ಹದಿನಾಲ್ಕನೇ ದಿನದ ಯುದ್ಧ - ೨
ದ್ರೋಣ-ಪಾಂಚಾಲರ ಯುದ್ಧ
ವ್ಯೂಹವನ್ನು ಪ್ರವೇಶಿಸಿದ್ದ ಪುರುಷರ್ಷಭ ಪಾರ್ಥ-ವಾರ್ಷ್ಣೇಯರ ಹಿಂದೆ ದುರ್ಯೋಧನನು ಹೋದ ನಂತರ ಪಾಂಡವರು ಸೋಮಕರೊಡಗೂಡಿ ಮಹಾ ಶಬ್ಧಗಳಿಂದ ವೇಗವಾಗಿ ದ್ರೋಣನನ್ನು ಆಕ್ರಮಣಿಸಿದರು. ಆಗ ಅವರೊಡನೆ ಯುದ್ಧವು ನಡೆಯಿತು. ವ್ಯೂಹದ ಮುಂದೆಯೇ ಪಾಂಚಾಲರ ಮತ್ತು ಕುರುಗಳ ನಡುವೆ ಘೋರ ಅದ್ಭುತ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ಸೂರ್ಯನು ಮಧ್ಯಾಹ್ನಕ್ಕೇರಲು ಎಂದೂ ಕಂಡಿರದಂತಹ ಮತ್ತು ಕೇಳಿರದಂತಹ ಯುದ್ಧವು ನಡೆಯಿತು. ಸೇನೆಗಳ ವ್ಯೂಹದೊಂದಿಗೆ ಪ್ರಹಾರಿಗಳಾದ ಪಾರ್ಥರು ಎಲ್ಲರೂ ಧೃಷ್ಟದ್ಯುಮ್ನನನನ್ನು ಮುಂದಿರಿಸಿಕೊಂಡು ದ್ರೋಣನ ಸೈನ್ಯವನ್ನು ಶರವರ್ಷಗಳಿಂದ ಮುಸುಕಿದರು. ದ್ರೋಣನನ್ನು ಮುಂದಿರಿಸಿಕೊಂಡು ಕೌರವರು ಪಾರ್ಷತ ಪ್ರಮುಖರಾದ ಪಾರ್ಥರ ಮೇಲೆ ಸಾಯಕಗಳನ್ನು ಸುರಿಸಿದರು. ಸುಂದರ ಅಲಂಕೃತ ರಥಗಳಲ್ಲಿ ಸೇನೆಗಳ ಅಗ್ರಭಾಗಗಳಲ್ಲಿದ್ದ ಅವರಿಬ್ಬರೂ ಬೇಸಿಗೆಯಲ್ಲಿ ವಿರುದ್ಧ ದಿಕ್ಕುಗಳಲ್ಲಿ ಬೀಸುವ ಚಂಡಮಾರುತದಿಂದ ಪರಸ್ಪರ ತಾಗುವ ಮಹಾ ಮೇಘಗಳಂತೆ ಪ್ರಕಾಶಿಸುತ್ತಿದ್ದರು. ಮಳೆಗಾಲದಲ್ಲಿ ಪ್ರವಾಹತುಂಬಿ ರಭಸದಿಂದ ಪರಸ್ಪರರ ಕಡೆ ಹರಿಯುವ ಜಾಹ್ನವೀ-ಯಮುನಾ ನದಿಗಳಂತೆ ಆ ಎರಡು ಮಹಾಸೇನೆಗಳು ಅತಿ ವೇಗದಿಂದ ಪರಸ್ಪರರನ್ನು ಕೂಡಿ ಯುದ್ಧ ಮಾಡಿದರು. ನಾನಾ ಶಸ್ತ್ರಗಳೇ ಮೊದಲು ಬೀಸುವ ಚಂಡಮಾರುತವಾಗಿ, ಆನೆ-ಕುದುರೆ-ರಥಗಳ ಸಂಕುಲಗಳೆಂಬ ಮಿಂಚು ಮತ್ತು ಮಹಾರೌದ್ರವಾದ ಗದೆಗಳೇ ಮಹಾ ಮೇಘಗಳಾಗಿರಲು, ಭಾರದ್ವಾಜನೆಂಬ ಚಂಡಮಾರುತದಿಂದ ಹೊತ್ತುತಂದ ಸಹಸ್ರಾರು ಶರಗಳ ಧಾರೆಗಳನ್ನು ಪಾಂಡುಸೇನೆಯಿಂದ ಉಂಟಾದ ಮಹಾರೌದ್ರ ಅಗ್ನಿಯ ಮೇಲೆ ಸುರಿಸಿ ಆರಿಸಲು ಪ್ರಯತ್ನಿಸುತ್ತಿರುವಂತಿತ್ತು.
ಬೇಸಗೆಯ ಕೊನೆಯಲ್ಲಿ ಘೋರವಾದ ಚಂಡಮಾರುತವು ಸಮುದ್ರವನ್ನು ಕ್ಷೋಭೆಗೊಳಿಸುವಂತೆ ದ್ವಿಜೋತ್ತಮನು ಪಾಂಡವರ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿದನು. ಅವರೂ ಕೂಡ ಪ್ರಬಲ ಅಲೆಗಳೊಂದಿಗೆ ಮಹಾಸೇತುವೆಯನ್ನು ಕೊಚ್ಚಿಕೊಂಡು ಹೋಗಲು ಪ್ರಯತ್ನಿಸುವಂತೆ ಸರ್ವ ಪ್ರಯತ್ನದಿಂದ ದ್ರೋಣನನ್ನು ಆಕ್ರಮಣಿಸಿದರು. ಜೋರಾಗಿ ಬಂದು ಅಪ್ಪಳಿಸುವ ಅಲೆಗಳನ್ನು ಪರ್ವತವು ಹೇಗೆ ತಡೆಯುತ್ತದೆಯೋ ಹಾಗೆ ದ್ರೋಣನು ಸಮರದಲ್ಲಿ ಕ್ರುದ್ಧರಾಗಿದ್ದ ಪಾಂಡವರನ್ನೂ, ಪಾಂಚಾಲರನ್ನೂ, ಕೇಕಯರನ್ನೂ ತಡೆದನು. ಇತರ ಮಹಾಬಲಶಾಲೀ ಶೂರ ರಾಜರೂ ಕೂಡ ರಣದಲ್ಲಿ ಎಲ್ಲ ಕಡೆಗಳಿಂದ ಮುತ್ತಿಗೆ ಹಾಕುತ್ತಾ ಪಾಂಚಾಲರನ್ನು ತಡೆದರು. ಆಗ ರಣದಲ್ಲಿ ಪಾರ್ಷತನು ಪಾಂಡವರೊಂದಿಗೆ ಅರಿಸೇನೆಯನ್ನು ಒಡೆಯಲು ಬಯಸಿ ದ್ರೋಣನನ್ನು ಹೊಡೆಯಲು ಪ್ರಾರಂಭಿಸಿದನು. ದ್ರೋಣನು ಹೇಗೆ ಪಾರ್ಷತನ ಮೇಲೆ ಶರವರ್ಷಗಳನ್ನು ಸುರಿಸುತ್ತಿದ್ದನೋ ಹಾಗೆ ಧೃಷ್ಟದ್ಯುಮ್ನನೂ ಕೂಡ ಶರವರ್ಷಗಳನ್ನು ಸುರಿಸಿದನು. ಖಡ್ಗ ತೋಮರಗಳೇ ಮೊದಲು ಬೀಸುವ ಚಂಡಮಾರುತವಾಗಿ, ಶಕ್ತಿ-ಪ್ರಾಸ-ಋಷ್ಟಿಗಳಿಂದ ಸಜ್ಜಾಗಿ, ಶಿಂಜಿನಿಯೇ ಮಿಂಚು ಮತ್ತು ಚಾಪದ ಟೇಂಕಾರವೇ ಗುಡುಗಾಗಿರುವ, ಧೃಷ್ಟದ್ಯುಮ್ನನೆಂಬ ಮೋಡವು, ಶರಧಾರೆಗಳೇ ಮಳೆಗಲ್ಲುಗಳನ್ನಾಗಿಸಿ ಎಲ್ಲಕಡೆ ಚೆಲ್ಲುತ್ತ ರಥಶ್ರೇಷ್ಠರ ಸಮೂಹಗಳನ್ನು ಸಂಹರಿಸುತ್ತಾ ಸೇನೆಯನ್ನು ಮುಸುಕಿತು.
ಎಲ್ಲೆಲ್ಲಿ ದ್ರೋಣನು ಪಾಂಡವರ ರಥದ ಸಾಲನ್ನು ಶರಗಳಿಂದ ಹೊಡೆದು ಮುನ್ನುಗ್ಗಲು ಪ್ರಯತ್ನಿಸುತ್ತಿದ್ದನೋ ಅಲ್ಲಲ್ಲಿ ಪಾರ್ಷತನು ಶರಗಳಿಂದ ದ್ರೋಣನನ್ನು ತಡೆಯುತ್ತಿದ್ದನು. ಯುದ್ಧದಲ್ಲಿ ದ್ರೋಣನು ಎಷ್ಟೇ ಪ್ರಯತ್ನಿಸಿದರೂ ಧೃಷ್ಟಧ್ಯುಮ್ನನನ್ನು ಸಮೀಪಿಸಿ ಸೇನೆಯು ಮೂರಾಗಿ ಒಡೆಯಿತು. ಒಂದು ಭೋಜನ ಹಿಂದೆ ಹೋಯಿತು, ಇನ್ನೊಂದು ಜಲಸಂಧನ ಹಿಂದೆ ಹೋಯಿತು. ಇನ್ನೊಂದು ಭಾಗವು ಪಾಂಡವರನ್ನು ಸದೆಬಡಿಯುತ್ತಿದ್ದ ದ್ರೋಣನನ್ನು ಹಿಂಬಾಲಿಸಿತು. ದ್ರೋಣನು ಸೇನೆಗಳನ್ನು ಸಂಘಟಿಸುತ್ತಿದ್ದ ಹಾಗೆಯೇ ಧೃಷ್ಟದ್ಯುಮ್ನನು ಅವನ್ನು ಧ್ವಂಸಿಸುತ್ತಿದ್ದನು. ಅರಣ್ಯದಲ್ಲಿ ರಕ್ಷಕರಿಲ್ಲದೆ ಹಸುಗಳು ಅನೇಕ ಹಿಂಸ್ರಮೃಗಗಳಿಂದ ವಧಿಸಲ್ಪಡುವಂತೆ ಧಾರ್ತರಾಷ್ಟ್ರರ ಸೇನೆಯು ಪಾಂಡು-ಸೃಂಜಯರಿಂದ ವಧಿಸಲ್ಪಡುತ್ತಿತ್ತು. ಕಾಲನೇ ಧೃಷ್ಟದ್ಯುಮ್ನನ ಮೂಲಕ ಯೋಧರನ್ನು ಮೋಹಿಸಿ ಕಬಳಿಸುತ್ತಿದ್ದಾನೋ ಏನೋ ಎಂದು ಆ ತುಮುಲ ಸಂಗ್ರಾಮವನ್ನು ವೀಕ್ಷಿಸುವ ಜನರು ಅಂದುಕೊಂಡರು. ದುಷ್ಟ ನೃಪನ ರಾಷ್ಟ್ರವು ಹೇಗೆ ದುರ್ಭಿಕ್ಷ, ವ್ಯಾಧಿ ಮತ್ತು ಚೋರರ ಭಯದಿಂದ ಹೇಗೆ ಆಪತ್ತಿಗಳಗಾಗುವುದೋ ಹಾಗೆ ಕೌರವ ಸೇನೆಯು ಪಾಂಡವ ಸೇನೆಯನ್ನು ಎದುರಿಸಿ ಪಲಾಯನ ಮಾಡಿತು. ಸೇನೆಗಳ ಶಸ್ತ್ರ ಮತ್ತು ಕವಚಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಅವುಗಳ ಹೊಳಪು ಕಣ್ಣುಗಳನ್ನು ಕೋರೈಸುತ್ತಿದ್ದವು ಮತ್ತು ಧೂಳು ಕಣ್ಣುಗಳನ್ನು ಮುಸುಕಿತ್ತು.
ಮೂರು ಭಾಗಗಳಾದ ಸೈನ್ಯವನ್ನು ಪಾಂಡವರು ವಧಿಸುತ್ತಿರಲು ಕುಪಿತನಾದ ದ್ರೋಣನು ಪಾಂಚಾಲರನ್ನು ಶರಗಳಿಂದ ಸಂಹರಿಸತೊಡಗಿದನು. ಅವನ ಸಾಯಕಗಳಿಂದ ಸಂಹರಿಸಲ್ಪಟ್ಟ ಆ ಸೇನೆಗಳು ಮಣ್ಣು ಮುಕ್ಕಿದವು. ಅಗ ದ್ರೋಣನ ರೂಪವು ಉರಿಯುತ್ತಿರುವ ಕಾಲಾಗ್ನಿಯಂತೆ ಆಯಿತು. ಆ ಮಹಾರಥನು ರಥ, ಆನೆ, ಕುದುರೆ, ಪದಾತಿಗಳನ್ನು ಒಂದೊಂದೇ ಬಾಣಗಳಿಂದ ರಣದಲ್ಲಿ ಸಂಹರಿಸಿದನು. ಆಗ ರಣದಲ್ಲಿ ದ್ರೋಣನ ಚಾಪದಿಂದ ಹೊರಡುತ್ತಿದ್ದ ನಿಶಿತ ಬಾಣಗಳನ್ನು ಸಹಿಸಿಕೊಳ್ಳುವವರು ಪಾಂಡವರ ಸೇನೆಯಲ್ಲಿ ಯಾರೂ ಇರಲಿಲ್ಲ. ಸೂರ್ಯನಿಂದ ಬೇಯಿಸಲ್ಪಡುತ್ತಿದ್ದವರಂತೆ ದ್ರೋಣನ ಸಾಯಕಗಳಿಂದ ಬೆಂದು ಪಾರ್ಷತನ ಸೇನೆಯು ಅಲ್ಲಲ್ಲಿಯೇ ತಿರುಗತೊಡಗಿತು. ಹಾಗೆಯೇ ಪಾರ್ಷತನಿಂದ ಸಂಹರಿಸಲ್ಪಡುತ್ತಿದ್ದ ಕೌರವ ಸೇನೆಯು ಉರಿಯುತ್ತಿರುವ ಅಗ್ನಿಯಿಂದ ಎಲ್ಲ ಕಡೆಗಳಲ್ಲಿ ಸುಟ್ಟುಹೋಗುತ್ತಿರುವ ಒಣ ವನದಂತಾಯಿತು. ದ್ರೋಣ ಮತ್ತು ಪಾರ್ಷತರ ಸಾಯಕಗಳಿಂದ ವಧಿಸಲ್ಪಡುತ್ತಿದ್ದ ಸೇನೆಗಳಲ್ಲಿ ಸೈನಿಕರು ಪ್ರಾಣಗಳನ್ನೂ ತೊರೆದು ಪರಮ ಶಕ್ತಿಯಿಂದ ಯುದ್ಧಮಾಡುತ್ತಿದ್ದರು. ಯುದ್ಧಮಾಡುತ್ತಿರುವ ಕೌರವರಲ್ಲಿ ಅಥವಾ ಅವರಲ್ಲಿ ಭಯದಿಂದ ಸಂಗ್ರಾಮವನ್ನು ಬಿಟ್ಟು ಓಡಿ ಹೋದವರು ಯಾರೂ ಇರಲಿಲ್ಲ.
ಭೀಮಸೇನನನ್ನಾದರೋ ಸೋದರರಾದ ಮಹಾರಥ ವಿವಿಂಶತಿ-ಚಿತ್ರಸೇನ-ವಿಕರ್ಣರೂ, ಅವಂತಿಯ ವಿಂದಾನುವಿಂದರೂ, ವೀರ್ಯವಾನ್ ಕ್ಷೇಮಧೂರ್ತಿಯೂ - ನಿನ್ನ ಮೂವರು ಪುತ್ರರೂ ಮತ್ತು ಅವರ ಮೂವರು ಅನುಯಾಯಿಗಳೂ - ಸುತ್ತುವರೆದರು. ಕುಲಪುತ್ರ ಮಹಾರಥಿ ತೇಜಸ್ವೀ ಬಾಹ್ಲೀಕನು ಸೇನೆಯೊಂದಿಗೆ ಅಮಾತ್ಯರೊಂದಿಗೆ ದ್ರೌಪದೇಯರನ್ನು ತಡೆದನು. ಶೈಭ್ಯ ಗೋವಾಸನ ರಾಜನು ಒಂದುಸಾವಿರ ಯೋಧರೊಂದಿಗೆ ಕಾಶ್ಯ ಅಭಿಭುವಿನ ಪರಾಕ್ರಾಂತ ಮಗನನ್ನು ತಡೆದನು. ಪಾವಕನಂತೆ ಪ್ರಜ್ವಲಿಸುತ್ತಿದ್ದ ಕೌಂತೇಯ ಅಜಾತಶತ್ರು ರಾಜನನ್ನು ಶಲ್ಯರಾಜನು ಎದುರಿಸಿದನು. ಕ್ರುದ್ಧನಾಗಿದ್ದ ಅಮರ್ಷಣ, ಶೂರ ದುಃಶಾಸನನು ತನ್ನ ಸೇನೆಯನ್ನು ವ್ಯವಸ್ಥೆಯಲ್ಲಿರಿಸಿಕೊಂಡು ರಥವರ ಸಾತ್ಯಕಿಯನ್ನು ಎದುರಿಸಿದನು. ಸಂಜಯನೂ ಕೂಡ ಸೇನೆಯೊಂದಿಗೆ ಸನ್ನದ್ಧನಾಗಿ ಕವಚವನ್ನು ತೊಟ್ಟು ನಾಲ್ಕುನೂರು ಮಹೇಷ್ವಾಸರೊಂದಿಗೆ ಚೇಕಿತಾನನನ್ನು ತಡೆದನು. ಶಕುನಿಯಾದರೋ ಏಳುನೂರು ಗಾಂಧಾರರ ಸೇನೆಯೊಡಗೂಡಿ ಚಾಪ-ಶಕ್ತಿ-ಖಡ್ಗಗಳೊಂದಿಗೆ ಮಾದ್ರೀಪುತ್ರರನ್ನು ತಡೆದನು.
ಅವಂತಿಯ ಮಹೇಷ್ವಾಸ ವಿಂದಾನುವಿಂದರು ಮಿತ್ರರಿಗಾಗಿ ಪ್ರಾಣಗಳನ್ನು ತ್ಯಜಿಸಿ ಯುದ್ಧದಲ್ಲಿ ವಿರಾಟ ಮತ್ಸ್ಯನನ್ನು ಬಾಣಗಳಿಂದ ಹೊಡೆದು ಯದ್ಧಮಾಡುತ್ತಿದ್ದರು. ದಾರಿಯನ್ನು ಮಾಡಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದ ಶಿಖಂಡಿಯನ್ನು ಬಾಹ್ಲೀಕನು ಪ್ರಯತ್ನಿಸಿ ತಡೆದನು. ಅಂತಿಯವನು ಸೌವೀರರೊಂದಿಗೆ ಕ್ರೂರರಾದ ಪ್ರಭದ್ರಕರೊಡನಿದ್ದ ಕ್ರುದ್ಧ ರೂಪಿ ಪಾಂಚಾಲ್ಯ ಧೃಷ್ಟದ್ಯುಮ್ನನನ್ನು ತಡೆದನು. ಕ್ರೂರಯೋಧಿನಿ ರಾಕ್ಷಸ ಶೂರ ಘಟೋತ್ಕಚನನ್ನು ಅಲಾಯುಧನು ಆಕ್ರಮಣಿಸಿದನು. ಕ್ರುದ್ರರೂಪಿ ರಾಕ್ಷಸೇಂದ್ರ ಅಲಂಬುಸನನ್ನು ಮಹಾ ಸೇನೆಯೊಡಗೂಡಿ ಕುಂತಿಭೋಜನು ತಡೆದನು. ಸೈಂಧವನು ಕೃಪನೇ ಮೊದಲಾದ ಪರಮೇಷ್ವಾಸ ರಥರಿಂದ ರಕ್ಷಿತನಾಗಿ ಎಲ್ಲ ಸೇನೆಗಳ ಹಿಂದೆ ಇದ್ದನು. ಸೈಂಧವನ ಬೃಹತ್ತಮ ಚಕ್ರಗಳನ್ನು ಬಲದಲ್ಲಿ ದ್ರೌಣಿಯೂ ಎಡದಲ್ಲಿ ಸೂತಪುತ್ರನೂ ರಕ್ಷಿಸುತ್ತಿದ್ದರು. ಸೌಮದತ್ತಿಯ ನಾಯಕತ್ವದಲ್ಲಿ ನೀತಿವಂತರಾದ ಮಹೇಷ್ವಾಸರಾದ ಎಲ್ಲ ಯುದ್ಧವಿಶಾರದರಾದ ಕೃಪ, ವೃಷಸೇನ, ಶಲ, ಶಲ್ಯ ಮತ್ತು ದುರ್ಜಯರು ಸೈಂಧವನ ಹಿಂಭಾಗದ ರಕ್ಷಕರಾಗಿದ್ದರು. ಸೈಂಧವನಿಗೆ ರಕ್ಷಣೆಯ ಈ ವ್ಯವಸ್ಥೆಯನ್ನು ಮಾಡಿ ಅವರು ಯುದ್ಧಮಾಡಿದರು.
