಧವು ಕೇಳಿಬಂದಿತು. ಅಭಿಮನ್ಯುವಿನ ವಧೆಯನ್ನು ಕೇಳಿ ಆರ್ತನಾದ ಧನಂಜಯನು ನಿಶ್ಚಯವಾಗಿ ಕ್ರೋಧದಿಂದ ರಾತ್ರಿಯೇ ಯುದ್ಧಕ್ಕೆ ಹೊರಡುತ್ತಾನೆ ಎಂದು ಯೋಚಿಸಿ ಅವರು ಸನ್ನದ್ಧರಾಗಿದ್ದರು. ಆಗ ಅವರು ಸತ್ಯವ್ರತನಾದ ನೀನು ಸಿಂಧುರಾಜನ ವಧೆಯ ಕುರಿತು ಮಾಡಿದ ಪ್ರತಿಜ್ಞೆಯ ಸತ್ಯವನ್ನು ಕೇಳಿ ತಿಳಿದುಕೊಂಡರು. ಆಗ ಸುಯೋಧನ ಮತ್ತು ಅವನ ಅಮಾತ್ಯರು ಕ್ಷುದ್ರಮೃಗಗಳಂತೆ ಭಯಗೊಂಡು ವಿಮನಸ್ಕರಾಗಿ ಕುಳಿತುಕೊಂಡರು. ಆಗ ದೀನ ಜಯದ್ರಥನು ತುಂಬಾ ದುಃಖಿತನಾಗಿ ಎದ್ದು ಅಮಾತ್ಯರೊಡಗೂಡಿ ತನ್ನ ಶಿಬಿರಕ್ಕೆ ತೆರಳಿದನು. ಅವನು ಯೋಚಿಸಬೇಕಾದ ಸಮಯದಲ್ಲಿ ಶ್ರೇಯಸ್ಸುಂಟುಮಾಡುವ ಎಲ್ಲ ಕ್ರಿಯೆಗಳ ಕುರಿತು ಮಂತ್ರಾಲೋಚನೆ ಮಾಡಿ ರಾಜಸಂಸದಿಗೆ ಬಂದು ಸುಯೋಧನನಿಗೆ ಈ ಮಾತನ್ನಾಡಿದನು: “ತನ್ನ ಮಗನನ್ನು ಕೊಂದವನು ನಾನು ಎಂದು ತಿಳಿದು ಧನಂಜಯನು ನಾಳೆ ಯುದ್ಧದಲ್ಲಿ ನನ್ನನ್ನು ಎದುರಿಸುವನಿದ್ದಾನೆ. ಅವನ ಸೇನೆಯ ಮಧ್ಯೆ ನನ್ನನ್ನು ವಧಿಸುವ ಪ್ರತಿಜ್ಞೆಯನ್ನೂ ಮಾಡಿದ್ದಾನೆ. ಸವ್ಯಸಾಚಿಯ ಪ್ರತಿಜ್ಞೆಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಸುಳ್ಳುಮಾಡಲು ಉತ್ಸುಕರಾಗಿಲ್ಲ. ಆದುದರಿಂದ ನೀವೆಲ್ಲರೂ ಸಂಗ್ರಾಮದಲ್ಲಿ ನನ್ನನ್ನು ರಕ್ಷಿಸಬೇಕು. ನಿಮ್ಮ ನೆತ್ತಿಯ ಮೇಲೆ ಕಾಲಿಟ್ಟು ಧನಂಜಯನು ತನ್ನ ಗುರಿಯನ್ನು ಹೊಡೆಯಲು ಬಿಡಬೇಡಿ! ಕುರುನಂದನ! ಯುದ್ಧದಲ್ಲಿ ನೀನು ನನ್ನನ್ನು ರಕ್ಷಿಸಲಾರೆ ಎಂದಾದರೆ ನನಗೆ ಅನುಜ್ಞೆಯನ್ನು ನೀಡು. ನಾನು ನನ್ನ ಮನೆಗೆ ಹೋಗುತ್ತೇನೆ.”
“ಹೀಗೆ ಹೇಳಲು ಸುಯೋಧನನು ವಿಮನಸ್ಕನಾಗಿ ತಲೆತಗ್ಗಿಸಿ ಯೋಚಿಸಿದನು. ಅವನು ಹೀಗೆ ಶಪಿತನಾದುದನ್ನು ಕೇಳಿ ಸುಮ್ಮನಾಗಿ ಯೋಚಿಸತೊಡಗಿದನು. ರಾಜನು ದುಃಖಿತನಾಗಿರುವುದನ್ನು ನೋಡಿ ಸೈಂಧವನು ತನಗೆ ಒಳ್ಳೆಯದಾಗುವ ರೀತಿಯಲ್ಲಿ ಮೃದುವಾಗಿ ಹೀಗೆ ಹೇಳಿದನು: “ಮಹಾಹವದಲ್ಲಿ ಅರ್ಜುನನ ಅಸ್ತ್ರಗಳನ್ನು ಅಸ್ತ್ರಗಳಿಂದ ಪ್ರತಿಯಾಗಿ ಹೊಡೆಯಬಲ್ಲ, ಅವನಷ್ಟು ವೀರ್ಯವಂತನಾದ ಧನುರ್ಧರನನ್ನು ನಿನ್ನ ಕಡೆಯವರಲ್ಲಿ ಯಾರನ್ನೂ ನಾನು ಕಾಣುತ್ತಿಲ್ಲ. ವಾಸುದೇವನನ್ನು ಸಹಾಯಕನಾಗಿ ಪಡೆದಿರುವ, ಗಾಂಡೀವ ಧನುಸ್ಸನ್ನು ಟೇಂಕರಿಸುವ ಅರ್ಜುನನ ಎದುರು ಸಾಕ್ಷಾತ್ ಶತಕ್ರತುವೇ ನಿಲ್ಲದಿರುವಾಗ ಬೇರೆ ಯಾರಿಗೆ ತಾನೇ ಇದು ಸಾಧ್ಯ? ಹಿಂದೆ ಹಿಮಾಲಯ ಗಿರಿಯಲ್ಲಿ ಮಹಾತೇಜಸ್ವಿ ಪ್ರಭೂ ಮಹೇಶ್ವರನೂ ಕೂಡ ಪಾರ್ಥನೊಂದಿಗೆ ನಿಂತೇ ಯುದ್ಧಮಾಡಿದನೆಂದು ಕೇಳಿದ್ದೇವೆ. ದೇವರಾಜನಿಂದ ಉತ್ತೇಜಿತನಾದ ಅವನು ಒಬ್ಬನೇ ರಥದಲ್ಲಿ ಹಿರಣ್ಯಪುರವಾಸಿನೀ ಸಹಸ್ರಾರು ದಾನವರನ್ನು ಸಂಹರಿಸಿದನು. ಧೀಮತ ವಾಸುದೇವನೊಡಗೂಡಿ ಕೌಂತೇಯನು ಅಮರರೊಂದಿಗೆ ಈ ಮೂರು ಲೋಕಗಳನ್ನೂ ನಾಶಗೊಳಿಸಬಲ್ಲ ಎಂದು ನನಗನ್ನಿಸುತ್ತದೆ. ಆದುದರಿಂದ ನೀನು ತಿಳಿದಂತೆ ನನಗೆ ಹೋಗಲು ಅನುಜ್ಞೆಯನ್ನು ನೀಡು ಅಥವಾ ವೀರ ಪುತ್ರನೊಂದಿಗೆ ಮಹಾತ್ಮ ದ್ರೋಣನು ನನ್ನನ್ನು ರಕ್ಷಿಸಲಿ.”
“ಅರ್ಜುನ! ಆಗ ಸ್ವಯಂ ರಾಜನು ತುಂಬಾ ಕಳವಳಗೊಂಡು ಆಚಾರ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ರಥಗಳನ್ನು ಸಜ್ಜುಗೊಳಿಸಲು ಆದೇಶವಿತ್ತಿದ್ದಾನೆ. ಕರ್ಣ, ಭೂರಿಶ್ರವ, ದ್ರೌಣಿ, ವೃಷಸೇನ, ದುರ್ಜಯ ಮತ್ತು ಮದ್ರರಾಜ ಈ ಆರು ಮಂದಿ ಎದುರಿರುತ್ತಾರೆ. ಅರ್ಧ ಶಕಟ ಮತ್ತೊಂದು ಅರ್ಧ ಪದ್ಮಾಕಾರದ ವ್ಯೂಹವನ್ನು ದ್ರೋಣನು ಕಲ್ಪಿಸಿದ್ದಾನೆ. ಪದ್ಮಕರ್ಣಿಕದ ಮಧ್ಯದಲ್ಲಿ ಸೂಜಿಭಾಗದಲ್ಲಿ ಜಯದ್ರಥನಿರುತ್ತಾನೆ. ಹೀಗೆ ಸಿಂಧುರಾಜನು ಯುದ್ಧದುರ್ಮದರಾದ ವೀರರಿಂದ ರಕ್ಷಿಸಲ್ಪಟ್ಟಿದ್ದಾನೆ. ಧನುಸ್ಸು, ಅಸ್ತ್ರ, ವೀರ್ಯ, ಪ್ರಾಣ ಮತ್ತು ಹುಟ್ಟಿನಲ್ಲಿ ಹೆಚ್ಚಿನವರಾದ ಈ ಷಡ್ರಥರನ್ನು ಸುಲಭವಾಗಿ ಗೆಲ್ಲಲಾರೆವು ಎನ್ನುವುದು ಖಂಡಿತ. ಸೇನೆಗಳೊಂದಿಗೆ ಇವರನ್ನು ಗೆಲ್ಲದೇ ಜಯದ್ರಥನನ್ನು ನಾವು ತಲುಪಲಾರೆವು. ಆ ಆರರಲ್ಲಿ ಒಬ್ಬೊಬ್ಬರ ವೀರ್ಯದ ಕುರಿತೂ ಯೋಚಿಸು. ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ. ಇನ್ನೊಮ್ಮೆ ನಾವು ಕಾರ್ಯಸಿದ್ಧಿಗಾಗಿ ಮತ್ತು ನಮ್ಮ ಹಿತದ ನೀತಿಯ ಕುರಿತು ಸಚಿವರೊಂದಿಗೆ ಮತ್ತು ಸುಹೃದಯರೊಂದಿಗೆ ಮಂತಾಲೋಚನೆ ಮಾಡಬೇಕೆಂದು ಯೋಚಿಸುತ್ತಿದ್ದೇನೆ.”
ಆಗ ಅರ್ಜುನನು ಹೇಳಿದನು: “ಯಾರ ಬಲವು ಅಧಿಕವೆಂದು ನೀನು ಅಭಿಪ್ರಾಯಪಡುತ್ತಿದ್ದೀಯೋ ಧಾರ್ತರಾಷ್ಟ್ರನ ಆ ಷಡ್ರಥರ ವೀರ್ಯವು ನನ್ನ ಅರ್ಧಕ್ಕೂ ಸಮನಿಲ್ಲ ಎಂದು ನನಗನ್ನಿಸುತ್ತದೆ. ಮಧುಸೂದನ! ಜಯದ್ರಥನನ್ನು ವಧಿಸಲು ಬಯಸಿದ ನಾನು ಅವರೆಲ್ಲರ ಅಸ್ತ್ರಗಳನ್ನೂ ಅಸ್ತ್ರಗಳಿಂದ ತುಂಡುಮಾಡುವುದನ್ನು ನೀನು ನೋಡುವೆಯಂತೆ! ಸೇನೆಗಳೊಂದಿಗೆ ದ್ರೋಣನು ನೋಡುತ್ತಾ ವಿಲಪಿಸಲು ನಾನು ಸಿಂಧುರಾಜನ ರುಂಡವನ್ನು ನೆಲಕ್ಕುರುಳಿಸುತ್ತೇನೆ! ಒಂದುವೇಳೆ ಸಾಧ್ಯರೂ, ರುದ್ರರೂ, ಅಶ್ವಿನಿಗಳೊಡನೆ ವಸುಗಳೂ, ಇಂದ್ರನೊಂದಿಗೆ ಮರುತರೂ, ವಿಶ್ವೇದೇವರೂ, ಹಾಗೆಯೇ ಅಸುರರೂ, ಗಂಧರ್ವರೊಡನೆ ಪಿತೃಗಳೂ, ಸುಪರ್ಣರೂ, ಸಾಗರ-ಪರ್ವತಗಳೂ, ಆಕಾಶ, ಭೂಮಿ, ದಿಕ್ಪಾಲಕರೊಂದಿಗೆ ದಿಕ್ಕುಗಳೂ, ಗ್ರಾಮ-ಅರಣ್ಯಗಳೂ, ಸ್ಥಾವರ-ಚರ ಭೂತಗಳೂ ಸಿಂಧುರಾಜನನ್ನು ರಕ್ಷಿಸಲು ಬಂದರೂ, ನಾಳೆ ರಣದಲ್ಲಿ ನನ್ನ ಬಾಣಗಳಿಂದ ಅವನು ಹತನಾಗುವುದನ್ನು ನೀನು ನೋಡುತ್ತೀಯೆ! ಕೃಷ್ಣ! ನನ್ನ ಆಯುಧವನ್ನು ಮುಟ್ಟಿಕೊಂಡು ಸತ್ಯವಾಗಿ ನಾನು ಈ ಶಪಥವನ್ನು ಮಾಡುತ್ತಿದ್ದೇನೆ. ಆ ಪಾಪಿ ದುರ್ಮತಿ ಮಹೇಷ್ವಾಸನ ರಕ್ಷಕನಾಗಿರುವ ದ್ರೋಣನನ್ನೇ ಮೊಟ್ಟಮೊದಲಿಗೆ ಎದಿರಿಸುತ್ತೇನೆ. ಇವನೇ ದ್ಯೂತದ ಪಣವೆಂದು ಸುಯೋಧನನು ತಿಳಿದಿದ್ದಾನೆ. ಆದುದರಿಂದ ಅವನ ಸೇನೆಯ ಅಗ್ರಭಾಗವನ್ನು ಭೇದಿಸಿಯೇ ನಾನು ಸೈಂಧವನನ್ನು ಕೊಲ್ಲುತ್ತೇನೆ. ವಜ್ರದಿಂದ ಗಿರಿಶೃಂಗಗಳನ್ನು ಸೀಳುವಂತೆ ಆ ಮಹೇಷ್ವಾಸರನ್ನು ನಾಳೆ ಯುದ್ಧದಲ್ಲಿ ನನ್ನ ತಿಗ್ಮತೇಜಸ್ವೀ ನಾರಾಚಗಳಿಂದ ಸೀಳುವುದನ್ನು ನೀನು ನೋಡುವೆ! ನಿಶಿತ ಶರಗಳಿಂದ ಒಡೆದು ಕೆಳಗೆ ಬೀಳುವ ಮತ್ತು ಬಿದ್ದ ಆನೆ, ಕುದುರೆ ಮತ್ತು ನರರ ಶರೀರಗಳಿಂದ ರಕ್ತವು ಹರಿಯುತ್ತದೆ. ಗಾಂಡೀವದಿಂದ ಪ್ರಯೋಗಿಸಲ್ಪಟ್ಟ, ಮನಸ್ಸು ಮತ್ತು ವಾಯುವೇಗಗಳನ್ನುಳ್ಳ ಬಾಣಗಳು ಸಹಸ್ರಾರು ನರ-ಆನೆ-ಕುದುರೆಗಳ ದೇಹಗಳನ್ನು ಕತ್ತರಿಸಲಿವೆ. ಯಮ, ಕುಬೇರ, ವರುಣ, ರುದ್ರ ಮತ್ತು ಇಂದ್ರರಿಂದ ನಾನು ಯಾವ ಅಸ್ತ್ರಗಳನ್ನು ಪಡೆದಿದ್ದೆನೋ ಆ ಘೋರ ಅಸ್ತ್ರಗಳನ್ನು ನರರು ನಾಳೆ ಯುದ್ಧದಲ್ಲಿ ನೋಡಲಿದ್ದಾರೆ. ಸೈಂಧವನನ್ನು ರಕ್ಷಿಸುವವರೆಲ್ಲರೂ ನನ್ನ ಅಸ್ತ್ರ-ಬ್ರಹ್ಮಾಸ್ತ್ರಗಳಿಂದ ನಾಶವಾಗುವುದನ್ನು ನೋಡಲಿದ್ದಾರೆ. ನಾಳೆ ಯುದ್ಧದಲ್ಲಿ ನನ್ನ ಶರವೇಗದಿಂದ ರಾಜರ ರುಂಡಗಳು ತುಂಡಾಗಿ ಭೂಮಿಯ ಮೇಲೆ ಚೆಲ್ಲಿ ಬೀಳುವುದನ್ನು ನೀನು ನೋಡಲಿರುವೆ. ಕ್ರವ್ಯಾದಗಳನ್ನು ತೃಪ್ತಿಪಡಿಸುತ್ತೇನೆ. ಶತ್ರುಗಳನ್ನು ಓಡಿಸುತ್ತೇನೆ. ಸ್ನೇಹಿತರನ್ನು ಸಂತೋಷಗೊಳಿಸುತ್ತೇನೆ. ಸೈಂಧವನನ್ನು ಉರುಳಿಸುತ್ತೇನೆ. ಬಹಳಷ್ಟು ಕೆಟ್ಟದ್ದನ್ನು ಮಾಡಿರುವ, ಕೆಟ್ಟ ಸಂಬಂಧೀ, ಪಾಪದೇಶದಲ್ಲಿ ಹುಟ್ಟಿದ ರಾಜ ಸೈಂಧವನು ನನ್ನಿಂದ ಹತನಾಗಿ ತಾನೇ ಶೋಕಿಸುವವನಿದ್ದಾನೆ. ಸದಾ ಕ್ಷೀರಾನ್ನವನ್ನೇ ಉಣ್ಣುತ್ತಾ ಬಂದ ಆ ಪಾಪಾಚಾರೀ ಸೈಂಧವನು ರಾಜರೊಂದಿಗೆ ರಣದಲ್ಲಿ ನನ್ನ ಬಾಣಗಳಿಂದ ಸಾಯುತ್ತಾನೆ. ಕೃಷ್ಣ! ನಾಳೆ ಬೆಳಿಗ್ಗೆ ಯುದ್ಧದಲ್ಲಿ ನನ್ನ ಸರಿಸಮನಾದ ಧನುರ್ಧರನು ಬೇರೆ ಯಾರೂ ಎಂದು ಸುಯೋಧನನು ಯೋಚಿಸುವಂತೆ ಮಾಡುತ್ತೇನೆ. ದಿವ್ಯ ಗಾಂಡೀವ ಧನುಸ್ಸಿನೊಡನೆ ಯುದ್ಧಮಾಡುವ ಮತ್ತು ನೀನೇ ಸಾರಥಿಯಾಗಿರುವ ನನ್ನನ್ನು ಯಾರುತಾನೇ ಗೆದ್ದಾರು? ಚಂದ್ರನಲ್ಲಿ ಲಕ್ಷ್ಮಿಯಿರುವಂತೆ ಮತ್ತು ಸಮುದ್ರದಲ್ಲಿ ನೀರಿರುವಂತೆ ನನ್ನ ಪ್ರತಿಜ್ಞೆಯಲ್ಲಿಯೂ ಸತ್ಯವಿದೆಯೆಂದು ತಿಳಿ. ನನ್ನ ಅಸ್ತ್ರಗಳನ್ನು ಅವಮಾನಿಸಬೇಡ! ನನ್ನ ದೃಢ ಧನುಸ್ಸನ್ನು ಅವಮಾನಿಸಬೇಡ! ನನ್ನ ಬಾಹುಗಳ ಬಲವನ್ನು ಅವಮಾನಿಸಬೇಡ! ಈ ಧನಂಜಯನನ್ನು ಅವಮಾನಿಸಬೇಡ! ಸೋಲನ್ನಪ್ಪದೇ ವಿಜಯಿಯಾಗುವಹಾಗೆ ನಾನು ಸಂಗ್ರಾಮವನ್ನು ಪ್ರವೇಶಿಸುತ್ತೇನೆ. ಅದೇ ಸತ್ಯದಿಂದ ಸಂಗ್ರಾಮದಲ್ಲಿ ಜಯದ್ರಥನನ್ನು ಕೊಲ್ಲುತ್ತೇನೆ ಎಂದು ತಿಳಿ. ಬ್ರಾಹ್ಮಣರಲ್ಲಿ ಸತ್ಯವು ನಿಶ್ಚಿತವಾದುದು. ಸಾಧುಗಳಲ್ಲಿ ಸನ್ನತಿಯು ನಿಶ್ಚಿತವಾದುದು. ದಕ್ಷರಲ್ಲಿ ಸಂಪತ್ತು ನಿಶ್ಚಿತವಾದುದು. ಮತ್ತು ನಾರಾಯಣನಲ್ಲಿ ಜಯವು ನಿಶ್ಚಿತವಾದುದು.”
