Virata Parva: Chapter 38

ವಿರಾಟ ಪರ್ವ: ಗೋಹರಣ ಪರ್ವ

೩೮

ಶಮೀವೃಕ್ಷದಿಂದ ಆಯುಧಗಳನ್ನು ಹಿಂತೆಗೆದುಕೊಂಡಿದ್ದುದು

ಬನ್ನೀ ಮರವನ್ನು ಹತ್ತಿ ಪಾಂಡವರ ಆಯುಧಗಳನ್ನು ಕೆಳಗಿಳಿಸೆಂದು ಬೃಹನ್ನಡೆಯು ಉತ್ತರನಿಗೆ ಹೇಳಿದುದು (೧-೮). ಬಹಳ ಒತ್ತಾಯದ ನಂತರ ಉತ್ತರನು ಮರವನ್ನು ಹತ್ತಿ ಕಟ್ಟನ್ನು ಕಳಚಿ ಹೊಳೆಯುತ್ತಿರುವ ದೊಡ್ಡ ಬಿಲ್ಲುಗಳನ್ನು ನೋಡಿ ಭಯೋದ್ವಿಗ್ನನಾದುದು (೯-೧೯). ಅಲ್ಲಿದ್ದ ಪ್ರತಿಯೊಂದು ಆಯುಧವೂ ಯಾರದ್ದೆಂದು ಬೃಹನ್ನಡೆಯನ್ನು ಕೇಳಿದುದು (೨೦-೩೫). ಬೃಹನ್ನಡೆಯು ಪ್ರತಿಯೊಂದು ಆಯುಧವೂ ಯಾರದ್ದೆಂದು ಉತ್ತರನಿಗೆ ಪರಿಚಯಿಸುವುದು (೩೬-೫೮).

04038001 ವೈಶಂಪಾಯನ ಉವಾಚ|

04038001a ತಾಂ ಶಮೀಮುಪಸಂಗಮ್ಯ ಪಾರ್ಥೋ ವೈರಾಟಿಮಬ್ರವೀತ್|

04038001c ಸುಕುಮಾರಂ ಸಮಾಜ್ಞಾತಂ ಸಂಗ್ರಾಮೇ ನಾತಿಕೋವಿದಂ||

ವೈಶಂಪಾಯನನು ಹೇಳಿದನು: “ಪಾರ್ಥನು ಆ ಬನ್ನೀಮರವನ್ನು ತಲುಪಿ ಉತ್ತರನು ಸುಕುಮಾರನೆಂದೂ ಯುದ್ಧದಲ್ಲಿ ಬಹಳ ಕೋವಿದನಲ್ಲವೆಂದೂ ಅರಿತು ಆ ವಿರಾಟಪುತ್ರನಿಗೆ ನುಡಿದನು:

04038002a ಸಮಾದಿಷ್ಟೋ ಮಯಾ ಕ್ಷಿಪ್ರಂ ಧನೂಂಷ್ಯವಹರೋತ್ತರ|

04038002c ನೇಮಾನಿ ಹಿ ತ್ವದೀಯಾನಿ ಸೋಢುಂ ಶಕ್ಷ್ಯಂತಿ ಮೇ ಬಲಂ||

04038003a ಭಾರಂ ವಾಪಿ ಗುರುಂ ಹರ್ತುಂ ಕುಂಜರಂ ವಾ ಪ್ರಮರ್ದಿತುಂ|

04038003c ಮಮ ವಾ ಬಾಹುವಿಕ್ಷೇಪಂ ಶತ್ರೂನಿಹ ವಿಜೇಷ್ಯತಃ||

ಉತ್ತರ! ನನ್ನ ಆದೇಶದಂತೆ ನೀನು ಬಿಲ್ಲುಗಳನ್ನು ಬೇಗ ಮರದಿಂದ ತೆಗೆದು ಕೊಂಡು ಬಾ. ನಿನ್ನ ಈ ಬಿಲ್ಲುಗಳು ನನ್ನ ಬಲವನ್ನು ತಡೆದುಕೊಳ್ಳಲು ಶಕ್ತವಾಗಿಲ್ಲ. ಇವು ಶತ್ರುಗಳನ್ನು ಗೆಲ್ಲುವಾಗ ಮಹಾಭಾರವನ್ನು ಹೊರಲಾಗಲಿ ಆನೆಯನ್ನು ಕೊಲ್ಲಲಾಗಲೀ ನನ್ನ ತೋಳುಬೀಸನ್ನಾಗಲೀ ತಾಳಿಕೊಳ್ಳಲು ಸಮರ್ಥವಲ್ಲ.

04038004a ತಸ್ಮಾದ್ಭೂಮಿಂಜಯಾರೋಹ ಶಮೀಮೇತಾಂ ಪಲಾಶಿನೀಂ|

04038004c ಅಸ್ಯಾಂ ಹಿ ಪಾಂಡುಪುತ್ರಾಣಾಂ ಧನೂಂಷಿ ನಿಹಿತಾನ್ಯುತ||

04038005a ಯುಧಿಷ್ಠಿರಸ್ಯ ಭೀಮಸ್ಯ ಬೀಭತ್ಸೋರ್ಯಮಯೋಸ್ತಥಾ|

04038005c ಧ್ವಜಾಃ ಶರಾಶ್ಚ ಶೂರಾಣಾಂ ದಿವ್ಯಾನಿ ಕವಚಾನಿ ಚ||

ಆದ್ದರಿಂದ ಭೂಮಿಂಜಯ! ದಟ್ಟವಾದ ಎಲೆಗಳಿರುವ ಈ ಬನ್ನಿಮರವನ್ನು ಹತ್ತು. ಇದರಲ್ಲಿ ಶೂರ ಪಾಂಡುಪುತ್ರರ - ಯುಧಿಷ್ಠಿರ, ಭೀಮ, ಅರ್ಜುನ ಮತ್ತು ಯಮಳರ - ಬಿಲ್ಲು, ಬಾಣ, ಬಾವುಟ ಹಾಗೂ ದಿವ್ಯ ಕವಚಗಳನ್ನು ಅಡಗಿಸಿಡಲಾಗಿದೆ.

