Shanti Parva: Chapter 135

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೫

ಶಕುಲಾಖ್ಯಾನ

ಮುಂದೆ ಬರುವ ಸಂಕಟದ ಕುರಿತು ಸಾವಧಾನದಿಂದಿರಲು ದೂರದರ್ಶೀ, ತತ್ಕಾಲಜ್ಞ ಮತ್ತು ದೀರ್ಘಸೂತ್ರೀ – ಈ ಮೂರು ಮೀನುಗಳ ದೃಷ್ಟಾಂತ (೧-೨೩).

12135001 ಭೀಷ್ಮ ಉವಾಚ|

[1]12135001a ಅತ್ರೈವ ಚೇದಮವ್ಯಗ್ರಃ ಶೃಣ್ವಾಖ್ಯಾನಮನುತ್ತಮಮ್|

12135001c ದೀರ್ಘಸೂತ್ರಂ ಸಮಾಶ್ರಿತ್ಯ ಕಾರ್ಯಾಕಾರ್ಯವಿನಿಶ್ಚಯೇ||

ಭೀಷ್ಮನು ಹೇಳಿದನು: “ಏನನ್ನು ಮಾಡಬೇಕು ಮತ್ತು ಮಾಡಬಾರದು ಎನ್ನುವುದನ್ನು ನಿಶ್ಚಯಿಸುವಾಗ ದೀರ್ಘಸೂತ್ರಿಯಾಗಿರುವವನ ಕುರಿತಾದ ಒಂದು ಸುಂದರ ಉಪಾಖ್ಯಾನವನ್ನು ಹೇಳುತ್ತೇನೆ. ನೀನು ಸ್ವಸ್ಥಚಿತ್ತನಾಗಿ ಕೇಳು.

12135002a ನಾತಿಗಾಧೇ ಜಲಸ್ಥಾಯೇ ಸುಹೃದಃ ಶಕುಲಾಸ್ತ್ರಯಃ|

12135002c ಪ್ರಭೂತಮತ್ಸ್ಯೇ ಕೌಂತೇಯ ಬಭೂವುಃ ಸಹಚಾರಿಣಃ||

ಕೌಂತೇಯ! ಅತಿಯಾಗಿ ಆಳವಾಗಿರದ ಒಂದು ಕೆರೆಯಲ್ಲಿ ಅನೇಕ ಮೀನುಗಳು ವಾಸಿಸುತ್ತಿದ್ದವು. ಅವುಗಳಲ್ಲಿ ಮೂರು ಕಾರ್ಯಕುಶಲ ಮೀನುಗಳೂ ಸೇರಿಕೊಂಡಿದ್ದವು. ಅವು ಸದಾ ಒಟ್ಟಾಗಿ ಸಂಚರಿಸುತ್ತಿದ್ದವು ಮತ್ತು ಪರಸ್ಪರ ಮೈತಿಭಾವವನ್ನು ಹೊಂದಿದ್ದವು.

12135003a ಅತ್ರೈಕಃ ಪ್ರಾಪ್ತಕಾಲಜ್ಞೋ ದೀರ್ಘದರ್ಶೀ ತಥಾಪರಃ|

12135003c ದೀರ್ಘಸೂತ್ರಶ್ಚ ತತ್ರೈಕಸ್ತ್ರಯಾಣಾಂ ಜಲಚಾರಿಣಾಮ್||

ಆ ಮೂರು ಮೀನುಗಳಲ್ಲಿ ಒಂದು ಪ್ರಾಪ್ತಕಾಲಜ್ಞನಾಗಿತ್ತು[2]. ಇನ್ನೊಂದು ದೀರ್ಘದರ್ಶಿಯಾಗಿತ್ತು[3], ಮತ್ತು ಇನ್ನೊಂದು ದೀರ್ಘಸೂತ್ರನಾಗಿತ್ತು[4].

