Sauptika Parva: Chapter 9

ಸೌಪ್ತಿಕಪರ್ವ

ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿ ಕೃಪ-ಅಶ್ವತ್ಥಾಮ-ಕೃತವರ್ಮರು ದುರ್ಯೋಧನನು ಬಿದ್ದಿದ್ದ ಸ್ಥಳಕ್ಕೆ ಬಂದುದು (೧-೯). ದುರ್ಯೊಧನನನ್ನು ನೋಡಿ ಕೃಪನ ಪರಿವೇದನೆ (೧೦-೧೭). ದುರ್ಯೋಧನನನ್ನು ನೋಡಿ ಅಶ್ವತ್ಥಾಮನ ಪರಿವೇದನೆ (೧೮-೫೧). ದುರ್ಯೋಧನನ ಪ್ರಾಣತ್ಯಾಗ (೫೨-೫೯).

10009001 ಸಂಜಯ ಉವಾಚ|

10009001a ತೇ ಹತ್ವಾ ಸರ್ವಪಾಂಚಾಲಾನ್ದ್ರೌಪದೇಯಾಂಶ್ಚ ಸರ್ವಶಃ|

10009001c ಅಗಚ್ಚನ್ಸಹಿತಾಸ್ತತ್ರ ಯತ್ರ ದುರ್ಯೋಧನೋ ಹತಃ||

ಸಂಜಯನು ಹೇಳಿದನು: “ಅವರು ಸರ್ವ ಪಾಂಚಾಲರನ್ನೂ ದ್ರೌಪದೇಯರನ್ನೂ ಸಂಹರಿಸಿ ಒಟ್ಟಾಗಿ ದುರ್ಯೋಧನನು ಎಲ್ಲಿ ಹತನಾಗಿದ್ದನೋ ಅಲ್ಲಿಗೆ ಹೋದರು.

10009002a ಗತ್ವಾ ಚೈನಮಪಶ್ಯಂಸ್ತೇ ಕಿಂ ಚಿತ್ಪ್ರಾಣಂ ನರಾಧಿಪಂ|

10009002c ತತೋ ರಥೇಭ್ಯಃ ಪ್ರಸ್ಕಂದ್ಯ ಪರಿವವ್ರುಸ್ತವಾತ್ಮಜಂ||

ಅಲ್ಲಿಗೆ ಹೋಗಿ ನರಾಧಿಪನಿಗೆ ಸ್ವಲ್ಪವೇ ಪ್ರಾಣವು ಉಳಿದಿದೆಯೆನ್ನುವುದನ್ನು ನೋಡಿ ರಥದಿಂದ ಇಳಿದು ನಿನ್ನ ಮಗನನ್ನು ಸುತ್ತುವರೆದು ಕುಳಿತರು.

10009003a ತಂ ಭಗ್ನಸಕ್ಥಂ ರಾಜೇಂದ್ರ ಕೃಚ್ಚ್ರಪ್ರಾಣಮಚೇತಸಂ|

10009003c ವಮಂತಂ ರುಧಿರಂ ವಕ್ತ್ರಾದಪಶ್ಯನ್ವಸುಧಾತಲೇ||

ರಾಜೇಂದ್ರ! ತೊಡೆಯೊಡೆದು ಕಷ್ಟದಿಂದ ಪ್ರಾಣವನ್ನು ಹಿಡಿದುಕೊಂಡು ನಿಶ್ಚೇತನನಾಗಿ ರಕ್ತವನ್ನು ಕಾರುತ್ತಾ, ನೆಲದಮೇಲಿದ್ದ ದುರ್ಯೋಧನನನ್ನು ಅವರು ನೋಡಿದರು.

10009004a ವೃತಂ ಸಮಂತಾದ್ಬಹುಭಿಃ ಶ್ವಾಪದೈರ್ಘೋರದರ್ಶನೈಃ|

10009004c ಶಾಲಾವೃಕಗಣೈಶ್ಚೈವ ಭಕ್ಷಯಿಷ್ಯದ್ಭಿರಂತಿಕಾತ್||

ಅನೇಕ ಘೋರ ತೋಳ-ನರಿಗಳು ಅವನನ್ನು ಕಚ್ಚಿ ತಿನ್ನಲು ಸುತ್ತುವರೆದು ಹತ್ತಿರ-ಹತ್ತಿರಕ್ಕೆ ಹೋಗುತ್ತಿದ್ದವು.

10009005a ನಿವಾರಯಂತಂ ಕೃಚ್ಚ್ರಾತ್ತಾನ್ ಶ್ವಾಪದಾನ್ಸಂಚಿಖಾದಿಷೂನ್|

10009005c ವಿವೇಷ್ಟಮಾನಂ ಮಹ್ಯಾಂ ಚ ಸುಭೃಶಂ ಗಾಢವೇದನಂ||

ಮಾಂಸವನ್ನು ತಿನ್ನಲು ಮುಂದೆ ಬರುತ್ತಿರುವ ಆ ಶ್ವಾಪದಗಳನ್ನು ಬಹಳ ಕಷ್ಟದಿಂದ ತಡೆಯುತ್ತಾ ಅವನು ಗಾಢವೇದನೆಯಿಂದ ಮತ್ತು ಮಹಾ ನೋವಿನಿಂದ ಹೊರಳಾಡುತ್ತಿದ್ದನು.

10009006a ತಂ ಶಯಾನಂ ಮಹಾತ್ಮಾನಂ ಭೂಮೌ ಸ್ವರುಧಿರೋಕ್ಷಿತಂ|

10009006c ಹತಶಿಷ್ಟಾಸ್ತ್ರಯೋ ವೀರಾಃ ಶೋಕಾರ್ತಾಃ ಪರ್ಯವಾರಯನ್||

ತನ್ನದೇ ರಕ್ತದಲ್ಲಿ ತೋಯ್ದು ನೆಲದಮೇಲೆ ಮಲಗಿದ್ದ ಆ ಮಹಾತ್ಮನನ್ನು ಅಳಿದುಳಿದಿದ್ದ ಆ ಮೂವರು ವೀರರೂ ಶೋಕಾರ್ತರಾಗಿ ಸುತ್ತುವರೆದರು.

