Shanti Parva: Chapter 279

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೯

ಪರಾಶರಗೀತಾ

ಪರಾಶರಗೀತೆಯ ಪ್ರಾರಂಭ: ಪರಾಶರ ಮುನಿಯು ಜನಕರಾಜನಿಗೆ ಶ್ರೇಯಃಪ್ರಾಪ್ತಿಯ ಸಾಧನಗಳನ್ನು ಉಪದೇಶಿಸಿದುದು (1-25).

12279001 ಯುಧಿಷ್ಠಿರ ಉವಾಚ|

12279001a ಅತಃ ಪರಂ ಮಹಾಬಾಹೋ ಯಚ್ಚ್ರೇಯಸ್ತದ್ವದಸ್ವ ಮೇ|

12279001c ನ ತೃಪ್ಯಾಮ್ಯಮೃತಸ್ಯೇವ ವಚಸಸ್ತೇ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಪಿತಾಮಹ! ಇನ್ನು ಮುಂದೆ ನನಗೆ ಯಾವುದು ಶ್ರೇಯಸ್ಕರವೋ ಅದರ ಕುರಿತು ಹೇಳು. ನಿನ್ನ ಅಮೃತಸಮಾನ ಮಾತುಗಳಿಂದ ನಾನಿನ್ನೂ ತೃಪ್ತನಾಗಿಲ್ಲ.

12279002a ಕಿಂ ಕರ್ಮ ಪುರುಷಃ ಕೃತ್ವಾ ಶುಭಂ ಪುರುಷಸತ್ತಮ|

12279002c ಶ್ರೇಯಃ ಪರಮವಾಪ್ನೋತಿ ಪ್ರೇತ್ಯ ಚೇಹ ಚ ತದ್ವದ||

ಪುರುಷಸತ್ತಮ! ಪುರುಷನು ಯಾವ ಶುಭಕರ್ಮವನ್ನು ಮಾಡಿ ಇಹದಲ್ಲಿ ಮತ್ತು ಪರದಲ್ಲಿ ಪರಮ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾನೆ? ಅದರ ಕುರಿತು ಹೇಳು.”

12279003 ಭೀಷ್ಮ ಉವಾಚ|

12279003a ಅತ್ರ ತೇ ವರ್ತಯಿಷ್ಯಾಮಿ ಯಥಾ ಪೂರ್ವಂ ಮಹಾಯಶಾಃ|

12279003c ಪರಾಶರಂ ಮಹಾತ್ಮಾನಂ ಪಪ್ರಚ್ಚ ಜನಕೋ ನೃಪಃ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಹಿಂದೆ ಮಹಾಯಶಸ್ವಿ ನೃಪ ಜನಕನು ಮಹಾತ್ಮ ಪರಾಶರನು ಪ್ರಶ್ನಿಸಿದುದನ್ನು ನಿನಗೆ ಹೇಳುತ್ತೇನೆ.

12279004a ಕಿಂ ಶ್ರೇಯಃ ಸರ್ವಭೂತಾನಾಮಸ್ಮಿಽಲ್ಲೋಕೇ ಪರತ್ರ ಚ|

12279004c ಯದ್ಭವೇತ್ಪ್ರತಿಪತ್ತವ್ಯಂ ತದ್ಭವಾನ್ ಪ್ರಬ್ರವೀತು ಮೇ||

“ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸಕಲಭೂತಗಳಿಗೂ ಶ್ರೇಯಸ್ಕರವಾದುದು ಯಾವುದು? ಯಾವ ಮಾರ್ಗವು ಸ್ವೀಕರಿಸಲು ಯೋಗ್ಯವು? ಈ ವಿಷಯವನ್ನು ನನಗೆ ಹೇಳಬೇಕು.”