ದ್ರೋಣನ ಸೇನೆಯನ್ನು ಭೇದಿಸಲೋಸುಗ ರಣದಲ್ಲಿ ಪಾರ್ಥರು ವ್ಯೂಹದ ಎದಿರು ನಿಂತಿದ್ದ ಭಾರದ್ವಾಜನನ್ನು ಎದುರಿಸಿ ಅವನೊಂದಿಗೆ ಯುದ್ಧಮಾಡತೊಡಗಿದರು. ತನ್ನ ವ್ಯೂಹವನ್ನೂ ಸೈನಿಕರನ್ನೂ ರಕ್ಷಿಸುತ್ತಾ ರಣದಲ್ಲಿ ಮಹಾ ಯಶಸ್ಸನ್ನು ಬಯಸುತ್ತಾ ದ್ರೋಣನೂ ಕೂಡ ಪಾರ್ಥರೊಂದಿಗೆ ಹೋರಾಡಿದನು.
ಕೌರವ ಪುತ್ರರ ಹಿತೈಷಿಗಳಾದ ಅವಂತಿಯ ವಿಂದಾನುವಿಂದರು ಕ್ರುದ್ಧರಾಗಿ ವಿರಾಟನನ್ನು ಹತ್ತು ಶರಗಳಿಂದ ಹೊಡೆದರು. ವಿರಾಟನಾದರೋ ಅನುಗರೊಂದಿಗೆ ನಿಂತಿದ್ದ ಆ ಇಬ್ಬರು ಪರಾಕ್ರಾಂತರನ್ನು ಪರಾಕ್ರಮದೊಂದಿಗೆ ಯುದ್ಧಮಾಡತೊಡಗಿದನು. ವನದಲ್ಲಿ ಸಿಂಹಕ್ಕೂ ಮದಿಸಿದ ಎರಡು ಸಲಗಗಳಿಗೂ ನಡೆಯುವಂತೆ ಅವರ ನಡುವೆ ನೀರಿನಂತೆ ರಕ್ತವನ್ನು ಸುರಿಸುವ ದಾರುಣವಾದ ಯುದ್ಧವು ನಡೆಯಿತು.
ಯಾಜ್ಞಸೇನಿಯು ಬಾಹ್ಲೀಕನನ್ನು ಮರ್ಮ-ಅಸ್ತಿಗಳನ್ನು ಭೇದಿಸಬಲ್ಲ ಘೋರವಾದ ತೀಕ್ಷ್ಣವಾದ ವಿಶಿಖಗಳಿಂದ ಹೊಡೆದನು. ಆಗ ಬಾಹ್ಲೀಕನು ಕ್ರುದ್ಧನಾಗಿ ಯಾಜ್ಞಸೇನಿಯನ್ನು ಒಂಭತ್ತು ಹೇಮಪುಂಖಗಳಿರುವ ಶಿಲಾಶಿತ ನತಪರ್ವಗಳಿಂದ ಜೋರಾಗಿ ಹೊಡೆದನು. ಆಗ ಅಲ್ಲಿ ಹೇಡಿಗಳಿಗೆ ಭಯವನ್ನುಂಟುಮಾಡುವ, ಶೂರರ ಹರ್ಷವನ್ನು ಹೆಚ್ಚಿಸುವ ಶರ-ಶಕ್ತಿ ಸಮೂಹಗಳ ಘೋರ ಯುದ್ಧವು ನಡೆಯಿತು. ಅವರಿಬ್ಬರೂ ಬಿಡುತ್ತಿದ್ದ ಬಾಣಗಳಿಂದ ಅಂತರಿಕ್ಷ ಮತ್ತು ದಿಕ್ಕುಗಳೂ ಮುಚ್ಚಿಹೋಗಿ ಎಲ್ಲಿ ಏನಾಗುತ್ತದೆಯೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆನೆಯು ಮತ್ತೊಂದು ಆನೆಯೊಂದಿಗೆ ಹೇಗೋ ಹಾಗೆ ಶೈಬ್ಯ ಗೋವಾಸನು ಯುದ್ಧದಲ್ಲಿ ಸೈನ್ಯದೊಂದಿಗೆ ಮಹಾರಥ ಕಾಶ್ಯಪುತ್ರನೊಡನೆ ಯುದ್ಧಮಾಡಿದನು. ಮನಸ್ಸು ಪಂಚೇಂದ್ರಿಯಗಳೊಡನೆ ಹೇಗೋ ಹಾಗೆ ಸಂರಬ್ಧನಾದ ಬಾಹ್ಲೀಕ ರಾಜನು ರಣದಲ್ಲಿ ಮಹಾರಥ ದ್ರೌಪದೇಯರೊಡನೆ ಹೋರಾಡುತ್ತಾ ಶೋಭಿಸಿದನು. ಇಂದ್ರಿಯ ವಿಷಯಗಳು ಹೇಗೆ ದೇಹವನ್ನು ಕಲಕುತ್ತಿರುತ್ತವೆಯೋ ಹಾಗೆ ಯುದ್ಧಮಾಡುತ್ತಿದ್ದ ಅವರು ಅವನನ್ನು ಎಲ್ಲ ಕಡೆಗಳಿಂದ ಶರೌಘಗಳಿಂದ ಪೀಡಿಸುತ್ತಿದ್ದರು.
ಸಾತ್ಯಕಿಯನ್ನು ದುಃಶಾಸನನು ತೀಕ್ಷ್ಣ ಸಾಯಕಗಳಿಂದ ಮತ್ತು ಒಂಭತ್ತು ನತಪರ್ವಗಳಿಂದ ಹೊಡೆದನು. ಮಹೇಷ್ವಾಸ ಧನ್ವಿಯಿಂದ ಬಲವತ್ತಾಗಿ ಬಾಣಗಳಿಂದ ಹೊಡೆಯಲ್ಪಟ್ಟು ಅತಿಯಾಗಿ ಗಾಯಗೊಂಡ ಸಾತ್ಯಕಿಯು ಕ್ಷಣಕಾಲ ಮೂರ್ಛಿತನಾದನು. ತಕ್ಷಣವೇ ಎಚ್ಚೆತ್ತು ವಾರ್ಷ್ಣೇಯನು ಹತ್ತು ಕಂಕಪತ್ರಿ ಸಾಯಕಗಳಿಂದ ದುಃಶಾಸನನನ್ನು ಹೊಡೆದನು. ಅನ್ಯೋನ್ಯರನ್ನು ದೃಢವಾಗಿ ಹೊಡೆದು ಗಾಯಗೊಳಿಸಿ ಗಾಯಗೊಂಡ ಅವರಿಬ್ಬರೂ ಸಮರದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ರಾರಾಜಿಸುತ್ತಿದ್ದರು.
ಕುಂತಿಭೋಜನ ಶರಗಳಿಂದ ಗಾಯಗೊಂಡಿದ್ದ ಅಲಂಬುಸನಾದರೋ ಪರಮ ಸೊಬಗಿನಿಂದ ಹೂಬಿಟ್ಟ ಮುತ್ತುಗದ ಮರದಂತೆ ಶೋಭಿಸಿದನು. ಅವನು ಕುಂತಿಭೋಜನನ್ನು ಅನೇಕ ಆಯಸಗಳಿಂದ ಹೊಡೆದು ಗಾಯಗೊಳಿಸಿ ಕೌರವ ಸೇನೆಗಳ ಎದಿರು ಭೈರವ ಕೂಗನ್ನು ಕೂಗಿದನು. ಹಿಂದೆ ಶಕ್ರ-ಜಂಭಾಸುರರಂತೆ ಸಮರದಲ್ಲಿ ಪರಸ್ಪರರೊಡನೆ ಯುದ್ಧಮಾಡುತ್ತಿದ್ದ ಆ ಇಬ್ಬರು ಶೂರರನ್ನು ಎಲ್ಲರೂ ನೋಡಿದರು.
ವೈರವನ್ನು ಸಾಧಿಸಿದ್ದ ರಭಸದ ಶಕುನಿಯನ್ನು ಸಂಗ್ರಾಮದಲ್ಲಿ ಕ್ರುದ್ಧರಾದ ಮಾದ್ರೀಪುತ್ರರಿಬ್ಬರೂ ಶರಗಳಿಂದ ಅರೆದರು. ಧೃತರಾಷ್ಟ್ರನಿಂದ ಹುಟ್ಟಿದ, ಕರ್ಣನಿಂದ ವೃದ್ಧಿಸಲ್ಪಟ್ಟ, ಧೃತರಾಷ್ಟ್ರ ಪುತ್ರರು ಇರಿಸಿಕೊಂಡಿದ್ದ ಕ್ರೋಧವೆಂಬ ಆ ಅಗ್ನಿಯು ಇಡೀ ಭೂಮಿಯ ಎಲ್ಲವನ್ನೂ ಭಸ್ಮಮಾಡಲು ತೊಡಗಿತು. ಆ ಮೂಲದಿಂದ ಜನಕ್ಷಯಯವು ನಡೆಯಿತು. ಪಾಂಡುಪುತ್ರರಿಬ್ಬರ ಶರಗಳಿಂದ ವಿಮುಖನಾಗಿಸಿಕೊಂಡ ಯುದ್ಧದಲ್ಲಿ ಸ್ವಲ್ಪವೇ ಪರಾಕ್ರಮವುಳ್ಳ ಶಕುನಿಯು ಏನು ಮಾಡಬೇಕೆಂದು ತಿಳಿಯಲಾರದೇ ಹೋದನು. ಅವನು ವಿಮುಖನಾಗಿದ್ದುದನ್ನು ನೋಡಿ ಮಾದ್ರೀಪುತ್ರರು ಮಹಾಗಿರಿಯ ಮೇಲೆ ಮೋಡಗಳು ಹೇಗೋ ಹಾಗೆ ಅವನ ಮೇಲೆ ಪುನಃ ಬಾಣಗಳ ಮಳೆಯನ್ನು ಸುರಿಸಿದರು. ಅನೇಕ ಸನ್ನತಪರ್ವ ಶರಗಳಿಂದ ಹೊಡೆಯಲ್ಪಟ್ಟ ಸೌಬಲನು ವೇಗವಾಗಿ ಹೋಗುವ ಕುದುರೆಗಳ ಸಹಾಯದಿಂದ ದ್ರೋಣನ ಸೇನೆಯನ್ನು ಬಿಟ್ಟು ಓಡಿಹೋದನು. ಆಗ ಘಟೋತ್ಕಚನು ರಾಕ್ಷಸ ಅಲಂಬುಸನನ್ನು ಯುದ್ಧದಲ್ಲಿ ಮಧ್ಯಮ ವೇಗವನ್ನು ಬಳಸಿ ಆಕ್ರಮಣಿಸಿದನು. ಅವರ ಯುದ್ಧವು ಹಿಂದೆ ರಾಮ-ರಾವಣರ ನಡುವೆ ನಡೆದ ಯುದ್ಧದಂತೆ ವಿಚಿತ್ರವಾಗಿ ಕಾಣುತ್ತಿತ್ತು. ಯುಧಿಷ್ಠಿರನು ಮದ್ರರಾಜನನ್ನು ಐನೂರು ಬಾಣಗಳಿಂದ ಹೊಡೆದು ಪುನಃ ಏಳರಿಂದ ಹೊಡೆದನು. ಆಗ ಅವರ ನಡುವೆ ಹಿಂದೆ ಶಂಬರ ಮತ್ತು ಅಮರರಾಜರ ನಡುವೆ ಮಹಾಯುದ್ಧವು ನಡೆದಂತೆ ಅತ್ಯದ್ಭುತ ಯುದ್ಧವು ನಡೆಯಿತು. ವಿವಿಂಶತಿ, ಚಿತ್ರಸೇನ ಮತ್ತು ವಿಕರ್ಣರು ಮಹಾಸೇನೆಗಳಿಂದ ಸುತ್ತುವರೆಯಲ್ಪಟ್ಟು ಭೀಮಸೇನನೊಂದಿಗೆ ಯುದ್ಧಮಾಡಿದರು.
ದ್ರೋಣ-ಧೃಷ್ಟದ್ಯುಮ್ನರ ಯುದ್ಧ
ಆಗ ಆ ಲೋಮಹರ್ಷಣ ಸಂಗ್ರಾಮವು ಪ್ರಾರಂಭವಾಗಲು ಪಾಂಡವರು ಮೂರು ಭಾಗಗಳಾಗಿ ಒಡೆದಿದ್ದ ಕೌರವೇಯರ ಸೇನೆಯೊಂದಿಗೆ ಹೋರಾಡಿದರು. ಭೀಮಸೇನನು ಜಲಸಂಧನನ್ನು ಎದುರಿಸಿದನು. ಯಧಿಷ್ಠಿರನು ಸೇನೆಯೊಂದಿಗೆ ಕೃತವರ್ಮನನ್ನು ಎದುರಿಸಿದನು. ಸೂರ್ಯನು ಕಿರಣಗಳನ್ನು ಪಸರಿಸುವಂತೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು. ಆಗ ತ್ವರೆಯಲ್ಲಿದ್ದ ಪರಸ್ಪರ ಸಂಕ್ರುದ್ಧರಾಗಿದ್ದ ಕುರುಗಳ ಮತ್ತು ಸೋಮಕರ ಸರ್ವಧನ್ವಿಗಳ ನಡುವೆ ಯುದ್ಧವು ನಡೆಯಿತು. ಹಾಗೆ ಮಹಾಭಯದ ವಿನಾಶವು ನಡೆಯುತ್ತಿರಲು ಎರಡೂ ಸೇನೆಗಳಲ್ಲಿ ಭಯಗೊಳ್ಳದೇ ಯುದ್ಧಮಾಡುತ್ತಿದ್ದರು. ಬಲೀ ದ್ರೋಣನು ಬಲವಂತನಾದ ಪಾಂಚಾಲಪುತ್ರನೊಂದಿಗೆ ಯುದ್ಧಮಾಡಿದನು. ಅವನು ಕಳುಹಿಸಿದ ಬಾಣಗಳ ಸಮೂಹಗಳು ಎಲ್ಲಕಡೆ ತುಂಬಿಕೊಳ್ಳಲು ಅದೊಂದು ಅದ್ಭುತವಾಯಿತು. ಕಮಲಗಳ ವನವನ್ನು ಎಲ್ಲಕಡೆಗಳಿಂದ ಧ್ವಂಸಗೊಳಿಸುವಂತೆ ದ್ರೋಣ ಮತ್ತು ಪಾಂಚಾಲ್ಯರು ಅನೇಕ ನರರ ಶಿರಗಳನ್ನು ಉರುಳಿಸಿದರು.
ಸೇನೆಗಳಲ್ಲಿ ಎಲ್ಲ ಕಡೆಗಳಲ್ಲಿ ವೀರರ ವಸ್ತ್ರಾಭರಣ ಶಸ್ತ್ರಗಳು, ಧ್ವಜ-ಕವಚ-ಆಯುಧಗಳು ಹರಡಿ ಬಿದ್ದಿದ್ದವು. ಬಂಗಾರದ ಕವಚಗಳು ರಕ್ತದಿಂದ ತೋಯ್ದು ಹೋಗಿ ಮಿಂಚಿನಿಂದ ಕೂಡಿದ ಮೇಘಗಳ ರಾಶಿಗಳಂತೆ ಕಾಣುತ್ತಿದ್ದವು. ಮಹಾರಥರು ತಾಲಮಾತ್ರದ ಚಾಪಗಳನ್ನು ಸೆಳೆಯುತ್ತಾ ಪತತ್ರಿಗಳಿಂದ ಯುದ್ಧದಲ್ಲಿ ಆನೆ-ಕುದುರೆ-ನರರನ್ನು ಬೀಳಿಸುತ್ತಿದ್ದರು. ಮಹಾತ್ಮ ಶೂರರು ಪ್ರಹರಿಸುತ್ತಿದ್ದ ಖಡ್ಗ, ಗುರಾಣಿ, ಬಿಲ್ಲುಗಳು, ಶಿರಗಳು, ಕವಚಗಳು ಹರಡಿ ಬಿದ್ದಿದ್ದವು. ಆ ಪರಮ ಸಂಕುಲಯುದ್ಧದಲ್ಲಿ ಎಲ್ಲ ಕಡೆಗಳಲ್ಲಿ ಮೇಲೆ ಏಳುತ್ತಿದ್ದ ಅನೇಕ ಕಬಂಧಗಳು ಕಾಣುತ್ತಿದ್ದವು. ಹದ್ದುಗಳು, ಕಂಕಗಳು, ತೋಳಗಳು, ನರಿಗಳು, ಕಾಗೆಗಳು, ಜಂಬುಕಗಳು ಮತ್ತು ಇನ್ನೂ ಅನೇಕ ಮಾಂಸಾಹಾರಿಗಳು ಮಾಂಸಗಳನ್ನು ಭಕ್ಷಿಸುತ್ತಿರುವುದು, ರಕ್ತವನ್ನು ಕುಡಿಯುತ್ತಿರುವುದು, ಕೇಶಗಳನ್ನೂ, ಎಲುಬುಗಳನ್ನು ನೆಕ್ಕುತ್ತಿರುವುದು, ಅನೇಕ ಶರೀರಗಳಿಂದ ಶರೀರದ ಅವಯವಗಳನ್ನು ಕಿತ್ತು ಎಳೆಯುತ್ತಿರುವುದು, ನರರು-ಅಶ್ವ-ಗಜ ಸಮೂಹಗಳ ಶಿರಗಳನ್ನೂ ಎಳೆಯುತ್ತಿರುವುದು ಅಲ್ಲಲ್ಲಿ ಕಂಡಿತು. ಅಸ್ತ್ರವಿದರಾದ, ರಣದೀಕ್ಷೆಯ ದೀಕ್ಷಿತರಾದ, ರಣದಲ್ಲಿ ಜಯವನ್ನು ಬಂiಸುವ ಶರಧಾರಿಗಳು ಜೋರಾಗಿ ಯುದ್ಧ ಮಾಡಿದರು. ಯುದ್ಧರಂಗದಲ್ಲಿ ಇಳಿದಿದ್ದ ನರರು ರಣದಲ್ಲಿ ನಿನ್ನವರು ಬಹುವಿಧದ ವರಸೆಗಳಲ್ಲಿ ಖಡ್ಗಗಳನ್ನು ತಿರುಗಿಸುತ್ತಾ, ಋಷ್ಟಿ-ಶಕ್ತಿ-ಪ್ರಾಸ-ಶೂಲ-ತೋಮರ-ಪಟ್ಟಿಶ-ಗದೆ-ಪರಿಘ ಮತ್ತು ಇನ್ನೂ ಇತರ ಆಯುಧಗಳಿಂದ ಮತ್ತು ಭುಜಗಳಿಂದಲೂ ಅನ್ಯೋನ್ಯರನ್ನು ಕ್ರುದ್ಧರಾಗಿ ಸಂಹರಿಸಿದರು. ರಥಿಗಳು ರಥಿಗಳೊಡನೆ, ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ, ಮಾತಂಗರು ಶ್ರೇಷ್ಠ ಮಾತಂಗರೊಂಡನೆ, ಪದಾತಿಗಳು ಪದಾತಿಗಳೊಡನೆ, ಮತ್ತು ಇತರರು ಉನ್ಮತ್ತರಾದವರಂತೆ ಕ್ರೀಡಾಂಗಣದಲ್ಲಿ ಸಂಚರಿಸುತ್ತಿರೋ ಎನ್ನುವವರಂತೆ ಅನ್ಯೋನ್ಯರನ್ನು ಕಿರುಚಾಡಿ ಕರೆದರು ಮತ್ತು ಅನ್ಯೋನ್ಯರನ್ನು ಸಂಹರಿಸಿದರು.