10009006e ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ||

10009007a ತೈಸ್ತ್ರಿಭಿಃ ಶೋಣಿತಾದಿಗ್ಧೈರ್ನಿಃಶ್ವಸದ್ಭಿರ್ಮಹಾರಥೈಃ|

10009007c ಶುಶುಭೇ ಸಂವೃತೋ ರಾಜಾ ವೇದೀ ತ್ರಿಭಿರಿವಾಗ್ನಿಭಿಃ||

ರಕ್ತದಿಂದ ತೋಯ್ದು ನಿಟ್ಟುಸಿರುಬಿಡುತ್ತಿದ್ದ ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮ ಈ ಮೂವರು ಮಹಾರಥರಿಂದ ಸುತ್ತುವರೆದಿದ್ದ ರಾಜನು ಮೂರು ಅಗ್ನಿಗಳಿಂದ ಆವೃತವಾದ ಯಜ್ಞವೇದಿಯಂತೆ ತೋರಿದನು.

10009008a ತೇ ತಂ ಶಯಾನಂ ಸಂಪ್ರೇಕ್ಷ್ಯ ರಾಜಾನಮತಥೋಚಿತಂ|

10009008c ಅವಿಷಹ್ಯೇನ ದುಃಖೇನ ತತಸ್ತೇ ರುರುದುಸ್ತ್ರಯಃ||

ರಾಜನಿಗೆ ಉಚಿತವಲ್ಲದಂತೆ ಮಲಗಿರುವ ಅವನನ್ನು ನೋಡಿ ಸಹಿಸಿಕೊಳ್ಳಲಾರದ ದುಃಖದಿಂದ ಆ ಮೂವರೂ ರೋದಿಸಿದರು.

10009009a ತತಸ್ತೇ ರುಧಿರಂ ಹಸ್ತೈರ್ಮುಖಾನ್ನಿರ್ಮೃಜ್ಯ ತಸ್ಯ ಹ|

10009009c ರಣೇ ರಾಜ್ಞಃ ಶಯಾನಸ್ಯ ಕೃಪಣಂ ಪರ್ಯದೇವಯನ್||

ರಣದಲ್ಲಿ ಮಲಗಿದ್ದ ರಾಜನ ಮುಖದಿಂದ ರಕ್ತವನ್ನು ತನ್ನ ಎರಡೂ ಕೈಗಳಿಂದ ಒರೆಸುತ್ತಾ ಕೃಪನು ಪರಿವೇದಿಸಿದನು.

10009010 ಕೃಪ ಉವಾಚ|

10009010a ನ ದೈವಸ್ಯಾತಿಭಾರೋಽಸ್ತಿ ಯದಯಂ ರುಧಿರೋಕ್ಷಿತಃ|

10009010c ಏಕಾದಶಚಮೂಭರ್ತಾ ಶೇತೇ ದುರ್ಯೋಧನೋ ಹತಃ||

ಕೃಪನು ಹೇಳಿದನು: “ಹನ್ನೊಂದು ಅಕ್ಷೌಹಿಣೀ ಸೇನೆಯ ಅಧಿಪತಿಯಾಗಿದ್ದ ಈ ದುರ್ಯೋಧನನು ಹತನಾಗಿ ರಕ್ತದಿಂದ ತೋಯ್ದು ಮಲಗಿದ್ದಾನೆ ಎಂದರೆ ದೈವಕ್ಕೆ ಯಾವುದೂ ಕಷ್ಟಸಾಧ್ಯವಲ್ಲ ಅಲ್ಲವೇ?

10009011a ಪಶ್ಯ ಚಾಮೀಕರಾಭಸ್ಯ ಚಾಮೀಕರವಿಭೂಷಿತಾಂ|

10009011c ಗದಾಂ ಗದಾಪ್ರಿಯಸ್ಯೇಮಾಂ ಸಮೀಪೇ ಪತಿತಾಂ ಭುವಿ||

ಸುವರ್ಣದ ಕಾಂತಿಯುಳ್ಳ, ಸುವರ್ಣದಿಂದ ವಿಭೂಷಿತವಾಗಿರುವ ಗದೆಯು ಗದಾಪ್ರಿಯನಾದ ಇವನ ಸಮೀಪದಲ್ಲಿ ನೆಲದಮೇಲೆ ಬಿದ್ದಿರುವುದನ್ನು ನೋಡು!

10009012a ಇಯಮೇನಂ ಗದಾ ಶೂರಂ ನ ಜಹಾತಿ ರಣೇ ರಣೇ|

10009012c ಸ್ವರ್ಗಾಯಾಪಿ ವ್ರಜಂತಂ ಹಿ ನ ಜಹಾತಿ ಯಶಸ್ವಿನಂ||

ರಣರಣದಲ್ಲಿಯೂ ಈ ಗದೆಯು ಈ ಶೂರನನ್ನು ಬಿಟ್ಟಿರಲಿಲ್ಲ. ಈಗ ಸ್ವರ್ಗಕ್ಕೆ ಹೋಗುತ್ತಿರುವಾಗಲೂ ಈ ಯಶಸ್ವಿನಿಯನ್ನು ಬಿಟ್ಟಿಲ್ಲ!

10009013a ಪಶ್ಯೇಮಾಂ ಸಹ ವೀರೇಣ ಜಾಂಬೂನದವಿಭೂಷಿತಾಂ|

10009013c ಶಯಾನಾಂ ಶಯನೇ ಧರ್ಮೇ ಭಾರ್ಯಾಂ ಪ್ರೀತಿಮತೀಮಿವ||

ಶಯನದಲ್ಲಿ ಮಲಗಿರುವ ಧರ್ಮಪತ್ನಿಯಂತೆ ಅತೀವ ಪ್ರೀತಿಯಿಂದ ಈ ವೀರನ ಪಕ್ಕದಲ್ಲಿಯೇ ಇರುವ ಈ ಸುವರ್ಣವಿಭೂಷಿತ ಗದೆಯನ್ನು ನೋಡು!

10009014a ಯೋ ವೈ ಮೂರ್ಧಾವಸಿಕ್ತಾನಾಮಗ್ರೇ ಯಾತಃ ಪರಂತಪಃ|

10009014c ಸ ಹತೋ ಗ್ರಸತೇ ಪಾಂಸೂನ್ಪಶ್ಯ ಕಾಲಸ್ಯ ಪರ್ಯಯಂ||

ಮೂರ್ಧಾವಸಿಕ್ತರ ಮುಂಭಾಗದಲ್ಲಿ ಹೋಗುತ್ತಿದ್ದ ಈ ಪರಂತಪನು ಹತನಾಗಿ ಮಣ್ಣನ್ನು ಮುಕ್ಕುತ್ತಿದ್ದಾನೆ. ಕಾಲದ ಈ ವೈಪರೀತ್ಯವನ್ನಾದರೂ ನೋಡು!

