ಪಾಂಡವರು ಅಶ್ವತ್ಥಾಮನಿಗೆ ಪ್ರತೀಕಾರವನ್ನೆಸಗಿದುದು
ಯುಧಿಷ್ಠಿರ ಶೋಕ
ಆ ರಾತ್ರಿಯು ಕಳೆಯಲು ಮಲಗಿರುವಾಗ ನಡೆದ ಕದನದ ಕುರಿತು ಧೃಷ್ಟದ್ಯುಮ್ನನ ಸಾರಥಿಯು ಧರ್ಮರಾಜನಿಗೆ ವರದಿಮಾಡಿದನು.
“ಮಹಾರಾಜ! ರಾತ್ರಿ ದ್ರೌಪದೇಯರು ದ್ರುಪದನ ಮಕ್ಕಳೊಂದಿಗೆ ಮೈಮರೆತು ನಿಶ್ಚಿಂತೆಯಿಂದ ತಮ್ಮ ತಮ್ಮ ಶಿಬಿರಗಳಲ್ಲಿ ಮಲಗಿದ್ದರು. ರಾತ್ರಿವೇಳೆ ಶಿಬಿರಕ್ಕೆ ಧಾಳಿಯಿಟ್ಟ ಕೃತವರ್ಮ, ಗೌತಮ ಕೃಪ ಮತ್ತು ಅಶ್ವತ್ಥಾಮರ ಕ್ರೂರ ಪಾಪದಿಂದ ನಾವುಗಳು ಹತರಾದೆವು! ಅವರು ಪ್ರಾಸ-ಶಕ್ತಿ-ಪರಶುಗಳಿಂದ ಸಹಸ್ರಾರು ನರ-ಗಜ-ಅಶ್ವಗಳನ್ನು ಕತ್ತರಿಸಿ ನಿನ್ನ ಸೇನೆಯನ್ನು ನಿಃಶೇಷಗೊಳಿಸಿದರು. ಮಹಾವನವನ್ನು ಪರಶುಗಳಿಂದ ತುಂಡರಿಸುವಾಗ ಹೇಗೋ ಹಾಗೆ ನಿನ್ನ ಸೇನೆಯಲ್ಲಿ ಮಹಾಶಬ್ಧವು ಕೇಳಿಬರುತ್ತಿತ್ತು. ಕೃತವರ್ಮನು ಬೇರೆ ಕಡೆ ಗಮನಹರಿಸಿದ್ದಾಗ ಆ ಸೇನೆಯಲ್ಲಿ ನಾನೊಬ್ಬನೇ ಹೇಗೋ ಮಾಡಿಕೊಂಡು ಉಳಿದುಕೊಂಡೆನು.”
ಆ ಅಮಂಗಳಕರ ವಾಕ್ಯವನ್ನು ಕೇಳಿ ಯುಧಿಷ್ಠಿರನು ಪುತ್ರಶೋಕಸಮನ್ವಿತನಾಗಿ ನೆಲದಮೇಲೆ ಬಿದ್ದನು. ಕೆಳಗೆ ಬೀಳುವುದರೊಳಗೆ ಅವನನ್ನು ಸಾತ್ಯಕಿ, ಭೀಮಾರ್ಜುನರು ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ಹಿಡಿದು ತಡೆದರು. ಚೇತರಿಸಿಕೊಂಡ ಕೌಂತೇಯನು ಆತುರದಿಂದ ಶೋಕವಿಹ್ವಲ ಸ್ವರದಲ್ಲಿ
“ಶತ್ರುಗಳನ್ನು ಜಯಿಸಿ ನಂತರ ಅವರಿಂದಲೇ ಸೋತೆವು!”
ಎಂದು ಪರಿವೇದಿಸಿದನು.
“ದಿವ್ಯದೃಷ್ಟಿಯಿರುವವರಿಗೂ ಪರಿಣಾಮಗಳ ಗತಿಯನ್ನು ತಿಳಿಯುವುದು ಕಷ್ಟ. ಸೋತ ಅವರು ಗೆದ್ದುಬಿಟ್ಟರು. ವಿಜಯಿಗಳಾಗಿದ್ದ ನಾವು ಸೋತುಹೋದೆವು! ಭ್ರಾತೃಗಳನ್ನು, ಸ್ನೇಹಿತರನ್ನು, ಪಿತೃಗಳನ್ನು, ಪುತ್ರರನ್ನು, ಸುಹೃದಯರ ತಂಡಗಳನ್ನು, ಬಂಧುಗಳನ್ನು, ಅಮಾತ್ಯರನ್ನು ಮತ್ತು ಮೊಮ್ಮಕ್ಕಳನ್ನು ಸಂಹರಿಸಿ ನಮ್ಮೆಲ್ಲರನ್ನೂ ಅವರು ಪರಾಜಿತಗೊಳಿಸಿದರು. ಅನರ್ಥಗಳೂ ಅರ್ಥಸದೃಶವಾಗಿರುತ್ತವೆ. ಹಾಗೆಯೇ ಅರ್ಥಗಳೂ ಅನರ್ಥಗಳಾಗಿ ಕಾಣುತ್ತವೆ. ಈ ಜಯವು ಪರಾಜಯಕರವಾಗಿದೆ. ಆದುದರಿಂದ ಈ ಜಯವು ಪರಾಜಯವೇ ಸರಿ! ಯಾವ ದುರ್ಮತಿಯು ವಿಜಯಿಯಾಗಿಯೂ ಪಶ್ಚಾತ್ತಾಪಪಡುತ್ತಾನೋ ಅವನು ಹೇಗೆ ತಾನೇ ವಿಜಯಿಯಾದೆನೆಂದು ಒಪ್ಪಿಕೊಳ್ಳಬಹುದು? ನಾನು ಶತ್ರುಗಳಿಂದ ಜಯಿಸಲ್ಪಟ್ಟಿದ್ದೇನೆ! ಸುಹೃದಯರ ವಧೆಯ ಪಾಪವನ್ನೆಸಗಿ ನಾವು ಗಳಿಸಿದ ಜಯಕ್ಕೆ ಧಿಕ್ಕಾರ! ವಿಜಯಗಳಿಸಿದವರನ್ನು ಎಚ್ಚರಿಕೆಯಿಂದಿದ್ದ ಜಿತಾಕಾಂಕ್ಷಿ ಶತ್ರುಗಳು ಸೋಲಿಸಿಬಿಟ್ಟರು! ಯುದ್ಧದಲ್ಲಿ ಕರ್ಣಿ-ನಾಲೀಕಗಳೇ ಹಲ್ಲಾಗಿದ್ದ, ಖಡ್ಗವೇ ನಾಲಿಗೆಯಂತಿದ್ದ, ಧನುಸ್ಸೇ ಬಾಯಿಯಂತಿದ್ದ, ರೌದ್ರ ಟೇಂಕಾರವೇ ಗರ್ಜನೆಯಂತಿದ್ದ, ಕ್ರುದ್ಧ ನರಸಿಂಹ ಕರ್ಣನೊಡನೆ ಹೋರಾಡುವಾಗಲೂ ಪಲಾಯನ ಮಾಡದಿದ್ದ ನಮ್ಮವರು ಮೈಮರೆತು ಮಲಗಿರುವಾಗ ಹತರಾದರಲ್ಲ! ಯಾರ ರಥವು ಸಾಗರದಂತಿತ್ತೋ, ಯಾರ ಶರವರ್ಷಗಳು ಅಲೆಗಳಿಂತಿದ್ದವೋ, ಅಲಂಕಾರಗಳೇ ಸಾಗರದ ರತ್ನಗಳಂತಿದ್ದವೋ, ವಾಹನಗಳೇ ಸಮುದ್ರದಿಂದೆದ್ದ ಕುದುರೆಗಳಂತಿದ್ದವೋ, ಯಾರ ಶಕ್ತಿ-ಋಷ್ಟಿಗಳು ಸಾಗರದ ಮೀನುಗಳಂತಿದ್ದವೋ, ಯಾರ ಧ್ವಜಗಳೇ ಹಾವು-ಮೊಸಳೆಗಳಂತಿದ್ದವೋ, ಯಾರ ಧನುಸ್ಸೇ ಸುಳಿಯಂತಿತ್ತೋ, ಯಾರ ಮಹಾ ಬಾಣಗಳು ಸಮುದ್ರದ ನೊರೆಗಳಂತಿದ್ದವೋ, ಯಾರ ಸಂಗ್ರಾಮವು ಚಂದ್ರೋದಯದಲ್ಲಿ ಉಕ್ಕಿಬರುವ ಅಲೆಯಂತಿದ್ದಿತೋ, ಯಾರ ಟೇಂಕಾರ ಮತ್ತು ರಥಚಕ್ರಗಳ ಶಬ್ಧಗಳು ಸಮುದ್ರದ ಗರ್ಜನೆಯಂತಿದ್ದವೋ ಆ ದ್ರೋಣನೆಂಬ ಸಮುದ್ರವನ್ನೇ ನಮ್ಮಕಡೆಯ ಯೋಧರು ಬಗೆ ಬಗೆಯ ಶಸ್ತ್ರಗಳನ್ನೇ ನೌಕೆಗಳನ್ನಾಗಿಸಿಕೊಂಡು ದಾಟಿದರು. ಆ ರಾಜಪುತ್ರರೇ ಇಂದು ಪ್ರಮಾದದಿಂದ ಹತರಾಗಿದ್ದಾರೆ! ಈ ಜೀವಲೋಕದಲ್ಲಿ ನರರಿಗೆ ಪ್ರಮಾದಕ್ಕಿಂತಲೂ ಹೆಚ್ಚಿನ ಮೃತ್ಯುವು ಬೇರೆ ಯಾವುದೂ ಇರಲಿಕ್ಕಿಲ್ಲ! ಪ್ರಮತ್ತನಾದ ನರನನ್ನು ಅರ್ಥಗಳು ಎಲ್ಲಕಡೆಗಳಿಂದಲೂ ತ್ಯಜಿಸಿ ಅವನನ್ನು ಅನರ್ಥಗಳೇ ಮುತ್ತಿಕೊಳ್ಳುತ್ತವೆ. ಎತ್ತರದಲ್ಲಿ ಹಾರಾಡುತ್ತಿದ್ದ ಯಾರ ಉತ್ತಮ ಧ್ವಜಗಳೇ ಹೊಗೆಯಂತಿದ್ದವೋ, ಯಾರ ಶರವೃಷ್ಟಿಗಳೇ ಜ್ವಾಲೆಗಳಂತಿದ್ದವೋ, ಯಾರ ಕೋಪವೇ ಚಂಡಮಾರುತದಂತೆ ಬೆಂಕೆಯನ್ನು ಉರಿಸುತ್ತಿತ್ತೋ, ಯಾರ ಟೇಂಕಾರ-ಚಪ್ಪಾಳೆ ಮತ್ತು ರಥಚಕ್ರಗಳ ಶಬ್ಧಗಳೂ ಉರಿಯುತ್ತಿರುವ ಬೆಂಕಿಯ ಚಟ ಚಟಾ ಶಬ್ಧದಂತಿದ್ದವೋ, ಯಾರ ನಾನಾವಿಧದ ಶಸ್ತ್ರಗಳು ಹೋಮದ ಆಹುತಿಗಳಂತಿದ್ದವೋ, ಮಹಾರಣದಲ್ಲಿ ಕಾಡ್ಗಿಚ್ಚಿನಂತಿದ್ದ ಭೀಷ್ಮನ ಕೋಟಿಗಟ್ಟಲೇ ಶಸ್ತ್ರವೇಗಗಳನ್ನು ಸಹಿಸಿದ್ದ ನಮ್ಮ ರಾಜಪುತ್ರರು ಇಂದು ಪ್ರಮಾದದಿಂದ ಹತರಾದರು! ಪ್ರಮತ್ತನಾಗಿರುವ ನರನಿಗೆ ವಿದ್ಯೆ, ತಪಸ್ಸು, ಸಂಪತ್ತು ಅಥವಾ ವಿಪುಲ ಯಶಸ್ಸು ದೊರೆಯಲಾರದು! ಜಾಗರೂಕತೆಯಿಂದ ಸರ್ವ ಶತ್ರುಗಳನ್ನೂ ಸಂಹರಿಸಿ ಸುಖಪಡುತ್ತಿರುವ ಮಹೇಂದ್ರನನ್ನಾದರೂ ನೋಡಿರಿ! ಸಮೃದ್ಧ ವರ್ತಕರು ಮಹಾಸಮುದ್ರವನ್ನು ದಾಟಿ ಹಳ್ಳವನ್ನು ಕಂಡು ತಾತ್ಸಾರಭಾವದಿಂದ ಅಜಾಗರೂಕರಾಗಿದ್ದು ಆ ಪುಟ್ಟ ಹಳ್ಳದಲ್ಲಿಯೇ ಮುಳುಗಿಹೋಗುವಂತೆ ಯಾವ ವಿಶೇಷಕಾರಣವೂ ಇಲ್ಲದೇ ಕೇವಲ ಅಜಾಗರೂಕತೆಯಿಂದಾಗಿ ಇಂದ್ರೋಪಮ ರಾಜಪುತ್ರ-ಪೌತ್ರರು ಹತರಾದುದನ್ನು ನೋಡು! ಮಲಗಿರುವಾಗ ಕುಪಿತ ಶತ್ರುಗಳಿಂದ ಹತರಾದ ಅವರು ನಿಸ್ಸಂಶಯವಾಗಿ ಸ್ವರ್ಗಕ್ಕೇ ಹೋಗಿ ಪ್ರಪನ್ನರಾಗಿರಬೇಕು! ಸಾಧ್ವೀ ಕೃಷ್ಣೆಯು ಶೋಕಾರ್ಣವದಲ್ಲಿ ಮುಳುಗಿ ಹೇಗೆ ನಾಶಗೊಳ್ಳುವುದಿಲ್ಲ ಎಂದು ಈಗ ನಾನು ಶೋಕಿಸುತ್ತಿದ್ದೇನೆ. ಸಹೋದರರು, ಪುತ್ರರು ಹಾಗೂ ವೃದ್ಧ ತಂದೆ ಪಾಂಚಾಲರಾಜನೂ ನಾಶಗೊಂಡರೆನ್ನುವುದನ್ನು ಕೇಳಿ ಅವಳು ನಿಶ್ಚಯವಾಗಿಯೂ ಭೂಮಿಯ ಮೇಲೆ ಮೂರ್ಛಿತಳಾಗಿ ಬೀಳುತ್ತಾಳೆ! ಶೋಕದಿಂದಾಗಿ ಅವಳು ಒಣಗಿದ ಕಡ್ಡಿಯಂತಾಗಿಬಿಟ್ಟಿದ್ದಾಳೆ! ಸುಖಗಳಿಗೆ ಅರ್ಹಳಾಗಿರುವ ಅವಳು ಮುಂದೇನಾಗುವಳೆಂದು ನಾನು ಊಹಿಸಲೂ ಅಸಮರ್ಥನಾಗಿದ್ದೇನೆ. ಪುತ್ರಕ್ಷಯ ಮತ್ತು ಭ್ರಾತೃವಧೆಗಳ ಕುರಿತು ಕೇಳಿ ಶೋಕಾಗ್ನಿಯಲ್ಲಿ ಬೆಂದುಹೋಗುತ್ತಾಳೆ!”