ಮರ್ಯಾದೆಗಳಿಲ್ಲದೇ ನಡೆಯುತ್ತಿರುವ ಆ ಯುದ್ಧದಲ್ಲಿ ಧೃಷ್ಟದ್ಯುಮ್ನನು ತನ್ನ ಕುದುರೆಗಳು ದ್ರೋಣನ ಕುದುರೆಗಳೊಡನೆ ಸೇರಿಸಿದನು. ಗಾಳಿಯ ವೇಗದಲ್ಲಿ ಹೋಗಬಲ್ಲ ಆ ಪಾರಿವಾಳದ ಬಣ್ಣದ ಕುದುರೆಗಳು ಕೆಂಪುಬಣ್ಣದ ಕುದುರೆಗಳೊಡನೆ ಸೇರಿ ರಣರಂಗದಲ್ಲಿ ಅವು ಮಿಂಚಿನಿಂದೊಡಗೂಡಿದ ಮೋಡಗಳಂತೆ ಚೆನ್ನಾಗಿ ಶೋಭಿಸಿದವು. ದ್ರೋಣನು ತುಂಬಾ ಹತ್ತಿರ ಬಂದುದನ್ನು ನೋಡಿದ ವೀರ ಧೃಷ್ಟದ್ಯುಮ್ನನು ಧನುಸ್ಸನ್ನು ಬಿಸುಟು ಖಡ್ಗ-ಗುರಾಣಿಗಳನ್ನು ತೆಗೆದುಕೊಂಡನು. ಪಾರ್ಷತನು ಈಶಾದಂಡವನ್ನು ಹಿಡಿದು ಹಾರಿ ದ್ರೋಣನ ರಥವನ್ನು ಪ್ರವೇಶಿಸಿ, ದುಷ್ಕರವಾದ ಕರ್ಮವನ್ನೇ ಮಾಡಿದನು. ನೊಗದ ಮೇಲೆ, ಸ್ವಲ್ಪ ಸಮಯ ನೊಗದ ಜೋಡಿನ ಮೇಲೆ ಮತ್ತು ಕುದುರೆಗಳ ಮೇಲೆ ನಿಂತುಕೊಂಡು ಸಂಚರಿಸುತ್ತಿದ್ದನು. ಕೆಂಪುಕುದುರೆಗಳ ಮೇಲೆ ನಿಂತು ಖಡ್ಗವನ್ನು ತಿರುಗಿಸುತ್ತಿದ್ದ ಅವನನ್ನು ಹೊಡೆಯಲು ದ್ರೋಣನಿಗೆ ಅವಕಾಶವೇ ಸಿಗಲಿಲ್ಲ. ಅದೊಂದು ಅದ್ಭುತವಾಗಿತ್ತು. ವನದಲ್ಲಿ ಮಾಂಸದ ಆಸೆಯಿಂದ ಗಿಡುಗವು ಹಾರಿ ಎರಗುವಂತೆ ದ್ರೋಣನನ್ನು ಕೊಲ್ಲಲು ಬಯಸಿದ ಅವನ ವರ್ತನೆಯಾಗಿತ್ತು. ಆಗ ಬಲೀ ದ್ರೋಣನು ನೂರು ಶರಗಳಿಂದ ದ್ರುಪದಪುತ್ರನ ನೂರುಚಂದ್ರರಿದ್ದ ಗುರಾಣಿಯನ್ನೂ, ಹತ್ತು ಶರಗಳಿಂದ ಖಡ್ಗವನ್ನೂ, ಅರವತ್ನಾಲ್ಕು ಬಾಣಗಳಿಂದ ಕುದುರೆಗಳನ್ನೂ, ಭಲ್ಲಗಳೆರಡರಿಂದ ಧ್ವಜ-ಚತ್ರಗಳನ್ನು ಮತ್ತು ಇನ್ನೆರಡರಿಂದ ಅವನ ಪಾರ್ಷ್ಣಿಸಾರಥಿಗಳನ್ನೂ ಹೊಡೆದನು. ತ್ವರೆಮಾಡಿ ಇನ್ನೊಂದು ಜೀವಿತವನ್ನು ಅಂತ್ಯಗೊಳಿಸಬಲ್ಲ ಬಾಣವನ್ನು ವಜ್ರಧರನು ವಜ್ರವನ್ನು ಹೇಗೋ ಹಾಗೆ ಆಕರ್ಣಪೂರ್ಣಾಂತವಾಗಿ ಎಳೆದು ಪ್ರಯೋಗಿಸಿದನು. ಆ ಬಾಣವನ್ನು ಹದಿನಾಲ್ಕು ಬಾಣಗಳಿಂದ ತುಂಡರಿಸಿ ಸಾತ್ಯಕಿಯು ಆಚಾರ್ಯಮುಖ್ಯನ ಹಿಡಿತದಿಂದ ಧೃಷ್ಟದ್ಯುಮ್ನನನ್ನು ಬಿಡುಗಡೆಗೊಳಿಸಿದನು.
ಸಿಂಹದಿಂದ ಹಿಡಿಯಲ್ಪಟ್ಟಿದ್ದ ಜಿಂಕೆಯನ್ನು ಹೇಗೋ ಹಾಗೆ ಆ ಶಿನಿಪುಂಗವನು ಪಾಂಚಾಲ್ಯನನ್ನು ದ್ರೋಣನಿಂದ ಬಿಡುಗಡೆಗೊಳಿಸಿದನು. ಮಹಾಹವದಲ್ಲಿ ಪಾಂಚಾಲ್ಯನನ್ನು ಸಾತ್ಯಕಿಯು ರಕ್ಷಿಸಿದುದನ್ನು ನೋಡಿ ದ್ರೋಣನು ತ್ವರೆಮಾಡಿ ಇಪ್ಪತ್ತಾರು ಬಾಣಗಳಿಂದ ಅವನನ್ನು ಹೊಡೆದನು. ಆಗ ಶಿನಿಯ ಪೌತ್ರನು ಸೃಂಜಯರನ್ನು ನುಂಗುವಂತಿದ್ದ ದ್ರೋಣನ ಎದೆಗೆ ಗುರಿಯಿಟ್ಟು ನಿಶಿತವಾದ ಇಪ್ಪತ್ತಾರು ಬಾಣಗಳಿಂದ ತಿರುಗಿ ಹೊಡೆದನು. ದ್ರೋಣನು ಸಾತ್ವತನೊಡನೆ ಯುದ್ಧದಲ್ಲಿ ತೊಡಗಲು ವಿಜಯೇಚ್ಛಿಗಳಾದ ಪಾಂಚಾಲ ರಥರು ಧೃಷ್ಟದ್ಯುಮ್ನನನ್ನು ಬೇಗನೆ ಬಿಡಿಸಿದರು.
ದ್ರೋಣ-ಸಾತ್ಯಕಿಯರ ಯುದ್ಧ
ಆಗ ಕ್ರೋಧವೇ ವಿಷವಾಗುಳ್ಳ, ಧನುಸ್ಸೇ ತೆರೆದ ಬಾಯಿಯಂತಿರುವ, ತೀಕ್ಷ್ಣ ಬಾಣಗಳೇ ಹಲ್ಲುಗಳಾಗುಳ್ಳ, ನಿಶಿತ ನಾರಾಚಗಳೇ ದವಡೆಗಳಾಗುಳ್ಳ, ಕೋಪ-ಅಸಹನೆಗಳಿಂದ ಕಣ್ಣು ಕೆಂಪಾಗಿರುವ ದ್ರೋಣನು ಮಹಾ ಹೆಬ್ಬಾವಿನಂತೆ ನಿಟ್ಟುಸಿರು ಬಿಡುತ್ತಾ ಪರ್ವತಗಳನ್ನೂ ದಾಟಿ ಆಕಾಶದಲ್ಲಿ ಹಾರಿಹೋಗಬಲ್ಲ ಮಹಾವೇಗವುಳ್ಳ ಕೆಂಪು ಕುದುರೆಗಳೊಂದಿಗೆ ಮುದಿತನಾಗಿ ಎಲ್ಲ ಕಡೆ ರುಕ್ಮಪುಂಖ ಶರಗಳನ್ನು ಪ್ರಯೋಗಿಸುತ್ತಾ ಯುಯುಧಾನನನ್ನು ಆಕ್ರಮಣಿಸಿದನು. ಶರಗಳ ಪತನವೇ ಮಹಾಮಳೆಯಂತಿದ್ದ, ರಥಘೋಷವೇ ಗುಡುಗಿನಂತಿರುವ, ಬಿಲ್ಲಿನ ಟೇಂಕಾರವೇ ಸಿಡುಲಿನಂತಿರುವ, ಅನೇಕ ನಾರಾಚಗಳೇ ಮಿಂಚಿನಂತಿರುವ, ಶಕ್ತಿ-ಖಡ್ಗಗಳೇ ಮಿಂಚಿನ ಮಾಲೆಗಳಂತಿರುವ, ಕ್ರೋಧವೆಂಬ ವೇಗದಿಂದ ಹುಟ್ಟಿದ, ಕುದುರೆಗಳೆಂಬ ಗಾಳಿಯಿಂದ ಪ್ರಚೋದಿಸಲ್ಪಟ್ಟ ದ್ರೋಣನೆಂಬ ಮಹಾಮೇಘವನ್ನು ತಡೆಯಲಾಗುತ್ತಿರಲಿಲ್ಲ. ಅವನು ಹೀಗೆ ಮೇಲೇರಿ ಬರುತ್ತಿರುವುದನ್ನು ನೋಡಿ ಶೂರ ಶೈನೇಯನು ಜೋರಾಗಿ ನಕ್ಕು ಸೂತನಿಗೆ ಹೇಳಿದನು: “ಈತನು ತನ್ನ ಕರ್ಮಗಳನ್ನು ಬಿಟ್ಟಿರುವ ಕ್ರೂರ ಬ್ರಾಹ್ಮಣನಲ್ಲವೇ? ದುಃಖ-ಭಯಗಳಿಂದ ರಾಜ ಧಾರ್ತರಾಷ್ಟ್ರನ ಆಶ್ರಯದಲ್ಲಿರುವ, ರಾಜಪುತ್ರರ ಆಚಾರ್ಯ, ಸತತವೂ ತಾನೇ ಶೂರನೆಂದು ತಿಳಿದುಕೊಂಡಿರುವ ಅವನ ಬಳಿ ಶೀಘ್ರವಾದ ಕುದುರೆಗಳನ್ನು ಸಂತೋಷದಿದ ಕೊಂಡೊಯ್ಯಿ!”
ಆಗ ಬೆಳ್ಳಿಯ ಬಣ್ಣದ, ಗಾಳಿಯ ವೇಗವುಳ್ಳ, ಮಾಧವನ ಉತ್ತಮ ಕುದುರೆಗಳನ್ನು ದ್ರೋಣನ ಎದುರಿಗೆ ಶೀಘ್ರವಾಗಿ ಕೊಂಡೊಯ್ದನು. ಬಾಣಗಳ ಜಾಲಗಳಿಂದ ಆವೃತವಾಗಿ ಘೋರ ಅಂಧಕಾರವು ಕವಿಯಲು ಇನ್ನೊಬ್ಬರಿಗೆ ಕಾಣದಂತೆ ಆ ಶೂರರ ಯುದ್ಧವು ನಡೆಯಿತು. ಆಗ ಅಸ್ತ್ರವಿದರಾದ ನರಸಿಂಹರಾದ ದ್ರೋಣ-ಸಾತ್ವತರು ಸುರಿಸುತ್ತಿದ್ದ ಶರವೃಷ್ಟಿಗಳಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ಮಳೆಯ ನೀರು ಬೀಳುವಂತೆ ಬಾಣಗಳು ಬೀಳುವ ಶಬ್ಧವು ಶಕ್ರನು ಬಿಡುಗಡೆ ಮಾಡಿದ ಮಿಂಚಿನ ಶಬ್ಧದಂತೆ ಕೇಳುತ್ತಿತ್ತು. ನಾರಾಚಗಳೇ ಬಹುವಾಗಿದ್ದ ಶರಗಳ ರೂಪವು ಸರ್ಪಗಳ ವಿಷದ ಹಲ್ಲುಗಳಂತಿದ್ದವು. ಅವರ ಧನುಸ್ಸಿನ ಸುದಾರುಣ ಟೇಂಕಾರ ಶಬ್ಧವು ವಜ್ರದಿಂದ ಹೊಡೆಯಲ್ಪಟ್ಟ ಶೈಲಶೃಂಗಗಳಲ್ಲಿ ಉಂಟಾಗುವ ಶಬ್ಧಕ್ಕೆ ಸಮನಾಗಿತ್ತು. ಇಬ್ಬರ ರಥಗಳೂ, ಕುದುರೆಗಳೂ ಮತ್ತು ಸಾರಥಿಯರೂ ಅವರು ಬಿಡುತ್ತಿದ್ದ ರುಕ್ಮಪುಂಖದ ಶರಗಳಿಂದ ಹೊಡೆಯಲ್ಪಟ್ಟು ವಿಚಿತ್ರರೂಪವನ್ನು ತಾಳಿದ್ದವು. ಪೊರೆಕಳಚಿದ ಸರ್ಪಗಳಂತೆ ನಿರ್ಮಲವಾಗಿದ್ದ ಮತ್ತು ನೇರವಾಗಿ ಹೋಗುವ ನಾರಾಚಗಳ ಪರಸ್ಪರ ಸಂಘರ್ಷವು ಮಹಾ ಭಯಂಕರವಾಗಿತ್ತು.
ಇಬ್ಬರೂ ವಿಜಯಾಕಾಂಕ್ಷಿಗಳ ಚತ್ರಗಳು ಬಿದ್ದವು, ಧ್ವಜಗಳೂ ಬಿದ್ದವು. ಇಬ್ಬರ ಅಂಗಾಂಗಗಳೂ ರಕ್ತದಿಂದ ತೋಯ್ದುಹೋಗಿದ್ದವು. ಜೀವವನ್ನು ಅಂತ್ಯಗೊಳಿಸಬಲ್ಲ ಶರಗಳಿಂದ ಅನ್ಯೋನ್ಯರನ್ನು ಹೊಡೆಯುತ್ತಿದ್ದ ಅವರ ದೇಹಗಳಿಂದ ಆನೆಗಳಿಂದ ಸುರಿಯುವ ಮದೋದಕದಂತೆ ರಕ್ತವು ಸುರಿಯುತ್ತಿತ್ತು. ಗರ್ಜನ, ಕೂಗುಗಳೂ ಶಂಖದುಂದುಭಿಗಳ ನಿಸ್ವನವೂ ನಿಂತಿತು. ಯಾರೂ ಶಬ್ಧವನ್ನು ಮಾಡಲಿಲ್ಲ. ಸೇನೆಗಳು ಮತ್ತು ಯೋಧರು ಯುದ್ಧವನ್ನು ನಿಲ್ಲಿಸಿ ಸುಮ್ಮನಾದರು. ಕುತೂಹಲದಿಂದ ಜನರು ಅವರಿಬ್ಬರ ದ್ವೈರಥಯುದ್ಧವನ್ನು ನೋಡತೊಡಗಿದರು. ರಥಿಗಳು, ಗಜಾರೋಹಿಗಳು, ಅಶ್ವಾರೋಹಿಗಳು ಮತ್ತು ಪದಾತಿಗಳು ಆ ಇಬ್ಬರು ರಥರ್ಷಭರನ್ನೂ ಸುತ್ತುವರೆದು ಎವೆಯಿಕ್ಕದೇ ನೋಡುತ್ತಿದ್ದರು. ಗಜಸೇನೆಗಳೂ ಹಾಗೆಯೇ ಅಶ್ವಸೇಸೆಗಳೂ ತಟಸ್ಥವಾದವು. ಹಾಗೆಯೇ ರಥವಾಹಿನಿಗಳೂ ಇನ್ನೊಂದು ವ್ಯೂಹವಾಗಿ ವ್ಯವಸ್ಥಿತಗೊಂಡವು. ಮುಕ್ತಾವಿದ್ರುಮಚಿತ್ರಗಳಿಂದ, ಮಣಿಕಾಂಚನಭೂಷಣಗಳಿಂದ, ಬಣ್ಣಬಣ್ಣದ ಧ್ವಜ-ಆಭರಣಗಳಿಂದ, ಬಂಗಾರದ ಕವಚಗಳಿಂದ, ವೈಜಯಂತೀ ಪತಾಕೆಗಳಿಂದ, ಪರಿಸ್ತೋಮಗಳಿಗೆ ಹಾಸಿದ ಕಂಬಳಿಗಳಿಂದ, ಹೊಳೆಯುತ್ತಿದ್ದ ನಿಶಿತ ಶಸ್ತ್ರಗಳಿಂದ, ಕುದುರೆಗಳ ನೆತ್ತಿಯ ಮೇಲೆ ಕಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಪ್ರಕೀರ್ಣಗಳಿಂದ, ಆನೆಗಳ ಕುಂಭಮಾಲೆಗಳಿಂದ, ದಂತಾಭರಣಗಳಿಂದ ಕೂಡಿದ ಸೇನೆಗಳು ಬೇಸಗೆಯ ಕೊನೆಯಲ್ಲಿ ಬಲಾಕ ಪಕ್ಷಿಗಳ ಮತ್ತು ಮಿಂಚಿನ ಹುಳುಗಳಿಂದ ಕೂಡಿದ ಮೇಘಗಳ ಸಾಲುಗಳಂತೆ ಕಾಣುತ್ತಿದ್ದವು. ಮಹಾತ್ಮ ದ್ರೋಣನ ಮತ್ತು ಯುಯುಧಾನನ ಯುದ್ಧವನ್ನು ನೋಡಲು ಕೌರವರು ಮತ್ತು ಯುಧಿಷ್ಠಿರನ ಕಡೆಯವರು ಮತ್ತು ವಿಮಾನಗಳಲ್ಲಿ ಬ್ರಹ್ಮ-ಶಕ್ರರ ನಾಯಕತ್ವದಲ್ಲಿ ದೇವತೆಗಳು, ಸಿದ್ಧ-ಚಾರಣ ಸಮೂಹಗಳು ಮತ್ತು ವಿದ್ಯಾಧರರು, ಮಹಾ ನಾಗಗಳು ನಿಂತರು.
