Drona Parva: Chapter 64

ದ್ರೋಣ ಪರ್ವ: ಜಯದ್ರಥವಧ ಪರ್ವ

೬೪

ಹದಿನಾಲ್ಕನೆಯ ದಿನ ಬೆಳಿಗ್ಗೆ ಅರ್ಜುನನು ಯುದ್ಧಕ್ಕೆ ಹೊರಡುವಾಗ ಕಂಡ ಶಕುನಗಳು (೧-೭). ಅರ್ಜುನ-ದುರ್ಮರ್ಷಣರ ಯುದ್ಧ; ಕೌರವ ಗಜಸೇನೆಯ ನಾಶ (೮-೬೦).

07064001 ಸಂಜಯ ಉವಾಚ|

07064001a ತತೋ ವ್ಯೂಢೇಷ್ವನೀಕೇಷು ಸಮುತ್ಕ್ರುಷ್ಟೇಷು ಮಾರಿಷ|

07064001c ತಾಡ್ಯಮಾನಾಸು ಭೇರೀಷು ಮೃದಂಗೇಷು ನದತ್ಸು ಚ||

ಸಂಜಯನು ಹೇಳಿದನು: “ಮಾರಿಷ! ಹೀಗೆ ಸೇನೆಗಳ ವ್ಯೂಹವು ರಚಿತಗೊಳ್ಳಲು ಅವರು ಉತ್ಸಾಹದಿಂದ ಕೂಗಿದರು ಮತ್ತು ಭೇರಿ-ಮೃದಂಗಗಳನ್ನು ಬಾರಿಸಿದರು.

07064002a ಅನೀಕಾನಾಂ ಚ ಸಂಹ್ರಾದೇ ವಾದಿತ್ರಾಣಾಂ ಚ ನಿಸ್ವನೇ|

07064002c ಪ್ರಧ್ಮಾಪಿತೇಷು ಶಂಖೇಷು ಸನ್ನಾದೇ ಲೋಮಹರ್ಷಣ||

ಸೇನೆಗಳ ಸಿಂಹಗರ್ಜನೆಗಳೊಡನೆ ವಾದ್ಯಗಳು ಮೊಳಗಿದವು. ಶಂಖಗಳನ್ನು ಊದಲು ಲೋಮಹರ್ಷಣ ನಾದವು ಕೇಳಿಬಂದಿತು.

07064003a ಅಭಿಹಾರಯತ್ಸು ಶನಕೈರ್ಭರತೇಷು ಯುಯುತ್ಸುಷು|

07064003c ರೌದ್ರೇ ಮುಹೂರ್ತೇ ಸಂಪ್ರಾಪ್ತೇ ಸವ್ಯಸಾಚೀ ವ್ಯದೃಶ್ಯತ||

ಯುದ್ಧೇಚ್ಛಿಗಳಾದ ಭರತರು ಕವಚಗಳನ್ನು ಧರಿಸಿ ಯುದ್ಧಮಾಡುತ್ತಿರಲು, ರೌದ್ರ ಮುಹೂರ್ತವು ಪ್ರಾಪ್ತವಾಗಲು ಸವ್ಯಸಾಚಿಯು ಕಾಣಿಸಿಕೊಂಡನು.

07064004a ವಡಾನಾಂ ವಾಯಸಾನಾಂ ಚ ಪುರಸ್ತಾತ್ಸವ್ಯಸಾಚಿನಃ|

07064004c ಬಹುಲಾನಿ ಸಹಸ್ರಾಣಿ ಪ್ರಾಕ್ರೀಡಂಸ್ತತ್ರ ಭಾರತ||

ಭಾರತ!  ಸವ್ಯಸಾಚಿಯ ಮುಂಬಾಗದಲ್ಲಿ ಅನೇಕ ಸಾವಿರ ಹೆಣ್ಣು ಮತ್ತು ಗಂಡು ಕಾಗೆಗಳು ಆಟವಾಡುತ್ತಾ ಹಾರಿ ಹೋಗುತ್ತಿದ್ದವು.

07064005a ಮೃಗಾಶ್ಚ ಘೋರಸನ್ನಾದಾಃ ಶಿವಾಶ್ಚಾಶಿವದರ್ಶನಾಃ|

07064005c ದಕ್ಷಿಣೇನ ಪ್ರಯಾತಾನಾಮಸ್ಮಾಕಂ ಪ್ರಾಣದಂಸ್ತಥಾ||

ಘೋರವಾಗಿ ಕೂಗುವ ಮೃಗಗಳು, ದರ್ಶನದಿಂದಲೇ ಅಶುಭವನ್ನು ಸೂಚಿಸುವ ನರಿಗಳು ನಮ್ಮ ಬಲಭಾಗದಲ್ಲಿ ಹೋಗುತ್ತಾ ಕೂಗುತ್ತಿದ್ದವು.

07064006a ಸನಿರ್ಘಾತಾ ಜ್ವಲಂತ್ಯಶ್ಚ ಪೇತುರುಲ್ಕಾಃ ಸಮಂತತಃ|

07064006c ಚಚಾಲ ಚ ಮಹೀ ಕೃತ್ಸ್ನಾ ಭಯೇ ಘೋರೇ ಸಮುತ್ಥಿತೇ||

ಘೋರವಾದ ಭಯವನ್ನು ಸೂಚಿಸುತ್ತಾ ಭಯಂಕರ ಶಬ್ಧಗಳೊಂದಿಗೆ ಉರಿಯುತ್ತಿರುವ ಉಲ್ಕೆಗಳು ಬಿದ್ದವು. ಎಲ್ಲ ಕಡೆ ಭೂಮಿಯು ಕಂಪಿಸಿತು.

07064007a ವಿಷ್ವಗ್ವಾತಾಃ ಸನಿರ್ಘಾತಾ ರೂಕ್ಷಾಃ ಶರ್ಕರವರ್ಷಿಣಃ|

07064007c ವವುರಾಯಾತಿ ಕೌಂತೇಯೇ ಸಂಗ್ರಾಮೇ ಸಮುಪಸ್ಥಿತೇ||

ಕೌಂತೇಯನು ಸಂಗ್ರಾಮಕ್ಕೆ ಆಗಮಿಸಲು ಮಳಲನ್ನು ಹೊತ್ತು ಸರ್ವತ್ರ ಸುರಿಸುವ ಚಂಡಮಾರುತವು ಬೀಸಿತು.

