Virata Parva: Chapter 63

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ: ವೈವಾಹಿಕ ಪರ್ವ

೬೩

ವಿಜಯಶಾಲೀ ಉತ್ತರ ಬೃಹನ್ನಡೆಯರ ಪುರಪ್ರವೇಶ

ವಿಜಯಶಾಲಿಯಾಗಿ ಹಿಂದಿರುಗಿದ ವಿರಾಟನು ತನ್ನ ಮಗನು ಬೃಹನ್ನಡೆಯ ಸಹಾಯದೊಂದಿಗೆ ಕೌರವರೊಂದಿಗೆ ಯುದ್ಧಕ್ಕೆ ಹೋಗಿದ್ದಾನೆಂದು ತಿಳಿದು ದುಃಖಿತನಾಗಿ “ನಪುಂಸಕನನ್ನು ಸಾರಥಿಯನ್ನಾಗಿ ಮಾಡಿಕೊಂಡಿರುವ ಅವನು ಬದುಕಿಲ್ಲವೆಂದೇ ನನ್ನ ಭಾವನೆ” ಎಂದು ಚತುರಂಗಸೇನೆಯನ್ನು ಸಿದ್ಧಗೊಳಿಸಲು ಆಜ್ಞಾಪಿಸಿದುದು (೧-೧೪). ಆಗ ಉತ್ತರನ ವಿಜಯವಾರ್ತೆಯನ್ನು ಕೇಳಿ ಸಂತೋಷಗೊಂಡ ವಿರಾಟನು ಅವನನ್ನು ಎದಿರುಗೊಳ್ಳಲು ಸಂಭ್ರಮದ ಸಿದ್ಧತೆಗಳನ್ನು ಮಾಡಿಸಿ ಕಂಕನೊಂದಿಗೆ ಪಗಡೆಯಾಟವನ್ನು ಪ್ರಾರಂಭಿಸಿದುದು (೧೫-೩೫). ಬೃಹನ್ನಡೆಯ ಸಹಾಯವಿರುವಾಗ ಉತ್ತರನು ಗೆದ್ದಿರುವುದು ಆಶ್ಚರ್ಯವೇನೂ ಅಲ್ಲ ಎಂದು ಪುನಃ ಪುನಃ ಹೇಳುತ್ತಿದ್ದ ಕಂಕನನ್ನು ವಿರಾಟನು ಕೋಪಗೊಂಡು ದಾಳಗಳಿಂದ ಹೊಡೆದುದು (೩೬-೪೪). ಪೆಟ್ಟಾದ ಮೂಗಿನಿಂದ ರಕ್ತ ಸುರಿಯಲು ಸೈರಂಧ್ರಿಯು ಕಂಕನ ರಕ್ತವು ನೆಲಕ್ಕೆ ಬೀಳದಂತೆ ಹಿಡಿದುದು (೪೫-೪೭). ನೆತ್ತರುಗೂಡಿದ ತನ್ನನ್ನು ನೋಡಿ ಕುಪಿತನಾದ ಅರ್ಜುನನು ವಿರಾಟನನ್ನು ನಾಶಗೊಳಿಸುತ್ತಾನೆಂದು ಯುಧಿಷ್ಠಿರನು ದ್ವಾರಪಾಲಕನಿಗೆ “ಉತ್ತರನೊಬ್ಬನೇ ಒಳಬರಲಿ. ಬೃಹನ್ನಡೆಯನ್ನು ಒಳಗೆ ಬಿಡಬೇಡ.” ಎಂದು ಹೇಳುವುದು (೪೮-೫೪).

04063001 ವೈಶಂಪಾಯನ ಉವಾಚ|

04063001a ಅವಜಿತ್ಯ ಧನಂ ಚಾಪಿ ವಿರಾಟೋ ವಾಹಿನೀಪತಿಃ|

04063001c ಪ್ರಾವಿಶನ್ನಗರಂ ಹೃಷ್ಟಶ್ಚತುರ್ಭಿಃ ಸಹ ಪಾಂಡವೈಃ||

ವೈಶಂಪಾಯನನು ಹೇಳಿದನು: “ಸೈನ್ಯಾಧಿಪತಿ ವಿರಾಟನು ಗೋಧನವನ್ನು ಗೆದ್ದು ಹರ್ಷಿತನಾಗಿ ನಾಲ್ವರು ಪಾಂಡವರೊಡನೆ ನಗರವನ್ನು ಪ್ರವೇಶಿಸಿದನು.

04063002a ಜಿತ್ವಾ ತ್ರಿಗರ್ತಾನ್ಸಂಗ್ರಾಮೇ ಗಾಶ್ಚೈವಾದಾಯ ಕೇವಲಾಃ|

04063002c ಅಶೋಭತ ಮಹಾರಾಜಃ ಸಹ ಪಾರ್ಥೈಃ ಶ್ರಿಯಾ ವೃತಃ||

ಆ ಮಹಾರಾಜನು ಯುದ್ಧದಲ್ಲಿ ತ್ರಿಗರ್ತರನ್ನು ಗೆದ್ದು ಗೋವುಗಳನ್ನೆಲ್ಲ ಮರಳಿಸಿ ತಂದು ಕಾಂತಿಯುತನಾಗಿ ಪಾಂಡವರೊಡನೆ ಶೋಭಿಸಿದನು.

04063003a ತಮಾಸನಗತಂ ವೀರಂ ಸುಹೃದಾಂ ಪ್ರೀತಿವರ್ಧನಂ|

04063003c ಉಪತಸ್ಥುಃ ಪ್ರಕೃತಯಃ ಸಮಸ್ತಾ ಬ್ರಾಹ್ಮಣೈಃ ಸಹ||

ಆಸನದಲ್ಲಿ ಕುಳಿತ, ಸ್ನೇಹಿತರ ಸಂತೋಷವನ್ನು ಹೆಚ್ಚಿಸುವ ಆ ವೀರನ ಬಳಿ ಎಲ್ಲ ಪ್ರಜೆಗಳೂ ಬ್ರಾಹ್ಮಣರೊಡಗೂಡಿ ನಿಂತರು.

04063004a ಸಭಾಜಿತಃ ಸಸೈನ್ಯಸ್ತು ಪ್ರತಿನಂದ್ಯಾಥ ಮತ್ಸ್ಯರಾಟ್|

04063004c ವಿಸರ್ಜಯಾಮಾಸ ತದಾ ದ್ವಿಜಾಂಶ್ಚ ಪ್ರಕೃತೀಸ್ತಥಾ||

ಆಗ ಅವರಿಂದ ಸನ್ಮಾನಗೊಂಡ ಸೈನ್ಯಸಹಿತ ಮತ್ಸ್ಯರಾಜನು ಬ್ರಾಹ್ಮಣರನ್ನೂ ಅಂತೆಯೇ ಪ್ರಜೆಗಳನ್ನೂ ಪ್ರತಿಯಾಗಿ ಅಭಿನಂದಿಸಿ ಕಳುಹಿಸಿಕೊಟ್ಟನು.