ಹೀಗೆ ಆರ್ತನಾಗಿ ಪರಿವೇದಿಸುತ್ತಾ ಆ ಕುರುಗಳ ರಾಜನು ನಕುಲನಿಗೆ ಹೇಳಿದನು:
“ಹೋಗು! ಮಂದಭಾಗ್ಯಳಾದ ಆ ರಾಜಪುತ್ರಿಯನ್ನು ತಾಯಿಯ ಕಡೆಯ ಸ್ತ್ರೀಯರ ಸಮೇತವಾಗಿ ಇಲ್ಲಿಗೆ ಕರೆದುಕೊಂಡು ಬಾ!”
ಧರ್ಮದಲ್ಲಿ ಧರ್ಮನಿಗೆ ಸಮನಾಗಿದ್ದ ರಾಜನ ಆ ಮಾತನ್ನು ಸ್ವೀಕರಿಸಿ ಮಾದ್ರೀಸುತನು ರಥದಲ್ಲಿ ಕುಳಿತು ಪಾಂಚಾಲರಾಜನ ದೇವಿಯರು ಮತ್ತು ಪತ್ನಿಯರಿರುವಲ್ಲಿಗೆ ಹೋದನು. ಮಾದ್ರೀಸುತನನ್ನು ಕಳುಹಿಸಿಕೊಟ್ಟು ಆಜಮೀಢನು ಶೋಕಾರ್ದಿತ ಸುಹೃದಯರ ಸಹಿತ ರೋದಿಸುತ್ತಲೇ ಭೂತಗಣಗಳಿಂದ ತುಂಬಿಹೋಗಿದ್ದ ಸುತರು ಅಸುನೀಗಿದ್ದ ಸ್ಥಳಕ್ಕೆ ಹೋದನು. ಅವನು ಅಲ್ಲಿಗೆ ಪ್ರವೇಶಿಸಿ ರಕ್ತದಲ್ಲಿ ತೋಯ್ದು ಹೋಗಿದ್ದ ಮತ್ತು ನೆಲದಮೇಲೆ ಮಲಗಿದ್ದ, ಶಿರಗಳನ್ನು ಕಳೆದುಕೊಂಡು ಉಗ್ರವಾಗಿ ಕಾಣುತ್ತಿದ್ದ, ಪುತ್ರರ, ಸುಹೃದಯರ ಮತ್ತು ಸಖರ ತುಂಡು ತುಂಡಾಗಿದ್ದ ಮೃತ ಶರೀರಗಳನ್ನು ನೋಡಿದನು. ಅವರನ್ನು ನೋಡಿ ಧರ್ಮಭೃತರಲ್ಲಿ ಶ್ರೇಷ್ಠ ಕೌರವಾಗ್ರ್ಯ ಯುಧಿಷ್ಠಿರನು ತುಂಬಾ ಆರ್ತರೂಪನಾಗಿ ಜೋರಾಗಿ ಕೂಗಿಕೊಂಡು ಮೂರ್ಛಿತನಾಗಿ ಅನುಯಾಯಿಗಳೊಡನೆ ನೆಲದ ಮೇಲೆ ಬಿದ್ದುಬಿಟ್ಟನು. ರಣದಲ್ಲಿ ಮಕ್ಕಳೂ, ಮೊಮ್ಮಕ್ಕಳೂ, ಸ್ನೇಹಿತರೂ ಹತರಾದುದನ್ನು ನೋಡಿ ಮಹಾದುಃಖದಿಂದ ಅವನು ಸಂತಪ್ತನಾಗಿಹೋದನು. ಪುತ್ರ-ಪೌತ್ರರನ್ನೂ, ಸಹೋದರರನ್ನೂ, ಸ್ವಜನರನ್ನೂ ಸ್ಮರಿಸಿಕೊಳ್ಳುತ್ತಿದ್ದ ಆ ಮಹಾತ್ಮನ ಶೋಕವು ಇನ್ನೂ ಹೆಚ್ಚಾಯಿತು. ಕಂಬನಿಗಳಿಂದ ಕಣ್ಣುಗಳು ತುಂಬಿಹೋಗಿದ್ದ, ನಡುಗುತ್ತಾ ಎಚ್ಚರದಪ್ಪುತ್ತಿದ್ದ ಅವನನ್ನು ತುಂಬಾ ವ್ಯಾಕುಲಗೊಂಡಿದ್ದ ಸುಹೃದಯರು ಸಂತಯಿಸತೊಡಗಿದರು.
ಅಶ್ವತ್ಥಾಮನ ಸಂಹಾರವಾಗದಿದ್ದರೆ ತಾನು ಸಾಯುವೆನೆಂದು ದ್ರೌಪದಿಯು ಪ್ರಾಯೋಪವೇಶಕ್ಕೆ ಕುಳಿತುಕೊಂಡಿದುದು
ಅದೇ ಕ್ಷಣದಲ್ಲಿ ಆದಿತ್ಯವರ್ಚಸ ರಥದಲ್ಲಿ ನಕುಲನು ಪರಮ ಆರ್ತೆ ಕೃಷ್ಣೆಯನ್ನು ಅಲ್ಲಿಗೆ ಕರೆತಂದನು. ಉಪಪ್ಲವ್ಯಕ್ಕೆ ಹೋಗಿದ್ದ ಅವಳು ತನ್ನ ಪುತ್ರರೆಲ್ಲರ ವಿನಾಶದ ಮಹಾ ಅಪ್ರಿಯ ವಿಷಯವನ್ನು ಕೇಳಿ ವ್ಯಥಿತಳಾಗಿದ್ದಳು. ಚಂಡಮಾರುತಕ್ಕೆ ಸಿಲುಕಿದ ಬಾಳೆಯ ಮರದಂತೆ ಶೋಕಾರ್ತಳಾಗಿದ್ದ ಕೃಷ್ಣೆಯು ರಾಜನ ಬಳಿಸೇರಿ ಭೂಮಿಯ ಮೇಲೆ ಬಿದ್ದಳು. ಅರಳಿದ ಕಮಲದ ದಳಗಳಂಥಹ ವಿಶಾಲ ಕಣ್ಣುಗಳಿದ್ದ ಅವಳ ಮುಖವು ಶೋಕಕರ್ಶಿತಗೊಂಡು ಒಡನೆಯೇ ರಾಹುಗ್ರಸ್ತ ಚಂದ್ರನಂತೆ ಕಾಂತಿಹೀನವಾಯಿತು. ಅವಳು ಕೆಳಗೆ ಬೀಳುತ್ತಿರುವುದನ್ನು ನೋಡಿ ಸತ್ಯವಿಕ್ರಮಿ ಕುಪಿತ ವೃಕೋದರನು ಅವಳಿದ್ದಲ್ಲಿಗೆ ಹಾರಿ ತನ್ನ ಎರಡೂ ಕೈಗಳಿಂದ ಅವಳನ್ನು ಹಿಡಿದುಕೊಂಡನು.
ಭೀಮಸೇನನಿಂದ ಸಮಾಧಾನಗೊಳಿಸಲ್ಪಟ್ಟ ಭಾಮಿನಿ ಕೃಷ್ಣೆಯು ರೋದಿಸುತ್ತಾ ಭ್ರಾತರರೊಂದಿಗಿದ್ದ ಪಾಂಡವನಿಗೆ ಹೇಳಿದಳು:
“ರಾಜನ್! ಅದೃಷ್ಟವಶಾತ್ ನೀನು ಕ್ಷತ್ರಧರ್ಮದಂತೆ ನಿನ್ನ ಮಕ್ಕಳನ್ನು ಯಮನಿಗಿತ್ತು ಇಂದು ಈ ಅಖಿಲ ಭೂಮಿಯನ್ನು ಭೋಗಿಸುವಂತವನಾಗಿದ್ದೀಯೆ! ಒಳ್ಳೆಯದಾಯಿತು! ನೀನು ಕುಶಲಿಯಾಗಿದ್ದುಕೊಂಡು ಈ ಇಡೀ ಭೂಮಿಯನ್ನು ಪಡೆದು ಮತ್ತ ಮಾತಂಗದಂತೆ ನಡೆಯುತ್ತಿದ್ದ ಸೌಭದ್ರನನ್ನು ಸ್ಮರಿಸಿಕೊಳ್ಳುತ್ತಿಲ್ಲ! ಒಳ್ಳೆಯದಾಯಿತು! ನನ್ನ ಶೂರ ಮಕ್ಕಳು ಧರ್ಮದಿಂದಾಗಿ ಮಡಿದಿದ್ದಾರೆ ಎನ್ನುವುದನ್ನು ಕೇಳಿ ಉಪಪ್ಲವ್ಯದಲ್ಲಿದ್ದ ನನಗೇನಾಗಿರಬಹುದೆಂದು ನೀನು ಯೋಚಿಸುತ್ತಿಲ್ಲ! ಪಾಪಕರ್ಮಿ ದ್ರೌಣಿಯು ಮಲಗಿದ್ದವರನ್ನು ಸಂಹರಿಸಿದನು ಎನ್ನುವುದನ್ನು ಕೇಳಿ ಬೆಂಕಿಯು ಕಟ್ಟಿಗೆಯನ್ನು ಸುಡುವಂತೆ ಶೋಕವು ನನ್ನನ್ನು ಸುಡುತ್ತಿದೆ! ಪಾಂಡವರೇ! ಕೇಳಿಕೊಳ್ಳಿ! ಪಾಪಕರ್ಮವನ್ನೆಸಗಿದ ದ್ರೌಣಿಯ ಮತ್ತು ಅವನ ಅನುಯಾಯಿಗಳ ಜೀವವನ್ನು ನೀನು ಯುದ್ಧದಲ್ಲಿ ವಿಕ್ರಮದಿಂದ ಅಪಹರಿಸದೇ ಇದ್ದರೆ, ದ್ರೌಣಿಯು ಅವನ ಪಾಪಕರ್ಮದ ಫಲವನ್ನು ಪಡೆಯದೇ ಇದ್ದರೆ, ಇಲ್ಲಿಯೇ ನಾನು ಪ್ರಾಯೋಪವೇಶವನ್ನು ಮಾಡುತ್ತೇನೆ!”
ಪಾಂಡವ ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಯಾಜ್ಞಸೇನಿ ಯಶಸ್ವಿನೀ ಕೃಷ್ಣೆಯು ಪ್ರಾಯೋಪವೇಶಕ್ಕಾಗಿ ಕುಳಿತಳು. ಹಾಗೆ ಕುಳಿತಿದ್ದ ತನ್ನ ಪ್ರಿಯ ಮಹಿಷೀ ಚಾರುದರ್ಶನೆ ದ್ರೌಪದಿಗೆ ಧರ್ಮತ್ಮಾ ರಾಜರ್ಷಿ ಪಾಂಡವನು ಹೇಳಿದನು:
“ಶುಭೇ! ಧರ್ಮಜ್ಞೇ! ನಿನ್ನ ಪುತ್ರರು ಮತ್ತು ಸಹೋದರರು ಧರ್ಮಾನುಸಾರವಾಗಿ ಯುದ್ಧಮಾಡಿ ಧರ್ಮಮಾರ್ಗದಲ್ಲಿಯೇ ನಿಧನವನ್ನು ಹೊಂದಿದ್ದಾರೆ. ಅವರ ಕುರಿತು ದುಃಖಿಸಬಾರದು. ದ್ರೋಣಪುತ್ರನು ಇಲ್ಲಿಂದ ದೂರದಲ್ಲಿರುವ ವನಕ್ಕೆ ಹೊರಟುಹೋಗಿದ್ದಾನೆ. ಅವನು ಅಲ್ಲಿ ಯುದ್ಧದಲ್ಲಿ ಹತನಾದುದು ನಿನಗಾದರೋ ಹೇಗೆ ತಿಳಿಯಬೇಕು?”
ದ್ರೌಪದಿಯು ಹೇಳಿದಳು:
“ದ್ರೋಣಪುತ್ರನ ಶಿರದಲ್ಲಿ ಸಹಜವಾದ ಮಣಿಯೊಂದಿದೆಯೆಂದು ಕೇಳಿದ್ದೇವೆ. ಯುದ್ಧದಲ್ಲಿ ಆ ಪಾಪಿಯನ್ನು ಸಂಹರಿಸಿ ಅವನ ಮಣಿಯನ್ನು ಅಪಹರಿಸಿದುದನ್ನು ನಾನು ನೋಡಬೇಕು! ರಾಜನ್! ಅದು ನಿನ್ನ ಶಿರದಲ್ಲಿರುವಂತೆ ಮಾಡಿದರೆ ಮಾತ್ರ ನಾನು ಜೀವಿಸಿರಬಲ್ಲೆ!”
ಭೀಮನು ಅಶ್ವತ್ಥಾಮನನ್ನು ವಧಿಸಲು ಹೋದುದು
ರಾಜ ಪಾಂಡವನಿಗೆ ಹೀಗೆ ಹೇಳಿ ಚಾರುದರ್ಶನೆ ಕೃಷ್ಣೆಯು ಭೀಮಸೇನನ ಬಳಿಬಂದು ಕುಪಿತಳಾಗಿ ಈ ಮಾತನ್ನಾಡಿದಳು:
“ಭೀಮ! ಕ್ಷತ್ರಧರ್ಮವನ್ನು ನೆನಪಿಸಿಕೊಂಡು ನನ್ನನ್ನು ಕಾಪಾಡಬೇಕಾಗಿದೆ. ಮಘವಾನನು ಶಂಬರನನ್ನು ಹೇಗೋ ಹಾಗೆ ಆ ಪಾಪಿಷ್ಟನನ್ನು ನೀನು ಕೊಲ್ಲು! ವಿಕ್ರಮದಲ್ಲಿ ನಿನ್ನ ಸಮಾನ ಪುರುಷನು ಯಾರೂ ಇಲ್ಲ! ವಾರಣಾವತ ನಗರದಲ್ಲಿ ಹಿಡಿಂಬನನ್ನು ನೋಡಿ ಪರಮವ್ಯಸನಕ್ಕೆ ಸಿಲುಕಿದ್ದ ಪಾರ್ಥರಿಗೆ ನೀನು ದ್ವೀಪಪ್ರಾಯನಾಗಿ ಅವರನ್ನು ರಕ್ಷಿಸಿದೆಯೆಂದು ಸರ್ವಲೋಕಗಳಲ್ಲಿ ವಿಖ್ಯಾತವಾಗಿದೆ. ಹಾಗೆಯೇ ವಿರಾಟನಗರದಲ್ಲಿ ಕೀಚಕನಿಂದ ಬಹಳ ಪೀಡೆಗೊಳಗಾಗಿದ್ದ ನನ್ನನ್ನು ಮಘವಾನನು ಪೌಲೋಮಿಯನ್ನು ಹೇಗೋ ಹಾಗೆ ಆ ಕಷ್ಟದಿಂದ ನನ್ನನ್ನು ಪಾರುಮಾಡಿದ್ದೆ! ಹಿಂದೆ ಇನ್ನೂ ಅನ್ಯ ಮಹಾಕರ್ಮಗಳನ್ನು ಮಾಡಿದ್ದಂತೆ ನೀನು ದ್ರೌಣಿಯನ್ನು ಸಂಹರಿಸಿ ಸುಖಿಯಾಗಿರು!”
