Shanti Parva: Chapter 188

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೮೮

ಧ್ಯಾನಯೋಗ

ಧ್ಯಾನಯೋಗದ ವರ್ಣನೆ (೧-೨೨).

12188001 ಭೀಷ್ಮ ಉವಾಚ|

12188001a ಹಂತ ವಕ್ಷ್ಯಾಮಿ ತೇ ಪಾರ್ಥ ಧ್ಯಾನಯೋಗಂ ಚತುರ್ವಿಧಮ್|

12188001c ಯಂ ಜ್ಞಾತ್ವಾ ಶಾಶ್ವತೀಂ ಸಿದ್ಧಿಂ ಗಚ್ಚಂತಿ ಪರಮರ್ಷಯಃ||

ಭೀಷ್ಮನು ಹೇಳಿದನು: “ಪಾರ್ಥ! ಈಗ ನಾನು ನಿನಗೆ ನಾಲ್ಕುವಿಧದ ಧ್ಯಾನಯೋಗದ ಕುರಿತು ಹೇಳುತ್ತೇನೆ. ಇದನ್ನು ತಿಳಿದು ಪರಮ ಋಷಿಗಳು ಶಾಶ್ವತ ಸಿದ್ಧಿಯನ್ನು ಪಡೆದುಕೊಂಡರು.

12188002a ಯಥಾ ಸ್ವನುಷ್ಠಿತಂ ಧ್ಯಾನಂ ತಥಾ ಕುರ್ವಂತಿ ಯೋಗಿನಃ|

12188002c ಮಹರ್ಷಯೋ ಜ್ಞಾನತೃಪ್ತಾ ನಿರ್ವಾಣಗತಮಾನಸಾಃ||

ನಿರ್ವಾಣದ ಮನಸ್ಸುಮಾಡಿದ ಜ್ಞಾನತೃಪ್ತ ಮಹರ್ಷಿ ಯೋಗಿಗಳು ಇದೇ ಧ್ಯಾನವಿಧಿಯನ್ನು ಚೆನ್ನಾಗಿ ಅನುಷ್ಠಾನ ಮಾಡುತ್ತಾರೆ.

12188003a ನಾವರ್ತಂತೇ ಪುನಃ ಪಾರ್ಥ ಮುಕ್ತಾಃ ಸಂಸಾರದೋಷತಃ|

12188003c ಜನ್ಮದೋಷಪರಿಕ್ಷೀಣಾಃ ಸ್ವಭಾವೇ ಪರ್ಯವಸ್ಥಿತಾಃ||

ಪಾರ್ಥ! ಆತ್ಮಸ್ವಭಾವದಲ್ಲಿ ಸ್ಥಿತರಾದ ಅವರು ಸಂಸಾರದೋಷಗಳಿಂದ ಮುಕ್ತರಾಗಿ ಜನ್ಮದೋಷಗಳನ್ನು ಕಳೆದುಕೊಂಡು ಪುನಃ ಸಂಸಾರಕ್ಕೆ ಹಿಂದಿರುಗುವುದಿಲ್ಲ.

