Shanti Parva: Chapter 189

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೮೯

ಜಾಪಕೋಪಾಖ್ಯಾನ

ಜಪಯಜ್ಞದ ಕುರಿತು ಯುಧಿಷ್ಠಿರನ ಪ್ರಶ್ನೆ ಮತ್ತು ಅದಕ್ಕುತ್ತರವಾಗಿ ಜಪ-ಧ್ಯಾನಗಳ ಮಹಿಮೆ-ಫಲಗಳು (೧-೨೧).

12189001 ಯುಧಿಷ್ಠಿರ ಉವಾಚ|

12189001a ಚಾತುರಾಶ್ರಮ್ಯಮುಕ್ತಂ ತೇ ರಾಜಧರ್ಮಾಸ್ತಥೈವ ಚ|

12189001c ನಾನಾಶ್ರಯಾಶ್ಚ ಬಹವ ಇತಿಹಾಸಾಃ ಪೃಥಗ್ವಿಧಾಃ||

ಯುಧಿಷ್ಠಿರನು ಹೇಳಿದನು: “ನಾಲ್ಕು ಆಶ್ರಮಗಳು ಮತ್ತು ರಾಜಧರ್ಮಗಳ ಕುರಿತು ನೀನು ಹೇಳಿದ್ದೀಯೆ ಮತ್ತು ನಾನಾ ವಿಷಯಗಳನ್ನೊಳಗೊಂಡಿರುವ ಪ್ರತ್ಯೇಕ ವಿಧದ ಅನೇಕ ಇತಿಹಾಸಗಳನ್ನೂ ಹೇಳಿದ್ದೀಯೆ.

12189002a ಶ್ರುತಾಸ್ತ್ವತ್ತಃ ಕಥಾಶ್ಚೈವ ಧರ್ಮಯುಕ್ತಾ ಮಹಾಮತೇ|

12189002c ಸಂದೇಹೋಽಸ್ತಿ ತು ಕಶ್ಚಿನ್ಮೇ ತದ್ಭವಾನ್ವಕ್ತುಮರ್ಹತಿ||

ಮಹಾಮತೇ! ನಾನು ನಿನ್ನಿಂದ ಧರ್ಮಯುಕ್ತ ಕಥೆಗಳನ್ನೂ ಕೇಳಿದೆ. ಆದರೂ ನನ್ನಲ್ಲಿ ಕೆಲವು ಸಂದೇಹಗಳಿವೆ. ಅದರ ಕುರಿತು ನೀನು ಹೇಳಬೇಕು.

12189003a ಜಾಪಕಾನಾಂ ಫಲಾವಾಪ್ತಿಂ ಶ್ರೋತುಮಿಚ್ಚಾಮಿ ಭಾರತ|

12189003c ಕಿಂ ಫಲಂ ಜಪತಾಮುಕ್ತಂ ಕ್ವ ವಾ ತಿಷ್ಠಂತಿ ಜಾಪಕಾಃ||

ಭಾರತ! ಜಪಮಾಡುವವರಿಗೆ ದೊರೆಯುವ ಫಲವು ಎಂಥಹುದು? ಜಾಪಕರಿಗೆ ಜಪದ ಫಲವು ಯಾವುದು ಅಥವಾ ಜಪ ಮಾಡುವವರು ಯಾವ ಲೋಕಗಳನ್ನು ಪಡೆಯುತ್ತಾರೆ?

12189004a ಜಪಸ್ಯ ಚ ವಿಧಿಂ ಕೃತ್ಸ್ನಂ ವಕ್ತುಮರ್ಹಸಿ ಮೇಽನಘ|

12189004c ಜಾಪಕಾ ಇತಿ ಕಿಂ ಚೈತತ್ಸಾಂಖ್ಯಯೋಗಕ್ರಿಯಾವಿಧಿಃ||

ಅನಘ! ಜಪದ ವಿಧಿಯನ್ನು ಸಂಪೂರ್ಣವಾಗಿ ಹೇಳಬೇಕು. “ಜಾಪಕ” ಪದದ ತಾತ್ಪರ್ಯವೇನು? ಇದು ಸಾಂಖ್ಯಯೋಗ, ಧ್ಯಾನಯೋಗ ಅಥವಾ ಕ್ರಿಯಾಯೋಗ ಯಾವುದರ ಅನುಷ್ಠಾನವು?

