ಯುದ್ಧದ ಹತ್ತೊಂಭತ್ತನೆಯ ದಿನದ ಬೆಳಿಗ್ಗೆ ಸಂಜಯನು ಹಸ್ತಿನಾಪುರಕ್ಕೆ ಬಂದು ದುರ್ಯೋಧನನು ಹತನಾದುದನ್ನು ತಿಳಿಸಲು ಧೃತರಾಷ್ಟ್ರನ ಶೋಕ
ಕರ್ಣನು ಹತನಾಗಲು ಧಾರ್ತರಾಷ್ಟ್ರ ಸುಯೋಧನನು ಅತ್ಯಂತ ಶೋಕಸಾಗರದಲ್ಲಿ ಮುಳುಗಿಹೋದನು. ಎಲ್ಲೆಡೆಯೂ ನಿರಾಶೆಯೇ ಕಂಡುಬಂದಿತು. “ಹಾ ಕರ್ಣ! ಹಾ ಕರ್ಣ!” ಎಂದು ಪುನಃ ಪುನಃ ಶೋಕಿಸುತ್ತಾ ಬಹಳ ಕಷ್ಟದಿಂದ ಅವನು ಅಳಿದುಳಿದ ನೃಪರೊಂದಿಗೆ ಸ್ವಶಿಬಿರಕ್ಕೆ ತೆರಳಿದನು. ಶಾಸ್ತ್ರನಿಶ್ಚಿತ ಕಾರಣಗಳಿಂದ ರಾಜರು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಸೂತಪುತ್ರನ ವಧೆಯನ್ನು ಸ್ಮರಿಸಿಕೊಳ್ಳುತ್ತಾ ರಾಜನಿಗೆ ಶಾಂತಿಯೆನ್ನುವುದೇ ಇಲ್ಲವಾಯಿತು. ಆಗಬೇಕಾದುದನ್ನು ಆಗಿಸಿಕೊಳ್ಳುವುದರಲ್ಲಿ ದೈವವೇ ಬಲಶಾಲಿಯಾದುದೆಂದು ಮನ್ನಿಸಿ ರಾಜನು ಸಂಗ್ರಾಮವನ್ನು ನಿಶ್ಚಯಿಸಿ ಪುನಃ ಯುದ್ಧಕ್ಕೆ ಹೊರಟನು. ವಿಧಿವತ್ತಾಗಿ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ ರಾಜಪುಂಗವನು ಅಳಿದುಳಿದ ನೃಪರೊಂದಿಗೆ ರಣಕ್ಕೆ ತೆರಳಿದನು. ಆಗ ಕುರು-ಪಾಂಡವ ಸೇನೆಗಳ ನಡುವೆ ದೇವಾಸುರರ ರಣದಂತೆ ಅತ್ಯಂತ ತುಮುಲ ಯುದ್ಧವು ನಡೆಯಿತು. ಆ ದಿನ ಶಲ್ಯನು ಪಾಂಡುಸೇನೆಯೊಂದಿಗೆ ಕದನವಾಡಿ ಮಧ್ಯಾಹ್ನದಲ್ಲಿ ಧರ್ಮರಾಜನಿಂದ ಹತನಾದನು.
ಆಗ ಬಂಧುಗಳನ್ನು ಕಳೆದುಕೊಂಡ ರಾಜಾ ದುರ್ಯೋಧನನು ರಿಪುಗಳ ಭಯದಿಂದ ರಣದಿಂದ ತಪ್ಪಿಸಿಕೊಂಡು ಘೋರ ಸರೋವರವನ್ನು ಪ್ರವೇಶಿಸಿದನು. ಆ ದಿನದ ಅಪರಾಹ್ಣದಲ್ಲಿ ಮಹಾರಥರಿಂದ ಸುತ್ತುವರೆಯಲ್ಪಟ್ಟು ಭೀಮಸೇನನು ಸರೋವರದಿಂದ ದುರ್ಯೋಧನನ್ನು ಕರೆದು ಯೋಗವಶಾತ್ ಕೆಳಗುರುಳಿಸಿದನು.
ಆ ಮಹೇಷ್ವಾಸನು ಹತನಾಗಲು ಅಳಿದುಳಿದ ಮೂರು ಮಹಾರಥರು ಕೋಪದಿಂದ ರಾತ್ರಿಯಲ್ಲಿ ಪಾಂಚಾಲಸೈನಿಕರನ್ನು ಸಂಹರಿಸಿದರು.