ಹಾಗೆ ಬಹುವಿಧವಾಗಿ ದುಃಖದಿಂದ ಪರಿವೇದಿತಳಾಗಿದ್ದ ಅವಳನ್ನು ನೋಡಿ ಮಹಾಬಲ ಕೌಂತೇಯ ಭೀಮಸೇನನು ಸಹಿಸಿಕೊಳ್ಳಲಾರದಾದನು. ಅವನು ಸುಂದರ ಚಿತ್ರಿತ ಮಾರ್ಗಣಗುಣವುಳ್ಳ ಧನುವನ್ನೆತ್ತಿಕೊಂಡು ಕಾಂಚನದ ವಿಚಿತ್ರಭಾಗಗಳನ್ನುಳ್ಳ ಮಹಾರಥವನ್ನು ಏರಿದನು. ನಕುಲನನ್ನು ಸಾರಥಿಯನ್ನಾಗಿ ಮಾಡಿಕೊಂಡು ದ್ರೋಣಪುತ್ರನ ವಧೆಯನ್ನು ನಿಶ್ಚಯಿಸಿ ಶರದೊಂದಿಗೆ ಚಾಪವನ್ನು ಟೇಂಕರಿಸಿ ಕೂಡಲೇ ಅಶ್ವಗಳನ್ನು ಓಡಿಸಿದನು. ಪ್ರಚೋದಿತಗೊಂಡ ಆ ವಾಯುವೇಗದ ಶೀಘ್ರಗಾಮಿ ಕುದುರೆಗಳು ತ್ವರಿತ ವೇಗದಿಂದ ಮುಂದುವರೆದವು. ಪ್ರತಿಜ್ಞೆಯಿಂದ ಚ್ಯುತನಾಗದ ವೀರ್ಯವಾನ್ ಭೀಮನು ಶಿಬಿರದಿಂದ ಹೊರಟು ದ್ರೋಣಪುತ್ರನ ರಥದ ಮಾರ್ಗದಲ್ಲಿಯೇ ಪ್ರಯಾಣಮಾಡಿದನು.
ಭೀಮನನ್ನು ಹಿಂಬಾಲಿಸಿ ಯುಧಿಷ್ಠಿರ ಮತ್ತು ಕೃಷ್ಣಾರ್ಜುನರು ಹೋದುದು
ಆ ದುರ್ಧರ್ಷನು ಹೊರಟುಹೋಗಲು ಯದುಗಳ ಋಷಭ ಪುಂಡರೀಕಾಕ್ಷನು ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು:
“ಭಾರತ! ನಿನ್ನ ಈ ಭ್ರಾತಾ ಪಾಂಡವ ಭರತನು ಪುತ್ರಶೋಕದ ಭಾರವನ್ನು ಹೊತ್ತು ಯುದ್ಧದಲ್ಲಿ ದ್ರೌಣಿಯನ್ನು ಸಂಹರಿಸಲು ಬಯಸಿ ಹೋಗುತ್ತಿದ್ದಾನೆ! ನಿನ್ನ ಎಲ್ಲ ಸಹೋದರರಲ್ಲಿ ಭೀಮನು ನಿನಗೆ ಅತ್ಯಂತ ಪ್ರಿಯನಾದವನು. ಇಂದು ಅವನು ಕಷ್ಟಕ್ಕೆ ಸಿಲುಕಲಿದ್ದಾನೆ. ಅವನ ಸಹಾಯಕ್ಕೆ ನೀನು ಏಕೆ ಏನನ್ನೂ ಮಾಡುತ್ತಿಲ್ಲ? ಪರಪುರಂಜಯ ದ್ರೋಣನು ತನ್ನ ಮಗನಿಗೆ ನೀಡಿದ್ದ ಬ್ರಹ್ಮಶಿರ ಎಂಬ ಅಸ್ತ್ರವು ಇಡೀ ಭೂಮಿಯನ್ನೇ ದಹಿಸಿಬಿಡಬಲ್ಲದು. ಸರ್ವಧನುಷ್ಮತರಲ್ಲಿ ಕೇತುಪ್ರಾಯನಾದ ಆ ಮಹಾಭಾಗ ಆಚಾರ್ಯನು ಪ್ರೀತಿಯಿಂದ ಧನಂಜಯನಿಗೆ ಆ ಅಸ್ತ್ರವನ್ನು ಪ್ರತಿಪಾಲಿಸಿದ್ದನು. ಅದನ್ನು ಸಹಿಸಿಕೊಳ್ಳಲಾರದ ಅವನ ಪುತ್ರನು ಆ ಅಸ್ತ್ರವನ್ನು ಕೇಳಿಕೊಳ್ಳಲು ದ್ರೋಣನು ಅಸಂತೋಷನಾಗಿಯೇ ಅದನ್ನು ತನ್ನ ಮಗನಿಗೆ ಉಪದೇಶಿಸಿದ್ದನು. ತನ್ನ ಮಗನು ಚಪಲನೆಂದು ತಿಳಿದಿದ್ದ ಆ ಮಹಾತ್ಮ ಸರ್ವಧರ್ಮವಿದು ಆಚಾರ್ಯನು ಮಗನಿಗೆ ಸತತವೂ ಈ ಅನುಶಾಸನವಿತ್ತಿದ್ದನು:
“ಮಗೂ! ರಣದಲ್ಲಿ ಪರಮ ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾಗಲೂ ನೀನು ಈ ಅಸ್ತ್ರವನ್ನು ಉಪಯೋಗಿಸಕೂಡದು. ಅದರಲ್ಲೂ ವಿಶೇಷವಾಗಿ ಮನುಷ್ಯರ ಮೇಲೆ ಪ್ರಯೋಗಿಸಬಾರದು!”
ಇದನ್ನು ಹೇಳಿದ ಗುರು ದ್ರೋಣನು ನಂತರ ಮಗನಿಗೆ
“ನೀನು ಯಾವಾಗಲೂ ಸತ್ಪುರುಷರ ಮಾರ್ಗದಲ್ಲಿ ನಡೆಯುವವನಲ್ಲ ಎಂದು ನನಗೆ ತಿಳಿದಿದೆ!”
ಎಂದೂ ಹೇಳಿದ್ದನು. ತಂದೆಯ ಆ ಅಪ್ರಿಯ ಮಾತನ್ನು ಸ್ವೀಕರಿಸಿ ದುಷ್ಟಾತ್ಮ ಅಶ್ವತ್ಥಾಮನು ಸರ್ವಕಲ್ಯಾಣಗಳಿಂದ ನಿರಾಶನಾಗಿ ಶೋಕಿಸುತ್ತಾ ಭೂಮಿಯಲ್ಲಿ ಅಲೆಯತೊಡಗಿದನು. ನೀವು ವನದಲ್ಲಿದ್ದಾಗ ಅವನು ದ್ವಾರಕೆಗೂ ಬಂದಿದ್ದ ಮತ್ತು ವೃಷ್ಣಿಗಳು ಅವನನ್ನು ಪರಮ ಗೌರವದಿಂದ ಸತ್ಕರಿಸಿದ್ದರು. ಒಮ್ಮೆ ಅವನು ದ್ವಾರವತಿಯ ಹತ್ತಿರ ಸಮುದ್ರತೀರದಲ್ಲಿ ವಾಸಿಸುತ್ತಿದ್ದಾಗ ಏಕಾಂಗಿಯಾಗಿದ್ದ ನನ್ನನ್ನು ಒಂಟಿಯಾಗಿ ಸಂಧಿಸಿ ನಗುತ್ತಾ ಇದನ್ನು ಹೇಳಿದ್ದನು:
“ಕೃಷ್ಣ! ಸತ್ಯಪರಾಕ್ರಮಿ ಮತ್ತು ಭಾರತರ ಆಚಾರ್ಯ ನನ್ನ ತಂದೆಯು ಉಗ್ರತಪಸ್ಸನ್ನು ಆಚರಿಸಿ ಅಗಸ್ತ್ಯನಿಂದ ದೇವಗಂಧರ್ವ ಪೂಜಿತ ಬ್ರಹ್ಮಶಿರ ಎಂಬ ಹೆಸರಿನ ಅಸ್ತ್ರವನ್ನು ಪಡೆದುಕೊಂಡಿದ್ದನು. ತಂದೆಯಲ್ಲಿದ್ದ ಆ ಅಸ್ತ್ರವು ಇಂದು ನನ್ನಲ್ಲಿಯೂ ಇದೆ. ನನ್ನಿಂದ ಈ ದಿವ್ಯಾಸ್ತ್ರವನ್ನು ಪಡೆದುಕೊಂಡು ನೀನು ನನಗೆ ರಣದಲ್ಲಿ ರಿಪುಹರಣಮಾಡಬಲ್ಲ ಚಕ್ರವನ್ನು ದಯಪಾಲಿಸು!”
ಹೀಗೆ ಕೈಮುಗಿದು ನನ್ನ ಅಸ್ತ್ರವನ್ನು ಕೇಳುತ್ತಿದ್ದ ಅವನಿಗೆ ಪ್ರಯತ್ನಪಟ್ಟು ಪ್ರೀತಿಯಿಂದಲೇ ನಾನು ಹೇಳಿದೆ:
“ದೇವ-ದಾನವ-ಗಂಧರ್ವ-ಮನುಷ್ಯ-ಪಕ್ಷಿ-ಉರಗಗಳಲ್ಲಿ ನನ್ನ ವೀರ್ಯದ ನೂರನೆಯ ಒಂದು ಭಾಗದಷ್ಟು ಸಮನಾದವರು ಯಾರೂ ಇಲ್ಲ. ಇದು ನನ್ನ ಧನುಸ್ಸು. ಇದು ಚಕ್ರ. ಇದು ಗದೆ. ನೀನು ನನ್ನಿಂದ ಯಾವ ಅಸ್ತ್ರವನ್ನು ಪಡೆಯಲಿಚ್ಛಿಸುವೆಯೋ ಆ ಅಸ್ತ್ರಗಳನ್ನು ನಾನು ನಿನಗೆ ಕೊಡುತ್ತೇನೆ. ಯಾವುದನ್ನು ಎತ್ತಿಕೊಳ್ಳಲು ಅಥವಾ ರಣದಲ್ಲಿ ಪ್ರಯೋಗಿಸಲು ನಿನಗೆ ಸಾಧ್ಯವಾಗುವುದೋ ಅದನ್ನು ನೀನು, ನನಗೆ ಕೊಡಬೇಕೆಂದು ಬಯಸಿರುವ ಆ ಅಸ್ತ್ರವನ್ನು ಕೊಡದೇ, ನನ್ನಿಂದ ಪಡೆದುಕೊಳ್ಳಬಹುದು.”
ನನ್ನೊಡನೆ ಸ್ಪರ್ಧಿಸುತ್ತಿದ್ದ ಅವನು ಸುಂದರ ವಜ್ರ,ಮಯ ನಾಭಿಯ, ಸಹಸ್ರ ಅರೆಗಳ ಚಕ್ರವನ್ನು ಆರಿಸಿಕೊಂಡನು. ಚಕ್ರವನ್ನು ಎತ್ತಿಕೋ ಎಂದು ನಾನು ಹೇಳಿದ ನಂತರ ಬೇಗನೇ ಹಾರಿಬಂದು ಅವನು ಎಡಗೈಯಿಂದ ಚಕ್ರವನ್ನು ಹಿಡಿದುಕೊಂಡನು. ಆದರೆ ಅವನಿಗೆ ಅದನ್ನು ಎತ್ತುವುದಿರಲಿ ಅದಿದ್ದ ಸ್ಥಳದಿಂದ ಅಲುಗಿಸಲು ಕೂಡ ಅವನಿಗೆ ಸಾಧ್ಯವಾಗಲಿಲ್ಲ! ಆಗ ಅವನು ಬಲಗೈಯನ್ನೂ ಮುಂದೆ ಚಾಚಿ ಎರಡೂ ಕೈಗಳಿಂದ ಚಕ್ರವನ್ನು ಮೇಲೆತ್ತಲು ಪ್ರಯತ್ನಿಸಿದನು. ಸರ್ವ ಪ್ರಯತ್ನದಿಂದಲೂ ಅವನಿಗೆ ಅದನ್ನು ಹಿಡಿದೆತ್ತಲು ಸಾಧ್ಯವಾಗಲಿಲ್ಲ. ಹೀಗೆ ಸರ್ವಬಲವನ್ನುಪಯೋಗಿಸಿಯೂ ಅದನ್ನು ಅಲುಗಾಡಿಸಲು ಅಥವಾ ಎತ್ತಲು ಸಾಧ್ಯವಾಗದಿದ್ದಾಗ ಪರಮ ದುರ್ಮನನಾದ ದ್ರೌಣಿಯು ಪರಮ ಯತ್ನವನ್ನು ಮಾಡಿ ಆಯಾಸಗೊಂಡು ಹಿಂದೆ ಸರಿದನು. ಹಿಂದೆಸರಿದ ಮತ್ತು ಅದರಿಂದಾಗಿ ಮನಸ್ಸನ್ನು ಕೆಡಿಸಿಕೊಂಡಿದ್ದ ಉದ್ವಿಗ್ನ ಅಶ್ವತ್ಥಾಮನಿಗೆ ನಾನು ಹೀಗೆ ಹೇಳಿದ್ದೆನು:
“ದೇವ-ಮನುಷ್ಯರಲ್ಲಿ ಅತ್ಯಂತ ಪ್ರಾಮಾಣಿಕನೆಂದು ಖ್ಯಾತಿಗೊಂಡಿರುವ, ಗಾಂಡೀವಧನ್ವಿ, ಶ್ವೇತಾಶ್ವ, ಕಪಿಪ್ರವರನನನ್ನು ಧ್ವಜದಲ್ಲಿಟ್ಟಿಕೊಂಡಿರುವ, ಸಾಕ್ಷಾತ್ ದೇವದೇವೇಶ ಶಿತಿಕಂಠ ಉಮಾಪತಿ ಶಂಕರನನ್ನು ದ್ವಂದ್ವಯುದ್ಧದಲ್ಲಿ ಪರಾಜಯಗೊಳಿಸಲು ಪ್ರಯತ್ನಿಸಿ ತೃಪ್ತಿಗೊಳಿಸಿದ ಅರ್ಜುನನಿಗಿಂತ ಹೆಚ್ಚಿನ ಪ್ರಿಯ ಪುರುಷನು ಈ ಭುವಿಯಲ್ಲಿ ಬೇರೆ ಯಾರೂ ಇಲ್ಲ. ನನ್ನ ಪತ್ನಿಯರು ಮತ್ತು ಮಕ್ಕಳಲ್ಲಿಕೂಡ ಅವನಿಗೆ ನಾನು ಕೊಡಲಾರದವರು ಯಾರೂ ಇಲ್ಲ. ಬ್ರಾಹ್ಮಣ! ನನಗೆ ಅತ್ಯಂತ ಸುಹೃದನಾದ ಅಕ್ಲಿಷ್ಟಕರ್ಮಿ ಪಾರ್ಥನೂ ಕೂಡ ನೀನು ನನ್ನೊಡನೆ ಕೇಳಿದಂತೆ ಇದೂವರೆಗೂ ಕೇಳಿಲ್ಲ. ಹನ್ನೆರಡು ವರ್ಷಗಳು ಹಿಮವತ್ಪರ್ವತದಲ್ಲಿ ಬ್ರಹ್ಮಚರ್ಯದಿಂದ ಘೋರ ತಪಸ್ಸನ್ನು ಮಾಡಿದ ನನ್ನಿಂದ ಸಮಾನವ್ರತಚಾರಿಣಿ ರುಕ್ಮಿಣಿಯಲ್ಲಿ ಜನಿಸಿದ ಸನತ್ಕುಮಾರನ ತೇಜಸ್ಸುಳ್ಳ ಪ್ರದ್ಯುಮ್ನನೆಂಬ ನನ್ನ ಮಗನಿದ್ದಾನೆ. ಮೂಢ! ಆ ನನ್ನ ಮಗನೂ ಕೂಡ ಇಂದು ನೀನು ನನ್ನಿಂದ ಕೇಳಿದ ಈ ದಿವ್ಯವಾದ ಅಪ್ರತಿಮ ಚಕ್ರವನ್ನು ಇದೂವರೆಗೆ ಕೇಳಲಿಲ್ಲ! ನೀನು ಕೇಳಿದ ಇದನ್ನು ಎಂದೂ ಅತಿಬಲನಾದ ರಾಮನೂ, ಗದನೂ, ಸಾಂಬನೂ ನನ್ನನ್ನು ಕೇಳಲಿಲ್ಲ! ನೀನು ಕೇಳುವ ಇದನ್ನು ದ್ವಾರಕಾವಾಸಿಗಳಲ್ಲಿ ಮತ್ತು ವೃಷ್ಣಿ-ಅಂಧಕ ಮಹಾರಥರಲ್ಲಿ ಬೇರೆ ಯಾರೂ ಮೊದಲು ಕೇಳಿರಲಿಲ್ಲ! ಅಯ್ಯಾ! ಭಾರತಾಚಾರ್ಯಪುತ್ರ! ಸರ್ವಯಾದವರಿಂದ ಸನ್ಮಾನಿತನಾಗಿರುವ ರಥಿಗಳಲ್ಲಿ ಶ್ರೇಷ್ಠನಾದ ನೀನು ಯಾರೊಡನೆ ಯುದ್ಧಮಾಡಲು ಬಯಸುತ್ತಿರುವೆ?”