12188004a ನಿರ್ದ್ವಂದ್ವಾ ನಿತ್ಯಸತ್ತ್ವಸ್ಥಾ ವಿಮುಕ್ತಾ ನಿತ್ಯಮಾಶ್ರಿತಾಃ[1]|

12188004c ಅಸಂಗೀನ್ಯವಿವಾದೀನಿ ಮನಃಶಾಂತಿಕರಾಣಿ ಚ||

12188005a ತತ್ರ ಸ್ವಾಧ್ಯಾಯಸಂಶ್ಲಿಷ್ಟಮೇಕಾಗ್ರಂ ಧಾರಯೇನ್ಮನಃ|

12188005c ಪಿಂಡೀಕೃತ್ಯೇಂದ್ರಿಯಗ್ರಾಮಮಾಸೀನಃ ಕಾಷ್ಠವನ್ಮುನಿಃ||

ಧ್ಯಾನಯೋಗದ ಸಾಧಕನು ದ್ವಂದ್ವಗಳನ್ನು ತ್ಯಜಿಸಿ, ನಿತ್ಯವೂ ಸತ್ತ್ವಗುಣದಲ್ಲಿಯೇ ಇದ್ದುಕೊಂಡು, ಎಲ್ಲ ದೋಷಗಳಿಂದ ವಿಮುಕ್ತನಾಗಿ ನಿತ್ಯವೂ ಧ್ಯಾನವನ್ನಾಶ್ರಯಿಸಬೇಕು. ಅವನು ಅಸಂಗನಾಗಿ ಧ್ಯಾನವಿರೋಧೀ ವಸ್ತುಗಳಿಲ್ಲದೇ ಇರುವ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುವ ಸ್ಥಳದಲ್ಲಿ ಇಂದ್ರಿಯಗಳನ್ನು ವಿಷಯಗಳಿಂದ ಎಳೆದುಕೊಂಡು ಕಟ್ಟಿಗೆಯಂತೆ ಸ್ಥಿರಭಾವದಿಂದ ಕುಳಿತುಕೊಳ್ಳಬೇಕು ಮತ್ತು ಮನಸ್ಸನ್ನು ಏಕಾಗ್ರಗೊಳಿಸಿ ಪರಮಾತ್ಮನ ಧ್ಯಾನದಲ್ಲಿ ತೊಡಗಬೇಕು.

12188006a ಶಬ್ದಂ ನ ವಿಂದೇಚ್ಚ್ರೋತ್ರೇಣ ಸ್ಪರ್ಶಂ ತ್ವಚಾ ನ ವೇದಯೇತ್|

12188006c ರೂಪಂ ನ ಚಕ್ಷುಷಾ ವಿದ್ಯಾಜ್ಜಿಹ್ವಯಾ ನ ರಸಾಂಸ್ತಥಾ||

12188007a ಘ್ರೇಯಾಣ್ಯಪಿ ಚ ಸರ್ವಾಣಿ ಜಹ್ಯಾದ್ಧ್ಯಾನೇನ ಯೋಗವಿತ್|

12188007c ಪಂಚವರ್ಗಪ್ರಮಾಥೀನಿ ನೇಚ್ಚೇಚ್ಚೈತಾನಿ ವೀರ್ಯವಾನ್||

ವೀರ್ಯವಾನ್ ಧ್ಯಾನಯೋಗಿಯು ಕಿವಿಗಳಿಂದ ಶಬ್ದವನ್ನು ಕೇಳಬಾರದು. ಚರ್ಮದಿಂದ ಸ್ಪರ್ಶದ ಅನುಭವವನ್ನು ಹೊಂದಬಾರದು. ಕಣ್ಣಿನಿಂದ ರೂಪವನ್ನು ನೋಡಬಾರದು ಮತ್ತು ನಾಲಿಗೆಯಿಂದ ರಸವನ್ನು ಗ್ರಹಿಸಬಾರದು. ಹಾಗೆಯೇ ಯೋಗವಿದುವು ಮೂಸಲು ಯೋಗ್ಯವಾದ ಸಮಸ್ತ ವಸ್ತುಗಳನ್ನೂ ತ್ಯಜಿಸಬೇಕು. ಪಂಚೇಂದ್ರಿಯಗಳನ್ನು ಮಥಿಸುವ ಈ ವಿಷಯಗಳ ಇಚ್ಛೆಯನ್ನು ತನ್ನ ಮನಸ್ಸಿನಿಂದಲೂ ತೆಗೆದುಹಾಕಬೇಕು.

12188008a ತತೋ ಮನಸಿ ಸಂಸಜ್ಯ[2] ಪಂಚವರ್ಗಂ ವಿಚಕ್ಷಣಃ|

12188008c ಸಮಾದಧ್ಯಾನ್ಮನೋ ಭ್ರಾಂತಮಿಂದ್ರಿಯೈಃ ಸಹ ಪಂಚಭಿಃ||

ಅನಂತರ ಬುದ್ಧಿವಂತನು ಪಂಚೇಂದ್ರಿಯಗಳನ್ನು ಮನಸ್ಸಿನಲ್ಲಿ ಸ್ಥಿರಗೊಳಿಸಬೇಕು. ನಂತರ ಪಂಚೇಂದ್ರಿಯಗಳೊಂದಿಗೆ ಮನಸ್ಸನ್ನು ಪರಮಾತ್ಮನ ಧ್ಯಾನದಲ್ಲಿ ಏಕಾಗ್ರಗೊಳಿಸಬೇಕು.