04063005a ತತಃ ಸ ರಾಜಾ ಮತ್ಸ್ಯಾನಾಂ ವಿರಾಟೋ ವಾಹಿನೀಪತಿಃ|

04063005c ಉತ್ತರಂ ಪರಿಪಪ್ರಚ್ಛ ಕ್ವ ಯಾತ ಇತಿ ಚಾಬ್ರವೀತ್||

ಬಳಿಕ ಮತ್ಸ್ಯ ಸೇನಾಧಿಪತಿ ವಿರಾಟರಾಜನು “ಉತ್ತರನೆಲ್ಲಿ ಹೋದ?” ಎಂದು ಉತ್ತರನ ವಿಷಯದಲ್ಲಿ ಪ್ರಶ್ನಿಸಿದನು.

04063006a ಆಚಖ್ಯುಸ್ತಸ್ಯ ಸಂಹೃಷ್ಟಾಃ ಸ್ತ್ರಿಯಃ ಕನ್ಯಾಶ್ಚ ವೇಶ್ಮನಿ|

04063006c ಅಂತಃಪುರಚರಾಶ್ಚೈವ ಕುರುಭಿರ್ಗೋಧನಂ ಹೃತಂ||

ಅರಮನೆಯ ಸ್ತ್ರೀಯರೂ, ಕನ್ಯೆಯರೂ, ಅಂತಃಪುರದ ಹೆಂಗಸರೂ ಅವನಿಗೆ ಸಂತೋಷದಿಂದ ತಿಳಿಸಿದರು: “ಕೌರವರು ನಮ್ಮ ಗೋಧನವನ್ನು ಅಪಹರಿಸಿದರು.

04063007a ವಿಜೇತುಮಭಿಸಂರಬ್ಧ ಏಕ ಏವಾತಿಸಾಹಸಾತ್|

04063007c ಬೃಹನ್ನಡಾಸಹಾಯಶ್ಚ ನಿರ್ಯಾತಃ ಪೃಥಿವೀಂಜಯಃ||

04063008a ಉಪಯಾತಾನತಿರಥಾನ್ದ್ರೋಣಂ ಶಾಂತನವಂ ಕೃಪಂ|

04063008c ಕರ್ಣಂ ದುರ್ಯೋಧನಂ ಚೈವ ದ್ರೋಣಪುತ್ರಂ ಚ ಷಡ್ರಥಾನ್||

ಅದರಿಂದ ಕೋಪಗೊಂಡ ಉತ್ತರನು ಬಂದಿರುವ ಅತಿರಥ ದ್ರೋಣ, ಭೀಷ್ಮ, ಕೃಪ, ಕರ್ಣ, ದುರ್ಯೋಧನ, ಅಶ್ವತ್ಥಾಮ - ಈ ಷಡ್ರಥರನ್ನು ಗೆಲ್ಲಲು ಬೃಹನ್ನಡೆಯನ್ನು ಸಹಾಯವನ್ನಾಗಿಟ್ಟುಕೊಂಡು ಏಕಾಂಗಿಯಾಗಿ ಅತಿ ಸಾಹಸದಿಂದ ಹೋಗಿದ್ದಾನೆ.”

04063009a ರಾಜಾ ವಿರಾಟೋಽಥ ಭೃಶಂ ಪ್ರತಪ್ತಃ|

         ಶ್ರುತ್ವಾ ಸುತಂ ಹ್ಯೇಕರಥೇನ ಯಾತಂ|

04063009c ಬೃಹನ್ನಡಾಸಾರಥಿಮಾಜಿವರ್ಧನಂ|

         ಪ್ರೋವಾಚ ಸರ್ವಾನಥ ಮಂತ್ರಿಮುಖ್ಯಾನ್||

ಆಗ ಯುದ್ಧವೀರ ಮಗನು ಏಕರಥನಾಗಿ ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಹೋದನೆಂಬುದನ್ನು ಕೇಳಿ ಅತಿಯಾಗಿ ದುಃಖಿತನಾದ ವಿರಾಟರಾಜನು ಮಂತ್ರಿಮುಖ್ಯರಿಗೆಲ್ಲ ನುಡಿದನು:

04063010a ಸರ್ವಥಾ ಕುರವಸ್ತೇ ಹಿ ಯೇ ಚಾನ್ಯೇ ವಸುಧಾಧಿಪಾಃ|

04063010c ತ್ರಿಗರ್ತಾನ್ನಿರ್ಜಿತಾಂ ಶ್ರುತ್ವಾ ನ ಸ್ಥಾಸ್ಯಂತಿ ಕದಾ ಚನ||

“ತ್ರಿಗರ್ತರು ಸೋತರೆಂಬುದನ್ನು ಕೇಳಿದ ನಂತರ ಆ ಕೌರವರೂ ಇತರ ರಾಜರೂ ಎಂದಿಗೂ ಸುಮ್ಮನೆ ಇರಲಾರರು.

04063011a ತಸ್ಮಾದ್ಗಚ್ಛಂತು ಮೇ ಯೋಧಾ ಬಲೇನ ಮಹತಾ ವೃತಾಃ|

04063011c ಉತ್ತರಸ್ಯ ಪರೀಪ್ಸಾರ್ಥಂ ಯೇ ತ್ರಿಗರ್ತೈರವಿಕ್ಷತಾಃ||

ಆದುದರಿಂದ ತ್ರಿಗರ್ತರಿಂದ ಗಾಯಗೊಳ್ಳದಿರುವ ನನ್ನ ಸೈನಿಕರು ದೊಡ್ಡ ಸೈನ್ಯದಿಂದ ಕೂಡಿ ಉತ್ತರನ ರಕ್ಷಣೆಗಾಗಿ ಹೊರಡಲಿ.”

