Sabha Parva: Chapter 22

ಸಭಾ ಪರ್ವ: ಜರಾಸಂಧವಧ ಪರ್ವ

೨೨

ಜರಾಸಂಧವಧೆ

ಜರಾಸಂಧನ ವಧೆ (೧-೧೦). ಸೆರೆಯಲ್ಲಿದ್ದ ರಾಜರ ಬಿಡುಗಡೆ ಮಾಡಿ ಜರಾಸಂಧನ ರಥವನ್ನು ಓಡಿಸಿದುದು (೧೧-೨೮). ಬಿಡುಗಡೆ ಹೊಂದಿದ ರಾಜರು ಕೃಷ್ಣನನ್ನು ಸತ್ಕರಿಸಿದುದು (೨೯-೫೮).

Image result for jarasandha and bhima fight02022001 ವೈಶಂಪಾಯನ ಉವಾಚ|

02022001a ಭೀಮಸೇನಸ್ತತಃ ಕೃಷ್ಣಮುವಾಚ ಯದುನಂದನಂ|

02022001c ಬುದ್ಧಿಮಾಸ್ಥಾಯ ವಿಪುಲಾಂ ಜರಾಸಂಧಜಿಘಾಂಸಯಾ||

ವೈಶಂಪಾಯನನು ಹೇಳಿದನು: “ಆಗ ಭೀಮಸೇನನು ಜರಾಸಂಧನನ್ನು ಕೊಲ್ಲುವ ಸಂಪೂರ್ಣ ಮನಸ್ಸುಮಾಡಿ ಯದುನಂದನ ಕೃಷ್ಣನಿಗೆ ಹೇಳಿದನು:

02022002a ನಾಯಂ ಪಾಪೋ ಮಯಾ ಕೃಷ್ಣ ಯುಕ್ತಃ ಸ್ಯಾದನುರೋಧಿತುಂ|

02022002c ಪ್ರಾಣೇನ ಯದುಶಾರ್ದೂಲ ಬದ್ಧವಂಕ್ಷಣವಾಸಸಾ||

“ಕೃಷ್ಣ! ಯದುಶಾರ್ದೂಲ! ಕಚ್ಚೆ ಕಟ್ಟಿ ನಿಂತಿರುವ ನನ್ನಿಂದ ಈ ಪಾಪಿಯು ಪ್ರಾಣಕ್ಕೆ ಅರ್ಹನಲ್ಲ.”

02022003a ಏವಮುಕ್ತಸ್ತತಃ ಕೃಷ್ಣಃ ಪ್ರತ್ಯುವಾಚ ವೃಕೋದರಂ|

02022003c ತ್ವರಯನ್ಪುರುಷವ್ಯಾಘ್ರೋ ಜರಾಸಂಧವಧೇಪ್ಸಯಾ||

ಇದನ್ನು ಕೇಳಿದ ಪುರುಷವ್ಯಾಘ್ರ ಕೃಷ್ಣನು ಜರಾಸಂಧನ ವಧೆಯನ್ನು ಬಯಸಿ ವೃಕೋದರನಿಗೆ ತ್ವರೆಮಾಡಲು ಹೇಳಿದನು:

02022004a ಯತ್ತೇ ದೈವಂ ಪರಂ ಸತ್ತ್ವಂ ಯಚ್ಚ ತೇ ಮಾತರಿಶ್ವನಃ|

02022004c ಬಲಂ ಭೀಮ ಜರಾಸಂಧೇ ದರ್ಶಯಾಶು ತದದ್ಯ ನಃ||

“ಹಾಗಾದರೆ ತಕ್ಷಣವೇ ನೀನು ದೇವತೆಗಳಿಂದ ಪಡೆದಿರುವ ಸತ್ವವನ್ನು ತೋರಿಸು! ಭೀಮ! ಈ ದಿನ ವಾಯುದೇವನ ಬಲವನ್ನು ಜರಾಸಂಧನ ಮೇಲೆ ಪ್ರಯೋಗಿಸಿ ತೋರಿಸು!”

02022005a ಏವಮುಕ್ತಸ್ತದಾ ಭೀಮೋ ಜರಾಸಂಧಮರಿಂದಮಃ|

02022005c ಉತ್ಕ್ಷಿಪ್ಯ ಭ್ರಾಮಯದ್ರಾಜನ್ಬಲವಂತಂ ಮಹಾಬಲಃ||

02022006a ಭ್ರಾಮಯಿತ್ವಾ ಶತಗುಣಂ ಭುಜಾಭ್ಯಾಂ ಭರತರ್ಷಭ|

02022006c ಬಭಂಜ ಪೃಷ್ಠೇ ಸಂಕ್ಷಿಪ್ಯ ನಿಷ್ಪಿಷ್ಯ ವಿನನಾದ ಚ||

ರಾಜನ್! ಭರತರ್ಷಭ! ಇದನ್ನು ಕೇಳಿದ ಅರಿಂದಮ ಮಹಾಬಲಿ ಭೀಮನು ಜರಾಸಂಧನನ್ನು ಬಲವಂತವಾಗಿ ಮೇಲಕ್ಕೆತ್ತಿ ತನ್ನ ಭುಜಗಳಿಂದ ನೂರು ಬಾರಿ ಅವನನ್ನು ತಿರುಗಿಸಿ, ತನ್ನ ತೊಡೆಯ ಮೇಲೆ ಬೀಳಿಸಿ, ಅವನ ಬೆನ್ನನ್ನು ಮುರಿದು, ದೇಹವನ್ನು ತುಳಿದು ಗರ್ಜಿಸಿದನು.

02022007a ತಸ್ಯ ನಿಷ್ಪಿಷ್ಯಮಾಣಸ್ಯ ಪಾಂಡವಸ್ಯ ಚ ಗರ್ಜತಃ|

02022007c ಅಭವತ್ತುಮುಲೋ ನಾದಃ ಸರ್ವಪ್ರಾಣಿಭಯಂಕರಃ||

ಅವನು ಕೆಳಗೆ ಬೀಳಲು ಮತ್ತು ಪಾಂಡವನು ಗರ್ಜಿಸಲು ಸರ್ವಪ್ರಾಣಿಗಳಿಗೂ ಭಯವನ್ನುಂಟುಮಾಡುವ ತುಮುಲವು ಕೇಳಿಬಂದಿತು.