12135004a ಕದಾ ಚಿತ್ತಜ್ಜಲಸ್ಥಾಯಂ ಮತ್ಸ್ಯಬಂಧಾಃ ಸಮಂತತಃ|

12135004c ನಿಃಸ್ರಾವಯಾಮಾಸುರಥೋ ನಿಮ್ನೇಷು ವಿವಿಧೈರ್ಮುಖೈಃ||

ಒಮ್ಮೆ ಬೆಸ್ತರು ಆ ಜಲಾಶಯಕ್ಕೆ ನಾಲ್ಕೂ ಕಡೆಗಳಿಂದ ಕೋಡಿಗಳನ್ನು ತೋಡಿ ಅನೇಕ ಕಡೆಗಳಿಂದ ಅದರ ನೀರನ್ನು ಸುತ್ತಲಿದ್ದ ಕೆಳಭೂಮಿಗಳಿಗೆ ಹಾಯಿಸತೊಡಗಿದರು.

12135005a ಪ್ರಕ್ಷೀಯಮಾಣಂ ತಂ ಬುದ್ಧ್ವಾ ಜಲಸ್ಥಾಯಂ ಭಯಾಗಮೇ|

12135005c ಅಬ್ರವೀದ್ದೀರ್ಘದರ್ಶೀ ತು ತಾವುಭೌ ಸುಹೃದೌ ತದಾ||

ಜಲಾಶಯದ ನೀರು ಕಡಿಮೆಯಾಗುತ್ತಿರುವುದನ್ನು ನೋಡಿ ಭಯವುಂಟಾಗಲಿದೆಯೆಂದು ತಿಳಿದು ದೀರ್ಘದರ್ಶಿಯು ತನ್ನ ಆ ಇಬ್ಬರು ಮಿತ್ರರಿಗೆ ಹೇಳಿತು:

12135006a ಇಯಮಾಪತ್ಸಮುತ್ಪನ್ನಾ ಸರ್ವೇಷಾಂ ಸಲಿಲೌಕಸಾಮ್|

12135006c ಶೀಘ್ರಮನ್ಯತ್ರ ಗಚ್ಚಾಮಃ ಪಂಥಾ ಯಾವನ್ನ ದುಷ್ಯತಿ||

“ಇಲ್ಲಿರುವ ಸರ್ವ ಜಲಚರ ಪ್ರಾಣಿಗಳಿಗೂ ಆಪತ್ತುಬಂದೊದಗಿದೆ ಎಂದು ಅನಿಸುತ್ತಿದೆ. ನಮಗೆ ಹೊರಗೋಗುವ ಮಾರ್ಗವು ದೂಷಿತವಾಗುವರೊಳಗೆ ಶೀಘ್ರದಲ್ಲಿಯೇ ಬೇರೆ ಎಲ್ಲಿಯಾದರೂ ಹೋಗೋಣ.

12135007a ಅನಾಗತಮನರ್ಥಂ ಹಿ ಸುನಯೈರ್ಯಃ ಪ್ರಬಾಧತೇ|

12135007c ನ ಸ ಸಂಶಯಮಾಪ್ನೋತಿ ರೋಚತಾಂ ವಾಂ ವ್ರಜಾಮಹೇ||

ಮುಂದಾಗಬಹುದಾದ ಸಂಕಟವನ್ನು ಅದು ಆಗುವ ಮೊದಲೇ ಉತ್ತಮ ನೀತಿಯನ್ನುಪಯೋಗಿಸಿ ಕಳೆದುಕೊಳ್ಳುವನಿಗೆ ಪ್ರಾಣಹೋಗುವ ಸಂಶಯದಲ್ಲಿ ಬೀಳುವುದಿಲ್ಲ. ನಿಮಗೆ ನನ್ನ ಈ ಮಾತು ಸರಿಯೆಂದು ಅನಿಸಿದರೆ ಬನ್ನಿ. ಇನ್ನೊಂದು ಜಲಾಶಯಕ್ಕೆ ಹೋಗೋಣ.”