04063012a ಹಯಾಂಶ್ಚ ನಾಗಾಂಶ್ಚ ರಥಾಂಶ್ಚ ಶೀಘ್ರಂ|

         ಪದಾತಿಸಂಘಾಂಶ್ಚ ತತಃ ಪ್ರವೀರಾನ್|

04063012c ಪ್ರಸ್ಥಾಪಯಾಮಾಸ ಸುತಸ್ಯ ಹೇತೋರ್|

         ವಿಚಿತ್ರಶಸ್ತ್ರಾಭರಣೋಪಪನ್ನಾನ್||

ಅನಂತರ ಅವನು ಕುದುರೆಗಳನ್ನೂ, ಆನೆಗಳನ್ನೂ, ರಥಗಳನ್ನೂ, ವಿಚಿತ್ರ ಶಸ್ತ್ರ - ಆಭರಣಗಳನ್ನು ಧರಿಸಿದ ವೀರ ಪದಾತಿ ಪಡೆಗಳನ್ನೂ ಮಗನಿಗಾಗಿ ಬೇಗ ಕಳುಹಿಸಿಕೊಟ್ಟನು.

04063013a ಏವಂ ಸ ರಾಜಾ ಮತ್ಸ್ಯಾನಾಂ ವಿರಾಟೋಽಕ್ಷೌಹಿಣೀಪತಿಃ|

04063013c ವ್ಯಾದಿದೇಶಾಥ ತಾಂ ಕ್ಷಿಪ್ರಂ ವಾಹಿನೀಂ ಚತುರಂಗಿಣೀಂ||

ಅಕ್ಷೌಹಿಣೀ ಸೇನೆಗೆ ಒಡೆಯ ಆ ಮತ್ಸ್ಯರಾಜ ವಿರಾಟನು ಹೀಗೆ ಆ ಚತುರಂಗ ಸೈನ್ಯಕ್ಕೆ ಬೇಗ ಆಜ್ಞಾಪಿಸಿದನು.

04063014a ಕುಮಾರಮಾಶು ಜಾನೀತ ಯದಿ ಜೀವತಿ ವಾ ನ ವಾ|

04063014c ಯಸ್ಯ ಯಂತಾ ಗತಃ ಷಂಢೋ ಮನ್ಯೇಽಹಂ ನ ಸ ಜೀವತಿ||

“ಕುಮಾರನು ಬದುಕಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಬೇಗ ತಿಳಿಯಿರಿ. ನಪುಂಸಕನನ್ನು ಸಾರಥಿಯನ್ನಾಗಿ ಮಾಡಿಕೊಂಡಿರುವ ಅವನು ಬದುಕಿಲ್ಲವೆಂದೇ ನನ್ನ ಭಾವನೆ.”

04063015a ತಮಬ್ರವೀದ್ಧರ್ಮರಾಜಃ ಪ್ರಹಸ್ಯ|

         ವಿರಾಟಮಾರ್ತಂ ಕುರುಭಿಃ ಪ್ರತಪ್ತಂ|

04063015c ಬೃಹನ್ನಡಾ ಸಾರಥಿಶ್ಚೇನ್ನರೇಂದ್ರ|

         ಪರೇ ನ ನೇಷ್ಯಂತಿ ತವಾದ್ಯ ಗಾಸ್ತಾಃ||

ಕೌರವರಿಂದ ದುಃಖಾರ್ತನಾಗಿದ್ದ ಆ ವಿರಾಟನಿಗೆ ಧರ್ಮರಾಜನು ನಕ್ಕು ಹೇಳಿದನು: “ರಾಜನ್! ಬೃಹನ್ನ್ನಡೆಯು ಉತ್ತರನ ಸಾರಥಿಯಾಗಿರುವಾಗ ಶತ್ರುಗಳು ಇಂದು ನಿನ್ನ ಹಸುಗಳನ್ನು ಕೊಂಡೊಯ್ಯಲಾರರು.

04063016a ಸರ್ವಾನ್ಮಹೀಪಾನ್ಸಹಿತಾನ್ಕುರೂಂಶ್ಚ|

         ತಥೈವ ದೇವಾಸುರಯಕ್ಷನಾಗಾನ್|

04063016c ಅಲಂ ವಿಜೇತುಂ ಸಮರೇ ಸುತಸ್ತೇ|

         ಸ್ವನುಷ್ಠಿತಃ ಸಾರಥಿನಾ ಹಿ ತೇನ||

ಆ ಸಾರಥಿಯಿಂದ ರಕ್ಷಿತ ನಿನ್ನ ಮಗನು ಕೌರವರನ್ನೂ, ಎಲ್ಲ ದೊರೆಗಳನ್ನೂ, ಅಂತೆಯೇ ದೇವತೆಗಳನ್ನೂ, ಅಸುರ, ಯಕ್ಷ-ನಾಗರನ್ನೂ ಯುದ್ಧದಲ್ಲಿ ಗೆಲ್ಲಬಲ್ಲನು.”

04063017a ಅಥೋತ್ತರೇಣ ಪ್ರಹಿತಾ ದೂತಾಸ್ತೇ ಶೀಘ್ರಗಾಮಿನಃ|

04063017c ವಿರಾಟನಗರಂ ಪ್ರಾಪ್ಯ ಜಯಮಾವೇದಯಂಸ್ತದಾ||

ಆಗ ಉತ್ತರನು ಕಳುಹಿಸಿದ್ದ ಶೀಘ್ರಗಾಮಿ ದೂತರು ವಿರಾಟನಗರವನ್ನು ಸೇರಿ ಜಯವನ್ನು ನಿವೇದಿಸಿದರು.

04063018a ರಾಜ್ಞಸ್ತತಃ ಸಮಾಚಖ್ಯೌ ಮಂತ್ರೀ ವಿಜಯಮುತ್ತಮಂ|

04063018c ಪರಾಜಯಂ ಕುರೂಣಾಂ ಚಾಪ್ಯುಪಾಯಾಂತಂ ತಥೋತ್ತರಂ||

ಆಗ ಮಂತ್ರಿಯು ಉತ್ತರನ ಶ್ರೇಷ್ಠ ವಿಜಯವನ್ನೂ, ಕೌರವರ ಸೋಲನ್ನೂ, ಅಂತೆಯೇ ಉತ್ತರನು ಬರುತ್ತಿರುವುದನ್ನೂ ರಾಜನಿಗೆ ತಿಳಿಸಿದನು.

04063019a ಸರ್ವಾ ವಿನಿರ್ಜಿತಾ ಗಾವಃ ಕುರವಶ್ಚ ಪರಾಜಿತಾಃ|

04063019c ಉತ್ತರಃ ಸಹ ಸೂತೇನ ಕುಶಲೀ ಚ ಪರಂತಪ||

“ಶತ್ರುನಾಶಕ! ಎಲ್ಲ ಹಸುಗಳನ್ನೂ ಗೆದ್ದುಕೊಂಡಿದ್ದಾಯಿತು. ಕೌರವರು ಪರಾಜಯಗೊಂಡರು. ಸಾರಥಿಯೊಡನೆ ಉತ್ತರನು ಕ್ಷೇಮದಿಂದಿದ್ದಾನೆ.”