02022008a ವಿತ್ರೇಸುರ್ಮಾಗಧಾಃ ಸರ್ವೇ ಸ್ತ್ರೀಣಾಂ ಗರ್ಭಾಶ್ಚ ಸುಸ್ರುವುಃ|

02022008c ಭೀಮಸೇನಸ್ಯ ನಾದೇನ ಜರಾಸಂಧಸ್ಯ ಚೈವ ಹ||

ಭೀಮಸೇನ ಜರಾಸಂಧರ ಗರ್ಜನೆಗಳನ್ನು ಕೇಳಿ ಸರ್ವ ಮಾಗಧರೂ ತಲೆತಿರುಗಿ ಬಿದ್ದರು ಮತ್ತು ಗರ್ಭಿಣಿ ಮಹಿಳೆಯರಿಗೆ ಗರ್ಭಪಾತವಾಯಿತು.

02022009a ಕಿಂ ನು ಸ್ವಿದ್ಧಿಮವಾನ್ಭಿನ್ನಃ ಕಿಂ ನು ಸ್ವಿದ್ದೀರ್ಯತೇ ಮಹೀ|

02022009c ಇತಿ ಸ್ಮ ಮಾಗಧಾ ಜಜ್ಞುರ್ಭೀಮಸೇನಸ್ಯ ನಿಸ್ವನಾತ್||

ಭೀಮಸೇನನ ಗರ್ಜನೆಯನ್ನು ಕೇಳಿದ ಮಾಗಧರು ಹಿಮಾಲಯವೇ ಸೀಳಿಹೋಯಿತೇ ಅಥವಾ ಭೂಮಿಯೇ ಕುಸಿದು ಹೋಯಿತೇ ಎಂದು ಯೋಚಿಸಿದರು.

02022010a ತತೋ ರಾಜಕುಲದ್ವಾರಿ ಪ್ರಸುಪ್ತಮಿವ ತಂ ನೃಪಂ|

02022010c ರಾತ್ರೌ ಪರಾಸುಮುತ್ಸೃಜ್ಯ ನಿಶ್ಚಕ್ರಮುರರಿಂದಮಾಃ||

ಅನಂತರ ಆ ಅರಿಂದಮರು ನಿದ್ದೆಯಲ್ಲಿರುವಂತೆ ತೋರುತ್ತಿದ್ದ ಮೃತನೃಪತಿಯನ್ನು ರಾಜಕುಲದ್ವಾರದಲ್ಲಿಯೇ ಬಿಟ್ಟು ಕತ್ತಲೆಯಲ್ಲಿ ಹೊರಟುಹೋದರು.

02022011a ಜರಾಸಂಧರಥಂ ಕೃಷ್ಣೋ ಯೋಜಯಿತ್ವಾ ಪತಾಕಿನಂ|

02022011c ಆರೋಪ್ಯ ಭ್ರಾತರೌ ಚೈವ ಮೋಕ್ಷಯಾಮಾಸ ಬಾಂಧವಾನ್||

ಕೃಷ್ಣನು ಜರಾಸಂಧನ ಪತಾಕಯುಕ್ತ ರಥವನ್ನು ಕಟ್ಟಿ, ಭ್ರಾತೃಗಳಿಗೆ ಅದನ್ನು ಏರಲು ಹೇಳಿ, ಬಾಂಧವರನ್ನು ಬಿಡುಗಡೆಗೊಳಿಸಿದನು.

02022012a ತೇ ವೈ ರತ್ನಭುಜಂ ಕೃಷ್ಣಂ ರತ್ನಾರ್ಹಂ ಪೃಥಿವೀಶ್ವರಾಃ|

02022012c ರಾಜಾನಶ್ಚಕ್ರುರಾಸಾದ್ಯ ಮೋಕ್ಷಿತಾ ಮಹತೋ ಭಯಾತ್||

ಮಹಾಭಯದಿಂದ ಬಿಡುಗಡೆ ಹೊಂದಿದ ಪೃಥಿವೀಶ್ವರ ರಾಜರು ರತ್ನಭುಜ ಕೃಷ್ಣನಿಗೆ ರತ್ನಗಳನ್ನಿತ್ತು ಸತ್ಕರಿಸಿದರು.

02022013a ಅಕ್ಷತಃ ಶಸ್ತ್ರಸಂಪನ್ನೋ ಜಿತಾರಿಃ ಸಹ ರಾಜಭಿಃ|

02022013c ರಥಮಾಸ್ಥಾಯ ತಂ ದಿವ್ಯಂ ನಿರ್ಜಗಾಮ ಗಿರಿವ್ರಜಾತ್||

ಆ ಅಕ್ಷತ, ಶಸ್ತ್ರಸಂಪನ್ನ ಜಿತಾರಿಯು ದಿವ್ಯರಥವನ್ನೇರಿ ರಾಜರೊಡನೆ ಗಿರಿವ್ರಜದಿಂದ ನಿರ್ಗಮಿಸಿದನು.

02022014a ಯಃ ಸ ಸೋದರ್ಯವಾನ್ನಾಮ ದ್ವಿಯೋಧಃ ಕೃಷ್ಣಸಾರಥಿಃ|

02022014c ಅಭ್ಯಾಸಘಾತೀ ಸಂದೃಶ್ಯೋ ದುರ್ಜಯಃ ಸರ್ವರಾಜಭಿಃ||

ಇಬ್ಬರು ಯೋಧರು ಮತ್ತು ಕೃಷ್ಣನು ಸಾರಥಿಯಾಗಿರುವ, ಕೊಲ್ಲುವ ಅಭ್ಯಾಸವನ್ನಿಟ್ಟುಕೊಂಡಿರುವ, ಸರ್ವ ರಾಜರಿಗೂ ದುರ್ಜಯವಾದ ಆ ರಥವು ತನಗೆ ತಕ್ಕವರನ್ನು ಪಡೆದುಕೊಂಡಂತೆ ಕಂಡುಬಂದಿತು.

