ದುರ್ಯೋಧನನ ಪ್ರಾಣತ್ಯಾಗ

ಅವರು ಸರ್ವ ಪಾಂಚಾಲರನ್ನೂ ದ್ರೌಪದೇಯರನ್ನೂ ಸಂಹರಿಸಿ ಒಟ್ಟಾಗಿ ದುರ್ಯೋಧನನು ಎಲ್ಲಿ ಹತನಾಗಿದ್ದನೋ ಅಲ್ಲಿಗೆ ಹೋದರು. ಅಲ್ಲಿಗೆ ಹೋಗಿ ನರಾಧಿಪನಿಗೆ ಸ್ವಲ್ಪವೇ ಪ್ರಾಣವು ಉಳಿದಿದೆಯೆನ್ನುವುದನ್ನು ನೋಡಿ ರಥದಿಂದ ಇಳಿದು ಧೃತರಾಷ್ಟ್ರನ ಮಗನನ್ನು ಸುತ್ತುವರೆದು ಕುಳಿತರು. ತೊಡೆಯೊಡೆದು ಕಷ್ಟದಿಂದ ಪ್ರಾಣವನ್ನು ಹಿಡಿದುಕೊಂಡು ನಿಶ್ಚೇತನನಾಗಿ ರಕ್ತವನ್ನು ಕಾರುತ್ತಾ, ನೆಲದಮೇಲಿದ್ದ ದುರ್ಯೋಧನನನ್ನು ಅವರು ನೋಡಿದರು. ಅನೇಕ ಘೋರ ತೋಳ-ನರಿಗಳು ಅವನನ್ನು ಕಚ್ಚಿ ತಿನ್ನಲು ಸುತ್ತುವರೆದು ಹತ್ತಿರ-ಹತ್ತಿರಕ್ಕೆ ಹೋಗುತ್ತಿದ್ದವು. ಮಾಂಸವನ್ನು ತಿನ್ನಲು ಮುಂದೆ ಬರುತ್ತಿರುವ ಶ್ವಾಪದಗಳನ್ನು ಬಹಳ ಕಷ್ಟದಿಂದ ತಡೆಯುತ್ತಾ ಅವನು ಗಾಢವೇದನೆಯಿಂದ ಮತ್ತು ಮಹಾ ನೋವಿನಿಂದ ಹೊರಳಾಡುತ್ತಿದ್ದನು. ತನ್ನದೇ ರಕ್ತದಲ್ಲಿ ತೋಯ್ದು ನೆಲದಮೇಲೆ ಮಲಗಿದ್ದ ಮಹಾತ್ಮನನ್ನು ಅಳಿದುಳಿದಿದ್ದ ಮೂವರು ವೀರರೂ ಶೋಕಾರ್ತರಾಗಿ ಸುತ್ತುವರೆದರು. ರಕ್ತದಿಂದ ತೋಯ್ದು ನಿಟ್ಟುಸಿರುಬಿಡುತ್ತಿದ್ದ ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮ ಮೂವರು ಮಹಾರಥರಿಂದ ಸುತ್ತುವರೆದಿದ್ದ ರಾಜನು ಮೂರು ಅಗ್ನಿಗಳಿಂದ ಆವೃತವಾದ ಯಜ್ಞವೇದಿಯಂತೆ ತೋರಿದನು. ರಾಜನಿಗೆ ಉಚಿತವಲ್ಲದಂತೆ ಮಲಗಿರುವ ಅವನನ್ನು ನೋಡಿ ಸಹಿಸಿಕೊಳ್ಳಲಾರದ ದುಃಖದಿಂದ ಮೂವರೂ ರೋದಿಸಿದರು. ರಣದಲ್ಲಿ ಮಲಗಿದ್ದ ರಾಜನ ಮುಖದಿಂದ ರಕ್ತವನ್ನು ತನ್ನ ಎರಡೂ ಕೈಗಳಿಂದ ಒರೆಸುತ್ತಾ ಕೃಪನು ಪರಿವೇದಿಸಿದನು. ಕೃಪನು ಹೇಳಿದನು:

ಹನ್ನೊಂದು ಅಕ್ಷೌಹಿಣೀ ಸೇನೆಯ ಅಧಿಪತಿಯಾಗಿದ್ದ ದುರ್ಯೋಧನನು ಹತನಾಗಿ ರಕ್ತದಿಂದ ತೋಯ್ದು ಮಲಗಿದ್ದಾನೆ ಎಂದರೆ ದೈವಕ್ಕೆ ಯಾವುದೂ ಕಷ್ಟಸಾಧ್ಯವಲ್ಲ ಅಲ್ಲವೇ? ಸುವರ್ಣದ ಕಾಂತಿಯುಳ್ಳ, ಸುವರ್ಣದಿಂದ ವಿಭೂಷಿತವಾಗಿರುವ ಗದೆಯು ಗದಾಪ್ರಿಯನಾದ ಇವನ ಸಮೀಪದಲ್ಲಿ ನೆಲದಮೇಲೆ ಬಿದ್ದಿರುವುದನ್ನು ನೋಡು! ರಣರಣದಲ್ಲಿಯೂ ಈ ಗದೆಯು ಈ ಶೂರನನ್ನು ಬಿಟ್ಟಿರಲಿಲ್ಲ. ಈಗ ಸ್ವರ್ಗಕ್ಕೆ ಹೋಗುತ್ತಿರುವಾಗಲೂ ಈ ಯಶಸ್ವಿನಿಯನ್ನು ಬಿಟ್ಟಿಲ್ಲ! ಶಯನದಲ್ಲಿ ಮಲಗಿರುವ ಧರ್ಮಪತ್ನಿಯಂತೆ ಅತೀವ ಪ್ರೀತಿಯಿಂದ ವೀರನ ಪಕ್ಕದಲ್ಲಿಯೇ ಇರುವ ಈ ಸುವರ್ಣವಿಭೂಷಿತ ಗದೆಯನ್ನು ನೋಡು! ಮೂರ್ಧಾವಸಿಕ್ತರ ಮುಂಭಾಗದಲ್ಲಿ ಹೋಗುತ್ತಿದ್ದ ಪರಂತಪನು ಹತನಾಗಿ ಮಣ್ಣನ್ನು ಮುಕ್ಕುತ್ತಿದ್ದಾನೆ. ಕಾಲದ ವೈಪರೀತ್ಯವನ್ನಾದರೂ ನೋಡು! ಹಿಂದೆ ಯಾರಿಂದ ಶತ್ರುಗಳು ಹತರಾಗಿ ನೆಲಕ್ಕುರುಳುತ್ತಿದ್ದರೋ  ಕುರುರಾಜನೇ ಇಂದು ಶತ್ರುಗಳಿಂದ ಹತನಾಗಿ ನೆಲದಮೇಲೆ ಮಲಗಿದ್ದಾನೆ! ಯಾವ ರಾಜನನ್ನು ನೂರಾರು ಗುಂಪುಗಳಲ್ಲಿ ಜನರು ಭಯದಿಂದ ನಮಸ್ಕರಿಸುತ್ತಿದ್ದರೋ ಅವನು ಕ್ರವ್ಯಾದಿಗಳಿಂದ ಸುತ್ತುವರೆಯಲ್ಪಟ್ಟು ವೀರಶಯನದಲ್ಲಿ ಮಲಗಿದ್ದಾನೆ! ಧಿಕ್ಕಾರ! ಯಾವ ಈಶ್ವರನನ್ನು ಹಿಂದೆ ನೃಪರು ಸಂಪತ್ತಿಗಾಗಿ ಉಪಾಸಿಸುತ್ತಿದ್ದರೋ ಅವನು ಸದ್ಯದಲ್ಲಿ ಹತನಾಗಿ ಮಲಗಿದ್ದಾನೆ! ಕಾಲದ ಈ ವಿಪರ್ಯಾಸವನ್ನಾದರೂ ನೋಡು!”

ಆಗ ಮಲಗಿದ್ದ ನೃಪಶ್ರೇಷ್ಠನನ್ನು ನೋಡಿ ಅಶ್ವತ್ಥಾಮನು ಕರುಣೆಯಿಂದ ಪರಿವೇದಿಸಿದನು.

