Shalya Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯಪರ್ವ: ಶಲ್ಯವಧ ಪರ್ವ

09001001 ಜನಮೇಜಯ ಉವಾಚ

09001001a ಏವಂ ನಿಪಾತಿತೇ ಕರ್ಣೇ ಸಮರೇ ಸವ್ಯಸಾಚಿನಾ|

09001001c ಅಲ್ಪಾವಶಿಷ್ಟಾಃ ಕುರವಃ ಕಿಮಕುರ್ವತ ವೈ ದ್ವಿಜ||

ಜನಮೇಜಯನು ಹೇಳಿದನು: “ದ್ವಿಜ! ಹೀಗೆ ಸವ್ಯಸಾಚಿಯು ಸಮರದಲ್ಲಿ ಕರ್ಣನನ್ನು ಕೆಳಗುರುಳಿಸಲು ಅಳಿದುಳಿದ ಅಲ್ಪಸಂಖ್ಯಾತ ಕುರುಗಳು ಏನು ಮಾಡಿದರು?

09001002a ಉದೀರ್ಯಮಾಣಂ ಚ ಬಲಂ ದೃಷ್ಟ್ವಾ ರಾಜಾ ಸುಯೋಧನಃ|

09001002c ಪಾಂಡವೈಃ ಪ್ರಾಪ್ತಕಾಲಂ ಚ ಕಿಂ ಪ್ರಾಪದ್ಯತ ಕೌರವಃ||

ಪಾಂಡವರ ಬಲವು ಹೆಚ್ಚಾಗುತ್ತಿರುವುದನ್ನು ನೋಡಿ ರಾಜ ಕೌರವ ಸುಯೋಧನನು ಸಮಯೋಚಿತ ಕಾರ್ಯಕೈಗೊಂಡನೇ?

09001003a ಏತದಿಚ್ಚಾಮ್ಯಹಂ ಶ್ರೋತುಂ ತದಾಚಕ್ಷ್ವ ದ್ವಿಜೋತ್ತಮ|

09001003c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್||

ದ್ವಿಜೋತ್ತಮ! ಇದನ್ನು ಕೇಳಲು ಬಯಸುತ್ತೇನೆ. ಅದನ್ನು ಹೇಳು. ಪೂರ್ವಜರ ಈ ಮಹಾನ್ ಚರಿತೆಯಿಂದ ಇನ್ನೂ ತೃಪ್ತನಾಗಿಲ್ಲ!”

09001004 ವೈಶಂಪಾಯನ ಉವಾಚ

09001004a ತತಃ ಕರ್ಣೇ ಹತೇ ರಾಜನ್ಧಾರ್ತರಾಷ್ಟ್ರಃ ಸುಯೋಧನಃ|

09001004c ಭೃಶಂ ಶೋಕಾರ್ಣವೇ ಮಗ್ನೋ ನಿರಾಶಃ ಸರ್ವತೋಽಭವತ್||

ವೈಶಂಪಾಯನನು ಹೇಳಿದನು: “ರಾಜನ್! ಕರ್ಣನು ಹತನಾಗಲು ಧಾರ್ತರಾಷ್ಟ್ರ ಸುಯೋಧನನು ಅತ್ಯಂತ ಶೋಕಸಾಗರದಲ್ಲಿ ಮುಳುಗಿಹೋದನು. ಎಲ್ಲೆಡೆಯೂ ನಿರಾಶೆಯೇ ಕಂಡುಬಂದಿತು.

09001005a ಹಾ ಕರ್ಣ ಹಾ ಕರ್ಣ ಇತಿ ಶೋಚಮಾನಃ ಪುನಃ ಪುನಃ|

09001005c ಕೃಚ್ಚ್ರಾತ್ಸ್ವಶಿಬಿರಂ ಪ್ರಾಯಾದ್ಧತಶೇಷೈರ್ನೃಪೈಃ ಸಹ||

“ಹಾ ಕರ್ಣ! ಹಾ ಕರ್ಣ!” ಎಂದು ಪುನಃ ಪುನಃ ಶೋಕಿಸುತ್ತಾ ಬಹಳ ಕಷ್ಟದಿಂದ ಅವನು ಅಳಿದುಳಿದ ನೃಪರೊಂದಿಗೆ ಸ್ವಶಿಬಿರಕ್ಕೆ ತೆರಳಿದನು.

09001006a ಸ ಸಮಾಶ್ವಾಸ್ಯಮಾನೋಽಪಿ ಹೇತುಭಿಃ ಶಾಸ್ತ್ರನಿಶ್ಚಿತೈಃ|

09001006c ರಾಜಭಿರ್ನಾಲಭಚ್ಚರ್ಮ ಸೂತಪುತ್ರವಧಂ ಸ್ಮರನ್||

ಶಾಸ್ತ್ರನಿಶ್ಚಿತ ಕಾರಣಗಳಿಂದ ರಾಜರು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಸೂತಪುತ್ರನ ವಧೆಯನ್ನು ಸ್ಮರಿಸಿಕೊಳ್ಳುತ್ತಾ ರಾಜನಿಗೆ ಶಾಂತಿಯೆನ್ನುವುದೇ ಇಲ್ಲವಾಯಿತು.