02022015a ಭೀಮಾರ್ಜುನಾಭ್ಯಾಂ ಯೋಧಾಭ್ಯಾಮಾಸ್ಥಿತಃ ಕೃಷ್ಣಸಾರಥಿಃ|

02022015c ಶುಶುಭೇ ರಥವರ್ಯೋಽಸೌ ದುರ್ಜಯಃ ಸರ್ವಧನ್ವಿಭಿಃ||

ಭೀಮಾರ್ಜುನರು ಕುಳಿತಿರುವ, ಕೃಷ್ಣನ ಸಾರಥ್ಯದಲ್ಲಿರುವ, ಸರ್ವ ಧನ್ವಿಗಳಿಗೂ ದುರ್ಜಯವಾದ ಆ ರಥವು ಸುಂದರವಾಗಿ ಹೊಳೆಯುತ್ತಿತ್ತು.

02022016a ಶಕ್ರವಿಷ್ಣೂ ಹಿ ಸಂಗ್ರಾಮೇ ಚೇರತುಸ್ತಾರಕಾಮಯೇ|

02022016c ರಥೇನ ತೇನ ತಂ ಕೃಷ್ಣ ಉಪಾರುಹ್ಯ ಯಯೌ ತದಾ||

ತಾರಕನೊಡನೆಯ ಸಂಗ್ರಾಮದ ಸಮಯದಲ್ಲಿ ಶಕ್ರ ಮತ್ತು ವಿಷ್ಣು ಏರಿ ಹೋಗುತ್ತಿದ್ದ ರಥವನ್ನೇ[1] ಕೃಷ್ಣನು ಏರಿ ಹೊರಟನು.

02022017a ತಪ್ತಚಾಮೀಕರಾಭೇಣ ಕಿಂಕಿಣೀಜಾಲಮಾಲಿನಾ|

02022017c ಮೇಘನಿರ್ಘೋಷನಾದೇನ ಜೈತ್ರೇಣಾಮಿತ್ರಘಾತಿನಾ||

02022018a ಯೇನ ಶಕ್ರೋ ದಾನವಾನಾಂ ಜಘಾನ ನವತೀರ್ನವ|

02022018c ತಂ ಪ್ರಾಪ್ಯ ಸಮಹೃಷ್ಯಂತ ರಥಂ ತೇ ಪುರುಷರ್ಷಭಾಃ||

ಯಾವ ರಥವನ್ನೇರಿ ಶಕ್ರನು ತೊಂಭತ್ತೊಂಭತ್ತು ದಾನವರನ್ನು ಸಂಹರಿಸಿದ್ದನೋ ಆ ಹದಮಾಡಿದ ಚಿನ್ನದಂತೆ ಹೊಳೆಯುತ್ತಿರುವ, ಕಿಂಕಿಣೀಜಾಲ ಮಾಲೆಗಳಿಂದ ಅಲಂಕೃತವಾದ, ಮಳೆಗಾಲದ ಮೋಡಗಳಂತೆ ಶಬ್ಧಮಾಡುತ್ತಿದ್ದ, ವಿಜಯೀ, ಶತ್ರುಘಾತಿ ರಥವನ್ನು ಪಡೆದ ಪುರುಶರ್ಷಭರು ಅತ್ಯಂತ ಸಂತೋಷಗೊಂಡರು.

02022019a ತತಃ ಕೃಷ್ಣಂ ಮಹಾಬಾಹುಂ ಭ್ರಾತೃಭ್ಯಾಂ ಸಹಿತಂ ತದಾ|

02022019c ರಥಸ್ಥಂ ಮಾಗಧಾ ದೃಷ್ಟ್ವಾ ಸಮಪದ್ಯಂತ ವಿಸ್ಮಿತಾಃ||

ಭ್ರಾತೃಗಳ ಸಹಿತ ಮಹಾಬಾಹು ಕೃಷ್ಣನನ್ನು ಆ ರಥದಲ್ಲಿ ಕುಳಿತಿದ್ದುದನ್ನು ನೋಡಿದ ಮಾಗಧರು ವಿಸ್ಮಿತರಾದರು.

02022020a ಹಯೈರ್ದಿವ್ಯೈಃ ಸಮಾಯುಕ್ತೋ ರಥೋ ವಾಯುಸಮೋ ಜವೇ|

02022020c ಅಧಿಷ್ಠಿತಃ ಸ ಶುಶುಭೇ ಕೃಷ್ಣೇನಾತೀವ ಭಾರತ||

ಭಾರತ! ದಿವ್ಯಾಶ್ವಗಳನ್ನು ಹೊಂದಿದ್ದ, ವಾಯುಸಮ ವೇಗವುಳ್ಳ ಆ ರಥವು ಕೃಷ್ಣನು ಏರುತ್ತಿದ್ದಂತೆ ಪ್ರಕಾಶಗೊಂಡು ಇನ್ನೂ ಕಂಗೊಳಿಸಿತು.

02022021a ಅಸಂಗೀ ದೇವವಿಹಿತಸ್ತಸ್ಮಿನ್ರಥವರೇ ಧ್ವಜಃ|

02022021c ಯೋಜನಾದ್ದದೃಶೇ ಶ್ರೀಮಾನಿಂದ್ರಾಯುಧಸಮಪ್ರಭಃ||

ಆ ರಥದ ಮೇಲೆ ಒಂದು ಯೋಜನೆಯವರೆಗೂ ಕಾಣಿಸುವಂತೆ ಶ್ರೀಮಾನ, ಇಂದ್ರಾಯುಧದಂತೆ ಹೊಳೆಯುತ್ತಿರುವ, ದೇವವಿಹಿತ ಉತ್ತಮ ಧ್ವಜವು ಹಾರುತ್ತಿತ್ತು.