ರಾಜಶಾರ್ದೂಲ! ನೀನು ಸರ್ವಧನುಷ್ಮತರಲ್ಲಿ ಮುಖ್ಯನೆಂದೂ, ಸಂಕರ್ಷಣನ ಶಿಷ್ಯನಾದ ನಿನ್ನನ್ನು ಯುದ್ಧದಲ್ಲಿ ಧನಾಧ್ಯಕ್ಷನ ಸಮಾನನೆಂದೂ ಹೇಳುತ್ತಾರೆ! ಹೀಗಿರುವಾಗ ಬಲಶಾಲಿಗಳಲ್ಲಿ ನಿತ್ಯವೂ ಮೋಸಗಾರನಾದ ಪಾಪಾತ್ಮ ಭೀಮಸೇನನು ನಿನ್ನಲ್ಲಿರುವ ಛಿದ್ರವನ್ನು ಕಂಡುಕೊಂಡನು! ಯುದ್ಧದಲ್ಲಿ ನೀನು ಭೀಮಸೇನನಿಂದ ಹತನಾಗಿರುವುದನ್ನು ನೋಡಿ ಲೋಕದಲ್ಲಿ ಕಾಲವೇ ಬಲವತ್ತರವೆಂದೆನಿಸುವುದಿಲ್ಲವೇ? ಸರ್ವಧರ್ಮಜ್ಞನಾದ ನಿನ್ನನ್ನು ಕ್ಷುದ್ರ ಪಾಪಿ ಮಂದ ವೃಕೋದರನು ಮೋಸದಿಂದ ಕೊಂದನೆಂದರೆ ಕಾಲವನ್ನು ಅತಿಕ್ರಮಿಸುವುದು ಅಸಾಧ್ಯವೆಂದಲ್ಲವೇ? ಧರ್ಮಯುದ್ಧಕ್ಕೆ ನಿನ್ನನ್ನು ಕರೆದು ರಣದಲ್ಲಿ ಭೀಮಸೇನನು ಅಧರ್ಮದಿಂದ ನಿನ್ನ ತೊಡೆಯನ್ನು ಒಡೆದನು! ಅಧರ್ಮದಿಂದ ನಿನ್ನನ್ನು ಹೊಡೆದು ಕಾಲಿನಿಂದ ನಿನ್ನ ಶಿರವನ್ನು ಒದೆದುದಕ್ಕೂ ಉಪೇಕ್ಷೆಮಾಡದ ಕ್ಷುದ್ರ ಯುಧಿಷ್ಠಿರನಿಗೂ ಧಿಕ್ಕಾರವಿರಲಿ! ಎಂದಿನವರೆಗೆ ಪ್ರಾಣಿಗಳಿರುವವೋ ಅಲ್ಲಿಯವರೆಗೆ ಯುದ್ಧಗಳಲ್ಲಿ ಯೋಧರು ಪಾತಿತನು ಮೋಸಗಾರನು ಎಂದು ವೃಕೋದರನಿಗೆ ಹೇಳುತ್ತಾರೆ! ಯದುನಂದನ ರಾಮನು ಸದಾ “ವೀರ್ಯವಾನ್ ದುರ್ಯೋಧನನನ ಸಮನಾದವನು ಗದಾಯುದ್ಧದಲ್ಲಿ ಇಲ್ಲ!” ಎಂದು ಹೇಳುತ್ತಿರಲಿಲ್ಲವೇ? ಸಂಸದಿಗಳಲ್ಲಿ ವಾರ್ಷ್ಣೇಯನುಗದಾಯುದ್ಧದಲ್ಲಿ ಕೌರವ್ಯನು ನನ್ನ ಪ್ರಧಾನ ಶಿಷ್ಯ!” ಎಂದು ಹೇಳುತ್ತಿರಲಿಲ್ಲವೇ? ಶತ್ರುವನ್ನು ಎದುರಿಸಿ ಹತನಾದ ಕ್ಷತ್ರಿಯನಿಗೆ ಯಾವ ಪ್ರಶಸ್ತ ಗತಿಯು ದೊರೆಯುತ್ತದೆಯೆಂದು ಪರಮಋಷಿಗಳು ಹೇಳುತ್ತಾರೋ ಉತ್ತಮ ಗತಿಯನ್ನು ನೀನೂ ಪಡೆದಿರುವೆ. ದುರ್ಯೋಧನ! ನಿನ್ನ ಕುರಿತು ನಾನು ಶೋಕಿಸುತ್ತಿಲ್ಲ! ಪುತ್ರರನ್ನು ಕಳೆದುಕೊಂಡ ಗಾಂಧಾರಿ ಮತ್ತು ನಿನ್ನ ತಂದೆಯ ಕುರಿತು ಶೋಕಿಸುತ್ತಿದ್ದೇನೆ! ಶೋಕಿಸುತ್ತಾ ಅವರಿಬ್ಬರೂ ಈ ಭೂಮಿಯಲ್ಲಿ ಭಿಕ್ಷುಕರಂತೆ ಸುತ್ತುವರಲ್ಲ ಎಂದು ಶೋಕಿಸುತ್ತಿದ್ದೇನೆ! ವಾರ್ಷ್ಣೇಯ ಕೃಷ್ಣನಿಗೆ ಮತ್ತು ದುರ್ಮತಿ ಅರ್ಜುನನಿಗೆ ಧಿಕ್ಕಾರ! ಧರ್ಮಜ್ಞರೆಂದು ಗೌರವಿಸಲ್ಪಡುವ ಅವರಿಬ್ಬರೂ ನಿನ್ನ ವಧೆಯನ್ನು ಉಪೇಕ್ಷಿಸಲಿಲ್ಲ. ನರಾಧಿಪ ಪಾಂಡವರೆಲ್ಲರೂ ಕೂಡ ಏನು ಹೇಳಿಕೊಳ್ಳುತ್ತಾರೆ? ನಮ್ಮಿಂದ ದುರ್ಯೋಧನನು ಹೇಗೆ ಹತನಾದನು ಎಂದು ಹೇಗೆತಾನೇ ಹೇಳಿಕೊಳ್ಳುತ್ತಾರೆ? ಗಾಂಧಾರೇ! ಶತ್ರುಗಳನ್ನು ಧರ್ಮದಿಂದಲೇ ಎದುರಿಸಿ ಹೋರಾಡಿ ಹತನಾದ ಪ್ರಾಯಶಃ ನೀನೇ ಧನ್ಯ!  