09001007a ಸ ದೈವಂ ಬಲವನ್ಮತ್ವಾ ಭವಿತವ್ಯಂ ಚ ಪಾರ್ಥಿವಃ|

09001007c ಸಂಗ್ರಾಮೇ ನಿಶ್ಚಯಂ ಕೃತ್ವಾ ಪುನರ್ಯುದ್ಧಾಯ ನಿರ್ಯಯೌ||

ಆಗಬೇಕಾದುದನ್ನು ಆಗಿಸಿಕೊಳ್ಳುವುದರಲ್ಲಿ ದೈವವೇ ಬಲಶಾಲಿಯಾದುದೆಂದು ಮನ್ನಿಸಿ ರಾಜನು ಸಂಗ್ರಾಮವನ್ನು ನಿಶ್ಚಯಿಸಿ ಪುನಃ ಯುದ್ಧಕ್ಕೆ ಹೊರಟನು.

09001008a ಶಲ್ಯಂ ಸೇನಾಪತಿಂ ಕೃತ್ವಾ ವಿಧಿವದ್ರಾಜಪುಂಗವಃ|

09001008c ರಣಾಯ ನಿರ್ಯಯೌ ರಾಜಾ ಹತಶೇಷೈರ್ನೃಪೈಃ ಸಹ||

ವಿಧಿವತ್ತಾಗಿ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ ರಾಜಾ ರಾಜಪುಂಗವನು ಅಳಿದುಳಿದ ನೃಪರೊಂದಿಗೆ ರಣಕ್ಕೆ ತೆರಳಿದನು.

09001009a ತತಃ ಸುತುಮುಲಂ ಯುದ್ಧಂ ಕುರುಪಾಂಡವಸೇನಯೋಃ|

09001009c ಬಭೂವ ಭರತಶ್ರೇಷ್ಠ ದೇವಾಸುರರಣೋಪಮಂ||

ಭರತಶ್ರೇಷ್ಠ! ಆಗ ಕುರು-ಪಾಂಡವ ಸೇನೆಗಳ ನಡುವೆ ದೇವಾಸುರರ ರಣದಂತೆ ಅತ್ಯಂತ ತುಮುಲ ಯುದ್ಧವು ನಡೆಯಿತು.

09001010a ತತಃ ಶಲ್ಯೋ ಮಹಾರಾಜ ಕೃತ್ವಾ ಕದನಮಾಹವೇ|

09001010c ಪಾಂಡುಸೈನ್ಯಸ್ಯ[1] ಮಧ್ಯಾಹ್ನೇ ಧರ್ಮರಾಜೇನ ಪಾತಿತಃ||

ಮಹಾರಾಜ! ಆ ದಿನ ಶಲ್ಯನು ಪಾಂಡುಸೇನೆಯೊಂದಿಗೆ ಕದನವಾಡಿ ಮಧ್ಯಾಹ್ನದಲ್ಲಿ ಧರ್ಮರಾಜನಿಂದ ಹತನಾದನು.

09001011a ತತೋ ದುರ್ಯೋಧನೋ ರಾಜಾ ಹತಬಂಧೂ ರಣಾಜಿರಾತ್|

09001011c ಅಪಸೃತ್ಯ ಹ್ರದಂ ಘೋರಂ ವಿವೇಶ ರಿಪುಜಾದ್ಭಯಾತ್||

ಆಗ ಬಂಧುಗಳನ್ನು ಕಳೆದುಕೊಂಡ ರಾಜಾ ದುರ್ಯೋಧನನು ರಿಪುಗಳ ಭಯದಿಂದ ರಣದಿಂದ ತಪ್ಪಿಸಿಕೊಂಡು ಘೋರ ಸರೋವರವನ್ನು ಪ್ರವೇಶಿಸಿದನು.

09001012a ಅಥಾಪರಾಹ್ಣೇ ತಸ್ಯಾಹ್ನಃ ಪರಿವಾರ್ಯ ಮಹಾರಥೈಃ|

09001012c ಹ್ರದಾದಾಹೂಯ ಯೋಗೇನ ಭೀಮಸೇನೇನ ಪಾತಿತಃ||

ಆ ದಿನದ ಅಪರಾಹ್ಣದಲ್ಲಿ ಮಹಾರಥರಿಂದ ಸುತ್ತುವರೆಯಲ್ಪಟ್ಟು ಭೀಮಸೇನನು ಸರೋವರದಿಂದ ದುರ್ಯೋಧನನ್ನು ಕರೆದು ಯೋಗವಶಾತ್ ಕೆಳಗುರುಳಿಸಿದನು.

09001013a ತಸ್ಮಿನ್ ಹತೇ ಮಹೇಷ್ವಾಸೇ ಹತಶಿಷ್ಟಾಸ್ತ್ರಯೋ ರಥಾಃ|

09001013c ಸಂರಭಾನ್ನಿಶಿ ರಾಜೇಂದ್ರ ಜಘ್ನುಃ ಪಾಂಚಾಲಸೈನಿಕಾನ್||

ರಾಜೇಂದ್ರ! ಆ ಮಹೇಷ್ವಾಸನು ಹತನಾಗಲು ಅಳಿದುಳಿದ ಮೂರು ಮಹಾರಥರು ಕೋಪದಿಂದ ರಾತ್ರಿಯಲ್ಲಿ ಪಾಂಚಾಲಸೈನಿಕರನ್ನು ಸಂಹರಿಸಿದರು.

09001014a ತತಃ ಪೂರ್ವಾಹ್ಣಸಮಯೇ ಶಿಬಿರಾದೇತ್ಯ ಸಂಜಯ|

09001014c ಪ್ರವಿವೇಶ ಪುರೀಂ ದೀನೋ ದುಃಖಶೋಕಸಮನ್ವಿತಃ||

ಮರು ದಿನ ಪೂರ್ವಾಹ್ಣ ಸಮಯದಲ್ಲಿ ದುಃಖಶೋಕಸಮನ್ವಿತ ದೀನ ಸಂಜಯನು ಶಿಬಿರದಿಂದ ಹೊರಟು ಹಸ್ತಿನಾಪುರಿಯನ್ನು ಪ್ರವೇಶಿಸಿದನು.

