Shanti Parva: Chapter 278

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೮

ಕಾವ್ಯೋಪಾಖ್ಯಾನ

ಭೃಗುವಿನ ಮಗ ಉಶನಸನ ಚರಿತ್ರೆ; ಉಶನಸನಿಗೆ ಶುಕ್ರನೆಂಬ ಹೆಸರು ಪ್ರಾಪ್ತವಾದುದು (1-38).

12278001 ಯುಧಿಷ್ಠಿರ ಉವಾಚ|

12278001a ತಿಷ್ಠತೇ ಮೇ ಸದಾ ತಾತ ಕೌತೂಹಲಮಿದಂ ಹೃದಿ|

12278001c ತದಹಂ ಶ್ರೋತುಮಿಚ್ಚಾಮಿ ತ್ವತ್ತಃ ಕುರುಪಿತಾಮಹ||

ಯುಧಿಷ್ಠಿರನು ಹೇಳಿದನು: “ಅಯ್ಯಾ! ಕುರುಪಿತಾಮಹ! ಸದಾ ನನ್ನ ಹೃದಯದಲ್ಲಿ ಈ ಕುತೂಹಲವು ಇದೆ. ಅದರ ಕುರಿತು ನಿನ್ನಿಂದ ಕೇಳಬಯಸುತ್ತೇನೆ.

12278002a ಕಥಂ ದೇವರ್ಷಿರುಶನಾ ಸದಾ ಕಾವ್ಯೋ ಮಹಾಮತಿಃ|

12278002c ಅಸುರಾಣಾಂ ಪ್ರಿಯಕರಃ ಸುರಾಣಾಮಪ್ರಿಯೇ ರತಃ||

ದೇವರ್ಷಿ ಕಾವ್ಯ ಮಹಾಮತಿ ಉಶನಸನು ಹೇಗೆ ಸದಾ ಅಸುರರ ಪ್ರಿಯಕರನೂ ಸುರರ ಅಪ್ರಿಯರತನೂ ಆದನು?

12278003a ವರ್ಧಯಾಮಾಸ ತೇಜಶ್ಚ ಕಿಮರ್ಥಮಮಿತೌಜಸಾಮ್|

12278003c ನಿತ್ಯಂ ವೈರನಿಬದ್ಧಾಶ್ಚ ದಾನವಾಃ ಸುರಸತ್ತಮೈಃ||

ಸುರಸತ್ತಮರೊಡನೆ ನಿತ್ಯವೂ ವೈರವನ್ನು ಕಟ್ಟಿಕೊಂಡಿದ್ದ ಅಮಿತೌಜಸ ದಾನವರ ತೇಜಸ್ಸನ್ನು ಅವನು ಯಾವ ಕಾರಣದಿಂದ ವರ್ಧಿಸುತ್ತಿದ್ದನು?

12278004a ಕಥಂ ಚಾಪ್ಯುಶನಾ ಪ್ರಾಪ ಶುಕ್ರತ್ವಮಮರದ್ಯುತಿಃ|

12278004c ಋದ್ಧಿಂ ಚ ಸ ಕಥಂ ಪ್ರಾಪ್ತಃ ಸರ್ವಮೇತದ್ ಬ್ರವೀಹಿ ಮೇ||

ಅಮರದ್ಯುತಿ ಉಶನನು ಶುಕ್ರತ್ವವನ್ನು ಹೇಗೆ ಪಡೆದುಕೊಂಡನು? ಐಶ್ವರ್ಯವನ್ನೂ ಕೂಡ ಅವನು ಹೇಗೆ ಪಡೆದುಕೊಂಡನು? ಇವೆಲ್ಲವನ್ನು ನನಗೆ ಹೇಳು.

12278005a ನ ಯಾತಿ ಚ ಸ ತೇಜಸ್ವೀ ಮಧ್ಯೇನ ನಭಸಃ ಕಥಮ್|

12278005c ಏತದಿಚ್ಚಾಮಿ ವಿಜ್ಞಾತುಂ ನಿಖಿಲೇನ ಪಿತಾಮಹ||

ಪಿತಾಮಹ! ತೇಜಸ್ವಿಯಾಗಿದ್ದರೂ ಅವನು ಆಕಾಶದ ಮಧ್ಯದಿಂದ ಏಕೆ ಸಾಗುವುದಿಲ್ಲ? ಇದರ ಕುರಿತು ಸಂಪೂರ್ಣವಾಗಿ ತಿಳಿಯ ಬಯಸುತ್ತೇನೆ.”

