Shanti Parva: Chapter 285

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೫

ವರ್ಣವಿಶೇಷದ ಉತ್ಪತ್ತಿಯ ರಹಸ್ಯ, ತಪೋಬಲದಿಂದ ಉತ್ಕೃಷ್ಟ ವರ್ಣದ ಪ್ರಾಪ್ತಿ, ವಿಭಿನ್ನ ವರ್ಣಗಳ ವಿಶೇಷ ಮತ್ತು ಸಾಮಾನ್ಯ ಧರ್ಮಗಳು, ಸತ್ಕರ್ಮದ ಶ್ರೇಷ್ಠತೆ ಮತ್ತು ಹಿಂಸಾರಹಿತ ಧರ್ಮದ ವರ್ಣನೆ (೧-೩೬).

12285001 ಜನಕ ಉವಾಚ|

12285001a ವರ್ಣೋ ವಿಶೇಷವರ್ಣಾನಾಂ ಮಹರ್ಷೇ ಕೇನ ಜಾಯತೇ|

12285001c ಏತದಿಚ್ಚಾಮ್ಯಹಂ ಶ್ರೋತುಂ ತದ್ಬ್ರೂಹಿ ವದತಾಂ ವರ||

ಜನಕನು ಹೇಳಿದನು: “ಮಾತಾನಾಡುವವರಲ್ಲಿ ಶ್ರೇಷ್ಠ! ಮಹರ್ಷೇ! ವರ್ಣಗಳಲ್ಲಿ ವರ್ಣಗಳ ವಿಶೇಷತೆಗಳು ಹೇಗೆ ಉತ್ಪನ್ನವಾಗುತ್ತವೆ? ಇದನ್ನು ಕೇಳಲು ಬಯಸುತ್ತೇನೆ. ಹೇಳು.

12285002a ಯದೇತಜ್ಜಾಯತೇಽಪತ್ಯಂ ಸ ಏವಾಯಮಿತಿ ಶ್ರುತಿಃ|

12285002c ಕಥಂ ಬ್ರಾಹ್ಮಣತೋ ಜಾತೋ ವಿಶೇಷಗ್ರಹಣಂ ಗತಃ||

ಹುಟ್ಟಿದ ಮಕ್ಕಳು ಯಾರಿಂದ ಹುಟ್ಟಿದರೋ ಅವರದ್ದೇ ರೂಪಗಳೆಂದು ಶ್ರುತಿಗಳು ಹೇಳುತ್ತವೆ. ಹಾಗಿರುವಾಗ ಬ್ರಹ್ಮನಿಂದಲೇ ಹುಟ್ಟಿದವರು ಕ್ಷತ್ರಿಯಾದಿ ವಿಶೇಷ ವರ್ಣಗಳನ್ನು ಹೇಗೆ ಪಡೆದುಕೊಂಡರು?”

12285003 ಪರಾಶರ ಉವಾಚ|

12285003a ಏವಮೇತನ್ಮಹಾರಾಜ ಯೇನ ಜಾತಃ ಸ ಏವ ಸಃ|

12285003c ತಪಸಸ್ತ್ವಪಕರ್ಷೇಣ ಜಾತಿಗ್ರಹಣತಾಂ ಗತಃ||

ಪರಾಶರನು ಹೇಳಿದನು: “ಮಹಾರಾಜ! ಹುಟ್ಟಿದವನು ಯಾರಿಂದ ಜನ್ಮವನ್ನು ಪಡೆದುಕೊಳ್ಳುತ್ತಾನೋ ಅವನದೇ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ ಎನ್ನುವುದು ಸರಿ. ಆದರೂ ತಪಸ್ಸಿನ ನ್ಯೂನತೆಗಳ ಕಾರಣದಿಂದ ಪ್ರಜೆಗಳು ನಿಕೃಷ್ಟ ಜಾತಿಗಳನ್ನು ಪಡೆದುಕೊಂಡಿದ್ದಾರೆ.

12285004a ಸುಕ್ಷೇತ್ರಾಚ್ಚ ಸುಬೀಜಾಚ್ಚ ಪುಣ್ಯೋ ಭವತಿ ಸಂಭವಃ|

12285004c ಅತೋಽನ್ಯತರತೋ ಹೀನಾದವರೋ ನಾಮ ಜಾಯತೇ||

ಉತ್ತಮ ಕ್ಷೇತ್ರದಲ್ಲಿ ಉತ್ತಮ ಬೀಜದಿಂದ ಹುಟ್ಟಿದುದು ಪವಿತ್ರವಾಗಿರುತ್ತದೆ. ಕ್ಷೇತ್ರವಾಗಲೀ ಅಥವಾ ಬೀಜವಾಗಲೀ ಕೀಳು ಮಟ್ಟದ್ದಾಗಿದ್ದರೆ ಅದರಿಂದ ಕೀಳು ಸಂತಾನವೇ ಹುಟ್ಟಿಕೊಳ್ಳುತ್ತದೆ.