09001015a ಪ್ರವಿಶ್ಯ ಚ ಪುರಂ ತೂರ್ಣಂ ಭುಜಾವುಚ್ಚ್ರಿತ್ಯ ದುಃಖಿತಃ|

09001015c ವೇಪಮಾನಸ್ತತೋ ರಾಜ್ಞಃ ಪ್ರವಿವೇಶ ನಿವೇಶನಂ||

ಪುರವನ್ನು ಪ್ರವೇಶಿಸಿ ಭುಜಗಳನ್ನು ಮೇಲೆತ್ತಿ ದುಃಖಿತನಾಗಿ ನಡುಗುತ್ತಾ ಅವನು ಬೇಗನೇ ರಾಜನಿವೇಶನವನ್ನು ಪ್ರವೇಶಿಸಿದನು.

09001016a ರುರೋದ ಚ ನರವ್ಯಾಘ್ರ ಹಾ ರಾಜನ್ನಿತಿ ದುಃಖಿತಃ|

09001016c ಅಹೋ ಬತ ವಿವಿಗ್ನಾಃ[2] ಸ್ಮ ನಿಧನೇನ ಮಹಾತ್ಮನಃ||

“ನರವ್ಯಾಘ್ರ! ಹಾ ರಾಜ! ಮಹಾತ್ಮನ ನಿಧನದಿಂದ ನಾವೆಲ್ಲರೂ ವಿವಿಗ್ನರಾಗಿದ್ದೇವೆ!” ಎಂದು ದುಃಖಿತನಾಗಿ ರೋದಿಸಿದನು.

09001017a ಅಹೋ ಸುಬಲವಾನ್ಕಾಲೋ ಗತಿಶ್ಚ ಪರಮಾ ತಥಾ|

09001017c ಶಕ್ರತುಲ್ಯಬಲಾಃ ಸರ್ವೇ ಯತ್ರಾವಧ್ಯಂತ ಪಾರ್ಥಿವಾಃ||

“ಅಯ್ಯೋ! ಕಾಲವೇ ಅತ್ಯಂತ ಬಲಶಾಲಿ! ಬಲದಲ್ಲಿ ಶಕ್ರನಿಗೆ ಸಮನಾಗಿದ್ದ ಪಾರ್ಥಿವರೆಲ್ಲರೂ ವಧಿಸಲ್ಪಟ್ಟು ಪರಮ ಗತಿಯನ್ನು ಹೊಂದಿದರು.”

09001018a ದೃಷ್ಟ್ವೈವ ಚ ಪುರೋ ರಾಜನ್ಜನಃ ಸರ್ವಃ ಸ ಸಂಜಯಂ|

[3]09001018c ಪ್ರರುರೋದ ಭೃಶೋದ್ವಿಗ್ನೋ ಹಾ ರಾಜನ್ನಿತಿ ಸಸ್ವರಂ||

ರಾಜನ್! ಸಂಜಯನನ್ನು ನೋಡಿದ ಪುರಜನರೆಲ್ಲರೂ ಅತ್ಯಂತ ಉದ್ವಿಗ್ನರಾಗಿ ಒಟ್ಟು ಸ್ವರದಲ್ಲಿ “ಹಾ ರಾಜಾ!” ಎಂದು ಗೋಳಿಟ್ಟರು.

09001019a ಆಕುಮಾರಂ ನರವ್ಯಾಘ್ರ ತತ್ಪುರಂ ವೈ ಸಮಂತತಃ|

09001019c ಆರ್ತನಾದಂ ಮಹಚ್ಚಕ್ರೇ ಶ್ರುತ್ವಾ ವಿನಿಹತಂ ನೃಪಂ||

ನರವ್ಯಾಘ್ರ! ನೃಪನು ಹತನಾದುದನ್ನು ಕೇಳಿ ಕುಮಾರಾದ್ಯಂತರಾಗಿ ಸುತ್ತಲಿದ್ದ ಎಲ್ಲರೂ ಆರ್ತನಾದಗೈದರು.

09001020a ಧಾವತಶ್ಚಾಪ್ಯಪಶ್ಯಚ್ಚ ತತ್ರ ತ್ರೀನ್ಪುರುಷರ್ಷಭಾನ್|

09001020c ನಷ್ಟಚಿತ್ತಾನಿವೋನ್ಮತ್ತಾನ್ ಶೋಕೇನ ಭೃಶಪೀಡಿತಾನ್||

ಅಲ್ಲಿ ಅವರು ಬುದ್ಧಿಕಳೆದುಕೊಂಡು ಅತ್ಯಂತ ಶೋಕದಿಂದ ಪೀಡಿತರಾಗಿ ಹುಚ್ಚರಂತೆ ಓಡಿ ಹೋಗುತ್ತಿದ್ದ ಮೂವರು ಪುರುಷರ್ಷಭರನ್ನು ಕೂಡ ನೋಡಿದರು.

