Shanti Parva: Chapter 284

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೪

ವಿಷಯಾಸಕ್ತನ ಪತನ, ತಪೋಬಲದ ಶ್ರೇಷ್ಠತೆ ಮತ್ತು ಸ್ವಧರ್ಮಪಾಲನೆಯ ಆದೇಶ (1-39).

12284001 ಪರಾಶರ ಉವಾಚ|

12284001a ಏಷ ಧರ್ಮವಿಧಿಸ್ತಾತ ಗೃಹಸ್ಥಸ್ಯ ಪ್ರಕೀರ್ತಿತಃ|

12284001c ತಪೋವಿಧಿಂ ತು ವಕ್ಷ್ಯಾಮಿ ತನ್ಮೇ ನಿಗದತಃ ಶೃಣು||

ಪರಾಶರನು ಹೇಳಿದನು: “ಅಯ್ಯಾ! ಇದೂವರೆಗೆ ಗೃಹಸ್ಥನ ಧರ್ಮವಿಧಿಗಳನ್ನು ಹೇಳಿದೆನು. ಈಗ ತಪೋವಿಧಿಯನ್ನು ಹೇಳುತ್ತೇನೆ. ನನ್ನಿಂದ ಅದನ್ನು ಕೇಳು.

12284002a ಪ್ರಾಯೇಣ ಹಿ ಗೃಹಸ್ಥಸ್ಯ ಮಮತ್ವಂ ನಾಮ ಜಾಯತೇ|

12284002c ಸಂಗಾಗತಂ ನರಶ್ರೇಷ್ಠ ಭಾವೈಸ್ತಾಮಸರಾಜಸೈಃ||

ನರಶ್ರೇಷ್ಠ! ಪ್ರಾಯಶಃ ತಾಮಸ ಮತ್ತು ರಾಜಸ ಭಾವಗಳಿಂದ ಗೃಹಸ್ಥನಲ್ಲಿ ಸಂಸರ್ಗವಶದಿಂದ ಪದಾರ್ಥ ಮತ್ತು ವ್ಯಕ್ತಿಗಳಲ್ಲಿ ಮಮತೆಯುಂಟಾಗುತ್ತದೆ.

12284003a ಗೃಹಾಣ್ಯಾಶ್ರಿತ್ಯ ಗಾವಶ್ಚ ಕ್ಷೇತ್ರಾಣಿ ಚ ಧನಾನಿ ಚ|

12284003c ದಾರಾಃ ಪುತ್ರಾಶ್ಚ ಭೃತ್ಯಾಶ್ಚ ಭವಂತೀಹ ನರಸ್ಯ ವೈ||

ಗೃಹವನ್ನಾಶ್ರಯಿಸಿದ ನರನಿಗೆ ಗೋವುಗಳು, ಹೊಲಗಳು, ಧನಸಂಪತ್ತು, ಪತ್ನಿ-ಪುತ್ರರು, ಸೇವಕರು ಮೊದಲಾದವುಗಳೊಂದಿಗೆ ಸಂಬಂಧವುಂಟಾಗಿಬಿಡುತ್ತದೆ.

12284004a ಏವಂ ತಸ್ಯ ಪ್ರವೃತ್ತಸ್ಯ ನಿತ್ಯಮೇವಾನುಪಶ್ಯತಃ|

12284004c ರಾಗದ್ವೇಷೌ ವಿವರ್ಧೇತೇ ಹ್ಯನಿತ್ಯತ್ವಮಪಶ್ಯತಃ||

ಹೀಗೆ ಪ್ರವೃತ್ತಿಮಾರ್ಗದಲ್ಲಿದ್ದುಕೊಂಡು ಅವನು ನಿತ್ಯವೂ ಈ ವಸ್ತುಗಳನ್ನು ನೋಡುತ್ತಿರುತ್ತಾನೆ, ಆದರೆ ಅವುಗಳ ಅನಿತ್ಯತೆಯ ಕುರಿತು ದೃಷ್ಟಿಹಾಯಿಸುವುದಿಲ್ಲ. ಇದರಿಂದಾಗಿ ಅವನ ಮನಸ್ಸಿನಲ್ಲಿ ಅವುಗಳ ಕುರಿತು ರಾಗ-ದ್ವೇಷಗಳು ಹೆಚ್ಚಾಗುತ್ತಿರುತ್ತವೆ.

12284005a ರಾಗದ್ವೇಷಾಭಿಭೂತಂ ಚ ನರಂ ದ್ರವ್ಯವಶಾನುಗಮ್|

12284005c ಮೋಹಜಾತಾ ರತಿರ್ನಾಮ ಸಮುಪೈತಿ ನರಾಧಿಪ||

ನರಾಧಿಪ! ರಾಗ-ದ್ವೇಷಗಳ ವಶನಾಗಿ ದ್ರವ್ಯಗಳಲ್ಲಿ ಆಸಕ್ತನಾದ ಮನುಷ್ಯನ ಬಳಿ ಮೋಹದ ಕನ್ಯೆ ರತಿಯು ಬರುತ್ತಾಳೆ.