12285005a ವಕ್ತ್ರಾದ್ಭುಜಾಭ್ಯಾಮುರುಭ್ಯಾಂ ಪದ್ಭ್ಯಾಂ ಚೈವಾಥ ಜಜ್ಞಿರೇ|

12285005c ಸೃಜತಃ ಪ್ರಜಾಪತೇರ್ಲೋಕಾನಿತಿ ಧರ್ಮವಿದೋ ವಿದುಃ||

ಪ್ರಜಾಪತಿಯು ಲೋಕಗಳನ್ನು ಸೃಷ್ಟಿಸುವಾಗ ಅವನ ಮುಖ, ಭುಜಗಳು, ತೊಡೆಗಳು ಮತ್ತು ಪಾದಗಳಿಂದ ಮನುಷ್ಯರು ಹುಟ್ಟಿದರೆಂದು ಧರ್ಮವಿದರು ತಿಳಿದಿದ್ದಾರೆ.

12285006a ಮುಖಜಾ ಬ್ರಾಹ್ಮಣಾಸ್ತಾತ ಬಾಹುಜಾಃ ಕ್ಷತ್ರಬಂಧವಃ|

12285006c ಊರುಜಾ ಧನಿನೋ ರಾಜನ್ಪಾದಜಾಃ ಪರಿಚಾರಕಾಃ||

ಅಯ್ಯಾ! ರಾಜನ್! ಮುಖದಿಂದ ಹುಟ್ಟಿದವರು ಬ್ರಾಹ್ಮಣರು. ಬಾಹುಗಳಿಂದ ಹುಟ್ಟಿದವರು ಕ್ಷತ್ರಿಯರು. ತೊಡೆಗಳಿಂದ ಹುಟ್ಟಿದವರು ಧನವಂತರು ಮತ್ತು ಪಾದಗಳಿಂದ ಹುಟ್ಟಿದವರು ಪರಿಚಾರಕರು.

12285007a ಚತುರ್ಣಾಮೇವ ವರ್ಣಾನಾಮಾಗಮಃ ಪುರುಷರ್ಷಭ|

12285007c ಅತೋಽನ್ಯೇ ತ್ವತಿರಿಕ್ತಾ ಯೇ ತೇ ವೈ ಸಂಕರಜಾಃ ಸ್ಮೃತಾಃ||

ಪುರುಷರ್ಷಭ! ಹೀಗೆ ನಾಲ್ಕೇ ವರ್ಣಗಳ ಉತ್ಪತ್ತಿಯಾಯಿತು. ಇವಕ್ಕಿಂತ ಅನ್ಯರು ಇದೇ ವರ್ಣಗಳ ಸಂಕರದಿಂದ ಉತ್ಪನ್ನರಾದವರು ಎಂದು ಹೇಳಿದ್ದಾರೆ.

12285008a ಕ್ಷತ್ರಜಾತಿರಥಾಂಬಷ್ಠಾ ಉಗ್ರಾ ವೈದೇಹಕಾಸ್ತಥಾ|

12285008c ಶ್ವಪಾಕಾಃ ಪುಲ್ಕಸಾಃ ಸ್ತೇನಾ ನಿಷಾದಾಃ ಸೂತಮಾಗಧಾಃ||

12285009a ಆಯೋಗಾಃ ಕರಣಾ ವ್ರಾತ್ಯಾಶ್ಚಂಡಾಲಾಶ್ಚ ನರಾಧಿಪ|

12285009c ಏತೇ ಚತುರ್ಭ್ಯೋ ವರ್ಣೇಭ್ಯೋ ಜಾಯಂತೇ ವೈ ಪರಸ್ಪರಮ್||

ಕ್ಷತ್ರಿಯ, ಅತಿರಥ, ಅಂಬಷ್ಠ, ಉಗ್ರ, ವೈದೇಹ, ಶ್ವಪಾಕ, ಪುಲ್ಯಸ, ಸ್ತೇನ, ನಿಷಾದ, ಸೂತ, ಮಾಗಧ, ಅಯೋಗ, ಕರಣ, ವ್ರಾತ್ಯ, ಚಾಂಡಲ – ಇವರೆಲ್ಲರೂ ಬ್ರಾಹ್ಮಣಾದಿ ನಾಲ್ಕು ವರ್ಣಗಳಲ್ಲಿ ಅನುಲೋಮ ಮತ್ತು ವಿಲೋಮವರ್ಣಗಳ ಸ್ತ್ರೀ-ಪುರುಷರ ಪರಸ್ಪರ ಸಂಯೋಗದಿಂದ ಹುಟ್ಟಿದವರು.”

12285010 ಜನಕ ಉವಾಚ|

12285010a ಬ್ರಹ್ಮಣೈಕೇನ ಜಾತಾನಾಂ ನಾನಾತ್ವಂ ಗೋತ್ರತಃ ಕಥಮ್|

12285010c ಬಹೂನೀಹ ಹಿ ಲೋಕೇ ವೈ ಗೋತ್ರಾಣಿ ಮುನಿಸತ್ತಮ||

ಜನಕನು ಹೇಳಿದನು: “ಮುನಿಸತ್ತಮ! ಬ್ರಹ್ಮನೊಬ್ಬನಿಂದಲೇ ಹುಟ್ಟಿದವರು ಗೋತ್ರಗಳಿಂದ ಹೇಗೆ ಬೇರೆ ಬೇರೆಯಾದರು? ಈ ಲೋಕದಲ್ಲಿ ಅನೇಕ ಗೋತ್ರಗಳೇ ಇವೆ.

12285011a ಯತ್ರ ತತ್ರ ಕಥಂ ಜಾತಾಃ ಸ್ವಯೋನಿಂ ಮುನಯೋ ಗತಾಃ|

12285011c ಶೂದ್ರಯೋನೌ ಸಮುತ್ಪನ್ನಾ ವಿಯೋನೌ ಚ ತಥಾಪರೇ||

ಮುನಿಗಳು ಎಲ್ಲೆಲ್ಲಿಯೋ ಹೇಗೇಗೋ ಜನ್ಮತಾಳಿದ್ದಾರೆ. ಕೆಲವರು ಶುದ್ಧಯೋನಿಗಳಲ್ಲಿ ಮತ್ತು ಇನ್ನು ಕೆಲವರು ವಿಪರೀತ ಯೋನಿಗಳಲ್ಲಿ ಜನ್ಮತಾಳಿದ್ದಾರೆ. ಅವರೆಲ್ಲರೂ ಬ್ರಾಹ್ಮಣತ್ವವನ್ನು ಹೇಗೆ ಹೊಂದಿದರು?”

12285012 ಪರಾಶರ ಉವಾಚ|

12285012a ರಾಜನ್ನೈತದ್ಭವೇದ್ಗ್ರಾಹ್ಯಮಪಕೃಷ್ಟೇನ ಜನ್ಮನಾ|

12285012c ಮಹಾತ್ಮನಾಂ ಸಮುತ್ಪತ್ತಿಸ್ತಪಸಾ ಭಾವಿತಾತ್ಮನಾಮ್||

ಪರಾಶರನು ಹೇಳಿದನು: “ರಾಜನ್! ತಪಸ್ಸಿನಿಂದ ಅಂತಃಕರಣ ಶುದ್ಧಿಯಾಗಿರುವ ಮಹಾತ್ಮ ಪುರುಷರು ಹುಟ್ಟಿಸಿದ ಸಂತಾನವು ಅಥವಾ ಅವರು ಸ್ವೇಚ್ಛೆಯಿಂದ ಎಲ್ಲಿಯೇ ಜನ್ಮಗ್ರಹಣಮಾಡಲಿ, ಅದು ಕ್ಷೇತ್ರದ ದೃಷ್ಟಿಯಿಂದ ನಿಕೃಷ್ಟವೆನಿಸಿಕೊಂಡರೂ ಉತ್ಕೃಷ್ಟವಾದುದೆಂದೇ ತಿಳಿಯಬೇಕು.

12285013a ಉತ್ಪಾದ್ಯ ಪುತ್ರಾನ್ಮುನಯೋ ನೃಪತೇ ಯತ್ರ ತತ್ರ ಹ|

12285013c ಸ್ವೇನೈವ ತಪಸಾ ತೇಷಾಮೃಷಿತ್ವಂ ವಿದಧುಃ ಪುನಃ||

ನೃಪತೇ! ಮುನಿಗಳು ಪುತ್ರರನ್ನು ಹುಟ್ಟಿಸಿ ತಮ್ಮದೇ ತಪಸ್ಸಿನ ಮೂಲಕ ಅವರಿಗೆ ಋಷಿತ್ವವನ್ನು ಪುನಃ ನೀಡಿದರು.