ನಾನು ಇದನ್ನು ಕೇಳಲು ದ್ರೌಣಿಯು ನನಗೆ ಉತ್ತರಿಸಿದ್ದನು:
“ಕೃಷ್ಣ! ನಿನ್ನನ್ನು ಪೂಜಿಸಿ ನಿನ್ನೊಡನೆಯೇ ಯುದ್ಧಮಾಡಲು ಬಯಸಿದ್ದೆ. ಅಜೇಯನೆನಿಸಿಕೊಳ್ಳಬೇಕೆಂದೇ ನಾನು ನಿನ್ನ ದೇವದಾನವಪೂಜಿತ ಚಕ್ರವನ್ನು ಕೇಳಿದೆನು. ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಿನ್ನಿಂದ ನಾನು ಈ ದುರ್ಲಭ ಕಾಮನೆಯನ್ನು ಪಡೆಯದೇ ಹಿಂದಿರುಗುತ್ತೇನೆ. ನನ್ನನ್ನು ಮಂಗಳಕರ ಮಾತಿನಿಂದ ಬೀಳ್ಕೊಡು! ಸುಂದರ ನಾಭಿಯುಳ್ಳ ಇದನ್ನು ವೃಷ್ಣಿಗಳಲ್ಲಿ ಋಷಭನಾದ ನೀನೇ ಧರಿಸಬೇಕು. ಈ ಅಪ್ರತಿಮ ಚಕ್ರವನ್ನು ತಿರುಗಿಸಲು ಭುವಿಯಲ್ಲಿ ಬೇರೆ ಯಾರಿಗೂ ಸಾಧ್ಯವಾಗಲಾರದು!”
ನನಗೆ ಹೀಗೆ ಹೇಳಿ ಬಾಲಕ ದ್ರೌಣಿಯು ಎರಡು ಕುದುರೆಗಳನ್ನೂ, ಧನವನ್ನೂ, ವಿವಿಧರತ್ನಗಳನ್ನೂ ತೆಗೆದುಕೊಂಡು ಹೊರಟು ಹೋದನು. ಅವನು ಮಹಾಕೋಪಿಷ್ಟ. ದುರಾತ್ಮಿ. ಚಪಲ ಮತ್ತು ಕ್ರೂರಿ ಕೂಡ. ಬ್ರಹ್ಮಶಿರಾಸ್ತ್ರವನ್ನು ತಿಳಿದಿರುವ ಅವನಿಂದ ವೃಕೋದರನನ್ನು ರಕ್ಷಿಸು!”
ಹೀಗೆ ಹೇಳಿ ಯೋದ್ಧರಲ್ಲಿ ಶ್ರೇಷ್ಠ ಯಾದವ ನಂದನನು ಹೇಮಮಾಲೆಗಳಿಂದ ಅಲಂಕೃತಗೊಂಡಿದ್ದ ಪರಮ ಕಾಂಬೋಜದ ತುರಗಗಳನ್ನು ಕಟ್ಟಿದ್ದ, ಸರ್ವ ಶ್ರೇಷ್ಠ ಆಯುಧಗಳಿಂದ ಭರಿತವಾಗಿದ್ದ ಮಹಾರಥವನ್ನೇರಿದನು. ಉದಯಿಸುವ ಸೂರ್ಯನ ಎಣೆಗೆಂಪಿನ ಬಣ್ಣದ ಆ ಶ್ರೇಷ್ಠ ರಥದ ಬಲಭಾಗಕ್ಕೆ ಸೈನ್ಯವನ್ನು ಎಡಭಾಗಕ್ಕೆ ಸುಗ್ರೀವವನ್ನೂ ಕಟ್ಟಲಾಗಿತ್ತು. ಅವುಗಳ ಹಿಂದೆ ಮೇಘಪುಷ್ಪ ಮತ್ತು ಬಲಾಹಕಗಳನ್ನು ಕಟ್ಟಲಾಗಿತ್ತು. ಆ ರಥದ ಮೇಲೆ ವಿಶ್ವಕರ್ಮನಿಂದ ನಿರ್ಮಿತವಾದ ನಾನಾರತ್ನವಿಭೂಷಿತ ದಿವ್ಯ ಮಾಯಾ ಧ್ವಜವು ಮೇಲೆದ್ದು ಕಾಣುತ್ತಿತ್ತು. ಆ ಧ್ವಜದಲ್ಲಿ ಪ್ರಭಾಮಂಡಲರಶ್ಮಿವಂತ, ಸರ್ಪಗಳ ಶತ್ರು ಸತ್ಯವತ ವೈನತೇಯನು ಪ್ರಕಾಶಿಸುತ್ತಿದ್ದನು. ಸರ್ವಧನುಷ್ಮತರ ಕೇತುಪ್ರಾಯನಾದ ಹೃಷೀಕೇಶ, ಸತ್ಯಕರ್ಮಿ ಅರ್ಜುನ ಮತ್ತು ಕುರುರಾಜ ಯುಧಿಷ್ಠಿರರು ಆ ರಥವನ್ನೇರಿದರು. ರಥಸ್ಥನಾಗಿದ್ದ ಶಾಂಗ್ರಧನ್ವಿ ದಾಶಾರ್ಹನ ಎರಡೂ ಕಡೆಗಳಲ್ಲಿ ಕುಳಿತಿದ್ದ ಆ ಇಬ್ಬರು ಮಹಾತ್ಮರು ವಾಸವನ ಪಕ್ಕಗಳಲ್ಲಿದ್ದ ಅಶ್ವಿನೀ ಕುಮಾರರಂತೆ ತೋರಿದರು. ಅವರಿಬ್ಬರನ್ನೂ ಕುಳ್ಳಿರಿಸಿಕೊಂಡು ದಾಶಾರ್ಹನು ಆ ಲೋಕಪೂಜಿತ ರಥಕ್ಕೆ ಹೂಡಿದ್ದ ವೇಗಶಾಲೀ ಶ್ರೇಷ್ಠ ಕುದುರೆಗಳನ್ನು ತಿವಿದು ಪ್ರಚೋದಿಸಿದನು. ಪಾಂಡವರಿಬ್ಬರು ಮತ್ತು ಯದುಗಳ ಋಷಭನು ಕುಳಿತಿದ್ದ ಉತ್ತಮ ಸ್ಯಂದನವನ್ನು ಆ ಕುದುರೆಗಳು ಎಳೆಯುತ್ತಾ ಹಾರಿ-ಕುಪ್ಪಳಿಸಿ ಓಡತೊಡಗಿದವು. ಶಾಂಗ್ರಧನ್ವಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಆ ಶೀಘ್ರಗಾಮೀ ಕುದುರೆಗಳ ಖುರಪುಟಗಳಿಂದ ಪರ್ವತಗಳು ಬೀಳುತ್ತಿರುವವೋ ಎನ್ನುವಂತೆ ಮಹಾಶಬ್ಧವುಂಟಾಯಿತು. ಆ ನರವ್ಯಾಘ್ರರು ವೇಗದಿಂದ ಹೋಗಿ ಕ್ಷಣದಲ್ಲಿಯೇ ಮಹೇಷ್ವಾಸ ಭೀಮಸೇನನನ್ನು ಸಮೀಪಿಸಿದರು.
ಅಶ್ವತ್ಥಾಮ-ಅರ್ಜುನರು ಪರಸ್ಪರರ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು
ಕೋಪದಿಂದ ಉರಿಯುತ್ತಾ ಶತ್ರುವಿಗಾಗಿ ಮುನ್ನುಗ್ಗುತ್ತಿದ್ದ ಕೌಂತೇಯನನ್ನು ತಡೆಯಲು ಆ ಮಹಾರಥರಿಗೆ ಸಾಧ್ಯವಾಗಲಿಲ್ಲ. ಶ್ರೀಮಂತ ದೃಢಧನ್ವಿ ಕೃಷ್ಣ-ಅರ್ಜುನ-ಯುಧಿಷ್ಟಿರರರು ನೋಡುತ್ತಿದ್ದಂತೆಯೇ ಭೀಮಸೇನನು ಅತ್ಯಂತವೇಗವಾಗಿ ಕುದುರೆಗಳನ್ನು ಓಡಿಸುತ್ತಾ ಮಹಾತ್ಮರ ಪುತ್ರಹಂತಕ ದ್ರೌಣಿಯು ಎಲ್ಲಿ ಇರುವನೆಂದು ಕೇಳಿದ್ದನೋ ಆ ಭಾಗೀರಥೀತೀರವನ್ನು ತಲುಪಿದನು. ಅಲ್ಲಿ ನದೀತೀರದಲ್ಲಿ ಋಷಿಗಳೊಂದಿಗೆ ಕುಳಿತಿದ್ದ ಯಶಸ್ವಿ, ಮಹಾತ್ಮ, ಕೃಷ್ಣದ್ವೈಪಾಯನ ವ್ಯಾಸನನ್ನು ಕಂಡನು. ಅಲ್ಲೇ ಹತ್ತಿರದಲ್ಲಿ ತುಪ್ಪವನ್ನು ಬಳಿದುಕೊಂಡಿದ್ದ, ಕುಶಚೀರಣವನ್ನು ಧರಿಸಿದ್ದ, ಧೂಳಿನಿಂದ ತುಂಬಿಕೊಂಡಿದ್ದ, ಕೆದರಿದ ಕೂದಲಿದ್ದ ಕ್ರೂರಕರ್ಮಿ ದ್ರೌಣಿಯನ್ನು ನೋಡಿದನು. ಶರವನ್ನು ಹೂಡಿದ ಧನುಸ್ಸನ್ನು ಹಿಡಿದು ಮಹಾಬಾಹು ಕೌಂತೇಯ ಭೀಮಸೇನನು ಅವನನ್ನು ಎದುರಿಸಿ ನಿಲ್ಲು ನಿಲ್ಲೆಂದು ಕೂಗಿ ಹೇಳಿದನು. ಬಾಣವನ್ನು ಹೂಡಿ ಧನುಸ್ಸನ್ನು ಹಿಡಿದಿದ್ದ ಭೀಮನನ್ನು ಮತ್ತು ಹಿಂದೆ ರಥದಲ್ಲಿ ನಿಂತಿದ್ದ ಸಹೋದರರೀರ್ವರು ಮತ್ತು ಜನಾರ್ದನರನ್ನು ನೋಡಿ ದ್ರೌಣಿಯು ವ್ಯಥಿತಾತ್ಮನಾಗಿ ಕಾಲವು ಸನ್ನಿಹಿತವಾಗಿದೆಯೆಂದು ಭಾವಿಸಿದನು. ಆ ಅದೀನಾತ್ಮ ದ್ರೌಣಿಯು ದಿವ್ಯ ಪರಮಾಸ್ತ್ರವನ್ನು ಧ್ಯಾನಿಸಿ, ಎಡಗೈಯಿಂದ ಜೊಂಡುಹುಲ್ಲನ್ನು ಹಿಡಿದುಕೊಂಡು ಅದರ ಮೇಲೆ ದಿವ್ಯಾಸ್ತ್ರವನ್ನು ಮಂತ್ರಿಸಿ ಪ್ರಯೋಗಿಸಿದನು.
ದಿವ್ಯಾಯುಧಧಾರಿಗಳಾಗಿ ನಿಂತಿರುವ ಆ ಶೂರರನ್ನು ಸಹಿಸಿಕೊಳ್ಳಲಾರದೇ ಅಶ್ವತ್ಥಾಮನು ರೋಷದಿಂದ “ಅಪಾಂಡವಾಯ!” ಎಂಬ ದಾರುಣ ವಚನವನ್ನು ಹೇಳಿ ಅದನ್ನು ಪ್ರಯೋಗಿಸಿದನು. ಹೀಗೆ ಹೇಳಿ ಪ್ರತಾಪವಾನ್ ದ್ರೋಣಪುತ್ರನು ಸರ್ವಲೋಕವನ್ನು ಪ್ರಮೋಹಗೊಳಿಸಲು ಆ ಅಸ್ತ್ರವನ್ನು ಪ್ರಯೋಗಿಸಿದನು. ಆಗ ಆ ಜೊಂಡುಹುಲ್ಲಿನಲ್ಲಿ ಅಗ್ನಿಯು ಹುಟ್ಟಿಕೊಂಡಿತು. ಕಾಲಾಂತಕಯಮನಿಗೆ ಸಮಾನ ಆ ಅಗ್ನಿಯು ಮೂರು ಲೋಕಗಳನ್ನೂ ದಹಿಸಿಬಿಡುವುದೋ ಎಂಬಂತೆ ಕಾಣುತ್ತಿತ್ತು.