12284006a ಕೃತಾರ್ಥೋ ಭೋಗತೋ ಭೂತ್ವಾ ಸ ವೈ ರತಿಪರಾಯಣಃ|

12284006c ಲಾಭಂ ಗ್ರಾಮ್ಯಸುಖಾದನ್ಯಂ ರತಿತೋ ನಾನುಪಶ್ಯತಿ||

ರತಿಪರಾಯಣರಾದ ಎಲ್ಲರೂ ಭೋಗದಿಂದಲೇ ಕೃತಾರ್ಥರಾದವೆಂದು ತಿಳಿದು, ರತಿಯಿಂದ ದೊರಕುವ ಇಂದ್ರಿಯ ಸುಖಕ್ಕಿಂತಲೂ ಇರುವ ಅನ್ಯ ಲಾಭವನ್ನು ತಿಳಿದುಕೊಳ್ಳುವುದಿಲ್ಲ.

12284007a ತತೋ ಲೋಭಾಭಿಭೂತಾತ್ಮಾ ಸಂಗಾದ್ವರ್ಧಯತೇ ಜನಮ್|

12284007c ಪುಷ್ಟ್ಯರ್ಥಂ ಚೈವ ತಸ್ಯೇಹ ಜನಸ್ಯಾರ್ಥಂ ಚಿಕೀರ್ಷತಿ||

ಅನಂತರ ಅವನು ಲೋಭವಶನಾಗಿ ಆಸಕ್ತಿವಶ ತನ್ನ ಪರಿಜನರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ತದನಂತರ ಆ ಕುಟುಂಬೀಜನರ ಪಾಲನ-ಪೋಷಣೆಗಾಗಿ ಧನಸಂಗ್ರಹವನ್ನು ಬಯಸುತ್ತಾನೆ.

12284008a ಸ ಜಾನನ್ನಪಿ ಚಾಕಾರ್ಯಮರ್ಥಾರ್ಥಂ ಸೇವತೇ ನರಃ|

12284008c ಬಾಲಸ್ನೇಹಪರೀತಾತ್ಮಾ ತತ್ಕ್ಷಯಾಚ್ಚಾನುತಪ್ಯತೇ||

ಪಾಪಕರ್ಮವೆಂದು ತಿಳಿದರೂ ಧನಕ್ಕೋಸ್ಕರ ನರನು ಪಾಪಕರ್ಮಗಳನ್ನು ಮಾಡುತ್ತಾನೆ. ಬಾಲಮಕ್ಕಳ ಕುರಿತು ಅತಿಯಾದ ಸ್ನೇಹದಿಂದಿದ್ದು ಅವರಲ್ಲಿ ಯಾರಾದರೂ ತೀರಿಕೊಂಡರೆ ಪುನಃ ಪುನಃ ಸಂತಾಪಪಡುತ್ತಿರುತ್ತಾನೆ.

12284009a ತತೋ ಮಾನೇನ ಸಂಪನ್ನೋ ರಕ್ಷನ್ನಾತ್ಮಪರಾಜಯಮ್|

12284009c ಕರೋತಿ ಯೇನ ಭೋಗೀ ಸ್ಯಾಮಿತಿ ತಸ್ಮಾದ್ವಿನಶ್ಯತಿ||

ಧನಸಂಗ್ರಹದಿಂದ ಮಾನಸಂಪನ್ನನಾದಾಗ ತನ್ನನ್ನು ಪರಾಜಯದಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ತಾನು ಭೋಗಸಾಮಾಗ್ರಿಗಳ ಸಂಪನ್ನನಾಗಬೇಕು ಎಂದು ಅದೇ ಕಾರ್ಯಗಳನ್ನು ಪುನಃ  ಪುನಃ ಮಾಡುತ್ತಾ ಒಂದು ದಿನ ಸಾಯುತ್ತಾನೆ.

12284010a ತಪೋ[1] ಹಿ ಬುದ್ಧಿಯುಕ್ತಾನಾಂ ಶಾಶ್ವತಂ ಬ್ರಹ್ಮದರ್ಶನಮ್|

12284010c ಅನ್ವಿಚ್ಚತಾಂ ಶುಭಂ ಕರ್ಮ ನರಾಣಾಂ ತ್ಯಜತಾಂ ಸುಖಮ್||

ಸಮತ್ವದಿಂದ ಶುಭಕರ್ಮಗಳನ್ನು ಮಾಡುವ ಮತ್ತು ಅನಿತ್ಯವಾದ ಪ್ರಾಪಂಚಿಕ ಸುಖವನ್ನು ತ್ಯಾಗಮಾಡುವ ತಪಸ್ಸೇ ಬುದ್ಧಿಯುಕ್ತರಿಗೆ ಶಾಶ್ವತ ಬ್ರಹ್ಮದರ್ಶನವನ್ನು ನೀಡುವಂಥಹುದು.