10009015a ಯೇನಾಜೌ ನಿಹತಾ ಭೂಮಾವಶೇರತ ಪುರಾ ದ್ವಿಷಃ|

10009015c ಸ ಭೂಮೌ ನಿಹತಃ ಶೇತೇ ಕುರುರಾಜಃ ಪರೈರಯಂ||

ಹಿಂದೆ ಯಾರಿಂದ ಶತ್ರುಗಳು ಹತರಾಗಿ ನೆಲಕ್ಕುರುಳುತ್ತಿದ್ದರೋ  ಆ ಕುರುರಾಜನೇ ಇಂದು ಶತ್ರುಗಳಿಂದ ಹತನಾಗಿ ನೆಲದಮೇಲೆ ಮಲಗಿದ್ದಾನೆ!

10009016a ಭಯಾನ್ನಮಂತಿ ರಾಜಾನೋ ಯಸ್ಯ ಸ್ಮ ಶತಸಂಘಶಃ|

10009016c ಸ ವೀರಶಯನೇ ಶೇತೇ ಕ್ರವ್ಯಾದ್ಭಿಃ ಪರಿವಾರಿತಃ||

ಯಾವ ರಾಜನನ್ನು ನೂರಾರು ಗುಂಪುಗಳಲ್ಲಿ ಜನರು ಭಯದಿಂದ ನಮಸ್ಕರಿಸುತ್ತಿದ್ದರೋ ಅವನು ಕ್ರವ್ಯಾದಿಗಳಿಂದ ಸುತ್ತುವರೆಯಲ್ಪಟ್ಟು ವೀರಶಯನದಲ್ಲಿ ಮಲಗಿದ್ದಾನೆ!

10009017a ಉಪಾಸತ ನೃಪಾಃ ಪೂರ್ವಮರ್ಥಹೇತೋರ್ಯಮೀಶ್ವರಂ|

10009017c ಧಿಕ್ಸದ್ಯೋ ನಿಹತಃ ಶೇತೇ ಪಶ್ಯ ಕಾಲಸ್ಯ ಪರ್ಯಯಂ||

ಧಿಕ್ಕಾರ! ಯಾವ ಈಶ್ವರನನ್ನು ಹಿಂದೆ ನೃಪರು ಸಂಪತ್ತಿಗಾಗಿ ಉಪಾಸಿಸುತ್ತಿದ್ದರೋ ಅವನು ಸದ್ಯದಲ್ಲಿ ಹತನಾಗಿ ಮಲಗಿದ್ದಾನೆ! ಕಾಲದ ಈ ವಿಪರ್ಯಾಸವನ್ನಾದರೂ ನೋಡು!””

10009018 ಸಂಜಯ ಉವಾಚ|

10009018a ತಂ ಶಯಾನಂ ನೃಪಶ್ರೇಷ್ಠಂ ತತೋ ಭರತಸತ್ತಮ|

10009018c ಅಶ್ವತ್ಥಾಮಾ ಸಮಾಲೋಕ್ಯ ಕರುಣಂ ಪರ್ಯದೇವಯತ್||

ಸಂಜಯನು ಹೇಳಿದನು: “ಭರತಸತ್ತಮ! ಆಗ ಮಲಗಿದ್ದ ಆ ನೃಪಶ್ರೇಷ್ಠನನ್ನು ನೋಡಿ ಅಶ್ವತ್ಥಾಮನು ಕರುಣೆಯಿಂದ ಪರಿವೇದಿಸಿದನು.

10009019a ಆಹುಸ್ತ್ವಾಂ ರಾಜಶಾರ್ದೂಲ ಮುಖ್ಯಂ ಸರ್ವಧನುಷ್ಮತಾಂ|

10009019c ಧನಾಧ್ಯಕ್ಷೋಪಮಂ ಯುದ್ಧೇ ಶಿಷ್ಯಂ ಸಂಕರ್ಷಣಸ್ಯ ಹ||

“ರಾಜಶಾರ್ದೂಲ! ನೀನು ಸರ್ವಧನುಷ್ಮತರಲ್ಲಿ ಮುಖ್ಯನೆಂದೂ, ಸಂಕರ್ಷಣನ ಶಿಷ್ಯನಾದ ನಿನ್ನನ್ನು ಯುದ್ಧದಲ್ಲಿ ಧನಾಧ್ಯಕ್ಷನ ಸಮಾನನೆಂದೂ ಹೇಳುತ್ತಾರೆ!

10009020a ಕಥಂ ವಿವರಮದ್ರಾಕ್ಷೀದ್ಭೀಮಸೇನಸ್ತವಾನಘ|

10009020c ಬಲಿನಃ ಕೃತಿನೋ ನಿತ್ಯಂ ಸ ಚ ಪಾಪಾತ್ಮವಾನ್ನೃಪ||

ಅನಘ! ನೃಪ! ಹೀಗಿರುವಾಗ ಬಲಶಾಲಿಗಳಲ್ಲಿ ನಿತ್ಯವೂ ಮೋಸಗಾರನಾದ ಪಾಪಾತ್ಮ ಭೀಮಸೇನನು ನಿನ್ನಲ್ಲಿರುವ ಛಿದ್ರವನ್ನು ಕಂಡುಕೊಂಡನು!

10009021a ಕಾಲೋ ನೂನಂ ಮಹಾರಾಜ ಲೋಕೇಽಸ್ಮಿನ್ಬಲವತ್ತರಃ|

10009021c ಪಶ್ಯಾಮೋ ನಿಹತಂ ತ್ವಾಂ ಚೇದ್ಭೀಮಸೇನೇನ ಸಂಯುಗೇ||

ಮಹಾರಾಜ! ಯುದ್ಧದಲ್ಲಿ ನೀನು ಭೀಮಸೇನನಿಂದ ಹತನಾಗಿರುವುದನ್ನು ನೋಡಿ ಈ ಲೋಕದಲ್ಲಿ ಕಾಲವೇ ಬಲವತ್ತರವೆಂದೆನಿಸುವುದಿಲ್ಲವೇ?

10009022a ಕಥಂ ತ್ವಾಂ ಸರ್ವಧರ್ಮಜ್ಞಂ ಕ್ಷುದ್ರಃ ಪಾಪೋ ವೃಕೋದರಃ|

10009022c ನಿಕೃತ್ಯಾ ಹತವಾನ್ಮಂದೋ ನೂನಂ ಕಾಲೋ ದುರತ್ಯಯಃ||

ಸರ್ವಧರ್ಮಜ್ಞನಾದ ನಿನ್ನನ್ನು ಕ್ಷುದ್ರ ಪಾಪಿ ಮಂದ ವೃಕೋದರನು ಮೋಸದಿಂದ ಕೊಂದನೆಂದರೆ ಕಾಲವನ್ನು ಅತಿಕ್ರಮಿಸುವುದು ಅಸಾಧ್ಯವೆಂದಲ್ಲವೇ?

