|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleದ್ರೋಣ ಪರ್ವ: ದ್ರೋಣವಧ ಪರ್ವ
೧೫೯
ಹದಿನಾಲ್ಕನೆಯ ದಿನದ ರಾತ್ರಿಯುದ್ಧದಲ್ಲಿ ರಣಾಂಗಣದಲ್ಲಿಯೇ ಸೇನೆಗಳು ನಿದ್ರೆಹೋದುದು
ಯುಧಿಷ್ಠಿರನ ನಿರ್ದೇಶನದಂತೆ ಧೃಷ್ಟದ್ಯುಮ್ನಾದಿಗಳು ದ್ರೋಣನನ್ನು ಆಕ್ರಮಣಿಸಿದುದು (೧-೧೧). ಆಯಾಸಗೊಂಡಿದ್ದ ಸೈನಿಕರು ರಣಾಂಗಣದಲ್ಲಿಯೇ ತೂಕಡಿಸುತ್ತಾ ಯುದ್ಧಮಾಡುತ್ತಿದ್ದುದು (೧೨-೨೧). ಅರ್ಜುನನ ಸಲಹೆಯಂತೆ ಕೌರವ-ಪಾಂಡವ ಸೇನೆಗಳು ವಾಹನಗಳೊಂದಿಗೆ ರಣಾಂಗಣದಲ್ಲಿಯೇ ನಿದ್ರೆಹೋದುದು (೨೨-೪೧). ಚಂದ್ರೋದಯವಾಗಲು ಪುನಃ ಯುದ್ಧವು ಪ್ರಾರಂಭವಾದುದು (೪೨-೫೦).
07159001 ಸಂಜಯ ಉವಾಚ|
07159001a ಘಟೋತ್ಕಚೇ ತು ನಿಹತೇ ಸೂತಪುತ್ರೇಣ ತಾಂ ನಿಶಾಂ|
07159001c ದುಃಖಾಮರ್ಷವಶಂ ಪ್ರಾಪ್ತೋ ಧರ್ಮಪುತ್ರೋ ಯುಧಿಷ್ಠಿರಃ||
ಸಂಜಯನು ಹೇಳಿದನು: “ಆ ರಾತ್ರಿ ಸೂತಪುತ್ರನಿಂದ ಘಟೋತ್ಕಚನು ಹತನಾಗಲು ಧರ್ಮಪುತ್ರ ಯುಧಿಷ್ಠಿರನು ದುಃಖ-ರೋಷಗಳ ವಶನಾದನು.
07159002a ದೃಷ್ಟ್ವ ಭೀಮೇನ ಮಹತೀಂ ವಾರ್ಯಮಾಣಾಂ ಚಮೂಂ ತವ|
07159002c ಧೃಷ್ಟದ್ಯುಮ್ನಮುವಾಚೇದಂ ಕುಂಭಯೋನಿಂ ನಿವಾರಯ||
ಭೀಮನಿಂದ ನಿನ್ನ ಮಹಾಸೇನೆಯು ತಡೆಹಿಡಿಯಲ್ಪಟ್ಟಿರುವುದನ್ನು ನೋಡಿ ಕುಂಭಯೋನಿ ದ್ರೋಣನನ್ನು ತಡೆಯುವಂತೆ ಧೃಷ್ಟದ್ಯುಮ್ನನಿಗೆ ಹೇಳಿದನು:
07159003a ತ್ವಂ ಹಿ ದ್ರೋಣವಿನಾಶಾಯ ಸಮುತ್ಪನ್ನೋ ಹುತಾಶನಾತ್|
07159003c ಸಶರಃ ಕವಚೀ ಖಡ್ಗೀ ಧನ್ವೀ ಚ ಪರತಾಪನಃ|
07159003e ಅಭಿದ್ರವ ರಣೇ ಹೃಷ್ಟೋ ನ ಚ ತೇ ಭೀಃ ಕಥಂ ಚನ||
“ಶತ್ರುತಾಪನ! ದ್ರೋಣನ ವಿನಾಶಕ್ಕಾಗಿಯೇ ನೀನು ಅಗ್ನಿಯಿಂದ ಶರ, ಕವಚ, ಖಡ್ಗ ಮತ್ತು ಧನುಸ್ಸುಗಳೊಡನೆ ಸಮುತ್ಪನ್ನನಾಗಿದ್ದೀಯೆ. ಆದುದರಿಂದ ನೀನು ಸ್ವಲ್ಪವೂ ಭಯಪಡದೇ ಸಂತೋಷದಿಂದ ರಣದಲ್ಲಿ ಅವನನ್ನು ಆಕ್ರಮಣಿಸು!