04038006a ಅತ್ರ ಚೈತನ್ಮಹಾವೀರ್ಯಂ ಧನುಃ ಪಾರ್ಥಸ್ಯ ಗಾಂಡಿವಂ|

04038006c ಏಕಂ ಶತಸಹಸ್ರೇಣ ಸಮ್ಮಿತಂ ರಾಷ್ಟ್ರವರ್ಧನಂ||

ಅಲ್ಲಿ ಮಹಾಸತ್ವವುಳ್ಳ, ಒಂದೇ ಆದರೂ ಲಕ್ಷಬಿಲ್ಲುಗಳಿಗೆ ಸಮನಾದ, ರಾಷ್ಟ್ರವರ್ಧನಕರವಾದ ಪಾರ್ಥನ ಗಾಂಡೀವಧನುವಿದೆ.

04038007a ವ್ಯಾಯಾಮಸಹಮತ್ಯರ್ಥಂ ತೃಣರಾಜಸಮಂ ಮಹತ್|

04038007c ಸರ್ವಾಯುಧಮಹಾಮಾತ್ರಂ ಶತ್ರುಸಂಬಾಧಕಾರಕಂ||

ಅದು ಒತ್ತಡವನ್ನು ಚೆನ್ನಾಗಿ ತಡೆದುಕೊಳ್ಳಬಲ್ಲದು. ತಾಳೆ ಮರದಂತೆ ದೊಡ್ಡದು. ಎಲ್ಲ ಆಯುಧಗಳಿಗಿಂತಲೂ ಬೃಹತ್ತಾದದು, ಶತ್ರುಗಳಿಗೆ ಬಾಧೆಯುಂಟು ಮಾಡುವಂಥದು.

04038008a ಸುವರ್ಣವಿಕೃತಂ ದಿವ್ಯಂ ಶ್ಲಕ್ಷ್ಣಮಾಯತಮವ್ರಣಂ|

04038008c ಅಲಂ ಭಾರಂ ಗುರುಂ ವೋಢುಂ ದಾರುಣಂ ಚಾರುದರ್ಶನಂ|

04038008e ತಾದೃಶಾನ್ಯೇವ ಸರ್ವಾಣಿ ಬಲವಂತಿ ದೃಢಾನಿ ಚ||

ಸುವರ್ಣಖಚಿತ, ದಿವ್ಯವಾದ, ನುಣುಪಾದ, ವಿಸ್ತಾರವಾದ, ಗಂಟಿಲ್ಲದ, ದೊಡ್ಡ ಭಾರವನ್ನು ಸಹಿಸಿಕೊಳ್ಳುವಂಥ, ವೈರಿಗಳಿಗೆ ಭಯಂಕರವಾದ, ನೋಡುವುದಕ್ಕೆ ಸುಂದರವಾದ ಅದರಂತೆಯೇ ಉಳಿದವರ ಎಲ್ಲ ಬಿಲ್ಲುಗಳೂ ಬಲ ಮತ್ತು ದೃಢತೆಯನ್ನುಳ್ಳವು.”

04038009 ಉತ್ತರ ಉವಾಚ|

04038009a ಅಸ್ಮಿನ್ವೃಕ್ಷೇ ಕಿಲೋದ್ಬದ್ಧಂ ಶರೀರಮಿತಿ ನಃ ಶ್ರುತಂ|

04038009c ತದಹಂ ರಾಜಪುತ್ರಃ ಸನ್ಸ್ಪೃಶೇಯಂ ಪಾಣಿನಾ ಕಥಂ||

ಉತ್ತರನು ಹೇಳಿದನು: “ಈ ಮರಕ್ಕೆ ಒಂದು ಮೃತಶರೀರವನ್ನು ಕಟ್ಟಲಾಗಿದೆಯೆಂದು ಕೇಳಿದ್ದೇನೆ. ಆದ್ದರಿಂದ ರಾಜಪುತ್ರನಾದ ನಾನು ಅದನ್ನೆಂತು ಕೈಯಿಂದ ಮುಟ್ಟಲಿ?

04038010a ನೈವಂವಿಧಂ ಮಯಾ ಯುಕ್ತಮಾಲಬ್ಧುಂ ಕ್ಷತ್ರಯೋನಿನಾ|

04038010c ಮಹತಾ ರಾಜಪುತ್ರೇಣ ಮಂತ್ರಯಜ್ಞವಿದಾ ಸತಾ||

ಕ್ಷತ್ರಿಯನಾಗಿ ಹುಟ್ಟಿದ, ಮಹಾರಾಜಪುತ್ರ, ಮಂತ್ರಯಜ್ಞವಿದ, ಸತ್ಪುರುಷನಾದ ನಾನು ಹೀಗೆ ಶವವನ್ನು ಮುಟ್ಟುವುದು ಸರಿಯಲ್ಲ.

04038011a ಸ್ಪೃಷ್ಟವಂತಂ ಶರೀರಂ ಮಾಂ ಶವವಾಹಮಿವಾಶುಚಿಂ|

04038011c ಕಥಂ ವಾ ವ್ಯವಹಾರ್ಯಂ ವೈ ಕುರ್ವೀಥಾಸ್ತ್ವಂ ಬೃಹನ್ನಡೇ||

ಬೃಹನ್ನಡೇ! ಮೃತಶರೀರವನ್ನು ನಾನು ಮುಟ್ಟಿದರೆ ಶವವಾಹಕನಂತೆ ಅಶುಚಿಯಾದ ನನ್ನೊಡನೆ ಹೇಗೆ ತಾನೆ ನೀನು ವ್ಯವಹರಿಸೀಯೆ?”

04038012 ಬೃಹನ್ನಡೋವಾಚ|

04038012a ವ್ಯವಹಾರ್ಯಶ್ಚ ರಾಜೇಂದ್ರ ಶುಚಿಶ್ಚೈವ ಭವಿಷ್ಯಸಿ|

04038012c ಧನೂಂಷ್ಯೇತಾನಿ ಮಾ ಭೈಸ್ತ್ವಂ ಶರೀರಂ ನಾತ್ರ ವಿದ್ಯತೇ||

ಬೃಹನ್ನಡೆಯು ಹೇಳಿದಳು: “ರಾಜೇಂದ್ರ! ವ್ಯವಹರಿಸಲು ಯೋಗ್ಯನೂ ಆಗುವೆ; ಶುಚಿಯಾಗಿಯೂ ಉಳಿಯುವೆ. ಹೆದರಬೇಡ! ಇವು ಬಿಲ್ಲುಗಳು. ಇಲ್ಲಿ ಮೃತಶರೀರವಿಲ್ಲ.