04063020 ಕಂಕ ಉವಾಚ|

04063020a ದಿಷ್ಟ್ಯಾ ತೇ ನಿರ್ಜಿತಾ ಗಾವಃ ಕುರವಶ್ಚ ಪರಾಜಿತಾಃ|

04063020c ದಿಷ್ಟ್ಯಾ ತೇ ಜೀವಿತಃ ಪುತ್ರಃ ಶ್ರೂಯತೇ ಪಾರ್ಥಿವರ್ಷಭ||

ಕಂಕನು ಹೇಳಿದನು: “ರಾಜಶ್ರೇಷ್ಠ! ಅದೃಷ್ಠವಶಾತ್, ನಿನ್ನ ಹಸುಗಳನ್ನು ಗೆದ್ದುಕೊಂಡದ್ದಾಯಿತು. ಕೌರವರನ್ನು ಸೋಲಿಸಿದ್ದಾಯಿತು? ಅದೃಷ್ಠವಶಾತ್ ನಿನ್ನ ಮಗನು ಬದುಕಿದ್ದಾನೆಂದು ಕೇಳುತ್ತಿದ್ದೇವೆ.

04063021a ನಾದ್ಭುತಂ ತ್ವೇವ ಮನ್ಯೇಽಹಂ ಯತ್ತೇ ಪುತ್ರೋಽಜಯತ್ಕುರೂನ್|

04063021c ಧ್ರುವ ಏವ ಜಯಸ್ತಸ್ಯ ಯಸ್ಯ ಯಂತಾ ಬೃಹನ್ನಡಾ||

ನಿನ್ನ ಮಗನು ಕೌರವರನ್ನು ಗೆದ್ದುದು ಅದ್ಭುತವೆಂದು ನಾನು ಭಾವಿಸುವುದಿಲ್ಲ. ಬೃಹನ್ನಡೆಯನ್ನು ಸಾರಥಿಯಾಗಿ ಉಳ್ಳ ಯಾರಿಗಾದರೂ ಜಯವು ಕಟ್ಟಿಟ್ಟದ್ದು.””

04063022 ವೈಶಂಪಾಯನ ಉವಾಚ|

04063022a ತತೋ ವಿರಾಟೋ ನೃಪತಿಃ ಸಂಪ್ರಹೃಷ್ಟತನೂರುಹಃ|

04063022c ಶ್ರುತ್ವಾ ತು ವಿಜಯಂ ತಸ್ಯ ಕುಮಾರಸ್ಯಾಮಿತೌಜಸಃ|

04063022e ಆಚ್ಛಾದಯಿತ್ವಾ ದೂತಾಂಸ್ತಾನ್ಮಂತ್ರಿಣಃ ಸೋಽಭ್ಯಚೋದಯತ್||

ವೈಶಂಪಾನನು ಹೇಳಿದನು: “ಆಗ ಆ ಅಮಿತ ಬಲಶಾಲಿ ಮಗನ ಗೆಲುವನ್ನು ಕೇಳಿದ ವಿರಾಟರಾಜನು ಹರ್ಷಪುಲಕಿತನಾಗಿ ದೂತರಿಗೆ ಉಡುಗೊರೆ ಕೊಟ್ಟು ಮಂತ್ರಿಗಳಿಗೆ ಆಜ್ಞಾಪಿಸಿದನು.

04063023a ರಾಜಮಾರ್ಗಾಃ ಕ್ರಿಯಂತಾಂ ಮೇ ಪತಾಕಾಭಿರಲಂಕೃತಾಃ|

04063023c ಪುಷ್ಪೋಪಹಾರೈರರ್ಚ್ಯಂತಾಂ ದೇವತಾಶ್ಚಾಪಿ ಸರ್ವಶಃ||

“ರಾಜಮಾರ್ಗಗಳು ಬಾವುಟಗಳಿಂದ ಅಲಂಕೃತವಾಗಲಿ. ಎಲ್ಲ ದೇವತೆಗಳೂ ಹೂ ಕಾಣಿಕೆಗಳಿಂದ ಅರ್ಚಿತಗೊಳ್ಳಲಿ.

04063024a ಕುಮಾರಾ ಯೋಧಮುಖ್ಯಾಶ್ಚ ಗಣಿಕಾಶ್ಚ ಸ್ವಲಂಕೃತಾಃ|

04063024c ವಾದಿತ್ರಾಣಿ ಚ ಸರ್ವಾಣಿ ಪ್ರತ್ಯುದ್ಯಾಂತು ಸುತಂ ಮಮ||

ರಾಜಕುಮಾರರೂ, ಯೋಧ ಮುಖ್ಯರೂ, ವೇಶ್ಯೆಯರೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಎಲ್ಲ ವಾದ್ಯಗಳೊಂದಿಗೆ ನನ್ನ ಮಗನನ್ನು ಎದಿರುಗೊಳ್ಳಲಿ.

04063025a ಘಂಟಾಪಣವಕಃ ಶೀಘ್ರಂ ಮತ್ತಮಾರುಹ್ಯ ವಾರಣಂ|

04063025c ಶೃಂಗಾಟಕೇಷು ಸರ್ವೇಷು ಆಖ್ಯಾತು ವಿಜಯಂ ಮಮ||

ಘಂಟೆ ಬಾರಿಸುವವನು ಬೇಗ ಮದಗಜವನ್ನೇರಿ ನಾಲ್ಕು ದಾರಿಗಳು ಸೇರುವಡೆಗಳಲ್ಲೆಲ್ಲ ನನ್ನ ವಿಜಯವನ್ನು ಸಾರಲಿ.

04063026a ಉತ್ತರಾ ಚ ಕುಮಾರೀಭಿರ್ಬಹ್ವೀಭಿರಭಿಸಂವೃತಾ|

04063026c ಶೃಂಗಾರವೇಷಾಭರಣಾ ಪ್ರತ್ಯುದ್ಯಾತು ಬೃಹನ್ನಡಾಂ||

ಉತ್ತರೆಯೂ ಬಹುಮಂದಿ ಕುಮಾರಿಯರೊಡಗೂಡಿ ಶೃಂಗಾರ ವೇಷಾಭರಣಗಳನ್ನು ಧರಿಸಿ ಬೃಹನ್ನಡೆಯನ್ನು ಎದುರುಗೊಳ್ಳಲಿ.”