07064008a ನಾಕುಲಿಸ್ತು ಶತಾನೀಕೋ ಧೃಷ್ಟದ್ಯುಮ್ನಶ್ಚ ಪಾರ್ಷತಃ|

07064008c ಪಾಂಡವಾನಾಮನೀಕಾನಿ ಪ್ರಾಜ್ಞೌ ತೌ ವ್ಯೂಹತುಸ್ತದಾ||

ಪ್ರಾಜ್ಞರಾದ ನಕುಲನ ಮಗ ಶತಾನೀಕ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಪಾಂಡವರ ಸೇನೆಗಳನ್ನು ವ್ಯೂಹದಲ್ಲಿ ರಚಿಸಿದರು.

07064009a ತತೋ ರಥಸಹಸ್ರೇಣ ದ್ವಿರದಾನಾಂ ಶತೇನ ಚ|

07064009c ತ್ರಿಭಿರಶ್ವಸಹಸ್ರೈಶ್ಚ ಪದಾತೀನಾಂ ಶತೈಃ ಶತೈಃ||

07064010a ಅಧ್ಯರ್ಧಮಾತ್ರೇ ಧನುಷಾಂ ಸಹಸ್ರೇ ತನಯಸ್ತವ|

07064010c ಅಗ್ರತಃ ಸರ್ವಸೈನ್ಯಾನಾಂ ಸ್ಥಿತ್ವಾ ದುರ್ಮರ್ಷಣೋಽಬ್ರವೀತ್||

ಆಗ ನಿನ್ನ ಮಗ ದುರ್ಮರ್ಷಣನು ಒಂದು ಸಾವಿರ ರಥಿಗಳೊಡನೆ, ನೂರು ಆನೆಗಳೊಂದಿಗೆ, ಮೂರು ಸಾವಿರ ಕುದುರೆಗಳೊಂದಿಗೆ, ಹತ್ತು ಸಾವಿರ ಪದಾತಿಗಳೊಡನೆ ಅರ್ಜುನನಿಂದ ಒಂದು ಸಾವಿರದ ಐದುನೂರು ಧನುಸ್ಸುಗಳ ಪ್ರಮಾಣದಲ್ಲಿ ಸರ್ವ ಸೈನ್ಯಗಳ ಅಗ್ರಭಾಗದಲ್ಲಿ ನಿಂತು ಹೇಳಿದನು:

07064011a ಅದ್ಯ ಗಾಂಡೀವಧನ್ವಾನಂ ತಪಂತಂ ಯುದ್ಧದುರ್ಮದಂ|

07064011c ಅಹಮಾವಾರಯಿಷ್ಯಾಮಿ ವೇಲೇವ ಮಕರಾಲಯಂ||

“ಯುದ್ಧದುರ್ಮದ, ತಾಪಕ ಗಾಂಡೀವಧನ್ವಿಯನ್ನು ಇಂದು ತೀರವು ಸಮುದ್ರವನ್ನು ತಡೆಯುವಂತೆ ನಾನು ತಡೆಯುತ್ತೇನೆ.

07064012a ಅದ್ಯ ಪಶ್ಯಂತು ಸಂಗ್ರಾಮೇ ಧನಂಜಯಮಮರ್ಷಣಂ|

07064012c ವಿಷಕ್ತಂ ಮಯಿ ದುರ್ಧರ್ಷಮಶ್ಮಕೂಟಮಿವಾಶ್ಮನಿ||

ಕಲ್ಲುಗಳ ರಾಶಿಯೊಂದಿಗೆ ಇನ್ನೊಂದು ಕಲ್ಲುರಾಶಿಯ ಘರ್ಷಣೆಯಾಗುವಂತೆ ಇಂದು ರಣದಲ್ಲಿ ಅಸಹನಶೀಲನಾದ ದುರ್ಧರ್ಷ ಅರ್ಜುನನಿಗೂ ನನಗೂ ನಡೆಯುವ ಸಂಘರ್ಷವನ್ನು ನೋಡಿರಿ.”

07064013a ಏವಂ ಬ್ರುವನ್ಮಹಾರಾಜ ಮಹಾತ್ಮಾ ಸ ಮಹಾಮತಿಃ|

07064013c ಮಹೇಷ್ವಾಸೈರ್ವೃತೋ ರಾಜನ್ಮಹೇಷ್ವಾಸೋ ವ್ಯವಸ್ಥಿತಃ||

ಮಹಾರಾಜ! ಹೀಗೆ ಹೇಳಿ ಆ ಮಹಾತ್ಮ ಮಹಾಮತಿ ಮಹೇಷ್ವಾಸನು ಮಹೇಷ್ವಾಸರಿಂದ ಆವೃತನಾಗಿ ಸಿದ್ಧನಾಗಿ ನಿಂತನು.

07064014a ತತೋಽಂತಕ ಇವ ಕ್ರುದ್ಧಃ ಸವಜ್ರ ಇವ ವಾಸವಃ|

07064014c ದಂಡಪಾಣಿರಿವಾಸಹ್ಯೋ ಮೃತ್ಯುಃ ಕಾಲೇನ ಚೋದಿತಃ||

07064015a ಶೂಲಪಾಣಿರಿವಾಕ್ಷೋಭ್ಯೋ ವರುಣಃ ಪಾಶವಾನಿವ|

07064015c ಯುಗಾಂತಾಗ್ನಿರಿವಾರ್ಚಿಷ್ಮಾನ್ಪ್ರಧಕ್ಷ್ಯನ್ವೈ ಪುನಃ ಪ್ರಜಾಃ||

07064016a ಕ್ರೋಧಾಮರ್ಷಬಲೋದ್ಧೂತೋ ನಿವಾತಕವಚಾಂತಕಃ|

07064016c ಜಯೋ ಜೇತಾ ಸ್ಥಿತಃ ಸತ್ಯೇ ಪಾರಯಿಷ್ಯನ್ಮಹಾವ್ರತಂ||

ಅಂತಕನಂತೆ ಕ್ರುದ್ಧನಾಗಿಯೂ, ವಜ್ರಧಾರಿಯಾದ ವಾಸವನಂತೆಯೂ, ಸಹಿಸಲಸಾದ್ಯನಾದ ಕಾಲದಿಂದ ಚೋದಿತನಾದ ದಂಡಪಾಣಿ ಮೃತ್ಯುವಿನಂತೆಯೂ, ಕ್ಷೋಭೆಗೊಳಿಸಲು ಅಶಕ್ಯನಾದ ಶೂಲಪಾಣಿಯಂತಲೂ, ಪಾಶಹಸ್ತನಾದ ವರುಣನಂತೆಯೂ, ಪ್ರಜೆಗಳನ್ನು ಭಸ್ಮಮಾಡಲು ಹೊರಟಿರುವ ಜ್ವಾಲಾಯುಕ್ತ ಯುಗಾಂತದ ಅಗ್ನಿಯಂತೆಯೂ, ಕ್ರೋಧ-ಅಸಹನೆ-ಬಲಗಳಿಂದ ಚೋದಿತನಾಗಿ ಆ ನಿವಾತಕವಚಾಂತಕ ಜಯ ಮಹಾವ್ರತನು ಪ್ರತಿಜ್ಞೆಯನ್ನು ಸತ್ಯವನಾಗಿಸಲು ಎಲ್ಲರನ್ನೂ ಪಾರುಮಾಡಿ ಮುನ್ನುಗ್ಗಿದನು.

07064017a ಆಮುಕ್ತಕವಚಃ ಖಡ್ಗೀ ಜಾಂಬೂನದಕಿರೀಟಭೃತ್|

07064017c ಶುಭ್ರವರ್ಮಾಂಬರಧರಃ ಸ್ವಂಗದೀ ಚಾರುಕುಂಡಲೀ||

07064018a ರಥಪ್ರವರಮಾಸ್ಥಾಯ ನರೋ ನಾರಾಯಣಾನುಗಃ|

07064018c ವಿಧುನ್ವನ್ಗಾಂಡಿವಂ ಸಂಖ್ಯೇ ಬಭೌ ಸೂರ್ಯ ಇವೋದಿತಃ||

ಕವಚವನ್ನು ಧರಿಸಿದ್ದ, ಖಡ್ಗಧಾರಿಯಾಗಿದ್ದ, ಬಂಗಾರದ ಕಿರೀಟವನ್ನು ಧರಿಸಿದ್ದ, ಶುಭ್ರವಾದ ಮಾಲೆ-ವಸ್ತ್ರಗಳನ್ನು ಧರಿಸಿದ್ದ, ಸುಮನೋಹರ ಕುಂಡಲಗಳನ್ನು ಧರಿಸಿದ್ದ ನಾರಾಯಣಾನುಗ ನರನು ರಣದಲ್ಲಿ ಗಾಂಡೀವವನ್ನು ಟೇಂಕರಿಸುತ್ತಾ ಉದಯಿಸುತ್ತಿರುವ ಸೂರ್ಯನಂತಿದ್ದನು.

07064019a ಸೋಽಗ್ರಾನೀಕಸ್ಯ ಮಹತ ಇಷುಪಾತೇ ಧನಂಜಯಃ|

07064019c ವ್ಯವಸ್ಥಾಪ್ಯ ರಥಂ ಸಜ್ಜಂ ಶಂಖಂ ದಧ್ಮೌ ಪ್ರತಾಪವಾನ್||

ಆ ಮಹಾಸೇನೆಯ ಎದಿರು ಬಾಣಗಳು ಬೀಳುವಷ್ಟು ದೂರದಲ್ಲಿ ರಥವನ್ನು ವ್ಯವಸ್ಥಾಪಿಸಿ ಪ್ರತಾಪವಾನ ಧನಂಜಯನು ಶಂಖವನ್ನೂದಿದನು.

07064020a ಅಥ ಕೃಷ್ಣೋಽಪ್ಯಸಂಭ್ರಾಂತಃ ಪಾರ್ಥೇನ ಸಹ ಮಾರಿಷ|

07064020c ಪ್ರಾಧ್ಮಾಪಯತ್ಪಾಂಚಜನ್ಯಂ ಶಂಖಪ್ರವರಮೋಜಸಾ||

ಮಾರಿಷ! ಆಗ ಪಾರ್ಥನೊಂದಿಗೆ ಕೃಷ್ಣನೂ ಕೂಡ ಸಂಭ್ರಾತನಾಗದೇ ಜೋರಾಗಿ ಶಂಖಪ್ರವರ ಪಾಂಚಜನ್ಯವನ್ನು ಊದಿದನು.

07064021a ತಯೋಃ ಶಂಖಪ್ರಣಾದೇನ ತವ ಸೈನ್ಯೇ ವಿಶಾಂ ಪತೇ|

07064021c ಆಸನ್ಸಂಹೃಷ್ಟರೋಮಾಣಃ ಕಂಪಿತಾ ಗತಚೇತಸಃ||

ವಿಶಾಂಪತೇ! ಅವರ ಶಂಖಧ್ವನಿಯಿಂದ ನಿನ್ನ ಸೇನೆಗಳು ರೋಮಾಂಚನಗೊಂಡು ನಡುಗಿ ಗತಚೇತಸರಾದರು.

07064022a ಯಥಾ ತ್ರಸಂತಿ ಭೂತಾನಿ ಸರ್ವಾಣ್ಯಶನಿನಿಸ್ವನಾತ್|

07064022c ತಥಾ ಶಂಖಪ್ರಣಾದೇನ ವಿತ್ರೇಸುಸ್ತವ ಸೈನಿಕಾಃ||

ಎಲ್ಲ ಪ್ರಾಣಿಗಳೂ ಸಿಡಿಲಿನ ಧ್ವನಿಯಿಂದ ಹೇಗೆ ತತ್ತರಿಸುವರೋ ಹಾಗೆ ನಿನ್ನ ಸೈನಿಕರು ಶಂಖಧ್ವನಿಯಿಂದ ತತ್ತರಿಸಿದರು.

07064023a ಪ್ರಸುಸ್ರುವುಃ ಶಕೃನ್ಮೂತ್ರಂ ವಾಹನಾನಿ ಚ ಸರ್ವಶಃ|

07064023c ಏವಂ ಸವಾಹನಂ ಸರ್ವಮಾವಿಗ್ನಮಭವದ್ಬಲಂ||

ಆನೆ-ಕುದುರೆಗಳು ಎಲ್ಲೆಡೆಯಲ್ಲಿ ಮಲ-ಮೂತ್ರ ವಿಸರ್ಜನೆಮಾಡಿದವು. ಹೀಗೆ ವಾಹನಗಳೊಂದಿಗೆ ನಿನ್ನ ಸೇನೆಯೆಲ್ಲವೂ ಆವಿಗ್ನಕ್ಕೊಳಗಾಯಿತು.