02022022a ಚಿಂತಯಾಮಾಸ ಕೃಷ್ಣೋಽಥ ಗರುತ್ಮಂತಂ ಸ ಚಾಭ್ಯಯಾತ್|

02022022c ಕ್ಷಣೇ ತಸ್ಮಿನ್ಸ ತೇನಾಸೀಚ್ಚೈತ್ಯಯೂಪ ಇವೋಚ್ಛ್ರಿತಃ||

ಆಗ ಕೃಷ್ಣನು ಗುರುತ್ಮಂತನನ್ನು ಸ್ಮರಿಸಿದನು ಮತ್ತು ಕೂಡಲೆ ಅವನು ಬಂದನು. ಅವನೊಂದಿಗೆ ಪತಾಕೆಯು ದೇವಾಲಯಗಳಲ್ಲಿನ ಧ್ವಜಸ್ಥಂಭದಂತೆ ಎತ್ತರಕ್ಕೆ ಏರಿತು.

02022023a ವ್ಯಾದಿತಾಸ್ಯೈರ್ಮಹಾನಾದೈಃ ಸಹ ಭೂತೈರ್ಧ್ವಜಾಲಯೈಃ|

02022023c ತಸ್ಥೌ ರಥವರೇ ತಸ್ಮಿನ್ಗರುತ್ಮಾನ್ಪನ್ನಗಾಶನಃ||

ಧ್ವಜದಲ್ಲಿದ್ದ ಇತರ ಭೂತಗಳು ಬಾಯಿತೆರೆದು ಮಹಾನಾದ ಮಾಡುತ್ತಿರಲು ಪನ್ನಗಾಶನ ಗುರುತ್ಮಂತನು ಆ ರಥದ ಮೇಲೆ ಏರಿದನು.

02022024a ದುರ್ನಿರೀಕ್ಷ್ಯೋ ಹಿ ಭೂತಾನಾಂ ತೇಜಸಾಭ್ಯಧಿಕಂ ಬಭೌ|

02022024c ಆದಿತ್ಯ ಇವ ಮಧ್ಯಾಹ್ನೇ ಸಹಸ್ರಕಿರಣಾವೃತಃ||

ಭೂತಗಳ ಕಣ್ಣುಕುಕ್ಕಿಸುವಂತೆ ಅವನು ಅಧಿಕ ತೇಜಸ್ಸಿನಿಂದ ಮಧ್ಯಾಹ್ನದ ಭಾಸ್ಕರನಂತೆ ಸಹಸ್ರಕಿರಣಗಳಿಂದ ಆವೃತನಾಗಿ ಬೆಳಗಿದನು.

02022025a ನ ಸ ಸಜ್ಜತಿ ವೃಕ್ಷೇಷು ಶಸ್ತ್ರೈಶ್ಚಾಪಿ ನ ರಿಷ್ಯತೇ|

02022025c ದಿವ್ಯೋ ಧ್ವಜವರೋ ರಾಜನ್ದೃಶ್ಯತೇ ದೇವಮಾನುಷೈಃ||

ರಾಜನ್! ಆ ಧ್ವಜವು ಎಂದೂ ವೃಕ್ಷಗಳಿಗೆ ಸಿಲುಕಿರಲಿಲ್ಲ, ಯಾವುದೇ ಅಸ್ತ್ರಗಳಿಂದ ಘಾಯಗೊಂಡಿರಲಿಲ್ಲ ಮತ್ತು ಆ ದಿವ್ಯ ಧ್ವಜವು ದೇವತೆಗಳಿಗೆ ಮತ್ತು ಮನುಷ್ಯರಿಗೆ ಕಾಣುತ್ತಿತ್ತು.

02022026a ತಮಾಸ್ಥಾಯ ರಥಂ ದಿವ್ಯಂ ಪರ್ಜನ್ಯಸಮನಿಸ್ವನಂ|

02022026c ನಿರ್ಯಯೌ ಪುರುಷವ್ಯಾಘ್ರಃ ಪಾಂಡವಾಭ್ಯಾಂ ಸಹಾಚ್ಯುತಃ||

ಮಳೆಗಾಲದ ಮೋಡದ ಗುಡುಗಿನಂತೆ ಶಬ್ಧಮಾಡುವ ಆ ದಿವ್ಯ ರಥವನ್ನೇರಿ ಪುರುಷವ್ಯಾಘ್ರ ಅಚ್ಯುತನು ಪಾಂಡವರಿಬ್ಬರನ್ನೊಡಗೂಡಿ ಹೊರಟನು.

02022027a ಯಂ ಲೇಭೇ ವಾಸವಾದ್ರಾಜಾ ವಸುಸ್ತಸ್ಮಾದ್ಬೃಹದ್ರಥಃ|

02022027c ಬೃಹದ್ರಥಾತ್ಕ್ರಮೇಣೈವ ಪ್ರಾಪ್ತೋ ಬಾರ್ಹದ್ರಥಂ ನೃಪಂ||

ಆ ರಥವನ್ನು ರಾಜ ವಸುವು[2] ವಾಸವನಿಂದ ಪಡೆದಿದ್ದನು ಮತ್ತು ಬೃಹದ್ರಥ[3]ನು ವಸುವಿನಿಂದ ಪಡೆದನು. ಕ್ರಮೇಣವಾಗಿ ಬೃಹದ್ರಥನಿಂದ ನೃಪ ಬಾರ್ಹದ್ರಥನು ಪಡೆದನು.

02022028a ಸ ನಿರ್ಯಯೌ ಮಹಾಬಾಹುಃ ಪುಂಡರೀಕೇಕ್ಷಣಸ್ತತಃ|

02022028c ಗಿರಿವ್ರಜಾದ್ಬಹಿಸ್ತಸ್ಥೌ ಸಮೇ ದೇಶೇ ಮಹಾಯಶಾಃ||

ಮಹಾಬಾಹು ಪುಂಡರೀಕಾಕ್ಷನು ಗಿರಿವ್ರಜದಿಂದ ಹೊರಟ ನಂತರ ಆ ಮಹಾಯಶರು ಹೊರಗಡೆ ಒಂದು ಸಮ ಪ್ರದೇಶದಲ್ಲಿ ರಥವನ್ನು ನಿಲ್ಲಿಸಿದರು.