12285014a ಪಿತಾಮಹಶ್ಚ ಮೇ ಪೂರ್ವಮೃಷ್ಯಶೃಂಗಶ್ಚ ಕಾಶ್ಯಪಃ|

12285014c ವಟಸ್ತಾಂಡ್ಯಃ[1] ಕೃಪಶ್ಚೈವ ಕಕ್ಷೀವಾನ್ ಕಮಠಾದಯಃ||

12285015a ಯವಕ್ರೀತಶ್ಚ ನೃಪತೇ ದ್ರೋಣಶ್ಚ ವದತಾಂ ವರಃ|

12285015c ಆಯುರ್ಮತಂಗೋ ದತ್ತಶ್ಚ ದ್ರುಪದೋ ಮತ್ಸ್ಯ ಏವ ಚ||

12285016a ಏತೇ ಸ್ವಾಂ ಪ್ರಕೃತಿಂ ಪ್ರಾಪ್ತಾ ವೈದೇಹ ತಪಸೋಽಶ್ರಯಾತ್|

12285016c ಪ್ರತಿಷ್ಠಿತಾ ವೇದವಿದೋ ದಮೇ ತಪಸಿ ಚೈವ ಹಿ||

ನೃಪತೇ! ಹಿಂದೆ ನನ್ನ ಪಿತಾಮಹ ವಸಿಷ್ಠ, ಕಾಶ್ಯಪ ಗೋತ್ರೀಯ ಋಷ್ಯಶೃಂಗ, ವಟ, ತಾಂಡ್ಯ, ಕೃಪ, ಕಕ್ಷೀವಾನ, ಕಮಠ ಮೊದಲಾದವರು, ಯವಕ್ರೀತ, ಮಾತನಾಡುವವರಲ್ಲಿ ಶ್ರೇಷ್ಠ ದ್ರೋಣ, ಆಯು, ಮತಂಗ, ದತ್ತ, ದ್ರುಪದ ಮತ್ತು ಮತ್ಸ್ಯ – ಇವರು ತಪಸ್ಸನ್ನು ಆಶ್ರಯಿಸಿ ತಮ್ಮ ತಮ್ಮ ಪ್ರಕೃತಿಯನ್ನು ಪಡೆದುಕೊಂಡರು. ಇಂದ್ರಿಯಸಂಯಮ, ವೇದಾಧ್ಯಯನ ಮತ್ತು ತಪಸ್ಸಿನಿಂದಲೇ ಪ್ರತಿಷ್ಠಿತರಾದರು.

12285017a ಮೂಲಗೋತ್ರಾಣಿ ಚತ್ವಾರಿ ಸಮುತ್ಪನ್ನಾನಿ ಪಾರ್ಥಿವ|

12285017c ಅಂಗಿರಾಃ ಕಶ್ಯಪಶ್ಚೈವ ವಸಿಷ್ಠೋ ಭೃಗುರೇವ ಚ||

12285018a ಕರ್ಮತೋಽನ್ಯಾನಿ ಗೋತ್ರಾಣಿ ಸಮುತ್ಪನ್ನಾನಿ ಪಾರ್ಥಿವ|

12285018c ನಾಮಧೇಯಾನಿ ತಪಸಾ ತಾನಿ ಚ ಗ್ರಹಣಂ ಸತಾಮ್||

ಪಾರ್ಥಿವ! ಮೂಲತಃ ನಾಲ್ಕು ಗೋತ್ರಗಳು ಹುಟ್ಟಿಕೊಂಡವು: ಆಂಗಿರಸ, ಕಶ್ಯಪ, ವಸಿಷ್ಠ ಮತ್ತು ಭೃಗು. ಅನ್ಯ ಗೋತ್ರಗಳು ಕರ್ಮಾನುಸಾರವಾಗಿ ನಂತರ ಹುಟ್ಟಿಕೊಂಡವು. ಆ ಗೋತ್ರಪ್ರವರ್ತಕ ಋಷಿಗಳ ತಪಸ್ಸಿನ ಪ್ರಭಾವದಿಂದ ಅವುಗಳನ್ನು ಸತ್ಪುರುಷರು ಗೋತ್ರಗಳೆಂದು ಅಂಗೀಕರಿಸಿದರು.”

12285019 ಜನಕ ಉವಾಚ|

12285019a ವಿಶೇಷಧರ್ಮಾನ್ವರ್ಣಾನಾಂ ಪ್ರಬ್ರೂಹಿ ಭಗವನ್ಮಮ|

12285019c ತಥಾ ಸಾಮಾನ್ಯಧರ್ಮಾಂಶ್ಚ ಸರ್ವತ್ರ ಕುಶಲೋ ಹ್ಯಸಿ||

ಜನಕನು ಹೇಳಿದನು: “ಭಗವನ್! ಪ್ರತಿಯೊಂದು ವರ್ಣಕ್ಕೂ ಇರುವ ವಿಶೇಷ ಧರ್ಮಗಳನ್ನೂ, ಸರ್ವ ವರ್ಣದವರಿಗೂ ಇರುವ ಸಾಮಾನ್ಯಧರ್ಮಗಳನ್ನೂ ಹೇಳು. ನೀನು ಎಲ್ಲದರಲ್ಲಿಯೂ ಕುಶಲನಾಗಿರುವೆ.”

12285020 ಪರಾಶರ ಉವಾಚ|

12285020a ಪ್ರತಿಗ್ರಹೋ ಯಾಜನಂ ಚ ತಥೈವಾಧ್ಯಾಪನಂ ನೃಪ|

12285020c ವಿಶೇಷಧರ್ಮೋ ವಿಪ್ರಾಣಾಂ ರಕ್ಷಾ ಕ್ಷತ್ರಸ್ಯ ಶೋಭನಾ||

ಪರಾಶರನು ಹೇಳಿದನು: “ನೃಪ! ದಾನವನ್ನು ಸ್ವೀಕರಿಸುವುದು, ಯಜ್ಞವನ್ನು ಮಾಡಿಸುವುದು ಮತ್ತು ವೇದಗಳ ಅಧ್ಯಾಪನೆಯು ವಿಪ್ರರ ವಿಶೇಷ ಧರ್ಮಗಳು. ಪ್ರಜೆಗಳ ರಕ್ಷಣೆಯು ಕ್ಷತ್ರಿಯರ ವಿಶೇಷಧರ್ಮವು.