07159004a ಜನಮೇಜಯಃ ಶಿಖಂಡೀ ಚ ದೌರ್ಮುಖಿಶ್ಚ ಯಶೋಧನಃ|
07159004c ಅಭಿದ್ರವಂತು ಸಂಹೃಷ್ಟಾಃ ಕುಂಭಯೋನಿಂ ಸಮಂತತಃ||
ಜನಮೇಜಯ, ಶಿಖಂಡಿ, ದೌರ್ಮುಖಿ ಮತ್ತು ಯಶೋಧನರು ಸಂಹೃಷ್ಟರಾಗಿ ಕುಂಭಯೋನಿಯನ್ನು ಎಲ್ಲಕಡೆಗಳಿಂದ ಆಕ್ರಮಣಿಸಲಿ.
07159005a ನಕುಲಃ ಸಹದೇವಶ್ಚ ದ್ರೌಪದೇಯಾಃ ಪ್ರಭದ್ರಕಾಃ|
07159005c ದ್ರುಪದಶ್ಚ ವಿರಾಟಶ್ಚ ಪುತ್ರಭ್ರಾತೃಸಮನ್ವಿತೌ||
07159006a ಸಾತ್ಯಕಿಃ ಕೇಕಯಾಶ್ಚೈವ ಪಾಂಡವಶ್ಚ ಧನಂಜಯಃ|
07159006c ಅಭಿದ್ರವಂತು ವೇಗೇನ ಭಾರದ್ವಾಜವಧೇಪ್ಸಯಾ||
ನಕುಲ-ಸಹದೇವರು, ದ್ರೌಪದೇಯರು, ಪ್ರಭದ್ರಕರು, ಪುತ್ರ-ಭ್ರಾತೃಗಳೊಡನೆ ದ್ರುಪದ-ವಿರಾಟರು, ಸಾತ್ಯಕಿ, ಕೇಕಯರು, ಮತ್ತು ಪಾಂಡವ ಧನಂಜಯ ಇವರು ಭಾರದ್ವಾಜನ ವಧೆಯನ್ನು ಗುರಿಯಾಗಿಟ್ಟುಕೊಂಡು ವೇಗದಿಂದ ಆಕ್ರಮಣಿಸಲಿ.
07159007a ತಥೈವ ರಥಿನಃ ಸರ್ವೇ ಹಸ್ತ್ಯಶ್ವಂ ಯಚ್ಚ ಕಿಂ ಚನ|
07159007c ಪಾದಾತಾಶ್ಚ ರಣೇ ದ್ರೋಣಂ ಪ್ರಾಪಯಂತು ಮಹಾರಥಂ||
ಹಾಗೆಯೇ ಸರ್ವ ರಥಿಗಳೂ, ಆನೆ-ಕುದುರೆ ಸವಾರರೂ, ಇತರ ಪಾದಾತಿಗಳೂ ರಣದಲ್ಲಿ ಮಹಾರಥ ದ್ರೋಣನನ್ನು ಉರುಳಿಸಲು ಪ್ರಯತ್ನಿಸಲಿ.”
07159008a ತಥಾಜ್ಞಪ್ತಾಸ್ತು ತೇ ಸರ್ವೇ ಪಾಂಡವೇನ ಮಹಾತ್ಮನಾ|
07159008c ಅಭ್ಯದ್ರವಂತ ವೇಗೇನ ಕುಂಭಯೋನಿಂ ಯುಯುತ್ಸಯಾ||
ಹಾಗೆ ಪಾಂಡವ ಮಹಾತ್ಮನಿಂದ ಆಜ್ಞಾಪಿತರಾದ ಅವರೆಲ್ಲರೂ ವೇಗದಿಂದ ಮತ್ತು ಯುದ್ಧೋತ್ಸಾಹದಿಂದ ಕುಂಭಯೋನಿಯನ್ನು ಆಕ್ರಮಣಿಸಿದರು.