10009023a ಧರ್ಮಯುದ್ಧೇ ಹ್ಯಧರ್ಮೇಣ ಸಮಾಹೂಯೌಜಸಾ ಮೃಧೇ|

10009023c ಗದಯಾ ಭೀಮಸೇನೇನ ನಿರ್ಭಿನ್ನೇ ಸಕ್ಥಿನೀ ತವ||

ಧರ್ಮಯುದ್ಧಕ್ಕೆ ನಿನ್ನನ್ನು ಕರೆದು ರಣದಲ್ಲಿ ಭೀಮಸೇನನು ಅಧರ್ಮದಿಂದ ನಿನ್ನ ತೊಡೆಯನ್ನು ಒಡೆದನು!

10009024a ಅಧರ್ಮೇಣ ಹತಸ್ಯಾಜೌ ಮೃದ್ಯಮಾನಂ ಪದಾ ಶಿರಃ|

10009024c ಯದುಪೇಕ್ಷಿತವಾನ್ ಕ್ಷುದ್ರೋ ಧಿಕ್ತಮಸ್ತು ಯುಧಿಷ್ಠಿರಂ||

ಅಧರ್ಮದಿಂದ ನಿನ್ನನ್ನು ಹೊಡೆದು ಕಾಲಿನಿಂದ ನಿನ್ನ ಶಿರವನ್ನು ಒದೆದುದಕ್ಕೂ ಉಪೇಕ್ಷೆಮಾಡದ ಕ್ಷುದ್ರ ಯುಧಿಷ್ಠಿರನಿಗೂ ಧಿಕ್ಕಾರ!

10009025a ಯುದ್ಧೇಷ್ವಪವದಿಷ್ಯಂತಿ ಯೋಧಾ ನೂನಂ ವೃಕೋದರಂ|

10009025c ಯಾವತ್ ಸ್ಥಾಸ್ಯಂತಿ ಭೂತಾನಿ ನಿಕೃತ್ಯಾ ಹ್ಯಸಿ ಪಾತಿತಃ||

ಎಂದಿನವರೆಗೆ ಪ್ರಾಣಿಗಳಿರುವವೋ ಅಲ್ಲಿಯವರೆಗೆ ಯುದ್ಧಗಳಲ್ಲಿ ಯೋಧರು ಈ ಪಾತಿತನು ಮೋಸಗಾರನು ಎಂದು ವೃಕೋದರನಿಗೆ ಹೇಳುತ್ತಾರೆ!

10009026a ನನು ರಾಮೋಽಬ್ರವೀದ್ರಾಜಂಸ್ತ್ವಾಂ ಸದಾ ಯದುನಂದನಃ|

10009026c ದುರ್ಯೋಧನಸಮೋ ನಾಸ್ತಿ ಗದಯಾ ಇತಿ ವೀರ್ಯವಾನ್||

ರಾಜನ್! ಯದುನಂದನ ರಾಮನು ಸದಾ “ವೀರ್ಯವಾನ್ ದುರ್ಯೋಧನನನ ಸಮನಾದವನು ಗದಾಯುದ್ಧದಲ್ಲಿ ಇಲ್ಲ!” ಎಂದು ಹೇಳುತ್ತಿರಲಿಲ್ಲವೇ?

10009027a ಶ್ಲಾಘತೇ ತ್ವಾಂ ಹಿ ವಾರ್ಷ್ಣೇಯೋ ರಾಜನ್ಸಂಸತ್ಸು ಭಾರತ|

10009027c ಸುಶಿಷ್ಯೋ ಮಮ ಕೌರವ್ಯೋ ಗದಾಯುದ್ಧ ಇತಿ ಪ್ರಭೋ||

ಭಾರತ! ಪ್ರಭೋ! ರಾಜನ್! ಸಂಸದಿಗಳಲ್ಲಿ ವಾರ್ಷ್ಣೇಯನು “ಗದಾಯುದ್ಧದಲ್ಲಿ ಕೌರವ್ಯನು ನನ್ನ ಪ್ರಧಾನ ಶಿಷ್ಯ!” ಎಂದು ಹೇಳುತ್ತಿರಲಿಲ್ಲವೇ?

10009028a ಯಾಂ ಗತಿಂ ಕ್ಷತ್ರಿಯಸ್ಯಾಹುಃ ಪ್ರಶಸ್ತಾಂ ಪರಮರ್ಷಯಃ|

10009028c ಹತಸ್ಯಾಭಿಮುಖಸ್ಯಾಜೌ ಪ್ರಾಪ್ತಸ್ತ್ವಮಸಿ ತಾಂ ಗತಿಂ||

ಶತ್ರುವನ್ನು ಎದುರಿಸಿ ಹತನಾದ ಕ್ಷತ್ರಿಯನಿಗೆ ಯಾವ ಪ್ರಶಸ್ತ ಗತಿಯು ದೊರೆಯುತ್ತದೆಯೆಂದು ಪರಮ‌ಋಷಿಗಳು ಹೇಳುತ್ತಾರೋ ಆ ಉತ್ತಮ ಗತಿಯನ್ನು ನೀನೂ ಪಡೆದಿರುವೆ.

10009029a ದುರ್ಯೋಧನ ನ ಶೋಚಾಮಿ ತ್ವಾಮಹಂ ಪುರುಷರ್ಷಭ|

10009029c ಹತಪುತ್ರಾಂ ತು ಶೋಚಾಮಿ ಗಾಂಧಾರೀಂ ಪಿತರಂ ಚ ತೇ|

10009029e ಭಿಕ್ಷುಕೌ ವಿಚರಿಷ್ಯೇತೇ ಶೋಚಂತೌ ಪೃಥಿವೀಮಿಮಾಂ||

ದುರ್ಯೋಧನ! ಪುರುಷರ್ಷಭ! ನಿನ್ನ ಕುರಿತು ನಾನು ಶೋಕಿಸುತ್ತಿಲ್ಲ! ಪುತ್ರರನ್ನು ಕಳೆದುಕೊಂಡ ಗಾಂಧಾರಿ ಮತ್ತು ನಿನ್ನ ತಂದೆಯ ಕುರಿತು ಶೋಕಿಸುತ್ತಿದ್ದೇನೆ! ಶೋಕಿಸುತ್ತಾ ಅವರಿಬ್ಬರೂ ಈ ಭೂಮಿಯಲ್ಲಿ ಭಿಕ್ಷುಕರಂತೆ ಸುತ್ತುವರಲ್ಲ ಎಂದು ಶೋಕಿಸುತ್ತಿದ್ದೇನೆ!