04038013a ದಾಯಾದಂ ಮತ್ಸ್ಯರಾಜಸ್ಯ ಕುಲೇ ಜಾತಂ ಮನಸ್ವಿನಂ|

04038013c ಕಥಂ ತ್ವಾ ನಿಂದಿತಂ ಕರ್ಮ ಕಾರಯೇಯಂ ನೃಪಾತ್ಮಜ||

ರಾಜಪುತ್ರ! ಮತ್ಸ್ಯರಾಜನ ಉತ್ತರಾಧಿಕಾರಿಯೂ ಉನ್ನತ ಕುಲದಲ್ಲಿ ಹುಟ್ಟಿದ ದೃಢಮನಸ್ಕನೂ ಆದ ನಿನ್ನಿಂದ ನಾನು ನಿಂದ್ಯವಾದ ಈ ಕಾರ್ಯವನ್ನೇಕೆ ಮಾಡಿಸಲಿ?””

04038014 ವೈಶಂಪಾಯನ ಉವಾಚ|

04038014a ಏವಮುಕ್ತಃ ಸ ಪಾರ್ಥೇನ ರಥಾತ್ಪ್ರಸ್ಕಂದ್ಯ ಕುಂಡಲೀ|

04038014c ಆರುರೋಹ ಶಮೀವೃಕ್ಷಂ ವೈರಾಟಿರವಶಸ್ತದಾ||

ವೈಶಂಪಾಯನನು ಹೇಳಿದನು: “ಪಾರ್ಥನು ಹೀಗೆ ಹೇಳಲು ಕುಂಡಲಧಾರಿ ಆ ವಿರಾಟಪುತ್ರನು ರಥದಿಂದಿಳಿದು ವಿವಶನಾಗಿ ಶಮೀವೃಕ್ಷವನ್ನು ಹತ್ತಿದನು.

04038015a ತಮನ್ವಶಾಸಚ್ಚತ್ರುಘ್ನೋ ರಥೇ ತಿಷ್ಠನ್ಧನಂಜಯಃ|

04038015c ಪರಿವೇಷ್ಟನಮೇತೇಷಾಂ ಕ್ಷಿಪ್ರಂ ಚೈವ ವ್ಯಪಾನುದ||

ಶತ್ರುನಾಶಕ ಧನಂಜಯನು ರಥದಲ್ಲಿ ಕುಳಿತು “ಆ ಕಟ್ಟನ್ನು ಬೇಗ ಬಿಚ್ಚು!” ಎಂದು ಆಜ್ಞಾಪಿಸಿದನು.

04038016a ತಥಾ ಸಂನಹನಾನ್ಯೇಷಾಂ ಪರಿಮುಚ್ಯ ಸಮಂತತಃ|

04038016c ಅಪಶ್ಯದ್ಗಾಂಡಿವಂ ತತ್ರ ಚತುರ್ಭಿರಪರೈಃ ಸಹ||

ಉತ್ತರನು ಅಂತೆಯೇ ಅವುಗಳ ಕಟ್ಟುಗಳನ್ನು ಸುತ್ತಲೂ ಬಿಚ್ಚಿ, ಅಲ್ಲಿ ಬೇರೆ ನಾಲ್ಕು ಬಿಲ್ಲುಗಳೊಡನೆ ಇದ್ದ ಗಾಂಡೀವವನ್ನು ನೋಡಿದನು.

04038017a ತೇಷಾಂ ವಿಮುಚ್ಯಮಾನಾನಾಂ ಧನುಷಾಮರ್ಕವರ್ಚಸಾಂ|

04038017c ವಿನಿಶ್ಚೇರುಃ ಪ್ರಭಾ ದಿವ್ಯಾ ಗ್ರಹಾಣಾಮುದಯೇಷ್ವಿವ||

ಕಟ್ಟನ್ನು ಕಳಚುತ್ತಿರಲು, ಸೂರ್ಯತೇಜಸ್ಸುಗಳನ್ನುಳ್ಳ ಆ ಬಿಲ್ಲುಗಳ ದಿವ್ಯಪ್ರಭೆ ಗ್ರಹಗಳ ಉದಯಕಾಲದ ಪ್ರಭೆಯಂತೆ ಹೊಮ್ಮಿತು.

04038018a ಸ ತೇಷಾಂ ರೂಪಮಾಲೋಕ್ಯ ಭೋಗಿನಾಮಿವ ಜೃಂಭತಾಂ|

04038018c ಹೃಷ್ಟರೋಮಾ ಭಯೋದ್ವಿಗ್ನಃ ಕ್ಷಣೇನ ಸಮಪದ್ಯತ||

ವಿಜೃಂಭಿಸುವ ಸರ್ಪಗಳ ರೂಪದಂತಹ ಅವುಗಳ ರೂಪವನ್ನು ಕಂಡ ಅವನು ಕ್ಷಣಮಾತ್ರದಲ್ಲಿ ರೋಮಾಂಚನಗೊಂಡು ಭಯೋದ್ವಿಗ್ನನಾದನು.

04038019a ಸಂಸ್ಪೃಶ್ಯ ತಾನಿ ಚಾಪಾನಿ ಭಾನುಮಂತಿ ಬೃಹಂತಿ ಚ|

04038019c ವೈರಾಟಿರರ್ಜುನಂ ರಾಜನ್ನಿದಂ ವಚನಮಬ್ರವೀತ್||

ರಾಜನ್! ಹೊಳೆಹೊಳೆಯುತ್ತಿರುವ ಆ ದೊಡ್ಡ ಬಿಲ್ಲುಗಳನ್ನು ಉತ್ತರನು ಮುಟ್ಟಿ ಈ ಮಾತನ್ನಾಡಿದನು.

04038020 ಉತ್ತರ ಉವಾಚ|

04038020a ಬಿಂದವೋ ಜಾತರೂಪಸ್ಯ ಶತಂ ಯಸ್ಮಿನ್ನಿಪಾತಿತಾಃ|

04038020c ಸಹಸ್ರಕೋಟಿ ಸೌವರ್ಣಾಃ ಕಸ್ಯೈತದ್ಧನುರುತ್ತಮಂ||

ಉತ್ತರನು ಹೇಳಿದನು: “ಚಿನ್ನದ ನೂರು ಚಿಕ್ಕೆಗಳನ್ನುಳ್ಳ, ಸಾವಿರಕೋಟಿ ಸುವರ್ಣಗಳ ಈ ಉತ್ತಮ ಬಿಲ್ಲು ಯಾರದ್ದು?