12278006 ಭೀಷ್ಮ ಉವಾಚ|

12278006a ಶೃಣು ರಾಜನ್ನವಹಿತಃ ಸರ್ವಮೇತದ್ಯಥಾತಥಮ್|

12278006c ಯಥಾಮತಿ ಯಥಾ ಚೈತಚ್ಚ್ರುತಪೂರ್ವಂ ಮಯಾನಘ||

ಭೀಷ್ಮನು ಹೇಳಿದನು: “ರಾಜನ್! ಅನಘ! ಹೇಗಿದೆಯೋ ಹಾಗೆ, ನನಗೆ ತಿಳಿದಷ್ಟು ಮಟ್ಟಿಗೆ, ಹಿಂದೆ ನಾನು ಏನನ್ನು ಕೇಳಿದ್ದೆನೋ, ಅದನ್ನು ನನ್ನಿಂದ ಏಕಾಗ್ರಚಿತ್ತನಾಗಿ ಕೇಳು.

12278007a ಏಷ ಭಾರ್ಗವದಾಯಾದೋ ಮುನಿಃ ಸತ್ಯೋ ದೃಢವ್ರತಃ|

12278007c ಅಸುರಾಣಾಂ ಪ್ರಿಯಕರೋ ನಿಮಿತ್ತೇ ಕರುಣಾತ್ಮಕೇ||

ಭೃಗುವಿನ ಮಗ ಮುನಿ ಸತ್ಯ ದೃಢವ್ರತ ಉಶನಸನು ಒಂದು ಕರುಣಾತ್ಮಕ ನಿಮಿತ್ತದಿಂದ[1] ಅಸುರರ ಪ್ರಿಯಕರನಾದನು.

12278008a ಇಂದ್ರೋಽಥ ಧನದೋ ರಾಜಾ ಯಕ್ಷರಕ್ಷೋಧಿಪಃ ಸ ಚ|

12278008c ಪ್ರಭವಿಷ್ಣುಶ್ಚ ಕೋಶಸ್ಯ ಜಗತಶ್ಚ ತಥಾ ಪ್ರಭುಃ||

ಆಗ ಇಂದ್ರನು ಜಗತ್ತಿನ ರಾಜನಾಗಿದ್ದನು. ಮತ್ತು ಯಕ್ಷ-ರಾಕ್ಷಸರ ಅಧಿಪ ಧನದ ಕುಬೇರನು ಅವನ ಕೋಶಾಧ್ಯಕ್ಷನಾಗಿದ್ದನು.

12278009a ತಸ್ಯಾತ್ಮಾನಮಥಾವಿಶ್ಯ ಯೋಗಸಿದ್ಧೋ ಮಹಾಮುನಿಃ|

12278009c ರುದ್ಧ್ವಾ ಧನಪತಿಂ ದೇವಂ ಯೋಗೇನ ಹೃತವಾನ್ವಸು||

ಯೋಗಸಿದ್ಧ ಮಹಾಮುನಿ ಉಶನಸನು ಯೋಗಬಲದಿಂದ ಧನಾಧಿಪ ಕುಬೇರನ ಹೃದಯವನ್ನು ಪ್ರವೇಶಿಸಿ ವಶೀಕರಿಸಿಕೊಂಡು ಅವನ ಧನವೆಲ್ಲವನ್ನೂ ಅಪಹರಿಸಿಬಿಟ್ಟನು.

12278010a ಹೃತೇ ಧನೇ ತತಃ ಶರ್ಮ ನ ಲೇಭೇ ಧನದಸ್ತಥಾ|

12278010c ಆಪನ್ನಮನ್ಯುಃ ಸಂವಿಗ್ನಃ ಸೋಽಭ್ಯಗಾತ್ಸುರಸತ್ತಮಮ್||

12278011a ನಿವೇದಯಾಮಾಸ ತದಾ ಶಿವಾಯಾಮಿತತೇಜಸೇ|

12278011c ದೇವಶ್ರೇಷ್ಠಾಯ ರುದ್ರಾಯ ಸೌಮ್ಯಾಯ ಬಹುರೂಪಿಣೇ||

ಧನವು ಅಪಹೃತವಾಗಲು ಧನದನಿಗೆ ಸುಖವೆನ್ನುವುದೇ ಇಲ್ಲವಾಯಿತು. ಕುಪಿತನೂ ಉದ್ವಿಗ್ನನೂ ಆದ ಅವನು ಸುರಸತ್ತಮ ಅಮಿತತೇಜಸ್ವಿ ಶಿವನ ಬಳಿ ಹೋಗಿ, ಆ ದೇವಶ್ರೇಷ್ಠ ಸೌಮ್ಯ ಬಹುರೂಪೀ ರುದ್ರನಿಗೆ ಇದನ್ನು ನಿವೇದಿಸಿದನು.