02022029a ತತ್ರೈನಂ ನಾಗರಾಃ ಸರ್ವೇ ಸತ್ಕಾರೇಣಾಭ್ಯಯುಸ್ತದಾ|

02022029c ಬ್ರಾಹ್ಮಣಪ್ರಮುಖಾ ರಾಜನ್ವಿಧಿದೃಷ್ಟೇನ ಕರ್ಮಣಾ||

ರಾಜನ್! ಅಲ್ಲಿ ಸರ್ವ ನಾಗರೀಕರೂ ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ವಿಧಿವತ್ತಾದ ಕರ್ಮಗಳಿಂದ ಅವರನ್ನು ಸತ್ಕರಿಸಿದರು.

02022030a ಬಂಧನಾದ್ವಿಪ್ರಮುಕ್ತಾಶ್ಚ ರಾಜಾನೋ ಮಧುಸೂದನಂ|

02022030c ಪೂಜಯಾಮಾಸುರೂಚುಶ್ಚ ಸಾಂತ್ವಪೂರ್ವಮಿದಂ ವಚಃ||

ಬಂಧನದಿಂದ ಮುಕ್ತರಾದ ರಾಜರು ಮಧುಸೂದನನನ್ನು ಸಾಂತ್ವಪೂರ್ವ ವಚನಗಳಿಂದ ಪೂಜಿಸಿದರು.

02022031a ನೈತಚ್ಚಿತ್ರಂ ಮಹಾಬಾಹೋ ತ್ವಯಿ ದೇವಕಿನಂದನ|

02022031c ಭೀಮಾರ್ಜುನಬಲೋಪೇತೇ ಧರ್ಮಸ್ಯ ಪರಿಪಾಲನಂ||

“ದೇವಕಿನಂದನ! ಮಹಾಬಾಹು! ಭೀಮಾರ್ಜುನರ ಬಲದಿಂದ ಕೂಡಿ ಧರ್ಮವನ್ನು ಪರಿಪಾಲಿಸಿದ್ದುದು ಮಹಾ ಅದ್ಭುತವೇನೂ ಅಲ್ಲ.

02022032a ಜರಾಸಂಧಹ್ರದೇ ಘೋರೇ ದುಃಖಪಂಕೇ ನಿಮಜ್ಜತಾಂ|

02022032c ರಾಜ್ಞಾಂ ಸಮಭ್ಯುದ್ಧರಣಂ ಯದಿದಂ ಕೃತಮದ್ಯ ತೇ||

02022033a ವಿಷ್ಣೋ ಸಮವಸನ್ನಾನಾಂ ಗಿರಿದುರ್ಗೇ ಸುದಾರುಣೇ|

02022033c ದಿಷ್ಟ್ಯಾ ಮೋಕ್ಷಾದ್ಯಶೋ ದೀಪ್ತಮಾಪ್ತಂ ತೇ ಪುರುಷೋತ್ತಮ||

ವಿಷ್ಣು! ಪುರುಷೋತ್ತಮ! ಜರಾಸಂಧನ ಕೆಟ್ಟ ಘೋರ ದುಃಖದ ಮಡುವಿನಲ್ಲಿ ಮುಳುಗಿದ್ದ, ದಾರುಣ ಗಿರಿದುರ್ಗಗಳ ಕೋಟೆಯೊಳಗೆ ಕೊಳೆಯುತ್ತಿದ್ದ ರಾಜರನ್ನು ಇಂದು ಉದ್ಧರಿಸಿ ನೀನು ಬೆಳಗುತ್ತಿದ್ದೀಯೆ.

02022034a ಕಿಂ ಕುರ್ಮಃ ಪುರುಷವ್ಯಾಘ್ರ ಬ್ರವೀಹಿ ಪುರುಷರ್ಷಭ|

02022034c ಕೃತಮಿತ್ಯೇವ ತಜ್ಜ್ಞೇಯಂ ನೃಪೈರ್ಯದ್ಯಪಿ ದುಷ್ಕರಂ||

ಪುರುಷವ್ಯಾಘ್ರ! ಪುರುಷರ್ಷಭ! ನಾವು ಏನು ಮಾಡಬೇಕು ಹೇಳು. ನೃಪರಿಗೂ ದುಷ್ಕರವೆನಿಸಿದ್ದುದನ್ನು ಮಾಡಿಕೊಡುತ್ತೇವೆ ಎಂದು ತಿಳಿ.”

02022035a ತಾನುವಾಚ ಹೃಷೀಕೇಶಃ ಸಮಾಶ್ವಾಸ್ಯ ಮಹಾಮನಾಃ|

02022035c ಯುಧಿಷ್ಠಿರೋ ರಾಜಸೂಯಂ ಕ್ರತುಮಾಹರ್ತುಮಿಚ್ಛತಿ||

ಆ ಆಶ್ವಾಸನೆಗೆ ಮಹಾಮನ ಹೃಷೀಕೇಶನು ಉತ್ತರಿಸಿದನು: “ಯುಧಿಷ್ಠಿರನು ಮಹಾಕ್ರತು ರಾಜಸೂಯವನ್ನು ಮಾಡಲಿಚ್ಛಿಸಿದ್ದಾನೆ.

02022036a ತಸ್ಯ ಧರ್ಮಪ್ರವೃತ್ತಸ್ಯ ಪಾರ್ಥಿವತ್ವಂ ಚಿಕೀರ್ಷತಃ|

02022036c ಸರ್ವೈರ್ಭವದ್ಭಿರ್ಯಜ್ಞಾರ್ಥೇ ಸಾಹಾಯ್ಯಂ ದೀಯತಾಮಿತಿ||

ಪಾರ್ಥಿವತ್ವವನ್ನು ಬಯಸುತ್ತಿರುವ ಆ ಧರ್ಮಪ್ರವೃತ್ತನ ಯಜ್ಞಕ್ಕೆ ನೀವೆಲ್ಲರೂ ಸಹಾಯವನ್ನು ನೀಡಬೇಕು.”