10009030a ಧಿಗಸ್ತು ಕೃಷ್ಣಂ ವಾರ್ಷ್ಣೇಯಮರ್ಜುನಂ ಚಾಪಿ ದುರ್ಮತಿಂ|

10009030c ಧರ್ಮಜ್ಞಮಾನಿನೌ ಯೌ ತ್ವಾಂ ವಧ್ಯಮಾನಮುಪೇಕ್ಷತಾಂ||

ವಾರ್ಷ್ಣೇಯ ಕೃಷ್ಣನಿಗೆ ಮತ್ತು ದುರ್ಮತಿ ಅರ್ಜುನನಿಗೆ ಧಿಕ್ಕಾರ! ಧರ್ಮಜ್ಞರೆಂದು ಗೌರವಿಸಲ್ಪಡುವ ಅವರಿಬ್ಬರೂ ನಿನ್ನ ವಧೆಯನ್ನು ಉಪೇಕ್ಷಿಸಲಿಲ್ಲ.

10009031a ಪಾಂಡವಾಶ್ಚಾಪಿ ತೇ ಸರ್ವೇ ಕಿಂ ವಕ್ಷ್ಯಂತಿ ನರಾಧಿಪಾನ್|

10009031c ಕಥಂ ದುರ್ಯೋಧನೋಽಸ್ಮಾಭಿರ್ಹತ ಇತ್ಯನಪತ್ರಪಾಃ||

ನರಾಧಿಪ ಪಾಂಡವರೆಲ್ಲರೂ ಕೂಡ ಏನು ಹೇಳಿಕೊಳ್ಳುತ್ತಾರೆ? ನಮ್ಮಿಂದ ದುರ್ಯೋಧನನು ಹೇಗೆ ಹತನಾದನು ಎಂದು ಹೇಗೆತಾನೇ ಹೇಳಿಕೊಳ್ಳುತ್ತಾರೆ?

10009032a ಧನ್ಯಸ್ತ್ವಮಸಿ ಗಾಂಧಾರೇ ಯಸ್ತ್ವಮಾಯೋಧನೇ ಹತಃ|

10009032c ಪ್ರಯಾತೋಽಭಿಮುಖಃ ಶತ್ರೂನ್ಧರ್ಮೇಣ ಪುರುಷರ್ಷಭ||

ಗಾಂಧಾರೇ! ಪುರುಷರ್ಷಭ! ಶತ್ರುಗಳನ್ನು ಧರ್ಮದಿಂದಲೇ ಎದುರಿಸಿ ಹೋರಾಡಿ ಹತನಾದ ಪ್ರಾಯಶಃ ನೀನೇ ಧನ್ಯ!

10009033a ಹತಪುತ್ರಾ ಹಿ ಗಾಂಧಾರೀ ನಿಹತಜ್ಞಾತಿಬಾಂಧವಾ|

10009033c ಪ್ರಜ್ಞಾಚಕ್ಷುಶ್ಚ ದುರ್ಧರ್ಷಃ ಕಾಂ ಗತಿಂ ಪ್ರತಿಪತ್ಸ್ಯತೇ||

ಹತಪುತ್ರಳಾದ ಮತ್ತು ಬಂಧು-ಬಾಂಧವರನ್ನು ಕಳೆದುಕೊಂಡಿರುವ ಗಾಂಧಾರೀ ಮತ್ತು ದುರ್ಧರ್ಷ ಪ್ರಜ್ಞಾಚಕ್ಷುವು ಯಾವ ಗತಿಯನ್ನು ಹೊಂದುತ್ತಾರೆ?

10009034a ಧಿಗಸ್ತು ಕೃತವರ್ಮಾಣಂ ಮಾಂ ಕೃಪಂ ಚ ಮಹಾರಥಂ|

10009034c ಯೇ ವಯಂ ನ ಗತಾಃ ಸ್ವರ್ಗಂ ತ್ವಾಂ ಪುರಸ್ಕೃತ್ಯ ಪಾರ್ಥಿವಂ||

ಪಾರ್ಥಿವನಾದ ನಿನ್ನನ್ನು ಹಿಂದೆಬಿಟ್ಟು ಸ್ವರ್ಗಕ್ಕೆ ಹೋಗಿರದ ಕೃತವರ್ಮ, ನಾನು ಮತ್ತು ಮಹಾರಥ ಕೃಪ ಈ ನಮಗೆ ಧಿಕ್ಕಾರವಿರಲಿ!

10009035a ದಾತಾರಂ ಸರ್ವಕಾಮಾನಾಂ ರಕ್ಷಿತಾರಂ ಪ್ರಜಾಹಿತಂ|

10009035c ಯದ್ವಯಂ ನಾನುಗಚ್ಚಾಮಸ್ತ್ವಾಂ ಧಿಗಸ್ಮಾನ್ನರಾಧಮಾನ್||

ಸರ್ವಕಾಮನೆಗಳನ್ನು ಒದಗಿಸಿಕೊಡುತ್ತಿದ್ದ, ಪ್ರಜಾಹಿತ ರಕ್ಷಕನನ್ನು ಅನುಸರಿಸದ ನರಾಧಮರಂತಿರುವ ಈ ನಮಗೆ ಧಿಕ್ಕಾರವಿರಲಿ!

10009036a ಕೃಪಸ್ಯ ತವ ವೀರ್ಯೇಣ ಮಮ ಚೈವ ಪಿತುಶ್ಚ ಮೇ|

10009036c ಸಭೃತ್ಯಾನಾಂ ನರವ್ಯಾಘ್ರ ರತ್ನವಂತಿ ಗೃಹಾಣಿ ಚ||

ನರವ್ಯಾಘ್ರ! ನಿನ್ನ ವೀರ್ಯದಿಂದಲೇ ಕೃಪನಿಗೆ, ನನಗೆ ಮತ್ತು ನನ್ನ ತಂದೆಗೆ ಸೇವಕರೊಂದಿಗೆ ಸಂಪದ್ಭರಿತ ಭವನಗಳು ಲಭಿಸಿದ್ದವು.

10009037a ಭವತ್ಪ್ರಸಾದಾದಸ್ಮಾಭಿಃ ಸಮಿತ್ರೈಃ ಸಹಬಾಂಧವೈಃ|

10009037c ಅವಾಪ್ತಾಃ ಕ್ರತವೋ ಮುಖ್ಯಾ ಬಹವೋ ಭೂರಿದಕ್ಷಿಣಾಃ||

ನಿನ್ನ ಪ್ರಸಾದದಿಂದಲೇ ನಾವುಗಳು ಮಿತ್ರರು ಮತ್ತು ಬಂಧುಗಳೊಡನೆ ಭೂರಿದಕ್ಷಿಣೆಗಳನ್ನಿತ್ತು ಅನೇಕ ಮುಖ್ಯ ಕ್ರತುಗಳನ್ನು ಮಾಡುವಂಥವರಾಗಿದ್ದೆವು.

