Harivamsha: Chapter 35

ಹರಿವಂಶ: ಹರಿವಂಶ ಪರ್ವ

35

ಕೃಷ್ಣವಂಶವರ್ಣನಮ್

ಶ್ರೀಕೃಷ್ಣನು ಅವತಾರವನ್ನೆತ್ತಿದುದು; ಕೃಷ್ಣನ ಸಹೋದರ-ಸಹೋದರಿಯರ ಮತ್ತು ಕುಟುಂಬದವರ ಪರಿಚಯ; ಕಾಲಯವನನ ಉತ್ಪತ್ತಿ (1-22).

 ವೈಶಂಪಾಯನ ಉವಾಚ

ಯಾಃ ಪತ್ನ್ಯೋ ವಸುದೇವಸ್ಯ ಚತುರ್ದಶ ವರಾಂಗನಾಃ |

ಪೌರವೀ ರೋಹಿಣೀ ನಾಮ ಇಂದಿರಾ ಚ ತಥಾ ವರಾ || ೧-೩೫-೧

ವೈಶಾಖೀ ಚ ತಥಾ ಭದ್ರಾ ಸುನಾಮ್ನೀ ಚೈವ ಪಂಚಮೀ|

ಸಹದೇವಾ ಶಾಂತಿದೇವಾ ಶ್ರೀದೇವಾ ದೇವರಕ್ಷಿತಾ || ೧-೩೫-೨

ವೃಕದೇವ್ಯುಪದೇವೀ ಚ ದೇವಕೀ ಚೈವ ಸಪ್ತಮೀ |

ಸುತನುರ್ಬಡವಾ ಚೈವ ದ್ವೇ ಏತೇ ಪರಿಚಾರಿಕೇ || ೧-೩೫-೩

ವೈಶಂಪಾಯನನು ಹೇಳಿದನು: “ವಸುದೇವನಿಗೆ ವರಾಂಗನೆಯರಾದ ಹದಿನಾಲ್ಕು ಪತ್ನಿಯರಿದ್ದರು: ರೋಹಿಣೀ, ಇಂದಿರಾ, ವರಾ, ವೈಶಾಖೀ, ಭದ್ರಾ, ಮತ್ತು ಐದನೆಯವಳು ಸುನಾಮ್ನೀ ಇವರು ಪೌರವ ವಂಶದವರಾಗಿದ್ದರು. ಸಹದೇವಾ, ಶಾಂತಿದೇವಾ, ಶ್ರೀದೇವಾ, ದೇವರಕ್ಷಿತಾ, ವೃಕದೇವಿ, ಉಪದೇವೀ ಮತ್ತು ಏಳನೆಯವಳು ದೇವಕೀ. ಇನ್ನಿಬ್ಬರು – ಸುತನು ಮತ್ತು ಬಡವಾ – ಅವರ ಪರಿಚಾರಿಕೆಯರಾಗಿದ್ದರು.

ಪೌರವೀ ರೋಹಿಣೀ ನಾಮ ಬಾಹ್ಲಿಕಸ್ಯಾತ್ಮಜಾಭವತ್ |

ಜ್ಯೇಷ್ಠಾ ಪತ್ನೀ ಮಹಾರಾಜ ದಯಿತಾಽಽನಕದುಂದುಭೇಃ || ೧-೩೫-೪

ಪೌರವೀ ರೋಹಿಣೀ ಎನ್ನುವವಳು ಬಾಹ್ಲಿಕ[1]ನ ಮಗಳಾಗಿದ್ದಳು. ಮಹಾರಾಜ! ಅವಳು ಆನಕದುಂದುಭಿ ಜ್ಯೇಷ್ಠ ಮತ್ತು ಪ್ರಿಯ ಪತ್ನಿಯಾಗಿದ್ದಳು.