ಹೀಗೆ ಹೃಷೀಕೇಶನಿಗೆ ಮತ್ತು ಸ್ವಯಂ ತಾನೇ ತನಗೆ ಹೇಳಿಕೊಂಡು ವಾಸವಿ ಅರ್ಜುನನು ಗಾಢ ಧ್ವನಿಯಲ್ಲಿ ಮತ್ತೊಮ್ಮೆ ಪ್ರಭು ಕೇಶವನಿಗೆ ಹೇಳಿದನು: “ಕೃಷ್ಣ! ರಾತ್ರಿಯು ಕಳೆದು ಪ್ರಭಾತದಲ್ಲಿಯೇ ನನ್ನ ರಥವನ್ನು ಸಿದ್ಧಗೊಳಿಸಬೇಕು. ನಾವು ವಹಿಸಿಕೊಂಡಿರುವ ಕಾರ್ಯವು ಮಹತ್ತರವಾದುದು!”
ಶ್ರೀಕೃಷ್ಣನು ಸುಭದ್ರೆಯನ್ನು ಸಂತವಿಸಿದ್ದುದು
ವಾಸುದೇವ-ಧನಂಜಯರು ದುಃಖಶೋಕಾರ್ತರಾಗಿ ಸರ್ಪಗಳಂತೆ ನಿಟ್ಟುಸಿರು ಬಿಡುತ್ತಾ ನಿದ್ರೆಯನ್ನು ಪಡೆಯಲಾರದೇ ಹೋದರು. ನರನಾರಾಯಣರು ಕ್ರುದ್ಧರಾಗಿದ್ದಾರೆ ಎನ್ನುವುದನ್ನು ತಿಳಿದು ವಾಸವನೊಂದಿಗೆ ದೇವತೆಗಳು ವ್ಯಥಿತರಾಗಿ ಮುಂದೇನು ನಡೆಯಲಿದೆ? ಎಂದು ಚಿಂತಿಸತೊಡಗಿದರು. ಭಯಸೂಚಕವಾದ, ದಾರುಣವಾದ ಕ್ರೂರ ಗಾಳಿಯು ಬೀಸತೊಡಗಿತು. ಸೂರ್ಯನ ಸುತ್ತಲೂ ದುಂಡಾದ ಪರಿಧಿಯು ಕಬಂಧದೊಡನೆ ಕಾಣಿಸಿಕೊಂಡಿತು. ಮಿಂಚಿನೊಡನೆ ಗರ್ಜಿಸುತ್ತಾ ಒಣ ಸಿಡಿಲುಗಳು ಸಿಡಿದವು. ಶೈಲ-ವನ-ಕಾನನಗಳೊಂದಿಗೆ ಭೂಮಿಯು ನಡುಗಿತು. ಮಕರಾಲಯ ಸಾಗರಗಳು ಅಲ್ಲೋಲಕಲ್ಲೋಲಗೊಂಡವು. ಸಮುದ್ರದ ಕಡೆ ಹರಿಯುತ್ತಿದ್ದ ನದಿಗಳು ಹಿಂದಿರುಗಿ ಅವು ಹುಟ್ಟಿದ ಕಡೆ ಹರಿಯತೊಡಗಿದವು. ಯಮನ ರಾಷ್ಟ್ರನ ವೃದ್ಧಿಗಾಗಿ ಮತ್ತು ಕ್ರವ್ಯಾದಗಳ ಸಂತೋಷಾರ್ಥವಾಗಿ ಅಶ್ವ-ಗಜ-ರಥ-ಪದಾತಿ ಸೈನಿಕರ ಎರಡು ತುಟಿಗಳೂ ಅದುರತೊಡಗಿದವು. ಆ ಎಲ್ಲ ರೋಮಾಂಚಕಾರೀ ದಾರುಣ ಉತ್ಪಾತಗಳನ್ನು ನೋಡಿ ವಾಹನಗಳು ರೋದಿಸಿದವು ಮತ್ತು ಮಲಮೂತ್ರಗಳನ್ನು ವಿಸರ್ಜಿಸಿದವು. ಕೌರವ ಸೇನೆಯವರೆಲ್ಲರೂ ಮಹಾಬಲ ಸವ್ಯಸಾಚಿಯ ಉಗ್ರ ಪ್ರತಿಜ್ಞೆಯನ್ನು ಕೇಳಿ ವ್ಯಥಿತರಾದರು.
ಆಗ ಮಹಾಬಾಹು ಪಾಕಶಾಸನಿಯು ಕೃಷ್ಣನಿಗೆ ಹೇಳಿದನು: “ಸೊಸೆಯೊಂದಿಗಿರುವ ನಿನ್ನ ತಂಗಿ ಸುಭದ್ರೆಯನ್ನು ಸಂತವಿಸು! ಮಾಧವ! ಸೊಸೆಯ ಮತ್ತು ಅವಳ ಸಖಿಯರ ಶೋಕವನ್ನು ಸಾಂತ್ವನದ ಮತ್ತು ಸತ್ಯದಿಂದ ಕೂಡಿದ ಮಾತುಗಳಿಂದ ದೂರಮಾಡು!”
ಆಗ ವಾಸುದೇವನು ದುಃಖದಿಂದ ಅರ್ಜುನನ ಮನೆಗೆ ಹೋಗಿ ಪುತ್ರಶೋಕದಿಂದ ಆರ್ತಳಾಗಿದ್ದ ದುಃಖಿತಳಾಗಿದ್ದ ತಂಗಿಯನ್ನು ಸಂತವಿಸಿದನು: “ವಾರ್ಷ್ಣೇಯೀ! ಸೊಸೆಯೊಂದಿಗೆ ಕುಮಾರನಿಗಾಗಿ ಶೋಕಿಸಬೇಡ! ಪ್ರಾಣಿಗಳೆಲ್ಲವೂ ಕಾಲನಿರ್ಮಿತವಾದ ಈ ಪರಿಸ್ಥಿತಿಗೆ ಬಂದೇ ಬರುತ್ತವೆ. ವಿಶೇಷವಾಗಿ ವೀರ ಕ್ಷತ್ರಿಯರ ಕುಲದಲ್ಲಿ ಹುಟ್ಟಿದ ಈ ನಿನ್ನ ಪುತ್ರನ ಮರಣವು ಅವನಿಗೆ ತಕ್ಕುದಾಗಿದೆ. ಶೋಕಿಸಬೇಡ! ಅದೃಷ್ಟದಿಂದ ತನ್ನ ತಂದೆಯ ಪರಾಕ್ರಮಕ್ಕೆ ಸಮನಾದ ವೀರ ಮಹಾರಥನು ಕ್ಷಾತ್ರ ವೀರರು ಬಯಸುವ ಗತಿಯನ್ನು ವಿಧಿವತ್ತಾಗಿಯೇ ಪಡೆದಿದ್ದಾನೆ. ಬಹಳಷ್ಟು ಶತ್ರುಗಳನ್ನು ಗೆದ್ದು, ಮೃತ್ಯುಲೋಕಗಳಿಗೂ ಕಳುಹಿಸಿ ಅವನು ಸರ್ವಕಾಮಗಳನ್ನೂ ಪೂರೈಸಬಲ್ಲ ಪುಣ್ಯಕೃತರ ಅಕ್ಷಯ ಲೋಕಗಳಿಗೆ ಹೋಗಿದ್ದಾನೆ. ತಪಸ್ಸು, ಬ್ರಹ್ಮಚರ್ಯ, ಶಾಸ್ತ್ರಜ್ಞಾನ ಮತ್ತು ಪ್ರಜ್ಞೆಯ ಮೂಲಕ ಸಂತರು ಯಾವ ಗತಿಯನ್ನು ಬಯಸುತ್ತಾರೋ ಆ ಗತಿಯನ್ನೇ ನಿನ್ನ ಮಗನು ಪಡೆದಿದ್ದಾನೆ. ಭದ್ರೇ! ವೀರಮಾತೆಯಾದ, ವೀರನ ಪತ್ನಿಯಾದ, ವೀರಪುತ್ರಿಯಾದ, ವೀರರನ್ನೇ ಬಾಂಧವರನ್ನಾಗಿ ಪಡೆದಿರುವ ನೀನು ಮಗನ ಕುರಿತು ಶೋಕಿಸಬೇಡ. ಅವನು ಪರಮ ಗತಿಯನ್ನು ಪಡೆದಿದ್ದಾನೆ. ಕ್ಷುದ್ರನಾದ, ಬಾಲಘಾತಕನಾದ ಸೈಂಧವನು ತನ್ನ ಸುಹೃದ್ಗಣ-ಬಾಂಧವರೊಂದಿಗೆ ಈ ಪಾಪದ ಫಲವನ್ನು ಪಡೆಯುತ್ತಾನೆ. ಈ ರಾತ್ರಿ ಕಳೆದರೆ ಆ ಪಾಪಕರ್ಮಿಯು ಅಮರಾವತಿಯಲ್ಲಿ ಹೊಕ್ಕಿಕೊಂಡರೂ ಪಾರ್ಥನಿಂದ ಬಿಡುಗಡೆ ಹೊಂದಲಾರ! ಸೈಂಧವನ ಶಿರಸ್ಸು ರಣದಲ್ಲಿ ಹಾರಿಹೋಗಿ ಸಮಂತಪಂಚಕದ ಹೊರಗೆ ಬಿದ್ದಿತು ಎನ್ನುವುದನ್ನು ನೀನು ನಾಳೆಯೇ ಕೇಳುವೆ. ಶೋಕರಹಿತಳಾಗಿರು. ರೋದಿಸಬೇಡ! ಕ್ಷತ್ರಧರ್ಮವನ್ನು ಆದರಿಸಿ ಅವನು ಶೂರರ ಸಂತರ ಗತಿಯನ್ನು ಪಡೆದಿದ್ದಾನೆ. ನಾವು ಮತ್ತು ಅನ್ಯ ಶಸ್ತ್ರಜೀವಿಗಳೂ ಕೂಡ ಇದೇ ಗತಿಯನ್ನು ಪಡೆಯುತ್ತವೆ. ವಿಶಾಲ ಹೆಗಲಿನ, ಯುದ್ಧದಲ್ಲಿ ಬೆನ್ನುತೋರಿಸದ, ಶತ್ರುಗಳನ್ನು ಗೆದ್ದ ನಿನ್ನ ಮಗ ಆ ಮಹಾಬಾಹುವು ಸ್ವರ್ಗಕ್ಕೆ ಹೋಗಿದ್ದಾನೆ. ಪರಿತಪಿಸುವುದನ್ನು ಬಿಡು! ಆ ಶೂರ ಮಹಾರಥ ವೀರ್ಯವಾನನು ತಂದೆ ಮತ್ತು ತಾಯಿಯ ಕುಲಗಳನ್ನು ಅನುಸರಿಸಿ ಸಹಸ್ರಾರು ಶತ್ರುಗಳನ್ನು ಸಂಹರಿಸಿ ಹತನಾದನು. ನಿನ್ನ ಸೊಸೆಯನ್ನು ಸಂತವಿಸು. ತುಂಬಾ ದುಃಖಿಸಬೇಡ. ನಾಳೆಯೇ ನೀನು ಅತ್ಯಂತ ಪ್ರಿಯವಾರ್ತೆಯನ್ನು ಕೇಳುವೆ. ವಿಶೋಕಳಾಗು! ಪಾರ್ಥನು ಪ್ರತಿಜ್ಞೆಮಾಡಿದಂತೆಯೇ ನಡೆಯುತ್ತದೆ. ಅನ್ಯಥಾ ಅಲ್ಲ. ನಿನ್ನ ಗಂಡನು ಬಯಸಿದುದು ಎಂದೂ ನಿಷ್ಫಲವಾಗುವುದಿಲ್ಲ. ಒಂದುವೇಳೆ ಮನುಷ್ಯರು, ಪನ್ನಗರು, ಪಿಶಾಚಿಗಳು, ರಜನೀಚರರು, ಪಕ್ಷಿಗಳು, ಸುರಾಸುರರೂ ಕೂಡ ರಣರಂಗದಲ್ಲಿ ಸೇರಿ ಸಿಂಧುರಾಜನನ್ನು ರಕ್ಷಿಸಲು ಬಂದರೂ ಬೆಳಿಗ್ಗೆ ಅವರೆಲ್ಲರೊಡನೆಯೂ ಅವನು ಉಳಿಯುವುದಿಲ್ಲ!”