12279005a ತತಃ ಸ ತಪಸಾ ಯುಕ್ತಃ ಸರ್ವಧರ್ಮವಿಧಾನವಿತ್|

12279005c ನೃಪಾಯಾನುಗ್ರಹಮನಾ ಮುನಿರ್ವಾಕ್ಯಮಥಾಬ್ರವೀತ್||

ಆಗ ನೃಪತಿಗೆ ಅನುಗ್ರಹಿಸಬೇಕೆಂಬ ಮನಸ್ಸಿನಿಂದ ತಪೋಯುಕ್ತ ಸರ್ವಧರ್ಮವಿಧಾನವಿದು ಮುನಿ ಪರಾಶರನು ಇಂತೆಂದನು:

12279006a ಧರ್ಮ ಏವ ಕೃತಃ ಶ್ರೇಯಾನಿಹ ಲೋಕೇ ಪರತ್ರ ಚ|

12279006c ತಸ್ಮಾದ್ಧಿ ಪರಮಂ ನಾಸ್ತಿ ಯಥಾ ಪ್ರಾಹುರ್ಮನೀಷಿಣಃ||

“ಮನೀಷಿಣರು ಹೇಳುವಂತೆ ಧರ್ಮದಂತೆ ನಡೆದುಕೊಳ್ಳುವುದೇ ಇಹ ಮತ್ತು ಪರ ಲೋಕಗಳಲ್ಲಿ ಶ್ರೇಯಸ್ಕರವು. ಅದಕ್ಕಿಂತಲೂ ಶ್ರೇಯಸ್ಕರವಾದುದು ಬೇರೆ ಇಲ್ಲ ಎಂದು ತಿಳಿ.

12279007a ಪ್ರತಿಪದ್ಯ ನರೋ ಧರ್ಮಂ ಸ್ವರ್ಗಲೋಕೇ ಮಹೀಯತೇ|

12279007c ಧರ್ಮಾತ್ಮಕಃ ಕರ್ಮವಿಧಿರ್ದೇಹಿನಾಂ ನೃಪಸತ್ತಮ|

12279007e ತಸ್ಮಿನ್ನಾಶ್ರಮಿಣಃ ಸಂತಃ ಸ್ವಕರ್ಮಾಣೀಹ ಕುರ್ವತೇ||

ನೃಪಸತ್ತಮ! ಧರ್ಮವನ್ನು ಆಶ್ರಯಿಸಿದ ಮನುಷ್ಯನು ಸ್ವರ್ಗಲೋಕದಲ್ಲಿಯೂ ಮೆರೆಯುತ್ತಾನೆ. ವೇದಗಳು ದೇಹಿಗಳಿಗೆ ಧರ್ಮಾತ್ಮಕ ಕರ್ಮಗಳನ್ನು ವಿಹಿಸಿವೆ. ಎಲ್ಲ ಆಶ್ರಮಿಗಳೂ ವೇದೋಕ್ತ ಕರ್ಮವಿಧಿಗಳನ್ನೇ ಅನುಸರಿಸಿ ಸ್ವಕರ್ಮಗಳಲ್ಲಿ ನಿರತರಾಗಿರುತ್ತಾರೆ.

12279008a ಚತುರ್ವಿಧಾ ಹಿ ಲೋಕಸ್ಯ ಯಾತ್ರಾ ತಾತ ವಿಧೀಯತೇ|

12279008c ಮರ್ತ್ಯಾ ಯತ್ರಾವತಿಷ್ಠಂತೇ ಸಾ ಚ ಕಾಮಾತ್ ಪ್ರವರ್ತತೇ||

ಅಯ್ಯಾ! ಲೋಕಯಾತ್ರೆಗಾಗಿ ನಾಲ್ಕು ವಿಧಗಳನ್ನು ವಿಧಿಸಿದ್ದಾರೆ[1]. ಇದನ್ನು ಅನುಸರಿಸಿಕೊಂಡು ಹೋದರೆ ಮನುಷ್ಯರು ತಮ್ಮ ಕಾಮಗಳನ್ನು ಪೂರೈಸಿಕೊಳ್ಳುತ್ತಾರೆ[2].