ಆ ಪುರುಷಸಿಂಹರ ಮುಂದೆ ಹೋಗುವ ಹಿಂದೆಬರುವ ವಿವಿಧ ರೀತಿಗಳನ್ನೂ, ವಿಚಿತ್ರವಾಗಿ ಬಾಣಗಳನ್ನು ಪ್ರಯೋಗಿಸುವುದನ್ನೂ, ಶಸ್ತ್ರಗಳಿಂದ ಗಾಯಗೊಳಿಸುತ್ತಿರುವುದನ್ನೂ ನೋಡಿ ವಿಸ್ಮಯವುಂಟಾಯಿತು. ಆ ಮಹಾಬಲಶಾಲಿಗಳಾದ ದ್ರೋಣ-ಸಾತ್ಯಕಿಯರು ತಮ್ಮ ಕೈಚಳಕವನ್ನು ಪ್ರದರ್ಶಿಸುತ್ತಾ ಅನ್ಯೋನ್ಯರನ್ನು ಶರಗಳಿಂದ ಹೊಡೆದರು. ಆಗ ಮಹಾದ್ಯುತಿ ದಾಶಾರ್ಹನು ಸುದೃಢ ಪತ್ರಿಗಳಿಂದ ದ್ರೋಣನ ಶರಗಳನ್ನೂ ಧನುಸ್ಸನ್ನೂ ಕತ್ತರಿಸಿದನು. ನಿಮಿಷಮಾತ್ರದಲ್ಲಿ ಭಾರದ್ವಾಜನು ಇನ್ನೊಂದು ಧನುಸ್ಸನ್ನು ಸಿದ್ಧಗೊಳಿಸಲು ಸಾತ್ಯಕಿಯು ಅದನ್ನೂ ತುಂಡರಿಸಿದನು. ಆಗ ಪುನಃ ತ್ವರೆಮಾಡಿ ದ್ರೋಣನು ಧನುಸ್ಸನ್ನು ಕೈಗೆತ್ತಿಕೊಂಡು ಸಜ್ಜುಗೊಳಿಸಲು, ಪುನಃ ಅದನ್ನು ನಿಶಿತ ಶರಗಳಿಂದ ತುಂಡುಮಾಡುತ್ತಿದ್ದನು. ಯುಯುಧಾನನ ಅತಿಮಾನುಷ ಕರ್ಮವನ್ನು ನೋಡಿ ದ್ರೋಣನು ಮನಸ್ಸಿನಲ್ಲಿಯೇ ಚಿಂತಿಸಿದನು: “ಪುರುಷವ್ಯಾಘ್ರರಾದ ರಾಮ, ಕಾರ್ತವೀರ್ಯ, ಧನಂಜಯ ಮತ್ತು ಭೀಷ್ಮರಲ್ಲಿರುವ ಅಸ್ತ್ರಬಲವು ಈ ಸಾತ್ವತಶ್ರೇಷ್ಠನಲ್ಲಿಯೂ ಇದೆ.”
ವಾಸವನದಂತಿದ ಅವನ ಹಸ್ತ ಚಳಕ ಮತ್ತು ವಿಕ್ರಮವನ್ನು ನೋಡಿ ದ್ವಿಜಸತ್ತಮ ದ್ರೋಣನು ಮನಸ್ಸಿನಲ್ಲಿಯೇ ಗೌರವಿಸಿದನು. ವಾಸವನೊಂದಿಗೆ ದೇವತೆಗಳೂ ಆ ಅಸ್ತ್ರವಿದನ ಶ್ರೇಷ್ಠತೆಯಿಂದ ತೃಪ್ತರಾದರು. ಆ ಶೀಘ್ರಕಾರಿ ಯುಯುಧಾನನ ಹಸ್ತ ಲಘುತ್ವವನ್ನು ಈ ಮೊದಲು ದೇವ-ಗಂಧರ್ವ-ಸಿದ್ಧ-ಚಾರಣ ಸಂಘಗಳು ನೋಡಿರಲಿಲ್ಲ. ಅವರಿಗೆ ದ್ರೋಣನ ಪರಾಕ್ರಮವು ತಿಳಿದಿತ್ತು. ಆಗ ದ್ರೋಣನು ಅಸ್ತ್ರಗಳಿಂದ ಯುದ್ಧಮಾಡತೊಡಗಿದನು. ಅವನ ಅಸ್ತ್ರಗಳನ್ನು ಅಸ್ತ್ರಗಳಿಂದ ಉತ್ತರಿಸಿ ಆ ಸಾತ್ಯಕಿಯು ನಿಶಿತ ಬಾಣಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು. ರಣದಲ್ಲಿ ಅವನ ಆ ಅತಿಮಾನುಷಕರ್ಮವನ್ನು ನೋಡಿ ಕೌರವ ಸೇನೆಯಲ್ಲಿದ್ದ ಯೋಗಜ್ಞರು ಗೌರವಿಸಿದರು. ದ್ರೋಣನು ಯಾವ ಅಸ್ತ್ರವನ್ನು ಪ್ರಯೋಗಿಸುತ್ತಿದ್ದನೋ ಅದೇ ಅಸ್ತ್ರವನ್ನು ಸಾತ್ಯಕಿಯೂ ಬಳಸುತ್ತಿದ್ದನು. ಅದರಿಂದ ಆಚಾರ್ಯನು ಸಂಭ್ರಾಂತನಾಗಿ ಯುದ್ಧಮಾಡಿದನು. ಆಗ ಆ ಧನುರ್ವೇದದ ಪಾರಂಗತನು ಕ್ರುದ್ಧನಾಗಿ ಯುಯುಧಾನನ ವಧೆಗಾಗಿ ದಿವ್ಯ ಅಸ್ತ್ರವನ್ನು ಪ್ರಕಟಿಸಿದನು.
ಆ ಮಹಾಘೋರವಾದ, ಶತ್ರುವನ್ನು ಕೊಲ್ಲಬಲ್ಲ ಆಗ್ನೇಯಾಸ್ತ್ರವನ್ನು ನೋಡಿ ಮಹೇಷ್ವಾಸ ಸಾತ್ಯಕಿಯು ದಿವ್ಯ ವರುಣಾಸ್ತ್ರವನ್ನು ಪ್ರಕಟಿಸಿದನು. ಆ ದಿವ್ಯಾಸ್ತ್ರಗಳನ್ನು ಧರಿಸಿದುದನ್ನು ನೋಡಿ ಮಹಾ ಹಾಹಾಕಾರವುಂಟಾಯಿತು. ಆಕಾಶದಲ್ಲಿ ಯಾವುವೂ, ಆಕಾಶಗಳಲ್ಲಿ ಸಂಚರಿಸುವವರೂ, ಸಂಚರಿಸುತ್ತಿರಲಿಲ್ಲ. ಆ ವಾರುಣ ಮತ್ತು ಆಗ್ನೇಯಾಸ್ತ್ರಗಳ ಬಾಣಗಳು ಒಂದುಗೂಡಿದಾಗ ಅವು ನಿಷ್ಫಲಗೊಂಡವು. ಆಗ ಭಾಸ್ಕರನೂ ಇಳಿಮುಖನಾದನು. ಆಗ ರಾಜಾ ಯುಧಿಷ್ಠಿರ, ಪಾಂಡವ ಭೀಮಸೇನ, ನಕುಲ ಸಹದೇವರು ಸಾತ್ಯಕಿಯನ್ನು ಸುತ್ತುವರೆದು ರಕ್ಷಿಸಿದರು. ಧೃಷ್ಟದ್ಯುಮ್ನ ಮುಖ್ಯರೊಂದಿಗೆ ವಿರಾಟನೂ, ಜೊತೆಯಲ್ಲಿ ಕೇಕಯನೂ, ಮತ್ಸ್ಯರೂ, ಶಾಲ್ವೇಯ ಸೇನೆಗಳೂ ದ್ರೋಣನ ಕಡೆ ವೇಗವಾಗಿ ಮುಂದುವರಿದರು. ದುಃಶಾಸನನನ್ನು ಮುಂದಿರಿಸಿಕೊಂಡು ಸಹಸ್ರ ರಾಜಪುತ್ರರು ದ್ರೋಣನ ಬಳಿ ಧಾವಿಸಿ ಬಂದು ತಮ್ಮವರಿಂದ ಸುತ್ತುವರೆದರು. ಆಗ ಕೌರವ ಮತ್ತು ಪಾಂಡವ ಧನ್ವಿಗಳ ನಡುವೆ ಯುದ್ಧವು ನಡೆಯಿತು. ಶರಜಾಲಗಳಿಂದ ಮೇಲೆದ್ದ ಧೂಳು ಲೋಕಗಳನ್ನು ಆವರಿಸಿತು. ಧೂಳಿನಿಂದ ಎಲ್ಲವೂ ಮುಚ್ಚಿಹೋಗಿ ಏನೂ ತಿಳಿಯದಂತಾಯಿತು. ಸೇನೆಗಳು ಮರ್ಯಾದೆಯನ್ನು ಕಳೆದುಕೊಂಡು ಯುದ್ಧವು ನಡೆಯಿತು.
ಅರ್ಜುನನಿಂದ ವಿಂದಾನುವಿಂದರ ವಧೆ
ಆದಿತ್ಯನು ಅಲ್ಲಿ ಮರಳಿ ಹೋಗುತ್ತಿರಲು, ಮೇಲೆದ್ದ ಧೂಳಿನಿಂದ ಸೂರ್ಯನ ರಶ್ಮಿಯು ಕುಂದಿತವಾಗುತ್ತಿರಲು, ಸೈನಿಕರು ನಿಂತಿದ್ದರು, ಯುದ್ಧಮಾಡುತ್ತಿದ್ದರು, ಜಯವನ್ನು ಬಯಸಿ ಪುನಃ ಹಿಂದಿರುಗಿ ಬರುತ್ತಿದ್ದರು. ಹಾಗೆ ದಿನವು ಮೆಲ್ಲಗೆ ಕಳೆಯತೊಡಗಿತು. ಆ ಸೇನೆಗಳು ಜಯವನ್ನು ಬಯಸಿ ಹೋರಾಡುತ್ತಿರಲು ಅರ್ಜುನ ಮತ್ತು ವಾಸುದೇವರು ಸೈಂಧವನ ಕಡೆ ಹೊರಟರು. ಕೌಂತೇಯನು ನಿಶಿತ ಶರಗಳಿಂದ ರಥಕ್ಕೆ ಬೇಕಾದಷ್ಟು ಮಾರ್ಗವನ್ನು ಮಾಡಿಕೊಡುತ್ತಿದ್ದನು. ಆ ಮಾರ್ಗದಲ್ಲಿ ಜನಾರ್ದನನು ಹೋಗುತ್ತಿದ್ದನು. ಎಲ್ಲೆಲ್ಲಿ ಮಹಾತ್ಮ ಪಾಂಡವನ ರಥವು ಹೋಗುತ್ತಿತ್ತೋ ಅಲ್ಲಲ್ಲಿ ಕೌರವ ಸೇನೆಯು ಸೀಳಿ ಹೋಗುತ್ತಿತ್ತು. ದಾಶಾರ್ಹನು ತನ್ನ ರಥಶಿಕ್ಷಣವನ್ನು ತೋರಿಸಿದನು. ಉತ್ತಮ, ಅಧಮ ಮತ್ತು ಮಧ್ಯಮ ಮಂಡಲಗಳನ್ನು ಪ್ರದರ್ಶಿಸಿದನು. ಹೋಗುತ್ತಿರುವ ರಥದಲ್ಲಿ ನಿಂತ ಅರ್ಜುನನು ತನ್ನ ನಾಮಾಂಕಿತವಾಗಿದ್ದ, ಹಿತ್ತಾಳೆಯ, ಕಾಲಜ್ವಲನದಂತಿರುವ, ಸ್ನಾಯುಗಳಿಂದ ಬಂಧಿಸಲ್ಪಟ್ಟ, ನೇರವಾದ, ದಪ್ಪನಾದ, ದೂರಹೋಗಬಲ್ಲ, ಬಿದಿರು ಅಥವಾ ಉಕ್ಕಿನಿಂದ ಮಾಡಲ್ಪಟ್ಟ, ವಿವಿಧ ಶತ್ರುಗಳ ಜೀವವನ್ನು ತೆಗೆದ, ಪಕ್ಷಿಗಳೊಡನೆ ಯುದ್ಧದಲ್ಲಿ ಪ್ರಾಣಿಗಳ ರಕ್ತವನ್ನು ಕುಡಿಯುವ ಶರಗಳನ್ನು ಕ್ರೋಶಮಾತ್ರ ದೂರ ಪ್ರಯೋಗಿಸಲು ಅವುಗಳು ಅವನ ರಥವು ಆ ಕ್ರೋಶ ದೂರವನ್ನು ದಾಟಿ ಬರುವಷ್ಟರಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದವು. ಗರುಡ-ಮಾರುತರಂತೆ ವೇಗವುಳ್ಳ ಸಾಧುವಾಹನಗಳಾqದ ಕುದುರೆಗಳನ್ನು ಹೃಷೀಕೇಶನು ಹೇಗೆ ಓಡಿಸುತ್ತಿದ್ದನೆಂದರೆ ಅದರಿಂದ ಇಡೀ ಜಗತ್ತನ್ನೇ ವಿಸ್ಮಯಗೊಳಿಸಿತು. ಅದರಂತೆ ಸೂರ್ಯನ ರಥವಾಗಲೀ ಇಂದ್ರನ, ರುದ್ರನ ಅಥವಾ ವೈಶ್ರವಣನ ರಥವಾಗಲೀ ಓಡುವುದಿಲ್ಲ. ಹೇಗೆ ಅರ್ಜುನನ ರಥವು ಮನಸ್ಸಿನ ಅಭಿಪ್ರಾಯಗಳಷ್ಟೇ ಶೀಘ್ರವಾಗಿ ಹೋಗುತ್ತಿತ್ತೋ ಹಾಗೆ ಬೇರೆ ಯಾರ ರಥವೂ ಈ ಹಿಂದೆ ರಣದಲ್ಲಿ ಓಡುತ್ತಿರಲಿಲ್ಲ. ರಣವನ್ನು ಪ್ರವೇಶಿಸಿ ಪರವೀರಹ ಕೇಶವನು ಸೇನೆಗಳ ಮಧ್ಯದಲ್ಲಿ ತಕ್ಷಣವೇ ಕುದುರೆಗಳನ್ನು ಪ್ರಚೋದಿಸಿದನು. ಆಗ ಆ ರಥಸಮೂಹಗಳ ಮಧ್ಯೆ ಬಂದು ಆ ಉತ್ತಮ ಕುದುರೆಗಳಿಗೆ ಹಸಿವು-ಬಾಯಾರಿಕೆ-ಬಳಲಿಕೆಗಳಿಂದ ರಥವನ್ನು ಹೊರಲು ಕಷ್ಟವಾಯಿತು. ಅವು ಅನೇಕ ಶಸ್ತ್ರಗಳಿಂದ, ಅನೇಕ ಯುದ್ಧಶೌಂಡರಿಂದ ಗಾಯಗೊಂಡಿದ್ದವು. ಪುನಃ ಪುನಃ ವಿಚಿತ್ರ ಮಂಡಲಗಳಲ್ಲಿ ತಿರುಗಿ ಬಳಲಿದ್ದವು. ಹತವಾಗಿದ್ದ ಸಾವಿರಾರು ಕುದುರೆ-ಆನೆ-ರಥ-ನರರ ಹೆಣಗಳ ರಾಶಿಗಳನ್ನು ಹಾರಿ ಓಡಿ ಬಳಲಿದ್ದವು.
ಈ ಮಧ್ಯದಲ್ಲಿ ಬಳಲಿದ ಕುದುರೆಗಳಿದ್ದ ಪಾಂಡವನನ್ನು ವೀರರಾದ ಅವಂತಿಯ ಸಹೋದರರು ಸೇನೆಗಳೊಂದಿಗೆ ಆಕ್ರಮಣಿಸಿದರು. ಮುದಾನ್ವಿತರಾದ ಅವರು ಅರ್ಜುನನನ್ನು ಅರವತ್ನಾಲ್ಕು ಮತ್ತು ಜನಾರ್ದನನನ್ನು ಎಪ್ಪತ್ತು ಬಾಣಗಳಿಂದ ಹಾಗೂ ನೂರರಿಂದ ಕುದುರೆಗಳನ್ನು ಹೊಡೆದರು. ಅರ್ಜುನನು ಕ್ರುದ್ಧನಾಗಿ ಒಂಭತ್ತು ಮರ್ಮಭೇದಿ ನತಪರ್ವಗಳಿಂದ ಅವರನ್ನು ಹೊಡೆದನು. ಆಗ ಅವರಿಬ್ಬರೂ ಕ್ರೋಧಿತರಾಗಿ ಶರ ಸಮೂಹಗಳಿಂದ ಕೇಶವನೊಂದಿಗೆ ಬೀಭತ್ಸುವನ್ನು ಮುಚ್ಚಿ, ಸಿಂಹನಾದಗೈದರು. ಶ್ವೇತವಾಹನನಾದರೋ ಕೂಡಲೇ ಭಲ್ಲಗಳೆರಡರಿಂದ ಅವರ ಬಣ್ಣದ ಧನುಸ್ಸುಗಳನ್ನೂ ಕನಕೋಜ್ಜ್ವಲ ಧ್ವಜಗಳನ್ನೂ ಕತ್ತರಿಸಿದನು. ಆಗ ಬೇರೆ ಧನುಸ್ಸುಗಳನ್ನು ತೆಗೆದು ಕೊಂಡು, ತುಂಬಾ ಕ್ರುದ್ಧರಾಗಿ, ಪಾಂಡವನನ್ನು ಶರಗಳಿಂದ ಹೊಡೆಯತೊಡಗಿದರು. ಅವರ ಮೇಲೆ ತುಂಬಾ ಸಂಕ್ರುದ್ಧನಾದ ಪಾಂಡುನಂದನ ಧನಂಜಯನು ಬೇಗನೆ ಎರಡು ಶರಗಳಿಂದ ಅವರ ಧನುಸ್ಸುಗಳನ್ನು ಮತ್ತೊಮ್ಮೆ ತುಂಡರಿಸಿದನು. ಅನಂತರ ಕೂಡಲೇ ಹೇಮಪುಂಖವುಳ್ಳ, ಶಿಲಾಶಿತ ವಿಶಿಖಗಳಿಂದ ಅವರ ಕುದುರೆಗಳನ್ನೂ, ಪದಾತಿಗಳೊಂದಿಗೆ ಅವರ ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.
ಕ್ಷುರಪ್ರದಿಂದ ಹಿರಿಯವನ ಶಿರವನ್ನು ಕಾಯದಿಂದ ಬೇರ್ಪಡಿಸಲು ಅವನು ಭಿರುಗಾಳಿಗೆ ಸಿಕ್ಕ ವೃಕ್ಷದಂತೆ ಹತನಾಗಿ ಭೂಮಿಯ ಮೇಲೆ ಬಿದ್ದನು. ವಿಂದನು ಹತನಾದುದನ್ನು ನೋಡಿ ಮಹಾರಥ ಅನುವಿಂದನು ಅಣ್ಣನ ವಧೆಯನ್ನು ನೆನೆದುಕೊಳ್ಳುತ್ತಾ, ಕುದುರೆಗಳನ್ನು ಕಳೆದುಕೊಂಡಿದ್ದ ರಥದಿಂದ ಇಳಿದು ಗದೆಯನ್ನು ಹಿಡಿದು ಗದೆಯೊಂದಿಗೆ ನೃತ್ಯವಾಡುತ್ತಿರುವನೋ ಎನ್ನುವಂತೆ ಸಂಗ್ರಾಮದಲ್ಲಿ ಮುನ್ನುಗ್ಗಿದ್ದನು. ಅನುವಿಂದನು ಕೋಪಗೊಂಡು ಗದೆಯಿಂದ ಮಧುಸೂದನನ ಹಣೆಯ ಮೇಲೆ ಹೊಡೆಯಲು ಅವನು ಮೈನಾಕ ಪರ್ವತದಂತೆ ಹಂದಾಡಲಿಲ್ಲ. ಅರ್ಜುನನು ಆರು ಶರಗಳಿಂದ ಅವನ ಕುತ್ತಿಗೆಯನ್ನೂ, ಪಾದಗಳೆರಡನ್ನೂ, ಭುಜಗಳೆರಡನ್ನೂ ಮತ್ತು ಶಿರವನ್ನೂ ಕತ್ತರಿಸಲು ಅವನು ಪುಡಿಪುಡಿಯಾದ ಪರ್ವತದಂತೆ ತುಂಡಾಗಿ ಕೆಳಗೆ ಬಿದ್ದನು. ಅವರು ಹತರಾದುದನ್ನು ನೋಡಿ ಅವರ ಪದಾನುಗರು ಸಂಕ್ರುದ್ಧರಾಗಿ ನೂರಾರು ಶರಗಳನ್ನು ಎರಚುತ್ತಾ ಆಕ್ರಮಣಿಸಿದರು. ಅವರನ್ನು ಕೂಡಲೇ ಶರಗಳಿಂದ ಸಂಹರಿಸಿ ಛಳಿಗಾಲದ ಕೊನೆಯಲ್ಲಿ ಅರಣ್ಯವನ್ನು ದಹಿಸಿ ಪ್ರಜ್ವಲಿಸುವ ಅಗ್ನಿಯಂತೆ ಅರ್ಜುನನು ವಿರಾಜಿಸಿದನು. ಕಷ್ಟದಿಂದ ಅವರ ಸೇನೆಯನ್ನು ಅತಿಕ್ರಮಿಸಿ ಮೋಡದ ಆವರಣವನ್ನು ಒಡೆದು ಉದಯಿಸುವ ಸೂರ್ಯನಂತೆ ಕಂಡನು. ಅವನು ಬಳಲಿದುದನ್ನು ಕಂಡು ಸಂತೋಷಗೊಂಡು ಕುರುಗಳು ಪುನಃ ಪಾರ್ಥನನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿದರು. ಅವನು ಆಯಾಸಗೊಂಡಿದುದನ್ನು ಮತ್ತು ಸೈಂಧವನು ಇನ್ನೂ ದೂರದಲ್ಲಿರುವುದನ್ನು ತಿಳಿದು ಮಹಾ ಸಿಂಹನಾದದಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದರು.