12284011a ಸ್ನೇಹಾಯತನನಾಶಾಚ್ಚ ಧನನಾಶಾಚ್ಚ ಪಾರ್ಥಿವ|

12284011c ಆಧಿವ್ಯಾಧಿಪ್ರತಾಪಾಚ್ಚ ನಿರ್ವೇದಮುಪಗಚ್ಚತಿ||

ಪಾರ್ಥಿವ! ಸಂಸಾರಿಗಳಿಗೆ ತಮ್ಮ ಸ್ನೇಹದಲ್ಲಿರುವ ಪತ್ನಿ-ಪುತ್ರರ ನಾಶವಾದಾಗ, ಧನವು ನಾಶವಾದಾಗ ಮತ್ತು ರೋಗ ಮತ್ತು ಚಿಂತೆಗಳಿಂದ ಕಷ್ಟಬಂದೊದಗಿದಾಗ ಮಾತ್ರ ವೈರಾಗ್ಯವುಂಟಾಗುತ್ತದೆ.

12284012a ನಿರ್ವೇದಾದಾತ್ಮಸಂಬೋಧಃ ಸಂಬೋಧಾಚ್ಚಾಸ್ತ್ರದರ್ಶನಮ್|

12284012c ಶಾಸ್ತ್ರಾರ್ಥದರ್ಶನಾದ್ರಾಜಂಸ್ತಪ ಏವಾನುಪಶ್ಯತಿ||

ವೈರಾಗ್ಯದಿಂದ ಮನುಷ್ಯನಲ್ಲಿ ಆತ್ಮತತ್ತ್ವದ ಜಿಜ್ಞಾಸೆಯುಂಟಾಗುತ್ತದೆ. ಆ ಜಿಜ್ಞಾಸೆಯಿಂದ ಅವನು ಶಾಸ್ತ್ರಗಳ ಸ್ವಾಧ್ಯಾಯದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುತ್ತಾನೆ ಮತ್ತು ಶಾಸ್ತ್ರಗಳ ಅರ್ಥ ಮತ್ತು ಭಾವಗಳ ಜ್ಞಾನದ ಮೂಲಕ ತಪಸ್ಸೇ ಕಲ್ಯಾಣಕ್ಕೆ ಸಾಧನವೆಂದು ಅರಿತುಕೊಳ್ಳುತ್ತಾನೆ.

12284013a ದುರ್ಲಭೋ ಹಿ ಮನುಷ್ಯೇಂದ್ರ ನರಃ ಪ್ರತ್ಯವಮರ್ಶವಾನ್|

12284013c ಯೋ ವೈ ಪ್ರಿಯಸುಖೇ ಕ್ಷೀಣೇ ತಪಃ ಕರ್ತುಂ ವ್ಯವಸ್ಯತಿ||

ಮನುಷ್ಯೇಂದ್ರ! ಸಂಸಾರದಲ್ಲಿ  ಸ್ತ್ರೀ-ಪುತ್ರಾದಿ ಪ್ರಿಯಜನರಿಂದ ದೊರಕುವ ಸುಖವಿಲ್ಲದೇ ಹೋದಾಗ ತಪಸ್ಸಿನಲ್ಲಿ ಪ್ರವೃತ್ತಗೊಳ್ಳುವ ಮನುಷ್ಯನು ದುರ್ಲಭನು.

12284014a ತಪಃ ಸರ್ವಗತಂ ತಾತ ಹೀನಸ್ಯಾಪಿ ವಿಧೀಯತೇ|

12284014c ಜಿತೇಂದ್ರಿಯಸ್ಯ ದಾಂತಸ್ಯ ಸ್ವರ್ಗಮಾರ್ಗಪ್ರದೇಶಕಮ್||

ಅಯ್ಯಾ! ಎಲ್ಲರಿಗೂ ತಪಸ್ಸಿನ ಅಧಿಕಾರವಿದೆ. ಜಿತೇಂದ್ರಿಯ ಮತ್ತು ಮನೋನಿಗ್ರಹಸಂಪನ್ನ ಹೀನ ವರ್ಣದವರಿಗೂ ಕೂಡ ತಪಸ್ಸಿನ ವಿಧಾನವಿದೆ. ಏಕೆಂದರೆ ತಪಸ್ಸು ಮನುಷ್ಯನನ್ನು ಸ್ವರ್ಗಮಾರ್ಗದಲ್ಲಿರುವಂತೆ ಮಾಡುತ್ತದೆ.