ಮರುದಿನ ಪೂರ್ವಾಹ್ಣದ ಸಮಯದಲ್ಲಿ ದುಃಖಶೋಕಸಮನ್ವಿತ ದೀನ ಸಂಜಯನು ಶಿಬಿರದಿಂದ ಹೊರಟು ಹಸ್ತಿನಾಪುರಿಯನ್ನು ಪ್ರವೇಶಿಸಿದನು. ಪುರವನ್ನು ಪ್ರವೇಶಿಸಿ ಭುಜಗಳನ್ನು ಮೇಲೆತ್ತಿ ದುಃಖಿತನಾಗಿ ನಡುಗುತ್ತಾ ಅವನು ಬೇಗನೇ ರಾಜನಿವೇಶನವನ್ನು ಪ್ರವೇಶಿಸಿದನು. “ಹಾ ರಾಜ! ಮಹಾತ್ಮ ದುರ್ಯೋಧನನ ನಿಧನದಿಂದ ನಾವೆಲ್ಲರೂ ನಾಶಗೊಂಡೆವು!” ಎಂದು ದುಃಖಿತನಾಗಿ ರೋದಿಸಿದನು. “ಅಯ್ಯೋ! ಕಾಲವೇ ಅತ್ಯಂತ ಬಲಶಾಲಿ! ಬಲದಲ್ಲಿ ಶಕ್ರನಿಗೆ ಸಮರಾಗಿದ್ದ ಪಾರ್ಥಿವರೆಲ್ಲರೂ ವಧಿಸಲ್ಪಟ್ಟು ಪರಮ ಗತಿಯನ್ನು ಹೊಂದಿದರು” ಎಂದನು.
ಸಂಜಯನನ್ನು ನೋಡಿದ ಪುರಜನರೆಲ್ಲರೂ ಅತ್ಯಂತ ಉದ್ವಿಗ್ನರಾಗಿ ಒಟ್ಟು ಸ್ವರದಲ್ಲಿ “ಹಾ ರಾಜಾ!” ಎಂದು ಗೋಳಿಟ್ಟರು. ನೃಪನು ಹತನಾದುದನ್ನು ಕೇಳಿ ಕುಮಾರಾದ್ಯಂತರಾಗಿ ಸುತ್ತಲಿದ್ದ ಎಲ್ಲರೂ ಆರ್ತನಾದಗೈದರು. ವಿಹ್ವಲ ಸೂತನು ನೃಪತಿಕಕ್ಷವನ್ನು ಪ್ರವೇಶಿಸಿ ತನ್ನ ಒಡೆಯ ಧೃತರಾಷ್ಟ್ರನನ್ನು ಕಂಡನು. ಅಲ್ಲಿ ಕರ್ಣನ ನಿಧನದ ಕುರಿತೇ ಯೋಚಿಸುತ್ತಿದ್ದ, ಸೊಸೆಯಂದಿರು, ಗಾಂಧಾರಿ-ವಿದುರರು, ಅನ್ಯ ಸುಹೃದಯರು, ಕುಟುಂಬದವರು, ಮತ್ತು ಹಿತೈಷಿಗಳಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ಧೃತರಾಷ್ಟ್ರನನ್ನು ನೋಡಿ ದುಃಖಮನಸ್ಕನಾಗಿ ಅಳುತ್ತಾ ಕಣ್ಣೀರಿನಿಂದ ತಡೆಯಲ್ಪಟ್ಟ ಧ್ವನಿಯಿಂದ ಸೂತನು ರಾಜನಿಗೆ ಈ ಮಾತನ್ನಾಡಿದನು: “ಭರತರ್ಷಭ! ನಾನು ಸಂಜಯ! ಮದ್ರಾಧಿಪ ಶಲ್ಯ ಸೌಬಲ ಶಕುನಿ, ಮತ್ತು ದೃಢವಿಕ್ರಮಿ ಉಲೂಕರು ಹತರಾದರು! ಕಾಂಬೋಜರು, ಶಕರು ಮತ್ತು ಸಂಶಪ್ತಕರು ಎಲ್ಲರೂ ಹತರಾದರು! ಮ್ಲೇಚ್ಛರು, ಪರ್ವತೇಯರು, ಮತ್ತು ಯವನರು ಕೂಡ ಕೆಳಗುರುಳಿದರು! ಪೂರ್ವದೇಶದವರೂ ದಕ್ಷಿಣದವರೂ ಎಲ್ಲರೂ ಹತರಾದರು! ಉತ್ತರದವರು ಮತ್ತು ಪಶ್ಚಿಮದವರು ಎಲ್ಲರೂ ಹತರಾದರು! ರಾಜರು ಮತ್ತು ರಾಜಪುತ್ರರೆಲ್ಲರೂ ಹತರಾದರು! ದುರ್ಯೋಧನನೂ ಹತನಾದನು! ಅವನು ತೊಡೆಯೊಡೆದು ಗಾಯಗೊಂಡು ಕೆಸರಿನಲ್ಲಿ ಮಲಗಿದ್ದಾನೆ! ಧೃಷ್ಟದ್ಯುಮ್ನ, ಶಿಖಂಡೀ, ಉತ್ತಮೌಜ, ಯುಧಾಮನ್ಯು ಮತ್ತು ಇತರ ಪ್ರಭದ್ರಕರೂ ಹತರಾದರು! ಪಾಂಚಾಲರೂ, ಚೇದಿದೇಶದವರೂ ಸಂಹರಿಸಲ್ಪಟ್ಟಿದ್ದಾರೆ! ನಿನ್ನ ಮತ್ತು ದ್ರೌಪದಿಯ ಪುತ್ರರೆಲ್ಲರೂ ಹತರಾಗಿದ್ದಾರೆ! ಕರ್ಣಪುತ್ರ ವೃಷಸೇನನೂ ಹತನಾಗಿದ್ದಾನೆ! ನರರು ಹತರಾದರು! ಆನೆಗಳು ಕೆಳಗುರುಳಿದವು! ಯುದ್ಧದಲ್ಲಿ ರಥಿಗಳು ಮತ್ತು ಕುದುರೆಗಳೂ ಹತಗೊಂಡವು! ಪಾಂಡವರ ಮತ್ತು ನಿನ್ನ ಶಿಬಿರಗಳಲ್ಲಿ ಕೆಲವರು ಮಾತ್ರ ಉಳಿದುಕೊಂಡಿದ್ದಾರೆ. ಕಾಲ-ಮೋಹಿತವಾದ ಈ ಜಗತ್ತಿನಲ್ಲಿ ಪ್ರಾಯಶಃ ಕೇವಲ ಸ್ತ್ರೀಯರು ಮಾತ್ರ ಉಳಿದುಕೊಂಡಿದ್ದಾರೆ: ಪಾಂಡವರು ಏಳು ಮಂದಿ ಮತ್ತು ಧಾರ್ತರಾಷ್ಟ್ರರು ಮೂರು ಮಂದಿ. ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಕೃಪ, ಕೃತವರ್ಮ ಹಾಗೂ ದ್ರೌಣಿ. ಮಹಾರಾಜ! ಒಂದುಗೂಡಿದ್ದ ಎಲ್ಲ ಅಕ್ಷೌಹಿಣೀ ಸೇನೆಗಳಲ್ಲಿ ಈ ರಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಅನ್ಯ ಎಲ್ಲರೂ ನಿಧನಹೊಂದಿದರು. ದುರ್ಯೋಧನ ಮತ್ತು ಅವನ ವೈರವನ್ನು ಮುಂದಿಟ್ಟುಕೊಂಡು ಕಾಲನೇ ಈ ಜಗತ್ತೆಲ್ಲವನ್ನೂ ವಿನಾಶಗೊಳಿಸಿದನು!”
ಈ ಕ್ರೂರ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಪ್ರಾಣಹೋದಂತಾಗಿ ನೆಲದಮೇಲೆ ಬಿದ್ದನು. ಅವನು ಕೆಳಗೆ ಬೀಳಲು ರಾಜವ್ಯಸನದಿಂದ ದುಃಖಿತನಾಗಿದ್ದ ವಿದುರನು ಕೂಡ ಭೂಮಿಯಮೇಲೆ ಬಿದ್ದನು. ಆ ಕ್ರೂರ ಮಾತನ್ನು ಕೇಳಿ ಕೂಡಲೇ ಗಾಂಧಾರಿ ಮತ್ತು ಕುರುಸ್ತ್ರೀಯರೆಲ್ಲರೂ ಭೂಮಿಯಮೇಲೆ ಬಿದ್ದರು. ವಿಶಾಲ ಚಿತ್ರಪಟದಲ್ಲಿ ಅಂಕಿತ ಚಿತ್ರಗಳಂತೆ ಪ್ರಲಪಿಸುತ್ತಿದ್ದ ಆ ರಾಜಮಂಡಲವು ಸಂಜ್ಞೆಗಳನ್ನು ಕಳೆದುಕೊಂಡು ಭೂಮಿಯ ಮೇಲೆ ಬಿದ್ದಿತು. ಆಗ ಪುತ್ರವ್ಯಸನದಿಂದ ದುಃಖಿತ ರಾಜಾ ಧೃತರಾಷ್ಟ್ರನು ಕಷ್ಟದಿಂದ ಮೆಲ್ಲನೆ ಚೇತರಿಸಿಕೊಂಡನು. ಸಂಜ್ಞೆಗಳನ್ನು ಪಡೆದು ಆ ನೃಪನು ಅತಿ ದುಃಖದಿಂದ ಕಂಪಿಸುತ್ತಾ ಎಲ್ಲ ದಿಕ್ಕುಗಳಲ್ಲಿಯೂ ನೋಡುತ್ತಾ ಕ್ಷತ್ತನಿಗೆ ಈ ಮಾತನ್ನಾಡಿದನು: “ಕ್ಷತ್ತ! ಮಹಾಪ್ರಾಜ್ಞ! ಎಲ್ಲ ಪುತ್ರರನ್ನೂ ಕಳೆದುಕೊಂಡು ಅತೀವ ಅನಾಥನಾಗಿರುವ ನನಗೆ ನೀನೇ ಗತಿ!” ಎಂದು ಹೇಳಿ ಪುನಃ ಮೂರ್ಛಿತನಾಗಿ ಕೆಳಗೆ ಬಿದ್ದನು.