04038021a ವಾರಣಾ ಯಸ್ಯ ಸೌವರ್ಣಾಃ ಪೃಷ್ಠೇ ಭಾಸಂತಿ ದಂಶಿತಾಃ|

04038021c ಸುಪಾರ್ಶ್ವಂ ಸುಗ್ರಹಂ ಚೈವ ಕಸ್ಯೈತದ್ಧನುರುತ್ತಮಂ||

ಬೆನ್ನಿನ ಮೇಲೆ ಹೊಳೆಯುವ ಚಿನ್ನದ ಸಲಗಗಳನ್ನು ಕೆತ್ತಿರುವ ಒಳ್ಳೆಯ ಅಂಚು-ಹಿಡಿಗಳನ್ನುಳ್ಳ ಈ ಉತ್ತಮ ಬಿಲ್ಲು ಯಾರದ್ದು?

04038022a ತಪನೀಯಸ್ಯ ಶುದ್ಧಸ್ಯ ಷಷ್ಟಿರ್ಯಸ್ಯೇಂದ್ರಗೋಪಕಾಃ|

04038022c ಪೃಷ್ಠೇ ವಿಭಕ್ತಾಃ ಶೋಭಂತೇ ಕಸ್ಯೈತದ್ಧನುರುತ್ತಮಂ||

ಬೆನ್ನಿನ ಮೇಲೆ ಬಿಡಿಸಿರುವ ಶುದ್ಧ ಸುವರ್ಣದ ಅರವತ್ತು ಇಂದ್ರಗೋಪ (ಚಿಟ್ಟೆಗಳು) ಗಳು ಶೋಭಿಸುತ್ತಿರುವ ಈ ಉತ್ತಮ ಬಿಲ್ಲು ಯಾರದ್ದು?

04038023a ಸೂರ್ಯಾ ಯತ್ರ ಚ ಸೌವರ್ಣಾಸ್ತ್ರಯೋ ಭಾಸಂತಿ ದಂಶಿತಾಃ|

04038023c ತೇಜಸಾ ಪ್ರಜ್ವಲಂತೋ ಹಿ ಕಸ್ಯೈತದ್ಧನುರುತ್ತಮಂ||

ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಮೂರು ಸುವರ್ಣ ಸೂರ್ಯರನ್ನು ಕೆತ್ತಿರುವ ಈ ಉತ್ತಮ ಬಿಲ್ಲು ಯಾರದ್ದು?

04038024a ಶಾಲಭಾ ಯತ್ರ ಸೌವರ್ಣಾಸ್ತಪನೀಯವಿಚಿತ್ರಿತಾಃ|

04038024c ಸುವರ್ಣಮಣಿಚಿತ್ರಂ ಚ ಕಸ್ಯೈತದ್ಧನುರುತ್ತಮಂ||

ಪುಟವಿಟ್ಟ ಚಿನ್ನದ ಚಿಟ್ಟೆಗಳನ್ನು ಚಿತ್ರಿಸಿರುವ ಬಂಗಾರ ಮತ್ತು ಮಣಿಗಳನ್ನು ಬಿಡಿಸಿದ ಈ ಉತ್ತಮ ಬಿಲ್ಲು ಯಾರದ್ದು?

04038025a ಇಮೇ ಚ ಕಸ್ಯ ನಾರಾಚಾಃ ಸಹಸ್ರಾ ಲೋಮವಾಹಿನಃ|

04038025c ಸಮಂತಾತ್ಕಲಧೌತಾಗ್ರಾ ಉಪಾಸಂಗೇ ಹಿರಣ್ಮಯೇ||

ಸುತ್ತಲೂ ಗರಿಗಳಿಂದ, ಚಿನ್ನದ ಮೊನೆಗಳಿಂದ ಕೂಡಿದ ಮತ್ತು ಚಿನ್ನದ ಬತ್ತಳಿಕೆಯಲ್ಲಿರುವ ಈ ಸಾವಿರ ಬಾಣಗಳು ಯಾರವು?

04038026a ವಿಪಾಠಾಃ ಪೃಥವಃ ಕಸ್ಯ ಗಾರ್ಧ್ರಪತ್ರಾಃ ಶಿಲಾಶಿತಾಃ|

04038026c ಹಾರಿದ್ರವರ್ಣಾಃ ಸುನಸಾಃ ಪೀತಾಃ ಸರ್ವಾಯಸಾಃ ಶರಾಃ||

ಉದ್ದವೂ, ದಪ್ಪವೂ, ಹದ್ದಿನ ಗರಿಗಳುಳ್ಳವೂ, ಕಲ್ಲಿನ ಮೇಲೆ ಮಸೆದವೂ, ಹಳದಿ ಬಣ್ಣದವೂ, ಒಳ್ಳೆಯ ತುದಿಗಳುಳ್ಳವೂ, ಹದಗೊಳಿಸಿದವೂ, ಉಕ್ಕಿನಿಂದ ಮಾಡಿದವೂ ಆದ ಈ ಬಾಣಗಳು ಯಾರವು?

04038027a ಕಸ್ಯಾಯಮಸಿತಾವಾಪಃ ಪಂಚಶಾರ್ದೂಲಲಕ್ಷಣಃ|

04038027c ವರಾಹಕರ್ಣವ್ಯಾಮಿಶ್ರಃ ಶರಾನ್ಧಾರಯತೇ ದಶ||

ಐದು ಹುಲಿಗಳ ಗುರುತುಗಳನ್ನುಳ್ಳ, ಹಂದಿಯ ಕಿವಿಯನ್ನು ಹೋಲುವ ಮತ್ತು ಹತ್ತು ಬಾಣಗಳನ್ನು ಹೂಡಬದುದಾಗಿರುವ ಈ ಕಪ್ಪು ಬಿಲ್ಲು ಯಾರದ್ದು?

04038028a ಕಸ್ಯೇಮೇ ಪೃಥವೋ ದೀರ್ಘಾಃ ಸರ್ವಪಾರಶವಾಃ ಶರಾಃ|

04038028c ಶತಾನಿ ಸಪ್ತ ತಿಷ್ಠಂತಿ ನಾರಾಚಾ ರುಧಿರಾಶನಾಃ||

ರಕ್ತವನ್ನು ಕುಡಿಯುವಂತಹ, ಪೂರ್ತಿ ಉಕ್ಕಿನಿಂದ ಮಾಡಿದ, ಈ ದಪ್ಪ, ಉದ್ದ, ಏಳು ನೂರು ಬಾಣಗಳು ಯಾರವು?