02022037a ತತಃ ಪ್ರತೀತಮನಸಸ್ತೇ ನೃಪಾ ಭರತರ್ಷಭ|

02022037c ತಥೇತ್ಯೇವಾಬ್ರುವನ್ಸರ್ವೇ ಪ್ರತಿಜಜ್ಞುಶ್ಚ ತಾಂ ಗಿರಂ||

ಭರತರ್ಷಭ! ಆಗ ಸರ್ವ ನೃಪರೂ ಸಂತೋಷದಿಂದ “ಹಾಗೆಯೇ ಆಗಲಿ!” ಎಂದು ಮಾತುಕೊಟ್ಟರು.

02022038a ರತ್ನಭಾಜಂ ಚ ದಾಶಾರ್ಹಂ ಚಕ್ರುಸ್ತೇ ಪೃಥಿವೀಶ್ವರಾಃ|

02022038c ಕೃಚ್ಛ್ರಾಜ್ಜಗ್ರಾಹ ಗೋವಿಂದಸ್ತೇಷಾಂ ತದನುಕಂಪಯಾ||

ಪೃಥಿವೀಶ್ವರರು ತಮ್ಮ ರತ್ನಗಳನ್ನು ದಾಶಾರ್ಹನೊಂದಿಗೆ ಹಂಚಿಕೊಳ್ಳಲು, ಗೋವಿಂದನು ಅವರ ಮೇಲಿನ ಅನುಕಂಪದಿಂದ ಇಷ್ಟವಿಲ್ಲದಿದ್ದರೂ ಅವುಗಳನ್ನು ಸ್ವೀಕರಿಸಿದನು.

02022039a ಜರಾಸಂಧಾತ್ಮಜಶ್ಚೈವ ಸಹದೇವೋ ಮಹಾರಥಃ|

02022039c ನಿರ್ಯಯೌ ಸಜನಾಮಾತ್ಯಃ ಪುರಸ್ಕೃತ್ಯ ಪುರೋಹಿತಂ||

ಜರಾಸಂಧನ ಮಗ ಮಹಾರಥಿ ಸಹದೇವನು ಪುರೋಹಿತನನ್ನು ಮುಂದಿಟ್ಟುಕೊಂಡು ಅಮಾತ್ಯರು ಮತ್ತು ತನ್ನವರೊಂದಿಗೆ ಹೊರಬಂದನು.

02022040a ಸ ನೀಚೈಃ ಪ್ರಶ್ರಿತೋ ಭೂತ್ವಾ ಬಹುರತ್ನಪುರೋಗಮಃ|

02022040c ಸಹದೇವೋ ನೃಣಾಂ ದೇವಂ ವಾಸುದೇವಮುಪಸ್ಥಿತಃ||

ಸಹದೇವನು ಮನುಷ್ಯರ ದೇವ ವಾಸುದೇವನ ಮುಂದೆ ಬಹುರತ್ನಗಳನ್ನು ಇಟ್ಟು ತಲೆತಗ್ಗಿಸಿ ನಿಂತನು.

02022041a ಭಯಾರ್ತಾಯತತಸ್ತಸ್ಮೈ ಕೃಷ್ಣೋ ದತ್ತ್ವಾಭಯಂ ತದಾ|

02022041c ಅಭ್ಯಷಿಂಚತ ತತ್ರೈವ ಜರಾಸಂಧಾತ್ಮಜಂ ತದಾ||

ಆಗ ಭಯಗ್ರಸ್ತನಾದ ಅವನಿಗೆ ಕೃಷ್ಣನು ಅಭಯವನ್ನಿತ್ತನು ಮತ್ತು ಜರಾಸಂಧನ ಮಗನನ್ನು ಅಲ್ಲಿಯೇ ಆಗಲೇ ಅಭಿಷೇಕಿಸಿದನು.

02022042a ಗತ್ವೈಕತ್ವಂ ಚ ಕೃಷ್ಣೇನ ಪಾರ್ಥಾಭ್ಯಾಂ ಚೈವ ಸತ್ಕೃತಃ|

02022042c ವಿವೇಶ ರಾಜಾ ಮತಿಮಾನ್ಪುನರ್ಬಾರ್ಹದ್ರಥಂ ಪುರಂ||

ಕೃಷ್ಣನೊಂದಿಗೆ ಸೇರಿ, ಪಾರ್ಥರಿಬ್ಬರಿಂದಲೂ ಸತ್ಕೃತನಾದ ಮತಿವಂತ ರಾಜನು ಪುನಃ ಬಾರ್ಹದ್ರಥನ ಪುರವನ್ನು ಪ್ರವೇಶಿಸಿದನು.

02022043a ಕೃಷ್ಣಸ್ತು ಸಹ ಪಾರ್ಥಾಭ್ಯಾಂ ಶ್ರಿಯಾ ಪರಮಯಾ ಜ್ವಲನ್|

02022043c ರತ್ನಾನ್ಯಾದಾಯ ಭೂರೀಣಿ ಪ್ರಯಯೌ ಪುಷ್ಕರೇಕ್ಷಣಃ||

ಪುಷ್ಕರೇಕ್ಷಣ ಕೃಷ್ಣನಾದರೂ ಪಾರ್ಥರಿಬ್ಬರೊಡಗೂಡಿ, ಪರಮ ಸಂಪತ್ತನ್ನು ಭೂರಿ ರತ್ನಗಳನ್ನೂ ತೆಗೆದುಕೊಂಡು ಪರಮ ತೇಜಸ್ಸಿನಿಂದ ಹೊರಟನು.