ಮಹಾತ್ಮ ಕೇಶವನ ಈ ಮಾತನ್ನು ಕೇಳಿದ ಸುಭದ್ರೆಯು ಪುತ್ರಶೋಕಾರ್ತಳಾಗಿ, ಬಹಳ ದುಃಖಿತಳಾಗಿ ವಿಲಪಿಸಿದಳು. “ಹಾ ಪುತ್ರ! ಮಂದಭಾಗ್ಯಳಾದ ನನ್ನಲ್ಲಿ ಹುಟ್ಟಿ ತಂದೆಯ ಸಮನಾದ ಪರಾಕ್ರಮವನ್ನು ಪಡೆದು ನೀನು ಹೇಗೆ ತಾನೇ ಯುದ್ಧದಲ್ಲಿ ನಿಧನಹೊಂದಿದೆ? ಕನ್ನೈದಿಲೆಯಂತೆ ಶ್ಯಾಮವರ್ಣದ, ಸುಂದರ ಹಲ್ಲಿನ, ಸುಂದರ ಕಣ್ಣುಗಳ ನಿನ್ನ ಮುಖವು ರಣ ಧೂಳಿನಿಂದ ಆಚ್ಛಾದಿತವಾಗಿ ಹೇಗೆ ಕಾಣುತ್ತಿದೆಯೋ! ಯುದ್ಧದಿಂದ ಹಿಮ್ಮೆಟ್ಟದ, ಸುಂದರ ಶಿರಸ್ಸಿನಿಂದಲೂ, ಕಂಬುಕಂಠದಿಂದಲೂ, ನೀಳವಾದ ಬಾಹುಗಳಿಂದಲೂ, ಉನ್ನತವಾದ ಹೆಗಲುಗಳಿಂದಲೂ, ವಿಸ್ತಾರವಾದ ಎದೆಯಿಂದಲೂ, ಆಳವಾಗಿರುವ ಹೊಟ್ಟೆಯಿಂದಲೂ, ಸುಂದರವಾದ ದಷ್ಟಪುಷ್ಟ ಸರ್ವಾಂಗಗಳಿಂದಲೂ, ಸುಂದರ ಕಣ್ಣುಗಳಿಂದಲೂ ಕೂಡಿರುವ ಉದಯಿಸುತ್ತಿರುವ ಚಂದ್ರನಂತೆ ಕಾಣುತ್ತಿದ್ದ ಶೂರನಾದ ನೀನು ಶಸ್ತ್ರಗಳಿಂದ ಗಾಯಗೊಂಡು ಬಿದ್ದುರುವುದನ್ನು ಭೂತಗಳು ನೋಡುತ್ತಿವೆಯೇ? ಹಿಂದೆ ರತ್ನಗಂಬಳಿಗಳಿಂದ ಅಚ್ಛಾದಿತವಾದ ಶಯನದಲ್ಲಿ ಮಲಗುತ್ತಿದ್ದ ನೀನು ಸುಖೋಚಿತವದ ಎಳೆಯ ವಯಸ್ಸಿನಲ್ಲಿ ಹೇಗೆ ತಾನೇ ಇಂದು ಭೂಮಿಯಲ್ಲಿ ಮಲಗಿರುವೆ? ಮಹಾಭುಜ! ವೀರ! ಹಿಂದೆ ಶ್ರೇಷ್ಠ ಸ್ತ್ರೀಯರಿಂದ ಸೇವೆಮಾಡಿಸಿಕೊಳ್ಳುತ್ತಿದ್ದ ನೀನು ಇಂದು ನರಿಗಳ ಮಧ್ಯೆ ರಣದಲ್ಲಿ ಬಿದ್ದು ಹೇಗೆ ತಾನೆ ಸೇವೆಗಳನ್ನು ಪಡೆಯುತ್ತಿದ್ದೀಯೆ? ಹಿಂದೆ ಸಂತೋಷದಿಂದ ಸೂತ-ಮಾಗದ-ಬಂಧಿಗಳಿಂದ ಸ್ತುತಿಸಲ್ಪಡುತ್ತಿದ್ದ ನೀನು ಇಂದು ಕ್ರವ್ಯಾದಗಣಗಳ ಘೋರ ಕಿರುಚಾಟಗಳ ಉಪಾಸನೆಯಲ್ಲಿದ್ದೀಯೆ! ಪಾಂಡವರನ್ನು, ವೃಷ್ಣಿವೀರರನ್ನು ಮತ್ತು ವೀರ ಪಾಂಚಾಲರನ್ನು ನಾಥರನ್ನಾಗಿ ಪಡೆದಿದ್ದ ನೀನು ಅನಾಥನಂತೆ ಯಾರಿಂದ ಹತನಾದೆ? ಮಗನೇ! ನಿನ್ನನ್ನು ನೋಡಿ ತೃಪ್ತಳಾಗದ ಮಂದಭಾಗ್ಯಳಾದ ನಾನು ಇಂದು ನಿಜವಾಗಿಯೂ ಯಮಲೋಕಕ್ಕೆ ಹೋಗುವವಳಿದ್ದೇನೆ! ವಿಶಾಲಾಕ್ಷನಾದ, ಸುಂದರ ಗುಂಗುರುಕೂದಲುಳ್ಳ, ಇಂಪಾಗಿ ಮಾತನಾಡುವ, ಸುಗಂಧಯುಕ್ತವಾದ, ಗಾಯಗಳಿಲ್ಲದ ನಿನ್ನ ಮುಖವನ್ನು ಪುನಃ ಎಂದು ನೋಡುತ್ತೇನೆ? ಭೀಮಸೇನನ ಬಲಕ್ಕೆ ಧಿಕ್ಕಾರ! ಪಾರ್ಥನ ಬಿಲ್ಲುಗಾರಿಕೆಗೆ ಧಿಕ್ಕಾರ! ವೃಷ್ಣಿವೀರರ ವೀರ್ಯಕ್ಕೆ ಧಿಕ್ಕಾರ! ಪಾಂಚಾಲರ ಬಲಕ್ಕೆ ಧಿಕ್ಕಾರ! ಕೇಕಯರಿಗೂ, ಚೇದಿಗಳಿಗೂ, ಮತ್ಸ್ಯರಿಗೂ, ಸೃಂಜಯರಿಗೂ ಧಿಕ್ಕಾರ! ಅವರು ನಿನ್ನಂತಹ ವೀರನನ್ನು ರಣಕ್ಕೆ ಕಳುಹಿಸಿ ಜೀವಸಹಿತ ಕೆಡವಿಸಿದರು. ಶತ್ರುಗಳಿಂದ ಹತನಾಗಿರುವ ಅಭಿಮನ್ಯುವನ್ನು ಕಾಣದೇ ಶೋಕವ್ಯಾಕುಲಲೋಚನಳಾಗಿ ಇಂದು ಇಡೀ ಭೂಮಿಯೇ ಶೂನ್ಯವಾಗಿದೆಯೆಂದು ಕಾಣುತ್ತಿದ್ದೇನೆ. ವಾಸುದೇವನ ಅಳಿಯ ಮತ್ತು ಗಾಂಡೀವಧನ್ವಿಯ ವೀರ ಮಗನಾದ ನಿನ್ನನ್ನು ವಿರಥನಾಗಿ ಅನ್ಯರಿಂದ ಬೀಳಿಸಲ್ಪಟ್ಟಿರುವುದನ್ನು ಹೇಗೆ ತಾನೇ ನೋಡುತ್ತಿರುವೆ? ಹಾ ವೀರ! ಸ್ವಪ್ನದಲ್ಲಿ ಕಂಡ ಧನದಂತೆ ನೀನು ನನಗೆ ಕಾಣಿಸಿಕೊಂಡು ಮರೆಯಾಗಿಬಿಟ್ಟೆಯಲ್ಲ! ಅಯ್ಯೋ! ನೀರಿನ ಗುಳ್ಳೆಯಂತೆ ಈ ಮನುಷ್ಯ ಜನ್ಮವು ಚಂಚಲ ಮತ್ತು ಅನಿತ್ಯ. ಕರುವನ್ನು ಕಳೆದುಕೊಂಡ ಹಸುವಿನಂತೆ ವಿರಹ ಶೋಕದಲ್ಲಿ ಮುಳುಗಿಹೋಗಿರುವ ಈ ತರುಣೀ ನಿನ್ನ ಭಾರ್ಯೆಯನ್ನು ನಾನು ಹೇಗೆ ಸಂತವಿಸಲಿ? ಪುತ್ರಕ! ನಿನಗೆ ಪುತ್ರಪ್ರಾಪ್ತಿಯಾಗಲಿದ್ದ ಈ ಸಮಯದಲ್ಲಿ ನಿನ್ನ ದರ್ಶನಕ್ಕೆ ಕಾತುರಳಾಗಿರುವ ನನ್ನನ್ನು ನೋಡದೇ ಅಕಾಲದಲ್ಲಿ ಏಕೆ ಹೊರಟುಹೋದೆ? ಕೇಶವನನ್ನೇ ನಾಥನನ್ನಾಗಿ ಪಡೆದ ನೀನೂ ಕೂಡ ಸಂಗ್ರಾಮದಲ್ಲಿ ಅನಾಥನಂತೆ ಹತನಾದೆನೆಂದರೆ ಪ್ರಾಜ್ಞರಿಗೂ ಕೂಡ ಕೃತಾಂತನ ಬಹುವಿಧದ ಗತಿಯು ತಿಳಿದಿರಲು ಅಸಾಧ್ಯ ಎಂದೆನಿಸುತ್ತದೆ. ಯಜ್ಞ ಮಾಡಿದವರಿಗೆ, ದಾನಶೀಲರಿಗೆ, ಬ್ರಾಹ್ಮಣರಿಗೆ, ಕೃತಾತ್ಮರಿಗೆ, ಬ್ರಹ್ಮಚರ್ಯವನ್ನು ಪಾಲಿಸುವವರಿಗೆ, ಪುಣ್ಯತೀರ್ಥಗಳಿಗೆ ಹೋಗಿರುವವರಿಗೆ, ಕೃತಜ್ಞರಿಗೆ, ಉದಾರಿಗಳಿಗೆ, ಗುರುಶುಶ್ರೂಷಣಿಗಳಿಗೆ, ಸಹಸ್ರ ದಕ್ಷಿಣೆಗಳನ್ನಿತ್ತವರಿಗೆ ಯಾವ ಗತಿಯು ದೊರೆಯುತ್ತದೆಯೋ ಆ ಸದ್ಗತಿಯನ್ನು ನೀನು ಪಡೆಯುವವನಾಗು. ಯುದ್ಧದಿಂದ ಹಿಮ್ಮೆಟ್ಟದೇ ಹೋರಾಡಿ ಸಂಗ್ರಾಮದಲ್ಲಿ ಆಯುಧಗಳಿಂದ ಮಡಿಯುವ ಶೂರರಿಗೆ ದೊರೆಯುವ ಗತಿಯು ನಿನಗೂ ದೊರೆಯಲಿ. ಪುತ್ರಕ! ಸಾವಿರ ಗೋವುಗಳನ್ನು ದಾನಮಾಡುವವರಿಗೆ, ಯಜ್ಞಸಾಮಾಗ್ರಿಗಳನ್ನು ದಾನಮಾಡುವವರಿಗೆ, ಸುಸಜ್ಜಿತವಾದ ವಾಸಸ್ಥಾನಗಳನ್ನು ದಾನಮಾಡುವವರಿಗೆ ದೊರೆಯುವ ಶುಭ ಗತಿಯೂ; ಸಂಶಿತವ್ರತ ಮುನಿಗಳು ಬ್ರಹ್ಮಚರ್ಯದ ಮೂಲಕ ಪಡೆಯುವ ಗತಿಯೂ, ಏಕಪತ್ನಿಯನ್ನು ಹೊಂದಿರುವವರಿಗೆ ದೊರೆಯುವ ಗತಿಯೂ ನಿನಗೆ ದೊರೆಯುವಂತಾಗಲಿ! ಪುತ್ರಕ! ಸುಚರಿತ ರಾಜರಿಗೆ ದೊರೆಯುವ ಶಾಶ್ವತ ಗತಿ, ಪವಿತ್ರ ಪುಣ್ಯಗಳಿಂದ ನಾಲ್ಕು ಆಶ್ರಮಗಳಲ್ಲಿ ಸುರಕ್ಷಿತರಾಗಿರುವವರಿಗೆ, ದೀನಾನುಕಂಪಿಗಳಿಗೆ, ಸತತವೂ ಹಂಚಿಕೊಳ್ಳುವವರಿಗೆ, ಬೇರೆಯವರ ವಿಷಯದಲ್ಲಿ ದೋಷವನ್ನು ತೋರಿಸಿಕೊಡದವರಿಗೆ ಯಾವ ಗತಿಯುತ್ತದೆಯೋ ಆ ಗತಿಯನ್ನು ನೀನೂ ಪಡೆ. ಪುತ್ರಕ! ವ್ರತಪರಾಯಣರಿಗೆ, ಧರ್ಮಶೀಲರಿಗೆ, ಗುರುಶುಶ್ರೂಷಣರಿಗೆ, ಅತಿಥಿಗಳಿಗೆ ನಿರಾಶೆಯನ್ನುಂಟುಮಾಡದವರಿಗೆ ಯಾವ ಗತಿಯೋ ಆ ಗತಿಯು ನಿನ್ನದಾಗಲಿ! ಋತುಕಾಲದಲ್ಲಿ ತನ್ನ ಪತ್ನಿಯನ್ನು ಕೂಡುವ ಮನಸ್ವಿಗೆ ಮತ್ತು ಅನ್ಯರ ಪತ್ನಿಯರನ್ನು ಕೂಡದೇ ಇರುವವರಿಗೆ ದೊರೆಯುವ ಗತಿಯು ನಿನ್ನದಾಗಲಿ! ಇರುವ ಎಲ್ಲವನ್ನೂ ಸಮಭಾವದಿಂದ ಕಾಣುವವರಿಗೆ, ಮಾತ್ಸ್ಯರ್ಯವನ್ನು ಕಳೆದುಕೊಂಡವರಿಗೆ, ಯಾರನ್ನೂ ಮಾತಿನಿಂದ ನಿಂದಿಸದವರಿಗೆ, ಕ್ಷಮಾವಂತರಿಗೆ ಯಾವ ಸದ್ಗತಿಯೋ ಅದು ನಿನಗೂ ದೊರೆಯಲಿ. ಮದ್ಯ-ಮಾಂಸಗಳಿಂದ ಮತ್ತು ಹಾಗೆಯೇ ಮದ, ದಂಭ ಮತ್ತು ಸುಳ್ಳುಗಳಿಂದ ದೂರವಿರುವವರಿಗೆ, ಇನ್ನೊಬ್ಬರನ್ನು ನೋಯಿಸುವುದನ್ನು ಬಿಟ್ಟವರಿಗೆ ದೊರೆಯುವ ಗತಿಯು ನಿನಗೂ ದೊರೆಯಲಿ. ಸಕಲ ಶಾಸ್ತ್ರಗಳನ್ನೂ ತಿಳಿದಿರುವ, ಆದರೆ ಲಜ್ಜಾಶೀಲರಾದ, ಜ್ಞಾನದಿಂದ ತೃಪ್ತಿಹೊಂದಿರುವ, ಜಿತೇಂದ್ರಿಯರಾದ ಸಾಧುಗಳು ಯಾವ ಗತಿಗೆ ಹೋಗುತ್ತಾರೋ ಆ ಗತಿಗೆ ನೀನೂ ಹೋಗುವವನಾಗು!”
ಹೀಗೆ ವಿಲಪಿಸುತ್ತಿರುವ ದೀನಳಾದ ಶೋಕಕರ್ಶಿತಳಾದ ಸುಭದ್ರೆಯ ಬಳಿ ವೈರಾಟೀ ಉತ್ತರೆಯ ಸಹಿತ ಪಾಂಚಾಲಿಯು ಬಂದಳು. ಅವರು ಅವನನ್ನು ಬಯಸಿ ರೋದಿಸಿ, ವಿಲಪಿಸಿ ಸುದುಃಖಿತರಾಗಿ, ಹುಚ್ಚುಹಿಡಿದವರಂತಾಗಿ, ಮೂರ್ಛೆತಪ್ಪಿ ಭೂಮಿಯ ಮೇಲೆ ಬಿದ್ದರು. ಆಗ ತುಂಬಾ ದುಃಖಿತನಾದ ಕೃಷ್ಣನು ದುಃಖಿತಳಾದ ಅವಳನ್ನು ಉಪಚರಿಸಿ, ನೀರನ್ನು ಚುಮುಕಿಸಿ ಹಿತವಚನಗಳನ್ನು ಹೇಳಿ ಸಂತವಿಸಿದನು. ಮೂರ್ಛಿತಳಾಗಿದ್ದಂತೆ ಅಳುತ್ತಿದ್ದ, ಮತ್ತು ತರತರನೆ ನಡುಗುತ್ತಿದ್ದ ಭಗಿನಿಗೆ ಪುಂಡರೀಕಾಕ್ಷನು ಈ ಮಾತನ್ನಾಡಿದನು: “ಸುಭದ್ರೇ! ಮಗನ ಕುರಿತು ಶೋಕಿಸಬೇಡ!” ಪಾಂಚಾಲಿ ಮತ್ತು ಉತ್ತರೆಯನ್ನು ಸಂತವಿಸುತ್ತಾ ಹೇಳಿದನು: “ಅಭಿಮನ್ಯು ಕ್ಷತ್ರಿಯಪುಂಗವನು ಸರ್ವಶ್ರೇಷ್ಠ ಸದ್ಗತಿಯನ್ನು ಹೊಂದಿರುವನು. ವರಾನನೇ! ನಮ್ಮ ಕುಲದಲ್ಲಿ ಇನ್ನು ಇತರ ಪುರುಷರು ಯಾರು ಇರುವರೋ ಅವರೆಲ್ಲರೂ ಯಶಸ್ವಿ ಅಭಿಮನ್ಯುವಿನ ಗತಿಯನ್ನೇ ಪಡೆಯುವಂಥವರಾಗಲಿ. ನಿನ್ನ ಮಹಾರಥ ಮಗನು ಏಕಾಂಗಿಯಾಗಿ ಇಂದು ಯಾವ ಪರಾಕ್ರಮವನ್ನು ಮಾಡಿ ತೋರಿಸಿದನೋ ಅದನ್ನು ನಾವೂ ಮತ್ತು ನಮ್ಮ ಸುಹೃದಯರೂ ಕಾರ್ಯರೂಪದಲ್ಲಿ ಮಾಡಿ ತೋರಿಸಬೇಕಾಗಿದೆ.”
ಹೀಗೆ ತಂಗಿಯನ್ನೂ, ದ್ರೌಪದಿ-ಉತ್ತರೆಯರನ್ನೂ ಸಂತವಿಸಿ ಆ ಮಹಾಬಾಹುವು ಪಾರ್ಥನ ಬಳಿಗೆ ಬಂದನು. ಅನಂತರ ನೃಪರನ್ನೂ ಬಂಧುಗಳನ್ನೂ ಕಳುಹಿಸಿಕೊಟ್ಟು ಕೃಷ್ಣನು ಅಂತಃಪುರವನ್ನು ಪ್ರವೇಶಿಸಲು ಅನ್ಯರೂ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
ಶ್ರೀಕೃಷ್ಣ-ದಾರುಕರ ಸಂಭಾಷಣೆ
ಅನಂತರ ಪುಂಡರೀಕಾಕ್ಷನು ಅರ್ಜುನನ ಅಪ್ರತಿಮ ಭವನವನ್ನು ಪ್ರವೇಶಿಸಿ ಆಚಮನ ಮಾಡಿ ಶುಭಲಕ್ಷಣ ವೇದಿಯ ಮೇಲೆ ವೈಡೂರ್ಯಸನ್ನಿಭ ಶುಭ ದರ್ಭೆಗಳನ್ನು ಹಾಸಿದನು. ಅನಂತರ ವಿಧಿವತ್ತಾಗಿ ಮಾಲೆಗಳಿಂದ, ಸುಮಂಗಲ ಅರಳು ಮತ್ತು ಗಂಧಗಳಿಂದ ಆ ದರ್ಭೆಯ ಹಾಸಿಗೆಯನ್ನು ಅಲಂಕರಿಸಿ, ಸುತ್ತಲೂ ಉತ್ತಮ ಆಯುಧಗಳನ್ನಿಟ್ಟನು. ಅನಂತರ ಆಚಮನ ಮಾಡಿದ ಪಾರ್ಥನಿಗೆ ವಿನೀತರಾದ ಪರಿಚಾರಕರು ಅದರ ಬಳಿಯೇ ರಾತ್ರಿ ತ್ರ್ಯಂಬಕನಿಗೆ ಬಲಿಯನ್ನು ಕೊಡುವುದರ ಕುರಿತು ಮಾಡಿ ತೋರಿಸಿಕೊಟ್ಟರು. ಆಗ ಪ್ರೀತಮನಸ್ಕನಾದ ಪಾರ್ಥನು ಗಂಧಮಾಲೆಗಳಿಂದ ಮಾಧವನನ್ನು ಅಲಂಕರಿಸಿ ರಾತ್ರಿಯ ಉಪಹಾರವನ್ನು ಅವನಿಗೆ ನಿವೇದಿಸಿದನು. ನಸುನಗುತ್ತಾ ಗೋವಿಂದನು ಫಲ್ಗುನನಿಗೆ ಉತ್ತರಿಸಿದನು: “ಪಾರ್ಥ! ಮಲಗಿಕೋ! ನಿನಗೆ ಮಂಗಳವಾಗಲಿ. ನಿನ್ನ ಕಲ್ಯಾಣಕ್ಕೆ ನಾನೂ ತೆರಳುತ್ತೇನೆ.”