ಹಾಗೆ ಅವನು ಬಿದ್ದುದನ್ನು ನೋಡಿ ಬಾಂಧವರಲ್ಲಿ ಕೆಲವರು ತಣ್ಣೀರನ್ನು ಚುಮಿಕಿಸಿದರು ಮತ್ತು ಬೀಸಣಿಗೆಯನ್ನು ಬೀಸಿದರು. ದೀರ್ಘಕಾಲದ ನಂತರ ಪುನಃ ಎಚ್ಚರಗೊಂಡ ಆ ಮಹೀಪಾಲನು ಪುತ್ರವ್ಯಸನದಿಂದ ಪೀಡಿತನಾಗಿ ಗಡಿಗೆಯಲ್ಲಿಟ್ಟ ಹಾವಿನಂತೆ ನಿಟ್ಟುಸಿರುಬಿಡುತ್ತಾ ಮೌನಿಯಾಗಿ ಕುಳಿತಿದ್ದನು. ಆತುರನಾಗಿದ್ದ ರಾಜನನ್ನು ನೋಡಿ ಸಂಜಯನೂ, ಯಶಸ್ವಿನೀ ಗಾಂಧಾರೀ ಮತ್ತು ಎಲ್ಲ ಸ್ತ್ರೀಯರೂ ರೋದಿಸತೊಡಗಿದರು. ದೀರ್ಘ ಕಾಲದ ನಂತರ ಕ್ಷಣ-ಕ್ಷಣಕ್ಕೂ ಮೂರ್ಛಿತನಾಗುತ್ತಿದ್ದ ಧೃತರಾಷ್ಟ್ರನು ವಿದುರನಲ್ಲಿ ಈ ಮಾತನ್ನಾಡಿದನು: “ಯಶಸ್ವಿನೀ ಗಾಂಧಾರಿ, ಸ್ತ್ರೀಯರು ಮತ್ತು ಸುಹೃದರು ಎಲ್ಲರೂ ಹೊರಟುಹೋಗಲಿ! ನನ್ನ ಮನಸ್ಸು ತುಂಬಾ ಭ್ರಮೆಗೊಂಡಿದೆ!”
ಹೀಗೆ ಹೇಳಲು ಪುನಃ ಪುನಃ ಕಂಪಿಸುತ್ತಿದ್ದ ಕ್ಷತ್ತನು ಮೆಲ್ಲನೆ ಸ್ತ್ರೀಯರನ್ನು ಕಳುಹಿಸಿಕೊಟ್ಟನು. ಆತುರ ರಾಜನನ್ನು ನೋಡಿ ಆ ಎಲ್ಲ ಸ್ತ್ರೀಯರೂ-ಸುಹೃದಯರೂ ಅಲ್ಲಿಂದ ಹೊರಟುಹೋದರು. ಆಗ ಅಲ್ಲಿ ಸಂಜ್ಞೆಗಳನ್ನು ಪಡೆದು ತುಂಬಾ ಆತುರನಾಗಿ ರೋದಿಸುತ್ತಿದ್ದ ನರಪತಿಯನ್ನು ಸಂಜಯನು ನೋಡಿದನು. ಬಾರಿ ಬಾರಿ ನಿಟ್ಟುಸಿರುಬಿಡುತ್ತಿದ್ದ ಆ ನರೇಂದ್ರನನ್ನು ಅಂಜಲೀಬದ್ಧನಾದ ಕ್ಷತ್ತನು ಮಧುರ ಮಾತುಗಳಿಂದ ಸಂತಯಿಸಿದನು. ಸ್ತ್ರೀಯರು ಹೊರಟುಹೋದನಂತರ ಒಂದು ದುಃಖದಿಂದ ಇನ್ನೊಂದು ದುಃಖವನ್ನು ಪಡೆದ ಧೃತರಾಷ್ಟ್ರನು ವಿಲಪಿಸಿದನು. ಹೊಗೆಯನ್ನು ಹೊರಬಿಡುವಂತೆ ನಿಟ್ಟುಸಿರು ಬಿಡುತ್ತಾ, ಪುನಃ ಪುನಃ ಕೈಗಳನ್ನು ಕೊಡವುತ್ತಾ, ಯೋಚಿಸಿ ಅವನು ಈ ಮಾತನ್ನಾಡಿದನು:
“ಅಯ್ಯೋ ಸೂತ! ರಣದಲ್ಲಿ ಪಾಂಡವರು ಅವ್ಯಯರೂ ಕ್ಷೇಮಿಗಳೂ ಆಗಿದ್ದಾರೆಂದು ನಿನ್ನಿಂದ ಕೇಳಿದೆನಲ್ಲಾ ಅದೇ ಮಹಾ ದುಃಖಕರವಾದುದು! ಪುತ್ರರು ಹತರಾದರೆಂದು ಕೇಳಿಯೂ ಸಹಸ್ರಚೂರುಗಳಾಗಿ ಸೀಳಿಹೋಗದಿರುವ ಈ ಹೃದಯವು ಸುದೃಢ ವಜ್ರದಿಂದ ಮಾಡಲ್ಪಟ್ಟಿಲ್ಲ ತಾನೇ? ಅವರ ಬಾಲಕ್ರೀಡೆಗಳನ್ನೂ ಮಾತುಗಳನ್ನೂ ನೆನಪಿಸಿಕೊಂಡು ನನ್ನ ಮನಸ್ಸು ಅತ್ಯಂತವಾಗಿ ಗೋಳಿಡುತ್ತಿದೆ. ಅಂಧತ್ವದಿಂದಾಗಿ ಅವರ ರೂಪಗಳನ್ನು ಕಾಣದಿದ್ದರೂ ಪುತ್ರಸ್ನೇಹದಿಂದುಂಟಾದ ಪ್ರೀತಿಯು ಸದಾ ಅವರಮೇಲಿದ್ದಿತ್ತು. ಅವರು ಬಾಲಭಾವವನ್ನು