12189005a ಕಿಂ ಯಜ್ಞವಿಧಿರೇವೈಷ ಕಿಮೇತಜ್ಜಪ್ಯಮುಚ್ಯತೇ|

12189005c ಏತನ್ಮೇ ಸರ್ವಮಾಚಕ್ಷ್ವ ಸರ್ವಜ್ಞೋ ಹ್ಯಸಿ ಮೇ ಮತಃ||

ಅಥವಾ ಈ ಜಪವೂ ಒಂದು ಯಜ್ಞವಿಧಿಯೇ? ಯಾವುದರ ಕುರಿತು ಜಪವನ್ನು ಮಾಡುತ್ತಾರೆ? ಇವೆಲ್ಲವನ್ನೂ ನನಗೆ ಹೇಳು. ನೀನು ಸರ್ವಜ್ಞನೆಂದೇ ನನ್ನ ಮತ.”

12189006 ಭೀಷ್ಮ ಉವಾಚ|

12189006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12189006c ಯಮಸ್ಯ ಯತ್ಪುರಾ ವೃತ್ತಂ ಕಾಲಸ್ಯ ಬ್ರಾಹ್ಮಣಸ್ಯ ಚ||

ಭೀಷ್ಮನು ಹೇಳಿದನು: “ಇದರ ಕುರಿತು ಪುರಾತನ ಇತಿಹಾಸವಾದ ಯಮ, ಕಾಲ ಮತ್ತು ಬ್ರಾಹ್ಮಣರ ನಡುವೆ ಹಿಂದೆ ನಡೆದ ಈ ಘಟನೆಯನ್ನು ಉದಾಹರಿಸುತ್ತಾರೆ.

[1]12189007a ಸಂನ್ಯಾಸ ಏವ ವೇದಾಂತೇ ವರ್ತತೇ ಜಪನಂ ಪ್ರತಿ|

12189007c ವೇದವಾದಾಭಿನಿರ್ವೃತ್ತಾ ಶಾಂತಿರ್ಬ್ರಹ್ಮಣ್ಯವಸ್ಥಿತೌ|

[2]12189007e ಮಾರ್ಗೌ ತಾವಪ್ಯುಭಾವೇತೌ ಸಂಶ್ರಿತೌ ನ ಚ ಸಂಶ್ರಿತೌ||

ವೇದಾಂತದಲ್ಲಿ ಜಪದ ವಿಷಯದಲ್ಲಿ ಸಂನ್ಯಾಸವನ್ನೇ ಹೇಳಿದ್ದಾರೆ. ವೇದವಾದಗಳು ನಿರ್ವೃತ್ತಿ, ಶಾಂತಿ ಮತ್ತು ಬ್ರಹ್ಮನಿಷ್ಠೆಯ ಜ್ಞಾನವನ್ನುಂಟುಮಾಡುತ್ತವೆ.[3] ಸಾಂಖ್ಯಯೋಗ ಮತ್ತು ಧ್ಯಾನಯೋಗ ಇವೆರಡು ಮಾರ್ಗಗಳೂ ಜಪವನ್ನು ಆಶ್ರಯಿಸಿಯೂ ಇವೆ, ಆಶ್ರಯಿಸದೆಯೂ ಇವೆ[4].

12189008a ಯಥಾ ಸಂಶ್ರೂಯತೇ ರಾಜನ್ಕಾರಣಂ ಚಾತ್ರ ವಕ್ಷ್ಯತೇ|

12189008c ಮನಃಸಮಾಧಿರತ್ರಾಪಿ ತಥೇಂದ್ರಿಯಜಯಃ ಸ್ಮೃತಃ||

ರಾಜನ್! ಇದಕ್ಕೆ ಕಾರಣವನ್ನು ಹೇಗೆ ಕೇಳಿದ್ದೇವೋ ಹಾಗೆಯೇ ಹೇಳುತ್ತೇನೆ. ಸಾಂಖ್ಯ ಮತ್ತು ಯೋಗ – ಇವೆರಡೂ ಮಾರ್ಗಗಳಲ್ಲಿಯೂ ಮನೋನಿಗ್ರಹ ಮತ್ತು ಇಂದ್ರಿಯ ಸಂಯಮಗಳು ಅವಶ್ಯಕವಾಗಿವೆ.