ರಣರಂಗದಲ್ಲಿ ಸರೋವರ ನಿರ್ಮಾಣ
ಸುಸಂರಬ್ಧರಾಗಿರುವ ಅವರನ್ನು ನೋಡಿ ನಸುನಕ್ಕು ಅರ್ಜುನನು ದಾಶಾರ್ಹನಿಗೆ ಮೆಲ್ಲನೆ ನುಡಿದನು: “ಕುದುರೆಗಳು ಬಾಣಗಳಿಂದ ಗಾಯಗೊಂಡಿವೆ ಮತ್ತು ಬಳಲಿವೆ. ಸೈಂಧವನೂ ದೂರದಲ್ಲಿದ್ದಾನೆ. ಈಗ ಮತ್ತು ಮುಂದೆ ಮಾಡಬೇಕಾಗಿರುವ ಕೆಲಸವ್ಯಾವುದು? ನಿನಗೆ ಏನು ಅನಿಸುತ್ತದೆ? ಕೃಷ್ಣ! ಇದ್ದುದನ್ನು ಇದ್ದಹಾಗೆ ಹೇಳು. ಸದಾ ನಿನಗೆ ಹೆಚ್ಚಾಗಿ ತಿಳಿದಿರುತ್ತದೆ. ರಣದಲ್ಲಿ ಶತ್ರುಗಳನ್ನು ಜಯಿಸುವ ಪಾಂಡವರಿಗೆ ನೀನೇ ನೇತಾರ. ಈಗ ನಾನು ಏನನ್ನು ಮಾಡಬೇಕೆಂದು ನನಗೆ ಹೇಳು. ಕುದುರೆಗಳನ್ನು ಬಿಚ್ಚಿ ಅವುಗಳಿಗಳಿಗೆ ಅಂಟಿಕೊಂಡಿರುವ ಬಾಣಗಳನ್ನು ಕೀಳು!”
ಪಾರ್ಥನು ಹೀಗೆ ಹೇಳಲು ಕೇಶವನು ಅವನಿಗೆ ಉತ್ತರಿಸಿದನು: “ಪಾರ್ಥ! ನೀನು ಏನು ಹೇಳುತ್ತಿದ್ದೀಯೋ ಅದು ನನ್ನ ಮತವೂ ಆಗಿದೆ.”
ಅರ್ಜುನನು ಹೇಳಿದನು: “ಕೇಶವ! ನಾನು ಸರ್ವ ಸೇನೆಗಳನ್ನೂ ತಡೆಯುತ್ತೇನೆ. ನೀನು ಈಗ ಮಾಡಬೇಕಾದುದನ್ನು ಮಾಡು!”
ಧನಂಜಯನು ಗಾಬರಿಗೊಳ್ಳದೇ ರಥದಿಂದ ಕೆಳಗಿಳಿದು ಗಾಂಡೀವ ಧನುಸ್ಸನ್ನು ಹಿಡಿದು ಗಿರಿಯಂತೆ ಅಚಲವಾಗಿ ನಿಂತನು. ಆಗ ಇದೇ ಅವಕಾಶವೆಂದು ತಿಳಿದು ಕ್ಷತ್ರಿಯರು ಕೂಗುತ್ತಾ ಅವನನ್ನು ಆಕ್ರಮಣಿಸಿದರು. ಅವನೊಬ್ಬನನ್ನು ಮಹಾ ರಥಸಮೂಹಗಳೊಂದಿಗೆ, ಚಾಪಗಳನ್ನು ಎಳೆಯುತ್ತಾ ಸಾಯಕಗಳನ್ನು ಬಿಡುತ್ತಾ ಸುತ್ತುವರೆದರು. ಕ್ರುದ್ಧರಾಗಿ ವಿಚಿತ್ರ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಸೂರ್ಯನನ್ನು ಮೋಡಗಳಂತೆ ಪಾರ್ಥನನ್ನು ಶರಗಳಿಂದ ಮುಚ್ಚಿದರು. ಸಿಂಹವನ್ನು ಮದಿಸಿದ ಆನೆಗಳು ಹೇಗೋ ಹಾಗೆ ವೇಗದಿಂದ ಕ್ಷತ್ರಿಯ ರಥೋದಾರರು ಆ ಕ್ಷತ್ರಿಯರ್ಷಭ ರಥಸಿಂಹನನ್ನು ಆಕ್ರಮಣಿಸಿದರು. ಹೀಗೆ ಕ್ರುದ್ಧವಾಗಿದ್ದ ಅನೇಕ ಸೇನೆಗಳಿಂದ ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಪಾರ್ಥನ ಭುಜಗಳ ಮಹಾಬಲವನ್ನು ಅಲ್ಲಿ ಎಲ್ಲರೂ ನೋಡಿದರು. ಅಸ್ತ್ರಗಳಿಂದ ಅಸ್ತ್ರಗಳನ್ನು ನಿವಾರಿಸಿ ವಿಭುವು ಕೂಡಲೇ ಎಲ್ಲರೂ ನೋಡುತ್ತಿದ್ದಂತೆಯೇ ಅನೇಕ ಬಾಣಗಳಿಂದ ಎಲ್ಲರನ್ನೂ ಮುಚ್ಚಿಬಿಟ್ಟನು. ಅಂತರಿಕ್ಷದಲ್ಲಿ ಬಹುಸಂಖ್ಯಾತ ಬಾಣಗಳ ಸಂಘರ್ಷದಿಂದಾಗಿ ಜೋರಾಗಿ ಜ್ವಾಲೆಗಳ ಬೆಂಕಿಯು ಹುಟ್ಟಿಕೊಂಡಿತು. ರಕ್ತದಿಂದ ತೋಯ್ದು ಹೋಗಿ ನಿಟ್ಟುಸಿರು ಬಿಡುತ್ತಿದ್ದ ಮಹೇಷ್ವಾಸರಿಂದಲೂ, ಶತ್ರುನಾಶಕ ಬಾಣಗಳಿಂದ ಹೊಡೆಯಲ್ಪಟ್ಟು ಕಿರುಚಿಕೊಳ್ಳುತ್ತಿರುವ ಕುದುರೆ-ಆನೆಗಳಿಂದಲೂ, ಯುದ್ಧದಲ್ಲಿ ಜಯವನ್ನು ಬಯಸಿ ಗಾಬರಿಯಿಂದ ಹೋರಾಡುತ್ತಿದ್ದ ಶತ್ರುವೀರರಿಂದಲೂ, ಕ್ರುದ್ಧರಾಗಿ ಅನೇಕರು ಒಂದೇ ಸ್ಥಳದಲ್ಲಿ ನಿಂತಿರುವ ಅಲ್ಲಿ ಬಿಸಿಯು ಹುಟ್ಟಿಕೊಂಡಿತು. ಆಗ ಬಾಣಗಳೇ ಅಲೆಗಳಾಗಿದ್ದ, ಧ್ವಜಗಳೇ ಸುಳಿಗಳಂತಿದ್ದ, ಆನೆಗಳೇ ಮೊಸಳೆಗಳಂತಿದ್ದ, ಪದಾತಿಗಳೇ ಮೀನಿನ ಸಮೂಹಗಳಂತಿದ್ದ, ಶಂಖದುಂದುಭಿಗಳೇ ಭೋರ್ಗರೆತವಾಗಿದ್ದ, ಶಿರಸ್ತ್ರಾಣಗಳೇ ಆಮೆಗಳಂತಿದ್ದ, ಪತಾಕೆಗಳೇ ನೊರೆಗಳ ಸಾಲಿನಂತಿದ್ದ, ಆನೆಗಳೇ ಕಲ್ಲುಬಂಡೆಗಳಂತಿದ್ದ ಆ ದಾಟಲಸಾದ್ಯವಾದ, ಅಸಂಖ್ಯವಾದ, ಅಪಾರವಾದ, ಉಕ್ಕಿ ಬರುತ್ತಿರುವ ರಥಸಾಗರವನ್ನು ಪಾರ್ಥನು ತೀರದಂತಾಗಿ ಪತ್ರಿಗಳಿಂದ ತಡೆದನು.
ಆಗ ರಣರಂಗದಲ್ಲಿ ಜನಾರ್ದನನು ಗಾಬರಿಗೊಳ್ಳದೇ ಇದ್ದ ಪ್ರಿಯ ಅರ್ಜುನನಿಗೆ ಹೇಳಿದನು: “ಅರ್ಜುನ! ಕದಡಿದ ನೀರಿದೆ. ಸ್ನಾನಮಾಡಿಸಬಹುದು. ಆದರೆ ರಣದಲ್ಲಿ ಕುದುರೆಗಳು ಕುಡಿಯಲು ಯೋಗ್ಯವಾದ ನೀರನ್ನು ಬಯಸುತ್ತವೆ. ಸ್ನಾನಮಾಡುವಂತಹುದನ್ನಲ್ಲ!”
“ಇದೋ ಇಲ್ಲಿದೆ!” ಎಂದು ಹೇಳಿ ಅರ್ಜುನನು ಅಸ್ತ್ರದಿಂದ ಮೇದಿನಿಯನ್ನು ಭೇದಿಸಿ ಕುದುರೆಗಳು ಕುಡಿಯಲು ಯೋಗ್ಯವಾದ ಶುಭ ಸರೋವರವನ್ನು ನಿರ್ಮಿಸಿದನು. ಅದ್ಭುತಕರ್ಮಿ ಪಾರ್ಥನು ತ್ವಷ್ಟನಂತೆ ಬಾಣಗಳಿಂದಲೇ ಗಳುಗಳನ್ನೂ, ಬಾಣಗಳಿಂದಲೇ ಕಂಬಗಳನ್ನೂ, ಬಾಣಗಳಿಂದಲೇ ಚಪ್ಪರವನ್ನೂ ಮಾಡಿ ಶರಗಳ ಒಂದು ಮನೆಯನ್ನೇ ನಿರ್ಮಿಸಿದನು. ಆ ಮಹಾರಣದಲ್ಲಿ ಪಾರ್ಥನು ಮಾಡಿದ ಶರಗಳ ಮನೆಯನ್ನು ನೋಡಿ ಗೋವಿಂದನು ನಕ್ಕು “ಸಾಧು! ಸಾಧು!” ಎಂದು ಹೊಗಳಿದನು.”
ಮಹಾತ್ಮ ಕೌಂತೇಯನು ನೀರನ್ನು ಹುಟ್ಟಿಸಿ, ಶತ್ರುಸೇನೆಯನ್ನು ತಡೆಗಟ್ಟಿ, ಶರಗೃಹವನ್ನು ನಿರ್ಮಿಸಲು ಮಹಾದ್ಯುತಿ ವಾಸುದೇವನು ತಕ್ಷಣವೇ ರಥದಿಂದ ಇಳಿದು ಕಂಕಪತ್ರಿಗಳಿಂದ ಗಯಗೊಂಡಿದ್ದ ಕುದುರೆಗಳನ್ನು ಬಿಚ್ಚಿದನು. ಹಿಂದೆ ಎಂದೂ ನೋಡಿರದ ಅದನ್ನು ನೋಡಿ ಎಲ್ಲಕಡೆಗಳಲ್ಲಿ ಸಿದ್ಧಚಾರಣರ ಸಮೂಹಗಳ ಮತ್ತು ಸೈನಿಕರ ಮಹಾ ಸಿಂಹನಾದವು ಕೇಳಿಬಂದಿತು. ಪದಾತಿಯಾಗಿ ಯುದ್ಧಮಾಡುತ್ತಿದ್ದ ಕೌಂತೇಯನನ್ನು ತಡೆಯಲು ನರರ್ಷಭರಿಗೆ ಸಾಧ್ಯವಾಗಲಿಲ್ಲ. ಅದೊಂದು ಅದ್ಭುತವಾಗಿತ್ತು. ರಥಸೇನೆಗಳು, ಅನೇಕ ಆನೆ-ಕುದುರೆಗಳು ಮೇಲೆ ಬಂದು ಎರಗಿದರೂ ಅತಿಪುರುಷನಾದ ಪಾರ್ಥನು ಕಿಂಚಿತ್ತೂ ಗಾಬರಿಗೊಳ್ಳಲಿಲ್ಲ. ಪಾಂಡವನ ಮೇಲೆ ಪಾರ್ಥಿವರು ಶರೌಘಗಳನ್ನು ಪ್ರಯೋಗಿಸುತ್ತಿದ್ದರೂ ವಾಸವಿಯು ವ್ಯಥಿತನಾಗಲಿಲ್ಲ. ಆ ಶರಜಾಲಗಳನ್ನೂ, ಗದೆಗಳನ್ನೂ ಮತ್ತು ಪ್ರಾಸಗಳನ್ನೂ ಪಾರ್ಥನು ಸಾಗರವು ಹೇಗೆ ನದಿಗಳನ್ನು ಬರಮಾಡಿಕೊಳ್ಳುತ್ತದೆಯೋ ಹಾಗೆ ಬಂದವುಗಳನ್ನು ನಿರಸನಗೊಳಿಸಿದನು. ಮಹಾ ಅಸ್ತ್ರವೇಗದಿಂದ ಮತ್ತು ಬಾಹುಬಲದಿಂದ ಪಾರ್ಥನು ಎಲ್ಲ ಪಾರ್ಥಿವೇಂದ್ರರೂ ಕಳುಹಿಸುತ್ತಿದ್ದ ಉತ್ತಮ ಬಾಣಗಳನ್ನೂ ನಾಶಗೊಳಿಸಿದನು. ಪಾರ್ಥ ಮತ್ತು ವಾಸುದೇವ ಈ ಇಬ್ಬರ ವಿಕ್ರಾಂತವನ್ನು ಪರಮಾದ್ಭುತವನ್ನು ಕೌರವರು ಹೊಗಳಿದರು. “ರಣದ ಮಧ್ಯದಲ್ಲಿ ಪಾರ್ಥ-ಗೋವಿಂದರು ಕುದುರೆಗಳನ್ನು ಬಿಚ್ಚಿದರು! ಇದಕ್ಕಿಂತಲೂ ಪರಮ ಅದ್ಭುತವಾದುದು ಲೋಕದಲ್ಲಿ ಯಾವುದಿದೆ? ಇಂತಹುದು ಹಿಂದೆ ನಡೆಯಲೂ ಇಲ್ಲ. ಮುಂದೆ ನಡೆಯುವುದೂ ಇಲ್ಲ.”
ರಣಮೂರ್ದನಿಯಲ್ಲಿ ಅತ್ಯುಗ್ರವಾದ ತೇಜಸ್ಸನ್ನು ಪ್ರದರ್ಶಿಸಿ ಆ ನರೋತ್ತಮರು ಕೌರವರಲ್ಲಿ ಅತಿಯಾದ ಭಯವನ್ನು ಉಂಟುಮಾಡಿದರು. ಅರ್ಜುನನು ರಣದಲ್ಲಿ ಶರಗಳಿಂದ ನಿರ್ಮಿಸಿದ ಗರ್ಭಗೃಹದಲ್ಲಿ ಹೃಷೀಕೇಶನು ಸ್ತ್ರೀಗಳ ಮಧ್ಯದಲ್ಲಿಯೋ ಎಂಬಂತೆ ನಸುನಗುತ್ತಾ ಇದ್ದನು. ಪುಷ್ಕರೇಕ್ಷಣನು ಕೌರವ ಕಡೆಯ ಎಲ್ಲ ಸೇನೆಗಳೂ ನೋಡುತ್ತಿದ್ದಂತೆಯೇ ಸ್ವಲ್ವವೂ ಉದ್ವೇಗಗೊಳ್ಳದೇ ಕುದುರೆಗಳನ್ನು ಅಡ್ಡಾಡಿಸಿದನು. ಕುದುರೆಗಳ ಕೆಲಸದಲ್ಲಿ ಕುಶಲನಾಗಿದ್ದ ಕೃಷ್ಣನು ಅವುಗಳ ಪರಿಶ್ರಮ, ಬಳಲಿಕೆ, ವೇಪನ-ಕಂಪನಗಳನ್ನೂ ಗಾಯಗಳನ್ನೂ ಸಂಪೂರ್ಣವಾಗಿ ಹೋಗಲಾಡಿಸಿದನು. ಬಾಣಗಳನ್ನು ಎರಡೂ ಕೈಗಳಿಂದ ನಿಧಾನವಾಗಿ ಕಿತ್ತು, ಮೈತೊಳೆಯಿಸಿ, ನೆಲದ ಮೇಲೆ ಹೊರಳಾಡಿಸಿ, ಯಥಾನ್ಯಾಯವಾಗಿ ನೀರು ಕುಡಿಸಿದನು. ನೀರನ್ನು ಕುಡಿದು, ಸ್ನಾನಮಾಡಿ, ಮೇಯ್ದು, ಆಯಾಸವನ್ನು ಕಳೆದುಕೊಂಡ ಅವುಗಳನ್ನು ಸಂಹೃಷ್ಟನಾಗಿ ಪುನಃ ಆ ಉತ್ತಮ ರಥಕ್ಕೆ ಕಟ್ಟಿದನು. ಆ ಶ್ರೇಷ್ಠ ರಥವನ್ನು ಶೌರಿಯು ಅರ್ಜುನನೊಂದಿಗೆ ಏರಿ ವೇಗವಾಗಿ ಹೊರಟನು. ನೀರು ಕುಡಿಸಿದ ಕುದುರೆಗಳಿಂದ ಯುಕ್ತವಾದ ರಥದಲ್ಲಿ ಆ ರಥವರರಿಬ್ಬರೂ ಹೋಗುತ್ತಿರುವುದನ್ನು ನೋಡಿ ಕುರುಬಲಶ್ರೇಷ್ಠರು ಪುನಃ ವಿಮನಸ್ಕರಾದರು.