ಲೇಭೇ ಜ್ಯೇಷ್ಠಂ ಸುತಂ ರಾಮಂ ಸಾರಣಂ ಶಠಮೇವ ಚ |

ದುರ್ದಮಂ ದಮನಂ ಶ್ವಭ್ರಂ ಪಿಂಡಾರಕಮುಶೀನರಮ್ || ೧-೩೫-೫

ಚಿತ್ರಾಂ ನಾಮ ಕುಮಾರೀಂ ಚ ರೋಹಿಣೀ ತನಯಾ ದಶ |

ಚಿತ್ರಾ ಸುಭದ್ರೇತಿ ಪುನರ್ವಿಖ್ಯಾತಾ ಕುರುನಂದನ || ೧-೩೫-೬

ಕುರುನಂದನ! ರೋಹಿಣಿಯ ಜ್ಯೇಷ್ಠ ಪುತ್ರ ರಾಮ. ನಂತರ ಸಾರಣ. ಶಠ, ದುರ್ದಮ, ದಮನ, ಶ್ವಭ್ರ, ಪಿಂಡಾರಕ, ಉಶೀನರ. ರೋಹಿಣಿಗೆ ಚಿತ್ರಾ ಎಂಬ ಹೆಸರಿನ ಕುಮಾರಿಯೂ ಇದ್ದಳು. ಚಿತ್ರಾಳೇ ಪುನಃ ಸುಭದ್ರಾ ಎಂಬ ಹೆಸರಿನಿಂದ ಹತ್ತನೆಯ ಮಗಳಾಗಿ ಜನಿಸಿದಳು[2].

ವಸುದೇವಾಚ್ಚ ದೇವಕ್ಯಾಂ ಜಜ್ಞೇ ಶೌರಿರ್ಮಹಾಯಶಾಃ |

ರಾಮಾಚ್ಚ ನಿಶಠೋ ಜಜ್ಞೇ ರೇವತ್ಯಾಂ ದಯಿತಃ ಸುತಃ || ೧-೩೫-೭

ವಸುದೇವನಿಗೆ ದೇವಕಿಯಲ್ಲಿ ಮಹಾಯಶಸ್ವೀ ಶೌರಿಯು ಜನಿಸಿದನು. ರಾಮನಾದರೋ ರೇವತಿಯಲ್ಲಿ ಪ್ರೀತಿಯ ಪುತ್ರ ನಿಶಠನಿಗೆ ಜನ್ಮವಿತ್ತನು.

ಸುಭದ್ರಾಯಾಂ ರಥೀ ಪಾರ್ಥಾದಭಿಮನ್ಯುರಜಾಯತ |

ಅಕ್ರೂರಾತ್ಕಾಶಿಕನ್ಯಾಯಾಂ ಸತ್ಯಕೇತುರಜಾಯತ || ೧-೩೫-೮

ಸುಭದ್ರೆಗೆ ಪಾರ್ಥನಿಂದ ರಥೀ ಅಭಿಮನ್ಯುವು ಹುಟ್ಟಿದನು. ಅಕ್ರೂರನಿಗೆ ಕಾಶಿಕನ್ಯೆಯಿಂದ ಸತ್ಯಕೇತುವು ಜನಿಸಿದನು.

ವಸುದೇವಸ್ಯ ಭಾರ್ಯಾಸು ಮಹಾಭಾಗಾಸು ಸಪ್ತಸು |

ಯೇ ಪುತ್ರಾ ಜಜ್ಞಿರೇ ಶೂರಾ ನಾಮತಸ್ತಾನ್ನಿಬೋಧ ಮೇ || ೧-೩೫-೯

ವಸುದೇವನ ಏಳು ಮಹಾಭಾಗ್ಯ ಭಾರ್ಯೆಯರಲ್ಲಿ ಹುಟ್ಟಿದ ಶೂರ ಪುತ್ರರ ಹೆಸರುಗಳನ್ನು ಹೇಳುತ್ತೇನೆ. ಕೇಳು.

ಭೋಜಶ್ಚ ವಿಜಯಶ್ಚೈವ ಶಾಂತಿದೇವಾಸುತಾವುಭೌ |

ವೃಕದೇವಃ ಸುನಾಮಾಯಾಂ ಗದಶ್ಚಾಸ್ತಾಂ ಸುತಾವುಭೌ || ೧-೩೫-೧೦

ಭೋಜ ಮತ್ತು ವಿಜಯರು ಶಾಂತಿದೇವಾಳ ಇಬ್ಬರು ಮಕ್ಕಳು. ವೃಕದೇವ ಮತ್ತು ಗದ ಇವರಿಬ್ಬರು ಸುನಾಮ್ನಾಳ ಪುತ್ರರು.

ಉಪಾಸಂಗವರಂ ಲೇಭೇ ತನಯಂ ದೇವರಕ್ಷಿತಾ |

ಅಗಾವಹಂ ಮಹಾತ್ಮಾನಂ ವೃಕದೇವೀ ವ್ಯಜಾಯತ || ೧-೩೫-೧೧

ದೇವರಕ್ಷಿತಾಳು ಉಪಾಸಂಗವರನನ್ನು ಮಗನನ್ನಾಗಿ ಪಡೆದಳು. ವೃಕದೇವಿಯು ಮಹಾತ್ಮ ಅಗಾವಹನಿಗೆ ಜನ್ಮವಿತ್ತಳು.