ದಾಟಿ ಯೌವನಸ್ಥರಾದರೆಂದೂ ನಂತರ ಮಧ್ಯವಯಸ್ಕರಾದರೆಂದೂ ಕೇಳಿದಾಗ ನಾನು ಅತ್ಯಂತ ಹರ್ಷಿತನಾಗಿದ್ದೆನು. ಇಂದು ಅವರು ಐಶ್ವರ್ಯಗಳನ್ನೂ ತೇಜಸ್ಸನ್ನೂ ಕಳೆದುಕೊಂಡು ಹತರಾದರೆಂದು ಕೇಳಿ ಮನಸ್ಸಿಗೆ ಸ್ವಲ್ಪವೂ ಶಾಂತಿ ದೊರೆಯುತ್ತಿಲ್ಲ. ಮಗನೇ! ಇಲ್ಲಿ ಬಾ! ಅನಾಥನಾಗಿರುವ ನನ್ನ ಬಳಿ ಬಾ! ನಿನ್ನನ್ನು ಕಳೆದುಕೊಂಡ ನನ್ನ ಗತಿಯೇನಾಗಬಹುದು? ಕುಲದವರ ಮತ್ತು ಸುಹೃದಯರ ಹಾಗೂ ಈ ಅಂಧ ವೃದ್ಧನ ಗತಿಯಾಗಿದ್ದ ನೀನು ನನ್ನನ್ನು ಬಿಟ್ಟು ಎಲ್ಲಿ ಹೋಗಿರುವೆ? ನಿನ್ನಲ್ಲಿದ್ದ ಕೃಪೆ-ಪ್ರೀತಿ-ಅಭಿಮಾನಗಳು ಎಲ್ಲಿ ಹೋದವು? ಯುದ್ಧದಲ್ಲಿ ಅಪರಾಜಿತನಾದ ನೀನು ಪಾರ್ಥನಿಂದ ಹೇಗೆ ಸಂಹರಿಸಲ್ಪಟ್ಟೆ? ಮಗನೇ! ನಿನ್ನಲ್ಲಿಗೆ ಬಂದಿದ್ದ ಪೃಥಿವೀಪಾಲರನ್ನು ಬಿಟ್ಟು ಪ್ರಾಕೃತ ಹೀನ ರಾಜನಂತೆ ಏಕೆ ನೆಲದಮೇಲೆ ಮಲಗಿರುವೆ? ಪ್ರಾತಃ ಕಾಲ ಏಳುವಾಗ ಸತತವೂ “ಅಪ್ಪಾ! ಮಹಾರಾಜ!” ಎಂದು ನನ್ನನ್ನು ಇನ್ನು ಯಾರು ಕರೆಯುತ್ತಾರೆ? ಸ್ನೇಹದಿಂದ ಕಣ್ಣುಗಳು ತುಂಬಿ ನನ್ನ ಕತ್ತನ್ನು ಆಲಂಗಿಸಿ “ಕೌರವ್ಯ! ಏನು ಮಾಡಬೇಕೆಂದು ಹೇಳು!” ಎಂಬ ಆ ಸುಮಧುರ ಮಾತನ್ನು ಇನ್ನೊಮ್ಮೆ ಹೇಳು. ಅಂದು ನಮ್ಮ ಭೂಮಿಯ ಇಷ್ಟೊಂದು ಭಾಗವು ಪಾರ್ಥನದಾಗಿದೆ ಎಂದು ನನ್ನ ಮಗನ ವಚನವನ್ನು ಯಾವಾಗಲೂ ಕೇಳುತ್ತಿದ್ದೆ. “ರಾಜಸತ್ತಮ! ಭಗದತ್ತ, ಕೃಪ, ಶಲ್ಯ, ಅವಂತಿಯವರು, ಜಯದ್ರಥ, ಭೂರಿಶ್ರವ, ಸೋಮದತ್ತ, ಬಾಹ್ಲಿಕ, ಅಶ್ವತ್ಥಾಮ, ಭೋಜ, ಮಾಗಧ, ಕಾಶೀಶ ಬೃಹದ್ಬಲ, ಸೌಬಲ ಶಕುನಿ, ಶಕರು ಮತ್ತು ಯವನರೊಂದಿಗೆ ಅನೇಕ ಸಹಸ್ರ ಮ್ಲೇಚ್ಛರು, ಕಾಂಬೋಜ ತ್ರಿಗರ್ತಾಧಿಪತಿ ಸುದಕ್ಷಿಣ, ಪಿತಾಮಹ ಭೀಷ್ಮ, ಭಾರದ್ವಾಜ, ಗೌತಮ, ಶ್ರುತಾಯು, ಅಚ್ಯುತಾಯು, ವೀರ್ಯವಾನ್ ಶತಾಯು, ಜಲಸಂಧ, ಆರ್ಶ್ಯಶೃಂಗಿ, ರಾಕ್ಷಸ ಅಲಾಯುಧ, ಮಹಾಬಾಹು ಅಲಂಬುಸ, ಮಹಾರಥ ಸುಬಾಹು, ಇವರು ಮತ್ತು ಅನ್ಯ ಅನೇಕ ರಾಜರು ಎಲ್ಲರೂ ನನಗಾಗಿ ಪ್ರಾಣಗಳನ್ನೇ ತೊರೆದು ರಣದಲ್ಲಿ ಸಿದ್ಧರಾಗಿದ್ದಾರೆ! ಇವರ ಮಧ್ಯದಲ್ಲಿ ನಿಂತು, ಸಹೋದರರಿಂದ ಪರಿವಾರಿತನಾಗಿ ನಾನು ಪಾರ್ಥ-ಪಾಂಚಾಲರೆಲ್ಲರೊಡನೆ ಯುದ್ಧಮಾಡುತ್ತೇನೆ. ನಾನೊಬ್ಬನೇ ಚೇದಿರಾಜ, ದ್ರೌಪದೇಯರು, ಸಾತ್ಯಕಿ, ಕುಂತಿಭೋಜ, ಘಟೋತ್ಕಚ ಇವರನ್ನು ಮತ್ತು ಸಂಗ್ರಾಮದಲ್ಲಿ ಆಕ್ರಮಣಿಸುವ ಪಾಂಡವರನ್ನು ನಿವಾರಿಸಲು ಸಮರ್ಥನಾಗಿದ್ದೇನೆ. ಪಾಂಡವರೊಂದಿಗೆ ವೈರವನ್ನು ಸಾಧಿಸಿಕೊಂಡು ಬಂದಿರುವ ಈ ವೀರರೂ ನನ್ನೊಡನೆ ಸೇರಿದರೆಂದರೆ ಪಾಂಡವರು ಇನ್ನು ಯಾವ ಲೆಖ್ಕಕ್ಕೆ? ನನ್ನೊಡನೆ ಕರ್ಣನೊಬ್ಬನೇ ಪಾಂಡವರನ್ನು ಸಂಹರಿಸುತ್ತಾನೆ. ಆಗ ವೀರ ನೃಪತಿಗಳು ನನ್ನ ಶಾಸನದಡಿಯಲ್ಲಾಗುತ್ತಾರೆ. ಅವರ ಪ್ರಣೇತ ವಾಸುದೇವನು ಹೇಗೂ ಯುದ್ಧಮಾಡುವುದಿಲ್ಲ!” ಎಂದು ನನಗೆ ಹೇಳಿದ್ದೆ.
“ಸೂತ! ನನ್ನ ಸನ್ನಿಧಿಯಲ್ಲಿ ಹೀಗೆ ಅವನು ಅನೇಕಬಾರಿ ಹೇಳುತ್ತಿದ್ದನು. ರಣದಲ್ಲಿ ಪಾಂಡವರು ಹತರಾದರೆಂದೇ ತಿಳಿದಿದ್ದೆ. ಆದರೆ ನನ್ನ ಪುತ್ರರು ಹತರಾದರೆಂದರೆ ಸಮರದಲ್ಲಿ ಪಾಂಡವರೇ ಭಾಗ್ಯವಂತರೆಂದಾಯಿತಲ್ಲವೇ? ಪ್ರತಾಪವಾನ್ ಭೀಷ್ಮನೂ ಕೂಡ ಮೃಗೇಂದ್ರ ಸಿಂಹವು ನರಿಯನ್ನು ಎದುರಿಸಿದಂತೆ ಶಿಖಂಡಿಯನ್ನು ಎದುರಿಸಿ ಹತನಾದನೆಂದರೆ, ಸರ್ವಶಸ್ತ್ರಪಾರಗ ಬ್ರಾಹ್ಮಣ ದ್ರೋಣನು ಯುದ್ಧದಲ್ಲಿ ಪಾಂಡವರಿಂದ ಹತನಾದನೆಂದರೆ ಅದೃಷ್ಟವಲ್ಲದೇ ಇನ್ನೇನು? ಯುದ್ಧದಲ್ಲಿ ಸೋಮದತ್ತ-ಭೂರಿಶ್ರವ-ಬಾಹ್ಲೀಕರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ಸುದಕ್ಷಿಣ, ಜಲಸಂಧ, ಶ್ರುತಾಯು, ಅಚ್ಯುತಾಯು ಇವರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ಬೃಹದ್ಬಲ, ಮಾಗಧ, ಅವಂತಿಯವರು, ತ್ರಿಗರ್ತ, ಮತ್ತು ಅನೇಕ ಸಂಶಪ್ತಕರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ಅಲಂಬುಸ, ಅಲಾಯುಧ, ಆರ್ಶ್ಯಶೃಂಗರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ಯುದ್ಧದುರ್ಮದ ನಾರಾಯಣ ಗೋಪಾಲರು ಮತ್ತು ಅನೇಕ ಸಹಸ್ರ ಮ್ಲೇಚ್ಛರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ವೀರ ಶಕುನಿ ಮತ್ತು ಕೈತವರು ಸೇನೆಗಳೊಂದಿಗೆ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ಪರಿಘಗಳಂತಹ ಬಾಹುಗಳನ್ನುಳ್ಳ ಅನೇಕ ಶೂರ ರಾಜರು-ರಾಜಪುತ್ರರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ನಾನಾದೇಶಗಳಿಂದ ಬಂದು ಸೇರಿದ್ದ ಕ್ಷತ್ರಿಯರು ಎಲ್ಲರೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? ನನ್ನ ಪುತ್ರರೂ, ಪೌತ್ರರೂ, ವಯಸ್ಕರೂ, ಭ್ರಾತೃಗಳೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