07064024a ವ್ಯಷೀದಂತ ನರಾ ರಾಜನ್ ಶಂಖಶಬ್ದೇನ ಮಾರಿಷ|

07064024c ವಿಸಂಜ್ಞಾಶ್ಚಾಭವನ್ಕೇ ಚಿತ್ಕೇ ಚಿದ್ರಾಜನ್ವಿತತ್ರಸುಃ||

ರಾಜನ್! ಮಾರಿಷ! ಶಂಖದ ಶಬ್ಧದಿಂದ ನರರು ಹೆದರಿದರು. ಕೆಲವರು ಮೂರ್ಛೆಹೋದರು. ರಾಜನ್! ಇನ್ನು ಕೆಲವರು ನಡುಗಿದರು.

07064025a ತತಃ ಕಪಿರ್ಮಹಾನಾದಂ ಸಹ ಭೂತೈರ್ಧ್ವಜಾಲಯೈಃ|

07064025c ಅಕರೋದ್ವ್ಯಾದಿತಾಸ್ಯಶ್ಚ ಭೀಷಯಂಸ್ತವ ಸೈನಿಕಾನ್||

ಆಗ ಭೂತಗಳೊಂದಿಗೆ ಧ್ವಜದಲ್ಲಿ ನೆಲೆಸಿದ್ದ ಕಪಿಯೂ ಕೂಡ ಬಾಯಿಯನ್ನು ಅಗಲವಾಗಿ ತೆರೆದು ಜೋರಾಗಿ ಕೂಗಿ ನಿನ್ನ ಸೈನಿಕರು ಇನ್ನೂ ಭೀತಿಗೊಳ್ಳುವಂತೆ ಮಾಡಿದನು.

07064026a ತತಃ ಶಂಖಾಶ್ಚ ಭೇರ್ಯಶ್ಚ ಮೃದಂಗಾಶ್ಚಾನಕೈಃ ಸಹ|

07064026c ಪುನರೇವಾಭ್ಯಹನ್ಯಂತ ತವ ಸೈನ್ಯಪ್ರಹರ್ಷಣಾಃ||

ಆಗ ನಿನ್ನ ಸೇನೆಗಳನ್ನು ಹರ್ಷಗೊಳಿಸಲು ಪುನಃ ಶಂಖ, ಭೇರಿ, ಮೃದಂಗ, ಅನಕಗಳನ್ನು ಒಟ್ಟಿಗೇ ಊದಿ-ಬಾರಿಸಲಾಯಿತು.

07064027a ನಾನಾವಾದಿತ್ರಸಂಹ್ರಾದೈಃ ಕ್ಷ್ವೇಡಿತಾಸ್ಫೋಟಿತಾಕುಲೈಃ|

07064027c ಸಿಂಹನಾದೈಃ ಸವಾದಿತ್ರೈಃ ಸಮಾಹೂತೈರ್ಮಹಾರಥೈಃ||

07064028a ತಸ್ಮಿನ್ಸುತುಮುಲೇ ಶಬ್ದೇ ಭೀರೂಣಾಂ ಭಯವರ್ಧನೇ|

07064028c ಅತೀವ ಹೃಷ್ಟೋ ದಾಶಾರ್ಹಮಬ್ರವೀತ್ಪಾಕಶಾಸನಿಃ||

ಸೇರಿದ್ದ ಮಹಾರಥರು ನಾನಾವಾದ್ಯಗಳ ಧ್ವನಿಯಿಂದ, ಗರ್ಜನ-ತರ್ಜನಗಳಿಂದ, ಚಪ್ಪಾಳೆಗಳಿಂದ, ಸಿಂಹನಾದಗಳಿಂದ ಹೇಡಿಗಳ ಭಯವನ್ನು ಹೆಚ್ಚಿಸುವ ಆ ತುಮುಲ ಶಬ್ಧವನ್ನು ಮಾಡುತ್ತಿರಲು, ಅತೀವ ಹೃಷ್ಟನಾದ ಪಾಕಶಾಸನಿಯು ದಾಶಾರ್ಹನಿಗೆ ಹೇಳಿದನು:

07064029a ಚೋದಯಾಶ್ವಾನ್ ಹೃಷೀಕೇಶ ಯತ್ರ ದುರ್ಮರ್ಷಣಃ ಸ್ಥಿತಃ|

07064029c ಏತದ್ಭಿತ್ತ್ವಾ ಗಜಾನೀಕಂ ಪ್ರವೇಕ್ಷ್ಯಾಮ್ಯರಿವಾಹಿನೀಂ||

“ಹೃಷೀಕೇಶ! ಎಲ್ಲಿ ದುರ್ಮರ್ಷಣನಿರುವನೋ ಅಲ್ಲಿಗೇ ಕುದುರೆಗಳನ್ನು ಓಡಿಸು. ಮೊದಲು ಅವನ ಗಜಸೇನೆಯನ್ನು ಭೇದಿಸಿ ಅರಿಸೇನೆಯನ್ನು ಪ್ರವೇಶಿಸುತ್ತೇನೆ!”

07064030a ಏವಮುಕ್ತೋ ಮಹಾಬಾಹುಃ ಕೇಶವಃ ಸವ್ಯಸಾಚಿನಾ|

07064030c ಅಚೋದಯದ್ಧಯಾಂಸ್ತತ್ರ ಯತ್ರ ದುರ್ಮರ್ಷಣಃ ಸ್ಥಿತಃ||

ಸವ್ಯಸಾಚಿಯು ಹೀಗೆ ಹೇಳಲು ಮಹಾಬಾಹು ಕೇಶವನು ದುರ್ಮರ್ಷಣನಿರುವಲ್ಲಿಗೆ ಕುದುರೆಗಳನ್ನು ಓಡಿಸಿದನು.

07064031a ಸ ಸಂಪ್ರಹಾರಸ್ತುಮುಲಃ ಸಂಪ್ರವೃತ್ತಃ ಸುದಾರುಣಃ|

07064031c ಏಕಸ್ಯ ಚ ಬಹೂನಾಂ ಚ ರಥನಾಗನರಕ್ಷಯಃ||

ಆಗ ಅನೇಕರೊಂದಿಗೆ ಒಬ್ಬನ ತುಮುಲಪ್ರಹಾರಗಳನ್ನುಳ್ಳ, ದಾರುಣವಾದ, ರಥ-ಗಜ-ನರರ ಕ್ಷಯಕಾರಕ ತುಮುಲ ಯುದ್ಧವು ನಡೆಯಿತು.

07064032a ತತಃ ಸಾಯಕವರ್ಷೇಣ ಪರ್ಜನ್ಯ ಇವ ವೃಷ್ಟಿಮಾನ್|

07064032c ಪರಾನವಾಕಿರತ್ಪಾರ್ಥಃ ಪರ್ವತಾನಿವ ನೀರದಃ||

ಆಗ ಮಳೆಸುರಿಸುವ ಮೋಡದಂತೆ ಸಾಯಕಗಳ ಮಳೆಸುರಿಸಿ, ಮೋಡಗಳು ಪರ್ವತವನ್ನು ಹೇಗೋ ಹಾಗೆ ಪಾರ್ಥನು ಶತ್ರುಗಳನ್ನು ಮುಸುಕಿದನು.

07064033a ತೇ ಚಾಪಿ ರಥಿನಃ ಸರ್ವೇ ತ್ವರಿತಾಃ ಕೃತಹಸ್ತವತ್|

07064033c ಅವಾಕಿರನ್ಬಾಣಜಾಲೈಸ್ತತಃ ಕೃಷ್ಣಧನಂಜಯೌ||

ಆ ರಥಿಗಳೆಲ್ಲರೂ ತ್ವರೆಮಾಡಿ ಹಸ್ತಚಾಕಚಕ್ಯತೆಯಿಂದ ಕೃಷ್ಣ-ಧನಂಜಯರನ್ನು ಬಾಣಜಾಲಗಳಿಂದ ಮುಚ್ಚಿದರು.

07064034a ತತಃ ಕ್ರುದ್ಧೋ ಮಹಾಬಾಹುರ್ವಾರ್ಯಮಾಣಃ ಪರೈರ್ಯುಧಿ|

07064034c ಶಿರಾಂಸಿ ರಥಿನಾಂ ಪಾರ್ಥಃ ಕಾಯೇಭ್ಯೋಽಪಾಹರಚ್ಚರೈಃ||

ಶತ್ರುಗಳಿಂದ ಯುದ್ಧದಲ್ಲಿ ತಡೆಯಲ್ಪಟ್ಟ ಮಹಾಬಾಹು ಪಾರ್ಥನು ಕ್ರುದ್ಧನಾಗಿ ಶರಗಳಿಂದ ರಥಿಗಳ ಶಿರಗಳನ್ನು ಕಾಯಗಳಿಂದ ಅಪಹರಿಸಿದನು.

07064035a ಉದ್ಭ್ರಾಂತನಯನೈರ್ವಕ್ತ್ರೈಃ ಸಂದಷ್ಟೋಷ್ಠಪುಟೈಃ ಶುಭೈಃ|

07064035c ಸಕುಂಡಲಶಿರಸ್ತ್ರಾಣೈರ್ವಸುಧಾ ಸಮಕೀರ್ಯತ||

ಉದ್ವೇಗದ ಕಣ್ಣುಗಳಿಂದ, ಅವುಡುಕಚ್ಚಿದ ತುಟಿಗಳಿಂದ, ಸುಂದರ ಕುಂಡಲ-ಶಿರಸ್ತ್ರಾಣಗಳಿಂದ ಕೂಡಿದ ಶಿರಗಳಿಂದ ಅವನಿಯು ವ್ಯಾಪ್ತವಾಯಿತು.

07064036a ಪುಂಡರೀಕವನಾನೀವ ವಿಧ್ವಸ್ತಾನಿ ಸಮಂತತಃ|

07064036c ವಿನಿಕೀರ್ಣಾನಿ ಯೋಧಾನಾಂ ವದನಾನಿ ಚಕಾಶಿರೇ||

ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಯೋಧರ ಮುಖಗಳು ವಿಧ್ವಂಸಗೊಂಡ ಕಮಲ ಪುಷ್ಪಗಳಂತೆ ಎಲ್ಲಕಡೆ ಚದುರಿ ಬಿದ್ದಿದ್ದವು.

07064037a ತಪನೀಯವಿಚಿತ್ರಾಣಿ ಸಿಕ್ತಾನಿ ರುಧಿರೇಣ ಚ|

07064037c ಅದೃಶ್ಯಂತ ಯಥಾ ರಾಜನ್ಮೇಘಸಂಘಾಃ ಸವಿದ್ಯುತಃ||

ರಾಜನ್! ಸುವರ್ಣಮಯ ವಿಚಿತ್ರ ಕವಚಗಳನ್ನು ಧರಿಸಿದ್ದ, ರಕ್ತದಲ್ಲಿ ತೋಯ್ದು ಹೋಗಿದ್ದ ಅವರ ದೇಹಗಳು ಮಿಂಚಿನಿಂದ ಕೂಡಿದ ಮೇಘರಾಶಿಯಂತೆ ತೋರುತ್ತಿದ್ದವು.

07064038a ಶಿರಸಾಂ ಪತತಾಂ ರಾಜನ್ ಶಬ್ದೋಽಭೂತ್ಪೃಥಿವೀತಲೇ|

07064038c ಕಾಲೇನ ಪರಿಪಕ್ವಾನಾಂ ತಾಲಾನಾಂ ಪತತಾಮಿವ||

ಸಮಯಬಂದು ಪರಿಪಕ್ವವಾದ ತಾಳೆಯ ಹಣ್ಣುಗಳು ಬೀಳುವಂತೆ ಭೂಮಿಯ ಮೇಲೆ ಬೀಳುತ್ತಿದ್ದ ಶಿರಸ್ಸುಗಳ ಶಬ್ಧವು ಕೇಳಿಬರುತ್ತಿತ್ತು.

07064039a ತತಃ ಕಬಂಧಃ ಕಶ್ಚಿತ್ತು ಧನುರಾಲಂಬ್ಯ ತಿಷ್ಠತಿ|

07064039c ಕಶ್ಚಿತ್ಖಡ್ಗಂ ವಿನಿಷ್ಕೃಷ್ಯ ಭುಜೇನೋದ್ಯಮ್ಯ ತಿಷ್ಠತಿ||

ಆಗ ಕೆಲವು ಕಬಂಧಗಳು ಧನುಸ್ಸನ್ನೇ ಊರಿ ನಿಂತಿದ್ದವು. ಕೆಲವು ಖಡ್ಗವನ್ನು ಒರಸೆಯಿಂದ ಎಳೆದು ತೆಗೆದು ಭುಜದ ಮೇಲೆ ಹೊತ್ತು ನಿಂತಿದ್ದವು.