12188009a ವಿಸಂಚಾರಿ ನಿರಾಲಂಬಂ ಪಂಚದ್ವಾರಂ ಚಲಾಚಲಮ್|

12188009c ಪೂರ್ವೇ ಧ್ಯಾನಪಥೇ ಧೀರಃ ಸಮಾದಧ್ಯಾನ್ಮನೋಽಂತರಮ್||

ಯಾವಾಗಲೂ ಎಲ್ಲಕಡೆ ಸಂಚರಿಸುತ್ತಿರುವ, ಯಾವುದರಲ್ಲಿಯೂ ನೆಲೆಗೊಂಡಿರದ, ಅಲ್ಲಲ್ಲಿ ತಿರುಗಾಡಲು ಐದು ದ್ವಾರಗಳನ್ನು ಹೊಂದಿರುವ ಮತ್ತು ಅತ್ಯಂತ ಚಂಚಲವಾದ ಮನಸ್ಸನ್ನು ಧೀರ ಯೋಗಿಯು ಧ್ಯಾನಮಾರ್ಗದಿಂದ ಮೊದಲು ತನ್ನ ಹೃದಯದೊಳಗೆ ಏಕಾಗ್ರಗೊಳಿಸಬೇಕು.

12188010a ಇಂದ್ರಿಯಾಣಿ ಮನಶ್ಚೈವ ಯದಾ ಪಿಂಡೀಕರೋತ್ಯಯಮ್|

12188010c ಏಷ ಧ್ಯಾನಪಥಃ ಪೂರ್ವೋ ಮಯಾ ಸಮನುವರ್ಣಿತಃ||

ಯಾವಾಗ ಯೋಗಿಯು ಇಂದ್ರಿಯಗಳ ಸಹಿತ ಮನಸ್ಸನ್ನು ಏಕಾಗ್ರಗೊಳಿಸುತ್ತಾನೋ ಆಗಲೇ ಅವನ ಧ್ಯಾನಮಾರ್ಗದ ಪ್ರಾರಂಭಿಕ ಆರಂಭವಾಗುತ್ತದೆ. ಇದೋ ನಾನು ನಿನಗೆ ಧ್ಯಾನಮಾರ್ಗದ ಪ್ರಥಮ ವಿಧಾನವನ್ನು ವರ್ಣಿಸಿದ್ದೇನೆ.

12188011a ತಸ್ಯ ತತ್ಪೂರ್ವಸಂರುದ್ಧಂ ಮನಃಷಷ್ಠಮನಂತರಮ್|

12188011c ಸ್ಫುರಿಷ್ಯತಿ ಸಮುದ್ಭ್ರಾಂತಂ ವಿದ್ಯುದಂಬುಧರೇ ಯಥಾ||

ಹೀಗೆ ಮೊದಲು ಪಂಚೇಂದ್ರಿಯಗಳು ಮತ್ತು ಆರನೆಯ ಮನಸ್ಸನ್ನು ಕೆಲ ಸಮಯ ಸ್ಥಿರಗೊಳಿಸಿದಾಗ ಮೋಡಗಳಲ್ಲಿ ಮಿಂಚು ಹೊಳೆಯುವಂತೆ ಪುನಃ ಪುನಃ ಮನಸ್ಸು ವಿಷಯಗಳ ಕಡೆ ಹರಿದುಹೋಗಲು ಚಂಚಲಗೊಂಡು ಸ್ಫುರಿಸುತ್ತಿರುತ್ತದೆ.

12188012a ಜಲಬಿಂದುರ್ಯಥಾ ಲೋಲಃ ಪರ್ಣಸ್ಥಃ ಸರ್ವತಶ್ಚಲಃ|

12188012c ಏವಮೇವಾಸ್ಯ ತಚ್ಚಿತ್ತಂ ಭವತಿ ಧ್ಯಾನವರ್ತ್ಮನಿ||

ಎಲೆಯ ಮೇಲೆ ಬಿದ್ದ ನೀರಿನ ಹನಿಯು ಹೇಗೆ ಎಲ್ಲಕಡೆ ಸಿಡಿಯುತ್ತದೆಯೋ ಹಾಗೆಯೇ ಧ್ಯಾನಮಾರ್ಗಸ್ಥನಾದ ಸಾಧಕನ ಮನಸ್ಸೂ ಕೂಡ ಪ್ರಾರಂಭದಲ್ಲಿ ಚಂಚಲಗೊಳ್ಳುತ್ತಿರುತ್ತದೆ.

12188013a ಸಮಾಹಿತಂ ಕ್ಷಣಂ ಕಿಂ ಚಿದ್ಧ್ಯಾನವರ್ತ್ಮನಿ ತಿಷ್ಠತಿ|

12188013c ಪುನರ್ವಾಯುಪಥಂ ಭ್ರಾಂತಂ ಮನೋ ಭವತಿ ವಾಯುವತ್||

ಏಕಾಗ್ರಗೊಳಿಸಿದಾಗ ಸ್ವಲ್ಪ ಸಮಯ ಅದು ಧ್ಯಾನದಲ್ಲಿ ಸ್ಥಿತವಾಗಿರುತ್ತದೆ. ಆದರೆ ಪುನಃ ಅದು ನಾಡೀ ಮಾರ್ಗವನ್ನು ತಲುಪಿ ಭ್ರಾಂತಗೊಂಡು ಗಾಳಿಯಂತೆ ಚಂಚಲವಾಗಿ ಮೇಲೇಳುತ್ತದೆ.