02022044a ಇಂದ್ರಪ್ರಸ್ಥಮುಪಾಗಮ್ಯ ಪಾಂಡವಾಭ್ಯಾಂ ಸಹಾಚ್ಯುತಃ|

02022044c ಸಮೇತ್ಯ ಧರ್ಮರಾಜಾನಂ ಪ್ರೀಯಮಾಣೋಽಭ್ಯಭಾಷತ||

ಸೆರೆಯಿಂದ ಬಿಡುಗಡೆ ಹೊಂದಿದ್ದ ರಾಜರು ಮತ್ತು ಪಾಂಡವರಿಬ್ಬರೊಡನೆ ಅಚ್ಯುತನು ಇಂದ್ರಪ್ರಸ್ಥವನ್ನು ತಲುಪಿ ಧರ್ಮರಾಜನನ್ನು ಭೇಟಿಯಾಗಿ ಸಂತೋಷದಿಂದ ಹೇಳಿದನು:

02022045a ದಿಷ್ಟ್ಯಾ ಭೀಮೇನ ಬಲವಾಂ ಜರಾಸಂಧೋ ನಿಪಾತಿತಃ|

02022045c ರಾಜಾನೋ ಮೋಕ್ಷಿತಾಶ್ಚೇಮೇ ಬಂಧನಾನ್ನೃಪಸತ್ತಮ||

“ನೃಪಸತ್ತಮ! ಅದೃಷ್ಟವಶಾತ್ ಬಲವಾನ್ ಭೀಮನು ಜರಾಸಂಧನನ್ನು ಕೆಳಗುರುಳಿಸಿ ಬಂಧನದಲ್ಲಿದ್ದ ರಾಜರನ್ನು ವಿಮುಕ್ತಿಗೊಳಿಸಿದನು.

02022046a ದಿಷ್ಟ್ಯಾ ಕುಶಲಿನೌ ಚೇಮೌ ಭೀಮಸೇನಧನಂಜಯೌ|

02022046c ಪುನಃ ಸ್ವನಗರಂ ಪ್ರಾಪ್ತಾವಕ್ಷತಾವಿತಿ ಭಾರತ||

ಭಾರತ! ಅದೃಷ್ಟವಶಾತ್ ಭೀಮಸೇನಧನಂಜಯರಿಬ್ಬರೂ ಕುಶಲವಾಗಿ ಪುನಃ ತಮ್ಮ ನಗರಕ್ಕೆ ಹಿಂದಿರುಗಿದ್ದಾರೆ!”

02022047a ತತೋ ಯುಧಿಷ್ಠಿರಃ ಕೃಷ್ಣಂ ಪೂಜಯಿತ್ವಾ ಯಥಾರ್ಹತಃ|

02022047c ಭೀಮಸೇನಾರ್ಜುನೌ ಚೈವ ಪ್ರಹೃಷ್ಟಃ ಪರಿಷಸ್ವಜೇ||

ಯುಧಿಷ್ಠಿರನು ಕೃಷ್ಣನನ್ನು ಯಥಾರ್ಹ ಪೂಜಿಸಿದನು ಮತ್ತು ಸಂತೋಷದಿಂದ ಭೀಮಸೇನ ಅರ್ಜುನರನ್ನು ಬಿಗಿದಪ್ಪಿದನು.

02022048a ತತಃ ಕ್ಷೀಣೇ ಜರಾಸಂಧೇ ಭ್ರಾತೃಭ್ಯಾಂ ವಿಹಿತಂ ಜಯಂ|

02022048c ಅಜಾತಶತ್ರುರಾಸಾದ್ಯ ಮುಮುದೇ ಭ್ರಾತೃಭಿಃ ಸಹ||

ನಂತರ ಜರಾಸಂಧನನ್ನು ಸೋಲಿಸುವುದರಲ್ಲಿ ಸಹೋದರರು ಪಡೆದ ಜಯವನ್ನು ಭ್ರಾತೃಗಳೊಂದಿಗೆ ಅಜಾತಶತ್ರುವು ಆನಂದಿಸಿದನು.

02022049a ಯಥಾವಯಃ ಸಮಾಗಮ್ಯ ರಾಜಭಿಸ್ತೈಶ್ಚ ಪಾಂಡವಃ|

02022049c ಸತ್ಕೃತ್ಯ ಪೂಜಯಿತ್ವಾ ಚ ವಿಸಸರ್ಜ ನರಾಧಿಪಾನ್||

ಪಾಂಡವನು ಸೇರಿದ್ದ ರಾಜ ನರಾಧಿಪರನ್ನು ವಯಸ್ಸಿಗೆ ತಕ್ಕಂತೆ ಪೂಜಿಸಿ ಸತ್ಕರಿಸಿ ಬೀಳ್ಕೊಂಡನು.

02022050a ಯುಧಿಷ್ಠಿರಾಭ್ಯನುಜ್ಞಾತಾಸ್ತೇ ನೃಪಾ ಹೃಷ್ಟಮಾನಸಾಃ|

02022050c ಜಗ್ಮುಃ ಸ್ವದೇಶಾಂಸ್ತ್ವರಿತಾ ಯಾನೈರುಚ್ಚಾವಚೈಸ್ತತಃ||

ಯುಧಿಷ್ಠಿರನಿಂದ ಅನುಜ್ಞೆಯನ್ನು ಪಡೆದ ಆ ನೃಪರು ಸಂತೋಷಗೊಂಡು ಅವರವರ ರಥಗಳಲ್ಲಿ ತಮ್ಮ ದೇಶಗಳಿಗೆ ತ್ವರೆಮಾಡಿ ಹೊರಟರು.