ಹಲ್ಲುಮುರಿದ ಉರಗಗಳಂತೆ ನಿಟ್ಟುಸಿರು ಬಿಡುತ್ತಿದ್ದ ಅವರು ಮತ್ತೆ ಮತ್ತೆ “ನಮಗೆ ಧಿಕ್ಕಾರ! ಧಿಕ್ಕಾರ! ಪಾರ್ಥ ಕೃಷ್ಣರು ಹೊರಟೇ ಹೋದರಲ್ಲ!” ಎಂದು ಅಂದುಕೊಳ್ಳುತ್ತಿದ್ದರು. ಎಲ್ಲ ಕ್ಷತ್ರಿಯರೂ ನೋಡುತ್ತಿದ್ದಂತೆ ಒಂದೇ ರಥದಲ್ಲಿ ಕುಳಿತು ಕವಚಧಾರಿಗಳಾದ ಅವರಿಬ್ಬರು ಕೌರವ ಸೇನೆಯನ್ನು ಬಾಲಕ್ರೀಡೆಯಂತೆ ತಿರಸ್ಕರಿಸಿ ಮುಂದುವರೆದರು. ಕೂಗಿಕೊಳ್ಳುತ್ತಿದ್ದರೂ ಪ್ರಯತ್ನಿಸುತ್ತಿದ್ದರೂ ಅವರೊಡನೆ ಯುದ್ಧಮಾಡದೇ ಆ ಪರಂತಪರು ಎಲ್ಲರಾಜರಿಗೆ ತಮ್ಮ ವೀರ್ಯವನ್ನು ತೋರಿಸುತ್ತಾ ಮುಂದುವರೆದರು. ಅವರು ಹೋಗುತ್ತಿರುವುದನ್ನು ನೋಡಿ ಅನ್ಯ ಸೈನಿಕರು ಪುನಃ ಹೇಳಿದರು: “ತತ್ವರೆಮಾಡಿ! ಎಲ್ಲರೂ ಸೇರಿ ಕೃಷ್ಣ-ಕಿರೀಟಿಯರನ್ನು ವಧಿಸೋಣ! ಸರ್ವಧನ್ವಿಗಳು ನೋಡುತ್ತಿದ್ದಂತೆಯೇ ದಾಶಾರ್ಹನು ರಥವನ್ನು ಕಟ್ಟಿ ರಣದಲ್ಲಿ ನಮ್ಮನ್ನು ತಿರಸ್ಕರಿಸಿ ಜಯದ್ರಥನ ಕಡೆ ಹೋಗುತ್ತಿದ್ದಾನೆ!”
ಸಂಗ್ರಾಮದಲ್ಲಿ ಹಿಂದೆಂದೂ ನೋಡಿರದ ಆ ಮಹಾ ಅದ್ಭುತವನ್ನು ನೋಡಿ ಅಲ್ಲಿದ್ದ ಕೆಲವು ಭೂಮಿಪರು ಯೋಚಿಸುತ್ತಿದ್ದರು. “ದುರ್ಯೋಧನನ ಅಪರಾಧದಿಂದ ರಾಜಾ ಧೃತರಾಷ್ಟ್ರನೂ ಅವನ ಸಂಪೂರ್ಣ ಸೇನೆಗಳೂ ಮತ್ತು ಮೇದಿನಿಯ ಸರ್ವ ಕ್ಷತ್ರಿಯರೂ ಮಹಾ ವಿಪತ್ತಿಗೆ ಒಳಗಾಗಿದ್ದಾರೆ! ಇವರು ವಿಲಯವನ್ನು ಹೊಂದುತ್ತಿದ್ದಾರೆ ಎನ್ನುವುದು ರಾಜನಿಗೆ ತಿಳಿದಿಲ್ಲ!” ಅಲ್ಲಿರುವ ಅನ್ಯ ಕ್ಷತ್ರಿಯರು ಹೀಗೆ ಹೇಳಿಕೊಳ್ಳುತ್ತಿದ್ದರು: “ದೃಷ್ಟಿಯಿಲ್ಲದ ಧಾರ್ತರಾಷ್ಟ್ರನು ಸಿಂಧುರಾಜನು ಯಮಸಾದನಕ್ಕೆ ಹೋದನಂತರ ಮಾಡಬೇಕಾದ ಕಾರ್ಯಗಳ ಕುರಿತು ಉಪಾಯಗಳನ್ನು ಮಾಡಲಿ!”
ಕೃಷ್ಣಾರ್ಜುನರು ಕೌರವ ಸೇನೆಯನ್ನು ದಾಟಿ ಜಯದ್ರಥನ ಬಳಿಸಾರಿದುದು
ಸೂರ್ಯನು ಇಳಿಮುಖನಾಗಿರಲು ಪಾಂಡವನು ನೀರನ್ನು ಕುಡಿದು ಹರ್ಷಿತಗೊಂಡಿದ ಕುದುರೆಗಳೊಂದಿಗೆ ಅತ್ಯಂತ ಶೀಘ್ರವಾಗಿ ಸೈಂಧವನ ಕಡೆ ಹೋದನು. ಅಂತಕನಂತೆ ಕ್ರುದ್ಧನಾಗಿ ಹೋಗುತ್ತಿರುವ ಆ ಮಹಾಬಾಹುವನ್ನು ಯೋಧರು ತಡೆಯಲು ಶಕ್ತರಾಗಲಿಲ್ಲ. ಸಿಂಹವು ಜಿಂಕೆಗಳ ಗುಂಪನ್ನು ಮಥಿಸಿಬಿಡುವಂತೆ ಪಾಂಡವನು ಸೈಂಧವನಿಗಾಗಿ ಕೌರವ ಸೇನೆಯನ್ನು ತರುಬಿ ಓಡಿಸಿದನು. ಸೇನೆಗಳ ಮಧ್ಯದಲ್ಲಿ ಬಲಾಕವರ್ಣದ ಕುದುರೆಗಳನ್ನು ಇನ್ನೂ ಜೋರಾಗಿ ಚಪ್ಪರಿಸಿ ಓಡಿಸುತ್ತಾ ದಾಶಾರ್ಹನು ಪಾಂಚಜನ್ಯವನ್ನು ಊದಿದನು. ಕೌಂತೇಯನು ಬಿಟ್ಟ ಬಾಣಗಳೆಲ್ಲವೂ ಅವನ ಹಿಂದೆ ಬೀಳುತ್ತಿದ್ದವು. ಬಾಣಗಳ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಆ ಗಾಳಿಯ ವೇಗವುಳ್ಳ ಕುದುರೆಗಳು ಓಡುತ್ತಿದ್ದವು. ಗಾಳಿಯಲ್ಲಿ ಹಾರಾಡುತ್ತಿದ್ದ ಪತಾಕೆಗಳನ್ನೂ, ರಥದ ಗುಡುಗಿನ ಶಬ್ಧವನ್ನೂ, ಘೋರವಾದ ಕಪಿಧ್ವಜವನ್ನೂ ನೋಡಿ ರಥಿಗಳು ವಿಷಣ್ಣರಾದರು. ಎಲ್ಲಕಡೆಗಳಲ್ಲಿ ಮುಸುಕಿದ ಧೂಳಿನಿಂದ ದಿವಾಕರನೂ ಕಾಣದಿರಲಾಗಿ, ರಣದಲ್ಲಿ ಶರಗಳಿಂದ ಆರ್ತರಾದ ಯೋಧರು ಕೃಷ್ಣರೀರ್ವರನ್ನೂ ನೋಡಲೂ ಶಕ್ಯರಾಗಿರಲಿಲ್ಲ. ಆಗ ಕ್ರುದ್ಧರಾದ ನೃಪತಿಗಳೂ ಅನೇಕ ಅನ್ಯ ಕ್ಷತ್ರಿಯರೂ ಜಯದ್ರಥನನ್ನು ವಧಿಸಲು ಇಚ್ಛಿಸಿದ್ದ ಧನಂಜಯನನ್ನು ಸುತ್ತುಗಟ್ಟಿದರು. ಅವರು ಪ್ರಯೋಗಿಸುತ್ತಿದ್ದ ಬಾಣಗಳಿಂದ ಆ ಪುರುಷರ್ಷಭನ ಗಮನವು ಕುಂಠಿತವಾಗಲು ದುರ್ಯೋಧನನು ಪಾರ್ಥನನ್ನು ಮಹಾಹವದಲ್ಲಿ ತ್ವರೆಮಾಡಿ ಹಿಂಬಾಲಿಸಿ ಬರುತ್ತಿದ್ದನು.
ವಾಸುದೇವ-ಧನಂಜಯರಿಬ್ಬರೂ ದಾಟಿ ಹೋದುದನ್ನು ನೋಡಿ ಕೌರವರು ಭಯದಿಂದ ಓಡಿಹೋದರು. ಆದರೆ ಸತ್ತ್ವಚೋದಿತರಾದ ಮಹಾತ್ಮರು ಗಾಬರಿಗೊಳ್ಳದೇ ನಾಚಿಕೆಗೊಂಡು ಮನಸ್ಸನ್ನು ಸ್ಥಿರಗೊಳಿಸಿಕೊಂಡು ಧನಂಜಯನ ಹಿಂದೆ ಹೋದರು. ಕ್ರೋಧ ಮತ್ತು ಅಸಹನೆಗಳೊಂದೊಡಗೂಡಿ ಯುದ್ಧದಲ್ಲಿ ಪಾಂಡವನ ಹಿಂದೆ ಹೋದವರು ಸಾಗರದಿಂದ ನದಿಗಳು ಹೇಗೋ ಹಾಗೆ ಹಿಂದಿರುಗಿ ಬರಲೇ ಇಲ್ಲ. ಅಸಂತ ನಾಸ್ತಿಕರು ವೇದದಿಂದ ಹಿಂದೆಸರಿಯುವಂತೆ ರಣದಿಂದ ಹಿಂದೆ ಸರಿದು ನರಕವನ್ನು ಆರಿಸಿಕೊಂಡರು ಮತ್ತು ಪಾಪವನ್ನು ಕಟ್ಟಿಕೊಂಡರು. ಅವರಿಬ್ಬರು ಪುರುಷರ್ಷಭರೂ ರಥಸೇನೆಯಿಂದ ವಿಮುಕ್ತರಾಗಿ ರಾಹುವಿನ ಬಾಯಿಯಿಂದ ಹೊರಬಂದ ಇಬ್ಬರು ಸೂರ್ಯರಂತೆ ಪ್ರಕಾಶಿಸಿದರು. ಕೃಷ್ಣರಿಬ್ಬರೂ ಆ ಸೇನಾಜಾಲದಿಂದ ತಪ್ಪಿಸಿಕೊಂಡು ಹೊರಬಂದಾಗ ಮಹಾಜಾಲದಿಂದ ತಪ್ಪಿಸಿಕೊಂಡ ಮೀನುಗಳಂತೆ ವಿಗತಜ್ವರರಾಗಿ ತೋರಿದರು. ದುರ್ಭೇದ್ಯವಾಗಿದ್ದ ಶಸ್ತ್ರಗಳಿಂದ ದಟ್ಟವಾಗಿದ್ದ ದ್ರೋಣನ ಸೇನೆಯಿಂದ ಹೊರಬಂದ ಆ ಮಹಾತ್ಮರು ಉದಯಿಸುವ ಕಾಲ-ಸೂರ್ಯರಂತೆ ಕಂಡುಬಂದರು. ಅಸ್ತ್ರಗಳ ಬಾಧೆಗಳಿಂದ ನಿರ್ಮುಕ್ತರಾದ, ಶಸ್ತ್ರಸಂಕಟದಿಂದ ವಿಮುಕ್ತರಾದ, ಸ್ವತಃ ಶತ್ರುಗಳನ್ನು ಬಾಧೆಗೊಳಿಸಿದ ಆ ಮಹಾತ್ಮರಿಬ್ಬರೂ ಮುಟ್ಟಿದರೆ ಉರಿಯುವ ಮಕರದ ದವಡೆಗಳಿಂದ ತಪ್ಪಿಸಿಕೊಂಡು ಬಂದವರಂತೆ ಕಂಡರು. ಅವರಿಬ್ಬರೂ ಸೇನೆಯೆಂಬ ಸಮುದ್ರವನ್ನು ಮಕರಗಳಂತೆ ಕ್ಷೋಭೆಗೊಳಿಸಿದ್ದರು.
ಅವರಿಬ್ಬರೂ ದ್ರೋಣನ ಸೇನೆಯ ಮಧ್ಯದಲ್ಲಿದ್ದಾಗ ಕೌರವರು ಅವರು ದ್ರೋಣನನ್ನು ದಾಟಿ ಬರುವುದಿಲ್ಲವೆಂದು ಅಂದುಕೊಂಡಿದ್ದರು. ಅವರಿಬ್ಬರೂ ದ್ರೋಣನ ಸೇನೆಯನ್ನು ಅತಿಕ್ರಮಿಸಿದುದನ್ನು ನೋಡಿ ಅವರು ಸಿಂಧುರಾಜನ ಜೀವಿತದ ಆಸೆಯನ್ನೇ ತೊರೆದರು. ಆಗ ದ್ರೋಣ ಮತ್ತು ಹಾರ್ದಿಕ್ಯರಿಂದ ಆ ಕೃಷ್ಣರಿಬ್ಬರೂ ಬಿಡುಗಡೆಹೊಂದುವುದಿಲ್ಲವೆಂದು ಅವರ ಬಲವಾದ ಆಶಯವಾಗಿತ್ತು. ಅವರ ಆಶಯವನ್ನು ವಿಫಲಗೊಳಿಸಿ ಆ ಇಬ್ಬರು ಪರಂತಪರೂ ದುಸ್ತರವಾದ ದ್ರೋಣನ ಸೇನೆಯನ್ನೂ ಭೋಜನ ಸೇನೆಯನ್ನೂ ದಾಟಿ ಬಂದಿದ್ದರು. ಪ್ರಜ್ವಲಿಸುತ್ತಿರುವ ಪಾವಕರಂತೆ ಅವರಿಬ್ಬರೂ ಅತಿಕ್ರಮಿಸಿ ಬಂದುದನ್ನು ನೋಡಿ ನಿರಾಶರಾದ ಅವರು ಸಿಂಧುರಾಜನ ಜೀವಿತದ ಕುರಿತಾದ ಆಸೆಯನ್ನೇ ತೊರೆದರು. ಭಯವರ್ಧನರಾದ ಕೃಷ್ಣ-ಧನಂಜಯರು ಆಗ ಜಯದ್ರಥನ ವಧೆಯ ಕುರಿತು ಮಾತನಾಡಿಕೊಂಡರು. “ಆರು ಧಾರ್ತರಾಷ್ಟ್ರರ ಮಧ್ಯೆ ಸೈಂಧವನಿದ್ದಾನೆ. ನನ್ನ ದೃಷ್ಟಿಗೆ ಸಿಲುಕಿದರೆ ಅವನು ಜೀವಂತ ಉಳಿಯಲಾರ! ಇಂದು ಸಮರದಲ್ಲಿ ಅವನನ್ನು ದೇವಗಣಗಳ ಸಹಿತ ಶಕ್ರನೇ ರಕ್ಷಿಸುತ್ತಿದ್ದರೂ ನಾವು ಅವನನ್ನು ಸಂಹರಿಸುತ್ತೇವೆ” ಎಂದು ಕೃಷ್ಣರು ಮಾತನಾಡಿಕೊಂಡರು.
ಹೀಗೆ ಕೃಷ್ಣರಿಬ್ಬರೂ ಸಿಂಧುರಾಜನನ್ನು ಹುಡುಕುತ್ತಾ ಮಾತನಾಡಿಕೊಳ್ಳಲು ಧೃತರಾಷ್ಟ್ರನ ಪುತ್ರರು ಅದನ್ನು ಕೇಳಿಸಿಕೊಂಡರು. ಬಾಯಾರಿದ ಗಜಗಳೆರಡು ಮರುಭೂಮಿಯನ್ನು ದಾಟಿಬಂದು ನೀರನ್ನು ಕುಡಿದು ಪುನಃ ವಿಶ್ವಾಸಹೊಂದಿದವರಂತೆ ಆ ಇಬ್ಬರು ಅರಿಂದಮರೂ ಕಂಡರು. ಮೃತ್ಯು-ವೃದ್ಧಾಪ್ಯಗಳನ್ನು ದಾಟಿದ ಅವರು ಹುಲಿ-ಸಿಂಹ-ಆನೆಗಳ ಗುಂಪುಗಳಿರುವ ಪರ್ವತಗಳನ್ನು ದಾಟಿಬಂದವರಂತೆ ತೋರಿದರು. ಮುಕ್ತರಾದ ಅವರ ಭಯಂಕರ ಮುಖವರ್ಣವನ್ನು ನೋಡಿ ಕೌರವರೆಲ್ಲರೂ ಎಲ್ಲಕಡೆಗಳಲ್ಲಿ ಕೂಗಿಕೊಂಡರು. ಪಾವಕನಂತೆ ಮತ್ತು ಘೋರ ಸರ್ಪದ ವಿಷದಂತೆ ಜ್ವಲಿಸುತ್ತಿದ್ದ ದ್ರೋಣನಿಂದ ಮತ್ತು ಇತರ ಪಾರ್ಥಿವರಿಂದ ಹೊರಬಂದ ಅವರಿಬ್ಬರು ಭಾಸ್ಕರರಂತೆ ಪ್ರಕಾಶಿಸುತ್ತಿದ್ದರು. ಸಾಗರವೆಂದು ಕರೆಯಲ್ಪಟ್ಟ ದ್ರೋಣನ ಸೇನೆಯಿಂದ ಮುಕ್ತರಾಗಿ ಬಂದ ಅವರಿಬ್ಬರು ಸಮುದ್ರವನ್ನು ದಾಟಿಬಂದವರಂತೆ ಮುದಿತರಾಗಿ ಕಂಡುಬಂದರು. ರಣದಲ್ಲಿ ದ್ರೋಣ ಮತ್ತು ಹಾರ್ದಿಕ್ಯರಿಂದ ರಕ್ಷಿತರಾದವರು ಬಿಟ್ಟ ಮಹಾ ಶಸ್ತ್ರೌಘಗಳಿಂದ ಮುಕ್ತರಾದ ಅವರಿಬ್ಬರು ಇಂದ್ರ-ಅಗ್ನಿಯರಂತೆ ತೋರಿದರು. ಭಾರದ್ವಾಜನ ನಿಶಿತ ಸಾಯಕಗಳಿಂದ ಗಾಯಗೊಂಡು ರಕ್ತಸೋರುತ್ತಿರುವ ಅವರಿಬ್ಬರು ಕೃಷ್ಣರೂ ಕರ್ಣಿಕ ವೃಕ್ಷಗಳಿರುವ ಪರ್ವತಗಳಂತೆ ಕಂಡರು. ದ್ರೋಣನೇ ಮೊಸಳೆಯಾಗಿದ್ದ, ಶಕ್ತಿಗಳೇ ಸರ್ಪಗಳಾಗಿದ್ದ, ಶರಗಳೇ ಮಕರಗಳಾಗಿದ್ದ, ಕ್ಷತ್ರಿಯ ಪ್ರವರರೇ ನೀರಾಗಿದ್ದ ಮಡುವನ್ನು ದಾಟಿ ಬಂದ; ಶಿಂಜಿನಿಯ ಟೇಂಕಾರ ಮತ್ತು ಚಪ್ಪಳೆಗಳೇ ಗುಡುಗಾಗಿದ್ದ, ಗದೆ-ಖಡ್ಗಗಳೇ ಮಿಂಚುಗಳಾಗಿದ್ದ ದ್ರೋಣನ ಅಸ್ತ್ರಗಳೆಂಬ ಮೇಘಗಳಿಂದ ಹೊರಬಂದ ಅವರಿಬ್ಬರೂ ಕತ್ತಲೆಯಿಂದ ಆಚೆ ಬಂದ ಸೂರ್ಯು-ಚಂದ್ರರಂತೆ ಕಂಡರು. ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಮತ್ತು ಮಹಾ ಮೊಸಳೆಗಳ ಸಮಾಕುಲದಿಂದಿರುವ ಸಿಂದುವೇ ಮೊದಲಾದ ಐದು ನದಿಗಳು ಮತ್ತು ಆರನೆಯದಾಗಿ ಸಮುದ್ರವನ್ನು ಎರಡೂ ಬಾಹುಗಳಿಂದ ಈಜಿ ಬಂದಿರುವವರಂತೆ ದ್ರೋಣನ ಅಸ್ತ್ರಬಲದಿಂದ ಉಳಿದು ಬಂದಿರುವ ಆ ಯಶಸ್ಸಿನಲ್ಲಿ ಲೋಕವಿಶ್ರುತರಾದ ಮಹೇಷ್ವಾಸ ಕೃಷ್ಣರು ಎಂದು ಎಲ್ಲ ಭೂತಗಳೂ ಅಂದುಕೊಂಡವು. ಕೊಲ್ಲುವ ಆಸೆಯಿಂದ ಸಮೀಪದಲ್ಲಿದ್ದ ಜಯದ್ರಥನನ್ನು ನೋಡುತ್ತಾ ನಿಂತಿದ್ದ ಅವರಿಬ್ಬರು ರುರು ಜಿಂಕೆಯನ್ನು ತಿನ್ನಲು ಬಾಯಿ ನೆಕ್ಕುತ್ತಿರುವ ಹುಲಿಗಳಂತೆ ಕಂಡರು. ಅವರ ಮುಖವರ್ಣವೇ ಹಾಗಿರಲು ಕೌರವ ಯೋಧರು ಜಯದ್ರಥನು ಹತನಾದನೆಂದೇ ಭಾವಿಸಿದರು.