04038029a ಕಸ್ಯೇಮೇ ಶುಕಪತ್ರಾಭೈಃ ಪೂರ್ವೈರರ್ಧೈಃ ಸುವಾಸಸಃ|

04038029c ಉತ್ತರೈರಾಯಸೈಃ ಪೀತೈರ್ಹೇಮಪುಂಖೈಃ ಶಿಲಾಶಿತೈಃ||

ಪೂರ್ವಾರ್ಧದಲ್ಲಿ ಗಿಣಿಯ ರೆಕ್ಕೆಯಂಥ ಬಣ್ಣದ ಹೊದಿಕೆಯನ್ನುಳ್ಳವೂ, ಉತ್ತರಾರ್ಧದಲ್ಲಿ ಹದಗೊಳಿಸಿದವೂ, ಚಿನ್ನದ ಗರಿಗಳನ್ನುಳ್ಳವೂ, ಉಕ್ಕಿನಿಂದಾದವೂ, ಕಲ್ಲಿನ ಮೇಲೆ ಮಸೆದವೂ ಆದ ಈ ಬಾಣಗಳು ಯಾರವು?

04038030a ಕಸ್ಯಾಯಂ ಸಾಯಕೋ ದೀರ್ಘಃ ಶಿಲೀಪೃಷ್ಠಃ ಶಿಲೀಮುಖಃ|

04038030c ವೈಯಾಘ್ರಕೋಶೇ ನಿಹಿತೋ ಹೇಮಚಿತ್ರತ್ಸರುರ್ಮಹಾನ್||

ನೆಲಗಪ್ಪೆಯಂತ ಹಿಂಬಾಗ ಮುಂಬಾಗಗಳನ್ನುಳ್ಳ, ವ್ಯಾಘ್ರಚರ್ಮದ ಚೀಲದಲ್ಲಿರಿಸಲಾದ, ಸುಂದರ ಚಿನ್ನದ ಹಿಡಿಯನ್ನುಳ್ಳ ಈ ದೀರ್ಘ ಮಹಾಖಡ್ಗವು ಯಾರದ್ದು?

04038031a ಸುಫಲಶ್ಚಿತ್ರಕೋಶಶ್ಚ ಕಿಂಕಿಣೀಸಾಯಕೋ ಮಹಾನ್|

04038031c ಕಸ್ಯ ಹೇಮತ್ಸರುರ್ದಿವ್ಯಃ ಖಡ್ಗಃ ಪರಮನಿರ್ವ್ರಣಃ||

ಒಳ್ಳೆಯ ಅಲಗುಳ್ಳದ್ದೂ, ಸುಂದರ ಚೀಲದಲ್ಲಿರುವ ಕಿರುಗೆಜ್ಜೆಗಳಿಂದ ಕೂಡಿದ ಚಿನ್ನದ ಹಿಡಿಯುಳ್ಳ, ತುಂಬ ನುಣುಪಾದ ಈ ದಿವ್ಯ ಮಹಾ ಖಡ್ಗವು ಯಾರದ್ದು?

04038032a ಕಸ್ಯಾಯಂ ವಿಮಲಃ ಖಡ್ಗೋ ಗವ್ಯೇ ಕೋಶೇ ಸಮರ್ಪಿತಃ|

04038032c ಹೇಮತ್ಸರುರನಾಧೃಷ್ಯೋ ನೈಷಧ್ಯೋ ಭಾರಸಾಧನಃ||

ಗೋವಿನ ಚರ್ಮದ ಚೀಲದಲ್ಲಿರಿಸಿದ, ಚಿನ್ನದ ಹಿಡಿಯುಳ್ಳ, ಮುರಿಯಲಾಗದ, ನಿಷಧ ದೇಶದಲ್ಲಿ ಮಾಡಿದ, ಯಾವುದೇ ಕಾರ್ಯವನ್ನೂ ನಿರ್ವಹಿಸಬಲ್ಲ ಈ ವಿಮಲ ಖಡ್ಗವು ಯಾರದ್ದು?

04038033a ಕಸ್ಯ ಪಾಂಚನಖೇ ಕೋಶೇ ಸಾಯಕೋ ಹೇಮವಿಗ್ರಹಃ|

04038033c ಪ್ರಮಾಣರೂಪಸಂಪನ್ನಃ ಪೀತ ಆಕಾಶಸಂನಿಭಃ||

ಆಡಿನ ಚರ್ಮದ ಚೀಲದಲ್ಲಿರುವ, ಸುವರ್ಣಖಚಿತವಾದ, ಸರಿಯಾದ ಅಳತೆ ಮತ್ತು ಆಕಾರದ, ಹದಗೊಳಿಸಿದ, ಆಕಾಶದ ಬಣ್ಣದ ಈ ಕತ್ತಿ ಯಾರದ್ದು?

04038034a ಕಸ್ಯ ಹೇಮಮಯೇ ಕೋಶೇ ಸುತಪ್ತೇ ಪಾವಕಪ್ರಭೇ|

04038034c ನಿಸ್ತ್ರಿಂಶೋಽಯಂ ಗುರುಃ ಪೀತಃ ಸೈಕ್ಯಃ ಪರಮನಿರ್ವ್ರಣಃ||

ಚೆನ್ನಾಗಿ ಉರಿಯುತ್ತಿರುವ ಅಗ್ನಿಯ ಪ್ರಭೆಯುಳ್ಳ, ಪುಟವಿಟ್ಟ ಚಿನ್ನದ ಓರೆಯ, ಭಾರವಾದ, ಹದಗೊಳಿಸಿದ, ತುಂಬಾ ನುಣುಪಾಗಿರುವ, ಎಲ್ಲಿಯೂ ಭಿನ್ನವಾಗಿರದ ಉದ್ದವಾದ ಈ ಕತ್ತಿ ಯಾರದ್ದು?