ಹತಪುತ್ರಳಾದ ಮತ್ತು ಬಂಧು-ಬಾಂಧವರನ್ನು ಕಳೆದುಕೊಂಡಿರುವ ಗಾಂಧಾರೀ ಮತ್ತು ದುರ್ಧರ್ಷ ಪ್ರಜ್ಞಾಚಕ್ಷುವು ಯಾವ ಗತಿಯನ್ನು ಹೊಂದುತ್ತಾರೆ? ಪಾರ್ಥಿವನಾದ ನಿನ್ನನ್ನು ಹಿಂದೆಬಿಟ್ಟು ಸ್ವರ್ಗಕ್ಕೆ ಹೋಗಿರದ ಕೃತವರ್ಮ, ನಾನು ಮತ್ತು ಮಹಾರಥ ಕೃಪ ನಮಗೆ ಧಿಕ್ಕಾರವಿರಲಿ! ಸರ್ವಕಾಮನೆಗಳನ್ನು ಒದಗಿಸಿಕೊಡುತ್ತಿದ್ದ, ಪ್ರಜಾಹಿತ ರಕ್ಷಕನನ್ನು ಅನುಸರಿಸದ ನರಾಧಮರಂತಿರುವ ಈ ನಮಗೆ ಧಿಕ್ಕಾರವಿರಲಿ! ನಿನ್ನ ವೀರ್ಯದಿಂದಲೇ ಕೃಪನಿಗೆ, ನನಗೆ ಮತ್ತು ನನ್ನ ತಂದೆಗೆ ಸೇವಕರೊಂದಿಗೆ ಸಂಪದ್ಭರಿತ ಭವನಗಳು ಲಭಿಸಿದ್ದವು. ನಿನ್ನ ಪ್ರಸಾದದಿಂದಲೇ ನಾವುಗಳು ಮಿತ್ರರು ಮತ್ತು ಬಂಧುಗಳೊಡನೆ ಭೂರಿದಕ್ಷಿಣೆಗಳನ್ನಿತ್ತು ಅನೇಕ ಮುಖ್ಯ ಕ್ರತುಗಳನ್ನು ಮಾಡುವಂಥವರಾಗಿದ್ದೆವು. ನಿನ್ನಿಂದ ಇಷ್ಟೊಂದು ಸಹಾಯ-ಸಂಪತ್ತುಗಳನ್ನು ಪಡೆದಿರುವ ನಾವು ನಿನ್ನ ಮೊದಲೇ ಹೊರಟುಹೋಗಿರುವ ಸರ್ವಪಾರ್ಥಿವರಂತೆ ಏಕೆ ಹೋಗುತ್ತಿಲ್ಲ? ಪರಮಗತಿಯನ್ನನುಸರಿಸಿ ಹೋಗುತ್ತಿರುವ ನಿನ್ನನ್ನು ನಾವು ಮೂವರು ಮಾತ್ರ ಅನುಸರಿಸಿ ಬರುತ್ತಿಲ್ಲ ಎಂದು ನಾವು ಪರಿತಪಿಸುತ್ತಿದ್ದೇವೆ. ನಿನ್ನನ್ನು ಕಳೆದುಕೊಂಡ ನಾವು ನಿನ್ನ ಸುಕೃತಗಳನ್ನು ಸ್ಮರಿಸಿಕೊಳ್ಳುತ್ತಾ ಸ್ವರ್ಗಹೀನರಾಗಿ, ಸಂಪತ್ತುಗಳನ್ನು ಕಳೆದುಕೊಂಡು ಸುತ್ತುತ್ತಿರುತ್ತೇವೆ. ನಿನ್ನನ್ನು ಅನುಸರಿಸಿ ಬರದೇ ಇರುವ ನಮ್ಮ ಕೃತ್ಯಕ್ಕೆ ಯಾವ ಹೆಸರಿದೆ? ನೀನಿಲ್ಲದೇ ದುಃಖದಿಂದ ಈ ಭೂಮಿಯನ್ನು ಸುತ್ತುವ ನಮಗೆ ಎಲ್ಲಿಯ ಶಾಂತಿ ಮತ್ತು ಎಲ್ಲಿಯ ಸುಖ? ನೀನಾದರೋ ಮೊದಲೇ ಹೋಗಿರುವ ಮಹಾರಥರನ್ನು ಸೇರಿ ಯಥಾಶ್ರೇಷ್ಠವಾಗಿ ಯಥಾಜ್ಯೇಷ್ಠವಾಗಿ ನನ್ನ ಮಾತಿನಿಂದ ಗೌರವಿಸು! ಸರ್ವಧನುಷ್ಮತರಿಗೆ ಕೇತುಪ್ರಾಯನಾದ ಆಚಾರ್ಯನನ್ನು ಸಂಪೂಜಿಸಿ ಇಂದು ನಾನು ಧೃಷ್ಟದ್ಯುಮ್ನನನ್ನು ಸಂಹರಿಸಿದೆ ಎನ್ನುವುದನ್ನು ಹೇಳು. ಮೊದಲೇ ಸ್ವರ್ಗಕ್ಕೆ ಹೊರಟುಹೋಗಿರುವ ಪಾರ್ಥಿವಸತ್ತಮರನ್ನುಸುಮಹಾರಥ ಬಾಹ್ಲಿಕ ರಾಜ, ಸೈಂಧವ, ಸೋಮದತ್ತ ಮತ್ತು ಭೂರಿಶ್ರವರನ್ನು ನನ್ನ ಮಾತಿನಿಂದ ಆಲಂಗಿಸಿ ಅವರ ಕುಶಲವನ್ನು ಪ್ರಶ್ನಿಸು.”