12284015a ಪ್ರಜಾಪತಿಃ ಪ್ರಜಾಃ ಪೂರ್ವಮಸೃಜತ್ತಪಸಾ ವಿಭುಃ|

12284015c ಕ್ವ ಚಿತ್ಕ್ವ ಚಿದ್ವ್ರತಪರೋ ವ್ರತಾನ್ಯಾಸ್ಥಾಯ ಪಾರ್ಥಿವ||

ಪಾರ್ಥಿವ! ಹಿಂದೆ ವಿಭು ಪ್ರಜಾಪತಿಯು ತಪಸ್ಸಿನಿಂದ ಮತ್ತು ಇನ್ನೂ ಯಾವ್ಯಾವುದೋ ವ್ರತಗಳನ್ನಾಚರಿಸಿ ಪ್ರಜೆಗಳನ್ನು ಸೃಷ್ಟಿಸಿದ್ದನು.

12284016a ಆದಿತ್ಯಾ ವಸವೋ ರುದ್ರಾಸ್ತಥೈವಾಗ್ನ್ಯಶ್ವಿಮಾರುತಾಃ|

12284016c ವಿಶ್ವೇದೇವಾಸ್ತಥಾ ಸಾಧ್ಯಾಃ ಪಿತರೋಽಥ ಮರುದ್ಗಣಾಃ||

12284017a ಯಕ್ಷರಾಕ್ಷಸಗಂಧರ್ವಾಃ ಸಿದ್ಧಾಶ್ಚಾನ್ಯೇ ದಿವೌಕಸಃ|

12284017c ಸಂಸಿದ್ಧಾಸ್ತಪಸಾ ತಾತ ಯೇ ಚಾನ್ಯೇ ಸ್ವರ್ಗವಾಸಿನಃ||

ಅಯ್ಯಾ! ಆದಿತ್ಯರು, ವಸುಗಳು, ರುದ್ರರು, ಅಗ್ನಿ, ಅಶ್ವಿನೀ ಕುಮಾರರು, ವಾಯು, ವಿಶ್ವೇದೇವರು, ಸಾಧ್ಯರು, ಪಿತೃಗಳು, ಮರುದ್ಗಣಗಳು, ಯಕ್ಷ-ರಾಕ್ಷಸ-ಗಂಧರ್ವರು, ಸಿದ್ಧರು ಮತ್ತು ಅನ್ಯ ದಿವೌಕಸರು ಹಾಗೂ ಅನ್ಯ ಸ್ವರ್ಗವಾಸಿಗಳು – ಎಲ್ಲರೂ ತಪಸ್ಸಿನಿಂದಲೇ ಸಿದ್ಧಿಯನ್ನು ಪಡೆದುಕೊಂಡರು.

12284018a ಯೇ ಚಾದೌ ಬ್ರಹ್ಮಣಾ ಸೃಷ್ಟಾ ಬ್ರಾಹ್ಮಣಾಸ್ತಪಸಾ ಪುರಾ|

12284018c ತೇ ಭಾವಯಂತಃ ಪೃಥಿವೀಂ ವಿಚರಂತಿ ದಿವಂ ತಥಾ||

ಪೂರ್ವಕಾಲದಲ್ಲಿ ಬ್ರಹ್ಮನು ಮರೀಚಿಯೇ ಮೊದಲಾದ ಯಾವ ಬ್ರಾಹ್ಮಣರನ್ನು ಸೃಷ್ಟಿಸಿದ್ದನೋ ಅವರೂ ಕೂಡ ತಪಸ್ಸಿನ ಪ್ರಭಾವದಿಂದಲೇ ಪೃಥ್ವಿ ಮತ್ತು ಆಕಾಶಗಳನ್ನು ಪವಿತ್ರಗೊಳಿಸುತ್ತಾ ಸಂಚರಿಸುತ್ತಾರೆ.

12284019a ಮರ್ತ್ಯಲೋಕೇ ಚ ರಾಜಾನೋ ಯೇ ಚಾನ್ಯೇ ಗೃಹಮೇಧಿನಃ|

12284019c ಮಹಾಕುಲೇಷು ದೃಶ್ಯಂತೇ ತತ್ಸರ್ವಂ ತಪಸಃ ಫಲಮ್||

ಮರ್ತ್ಯಲೋಕದಲ್ಲಿ ಯಾವ ರಾಜರಿರುವರೋ ಮತ್ತು ಅನ್ಯ ಗೃಹಸ್ಥ ಮಹಾಕುಲಗಳಲ್ಲಿ ಉತ್ಪನ್ನರಾದವರನ್ನು ನೋಡುತ್ತೇವೋ ಅವರೆಲ್ಲರೂ ಅವರ ತಪಸ್ಸಿನ ಫಲಗಳೇ ಆಗಿದ್ದಾರೆ.