ಆಗ ಶ್ರೀಮಾನನು ದ್ವಾರದಲ್ಲಿ ಆಯುಧಪಾಣಿ ಅಂಗರಕ್ಷಕರನ್ನು ನಿಲ್ಲಿಸಿ, ದಾರುಕನೊಂದಿಗೆ ತನ್ನ ಶಿಬಿರವನ್ನು ಪ್ರವೇಶಿಸಿದನು. ಬಹಳಷ್ಟು ಚಿಂತಿಸುತ್ತಾ ಅವನು ಶುಭ್ರ ಹಾಸಿಗೆಯ ಮೇಲೆ ಪವಡಿಸಿದನು. ಆ ರಾತ್ರಿ ಪಾಂಡವರ ಶಿಬಿರದಲ್ಲಿ ಯಾರೂ ನಿದ್ರಿಸಲಿಲ್ಲ. ಎಲ್ಲರನ್ನೂ ಜಾಗರಣೆಯೇ ಆವರಿಸಿಬಿಟ್ಟಿತ್ತು. “ಪುತ್ರಶೋಕದಿಂದ ಆವೇಶಗೊಂಡು ಮಹಾತ್ಮ ಗಾಂಡೀವಧನ್ವಿಯು ದುಡುಕಿ ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಿಬಿಟ್ಟನು! ಆದರೆ ವಾಸವಿ ಪರವೀರಹನು ತನ್ನ ಪ್ರತಿಜ್ಞೆಯನ್ನು ಹೇಗೆ ಸಫಲಗೊಳಿಸಬಲ್ಲನು?” ಎಂದು ಅವರು ತುಂಬಾ ಚಿಂತಿಸಿದರು. “ಮಹಾತ್ಮ ಪಾಂಡವನು ಪುತ್ರಶೋಕದಿಂದ ತಪ್ತನಾಗಿ ಮಹಾ ಪ್ರತಿಜ್ಞೆಯನ್ನು ಮಾಡಿ ಅತಿದೊಡ್ಡ ಕಷ್ಟದ ಕೆಲಸವನ್ನೇ ಕೈಗೊಂಡಿದ್ದಾನೆ. ಸೈಂಧವನ ಸಹೋದರರೂ ವಿಕ್ರಾಂತರು. ಮತ್ತು ಧೃತರಾಷ್ಟ್ರನ ಮಗನು ಬಹಳ ಸೇನೆ ಸರ್ವವನ್ನೂ ಅವನ ರಕ್ಷಣೆಗಾಗಿ ನಿಯೋಜಿಸಿದ್ದಾನೆ. ಯುದ್ಧದಲ್ಲಿ ಸೈಂಧವನನ್ನು ಸಂಹರಿಸಿ ಧನಂಜಯನು ಹಿಂದಿರುಗುವಂತಾಗಲಿ. ಶತ್ರುಗಣಗಳನ್ನು ಗೆದ್ದು ಅರ್ಜುನನು ತನ್ನ ಪ್ರತಿಜ್ಞೆಯನ್ನು ಪೂರೈಸಲಿ. ಸಿಂಧುರಾಜನನ್ನು ಸಂಹರಿಸದೇ ಇದ್ದರೆ ಅವನು ಅಗ್ನಿಯನ್ನು ಪ್ರವೇಶಿಸುತ್ತಾನೆ. ಏಕೆಂದರೆ ಧನಂಜಯನು ಯಾವುದೇ ಕಾರಣದಿಂದ ತನ್ನ ಮಾತನ್ನು ಸುಳ್ಳಾಗಿಸುವುದಿಲ್ಲ. ಅರ್ಜುನನು ಮೃತನಾಗಲು ಧರ್ಮಪುತ್ರನು ಹೇಗೆ ರಾಜನಾಗುತ್ತಾನೆ? ಏಕೆಂದರೆ ಅವನು ವಿಜಯವನ್ನು ಸಂಪೂರ್ಣವಾಗಿ ಪಾಂಡವ ಅರ್ಜುನನಿಗೆ ಹೊರೆಸಿಬಿಟ್ಟಿದ್ದಾನೆ. ಒಂದುವೇಳೆ ನಾವು ಏನಾದರೂ ಒಳ್ಳೆಯದನ್ನು ಮಾಡಿದ್ದರೆ, ದಾನಮಾಡಿದ್ದರೆ ಮತ್ತು ಆಹುತಿಗಳನ್ನಿತ್ತಿದ್ದರೆ ಅವುಗಳೆಲ್ಲವುಗಳ ಫಲದಿಂದ ಸವ್ಯಸಾಚಿಯು ಅರಿಗಳನ್ನು ಜಯಿಸುವಂಥವನಾಗಲಿ!”
ಹೀಗೆ ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ, ಅವನಿಗೆ ಜಯವನ್ನು ಆಶಿಸುತ್ತಾ ಮಹಾ ಕಷ್ಟದಿಂದ ಅವರು ರಾತ್ರಿಯನ್ನು ಕಳೆದರು. ಆ ರಾತ್ರಿಯ ಮಧ್ಯೆ ಎಚ್ಚೆತ್ತಿದ್ದ ಜನಾರ್ದನನು ಪಾರ್ಥನ ಪ್ರತಿಜ್ಞೆಯನ್ನು ಸ್ಮರಿಸಿಕೊಂಡು ದಾರುಕನಿಗೆ ಹೇಳಿದನು: “ದಾರುಕ! ಬಂಧುವು ಹತನಾದುದರಿಂದ ದುಃಖಿತನಾಗಿ ಅರ್ಜುನನು ನಾಳೆ ಜಯದ್ರಥನನ್ನು ಸಂಹರಿಸುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿಬಿಟ್ಟಿದ್ದಾನೆ. ಅತ್ತ ದುರ್ಯೋಧನನು ಇದನ್ನು ಕೇಳಿ ಪಾರ್ಥನು ಜಯದ್ರಥನನ್ನು ಸಂಹರಿಸಬಾರದ ಹಾಗೆ ಮಂತ್ರಾಲೋಚನೆಯನ್ನು ನಡೆಸಿರುವನು. ಅವನ ಎಲ್ಲ ಅಕ್ಷೌಹಿಣಿಗಳೂ, ಸರ್ವಾಸ್ತ್ರವಿಧಿಪಾರಂಗತ ದ್ರೋಣನೂ ಮಗನೊಂದಿಗೆ ಜಯದ್ರಥನನ್ನು ರಕ್ಷಿಸಲಿದ್ದಾರೆ. ಏಕಮಾತ್ರ ವೀರನಾದ, ದೈತ್ಯದಾನವರ ದರ್ಪವನ್ನಡಗಿಸಿದ ಸಹಸ್ರಾಕ್ಷನೂ ಕೂಡ ದ್ರೋಣನಿಂದ ರಕ್ಷಿತನಾದವನನ್ನು ಸಂಹರಿಸಲು ಉತ್ಸಾಹಿತನಾಗುವುದಿಲ್ಲ. ನಾಳೆ ನಾನು ಸೂರ್ಯನು ಅಸ್ತನಾಗುವ ಮೊದಲೇ ಅರ್ಜುನನು ಜಯದ್ರಥನನ್ನು ಕೊಲ್ಲುವ ಹಾಗೆ ಮಾಡುತ್ತೇನೆ. ಪತ್ನಿಯರಾಗಲೀ ಮಿತ್ರರಾಗಲೀ ಜ್ಞಾತಿ-ಬಾಂಧವರಾಗಲೀ ಕುಂತೀಪುತ್ರ ಅರ್ಜುನನಿಗಿಂತ ಹೆಚ್ಚು ಪ್ರಿಯರು ನನಗೆ ಬೇರೆ ಯಾರೂ ಇಲ್ಲ. ದಾರುಕ! ಅರ್ಜುನನಿಲ್ಲದ ಈ ಲೋಕವನ್ನು ಮುಹೂರ್ತಕಾಲವು ನೋಡಲು ನಾನು ಶಕ್ಯನಿಲ್ಲ. ಆದರೆ ಹಾಗೆ ಆಗುವುದಿಲ್ಲ. ಅರ್ಜುನನಿಗಾಗಿ ನಾನು ನಾಳೆ ರಥ-ಆನೆಗಳೊಂದಿಗೆ ಧ್ವಜಿಗಳಾದ ಶತ್ರುಗಳನ್ನು ಕರ್ಣ-ಸುಯೋಧನರೊಡನೆ, ಸಂಹರಿಸುತ್ತೇನೆ. ನಾಳಿನ ಮಹಾಯುದ್ಧದಲ್ಲಿ ಧನಂಜಯನಿಗಾಗಿ ನಾನು ತೋರಿಸುವ ಪರಾಕ್ರಮವನ್ನೂ ವೀರ್ಯವನ್ನೂ ಮೂರು ಲೋಕಗಳೂ ನೋಡಲಿ! ನಾಳೆ ಸಹಸ್ರಾರು ನರೇಂದ್ರರೂ, ನೂರಾರು ರಾಜಪುತ್ರರೂ ಗಜ-ಅಶ್ವ-ರಥ-ಪದಾತಿ ಸೈನ್ಯಗಳೊಂದಿಗೆ ಓಡಿ ಹೋಗುವಂತೆ ಮಾಡುತ್ತೇನೆ. ನಾಳೆ ನಾನು ಸಮರದಲ್ಲಿ ಪಾಂಡವನಿಗಾಗಿ ಕ್ರುದ್ಧನಾಗಿ ಚಕ್ರದಿಂದ ನೃಪವಾಹಿನಿಯನ್ನು ಕತ್ತರಿಸಿ ಬೀಳಿಸುವುದನ್ನು ನೀನು ನೋಡುವೆ! ನಾಳೆ ದೇವ-ಗಂಧರ್ವ-ಪಿಶಾಚ-ಉರಗ-ರಾಕ್ಷಸ ಲೋಕಗಳೆಲ್ಲವೂ ನಾನು ಸವ್ಯಸಾಚಿಯ ಸುಹೃದನೆನ್ನುವುದನ್ನು ಅರ್ಥಮಾಡಿಕೊಳ್ಳುತ್ತವೆ. ಅವನನ್ನು ಯಾರು ದ್ವೇಷಿಸುತ್ತಾರೋ ಅವರು ನನ್ನನ್ನೂ ದ್ವೇಷಿಸುತ್ತಾರೆ. ಅವನನ್ನು ಯಾರು ಅನುಸರಿಸುತ್ತಾರೋ ಅವರು ನನ್ನನ್ನೂ ಅನುಸರಿಸಿರುತ್ತಾರೆ. ಅರ್ಜುನನ ನನ್ನ ಶರೀರದ ಅರ್ಧಭಾಗವೆಂದೇ ನೀನು ಯೋಚಿಸಿ ತಿಳಿದುಕೋ.
“ನೀನು ಈ ರಾತ್ರಿ ಕಳೆದು ಬೆಳಗಾಗುವುದರೊಳಗೆ ನನ್ನ ಉತ್ತಮ ರಥವನ್ನು ಯಥಾಶಾಸ್ತ್ರವಾಗಿ ವ್ರತಸಂಯತನಾಗಿ ಸಿದ್ಧಗೊಳಿಸು. ಸೂತ! ಕೌಮೋದಕೀ ಗದೆಯನ್ನೂ, ದಿವ್ಯ ಶಕ್ತಿ, ಚಕ್ರ, ಧನುಸ್ಸು, ಶರಗಳನ್ನೂ ಸರ್ವ ಉಪಕರಣಗಳನ್ನು ರಥದಲ್ಲಿ ಏರಿಸಿ, ರಥದಲ್ಲಿರುವ ನನ್ನ ಧ್ವಜದಲ್ಲಿ ಸಮರದಲ್ಲಿ ರಥಶೋಭಿನಿಯಾದ ವೀರ ವೈನತೇಯನಿಗೆ ಸ್ಥಳವನ್ನು ಕಲ್ಪಿಸು. ಚತ್ರವನ್ನೂ, ಬಂಗಾರದ ಜಾಲಗಳಿಂದ ಕೂಡಿದ ಸೂರ್ಯನ ಜ್ವಲನದಂತಿರುವ ವಿಶ್ವಕರ್ಮನಿಂದ ನಿರ್ಮಿತ ಭೂಷಣಗಳಿಂದ ಅಲಂಕೃತವಾದ ಬಲಾಹಕ, ಮೇಘಪುಷ್ಪ, ಸೈನ್ಯ ಮತ್ತು ಸುಗ್ರೀವಗಳೆಂಬ ದಿವ್ಯ ಶ್ರೇಷ್ಠ ಅಶ್ವಗಳನ್ನು ಕಟ್ಟಿ ಕವಚವನ್ನು ಧರಿಸಿ ನಿಂತಿರು. ಋಷಭಸ್ವರದಿಂದಲೇ ಊದಲ್ಪಡುವ ಪಾಂಚಜನ್ಯದ ನಿರ್ಘೋಷವನ್ನೂ ಭೈರವ ನಾದವನ್ನೂ ಕೇಳಿ ನೀನು ವೇಗದಿಂದ ನನ್ನ ಬಳಿ ಬರಬೇಕು. ತಂದೆಯ ತಂಗಿಯ ಮಗನ ತಮ್ಮನಾದ ಅವನ ಸರ್ವದುಃಖಗಳನ್ನೂ ಒಂದೇ ದಿನದಲ್ಲಿ ಕೋಪಗೊಂಡು ಕಳೆದುಬಿಡುತ್ತೇನೆ. ಆಹವದಲ್ಲಿ ಧಾರ್ತರಾಷ್ಟ್ರರು ನೋಡುತ್ತಿರುವಂತೆಯೇ ಬೀಭತ್ಸುವು ಜಯದ್ರಥನನ್ನು ಕೊಲ್ಲುವಂತೆ ಸರ್ವ ಉಪಾಯಗಳಿಂದಲೂ ಪ್ರಯತ್ನಿಸುತ್ತೇನೆ. ಸಾರಥೇ! ಬೀಭತ್ಸುವು ಯಾರ್ಯಾರನ್ನು ವಧಿಸಲು ಪ್ರಯತ್ನಿಸುತ್ತಾನೋ ಅಲ್ಲಿ ಅವನಿಗೆ ನಿಶ್ಚಯವಾದ ಜಯವುಂಟಾಗಬೇಕೆಂದು ಆಶಿಸುತ್ತೇನೆ.”
ದಾರುಕನು ಹೇಳಿದನು: “ಪುರುಷವ್ಯಾಘ್ರ! ನೀನು ಯಾರ ಸಾರಥ್ಯವನ್ನು ವಹಿಸಿಕೊಂಡಿರುವೆಯೋ ಅವನ ಜಯವು ನಿಶ್ಚಿತವಾದುದು. ಎಲ್ಲಿಯ ಪರಾಜಯ? ನೀನು ನನಗೆ ಆಜ್ಞೆಯಿತ್ತಿರುವಂತೆಯೇ ವಿಜಯನ ಜಯಕ್ಕಾಗಿ ಈ ರಾತ್ರಿ ಬೆಳಗಾಗುವುದರೊಳಗೆ ಎಲ್ಲವನ್ನೂ ಮಾಡುತ್ತೇನೆ.”