04063027a ಶ್ರುತ್ವಾ ತು ತದ್ವಚನಂ ಪಾರ್ಥಿವಸ್ಯ|

         ಸರ್ವೇ ಪುನಃ ಸ್ವಸ್ತಿಕಪಾಣಯಶ್ಚ|

04063027c ಭೇರ್ಯಶ್ಚ ತೂರ್ಯಾಣಿ ಚ ವಾರಿಜಾಶ್ಚ|

         ವೇಷೈಃ ಪರಾರ್ಧ್ಯೈಃ ಪ್ರಮದಾಃ ಶುಭಾಶ್ಚ||

04063028a ತಥೈವ ಸೂತಾಃ ಸಹ ಮಾಗಧೈಶ್ಚ|

         ನಂದೀವಾದ್ಯಾಃ ಪಣವಾಸ್ತೂರ್ಯವಾದ್ಯಾಃ|

04063028c ಪುರಾದ್ವಿರಾಟಸ್ಯ ಮಹಾಬಲಸ್ಯ|

         ಪ್ರತ್ಯುದ್ಯಯುಃ ಪುತ್ರಮನಂತವೀರ್ಯಂ||

ರಾಜನ ಆ ಮಾತುಗಳನ್ನು ಕೇಳಿ ಮಂಗಳದ್ರವ್ಯಗಳನ್ನು ಕೈಯಲ್ಲಿ ಹಿಡಿದುಕೊಂಡು, ಭೇರಿ ತೂರ್ಯ, ಶಂಖಗಳಿಂದೊಡಗೂಡಿದ ಎಲ್ಲ ಪ್ರಜೆಗಳೂ, ಶ್ರೇಷ್ಠ ವಸ್ತ್ರಗಳನ್ನು ಧರಿಸಿದ ಶುಭಾಂಗಿ ಪ್ರಮದೆಯರೂ, ಅಂತೆಯೇ ನಂದೀವಾದ್ಯ ಪಣವ ತೂರ್ಯ ವಾದ್ಯಗಳಿಂದೊಡಗೂಡಿದ ಸೂತ ಮಾಗಧರೂ, ಮಹಾಬಲಶಾಲಿಗಳೂ ವಿರಾಟನ ನಗರದಿಂದ ಹೊರಟು ಅನಂತ ಪರಾಕ್ರಾಮಶಾಲಿ ವಿರಾಟಪುತ್ರನನ್ನು ಎದಿರುಗೊಂಡರು.

04063029a ಪ್ರಸ್ಥಾಪ್ಯ ಸೇನಾಂ ಕನ್ಯಾಶ್ಚ ಗಣಿಕಾಶ್ಚ ಸ್ವಲಂಕೃತಾಃ|

04063029c ಮತ್ಸ್ಯರಾಜೋ ಮಹಾಪ್ರಾಜ್ಞಃ ಪ್ರಹೃಷ್ಟ ಇದಮಬ್ರವೀತ್|

04063029e ಅಕ್ಷಾನಾಹರ ಸೈರಂಧ್ರಿ ಕಂಕ ದ್ಯೂತಂ ಪ್ರವರ್ತತಾಂ||

ಸೈನ್ಯವನ್ನೂ, ಚೆನ್ನಾಗಿ ಅಲಂಕಾರ ಮಾಡಿಕೊಂಡ ಕನ್ಯೆಯರು ಮತ್ತು ವೇಶ್ಯೆಯರನ್ನು ಕಳುಹಿಸಿ ಮಹಾಪ್ರಾಜ್ಞ ಮತ್ಸ್ಯರಾಜನು ಸಂತೋಷದಿಂದ ಹೀಗೆಂದನು: “ಸೈರಂಧ್ರಿ! ಪಗಡೆಕಾಯಿಗಳನ್ನು ತೆಗೆದುಕೊಂಡು ಬಾ. ಕಂಕ! ಪಗಡೆಯಾಟವು ನಡೆಯಲಿ!”

04063030a ತಂ ತಥಾ ವಾದಿನಂ ದೃಷ್ಟ್ವಾ ಪಾಂಡವಃ ಪ್ರತ್ಯಭಾಷತ|

04063030c ನ ದೇವಿತವ್ಯಂ ಹೃಷ್ಟೇನ ಕಿತವೇನೇತಿ ನಃ ಶ್ರುತಂ||

ಹಾಗೆ ಹೇಳಿದ ಅವನನ್ನು ನೋಡಿ ಯುಧಿಷ್ಠಿರನು ಮರುನುಡಿದನು. “ಹರ್ಷಿತನಾಗಿರುವ ಜೂಜುಗಾರನೊಂದಿಗೆ ಆಟವಾಡಬಾರದೆಂದು ಕೇಳಿದ್ದೇವೆ.

04063031a ನ ತ್ವಾಮದ್ಯ ಮುದಾ ಯುಕ್ತಮಹಂ ದೇವಿತುಮುತ್ಸಹೇ|

04063031c ಪ್ರಿಯಂ ತು ತೇ ಚಿಕೀರ್ಷಾಮಿ ವರ್ತತಾಂ ಯದಿ ಮನ್ಯಸೇ||

ಈಗ ಸಂತೋಷಭರಿತನಾಗಿರುವ ನಿನ್ನೊಡನೆ ಆಟವಾಡಲು ನನಗೆ ಮನಸ್ಸಿಲ್ಲ. ಆದರೂ ನಿನಗೆ ಪ್ರಿಯವನ್ನುಂಟುಮಾಡಲು ಬಯಸುತ್ತೇನೆ. ನಿನಗೆ ಇಷ್ಟವಿದ್ದರೆ ಆಟ ನಡೆಯಲಿ.”

04063032 ವಿರಾಟ ಉವಾಚ|

04063032a ಸ್ತ್ರಿಯೋ ಗಾವೋ ಹಿರಣ್ಯಂ ಚ ಯಚ್ಚಾನ್ಯದ್ವಸು ಕಿಂ ಚನ|

04063032c ನ ಮೇ ಕಿಂ ಚಿತ್ತ್ವಯಾ ರಕ್ಷ್ಯಮಂತರೇಣಾಪಿ ದೇವಿತುಂ||

ವಿರಾಟನು ಹೇಳಿದನು: “ನಾನು ಆಟವಾಡದಿದ್ದರೂ ನನ್ನ ಸ್ತ್ರೀಯರು, ಗೋವುಗಳು, ಚಿನ್ನ ಮತ್ತು ಇತರ ಐಶ್ವರ್ಯಗಳನ್ನು ಏನನ್ನೂ ನೀನು ರಕ್ಷಿಸಲಾರೆ.”