12189009a ಸತ್ಯಮಗ್ನಿಪರೀಚಾರೋ ವಿವಿಕ್ತಾನಾಂ ಚ ಸೇವನಮ್|

12189009c ಧ್ಯಾನಂ ತಪೋ ದಮಃ ಕ್ಷಾಂತಿರನಸೂಯಾ ಮಿತಾಶನಮ್||

12189010a ವಿಷಯಪ್ರತಿಸಂಹಾರೋ ಮಿತಜಲ್ಪಸ್ತಥಾ ಶಮಃ|

12189010c ಏಷ ಪ್ರವೃತ್ತಕೋ ಧರ್ಮೋ ನಿವೃತ್ತಕಮಥೋ ಶೃಣು||

ಸತ್ಯ, ಅಗ್ನಿಹೋತ್ರ, ಏಕಾಂತವಾಸ, ಧ್ಯಾನ, ತಪಸ್ಸು, ದಮ, ಕ್ಷಮೆ, ಅಸೂಯೆಯಿಲ್ಲದಿರುವುದು, ಮಿತಾಹಾರ, ವಿಷಯಗಳನ್ನು ಸಂಕುಚಿತಗೊಳಿಸುವುದು, ಮಿತಭಾಷಣ ಮತ್ತು ಶಮೆ – ಇವು ಯೋಗದಲ್ಲಿ ತೊಡಗುವಂತೆ ಮಾಡುವ ಪ್ರವರ್ತಕ ಯಜ್ಞಗಳು. ಈಗ ಯೋಗವಿರುದ್ಧಕಾರ್ಯಗಳಲ್ಲಿ ತೊಡಗಿಸದೇ ಇರುವ ನಿವೃತ್ತಕ ಯಜ್ಞದ ಕುರಿತು ಕೇಳು.

12189011a ಯಥಾ ನಿವರ್ತತೇ ಕರ್ಮ ಜಪತೋ ಬ್ರಹ್ಮಚಾರಿಣಃ|

12189011c ಏತತ್ಸರ್ವಮಶೇಷೇಣ ಯಥೋಕ್ತಂ ಪರಿವರ್ಜಯೇತ್[5]|

12189011e ತ್ರಿವಿಧಂ[6] ಮಾರ್ಗಮಾಸಾದ್ಯ ವ್ಯಕ್ತಾವ್ಯಕ್ತಮನಾಶ್ರಯಮ್||

ಜಪವನ್ನು ಮಾಡುವ ಬ್ರಹ್ಮಚಾರಿಗೆ ಕರ್ಮಗಳು ನಿವೃತ್ತಿಹೊಂದುತ್ತವೆ. ವ್ಯಕ್ತ, ಅವ್ಯಕ್ತ ಮತ್ತು ಅನಾಶ್ರಯ ಎಂಬ ಈ ತ್ರಿವಿಧ ನಿವೃತ್ತಿಮಾರ್ಗವನ್ನನುಸರಿಸಿ ಹಿಂದೆ ಹೇಳಿದುದೆಲ್ಲವನ್ನೂ ಪರಿತ್ಯಜಿಸಬೇಕು.

12189012a ಕುಶೋಚ್ಚಯನಿಷಣ್ಣಃ ಸನ್ಕುಶಹಸ್ತಃ ಕುಶೈಃ ಶಿಖೀ|

12189012c ಚೀರೈಃ ಪರಿವೃತಸ್ತಸ್ಮಿನ್ಮಧ್ಯೇ ಚನ್ನಃ ಕುಶೈಸ್ತಥಾ||

ನಿವೃತ್ತಿಮಾರ್ಗದಲ್ಲಿ ಹೋಗುವವನು ದರ್ಬೆಗಳನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳಬೇಕು. ತನ್ನ ಕೈಯಲ್ಲಿಯೂ ದರ್ಬೆಗಳನ್ನು ಹಿಡಿದಿರಬೇಕು. ಶಿಖೆಯನ್ನೂ ದರ್ಬೆಗಳಿಂದ ಕಟ್ಟಿಕೊಳ್ಳಬೇಕು. ದರ್ಬೆಗಳನ್ನು ಸುತ್ತಲೂ ಮುಚ್ಚಿಕೊಂಡು ಮಧ್ಯದಲ್ಲಿ ಕುಳಿತಿರಬೇಕು.