12279009a ಸುಕೃತಾಸುಕೃತಂ ಕರ್ಮ ನಿಷೇವ್ಯ ವಿವಿಧೈಃ ಕ್ರಮೈಃ|

12279009c ದಶಾರ್ಧಪ್ರವಿಭಕ್ತಾನಾಂ ಭೂತಾನಾಂ ಬಹುಧಾ ಗತಿಃ||

ಸುಕೃತ ಮತ್ತು ಅಸುಕೃತ ಕರ್ಮಗಳನ್ನೆಸಗಿ ವಿವಿಧ ಕ್ರಮಗಳಿಂದ ಅವರು ತಮ್ಮ ತಮ್ಮ ಫಲಗಳನ್ನು ಪಡೆದುಕೊಳ್ಳುತಾರೆ. ಅನೇಕ ರೀತಿಗಳಲ್ಲಿ ಭೂತಗಳನ್ನು ಐದು ವಿಧಗಳಲ್ಲಿ ವಿಂಗಡಿಸಿದ್ದಾರೆ[3].

12279010a ಸೌವರ್ಣಂ ರಾಜತಂ ವಾಪಿ ಯಥಾ ಭಾಂಡಂ ನಿಷಿಚ್ಯತೇ|

12279010c ತಥಾ ನಿಷಿಚ್ಯತೇ ಜಂತುಃ ಪೂರ್ವಕರ್ಮವಶಾನುಗಃ||

ಚಿನ್ನದ ಅಥವಾ ಬೆಳ್ಳಿಯ ಪಾತ್ರೆಯು ಹೊಳೆಯುವಂತೆ ಪೂರ್ವಕರ್ಮವಶನಾದ ಜಂತುವು ಅದಕ್ಕೆಷ್ಟು ಹೊಳಪಿದೆಯೋ ಅಷ್ಟೇ ಹೊಳೆಯುತ್ತದೆ[4].

12279011a ನಾಬೀಜಾಜ್ಜಾಯತೇ ಕಿಂ ಚಿನ್ನಾಕೃತ್ವಾ ಸುಖಮೇಧತೇ|

12279011c ಸುಕೃತೀ ವಿಂದತಿ ಸುಖಂ ಪ್ರಾಪ್ಯ ದೇಹಕ್ಷಯಂ ನರಃ||

ಬೀಜವಿಲ್ಲದೇ ಯಾವುದೂ ಅಂಕುರಿಸುವುದಿಲ್ಲ. ಏನನ್ನೂ ಮಾಡದೇ ಸುಖವು ದೊರೆಯುವುದಿಲ್ಲ. ಸುಕೃತ ನರರು ಮರಣಾನಂತರ ಸುಖವನ್ನು ಪಡೆಯುತ್ತಾರೆ.

12279012a ದೈವಂ ತಾತ ನ ಪಶ್ಯಾಮಿ ನಾಸ್ತಿ ದೈವಸ್ಯ ಸಾಧನಮ್|

12279012c ಸ್ವಭಾವತೋ ಹಿ ಸಂಸಿದ್ಧಾ ದೇವಗಂಧರ್ವದಾನವಾಃ||

ಅಯ್ಯಾ! ಇದರಲ್ಲಿ ನಾನು ಯಾವ ದೈವವನ್ನೂ ದೈವದ ಸಾಧನವನ್ನೂ ಕಾಣುತ್ತಿಲ್ಲ. ದೇವ-ಗಂಧರ್ವ-ದಾನವರು ಸ್ವಭಾವತಃ ಸಂಸಿದ್ಧರು[5].

12279013a ಪ್ರೇತ್ಯ ಜಾತಿಕೃತಂ ಕರ್ಮ ನ ಸ್ಮರಂತಿ ಸದಾ ಜನಾಃ|

12279013c ತೇ ವೈ ತಸ್ಯ ಫಲಪ್ರಾಪ್ತೌ ಕರ್ಮ ಚಾಪಿ ಚತುರ್ವಿಧಮ್||

ಮರಣಾನಂತರ ಜನರು ಹಿಂದಿನ ಜನ್ಮದಲ್ಲಿ ತಾವು ಮಾಡಿದ ಕರ್ಮಗಳನ್ನು ಎಂದೂ ನೆನಪಿನಲ್ಲಿಟ್ಟುಕೊಂಡಿರುವುದಿಲ್ಲ. ಆದರೂ ಅವರು ಮಾಡಿದ್ದ ನಾಲ್ಕು ವಿಧದ ಕರ್ಮಗಳಿಗೆ[6] ಫಲಗಳನ್ನು ಪಡೆದುಕೊಳ್ಳುತ್ತಾರೆ.