10009038a ಕುತಶ್ಚಾಪೀದೃಶಂ ಸಾರ್ಥಮುಪಲಪ್ಸ್ಯಾಮಹೇ ವಯಂ|

10009038c ಯಾದೃಶೇನ ಪುರಸ್ಕೃತ್ಯ ತ್ವಂ ಗತಃ ಸರ್ವಪಾರ್ಥಿವಾನ್||

ನಿನ್ನಿಂದ ಇಷ್ಟೊಂದು ಸಹಾಯ-ಸಂಪತ್ತುಗಳನ್ನು ಪಡೆದಿರುವ ನಾವು ನಿನ್ನ ಮೊದಲೇ ಹೊರಟುಹೋಗಿರುವ ಸರ್ವಪಾರ್ಥಿವರಂತೆ ಏಕೆ ಹೋಗುತ್ತಿಲ್ಲ?

10009039a ವಯಮೇವ ತ್ರಯೋ ರಾಜನ್ಗಚ್ಚಂತಂ ಪರಮಾಂ ಗತಿಂ|

10009039c ಯದ್ವೈ ತ್ವಾಂ ನಾನುಗಚ್ಚಾಮಸ್ತೇನ ತಪ್ಸ್ಯಾಮಹೇ ವಯಂ||

ರಾಜನ್! ಪರಮಗತಿಯನ್ನನುಸರಿಸಿ ಹೋಗುತ್ತಿರುವ ನಿನ್ನನ್ನು ನಾವು ಮೂವರು ಮಾತ್ರ ಅನುಸರಿಸಿ ಬರುತ್ತಿಲ್ಲ ಎಂದು ನಾವು ಪರಿತಪಿಸುತ್ತಿದ್ದೇವೆ.

10009040a ತ್ವತ್ಸ್ವರ್ಗಹೀನಾ ಹೀನಾರ್ಥಾಃ ಸ್ಮರಂತಃ ಸುಕೃತಸ್ಯ ತೇ|

10009040c ಕಿಂ ನಾಮ ತದ್ಭವೇತ್ಕರ್ಮ ಯೇನ ತ್ವಾನುವ್ರಜೇಮ ವೈ||

ನಿನ್ನನ್ನು ಕಳೆದುಕೊಂಡ ನಾವು ನಿನ್ನ ಸುಕೃತಗಳನ್ನು ಸ್ಮರಿಸಿಕೊಳ್ಳುತ್ತಾ ಸ್ವರ್ಗಹೀನರಾಗಿ, ಸಂಪತ್ತುಗಳನ್ನು ಕಳೆದುಕೊಂಡು ಸುತ್ತುತ್ತಿರುತ್ತೇವೆ. ನಿನ್ನನ್ನು ಅನುಸರಿಸಿ ಬರದೇ ಇರುವ ನಮ್ಮ ಈ ಕೃತ್ಯಕ್ಕೆ ಯಾವ ಹೆಸರಿದೆ?

10009041a ದುಃಖಂ ನೂನಂ ಕುರುಶ್ರೇಷ್ಠ ಚರಿಷ್ಯಾಮೋ ಮಹೀಮಿಮಾಂ|

10009041c ಹೀನಾನಾಂ ನಸ್ತ್ವಯಾ ರಾಜನ್ಕುತಃ ಶಾಂತಿಃ ಕುತಃ ಸುಖಂ||

ಕುರುಶ್ರೇಷ್ಠ! ರಾಜನ್! ನೀನಿಲ್ಲದೇ ದುಃಖದಿಂದ ಈ ಭೂಮಿಯನ್ನು ಸುತ್ತುವ ನಮಗೆ ಎಲ್ಲಿಯ ಶಾಂತಿ ಮತ್ತು ಎಲ್ಲಿಯ ಸುಖ?

10009042a ಗತ್ವೈತಾಂಸ್ತು ಮಹಾರಾಜ ಸಮೇತ್ಯ ತ್ವಂ ಮಹಾರಥಾನ್|

10009042c ಯಥಾಶ್ರೇಷ್ಠಂ ಯಥಾಜ್ಯೇಷ್ಠಂ ಪೂಜಯೇರ್ ವಚನಾನ್ಮಮ||

ಮಹಾರಾಜ! ನೀನಾದರೋ ಈ ಮೊದಲೇ ಹೋಗಿರುವ ಮಹಾರಥರನ್ನು ಸೇರಿ ಯಥಾಶ್ರೇಷ್ಠವಾಗಿ ಯಥಾಜ್ಯೇಷ್ಠವಾಗಿ ನನ್ನ ಮಾತಿನಿಂದ ಗೌರವಿಸು!

10009043a ಆಚಾರ್ಯಂ ಪೂಜಯಿತ್ವಾ ಚ ಕೇತುಂ ಸರ್ವಧನುಷ್ಮತಾಂ|

10009043c ಹತಂ ಮಯಾದ್ಯ ಶಂಸೇಥಾ ಧೃಷ್ಟದ್ಯುಮ್ನಂ ನರಾಧಿಪ||

ನರಾಧಿಪ! ಸರ್ವಧನುಷ್ಮತರಿಗೆ ಕೇತುಪ್ರಾಯನಾದ ಆಚಾರ್ಯನನ್ನು ಸಂಪೂಜಿಸಿ ಇಂದು ನಾನು ಧೃಷ್ಟದ್ಯುಮ್ನನನ್ನು ಸಂಹರಿಸಿದೆ ಎನ್ನುವುದನ್ನು ಹೇಳು.

10009044a ಪರಿಷ್ವಜೇಥಾ ರಾಜಾನಂ ಬಾಹ್ಲಿಕಂ ಸುಮಹಾರಥಂ|

10009044c ಸೈಂಧವಂ ಸೋಮದತ್ತಂ ಚ ಭೂರಿಶ್ರವಸಮೇವ ಚ||

10009045a ತಥಾ ಪೂರ್ವಗತಾನನ್ಯಾನ್ಸ್ವರ್ಗಂ ಪಾರ್ಥಿವಸತ್ತಮಾನ್|

10009045c ಅಸ್ಮದ್ವಾಕ್ಯಾತ್ಪರಿಷ್ವಜ್ಯ ಪೃಚ್ಚೇಥಾಸ್ತ್ವಮನಾಮಯಂ||

ಈ ಮೊದಲೇ ಸ್ವರ್ಗಕ್ಕೆ ಹೊರಟುಹೋಗಿರುವ ಪಾರ್ಥಿವಸತ್ತಮರನ್ನು ಸುಮಹಾರಥ ಬಾಹ್ಲಿಕ ರಾಜ, ಸೈಂಧವ, ಸೋಮದತ್ತ ಮತ್ತು ಭೂರಿಶ್ರವರನ್ನು ನನ್ನ ಈ ಮಾತಿನಿಂದ ಆಲಂಗಿಸಿ ಅವರ ಕುಶಲವನ್ನು ಪ್ರಶ್ನಿಸು.”