07064040a ನಾಜಾನಂತ ಶಿರಾಂಸ್ಯುರ್ವ್ಯಾಂ ಪತಿತಾನಿ ನರರ್ಷಭಾಃ|

07064040c ಅಮೃಷ್ಯಮಾಣಾಃ ಕೌಂತೇಯಂ ಸಂಗ್ರಾಮೇ ಜಯಗೃದ್ಧಿನಃ||

ಸಂಗ್ರಾಮದಲ್ಲಿ ಜಯವನ್ನು ಬಯಸಿದ ಆ ನರರ್ಷಭರು ಬಾಣಗಳಿಂದ ತಮ್ಮ ಶಿರಸ್ಸುಗಳು ಬಿದ್ದಿದುದನ್ನು ತಿಳಿಯದೇ ಅಸಹನೆಯಿಂದ ಕೌಂತೇಯನ ಕಡೆ ನುಗ್ಗುತ್ತಿದ್ದರು.

07064041a ಹಯಾನಾಮುತ್ತಮಾಂಗೈಶ್ಚ ಹಸ್ತಿಹಸ್ತೈಶ್ಚ ಮೇದಿನೀ|

07064041c ಬಾಹುಭಿಶ್ಚ ಶಿರೋಭಿಶ್ಚ ವೀರಾಣಾಂ ಸಮಕೀರ್ಯತ||

ಕುದುರೆಗಳ ರುಂಡಗಳು, ಆನೆಗಳ ಸೊಂಡಿಲುಗಳು, ವೀರರ ಬಾಹುಗಳು ಮತ್ತು ಶಿರಗಳು ಮೇದಿನಿಯ ಮೇಲೆ ಹರಡಿ ಬಿದ್ದಿದ್ದವು.

07064042a ಅಯಂ ಪಾರ್ಥಃ ಕುತಃ ಪಾರ್ಥ ಏಷ ಪಾರ್ಥ ಇತಿ ಪ್ರಭೋ|

07064042c ತವ ಸೈನ್ಯೇಷು ಯೋಧಾನಾಂ ಪಾರ್ಥಭೂತಮಿವಾಭವತ್||

ಪ್ರಭೋ! “ಇಲ್ಲಿಯೇ ಪಾರ್ಥನಿದ್ದಾನೆ! ಪಾರ್ಥನೆಲ್ಲಿ? ಇವನೇ ಪಾರ್ಥ!” ಎಂದು ಮುಂತಾಗಿ ಕೂಗುತ್ತಿದ್ದ ನಿನ್ನ ಸೇನೆಯ ಯೋಧರಿಗೆ ಎಲ್ಲವೂ ಪಾರ್ಥಮಯವಾಗಿ ತೋರಿತು.

07064043a ಅನ್ಯೋನ್ಯಮಪಿ ಚಾಜಘ್ನುರಾತ್ಮಾನಮಪಿ ಚಾಪರೇ|

07064043c ಪಾರ್ಥಭೂತಮಮನ್ಯಂತ ಜಗತ್ಕಾಲೇನ ಮೋಹಿತಾಃ||

ಕಾಲದಿಂದ ಮೋಹಿತರಾದ ಅವರು ಅನ್ಯೋನ್ಯರನ್ನೂ ಕೊಲ್ಲುತ್ತಿದ್ದರು. ತಮ್ಮವರನ್ನೇ ಶತ್ರುವೆಂದು ತಿಳಿದು ಇಡೀ ಜಗತ್ತೇ ಪಾರ್ಥನಿಂದ ತುಂಬಿಕೊಂಡಿರುವಂತೆ ಭ್ರಾಂತರಾದರು.

07064044a ನಿಷ್ಟನಂತಃ ಸರುಧಿರಾ ವಿಸಂಜ್ಞಾ ಗಾಢವೇದನಾಃ|

07064044c ಶಯಾನಾ ಬಹವೋ ವೀರಾಃ ಕೀರ್ತಯಂತಃ ಸುಹೃಜ್ಜನಂ||

ರಕ್ತದಿಂದ ತೋಯ್ದುಹೋಗಿ, ಗಾಢವೇದನೆಯಿಂದ ಮೂರ್ಛಿತರಾಗಿ ಮಲಗಿದ್ದ ಅನೇಕ ವೀರರು ಸ್ನೇಹಿತರನ್ನು ಕೂಗಿ ಕರೆಯುತ್ತಿದ್ದರು.

07064045a ಸಭಿಂಡಿಪಾಲಾಃ ಸಪ್ರಾಸಾಃ ಸಶಕ್ತ್ಯೃಷ್ಟಿಪರಶ್ವಧಾಃ|

07064045c ಸನಿರ್ಯೂಹಾಃ ಸನಿಸ್ತ್ರಿಂಶಾಃ ಸಶರಾಸನತೋಮರಾಃ||

07064046a ಸಬಾಣವರ್ಮಾಭರಣಾಃ ಸಗದಾಃ ಸಾಂಗದಾ ರಣೇ|

07064046c ಮಹಾಭುಜಗಸಂಕಾಶಾ ಬಾಹವಃ ಪರಿಘೋಪಮಾಃ||

07064047a ಉದ್ವೇಷ್ಟಂತಿ ವಿಚೇಷ್ಟಂತಿ ಸಂವೇಷ್ಟಂತಿ ಚ ಸರ್ವಶಃ|

07064047c ವೇಗಂ ಕುರ್ವಂತಿ ಸಂರಬ್ಧಾ ನಿಕೃತ್ತಾಃ ಪರಮೇಷುಭಿಃ||

ಪರಮ ಬಾಣಗಳಿಂದ ಕತ್ತರಿಸಲ್ಪಟ್ಟ ಮಹಾಸರ್ಪಗಳಂತಿದ್ದ, ಪರಿಘಗಳಂತಿದ್ದ ಬಾಹುಗಳು ರಣದಲ್ಲಿ ಎಲ್ಲ ಕಡೆ ಭಿಂಡಿಪಾಲ, ಪ್ರಾಸ, ಶಕ್ತಿ, ಪರಶಾಯುಧ, ಋಷ್ಠಿ, ತ್ರಿಶೂಲ, ಖಡ್ಗ, ಧನುಸ್ಸು, ತೋಮರ, ಕವಚ, ಆಭರಣ, ಗದೆ, ಅಂಗದಗಳೊಂದಿಗೆ ಸಂರಬ್ಧರಾಗಿ ಮೇಲೆ ಏಳುತ್ತಿದ್ದವು, ಚಡಪಡಿಸುತ್ತಿದ್ದವು, ಆವೇಶಯುಕ್ತವಾಗಿ ಮೇಲೆ ಮೇಲೆ ಹಾರುತ್ತಿದ್ದವು.