12135008a ದೀರ್ಘಸೂತ್ರಸ್ತು ಯಸ್ತತ್ರ ಸೋಽಬ್ರವೀತ್ಸಮ್ಯಗುಚ್ಯತೇ|

12135008c ನ ತು ಕಾರ್ಯಾ ತ್ವರಾ ಯಾವದಿತಿ ಮೇ ನಿಶ್ಚಿತಾ ಮತಿಃ||

ಆಗ ಅಲ್ಲಿದ್ದ ದೀರ್ಘಸೂತ್ರಿಯು ಹೇಳಿತು: “ನೀನು ಸರಿಯಾದುದನ್ನೇ ಹೇಳಿದ್ದೀಯೆ. ಆದರೆ ನಮಗೆ ಈಗ ಅವಸರ ಮಾಡಬಾರದು ಎಂದು ನನ್ನ ಬುದ್ಧಿಯು ನಿಶ್ಚಿತವಾಗಿ ಹೇಳುತ್ತಿದೆ.”

12135009a ಅಥ ಸಂಪ್ರತಿಪತ್ತಿಜ್ಞಃ ಪ್ರಾಬ್ರವೀದ್ದೀರ್ಘದರ್ಶಿನಮ್|

12135009c ಪ್ರಾಪ್ತೇ ಕಾಲೇ ನ ಮೇ ಕಿಂ ಚಿನ್ನ್ಯಾಯತಃ ಪರಿಹಾಸ್ಯತೇ||

ಆಗ ಪ್ರತ್ಯುತ್ಪನ್ನಮತಿಯು ದೀರ್ಘದರ್ಶಿಯಲ್ಲಿ ಹೇಳಿತು: “ಕಾಲವು ಪ್ರಾಪ್ತವಾದಾಗ ನನ್ನ ಬುದ್ಧಿಯು ಯಾವುದಾದರೂ ಉಪಾಯವನ್ನು ಹುಡುಕುವುದರಲ್ಲಿ ಎಂದೂ ಅಸಫಲವಾಗುವುದಿಲ್ಲ.”

12135010a ಏವಮುಕ್ತೋ ನಿರಾಕ್ರಾಮದ್ದೀರ್ಘದರ್ಶೀ ಮಹಾಮತಿಃ|

12135010c ಜಗಾಮ ಸ್ರೋತಸೈಕೇನ ಗಂಭೀರಸಲಿಲಾಶಯಮ್||

ಇದನ್ನು ಕೇಳಿ ಮಹಾಮತಿ ದೀರ್ಘದರ್ಶಿಯು ಅಲ್ಲಿಂದ ತಪ್ಪಿಸಿಕೊಂಡು ಒಂದು ಕೋಡಿಯ ಮೂಲಕ ಅನ್ಯ ಆಳವಾಗಿದ್ದ ಜಲಾಶಯಕ್ಕೆ ಹೊರಟು ಹೋಯಿತು.

12135011a ತತಃ ಪ್ರಸ್ರುತತೋಯಂ ತಂ ಸಮೀಕ್ಷ್ಯ ಸಲಿಲಾಶಯಮ್|

12135011c ಬಬಂಧುರ್ವಿವಿಧೈರ್ಯೋಗೈರ್ಮತ್ಸ್ಯಾನ್ಮತ್ಸ್ಯೋಪಜೀವಿನಃ||

ಮೀನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದ ಆ ಬೆಸ್ತರು ಜಲಾಶಯದ ನೀರು ಕಡಿಮೆಯಾಗುತ್ತಿದ್ದನ್ನು ನೋಡಿ ವಿವಿಧ ಉಪಾಯಗಳಿಂದ ಅಲ್ಲಿದ್ದ ಮೀನುಗಳನ್ನು ಬಂಧಿಸಿದರು.