04063033 ಕಂಕ ಉವಾಚ|

04063033a ಕಿಂ ತೇ ದ್ಯೂತೇನ ರಾಜೇಂದ್ರ ಬಹುದೋಷೇಣ ಮಾನದ|

04063033c ದೇವನೇ ಬಹವೋ ದೋಷಾಸ್ತಸ್ಮಾತ್ತತ್ಪರಿವರ್ಜಯೇತ್||

ಕಂಕನು ಹೇಳಿದನು: “ರಾಜೇಂದ್ರ! ಮಾನದ! ಬಹುದೋಷಪೂರಿತ ಜೂಜಿನಿಂದ ನಿನಗೇನು ಪ್ರಯೋಜನ? ಜೂಜಾಟದಲ್ಲಿ ಬಹಳ ಕೆಡಕುಗಳಿವೆ. ಆದ್ದರಿಂದ ಅದನ್ನು ಬಿಡಬೇಕು.

04063034a ಶ್ರುತಸ್ತೇ ಯದಿ ವಾ ದೃಷ್ಟಃ ಪಾಂಡವೋ ವೈ ಯುಧಿಷ್ಠಿರಃ|

04063034c ಸ ರಾಜ್ಯಂ ಸುಮಹತ್ಸ್ಫೀತಂ ಭ್ರಾತೄಂಶ್ಚ ತ್ರಿದಶೋಪಮಾನ್||

04063035a ದ್ಯೂತೇ ಹಾರಿತವಾನ್ಸರ್ವಂ ತಸ್ಮಾದ್ದ್ಯೂತಂ ನ ರೋಚಯೇ|

04063035c ಅಥ ವಾ ಮನ್ಯಸೇ ರಾಜನ್ದೀವ್ಯಾವ ಯದಿ ರೋಚತೇ||

ಪಾಂಡುಪುತ್ರ ಯುಧಿಷ್ಠಿರನ ವಿಷಯವನ್ನು ನೀನು ಕೇಳಿರಬಹುದು. ಅವನು ಸಮೃದ್ಧ ರಾಜ್ಯವನ್ನೂ, ದೇವತೆಗಳಂಥ ಸೋದರರನ್ನೂ, ಸರ್ವಸ್ವವನ್ನೂ ಜೂಜಿನಲ್ಲಿ ಕಳೆದುಕೊಂಡನು. ಆದ್ದರಿಂದ ಜೂಜು ನಿನಗೆ ಹಿಡಿಸದು. ಆಡಲೇಬೇಕೆಂದು ನೀನು ಇಷ್ಟಪಟ್ಟರೆ ಆಡೋಣ.””

04063036 ವೈಶಂಪಾಯನ ಉವಾಚ|

04063036a ಪ್ರವರ್ತಮಾನೇ ದ್ಯೂತೇ ತು ಮತ್ಸ್ಯಃ ಪಾಂಡವಮಬ್ರವೀತ್|

04063036c ಪಶ್ಯ ಪುತ್ರೇಣ ಮೇ ಯುದ್ಧೇ ತಾದೃಶಾಃ ಕುರವೋ ಜಿತಾಃ||

ವೈಶಂಪಾಯನನು ಹೇಳಿದನು: “ಜೂಜಾಟವು ನಡೆಯುತ್ತಿರಲು ವಿರಾಟನು ಯುದಿಷ್ಠಿರನಿಗೆ ಹೇಳಿದನು: “ನೋಡು! ಯುದ್ಧದಲ್ಲಿ ನನ್ನ ಮಗನಿಗೆ ಅಂತಹ ಕೌರವರು ಸೋತುಹೋದರು.”

04063037a ತತೋಽಬ್ರವೀನ್ಮತ್ಸ್ಯರಾಜಂ ಧರ್ಮಪುತ್ರೋ ಯುಧಿಷ್ಠಿರಃ|

04063037c ಬೃಹನ್ನಡಾ ಯಸ್ಯ ಯಂತಾ ಕಥಂ ಸ ನ ವಿಜೇಷ್ಯತಿ||

ಆಗ ಧರ್ಮಪುತ್ರ ಯುಧಿಷ್ಠಿರನು ಮತ್ಸ್ಯರಾಜನಿಗೆ ಹೇಳಿದನು: “ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡ ಯಾವನು ತಾನೇ ಗೆಲ್ಲದಿರುವುದು ಸಾಧ್ಯ?”

04063038a ಇತ್ಯುಕ್ತಃ ಕುಪಿತೋ ರಾಜಾ ಮತ್ಸ್ಯಃ ಪಾಂಡವಮಬ್ರವೀತ್|

04063038c ಸಮಂ ಪುತ್ರೇಣ ಮೇ ಷಂಢಂ ಬ್ರಹ್ಮಬಂಧೋ ಪ್ರಶಂಸಸಿ||

ಹೀಗೆನ್ನಲು ಕುಪಿತನಾದ ಮತ್ಸ್ಯರಾಜನು ಯುಧಿಷ್ಠಿರನಿಗೆ ಹೇಳಿದನು: “ಬ್ರಾಹ್ಮಣಾಧಮ! ನಪುಂಸಕನನ್ನು ನನ್ನ ಮಗನಿಗೆ ಸಮಾನವಾಗಿ ಹೊಗಳುತ್ತಿರುವೆಯಲ್ಲ?

04063039a ವಾಚ್ಯಾವಾಚ್ಯಂ ನ ಜಾನೀಷೇ ನೂನಂ ಮಾಮವಮನ್ಯಸೇ|

04063039c ಭೀಷ್ಮದ್ರೋಣಮುಖಾನ್ಸರ್ವಾನ್ಕಸ್ಮಾನ್ನ ಸ ವಿಜೇಷ್ಯತಿ||

ಯಾವುದನ್ನು ಆಡಬೇಕು ಯಾವುದನ್ನು ಆಡಬಾರದು ಎಂಬುದೇ ನಿನಗೆ ಗೊತ್ತಿಲ್ಲ. ನೀನು ನನ್ನನ್ನು ಅವಮಾನಿಸುತ್ತಿದ್ದೀಯೆ. ಭೀಷ್ಮ-ದ್ರೋಣಗಳಾದಿಗಳನ್ನೆಲ್ಲ ಅವನೇಕೆ ಜಯಿಸಬಾರದು?

04063040a ವಯಸ್ಯತ್ವಾತ್ತು ತೇ ಬ್ರಹ್ಮನ್ನಪರಾಧಮಿಮಂ ಕ್ಷಮೇ|

04063040c ನೇದೃಶಂ ತೇ ಪುನರ್ವಾಚ್ಯಂ ಯದಿ ಜೀವಿತುಮಿಚ್ಛಸಿ||

ಬ್ರಾಹ್ಮಣ! ಸ್ನೇಹದಿಂದ ನಿನ್ನ ಈ ಅಪರಾಧವನ್ನು ಕ್ಷಮಿಸುತ್ತಿದ್ದೇನೆ. ನಿನಗೆ ಬದುಕುವ ಆಸೆಯಿದ್ದರೆ ಮತ್ತೆ ಹೀಗೆ ನೀನು ಮಾತನಾಡಬಾರದು.”