ಅರ್ಜುನನಿಗೆ ಪುನಃ ಪಾಶುಪತಾಸ್ತ್ರ ಪ್ರಾಪ್ತಿ
ಅಚಿಂತ್ಯವಿಕ್ರಮಿ ಕುಂತೀಪುತ್ರ ಧನಂಜಯನು ತನ್ನ ಪ್ರತಿಜ್ಞೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಆ ಮಂತ್ರವನ್ನೇ ಸ್ಮರಿಸುತ್ತಾ ನಿದ್ದೆಹೋದನು. ಸ್ವಪ್ನದಲ್ಲಿ ಶೋಕಸಂತಪ್ತನಾಗಿದ್ದ ಕಪಿವರಧ್ವಜನ ಬಳಿ ಮಹಾತೇಜಸ್ವಿ ಗರುಡಧ್ವಜನು ಆಲೋಚಿಸುತ್ತಾ ಬಂದನು. ಕೃಷ್ಣನು ಬಂದಾಗ ಭಕ್ತಿಯಿಂದ ಮತ್ತು ಪ್ರೇಮದಿಂದ ಸರ್ವದಾ ಸರ್ವಾವಸ್ಥೆಯಲ್ಲಿ ಎದ್ದು ನಿಲ್ಲುತ್ತಿದ್ದ ಧರ್ಮಾತ್ಮಾ ಧನಂಜಯನು ಆ ಕ್ರಮಕ್ಕೆ ಸ್ವಪ್ನಾವಸ್ಥೆಯಲ್ಲಿಯೂ ಲೋಪವನ್ನು ತರಲಿಲ್ಲ. ಬೀಭತ್ಸುವು ಗೋವಿಂದನನ್ನು ವಿನೀತನಾಗಿ ಆದರದಿಂದ ಎದ್ದುನಿಂತು ಬರಮಾಡಿಕೊಂಡು ಆಸನವನ್ನೂ ಸ್ವಯಂ ಬುದ್ಧಿಯನ್ನೂ ಅವನಿಗಿತ್ತನು. ಆಗ ಕುಳಿತುಕೊಂಡ ಮಹಾತೇಜಸ್ವಿ ಕೃಷ್ಣನು ಪಾರ್ಥನ ನಿಶ್ಚಯವನ್ನು ತಿಳಿದು ನಿಂತಿರುವ ಕುಂತೀಪುತ್ರನಿಗೆ ಈ ಮಾತನ್ನಾಡಿದನು: “ಪಾರ್ಥ! ಮನಸ್ಸನ್ನು ವಿಷಾದದಲ್ಲಿ ತೊಡಗಿಸಬೇಡ. ಕಾಲವೆಂಬುದು ಜಯಿಸಲಸಾಧ್ಯವಾದುದು. ಕಾಲವು ಇರುವ ಎಲ್ಲವನ್ನೂ ವಿಧಾತನ ವಿಧಾನದಲ್ಲಿ ತೊಡಗಿಸುತ್ತದೆ. ಯಾವ ಕಾರಣದಿಂದಾಗಿ ನೀನು ವಿಷಾದಪಡುತ್ತಿರುವೆಯೆನ್ನುವುದನ್ನು ಹೇಳು. ತಿಳಿದವರು ಶೋಕಿಸುವುದಿಲ್ಲ. ಶೋಕವು ಮಾಡಬೇಕಾದ ಕಾರ್ಯವನ್ನು ನಾಶಗೊಳಿಸುವಂಥಹುದು. ಶೋಕವು ಶತ್ರುಗಳಿಗೆ ಆನಂದವನ್ನೀಯುತ್ತದೆ. ಬಾಂಧವರನ್ನು ಸಂಕಟಕ್ಕೀಡುಮಾಡುತ್ತದೆ. ಮನುಷ್ಯನನ್ನು ಕ್ಷೀಣಗೊಳಿಸುತ್ತದೆ. ಆದುದರಿಂದ ನೀನು ಶೋಕಿಸಬಾರದು.”
ವಾಸುದೇವನು ಹೀಗೆ ಹೇಳಲು, ಅಪರಾಜಿತ ಬೀಭತ್ಸುವು ಅರ್ಥವತ್ತಾದ ಈ ಮಾತುಗಳನ್ನಾಡಿದನು. “ಕೇಶವ! ನಾಳೆ ನಾನು ಪುತ್ರಘ್ನನಾದ ದುರಾತ್ಮ ಜಯದ್ರಥನನ್ನು ಕೊಲ್ಲುತ್ತೇನೆಂದು ಅವನ ವಧೆಯ ಮಹಾ ಪ್ರತಿಜ್ಞೆಯನ್ನು ಮಾಡಿದ್ದೇನೆ. ಆದರೆ ನನ್ನ ಪ್ರತಿಜ್ಞೆಗೆ ವಿಘ್ನವನ್ನುಂಟುಮಾಡಲೋಸುಗ ಧಾರ್ತರಾಷ್ಟ್ರರು ಎಲ್ಲ ಮಹಾರಥರ ಹಿಂದೆ ಸೈಂಧವನನ್ನು ನಿಲ್ಲಿಸಿಕೊಂಡು ರಕ್ಷಣೆಯ ಕಾರ್ಯವನ್ನು ಮಾಡುತ್ತಾರೆ. ಕೃಷ್ಣ! ಜಯಿಸಲಸಾಧ್ಯವಾದ ಆ ಹನ್ನೊಂದು ಅಕ್ಷೌಹಿಣಿಗಳಿಂದಾಗಿ ಪ್ರತಿಜ್ಞೆಯ ಭಂಗವಾದರೆ ನನ್ನಂಥವನು ಹೇಗೆ ತಾನೇ ಜೀವಿಸಿರಬಲ್ಲನು? ದುಃಖಕ್ಕೆ ಕಾರಣವಾದ ನನ್ನ ಈ ಪ್ರತಿಜ್ಞೆಯು ಭಂಗವಾಗಲಿಕ್ಕೇ ಇದೆಯೆಂದು ಅನ್ನಿಸುತ್ತಿದೆ. ಸೂರ್ಯನೂ ಕೂಡ ಈಗ ಬೇಗ ಅಸ್ತನಾಗುತ್ತಾನೆ. ಆದುದರಿಂದ ನಾನು ಹೇಳುತ್ತಿದ್ದೇನೆ.”
ಪಾರ್ಥನ ಶೋಕಪರಿಸ್ಥಿತಿಯನ್ನು ಕೇಳಿ ದ್ವಿಜಕೇತನ ಮಹಾತೇಜಸ್ವಿ, ಪುಷ್ಕರೇಕ್ಷಣ ಕೃಷ್ಣನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ಪಾಂಡುಪುತ್ರನ ಹಿತಾರ್ಥವಾಗಿ ಮತ್ತು ಸೈಂಧವನ ವಧೆಯನ್ನು ಬಯಸಿ ಈ ಮಾತನ್ನಾಡಿದನು: “ಪಾರ್ಥ! ಪಾಶುಪತವೆಂಬ ಹೆಸರಿನ ಸನಾತನ ಪರಮಾಸ್ತ್ರವಿದೆ. ಅದರಿಂದಲೇ ದೇವ ಮಹೇಶ್ವರನು ಯುದ್ಧದಲ್ಲಿ ಸರ್ವ ದೈತ್ಯರನ್ನೂ ಸಂಹರಿಸಿದ್ದನು. ಅದು ಇಂದು ನಿನಗೆ ತಿಳಿದಿರುವುದೇ ಆದರೆ ನಾಳೆ ನೀನು ಜಯದ್ರಥನನ್ನು ಕೊಲ್ಲುವೆ. ಅದನ್ನು ತಿಳಿದುಕೊಳ್ಳಲು ನೀನು ಮನಸಾರೆ ವೃಷಭಧ್ವಜನನ್ನು ಪ್ರಾರ್ಥಿಸು. ಧನಂಜಯ! ಆ ದೇವನನ್ನು ಮನಸಾ ಧ್ಯಾನಿಸಿ ಮೌನಿಯಾಗು. ಅವನ ಪ್ರಸಾದದಿಂದ ಭಕ್ತನಾದ ನೀನು ಆ ಮಹಾಸ್ತ್ರವನ್ನು ಪಡೆದುಕೊಳ್ಳುವೆ.”
ಕೃಷ್ಣನ ಮಾತನ್ನು ಕೇಳಿ ಧನಂಜಯನು ಆಚಮನ ಮಾಡಿ ನೆಲದ ಮೇಲೆ ಕುಳಿತು ಏಕಾಗ್ರಚಿತ್ತನಾಗಿ ಮನಸಾರೆ ಭವನನ್ನು ಮೊರೆಹೊಕ್ಕನು. ಆಗ ಶುಭಲಕ್ಷಣಸೂಚಕವಾದ ಬ್ರಾಹ್ಮೀ ಮುಹೂರ್ತದಲ್ಲಿ ಅರ್ಜುನನು ಕೇಶವನೊಂದಿಗೆ ತಾನು ಗಗನದಲ್ಲಿ ಹೋಗುತ್ತಿರುವುದನ್ನು ಕಂಡನು. ನಕ್ಷತ್ರಗಳು ಹರಡಿ ತುಂಬಿಹೋಗಿದ್ದ, ಸಿದ್ಧಚಾರಣಸೇವಿತವಾದ ಆಕಾಶವನ್ನು ಪಾರ್ಥನು ಕೇಶವನೊಂದಿಗೆ ವಾಯುವೇಗಗತಿಯಲ್ಲಿ ದಾಟಿದನು. ಕೇಶವನಿಂದ ಎಡಭುಜದಲ್ಲಿ ಹಿಡಿಯಲ್ಪಟ್ಟು ಅವನು ಅನೇಕ ಭಾವಗಳುಳ್ಳ, ಅದ್ಭುತವಾಗಿ ಕಾಣುತ್ತಿದ್ದವುಗಳನ್ನು ನೋಡಿದನು. ಆ ಧರ್ಮಾತ್ಮನು ಉತ್ತರ ದಿಕ್ಕಿನಲ್ಲಿ ಶ್ವೇತಪರ್ವತವನ್ನು ಮತ್ತು ಕುಬೇರನ ವಿಹಾರವಾದ ಪದ್ಮಭೂಷಿತ ಸರೋವರವನ್ನು ನೋಡಿದನು. ಅನಂತರ ಅವನು ಬಹಳ ನೀರಿರುವ ನದಿಶ್ರೇಷ್ಠೆ ಗಂಗೆಯನ್ನು ನೋಡಿ, ಮುಂದೆ ಸದಾ ಫಲ-ಪುಷ್ಪಗಳಿಂದ ತುಂಬಿರುವ ವೃಕ್ಷಗಳಿಂದ ಕೂಡಿದ, ಸ್ಪಟಿಕ ಶಿಲೆಗಳಿಂದ ಕೂಡಿದ, ಸಿಂಹ-ವ್ಯಾಘ್ರಗಳಿಂದ ತುಂಬಿದ, ನಾನಾ ರೀತಿಯ ಮೃಗಗಣಸಂಕುಲಗಳಿಂದ ಕೂಡಿದ, ರಮ್ಯವಾದ ಪುಣ್ಯಾಶ್ರಮಗಳಿಂದ ಕೂಡಿದ, ಮನೋಜ್ಞ ಪಕ್ಷಿಗಳಿರುವ, ಕಿನ್ನರರ ಗಾಯನಗಳ ಗುಂಗಿನಲ್ಲಿರುವ, ಔಷಧಗಳ ಹೊಳಪಿನಿಂದ ಬಂಗಾರದಂತೆ ಬೆಳಗುತ್ತಿದ್ದ ಶಿಖರವುಳ್ಳ, ಪುಷ್ಪಗಳಿಂದ ತುಂಬಿ ಬಗ್ಗಿದ ಮಂದಾರವೃಕ್ಷಗಳಿಂದ ಶೋಭಿಸುವ ಮಂದರ ಪರ್ವತ ಪ್ರದೇಶವನ್ನೂ ನೋಡಿದನು. ಕಾಡಿಗೆಯ ರಾಶಿಯಂತೆ ತೋರುತ್ತಿದ್ದ ಕಾಲಪರ್ವತವನ್ನು ತಲುಪಿ ಅಲ್ಲಿಂದ ಪುಣ್ಯ ಮಣಿಮಂತ ಹಿಮವತ್ ಪರ್ವತದ ಬುಡಕ್ಕೆ ಬಂದನು. ಬ್ರಹ್ಮತುಂಗವನ್ನೂ, ಅನ್ಯ ನದಿಗಳನ್ನೂ, ಜನಪದಗಳನ್ನೂ, ಸುಶೃಂಗ-ಶತಶೃಂಗಗಳನ್ನೂ, ಶರ್ಯಾತಿವನವನ್ನೂ, ಅಥರ್ವಣನ ಸ್ಥಾನವಾದ ಪುಣ್ಯಾಶ್ರಮ ಶಿರಸ್ಥಾನವನ್ನೂ, ವೃಷದಂತವನ್ನೂ, ಶೈಲೇಂದ್ರವನ್ನೂ, ಅಪ್ಸರೆಯರಿಂದ ತುಂಬಿರುವ ಕಿನ್ನರರಿಂದ ಶೋಭಿಸುವ ಮಹಾಮಂದರವನ್ನೂ, ಅದರ ಶೈಲಗಳನ್ನು ಪಾರ್ಥನು ಕೇಶವನೊಂದಿಗೆ ನೋಡುತ್ತಾ ಮುಂದುವರೆದನು. ಶುಭ ಪ್ರಸ್ರವಣಗಳಿಂದ ಹರಡಿದ್ದ, ಹೇಮಧಾತುಗಳಿಂದ ವಿಭೂಷಿತವಾಗಿದ್ದ, ಚಂದ್ರನ ರಶ್ಮಿ ಪ್ರಕಾಶದಲ್ಲಿ ಮಿಂದಿದ್ದ, ಪುರಮಾಲಿನೀ ಪೃಥ್ವಿಯನ್ನು, ಅದ್ಭುತ ಆಕಾರದ ಸಮುದ್ರವನ್ನೂ ನೋಡಿದನು. ಹೀಗೆ ವಿಷ್ಣುಪದದಲ್ಲಿ ಬಿಲ್ಲಿನಿಂದ ಪ್ರಯೋಗಿಸಲ್ಪಟ್ಟ ಬಾಣದಂತೆ ಕೃಷ್ಣನೊಡಗೂಡಿ ಹೋಗುತ್ತಾ ಪೃಥಿವ್ಯಾಕಾಶಗಳನ್ನು ಒಮ್ಮೆಗೇ ನೋಡುತ್ತಾ ವಿಸ್ಮಿತನಾದನು. ಆಗ ಪಾರ್ಥನು ಗ್ರಹಗಳು, ನಕ್ಷತ್ರಗಳು, ಚಂದ್ರ, ಸೂರ್ಯ ಮತ್ತು ಅಗ್ನಿಯ ಸಮ ತೇಜಸ್ಸಿನಿಂದ ಉರಿಯುತ್ತಿರುವ ಪರ್ವತವನ್ನು ಕಂಡನು. ಆ ಶೈಲವನ್ನು ಸಮೀಪಿಸಿ ಶೈಲದ ಶಿಖರದಲ್ಲಿ ಕುಳಿತಿದ್ದ ತಪೋನಿತ್ಯ, ತನ್ನದೇ ತೇಜಸ್ಸಿನಿಂದ ಉರಿಯುತ್ತಿರುವ ಸಹಸ್ರ ಸೂರ್ಯರಂತಿದ್ದ, ಶೂಲದಾರಿ, ಜಟಿಲಧಾರಿ, ಗೌರವರ್ಣವುಳ್ಳ, ವಲ್ಕಲ-ಜಿನಗಳನ್ನು ಧರಿಸಿದ್ದ, ಸಹಸ್ರ ಕಣ್ಣುಗಳಿದ್ದ, ವಿಚಿತ್ರಾಂಗ, ಮಾಹೌಜಸ, ಪಾರ್ವತಿಯ ಸಹಿತ, ಹೊಳೆಯುತ್ತಿರುವ ಭೂತಸಂಘಗಳೊಡನೆ, ಗೀತ-ವಾದ್ಯ-ಹಾಡು-ಚಪ್ಪಾಳೆ-ಕುಣಿತಗಳ ಭುಜಗಳನ್ನು ತಟ್ಟಿ ಗಟ್ಟಿಯಾಗಿ ಕೂಗುತ್ತಿದ್ದವರ ಮಧ್ಯವಿದ್ದ, ಪುಣ್ಯಗಂಧಗಳಿಂದ ಸೇವಿಸಲ್ಪಡುತ್ತಿದ್ದ, ಮುನಿಗಳು ಮತ್ತು ಬ್ರಹ್ಮವಾದಿಗಳಿಂದ ದಿವ್ಯ ಸ್ತವಗಳಿಂದ ಸ್ತುತಿಸಲ್ಪಡುತ್ತಿದ್ದ, ಸರ್ವಭೂತಗಳ ಗೋಪ್ತಾರ, ಧನುರ್ಧರ ಮಹಾತ್ಮ ವೃಷಭಧ್ವಜನನ್ನು ಕಂಡನು.
ವಾಸುದೇವನಾದರೋ ಸನಾತನನಾದ, ಬ್ರಹ್ಮಸ್ವರೂಪನನ್ನು ನೋಡಿದೊಡನೆಯೇ ಪಾರ್ಥನೊಂದಿಗೆ ಸಾಷ್ಟಾಂಗ ನಮಸ್ಕರಿಸಿದನು. ಲೋಕಕ್ಕೇ ಆದಿಕಾರಣನಾದ, ವಿಶ್ವವನ್ನೇ ರಚಿಸಿದ, ಅಜ, ಈಶಾನ, ಅವ್ಯಯ, ಮನಸ್ಸಿನ ಪರಮ ಯೋನಿ, ಆಕಾಶ-ವಾಯು-ನಕ್ಷತ್ರಗಳ ನಿಧಿ, ಜಲಧಾರೆ-ಭೂಮಿ-ಪ್ರಕೃತಿ-ಮತ್ತು ಅದಕ್ಕೂ ಆಚೆಯವುಗಳ ಸ್ರಷ್ಟಾರ, ದೇವ-ದಾನವ-ಯಕ್ಷರ ಮತ್ತು ಮಾನವರ ಸಾಧನನಾದ, ಯೋಗಿಗಳ ಪರಮ ಬ್ರಹ್ಮನಾದ, ಬ್ರಹ್ಮವಿದರ ವ್ಯಕ್ತ ನಿಧಿಯಾದ, ಚರಾಚರಗಳ ಸ್ರಷ್ಟಾರ ಮತ್ತು ಪ್ರತಿಹರ್ತನೂ ಆದ, ಕಾಲಕೋಪಿ, ಶಕ್ರ ಮತ್ತು ಸೂರ್ಯರ ಗುಣಗಳಿಗೆ ಕಾರಣೀಭೂತನಾದ ಮಹಾತ್ಮನನ್ನು ಕೃಷ್ಣನು ವಾಕ್-ಮನೋ-ಬುದ್ಧಿ-ಕರ್ಮಗಳಿಂದ ವಂದಿಸಿದನು. ಸೂಕ್ಷ್ಮವಾದ ಆದ್ಯಾತ್ಮಪದವನ್ನು ಪಡೆಯಲಿಚ್ಚಿಸುವ ವಿದ್ವಾಂಸರು ಯಾರನ್ನು ಶರಣುಹೊಗುತ್ತಾರೋ ಆ ಅಜ, ಕಾರಣ ಸ್ವರೂಪ, ಶರಣ, ಭವ ದೇವನನ್ನು, ಅವನೊಬ್ಬನೇ ಭೂತ-ಭವ್ಯಾದಿಗಳಿಗೆ ಮತ್ತು ಸರ್ವಭುತಗಳ ಉದ್ಭವಕ್ಕೆ ಕಾರಣನೆಂದು ತಿಳಿದು ಅರ್ಜುನನೂ ಕೂಡ ಬಾರಿಬಾರಿ ವಂದಿಸಿದನು. ಆಗ ಶರ್ವನು ನಗುತ್ತಾ ಬಂದಿರುವ ಇಬ್ಬರಿಗೂ ಹೇಳಿದನು: “ನರಶ್ರೇಷ್ಠರೇ! ಸ್ವಾಗತ! ಮೇಲೇಳಿ! ಆಯಾಸವನ್ನು ನೀಗಿಸಿಕೊಳ್ಳಿ. ವೀರರೇ! ಏನನ್ನು ಮನಸ್ಸಿನಲ್ಲಿ ಬಯಸಿ ಬಂದಿರುವಿರೋ ಅದನ್ನು ಬೇಗನೇ ಹೇಳಿ. ಯಾವ ಕಾರ್ಯಕ್ಕಾಗಿ ನೀವು ಇಲ್ಲಿಗೆ ಬಂದಿದ್ದೀರೋ ಅದನ್ನು ನಿಮಗೆ ನಾನು ಮಾಡಿಕೊಡುತ್ತೇನೆ. ನಿಮಗೆ ಪ್ರಿಯವಾದ ಶ್ರೇಯಸ್ಕರವಾದ ಎಲ್ಲವನ್ನೂ ನೀಡುತ್ತೇನೆ.”