04038035a ನಿರ್ದಿಶಸ್ವ ಯಥಾತತ್ತ್ವಂ ಮಯಾ ಪೃಷ್ಟಾ ಬೃಹನ್ನಡೇ|

04038035c ವಿಸ್ಮಯೋ ಮೇ ಪರೋ ಜಾತೋ ದೃಷ್ಟ್ವಾ ಸರ್ವಮಿದಂ ಮಹತ್||

ಬೃಹನ್ನಡೆ! ನಾನು ಕೇಳಿದ ಈ ಪ್ರಶ್ನೆಗಳಿಗೆ ದಿಟವಾದ ಉತ್ತರ ಕೊಡು. ಈ ಮಹತ್ತಾದುದೆಲ್ಲವನ್ನೂ ಕಂಡು ನನಗೆ ಪರಮ ವಿಸ್ಮಯವಾಗಿದೆ.”

04038036 ಬೃಹನ್ನಡೋವಾಚ|

04038036a ಯನ್ಮಾಂ ಪೂರ್ವಮಿಹಾಪೃಚ್ಛಃ ಶತ್ರುಸೇನಾನಿಬರ್ಹಣಂ|

04038036c ಗಾಂಡೀವಮೇತತ್ಪಾರ್ಥಸ್ಯ ಲೋಕೇಷು ವಿದಿತಂ ಧನುಃ||

ಬೃಹನ್ನಡೆಯು ಹೇಳಿದಳು: “ನನ್ನನ್ನು ನೀನು ಮೊದಲು ಕೇಳಿದ ಬಿಲ್ಲು ಪಾರ್ಥನ ಲೋಕಪ್ರಸಿದ್ಧವೂ ಶತ್ರುಸೇನಾನಾಶಕವೂ ಆದ ಗಾಂಡೀವವೆಂಬ ಧನುಸ್ಸು.

04038037a ಸರ್ವಾಯುಧಮಹಾಮಾತ್ರಂ ಶಾತಕುಂಭಪರಿಷ್ಕೃತಂ|

04038037c ಏತತ್ತದರ್ಜುನಸ್ಯಾಸೀದ್ಗಾಂಡೀವಂ ಪರಮಾಯುಧಂ||

ಎಲ್ಲ ಆಯುಧಗಳಲ್ಲಿ ದೊಡ್ಡದೂ ಸುವರ್ಣಾಲಂಕೃತವೂ ಆದ ಈ ಗಾಂಡೀವವು ಅರ್ಜುನನ ಪರಮಾಯುಧವಾಗಿತ್ತು.

04038038a ಯತ್ತಚ್ಚತಸಹಸ್ರೇಣ ಸಮ್ಮಿತಂ ರಾಷ್ಟ್ರವರ್ಧನಂ|

04038038c ಯೇನ ದೇವಾನ್ಮನುಷ್ಯಾಂಶ್ಚ ಪಾರ್ಥೋ ವಿಷಹತೇ ಮೃಧೇ||

ಸಾವಿರ ಆಯುಧಗಳಿಗೆ ಸಮನಾದ, ರಾಷ್ಟ್ರವರ್ಧಕವಾದ ಇದರಿಂದ ಪಾರ್ಥನು ಯುದ್ಧದಲ್ಲಿ ದೇವತೆಗಳನ್ನೂ ಮನುಷ್ಯರನ್ನೂ ಗೆಲ್ಲುತ್ತಾನೆ.

04038039a ದೇವದಾನವಗಂಧರ್ವೈಃ ಪೂಜಿತಂ ಶಾಶ್ವತೀಃ ಸಮಾಃ|

04038039c ಏತದ್ವರ್ಷಸಹಸ್ರಂ ತು ಬ್ರಹ್ಮಾ ಪೂರ್ವಮಧಾರಯತ್||

ದೇವ-ದಾನವ-ಗಂಧರ್ವರಿಂದ ಬಹುಕಾಲ ಪೂಜಿತವಾದ ಇದನ್ನು ಬ್ರಹ್ಮನು ಸಾವಿರ ವರ್ಷ ಧರಿಸಿದ್ದನು.

04038040a ತತೋಽನಂತರಮೇವಾಥ ಪ್ರಜಾಪತಿರಧಾರಯತ್|

04038040c ತ್ರೀಣಿ ಪಂಚಶತಂ ಚೈವ ಶಕ್ರೋಽಶೀತಿ ಚ ಪಂಚ ಚ||

ಅನಂತರ ಇದನ್ನು ಪ್ರಜಾಪತಿಯು ಐನೂರಾ ಮೂರು ವರ್ಷಗಳು ಮತ್ತು ಬಳಿಕ ಶಕ್ರನು ಎಂಬತ್ತೈದು ವರ್ಷ ಧರಿಸಿದ್ದರು.

04038041a ಸೋಮಃ ಪಂಚಶತಂ ರಾಜಾ ತಥೈವ ವರುಣಃ ಶತಂ|

04038041c ಪಾರ್ಥಃ ಪಂಚ ಚ ಷಷ್ಟಿಂ ಚ ವರ್ಷಾಣಿ ಶ್ವೇತವಾಹನಃ||

ಆಮೇಲೆ ಚಂದ್ರನು ಐನೂರು ವರ್ಷ, ರಾಜ ವರುಣನು ನೂರುವರ್ಷ ಧರಿಸಿದರು. ಕಡೆಗೆ ಶ್ವೇತವಾಹನ ಪಾರ್ಥನು ಇದನ್ನು ಅರುವತ್ತೈದು ವರ್ಷ ಧರಿಸಿದ್ದಾನೆ.

04038042a ಮಹಾವೀರ್ಯಂ ಮಹದ್ದಿವ್ಯಮೇತತ್ತದ್ಧನುರುತ್ತಮಂ|

04038042c ಪೂಜಿತಂ ಸುರಮರ್ತ್ಯೇಷು ಬಿಭರ್ತಿ ಪರಮಂ ವಪುಃ||

ಮಹಾ ಸತ್ವವುಳ್ಳದ್ದೂ, ಮಹದ್ದಿವ್ಯವೂ, ಉತ್ತಮವೂ, ಸುರಮರ್ತ್ಯರಲ್ಲಿ ಪೂಜಿತವೂ ಆದ ಈ ಧನುಸ್ಸು ಶ್ರೇಷ್ಠ ಆಕಾರದಲ್ಲಿದೆ.

