ಶ್ರಾದ್ಧ ಮತ್ತು ಜಲತರ್ಪಣ

ರಾಜರ್ಷಿ ಧರ್ಮಾತ್ಮಾ ಧೃತರಾಷ್ಟ್ರನಾದರೋ ಅಜ್ಞಾನದಿಂದುಂಟಾಗಿದ್ದ ತಮವನ್ನು ತೊಲಗಿಸಿಕೊಂಡು ಧರ್ಮರಾಜ ಯುಧಿಷ್ಠಿರನಿಗೆ ಕೇಳಿದನು:

“ಪಾಂಡವ! ಸೈನ್ಯಗಳಲ್ಲಿ ಜೀವಂತವಿರುವರೆಷ್ಟು ಎನ್ನುವುದನ್ನು ನೀನು ತಿಳಿದಿದ್ದೀಯೆ. ಹತರಾದವರ ಸಂಖ್ಯೆ ಎಷ್ಟೆಂದು ನಿನಗೆ ತಿಳಿದಿದ್ದರೆ ನನಗೆ ಹೇಳು!”

ಯುಧಿಷ್ಠಿರನು ಹೇಳಿದನು:

“ರಾಜನ್! ಒಂದುನೂರಾ ಅರವತ್ತಾರು ಕೋಟಿ ಇಪ್ಪತ್ತು ಸಾವಿರ ಯೋಧರು ಈ ಯುದ್ಧದಲ್ಲಿ ಹತರಾದರು. ಏನಾದರೆಂದು ತಿಳಿಯದೇ ಇರುವ ವೀರರ ಸಂಖ್ಯೆಯು ಇಪ್ಪತ್ನಾಲ್ಕು ಸಾವಿರದ ಒಂದು ನೂರ ಅರವತ್ತೈದು.”

ಧೃತರಾಷ್ಟ್ರನು ಹೇಳಿದನು:

“ಯುಧಿಷ್ಠಿರ! ನೀನು ಸರ್ವಜ್ಞನೆಂದು ನನಗನ್ನಿಸುತ್ತದೆ. ನಿಧನ ಹೊಂದಿದ ಆ ಪುರುಷಸತ್ತಮರು ಯಾವ ಗತಿಯನ್ನು ಹೊಂದಿದ್ದಾರೆ ಎನ್ನುವುದನ್ನೂ ಹೇಳು!”

ಯುಧಿಷ್ಠಿರನು ಹೇಳಿದನು:

“ತಮ್ಮ ಶರೀರಗಳನ್ನು ಈ ಪರಮಸಂಯುಗದಲ್ಲಿ ಸಂತೋಷದಿಂದ ಆಹುತಿಯನ್ನಾಗಿತ್ತ ಸತ್ಯವಿಕ್ರಮಿಗಳು ಇಂದ್ರಲೋಕದ ಸಮಾನ ಲೋಕಗಳಿಗೆ ಹೋಗಿದ್ದಾರೆ. ಸಾಯಬೇಕೆಂಬ ಮನಸ್ಸಿನಿಂದ ಮಾತ್ರ ರಣದಲ್ಲಿ ಯುದ್ಧಮಾಡಿ ಸಂತೋಷವಿಲ್ಲದೇ ಸತ್ತವರು ಗಂಧರ್ವರ ಲೋಕಗಳಿಗೆ ಹೋಗಿದ್ದಾರೆ. ಯುದ್ಧಭೂಮಿಯಲ್ಲಿದ್ದುಕೊಂಡು, ಪ್ರಾಣಭಿಕ್ಷೆಯನ್ನು ಬೇಡುತ್ತಾ ಪರಾಙ್ಮುಖರಾಗುತ್ತಿದ್ದಾಗ ಶಸ್ತ್ರದಿಂದ ನಿಧನ ಹೊಂದಿದವರು ಗುಹ್ಯಕರ ಲೋಕಗಳಿಗೆ ಹೋಗಿದ್ದಾರೆ. ನಿರಾಯುಧರಾಗಿ ಕೆಳಗೆ ಬಿದ್ದು ಪೀಡಿಸಲ್ಪಟ್ಟರೂ ನಾಚದೇ ರಣದಲ್ಲಿ ಶತ್ರುಗಳನ್ನು ಎದುರಿಸಿ, ನಿಶಿತ ಶಸ್ತ್ರಗಳಿಂದ ವಧಿಸಲ್ಪಟ್ಟ ಕ್ಷತ್ರಧರ್ಮಪರಾಯಣ ಮಹಾತ್ಮ ಸುವರ್ಚಸ ವೀರರು ಬ್ರಹ್ಮಸದನಕ್ಕೆ ಹೋಗಿದ್ದಾರೆ. ಯುದ್ಧಭೂಮಿಯೊಳಗೆ ಇದ್ದು ಈ ಮೊದಲು ಹೇಳಿದ ರೀತಿಗಳಲ್ಲದೇ ಬೇರೆ ಯಾವುದೇ ರೀತಿಯಲ್ಲಿಯಾದರೂ ಹತರಾದವರು ಉತ್ತರಕುರುದೇಶದಲ್ಲಿ ಜನ್ಮತಾಳುತ್ತಾರೆ.”