ಲೋಹಿತಾಕ್ಷರಾದ ಆ ಕೃಷ್ಣ-ಪಾಡವರಿಬ್ಬರೂ ಸಿಂಧುರಾಜನನ್ನು ಕಂಡು ಹೃಷ್ಟರಾಗಿ ಮತ್ತೆ ಮತ್ತೆ ಗರ್ಜಿಸಿದರು. ಕೈಯಲ್ಲಿ ಕಡಿವಾಣಗಳನ್ನು ಹಿಡಿದಿದ್ದ ಶೌರಿ ಮತ್ತು ಧನುಸ್ಸನ್ನು ಹಿಡಿದಿದ್ದ ಪಾರ್ಥ ಇಬ್ಬರೂ ಸೂರ್ಯ-ಪಾವಕರಂತೆ ಪ್ರಕಾಶಿಸಿದರು. ದ್ರೋಣನ ಸೇನೆಯಿಂದ ಮುಕ್ತರಾಗಿ ಸಮೀಪದಲ್ಲಿಯೇ ಸೈಂಧವನನ್ನು ನೋಡಿದ ಅವರಿಗೆ ಆಮಿಷವನ್ನು ಕಂಡ ಗಿಡುಗಗಳಿಗಾಗುವಷ್ಟೇ ಆನಂದವಾಯಿತು. ಸದ್ಯ ಹತ್ತಿರದಲ್ಲಿಯೇ ಇದ್ದ ಸೈಂಧವನನ್ನು ನೋಡಿ ಕ್ರುದ್ಧರಾದ ಅವರಿಬ್ಬರೂ ಆಮಿಷದ ಮೇಲೆ ಗಿಡುಗವು ಬೀಳುವಂತೆ ಕ್ಷಿಪ್ರವಾಗಿ ಅವನ ಮೇಲೆ ಬಿದ್ದರು.
ದುರ್ಯೋಧನನ ಯುದ್ಧ
ಹೃಷೀಕೇಶ-ಧನಂಜಯರು ಅತಿಕ್ರಮಿಸಿದುದನ್ನು ನೋಡಿ ದ್ರೋಣನಿಂದ ಕವಚವನ್ನು ಕಟ್ಟಿಸಿಕೊಂಡಿದ್ದ, ಹಯಸಂಸ್ಕಾರಗಳನ್ನು ತಿಳಿದಿದ್ದ ಪರಾಕ್ರಾಂತನಾಗಿದ್ದ ರಾಜಾ ದುರ್ಯೋಧನನು ಒಂದೇ ರಥದಲ್ಲಿ ಕುಳಿತು ಸಿಂಧುರಾಜನ ರಕ್ಷಣಾರ್ಥವಾಗಿ ಮುಂದೆ ಬಂದನು. ಮಹೇಷ್ವಾಸ ಕೃಷ್ಣ-ಪಾರ್ಥರನ್ನು ದಾಟಿ ಮುಂದೆ ಹೋಗಿ ಪುನಃ ಹಿಂದಿರುಗಿ ದುರ್ಯೋಧನನು ಪುಂಡರೀಕಾಕ್ಷನ ಮುಂದೆ ಬಂದನು. ಹೀಗೆ ಅವನು ಧನಂಜಯನನ್ನು ಅತಿಕ್ರಮಿಸಿ ಮುಂದೆ ಬರಲು ಎಲ್ಲ ಸೇನೆಗಳಲ್ಲಿ ಸಂತೋಷದಿಂದ ವಾದ್ಯಗಳು ಮೊಳಗಿದವು. ಅಲ್ಲಿ ಕೃಷ್ಣರ ಮುಂದೆ ನಿಂತಿರುವ ದುರ್ಯೋಧನನನ್ನು ನೋಡಿ ಶಂಖದುಂದುಭಿಗಳೊಂದಿಗೆ ಮಿಶ್ರಿತವಾದ ಸಿಂಹನಾದಗಳೂ ಕೇಳಿಬಂದವು. ಸಮರದಲ್ಲಿ ನಿನ್ನ ಮಗನನ್ನು ನೋಡಿ ಸಿಂಧುರಾಜನ ಪಾವಕೋಪಮ ರಕ್ಷಕರು ಹರ್ಷಿತರಾದರು. ಅನುಯಾಯಿಗಳೊಂದಿಗೆ ತಮ್ಮನ್ನು ಅತಿಕ್ರಮಿಸಿದ ದುರ್ಯೋಧನನನ್ನು ಕೃಷ್ಣನು ಕಾಲಕ್ಕೆ ತಕ್ಕುದಾದ ಈ ಮಾತನ್ನು ಅರ್ಜುನನಿಗೆ ನುಡಿದನು.
ವಾಸುದೇವನು ಹೇಳಿದನು: “ಧನಂಜಯ! ನಮ್ಮನ್ನು ಅತಿಕ್ರಮಿಸಿರುವ ಸುಯೋಧನನನ್ನು ನೋಡು! ಇದನ್ನು ಅತ್ಯದ್ಭುತವೆಂದು ಪರಿಗಣಿಸುತ್ತೇನೆ. ಇವನ ಸದೃಶನಾದ ರಥನಿಲ್ಲ! ಈ ಧಾರ್ತರಾಷ್ಟ್ರನು ದೂರ ಬಾಣವನ್ನು ಬೀಳಿಸಬಲ್ಲ. ಮಹೇಷ್ವಾಸ. ಕೃತಾಸ್ತ್ರ. ಯುದ್ಧ ದುರ್ಮದ. ದೃಢಾಸ್ತ್ರ. ಚಿತ್ರಯೋಧೀ ಮತ್ತು ಮಹಾಬಲಶಾಲೀ. ಇವನು ಅತ್ಯಂತ ಸುಖದಲ್ಲಿ ಬೆಳೆದವನು. ಮಹಾರಥರಿಂದಲೂ ಗೌರವಿಸಲ್ಪಡುವವನು. ಯಶಸ್ವಿಯಾದ ಇವನು ನಿತ್ಯವೂ ಪಾಂಡವರನ್ನು ದ್ವೇಷಿಸುತ್ತಾ ಬಂದವನು. ಅವನೊಂದಿಗೆ ನೀನು ಯುದ್ಧಮಾಡುವ ಸರಿಯಾದ ಸಮಯ ಬಂದೊದಗಿದೆಯೆಂದು ನನಗನ್ನಿಸುತ್ತದೆ. ಅಲ್ಲಿ ದ್ಯೂತದಲ್ಲಿ ಪಣವಿದ್ದಂತೆ ಇವನ ಮೇಲೆ ಜಯವಿದೆ ಅಥವಾ ಇನ್ನೊಂದಿದೆ. ತುಂಬಾ ಸಮಯ ಸಂಗ್ರಹಿಸಿಟ್ಟುಕೊಂಡಿರುವ ನಿನ್ನ ಕ್ರೋಧವೆಂಬ ವಿಷವನ್ನು ಇವನ ಮೇಲೆ ಎರಚು. ಪಾಂಡವರ ಅನರ್ಥಗಳಿಗೆ ಈ ಮಹಾರಥನೇ ಮೂಲ. ಈಗ ಇವನು ನಿನ್ನ ಬಾಣಗಳ ಸಿಲುಕಿನಲ್ಲಿಯೇ ಇದ್ದಾನೆ. ನೋಡು. ನಿನ್ನನ್ನು ನೀನೇ ಸಾಫಲ್ಯನಾಗಿಸಿಕೋ! ರಾಜ್ಯವನ್ನು ಬಯಸುವ ಈ ರಾಜನು ರಣದಲ್ಲಿ ನಿನ್ನ ಎದುರಿಗೆ ಏಕೆ ಬಂದಿದ್ದಾನೆ? ಅದೃಷ್ಟ! ಇಂದು ಇವನು ನಿನ್ನ ಬಾಣಗಳಿಗೆ ಗೋಚರನಾಗಿ ಒದಗಿದ್ದಾನೆ. ಅವನ ಜೀವಿತವನ್ನು ಅಪಹರಿಸುವಂತೆ ಮಾಡು. ಐಶ್ವರ್ಯ ಮದದಿಂದ ಸಮ್ಮೂಢನಾಗಿರುವ ಇವನು ದುಃಖವೆನ್ನುವುದನ್ನೇ ಅನುಭವಿಸಿಲ್ಲ. ಅವನು ಸಂಯುಗದಲ್ಲಿ ನಿನ್ನ ವೀರ್ಯವನ್ನೂ ತಿಳಿದಿಲ್ಲ. ಸುರಾಸುರಮನುಷ್ಯರೊಡನೆ ಮೂರು ಲೋಕಗಳೂ ರಣದಲ್ಲಿ ನಿನ್ನನ್ನು ಜಯಿಸಲು ಉತ್ಸುಕರಾಗುವುದಿಲ್ಲ. ಇನ್ನು ಒಬ್ಬ ಸುಯೋಧನನೆಲ್ಲಿ? ಒಳ್ಳೆಯದಾಯಿತು ಪಾರ್ಥ! ಇವನು ನಿನ್ನ ರಥದ ಬಳಿ ಬಂದೊದಗಿದ್ದಾನೆ! ಪುರಂದರನು ವೃತ್ರನನ್ನು ಹೇಗೋ ಹಾಗೆ ಇವನನ್ನು ಸಂಹರಿಸು! ಇವನು ಸತತವೂ ನಿಮಗೆ ಅನರ್ಥವನ್ನುಂಟುಮಾಡಲು ಮುಂದಿದ್ದವನು. ಮೋಸದಿಂದ ಇವನು ದ್ಯೂತದಲ್ಲಿ ಧರ್ಮರಾಜನನ್ನು ವಂಚಿಸಿದನು. ಅಪಾಪಿಗಳಾದ ನಿಮ್ಮ ಮೇಲೆ ಪಾಪಮತಿಯಾದ ಇವನು ನಿತ್ಯವೂ ಅನೇಕ ಅತಿಕ್ರೂರ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾನೆ. ಯುದ್ಧದಲ್ಲಿ ಆರ್ಯನಂತೆ ನಿಶ್ಚಯವನ್ನು ಮಾಡಿ, ವಿಚಾರಮಾಡದೇ ಈ ಅನಾರ್ಯ, ಸದಾ ಕ್ಷುದ್ರನಾಗಿರುವ, ಬೇಕಾದಂತೆ ನಡೆದುಕೊಳ್ಳುವ ಪುರುಷನನ್ನು ಸಂಹರಿಸು! ಮೋಸದಿಂದ ರಾಜ್ಯಹರಣ, ವನವಾಸ, ಕೃಷ್ಣೆಯ ಪರಿಕ್ಲೇಶ ಇವುಗಳನ್ನು ಹೃದಯದಲ್ಲಿಟ್ಟುಕೊಂಡು ಪರಾಕ್ರಮವನ್ನು ತೋರಿಸು! ಅದೃಷ್ಟವಶಾತ್ ಅವನು ನಿನ್ನ ಬಾಣಗಳಿಗೆ ಗೋಚರಿಸಿಯೇ ಇದ್ದಾನೆ. ಇನ್ನೂ ಅದೃಷ್ಟವೆಂದರೆ ಅವನು ನಿನ್ನ ಕಾರ್ಯಕ್ಕೆ ವಿಘ್ನವನ್ನುಂಟು ಮಾಡಲು ನಿನ್ನ ಎದುರಿಗೇ ಬಂದು ನಿಂತಿದ್ದಾನೆ. ಅದೃಷ್ಟವಶಾತ್ ಅವನು ಸಂಗ್ರಾಮದಲ್ಲಿ ನಿನ್ನೊಂಡನೆ ಯುದ್ಧಮಾಡಬೇಕೆಂದು ತಿಳಿದುಕೊಂಡೇ ಬಂದಿದ್ದಾನೆ. ಅದೃಷ್ಟವೆಂದರೆ ನೀನು ಬಯಸದೇ ಇದ್ದಿದ್ದರೂ ನಿನ್ನ ಬಯಕೆಗಳನ್ನು ಪೂರೈಸುವ ಸಮಯವು ಬಂದೊದಗಿದೆ. ಹಿಂದೆ ದೇವಾಸುರರ ಯುದ್ಧದಲ್ಲಿ ಇಂದ್ರನು ಜಂಭಾಸುರನನ್ನು ಹೇಗೆ ಕೊಂದನೋ ಹಾಗೆ ನೀನು ರಣದಲ್ಲಿ ಈ ಕುಲಾಧಮ ಧಾರ್ತರಾಷ್ಟ್ರನನ್ನು ಸಂಹರಿಸು. ಇವನು ಹತನಾಗಲು ನೀನು ಈ ಅನಾಥ ಸೇನೆಯನ್ನೂ ಭೇದಿಸು. ದುರಾತ್ಮರ ಮೂಲವಾಗಿರುವ ಇವನನ್ನು ಚಿಂದಿ ಚಿಂದಿ ಮಾಡಿ ವೈರದ ಅವಭೃತಸ್ನಾನವನ್ನು ಮಾಡು!”
ಹಾಗೆಯೇ ಆಗಲೆಂದು ಪಾರ್ಥನು ಹೇಳಿದನು: “ನಾನು ಮಾಡಿ ತೋರಿಸಬೇಕಾದುದು ಇದು. ಬೇರೆ ಎಲ್ಲರನ್ನೂ ಕಡೆಗಣಿಸಿ ಸುಯೋಧನನಿರುವಲ್ಲಿಗೆ ಹೋಗು. ದೀರ್ಘಕಾಲದವರೆಗೆ ಯಾವ ಕಂಟಕವೂ ಇಲ್ಲದೇ ನಮ್ಮ ರಾಜ್ಯವನ್ನು ಭೋಗಿಸಿದ ಇವನನ್ನು ರಣಮೂರ್ಧನಿಯಲ್ಲಿ ಯುದ್ಧದಲ್ಲಿ ವಿಕ್ರಮದಿಂದ ಕತ್ತರಿಸಿಬಿಡುತ್ತೇನೆ. ಮಾಧವ! ಕಷ್ಟಗಳಿಗೆ ಅನರ್ಹಳಾಗಿದ್ದ ಕೃಷ್ಣೆಯ ಕೂದಲನ್ನೆಳೆದುದರ ಪ್ರತೀಕಾರವನ್ನು ನಾನು ಮಾಡಬಲ್ಲೆನೇ?”
ಕೃಷ್ಣಬ್ಬರೂ ಹೃಷ್ಟರಾಗಿ ಹೀಗೆ ಮಾತನಾಡಿಕೊಳ್ಳುತ್ತಾ ಆ ಉತ್ತಮ ಶ್ವೇತಾಶ್ವಗಳನ್ನು ರಣದಲ್ಲಿ ಆ ನರಾಧಿಪನನ್ನೇ ತಮ್ಮ ಲಕ್ಷ್ಯವನ್ನಾಗಿರಿಸಿಕೊಳ್ಳಲು ಅವನಲ್ಲಿಗೆ ಹೋದರು. ಅವರು ಸಮೀಪಕ್ಕೆ ಬರಲು ದುರ್ಯೋಧನನು ಮಹಾ ಭಯವು ಪ್ರಾಪ್ತವಾದರೂ ಸ್ವಲ್ಪವೂ ಭಯಪಡಲಿಲ್ಲ. ಎದುರಾಗಿ ಬಂದಿರುವ ಅರ್ಜುನ-ಹೃಷೀಕೇಶರನ್ನು ವಿಚಾರ ಮಾಡದೇ ಎದುರಿಸಿದ ಅವನನ್ನು ಅಲ್ಲಿದ್ದ ಕ್ಷತ್ರಿಯರೆಲ್ಲರೂ ಪ್ರಶಂಸಿಸಿದರು. ರಣದಲ್ಲಿ ರಾಜನನ್ನು ನೋಡಿ ಕೌರವ ಸೈನ್ಯಗಳಲೆಲ್ಲಾ ಮಹಾನಾದವುಂಟಾಯಿತು. ಹೀಗೆ ಜನರು ಭಯಂಕರ ಕೋಲಾಹಲವನ್ನು ಮಾಡುತ್ತಿರಲು ದುರ್ಯೋಧನನು ಅಮಿತ್ರರನ್ನು ಕಡೆಗಣಿಸಿ ಎದುರಿಸಿ ತಡೆದನು. ಆ ಧನ್ವಿಯಿಂದ ತಡೆಯಲ್ಪಟ್ಟ ಕೌಂತೇಯನು ಅತ್ಯಂತ ಕುಪಿತನಾದನು. ದುರ್ಯೋಧನ-ಧನಂಜಯರು ಪರಸ್ಪರ ಮೇಲೆ ಕುಪಿತರಾದದನ್ನು ಸುತ್ತಲಿದ್ದ ರಾಜರು ನೋಡಿದರು. ಕೃದ್ಧರಾಗಿರುವ ಪಾರ್ಥನನ್ನೂ ವಾಸುದೇವನನ್ನೂ ನೋಡಿ ದುರ್ಯೋಧನನು ಜೋರಾಗಿ ನಕ್ಕು, ಯುದ್ದಮಾಡಲು ಬಯಸಿ ಆಹ್ವಾನಿಸಿದನು.
ಆಗ ಪ್ರಹೃಷ್ಟರಾದ ದಾಶಾರ್ಹ ಮತ್ತು ಧನಂಜಯರು ಮಹಾ ಸಿಂಹನಾದ ಮಾಡಿದರು ಮತ್ತು ಉತ್ತಮ ಶಂಖಗಳನ್ನು ಊದಿದರು. ಹೃಷ್ಟರೂಪರಾದ ಅವರನ್ನು ನೋಡಿ ಕೌರವೇಯರೆಲ್ಲರು ದುರ್ಯೋಧನನ ಜೀವಿತದ ಕುರಿತು ನಿರಾಶರಾದರು. ಇತರರು ಕೂಡ ಶೋಕಿತರಾದರು. ದುರ್ಯೋಧನನು ರಣಯಜ್ಞದ ವೈಶ್ವಾನರನಲ್ಲಿ ಆಹುತಿಯಾದನೆಂದೇ ಅವರೆಲ್ಲರೂ ಪರಿಗಣಿಸಿದರು. ಪ್ರಹೃಷ್ಟರಾದ ಕೃಷ್ಣ-ಪಾಂಡವರನ್ನು ನೋಡಿ ಕೌರವ ಯೋಧರು ಭಯಾರ್ದಿತರಾಗಿ “ರಾಜನು ಹತನಾದ! ರಾಜನು ಹತನಾದ!” ಎಂದೂ ಕೂಗತೊಡಗಿದರು. ಜನರ ಆ ಕೋಲಾಹಲವನ್ನು ಕೇಳಿ ದುರ್ಯೋಧನನು ಅವರಿಗೆ “ಹೆದರಬೇಡಿ! ಕೃಷ್ಣರಿಬ್ಬರನ್ನೂ ನಾನು ಮೃತ್ಯುವಿಗೆ ಕಳುಹಿಸುತ್ತೇನೆ.” ಎಂದು ಹೇಳಿದನು. ಹೀಗೆ ಸೈನಿಕರೆಲ್ಲರಿಗೆ ಹೇಳಿ ಜಯಾಪೇಕ್ಷೀ ನರಾಧಿಪನು ಕೋಪದಿಂದ ಪಾರ್ಥನಿಗೆ ಈ ಮಾತನ್ನಾಡಿದನು: “ಪಾರ್ಥ! ನೀನು ಪಾಂಡುವಿಗೇ ಹುಟ್ಟಿದವನಾಗಿದ್ದರೆ ನೀನು ಕಲಿತಿರುವ ದಿವ್ಯ ಮತ್ತು ಮಾನುಷ ಅಸ್ತ್ರಗಳನ್ನು ನನಗೆ ಬೇಗನೇ ತೋರಿಸು! ನಿನ್ನಲ್ಲಿ ಮತ್ತು ಹಾಗೆಯೇ ಕೇಶವನಲ್ಲಿ ಎಷ್ಟು ಬಲ-ವೀರ್ಯಗಳಿವೆಯೋ ಬೇಗನೆ ನನ್ನ ಎದಿರು ಮಾಡಿ ತೋರಿಸು. ನಿನ್ನ ಪೌರುಷವನ್ನು ನೋಡುತ್ತೇನೆ! ಪರೋಕ್ಷವಾಗಿ ನೀನು ಮಾಡಿದ ಕರ್ಮಗಳ ಕುರಿತು ಹೇಳಿದುದನ್ನು ಕೇಳಿದ್ದೇನೆ. ಸ್ವಾಮಿಯ ಸತ್ಕಾರಗಳಿಗೆ ಯೋಗ್ಯವಾದ ಅವುಗಳನ್ನು ಇಲ್ಲಿಯೂ ಪ್ರದರ್ಶಿಸು!”