04038043a ಸುಪಾರ್ಶ್ವಂ ಭೀಮಸೇನಸ್ಯ ಜಾತರೂಪಗ್ರಹಂ ಧನುಃ|

04038043c ಯೇನ ಪಾರ್ಥೋಽಜಯತ್ಕೃತ್ಸ್ನಾಂ ದಿಶಂ ಪ್ರಾಚೀಂ ಪರಂತಪಃ||

ಒಳ್ಳೆಯ ಪಕ್ಕಗಳನ್ನೂ ಚಿನ್ನದ ಹಿಡಿಯನ್ನೂ ಹೊಂದಿದ ಈ ಮತ್ತೊಂದು ಬಿಲ್ಲು ಭೀಮಸೇನನದು. ಇದರಿಂದ ಆ ಶತ್ರುನಾಶಕ ಭೀಮನು ಪೂರ್ವದಿಕ್ಕನ್ನು ಗೆದ್ದನು.

04038044a ಇಂದ್ರಗೋಪಕಚಿತ್ರಂ ಚ ಯದೇತಚ್ಚಾರುವಿಗ್ರಹಂ|

04038044c ರಾಜ್ಞೋ ಯುಧಿಷ್ಠಿರಸ್ಯೈತದ್ವೈರಾಟೇ ಧನುರುತ್ತಮಂ||

ವಿರಾಟಪುತ್ರ! ಇಂದ್ರಗೋಪಗಳನ್ನು ಬಿಡಿಸಿದ ಸುಂದರವಾದ ಆಕೃತಿಯನ್ನುಳ್ಳ ಈ ಉತ್ತಮ ಬಿಲ್ಲು ರಾಜ ಯುಧಿಷ್ಠಿರನದು.

04038045a ಸೂರ್ಯಾ ಯಸ್ಮಿಂಸ್ತು ಸೌವರ್ಣಾಃ ಪ್ರಭಾಸಂತೇ ಪ್ರಭಾಸಿನಃ|

04038045c ತೇಜಸಾ ಪ್ರಜ್ವಲಂತೋ ವೈ ನಕುಲಸ್ಯೈತದಾಯುಧಂ||

ಯಾವುದರಲ್ಲಿ ತೇಜಸ್ಸಿನಿಂದ ಹೊಳೆಯುತ್ತಿರುವ ಮಿರುಗುವ ಚಿನ್ನದ ಸೂರ್ಯರು ಪ್ರಕಾಶಿಸುತ್ತಾರೋ ಆ ಆಯುಧವು ನಕುಲನದು.

04038046a ಶಲಭಾ ಯತ್ರ ಸೌವರ್ಣಾಸ್ತಪನೀಯವಿಚಿತ್ರಿತಾಃ|

04038046c ಏತನ್ಮಾದ್ರೀಸುತಸ್ಯಾಪಿ ಸಹದೇವಸ್ಯ ಕಾರ್ಮುಕಂ||

ಸುವರ್ಣ ಪತಂಗಗಳು ಚಿತ್ರಿತವಾದ ಈ ಪುಟವಿಟ್ಟ ಚಿನ್ನದ ಬಿಲ್ಲು ಮಾದ್ರೀಸುತ ಸಹದೇವನದು.

04038047a ಯೇ ತ್ವಿಮೇ ಕ್ಷುರಸಂಕಾಶಾಃ ಸಹಸ್ರಾ ಲೋಮವಾಹಿನಃ|

04038047c ಏತೇಽರ್ಜುನಸ್ಯ ವೈರಾಟೇ ಶರಾಃ ಸರ್ಪವಿಷೋಪಮಾಃ||

ವಿರಾಟಪುತ್ರ! ಗರಿಗಳನ್ನುಳ್ಳ, ಕತ್ತಿಯಂತಿರುವ, ಸರ್ಪದ ವಿಷದಂತೆ ಮಾರಕವಾದ ಈ ಸಾವಿರ ಬಾಣಗಳು ಅರ್ಜುನನವು.

04038048a ಏತೇ ಜ್ವಲಂತಃ ಸಂಗ್ರಾಮೇ ತೇಜಸಾ ಶೀಘ್ರಗಾಮಿನಃ|

04038048c ಭವಂತಿ ವೀರಸ್ಯಾಕ್ಷಯ್ಯಾ ವ್ಯೂಹತಃ ಸಮರೇ ರಿಪೂನ್||

ರಣದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುವ ಶೀಘ್ರಗಾಮಿಗಳಾದ ಈ ಬಾಣಗಳು ಯುದ್ಧದಲ್ಲಿ ವೀರನು ಶತ್ರುಗಳ ಮೇಲೆ ಪ್ರಯೋಗಿಸಿದಾಗ ಅಕ್ಷಯವಾಗುತ್ತವೆ.

04038049a ಯೇ ಚೇಮೇ ಪೃಥವೋ ದೀರ್ಘಾಶ್ಚಂದ್ರಬಿಂಬಾರ್ಧದರ್ಶನಾಃ|

04038049c ಏತೇ ಭೀಮಸ್ಯ ನಿಶಿತಾ ರಿಪುಕ್ಷಯಕರಾಃ ಶರಾಃ||

ದಪ್ಪವೂ ಉದ್ದವೂ ಅರ್ಧಚಂದ್ರಬಿಂಬದಂತೆ ಕಾಣಿಸುವ ಶತ್ರುನಾಶಕವಾದ ಈ ಹರಿತ ಬಾಣಗಳು ಭೀಮನವು.

04038050a ಹಾರಿದ್ರವರ್ಣಾ ಯೇ ತ್ವೇತೇ ಹೇಮಪುಂಖಾಃ ಶಿಲಾಶಿತಾಃ|

04038050c ನಕುಲಸ್ಯ ಕಲಾಪೋಽಯಂ ಪಂಚಶಾರ್ದೂಲಲಕ್ಷಣಃ||

ಹಳದಿ ಬಣ್ಣದ ಚಿನ್ನದ ಗರಿಗಳನ್ನುಳ್ಳ, ಕಲ್ಲಿನ ಮೇಲೆ ಮಸೆದು ಹರಿತಗೊಳಿಸಿದ ಬಾಣಗಳುಳ್ಳ, ಐದು ಹುಲಿಗಳ ಚಿಹ್ನೆಗಳನ್ನುಳ್ಳ ಈ ಬತ್ತಳಿಕೆ ನಕುಲನದು.