12188014a ಅನಿರ್ವೇದೋ ಗತಕ್ಲೇಶೋ ಗತತಂದ್ರೀರಮತ್ಸರಃ|

12188014c ಸಮಾದಧ್ಯಾತ್ಪುನಶ್ಚೇತೋ ಧ್ಯಾನೇನ ಧ್ಯಾನಯೋಗವಿತ್||

ಧ್ಯಾನಯೋಗವಿದುವು ಆಗ ಖೇದಿಸುವುದಿಲ್ಲ ಅಥವಾ ಕ್ಲೇಷವನ್ನು ಅನುಭವಿಸುವುದಿಲ್ಲ. ಆಲಸ್ಯ ಮತ್ತು ಮತ್ಸರಗಳನ್ನು ತೊರೆದು ಮನಸ್ಸನ್ನು ಪುನಃ ಏಕಾಗ್ರಗೊಳಿಸಲು ಪ್ರಯತ್ನಿಸುತ್ತಾನೆ.

12188015a ವಿಚಾರಶ್ಚ ವಿತರ್ಕಶ್ಚ ವಿವೇಕಶ್ಚೋಪಜಾಯತೇ|

12188015c ಮುನೇಃ ಸಮಾದಧಾನಸ್ಯ ಪ್ರಥಮಂ ಧ್ಯಾನಮಾದಿತಃ||

ಮುನಿಯು ಧ್ಯಾನವನ್ನು ಆರಂಭಿಸಿದಾಗ ಮೊದಲು ಅವನ ಮನಸ್ಸಿನಲ್ಲಿ ಧ್ಯಾನವಿಷಯಕ ವಿಚಾರ, ವಿವೇಕ ಮತ್ತು ವಿತರ್ಕಗಳು ಪ್ರಕಟವಾಗುತ್ತವೆ.

12188016a ಮನಸಾ ಕ್ಲಿಶ್ಯಮಾನಸ್ತು ಸಮಾಧಾನಂ ಚ ಕಾರಯೇತ್|

12188016c ನ ನಿರ್ವೇದಂ ಮುನಿರ್ಗಚ್ಚೇತ್ಕುರ್ಯಾದೇವಾತ್ಮನೋ ಹಿತಮ್||

ಮನಸ್ಸು ಎಷ್ಟೇ ಕ್ಲೇಶಕ್ಕೊಳಗಾದರೂ ಅದನ್ನು ಸಮಾಧಾನಗೊಳಿಸಬೇಕು. ಮುನಿಯು ದುಃಖಕ್ಕೊಳಗಾಗದೇ ಸದಾ ತನಗೆ ಹಿತವಾಗುವ ಕಾರ್ಯವನ್ನೇ ಮಾಡಬೇಕು.