ಇಂಗಿತದಿಂದಲೇ ದ್ರೌಣಿಯ ಅಭಿಪ್ರಾಯವನ್ನು ತಿಳಿದುಕೊಂಡ ಮಹಾಬಾಹು ದಾಶಾರ್ಹನು ಅರ್ಜುನನಿಗೆ ಹೇಳಿದನು:
“ಅರ್ಜುನ! ಅರ್ಜುನ! ದ್ರೋಣನಿಂದ ಉಪದೇಶಿಸಲ್ಪಟ್ಟ ನಿನ್ನ ಹೃದಯದಲ್ಲಿ ನೆಲೆಸಿರುವ ದಿವ್ಯಾಸ್ತ್ರದ ಸಮಯವು ಬಂದೊದಗಿದೆ! ಸಹೋದರರನ್ನು ಮತ್ತು ನಿನ್ನನ್ನು ರಕ್ಷಿಸಿಕೊಳ್ಳಲು ಮತ್ತು ಈ ಅಸ್ತ್ರವನ್ನು ನಿವಾರಿಸಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸು!”
ಕೇಶವನು ಹೀಗೆ ಹೇಳಲು ತಕ್ಷಣವೇ ಪರವೀರಹ ಪಾಂಡವನು ಶರದೊಂದಿಗೆ ಧನುಸ್ಸನ್ನು ಹಿಡಿದು ರಥದಿಂದಿಳಿದನು. ಮೊದಲು ಆಚಾರ್ಯಪುತ್ರನಿಗೆ ತದನಂತರ ತನಗೆ, ಸಹೋದರರಿಬ್ಬರಿಗೆ ಮತ್ತು ಸರ್ವರಿಗೂ ಸ್ವಸ್ತಿ ಎಂದು ಹೇಳಿ ಪರಂತಪನು ದೇವತೆಗಳಿಗೂ ಗುರುಗಳೆಲ್ಲರಿಗೂ ನಮಸ್ಕರಿಸಿ ಶಿವನನ್ನು ಧ್ಯಾನಿಸಿ ಅಸ್ತ್ರವನ್ನು ಶಾಮ್ಯಗೊಳಿಸುವ ಅಸ್ತ್ರವನ್ನು ಪ್ರಯೋಗಿಸಿದನು. ಗಾಂಡೀವಧನ್ವಿಯು ಸೃಷ್ಟಿಸಿದ ಆ ಅಸ್ತ್ರವು ಕೂಡಲೇ ಯುಗಾಂತದ ಅಗ್ನಿಯೋಪಾದಿಯಲ್ಲಿ ಮಹಾಜ್ವಾಲೆಗಳಿಂದ ಪ್ರಜ್ವಲಿಸಿತು. ಹಾಗೆಯೇ ತಿಗ್ಮತೇಜಸ್ಸಿದ್ದ ದ್ರೋಣಪುತ್ರನ ಅಸ್ತ್ರವೂ ತೇಜೋಮಂಡಲದಿಂದ ಕೂಡಿಕೊಂಡು ಮಹಾಜ್ವಾಲೆಯೊಂದಿಗೆ ಪ್ರಜ್ವಲಿಸಿತು. ಸಿಡಿಲಿನ ಶಬ್ಧದಂತೆ ಅನೇಕ ಶಬ್ಧಗಳುಂಟಾದವು. ಸಹಸ್ರಾರು ಉಲ್ಕೆಗಳು ಬಿದ್ದವು. ಸರ್ವಭೂತಗಳಲ್ಲಿ ಮಹಾಭಯವು ಹುಟ್ಟಿಕೊಂಡಿತು. ಭಯಂಕರ ಶಬ್ಧಗಳಿಂದ ತುಂಬಿಹೋಗಿದ್ದ ಆಕಾಶವು ಜ್ವಾಲೆಗಳ ಪಂಕ್ತಿಗಳಿಂದ ಆವೃತವಾಯಿತು. ಪರ್ವತ-ವನ-ವೃಕ್ಷಗಳೊಂದಿಗೆ ಇಡೀ ಭೂಮಿಯು ನಡುಗಿತು.
ನಾರದ-ವ್ಯಾಸರು ಅಸ್ತ್ರಗಳನ್ನು ಹಿಂತೆಗೆದುಕೊಳ್ಳಲು ಹೇಳಿದುದು
ಆ ಅಸ್ತ್ರಗಳ ತೇಜಸ್ಸಿನಿಂದ ಲೋಕಗಳು ಸುಡಲ್ಪಡುತ್ತಿರಲು ಇಬ್ಬರು ಮಹರ್ಷಿಗಳು ಒಟ್ಟಿಗೇ ಅಲ್ಲಿ ಕಾಣಿಸಿಕೊಂಡರು. ನಾರದ ಮತ್ತು ಭರತರ ಪಿತಾಮಹ ಧರ್ಮಾತ್ಮಾ ವ್ಯಾಸ ಈ ಇಬ್ಬರೂ ಭಾರದ್ವಾಜ ಮತ್ತು ಧನಂಜಯರನ್ನು ಶಾಂತಗೊಳಿಸಲು ಕಾಣಿಸಿಕೊಂಡರು. ಸರ್ವಭೂತಹಿತೈಷಿಣಿಯರಾದ ಸರ್ವಧರ್ಮಜ್ಞರಾದ ಅವರಿಬ್ಬರು ಮುನಿಗಳೂ ಪರಮತೇಜಸ್ಸಿನಿಂದ ಉರಿಯುತ್ತಿದ್ದ ಆ ಎರಡು ಅಸ್ತ್ರಗಳ ಮಧ್ಯೆ ನಿಂತುಕೊಂಡರು. ಆ ಇಬ್ಬರು ಯಶಸ್ವೀ ಋಷಿವರರೂ ಆ ಎರಡು ಮಹಾಸ್ತ್ರಗಳ ನಡುವೆ ಪ್ರಜ್ವಲಿಸುತ್ತಿರುವ ಅಗ್ನಿಗಳಂತೆ ಕಂಡರು. ಯಾವುದೇ ಪ್ರಾಣಿಗಳಿಂದಲು ಕೆಣಕಲು ಅಸಾಧ್ಯರಾಗಿದ್ದ, ದೇವದಾನವರಿಂದ ಗೌರವಿಸಲ್ಪಟ್ಟಿದ್ದ ಅವರಿಬ್ಬರೂ ಲೋಕಗಳ ಹಿತವನ್ನು ಬಯಸಿ ಆ ಅಸ್ತ್ರಗಳ ತೇಜಸ್ಸನ್ನು ತಣಿಸಲು ಬಂದಿದ್ದರು. ಋಷಿಗಳು ಹೇಳಿದರು:
“ಈ ಹಿಂದೆ ಆಗಿಹೋಗಿದ್ದ ನಾನಾಶಸ್ತ್ರಗಳನ್ನು ತಿಳಿದುಕೊಂಡಿದ್ದ ಮಹಾರಥರು ಈ ಅಸ್ತ್ರವನ್ನು ಮನುಷ್ಯರ ಮೇಲೆ ಎಂದೂ ಪ್ರಯೋಗಿಸಿರಲಿಲ್ಲ!”
ಅಗ್ನಿಸಮತೇಜಸ್ಸಿನ ಅವರೀರ್ವರನ್ನು ನೋಡಿದೊಡನೆಯೇ ತ್ವರೆಮಾಡಿ ನರಶಾರ್ದೂಲ ಧನಂಜಯನು ತನ್ನ ದಿವ್ಯ ಶರವನ್ನು ಉಪಸಂಹಾರಗೊಳಿಸಿದನು. ಮಾತನಾಡುವವರಲ್ಲಿ ಶ್ರೇಷ್ಠನಾದ ಅವನು ಕೈಮುಗಿದು ಆ ಋಷಿಗಳಿಗೆ ಹೇಳಿದನು:
“ಅಸ್ತ್ರದಿಂದ ಅಸ್ತ್ರವು ಪ್ರಶಮನಗೊಳ್ಳಲಿ ಎಂದೇ ನಾನು ಇದನ್ನು ಪ್ರಯೋಗಿಸಿದ್ದೆನು. ಈ ಪರಮಾಸ್ತ್ರವನ್ನು ಹಿಂದೆ ತೆಗೆದುಕೊಂಡಿದ್ದೇ ಆದರೆ ಪಾಪಕರ್ಮಿ ದ್ರೌಣಿಯು ಅಸ್ತ್ರದ ತೇಜಸ್ಸಿನಿಂದ ನಮ್ಮೆಲ್ಲರನ್ನೂ ಅಶೇಷವಾಗಿ ಭಸ್ಮಮಾಡಿಬಿಡುತ್ತಾನೆ ಎನ್ನುವುದು ನಿಶ್ಚಯ! ಈ ಸಂದರ್ಭದಲಿ ನಮ್ಮ ಮತ್ತು ಲೋಕಗಳ ಸರ್ವಥಾ ಹಿತವನ್ನು ಗಮನದಲ್ಲಿಟ್ಟುಕೊಂಡು ದೇವಸಂಕಾಶರಾದ ನೀವಿಬ್ಬರೂ ಇದನ್ನು ಬಗೆಹರಿಸಬೇಕಾಗಿದೆ.”
ಹೀಗೆ ಹೇಳಿ ಧನಂಜಯನು ಯುದ್ಧದಲ್ಲಿ ದೇವತೆಗಳಿಗೂ ಹಿಂದೆ ತೆಗೆದುಕೊಳ್ಳಲು ಕಷ್ಟಕರವಾದ ಆ ಅಸ್ತ್ರವನ್ನು ಪುನಃ ಹಿಂದೆ ತೆಗೆದುಕೊಂಡನು. ರಣದಲ್ಲಿ ಪ್ರಯೋಗಿಸಿದ ಆ ಪರಮಾಸ್ತ್ರವನ್ನು ಹಿಂದೆ ತೆಗೆದುಕೊಳ್ಳಲು ಪಾಂಡವ ಅರ್ಜುನನಲ್ಲದೇ ಸಾಕ್ಷಾತ್ ಶತಕ್ರತುವಿಗೂ ಸಾಧ್ಯವಾಗುತ್ತಿರಲಿಲ್ಲ. ಬ್ರಹ್ಮತೇಜಸ್ಸಿನಿಂದ ಹುಟ್ಟಿದ್ದ ಅದನ್ನು ಅಕೃತಾತ್ಮನು ಪ್ರಯೋಗಿಸಿದರೆ ಬ್ರಹ್ಮಚರ್ಯವ್ರತದಲ್ಲಿದ್ದವನ ಹೊರತಾಗಿ ಬೇರೆಯಾರಿಗೂ ಅದನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬ್ರಹ್ಮಚರ್ಯವ್ರತನಿಷ್ಠನಾಗಿರದವನು ಅದನ್ನು ಪ್ರಯೋಗಿಸಿ ಪುನಃ ಹಿಂದೆತೆಗೆದುಕೊಳ್ಳಲು ಪ್ರಯತ್ನಿಸಿದರೆ ಅನುಯಾಯಿಗಳೊಂದಿಗೆ ಅವನ ಶಿರವನ್ನು ಅದು ಕತ್ತರಿಸಿಬಿಡುತ್ತದೆ. ಅರ್ಜುನನು ಬ್ರಹ್ಮಚಾರಿಯಾಗಿದ್ದನು. ವ್ರತನಿರತನಾಗಿದ್ದನು. ಮಹಾಕಷ್ಟಗಳನ್ನು ಪಡೆದಿದ್ದಾಗಲೂ ಪರಮ ವ್ಯಸನಗಳು ಬಂದಿದ್ದಾದರೂ ಆ ಅಸ್ತ್ರವನ್ನು ಇದೂವರೆಗೆ ಪ್ರಯೋಗಿಸದೇ ಇದ್ದನು. ಅಂತಹ ಸತ್ಯವ್ರತಧರ ಶೂರ ಬ್ರಹ್ಮಚಾರಿ ಮತ್ತು ಗುರುವನ್ನು ಅನುಸರಿಸುತ್ತಿದ್ದ ಪಾಂಡವ ಅರ್ಜುನನು ಆ ಅಸ್ತ್ರವನ್ನು ಪುನಃ ಹಿಂದೆತೆಗೆದುಕೊಂಡನು.
ದ್ರೌಣಿಯೂ ಕೂಡ ತನ್ನ ಎದುರು ನಿಂತಿದ್ದ ಆ ಇಬ್ಬರು ಋಷಿಗಳನ್ನು ನೋಡಿ ಯುದ್ಧದಲ್ಲಿ ಪ್ರಯೋಗಿಸಿದ್ದ ಆ ಘೋರ ಅಸ್ತ್ರವನ್ನು ಪುನಃ ಹಿಂದೆ ತೆಗೆದುಕೊಳ್ಳಲು ಶಕ್ಯನಾಗಲಿಲ್ಲ. ಸಂಯುಗದಲ್ಲಿ ಆ ಪರಮಾಸ್ತ್ರವನ್ನು ಪ್ರತಿಸಂಹಾರಮಾಡಲು ಅಶಕ್ತನಾದ ದ್ರೌಣಿಯು ದೀನಮನಸ್ಕನಾಗಿ ದ್ವೈಪಾಯನನಿಗೆ ಹೇಳಿದನು:
“ಮುನೇ! ಭೀಮಸೇನನನ ಭಯದಿಂದ ಉತ್ತಮ ವ್ಯಸನದಿಂದ ಆರ್ತನಾಗಿ ಪ್ರಾಣತ್ರಾಣವನ್ನುಳಿಸಿಕೊಳ್ಳುವುದಕ್ಕಾಗಿ ಈ ಅಸ್ತ್ರವನ್ನು ನಾನು ಪ್ರಯೋಗಿಸಿದೆ. ಭೀಮಸೇನನು ಸಂಯುಗದಲ್ಲಿ ಅಧರ್ಮದಿಂದ ಮತ್ತು ಮಿಥ್ಯಾಚಾರ ಮೋಸದಿಂದ ಧಾರ್ತರಾಷ್ಟ್ರನನ್ನು ಸಂಹರಿಸಿದನು. ಆದುದರಿಂದ ಅಕೃತಾತ್ಮನಾದ ನಾನು ಈ ಅಸ್ತ್ರವನ್ನು ಪ್ರಕಟಿಸಿದೆನು. ಆದರೆ ಈಗ ಈ ಅಸ್ತ್ರವನ್ನು ಉಪಸಂಹಾರ ಮಾಡಲು ನಾನು ಶಕ್ಯನಿಲ್ಲ. ಪಾಂಡವರಿಲ್ಲದಂತಾಗಲಿ ಎಂದು ಹೇಳಿ ಅಗ್ನಿತೇಜಸ್ಸನ್ನು ಅನುಮಂತ್ರಿಸಿ ಈ ದುರಾಸದ ದಿವ್ಯ ಅಸ್ತ್ರವನ್ನು ನಾನು ಪ್ರಕಟಿಸಿದೆನು. ಪಾಂಡವೇಯರ ಅಂತ್ಯವಾಗಲೆಂದು ಅಭಿಮಂತ್ರಿಸಿದ್ದ ಇದು ಇಂದು ಪಾಂಡುಸುತರೆಲ್ಲರನ್ನೂ ಜೀವಹೀನರನ್ನಾಗಿ ಮಾಡುತ್ತದೆ. ರೋಷಾವಿಷ್ಟ ಚೇತನದಿಂದ ರಣದಲ್ಲಿ ಪಾರ್ಥರನ್ನು ವಧೆಮಾಡಲು ನಿಶ್ಚಯಿಸಿ ಈ ಅಸ್ತ್ರವನ್ನು ಸೃಷ್ಟಿಸಿದ ನಾನು ಪಾಪವನ್ನೆಸಗಿದ್ದೇನೆ!”