12135012a ವಿಲೋಡ್ಯಮಾನೇ ತಸ್ಮಿಂಸ್ತು ಸ್ರುತತೋಯೇ ಜಲಾಶಯೇ|

12135012c ಅಗಚ್ಚದ್ ಗ್ರಹಣಂ ತತ್ರ ದೀರ್ಘಸೂತ್ರಃ ಸಹಾಪರೈಃ||

ಹರಿದುಹೋಗಿ ನೀರು ಕಡಿಮೆಯಾದ ಆ ಜಲಾಶಯವನ್ನು ಸೋಸುತ್ತಿದ್ದಾಗ ಇತರರೊಂದಿಗೆ ದೀರ್ಘಸೂತ್ರೀ ಮೀನೂ ಕೂಡ ಬಲೆಯಲ್ಲಿ ಸಿಕ್ಕಿಕೊಂಡಿತು.

12135013a ಉದ್ದಾನಂ ಕ್ರಿಯಮಾಣಂ ಚ ಮತ್ಸ್ಯಾನಾಂ ವೀಕ್ಷ್ಯ ರಜ್ಜುಭಿಃ|

12135013c ಪ್ರವಿಶ್ಯಾಂತರಮನ್ಯೇಷಾಮಗ್ರಸತ್ ಪ್ರತಿಪತ್ತಿಮಾನ್||

ಮೀನುಗಳಿಂದ ತುಂಬಿದ್ದ ಆ ಬಲೆಯನ್ನು ಹಗ್ಗಗಳನ್ನೆಳೆದು ಮೇಲಕ್ಕೆತ್ತುವಾಗ ಪ್ರತ್ಯುತ್ಪನ್ನಮತಿ ಮೀನೂ ಕೂಡ ಇತರ ಮೀನುಗಳೊಡನೆ ಆ ಬಲೆಯನ್ನು ಪ್ರವೇಶಿಸಿತ್ತು.

12135014a ಗ್ರಸ್ತಮೇವ ತದುದ್ದಾನಂ ಗೃಹೀತ್ವಾಸ್ತ ತಥೈವ ಸಃ|

12135014c ಸರ್ವಾನೇವ ತು ತಾಂಸ್ತತ್ರ ತೇ ವಿದುರ್ಗ್ರಥಿತಾ ಇತಿ||

ಬಾಯಿಯಿಂದ ಕಚ್ಚಿಕೊಳ್ಳಲು ಯೋಗ್ಯವಾಗಿದ್ದ ಆ ಬಲೆಯ ತಂತುವನ್ನು ಕಚ್ಚಿಹಿಡಿದು ಅದೂ ಕೂಡ ಇತರ ಮೀನುಗಳಂತೆ ಬಲೆಯಲ್ಲಿ ಬಂಧಿತಗೊಂಡಂತೆ ತೋರುತ್ತಿತ್ತು.

12135015a ತತಃ ಪ್ರಕ್ಷಾಲ್ಯಮಾನೇಷು ಮತ್ಸ್ಯೇಷು ವಿಮಲೇ ಜಲೇ|

12135015c ತ್ಯಕ್ತ್ವಾ ರಜ್ಜುಂ ವಿಮುಕ್ತೋಽಭೂಚ್ಚೀಘ್ರಂ ಸಂಪ್ರತಿಪತ್ತಿಮಾನ್||

ಅನಂತರ ಆ ಮೀನುಗಳನ್ನು ಶುದ್ಧ ನೀರಿನಲ್ಲಿ ತೊಳೆಯುವಾಗ ಪ್ರತ್ಯುತ್ಪನ್ನಮತಿ ಮೀನು ಬಲೆಯನ್ನು ಬಿಟ್ಟು ಶೀಘ್ರದಲ್ಲಿಯೇ ಶುದ್ಧ ನೀರಿನ ಕೊಳದಲ್ಲಿ ಸೇರಿಕೊಂಡುಬಿಟ್ಟಿತು.