ಕನ್ಯಾ ತ್ರಿಗರ್ತರಾಜಸ್ಯ ಭರ್ತಾ ವೈ ಶೈಶಿರಾಯಣಃ |

ಜಿಜ್ಞಾಸಾಂ ಪೌರುಷೇ ಚಕ್ರೇ ನ ಚಸ್ಕಂದೇಽಥ ಪೌರುಷಮ್ || ೧-೩೫-೧೨

ವೃಕದೇವಿಯು ತ್ರಿಗರ್ತರಾಜನ ಕನ್ಯೆಯಾಗಿದ್ದಳು. ತ್ರಿಗರ್ತರಾಜನ ಪುರೋಹಿತನು ಗರ್ಗಗೋತ್ರೀ ಶೈಶಿರಾಯಣನಾಗಿದ್ದನು. ಅವನ ಪುರುಷತ್ವದ ಕುರಿತು ಜಿಜ್ಞಾಸೆಯುಂಟಾದಾಗ ಅವನ ವೀರ್ಯ ಸ್ಖನಲವಾಗಲಿಲ್ಲ[3]. ಅವನು ನಪುಂಸಕನೆಂದು ಅವನ ಮೇಲೆ ಮಿಥ್ಯಾಪವಾದವನ್ನು ವಹಿಸಲಾಯಿತು.

ಕೃಷ್ಣಾಯಸಸಮಪ್ರಖ್ಯೋ ವರ್ಷೇ ದ್ವಾದಶಮೇ ತಥಾ |

ಮಿಥ್ಯಾಭಿಶಪ್ತೋ ಗಾರ್ಗ್ಯಸ್ತು ಮನ್ಯುನಾಭಿಸಮೀರಿತಃ || ೧-೩೫-೧೩

ಹನ್ನೆರಡು ವರ್ಷಗಳ ನಿಯಮವು ಸಂಪೂರ್ಣವಾಗಲು ಮಿಥ್ಯಾಪವಾದವನ್ನು ಪಡೆದ ಗಾರ್ಗ್ಯನನ್ನು ಕೋಪವು ಆವೇಶಿಸಿತು ಮತ್ತು ಅವನ ಶರೀರವರ್ಣವು ಲೋಹದಂತೆ ಕಪ್ಪಾಯಿತು.

ಗೋಪಕನ್ಯಾಮುಪಾದಾಯ ಮೈಥುನಾಯೋಪಚಕ್ರಮೇ |

ಗೋಪಾಲೀ ತ್ವಪ್ಸರಾಸ್ತಸ್ಯ ಗೋಪಸ್ತ್ರೀವೇಷಧಾರಿಣೀ || ೧-೩೫-೧೪

ಅವನು ಓರ್ವ ಗೋಪಕನ್ಯೆಯ ಬಳಿಸಾರಿ ಅವಳೊಡನೆ ಸಂಭೋಗಿಸತೊಡಗಿದನು. ಗೋಪಸ್ತ್ರೀವೇಷಧಾರಿಣಿಯಾಗಿದ್ದ ಅವಳು ಗೋಪಾಲೀ ಎಂಬ ಅಪ್ಸರೆಯಾಗಿದ್ದಳು.

ಧಾರಯಾಮಾಸ ಗಾರ್ಗ್ಯಸ್ಯ ಗರ್ಭಂ ದುರ್ಧರಮಚ್ಯುತಮ್ |

ಮಾನುಷ್ಯಾಂ ಗಾರ್ಗ್ಯಭಾರ್ಯಾಯಾಂ ನಿಯೋಗಾಚ್ಛೂಲಪಾಣಿನಃ ||೧-೩೫-೧೫

ಶೂಲಪಾಣಿಯ ನಿಯೋಗದಂತೆ ಗಾರ್ಗ್ಯನ ಮನುಷ್ಯವೇಧಧಾರೀ ಭಾರ್ಯೆಯು ಅವನ ದುರ್ಧರ ಅಚ್ಯುತ ಗರ್ಭವನ್ನು ಧರಿಸಿದಳು.