02022051a ಏವಂ ಪುರುಷಶಾರ್ದೂಲೋ ಮಹಾಬುದ್ಧಿರ್ಜನಾರ್ದನಃ|

02022051c ಪಾಂಡವೈರ್ಘಾತಯಾಮಾಸ ಜರಾಸಂಧಮರಿಂ ತದಾ||

02022052a ಘಾತಯಿತ್ವಾ ಜರಾಸಂಧಂ ಬುದ್ಧಿಪೂರ್ವಮರಿಂದಮಃ|

02022052c ಧರ್ಮರಾಜಮನುಜ್ಞಾಪ್ಯ ಪೃಥಾಂ ಕೃಷ್ಣಾಂ ಚ ಭಾರತ||

02022053a ಸುಭದ್ರಾಂ ಭೀಮಸೇನಂ ಚ ಫಲ್ಗುನಂ ಯಮಜೌ ತಥಾ|

02022053c ಧೌಮ್ಯಮಾಮಂತ್ರಯಿತ್ವಾ ಚ ಪ್ರಯಯೌ ಸ್ವಾಂ ಪುರೀಂ ಪ್ರತಿ||

ಹೀಗೆ ಪುರುಷಶಾರ್ದೂಲ ಮಹಾಬುದ್ಧಿ ಜನಾರ್ದನನು ಅರಿ ಜರಾಸಂಧನನ್ನು ಪಾಂಡವರ ಮೂಲಕ ಸಂಹರಿಸಿದನು. ಭಾರತ! ಜರಾಸಂಧನನ್ನು ಸಂಹರಿಸಿದ ಆ ಬುದ್ಧಿಪೂರ್ವ ಅರಿಂದಮನು ಧರ್ಮರಾಜನ, ಪೃಥಾ, ಕೃಷ್ಣಾ, ಸುಭದ್ರಾ, ಭೀಮಸೇನ, ಫಲ್ಗುನ ಮತ್ತು ಯಮಳರ ಅನುಜ್ಞೆಯನ್ನು ಪಡೆದು, ಧೌಮ್ಯನಿಂದ ಬೀಳ್ಕೊಂಡು ತನ್ನ ಪುರದ ಕಡೆ ಹೊರಟನು.

02022054a ತೇನೈವ ರಥಮುಖ್ಯೇನ ತರುಣಾದಿತ್ಯವರ್ಚಸಾ|

02022054c ಧರ್ಮರಾಜವಿಸೃಷ್ಟೇನ ದಿವ್ಯೇನಾನಾದಯನ್ ದಿಶಃ||

ಧರ್ಮರಾಜನು ಉಡುಗೊರೆಯನ್ನಾಗಿ ಕೊಟ್ಟಿದ್ದ, ದಿಶಗಳಲ್ಲಿ ದಿವ್ಯನಾದಗಳಿಂದ ತುಂಬುವ ಆ ಪ್ರಮುಖ ರಥದಲ್ಲಿ ಉದಯವಾಗುತ್ತಿರುವ ಸೂರ್ಯನ ತೇಜಸ್ಸಿನಿಂದ ಕುಳಿತುಕೊಂಡನು.

02022055a ತತೋ ಯುಧಿಷ್ಠಿರಮುಖಾಃ ಪಾಂಡವಾ ಭರತರ್ಷಭ|

02022055c ಪ್ರದಕ್ಷಿಣಮಕುರ್ವಂತ ಕೃಷ್ಣಮಕ್ಲಿಷ್ಟಕಾರಿಣಂ||

ಭರತರ್ಷಭ! ನಂತರ ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಪಾಂಡವರು ಅಕ್ಲಿಷ್ಟಕಾರಿಣಿ ಕೃಷ್ಣನನ್ನು ಪ್ರದಕ್ಷಿಣೆಮಾಡಿದರು.

02022056a ತತೋ ಗತೇ ಭಗವತಿ ಕೃಷ್ಣೇ ದೇವಕಿನಂದನೇ|

02022056c ಜಯಂ ಲಬ್ಧ್ವಾ ಸುವಿಪುಲಂ ರಾಜ್ಞಾಮಭಯದಾಸ್ತದಾ||

02022057a ಸಂವರ್ಧಿತೌಜಸೋ ಭೂಯಃ ಕರ್ಮಣಾ ತೇನ ಭಾರತ|

02022057c ದ್ರೌಪದ್ಯಾಃ ಪಾಂಡವಾ ರಾಜನ್ ಪರಾಂ ಪ್ರೀತಿಮವರ್ಧಯನ್||

ಭಾರತ! ರಾಜನ್! ದೇವಕಿನಂದನ ಭಗವಾನ್ ಕೃಷ್ಣನು ಹೋದನಂತರ, ವಿಪುಲ ಜಯವನ್ನು ಪಡೆದ, ರಾಜರಿಗೆ ಅಭಯವನ್ನಿತ್ತು ತಮ್ಮ ಕರ್ಮಗಳಿಂದ ತೇಜಸ್ಸನ್ನು ವೃದ್ಧಿಗೊಳಿಸಿಕೊಂಡ ಪಾಂಡವರು ದ್ರೌಪದಿಯೊಡನೆ ಪರಮ ಪ್ರೀತಿಯಿಂದ ವರ್ಧಿಸಿದರು.

02022058a ತಸ್ಮಿನ್ ಕಾಲೇ ತು ಯದ್ಯುಕ್ತಂ ಧರ್ಮಕಾಮಾರ್ಥಸಂಹಿತಂ|

02022058c ತದ್ರಾಜಾ ಧರ್ಮತಶ್ಚಕ್ರೇ ರಾಜ್ಯಪಾಲನಕೀರ್ತಿಮಾನ್||

ರಾಜ್ಯಪಾಲನೆಗೆ ಕೀರ್ತಿವಂತನಾದ ಆ ರಾಜನು ಆ ಸಮಯದಲ್ಲಿ ಧರ್ಮಕಾಮಾರ್ಥಕ್ಕನುಗುಣ ಕಾರ್ಯಗಳಲ್ಲಿ ನಿರತನಾದನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಜರಾಸಂಧವಧೇ ದ್ವಾವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಜರಾಸಂಧವಧೆ ಎನ್ನುವ ಇಪ್ಪತ್ತೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೨೨/೧೦೦, ಅಧ್ಯಾಯಗಳು-೨೪೭/೧೯೯೫, ಶ್ಲೋಕಗಳು-೮೦೩೬/೮೩೮೪೦

Image result for indian flowers

[1] ಅಂದರೆ ಜರಾಸಂಧನ ರಥ ಅತ್ಯಂತ ಪುರಾತನವಾಗಿತ್ತು. ಮತ್ತು ತಾರಕಾಸುರನ ಯುದ್ಧದ ಸಮಯದಲ್ಲಿ ಇಂದ್ರ ಮತ್ತು ವಿಷ್ಣು ಏರಿದ್ದ ರಥವೇ ಜರಾಸಂಧನದ್ದಾಗಿತ್ತು.

[2] ವಸು ಉಪರಿಚರ (ಆದಿಪರ್ವ, ಅಧ್ಯಾಯ ೫೭).

[3] ವಸು ಉಪರಿಚರನ ಮಗ (ಆದಿಪರ್ವ, ಅಧ್ಯಾಯ ೫೭).

Comments are closed.