12285021a ಕೃಷಿಶ್ಚ ಪಾಶುಪಾಲ್ಯಂ ಚ ವಾಣಿಜ್ಯಂ ಚ ವಿಶಾಮಪಿ|

12285021c ದ್ವಿಜಾನಾಂ ಪರಿಚರ್ಯಾ ಚ ಶೂದ್ರಕರ್ಮ ನರಾಧಿಪ||

ನರಾಧಿಪ! ಕೃಷಿ, ಪಶುಪಾಲನೆ, ಮತ್ತು ವಾಣಿಜ್ಯ ಇವು ವೈಶ್ಯರ ವಿಶೇಷಧರ್ಮಗಳು. ದ್ವಿಜರ ಪರಿಚರ್ಯೆಯು ಶೂದ್ರರ ಕರ್ಮವು.

12285022a ವಿಶೇಷಧರ್ಮಾ ನೃಪತೇ ವರ್ಣಾನಾಂ ಪರಿಕೀರ್ತಿತಾಃ|

12285022c ಧರ್ಮಾನ್ಸಾಧಾರಣಾಂಸ್ತಾತ ವಿಸ್ತರೇಣ ಶೃಣುಷ್ವ ಮೇ||

ನೃಪತೇ! ವರ್ಣಗಳ ವಿಶೇಷಧರ್ಮದ ಕುರಿತು ಹೇಳಿದ್ದಾಯಿತು. ಅಯ್ಯಾ! ಈಗ ಸಾಧಾರಣ ಧರ್ಮಗಳ ಕುರಿತು ನನ್ನಿಂದ ವಿಸ್ತಾರವಾಗಿ ಕೇಳು.

12285023a ಆನೃಶಂಸ್ಯಮಹಿಂಸಾ ಚಾಪ್ರಮಾದಃ ಸಂವಿಭಾಗಿತಾ|

12285023c ಶ್ರಾದ್ಧಕರ್ಮಾತಿಥೇಯಂ ಚ ಸತ್ಯಮಕ್ರೋಧ ಏವ ಚ||

12285024a ಸ್ವೇಷು ದಾರೇಷು ಸಂತೋಷಃ ಶೌಚಂ ನಿತ್ಯಾನಸೂಯತಾ|

12285024c ಆತ್ಮಜ್ಞಾನಂ ತಿತಿಕ್ಷಾ ಚ ಧರ್ಮಾಃ ಸಾಧಾರಣಾ ನೃಪ||

ನೃಪ! ಕ್ರೂರಿಯಾಗಿಲ್ಲದಿರುವುದು, ಅಹಿಂಸೆ, ಅಪ್ರಮಾದ, ತನ್ನಲ್ಲಿರುವುದನ್ನು ಯಥಾಯೋಗ್ಯವಾಗಿ ಹಂಚಿಕೊಳ್ಳುವುದು[2], ಶ್ರಾದ್ಧಕರ್ಮಗಳನ್ನು ಮತ್ತು ಅತಿಥಿಸತ್ಕಾರಗಳನ್ನು ಮಾಡುವುದು, ಸತ್ಯ, ಅಕ್ರೋಧ, ತನ್ನ ಪತ್ನಿಯೊಂದಿಗೇ ಸಂತುಷ್ಟನಾಗಿರುವುದು, ಶುಚಿಯಾಗಿರುವುದು, ನಿತ್ಯವೂ ಇನ್ನೊಬ್ಬರಲ್ಲಿ ದೋಷವನ್ನು ಕಾಣದೇ ಇರುವುದು, ಆತ್ಮಜ್ಞಾನ ಮತ್ತು ಸಹನಶೀಲತೆ – ಇವು ಎಲ್ಲ ವರ್ಣದವರಿಗೂ ಸಾಮಾನ್ಯ ಧರ್ಮವಾಗಿದೆ.

12285025a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಸ್ತ್ರಯೋ ವರ್ಣಾ ದ್ವಿಜಾತಯಃ|

12285025c ಅತ್ರ ತೇಷಾಮಧೀಕಾರೋ ಧರ್ಮೇಷು ದ್ವಿಪದಾಂ ವರ||

ನರಶ್ರೇಷ್ಠ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ವರ್ಣದವರನ್ನು ದ್ವಿಜಾತಿಯವರೆಂದು ಹೇಳುತ್ತಾರೆ. ಈಗ ಹೇಳಿದ ಧರ್ಮಗಳ ಅಧಿಕಾರವು ದ್ವಿಜಾತಿಯವರಿಗೆ ಮಾತ್ರ ಇದೆ.

12285026a ವಿಕರ್ಮಾವಸ್ಥಿತಾ ವರ್ಣಾಃ ಪತಂತಿ ನೃಪತೇ ತ್ರಯಃ|

12285026c ಉನ್ನಮಂತಿ ಯಥಾಸಂತಮಾಶ್ರಿತ್ಯೇಹ ಸ್ವಕರ್ಮಸು||

ಈ ಮೂರು ವರ್ಣದವರು ವಿಪರೀತ ಕರ್ಮಗಳಲ್ಲಿ ತೊಡಗಿದರೆ ಪತಿತರಾಗುತ್ತಾರೆ. ಸಂತರನ್ನು ಆಶ್ರಯಿಸಿ ಸ್ವಕರ್ಮಗಳಲ್ಲಿ ತೊಡಗಿದವರು ಉನ್ನತರಾಗುತ್ತಾರೆ.