12189013a ವಿಷಯೇಭ್ಯೋ ನಮಸ್ಕುರ್ಯಾದ್ವಿಷಯಾನ್ನ ಚ ಭಾವಯೇತ್|

12189013c ಸಾಮ್ಯಮುತ್ಪಾದ್ಯ ಮನಸೋ ಮನಸ್ಯೇವ ಮನೋ ದಧತ್||

ದೂರದಿಂದಲೇ ವಿಷಯಗಳನ್ನು ನಮಸ್ಕರಿಸಿ ವಿಷಯಗಳ ಕುರಿತು ಮನಸ್ಸಿನಲ್ಲಿ ಯೋಚಿಸಬಾರದು. ಮನಸ್ಸಿನಲ್ಲಿ ಸಾಮ್ಯತೆಯನ್ನು ತಂದುಕೊಂಡು ಮನಸ್ಸನ್ನು ಮನಸ್ಸಿನಲ್ಲಿಯೇ ಲಯಗೊಳಿಸಬೇಕು.

12189014a ತದ್ಧಿಯಾ ಧ್ಯಾಯತಿ ಬ್ರಹ್ಮ ಜಪನ್ವೈ ಸಂಹಿತಾಂ ಹಿತಾಮ್|

12189014c ಸಂನ್ಯಸ್ಯತ್ಯಥ ವಾ ತಾಂ ವೈ ಸಮಾಧೌ ಪರ್ಯವಸ್ಥಿತಃ||

ಅನಂತರ ಹಿತವಾದ ಸಂಹಿತೆಯನ್ನು[7] ಜಪಿಸುತ್ತಾ ಬುದ್ಧಿಯಲ್ಲಿ ಪರಬ್ರಹ್ಮಪರಮಾತ್ಮನನ್ನು ಧ್ಯಾನಿಸಬೇಕು. ಸಮಾಧಿಸ್ಥನಾದ ನಂತರ ಆ ಸಂಹಿತೆಯ ಜಪವನ್ನು ನಿಲ್ಲಿಸಬಹುದು.

12189015a ಧ್ಯಾನಮುತ್ಪಾದಯತ್ಯತ್ರ ಸಂಹಿತಾಬಲಸಂಶ್ರಯಾತ್|

12189015c ಶುದ್ಧಾತ್ಮಾ ತಪಸಾ ದಾಂತೋ ನಿವೃತ್ತದ್ವೇಷಕಾಮವಾನ್||

12189016a ಅರಾಗಮೋಹೋ ನಿರ್ದ್ವಂದ್ವೋ ನ ಶೋಚತಿ ನ ಸಜ್ಜತೇ|

12189016c ನ ಕರ್ತಾಕರಣೀಯಾನಾಂ ನ ಕಾರ್ಯಾಣಾಮಿತಿ ಸ್ಥಿತಿಃ||

ಸಂಹಿತೆಯ ಜಪದಿಂದ ದೊರೆಯುವ ಬಲವನ್ನುಪಯೋಗಿಸಿಕೊಂಡು ಸಾಧಕನು ತನ್ನ ಧ್ಯಾನದ ಸಿದ್ಧಿಯನ್ನು ಪಡೆಯುತ್ತಾನೆ. ತಪಸ್ಸಿನಿಂದ ಶುದ್ಧಾತ್ಮನೂ ಜಿತೇಂದ್ರಿಯನೂ ಆಗುತ್ತಾನೆ. ಕಾಮ-ಕ್ರೋಧ-ರಾಗ-ಮೋಹ ರಹಿತನಾಗುತ್ತಾನೆ. ದ್ವೇಷ-ಕಾಮನೆಗಳಿಂದ ನಿವೃತ್ತನಾಗುತ್ತಾನೆ. ನಿರ್ದ್ವಂದ್ವನಾಗಿ ಶೋಕಿಸುವುದೂ ಇಲ್ಲ ಮತ್ತು ಯಾವುದರಲ್ಲಿಯೂ ಆಸಕ್ತನೂ ಆಗುವುದಿಲ್ಲ. ಕರ್ಮಗಳಿಗೆ ಕಾರಣನೆಂದಾಗಲೀ ಕರ್ತೃವೆಂದಾಗಲೀ ಭಾವಿಸುವುದಿಲ್ಲ. ಎಲ್ಲ ಕಾರ್ಯಗಳನ್ನೂ ಅಭಿಮಾನರಹಿತನಾಗಿ ಮಾಡುತ್ತಾನೆ.