09001021a ತಥಾ ಸ ವಿಹ್ವಲಃ ಸೂತಃ ಪ್ರವಿಶ್ಯ ನೃಪತಿಕ್ಷಯಂ|

09001021c ದದರ್ಶ ನೃಪತಿಶ್ರೇಷ್ಠಂ ಪ್ರಜ್ಞಾಚಕ್ಷುಷಮೀಶ್ವರಂ||

ಹಾಗೆ ವಿಹ್ವಲನಾಗಿದ್ದ ಸೂತನು ನೃಪತಿಕಕ್ಷವನ್ನು ಪ್ರವೇಶಿಸಿ ಅಲ್ಲಿ ನೃಪತಿಶ್ರೇಷ್ಠ ಪ್ರಜ್ಞಾಚಕ್ಷು ತನ್ನ ಒಡೆಯನನ್ನು ಕಂಡನು.

09001022a ದೃಷ್ಟ್ವಾ ಚಾಸೀನಮನಘಂ ಸಮಂತಾತ್ಪರಿವಾರಿತಂ|

09001022c ಸ್ನುಷಾಭಿರ್ಭರತಶ್ರೇಷ್ಠ ಗಾಂಧಾರ್ಯಾ ವಿದುರೇಣ ಚ||

09001023a ತಥಾನ್ಯೈಶ್ಚ ಸುಹೃದ್ಭಿಶ್ಚ ಜ್ಞಾತಿಭಿಶ್ಚ ಹಿತೈಷಿಭಿಃ|

09001023c ತಮೇವ ಚಾರ್ಥಂ ಧ್ಯಾಯಂತಂ ಕರ್ಣಸ್ಯ ನಿಧನಂ ಪ್ರತಿ||

09001024a ರುದನ್ನೇವಾಬ್ರವೀದ್ವಾಕ್ಯಂ ರಾಜಾನಂ ಜನಮೇಜಯ|

09001024c ನಾತಿಹೃಷ್ಟಮನಾಃ ಸೂತೋ ಬಾಷ್ಪಸಂದಿಗ್ಧಯಾ ಗಿರಾ||

ಜನಮೇಜಯ! ಅಲ್ಲಿ ಕರ್ಣನ ನಿಧನದ ಕುರಿತೇ ಯೋಚಿಸುತ್ತಿದ್ದ, ಗಾಂಧಾರೀ, ಸೊಸೆಯಂದಿರು, ವಿದುರ ಮತ್ತು ಅನ್ಯ ಸುಹೃದಯರು, ಕುಟುಂಬದವರು, ಮತ್ತು ಹಿತೈಷಿಗಳಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ಅನಘ ಭರತಶ್ರೇಷ್ಠನನ್ನು ನೋಡಿ ದುಃಖಮನಸ್ಕನಾಗಿ ಅಳುತ್ತಾ ಕಣ್ಣೀರಿನಿಂದ ತಡೆಯಲ್ಪಟ್ಟ ಧ್ವನಿಯಿಂದ ಸೂತನು ರಾಜನಿಗೆ ಈ ಮಾತನ್ನಾಡಿದನು.

09001025a ಸಂಜಯೋಽಹಂ ನರವ್ಯಾಘ್ರ ನಮಸ್ತೇ ಭರತರ್ಷಭ|

09001025c ಮದ್ರಾಧಿಪೋ ಹತಃ ಶಲ್ಯಃ ಶಕುನಿಃ ಸೌಬಲಸ್ತಥಾ||

09001025e ಉಲೂಕಃ ಪುರುಷವ್ಯಾಘ್ರ ಕೈತವ್ಯೋ ದೃಢವಿಕ್ರಮಃ||

“ನರವ್ಯಾಘ್ರ! ಭರತರ್ಷಭ! ಪುರುಷವ್ಯಾಘ್ರ! ನಾನು ಸಂಜಯ! ಮದ್ರಾಧಿಪ ಶಲ್ಯ ಮತ್ತು ಹಾಗೆಯೇ ಸೌಬಲ ಶಕುನಿ, ಕೈತವ್ಯ ದೃಢವಿಕ್ರಮಿ ಉಲೂಕರು ಹತರಾದರು!

09001026a ಸಂಶಪ್ತಕಾ ಹತಾಃ ಸರ್ವೇ ಕಾಂಬೋಜಾಶ್ಚ ಶಕೈಃ ಸಹ|

09001026c ಮ್ಲೇಚ್ಛಾಶ್ಚ ಪಾರ್ವತೀಯಾಶ್ಚ ಯವನಾಶ್ಚ ನಿಪಾತಿತಾಃ||

ಕಾಂಬೋಜರು ಮತ್ತು ಶಕರೊಂದಿಗೆ ಸಂಶಪ್ತಕರು ಎಲ್ಲರೂ ಹತರಾದರು! ಮ್ಲೇಚ್ಛರು, ಪರ್ವತೇಯರು, ಮತ್ತು ಯವನರು ಕೂಡ ಕೆಳಗುರುಳಿದರು!

09001027a ಪ್ರಾಚ್ಯಾ ಹತಾ ಮಹಾರಾಜ ದಾಕ್ಷಿಣಾತ್ಯಾಶ್ಚ ಸರ್ವಶಃ|

09001027c ಉದೀಚ್ಯಾ ನಿಹತಾಃ ಸರ್ವೇ ಪ್ರತೀಚ್ಯಾಶ್ಚ ನರಾಧಿಪ||

09001027e ರಾಜಾನೋ ರಾಜಪುತ್ರಾಶ್ಚ ಸರ್ವತೋ ನಿಹತಾ ನೃಪ||

ಮಹಾರಾಜ! ಪೂರ್ವದೇಶದವರು ದಕ್ಷಿಣದವರು ಎಲ್ಲರೂ ಹತರಾದರು! ನರಾಧಿಪ! ಉತ್ತರದವರು ಮತ್ತು ಪಶ್ಚಿಮದವರು ಎಲ್ಲರೂ ಹತರಾದರು! ನೃಪ! ರಾಜರು ಮತ್ತು ರಾಜಪುತ್ರರೆಲ್ಲರೂ ಹತರಾದರು!