12285027a ನ ಚಾಪಿ ಶೂದ್ರಃ ಪತತೀತಿ ನಿಶ್ಚಯೋ

ನ ಚಾಪಿ ಸಂಸ್ಕಾರಮಿಹಾರ್ಹತೀತಿ ವಾ|

12285027c ಶ್ರುತಿಪ್ರವೃತ್ತಂ ನ ಚ ಧರ್ಮಮಾಪ್ನುತೇ

ನ ಚಾಸ್ಯ ಧರ್ಮೇ ಪ್ರತಿಷೇಧನಂ ಕೃತಮ್||

ಶೂದ್ರನು ಪತಿತನಾಗುವುದಿಲ್ಲವೆಂದೂ ಅಥವಾ ಅವನು ಸಂಸ್ಕಾರಾದಿಗಳಿಗೆ ಅರ್ಹನಲ್ಲನೆಂದೂ ನಿಶ್ಚಯವಿದೆ. ವೇದೋಕ್ತ ಕರ್ಮಪ್ರವೃತ್ತ ಧರ್ಮಗಳನ್ನೂ ಅವರಿಗೆ ಹೇಳಿಲ್ಲ ಮತ್ತು ಮೇಲೆ ಹೇಳಿದ ಧರ್ಮಗಳನ್ನೂ ಅವರಿಗೆ ನಿಷಿದ್ಧವೆಂದಿಲ್ಲ.

12285028a ವೈದೇಹಕಂ ಶೂದ್ರಮುದಾಹರಂತಿ

ದ್ವಿಜಾ ಮಹಾರಾಜ ಶ್ರುತೋಪಪನ್ನಾಃ|

12285028c ಅಹಂ ಹಿ ಪಶ್ಯಾಮಿ ನರೇಂದ್ರ ದೇವಂ

ವಿಶ್ವಸ್ಯ ವಿಷ್ಣುಂ ಜಗತಃ ಪ್ರಧಾನಮ್||

ವೈದೇಹ! ಮಹಾರಾಜ! ವೇದಶಾಸ್ತ್ರಗಳ ಜ್ಞಾನಸಂಪನ್ನರು ಶೂದ್ರರನ್ನು ಪ್ರಜಾಪತಿಯ ಸಮಾನರೆಂದು ಹೇಳುತ್ತಾರೆ. ಆದರೆ ನರೇಂದ್ರ! ನಾನು ಅವರನ್ನು ಜಗತ್ತಿನ ಪ್ರಧಾನ ರಕ್ಷಕ ಭಗವಾನ್ ವಿಷ್ಣುವಿನ ರೂಪದಲ್ಲಿ ಕಾಣುತ್ತೇನೆ.

12285029a ಸತಾಂ ವೃತ್ತಮನುಷ್ಠಾಯ ನಿಹೀನಾ ಉಜ್ಜಿಹೀರ್ಷವಃ|

12285029c ಮಂತ್ರವರ್ಜಂ ನ ದುಷ್ಯಂತಿ ಕುರ್ವಾಣಾಃ ಪೌಷ್ಟಿಕೀಃ ಕ್ರಿಯಾಃ||

ಆತ್ಮೋದ್ಧಾರವನ್ನು ಬಯಸುವ ಶೂದ್ರರು ಸತ್ಪುರುಷರ ಸದಾಚಾರಗಳನ್ನು ಅನುಷ್ಠಾನ ಮಾಡುತ್ತಾ ಮಂತ್ರವರ್ಜಿತವಾದ ಆತ್ಮೋನ್ನತಿಸಂಬಂಧೀ ಕ್ರಿಯೆಗಳನ್ನು ಮಾಡಬೇಕು. ಇದರಿಂದ ಅವರಿಗೆ ದೋಷಗಳುಂಟಾಗುವುದಿಲ್ಲ.

12285030a ಯಥಾ ಯಥಾ ಹಿ ಸದ್ವೃತ್ತಮಾಲಂಬಂತೀತರೇ ಜನಾಃ|

12285030c ತಥಾ ತಥಾ ಸುಖಂ ಪ್ರಾಪ್ಯ ಪ್ರೇತ್ಯ ಚೇಹ ಚ ಶೇರತೇ[3]||

ಇತರ ಜನರು ಯಾವ ಯಾವ ರೀತಿಯಲ್ಲಿ ಸದಾಚಾರಗಳನ್ನು ಆಚರಿಸುವರೋ ಆಯಾ ರೀತಿಯಲ್ಲಿಯೇ ಶೂದ್ರರೂ ಸದಾಚಾರಗಳನ್ನು ಆಚರಿಸಿದರೆ ಸುಖವನ್ನು ಪಡೆದು ಇಹ-ಪರಗಳೆರಡರಲ್ಲೂ ಮೆರೆಯುತ್ತಾರೆ.”