12279014a ಲೋಕಯಾತ್ರಾಶ್ರಯಶ್ಚೈವ ಶಬ್ದೋ ವೇದಾಶ್ರಯಃ ಕೃತಃ|

12279014c ಶಾಂತ್ಯರ್ಥಂ ಮನಸಸ್ತಾತ ನೈತದ್ವೃದ್ಧಾನುಶಾಸನಮ್||

ವೇದಗಳನ್ನು ಆಶ್ರಯಿಸಿರುವ ವಚನಗಳು ಲೋಕಯಾತ್ರೆಯನ್ನು ನಿರ್ವಹಿಸಿಕೊಳ್ಳಲು ಇರುವ ಉಪಾಯಗಳು; ಮನಸ್ಸಿನ ಶಾಂತಿಗಾಗಿ ಇರುವವುಗಳು. ಅಯ್ಯಾ! ಆದರೆ ಇದು ವೃದ್ಧರ ಅಭಿಪ್ರಾಯವಲ್ಲ[7].

12279015a ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್|

12279015c ಕುರುತೇ ಯಾದೃಶಂ ಕರ್ಮ ತಾದೃಶಂ ಪ್ರತಿಪದ್ಯತೇ||

ಕಣ್ಣುಗಳು, ಮನಸ್ಸು, ಮಾತು ಮತ್ತು ಕರ್ಮ – ಈ ನಾಲ್ಕು ವಿಧದ ಕರ್ಮಗಳನ್ನು ಮನುಷ್ಯನು ಯಾವ ಭಾವದಿಂದ ಮಾಡುತ್ತಾನೋ ಅದೇ ಭಾವದಲ್ಲಿ ಅವನಿಗೆ ಫಲಪ್ರಾಪ್ತಿಯಾಗುತ್ತದೆ.

12279016a ನಿರಂತರಂ ಚ ಮಿಶ್ರಂ ಚ ಫಲತೇ ಕರ್ಮ ಪಾರ್ಥಿವ|

12279016c ಕಲ್ಯಾಣಂ ಯದಿ ವಾ ಪಾಪಂ ನ ತು ನಾಶೋಽಸ್ಯ ವಿದ್ಯತೇ||

ಪಾರ್ಥಿವ! ಮನುಷ್ಯನು ಕರ್ಮಫಲಾನುರೂಪವಾಗಿ ಕೆಲವೊಮ್ಮೆ ಕಲ್ಯಾಣವನ್ನೂ, ಕೆಲವೊಮ್ಮೆ ದುಃಖವನ್ನೂ, ಕೆಲವೊಮ್ಮೆ ಸುಖ-ದುಃಖಗಳ ಮಿಶ್ರಫಲವನ್ನು ನಿರಂತರವಾಗಿ ಹೊಂದುತ್ತಲೇ ಇರುತ್ತಾನೆ. ಪುಣ್ಯಫಲವಾಗಲೀ ಪಾಪಫಲವಾಗಲೀ ಅದನ್ನು ಅನುಭವಿಸದ ಹೊರತು ನಾಶವಾಗುವುದಿಲ್ಲ.

12279017a ಕದಾ ಚಿತ್ಸುಕೃತಂ ತಾತ ಕೂಟಸ್ಥಮಿವ ತಿಷ್ಠತಿ|

12279017c ಮಜ್ಜಮಾನಸ್ಯ ಸಂಸಾರೇ ಯಾವದ್ದುಃಖಾದ್ವಿಮುಚ್ಯತೇ||

ಅಯ್ಯಾ! ಸಂಸಾರದಲ್ಲಿ ಮುಳುಗಿರುವವನ ಸುಕೃತವು ಕೆಲವೊಮ್ಮೆ ದುಃಖವು ಕಳೆದುಹೋಗುವವರೆಗೂ ಕೂಟಸ್ಥವಾಗಿ ನಿಂತಿರುತ್ತದೆ.