09001028a ದುರ್ಯೋಧನೋ ಹತೋ ರಾಜನ್ಯಥೋಕ್ತಂ ಪಾಂಡವೇನ ಚ|

09001028c ಭಗ್ನಸಕ್ಥೋ ಮಹಾರಾಜ ಶೇತೇ ಪಾಂಸುಷು ರೂಷಿತಃ||

ರಾಜನ್! ದುರ್ಯೋಧನನೂ ಹತನಾದನು! ಮಹಾರಾಜ! ಪಾಂಡವನು ಹೇಳಿದ್ದಂತೆಯೇ ಅವನು ತೊಡೆಯೊಡೆದು ಗಾಯಗೊಂಡು ಕೆಸರಿನಲ್ಲಿ ಮಲಗಿದ್ದಾನೆ!

09001029a ಧೃಷ್ಟದ್ಯುಮ್ನೋ ಹತೋ ರಾಜನ್ ಶಿಖಂಡೀ ಚಾಪರಾಜಿತಃ|

09001029c ಉತ್ತಮೌಜಾ ಯುಧಾಮನ್ಯುಸ್ತಥಾ ರಾಜನ್ಪ್ರಭದ್ರಕಾಃ||

ರಾಜನ್! ಧೃಷ್ಟದ್ಯುಮ್ನ, ಅಪರಾಜಿತ ಶಿಖಂಡೀ, ಉತ್ತಮೌಜ, ಯುಧಾಮನ್ಯು ಮತ್ತು ಇತರ ಪ್ರಭದ್ರಕರೂ ಹತರಾದರು!

09001030a ಪಾಂಚಾಲಾಶ್ಚ ನರವ್ಯಾಘ್ರಾಶ್ಚೇದಯಶ್ಚ ನಿಷೂದಿತಾಃ|

09001030c ತವ ಪುತ್ರಾ ಹತಾಃ ಸರ್ವೇ ದ್ರೌಪದೇಯಾಶ್ಚ ಭಾರತ||

09001030e ಕರ್ಣಪುತ್ರೋ ಹತಃ ಶೂರೋ ವೃಷಸೇನೋ ಮಹಾಬಲಃ||

ನರವ್ಯಾಘ್ರ ಪಾಂಚಾಲರೂ, ಚೇದಿದೇಶದವರೂ ಸಂಹರಿಸಲ್ಪಟ್ಟರು! ಭಾರತ! ನಿನ್ನ ಮತ್ತು ದ್ರೌಪದಿಯ ಪುತ್ರರೆಲ್ಲರೂ ಹತರಾಗಿದ್ದಾರೆ! ಕರ್ಣಪುತ್ರ ಶೂರ ಮಹಾಬಲ ವೃಷಸೇನನೂ ಹತನಾಗಿದ್ದಾನೆ!

09001031a ನರಾ ವಿನಿಹತಾಃ ಸರ್ವೇ ಗಜಾಶ್ಚ ವಿನಿಪಾತಿತಾಃ|

09001031c ರಥಿನಶ್ಚ ನರವ್ಯಾಘ್ರ ಹಯಾಶ್ಚ ನಿಹತಾ ಯುಧಿ||

ನರರು ಹತರಾದರು! ಆನೆಗಳು ಕೆಳಗುರುಳಿದವು! ನರವ್ಯಾಘ್ರ! ಯುದ್ಧದಲ್ಲಿ ರಥಿಗಳು ಮತ್ತು ಕುದುರೆಗಳೂ ಹತವಾದವು!

09001032a ಕಿಂಚಿಚ್ಛೇಷಂ ಚ ಶಿಬಿರಂ ತಾವಕಾನಾಂ ಕೃತಂ ವಿಭೋ|

09001032c ಪಾಂಡವಾನಾಂ ಚ ಶೂರಾಣಾಂ ಸಮಾಸಾದ್ಯ ಪರಸ್ಪರಂ||

ವಿಭೋ! ಪರಸ್ಪರರನ್ನು ಎದುರಿಸಿದ ಶೂರ ಪಾಂಡವರ ಮತ್ತು ನಿನ್ನ ಶಿಬಿರಗಳಲ್ಲಿ ಕೆಲವರು ಮಾತ್ರ ಉಳಿದುಕೊಂಡಿದ್ದಾರೆ.

09001033a ಪ್ರಾಯಃ ಸ್ತ್ರೀಶೇಷಮಭವಜ್ಜಗತ್ಕಾಲೇನ ಮೋಹಿತಂ|

09001033c ಸಪ್ತ ಪಾಂಡವತಃ ಶೇಷಾ ಧಾರ್ತರಾಷ್ಟ್ರಾಸ್ತಥಾ ತ್ರಯಃ||

ಕಾಲಮೋಹಿತವಾದ ಈ ಜಗತ್ತಿನಲ್ಲಿ ಪ್ರಾಯಶಃ ಕೇವಲ ಸ್ತ್ರೀಯರು ಮಾತ್ರ ಉಳಿದುಕೊಂಡಿದ್ದಾರೆ. ಪಾಂಡವರು ಏಳು ಮಂದಿ ಮತ್ತು ಧಾರ್ತರಾಷ್ಟ್ರರು ಮೂರು ಮಂದಿ ಉಳಿದುಕೊಂಡಿದ್ದಾರೆ.