12285031 ಜನಕ ಉವಾಚ|

12285031a ಕಿಂ ಕರ್ಮ ದೂಷಯತ್ಯೇನಮಥ ಜಾತಿರ್ಮಹಾಮುನೇ|

12285031c ಸಂದೇಹೋ ಮೇ ಸಮುತ್ಪನ್ನಸ್ತನ್ಮೇ ವ್ಯಾಖ್ಯಾತುಮರ್ಹಸಿ||

ಜನಕನು ಹೇಳಿದನು: “ಮಹಾಮುನೇ! ಮನುಷ್ಯನನ್ನು ಅವನ ಕರ್ಮವು ದೂಷಿತನನ್ನಾಗಿ ಮಾಡುತ್ತದೆಯೋ ಅಥವಾ ಅವನ ಜಾತಿ? ನನ್ನಲ್ಲಿ ಈ ಸಂದೇಹವು ಹುಟ್ಟಿಕೊಂಡಿದೆ. ಇದರಕುರಿತಾದ ವಿವೇಚನೆಯನ್ನು ಹೇಳಬೇಕು.”

12285032 ಪರಾಶರ ಉವಾಚ|

12285032a ಅಸಂಶಯಂ ಮಹಾರಾಜ ಉಭಯಂ ದೋಷಕಾರಕಮ್|

12285032c ಕರ್ಮ ಚೈವ ಹಿ ಜಾತಿಶ್ಚ ವಿಶೇಷಂ ತು ನಿಶಾಮಯ||

ಪರಾಶರನು ಹೇಳಿದನು: “ಮಹಾರಾಜ! ಅಸಂಶಯವಾಗಿ ಇವೆರಡೂ ದೋಷಕಾರಕಗಳೇ. ಆದರೆ ಇದರಲ್ಲಿರುವ ವಿಶೇಷ ವಿಷಯವನ್ನು ಹೇಳುತ್ತೇನೆ. ಕೇಳು.

12285033a ಜಾತ್ಯಾ ಚ ಕರ್ಮಣಾ ಚೈವ ದುಷ್ಟಂ ಕರ್ಮ ನಿಷೇವತೇ|

12285033c ಜಾತ್ಯಾ ದುಷ್ಟಶ್ಚ ಯಃ ಪಾಪಂ ನ ಕರೋತಿ ಸ ಪೂರುಷಃ||

ಜಾತಿ ಮತ್ತು ಕರ್ಮ ಇವೆರಡರಲ್ಲೂ ಶ್ರೇಷ್ಠನಾಗಿದ್ದು ದುಷ್ಟಕರ್ಮಗಳನ್ನು ಮಾಡದೇ ಇರುವವರು ಹಾಗೂ ಜಾತಿಯಲ್ಲಿ ದುಷ್ಟನಾಗಿದ್ದರೂ ಪಾಪಕರ್ಮಗಳನ್ನು ಮಾಡದೇ ಇರುವವರು ಯೋಗ್ಯ ಪುರುಷರು.

12285034a ಜಾತ್ಯಾ ಪ್ರಧಾನಂ ಪುರುಷಂ ಕುರ್ವಾಣಂ ಕರ್ಮ ಧಿಕ್ಕೃತಮ್|

12285034c ಕರ್ಮ ತದ್ದೂಷಯತ್ಯೇನಂ ತಸ್ಮಾತ್ಕರ್ಮ ನಶೋಭನಮ್||

ಜಾತಿಯಿಂದ ಪ್ರಧಾನನಾದ ಪುರುಷನೂ ಕೂಡ ನಿಂದಿತ ಕರ್ಮಗಳನ್ನು ಮಾಡಿದರೆ ಕಲಂಕಿತನಾಗುತ್ತಾನೆ. ಆದುದರಿಂದ ಹೇಗೆ ನೋಡಿದರೂ ಪಾಪಕರ್ಮಗಳನ್ನು ಮಾಡುವುದು ಒಳ್ಳೆಯದಲ್ಲ.”

12285035 ಜನಕ ಉವಾಚ|

12285035a ಕಾನಿ ಕರ್ಮಾಣಿ ಧರ್ಮ್ಯಾಣಿ ಲೋಕೇಽಸ್ಮಿನ್ ದ್ವಿಜಸತ್ತಮ|

12285035c ನ ಹಿಂಸಂತೀಹ ಭೂತಾನಿ ಕ್ರಿಯಮಾಣಾನಿ ಸರ್ವದಾ||

ಜನಕನು ಹೇಳಿದನು: “ದ್ವಿಜಸತ್ತಮ! ಈ ಲೋಕದಲ್ಲಿ ಇತರ ಭೂತಗಳಿಗೆ ಹಿಂಸೆಯಾಗದಂತಿರುವ ಯಾವ ಧರ್ಮವನ್ನು ಸರ್ವದಾ ಪಾಲಿಸಬೇಕು ಮತ್ತು ಅಂಥಹ ಯಾವ ಕರ್ಮಗಳನ್ನು ಮಾಡುತ್ತಿರಬೇಕು?”