12278012 ಕುಬೇರ ಉವಾಚ|

12278012a ಯೋಗಾತ್ಮಕೇನೋಶನಸಾ ರುದ್ಧ್ವಾ ಮಮ ಹೃತಂ ವಸು|

12278012c ಯೋಗೇನಾತ್ಮಗತಿಂ ಕೃತ್ವಾ ನಿಃಸೃತಶ್ಚ ಮಹಾತಪಾಃ||

ಕುಬೇರನು ಹೇಳಿದನು: “ಯೋಗಾತ್ಮಕ ಮಹಾತಪಸ್ವೀ ಉಶನಸನು ಯೋಗದಿಂದ ನನ್ನನ್ನು ತಡೆದು ನನ್ನಲ್ಲಿದ್ದ ಐಶ್ವರ್ಯವೆಲ್ಲವನ್ನೂ ಅಪಹರಿಸಿಬಿಟ್ಟನು!””

12278013 ಭೀಷ್ಮ ಉವಾಚ|

12278013a ಏತಚ್ಚ್ರುತ್ವಾ ತತಃ ಕ್ರುದ್ಧೋ ಮಹಾಯೋಗೀ ಮಹೇಶ್ವರಃ|

12278013c ಸಂರಕ್ತನಯನೋ ರಾಜನ್ ಶೂಲಮಾದಾಯ ತಸ್ಥಿವಾನ್||

ಭೀಷ್ಮನು ಹೇಳಿದನು: “ರಾಜನ್! ಇದನ್ನು ಕೇಳಿದ ಮಹಾಯೋಗೀ ಮಹೇಶ್ವರನು ಕೋಪದಿಂದ ಕೆಂಗಣ್ಣನಾಗಿ ಶೂಲವನ್ನು ಹಿಡಿದು ನಿಂತನು.

12278014a ಕ್ವಾಸ್ವೌ ಕ್ವಾಸಾವಿತಿ ಪ್ರಾಹ ಗೃಹೀತ್ವಾ ಪರಮಾಯುಧಮ್|

12278014c ಉಶನಾ ದೂರತಸ್ತಸ್ಯ ಬಭೌ ಜ್ಞಾತ್ವಾ ಚಿಕೀರ್ಷಿತಮ್||

ಆ ಪರಮಾಯುಧವನ್ನು ಹಿಡಿದೆತ್ತಿ “ಅವನೆಲ್ಲಿ? ಅವನೆಲ್ಲಿ” ಎಂದು ಕೂಗಿದನು. ಅವನ ಇಂಗಿತವನ್ನು ಅರಿತ ಉಶನಸನು ಅವನಿಂದ ದೂರಹೋದನು.

12278015a ಸ ಮಹಾಯೋಗಿನೋ ಬುದ್ಧ್ವಾ ತಂ ರೋಷಂ ವೈ ಮಹಾತ್ಮನಃ|

12278015c ಗತಿಮಾಗಮನಂ ವೇತ್ತಿ ಸ್ಥಾನಂ ವೇತ್ತಿ ತತಃ ಪ್ರಭುಃ||

ಆ ಮಹಾಯೋಗಿಯು ಬುದ್ಧಿಯಿಂದ ಮಹಾತ್ಮನ ರೋಷವನ್ನು ಅರಿತುಕೊಂಡನು. ಗಮನ, ಆಗಮನ ಮತ್ತು ಸ್ಥಾನವನ್ನು ತಿಳಿದುಕೊಂಡಿದ್ದ ಪ್ರಭು ಉಶನಸನು ಆಗ ರುದ್ರನ ಹತ್ತಿರ ಹೋಗಲೋ ಅಥವಾ ದೂರ ಹೋಗಲೋ ಅಥವಾ ನಿಂತಲ್ಲಿಯೇ ನಿಂತುಕೊಳ್ಳಲೋ ಎಂದು ಯೋಚಿಸತೊಡಗಿದನು.