ವ್ಯಾಸನು ಹೇಳಿದನು:
“ಮಗೂ! ಪಾರ್ಥ ಧನಂಜಯನೂ ಕೂಡ ಬ್ರಹ್ಮಶಿರ ಅಸ್ತ್ರವನ್ನು ತಿಳಿದಿದ್ದಾನೆ. ಆದರೆ ರೋಷದಿಂದ ಯುದ್ಧದಲ್ಲಿ ನಿನ್ನ ವಧೆಗೆಂದು ಇದನ್ನು ಅವನು ಪ್ರಯೋಗಿಸಲಿಲ್ಲ. ರಣದಲ್ಲಿ ನಿನ್ನ ಅಸ್ತ್ರವನ್ನು ಅಸ್ತ್ರದಿಂದ ಪ್ರತಿಶಮನಗೊಳಿಸುವ ಸಲುವಾಗಿ ಅರ್ಜುನನು ಇದನ್ನು ಪ್ರಯೋಗಿಸಿ ಪುನಃ ಪ್ರತಿಸಂಹಾರಗೊಳಿಸಿದ್ದಾನೆ. ನಿನ್ನ ತಂದೆಯ ಉಪದೇಶದಿಂದ ಬ್ರಹ್ಮಾಸ್ತ್ರವನ್ನು ಪಡೆದುಕೊಂಡಿದ್ದರೂ ಮಹಾಬಾಹು ಧನಂಜಯನು ಕ್ಷತ್ರಧರ್ಮದಿಂದ ವಿಚಲಿತನಾಗಲಿಲ್ಲ. ಇಂತಹ ಧೃತಿಮತನಾದ, ಸಾಧುವಾದ, ಸರ್ವಾಸ್ತ್ರವಿದುವಾದ, ಸತ್ಪುರುಷನಾದ ಅರ್ಜುನನನ್ನು ಭ್ರಾತೃ-ಬಂಧುಗಳೊಂದಿಗೆ ವಧಿಸಲು ನೀನು ಏಕೆ ಬಯಸುತ್ತಿರುವೆ? ಯಾವದೇಶದಲ್ಲಿ ಬ್ರಹ್ಮಶಿರವು ಇನ್ನೊಂದು ಪರಮಾಸ್ತ್ರದಿಂದ ನಾಶಗೊಳ್ಳುತ್ತದೆಯೋ ಆ ರಾಷ್ಟ್ರದಲ್ಲಿ ಹನ್ನೆರಡು ವರ್ಷಗಳ ಪರ್ಯಂತ ಮಳೆಯು ಸುರಿಯುವುದಿಲ್ಲ. ಇದೇ ಕಾರಣದಿಂದ ಮಹಾಬಾಹು ಪಾಂಡವನು ಶಕ್ತಿವಂತನಾಗಿದ್ದರೂ ಪ್ರಜಾಹಿತವನ್ನು ಬಯಸಿ ನಿನ್ನ ಈ ಅಸ್ತ್ರವನ್ನು ವಿನಾಶಗೊಳಿಸಲಿಲ್ಲ. ಪಾಂಡವರನ್ನು, ರಾಷ್ಟ್ರವನ್ನು ಮತ್ತು ನಿನ್ನನ್ನು ಕೂಡ ಸದಾ ಸಂರಕ್ಷಿಸಲೋಸುಗ ಈ ದಿವ್ಯಾಸ್ತ್ರವನ್ನು ಉಪಸಂಹರಿಸು! ನಿನ್ನ ರೋಷವು ತಣಿಯಲಿ. ಪಾರ್ಥರು ನಿರಾಮಯರಾಗಲಿ. ರಾಜರ್ಷಿ ಪಾಂಡವನು ಅಧರ್ಮದಿಂದ ಯಾರನ್ನೂ ಜಯಿಸಲು ಇಚ್ಛಿಸುವವನಲ್ಲ. ನಿನ್ನ ಶಿರಸ್ಸಿನಲ್ಲಿ ಇರುವ ಮಣಿಯನ್ನು ಇವರಿಗೆ ಕೊಟ್ಟುಬಿಡು. ಇದನ್ನು ತೆಗೆದುಕೊಂಡು ಪ್ರತಿಯಾಗಿ ಪಾಂಡವರು ನಿನ್ನ ಪ್ರಾಣವನ್ನು ನೀಡುತ್ತಾರೆ.”
ದ್ರೌಣಿಯು ಹೇಳಿದನು:
“ಇದೂವರೆಗೆ ಪಾಂಡವರು ಸಂಗ್ರಹಿಸಿಟ್ಟಿಕೊಂಡಿರುವ ರತ್ನಗಳಿಗಿಂತ ಮತ್ತು ಕೌರವ್ಯನ ಸಂಪತ್ತಿಗಿಂತ ನನ್ನ ಈ ಮಣಿಯು ಹೆಚ್ಚಿನ ಮೌಲ್ಯದ್ದಾಗಿದೆ. ಈ ಮಣಿಯನ್ನು ಧರಿಸಿದವನಿಗೆ ಶಸ್ತ್ರ-ವ್ಯಾಧಿ-ಹಸಿವೆ ಮತ್ತು ಆಶ್ರಯಗಳ ಭಯವಿರುವುದಿಲ್ಲ. ದೇವತೆಗಳ, ದಾನವರ, ನಾಗಗಳ ಅಥವಾ ಯಾರ ಭಯವೂ ಇರುವುದಿಲ್ಲ. ರಾಕ್ಷಸರ ಭಯವಿರುವುದಿಲ್ಲ ಮತ್ತು ತಸ್ಕರ ಭಯವಿರುವುದಿಲ್ಲ. ಇಂತಹ ವೀರ್ಯವುಳ್ಳ ಮಣಿಯನ್ನು ನಾನು ಎಂದೂ ಬಿಟ್ಟುಕೊಡುವುದಿಲ್ಲ! ಹೀಗಿದ್ದರೂ ಭಗವಾನನಾದ ನೀನು ಹೇಳಿದ ಕಾರ್ಯವನ್ನು ಮಾಡಬೇಕಾಗಿದೆ. ನಾನು ಮತ್ತು ನನ್ನ ಮಣಿಯು ಇಲ್ಲಿವೆ. ಆದರೆ ಈ ಜೊಂಡುಹುಲ್ಲು ಮಾತ್ರ ಪಾಂಡವೇಯರ ಗರ್ಭಗಳ ಮೇಲೆ ಬೀಳುತ್ತದೆ. ಇದನ್ನು ಅಮೋಘಗೊಳಿಸಲು ನನಗೆ ಸಾಧ್ಯವಿಲ್ಲ!”
ವ್ಯಾಸನು ಹೇಳಿದನು:
“ಹಾಗೆಯೇ ಮಾಡು! ಎಂದೂ ನಿನ್ನ ಬುದ್ಧಿಯನ್ನು ಬೇರೆ ಕಾರ್ಯಗಳಲ್ಲಿ ತೊಡಗಿಸಬೇಡ. ಪಾಂಡವೇಯರ ಗರ್ಭಗಳಲ್ಲಿ ಇದನ್ನು ವಿಸರ್ಜಿಸಿ ಶಾಂತನಾಗು!”
ದ್ವೈಪಾಯನನ ಮಾತನ್ನು ಕೇಳಿ ತುಂಬಾ ಆತುರದಲ್ಲಿದ್ದ ಅಶ್ವತ್ಥಾಮನು ಆ ಪರಮಾಸ್ತ್ರವನ್ನು ಗರ್ಭಗಳ ಮೇಲೆ ಪ್ರಯೋಗಿಸಿದನು.
ಕೃಷ್ಣನು ಅಶ್ವತ್ಥಾಮನನ್ನು ಶಪಿಸಿದುದು
ಆ ಪಾಪಕರ್ಮಿಯು ಅಸ್ತ್ರವನ್ನು ವಿಸೃಜಿಸುದುದನ್ನು ತಿಳಿದು ಹೃಷೀಕೇಶನು ಹರ್ಷಗೊಂಡು ದ್ರೌಣಿಗೆ ಈ ಮಾತನ್ನಾಡಿದನು:
“ಗಾಂಡೀವಧನ್ವಿಯ ಸೊಸೆ ವಿರಾಟನ ಮಗಳು ಹಿಂದೆ ಉಪಪ್ಲವ್ಯಕ್ಕೆ ಹೋದಾಗ ವ್ರತವಂತ ಬ್ರಾಹ್ಮಣನೋರ್ವನು ಅವಳನ್ನು ನೋಡಿ ಹೇಳಿದ್ದನು: “ಕುರುಗಳು ಕ್ಷೀಣಿಸಿಹೋಗುವಾಗ ನಿನ್ನ ಮಗನು ಹುಟ್ಟುತ್ತಾನೆ. ಗರ್ಭಸ್ಥನಾಗಿರುವ ಇವನ ಹೆಸರು ಪರಿಕ್ಷಿತನೆಂದೇ ಆಗುತ್ತದೆ!” ಆ ಸಾಧುವಿನ ಮಾತು ಸತ್ಯವೇ ಆಗುತ್ತದೆ. ಅವಳ ಮಗ ಪರಿಕ್ಷಿತನು ಪುನಃ ವಂಶಕರನಾಗುವನು.”
ಹೀಗೆ ಹೇಳಿದ ಸಾತ್ವತಶ್ರೇಷ್ಠ ಗೋವಿಂದನಿಗೆ ಪರಮಕುಪಿತ ದ್ರೌಣಿಯು ಈ ಉತ್ತರವನ್ನಿತ್ತನು:
“ಕೇಶವ! ಪಕ್ಷಪಾತದಿಂದ ಇದೇನು ನೀನು ಹೇಳುತ್ತಿರುವೆಯೋ ಅದು ಹಾಗೆ ಆಗುವುದಿಲ್ಲ! ನನ್ನ ಮಾತು ಅನ್ಯಥಾ ಆಗುವುದಿಲ್ಲ. ನೀನು ಯಾರನ್ನು ರಕ್ಷಿಸಲು ಇಚ್ಛಿಸುತ್ತಿರುವೆಯೋ ಆ ವಿರಾಟಪುತ್ರಿಯ ಗರ್ಭದ ಮೇಲೆ ನಾನು ಪ್ರಯೋಗಿಸಿದ ಅಸ್ತ್ರವು ಈಗಾಗಲೇ ಬಿದ್ದಿದೆ!”
ವಾಸುದೇವನು ಹೇಳಿದನು:
“ಪರಮಾಸ್ತ್ರದ ಪತನವು ಅಮೋಘವಾಗುತ್ತದೆ. ಮೃತನಾಗಿ ಹುಟ್ಟುವ ಆ ಗರ್ಭವು ದೀರ್ಘ ಆಯುಸ್ಸನ್ನು ಪಡೆಯುತ್ತಾನೆ. ನಿನ್ನನ್ನಾದರೋ ಸರ್ವ ಮನೀಷಿಣರು ಕಾಪುರುಷ, ಪಾಪಿ, ಪಾಪಕರ್ಮಗಳನ್ನು ಮಾಡಿದವ ಮತ್ತು ಬಾಲಜೀವಿತಘಾತಕನೆಂದೂ ತಿಳಿಯುತ್ತಾರೆ. ಆದುದರಿಂದ ನೀನು ನಿನ್ನ ಪಾಪಕರ್ಮದ ಫಲವನ್ನು ಹೊಂದುತ್ತೀಯೆ. ಮೂರು ಸಾವಿರ ವರ್ಷಗಳು ಈ ಭೂಮಿಯಲ್ಲಿ ಅಲೆಯುತ್ತೀಯೆ. ಆಗ ನಿನ್ನೊಡನೆ ಯಾರೂ ಏನನ್ನೂ ಮಾತನಾಡುವುದಿಲ್ಲ. ನಿರ್ಜನಪ್ರದೇಶಗಳಲ್ಲಿ ಅಸಹಾಯಕನಾಗಿ ನೀನು ಅಲೆದಾಡುತ್ತೀಯೆ. ಕ್ಷುದ್ರ! ಇನ್ನು ಮುಂದೆ ನೀನು ಜನರ ಮಧ್ಯೆ ವಾಸಮಾಡಲಾರೆ! ಕೀವು ಮತ್ತು ರಕ್ತದ ದುರ್ಗಂಧದಿಂದ ಕೂಡಿದ ನೀನು ದುರ್ಗ-ಕಾಂತಾರಗಳಲ್ಲಿ ವಾಸಿಸುವೆ. ಸರ್ವವ್ಯಾಧಿಸಮನ್ವಿತನಾಗಿ ಸಂಚರಿಸುತ್ತಿರುತ್ತೀಯೆ. ವೀರ ಪರಿಕ್ಷಿತನಾದರೋ ವಯಸ್ಕನಾಗಿ ವೇದವ್ರತಗಳನ್ನು ಪಡೆಯುತ್ತಾನೆ. ಶಾರದ್ವತ ಕೃಪನಿಂದ ಸರ್ವಾಸ್ತ್ರಗಳನ್ನು ಪಡೆದುಕೊಳ್ಳುತ್ತಾನೆ. ಪರಮಾಸ್ತ್ರಗಳನ್ನು ತಿಳಿದುಕೊಂಡು ಕ್ಷತ್ರಧರ್ಮದಲ್ಲಿದ್ದುಕೊಂಡು ಆ ಧರ್ಮಾತ್ಮನು ಅರವತ್ತು ವರ್ಷಗಳು ವಸುಧೆಯನ್ನು ಪಾಲಿಸುತ್ತಾನೆ. ಇನ್ನುಮುಂದೆ ಆ ಮಹಾಬಾಹುವೇ ಕುರುರಾಜನಾಗುತ್ತಾನೆ. ನೀನು ನೋಡುತ್ತಿರುವಂತೆಯೇ ಇವನು ಪರಿಕ್ಷಿತನೆಂಬ ಹೆಸರಿನ ನೃಪತಿಯಾಗುತ್ತಾನೆ. ನನ್ನ ತಪಸ್ಸಿನ ಮತ್ತು ಸತ್ಯದ ವೀರ್ಯವನ್ನು ನೋಡು!”
ವ್ಯಾಸನು ಹೇಳಿದನು:
“ನಮ್ಮೆಲ್ಲರನ್ನು ಅನಾದರಿಸಿ ನೀನು ಈ ದಾರುಣಕರ್ಮವನ್ನೆಸಗಿದೆ! ಸದ್ಬ್ರಾಹ್ಮಣನಾಗಿದ್ದು ನೀನು ಈ ರೀತಿ ನಡೆದುಕೊಂಡೆ! ಕ್ಷುದ್ರಕರ್ಮಿಯೇ! ಆದುದರಿಂದ ದೇವಕೀಪುತ್ರನಾಡಿದ ಉತ್ತಮ ವಚನದಂತೆಯೇ ನಡೆಯುತ್ತದೆ. ಅದರಲ್ಲಿ ಸಂಶಯವೇ ಇಲ್ಲ.”