ಹೀಗೆ ಹೇಳಿ ರಾಜನು ಅರ್ಜುನನನ್ನು ಮೂರು ಮರ್ಮಾತಿಗ ಶರಗಳಿಂದ ಹೊಡೆದು ಮಹಾವೇಗದಿಂದ ನಾಲ್ಕು ಕುದುರೆಗಳನ್ನೂ ಹೊಡೆದನು. ವಾಸುದೇವನನ್ನೂ ಅವನ ಎದೆಗೆ ಗುರಿಯಿಟ್ಟು ಹತ್ತು ಬಾಣಗಳಿಂದು ಹೊಡೆದು, ಭಲ್ಲದಿಂದ ಅವನ ಕೈಯಲ್ಲಿದ್ದ ಬಾರಿಕೋಲನ್ನು ಕಿತ್ತು ಭೂಮಿಗೆ ಬೀಳಿಸಿದನು. ತಕ್ಷಣವೇ ಪಾರ್ಥನು ಅವ್ಯಗ್ರನಾಗಿ ಹದಿನಾಲ್ಕು ಚಿತ್ರಪುಂಖಗಳುಳ್ಳ ಶಿಲಾಶಿತಗಳಿಂದ ಹೊಡೆಯಲು ಅವುಗಳನ್ನು ಅವನ ಕವಚವು ಹಿಂದಿರುಗಿಸಿದವು. ಅವುಗಳನ್ನು ವಿಫಲವಾದುದನ್ನು ನೋಡಿ ಪುನಃ ಒಂಭತ್ತು ಮತ್ತು ಐದು ಪ್ರಾಣಗಳನ್ನು ಹಾರಿಸಬಲ್ಲ ನಿಶಿತ ಬಾಣಗಳನ್ನು ಪ್ರಯೋಗಿಸಲು ಅವೂ ಕೂಡ ಅವನ ಕವಚದಿಂದಾಗಿ ನಿರರ್ಥಕವಾದವು. ಆ ಇಪ್ಪತ್ತೆಂಟು ಬಾಣಗಳು ನಿಷ್ಫಲವಾದುದನ್ನು ನೋಡಿ ಕೃಷ್ಣನು ಅರ್ಜುನನಿಗೆ ಇದನ್ನು ಹೇಳಿದನು: “ಪಾರ್ಥ! ಶಿಲೆಗಳು ಹರಿದುಹೋಗುವಂತೆ ಹಿಂದೆ ಕಂಡಿರದೇ ಇದ್ದುದನ್ನು ನಾನು ನೋಡುತ್ತಿದ್ದೇನೆ. ನೀನು ಪ್ರಯೋಗಿಸಿದ ಪತ್ರಿಗಳು ನಿರರ್ಥಕವಾಗುತ್ತಿವೆ. ಗಾಂಡೀವದಲ್ಲಿದ್ದ ಪ್ರಾಣ ಮತ್ತು ಹಾಗೆಯೇ ನಿನ್ನ ಮುಷ್ಟಿ ಮತ್ತು ಭುಜಗಳ ಬಲವು ಮೊದಲಿನಂತೆಯೇ ಇದೆ ತಾನೇ? ಇದು ನಿನ್ನ ಮತ್ತು ಈ ಶತ್ರುವಿನ ಕೊನೆಯ ಭೇಟಿಯಲ್ಲವೇ? ನಾನು ಕೇಳುತ್ತಿದ್ದೇನೆ. ಹೇಳು. ಈ ರೀತಿ ರಣದಲ್ಲಿ ದುರ್ಯೋಧನನ ರಥದ ಕಡೆ ಕಳುಹಿಸಿದ ಈ ಶರಗಳು ವ್ಯರ್ಥವಾಗಿ ಬೀಳುತ್ತಿವೆಯೆಂದರೆ ನನಗೆ ಮಹಾ ವಿಸ್ಮಯವಾಗುತ್ತಿದೆ. ಇಂದು ಇದೇನು ವಿಡಂಬನೆ! ವಜ್ರದಂತೆ ಘೋರವಾಗಿರುವ, ಶತ್ರುಗಳ ಕಾಯವನ್ನು ಭೇದಿಸಬಲ್ಲ ನಿನ್ನ ಈ ಶರಗಳು ಮಾಡಬೇಕಾದುದನ್ನು ಮಾಡುತ್ತಿಲ್ಲವಲ್ಲ!”
ಅರ್ಜುನನು ಹೇಳಿದನು: “ಕೃಷ್ಣ! ನನಗನಿಸುತ್ತದೆ - ಧಾರ್ತರಾಷ್ಟ್ರನಿಗೆ ದ್ರೋಣನು ಕವಚವನ್ನು ತೊಡಿಸಿದ್ದಾನೆ. ಇವನು ಧರಿಸಿರುವ ಈ ಕವಚವು ಅಸ್ತ್ರಗಳಿಗೆ ಅಭೇದ್ಯವಾದುದು. ಈ ಕವಚದೊಳಗೆ ಮೂರು ಲೋಕಗಳೂ ಅಡಗಿವೆ. ದ್ರೋಣನೊಬ್ಬನಿಗೇ ಇದು ತಿಳಿದಿದೆ. ಮತ್ತು ಆ ಸತ್ತಮನಿಂದ ನಾನೂ ಇದನ್ನು ಕಲಿತಿದ್ದೇನೆ. ಈ ಕವಚವನ್ನು ಬಾಣಗಳಿಂದ - ಯುದ್ಧದಲ್ಲಿ ಸ್ವಯಂ ಮಘವತನಿಗೂ ವಜ್ರದಿಂದ ಕೂಡ - ಎಂದೂ ಭೇದಿಸಲು ಸಾಧ್ಯವಿಲ್ಲ. ಮೂರು ಲೋಕಗಳಲ್ಲಿ ನಡೆಯುವ ಎಲ್ಲವೂ ನಿನಗೆ ತಿಳಿದಿದ್ದರೂ ಏಕೆ ಹೀಗೆ ನನ್ನನ್ನು ಮೋಹಗೊಳಿಸುತ್ತಿರುವೆ? ಹಾಗೆಯೇ ಮುಂದೆ ಆಗುವವೆಲ್ಲವೂ ನಿನಗೆ ತಿಳಿದೇ ಇದೆ. ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಈ ದುರ್ಯೋಧನನು ದ್ರೋಣನು ತೊಡಿಸಿದ ಈ ಹೊಳೆಯುವ ಕವಚವನ್ನು ಧರಿಸಿ ರಣದಲ್ಲಿ ಭಯವಿಲ್ಲದೇ ನಿಂತಿದ್ದಾನೆ. ಆದರೆ ಆ ಕವಚವನ್ನು ಧರಿಸಿದವನು ಏನು ಮಾಡಬೇಕು ಎನ್ನುವುದು ಅವನಿಗೆ ತಿಳಿದಿಲ್ಲ! ಸ್ತ್ರೀಯಂತೆ ಇವನು ಇದನ್ನು ಧರಿಸಿ ಮಿರುಗುತ್ತಿದ್ದಾನೆ ಅಷ್ಟೆ! ನನ್ನ ಬಾಹುಗಳ ಮತ್ತು ಧನುಸ್ಸಿನ ವೀರ್ಯವನ್ನು ನೋಡು! ಕವಚದಿಂದ ರಕ್ಷಿತನಾಗಿದ್ದರೂ ಕೂಡ ಕೌರವ್ಯನನ್ನು ಪರಾಜಯಗೊಳಿಸುತ್ತೇನೆ. ಹೊಳೆಯುವ ಈ ಕವಚವನ್ನು ದೇವೇಶನು ಅಂಗಿರಸನಿಗೆ ಕೊಟ್ಟಿದ್ದನು. ಪುನಃ ಸುರಪತಿಯು ನನಗೆ ಈ ಕವಚವನ್ನು, ತೊಡುವ ಮಂತ್ರಗಳೊಡನೆ, ನನಗೆ ಕೊಟ್ಟಿದ್ದನು. ಈ ಕವಚವು ದೈವವಾಗಿದ್ದರೂ, ಸ್ವಯಂ ಬ್ರಹ್ಮನಿಂದ ನಿರ್ಮಿತವಾಗಿದ್ದರೂ, ನನ್ನ ಬಾಣಗಳಿಂದ ಹತನಾಗುವ ಈ ದುರ್ಬುದ್ಧಿಯನ್ನು ಇಂದು ರಕ್ಷಿಸುವುದಿಲ್ಲ!”
ಹೀಗೆ ಹೇಳಿ ಅರ್ಜುನನು ಬಾಣಗಳನ್ನು ಅಭಿಮಂತ್ರಿಸಿ, ಶಿಂಜಿನಿಯನ್ನು ಎಳೆದು ಧನುಸ್ಸಿನ ಮಧ್ಯದಲ್ಲಿ ಹೂಡುತ್ತಿರಲು ದ್ರೌಣಿಯು ಆ ಶರಗಳನ್ನು ಸರ್ವಾಸ್ತ್ರಗಳನ್ನೂ ನಿರಸನಗೊಳಿಸಬಲ್ಲ ಅಸ್ತ್ರದಿಂದ ತುಂಡರಿಸಿದನು. ದೂರದಿಂದಲೇ ಆ ಬ್ರಹ್ಮವಾದಿಯು ಅವುಗಳನ್ನು ಕತ್ತರಿಸಿದುದನ್ನು ನೋಡಿ ವಿಸ್ಮಿತನಾದ ಶ್ವೇತವಾಹನನು ಕೇಶವನಿಗೆ ನಿವೇದಿಸಿದನು: “ಜನಾರ್ದನ! ಈ ಅಸ್ತ್ರವನ್ನು ನಾನು ಎರಡನೆಯ ಬಾರಿ ಪ್ರಯೋಗಿಸಲು ಶಕ್ಯನಿಲ್ಲ. ಈ ಅಸ್ತ್ರವು ನನ್ನನ್ನೇ ನನ್ನ ಬಲವನ್ನೇ ಕೊಂದುಬಿಡುತ್ತದೆ!”
ಆಗ ದುರ್ಯೋಧನನು ಕೃಷ್ಣರಿಬ್ಬರನ್ನೂ ಒಂಭತ್ತು ಸರ್ಪಗಳ ವಿಷದಂತಿರುವ ನತಪರ್ವ ಶರಗಳಿಂದ ಹೊಡೆದನು. ಪುನಃ ಕೃಷ್ಣ-ಪಾಂಡವರ ಮೇಲೆ ಶರಗಳನ್ನು ಸುರಿಸಿದನು. ಆ ಮಹಾ ಶರವರ್ಷದಿಂದ ಕೌರವರು ಹರ್ಷಗೊಂಡರು. ಅವರು ವಾದ್ಯಗಳನ್ನು ಬಾರಿಸಿದರು ಮತ್ತು ಸಿಂಹನಾದವನ್ನು ಕೂಗಿದರು. ಆಗ ಕ್ರುದ್ಧನಾಗಿ ಪಾರ್ಥನು ಕಟವಾಯಿಯನ್ನು ನೆಕ್ಕುತ್ತಾ ಕವಚವು ರಕ್ಷಿಸುತ್ತಿದ್ದ ಅವನ ಅಂಗಗಳನ್ನು ನೋಡದೆಯೇ ಉತ್ತಮವಾಗಿ ಹೂಡಿದ ಅಂತಕನಂತಿರುವ ನಿಶಿತ ಬಾಣಗಳಿಂದ ಅವನ ಎರಡು ಕುದುರೆಗಳನ್ನೂ ಪಾರ್ಷ್ಣಸಾರಥಿಗಳನ್ನೂ ನಿರ್ದೇಹರನ್ನಾಗಿಸಿದನು. ಸವ್ಯಸಾಚಿಯು ಅವನ ಚಿತ್ರ ಧನುಸ್ಸನ್ನೂ, ಹಸ್ತವಾಪವನ್ನೂ ಕತ್ತರಿಸಿ, ರಥವನ್ನೂ ಚೂರು ಚೂರು ಮಾಡಲು ಉಪಕ್ರಮಿಸಿದನು. ಆಗ ತೀಕ್ಷ್ಣವಾದ ಎರಡು ಬಾಣಗಳಿಂದ ದುರ್ಯೋಧನನನ್ನು ವಿರಥನನ್ನಾಗಿ ಮಾಡಿ ಅರ್ಜುನನನು ಅವನ ಎರಡೂ ಅಂಗೈಗಳ ಮಧ್ಯದಲ್ಲಿ ಹೊಡೆದನು.
ಆ ಪರಮಧನ್ವಿಯಿಂದ ಅವನು ಕಷ್ಟಹೊಂದಿದುದನ್ನು ನೋಡಿ ಧನಂಜಯನ ಶರಗಳಿಂದ ಪೀಡಿತನಾದ ಅವನನ್ನು ರಕ್ಷಿಸಲು ಇತರರು ಮುಂದಾದರು. ಅವರು ಅನೇಕ ಸಹಸ್ರ ಸಜ್ಜಾಥಿದ್ದ ರಥಗಳಿಂದ, ಕುದುರೆ-ಆನೆಗಳಿಂದ ಮತ್ತು ಸಂರಬ್ಧ ಪದಾತಿಗಳಿಂದ ಧನಂಜಯನನ್ನು ಸುತ್ತುವರೆದರು. ಮಹಾ ಅಸ್ತ್ರವರ್ಷಗಳಿಂದ ಮತ್ತು ಜನರ ಗುಂಪುಗಳಿಂದ ಆವೃತರಾದ ಅರ್ಜುನ-ಗೋವಿಂದರಾಗಲೀ, ಅವರ ರಥವಾಗಲೀ ಕಾಣಿಸಲಿಲ್ಲ. ಆಗ ಅರ್ಜುನನು ಅಸ್ತ್ರವೀರ್ಯದಿಂದ ಆ ವರೂಥಿಗಳನ್ನು ಸಂಹರಿಸಿದನು. ಅಲ್ಲಿ ನೂರಾರು ರಥಗಳೂ ಆನೆಗಳು ತುಂಡಾಗಿ ಬಿದ್ದವು. ಕೊಲ್ಲಲು ಬಂದವರು ಅವನ ಉತ್ತಮ ರಥದ ಸಮೀಪ ಬರುವ ಮೊದಲೇ ಹತರಾದರು. ಅವರ ರಥವು ಸುತ್ತುವರೆಯಲ್ಪಟ್ಟು ಒಂದು ಕ್ರೋಶ ದೂರದವರೆಗೆ ಹಾಗೆಯೇ ನಿಂತಿತ್ತು. ಆಗ ತ್ವರೆಮಾಡಿ ವೃಷ್ಣಿವೀರನು ಅರ್ಜುನನಿಗೆ ಹೇಳಿದನು: “ಧನುಸ್ಸನ್ನು ಟೇಂಕರಿಸು. ನಾನು ಶಂಖವನ್ನು ಊದುತ್ತೇನೆ.” ಆಗ ಅರ್ಜುನನು ಬಲವಾಗಿ ಗಂಡೀವವನ್ನು ಟೇಂಕರಿಸಿ ಮಹಾ ಶರವರ್ಷಗಳಿಂದ ಮತ್ತು ಚಪ್ಪಾಳೆಗಳಿಂದ ಶತ್ರುಗಳನ್ನು ಸಂಹರಿಸಿದನು. ಧೂಳಿನಿಂದ ಮುಖವು ಮಸುಕಾಗಿದ್ದ ಕೇಶವನು ಜೋರಾಗಿ ಬಲವನ್ನುಪಯೋಗಿಸಿ ಪಾಂಚಜನ್ಯವನ್ನು ಊದಿದನು. ಅವನ ಶಂಖದ ನಾದದಿಂದ ಮತ್ತು ಧನುಸ್ಸಿನ ನಿಸ್ವನದಿಂದ ಸತ್ತ್ವವಿಲ್ಲದ ಮತ್ತು ಸತ್ತ್ವವಿದ್ದ ಜನರು ನೆಲದ ಮೇಲೆ ಬಿದ್ದರು. ಅವರಿಂದ ವಿಮುಕ್ತವಾದ ಅವರ ರಥವು ಗಾಳಿಯಿಂದ ತೂರಲ್ಪಟ್ಟ ಮೋಡಗಳಿಂದ ಹೊರಬಂದಿತು.
ಆಗ ಜಯದ್ರಥನ ಗೋಪ್ತಾರರು ಅವರ ಅನುಯಾಯಿಗಳೊಂದಿಗೆ ತಲ್ಲಣಿಸಿದರು. ಪಾರ್ಥನನ್ನು ನೋಡಿದೊಡನೆಯೇ ಸೈಂಧವನ ರಕ್ಷಕರು ವಸುಂಧರೆಯನ್ನು ನಡುಗಿಸುತ್ತಾ ಬಹುವಿಧದ ನಾದಗೈದರು. ಬಾಣದ ಶಬ್ಧ, ಉಗ್ರ ಕೂಗುಗಳು ಶಂಖನಿಸ್ವನಗಳೊಂದಿಗೆ ಸೇರಲು ಆ ಮಹಾತ್ಮರು ಸಿಂಹನಾದಗಳನ್ನೂ ಕೂಗಿದರು. ಕೌರವರಿಂದ ಹೊರಹೊಮ್ಮಿದ ಆ ಘೋರ ನಿನಾದವನ್ನು ಕೇಳಿ ವಾಸುದೇವ-ಧನಂಜಯರು ಶಂಖಗಳನ್ನು ಊದಿದರು. ಆ ಮಹಾ ಶಬ್ಧದಿಂದ ಶೈಲ-ಸಾಗರ-ದ್ವೀಪ-ಪಾತಾಲಗಳೊಂದಿಗೆ ಈ ಭೂಮಿಯು ತುಂಬಿಕೊಂಡಿತು. ಆ ಶಬ್ದವು ಸರ್ವ ದಶ ದಿಶಗಳನ್ನೂ ತಲುಪಿ ಅಲ್ಲಿಯೇ ಕುರು-ಪಾಂಡವರ ಸೇನೆಗಳಲ್ಲಿ ಪ್ರತಿಧ್ವನಿಸಿತು. ಅಲ್ಲಿ ಕೌರವ ರಥಿಗಳನ್ನು ನೋಡಿ ಮಹಾರಥ ಕೃಷ್ಣ-ಧನಂಜಯರು ಪರಮ ಕುಪಿತರಾಗಿ ತ್ವರೆಮಾಡಿ ಮುಂದುವರೆದರು. ಆಗ ಮಹಾಭಾಗರಾದ ಕೃಷ್ಣರಿಬ್ಬರೂ ಕವಚಧಾರಿಗಳಾದ ಕೌರವರನ್ನು ನೋಡಿ ಸಂಕ್ರುದ್ಧರಾಗಿ ಆಕ್ರಮಣಿಸಿದರು. ಅದೊಂದು ಅದ್ಭುತವಾಗಿತ್ತು.