ಧೃತರಾಷ್ಟ್ರನು ಹೇಳಿದನು:

“ಪುತ್ರ! ಯಾವ ಜ್ಞಾನಬಲದಿಂದ ನೀನು ಸಿದ್ಧನಂತೆ ಎಲ್ಲವನ್ನೂ ಕಾಣುತ್ತಿದ್ದೀಯೆ? ನಾನು ಕೇಳಬಹುದಾದರೆ ಅದನ್ನು ನನಗೆ ಹೇಳು!”

ಯುಧಿಷ್ಠಿರನು ಹೇಳಿದನು:

“ನಿನ್ನ ನಿರ್ದೇಶನದಂತೆ ಹಿಂದೆ ನಾನು ವನದಲ್ಲಿ ಸಂಚರಿಸುತ್ತಿರುವಾಗ ತೀರ್ಥಯಾತ್ರಾ ಪ್ರಸಂಗದಲ್ಲಿ ನನಗೆ ಈ ಅನುಗ್ರಹವು ಪ್ರಾಪ್ತವಾಯಿತು. ಅಲ್ಲಿ ಕಂಡ ದೇವರ್ಷಿ ಲೋಮಶನಿಂದ ನನಗೆ ಅನುಸ್ಮೃತಿಯು ಪ್ರಾಪ್ತವಾಯಿತು. ಜ್ಞಾನಯೋಗದಿಂದ ದಿವ್ಯದೃಷ್ಟಿಯೂ ದೊರಕಿತು.”

ಧೃತರಾಷ್ಟ್ರನು ಹೇಳಿದನು:

“ಭಾರತ! ಇಲ್ಲಿ ಅನೇಕ ಅನಾಥ ಮತ್ತು ಸನಾಥ ಯೋಧರ ಶವಗಳಿವೆ. ಇವರ ಶರೀರಗಳನ್ನು ವಿಧಿಪೂರ್ವಕವಾಗಿ ದಹನಮಾಡುತ್ತೀಯೆ ತಾನೇ? ಇವರಲ್ಲಿ ಕೆಲವರಿಗೆ ದಹನಸಂಸ್ಕಾರಗಳನ್ನು ಮಾಡುವವರಿಲ್ಲ. ಕೆಲವರಿಗೆ ಅಗ್ನಿಯಲ್ಲಿ ದಹನವು ಅವರ ಸಂಪ್ರದಾಯಗಳಿಲ್ಲದೇ ಇರುವ ಕಾರಣದಿಂದ ಅಹಿತವೂ ಆಗಿರಬಹುದು. ಮಗೂ! ಅನೇಕರ ದಹನಕಾರ್ಯಗಳನ್ನು ಮಾಡಬೇಕಾಗಿರುವ ನಾವು ಯಾರ ಯಾರ ಕರ್ಮಗಳನ್ನು ಮಾಡೋಣ? ಗರುಡ ಪಕ್ಷಿಗಳು ಮತ್ತು ಹದ್ದುಗಳು ಅಲ್ಲಲ್ಲಿ ಎಳೆದಾಡುತ್ತಿರುವವರಿಗೆ ಕೇವಲ ಶ್ರಾದ್ಧಕರ್ಮದಿಂದಲೇ ಪುಣ್ಯ ಲೋಕಗಳು ಪ್ರಾಪ್ತವಾಗುತ್ತವೆ.”