12188017a ಪಾಂಸುಭಸ್ಮಕರೀಷಾಣಾಂ ಯಥಾ ವೈ ರಾಶಯಶ್ಚಿತಾಃ|

12188017c ಸಹಸಾ ವಾರಿಣಾ ಸಿಕ್ತಾ ನ ಯಾಂತಿ ಪರಿಭಾವನಾಮ್||

12188018a ಕಿಂ ಚಿತ್ಸ್ನಿಗ್ಧಂ ಯಥಾ ಚ ಸ್ಯಾಚ್ಚುಷ್ಕಚೂರ್ಣಮಭಾವಿತಮ್|

12188018c ಕ್ರಮಶಸ್ತು ಶನೈರ್ಗಚ್ಚೇತ್ಸರ್ವಂ ತತ್ಪರಿಭಾವನಮ್||

12188019a ಏವಮೇವೇಂದ್ರಿಯಗ್ರಾಮಂ ಶನೈಃ ಸಂಪರಿಭಾವಯೇತ್|

12188019c ಸಂಹರೇತ್ಕ್ರಮಶಶ್ಚೈವ ಸ ಸಮ್ಯಕ್ಪ್ರಶಮಿಷ್ಯತಿ||

ಹುಡಿಮಣ್ಣು, ಬೂದಿ ಮತ್ತು ಒಣಗಿದ ಸಗಣಿಯ ಕುರುಳುಗಳ ರಾಶಿಗಳ ಮೇಲೆ ನೀರನ್ನು ಚಿಮುಕಿಸಿದರೆ ಕೂಡಲೇ ಅವು ಒದ್ದೆಯಾಗುವುದಿಲ್ಲ. ಕೆಲಭಾಗವು ಒದ್ದೆಯಾಗುತ್ತದೆ ಮತ್ತು ಇನ್ನು ಕೆಲವು ಭಾಗವು ಒಣಗಿಯೇ ಇರುತ್ತದೆ. ಸ್ವಲ್ಪ ಸ್ವಲ್ಪ ನೀರನ್ನು ಮತ್ತೆ ಮತ್ತೆ ನಿಧಾನವಾಗಿ ಚಿಮುಕಿಸಿ ಕಲೆಸಿದಾಗ ಅದು ಸಂಪೂರ್ಣವಾಗಿ ನೆನೆದು ಮುದ್ದೆಯಾಗುತ್ತದೆ. ಅದೇ ರೀತಿಯಲ್ಲಿ ಇಂದ್ರಿಯಗ್ರಾಮಗಳನ್ನು ಧ್ಯಾನದ ಮೂಲಕ ಸ್ವಲ್ಪಸ್ವಲ್ಪವಾಗಿಯೇ ಗೆಲ್ಲಬೇಕು. ಇದರಿಂದ ಚಿತ್ತವು ಉತ್ತಮ ಶಾಂತಿಯನ್ನು ಪಡೆದುಕೊಳ್ಳುತ್ತದೆ.

12188020a ಸ್ವಯಮೇವ ಮನಶ್ಚೈವ ಪಂಚವರ್ಗಶ್ಚ ಭಾರತ|

12188020c ಪೂರ್ವಂ ಧ್ಯಾನಪಥಂ ಪ್ರಾಪ್ಯ ನಿತ್ಯಯೋಗೇನ ಶಾಮ್ಯತಿ||

ಭಾರತ! ಮೊದಲು ಮನಸ್ಸನೂ ಮತ್ತು ಪಂಚೇಂದ್ರಿಯಗಳನ್ನೂ ಧ್ಯಾನಪಥದಲ್ಲಿ ಸ್ಥಾಪಿಸಿ ನಿತ್ಯವೂ ಧ್ಯಾನಮಾಡುವುದರಿಂದ ಪರಮ ಶಾಂತಿಯನ್ನು ಪಡೆಯುತ್ತಾನೆ.

12188021a ನ ತತ್ಪುರುಷಕಾರೇಣ ನ ಚ ದೈವೇನ ಕೇನ ಚಿತ್|

12188021c ಸುಖಮೇಷ್ಯತಿ ತತ್ತಸ್ಯ ಯದೇವಂ ಸಂಯತಾತ್ಮನಃ||

ಹೀಗೆ ಸಂಯತಾತ್ಮನಾಗಿ ಧ್ಯಾನಮಾಡುವುದರಿಂದ ದೊರೆಯುವ ಸುಖವು ಪುರುಷಪ್ರಯತ್ನದಿಂದಾಗಲೀ ಅಥವಾ ದೈವಯೋಗದಿಂದಾಗಲೀ ದೊರೆಯುವುದಿಲ್ಲ.

12188022a ಸುಖೇನ ತೇನ ಸಂಯುಕ್ತೋ ರಂಸ್ಯತೇ ಧ್ಯಾನಕರ್ಮಣಿ|

12188022c ಗಚ್ಚಂತಿ ಯೋಗಿನೋ ಹ್ಯೇವಂ ನಿರ್ವಾಣಂ ತನ್ನಿರಾಮಯಮ್||

ಆ ಸುಖದಿಂದ ಸಂಯುಕ್ತನಾದವನು ಧ್ಯಾನಕರ್ಮದಲ್ಲಿಯೇ ರಮಿಸುತ್ತಾನೆ. ಅಂಥಹ ಯೋಗಿಗಳು ನಿರಾಮಯವಾದ ನಿರ್ವಾಣಪದವನ್ನು ಹೊಂದುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಧ್ಯಾನಯೋಗಕಥನೇ ಅಷ್ಟಾಶೀತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಧ್ಯಾನಯೋಗಕಥನ ಎನ್ನುವ ನೂರಾಎಂಭತ್ತೆಂಟನೇ ಅಧ್ಯಾಯವು.

[1] ನಿಯಮಸ್ಥಿತಾಃ (ಭಾರತ ದರ್ಶನ/ಗೀತಾ ಪ್ರೆಸ್).

[2] ಸಂಗೃಹ್ಯ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.