12278016a ಸಂಚಿಂತ್ಯೋಗ್ರೇಣ ತಪಸಾ ಮಹಾತ್ಮಾನಂ ಮಹೇಶ್ವರಮ್|

12278016c ಉಶನಾ ಯೋಗಸಿದ್ಧಾತ್ಮಾ ಶೂಲಾಗ್ರೇ ಪ್ರತ್ಯದೃಶ್ಯತ||

“ಮಹಾತ್ಮಾ ಮಹೇಶ್ವರನ ಶೂಲದ ಅಗ್ರಭಾಗದಲ್ಲಿಯೇ ನಿಲ್ಲುತ್ತೇನೆ” ಎಂದು ಚಿಂತಿಸಿದ ಆ ಯೋಗಸಿದ್ಧಾತ್ಮಾ ಉಶನಸನು ತ್ರಿಶೂಲದ ಅಗ್ರಭಾಗದಲ್ಲಿ ಕಾಣಿಸಿಕೊಂಡನು.

12278017a ವಿಜ್ಞಾತರೂಪಃ ಸ ತದಾ ತಪಃಸಿದ್ಧೇನ ಧನ್ವಿನಾ|

12278017c ಜ್ಞಾತ್ವಾ ಶೂಲಂ ಚ ದೇವೇಶಃ ಪಾಣಿನಾ ಸಮನಾಮಯತ್||

ತಪಃಸಿದ್ಧ ಉಶನಸನನ್ನು ಆ ರೂಪದಲ್ಲಿ ಗುರುತಿಸಿದ ದೇವೇಶನು ತನ್ನ ಕೈಯಿಂದ ಶೂಲವನ್ನು ಬಿಲ್ಲಿನಂತೆ ಬಗ್ಗಿಸಿದನು.

12278018a ಆನತೇನಾಥ ಶೂಲೇನ ಪಾಣಿನಾಮಿತತೇಜಸಾ|

12278018c ಪಿನಾಕಮಿತಿ ಚೋವಾಚ ಶೂಲಮುಗ್ರಾಯುಧಃ ಪ್ರಭುಃ||

ಉಗ್ರಾಯುಧ ಪ್ರಭುವು ಶೂಲವನ್ನು ತನ್ನ ಅಮಿತ ತೇಜಸ್ವೀ ಕೈಯಿಂದ ಧನುಸ್ಸಿನ ರೂಪದಲ್ಲಿ ಬಗ್ಗಿಸಿ ಅದನ್ನು ಪಿನಾಕ ಎಂದು ಕರೆದನು.

12278019a ಪಾಣಿಮಧ್ಯಗತಂ ದೃಷ್ಟ್ವಾ ಭಾರ್ಗವಂ ತಮುಮಾಪತಿಃ|

12278019c ಆಸ್ಯಂ ವಿವೃತ್ಯ ಕಕುದೀ ಪಾಣಿಂ ಸಂಪ್ರಾಕ್ಷಿಪಚ್ಚನೈಃ||

ತನ್ನ ಕೈಗೆ ಸಿಕ್ಕಿದ ಭಾರ್ಗವನನ್ನು ನೋಡಿ ಉಮಾಪತಿಯು ತನ್ನ ಬಾಯನ್ನು ಅಗಲವಾಗಿ ಹಿಗ್ಗಿಸಿ ನಿಧಾನವಾಗಿ ಕೈಯನ್ನು ಮೇಲಿತ್ತಿ ಅವನನ್ನು ಬಾಯೊಳಗೆ ಹಾಕಿಕೊಂಡನು.

12278020a ಸ ತು ಪ್ರವಿಷ್ಟ ಉಶನಾ ಕೋಷ್ಠಂ ಮಾಹೇಶ್ವರಂ ಪ್ರಭುಃ|

12278020c ವ್ಯಚರಚ್ಚಾಪಿ ತತ್ರಾಸೌ ಮಹಾತ್ಮಾ ಭೃಗುನಂದನಃ||

ಮಹೇಶ್ವರನ ಹೊಟ್ಟೆಯನ್ನು ಸೇರಿದ ಮಹಾತ್ಮಾ ಪ್ರಭು ಭೃಗುನಂದನ ಉಶನಸನು ಅಲ್ಲಿಯೂ ಸಂಚರಿಸತೊಡಗಿದನು.”