ಹೀಗೆ ಹೇಳಿ ಅಶ್ವತ್ಥಾಮನು ತೊಡೆಯೊಡೆದು ಅಚೇತಸನಾಗಿದ್ದ ರಾಜನನ್ನು ದಿಟ್ಟಿಸಿನೋಡುತ್ತಾ ಪುನಃ ಮಾತನ್ನಾಡಿದನು:

ದುರ್ಯೋಧನ! ನೀನಿನ್ನೂ ಜೀವಿಸಿರುವೆ! ಕೇಳಲು ಇಂಪಾಗಿರುವ ಮಾತನ್ನು ಕೇಳು. ಈಗ ಪಾಂಡವರಲ್ಲಿ ಕೇವಲು ಏಳುಮಂದಿ ಮತ್ತು ಧಾರ್ತರಾಷ್ಟ್ರರಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡಿದ್ದೇವೆ! ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಹಾಗೆಯೇ ನಾನು, ಕೃತವರ್ಮ ಮತ್ತು ಶಾರದ್ವತ ಕೃಪ. ದ್ರೌಪದೇಯರೆಲ್ಲರೂ ಹತರಾಗಿದ್ದಾರೆ. ಧೃಷ್ಟದ್ಯುಮ್ನನೂ, ಅವನ ಮಕ್ಕಳೂ, ಪಾಂಚಾಲರೂ ಮತ್ತು ಅಳಿದುಳಿದಿದ್ದ ಮತ್ಸ್ಯರು ಎಲ್ಲರೂ ಹತರಾಗಿದ್ದಾರೆ. ಪ್ರತೀಕಾರ ಮಾಡಿದುದನ್ನು ನೋಡು! ಪಾಂಡವರೂ ಹತಪುತ್ರರಾಗಿದ್ದಾರೆ. ಶಿಬಿರದಲ್ಲಿ ಮಲಗಿರುವ ಅವರೆಲ್ಲರೂ ಸೈನಿಕ-ವಾಹನಗಳೊಂದಿಗೆ ಹತರಾಗಿದ್ದಾರೆ. ರಾತ್ರಿ ಶಿಬಿರವನ್ನು ಪ್ರವೇಶಿಸಿ ನಾನು ಪಾಪಕರ್ಮಿ ಧೃಷ್ಟದ್ಯುಮ್ನನನ್ನು ಪಶುವಂತೆ ಗುದ್ದಿ ಕೊಂದೆನು.”