12284020a ಕೌಶಿಕಾನಿ ಚ ವಸ್ತ್ರಾಣಿ ಶುಭಾನ್ಯಾಭರಣಾನಿ ಚ|

12284020c ವಾಹನಾಸನಯಾನಾನಿ ಸರ್ವಂ ತತ್ತಪಸಃ ಫಲಮ್||

ರೇಷ್ಮೆ ವಸ್ತ್ರ, ಸುಂದರ ಆಭೂಷಣಗಳು, ವಾಹನ, ಆಸನ ಮತ್ತು ಉತ್ತಮ ಖಾದ್ಯಗಳು ಎಲ್ಲವೂ ತಪಸ್ಸಿನದೇ ಫಲಗಳು.

12284021a ಮನೋನುಕೂಲಾಃ ಪ್ರಮದಾ ರೂಪವತ್ಯಃ ಸಹಸ್ರಶಃ|

12284021c ವಾಸಃ ಪ್ರಾಸಾದಪೃಷ್ಠೇ ಚ ತತ್ಸರ್ವಂ ತಪಸಃ ಫಲಮ್||

ಮನೋನುಕೂಲರಾಗಿರುವ ಸಹಸ್ರಾರು ರೂಪವತೀ ಯುವತಿಯರು, ಉತ್ತಮ ಭವನಗಳಲ್ಲಿ ವಾಸ ಇವೆಲ್ಲವೂ ತಪಸ್ಸಿನದೇ ಫಲಗಳು.

12284022a ಶಯನಾನಿ ಚ ಮುಖ್ಯಾನಿ ಭೋಜ್ಯಾನಿ ವಿವಿಧಾನಿ ಚ|

12284022c ಅಭಿಪ್ರೇತಾನಿ ಸರ್ವಾಣಿ ಭವಂತಿ ಕೃತಕರ್ಮಣಾಮ್[2]||

ಕೃತಕರ್ಮಿಗಳಿಗೆ ಶ್ರೇಷ್ಠ ಹಾಸಿಗೆಗಳೂ, ವಿವಿಧ ಭೋಜ್ಯಗಳೂ, ಮತ್ತು ಬಯಸಿದ ಎಲ್ಲವೂ ದೊರೆಯುತ್ತವೆ.

12284023a ನಾಪ್ರಾಪ್ಯಂ ತಪಸಾ ಕಿಂ ಚಿತ್ತ್ರೈಲೋಕ್ಯೇಽಸ್ಮಿನ್ಪರಂತಪ|

12284023c ಉಪಭೋಗಪರಿತ್ಯಾಗಃ ಫಲಾನ್ಯಕೃತಕರ್ಮಣಾಮ್||

ಪರಂತಪ! ತಪಸ್ಸಿನಿಂದ ಲಭ್ಯವಾಗದೇ ಇರುವಂಥಹುದು ಮೂರೂ ಲೋಕಗಳಲ್ಲಿ ಯಾವುದೂ ಇಲ್ಲ. ತಪಸ್ಸನ್ನು ಮಾಡದೇ ಇರುವವರಿಗೆ ಈ ಎಲ್ಲ ಉಪಭೋಗಗಳ ಪರಿತ್ಯಾಗವೇ ಫಲವು.

12284024a ಸುಖಿತೋ ದುಃಖಿತೋ ವಾಪಿ ನರೋ ಲೋಭಂ ಪರಿತ್ಯಜೇತ್|

12284024c ಅವೇಕ್ಷ್ಯ ಮನಸಾ ಶಾಸ್ತ್ರಂ ಬುದ್ಧ್ಯಾ ಚ ನೃಪಸತ್ತಮ||

ನೃಪಸತ್ತಮ! ಮನುಷ್ಯನು ಸುಖಿಯಾಗಿರಲಿ ಅಥವಾ ದುಃಖಿಯಾಗಿರಲಿ, ಮನಸ್ಸು-ಬುದ್ಧಿಗಳಿಂದ ಶಾಸ್ತ್ರಗಳನ್ನು ಪರಿಶೀಲಿಸಿ, ಲೋಭವನ್ನು ತ್ಯಜಿಸಬೇಕು.

12284025a ಅಸಂತೋಷೋಽಸುಖಾಯೈವ ಲೋಭಾದಿಂದ್ರಿಯವಿಭ್ರಮಃ|

12284025c ತತೋಽಸ್ಯ ನಶ್ಯತಿ ಪ್ರಜ್ಞಾ ವಿದ್ಯೇವಾಭ್ಯಾಸವರ್ಜಿತಾ||

ಅಸಂತೋಷವು ಕೇವಲ ದುಃಖದ ಕಾರಣವಾಗುತ್ತದೆ. ಲೋಭದಿಂದ ಇಂದ್ರಿಯಗಳು ಭ್ರಮೆಗೊಳಗಾಗುತ್ತವೆ. ಆಗ ಅಭ್ಯಾಸವಿಲ್ಲದ ವಿದ್ಯೆಯಂತೆ ಪ್ರಜ್ಞೆಯೂ ನಷ್ಟವಾಗುತ್ತದೆ.