ಸ ಕಾಲಯವನೋ ನಾಮ ಜಜ್ಞೇ ರಾಜಾ ಮಹಾಬಲಃ |

ವೃಷಪೂರ್ವಾರ್ಧಕಾಯಾಸ್ತಮವಹನ್ವಾಜಿನೋ ರಣೇ || ೧-೩೫-೧೬

ಅವಳಿಗೆ ಕಾಲಯವನ ಎಂಬ ಹೆಸರಿನ ಮಹಾಬಲ ರಾಜನು ಜನಿಸಿದನು. ವೃಷಭದ ರೂಪದಲ್ಲಿದ್ದ ಅವನ ಕಾಯದ ಪೂರ್ವಾರ್ಧವು ರಣದಲ್ಲಿ ಕುದುರೆಯ ರೂಪವನ್ನು ತಾಳಿ ಅವನ ವಾಹನವಾಗುತ್ತಿತ್ತು.

ಅಪುತ್ರಸ್ಯ ಸ ರಾಜ್ಞಸ್ತು ವವೃಧೇಽಂತಃಪುರೇ ಶಿಶುಃ |

ಯವನಸ್ಯ ಮಹಾರಾಜ ಸ ಕಾಲಯವನೋಽಭವತ್ || ೧-೩೫-೧೭

ಮಹಾರಾಜ! ಅಪುತ್ರನಾಗಿದ್ದ ಯವನ ರಾಜನ ಅಂತಃಪುರದಲ್ಲಿ ಆ ಶಿಶುವು ಬೆಳೆಯಿತು[4]. ಅವನೇ ಕಾಲಯವನನಾದನು.

ಸ ಯುದ್ಧಕಾಮೀ ನೃಪತಿಃ ಪರ್ಯಪೃಚ್ಛದ್ದ್ವಿಜೋತ್ತಮಾನ್ |

ವೄಷ್ಣಂಧಕಕುಲಂ ತಸ್ಯ ನಾರದೋಽಕಥಯದ್ವಿಭುಃ || ೧-೩೫-೧೮

ಆ ಯುದ್ಧಕಾಮೀ ನೃಪತಿಯು ದ್ವಿಜೋತ್ತಮರನ್ನು ಯುದ್ಧದಲ್ಲಿ ತನ್ನ ಸಮಾನರ್ಯಾರೆಂದು ಕೇಳುತ್ತಿದ್ದನು. ಆಗ ವಿಭು ನಾರದನು ಅವನಿಗೆ ವೃಷ್ಣಿ-ಅಂಧಕ ಕುಲದವರ ಕುರಿತು ಹೇಳಿದ್ದನು.

ಅಕ್ಷೌಹಿಣ್ಯಾ ತು ಸೈನ್ಯಸ್ಯ ಮಥುರಾಮಭ್ಯಯಾತ್ತದಾ |

ದೂತಂ ಸಂಪ್ರೇಷಯಾಮಾಸ ವೃಷ್ಣ್ಯಂಧಕನಿವೇಶನಮ್  || ೧-೩೫-೧೯

ಅಕ್ಷೋಹಿಣೀ ಸೇನೆಯೊಂದಿಗೆ ಅವನು ಮಥುರೆಯನ್ನು ಆಕ್ರಮಣಿಸಿದನು. ವೃಷ್ಣಿ-ಅಂಧಕರ ಅರಮನೆಗೆ ದೂತನನ್ನು ಕಳುಹಿಸಿದನು.

ತತೋ ವೄಷ್ಣ್ಯಂಧಕಾಃ ಕೃಷ್ಣಂ ಪುರಸ್ಕೃತ್ಯ ಮಹಾಮತಿಮ್ |

ಸಮೇತಾ ಮಂತ್ರಯಾಮಾಸುರ್ಯವನಸ್ಯ ಭಯಾತ್ತದಾ || ೧-೩೫-೨೦

ಆಗ ಯವನನ ಭಯದಿಂದ ವೃಷ್ಣಿ-ಅಂಧಕರು ಕೃಷ್ಣನನ್ನು ಮುಂದಿಟ್ಟುಕೊಂಡು ಒಟ್ಟಾಗಿ ಮಂತ್ರಾಲೋಚನೆ ನಡೆಸಿದರು.