12278021 ಯುಧಿಷ್ಠಿರ ಉವಾಚ|

12278021a ಕಿಮರ್ಥಂ ವ್ಯಚರದ್ರಾಜನ್ನುಶನಾ ತಸ್ಯ ಧೀಮತಃ|

12278021c ಜಠರೇ ದೇವದೇವಸ್ಯ ಕಿಂ ಚಾಕಾರ್ಷೀನ್ಮಹಾದ್ಯುತಿಃ||

ಯುಧಿಷ್ಠಿರನು ಹೇಳಿದನು: “ರಾಜನ್! ಮಹಾದ್ಯುತಿ ಧೀಮತ ಉಶನಸನು ದೇವದೇವನ ಜಠರದಲ್ಲಿ ಏಕೆ ಸಂಚರಿಸುತ್ತಿದ್ದನು? ಅಲ್ಲಿ ಅವನು ಏನು ಮಾಡಿದನು?”

12278022 ಭೀಷ್ಮ ಉವಾಚ|

12278022a ಪುರಾ ಸೋಽಂತರ್ಜಲಗತಃ ಸ್ಥಾಣುಭೂತೋ ಮಹಾವ್ರತಃ|

12278022c ವರ್ಷಾಣಾಮಭವದ್ರಾಜನ್ ಪ್ರಯುತಾನ್ಯರ್ಬುದಾನಿ ಚ||

ಭೀಷ್ಮನು ಹೇಳಿದನು: “ರಾಜನ್! ಹಿಂದೆ ಮಹಾವ್ರತ ಶಿವನು ನೀರಿನಲ್ಲಿ ಮುಳುಗಿ ಸ್ಥಾಣುವಾಗಿ ಹತ್ತು ಸಾವಿರ ಅರ್ಬುದ ವರ್ಷಗಳ ವರೆಗೆ ತಪಸ್ಸನ್ನಾಚರಿಸಿದನು.

12278023a ಉದತಿಷ್ಠತ್ತಪಸ್ತಪ್ತ್ವಾ ದುಶ್ಚರಂ ಸ ಮಹಾಹ್ರದಾತ್|

12278023c ತತೋ ದೇವಾತಿದೇವಸ್ತಂ ಬ್ರಹ್ಮಾ ಸಮುಪಸರ್ಪತ||

ದುಶ್ಚರ ತಪಸ್ಸನ್ನು ತಪಿಸಿ ಮಹಾಸರೋವರದಿಂದ ಮೇಲೆದ್ದ ಅವನನ್ನು ದೇವಾತಿದೇವ ಬ್ರಹ್ಮನು ಬಳಿಸಾರಿದನು.

12278024a ತಪೋವೃದ್ಧಿಮಪೃಚ್ಚಚ್ಚ ಕುಶಲಂ ಚೈನಮವ್ಯಯಮ್|

12278024c ತಪಃ ಸುಚೀರ್ಣಮಿತಿ ಚ ಪ್ರೋವಾಚ ವೃಷಭಧ್ವಜಃ||

ಬ್ರಹ್ಮನು ಅವ್ಯಯನನ್ನು ತಪೋವೃದ್ಧಿಯ ಕುರಿತಾಗಿ ಮತ್ತು ಕುಶಲವನ್ನು ಕೇಳಿದನು. ಆಗ ವೃಷಭಧ್ವಜನು ತಪಸ್ಸು ಉತ್ತಮವಾಗಿ ನಡೆಯಿತು ಎಂದನು.

12278025a ತತ್ಸಂಯೋಗೇನ ವೃದ್ಧಿಂ ಚಾಪ್ಯಪಶ್ಯತ್ಸ ತು ಶಂಕರಃ|

12278025c ಮಹಾಮತಿರಚಿಂತ್ಯಾತ್ಮಾ ಸತ್ಯಧರ್ಮರತಃ ಸದಾ||

ಆಗ ಮಹಾಮತಿ ಅಚಿಂತ್ಯಾತ್ಮಾ ಸದಾ ಸತ್ಯಧರ್ಮರತ ಶಂಕರನು ತನ್ನ ಸಂಯೋಗದಿಂದ ಉಶನಸನೂ ತಪೋವೃದ್ಧಿಯನ್ನು ಹೊಂದಿದುದನ್ನು ನೋಡಿದನು.