12279018a ತತೋ ದುಃಖಕ್ಷಯಂ ಕೃತ್ವಾ ಸುಕೃತಂ ಕರ್ಮ ಸೇವತೇ|

12279018c ಸುಕೃತಕ್ಷಯಾದ್ದುಷ್ಕೃತಂ ಚ ತದ್ವಿದ್ಧಿ ಮನುಜಾಧಿಪ||

ಮನುಜಾಧಿಪ! ಪಾಪಕರ್ಮದ ದುಃಖಫಲವನ್ನು ಅನುಭವಿಸಿಯಾದ ನಂತರ ಅವನು ಆ ಪುಣ್ಯಕರ್ಮಗಳ ಸುಖಫಲವನ್ನು ಅನುಭವಿಸುತ್ತಾನೆ. ಪುಣ್ಯಫಲಗಳೆಲ್ಲವೂ ಮುಗಿದನಂತರ ಪುನಃ ಪಾಪಫಲಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಿಳಿದುಕೋ.

12279019a ದಮಃ ಕ್ಷಮಾ ಧೃತಿಸ್ತೇಜಃ ಸಂತೋಷಃ ಸತ್ಯವಾದಿತಾ|

12279019c ಹ್ರೀರಹಿಂಸಾವ್ಯಸನಿತಾ ದಾಕ್ಷ್ಯಂ ಚೇತಿ ಸುಖಾವಹಾಃ||

ಇಂದ್ರಿಯನಿಗ್ರಹ, ಕ್ಷಮೆ, ಧೈರ್ಯ, ತೇಜಸ್ಸು, ಸಂತೋಷ, ಸತ್ಯವಚನ, ಲಜ್ಜೆ, ಅಹಿಂಸೆ, ವ್ಯಸನಗಳಿಲ್ಲದಿರುವುದು, ದಕ್ಷತೆ – ಇವು ಸುಖವನ್ನುಂಟುಮಾಡುತ್ತವೆ.

12279020a ದುಷ್ಕೃತೇ ಸುಕೃತೇ ವಾಪಿ ನ ಜಂತುರಯತೋ ಭವೇತ್|

12279020c ನಿತ್ಯಂ ಮನಃಸಮಾಧಾನೇ ಪ್ರಯತೇತ ವಿಚಕ್ಷಣಃ||

ವಿದ್ವಾಂಸನು ನಿತ್ಯವೂ ಪಾಪ ಅಥವಾ ಪುಣ್ಯಕಾರ್ಯಗಳಲ್ಲಿ ಆಸಕ್ತನಾಗಿರದೇ ತನ್ನ ಮನಸ್ಸನ್ನು ಪರಮಾತ್ಮನ ಧ್ಯಾನಸಮಾಧಿಯಲ್ಲಿ ತೊಡಗಿಸಲು ಪ್ರಯತ್ನಿಸಬೇಕು.

12279021a ನಾಯಂ ಪರಸ್ಯ ಸುಕೃತಂ ದುಷ್ಕೃತಂ ವಾಪಿ ಸೇವತೇ|

12279021c ಕರೋತಿ ಯಾದೃಶಂ ಕರ್ಮ ತಾದೃಶಂ ಪ್ರತಿಪದ್ಯತೇ||

ಮನುಷ್ಯನು ಇತರರ ಸುಕೃತ ದುಷ್ಕೃತಗಳ ಫಲಗಳನ್ನು ಅನುಭವಿಸುವುದಿಲ್ಲ. ತಾನೇ ಎಂಥಹ ಕರ್ಮಗಳನ್ನು ಮಾಡುತ್ತಾನೋ ಅಂಥಹ ಫಲಗಳನ್ನೇ ಅನುಭವಿಸುತ್ತಾನೆ.