12135016a ದೀರ್ಘಸೂತ್ರಸ್ತು ಮಂದಾತ್ಮಾ ಹೀನಬುದ್ಧಿರಚೇತನಃ|

12135016c ಮರಣಂ ಪ್ರಾಪ್ತವಾನ್ಮೂಢೋ ಯಥೈವೋಪಹತೇಂದ್ರಿಯಃ||

ಹೀನಬುದ್ಧಿ ಮಂದಾತ್ಮಾ ಅಚೇತನ ಮೂಢ ದೀರ್ಘಸೂತ್ರನಾದರೋ ಇಂದ್ರಿಯಗಳು ನಷ್ಟಹೋದಾಗ ನಷ್ಟವಾಗುವಂತೆ ಮರಣವನ್ನಪ್ಪಿತು.

12135017a ಏವಂ ಪ್ರಾಪ್ತತಮಂ ಕಾಲಂ ಯೋ ಮೋಹಾನ್ನಾವಬುಧ್ಯತೇ|

12135017c ಸ ವಿನಶ್ಯತಿ ವೈ ಕ್ಷಿಪ್ರಂ ದೀರ್ಘಸೂತ್ರೋ ಯಥಾ ಝಷಃ||

ಹೀಗೆ ಮೋಹಿತನಾಗಿ ತನಗೆ ಬಂದೊದಗುವ ಆಪತ್ತಿನ ಕಾಲವನ್ನು ತಿಳಿಯದೇ ಇರುವವನು ಆ ದೀರ್ಘಸೂತ್ರೀ ಮೀನಿನಂತೆ ಕ್ಷಿಪ್ರವಾಗಿ ನಾಶಹೊಂದುತ್ತಾನೆ.

12135018a ಆದೌ ನ ಕುರುತೇ ಶ್ರೇಯಃ ಕುಶಲೋಽಸ್ಮೀತಿ ಯಃ ಪುಮಾನ್|

12135018c ಸ ಸಂಶಯಮವಾಪ್ನೋತಿ ಯಥಾ ಸಂಪ್ರತಿಪತ್ತಿಮಾನ್||

ತಾನು ಅತ್ಯಂತ ಕುಶಲನು ಮತ್ತು ಮೊದಲಿನಿಂದಲೇ ತನ್ನನ್ನು ಅಪಾಯದಿಂದ ಪಾರುಗೊಳಿಸುವ ಉಪಾಯವನ್ನು ಮಾಡಿಕೊಳ್ಳುವುದಿಲ್ಲ ಎಂದಿರುವ ಮನುಷ್ಯನು ಪ್ರತ್ಯುತ್ಪನ್ನಮತಿ ಮೀನಿನಂತೆ ಪ್ರಾಣಸಂಶಯ ಪರಿಸ್ಥಿತಿಯಲ್ಲಿ ಬೀಳುತ್ತಾನೆ.

12135019a ಅನಾಗತವಿಧಾನಂ ತು ಯೋ ನರಃ ಕುರುತೇ ಕ್ಷಮಮ್|

12135019c ಶ್ರೇಯಃ ಪ್ರಾಪ್ನೋತಿ ಸೋಽತ್ಯರ್ಥಂ ದೀರ್ಘದರ್ಶೀ ಯಥಾ ಹ್ಯಸೌ[5]||

ಸಂಕಟವು ಬಂದೊದಗುವುದಕ್ಕೆ ಮೊದಲೇ ತನ್ನ ಸುರಕ್ಷಣೆಯ ಉಪಾಯವನ್ನು ಮಾಡಿಕೊಳ್ಳುವವನು ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾನೆ.