07064048a ಯೋ ಯಃ ಸ್ಮ ಸಮರೇ ಪಾರ್ಥಂ ಪ್ರತಿಸಂರಭತೇ ನರಃ|

07064048c ತಸ್ಯ ತಸ್ಯಾಂತಕೋ ಬಾಣಃ ಶರೀರಮುಪಸರ್ಪತಿ||

ಸಮರದಲ್ಲಿ ಯಾವ ಮನುಷ್ಯನು ಪಾರ್ಥನನ್ನು ಎದುರಿಸಲು ಅಸಹನೆಯಿಂದ ಮುನ್ನುಗ್ಗುತ್ತಿದ್ದನೋ ಅವನ ಶರೀರವನ್ನು ಪ್ರಾಣಾಂತಕ ಬಾಣವು ಹೊಗುತ್ತಿತ್ತು.

07064049a ನೃತ್ಯತೋ ರಥಮಾರ್ಗೇಷು ಧನುರ್ವ್ಯಾಯಚ್ಚತಸ್ತಥಾ|

07064049c ನ ಕಶ್ಚಿತ್ತತ್ರ ಪಾರ್ಥಸ್ಯ ದದರ್ಶಾಂತರಮಣ್ವಪಿ||

ಹೀಗೆ ರಥಮಾರ್ಗಗಳಲ್ಲಿ ಧನುಸ್ಸನ್ನು ಎಡ ಮತ್ತು ಬಲಗೈಗಳಲ್ಲಿ ಹಿಡಿಯುತ್ತಾ ನರ್ತಿಸುತ್ತಿದ್ದ ಪಾರ್ಥನನ್ನು ಹೊಡೆಯಲು ಒಂದು ಸ್ವಲ್ವ ಅವಕಾಶವನ್ನೂ ಅವರು ಕಾಣುತ್ತಿರಲಿಲ್ಲ.

07064050a ಯತ್ತಸ್ಯ ಘಟಮಾನಸ್ಯ ಕ್ಷಿಪ್ರಂ ವಿಕ್ಷಿಪತಃ ಶರಾನ್|

07064050c ಲಾಘವಾತ್ಪಾಂಡುಪುತ್ರಸ್ಯ ವ್ಯಸ್ಮಯಂತ ಪರೇ ಜನಾಃ||

ಶ್ರಮಿಸಿ ಪ್ರಯತ್ನಿಸುತ್ತಿದ್ದ, ಬೇಗಬೇಗನೇ ಶರಗಳನ್ನು ಪ್ರಯೋಗಿಸುತ್ತಿದ್ದ ಪಾಂಡುಪುತ್ರನ ಕೈಚಳಕವನ್ನು ನೋಡಿ ಜನರು ತುಂಬಾ ವಿಸ್ಮಿತರಾದರು.

07064051a ಹಸ್ತಿನಂ ಹಸ್ತಿಯಂತಾರಮಶ್ವಮಾಶ್ವಿಕಮೇವ ಚ|

07064051c ಅಭಿನತ್ಫಲ್ಗುನೋ ಬಾಣೈ ರಥಿನಂ ಚ ಸಸಾರಥಿಂ||

ಫಲ್ಗುನನು ಬಾಣಗಳಿಂದ ಆನೆಗಳನ್ನೂ, ಮಾವಟಿಗರನ್ನೂ, ಕುದುರೆಗಳನ್ನೂ, ಕುದುರೆಸವಾರರನ್ನೂ, ಸಾರಥಿಗಳೊಂದಿಗೆ ರಥಾರೂಢರನ್ನೂ ಸಂಹರಿಸುತ್ತಿದ್ದನು.

07064052a ಆವರ್ತಮಾನಮಾವೃತ್ತಂ ಯುಧ್ಯಮಾನಂ ಚ ಪಾಂಡವಃ|

07064052c ಪ್ರಮುಖೇ ತಿಷ್ಠಮಾನಂ ಚ ನ ಕಂ ಚಿನ್ನ ನಿಹಂತಿ ಸಃ||

ಪಾಂಡವನು ಓಡಿ ಹೋಗಿ ಪುನಃ ಹಿಂದಿರುಗುತ್ತಿದ್ದವರನ್ನೂ, ಮುಂದೆ ನಿಂತು ಯುದ್ಧಮಾಡುತ್ತಿರುವವರನ್ನೂ ಯಾರನ್ನೂ ಕೊಲ್ಲದೇ ಬಿಡುತ್ತಿರಲಿಲ್ಲ.

07064053a ಯಥೋದಯನ್ವೈ ಗಗನೇ ಸೂರ್ಯೋ ಹಂತಿ ಮಹತ್ತಮಃ|

07064053c ತಥಾರ್ಜುನೋ ಗಜಾನೀಕಮವಧೀತ್ಕಂಕಪತ್ರಿಭಿಃ||

ಗಗನದಲ್ಲಿ ಸೂರ್ಯನು ಉದಯಿಸಿ ಮಹಾ ಕತ್ತಲೆಯನ್ನು ಸಂಹರಿಸುವಂತೆ ಅರ್ಜುನನು ಕಂಕಪತ್ರಿಗಳಿಂದ ಆ ಗಜಾನೀಕವನ್ನು ವಧಿಸಿದನು.

07064054a ಹಸ್ತಿಭಿಃ ಪತಿತೈರ್ಭಿನ್ನೈಸ್ತವ ಸೈನ್ಯಮದೃಶ್ಯತ|

07064054c ಅಂತಕಾಲೇ ಯಥಾ ಭೂಮಿರ್ವಿನಿಕೀರ್ಣೈರ್ಮಹೀಧರೈಃ||

ಅಂತಕಾಲದಲ್ಲಿ ಭೂಮಿಯ ಮೇಲೆ ಪರ್ವತಗಳು ಹರಡಿ ಬಿದ್ದಿರುವಂತೆ ಒಡೆದ ಆನೆಗಳು ರಣಭೂಮಿಯಲ್ಲಿ ಬಿದ್ದಿರುವುದನ್ನು ನಿನ್ನ ಸೈನ್ಯವು ನೋಡಿತು.