ಅಶ್ವತ್ಥಾಮನು ಹೇಳಿದನು:
“ಬ್ರಹ್ಮನ್! ನಾನು ಇನ್ನುಮುಂದೆ ಮನುಷ್ಯರಲ್ಲಿ ನಿನ್ನೊಡನೆ ಮಾತ್ರ ಇದ್ದುಬಿಡುತ್ತೇನೆ. ಭಗವಾನ್ ಪುರುಷೋತ್ತಮನು ಹೇಳಿದುದು ಸತ್ಯವಾಗಲಿ!”
ಅಶ್ವತ್ಥಾಮನ ಮಣಿಯನ್ನು ದ್ರೌಪದಿಗೆ ಒಪ್ಪಿಸಿದುದು
ಆಗ ದ್ರೌಣಿಯು ಮಹಾತ್ಮ ಪಾಂಡವರಿಗೆ ಮಣಿಯನ್ನಿತ್ತು, ಅವರೆಲ್ಲರೂ ನೋಡುತ್ತಿರಲು ವಿಮನಸ್ಕನಾಗಿ ವನಕ್ಕೆ ತೆರಳಿದನು. ಪಾಂಡವರೂ ಕೂಡ ಶತ್ರುವನ್ನು ನಾಶಪಡಿಸಿ, ದ್ರೋಣಪುತ್ರನ ಸಹಜ ಮಣಿಯನ್ನು ತೆಗೆದುಕೊಂಡು, ಗೋವಿಂದನನ್ನು ಮುಂದಿರಿಸಿಕೊಂಡು ಕೃಷ್ಣದ್ವೈಪಾಯನ ಮತ್ತು ಮಹಾಮುನಿ ನಾರದರೊಂದಿಗೆ, ಪಯೋಪವೇಶಮಾಡಿದ್ದ ದ್ರೌಪದಿಯ ಬಳಿಗೆ ತ್ವರೆಮಾಡಿ ಧಾವಿಸಿದರು. ಆಗ ಆ ಪುರುಷವ್ಯಾಘ್ರರು ಅನಿಲೋಪಮ ಅಶ್ವಗಳೊಂದಿಗೆ ದಾಶಾರ್ಹನೊಡಗೂಡಿ ಪುನಃ ಶಿಬಿರಕ್ಕೆ ಬಂದರು. ತ್ವರೆಮಾಡಿ ಆ ಎರಡೂ ರಥಗಳಿಂದಿಳಿದು ಸ್ವಯಂ ಆರ್ತರಾಗಿದ್ದ ಮಹಾರಥರು ಅತ್ಯಂತ ಆರ್ತಳಾಗಿದ್ದ ದ್ರೌಪದಿ ಕೃಷ್ಣೆಯನ್ನು ನೋಡಿದರು. ಆನಂದರಹಿತಳಾಗಿ ದುಃಖಶೋಖಸಮನ್ವಿತಳಾಗಿದ್ದ ಅವಳನ್ನು ಸುತ್ತುವರೆದು ಪಾಂಡವರು ಕೇಶವನೊಂದಿಗೆ ಕುಳಿತುಕೊಂಡರು. ಆಗ ರಾಜನ ಅನುಜ್ಞೆಯಂತೆ ಮಹಾಬಲ ಭೀಮಸೇನನು ಅವಳಿಗೆ ಆ ದಿವ್ಯ ಮಣಿಯನ್ನಿತ್ತು ಈ ಮಾತನ್ನಾಡಿದನು:
“ಭದ್ರೇ! ಪುತ್ರಹಂತಕನನ್ನು ಗೆದ್ದು ನಿನಗೋಸ್ಕರ ತಂದಿರುವ ಇದೋ ಈ ಮಣಿ! ಶೋಕವನ್ನು ತೊರೆದು ಎದ್ದೇಳು! ಕ್ಷತ್ರಧರ್ಮವನ್ನು ಸ್ಮರಿಸಿಕೋ! ಸಂಧಿಗಾಗಿ ವಾಸುದೇವನು ಪ್ರಯಾಣಮಾಡುವಾಗ ನೀನು ಮಧುಘಾತಿನಿಗೆ ಈ ಮಾತುಗಳನ್ನು ಹೇಳಿದ್ದೆ: “ನನಗೆ ಪತಿಗಳಿಲ್ಲ! ಪುತ್ರರಿಲ್ಲ! ಸಹೋದರರೂ ಇಲ್ಲ! ರಾಜನೊಂದಿಗೆ ಶಾಂತಿಯನ್ನು ಬಯಸುವ ಗೋವಿಂದ ನೀನೂ ಕೂಡ ನನ್ನ ಪಾಲಿಗಿಲ್ಲ!” ಕ್ಶತ್ರಧರ್ಮಕ್ಕೆ ಅನುರೂಪ ಈ ಧೀರ ವಾಕ್ಯಗಳನ್ನು ನೀನು ಪುರುಷೋತ್ತಮನೊಡನೆ ಹೇಳಿದ್ದೆ. ಅದನ್ನು ಸ್ಮರಿಸಿಕೋ! ರಾಜ್ಯವನ್ನು ಅಪಹರಿಸಿದ್ದ ಪಾಪಿ ದುರ್ಯೋಧನನು ಹತನಾಗಿದ್ದಾನೆ. ಚಡಪಡಿಸುತ್ತಿದ್ದ ದುಃಶಾಸನನ ರಕ್ತವನ್ನು ನಾನು ಕುಡಿದಿದ್ದೇನೆ. ವೈರದ ಋಣವನ್ನು ನಾವು ಪೂರೈಸಿದ್ದೇವೆ. ನಮ್ಮ ಮೇಲೆ ನಿಂದನೀಯ ಮಾತುಗಳ್ಯಾವುವೂ ಇಲ್ಲ. ದ್ರೋಣಪುತ್ರನನ್ನು ಗೆದ್ದು ಬ್ರಾಹ್ಮಣನೆನ್ನುವ ಗೌರವದಿಂದ ಅವನನ್ನು ಬಿಟ್ಟುಬಿಟ್ಟೆವು. ಮಣಿಯನ್ನು ತ್ಯಜಿಸಿದ ಮತ್ತು ಆಯುಧವನ್ನು ಭೂಮಿಯಮೇಲಿಟ್ಟ ಅವನ ಯಶಸ್ಸು ಬಿದ್ದುಹೋಗಿ ಶರೀರಮಾತ್ರ ಉಳಿದುಕೊಂಡಿದೆ.”
ದ್ರೌಪದಿಯು ಹೇಳಿದಳು:
“ಪುತ್ರಋಣದಿಂದ ಮುಕ್ತಳಾಗಿದ್ದೇನೆ. ಆ ಗುರುಪುತ್ರನು ನನಗೂ ಗುರುವೇ. ಭಾರತ! ರಾಜನು ಈ ಮಣಿಯನ್ನು ಧರಿಸಲಿ!”
ಆಗ ರಾಜನು ದ್ರೌಪದಿಯ ವಚನದಂತೆ ಗುರುವಿನ ಪ್ರಸಾದವೆಂದು ಅದನ್ನು ಸ್ವೀಕರಿಸಿ ತನ್ನ ಶಿರದಲ್ಲಿ ಧರಿಸಿಕೊಂಡನು. ಪ್ರಭು ಮಹಾರಾಜನು ಆ ದಿವ್ಯ ಶ್ರೇಷ್ಠ ಮಣಿಯನ್ನು ಶಿರದಲ್ಲಿ ಧರಿಸಿ ಮೇಲೆ ಚಂದ್ರನಿರುವ ಪರ್ವತದಂತೆ ಶೋಭಿಸಿದನು. ಆಗ ಪುತ್ರಶೋಕಾರ್ತಳಾಗಿದ್ದ ಮನಸ್ವಿನೀ ಕೃಷ್ಣೆಯು ಮೇಲೆದ್ದಳು.
ಕೃಷ್ಣನು ಯುಧಿಷ್ಠಿರನಿಗೆ ರುದ್ರನ ಮಹಾತ್ಮೆಯನ್ನು ತಿಳಿಸಿದುದು
ಮಲಗಿದ್ದ ಸರ್ವಸೇನೆಗಳೂ ಆ ಮೂವರು ಮಹಾರಥರಿಂದ ಹತವಾದವೆಂದು ಶೋಕಿಸುತ್ತಿದ್ದ ರಾಜಾ ಯುಧಿಷ್ಠಿರನು ದಾಶಾರ್ಹನಿಗೆ ಹೇಳಿದನು:
“ಕೃಷ್ಣ! ಅಕ್ಲಿಷ್ಟಕರ್ಮಿಗಳಾಗಿದ್ದ ನನ್ನ ಮಹಾರಥ ಪುತ್ರರೆಲ್ಲರೂ ಕ್ಷುದ್ರ ಪಾಪಿ ದ್ರೌಣಿಯಿಂದ ಹೇಗೆ ಹತರಾದರು? ಹಾಗೆಯೇ ಕೃತಾಸ್ತ್ರರಾಗಿದ್ದ, ಸಹಸ್ರಶತ ಯೋಧರೊಂದಿಗೆ ಹೋರಾಡಬಲ್ಲವರಾಗಿದ್ದ ದ್ರುಪದನ ಮಕ್ಕಳೂ ಕೂಡ ದ್ರೋಣಪುತ್ರನಿಂದ ಹತರಾದರು. ರಣದಲ್ಲಿ ಮಹೇಷ್ವಾಸ ದ್ರೋಣನು ಯಾರ ಕಡೆ ಮುಖವನ್ನು ಕೂಡ ತಿರುಗಿಸುತ್ತಿರಲಿಲ್ಲವೋ ಅಂತಹ ರಥಶ್ರೇಷ್ಠ ಧೃಷ್ಟದ್ಯುಮ್ನನನ್ನು ಅವನು ಹೇಗೆ ಸಂಹರಿಸಿದನು? ಏಕಾಂಗಿಯಾಗಿ ಶಿಬಿರದಲ್ಲಿದ್ದ ಎಲ್ಲರನ್ನೂ ವಧಿಸಿದ ಆ ಗುರುಸುತನು ಯಾವ ಕರ್ಮವನ್ನು ಮಾಡಿ ಆ ಶಕ್ತಿಯನ್ನು ಪಡೆದನು?”
ವಾಸುದೇವನು ಹೇಳಿದನು:
“ದ್ರೌಣಿಯು ದೇವದೇವನಿಗೂ ಈಶ್ವರನಾದ ಅವ್ಯಯನನ್ನು ಶರಣು ಹೋದನು. ಅದರಿಂದಾಗಿ ಅವನೊಬ್ಬನೇ ಅನೇಕರನ್ನು ಸಂಹರಿಸಬಲ್ಲವನಾದನು. ಮಹಾದೇವನು ಪ್ರಸನ್ನನಾದರೆ ಅಮೃತತ್ವವನ್ನೂ ದಯಪಾಲಿಸುವನು. ಗಿರೀಶನು ಇಂದ್ರನನ್ನೂ ಸೋಲಿಸುವಂತಹ ವೀರ್ಯವನ್ನು ಕೊಡುತ್ತಾನೆ. ನಾನು ಮಹಾದೇವನನ್ನು ತತ್ತ್ವಶಃ ತಿಳಿದುಕೊಂಡಿದ್ದೇನೆ. ಹಿಂದೆ ಅವನು ಮಾಡಿದ ಅನೇಕ ಕರ್ಮಗಳೂ ನನಗೆ ತಿಳಿದಿವೆ. ಭೂತಗಳ ಆದಿ, ಮಧ್ಯ ಮತ್ತು ಅಂತ್ಯಗಳು ಅವನೇ! ಅವನಿಂದಲೇ ಈ ಜಗತ್ತೆಲ್ಲವೂ ಕರ್ಮಗಳಲ್ಲಿ ತೊಡಗಿವೆ. ಪಿತಾಮಹ ವಿಭುವು ಭೂತಗಳನ್ನು ಸೃಷ್ಟಿಸಲು ಇಚ್ಛಿಸಿದಾಗ ಪ್ರಪ್ರಥಮವಾಗಿ ಇವನನ್ನೇ ನೋಡಿ “ಕೂಡಲೇ ಭೂತಗಳನ್ನು ಸೃಷ್ಟಿಸು!” ಎಂದು ಹೇಳಿದನು. ಮಹಾತಪಸ್ವಿ ಹರಿಕೇಶನು ಹಾಗೆಯೇ ಆಗಲೆಂದು ಹೇಳಿ ತಾನು ಸೃಷ್ಟಿಸಿದ ಭೂತಗಳಲ್ಲಿ ದೋಷಗಳನ್ನೇ ಕಂಡು ನೀರಿನಲ್ಲಿ ಮುಳುಗಿ ದೀರ್ಘಕಾಲ ತಪಸ್ಸನ್ನು ತಪಿಸಿದನು. ಮಹಾಕಾಲದವರೆಗೆ ಪ್ರತೀಕ್ಷೆಯಲ್ಲಿದ್ದ ಪಿತಾಮಹನು ಇನ್ನೊಬ್ಬ ಸರ್ವಭೂತಗಳ ಸೃಷ್ಟಾರನನ್ನು ಮನಸ್ಸಿನಿಂದಲೇ ಸೃಷ್ಟಿಸಿದನು. ನೀರಿನಲ್ಲಿ ಮಗ್ನನಾಗಿರುವ ಗಿರೀಶನನ್ನು ನೋಡಿ ಅವನು ತಂದೆಗೆ “ನನಗೆ ಅಗ್ರಜನಾದವನು ಅನ್ಯನಿದ್ದರೆ ನಾನು ಪ್ರಜೆಗಳನ್ನು ಸೃಷ್ಟಿಸುವುದಿಲ್ಲ!” ಎಂದನು. ಅವನಿಗೆ ಪಿತನು “ನಿನ್ನ ಅಗ್ರಜನಾಗಿ ಇನ್ನೊಬ್ಬ ಪುರುಷನಿಲ್ಲ. ಸ್ಥಾಣುವಾದರೋ ಜಲದಲ್ಲಿ ಮಗ್ನನಾಗಿದ್ದಾನೆ. ನಿಶ್ಚಿಂತೆಯಿಂದ ಸೃಷ್ಟಿಯನ್ನು ಮಾಡು!” ಎಂದನು. ಅವನು ಏಳುಪ್ರಕಾರದ ಭೂತಗಳನ್ನೂ, ದಕ್ಷಾದಿ ಪ್ರಜಾಪತಿಗಳನ್ನೂ ಸೃಷ್ಟಿಸಿ ಎಲ್ಲವನ್ನೂ ನಾಲ್ಕು ಪ್ರಕಾರವಾಗಿ ವಿಂಗಡಿಸಿದನು. ಪ್ರಜೆಗಳೆಲ್ಲವೂ ಸೃಷ್ಟಿಯಾದೊಡನೆಯೇ ಹಸಿದು ಪ್ರಜಾಪತಿಯನ್ನೇ ತಿನ್ನಲು ಬಯಸಿ ಧಾವಿಸಿದವು. ಭಕ್ಷಣೆಯಾಗುವವನೆಂಬ ಭಯದಿಂದ ಶರಣಾರ್ಥಿಯಾಗಿ ಅವನು ಪಿತಾಮಹನ ಬಳಿಸಾರಿ “ಭಗವಾನ್! ಇವರಿಂದ ನನನ್ನು ರಕ್ಷಿಸಬೇಕು ಮತ್ತು ಇವುಗಳಿಗೆ ವೃತ್ತಿಗಳನ್ನು ವಿಧಿಸಬೇಕು” ಎಂದು ಕೇಳಿಕೊಂಡನು. ಆಗ ಅವನು ಅವುಗಳಿಗೆ ಅನ್ನ, ಔಷಧಿ ಮೊದಲಾದ ಸ್ಥಾವರ ಪದಾರ್ಥಗಳನ್ನೂ, ಬಲಶಾಲೀ ಜಂಗಮ ಪ್ರಾಣಿಗಳಿಗೆ ದುರ್ಬಲ ಪ್ರಾಣಿಗಳನ್ನೂ ವಿಧಿಸಿದನು. ಅನ್ನಗಳನ್ನು ಪಡೆದ ಪ್ರಜೆಗಳು ತುಷ್ಟರಾಗಿ ಹಿಂದಿರುಗಿ, ಪ್ರೀತಿಮತ್ತರಾಗಿ ತಮ್ಮ ತಮ್ಮ ಯೋನಿಗಳಲ್ಲಿ ವೃದ್ಧಿಸಿದರು. ಪ್ರಜಾಸಂಕುಲಗಳು ವೃದ್ಧಿಸುತ್ತಿರಲು ಮತ್ತು ಲೋಕಗುರುವು ತುಷ್ಟನಾಗಿರಲು ಜ್ಯೇಷ್ಠನು ನೀರಿನಿಂದ ಮೇಲೆದ್ದು ಪ್ರಜಾಗಣಗಳನ್ನು ನೋಡಿದನು. ಬಹುರೂಪೀ ಪ್ರಜೆಗಳು ತಮ್ಮದೇ ತೇಜಸ್ಸಿನಿಂದ ವೃದ್ಧಿಸುತ್ತಿರುವುದನ್ನು ನೋಡಿ ಭಗವಾನ್ ರುದ್ರನು ಕ್ರೋಧದಿಂದ ತನ್ನ ಲಿಂಗವನ್ನು ಕಿತ್ತು ಬಿಸುಟನು. ಹಾಗೆ ಬಿಸುಟ ಲಿಂಗವು ಭೂಮಿಯಲ್ಲಿಯೇ ಪ್ರತಿಷ್ಠಿತವಾಯಿತು. ಅವನನ್ನು ಶಾಂತಗೊಳಿಸಲೋಸುಗ ಅವ್ಯಯ ಬ್ರಹ್ಮನು ಈ ಮಾತನ್ನಾಡಿದನು: “ಶರ್ವ! ಬಹಳಕಾಲ ನೀರಿನಲ್ಲಿದ್ದುಕೊಂಡು ನೀನು ಏನು ಮಾಡಿದೆ?” “ಇನ್ನೊಬ್ಬನಿಂದ ಈ ಪ್ರಜೆಗಳು ಸೃಷ್ಟಿಸಲ್ಪಟ್ಟಿದ್ದಾರೆ. ಈಗ ಇದರಿಂದ ನಾನೇನು ಮಾಡಲಿ? ಪಿತಾಮಹ! ಪ್ರಜೆಗಳಿಗೋಸ್ಕರವಾಗಿ ನಾನು ತಪಸ್ಸುಮಾಡಿ ಅನ್ನವನ್ನು ಪಡೆದುಕೊಂಡೆನು. ಪ್ರಜೆಗಳು ಸತತವಾಗಿ ಪರಿವರ್ತನೆಗೊಳ್ಳುವಂತೆ ಔಷಧಿಗಳೂ ಪರಿವರ್ತಿಸುತ್ತಿರುತ್ತವೆ.” ಕೋಪದಿಂದ ಹೀಗೆ ಹೇಳಿ ಮಹಾತಪಸ್ವಿ ಭವನು ವಿಮನಸ್ಕನಾಗಿ ತಪಸ್ಸನ್ನು ತಪಿಸಲು ಮುಂಜವಂತ ಗಿರಿಯ ತಪ್ಪಲಿಗೆ ಹೊರಟು ಹೋದನು.