ಅವನ ಆ ಮಾತನ್ನು ಕೇಳಿ ಮೇಲೆದ್ದು ಅಂಜಲೀಬದ್ಧರಾಗಿ ಮಹಾಮತಿಗಳಾದ ವಾಸುದೇವ-ಅರ್ಜುನರು ಶರ್ವನನ್ನು ಸ್ತುತಿಸತೊಡಗಿದರು: “ಭವ, ಶರ್ವ, ರುದ್ರ, ವರದ, ಪಶುಪತೇ, ನಿತ್ಯ, ಉಗ್ರ, ಕಪರ್ದಿನೇ! ನಿನಗೆ ನಮಸ್ಕಾರ! ಮಹಾದೇವ, ಭೀಮ, ತ್ರ್ಯಂಬಕ, ಶಂಭು, ಈಶಾನ, ಭಗಘ್ನ, ಅಂಧಕಘಾತಿನೇ! ನಿನಗೆ ನಮಸ್ಕಾರ! ಕುಮಾರಗುರುವೇ! ನಿತ್ಯನೇ! ನೀಲಗ್ರೀವನೇ! ವೇಧಸನೇ! ವಿಲೋಹಿತಾಯನೇ! ಧೂಮ್ರನೇ! ವ್ಯಾಧಿಗಳನ್ನು ಸೋಲಿಸುವವನೇ! ನಿತ್ಯನೇ! ನೀಲಶಿಖಂಡಿಯೇ! ಶೂಲಿನಿಯೇ! ದಿವ್ಯದೃಷ್ಠಿಯುಳ್ಳವನೇ! ಹಂತ್ರನೇ! ಗೋಪ್ತ್ರನೇ! ತ್ರಿನೇತ್ರನೇ! ವ್ಯಾಧನೇ! ವಸುರೇತಸ! ಅಚಿಂತ್ಯ! ಅಂಬಿಕಾಭರ್ತ್ರೇ! ಸರ್ವದೇವಸ್ತುತ! ವೃಷಧ್ವಜ! ಪಿಂಗ! ಜಟಿನೇ! ಬ್ರಹ್ಮಚಾರಿಣೇ! ನೀರಿನಲ್ಲಿ ತಪಸ್ಸು ಮಾಡುವವನೇ! ಬ್ರಹ್ಮಣ್ಯನೇ! ಅಜಿತನೇ! ವಿಶ್ವಾತ್ಮನೇ! ವಿಶ್ವಸೃಜನೇ! ವಿಶ್ವಮಾವೃತನೇ! ತಿಷ್ಠನೇ! ಸೇವ್ಯನೇ! ಭೂತಗಳ ಪ್ರಭುವೇ! ಬ್ರಹ್ಮವಕ್ತ್ರನೇ! ಶರ್ವನೇ! ಶಂಕರನೇ! ಶಿವನೇ! ನಿನಗೆ ನಮೋ ನಮಸ್ತೇ! ವಾಚಸ್ಪತೆಯೇ ನಿನಗೆ ನಮಸ್ಕಾರ! ಪಜಾಪತಿಯೇ ನಮಸ್ಕಾರ! ವಿಶ್ವಪತಿಯೇ ನಮಸ್ಕಾರ! ಮಹಾಪತಿಯೇ ನಮಸ್ಕಾರ! ಸಹಸ್ರಶಿರಸೇ! ಸಹಸ್ರಭುಜನೇ! ಮನ್ಯವೇ! ನಮಸ್ಕಾರ! ಸಹಸ್ರನೇತ್ರಪಾದನೇ! ಅಸಂಖ್ಯೇಯಕರ್ಮಣೇ! ನಮಸ್ಕಾರ! ಹಿರಣ್ಯವರ್ಣನೇ! ಹಿರಣ್ಯಕವಚನೇ! ಭಕ್ತಾನುಕಂಪಿನೇ! ನಿತ್ಯನೇ! ನಿನಗೆ ನಮಸ್ಕಾರ! ನಮ್ಮಿಬ್ಬರಿಗೆ ಸಿದ್ಧಿಯಾಗುವ ವರವನ್ನು ನೀಡು ಪ್ರಭೋ!”
ಹೀಗೆ ಸ್ತುತಿಸಿ ಅರ್ಜುನನೊಂದಿಗೆ ವಾಸುದೇವನು ಭವ ಮಹಾದೇವನನ್ನು ಅಸ್ತ್ರದ ಪ್ರಾಪ್ತಿಗೋಸ್ಕರ ಪ್ರಸನ್ನಗೊಳಿಸಿದನು. ಆಗ ಅರ್ಜುನನು ಹರ್ಷೋತ್ಫುಲ್ಲನಯನನಾಗಿ ಸಮಸ್ತ ತೇಜಸ್ಸುಗಳ ನಿಧಿಯಾಗಿರುವ ವೃಷಭಧ್ವಜನನ್ನು ಪ್ರೀತಿಯಿಂದ ವಂದಿಸಿದನು. ರಾತ್ರಿ ಉಪಾಹಾರಾರ್ಥವಾಗಿ ತಾನೇ ಯಾವ ಉಪಹಾರವನ್ನು ವಾಸುದೇವನಿಗೆ ನೈವೇದ್ಯ ಮಾಡಿದ್ದನೋ ಅದೇ ಉಪಹಾರವು ತ್ರ್ಯಂಬಕನ ಬಳಿ ಇರುವುದನ್ನು ನೋಡಿದನು. ಪಾಂಡವನು ಶರ್ವನನ್ನೂ ಕೃಷ್ಣನನ್ನೂ ಮನಸಾ ನಮಸ್ಕರಿಸಿ “ದಿವ್ಯಾಸ್ತ್ರವನ್ನು ಇಚ್ಛಿಸುತ್ತೇನೆ!” ಎಂದು ಶಂಕರನಿಗೆ ಹೇಳಿದನು. ಆಗ ವರವಾಗಿ ಪಾರ್ಥನು ಕೇಳಿದುದನ್ನು ಅರಿತ ಪ್ರಭು ದೇವನು ನಸುನಗುತ್ತಾ ವಾಸುದೇವ-ಅರ್ಜುನರಿಗೆ ಹೇಳಿದನು: “ಶತ್ರುಸೂದನರೇ! ಹತ್ತಿರದಲ್ಲಿಯೇ ಅಮೃತಮಯವಾದ ದಿವ್ಯ ಸರೋವರವಿದೆ. ಅಲ್ಲಿ ನಾನು ಹಿಂದೆ ಆ ದಿವ್ಯ ಧನುಸ್ಸನ್ನೂ ಶರವನ್ನೂ ಇರಿಸಿದ್ದೇನೆ. ಅದರಿಂದ ನಾನು ದೇವಶತ್ರುಗಳೆಲ್ಲರನ್ನೂ ಯುದ್ಧದಲ್ಲಿ ಬೀಳಿಸಿದ್ದೆ. ಕೃಷ್ಣರೇ! ಆ ಉತ್ತಮ ಧನುಸ್ಸು-ಶರಗಳನ್ನು ತೆಗೆದುಕೊಂಡು ಬನ್ನಿರಿ!”
ಹಾಗೆಯೇ ಆಗಲೆಂದು ಶರ್ವನಿಗೆ ಹೇಳಿ ಆ ವೀರರಿಬ್ಬರೂ ಶಿವನ ಪಾರ್ಷದರೊಂದಿಗೆ ನೂರಾರು ಆಶ್ಚರ್ಯಗಳಿಂದ ಆವೃತವಾದ ಆ ದಿವ್ಯ ಸರೋವರಕ್ಕೆ ತೆರಳಿದರು. ಋಷಿಗಳಾಗಿದ್ದಾಗ ಸರ್ವಾರ್ಥಸಾಧಕ ನಿರ್ದಿಷ್ಟ ಪುಣ್ಯಗಳನ್ನು ಗಳಿಸಿದ್ದ ಆ ನರನಾರಾಯಣ ಋಷಿಗಳು ಸಂಭ್ರಾಂತರಾಗಿ ಅಲ್ಲಿ ತಲುಪಿದರು. ಆ ಸರೋವರಕ್ಕೆ ಹೋಗಿ ಅರ್ಜುನ-ಅಚ್ಯುತರು ಅಂತರ್ಜಲದಲ್ಲಿ ಸೂರ್ಯಮಂಡಲೋಪಾದಿಯಲ್ಲಿರುವ ಘೋರವಾದ ನಾಗನನ್ನು ಕಂಡರು. ಅಗ್ನಿಯ ವರ್ಚಸ್ಸನ್ನು ಪಡೆದಿದ್ದ, ವಿಪುಲ ಜ್ವಾಲೆಗಳನ್ನು ಉಗುಳುತ್ತಿದ್ದ ಸಾವಿರ ಹೆಡೆಗಳ ಇನ್ನೊಂದು ಎರಡನೆಯ ಶ್ರೇಷ್ಠ ನಾಗನನ್ನೂ ನೋಡಿದರು. ಆಗ ಕೃಷ್ಣ-ಪಾರ್ಥರು ಆಚಮನ ಮಾಡಿ ಕೈಮುಗಿದು ವೃಷಧ್ವಜನಿಗೆ ನಮಸ್ಕರಿಸಿ ಆ ನಾಗಗಳೆರಡನ್ನೂ ಪೂಜಿಸತೊಡಗಿದರು. ವೇದ ವಿದ್ವಾಂಸರಾಗಿದ್ದ ಅವರಿಬ್ಬರೂ ಶತರುದ್ರೀಯ ಮಂತ್ರಗಳನ್ನು ಪಠಿಸುತ್ತಾ ಬ್ರಹ್ಮರೂಪನಾದ ಅಪ್ರಮೇಯ ಭವನನ್ನು ಸರ್ವಾತ್ಮಗಳಿಂದಲೂ ಮೊರೆಹೊಕ್ಕು ಪ್ರಣಮಿಸಿದರು. ಆಗ ರುದ್ರದ ಮಹಾತ್ಮೆಯಿಂದ ಆ ಎರಡೂ ಮಹಾ ಸರ್ಪಗಳು ತಮ್ಮ ರೂಪವನ್ನು ತೊರೆದು ಶತ್ರುಸಂಹಾರಕ ಧನುರ್ಬಾಣಗಳೆರಡಾಗಿ ಪರಿಣಮಿಸಿದವು. ಆ ಮಹಾತ್ಮರು ಪ್ರೀತರಾಗಿ ಅತ್ಯಂತ ಪ್ರಭೆಯುಳ್ಳ ಆ ಧನುರ್ಬಾಣಗಳನ್ನು ತೆಗೆದುಕೊಂಡು ಬಂದು ಮಹಾತ್ಮನಿಗೆ ಒಪ್ಪಿಸಿದರು. ಆಗ ವೃಷಾಂಕನ ಪಕ್ಕದಿಂದ ಹಳದೀ ಬಣ್ಣದ ಕಣ್ಣುಳ್ಳ, ತಪಸ್ಸಿಗೆ ಕ್ಷೇತ್ರಪ್ರಾಯನಾಗಿಯೂ, ಬಲಶಾಲಿಯೂ ಆಗಿದ್ದ ನೀಲಿ ಮತ್ತು ಕೆಂಪು ಬಣ್ಣದವುಗಳಾಗಿದ್ದ ಬ್ರಹ್ಮಚಾರಿಯೊಬ್ಬನು ಹೊರಬಂದನು. ಅವನು ಆ ಶ್ರೇಷ್ಠ ಧನುಸ್ಸನ್ನು ಹಿಡಿದು ಸ್ಥಾನದಲ್ಲಿ ಕುಳಿತುಕೊಂಡು ವಿಧಿವತ್ತಾಗಿ ಶರವನ್ನು ಹೂಡಿ ಆ ಉತ್ತಮ ಧನುಸ್ಸನು ಎಳೆದನು. ಅವನು ಶಿಂಜಿನಿಯನ್ನು ಹಿಡಿಯುವ ಮುಷ್ಟಿಯನ್ನೂ ಸ್ಥಾನವನ್ನೂ ಪಾಂಡವನು ವೀಕ್ಷಿಸಿ ತಿಳಿದುಕೊಂಡನು. ಆ ಅಚಿಂತ್ಯ ವಿಕ್ರಮಿಯು ಭವನು ಹೇಳಿದ ಮತ್ರವನ್ನೂ ಕೇಳಿ ಗ್ರಹಿಸಿಕೊಂಡನು. ಆ ಅತಿಬಲ ವೀರನು ಆ ಬಾಣ-ಧನುಸ್ಸುಗಳನ್ನು ಪುನಃ ಅದೇ ಸರೋವರದಲ್ಲಿ ವಿಸರ್ಜಿಸಿ ಬಂದನು.
ಆಗ ಭವನು ಪ್ರೀತನಾದನೆಂದು ತಿಳಿದು ಅರ್ಜುನನು ಅರಣ್ಯಕದಲ್ಲಿ ಶಂಕರನು ನೀಡಿದ್ದ ಶ್ರೇಷ್ಠ ದರ್ಶನವನ್ನು ನೆನಪಿಸಿಕೊಂಡನು. ಇದು ನನಗೆ ಬರಲಿ ಎಂದು ಅವನು ಮನಸ್ಸಿನಲ್ಲಿಯೇ ಚಿಂತಿಸಿದನು. ಅವನ ಆ ಬಯಕೆಯನ್ನು ತಿಳಿದ ಭವನು ಪ್ರೀತಿಯಿಂದ ಅವನಿಗೆ ಆ ಪ್ರತಿಜ್ಞೆಯನ್ನು ಪಾರುಮಾಡುವ ಮತ್ತು ಆ ಘೋರ ಪಾಶುಪತದ ವರವನ್ನಿತ್ತನು.
ಸಂಹೃಷ್ಟನಾಗಿ ರೋಮಾಂಚನಗೊಂಡ ಆ ದುರ್ಧರ್ಷನು ಕಾರ್ಯವು ಯಶಸ್ವಿಯಾಯಿತು ಎಂದು ಅಂದುಕೊಂಡನು. ಅವರಿಬ್ಬರೂ ಸಂಹೃಷ್ಟರಾಗಿ ಮಹೇಶ್ವರನ್ನು ತಲೆಬಾಗಿ ನಮಸ್ಕರಿಸಿದರು. ಕ್ಷಣದಲ್ಲಿಯೇ ಭವನಿಂದ ಅಪ್ಪಣೆ ಪಡೆದು ವೀರ ಅರ್ಜುನ-ಕೇಶವರು ಜಂಭನ ವಧೆಯನ್ನು ಬಯಸಿ ಸಂತೋಷದಿಂದ ಇಂದ್ರ-ವಿಷ್ಣುಗಳು ಹೇಗೋ ಹಾಗೆ ಪರಮಸಂತೋಷಗೊಂಡವರಾಗಿ ತಮ್ಮ ಶಿಬಿರಕ್ಕೆ ಮರಳಿದರು.
ಹದಿನಾಲ್ಕನೆಯ ದಿನದ ಬೆಳಿಗ್ಗೆ ಯುಧಿಷ್ಠಿರನು ಸಜ್ಜಾದುದು
ಕೃಷ್ಣ ಮತ್ತು ದಾರುಕರ ಸಂವಾದವು ನಡೆಯುತ್ತಿದ್ದಂತೆಯೇ ರಾತ್ರಿಯು ಕಳೆಯಲು ರಾಜ ಯುಧಿಷ್ಠಿರನು ಎಚ್ಚೆತ್ತನು. ಆ ಪುರುಷರ್ಷಭನನ್ನು ಪಾಣಿಸ್ವನಿಕರು, ಮಾಗಧರು, ಮಧುಪರ್ಕಿಕರು, ವೈತಾಲಿಕರು, ಮತ್ತು ಸೂತರು ಸಂತುಷ್ಟಗೊಳಿಸಿದರು. ನರ್ತಕರು ನಾಟ್ಯಮಾಡಿದರು. ಇಂಪಾದ ಕಂಠದ ಗಾಯಕರು ಕುರುವಂಶದ ಕೀರ್ತಿಯನ್ನು ಹೇಳುವ ಮಧುರ ಗೀತೆಗಳನ್ನು ಹಾಡಿದರು. ಮೃದಂಗ, ಝರ್ಝರ, ಭೇರಿ, ಪಣವಾನಕ, ಗೋಮುಖ, ಆಡಂಬರ, ಶಂಖ ಮತ್ತು ದುಂದುಭಿಗಳನ್ನು ಜೋರಾಗಿ ನುಡಿಸಲಾಯಿತು. ಇವು ಎಲ್ಲ ಮತ್ತು ಇನ್ನೂ ಅನ್ಯ ವಾದ್ಯಗಳನ್ನು ಕುಶಲರೂ ಚೆನ್ನಾಗಿ ಪಳಗಿದವರೂ ಸಂಹೃಷ್ಟರಾಗಿ ಬಾರಿಸಿದರು. ಮೇಘದಂತೆ ಮೊಳಗುತ್ತಿದ್ದ ನಿರ್ಘೋಷ ಮತ್ತು ದಿವವನ್ನು ಮುಟ್ಟುತ್ತಿದ್ದ ಮಹಾ ಶಬ್ಧವು ಮಲಗಿದ್ದ ಆ ಪಾರ್ಥಿವಪ್ರವರ ಯುಧಿಷ್ಠಿರನನ್ನು ಎಚ್ಚರಿಸಿತು. ಅತಿ ಬೆಲೆಬಾಳುವ ಉತ್ತಮ ಶಯನದಲ್ಲಿ ಸುಖವಾಗಿ ಮಲಗಿದ್ದ ಅವನು ಎಚ್ಚೆತ್ತನು. ಅನಂತರ ಅವಶ್ಯಕಾರ್ಯಗಳಿಗಾಗಿ ಎದ್ದು ಸ್ನಾನಗೃಹಕ್ಕೆ ತೆರಳಿದನು.