12135020a ಕಲಾಃ ಕಾಷ್ಠಾ ಮುಹೂರ್ತಾಶ್ಚ ದಿನಾ ನಾಡ್ಯಃ ಕ್ಷಣಾ ಲವಾಃ|

12135020c ಪಕ್ಷಾ ಮಾಸಾಶ್ಚ ಋತವಸ್ತುಲ್ಯಾಃ ಸಂವತ್ಸರಾಣಿ ಚ||

12135021a ಪೃಥಿವೀ ದೇಶ ಇತ್ಯುಕ್ತಃ ಕಾಲಃ ಸ ಚ ನ ದೃಶ್ಯತೇ|

12135021c ಅಭಿಪ್ರೇತಾರ್ಥಸಿದ್ಧ್ಯರ್ಥಂ ನ್ಯಾಯತೋ ಯಚ್ಚ ತತ್ತಥಾ[6]||

ಕಲಾ, ಕಾಷ್ಠಾ, ಮುಹೂರ್ತ, ದಿನ, ರಾತ್ರಿ, ಕ್ಷಣ, ಲವ, ಪಕ್ಷ, ಮಾಸ, ಋತು, ಸಂವತ್ಸರಗಳು ಇವುಗಳನ್ನು ಕಾಲವೆನ್ನುತ್ತಾರೆ. ಭೂಮಿಯನ್ನು ದೇಶ ಎನ್ನುತ್ತಾರೆ. ಆದರೆ ಕಾಲವು ಕಾಣಿಸುವುದಿಲ್ಲ. ಅಭೀಷ್ಟ ಮನೋರಥದ ಸಿದ್ಧಿಗಾಗಿ ದೇಶ ಮತ್ತು ಕಾಲಗಳ ಕುರಿತು ವಿಚಾರಿಸಿ ಅದರಂತೆ ನಡೆದುಕೊಳ್ಳುವುದು ನ್ಯಾಯತರವಾದುದು.

12135022a ಏತೌ ಧರ್ಮಾರ್ಥಶಾಸ್ತ್ರೇಷು ಮೋಕ್ಷಶಾಸ್ತ್ರೇಷು ಚರ್ಷಿಭಿಃ|

12135022c ಪ್ರಧಾನಾವಿತಿ ನಿರ್ದಿಷ್ಟೌ ಕಾಮೇಶಾಭಿಮತೌ ನೃಣಾಮ್||

ಋಷಿಗಳು ಧರ್ಮಶಾಸ್ತ್ರ, ಅರ್ಥಶಾಸ್ತ್ರ ಮತ್ತು ಮೋಕ್ಷಶಾಸ್ತ್ರಗಳಲ್ಲಿ ಈ ದೇಶ-ಕಾಲಗಳನ್ನೇ ಕಾರ್ಯಸಿದ್ಧಿಯ ಪ್ರಧಾನ ಉಪಾಯಗಳೆಂದು ಹೇಳಿದ್ದಾರೆ. ಮನುಷ್ಯರ ಕಾಮನಸಿದ್ಧಿಗೂ ದೇಶ-ಕಾಲಗಳೇ ಪ್ರಧಾನವೆಂಬ ಅಭಿಪ್ರಾಯವಿದೆ.

12135023a ಪರೀಕ್ಷ್ಯಕಾರೀ ಯುಕ್ತಸ್ತು ಸಮ್ಯಕ್ಸಮುಪಪಾದಯೇತ್|

12135023c ದೇಶಕಾಲಾವಭಿಪ್ರೇತೌ ತಾಭ್ಯಾಂ ಫಲಮವಾಪ್ನುಯಾತ್||

ಚೆನ್ನಾಗಿ ಯೋಚಿಸಿ ಪರೀಕ್ಷಿಸಿ ಕೆಲಸಮಾಡುವವನು ಮತ್ತು ಸತತ ಸಾವಧಾನದಿಂದಿರುವವನು ಅಭೀಷ್ಟ ದೇಶ-ಕಾಲಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನೆ ಮತ್ತು ಅವುಗಳ ಸಹಯೋಗದಿಂದ ಇಚ್ಛಾನುಸಾರ ಫಲವನ್ನು ಪಡೆದುಕೊಳ್ಳುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಶಾಕುಲೋಪಾಖ್ಯಾನೇ ಪಂಚತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ  ಶಾಕುಲೋಪಾಖ್ಯಾನ ಎನ್ನುವ ನೂರಾಮೂವತ್ತೈದನೇ ಅಧ್ಯಾಯವು.