ಕೃತ್ವಾ ಚ ನಿಶ್ಚಯಂ ಸರ್ವೇ ಪಲಾಯನಪರಾಯಣಾಃ |

ವಿಹಾಯ ಮಥುರಾಂ ರಮ್ಯಾಂ ಮಾನಯಂತಃ ಪಿನಾಕಿನಮ್ || ೧-೩೫-೨೧

ಕುಶಸ್ಥಲೀಂ ದ್ವಾರವತೀಂ ನಿವೇಶಯಿತುಮೀಪ್ಸವಃ |

ಪಿನಾಕಿ ಶಿವನ ಅಭಿಪ್ರಾಯವನ್ನು ಮನ್ನಿಸಿ ಎಲ್ಲರೂ ರಮ್ಯ ಮಥುರೆಯನ್ನು ಬಿಟ್ಟು ಪಲಾಯನಮಾಡಲು ನಿಶ್ಚಯಿಸಿದರು ಮತ್ತು ಕುಶಸ್ಥಲೀ ದ್ವಾರವತಿಯಲ್ಲಿ ವಾಸಿಸಲು ಬಯಸಿದರು.

ಇತಿ ಕೃಷ್ಣಸ್ಯ ಜನ್ಮೇದಂ ಯಃ ಶುಚಿರ್ನಿಯತೇಂದ್ರಿಯಃ |

ಪರ್ವಸು ಶ್ರಾವಯೇದ್ವಿದ್ವಾನನೃಣಃ ಸ ಸುಖೀ ಭವೇತ್ || ೧-೩೫-೨೨

ಕೃಷ್ಣನ ಜನ್ಮದ ಕುರಿತಾದ ಇದನ್ನು ಪರ್ವಕಾಲಗಳಲ್ಲಿ ಪಠಿಸುವ ಶುಚಿ, ನಿಯತೇಂದ್ರಿಯ, ವಿದ್ವಾನ್ ನರನು ಅನೃಣನೂ ಸುಖಿಯೂ ಆಗುತ್ತಾನೆ.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಶ್ರಿಕೃಷ್ಣಜನ್ಮಾನುಕೀರ್ತನಂ ನಾಮ ಪಂಚತ್ರಿಂಶೋಽಧ್ಯಾಯಃ

White background purple flower wallpaper | 2880x1800 | 708334 | WallpaperUP

[1] ಮಹಾರಾಜ ಶಂತನುವಿನ ಅಣ್ಣ.

[2] ಈ ಚಿತ್ರಾಳು ಓರ್ವ ಅಪ್ಸರೆಯಾಗಿದ್ದಳು. ಇವಳು ರೋಹಿಣಿಯಲ್ಲಿ ಹುಟ್ಟಿದ ತಕ್ಷಣವೇ ತೀರಿಹೋದಳು. ಯಾದವ ಕುಲದಲ್ಲಿ ಹುಟ್ಟಿದ್ದರೂ ಆ ಕುಲದಲ್ಲಿ ಹುಟ್ಟಿದ ಭಗವಂತನ ಲೀಲೆಗಳನ್ನು ತನಗೆ ನೋಡಲಿಕ್ಕಾಗಲಿಲ್ಲ ಎಂದು ಮರಣದ ಸಮಯದಲ್ಲಿ ಅವಳು ತನ್ನನ್ನು ತಾನೇ ಧಿಕ್ಕರಿಸಿದ್ದಳು. ಅವಳೇ ಎರಡನೆಯ ಬಾರಿ ಸುಭದ್ರಾ ಎಂಬ ಹೆಸರಿನಿಂದ ರೋಹಿಣಿಯಲ್ಲಿ ಜನ್ಮತಾಳಿದಳು.

[3] ಶೈಶಿರಾಯಣನ ಬಾವನು ಯಾದವರ ಪುರೋಹಿತನಾಗಿದ್ದನು. ಶೈಶಿರಾಯಣನಲ್ಲಿ ಪುರುಷತ್ವ ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಿದಾಗ ವ್ರತಧಾರಿಯಾಗಿದ್ದ ಶೈಶಿರಾಯಣನ ವೀರ್ಯಸ್ಖಲನವಾಗದೇ ಇರಲು ಅವನ ಬಾವನು ಅವನು ನಪುಂಸಕನೆಂದು ಮಿಥ್ಯಾಪವಾದವನ್ನು ಹೊರಿಸಿದ್ದನು.

[4] ಅಪ್ಸರೆ ಗೋಪಾಲಿಯು ಹುಟ್ಟಿದಾಕ್ಷಣ ಅವಳ ಮಗು ಕಾಲಯವನನ್ನು ಬಿಟ್ಟುಹೋಗಿದ್ದಳು.

Comments are closed.