12284026a ನಷ್ಟಪ್ರಜ್ಞೋ ಯದಾ ಭವತಿ ತದಾ ನ್ಯಾಯಂ ನ ಪಶ್ಯತಿ|

12284026c ತಸ್ಮಾತ್ಸುಖಕ್ಷಯೇ ಪ್ರಾಪ್ತೇ ಪುಮಾನುಗ್ರಂ ತಪಶ್ಚರೇತ್||

ಪ್ರಜ್ಞೆಯು ನಷ್ಟವಾದಾಗ ಮನುಷ್ಯನು ನ್ಯಾಯವನ್ನು ಕಾಣುವುದಿಲ್ಲ. ಆದುದರಿಂದಲೇ ಸುಖದ ಕ್ಷಯವುಂಟಾದಾಗ ಮನುಷ್ಯನು ಉಗ್ರ ತಪಸ್ಸನ್ನು ಮಾಡಬೇಕು.

12284027a ಯದಿಷ್ಟಂ ತತ್ಸುಖಂ ಪ್ರಾಹುರ್ದ್ವೇಷ್ಯಂ ದುಃಖಮಿಹೋಚ್ಯತೇ|

12284027c ಕೃತಾಕೃತಸ್ಯ ತಪಸಃ ಫಲಂ ಪಶ್ಯಸ್ವ ಯಾದೃಶಮ್||

ಇಷ್ಟವಾದುದೇ ಸುಖವೆಂದು ಹೇಳುತ್ತಾರೆ. ದ್ವೇಷವು ದುಃಖ ಎಂದು ಹೇಳುತ್ತಾರೆ. ತಪಸ್ಸು ಮಾಡಿದರೆ ಸುಖವುಂಟಾಗುತ್ತದೆ ಮತ್ತು ತಪಸ್ಸು ಮಾಡದಿದ್ದರೆ ದುಃಖವುಂಟಾಗುತ್ತದೆ. ತಪಸ್ಸಿನ ಈ ರೀತಿಯ ಫಲವನ್ನು ನೋಡು.

12284028a ನಿತ್ಯಂ ಭದ್ರಾಣಿ ಪಶ್ಯಂತಿ ವಿಷಯಾಂಶ್ಚೋಪಭುಂಜತೇ|

12284028c ಪ್ರಾಕಾಶ್ಯಂ ಚೈವ ಗಚ್ಚಂತಿ ಕೃತ್ವಾ ನಿಷ್ಕಲ್ಮಷಂ ತಪಃ||

ನಿಷ್ಕಲ್ಮಷ ತಪಸ್ಸನ್ನಾಚರಿಸಿ ಮನುಷ್ಯನು ನಿತ್ಯವೂ ಕಲ್ಯಾಣವನ್ನೇ ಕಾಣುತ್ತಾನೆ. ವಿಷಯಗಳನ್ನು ಭೋಗಿಸುತ್ತಾನೆ. ಮತ್ತು ಜನ-ಸಮಾಜದಲ್ಲಿ ವಿಖ್ಯಾತನಾಗುತ್ತಾನೆ.

12284029a ಅಪ್ರಿಯಾಣ್ಯವಮಾನಾಂಶ್ಚ ದುಃಖಂ ಬಹುವಿಧಾತ್ಮಕಮ್|

12284029c ಫಲಾರ್ಥೀ ಸತ್ಪಥತ್ಯಕ್ತಃ ಪ್ರಾಪ್ನೋತಿ ವಿಷಯಾತ್ಮಕಮ್||

ವಿಷಯಾತ್ಮಕ ಪಲಾರ್ಥಿಯಾಗಿ ಸತ್ಪಥವನ್ನು ತ್ಯಜಿಸುವವನು ಬಹುವಿಧದ ಅಪ್ರಿಯಗಳನ್ನೂ, ಅಪಮಾನಗಳನ್ನೂ ಮತ್ತು ದುಃಖಗಳನ್ನು ಹೊಂದುತ್ತಾನೆ.

12284030a ಧರ್ಮೇ ತಪಸಿ ದಾನೇ ಚ ವಿಚಿಕಿತ್ಸಾಸ್ಯ ಜಾಯತೇ|

12284030c ಸ ಕೃತ್ವಾ ಪಾಪಕಾನ್ಯೇವ ನಿರಯಂ ಪ್ರತಿಪದ್ಯತೇ||

ಧರ್ಮ, ತಪಸ್ಸು ಮತ್ತು ದಾನದಲ್ಲಿ ಸಂಶಯವಿರುವವನು ಪಾಪಕರ್ಮಗಳನ್ನು ಮಾಡಿ ನರಕದಲ್ಲಿ ಬೀಳುತ್ತಾನೆ.