“ಮನುಷ್ಯನು ತನ್ನ ಭಾಗ್ಯವನ್ನು ಹೊತ್ತುಕೊಂಡೇ ಹುಟ್ಟುತ್ತಾನೆ ಎನ್ನುವುದು ಸತ್ಯ. ಯಾವ ಭಾಗ್ಯದಿಂದ ಮನುಷ್ಯನು ಹುಟ್ಟಿರುತ್ತಾನೋ ಅದೇ ಶುಭಗಳನ್ನು ಅವನು ಪಡೆಯುತ್ತಾನೆ. ನನ್ನ ಮಕ್ಕಳು-ಭಾಗ್ಯಗಳಿಂದ ನಾನು ವಿಹೀನನಾಗಿದ್ದೇನೆ. ವೃದ್ಧನಾದ ನಾನು ಶತ್ರುಗಳ ವಶನಾಗಿ ಹೇಗಿರಲಿ? ವನವಾಸದ ಹೊರತಾದ ಬೇರೆ ಯಾವ ದಾರಿಯೂ ನನಗೆ ತೋರುತ್ತಿಲ್ಲ! ಬಂಧು-ಕುಲದವರ ನಾಶವಾಗಿರುವ ನಾನು ವನಕ್ಕೇ ಹೋಗುತ್ತೇನೆ! ರೆಕ್ಕೆಗಳನ್ನು ಕತ್ತರಿಸಿದ ಪಕ್ಷಿಗಾದಂತ ಈ ಅವಸ್ಥೆಯನ್ನು ಹೊಂದಿರುವ ನನಗೆ ವನಕ್ಕೆ ಸೇರುವುದರ ಹೊರತಾಗಿ ಬೇರೆ ಯಾವ ಶ್ರೇಯಸ್ಸೂ ಇಲ್ಲ! ಯುದ್ಧದಲ್ಲಿ ದುರ್ಯೋಧನನು ಹತನಾದನು. ಶಲ್ಯ, ದುಃಶಾಸನ, ವಿಕರ್ಣರೂ ಹತರಾದರು. ಸಮರದಲ್ಲಿ ಒರ್ವನೇ ನನ್ನ ನೂರು ಮಕ್ಕಳನ್ನೂ ಸಂಹರಿಸಿದ ಭೀಮಸೇನನ ಗರ್ಜನೆಯನ್ನು ನಾನು ಹೇಗೆ ತಾನೇ ಕೇಳಬಲ್ಲೆ? ಹೇಳಿದಂತೆ ದುರ್ಯೋಧನನ ವಧೆಗೈದ ಭೀಮನ ಕಠೋರ ಮಾತುಗಳನ್ನು ದುಃಖಶೋಕ ಸಂತಪ್ತನಾಗಿರುವ ನಾನು ಹೇಗೆ ತಾನೇ ಕೇಳಿಕೊಂಡಿರಲಿ?”
ಬಾಂಧವರನ್ನು ಕಳೆದುಕೊಂಡ ಪಾರ್ಥಿವನು ಹೀಗೆ ಶೋಕಸಂತಪ್ತನಾಗಿರಲು ಅವನು ಪುನಃ ಪುನಃ ಮೂರ್ಛೆಹೋಗುತ್ತಿದ್ದನು ಮತ್ತು ಪುತ್ರಶೋಕದಲ್ಲಿ ಮುಳುಗಿಹೋಗಿದ್ದನು. ಬಹಳ ಹೊತ್ತು ವಿಲಪಿಸಿ ರಾಜಾ ಅಂಬಿಕಾಸುತ ಧೃತರಾಷ್ಟ್ರನು ಪರಾಭವದ ಕುರಿತು ಚಿಂತಿಸುತ್ತಾ ದೀರ್ಘ ಬಿಸಿ ನಿಟ್ಟುಸಿರು ಬಿಡುತ್ತಾ, ಮಹಾ ದುಃಖದಿಂದ ಸಂತಪ್ತನಾಗಿ ನಡೆದುಹೋದುದರ ಕುರಿತು ಪುನಃ ಸೂತ ಗಾವಲ್ಗಣಿಯನ್ನು ಪ್ರಶ್ನಿಸಿದನು:
“ಭೀಷ್ಮ-ದ್ರೋಣ ಮತ್ತು ಸೂತಪುತ್ರನೂ ಕೆಳಗುರುಳಿದುದನ್ನು ಕೇಳಿ ನಮ್ಮವರು ಏನು ಮಾಡಿದರು? ನಮ್ಮವರು ಯಾರ್ಯಾರನ್ನು ಯುದ್ಧದಲ್ಲಿ ಸೇನಾಪತಿಗಳನ್ನಾಗಿ ಮಾಡಿದರೋ ಅವರೆಲ್ಲರನ್ನೂ ಸ್ವಲ್ಪ ಕಾಲದಲ್ಲಿಯೇ ಪಾಂಡವರು ಸಂಹರಿಸಿದರು. ನಾವು ನೋಡುತ್ತಿದ್ದಂತೆಯೇ ರಣಮೂರ್ಧನಿಯಲ್ಲಿ ಭೀಷ್ಮನು ಕಿರೀಟಿಯಿಂದ ಹತನಾದನು. ಹಾಗೆಯೇ ಎಲ್ಲರೂ ನೋಡುತ್ತಿರುವಾಗಲೇ ದ್ರೋಣನು ಹತನಾದನು. ಹಾಗೆಯೇ ನಮ್ಮ ಎಲ್ಲ ರಾಜರು ನೋಡುತ್ತಿರುವಾಗಲೇ ಪ್ರತಾಪವಾನ್ ಸೂತಪುತ್ರ ಕರ್ಣನು ಕಿರೀಟಿಯಿಂದ ಹತನಾದನು. “ದುರ್ಯೋಧನನ ಅಪರಾಧದಿಂದ ಪ್ರಜೆಗಳು ನಾಶವಾಗುತ್ತಾರೆ!” ಎಂದು ಹಿಂದೆಯೇ ಮಹಾತ್ಮ ವಿದುರನು ನನಗೆ ಹೇಳಿದ್ದನು. ಕೆಲವು ಮೂಢರು ವಿಷಯಗಳನ್ನು ಚೆನ್ನಾಗಿ ಪರಿಶೀಲಿಸಿದ್ದರೂ ಅದರ ಕಡೆ ಗಮನಕೊಡದೇ ಬೇರೆ ಕಡೆಯೇ ನೋಡುತ್ತಿರುತ್ತಾರೆ. ಮೂಢನಾದ ನನ್ನಲ್ಲಿಯೂ ವಿದುರನ ಮಾತಿನ ವಿಷಯದಲ್ಲಿ ಇದೇ ರೀತಿ ನಡೆದುಹೋಯಿತು. ದೀರ್ಘದರ್ಶಿ ಧರ್ಮಾತ್ಮ ವಿದುರನು ಏನು ಹೇಳಿದ್ದನೋ ಅದು ಹಾಗೆಯೇ ಆಗಿ ಆ ಸತ್ಯವಾದಿನಿಯ ವಚನವು ನಿಜವಾಗಿ ಹೋಯಿತು! ಹಿಂದೆ ದೈವದಿಂದ ನನ್ನ ಚಿತ್ತವು ಅಪಹರಿಸಲ್ಪಟ್ಟು ನಾನು ಅಪಕೃತವನ್ನು ಮಾಡಿದುದರ ಫಲವಿದು. ಅದರ ಕುರಿತು ಪುನಃ ಹೇಳು.
“ಕರ್ಣನು ಬಿದ್ದ ನಂತರ ನಮ್ಮ ಸೇನೆಗಳ ಮುಖ್ಯರಾಗಿ ಯಾರಿದ್ದರು? ಯಾವ ರಥಿಯು ಅರ್ಜುನ-ವಾಸುದೇವರ ವಿರುದ್ಧ ಯುದ್ಧಮಾಡಿದನು? ಯುದ್ಧದಲ್ಲಿ ಮದ್ರರಾಜನ ಬಲಚಕ್ರವನ್ನು ಯಾರು ರಕ್ಷಿಸುತ್ತಿದ್ದರು? ಯುದ್ಧಮಾಡಲು ಬಯಸಿದ್ದ ಆ ವೀರನ ಎಡಭಾಗದಲ್ಲಿ ಮತ್ತು ಹಿಂದೆ ಯಾರಿದ್ದರು? ನಾವೆಲ್ಲರೂ ಹೀಗೆ ಒಟ್ಟಾಗಿರುವಾಗ ಮದ್ರರಾಜ ಅಥವಾ ನನ್ನ ಪುತ್ರರು ಹೇಗೆ ಯುದ್ಧದಲ್ಲಿ ಪಾಂಡವರಿಂದ ಹತರಾದರು? ಭಾರತರ ಮಹಾಕ್ಷಯದ ಕುರಿತು ಸರ್ವವನ್ನು - ಯುದ್ಧದಲ್ಲಿ ನನ್ನ ಮಗ ದುರ್ಯೋಧನನು ಹೇಗೆ ಹತನಾದನು ಎನ್ನುವುದನ್ನೂ - ಯಥಾವತ್ತಾಗಿ ಹೇಳು. ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದಿಯ ಐವರು ಮಕ್ಕಳು ಮತ್ತು ಅನುಯಾಯಿಗಳೊಂದಿಗೆ ಪಾಂಚಾಲರೆಲ್ಲರೂ ಹೇಗೆ ಹತರಾದರು? ಯುದ್ಧದಿಂದ ಹೇಗೆ ಪಾಂಡವರು, ಇಬ್ಬರು ಸಾತ್ವತರು, ಕೃಪ, ಕೃತವರ್ಮ ಮತ್ತು ಅಶ್ವತ್ಥಾಮ ಇವರುಗಳು ಮುಕ್ತರಾದರು? ಯಾವುದು ಹೇಗೆ ನಡೆಯಿತು? ಯುದ್ಧವು ಹೇಗೆ ನಡೆಯಿತು? ಈ ಎಲ್ಲ ವಿಷಯಗಳನ್ನೂ ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ. ನೀನು ವರದಿಮಾಡುವುದರಲ್ಲಿ ಕುಶಲನಾಗಿರುವೆ!”
ಆಗ ಸಂಜಯನು ಧೃತರಾಷ್ಟ್ರನಿಗೆ ಹದಿನೆಂಟನೇ ದಿನ-ರಾತ್ರಿಯ ಯುದ್ಧವನ್ನು ವರ್ಣಿಸಿದನು.