12285036 ಪರಾಶರ ಉವಾಚ|

12285036a ಶೃಣು ಮೇಽತ್ರ ಮಹಾರಾಜ ಯನ್ಮಾಂ ತ್ವಂ ಪರಿಪೃಚ್ಚಸಿ|

12285036c ಯಾನಿ ಕರ್ಮಾಣ್ಯಹಿಂಸ್ರಾಣಿ ನರಂ ತ್ರಾಯಂತಿ ಸರ್ವದಾ||

ಪರಾಶರನು ಹೇಳಿದನು: “ಮಹಾರಾಜ! ನೀನು ಕೇಳಿದ ವಿಷಯದ ಕುರಿತು ಹೇಳುತ್ತೇನೆ. ಕೇಳು. ಹಿಂಸಾರಹಿತ ಕರ್ಮಗಳು ಸದಾ ಮನುಷ್ಯನನ್ನು ರಕ್ಷಿಸುತ್ತವೆ.

12285037a ಸಂನ್ಯಸ್ಯಾಗ್ನೀನುಪಾಸೀನಾಃ ಪಶ್ಯಂತಿ ವಿಗತಜ್ವರಾಃ|

12285037c ನೈಃಶ್ರೇಯಸಂ ಧರ್ಮಪಥಂ ಸಮಾರುಹ್ಯ ಯಥಾಕ್ರಮಮ್||

12285038a ಪ್ರಶ್ರಿತಾ ವಿನಯೋಪೇತಾ ದಮನಿತ್ಯಾಃ ಸುಸಂಶಿತಾಃ|

12285038c ಪ್ರಯಾಂತಿ ಸ್ಥಾನಮಜರಂ ಸರ್ವಕರ್ಮವಿವರ್ಜಿತಾಃ||

ಅಗ್ನಿಹೋತ್ರವನ್ನು ಸಮಾರೋಪಣೆಮಾಡಿಕೊಂಡು ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಿ ಎಲ್ಲವನ್ನೂ ಉದಾಸೀನಭಾವದಿಂದ ನೋಡುವ, ಎಲ್ಲ ವಿಧದ ಚಿಂತೆಗಳಿಂದಲೂ ರಹಿತರಾಗಿರುವ, ಅನುಕ್ರಮವಾಗಿ ಮೋಕ್ಷದಾಯಕ ಕರ್ಮಮಾರ್ಗವನ್ನು ಹಿಡಿದು ಹೋಗುತ್ತಿರುವ, ವಿಧೇಯ, ವಿನಯಯುಕ್ತ, ಇಂದ್ರಿಯ ನಿಗ್ರಹವೇ ಮೊದಲಾದ ಗುಣಯುಕ್ತರಾದ, ಕಠೋರವ್ರತನಿಷ್ಠರು ಸರ್ವಕರ್ಮಗಳಿಂದಲೂ ಮುಕ್ತರಾಗಿ ಅವಿನಾಶೀ ಸ್ಥಾನವನ್ನು ಪಡೆಯುತ್ತಾರೆ.

12285039a ಸರ್ವೇ ವರ್ಣಾ ಧರ್ಮಕಾರ್ಯಾಣಿ ಸಮ್ಯಕ್

ಕೃತ್ವಾ ರಾಜನ್ಸತ್ಯವಾಕ್ಯಾನಿ ಚೋಕ್ತ್ವಾ|

12285039c ತ್ಯಕ್ತ್ವಾಧರ್ಮಂ ದಾರುಣಂ ಜೀವಲೋಕೇ

ಯಾಂತಿ ಸ್ವರ್ಗಂ ನಾತ್ರ ಕಾರ್ಯೋ ವಿಚಾರಃ||

ರಾಜನ್! ಈ ಜೀವಲೋಕದಲ್ಲಿ ಸರ್ವವರ್ಣದವರೂ ತಮ್ಮ ತಮ್ಮ ಧರ್ಮಕಾರ್ಯಗಳನ್ನು ಚೆನ್ನಾಗಿ ಮಾಡಿ, ದಾರುಣ ಅಧರ್ಮವನ್ನು ತ್ಯಜಿಸಿದರೆ ಎಲ್ಲರೂ ಸ್ವರ್ಗವನ್ನೇ ಸೇರುತ್ತಾರೆ. ಇದರಲ್ಲಿ ವಿಚಾರಮಾಡುವುದೇನೂ ಇಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಪರಾಶರಗೀತಾಯಾಂ ಪಂಚಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತೈದನೇ ಅಧ್ಯಾಯವು.

[1] ವೇದಸ್ತಾಂಡ್ಯಃ (ಗೀತಾ ಪ್ರೆಸ್/ಭಾರತ ದರ್ಶನ).

[2] ದೇವತೆಗಳು ಪಿತೃಗಳು ಮೊದಲಾವರಿಗೆ ಅವರ ಭಾಗಗಳನ್ನು ಸಮರ್ಪಿಸುವುದು ಅಥವಾ ದಾನವನ್ನು ನೀಡುವುದು (ಗೀತಾ ಪ್ರೆಸ್).

[3] ಮೋದತೇ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.