ಮಹಾಪ್ರಾಜ್ಞನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ಸುಧರ್ಮ, ಧೌಮ್ಯ, ಸೂತ ಸಂಜಯ, ಮಹಾಬುದ್ಧಿ ವಿದುರ, ಕೌರವ ಯುಯುತ್ಸು, ಸೇವಕ ಇಂದ್ರಸೇನ ಮತ್ತು ಎಲ್ಲ ಸೂತರಿಗೂ

“ನೀವು ಯಾರ ಶರೀರವೂ ಅನಾಥ ಶರೀರದಂತೆ ವಿನಾಶವಾಗದಂತೆ ಎಲ್ಲರಿಗೂ ಪ್ರೇತಕಾರ್ಯಗಳನ್ನು ಮಾಡಿ!”

ಎಂದು ಆದೇಶವಿತ್ತನು. ಧರ್ಮರಾಜನ ಶಾಸನದಂತೆ ಕ್ಷತ್ತ ವಿದುರ, ಸೂತ ಸಂಜಯ, ಧೌಮ್ಯನ ಸಹಿತ ಸುಧರ್ಮ ಮತ್ತು ಇಂದ್ರಸೇನಾದಿಗಳು ಚಂದನ, ಅಗರು, ಕಾಷ್ಠ, ಸುಗಂಧದ್ರವ್ಯ, ತುಪ್ಪ, ಎಣ್ಣೆ, ಗಂಧ, ಮತ್ತು ನವುರಾದ ವಸ್ತ್ರಗಳನ್ನು ಸಂಗ್ರಹಿಸಿದರು. ಮುರಿದು ಹೋಗಿದ್ದ ರಥಗಳಿಂದಲೂ, ನಾನಾ ಶಸ್ತ್ರಗಳಿಂದಲೂ ಮತ್ತು ಸಂಗ್ರಹಿಸಿದ ರಾಶಿಗಟ್ಟಲೆ ಕಟ್ಟಿಗೆಗಳಿಂದ ಚಿತೆಗಳನ್ನು ಮಾಡಿ, ಮುಖ್ಯರಿಂದ ಮೊದಲ್ಗೊಂಡು ಕ್ರಮೇಣವಾಗಿ ಎಲ್ಲ ನರಾಧಿಪರಿಗೂ ವೇದಗಳಲ್ಲಿ ಹೇಳಿದ ಕರ್ಮಗಳ ಮೂಲಕ ದಹನಕರ್ಮಗಳನ್ನು ಅವ್ಯಗ್ರರಾಗಿ ಪ್ರಯತ್ನಪಟ್ಟು ಮಾಡಿ ನೆರವೇರಿಸಿದರು. ರಾಜಾ ದುರ್ಯೋಧನ, ಅವನ ನೂರು ಸಹೋದರರು, ಶಲ್ಯ, ಶಲ, ರಾಜಾ ಭೂರಿಶ್ರವ, ರಾಜ ಜಯದ್ರಥ, ಅಭಿಮನ್ಯು, ದುಃಶಾಸನನ ಮಗ, ಲಕ್ಷ್ಮಣ, ರಾಜ ಧೃಷ್ಟಕೇತು, ಬೃಹಂತ, ಸೋಮದತ್ತ, ನೂರಕ್ಕಿಂತಲೂ ಹೆಚ್ಚು ಸೃಂಜಯರು, ರಾಜ ಕ್ಷೇಮಧನ್ವಿ, ವಿರಾಟ ಮತ್ತು ದ್ರುಪದರು, ಪಾಂಚಾಲ್ಯ ಶಿಖಂಡಿ, ಪಾರ್ಷತ ಧೃಷ್ಟದ್ಯುಮ್ನ, ಯುಧಾಮನ್ಯು, ವಿಕ್ರಾಂತ ಉತ್ತಮೌಜಸ, ಕೌಸಲ್ಯ, ದ್ರೌಪದೇಯರು, ಸೌಬಲ ಶಕುನಿ, ಅಚಲ, ವೃಷಕ, ರಾಜ ಭಗದತ್ತ, ಪುತ್ರರೊಂದಿಗೆ ಅಮರ್ಷಣ ವೈಕರ್ತನ ಕರ್ಣ, ಮಹೇಷ್ವಾಸ ಕೇಕಯ ಸಹೋದರರು, ಮಹಾರಥ ತಿಗರ್ತರು, ರಾಕ್ಷಸೇಂದ್ರ ಘಟೋತ್ಕಚ, ಬಕನ ಸಹೋದರ ಅಲಂಬುಸ, ರಾಜ ಜಲಸಂಧ, ಮತ್ತು ಇನ್ನೂ ಅನೇಕ ನೂರಾರು ಸಹಸ್ರಾರು ರಾಜರನ್ನು ಆಜ್ಯಧಾರೆಗಳಿಂದ ಪ್ರದೀಪ್ತವಾದ ಅಗ್ನಿಗಳ ಮೂಲಕ ದಹಿಸಿದರು. ಕೆಲವರ ಪಿತೃಮೇಧಕರ್ಮಗಳೂ ನಡೆದವು. ಸಾಮವೇದವನ್ನೂ ಹಾಡಿದರು. ಅನ್ಯರು ಶೋಕಿಸುತ್ತಿದ್ದರು. ಋಕ್-ಸಾಮಗಳ ನಿನಾದದಿಂದಲೂ, ಸ್ತ್ರೀಯರ ರೋದನ ಶಬ್ಧಗಳಿಂದಳು ಆ ರಾತ್ರಿ ಎಲ್ಲ ಪ್ರಾಣಿಗಳ ಮನಸ್ಸೂ ವ್ಯಾಕುಲಗೊಂಡಿತು. ಹೊಗೆಯಿಲ್ಲದೇ ಉರಿದು ಪ್ರಜ್ವಲಿಸುತ್ತಿರುವ ಚಿತಾಗ್ನಿಗಳು ಆಕಾಶದಲ್ಲಿ ಮೋಡಗಳಿಂದ ಸುತ್ತುವರೆಯಲ್ಪಟ್ಟ ಗ್ರಹಗಳಂತೆ ತೋರುತ್ತಿದ್ದವು. ನಾನಾದೇಶಗಳಿಂದ ಬಂದು ಇಲ್ಲಿ ಅನಾಥರಾಗಿ ಸತ್ತಿದ್ದ ಎಲ್ಲರನ್ನೂ ಒಂದುಗೂಡಿಸಿ, ಸಹಸ್ರಾರು ರಾಶಿಗಳನ್ನು ಮಾಡಿ, ಕಟ್ಟಿಗೆ, ಮತ್ತು ತುಪ್ಪಗಳಿಂದ ಎಲ್ಲರ ದಹನ ಸಂಸ್ಕಾರಗಳನ್ನೂ ವಿದುರನು ಧರ್ಮರಾಜನ ಶಾಸನದಂತೆ ಮಾಡಿಸಿದನು. ಅವರ ಕ್ರಿಯೆಗಳನ್ನು ಮಾಡಿಸಿ ಕುರುರಾಜ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಗಂಗಾನದಿಯ ಕಡೆ ಹೊರಟನು.