09001034a ತೇ ಚೈವ ಭ್ರಾತರಃ ಪಂಚ ವಾಸುದೇವೋಽಥ ಸಾತ್ಯಕಿಃ|

09001034c ಕೃಪಶ್ಚ ಕೃತವರ್ಮಾ ಚ ದ್ರೌಣಿಶ್ಚ ಜಯತಾಂ ವರಃ||

ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಕೃಪ, ಕೃತವರ್ಮ ಹಾಗೂ ವಿಜಯಿಗಳಲ್ಲಿ ಶ್ರೇಷ್ಠ ದ್ರೌಣಿ.

09001035a ತವಾಪ್ಯೇತೇ ಮಹಾರಾಜ ರಥಿನೋ ನೃಪಸತ್ತಮ|

09001035c ಅಕ್ಷೌಹಿಣೀನಾಂ ಸರ್ವಾಸಾಂ ಸಮೇತಾನಾಂ ಜನೇಶ್ವರ||

09001035e ಏತೇ ಶೇಷಾ ಮಹಾರಾಜ ಸರ್ವೇಽನ್ಯೇ ನಿಧನಂ ಗತಾಃ||

ಮಹಾರಾಜ! ನೃಪಸತ್ತಮ! ಜನೇಶ್ವರ! ಒಂದುಗೂಡಿದ್ದ ಎಲ್ಲ ಅಕ್ಷೌಹಿಣೀ ಸೇನೆಗಳಲ್ಲಿ ಈ ರಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಮಹಾರಾಜ! ಅನ್ಯ ಎಲ್ಲರೂ ನಿಧನಹೊಂದಿದರು.

09001036a ಕಾಲೇನ ನಿಹತಂ ಸರ್ವಂ ಜಗದ್ವೈ ಭರತರ್ಷಭ|

09001036c ದುರ್ಯೋಧನಂ ವೈ ಪುರತಃ ಕೃತ್ವಾ ವೈರಸ್ಯ ಭಾರತ||

ಭರತರ್ಷಭ! ಭಾರತ! ದುರ್ಯೋಧನ ಮತ್ತು ಅವನ ವೈರವನ್ನು ಮುಂದೆಮಾಡಿಕೊಂಡು ಕಾಲನೇ ಈ ಜಗತ್ತೆಲ್ಲವನ್ನೂ ವಿನಾಶಗೊಳಿಸಿದನು!”

09001037a ಏತಚ್ಛ್ರುತ್ವಾ ವಚಃ ಕ್ರೂರಂ ಧೃತರಾಷ್ಟ್ರೋ ಜನೇಶ್ವರಃ|

09001037c ನಿಪಪಾತ ಮಹಾರಾಜ ಗತಸತ್ತ್ವೋ ಮಹೀತಲೇ||

ಮಹಾರಾಜ! ಈ ಕ್ರೂರ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಪ್ರಾಣಹೋದಂತಾಗಿ ನೆಲದಮೇಲೆ ಬಿದ್ದನು.

09001038a ತಸ್ಮಿನ್ನಿಪತಿತೇ ಭೂಮೌ ವಿದುರೋಽಪಿ ಮಹಾಯಶಾಃ|

09001038c ನಿಪಪಾತ ಮಹಾರಾಜ ರಾಜವ್ಯಸನಕರ್ಶಿತಃ||

ಮಹಾರಾಜ! ಅವನು ಕೆಳಗೆ ಬೀಳಲು ರಾಜವ್ಯಸನದಿಂದ ದುಃಖಿತನಾಗಿದ್ದ ಮಹಾಯಶಸ್ವಿ ವಿದುರನು ಕೂಡ ಭೂಮಿಯಮೇಲೆ ಬಿದ್ದನು.

09001039a ಗಾಂಧಾರೀ ಚ ನೃಪಶ್ರೇಷ್ಠ ಸರ್ವಾಶ್ಚ ಕುರುಯೋಷಿತಃ|

09001039c ಪತಿತಾಃ ಸಹಸಾ ಭೂಮೌ ಶ್ರುತ್ವಾ ಕ್ರೂರಂ ವಚಶ್ಚ ತಾಃ||

ನೃಪಶ್ರೇಷ್ಠ! ಆ ಕ್ರೂರ ಮಾತನ್ನು ಕೇಳಿ ಕೂಡಲೇ ಗಾಂಧಾರಿ ಮತ್ತು ಕುರುಸ್ತ್ರೀಯರೆಲ್ಲರೂ ಭೂಮಿಯಮೇಲೆ ಬಿದ್ದರು.

09001040a ನಿಃಸಂಜ್ಞಂ ಪತಿತಂ ಭೂಮೌ ತದಾಸೀದ್ರಾಜಮಂಡಲಂ|

09001040c ಪ್ರಲಾಪಯುಕ್ತಾ ಮಹತೀ ಕಥಾ ನ್ಯಸ್ತಾ ಪಟೇ ಯಥಾ||

ಪ್ರಲಪಿಸುತ್ತಿದ್ದ ಆ ರಾಜಮಂಡಲವು ಸಂಜ್ಞೆಗಳನ್ನು ಕಳೆದುಕೊಂಡು ವಿಶಾಲ ಚಿತ್ರಪಟದಲ್ಲಿ ಅಂಕಿತ ಚಿತ್ರಗಳಂತೆ ಭೂಮಿಯ ಮೇಲೆ ಬಿದ್ದಿತು.