12278026a ಸ ತೇನಾಢ್ಯೋ ಮಹಾಯೋಗೀ ತಪಸಾ ಚ ಧನೇನ ಚ|

12278026c ವ್ಯರಾಜತ ಮಹಾರಾಜ ತ್ರಿಷು ಲೋಕೇಷು ವೀರ್ಯವಾನ್||

ಮಹಾರಾಜ! ಆ ಮಹಾಯೋಗಿ ವೀರ್ಯವಾನ್ ಉಶನಸನು ತಪಸ್ಸು ಮತ್ತು ಧನದಿಂದ ಮೂರು ಲೋಕದಲ್ಲಿಯೂ ಆಢ್ಯನಾಗಿ ವಿರಾಜಿಸಿದನು.

12278027a ತತಃ ಪಿನಾಕೀ ಯೋಗಾತ್ಮಾ ಧ್ಯಾನಯೋಗಂ ಸಮಾವಿಶತ್|

12278027c ಉಶನಾ ತು ಸಮುದ್ವಿಗ್ನೋ ನಿಲಿಲ್ಯೇ ಜಠರೇ ತತಃ||

ಆಗ ಯೋಗಾತ್ಮಾ ಪಿನಾಕಿಯು ಧ್ಯಾನಯೋಗವನ್ನು ಆಶ್ರಯಿಸಿದನು. ಉಶನಸನಾದರೋ ಅದರಿಂದ ಉದ್ವಿಗ್ನನಾಗಿ ಶಂಕರನ ಜಠರದಲ್ಲಿಯೇ ಉಡುಗಿಕೊಂಡನು.

12278028a ತುಷ್ಟಾವ ಚ ಮಹಾಯೋಗೀ ದೇವಂ ತತ್ರಸ್ಥ ಏವ ಚ|

12278028c ನಿಃಸಾರಂ ಕಾಂಕ್ಷಮಾಣಸ್ತು ತೇಜಸಾ ಪ್ರತ್ಯಹನ್ಯತ||

ಅಲ್ಲಿಂದಲೇ ಆ ಮಹಾಯೋಗಿಯು ದೇವನನ್ನು ಸ್ತುತಿಸಿದನು. ಹೊರಬರಲು ಅವನು ಮಾರ್ಗವನ್ನು ಹುಡುಕುತ್ತಿರಲು ಶಂಕರನು ತನ್ನ ತೇಜಸ್ಸಿನಿಂದ ಅವನ ಮಾರ್ಗವನ್ನು ಪ್ರತಿರೋಧಿಸುತ್ತಿದ್ದನು.

12278029a ಉಶನಾ ತು ತದೋವಾಚ ಜಠರಸ್ಥೋ ಮಹಾಮುನಿಃ|

12278029c ಪ್ರಸಾದಂ ಮೇ ಕುರುಷ್ವೇತಿ ಪುನಃ ಪುನರರಿಂದಮ||

ಅರಿಂದಮ! ಆಗ ಜಠರಸ್ಥನಾಗಿದ್ದ ಮಹಾಮುನಿಯು “ನನ್ನನ್ನು ಅನುಗ್ರಹಿಸು!” ಎಂದು ಪುನಃ ಪುನಃ ಕೇಳಿಕೊಂಡನು.

12278030a ತಮುವಾಚ ಮಹಾದೇವೋ ಗಚ್ಚ ಶಿಶ್ನೇನ ಮೋಕ್ಷಣಮ್|

12278030c ಇತಿ ಸ್ರೋತಾಂಸಿ ಸರ್ವಾಣಿ ರುದ್ಧ್ವಾ ತ್ರಿದಶಪುಂಗವಃ||

ತ್ರಿದಶಪುಂಗವ ಮಹಾದೇವನು “ಶಿಶ್ನದಿಂದ ಹೊರಬಂದು ಹೊರಟುಹೋಗು!” ಎಂದು ಹೇಳಿ ಉಳಿದ ಎಲ್ಲ ಮಾರ್ಗಗಳನ್ನೂ ಬಂಧಿಸಿದನು.

12278031a ಅಪಶ್ಯಮಾನಃ ಸ ದ್ವಾರಂ ಸರ್ವತಃಪಿಹಿತೋ ಮುನಿಃ|

12278031c ಪರ್ಯಕ್ರಾಮದ್ದಹ್ಯಮಾನ ಇತಶ್ಚೇತಶ್ಚ ತೇಜಸಾ||

ಎಲ್ಲ ಕಡೆಗಳಿಂದಲೂ ದ್ವಾರಗಳು ಮುಚ್ಚಲ್ಪಟ್ಟಿದ್ದರಿಂದ ಮತ್ತು ಶಂಕರನ ತೇಜಸ್ಸಿನಿಂದ ಸುಟ್ಟು ಚಡಪಡಿಸುತ್ತಿದ್ದ ಮುನಿಯು ಶಂಕರನ ಶರೀರದಲ್ಲಿಯೇ ಅಲ್ಲಿಂದಿಲ್ಲಿಗೆ ಸುತ್ತಾಡುತ್ತಿದ್ದನು.