12279022a ಸುಖದುಃಖೇ ಸಮಾಧಾಯ ಪುಮಾನನ್ಯೇನ ಗಚ್ಚತಿ|

12279022c ಅನ್ಯೇನೈವ ಜನಃ ಸರ್ವಃ ಸಂಗತೋ ಯಶ್ಚ ಪಾರ್ಥಿವ||

ಪಾರ್ಥಿವ! ತತ್ತ್ವಜ್ಞಾನೀ ಪುರುಷನು ಸುಖ-ದುಃಖಗಳನ್ನುಂಟುಮಾಡುವ ಪುಣ್ಯ-ಪಾಪ ಕರ್ಮಗಳನ್ನು ಆತ್ಮನಲ್ಲಿ ಲೀನಗೊಳಿಸಿ ಜ್ಞಾನ ಮಾರ್ಗದಲ್ಲಿ ಹೋಗಿ ಮೋಕ್ಷವನ್ನು ಹೊಂದುತ್ತಾನೆ. ಸ್ತ್ರೀ-ಪುತ್ರ-ಧನಾದಿಗಳಲ್ಲಿಯೇ ಆಸಕ್ತರಾಗಿರುವ ಜನರು ಕರ್ಮಮಾರ್ಗದಲ್ಲಿ ಹೋಗಿ ಹುಟ್ಟು-ಸಾವುಗಳ ಚಕ್ರದಲ್ಲಿ ತಿರುಗುತ್ತಿರುತ್ತಾರೆ.

12279023a ಪರೇಷಾಂ ಯದಸೂಯೇತ ನ ತತ್ಕುರ್ಯಾತ್ ಸ್ವಯಂ ನರಃ|

12279023c ಯೋ ಹ್ಯಸೂಯುಸ್ತಥಾಯುಕ್ತಃ ಸೋಽವಹಾಸಂ ನಿಯಚ್ಚತಿ||

ಇತರರನ್ನು ನಿಂದಿಸುವವನು ತಾನೂ ಆ ಕರ್ಮಗಳನ್ನು ಮಾಡಬಾರದು. ಇತರರನ್ನು ನಿಂದಿಸಿ ತಾನೇ ಆ ಕರ್ಮಗಳನ್ನು ಮಾಡುವವನು ಅಪಹಾಸ್ಯಕ್ಕೊಳಗಾಗುತ್ತಾನೆ.