09001041a ಕೃಚ್ಚ್ರೇಣ ತು ತತೋ ರಾಜಾ ಧೃತರಾಷ್ಟ್ರೋ ಮಹೀಪತಿಃ|

09001041c ಶನೈರಲಭತ ಪ್ರಾಣಾನ್ಪುತ್ರವ್ಯಸನಕರ್ಶಿತಃ||

ಅನಂತರ ಪುತ್ರವ್ಯಸನದಿಂದ ದುಃಖಿತ ಮಹೀಪತಿ ರಾಜಾ ಧೃತರಾಷ್ಟ್ರನು ಕಷ್ಟದಿಂದ ಮೆಲ್ಲನೆ ಚೇತರಿಸಿಕೊಂಡನು.

09001042a ಲಬ್ಧ್ವಾ ತು ಸ ನೃಪಃ ಸಂಜ್ಞಾಂ ವೇಪಮಾನಃ ಸುದುಃಖಿತಃ|

09001042c ಉದೀಕ್ಷ್ಯ ಚ ದಿಶಃ ಸರ್ವಾಃ ಕ್ಷತ್ತಾರಂ ವಾಕ್ಯಮಬ್ರವೀತ್||

ಸಂಜ್ಞೆಗಳನ್ನು ಪಡೆದ ಆ ನೃಪನು ಅತಿ ದುಃಖದಿಂದ ಕಂಪಿಸುತ್ತಾ ಎಲ್ಲ ದಿಕ್ಕುಗಳಲ್ಲಿಯೂ ನೋಡುತ್ತಾ ಕ್ಷತ್ತನಿಗೆ ಈ ಮಾತನ್ನಾಡಿದನು:

09001043a ವಿದ್ವನ್ ಕ್ಷತ್ತರ್ಮಹಾಪ್ರಾಜ್ಞ ತ್ವಂ ಗತಿರ್ಭರತರ್ಷಭ|

09001043c ಮಮಾನಾಥಸ್ಯ ಸುಭೃಶಂ ಪುತ್ರೈರ್ಹೀನಸ್ಯ ಸರ್ವಶಃ||

09001043e ಏವಮುಕ್ತ್ವಾ ತತೋ ಭೂಯೋ ವಿಸಂಜ್ಞೋ ನಿಪಪಾತ ಹ||

“ವಿದ್ವನ್! ಕ್ಷತ್ತ! ಮಹಾಪ್ರಾಜ್ಞ! ಭರತರ್ಷಭ! ಎಲ್ಲ ಪುತ್ರರನ್ನೂ ಕಳೆದುಕೊಂಡು ಅತೀವ ಅನಾಥನಾಗಿರುವ ನನಗೆ ನೀನೇ ಗತಿ!” ಹೀಗೆ ಹೇಳಿ ಅವನು ಪುನಃ ಮೂರ್ಛಿತನಾಗಿ ಕೆಳಗೆ ಬಿದ್ದನು.

09001044a ತಂ ತಥಾ ಪತಿತಂ ದೃಷ್ಟ್ವಾ ಬಾಂಧವಾ ಯೇಽಸ್ಯ ಕೇ ಚನ|

09001044c ಶೀತೈಸ್ತು ಸಿಷಿಚುಸ್ತೋಯೈರ್ವಿವ್ಯಜುರ್ವ್ಯಜನೈರಪಿ||

ಹಾಗೆ ಅವನು ಬಿದ್ದುದನ್ನು ನೋಡಿ ಬಾಂಧವರಲ್ಲಿ ಕೆಲವರು ತಣ್ಣೀರನ್ನು ಚಿಮುಕಿಸಿದರು ಮತ್ತು ಬೀಸಣಿಗೆಯನ್ನು ಬೀಸಿದರು.

09001045a ಸ ತು ದೀರ್ಘೇಣ ಕಾಲೇನ ಪ್ರತ್ಯಾಶ್ವಸ್ತೋ ಮಹೀಪತಿಃ|

09001045c ತೂಷ್ಣೀಂ ದಧ್ಯೌ ಮಹೀಪಾಲಃ ಪುತ್ರವ್ಯಸನಕರ್ಶಿತಃ||

09001045e ನಿಃಶ್ವಸನ್ಜಿಹ್ಮಗ ಇವ ಕುಂಭಕ್ಷಿಪ್ತೋ ವಿಶಾಂ ಪತೇ||

ವಿಶಾಂಪತೇ! ದೀರ್ಘಕಾಲದ ನಂತರ ಪುನಃ ಎಚ್ಚರಗೊಂಡ ಆ ಮಹೀಪತಿ ಮಹೀಪಾಲನು ಪುತ್ರವ್ಯಸನದಿಂದ ಪೀಡಿತನಾಗಿ ಗಡಿಗೆಯಲ್ಲಿಟ್ಟ ಹಾವಿನಂತೆ ನಿಟ್ಟುಸಿರುಬಿಡುತ್ತಾ ಮೌನಿಯಾಗಿ ಕುಳಿತಿದ್ದನು.

09001046a ಸಂಜಯೋಽಪ್ಯರುದತ್ತತ್ರ ದೃಷ್ಟ್ವಾ ರಾಜಾನಮಾತುರಂ|

09001046c ತಥಾ ಸರ್ವಾಃ ಸ್ತ್ರಿಯಶ್ಚೈವ ಗಾಂಧಾರೀ ಚ ಯಶಸ್ವಿನೀ||

ಆತುರನಾಗಿದ್ದ ರಾಜನನ್ನು ನೋಡಿ ಸಂಜಯನೂ, ಮತ್ತು ಹಾಗೆಯೇ ಯಶಸ್ವಿನೀ ಗಾಂಧಾರೀ ಮತ್ತು ಎಲ್ಲ ಸ್ತ್ರೀಯರೂ ರೋದಿಸತೊಡಗಿದರು.