ದೇವಯುಗವು ಮುಗಿಯಲು ದೇವತೆಗಳು ವೇದಪ್ರಮಾಣಾನುಸಾರವಾಗಿ ವಿಧಿವತ್ತಾಗಿ ಯಜ್ಞವನ್ನು ಮಾಡಲು ಬಯಸಿ ಸಂಕಲ್ಪಗೊಂಡರು. ಅವ್ಯಗ್ರ ದೇವತೆಗಳು ಯಜ್ಞೋಚಿತ ಪ್ರದೇಶವನ್ನೂ, ಹವಿಸ್ಸುಗಳನ್ನೂ, ದ್ರವ್ಯಗಳನ್ನೂ, ಯಜ್ಞಸಾಧನಗಳನ್ನೂ ಸಿದ್ಧಪಡೆಸಿಕೊಂಡರು. ದೇವತೆಗಳಿಗೆ ರುದ್ರನು ಎಲ್ಲಿರುವನೆಂದು ತಿಳಿಯದೇ ಇದ್ದುದರಿಂದ ಅವರು ದೇವ ಸ್ಥಾಣುವಿಗೆ ಹವಿರ್ಭಾಗವನ್ನು ಕಲ್ಪಿಸಲಿಲ್ಲ. ಹಾಗೆ ಅಮರರು ಯಜ್ಞದಲ್ಲಿ ತನಗೆ ಹವಿರ್ಭಾಗವನ್ನು ಕಲ್ಪಿಸದೇ ಇರಲು ಕೃತ್ತಿವಾಸ ಶಿವನು ಅವರನ್ನು ದಂಡಿಸಲು ಬಯಸಿ ಮೊದಲು ಧನುಸ್ಸನ್ನು ಸೃಷ್ಟಿಸಿದನು. ಲೋಕಯಜ್ಞ, ಕ್ರಿಯಾಯಜ್ಞ, ಸನಾತನ ಗೃಹಯಜ್ಞ, ಪಂಚಭೂತಮಯ ಯಜ್ಞ ಮತ್ತು ಐದನೆಯದು ಮನುಷ್ಯ ಯಜ್ಞ. ಯಜ್ಞೈಷೀ ಕಪರ್ದಿಯು ಲೋಕಯಜ್ಞದಿಂದ ಧನುಸ್ಸನ್ನು ನಿರ್ಮಿಸಿದನು. ಅವನು ಸೃಷ್ಟಿಸಿದ ಧನುಸ್ಸು ಐದು ಮಾರುಗಳಷ್ಟು ಉದ್ದವಾಗಿತ್ತು. ವಷಟ್ಕಾರವೇ ಅವನ ಧನುಸ್ಸಿನ ಮೌರ್ವಿಯಾಯಿತು. ನಾಲ್ಕು ಯಜ್ಞಾಂಗಗಳು[1] ಅವನ ಕವಚಗಳಾದವು. ಆಗ ಕ್ರುದ್ಧನಾದ ಮಹಾದೇವನು ಕಾರ್ಮುಕವನ್ನೆತ್ತಿಕೊಂಡು ದೇವತೆಗಳು ಎಲ್ಲಿ ಸೇರಿದ್ದರೋ ಅಲ್ಲಿಗೆ ಬಂದನು. ಆ ಬ್ರಹ್ಮಚಾರಿ ಅವ್ಯಯನು ಹಿಡಿದ ಕಾರ್ಮುಕವನ್ನು ನೋಡಿ ದೇವೀ ಪೃಥ್ವಿಯು ವ್ಯಥೆಪಟ್ಟಳು ಮತ್ತು ಪರ್ವತಗಳು ನಡುಗಿದವು. ಪವನನು ಬೀಸಲಿಲ್ಲ. ಅಗ್ನಿಯು ಪ್ರಜ್ವಲಿಸಲಿಲ್ಲ. ಆಕಾಶದಲ್ಲಿ ನಕ್ಷತ್ರಮಂಡಲವು ಸಂವಿಗ್ನಗೊಂಡು ಸುತ್ತತೊಡಗಿತು. ಭಾಸ್ಕರನು ಹೊಳೆಯಲಿಲ್ಲ. ಚಂದ್ರನು ತನ್ನ ಮಂಡಲವನ್ನೇ ಬಿಟ್ಟು ಬಂದನು. ಸರ್ವ ಆಕಾಶವೂ ಕತ್ತಲೆಯಿಂದ ತುಂಬಿಕೊಂಡಿತು. ಉದ್ವಿಗ್ನರಾದ ದೇವತೆಗಳಿಗೆ ವಿಷಯವೇನೆಂದೇ ತಿಳಿಯಲಿಲ್ಲ. ಅವರಿಗೆ ಯಜ್ಞವೇ ಕಾಣುತ್ತಿರಲಿಲ್ಲ. ವೇದಗಳು ಹೊಳೆಯಲಿಲ್ಲ. ಆಗ ರುದ್ರನು ಆ ಯಜ್ಞದ ಹೃದಯಕ್ಕೆ ಬಾಣದಿಂದ ಹೊಡೆದನು. ಯಜ್ಞನಾದರೋ ಜಿಂಕೆಯ ರೂಪತಾಳಿ ಅಗ್ನಿಯೊಂದಿಗೆ ಪಲಾಯನಮಾಡಿದನು. ಅವನು ಅದೇರೂಪದಿಂದ[2] ಆಕಾಶವನ್ನು ಸೇರಿ ಪ್ರಕಾಶಿಸಿದನು. ರುದ್ರನೂ[3] ನಭಸ್ತಲದಲ್ಲಿ ಅದನ್ನು ಹಿಂಬಾಲಿಸಿ ಹೋದನು. ಯಜ್ಞನು ಹೊರಟುಹೋಗಲು ಏನೂ ತಿಳಿಯದ ಸುರರು ಸಂಜ್ಞಾಹೀನರಾದರು. ಸಂಜ್ಞೆಗಳನ್ನು ಕಳೆದುಕೊಂಡ ದೇವತೆಗಳಿಗೆ ಏನೂ ತಿಳಿಯದಾಯಿತು. ಕ್ರುದ್ಧ ತ್ರ್ಯಂಬಕನು ಧನುಸ್ಸಿನ ತುದಿಯಿಂದ ಸವಿತುವಿನ ಬಾಹುಗಳನ್ನೂ, ಭಗನ ಕಣ್ಣುಗಳನ್ನೂ, ಪೂಷ್ಣನ ಹಲ್ಲುಗಳನ್ನೂ ಕಿತ್ತುಹಾಕಿದನು. ಆಗ ಎಲ್ಲ ದೇವತೆಗಳೂ ಯಜ್ಞಾಂಗಗಳೂ ಓಡಿ ಹೋದರು. ಕೆಲವರು ಅಲ್ಲಿಯೇ ತಲೆತಿರುಗಿ ಪ್ರಾಣಹೋದವರಂತೆ ಬಿದ್ದರು. ಓಡಿಹೋಗುತ್ತಿದ್ದ ಅವರೆಲ್ಲರನ್ನೂ ಶಿತಿಕಂಠನು ಅವಹೇಳನ ಮಾಡುತ್ತಾ ಧನುಸ್ಸಿನ ತುದಿಯನ್ನು ಮುಂದೆ ಚಾಚಿ ದೇವತೆಗಳನ್ನು ತಡೆದನು. ಆಗ ಅಮರರಿಂದ ಪ್ರೇರಿತಳಾದ ವಾಣಿಯು ಧನುಸ್ಸಿನ ಮೌರ್ವಿಯನ್ನು ಕತ್ತರಿಸಿದಳು. ಮೌರ್ವಿಯು ತುಂಡಾಗಲು ಆ ಧನುಸ್ಸು ಒಡನೆಯೇ ಮೇಲಕ್ಕೆ ಚಿಮ್ಮಿ ನೆಟ್ಟನೆ ನಿಂತಿತು. ಧನುಸ್ಸಿನಿಂದ ವಿಹೀನನಾದ ದೇವಶ್ರೇಷ್ಠನನ್ನು ಆಗ ದೇವತೆಗಳು ಯಜ್ಞನೊಂದಿಗೆ ಶರಣು ಹೊಕ್ಕರು. ಪ್ರಭುವು ಅವರನ್ನು ಕ್ಷಮಿಸಿದನು. ಆಗ ಪ್ರಸನ್ನನಾದ ಭಗವಾನನು ತನ್ನ ಕೋಪವನ್ನು ಜಲಾಶಯದಲ್ಲಿ ಬಿಸುಟನು. ಅದು ಬಡವಾಗ್ನಿಯಾಗಿ ನಿತ್ಯವೂ ಸಮುದ್ರವನ್ನು ಒಣಗಿಸುತ್ತಿರುತ್ತದೆ. ಅವನು ಭಗನ ಕಣ್ಣುಗಳನ್ನೂ, ಸವಿತುವಿನ ಬಾಹುಗಳನ್ನೂ, ಪೂಷ್ಣನ ಹಲ್ಲುಗಳನ್ನೂ ಮತ್ತು ಯಜ್ಞನನ್ನೂ ಹಿಂದಿರುಗಿಸಿದನು. ಅನಂತರ ಸರ್ವವೂ ಪುನಃ ಸ್ವಸ್ಥವಾಯಿತು. ಎಲ್ಲ ಯಜ್ಞಗಳಲ್ಲಿಯೂ ದೇವತೆಗಳು ಮಹಾದೇವನಿಗೆ ಹವಿಸ್ಸಿನ ಭಾಗವನ್ನು ಕಲ್ಪಿಸಿದರು.
ಅವನು ಕ್ರುದ್ಧನಾದರೆ ಸರ್ವ ಭುವನಗಳೂ ಅಸ್ವಸ್ಥವಾಗುತ್ತವೆ. ಅವನು ಪ್ರಸನ್ನನಾದರೆ ಪುನಃ ಸ್ವಸ್ಥವಾಗುತ್ತವೆ. ವೀರ್ಯವಾನ್ ದ್ರೌಣಿಯ ಮೇಲೆ ಅವನು ಪ್ರಸನ್ನನಾಗಿದ್ದನು. ಆದುದರಿಂದಲೇ ನಿನ್ನ ಮಹಾರಥ ಪುತ್ರರೆಲ್ಲರೂ, ಅನ್ಯ ಅನೇಕ ಶೂರರೂ, ಅನುಯಾಯಿಗಳೊಂದಿಗೆ ಪಾಂಚಾಲರೂ ಅವನಿಂದ ಹತರಾದರು. ದ್ರೌಣಿಯು ತನ್ನ ಪರಾಕ್ರಮದಿಂದ ಇದನ್ನು ಮಾಡಲಿಲ್ಲ. ಆದುದರಿಂದ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಮಹಾದೇವನ ಪ್ರಸಾದವೆಂದು ತಿಳಿದು ಅನಂತರದ ಕಾರ್ಯಗಳನ್ನು ಮಾಡು!”
[1] ಸ್ನಾನ, ದಾನ, ಹೋಮ ಮತ್ತು ಜಪ
[2] ಮೃಗಶಿರಾ ನಕ್ಷತ್ರದ ರೂಪದಲ್ಲಿ
[3] ಆರ್ದ್ರಾ ನಕ್ಷತ್ರದ ರೂಪದಲ್ಲಿ