12189017a ನ ಚಾಹಂಕಾರಯೋಗೇನ ಮನಃ ಪ್ರಸ್ಥಾಪಯೇತ್ಕ್ವ ಚಿತ್|

12189017c ನ ಚಾತ್ಮಗ್ರಹಣೇ[8] ಯುಕ್ತೋ ನಾವಮಾನೀ ನ ಚಾಕ್ರಿಯಃ||

ಅವನು ಎಂದೂ ಮನಸ್ಸಿನೊಂದಿಗೆ ಅಹಂಕಾರವನ್ನು ಜೋಡಿಸುವುದಿಲ್ಲ. ಅವನು ಸ್ವಾರ್ಥಸಾದನೆಯಲ್ಲಿ ತೊಡಗುವುದಿಲ್ಲ, ಯಾರನ್ನೂ ಅಪಮಾನಿಸುವುದಿಲ್ಲ ಮತ್ತು ಅಕರ್ಮಣ್ಯನೂ ಆಗಿರುವುದಿಲ್ಲ.

12189018a ಧ್ಯಾನಕ್ರಿಯಾಪರೋ ಯುಕ್ತೋ ಧ್ಯಾನವಾನ್ ಧ್ಯಾನನಿಶ್ಚಯಃ|

12189018c ಧ್ಯಾನೇ ಸಮಾಧಿಮುತ್ಪಾದ್ಯ ತದಪಿ ತ್ಯಜತಿ ಕ್ರಮಾತ್||

ಧ್ಯಾನಕ್ರಿಯಾಪರನಾಗಿದ್ದುಕೊಂಡು ಧ್ಯಾನನಿಷ್ಠನಾಗಿ ಧ್ಯಾನದ ಮೂಲಕವೇ ತತ್ತ್ವವನ್ನು ಅರಿತುಕೊಳ್ಳುತ್ತಾನೆ. ಧ್ಯಾನದ ಮೂಲಕ ಸಮಾಧಿಸ್ಥಿತಿಯನ್ನು ಹೊಂದಿ ಅನುಕ್ರಮವಾಗಿ ಜಪವನ್ನೂ ಧ್ಯಾನಕರ್ಮವನ್ನೂ ಪರಿತ್ಯಜಿಸುತ್ತಾನೆ.

12189019a ಸ ವೈ ತಸ್ಯಾಮವಸ್ಥಾಯಾಂ ಸರ್ವತ್ಯಾಗಕೃತಃ ಸುಖೀ|

12189019c ನಿರೀಹಸ್ತ್ಯಜತಿ[9] ಪ್ರಾಣಾನ್ ಬ್ರಾಹ್ಮೀಂ ಸಂಶ್ರಯತೇ ತನುಮ್||

ಆ ಅವಸ್ಥೆಯಲ್ಲಿ ಅವನು ಸರ್ವವನ್ನೂ ತ್ಯಾಗಮಾಡಿ ಸುಖಿಯಾಗಿರುತ್ತಾನೆ. ಏನನ್ನೂ ಬಯಸದೇ ಪ್ರಾಣಗಳನ್ನು ತ್ಯಜಿಸಿ ವಿಶುದ್ಧ ಪರಬ್ರಹ್ಮ ಪರಮಾತ್ಮನ ಸ್ವರೂಪವನ್ನು ಪ್ರವೇಶಿಸುತ್ತಾನೆ.