09001047a ತತೋ ದೀರ್ಘೇಣ ಕಾಲೇನ ವಿದುರಂ ವಾಕ್ಯಮಬ್ರವೀತ್|

09001047c ಧೃತರಾಷ್ಟ್ರೋ ನರವ್ಯಾಘ್ರೋ ಮುಹ್ಯಮಾನೋ ಮುಹುರ್ಮುಹುಃ||

ದೀರ್ಘ ಕಾಲದ ನಂತರ ಕ್ಷಣ-ಕ್ಷಣಕ್ಕೂ ಮೂರ್ಛಿತನಾಗುತ್ತಿದ್ದ ನರವ್ಯಾಘ್ರ ಧೃತರಾಷ್ಟ್ರನು ವಿದುರನಲ್ಲಿ ಈ ಮಾತನ್ನಾಡಿದನು:

09001048a ಗಚ್ಚಂತು ಯೋಷಿತಃ ಸರ್ವಾ ಗಾಂಧಾರೀ ಚ ಯಶಸ್ವಿನೀ|

09001048c ತಥೇಮೇ ಸುಹೃದಃ ಸರ್ವೇ ಭ್ರಶ್ಯತೇ ಮೇ ಮನೋ ಭೃಶಂ||

“ಯಶಸ್ವಿನೀ ಗಾಂಧಾರಿಯೂ, ಎಲ್ಲ ಸ್ತ್ರೀಯರು ಮತ್ತು ಎಲ್ಲ ಸುಹೃದರೂ ಹೊರಟುಹೋಗಲಿ! ನನ್ನ ಮನಸ್ಸು ತುಂಬಾ ಭ್ರಮೆಗೊಂಡಿದೆ!”

09001049a ಏವಮುಕ್ತಸ್ತತಃ ಕ್ಷತ್ತಾ ತಾಃ ಸ್ತ್ರಿಯೋ ಭರತರ್ಷಭ|

09001049c ವಿಸರ್ಜಯಾಮಾಸ ಶನೈರ್ವೇಪಮಾನಃ ಪುನಃ ಪುನಃ||

ಭರತರ್ಷಭ! ಹೀಗೆ ಹೇಳಲು ಪುನಃ ಪುನಃ ಕಂಪಿಸುತ್ತಿದ್ದ ಕ್ಷತ್ತನು ಮೆಲ್ಲನೆ ಸ್ತ್ರೀಯರನ್ನು ಕಳುಹಿಸಿಕೊಟ್ಟನು.

09001050a ನಿಶ್ಚಕ್ರಮುಸ್ತತಃ ಸರ್ವಾಸ್ತಾಃ ಸ್ತ್ರಿಯೋ ಭರತರ್ಷಭ|

09001050c ಸುಹೃದಶ್ಚ ತತಃ ಸರ್ವೇ ದೃಷ್ಟ್ವಾ ರಾಜಾನಮಾತುರಂ||

ಭರತರ್ಷಭ! ಆತುರ ರಾಜನನ್ನು ನೋಡಿ ಆ ಎಲ್ಲ ಸ್ತ್ರೀಯರೂ ಎಲ್ಲ ಸುಹೃದರೂ ಅಲ್ಲಿಂದ ಹೊರಟುಹೋದರು.

09001051a ತತೋ ನರಪತಿಂ ತತ್ರ ಲಬ್ಧಸಂಜ್ಞಂ ಪರಂತಪ|

09001051c ಅವೇಕ್ಷ್ಯ ಸಂಜಯೋ ದೀನೋ ರೋದಮಾನಂ ಭೃಶಾತುರಂ||

ಪರಂತಪ! ಆಗ ಅಲ್ಲಿ ಸಂಜ್ಞೆಗಳನ್ನು ಪಡೆದು ತುಂಬಾ ಆತುರನಾಗಿ ರೋದಿಸುತ್ತಿದ್ದ ನರಪತಿಯನ್ನು ಸಂಜಯನು ನೋಡಿದನು.

09001052a ಪ್ರಾಂಜಲಿರ್ನಿಃಶ್ವಸಂತಂ ಚ ತಂ ನರೇಂದ್ರಂ ಮುಹುರ್ಮುಹುಃ|

09001052c ಸಮಾಶ್ವಾಸಯತ ಕ್ಷತ್ತಾ ವಚಸಾ ಮಧುರೇಣ ಹ||

ಬಾರಿ ಬಾರಿ ನಿಟ್ಟುಸಿರುಬಿಡುತ್ತಿದ್ದ ಆ ನರೇಂದ್ರನನ್ನು ಅಂಜಲೀಬದ್ಧ ಕ್ಷತ್ತನು ಮಧುರ ಮಾತುಗಳಿಂದ ಸಂತಯಿಸಿದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಧೃತರಾಷ್ಟ್ರಮೋಹೇ ಪ್ರಥಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಧೃತರಾಷ್ಟ್ರಮೋಹ ಎನ್ನುವ ಮೊದಲನೇ ಅಧ್ಯಾಯವು.

[1] ಸಸೈನ್ಯೋಽಥ ಸ ಎಂಬ ಪಾಠಾಂತರವಿದೆ (ನೀಲಕಂಠ).

[2] ವಿನಷ್ಟಾಃ ಎಂಬ ಪಾಠಾಂತರವಿದೆ (ನೀಲಕಂಠ).

[3] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಕ್ಲೇಶೇನ ಮಹತಾ ಯುಕ್ತಂ ಸರ್ವತೋ ರಾಜಸತ್ತಮ|

Comments are closed.