ಮನಸ್ಸಿಗೆ ಪ್ರಿಯವಾದ ಮಾತನ್ನು ಕೇಳಿ ದುರ್ಯೋಧನನು ಪುನಃ ಚೇತರಿಸಿಕೊಂಡು ಮಾತನ್ನಾಡಿದನು:

ಅಶ್ವತ್ಥಾಮ! ಗಾಂಗೇಯ, ಕರ್ಣ ಮತ್ತು ನಿನ್ನ ತಂದೆ ಇವರು ಮಾಡಲಾಗದ ಕಾರ್ಯವನ್ನು ಇಂದು ನೀನು ಕೃಪ-ಭೋಜರನ್ನು ಕೂಡಿಕೊಂಡು ಮಾಡಿದ್ದೀಯೆ! ಶಿಖಂಡಿಯೊಡನೆ ಕ್ಷುದ್ರ ಸೇನಾಪತಿಯು ನಿನ್ನಿಂದ ಹತನಾದನೆಂದರೆ ಇಂದು ನಾನು ನನ್ನನ್ನು ಮಘವತ ಇಂದ್ರನ ಸಮನೆಂದೇ ಅಂದುಕೊಳ್ಳುತ್ತೇನೆ! ಒಳ್ಳೆಯದಾಗಲಿ! ನಿಮಗೆ ಮಂಗಳವಾಗಲಿ! ನಾವು ಪುನಃ ಸ್ವರ್ಗದಲ್ಲಿ ಸಂಧಿಸೋಣ!”

ಎಂದು ಹೇಳಿ ಮಹಾಮನಸ್ವಿ ಕುರುರಾಜನು ಸುಮ್ಮನಾದನು. ಕೂಡಲೇ ಆ ವೀರನು ಸುಹೃದಯರಿಗೆ ಶೋಕವನ್ನು ವಹಿಸಿಕೊಟ್ಟು ಪ್ರಾಣಗಳನ್ನು ತೊರೆದನು. ಹಾಗೆಯೇ ಆಗಲೆಂದು ಅವರು ನೃಪನನ್ನು ಆಲಂಗಿಸಿ, ಪುನಃ ಪುನಃ ಅವನನ್ನು ನೋಡುತ್ತಾ ತಮ್ಮ ತಮ್ಮ ರಥಗಳನ್ನು ಏರಿದರು.

ಹೀಗೆ ಬೆಳಗಿನಜಾವದಲ್ಲಿ ದುರ್ಯೋಧನನ ಕರುಣಾಜನಕ ಮಾತನ್ನು ಕೇಳಿ ಸಂಜಯನು ಶೋಕಾರ್ತನಾಗಿ ಹಸ್ತಿನಾಪುರಕ್ಕೆ ಓಡಿ ಬಂದನು. ಅಂದು ದುರ್ಯೋಧನನು ಸ್ವರ್ಗಕ್ಕೆ ಹೊರಟುಹೋಗಲು ಶೋಕಾರ್ತನಾದ ಅವನಿಗೆ ಋಷಿಯು ಕೊಟ್ಟಿದ್ದ ದಿವ್ಯದರ್ಶಿತ್ವವು ಕಳೆದುಹೋಯಿತು. ಸಂಜಯನು ಹೇಳಿದ ಈ ಪುತ್ರ-ಬಂಧುಗಳ ವಧೆಯ ವಾರ್ತೆಯನ್ನು ಕೇಳಿ ನೃಪತಿಯು ದೀರ್ಘವಾದ ಬಿಸಿ ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.

Leave a Reply

Your email address will not be published. Required fields are marked *