04038051a ಯೇನಾಸೌ ವ್ಯಜಯತ್ಕೃತ್ಸ್ನಾಂ ಪ್ರತೀಚೀಂ ದಿಶಮಾಹವೇ|

04038051c ಕಲಾಪೋ ಹ್ಯೇಷ ತಸ್ಯಾಸೀನ್ಮಾದ್ರೀಪುತ್ರಸ್ಯ ಧೀಮತಃ||

ಯುದ್ಧದಲ್ಲಿ ಪಶ್ಚಿಮ ದಿಕ್ಕನ್ನೆಲ್ಲ ಗೆದ್ದ ಈ ಬಾಣ ಸಮೂಹವು ಧೀಮಂತ ಮಾದ್ರೀಪುತ್ರನದಾಗಿತ್ತು.

04038052a ಯೇ ತ್ವಿಮೇ ಭಾಸ್ಕರಾಕಾರಾಃ ಸರ್ವಪಾರಶವಾಃ ಶರಾಃ|

04038052c ಏತೇ ಚಿತ್ರಾಃ ಕ್ರಿಯೋಪೇತಾಃ ಸಹದೇವಸ್ಯ ಧೀಮತಃ||

ಸೂರ್ಯನ ಆಕಾರವುಳ್ಳ ಪೂರ್ತಿ ಉಕ್ಕಿನಿಂದ ಮಾಡಿದ ಸುಂದರ ಕ್ರಿಯಾತ್ಮಕ ಈ ಬಾಣಗಳು ಧೀಮಂತ ಸಹದೇವನವು.

04038053a ಯೇ ತ್ವಿಮೇ ನಿಶಿತಾಃ ಪೀತಾಃ ಪೃಥವೋ ದೀರ್ಘವಾಸಸಃ|

04038053c ಹೇಮಪುಂಖಾಸ್ತ್ರಿಪರ್ವಾಣೋ ರಾಜ್ಞ ಏತೇ ಮಹಾಶರಾಃ||

ಹರಿತವೂ, ಹದಗೊಳಿಸಿದವೂ, ದೊಡ್ಡವೂ, ಉದ್ದವೂ ಆದ, ಚಿನ್ನದ ಗರಿಗಳನ್ನುಳ್ಳ, ಮೂರು ಗೆಣ್ಣುಗಳುಳ್ಳ ಈ ಮಹಾಶರಗಳು ರಾಜ ಯುಧಿಷ್ಠಿರನವು.

04038054a ಯಸ್ತ್ವಯಂ ಸಾಯಕೋ ದೀರ್ಘಃ ಶಿಲೀಪೃಷ್ಠಃ ಶಿಲೀಮುಖಃ|

04038054c ಅರ್ಜುನಸ್ಯೈಷ ಸಂಗ್ರಾಮೇ ಗುರುಭಾರಸಹೋ ದೃಢಃ||

ಉದ್ದ ನೆಲಗಪ್ಪೆಯಂಥ ಹಿಂಬದಿ ಮತ್ತು ಮೂತಿಯುಳ್ಳ, ಯುದ್ಧದಲ್ಲಿ ಮಹಾಭಾರವನ್ನು ಸಹಿಸಬಲ್ಲ, ಈ ದೃಢ ಕತ್ತಿಯು ಅರ್ಜುನನದು.

04038055a ವೈಯಾಘ್ರಕೋಶಸ್ತು ಮಹಾನ್ಭೀಮಸೇನಸ್ಯ ಸಾಯಕಃ|

04038055c ಗುರುಭಾರಸಹೋ ದಿವ್ಯಃ ಶಾತ್ರವಾಣಾಂ ಭಯಂಕರಃ||

ವ್ಯಾಘ್ರಚರ್ಮದ ಒರೆಯನ್ನುಳ್ಳ, ಮಹಾಭಾರವನ್ನು ಸಹಿಸಬಲ್ಲ, ಶತ್ರುಗಳಿಗೆ ಭಯಂಕರವಾದ ಈ ದಿವ್ಯ ಮಹಾಖಡ್ಗವು ಭೀಮಸೇನನದು.

04038056a ಸುಫಲಶ್ಚಿತ್ರಕೋಶಶ್ಚ ಹೇಮತ್ಸರುರನುತ್ತಮಃ|

04038056c ನಿಸ್ತ್ರಿಂಶಃ ಕೌರವಸ್ಯೈಷ ಧರ್ಮರಾಜಸ್ಯ ಧೀಮತಃ||

ಒಳ್ಳೆಯ ಅಲಗುಳ್ಳ, ಸುಂದರ ಒರೆಯಲ್ಲಿರುವ, ಅತ್ತ್ಯುತ್ತಮ ಚಿನ್ನದ ಹಿಡಿಯುಳ್ಳ ಈ ಖಡ್ಗವು ಧೀಮಂತ ಕುರುಪುತ್ರ ಧರ್ಮರಾಜನದು.

04038057a ಯಸ್ತು ಪಾಂಚನಖೇ ಕೋಶೇ ನಿಹಿತಶ್ಚಿತ್ರಸೇವನೇ|

04038057c ನಕುಲಸ್ಯೈಷ ನಿಸ್ತ್ರಿಂಶೋ ಗುರುಭಾರಸಹೋ ದೃಢಃ||

ಆಡಿನ ಚರ್ಮದ ಒರೆಯಲ್ಲಿರಿಸಿದ, ವಿಚಿತ್ರ ಬಳಕೆಗೆ ಬರುವ, ಮಹಾಭಾರವನ್ನು ಸಹಿಸಬಲ್ಲ ದೃಢವಾದ ಈ ಖಡ್ಗವು ನಕುಲನದು.

04038058a ಯಸ್ತ್ವಯಂ ವಿಮಲಃ ಖಡ್ಗೋ ಗವ್ಯೇ ಕೋಶೇ ಸಮರ್ಪಿತಃ|

04038058c ಸಹದೇವಸ್ಯ ವಿದ್ಧ್ಯೇನಂ ಸರ್ವಭಾರಸಹಂ ದೃಢಂ||

ಗೋವಿನ ಚರ್ಮದ ಒರೆಯಲ್ಲಿರಿಸಿದ ಸರ್ವಭಾರವನ್ನೂ ಸಹಿಸಬಲ್ಲ ಈ ದೃಢ ವಿಮಲ ಖಡ್ಗವು ಸಹದೇವನದೆಂದು ತಿಳಿ.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಆಯುಧವರ್ಣನೇ ಅಷ್ಟತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಆಯುಧವರ್ಣನದಲ್ಲಿ ಮೂವತ್ತೆಂಟನೆಯ ಅಧ್ಯಾಯವು.

Related image

Comments are closed.