04063041 ಯುಧಿಷ್ಠಿರ ಉವಾಚ|

04063041a ಯತ್ರ ದ್ರೋಣಸ್ತಥಾ ಭೀಷ್ಮೋ ದ್ರೌಣಿರ್ವೈಕರ್ತನಃ ಕೃಪಃ|

04063041c ದುರ್ಯೋಧನಶ್ಚ ರಾಜೇಂದ್ರ ತಥಾನ್ಯೇ ಚ ಮಹಾರಥಾಃ||

04063042a ಮರುದ್ಗಣೈಃ ಪರಿವೃತಃ ಸಾಕ್ಷಾದಪಿ ಶತಕ್ರತುಃ|

04063042c ಕೋಽನ್ಯೋ ಬೃಹನ್ನಡಾಯಾಸ್ತಾನ್ಪ್ರತಿಯುಧ್ಯೇತ ಸಂಗತಾನ್||

ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ದ್ರೋಣ, ಬೀಷ್ಮ, ಅಶ್ವತ್ಥಾಮ, ಕರ್ಣ, ಕೃಪ, ದುರ್ಯೋಧನ ಮತ್ತು ಇತರ ಮಹಾರಥಿಗಳು ಇರುವಲ್ಲಿ ಅಥವಾ ದೇವತೆಗಳಿಂದೊಡಗೂಡಿದ ಸ್ವತಃ ಇಂದ್ರನೇ ಇರುವಲ್ಲಿ, ಬೃಹನ್ನಡೆಯು ಹೊರತು ಮತ್ತ್ಯಾರು ಅವರೆಲ್ಲರೊಡನೆ ಯುದ್ಧಮಾಡಬಲ್ಲರು?”

04063043 ವಿರಾಟ ಉವಾಚ|

04063043a ಬಹುಶಃ ಪ್ರತಿಷಿದ್ಧೋಽಸಿ ನ ಚ ವಾಚಂ ನಿಯಚ್ಛಸಿ|

04063043c ನಿಯಂತಾ ಚೇನ್ನ ವಿದ್ಯೇತ ನ ಕಶ್ಚಿದ್ಧರ್ಮಮಾಚರೇತ್||

ವಿರಾಟನು ಹೇಳಿದನು: “ಮತ್ತೆ ಮತ್ತೆ ನಾನು ನಿಷೇದಿಸಿದರೂ ನೀನು ಮಾತನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಿಲ್ಲ. ನಿಯಂತ್ರಕನಿಲ್ಲದಿದ್ದರೆ ಯಾರೂ ಧರ್ಮವನ್ನು ಆಚರಿಸುವುದಿಲ್ಲ.””

04063044 ವೈಶಂಪಾಯನ ಉವಾಚ|

04063044a ತತಃ ಪ್ರಕುಪಿತೋ ರಾಜಾ ತಮಕ್ಷೇಣಾಹನದ್ಭೃಶಂ|

04063044c ಮುಖೇ ಯುಧಿಷ್ಠಿರಂ ಕೋಪಾನ್ನೈವಮಿತ್ಯೇವ ಭರ್ತ್ಸಯನ್||

ವೈಶಂಪಾಯನನು ಹೇಳಿದನು: “ಬಳಿಕ ರೋಷಗೊಂಡ ರಾಜನು “ಮತ್ತೆ ಹೀಗಾಗಕೂಡದು!” ಎಂದು ಗದರಿಸುತ್ತಾ ಕೋಪದಿಂದ ಯುಧಿಷ್ಠಿರನ ಮುಖಕ್ಕೆ ಬಲವಾಗಿ ದಾಳಗಳಿಂದ ಹೊಡೆದನು.

04063045a ಬಲವತ್ಪ್ರತಿವಿದ್ಧಸ್ಯ ನಸ್ತಃ ಶೋಣಿತಮಾಗಮತ್|

04063045c ತದಪ್ರಾಪ್ತಂ ಮಹೀಂ ಪಾರ್ಥಃ ಪಾಣಿಭ್ಯಾಂ ಪ್ರತ್ಯಗೃಹ್ಣತ||

ಬಲವಾಗಿ ಪೆಟ್ಟುತಿಂದ ಅವನ ಮೂಗಿನಿಂದ ರಕ್ತ ಬಂದಿತು. ಅದು ನೆಲಕ್ಕೆ ಬೀಳುವ ಮುನ್ನವೇ ಯುಧಿಷ್ಠಿರನು ಅದನ್ನು ಕೈಗಳಲ್ಲಿ ಹಿಡಿದುಕೊಂಡನು.

04063046a ಅವೈಕ್ಷತ ಚ ಧರ್ಮಾತ್ಮಾ ದ್ರೌಪದೀಂ ಪಾರ್ಶ್ವತಃ ಸ್ಥಿತಾಂ|

04063046c ಸಾ ವೇದ ತಮಭಿಪ್ರಾಯಂ ಭರ್ತುಶ್ಚಿತ್ತವಶಾನುಗಾ||

ಆ ಧರ್ಮಾತ್ಮನು ಪಕ್ಕದಲ್ಲಿ ನಿಂತಿದ್ದ ದ್ರೌಪದಿಯತ್ತ ನೊಡಿದನು. ಪತಿಯ ಇಷ್ಟಾನುಸಾರ ವರ್ತಿಸುವ ಅವಳು ಅವನ ಅಭಿಪ್ರಾಯವನ್ನು ಅರಿತುಕೊಂಡಳು.

04063047a ಪೂರಯಿತ್ವಾ ಚ ಸೌವರ್ಣಂ ಪಾತ್ರಂ ಕಾಂಸ್ಯಮನಿಂದಿತಾ|

04063047c ತಚ್ಚೋಣಿತಂ ಪ್ರತ್ಯಗೃಹ್ಣಾದ್ಯತ್ಪ್ರಸುಸ್ರಾವ ಪಾಂಡವಾತ್||

ಆ ದೋಷರಹಿತೆಯು ಯುಧಿಷ್ಠಿರನ ಮೂಗಿನಿಂದ ಸುರಿಯುತ್ತಿದ್ದ ರಕ್ತವನ್ನು ನೀರು ತುಂಬಿದ ಚಿನ್ನದ ಪಾನಪಾತ್ರೆಯಲ್ಲಿ ಹಿಡಿದಳು.