07064055a ಯಥಾ ಮಧ್ಯಂದಿನೇ ಸೂರ್ಯೋ ದುಷ್ಪ್ರೇಕ್ಷ್ಯಃ ಪ್ರಾಣಿಭಿಃ ಸದಾ|

07064055c ತಥಾ ಧನಂಜಯಃ ಕ್ರುದ್ಧೋ ದುಷ್ಪ್ರೇಕ್ಷ್ಯೋ ಯುಧಿ ಶತ್ರುಭಿಃ||

ಹೇಗೆ ಮಧ್ಯಾಹ್ನದ ಸೂರ್ಯನನ್ನು ನೋಡಲು ಸದಾ ಪ್ರಣಿಗಳಿಗೆ ಕಷ್ಟವಾಗುತ್ತದೆಯೋ ಹಾಗೆ ಯುದ್ಧದಲ್ಲಿ ಕ್ರುದ್ಧನಾದ ಧನಂಜಯನನ್ನು ನೋಡಲು ಶತ್ರುಗಳಿಗೆ ಕಷ್ಟವಾಗುತ್ತಿತ್ತು.

07064056a ತತ್ತಥಾ ತವ ಪುತ್ರಸ್ಯ ಸೈನ್ಯಂ ಯುಧಿ ಪರಂತಪ|

07064056c ಪ್ರಭಗ್ನಂ ದ್ರುತಮಾವಿಗ್ನಮತೀವ ಶರಪೀಡಿತಂ||

ಪರಂತಪ! ಆಗ ಯುದ್ಧದಲ್ಲಿ ನಿನ್ನ ಮಗನ ಸೈನ್ಯವು ಭಗ್ನವಾಗಿ, ಶರಗಳಿಂದ ಅತ್ಯಂತ ಪೀಡಿತರಾಗಿ, ಉದ್ವಿಗ್ನರಾಗಿ ಪಲಾಯನಗೈದರು.

07064057a ಮಾರುತೇನೇವ ಮಹತಾ ಮೇಘಾನೀಕಂ ವಿಧೂಯತಾ|

07064057c ಪ್ರಕಾಲ್ಯಮಾನಂ ತತ್ಸೈನ್ಯಂ ನಾಶಕತ್ಪ್ರತಿವೀಕ್ಷಿತುಂ||

ದೊಡ್ಡ ಚಂಡಮಾರುತವು ಮೇಘಗಳ ಸಮೂಹವನ್ನು ಹಾರಿಸಿಕೊಂಡು ಹೋಗುವಂತೆ ಓಡಿಹೋಗುತ್ತಿದ್ದ ಆ ಸೈನ್ಯಕ್ಕೆ ಹಿಂದಿರುಗಿ ನೋಡಲೂ ಕೂಡ ಸಾಧ್ಯವಾಗುತ್ತಿರಲಿಲ್ಲ.

07064058a ಪ್ರತೋದೈಶ್ಚಾಪಕೋಟೀಭಿರ್ಹುಂಕಾರೈಃ ಸಾಧುವಾಹಿತೈಃ|

07064058c ಕಶಾಪಾರ್ಷ್ಣ್ಯಭಿಘಾತೈಶ್ಚ ವಾಗ್ಭಿರುಗ್ರಾಭಿರೇವ ಚ||

07064059a ಚೋದಯಂತೋ ಹಯಾಂಸ್ತೂರ್ಣಂ ಪಲಾಯಂತೇ ಸ್ಮ ತಾವಕಾಃ|

07064059c ಸಾದಿನೋ ರಥಿನಶ್ಚೈವ ಪತ್ತಯಶ್ಚಾರ್ಜುನಾರ್ದಿತಾಃ||

ಅರ್ಜುನನಿಂದ ಆರ್ದಿತರಾದ ನಿನ್ನ ಕಡೆಯ ಅಶ್ವಾರೋಹಿಗಳು ಮತ್ತು ರಥಾರೂಢರು ಚಾವಟಿಗಳಿಂದಲೂ, ಧನುಸ್ಸುಗಳ ತುದಿಯಿಂದಲೂ, ಹುಂಕಾರಶಬ್ಧಗಳಿಂದಲೂ, ಚಪ್ಪರಿಸುವುದರಿಂದಲೂ, ಬಾರುಕೋಲು ಮತ್ತು ಹಿಮ್ಮಡಿಯ ಪ್ರಹಾರಗಳಿಂದಲೂ ಗಟ್ಟಿಯಾಗಿ ಅಬ್ಬರಿಸುವುದರಿಂದಲೂ ಬೇಗ ಬೇಗ ಕುದುರೆಗಳನ್ನು ಓಡಿಸಿಕೊಂಡು ಪಲಾಯನ ಮಾಡುತ್ತಿದ್ದರು.

07064060a ಪಾರ್ಷ್ಣ್ಯಂಗುಷ್ಠಾಂಕುಶೈರ್ನಾಗಾಂಶ್ಚೋದಯಂತಸ್ತಥಾಪರೇ|

07064060c ಶರೈಃ ಸಮ್ಮೋಹಿತಾಶ್ಚಾನ್ಯೇ ತಮೇವಾಭಿಮುಖಾ ಯಯೌ|

07064060e ತವ ಯೋಧಾ ಹತೋತ್ಸಾಹಾ ವಿಭ್ರಾಂತಮನಸಸ್ತದಾ||

ಕೆಲವರು ಪಾರ್ಷ್ಣಿ-ಅಂಗುಷಾಂಕುಶಗಳಿಂದ ಆನೆಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು. ಕೆಲವರು ಶರಗಳಿಂದ ಸಮ್ಮೋಹಿತರಾಗಿ, ಎಲ್ಲಿ ಓಡಬೇಕೆಂದು ತಿಳಿಯದೇ ಅರ್ಜುನನ ಅಭಿಮುಖವಾಗಿಯೇ ಹೋಗುತ್ತಿದ್ದರು. ಹೀಗೆ ನಿನ್ನ ಯೋಧರು ಆಗ ಉತ್ಸಾಹವನ್ನು ಕಳೆದುಕೊಂಡವರೂ, ಭ್ರಾಂತಿಗೊಂಡವರೂ ಆಗಿದ್ದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅರ್ಜುನಯುದ್ಧೇ ಚತುಃಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅರ್ಜುನಯುದ್ಧ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.

Related image

Comments are closed.