12284031a ಸುಖೇ ತು ವರ್ತಮಾನೋ ವೈ ದುಃಖೇ ವಾಪಿ ನರೋತ್ತಮ|

12284031c ಸ್ವವೃತ್ತಾದ್ಯೋ ನ ಚಲತಿ ಶಾಸ್ತ್ರಚಕ್ಷುಃ ಸ ಮಾನವಃ||

ನರೋತ್ತಮ! ಮನುಷ್ಯನು ಸುಖದಲ್ಲಿರಲಿ ಅಥವಾ ದುಃಖದಲ್ಲಿರಲಿ, ತನ್ನ ಧರ್ಮದಿಂದ ವಿಚಲಿತನಾಗದವನೇ ಶಾಸ್ತ್ರವನ್ನು ತಿಳಿದವನು.

12284032a ಇಷುಪ್ರಪಾತಮಾತ್ರಂ ಹಿ ಸ್ಪರ್ಶಯೋಗೇ ರತಿಃ ಸ್ಮೃತಾ|

12284032c ರಸನೇ ದರ್ಶನೇ ಘ್ರಾಣೇ ಶ್ರವಣೇ ಚ ವಿಶಾಂ ಪತೇ||

ವಿಶಾಂಪತೇ! ಧನುಸ್ಸಿನಿಂದ ಹೊರಟ ಬಾಣವು ಭೂಮಿಯ ಮೇಲೆ ಬೀಳಲು ಎಷ್ಟು ಸಮಯ ಬೇಕಾಗುವುದೋ ಅಷ್ಟೇ ಸಮಯ ಸ್ಪರ್ಶೇಂದ್ರಿಯ, ರಸನ, ನೇತ್ರ, ನಾಸಿಕ ಮತ್ತು ಶ್ರವಣ ವಿಷಯಗಳ ಸುಖದ ಅನುಭವವಾಗುತ್ತದೆ. ಅರ್ಥಾತ್, ವಿಷಯಗಳ ಸುಖವು ಕ್ಷಣಿಕವಾದುದು.

12284033a ತತೋಽಸ್ಯ ಜಾಯತೇ ತೀವ್ರಾ ವೇದನಾ ತತ್ಕ್ಷಯಾತ್ಪುನಃ|

12284033c ಬುಧಾ ಯೇನ ಪ್ರಶಂಸಂತಿ[3] ಮೋಕ್ಷಂ ಸುಖಮನುತ್ತಮಮ್||

ಪುನಃ ಇಂದ್ರಿಯ ಜನಿತ ಸುಖದ ಸಮಾಪ್ತಿಯಾಗಲು ತೀವ್ರ ದುಃಖವುಂಟಾಗುತ್ತದೆ. ತಿಳಿದವರು ಇದನ್ನು ಪ್ರಶಂಸಿಸುವುದಿಲ್ಲ. ಅವರು ಅನುತ್ತಮ ಮೋಕ್ಷಸುಖವನ್ನು ಪ್ರಶಂಸಿಸುತ್ತಾರೆ.

12284034a ತತಃ ಫಲಾರ್ಥಂ ಚರತಿ[4] ಭವಂತಿ ಜ್ಯಾಯಸೋ ಗುಣಾಃ|

12284034c ಧರ್ಮವೃತ್ತ್ಯಾ ಚ ಸತತಂ ಕಾಮಾರ್ಥಾಭ್ಯಾಂ ನ ಹೀಯತೇ||

ಆದುದರಿಂದ ವಿವೇಕಿಯ ಮನದಲ್ಲಿ ಮೋಕ್ಷಫಲದ ಪ್ರಾಪ್ತಿಗಾಗಿಯೇ ಶಮ-ದಮಾದಿ ಗುಣಗಳು ಹುಟ್ಟಿಕೊಳ್ಳುತ್ತವೆ. ಸತತವೂ ಧರ್ಮಾಚರಣೆಯಲ್ಲಿರುವವನು ಎಂದೂ ಧನ ಮತ್ತು ಕಾಮಗಳಿಂದ ವಂಚಿತನಾಗುವುದಿಲ್ಲ.

12284035a ಅಪ್ರಯತ್ನಾಗತಾಃ ಸೇವ್ಯಾ ಗೃಹಸ್ಥೈರ್ವಿಷಯಾಃ ಸದಾ|

12284035c ಪ್ರಯತ್ನೇನೋಪಗಮ್ಯಶ್ಚ ಸ್ವಧರ್ಮ ಇತಿ ಮೇ ಮತಿಃ||

ಆದುದರಿಂದ ಗೃಹಸ್ಥನಾದವನು ಸದಾ ಭೋಗಕ್ಕೆ ಪ್ರಯತ್ನಪಡದೇ ತನಗೆ ಪ್ರಾಪ್ತವಾದ ವಿಷಯಗಳನ್ನು ಸೇವಿಸಬೇಕು ಮತ್ತು ಪ್ರಯತ್ನಪಟ್ಟು ತನ್ನ ಧರ್ಮವನ್ನು ಪಾಲಿಸಬೇಕು. ಇದು ನನ್ನ ಅಭಿಪ್ರಾಯ.