12189020a ಅಥ ವಾ ನೇಚ್ಚತೇ ತತ್ರ ಬ್ರಹ್ಮಕಾಯನಿಷೇವಣಮ್|

12189020c ಉತ್ಕ್ರಾಮತಿ ಚ ಮಾರ್ಗಸ್ಥೋ ನೈವ ಕ್ವ ಚನ ಜಾಯತೇ||

ಬ್ರಹ್ಮಕಾಯವನ್ನು ಪ್ರವೇಶಿಸಲು ಇಷ್ಟವಿಲ್ಲದಿದ್ದರೆ ದೇವಯಾನದ ಮಾರ್ಗದಲ್ಲಿ ಉತ್ಕ್ರಮಿಸಿ ಮೇಲಿನ ಲೋಕಗಳಿಗೆ ಹೋಗುತ್ತಾನೆ. ಅಂಥವರು ಪುನಃ ಹುಟ್ಟುವುದಿಲ್ಲ.

12189021a ಆತ್ಮಬುದ್ಧಿಂ ಸಮಾಸ್ಥಾಯ ಶಾಂತೀಭೂತೋ ನಿರಾಮಯಃ|

12189021c ಅಮೃತಂ ವಿರಜಃಶುದ್ಧಮಾತ್ಮಾನಂ ಪ್ರತಿಪದ್ಯತೇ||

ಆತ್ಮಸಮಾಧಿಯನ್ನು ಹೊಂದಿ ಯೋಗಿಯು ರಜೋಗುಣರಹಿತನಾಗಿ ನಿರ್ಮಲನಾಗಿ ಶಾಂತಸ್ವರೂಪನಾಗಿ ಅಮೃತಸ್ವರೂಪವಾದ ವಿಶುದ್ಧ ಆತ್ಮನನ್ನು ಹೊಂದುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ಏಕೋನನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾಎಂಭತ್ತೊಂಭತ್ತನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಸಾಂಖ್ಯಯೋಗೌ ತು ಯಾವುಕ್ತೌ ಮುನಿಭಿರ್ಮೋಕ್ಷದರ್ಶಿಭಿಃ| (ಗೀತಾ ಪ್ರೆಸ್/ಭಾರತ ದರ್ಶನ).

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಾಂಖ್ಯಯೋಗೌ ತು ಯಾವುಕ್ತೌ ಮುನಿಭಿಃ ಸಮದರ್ಶಿಭಿಃ| (ಗೀತಾ ಪ್ರೆಸ್/ಭಾರತ ದರ್ಶನ)

[3] ಆದುದರಿಂದ ಅಲ್ಲಿ ಜಪದ ಅವಶ್ಯಕತೆಯಿರುವುದಿಲ್ಲ (ಗೀತಾ ಪ್ರೆಸ್/ಭಾರತ ದರ್ಶನ).

[4] ಆ ಎರಡು ಮಾರ್ಗಗಳೂ ಚಿತ್ತಶುದ್ಧಿಯಾಗುವವರೆಗೆ ಜಪವನ್ನು ಆಶ್ರಯಿಸಿರುತ್ತವೆ. ಚಿತ್ತಶುದ್ಧಿಯಾದ ನಂತರ ಜಪವನ್ನು ಆಶ್ರಯಿಸಿರುವುದಿಲ್ಲ (ಗೀತಾ ಪ್ರೆಸ್/ಭಾರತ ದರ್ಶನ).

[5] ಪರಿವರ್ತಯೇತ್| (ಗೀತಾ ಪ್ರೆಸ್/ಭಾರತ ದರ್ಶನ).

[6] ನಿವೃತ್ತಂ (ಗೀತಾ ಪ್ರೆಸ್/ಭಾರತ ದರ್ಶನ).

[7] ಉಪನಿಷತ್ಸಂಹಿತೆ (ಭಾರತ ದರ್ಶನ), ವೇದಸಂಹಿತೆಯ ಪ್ರಣವ ಮತ್ತು ಗಾಯತ್ರೀ ಮಂತ್ರ (ಗೀತಾ ಪ್ರೆಸ್).

[8] ಚಾರ್ಥಗ್ರಹಣೇ (ಗೀತಾ ಪ್ರೆಸ್/ಭಾರತ ದರ್ಶನ).

[9] ನಿರಿಚ್ಛಸ್ತ್ಯಜತಿ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.