04063048a ಅಥೋತ್ತರಃ ಶುಭೈರ್ಗಂಧೈರ್ಮಾಲ್ಯೈಶ್ಚ ವಿವಿಧೈಸ್ತಥಾ|

04063048c ಅವಕೀರ್ಯಮಾಣಃ ಸಂಹೃಷ್ಟೋ ನಗರಂ ಸ್ವೈರಮಾಗಮತ್||

ಆಗ ಜನರು ಮಂಗಳಕರ ಗಂಧಗಳನ್ನೂ ಬಗೆಬಗೆಯು ಮಾಲೆಗಳನ್ನೂ ಎರಚುತ್ತಿರಲು ಉತ್ತರನು ಹರ್ಷಚಿತ್ತನಾಗಿ ಸಲೀಲವಾಗಿ ನಗರಕ್ಕೆ ಬಂದನು.

04063049a ಸಭಾಜ್ಯಮಾನಃ ಪೌರೈಶ್ಚ ಸ್ತ್ರೀಭಿರ್ಜಾನಪದೈಸ್ತಥಾ|

04063049c ಆಸಾದ್ಯ ಭವನದ್ವಾರಂ ಪಿತ್ರೇ ಸ ಪ್ರತ್ಯಹಾರಯತ್||

ಹೆಂಗಸರಿಂದಲೂ, ಪಟ್ಟಣಿಗರಿಂದಲೂ, ಹಳ್ಳಿಗರಿಂದಲೂ ಹಾಗೆ ಸನ್ಮಾನಿತನಾದ ಅವನು ಅರಮನೆಯ ಬಾಗಿಲಿಗೆ ಬಂದು ತಂದೆಗೆ ಹೇಳಿ ಕಳುಹಿಸಿದನು.

04063050a ತತೋ ದ್ವಾಃಸ್ಥಃ ಪ್ರವಿಶ್ಯೈವ ವಿರಾಟಮಿದಮಬ್ರವೀತ್|

04063050c ಬೃಹನ್ನಡಾಸಹಾಯಸ್ತೇ ಪುತ್ರೋ ದ್ವಾರ್ಯುತ್ತರಃ ಸ್ಥಿತಃ||

ಆಗ ದ್ವಾರಪಾಲಕನು ಒಳಗೆ ಹೋಗಿ ವಿರಾಟನಿಗೆ ಹೀಗೆಂದನು: “ನಿನ್ನ ಮಗ ಉತ್ತರನು ಬೃಹನ್ನಡೆಯೊಡಗೂಡಿ ಬಾಗಿಲಲ್ಲಿ ನಿಂತಿದ್ದಾನೆ.”

04063051a ತತೋ ಹೃಷ್ಟೋ ಮತ್ಸ್ಯರಾಜಃ ಕ್ಷತ್ತಾರಮಿದಮಬ್ರವೀತ್|

04063051c ಪ್ರವೇಶ್ಯತಾಮುಭೌ ತೂರ್ಣಂ ದರ್ಶನೇಪ್ಸುರಹಂ ತಯೋಃ||

ಆಗ ಹರ್ಷಿತ ಮತ್ಸ್ಯರಾಜನು ದ್ವಾರಪಾಲಕನಿಗೆ ಹೀಗೆ ಹೇಳಿದನು: “ಇಬ್ಬರನ್ನೂ ಬೇಗ ಕರೆದು ತಾ. ಅವರನ್ನು ನೋಡಲು ನಾನು ಕಾತರನಾಗಿದ್ದೇನೆ.”

04063052a ಕ್ಷತ್ತಾರಂ ಕುರುರಾಜಸ್ತು ಶನೈಃ ಕರ್ಣ ಉಪಾಜಪತ್|

04063052c ಉತ್ತರಃ ಪ್ರವಿಶತ್ವೇಕೋ ನ ಪ್ರವೇಶ್ಯಾ ಬೃಹನ್ನಡಾ||

ಆಗ ದ್ವಾರಪಾಲಕನ ಕಿವಿಯಲ್ಲಿ ಕುರುರಾಜ ಯುಧಿಷ್ಠಿರನು ಪಿಸುಗುಟ್ಟಿದನು: “ಉತ್ತರನೊಬ್ಬನೇ ಒಳಬರಲಿ. ಬೃಹನ್ನಡೆಯನ್ನು ಒಳಗೆ ಬಿಡಬೇಡ.

04063053a ಏತಸ್ಯ ಹಿ ಮಹಾಬಾಹೋ ವ್ರತಮೇತತ್ಸಮಾಹಿತಂ|

04063053c ಯೋ ಮಮಾಂಗೇ ವ್ರಣಂ ಕುರ್ಯಾಚ್ಚೋಣಿತಂ ವಾಪಿ ದರ್ಶಯೇತ್|

04063053e ಅನ್ಯತ್ರ ಸಂಗ್ರಾಮಗತಾನ್ನ ಸ ಜೀವೇದಸಂಶಯಂ||

ಮಹಾಬಾಹೋ! ಬೃಹನ್ನಡೆಯು ಕೈಗೊಂಡಿರುವ ಪ್ರತಿಜ್ಞೆಯಿದು. ಯುದ್ಧವಲ್ಲದೇ ಬೇರೆ ಸಂದರ್ಭದಲ್ಲಿ ನನ್ನ ಶರೀರದಲ್ಲಿ ಗಾಯವನ್ನುಂಟುಮಾಡುವವನು ಅಥವಾ ರಕ್ತ ಬರಿಸುವವನು ಖಂಡಿತ ಬದುಕಲಾರ.

04063054a ನ ಮೃಷ್ಯಾದ್ಭೃಶಸಂಕ್ರುದ್ಧೋ ಮಾಂ ದೃಷ್ಟ್ವೈವ ಸಶೋಣಿತಂ|

04063054c ವಿರಾಟಮಿಹ ಸಾಮಾತ್ಯಂ ಹನ್ಯಾತ್ಸಬಲವಾಹನಂ||

ನೆತ್ತರುಗೂಡಿದ ನನ್ನನ್ನು ನೋಡಿದ ಮಾತ್ರಕ್ಕೆ ತಾಳ್ಮೆಗೆಟ್ಟು ಬಹಳ ಕೋಪಗೊಂಡು ವಿರಾಟನನ್ನು ಅವನ ಮಂತ್ರಿಗಳು ಸೇನೆ ಹಾಗೂ ವಾಹನಸಮೇತ ಕೊಂದುಬಿಡುವನು.””

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ಉತ್ತರಾಗಮನೇ ತ್ರಿಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ಉತ್ತರಾಗಮನದಲ್ಲಿ ಅರವತ್ಮೂರನೆಯ ಅಧ್ಯಾಯವು.

Related image

Comments are closed.