10009046a ಇತ್ಯೇವಮುಕ್ತ್ವಾ ರಾಜಾನಂ ಭಗ್ನಸಕ್ಥಮಚೇತಸಂ|

10009046c ಅಶ್ವತ್ಥಾಮಾ ಸಮುದ್ವೀಕ್ಷ್ಯ ಪುನರ್ವಚನಮಬ್ರವೀತ್||

ಹೀಗೆ ಹೇಳಿ ಅಶ್ವತ್ಥಾಮನು ತೊಡೆಯೊಡೆದು ಅಚೇತಸನಾಗಿದ್ದ ರಾಜನನ್ನು ದಿಟ್ಟಿಸಿನೋಡುತ್ತಾ ಪುನಃ ಈ ಮಾತನ್ನಾಡಿದನು:

10009047a ದುರ್ಯೋಧನ ಜೀವಸಿ ಚೇದ್ವಾಚಂ ಶ್ರೋತ್ರಸುಖಾಂ ಶೃಣು|

10009047c ಸಪ್ತ ಪಾಂಡವತಃ ಶೇಷಾ ಧಾರ್ತರಾಷ್ಟ್ರಾಸ್ತ್ರಯೋ ವಯಂ||

“ದುರ್ಯೋಧನ! ನೀನಿನ್ನೂ ಜೀವಿಸಿರುವೆ! ಕೇಳಲು ಇಂಪಾಗಿರುವ ಈ ಮಾತನ್ನು ಕೇಳು. ಈಗ ಪಾಂಡವರಲ್ಲಿ ಕೇವಲು ಏಳುಮಂದಿ ಮತ್ತು ಧಾರ್ತರಾಷ್ಟ್ರರಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡಿದ್ದೇವೆ!

10009048a ತೇ ಚೈವ ಭ್ರಾತರಃ ಪಂಚ ವಾಸುದೇವೋಽಥ ಸಾತ್ಯಕಿಃ|

10009048c ಅಹಂ ಚ ಕೃತವರ್ಮಾ ಚ ಕೃಪಃ ಶಾರದ್ವತಸ್ತಥಾ||

ಅವರು ಐವರು ಸಹೋದರರು, ವಾಸುದೇವ ಮತ್ತು ಸಾತ್ಯಕಿ. ಹಾಗೆಯೇ ನಾನು, ಕೃತವರ್ಮ ಮತ್ತು ಶಾರದ್ವತ ಕೃಪ.

10009049a ದ್ರೌಪದೇಯಾ ಹತಾಃ ಸರ್ವೇ ಧೃಷ್ಟದ್ಯುಮ್ನಸ್ಯ ಚಾತ್ಮಜಾಃ|

10009049c ಪಾಂಚಾಲಾ ನಿಹತಾಃ ಸರ್ವೇ ಮತ್ಸ್ಯಶೇಷಂ ಚ ಭಾರತ||

ಭಾರತ! ದ್ರೌಪದೇಯರೆಲ್ಲರೂ ಹತರಾಗಿದ್ದಾರೆ. ಧೃಷ್ಟದ್ಯುಮ್ನನೂ, ಅವನ ಮಕ್ಕಳೂ, ಪಾಂಚಾಲರೂ ಮತ್ತು ಅಳಿದುಳಿದಿದ್ದ ಮತ್ಸ್ಯರು ಎಲ್ಲರೂ ಹತರಾಗಿದ್ದಾರೆ.

10009050a ಕೃತೇ ಪ್ರತಿಕೃತಂ ಪಶ್ಯ ಹತಪುತ್ರಾ ಹಿ ಪಾಂಡವಾಃ|

10009050c ಸೌಪ್ತಿಕೇ ಶಿಬಿರಂ ತೇಷಾಂ ಹತಂ ಸನರವಾಹನಂ||

ಪ್ರತೀಕಾರ ಮಾಡಿದುದನ್ನು ನೋಡು! ಪಾಂಡವರೂ ಹತಪುತ್ರರಾಗಿದ್ದಾರೆ. ಶಿಬಿರದಲ್ಲಿ ಮಲಗಿರುವ ಅವರೆಲ್ಲರೂ ಸೈನಿಕ-ವಾಹನಗಳೊಂದಿಗೆ ಹತರಾಗಿದ್ದಾರೆ.

10009051a ಮಯಾ ಚ ಪಾಪಕರ್ಮಾಸೌ ಧೃಷ್ಟದ್ಯುಮ್ನೋ ಮಹೀಪತೇ|

10009051c ಪ್ರವಿಶ್ಯ ಶಿಬಿರಂ ರಾತ್ರೌ ಪಶುಮಾರೇಣ ಮಾರಿತಃ||

ಮಹೀಪತೇ! ರಾತ್ರಿ ಶಿಬಿರವನ್ನು ಪ್ರವೇಶಿಸಿ ನಾನು ಪಾಪಕರ್ಮಿ ಧೃಷ್ಟದ್ಯುಮ್ನನನ್ನು ಪಶುವಂತೆ ಗುದ್ದಿ ಕೊಂದೆನು.”

10009052a ದುರ್ಯೋಧನಸ್ತು ತಾಂ ವಾಚಂ ನಿಶಮ್ಯ ಮನಸಃ ಪ್ರಿಯಾಂ|

10009052c ಪ್ರತಿಲಭ್ಯ ಪುನಶ್ಚೇತ ಇದಂ ವಚನಮಬ್ರವೀತ್||

ಮನಸ್ಸಿಗೆ ಪ್ರಿಯವಾದ ಆ ಮಾತನ್ನು ಕೇಳಿ ದುರ್ಯೋಧನನು ಪುನಃ ಚೇತರಿಸಿಕೊಂಡು ಈ ಮಾತನ್ನಾಡಿದನು:

10009053a ನ ಮೇಽಕರೋತ್ತದ್ಗಾಂಗೇಯೋ ನ ಕರ್ಣೋ ನ ಚ ತೇ ಪಿತಾ|

10009053c ಯತ್ತ್ವಯಾ ಕೃಪಭೋಜಾಭ್ಯಾಂ ಸಹಿತೇನಾದ್ಯ ಮೇ ಕೃತಂ||

“ಗಾಂಗೇಯ, ಕರ್ಣ ಮತ್ತು ನಿನ್ನ ತಂದೆ ಇವರು ಮಾಡಲಾಗದ ಕಾರ್ಯವನ್ನು ಇಂದು ನೀನು ಕೃಪ-ಭೋಜರನ್ನು ಕೂಡಿಕೊಂಡು ಮಾಡಿದ್ದೀಯೆ!