12284036a ಮಾನಿನಾಂ ಕುಲಜಾತಾನಾಂ ನಿತ್ಯಂ ಶಾಸ್ತ್ರಾರ್ಥಚಕ್ಷುಷಾಮ್|

12284036c ಧರ್ಮಕ್ರಿಯಾವಿಯುಕ್ತಾನಾಮಶಕ್ತ್ಯಾ ಸಂವೃತಾತ್ಮನಾಮ್||

12284037a ಕ್ರಿಯಮಾಣಂ ಯದಾ ಕರ್ಮ ನಾಶಂ ಗಚ್ಚತಿ ಮಾನುಷಮ್|

12284037c ತೇಷಾಂ ನಾನ್ಯದೃತೇ ಲೋಕೇ ತಪಸಃ ಕರ್ಮ ವಿದ್ಯತೇ||

ಉತ್ತಮ ಕುಲದಲ್ಲಿ ಜನ್ಮತಾಳಿದ, ಸನ್ಮಾನಿತ, ಶಾಸ್ತ್ರಗಳ ಅರ್ಥಗಳನ್ನು ಕಂಡುಕೊಂಡಿರುವ ಪುರುಷರಿಗೆ ಹಾಗೂ ಅಸಮರ್ಥರಾಗಿರುವ, ಕರ್ಮ-ಧರ್ಮರಹಿತ, ಆತ್ಮತತ್ತ್ವವನ್ನು ತಿಳಿಯದಿರುವ ಮನುಷ್ಯರು – ಇಬ್ಬರೂ ಮಾಡಿದ ಲೌಕಿಕ ಕರ್ಮಗಳು ನಷ್ಟವಾಗಿ ಹೋಗುತ್ತವೆ ಎನ್ನುವುದು ತಿಳಿಯುತ್ತದೆ. ಇದರಿಂದ ಜಗತ್ತಿನಲ್ಲಿ ತಪಸ್ಸಲ್ಲದೇ ಬೇರೆ ಯಾವ ಸತ್ಕರ್ಮವೂ ಇಲ್ಲ ಎನ್ನುವುದು ನಿಶ್ಚಯವಾಗುತ್ತದೆ.

12284038a ಸರ್ವಾತ್ಮನಾ ತು ಕುರ್ವೀತ ಗೃಹಸ್ಥಃ ಕರ್ಮನಿಶ್ಚಯಮ್|

12284038c ದಾಕ್ಷ್ಯೇಣ ಹವ್ಯಕವ್ಯಾರ್ಥಂ ಸ್ವಧರ್ಮಂ ವಿಚರೇನ್ನೃಪ||

ನೃಪ! ಗೃಹಸ್ಥನಿಗೆ ಸರ್ವಥಾ ತನ್ನ ಕರ್ತವ್ಯಗಳನ್ನು ನಿಶ್ಚಯಿಸಿ ಸ್ವಧರ್ಮವನ್ನು ಪಾಲಿಸಿಕೊಂಡು ಕೌಶಲ್ಯದಿಂದ ಹವ್ಯ-ಕವ್ಯಗಳನ್ನು ಮಾಡುತ್ತಿರಬೇಕು.

12284039a ಯಥಾ ನದೀನದಾಃ ಸರ್ವೇ ಸಾಗರೇ ಯಾಂತಿ ಸಂಸ್ಥಿತಿಮ್|

12284039c ಏವಮಾಶ್ರಮಿಣಃ ಸರ್ವೇ ಗೃಹಸ್ಥೇ ಯಾಂತಿ ಸಂಸ್ಥಿತಿಮ್||

ಸರ್ವ ನದೀನದಗಳೂ ಸಾಗರದಲ್ಲಿ ಆಶ್ರಯವನ್ನು ಹೊಂದುವಂತೆ ಸಮಸ್ತ ಆಶ್ರಮಿಗಳೂ ಗೃಹಸ್ಥನಲ್ಲಿ ಆಶ್ರಯವನ್ನು ಪಡೆಯುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಚತುರಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ನಾಲ್ಕನೇ ಅಧ್ಯಾಯವು.

[1] ತಥಾ (ಗೀತಾ ಪ್ರೆಸ್)

[2] ಶುಭಕರ್ಮಿಣಾಮ್| (ಗೀತಾ ಪ್ರೆಸ್/ಭಾರತ ದರ್ಶನ).

[3] ಅಬುಧಾ ನ ಪ್ರಶಂಸಂತಿ (ಗೀತಾ ಪ್ರೆಸ್).

[4] ಸರ್ವಸ್ಯ (ಗೀತಾ ಪ್ರೆಸ್).

Comments are closed.