ಆಗ ನೂರಾಎಂಟು ಬಿಳಿಯ ವಸ್ತ್ರಗಳನ್ನುಟ್ಟಿದ್ದ ಸ್ನಾನಮಾಡಿಸುವ ತರುಣರು ಸ್ನಾನಮಾಡಿಸಲು ತುಂಬಿದ ಬಂಗಾರದ ಕೊಡಗಳಿಂದ ಸಿದ್ಧರಾಗಿದ್ದರು. ತೆಳುವಾದ ಬಟ್ಟೆಯನ್ನುಟ್ಟು ಭದ್ರಾಸನದಲ್ಲಿ ಸುಖವಾಗಿ ಕುಳಿತ ಅವನಿಗೆ ಚಂದನಯುಕ್ತವಾದ ಅಭಿಮಂತ್ರಿಸಿದ ನೀರಿನಿಂದ ಸ್ನಾನಮಾಡಿಸಿದರು. ಚೆನ್ನಾಗಿ ಪಳಗಿದ ಬಲವಂತರು ಅವನ ಅಂಗಾಂಗಗಳನ್ನು ಔಷಧ-ಸುಗಂಧಗಳಿಂದ ಯುಕ್ತವಾದ ನೀರಿನಿಂದ ಚೆನ್ನಾಗಿ ತಿಕ್ಕಿದರು. ಅರಿಷಿಣ ಚಂದನಗಳಿಂದ ಅಂಗಗಳನ್ನು ಲೇಪಿಸಿಯಾದ ನಂತರ ಮಹಾಭುಜನು ಹಾರವನ್ನು ಧರಿಸಿ, ಶುಚಿಯಾದ ವಸ್ತ್ರಗಳನ್ನು ತೊಟ್ಟು ಕೈಜೋಡಿಸಿ ಪೂರ್ವಾಭಿಮುಖನಾಗಿ ನಿಂತನು. ಕೌಂತೇಯನು ಸಂತರ ಮಾರ್ಗವನ್ನು ಅನುಸರಿಸಿ ಜಪವನ್ನು ಜಪಿಸಿದನು. ಅನಂತರ ವಿನೀತನಾಗಿ ಉರಿಯುತ್ತಿರುವ ಅಗ್ನಿಯಿರುವ ಕೊಠಡಿಯನ್ನು ಪ್ರವೇಶಿಸಿದನು. ಪವಿತ್ರವಾದ ಸಮಿದ್ಧೆಯನ್ನು ಅಗ್ನಿಯಲ್ಲಿ ಆಹುತಿಯನ್ನಿತ್ತು, ಮಂತ್ರಪೂತಗಳಿಂದ ಅರ್ಚಿಸಿ ನಂತರ ಆ ಕೊಠಡಿಯಿಂದ ಹೊರಬಂದನು. ಆ ಪಾರ್ಥಿವ ಪುರುಷವ್ಯಾಘ್ರನು ಎರಡನೆಯ ಕಕ್ಷವನ್ನು ಪ್ರವೇಶಿಸಿ ಅಲ್ಲಿ ವೇದವಿದ ವಿಪ್ರರನ್ನೂ ಬ್ರಾಹ್ಮಣರ್ಷಭರನ್ನೂ ನೋಡಿದನು.
ಶಾಂತರಾಗಿದ್ದ ಅವರು ವೇದವ್ರತ ಸ್ನಾನಮಾಡಿದ್ದರು ಮತ್ತು ಅವಭೃತ ಸ್ನಾನವನ್ನೂ ಮಾಡಿದ್ದರು. ಆ ಸೌರರು ಒಂದುಸಾವಿರವಿದ್ದರು. ಅವರ ಅನುಚರರು ಎಂಟು ಸಾವಿರವಿದ್ದರು. ಅವರು ಅಕ್ಷತೆ ಮತ್ತು ಸುಮನೋಹರವಾದ ಆಶೀರ್ವಾದಗಳನ್ನು ಪಠಿಸುತ್ತಿರಲು ಮಹಾಭುಜ ಪಾಂಡವನು ಆ ದ್ವಿಜರಿಗೆ ಜೇನು, ತುಪ್ಪ, ಶ್ರೇಷ್ಠ ಸುಮಂಗಲ ಫಲಗಳನ್ನು ಇತ್ತು, ಒಬ್ಬೊಬ್ಬರಿಗೂ ಒಂದೊಂದು ಬಂಗಾರದ ನಿಷ್ಕವನ್ನೂ, ಅಲಂಕರಿಸಲ್ಪಟ್ಟ ಒಂದು ನೂರು ಕುದುರೆಗಳನ್ನೂ, ವಸ್ತ್ರಗಳನ್ನೂ ದಕ್ಷಿಣೆಗಳನ್ನೂ ನೀಡಿದನು. ಹಾಗೆಯೇ ಪಾಂಡುನಂದನನು ಕೋಡುಗಳನ್ನು ಬಂಗಾರದಿಂದಲೂ ಖುರಗಳನ್ನು ಬೆಳ್ಳಿಯಿಂದಲೂ ಅಲಂಕರಿಸಲ್ಪಟ್ಟ, ಹಾಲುಕೊಡುವ ಕಪಿಲ ಗೋವುಗಳನ್ನು, ಕರುಳೊಂದಿಗೆ ಕೊಟ್ಟು ಪ್ರದಕ್ಷಿಣೆ ಹಾಕಿದನು. ಅನಂತರ ಕೌಂತೇಯನು ಆನಂದವನ್ನು ವೃದ್ಧಿಸುವ ಸ್ವಸ್ತಿಕಗಳನ್ನೂ, ಕಾಂಚನದ ನಂದ್ಯಾವರ್ತಗಳನ್ನೂ, ಮಾಲೆಗಳನ್ನೂ, ಜಲಕುಂಭಗಳನ್ನೂ, ಜ್ವಲಿಸುವ ಹುತಾಶನನನ್ನೂ, ಪೂರ್ಣವಾಗಿರುವ ನಕ್ಷತ್ರ ಪಾತ್ರೆಗಳನ್ನೂ, ಬಿಸಿಲಿನಲ್ಲಿ ಒಣಗಿಸಿದ ಅಕ್ಕಿಯನ್ನೂ, ಅಲಂಕೃತರಾದ ಶುಭ ಕನ್ಯೆಯರನ್ನೂ, ಮೊಸರು-ತುಪ್ಪ-ಜೇನು-ನೀರನ್ನೂ, ಮಂಗಲ ಪಕ್ಷಿಗಳನ್ನೂ, ಇತರ ಪೂಜಿತ ವಸ್ತುಗಳನ್ನೂ ನೋಡುತ್ತಾ ಮುಟ್ಟುತ್ತಾ ಹೊರಗಿನ ಕಕ್ಷಕ್ಕೆ ಬಂದನು.
ಅಲ್ಲಿ ಮಹಾಬಾಹುವನ್ನು ಅವನ ಪರಿಚಾರಕರು ಬಂಗಾರದ, ಸರ್ವತೋಭದ್ರವಾದ, ಮುತ್ತು-ವೈಡೂರ್ಯಗಳನ್ನು ಕೂಡಿಸಿದ್ದ, ಅತಿ ಅಮೂಲ್ಯವಾದ ರತ್ನಗಂಬಳಿಯನ್ನು ಹೊದೆಸಿದ್ದ, ಅದರ ಮೇಲೆ ಮತ್ತೊಂದು ಮೃದು ವಸ್ತ್ರವನ್ನು ಹಾಸಿದ್ದ, ವಿಶ್ವಕರ್ಮನಿಂದ ನಿರ್ಮಿತವಾಗಿದ್ದ ದಿವ್ಯವಾದ ವರಾಸನದ ಮೇಲೆ ಕುಳ್ಳಿರಿಸಿದರು. ಅಲ್ಲಿ ಅವನು ಕುಳಿತುಕೊಳ್ಳಲು ಎಲ್ಲ ಕಡೆಗಳಿಂದ ಮಹಾ ಅಮೂಲ್ಯ ಶುಭ್ರ ಭೂಷಣಗಳನ್ನು ತಂದರು. ಆಭರಣ ಉಡುಪುಗಳನ್ನು ಧರಿಸಿದ್ದ ಮಹಾತ್ಮ ಕೌಂತೇಯನ ರೂಪವು ಶತ್ರುಗಳ ಶೋಕವನ್ನು ಹೆಚ್ಚಿಸುವಂತಿತ್ತು. ಚಂದ್ರನ ಕಿರಣಗಳಂತೆ ಬೆಳ್ಳಗಿದ್ದ, ಬಂಗಾರದ ದಂಡವಿದ್ದ ಚಾಮರಗಳಿಂದ ಬೀಸುತ್ತಿರಲು ಅವನು ಮಿಂಚಿನಿಂದ ಕೂಡಿದ ಮೋಡದಂತೆ ಶೋಭಿಸಿದನು. ಸ್ತುತಿಸುತ್ತಿದ್ದ ಸೂತರು, ವಂದಿಸುತ್ತಿದ್ದ ಬಂದಿಗಳು, ಹಾಡುತ್ತಿದ್ದ ಗಂಧರ್ವರು ಕುರುನಂದನನನ್ನು ಸಂತೋಷಗೊಳಿಸಿದರು. ಆಗ ಮುಹೂರ್ತದಲ್ಲಿಯೇ ಬಂದಿಗಳ ಸ್ವರ, ರಥಿಗಳ ಚಕ್ರಗಳ ಘೋಷ, ಕುದುರೆಗಳ ಖುರಗಳ ಶಬ್ಧಗಳು ಜೋರಾದವು. ಆನೆಗಳ ಗಂಟೆಗಳ ಬಾರಿಸುವಿಕೆಯಿಂದ, ಶಂಖಗಳ ನಿನಾದದಿಂದ, ಸೈನಿಕರ ಕಾಲ್ನಡುಗೆಯ ಶಬ್ಧಗಳಿಂದ ಮೇದಿನಿಯು ಕಂಪಿಸುವಂತಿತ್ತು. ಆಗ ಕುಂಡಲಗಳನ್ನು ಧರಿಸಿದ್ದ, ಖಡ್ಗವನ್ನು ಒರಸೆಯಲ್ಲಿ ಕಟ್ಟಿಕೊಂಡಿದ್ದ, ಸನ್ನದ್ಧ ಕವಚನಾದ ಯುವಕನು ಬಂದು ಕಾಲುಗಳನ್ನು ನೆಲಕ್ಕೆ ಊರಿ ವಂದನೀಯನಾದ ಜಗತ್ಪತಿಯನ್ನು ವಂದಿಸಿ, ದ್ವಾರದಲ್ಲಿ ಹೃಷೀಕೇಶನು ಒಳಬರನು ಕಾದುಕೊಂಡಿದ್ದಾನೆಂದು ಮಹಾತ್ಮ ಧರ್ಮಾತ್ಮಜನಿಗೆ ನಿವೇದಿಸಿದನು. ಆಗ ಪುರುಷವ್ಯಾಘ್ರನು ಹೇಳಿದನು: “ಮಾಧವನನ್ನು ಸ್ವಾಗತಿಸಿ, ಆ ಪರಮಾರ್ಚಿತನಿಗೆ ಅರ್ಘ್ಯ ಆಸನಗಳನ್ನು ನೀಡಿ!”
ಆಗ ವಾರ್ಷ್ಣೇಯನು ಪ್ರವೇಶಿಸಿ ವರಾಸನದಲ್ಲಿ ಕುಳಿತುಕೊಳ್ಳಲು ಸತ್ಕೃತನಾಗಿ ಸತ್ಕರಿಸಿ ಯುಧಿಷ್ಠಿರನು ಅವನನ್ನು ಕೇಳಿದನು.
ಕೃಷ್ಣನು ಯುಧಿಷ್ಠಿರನಿಗಿತ್ತ ಆಶ್ವಾಸನೆ
ಯುಧಿಷ್ಠಿರನು ಹೇಳಿದನು: “ಮಧುಸೂದನ! ನಿನ್ನ ರಾತ್ರಿಯು ಸುಖವಾಗಿ ಕಳೆಯಿತೇ? ನಿನ್ನ ಜ್ಞಾನೇಂದ್ರಿಯಗಳೆಲ್ಲವೂ ಪ್ರಸನ್ನವಾಗಿವೆಯೇ?” ಕೇಳಿದುದಕ್ಕೆ ವಾಸುದೇವನೂ ಕೂಡ ಯುಧಿಷ್ಠಿರನನ್ನು ಕೇಳಿದನು. ಆಗ ಸೇವಕರು ರಾಜರು ಉಪಸ್ಥಿತರಾಗಿದ್ದಾರೆಂದು ನಿವೇದಿಸಿದರು. ರಾಜನ ಅನುಜ್ಞೆಯ ಮೇರೆಗೆ ವಿರಾಟ, ಭೀಮಸೇನ, ಧೃಷ್ಟದ್ಯುಮ್ನ, ಸಾತ್ಯಕಿ, ಶಿಖಂಡಿ, ಯಮಳರು, ಚೇಕಿತಾನ, ಕೇಕಯರು, ಕೌರವ್ಯ ಯುಯುತ್ಸು, ಮತ್ತು ಪಾಂಚಾಲ್ಯ ಉತ್ತಮೌಜಸರನ್ನು ಪ್ರವೇಶಿಸಲಾಯಿತು. ಇವರಲ್ಲದೇ ಇನ್ನೂ ಅನ್ಯ ಅನೇಕ ಕ್ಷತ್ರಿಯರು ಕ್ಷತ್ರಿಯರ್ಷಭ ಮಹಾತ್ಮನ ಉಪಸ್ಥಿತಿಯಲ್ಲಿ ಪ್ರವೇಶಿಸಿ ಆಸನಗಳಲ್ಲಿ ಕುಳಿತುಕೊಂಡರು. ಒಂದೇ ಆಸನದಲ್ಲಿ ವೀರರಾದ ಮಹಾಬಲಶಾಲಿಗಳಾದ ಮಹಾತ್ಮರಾದ ಮಹಾದ್ಯುತೀ ಕೃಷ್ಣ ಮತ್ತು ಯುಯುಧಾನರು ಕುಳಿತುಕೊಂಡರು. ಆಗ ಯುಧಿಷ್ಠಿರನು ಎಲ್ಲರೂ ಕೇಳುವಹಾಗೆ ಮಧುಸೂದನ ಪುಂಡರೀಕಾಕ್ಷನನ್ನು ಉದ್ದೇಶಿಸಿ ಈ ಮಧುರ ಮಾತನ್ನಾಡಿದನು: “ಅಮರರು ಹೇಗೆ ಸಹಸ್ರಾಕ್ಷನನ್ನು ಆಶ್ರಯಿಸಿದ್ದಾರೋ ಹಾಗೆ ನಾವೂ ಕೂಡ ನಿನ್ನನ್ನೊಬ್ಬನನ್ನೇ ಯುದ್ಧದಲ್ಲಿ ಜಯ ಮತ್ತು ಶಾಶ್ವತ ಸುಖಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಕೃಷ್ಣ! ಶತ್ರುಗಳಿಂದ ಮೋಸಗೊಂಡು ರಾಜ್ಯವನ್ನು ಕಳೆದುಕೊಂಡಿದುದು ಮತ್ತು ನಾವು ವಿವಿಧ ಕ್ಲೇಶಗಳನ್ನು ಅನುಭವಿಸಿದ್ದುದು ಇವೆಲ್ಲವೂ ನಿನಗೆ ತಿಳಿದೇ ಇದೆ. ಸರ್ವೇಶ! ಭಕ್ತವತ್ಸಲ! ಮಧುಸೂದನ! ನಮ್ಮದೆಲ್ಲವೂ- ನಮ್ಮ ಸುಖ, ಜೀವನ ನಿರ್ವಹಣೆ ಮತ್ತು ಯಾತ್ರೆ ಎಲ್ಲವೂ ನಿನ್ನದೇ! ವಾರ್ಷ್ಣೇಯ! ನನ್ನ ಮನಸ್ಸು ನಿನ್ನಲ್ಲಿಯೇ ಇರುವಂತೆ ಮಾಡು! ಅರ್ಜುನನು ಬಯಸಿದಂತೆ ಅವನ ಪ್ರತಿಜ್ಞೆಯು ಸತ್ಯವಾಗುವಂತೆ ಮಾಡು! ಮಾಧವ! ದುಃಖ-ಕೋಪಮಯವಾದ ಮಹಾಸಾಗರವನ್ನು ದಾಟಲಿಚ್ಚಿಸುವ ನಮಗೆ ಇಂದು ನಮ್ಮನ್ನು ಪಾರುಗೊಳಿಸಲು ನೀನೊಂದು ನೌಕೆಯಾಗು. ಕೃಷ್ಣ! ಯುದ್ಧದಲ್ಲಿ ರಥಿಕನಾದ ಕಾರ್ತವೀರ್ಯಸಮನು ಕೂಡ ಮಾಡಲಾಗದುದನ್ನು ರಥದಲ್ಲಿ ಕುಳಿತ ಸಾರಥಿಯು ಮಾಡಬಲ್ಲನು!”