12278032a ಸ ವಿನಿಷ್ಕ್ರಮ್ಯ ಶಿಶ್ನೇನ ಶುಕ್ರತ್ವಮಭಿಪೇದಿವಾನ್|

12278032c ಕಾರ್ಯೇಣ ತೇನ ನಭಸೋ ನಾಗಚ್ಚತ ಚ ಮಧ್ಯತಃ||

ನಂತರ ಅವನು ಶಿವನ ಶಿಶ್ನದಿಂದ ಹೊರಬಂದು ಶುಕ್ರತ್ವವನ್ನು ಹೊಂದಿದನು. ಈ ಕಾರ್ಯದಿಂದಲೇ ಅವನು ಆಕಾಶದ ಮಧ್ಯಭಾಗಕ್ಕೆ ಹೋಗಲಿಲ್ಲ.

12278033a ನಿಷ್ಕ್ರಾಂತಮಥ ತಂ ದೃಷ್ಟ್ವಾ ಜ್ವಲಂತಮಿವ ತೇಜಸಾ|

12278033c ಭವೋ ರೋಷಸಮಾವಿಷ್ಟಃ ಶೂಲೋದ್ಯತಕರಃ ಸ್ಥಿತಃ||

ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಹೊರಬಂದ ಅವನನ್ನು ನೋಡಿ ಭವನು ರೋಷಸಮಾವಿಷ್ಟನಾಗಿ ಶೂಲವನ್ನು ಹಿಡಿದೆತ್ತಿ ನಿಂತುಕೊಂಡನು.

12278034a ನ್ಯವಾರಯತ ತಂ ದೇವೀ ಕ್ರುದ್ಧಂ ಪಶುಪತಿಂ ಪತಿಮ್|

12278034c ಪುತ್ರತ್ವಮಗಮದ್ದೇವ್ಯಾ ವಾರಿತೇ ಶಂಕರೇ ಚ ಸಃ||

ಆಗ ದೇವಿಯು ಕ್ರುದ್ಧ ಪತಿ ಪಶುಪತಿಯನ್ನು ತಡೆದಳು. ದೇವಿಯು ಹಾಗೆ ಶಂಕರನನ್ನು ತಡೆದುದರಿಂದ ಶುಕ್ರನು ದೇವಿಯ ಪುತ್ರತ್ವಭಾವವನ್ನು ಪಡೆದುಕೊಂಡನು.

12278035 ದೇವ್ಯುವಾಚ|

12278035a ಹಿಂಸನೀಯಸ್ತ್ವಯಾ ನೈಷ ಮಮ ಪುತ್ರತ್ವಮಾಗತಃ|

12278035c ನ ಹಿ ದೇವೋದರಾತ್ಕಶ್ಚಿನ್ನಿಃಸೃತೋ ನಾಶಮರ್ಚತಿ||

ದೇವಿಯು ಹೇಳಿದಳು: “ನನ್ನ ಪುತ್ರತ್ವವನ್ನು ಪಡೆದಿರುವ ಇವನನ್ನು ನೀನು ಸಂಹರಿಸಕೂಡದು. ದೇವನ ಉದರದಿಂದ ಹೊರಬಂದ ಯಾರೂ ವಿನಾಶಹೊಂದಬಾರದು.””

12278036 ಭೀಷ್ಮ ಉವಾಚ|

12278036a ತತಃ ಪ್ರೀತೋಽಭವದ್ದೇವ್ಯಾಃ ಪ್ರಹಸಂಶ್ಚೇದಮಬ್ರವೀತ್|

12278036c ಗಚ್ಚತ್ವೇಷ ಯಥಾಕಾಮಮಿತಿ ರಾಜನ್ ಪುನಃ ಪುನಃ||

ಭೀಷ್ಮನು ಹೇಳಿದನು: “ರಾಜನ್! ಆಗ ದೇವಿಯಿಂದ ಪ್ರೀತನಾದ ಶಿವನು ನಗುತ್ತಾ “ಇವನು ತನಗೆ ಇಷ್ಟವಾದಲ್ಲಿಗೆ ಹೋಗಲಿ!” ಎಂದು ಪುನಃ ಪುನಃ ಹೇಳಿದನು.