12279024a ಭೀರೂ ರಾಜನ್ಯೋ ಬ್ರಾಹ್ಮಣಃ ಸರ್ವಭಕ್ಷೋ

ವೈಶ್ಯೋಽನೀಹಾವಾನ್ ಹೀನವರ್ಣೋಽಲಸಶ್ಚ|

12279024c ವಿದ್ವಾಂಶ್ಚಾಶೀಲೋ ವೃತ್ತಹೀನಃ ಕುಲೀನಃ

ಸತ್ಯಾದ್ ಭ್ರಷ್ಟೋ ಬ್ರಾಹ್ಮಣಃ ಸ್ತ್ರೀ ಚ ದುಷ್ಟಾ||

12279025a ರಾಗೀ ಮುಕ್ತಃ ಪಚಮಾನೋಽಽತ್ಮಹೇತೋರ್

ಮೂರ್ಖೋ ವಕ್ತಾ ನೃಪಹೀನಂ ಚ ರಾಷ್ಟ್ರಮ್|

12279025c ಏತೇ ಸರ್ವೇ ಶೋಚ್ಯತಾಂ ಯಾಂತಿ ರಾಜನ್

ಯಶ್ಚಾಯುಕ್ತಃ ಸ್ನೇಹಹೀನಃ ಪ್ರಜಾಸು||

ರಾಜನ್! ಹೇಡಿಯಾದ ಕ್ಷತ್ರಿಯ, ಎಲ್ಲವನ್ನೂ ತಿನ್ನುವ ಬ್ರಾಹ್ಮಣ, ಧನಸಂಗ್ರಹದಲ್ಲಿ ಆಸಕ್ತಿಯಿಲ್ಲದ ವೈಶ್ಯ, ಸೋಮಾರಿಯಾದ ಶೂದ್ರ, ಉತ್ತಮ ಶೀಲವಿಲ್ಲದ ವಿದ್ವಾಂಸ, ಸದಾಚಾರಿಯಾಗಿರದ ಕುಲೀನ, ಸತ್ಯಭ್ರಷ್ಟನಾಗಿರುವ ಧಾರ್ಮಿಕ, ದುರಾಚಾರಿಣೀ ಸ್ತ್ರೀ, ವಿಷಯಾಸಕ್ತ ಯೋಗಿ, ತನಗೊಬ್ಬನಿಗಾಗಿಯೇ ಅಡುಗೆಮಾಡಿಕೊಳ್ಳುವ ಗೃಹಸ್ಥ, ಮೂರ್ಖನಾದ ವಾಗ್ಮಿ, ರಾಜನಿಲ್ಲದ ರಾಷ್ಟ್ರ, ಜಿತೇಂದ್ರಿಯನಲ್ಲದ ಮತ್ತು ಪ್ರಜೆಗಳಲ್ಲಿ ಸ್ನೇಹವಿರದ ರಾಜ – ಇವರೆಲ್ಲರೂ ಶೋಕವನ್ನೇ ಹೊಂದುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಏಕೋನಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಪ್ಪತ್ತೊಂಭತ್ತನೇ ಅಧ್ಯಾಯವು.

[1] ಇವು ನಾಲ್ಕು ವರ್ಣಗಳಿಗೆ ಸಂಬಧಿಸಿದ ಜೀವಿಕೆಯ ನಾಲ್ಕು ವಿಧಾನಗಳು: ಬ್ರಾಹ್ಮಣನಿಗೆ ಪ್ರತಿಗ್ರಹ, ರಾಜನಿಗೆ ಕರಾದಾನ, ವೈಶ್ಯನಿಗೆ ಕೃಷ್ಯಾದಿಗಳು ಮತ್ತು ಶೂದ್ರನಿಗೆ ಸೇವೆ. (ಭಾರತ ದರ್ಶನ)

[2] ಮನುಷ್ಯರು ಇವೇ ನಾಲ್ಕು ಜೀವೆಕೆಗಳನ್ನು ಆಶ್ರಯಿಸಿರುತ್ತಾರೆ. ಆ ಜೀವಿಕೆಯು ದೈವೇಚ್ಛೆಯಿಂದ ನಡೆಯುತ್ತದೆ. (ಭಾರತ ದರ್ಶನ/ಗೀತಾ ಪ್ರೆಸ್).

[3] ಲೋಕದಲ್ಲಿ ಪಂಚಭೂತಗಳಿಂದ ನಿರ್ಮಿತವಾಗಿರುವ ಮನುಷ್ಯನು ನಾನಾಪ್ರಕಾರದ ಕ್ರಮಗಳಿಂದ ಪುಣ್ಯಾಪುಣ್ಯಕರ್ಮಗಳನ್ನು ಮಾಡುತ್ತಾ ಅವುಗಳಿಗೆ ತಕ್ಕಂತೆ ನಾನಾಗತಿಗಳನ್ನು ಹೊಂದುತ್ತಾನೆ. (ಭಾರತ ದರ್ಶನ)

ನಾನಾ ಪ್ರಕಾರದ ಕ್ರಮಗಳಿಂದ ಪುಣ್ಯ ಮತ್ತು ಪಾಪಕರ್ಮಗಳನ್ನು ಮಾಡಿ ಪಂಚತ್ವವನ್ನು ಪಡೆದ ಅರ್ಥಾತ್ ಸ್ಥೂಲಶರೀರವನ್ನು ತ್ಯಾಗಮಾಡಿದ ಪ್ರಾಣಿಗೆ ದೊರೆಯುವ ಗತಿಯು ನಾನಾಪ್ರಕಾರದ್ದು ಎಂದು ಹೇಳಿದ್ದಾರೆ. (ಗೀತಾ ಪ್ರೆಸ್).