ವಾಸುದೇವನು ಹೇಳಿದನು: “ಅಮರ ಲೋಕವನ್ನೂ ಸೇರಿ ಎಲ್ಲ ಲೋಕಗಳಲ್ಲಿ ಪಾರ್ಥ ಧನಂಜಯನಂತಿರುವ ಧನುರ್ಧರನು ಯಾರೂ ಇಲ್ಲ. ಆ ವೀರ್ಯವಾನ, ಅಸ್ತ್ರಸಂಪನ್ನ, ಪರಾಕ್ರಾಂತ, ಮಹಾಬಲ, ಯುದ್ಧಶೌಂಡ, ಸದಾಮರ್ಷೀ, ತೇಜಸ್ಸಿನಿಂದ ಮನುಷ್ಯರಲ್ಲಿಯೇ ಶ್ರೇಷ್ಠನಾದ, ಆ ಯುವಕ, ವೃಷಭಸ್ಕಂಧ, ದೀರ್ಘಬಾಹು, ಮಹಾಬಲ, ಸಿಂಹದಂತೆ ನಡೆಯುವ ಶ್ರೀಮಾನನು ನಿನ್ನ ಶತ್ರುವನ್ನು ಸಂಹರಿಸುತ್ತಾನೆ. ನಾನೂ ಕೂಡ ಕುಂತೀಸುತ ಅರ್ಜುನನು ಧಾರ್ತರಾಷ್ಟ್ರನ ಸೇನೆಗಳನ್ನು ಅಗ್ನಿಯು ಕಟ್ಟಿಯನ್ನು ಹೇಗೋ ಹಾಗೆ ಸುಟ್ಟುಬಿಡುವಂತೆ ಮಾಡುತ್ತೇನೆ. ಇಂದು ಅರ್ಜುನನು ಆ ಪಾಪಕರ್ಮಿ, ಕ್ಷುದ್ರ, ಸೌಭದ್ರಘಾತಿಯು ಪುನಃ ಕಾಣಲು ಸಿಗದಂತಹ ಮಾರ್ಗಕ್ಕೆ ಬಾಣಗಳಿಂದ ಕಳುಹಿಸುವವನಿದ್ದಾನೆ. ಇಂದು ಅವನ ಮಾಂಸಗಳನ್ನು ಹದ್ದುಗಳು, ನರಿಗಳು, ತೋಳಗಳು ಮತ್ತು ಇತರ ಮಾಂಸಭಕ್ಷಕರು ಭಕ್ಷಿಸುತ್ತಾರೆ. ಅವನ ರಕ್ಷಣೆಗೆ ಇಂದು ಇಂದ್ರನೊಂದಿಗೆ ದೇವತೆಗಳೇ ಬಂದರೂ ಸಂಕುಲ ಯುದ್ಧದಲ್ಲಿ ಅವನು ಇಂದು ಹತನಾಗಿ ಯಮನ ರಾಜಧಾನಿಗೆ ಹೋಗುವುದು ನಿಶ್ಚಯ. ಇಂದು ಸೈಂಧವನನ್ನು ಸಂಹರಿಸಿ ಜಿಷ್ಣುವು ನಿನ್ನ ಬಳಿ ಬರುತ್ತಾನೆ. ರಾಜನ್! ಐಶ್ವರ್ಯಸಂಪನ್ನನಾಗಿರುವ ನೀನು ಶೋಕರಹಿತನಾಗು. ವ್ಯಾಕುಲಗೊಳ್ಳಬೇಡ.”
ಅರ್ಜುನನು ಯುದ್ಧಕ್ಕೆ ಹೊರಟಿದುದು
ಅವರು ಹೀಗೆ ಮಾತನಾಡಿಕೊಳ್ಳುತ್ತಿರಲು ಸುಹೃದ್ಗಣಗಳೊಂದಿಗಿದ್ದ ರಾಜ ಭರತಶ್ರೇಷ್ಠನನ್ನು ಕಾಣಲು ಅರ್ಜುನನು ಆಗಮಿಸಿದನು. ಆ ಶುಭ ಕ್ಷಕ್ಷೆಯನ್ನು ಪ್ರವೇಶಿಸಿ ಎದುರು ನಮಸ್ಕರಿಸಿ ನಿಂತಿದ್ದ ಅರ್ಜುನನನ್ನು ಪಾಂಡವರ್ಷಭನು ಪ್ರೇಮದಿಂದ ಮೇಲೆತ್ತಿ ಅಪ್ಪಿಕೊಂಡನು. ನೆತ್ತಿಯನ್ನು ಆಘ್ರಾಣಿಸಿ, ಬಾಹುಗಳಿಂದ ಬಿಗಿದಪ್ಪಿ, ಪರಮ ಆಶೀರ್ವಚನವನ್ನು ಹೇಳಿ ನಸುನಗುತ್ತಾ ಹೇಳಿದನು: “ಅರ್ಜುನ! ಇಂದಿನ ಮಹಾ ಸಂಗ್ರಾಮದಲ್ಲಿ ನಿನ್ನ ವಿಜಯವು ನಿಶ್ಚಯ. ಅದನ್ನು ಸೂಚಿಸುವಂತೆ ನಿನ್ನ ರೂಪದಲ್ಲಿ ಕಾಂತಿಯಿದೆ ಮತ್ತು ಜನಾರ್ದನನೂ ಪ್ರಸನ್ನನಾಗಿದ್ದಾನೆ.”
ಅವನಿಗೆ ಜಿಷ್ಣುವು ಹೇಳಿದನು: “ನಿನಗೆ ಮಂಗಳವಾಗಲಿ. ಕೇಶವನ ಪ್ರಸಾದದಿಂದುಂಟಾದ ಒಂದು ಉತ್ತಮ ಮಹದಾಶ್ಚರ್ಯವನ್ನು ನೋಡಿದೆನು!”
ಆಗ ಧನಂಜಯನು ಸುಹೃದರಿಗೆ ಆಶ್ವಾಸನೆಯನ್ನು ನೀಡಲೋಸುಗ ತ್ರ್ಯಂಬಕನೊಂದಿಗಿನ ಸಮಾಗಮವನ್ನು ಕಂಡಹಾಗೆ ವರ್ಣಿಸಿ ಹೇಳಿದನು. ಆಗ ಎಲ್ಲರೂ ವಿಸ್ಮಿತರಾಗಿ ಶಿರದಿಂದ ನೆಲವನ್ನು ಮುಟ್ಟಿ ವೃಷಾಂಕನನ್ನು ನಮಸ್ಕರಿಸಿ “ಸಾಧು! ಸಾಧು!” ಎಂದರು. ಅನಂತರ ಎಲ್ಲ ಸುಹೃದರೂ ಧರ್ಮಸೂನುವಿನ ಅಪ್ಪಣೆಯನ್ನು ಪಡೆದು ಹೃಷ್ಟರಾಗಿ, ತ್ವರೆಮಾಡಿ ಸುಸನ್ನದ್ಧರಾಗಿ ಯುದ್ಧಕ್ಕೆ ಹೊರಟರು. ರಾಜನನ್ನು ಅಭಿವಂದಿಸಿ ಯುಯುಧಾನ, ಅಚ್ಯುತ, ಅರ್ಜುನರೂ ಯುಧಿಷ್ಠಿರನ ನಿವೇಶನದಿಂದ ಹೃಷ್ಟರಾಗಿ ಹೊರಟರು. ಒಂದೇ ರಥದಲ್ಲಿ ದುರ್ಧರ್ಷರಾದ ಯುಯುಧಾನ-ಜನಾರ್ದನರು ಒಟ್ಟಿಗೇ ವೀರ ಅರ್ಜುನನ ನಿವೇಶನಕ್ಕೆ ಹೋದರು. ಅಲ್ಲಿಗೆ ಹೋಗಿ ಹೃಷೀಕೇಶನು ಸೂತನಂತೆ ರಥವರನ ವಾನರರ್ಷಭಧ್ವಜವುಳ್ಳ ರಥವನ್ನು ಸಜ್ಜುಗೊಳಿಸಿದನು. ಮೇಘಸಮ ನಿರ್ಘೋಷವುಳ್ಳ, ಪುಟವಿಟ್ಟ ಕಾಂಚನದ ಪ್ರಭೆಯುಳ್ಳ ಆ ರಥವು ಬೆಳಗಿನ ಸೂರ್ಯನಂತೆ ಪ್ರಕಾಶಮಾನವಾಗಿ ಕಾಣುತ್ತಿತ್ತು. ಆಗ ಸುಸಜ್ಜಿತರಲ್ಲಿ ಶ್ರೇಷ್ಠನಾದ ಪುರುಷ ಶಾರ್ದೂಲನು ಆಹ್ನೀಕವನ್ನು ಮಾಡಿ ರಥವನ್ನು ಪಾರ್ಥನಿಗೆ ನಿವೇದಿಸಿದನು. ಲೋಕದಲ್ಲಿ ಪುರುಷಶ್ರೇಷ್ಠನಾದ ಕಿರೀಟಿಯು ಬಂಗಾರದ ಕವಚವನ್ನು ತೊಟ್ಟು, ಧನುರ್ಬಾಣಗಳನ್ನು ಹಿಡಿದು, ರಥವನ್ನು ಪ್ರದಕ್ಷಿಣೆ ಮಾಡಿದನು. ಅನಂತರ ವಿದ್ಯೆ-ವಯಸ್ಸು-ಕ್ರಿಯೆಗಳಲ್ಲಿ ವೃದ್ಧರಾದವರು, ಜಿತೇಂದ್ರಿಯರು ಜಯವನ್ನು ಆಶಿಸಿ ಸ್ತುತಿಸುತ್ತಿರಲು ಅವನು ಆ ಮಹಾರಥವನ್ನೇರಿದನು. ಮೊದಲೇ ವಿಜಯ ಸಾಧಕವಾದ ಯುದ್ಧಸಂಬಂಧ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟಿದ್ದ ಆ ಉತ್ತಮ ರಥವನ್ನೇರಿ ಅವನು ಉದಯಿಸುತ್ತಿರುವ ಭಾಸ್ಕರನಂತೆ ಪ್ರಕಾಶಿಸುತ್ತಿದ್ದನು. ಆ ಕಾಂಚನ ರಥದಲ್ಲಿ ಕಾಂಚನದಿಂದ ಆವೃತನಾಗಿದ್ದ ಆ ರಥಿಗಳಲ್ಲಿ ಶ್ರೇಷ್ಠನು ಮೇರು ಪರ್ವತವನ್ನೇರಿದ ವಿಮಲ, ಅರ್ಚಿಷ್ಮಾನ್ ದಿವಾಕರನಂತೆ ಹೊಳೆಯುತ್ತಿದ್ದನು. ಶರ್ಯಾತಿಯ ಯಜ್ಞಕ್ಕೆ ಹೋಗುತ್ತಿದ್ದ ಇಂದ್ರನನ್ನು ಅಶ್ವಿನೀ ದೇವತೆಗಳು ಅನುಸರಿಸಿ ಹೋಗುತ್ತಿದ್ದಂತೆ ಯುಯುಧಾನ-ಜನಾರ್ದನರಿಬ್ಬರೂ ಪಾರ್ಥನನ್ನು ಅನುಸರಿಸಿ ರಥಾರೋಹಣ ಮಾಡಿದರು. ಆಗ ವೃತ್ರನ ಸಂಹಾರಕ್ಕೆ ವಾಸವನು ಹೊರಡುವಾಗ ಮಾತಲಿಯು ಹೇಗೋ ಹಾಗೆ ಕಡಿವಾಣಗಳನ್ನು ಹಿಡಿಯುವವರಲ್ಲಿ ಶ್ರೇಷ್ಠನಾದ ಗೋವಿಂದನು ಕಡಿವಾಣಗಳನ್ನು ಹಿಡಿದನು. ಅಂಧಕಾರವನ್ನು ನಾಶಗೊಳಿಸಲು ಬುಧ ಮತ್ತು ಶುಕ್ರರ ಜೊತೆಗೂಡಿ ಹೊರಟ ಶಶಿಯಂತೆ ಪಾರ್ಥನು ಅಬರಿಬ್ಬರೊಡನೆ ಪ್ರವರ ರಥದಲ್ಲಿ ಕುಳಿತಿದ್ದನು. ತಾರಕಾಸುರನ ವಧೆಗೆ ಮಿತ್ರಾವರುಣರೊಡನೆ ಇಂದ್ರನು ಹೊರಟಂತೆ ಸೈಂಧವನನ್ನು ವಧಿಸಲು ಬಯಸಿ ಆ ಶತ್ರುಸೇನಾನಾಶಕನು ಹೊರಟನು. ಆಗ ಹೊರಟಿರುವ ಅರ್ಜುನನನ್ನು ವಾದ್ಯನಿರ್ಘೋಷಗಳಿಂದ, ಮಂಗಲ ಶುಭ ಸ್ತವಗಳಿಂದ ಸೂತ ಮಾಗಧರು ಸಂತೋಷಗೊಳಿಸಿದರು. ಜಯದ ಆಶೀರ್ವಾದಗಳು, ಪುಣ್ಯಾಹ ವಾಚನಗಳು, ಸೂತಮಾಗಧರ ಸ್ತುತಿಗಳೊಂದಿಗೆ ವಾದ್ಯಘೋಷಗಳು ಸೇರಿ ಅವರನ್ನು ರಮಿಸಿದವು. ಅವನು ಹೊರಟಾಗ ಪುಣ್ಯಗಂಧವನ್ನು ಹೊತ್ತ ಶುಚಿಯಾದ ಗಾಳಿಯು ಹಿಂದಿನಿಂದ ಅವನು ಹೊರಟ ದಿಕ್ಕಿನಲ್ಲಿ, ಪಾರ್ಥನನ್ನು ಹರ್ಷಗೊಳಿಸುತ್ತ ಮತ್ತು ಶತ್ರುಗಳನ್ನು ಶೋಷಿಸುತ್ತಾ ಬೀಸುತ್ತಿತ್ತು. ಆಗ ಪಾಂಡವರ ವಿಜಯದ ಮತ್ತು ಕೌರವರ ಸೋಲನ್ನು ಸೂಚಿಸುವ ಅನೇಕ ನಿಮಿತ್ತಗಳು ನಡೆದವು. ಅರ್ಜುನನು ತನ್ನ ಬಲಬಾಗದಲ್ಲಿ ವಿಜಯದ ನಿಮಿತ್ತಗಳನ್ನು ನೋಡಿ ಮಹೇಷ್ವಾಸ ಯುಯುಧಾನನಿಗೆ ಈ ಮಾತನ್ನಾಡಿದನು:
“ಯುಯುಧಾನ! ಈ ಸೂಚನೆಗಳನ್ನು ನೋಡಿದರೆ ಇಂದು ಯುದ್ಧದಲ್ಲಿ ನನಗೆ ವಿಜಯವು ನಿಶ್ಚಿತವೆಂದು ತೋರುತ್ತಿದೆ. ಯಮಲೋಕಕ್ಕೆ ಹೋಗಲು ಬಯಸಿ ನನ್ನ ವೀರ್ಯವನ್ನು ನೋಡಲು ಬಯಸುವ ನೃಪ ಸೈಂಧವನು ಎಲ್ಲಿದ್ದಾನೋ ಅಲ್ಲಿಗೆ ಹೋಗುತ್ತೇನೆ. ನಾನು ಹೇಗೆ ಸೈಂಧವನ ವಧೆಯೆಂಬ ಪರಮ ಕೃತ್ಯವನ್ನು ಮಾಡಲಿರುವೆನೋ ಹಾಗೆಯೇ ಧರ್ಮರಾಜನ ರಕ್ಷಣೆಯೂ ಕೂಡ ಮಹಾ ಕೃತ್ಯವಾಗಿದೆ. ಇಂದು ನೀನು ರಾಜನನ್ನು ಪರಿಪಾಲಿಸು. ನಾನು ಹೇಗೆ ಅವನನ್ನು ರಕ್ಷಿಸುತ್ತೇನೋ ಹಾಗೆ ಅವನು ನಿನ್ನಿಂದಲೂ ರಕ್ಷಿಸಲ್ಪಡಲಿ. ನಾನು ನಿನ್ನಮೇಲೆ ಅಥವಾ ಮಹಾರಥಿ ಪ್ರದ್ಯುಮ್ನನ ಮೇಲೆ ಭರವಸೆಯಿಡಬಲ್ಲೆನು. ಇತರರ ಸಹಾಯವನ್ನು ಬಯಸದೇ ನಾನು ಸೈಂಧವನನ್ನು ಸಂಹರಿಸಲು ಶಕ್ಯ. ಯಾವುದೇ ಕಾರಣಕ್ಕಾಗಿ ನೀನು ನನಗಾಗಿ ಬರಬೇಕಾಗಿಲ್ಲ. ರಾಜನ ರಕ್ಷಣೆಯೇ ನಿನ್ನ ಪರಮ ಕಾರ್ಯ. ಅದನ್ನು ಸರ್ವಾತ್ಮನಾಗಿ ನಿರ್ವಹಿಸು. ಎಲ್ಲಿ ಮಹಾದೇವ ವಾಸುದೇವನಿರುವನೋ ಎಲ್ಲಿ ನಾನೂ ಇರುವೆನೋ ಅಲ್ಲಿ ಯಾವುದೇ ರೀತಿಯ ಆಪತ್ತು ಇರುವುದಿಲ್ಲವೆಂಬುದು ನಿಶ್ಚಿತ.”
ಪಾರ್ಥನು ಹೀಗೆ ಹೇಳಲು ಪರವೀರಹ ಸಾತ್ಯಕಿಯು ಹಾಗೆಯೇ ಆಗಲೆಂದು ಹೇಳಿ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೋದನು.