[1] ಗೀತಾ ಪ್ರೆಸ್ ಸಂಪುಟದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಅನಾಗತವಿಧಾತಾ ಚ ಪರ್ಯುತ್ಪನ್ನಮತಿಶ್ಚ ಯಃ| ದ್ವಾವೇವ ಸುಖಮೇಧೇತೇ ದೀರ್ಘಸೂತ್ರೀ ವಿನಶ್ಯತಿ|| ಅರ್ಥಾತ: ಸಂಕಟವು ಬರುವುದಕ್ಕೆ ಮೊದಲೇ ತನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ಮಾಡಿಟ್ಟುಕೊಂದಿರುವವನನ್ನು ಅನಾಗತವಿಧಾತಾ ಎಂದು ಕರೆಯುತ್ತಾರೆ. ಸರಿಯಾದ ಸಮಯದಲ್ಲಿಯೇ ಆತ್ಮರಕ್ಷಣೆಯ ಉಪಾಯವು ಹೊಳೆಯುವವನಿಗೆ ಪ್ರತ್ಯುತ್ಪನ್ನಮತಿ ಎಂದು ಕರೆಯುತ್ತಾರೆ. ಈ ಎರಡು ಪ್ರಕಾರದ ಜನರು ಮಾತ್ರ ತಮ್ಮ ಸುಖದ ಉನ್ನತಿಯನ್ನು ಮಾಡಿಕೊಳ್ಳುತ್ತಾರೆ. ಆದರೆ ಕಾರ್ಯದಲ್ಲಿ ಅನಾವಶ್ಯಕ ವಿಳಂಬವನ್ನು ಮಾಡುವ ದೀರ್ಘಸೂತ್ರಿಯು ನಾಶಹೊಂದುತ್ತಾನೆ.

[2] ಪ್ರತ್ಯುತ್ಪನ್ನಮತಿ ಅಥವಾ ಸರಿಯಾದ ಸಮಯದಲ್ಲಿ ಆತ್ಮರಕ್ಷಣೆಯ ಉಪಾಯವು ಹೊಳೆಯುವವನು.

[3] ಸಂಕಟವು ಬರುವುದಕ್ಕೆ ಮೊದಲೇ ತನ್ನನ್ನು ಉಳಿಸಿಕೊಳ್ಳುವ ಉಪಾಯವನ್ನು ಮಾಡಿಟ್ಟುಕೊಳ್ಳುವವನು.

[4] ಕಾರ್ಯದಲ್ಲಿ ಅನಾವಶ್ಯಕ ವಿಳಂಬವನ್ನು ಮಾಡುವವನು.

[5] ಅನಾಗತವಿಧಾತಾ ಚ ಪ್ರತ್ಯುತ್ಪನ್ನಮತಿಷ್ಚ ಯಃ| ದ್ವಾವೇವ ಸುಖಮೇಧೇತೇ ದೀರ್ಘಸೂತ್ರೋ ವಿನಶ್ಯತಿ|| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಕಾಷ್ಠಾಃ ಕಲಾ ಮುಹೂರ್ತಾಶ್ಚ ದಿವಾ ರಾತ್ರಿಸ್ತಥಾ ಲವಾಃ| ಮಾಸಾಃ ಪಕ್ಷಾಃ ಷಡೃತವಃ ಕಲ್ಪಃ ಸಂವತ್ಸರಾಸ್ತಥಾ|| ಪೃಥಿವೀ ದೇಶಇ ತ್ಯುಕ್ತಃ ಕಾನಃ ಸ ಚ ನ ಕೃಶ್ಯತೇ| ಅಭಿಪ್ರೇತಾರ್ಥಸಿದ್ಧ್ಯರ್ಥಂ ಧ್ಯಾಯತೇ ಯಚ್ಚ ತತ್ತಥಾ|| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.