They perform good and bad deeds and attain their respective ends. In different ways, creatrues are divided into five elements. (Bibek Debroy)

[4] ತಾಮ್ರವೇ ಮೊದಲಾದ ಪಾತ್ರೆಗಳ ಮೇಲೆ ಬೆಳ್ಳಿಯ ಅಥವಾ ಚಿನ್ನದ ಗಿಲಾವನ್ನು ಹಾಕಿದರೆ ಅವು ಬೆಳ್ಳಿ ಅಥವಾ ಚಿನ್ನದ ಪಾತ್ರೆಗಳಂತೆಯೇ ಹೇಗೆ ಕಾಣುವವೋ ಹಾಗೆ ಪೂರ್ವಜನ್ಮದಲ್ಲಿ ಮಾಡಿದ ಶುಭಾಶುಭಕರ್ಮಗಳ ಫಲಗಳಿಗೆ ವಶೀಭೂತ ಪ್ರಾಣಿಯು ಆ ಕರ್ಮಫಲದಿಂದ ಆವರಿಸಲ್ಪಟ್ಟವನಾಗಿ ಪುಣ್ಯವಂತನಾಗಿ ಅಥವಾ ಪಾಪಿಷ್ಠನಾಗಿ ಕಾಣಿಸಿಕೊಳ್ಳುತ್ತಾನೆ. (ಭಾರತ ದರ್ಶನ/ಗೀತಾ ಪ್ರೆಸ್)

Just as a golden or sliver vessel reflects the sheen of the metal, creatures are bound down by the acts that they have performed earlier. (Bibek Debroy)

[5] ಭಾರತ ದರ್ಶನ/ಗೀತಾ ಪ್ರೆಸ್ ಗಳಲ್ಲಿ ಇದು ನಾಸ್ತಿಕರ ಮತವೆಂದು ಅನುವಾದಿಸಿದ್ದಾರೆ. I do not see any destiny in this, nor any action on the part of the gods. Gods, gandharvas and danavas become what they are because of their natures. (Bibek Debroy)

[6] ಮನಸ್ಸು, ಮಾತು, ಕಣ್ಣು ಮತ್ತು ಕ್ರಿಯೆಗಳ ಮೂಲಕ ಮಾಡಿದ ಕರ್ಮಗಳು (ಭಾರತ ದರ್ಶನ). ನಾಲ್ಕು ವಿಧದ ಕರ್ಮಗಳು: ನಿತ್ಯ, ನೈಮಿತ್ತಿಕ, ಕಾಮ್ಯ ಮತ್ತು ನಿಷಿದ್ಧ (ಬಿಬೇಕ್ ದೆಬ್ರೋಯ್).

[7] ಜೀವನ ನಿರ್ವಹಣೆಗಾಗಿ ಮತ್ತು ಮನಃಶಾಂತಿಗಾಗಿ ವೇದೋಕ್ತಶಬ್ದಗಳ ಪ್ರಮಾಣವು ಹೇಳಲ್ಪಟ್ಟಿದೆ. ಆದರೆ ವೇದಗಳಲ್ಲಿ ಜೀವನ ನಿರ್ವಹಣೆಗಾಗಿ ಯಾವ ಕರ್ಮಗಳು ವಿಧಿಸಲ್ಪಟ್ಟಿವೆಯೋ ಅವುಗಳೆಲ್ಲವೂ ಕೇವಲ ಸಮರ್ಥರಿಗೆ ಮಾತ್ರವೇ ಹೇಳಲ್ಪಟ್ಟಿವೆ. ದುಃಖಗೊಂಡ ಮನುಷ್ಯನಿಗೆ ಧೈರ್ಯಹೇಳಲು ಅಥವಾ ಅವನ ಮನಃಶಾಂತಿಗೆ ಪೂರ್ವಜನ್ಮದ ಪಾಪವೆನ್ನುತ್ತಾರೆ. ಇದು ನಾಸ್ತಿಕರ ಮತ. ಇದು ವೃದ್ಧರ ಅಭಿಪ್ರಾಯವಾಗಿರುವುದಿಲ್ಲ. (ಭಾರತ ದರ್ಶನ)

Comments are closed.