10009054a ಸ ಚೇತ್ಸೇನಾಪತಿಃ ಕ್ಷುದ್ರೋ ಹತಃ ಸಾರ್ಧಂ ಶಿಖಂಡಿನಾ|

10009054c ತೇನ ಮನ್ಯೇ ಮಘವತಾ ಸಮಮಾತ್ಮಾನಮದ್ಯ ವೈ||

ಶಿಖಂಡಿಯೊಡನೆ ಆ ಕ್ಷುದ್ರ ಸೇನಾಪತಿಯು ನಿನ್ನಿಂದ ಹತನಾದನೆಂದರೆ ಇಂದು ನಾನು ನನ್ನನ್ನು ಮಘವತ ಇಂದ್ರನ ಸಮನೆಂದೇ ಅಂದುಕೊಳ್ಳುತ್ತೇನೆ!

10009055a ಸ್ವಸ್ತಿ ಪ್ರಾಪ್ನುತ ಭದ್ರಂ ವಃ ಸ್ವರ್ಗೇ ನಃ ಸಂಗಮಃ ಪುನಃ|

10009055c ಇತ್ಯೇವಮುಕ್ತ್ವಾ ತೂಷ್ಣೀಂ ಸ ಕುರುರಾಜೋ ಮಹಾಮನಾಃ|

10009055e ಪ್ರಾಣಾನುದಸೃಜದ್ವೀರಃ ಸುಹೃದಾಂ ಶೋಕಮಾದಧತ್||

ಒಳ್ಳೆಯದಾಗಲಿ! ನಿಮಗೆ ಮಂಗಳವಾಗಲಿ! ನಾವು ಪುನಃ ಸ್ವರ್ಗದಲ್ಲಿ ಸಂಧಿಸೋಣ!” ಎಂದು ಹೇಳಿ ಮಹಾಮನಸ್ವಿ ಕುರುರಾಜನು ಸುಮ್ಮನಾದನು. ಕೂಡಲೇ ಆ ವೀರನು ಸುಹೃದಯರಿಗೆ ಶೋಕವನ್ನು ವಹಿಸಿಕೊಟ್ಟು ಪ್ರಾಣಗಳನ್ನು ತೊರೆದನು.

10009056a ತಥೇತಿ ತೇ ಪರಿಷ್ವಕ್ತಾಃ ಪರಿಷ್ವಜ್ಯ ಚ ತಂ ನೃಪಂ|

10009056c ಪುನಃ ಪುನಃ ಪ್ರೇಕ್ಷಮಾಣಾಃ ಸ್ವಕಾನಾರುರುಹೂ ರಥಾನ್||

ಹಾಗೆಯೇ ಆಗಲೆಂದು ಅವರು ಆ ನೃಪನನ್ನು ಆಲಂಗಿಸಿ, ಪುನಃ ಪುನಃ ಅವನನ್ನು ನೋಡುತ್ತಾ ತಮ್ಮ ತಮ್ಮ ರಥಗಳನ್ನು ಏರಿದರು.

10009057a ಇತ್ಯೇವಂ ತವ ಪುತ್ರಸ್ಯ ನಿಶಮ್ಯ ಕರುಣಾಂ ಗಿರಂ|

10009057c ಪ್ರತ್ಯೂಷಕಾಲೇ ಶೋಕಾರ್ತಃ ಪ್ರಾಧಾವಂ ನಗರಂ ಪ್ರತಿ||

ಹೀಗೆ ಬೆಳಗಿನಜಾವದಲ್ಲಿ ನಿನ್ನ ಮಗನ ಕರುಣಾಜನಕ ಮಾತನ್ನು ಕೇಳಿ ಶೋಕಾರ್ತನಾಗಿ ನಗರಕ್ಕೆ ಓಡಿ ಬಂದೆನು.

10009058a ತವ ಪುತ್ರೇ ಗತೇ ಸ್ವರ್ಗಂ ಶೋಕಾರ್ತಸ್ಯ ಮಮಾನಘ|

10009058c ಋಷಿದತ್ತಂ ಪ್ರನಷ್ಟಂ ತದ್ದಿವ್ಯದರ್ಶಿತ್ವಮದ್ಯ ವೈ||

ಅನಘ! ಇಂದು ನಿನ್ನ ಮಗನು ಸ್ವರ್ಗಕ್ಕೆ ಹೊರಟುಹೋಗಲು ಶೋಕಾರ್ತನಾದ ನನಗೆ ಋಷಿಯು ಕೊಟ್ಟಿದ್ದ ಆ ದಿವ್ಯದರ್ಶಿತ್ವವು ಕಳೆದುಹೋಯಿತು!””

10009059 ವೈಶಂಪಾಯನ ಉವಾಚ|

10009059a ಇತಿ ಶ್ರುತ್ವಾ ಸ ನೃಪತಿಃ ಪುತ್ರಜ್ಞಾತಿವಧಂ ತದಾ|

10009059c ನಿಃಶ್ವಸ್ಯ ದೀರ್ಘಮುಷ್ಣಂ ಚ ತತಶ್ಚಿಂತಾಪರೋಽಭವತ್||

ವೈಶಂಪಾಯನನು ಹೇಳಿದನು: “ಈ ಪುತ್ರ-ಬಂಧುಗಳ ವಧೆಯನ್ನು ಕೇಳಿ ಆ ನೃಪತಿಯು ದೀರ್ಘವಾದ ಬಿಸಿ ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ದುರ್ಯೋಧನಪ್ರಾಣತ್ಯಾಗೇ ನವಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ದುರ್ಯೋಧನಪ್ರಾಣತ್ಯಾಗ ಎನ್ನುವ ಒಂಭತ್ತನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸೌಪ್ತಿಕಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಸೌಪ್ತಿಕಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೯/೧೮, ಉಪಪರ್ವಗಳು-೭೮/೧೦೦, ಅಧ್ಯಾಯಗಳು-೧೨೯೨/೧೯೯೫, ಶ್ಲೋಕಗಳು-೪೯೦೨೩/೭೩೭೮೪

Comments are closed.