ಪುಣ್ಯಜನರಿಗೆ ಉಚಿತವಾದ, ಅನೇಕ ಮಡುಗಳಿದ್ದ, ಮಹಾರಣ್ಯಗಳಿಂದ ಕೂಡಿದ್ದ ಪ್ರಸನ್ನವೂ ವಿಶಾಲವೂ ಆದ ಮಂಗಳಕರ ಗಂಗೆಯನ್ನು ಅವರು ತಲುಪಿದರು. ಅತ್ಯಂತ ದುಃಖಿತರಾಗಿದ್ದ ಕುರುಸ್ತ್ರೀಯರು ಎಲ್ಲರೂ ರೋದಿಸುತ್ತಲೇ ಭೂಷಣಗಳನ್ನೂ, ಉತ್ತರೀಯಗಳನ್ನೂ, ಶಿರೋವೇಷ್ಟಿಗಳನ್ನೂ ಕಳಚಿಟ್ಟು ಪಿತೃಗಳಿಗೆ, ಮಕ್ಕಳು-ಮೊಮ್ಮಕ್ಕಳಿಗೆ, ಸಹೋದರರಿಗೆ, ಬಂಧುಗಳಿಗೆ, ಮಾವಂದಿರಿಗೆ, ಮತ್ತು ಪತಿಯಂದಿರಿಗೆ ಉದಕ ಕ್ರಿಯೆಗಳನ್ನು ಮಾಡಿದರು. ಆ ದರ್ಮಜ್ಞರು ಸ್ನೇಹಿತರಿಗೂ ಜಲತರ್ಪಣಗಳನ್ನಿತ್ತರು. ವೀರಪತ್ನಿಯರು ವೀರರಿಗೆ ತರ್ಪಣಗಳನ್ನು ನೀಡುವಾಗ ತೀರ್ಥೆ ಗಂಗೆಯ ತೀರವು ಇನ್ನೂ ವಿಸ್ತಾರವಾಯಿತು. ಅಲ್ಲಿ ಸೇರಿದ್ದ ವೀರಪತ್ನಿಯರ ಗುಂಪುಗಳಲ್ಲಿ ಆನಂದವಾಗಲೀ ಉತ್ಸವವಾಗಲೀ ಇಲ್ಲದಿದ್ದರೂ ಆ ಗಂಗಾತೀರವು ಮಹಾಸಾಗರದಂತೆ ತೋರಿತು. ಆಗ ಒಡನೆಯೇ ಶೋಕಕರ್ಶಿತ ಕುಂತಿಯು ರೋದಿಸುತ್ತಾ ತನ್ನ ಪುತ್ರರಿಗೆ ಮೆಲುದನಿಯಲ್ಲಿ ಈ ಮಾತನ್ನಾಡಿದಳು:

“ಪಾಂಡವರೇ! ರಣದಲ್ಲಿ ಅರ್ಜುನನಿಂದ ಹತನಾದ ಆ ಶೂರ ಮಹೇಷ್ವಾಸ ರಥಯೂಥಪಯೂಥಪ ವೀರಲಕ್ಷಣಗಳಿಂದ ಕೂಡಿದ್ದ, ಯಾರನ್ನು ಸೂತಪುತ್ರನೆಂದೂ ರಾಧೇಯನೆಂದು ತಿಳಿದಿದ್ದರೋ, ಯಾರು ಸೇನೆಗಳ ಮಧ್ಯೆ ಪ್ರಭು ದಿವಾಕರನಂತೆ ಪ್ರಕಾಶಿಸುತ್ತಿದ್ದನೋ, ಅನುಚರರೊಂದಿಗೆ ನಿಮ್ಮೆಲ್ಲರನ್ನೂ ಎದುರಿಸಿ ಯಾರು ಯುದ್ಧಮಾಡಿದನೋ, ದುರ್ಯೋಧನನ ಸರ್ವಸೇನೆಗಳನ್ನೂ ಸೆಳೆದು ಬೆಳಗುತ್ತಿದ್ದ, ವೀರ್ಯದಲ್ಲಿ ಯಾರ ಸಮನಾಗಿರುವವನು ಈ ಭೂಮಿಯಲ್ಲಿಯೇ ಇಲ್ಲವೋ ಆ ಸತ್ಯಸಂಧ ಶೂರ ಸಂಗ್ರಾಮದಲ್ಲಿ ಪಲಯಾನಮಾಡದಿದ್ದ ನಿಮ್ಮ ಸಹೋದರ ಅಕ್ಲಿಷ್ಟಕರ್ಮಿಗೆ ಉದಕ ಕಾರ್ಯಗಳನ್ನು ಮಾಡಿ. ಕುಂಡಲ-ಕವಚಗಳನ್ನು ಧರಿಸಿಯೇ ದಿವಾಕರಸಮ ಪ್ರಭೆಯನ್ನು ಹೊಂದಿ ಹುಟ್ಟಿದ್ದ ಅವನು ನಿಮಗಿಂತಲೂ ಮೊದಲು ಭಾಸ್ಕರನಿಂದ ನನ್ನಲ್ಲಿ ಹುಟ್ಟಿದ್ದ ನಿಮ್ಮ ಹಿರಿಯಣ್ಣ!”

ತಾಯಿಯ ಆ ಅಪ್ರಿಯ ಮಾತನ್ನು ಕೇಳಿ ಪಾಂಡವರೆಲ್ಲರೂ ಕರ್ಣನ ಕುರಿತು ಶೋಕಿಸುತ್ತಾ ಇನ್ನೂ ಹೆಚ್ಚು ಆರ್ತರಾದರು. ಆಗ ಆ ಪುರುಷವ್ಯಾಘ್ರ ವೀರ ಕುಂತೀಪುತ್ರ ಯುಧಿಷ್ಠಿರನು ಹಾವಿನಂತೆ ದೀರ್ಘ ನಿಟ್ಟುಸಿರು ಬಿಡುತ್ತಾ ತಾಯಿಗೆ ಹೇಳಿದನು:

“ಯಾರ ಬಾಣಗಳನ್ನು ಧನಂಜಯನಲ್ಲದೇ ಬೇರೆ ಯಾರೂ ಎದುರಿಸಬಲ್ಲವರಾಗಿದ್ದರೋ ಅಂಥಹ ದೇವಗರ್ಭನು ಹಿಂದೆ ಹೇಗೆ ನಿನ್ನ ಪುತ್ರನಾಗಿ ಜನಿಸಿದನು? ಅವನ ಬಾಹುಪ್ರತಾಪದಿಂದ ನಾವು ಎಲ್ಲಕಡೆಗಳಿಂದ ಸುಟ್ಟುಹೋಗುತ್ತಿದ್ದರೂ ಹೇಗೆ ತಾನೇ ನೀನು ಅಗ್ನಿಯನ್ನು ಬಟ್ಟೆಯಲ್ಲಿ ಮುಚ್ಚಿಟ್ಟುಕೊಳ್ಳುವಂತೆ ಅದನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದೆ? ಧಾರ್ತರಾಷ್ಟ್ರರು ಅವನ ಘೋರ ಬಾಹುಬಲವನ್ನು ಆಶ್ರಯಿಸಿದ್ದರು. ರಥಿಗಳಲ್ಲಿ ಶ್ರೇಷ್ಠನಾಗಿದ್ದ ಕುಂತೀಸುತ ಕರ್ಣನಲ್ಲದೇ ಬೇರೆ ಯಾರೂ ಸೇನೆಯನ್ನು ಎದುರಿಸಿ ನಿಲ್ಲುತ್ತಿರಲಿಲ್ಲ! ಆ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನು ಮೊದಲು ಹುಟ್ಟಿದ್ದ ನಮ್ಮ ಅಣ್ಣ! ಅಂಥಹ ಅದ್ಭುತವಿಕ್ರಮಿಯನ್ನು ನಮ್ಮೆಲ್ಲರಿಗೆ ಮೊದಲೇ ನೀನು ಹೇಗೆ ಹೆತ್ತೆ? ಅಯ್ಯೋ! ನೀನು ಈ ರಹಸ್ಯವನ್ನು ಮುಚ್ಚಿಟ್ಟಿದುದರಿಂದ ನಾವೆಲ್ಲರೂ ಹತರಾದಂತೆಯೇ! ಕರ್ಣನ ನಿಧನದಿಂದ ಬಾಂಧವರೊಂದಿಗೆ ನಾವೆಲ್ಲರೂ ಪೀಡಿತರಾಗಿದ್ದೇವೆ! ಈ ದುಃಖವು ಅಭಿಮನ್ಯುವಿನ ವಿನಾಶ, ದ್ರೌಪದೇಯರ ವಧೆ, ಪಾಂಚಾಲರ ನಾಶ ಮತ್ತು ಕುರುಗಳ ಪತನಕ್ಕಿಂತಲೂ ನೂರು ಪಟ್ಟು ಹೆಚ್ಚಾಗಿ ನನ್ನನ್ನು ಸಂಕಟಕ್ಕೀಡುಮಾಡಿದೆ. ಕರ್ಣನ ಕುರಿತೇ ದುಃಖಿಸಿ ನಾನು ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿದವನಂತಾಗಿದ್ದೇನೆ! ಅವನು ನಮ್ಮ ಅಣ್ಣನೆಂದು ಮೊದಲೇ ತಿಳಿದಿದ್ದರೆ ನಮಗೆ ಪ್ರಾಪ್ತವಾಗದಿರುವುದು ಯಾವುದೂ ಇರಲಿಲ್ಲ, ಸ್ವರ್ಗದಲ್ಲಿಯೇ ಇದ್ದರೂ ಅದನ್ನು ನಾವು ಪಡೆದುಕೊಳ್ಳುತ್ತಿದ್ದೆವು. ಈ ಘೋರ ದುಃಖಕರ ಕೌರವರ ಅಂತ್ಯವೂ ನಡೆಯುತ್ತಿರಲಿಲ್ಲ!”

ಹೀಗೆ ಧರ್ಮರಾಜ ಯುಧಿಷ್ಠಿರನು ಬಹಳವಾಗಿ ವಿಲಪಿಸಿದನು. ಮೆಲ್ಲನೇ ಅಳುತ್ತಲೇ ಆ ಪ್ರಭುವು ಕರ್ಣನಿಗೆ ಉದಕ ಕ್ರಿಯೆಗಳನ್ನು ಮಾಡಿದನು. ಅವನು ಉದಕಕ್ರಿಯೆಗಳನ್ನು ಮಾಡುವಾಗ ಸುತ್ತಲೂ ನಿಂತಿದ್ದ ಸ್ತ್ರೀ-ಪುರುಷರೆಲ್ಲರೂ ಒಡನೆಯೇ ಜೋರಾಗಿ ರೋದಿಸಿದರು. ಅನಂತರ ಭ್ರಾತೃ ಪ್ರೇಮದಿಂದ ಕುರುಪತಿ ಯುಧಿಷ್ಠಿರನು ಕರ್ಣನ ಸ್ತ್ರೀಯರನ್ನು ಅವರ ಪರಿವಾರಸಮೇತರಾಗಿ ಕರೆಯಿಸಿದನು.

3 Comments

  1. K Shasaidhara Sastry

    Thank you very much sir,

    For presenting us this complete story of Mahabharata at free of cost.
    Its a great job

  2. Prabhu Ullagaddi

    Thank you for doing this beautiful job of putting the Kannada translation. I prey the Kannadamma to bless you.

Leave a Reply

Your email address will not be published. Required fields are marked *