12278037a ತತಃ ಪ್ರಣಮ್ಯ ವರದಂ ದೇವಂ ದೇವೀಮುಮಾಂ ತಥಾ|

12278037c ಉಶನಾ ಪ್ರಾಪ ತದ್ಧೀಮಾನ್ಗತಿಮಿಷ್ಟಾಂ ಮಹಾಮುನಿಃ||

ಅನಂತರ ವರದ ದೇವ ಮತ್ತು ದೇವಿಯರನ್ನು ನಮಸ್ಕರಿಸಿ ಮಹಾಮುನಿ ಧೀಮಾನ್ ಉಶನಸನು ಇಷ್ಟಗತಿಯನ್ನು ಹೊಂದಿದನು.

12278038a ಏತತ್ತೇ ಕಥಿತಂ ತಾತ ಭಾರ್ಗವಸ್ಯ ಮಹಾತ್ಮನಃ|

12278038c ಚರಿತಂ ಭರತಶ್ರೇಷ್ಠ ಯನ್ಮಾಂ ತ್ವಂ ಪರಿಪೃಚ್ಚಸಿ||

ಅಯ್ಯಾ! ಭರತಶ್ರೇಷ್ಠ! ಇದೋ ನೀನು ಕೇಳಿದ ಮಹಾತ್ಮ ಭಾರ್ಗವನ ಚರಿತ್ರೆಯನ್ನು ಹೇಳಿದ್ದೇನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭವಭಾರ್ಗವಸಮಾಗಮೇ ಅಷ್ಟಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭವಭಾರ್ಗವಸಮಾಗಮ ಎನ್ನುವ ಇನ್ನೂರಾಎಪ್ಪತ್ತೆಂಟನೇ ಅಧ್ಯಾಯವು.

[1] ಹಿಂದೊಮ್ಮೆ ಅಸುರರು ದೇವತೆಗಳಿಗೆ ಕಿರುಕುಳವನ್ನು ಕೊಟ್ಟು ಭೃಗುಪತ್ನಿಯ ಆಶ್ರಮಕ್ಕೆ ಬಂದು, ಅವಳ ಶರಣು ಹೊಕ್ಕರು. ಮಕ್ಕಳು ತಾಯಿಯ ಬಳಿ ಹೇಗೋ ಹಾಗೆ ಶರಣು ಬಂದ ಅಸುರರಿಗೆ ಭೃಗುಪತ್ನಿಯು ಅಭಯವನ್ನಿತ್ತು ಆಶ್ರಮದಲ್ಲಿ ನಿರ್ಭಯರಾಗಿ ವಾಸಮಾಡಿಕೊಂಡಿರಲು ಅನುವುಮಾಡಿಕೊಟ್ಟಳು. ಅವಳ ಪ್ರಭಾವದಿಂದಾಗಿ ದೇವತೆಗಳು ಆ ಆಶ್ರಮವನ್ನು ಪ್ರವೇಶಿಸಲು ಅಸಮರ್ಥರಾಗಿ ವಿಷ್ಣುವಿನ ಶರಣು ಹೋಗಲು, ವಿಷ್ಣುವು ತನ್ನ ಚಕ್ರದಿಂದ ಅಸುರರನ್ನೂ ಮತ್ತು ಅವರನ್ನು ರಕ್ಷಿಸುತ್ತಿದ್ದ ಭೃಗುಪತ್ನಿಯನ್ನೂ ಸಂಹರಿಸಿದನು. ಆಗ ಅಳಿದುಳಿದ ಅಸುರರು ಭೃಗುವಿನ ಮಗ ಉಶನಸನನ್ನು ಮೊರೆಹೊಕ್ಕರು. ತಾಯಿಯ ವಧೆಯಿಂದ ಖಿನ್ನನಾಗಿಇದ ಉಶನಸನು ದೈತ್ಯರಿಗೆ ಅಭಯವನ್ನಿತ್ತು ದೇವತೆಗಳ ವಿರೋಧಿಯಾದನು. (ಭಾರತ ದರ್ಶನ). ಈ ಕಥೆಯು ಯಾವ ಪುರಾಣದಲ್ಲಿ ಬರುತ್ತದೆ?

Comments are closed.