07159009a ಆಗಚ್ಚತಸ್ತಾನ್ಸಹಸಾ ಸರ್ವೋದ್ಯೋಗೇನ ಪಾಂಡವಾನ್|
07159009c ಪ್ರತಿಜಗ್ರಾಹ ಸಮರೇ ದ್ರೋಣಃ ಶಸ್ತ್ರಭೃತಾಂ ವರಃ||
ಸಮರದಲ್ಲಿ ಸರ್ವ ಪ್ರಯತ್ನದಿಂದ ಒಮ್ಮೆಲೇ ತನ್ನ ಮೇಲೆ ಬೀಳುತ್ತಿದ್ದ ಆ ಪಾಂಡವ ಸರ್ವರನ್ನೂ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ಎದುರಿಸಿದನು.
07159010a ತತೋ ದುರ್ಯೋಧನೋ ರಾಜಾ ಸರ್ವೋದ್ಯೋಗೇನ ಪಾಂಡವಾನ್|
07159010c ಅಭ್ಯದ್ರವತ್ಸುಸಂಕ್ರುದ್ಧ ಇಚ್ಚನ್ದ್ರೋಣಸ್ಯ ಜೀವಿತಂ||
ಆಗ ರಾಜಾ ದುರ್ಯೋಧನನು ಬಹಳ ಕ್ರೋಧಿತನಾಗಿ ದ್ರೋಣನನ್ನು ಜೀವಂತವಾಗಿಡಲು ಇಚ್ಛಿಸಿ ಸರ್ವ ಪ್ರಯತ್ನದಿಂದ ಪಾಂಡವರನ್ನು ಆಕ್ರಮಣಿಸಿದನು.
07159011a ತತಃ ಪ್ರವವೃತೇ ಯುದ್ಧಂ ಶ್ರಾಂತವಾಹನಸೈನಿಕಂ|
07159011c ಪಾಂಡವಾನಾಂ ಕುರೂಣಾಂ ಚ ಗರ್ಜತಾಮಿತರೇತರಂ||
ಆಗ ಬಳಲಿದ್ದ ಪಾಂಡವರ ಮತ್ತು ಕುರುಗಳ ವಾಹನ-ಸೈನಿಕರ ನಡುವೆ, ಪರಸ್ಪರರ ಮೇಲೆ ಗರ್ಜಿಸುತ್ತಾ, ಯುದ್ಧವು ಪ್ರಾರಂಭವಾಯಿತು.
07159012a ನಿದ್ರಾಂಧಾಸ್ತೇ ಮಹಾರಾಜ ಪರಿಶ್ರಾಂತಾಶ್ಚ ಸಂಯುಗೇ|
07159012c ನಾಭ್ಯಪದ್ಯಂತ ಸಮರೇ ಕಾಂ ಚಿಚ್ಚೇಷ್ಟಾಂ ಮಹಾರಥಾಃ||
ಮಹಾರಾಜ! ಯುದ್ಧದಲ್ಲಿ ಬಳಲಿದ್ದ ಮತ್ತು ನಿದ್ರೆಯಲ್ಲಿ ಅಂಧರಂತಾಗಿದ್ದ ಆ ಮಹಾರಥರು ಯಾವುದೇ ರೀತಿಯಲ್ಲಿ ರಣದಲ್ಲಿ ಪ್ರಹಾರಮಾಡಲು ಸಾಧ್ಯವಾಗುತ್ತಿರಲಿಲ್ಲ.
07159013a ತ್ರಿಯಾಮಾ ರಜನೀ ಚೈಷಾ ಘೋರರೂಪಾ ಭಯಾನಕಾ|
07159013c ಸಹಸ್ರಯಾಮಪ್ರತಿಮಾ ಬಭೂವ ಪ್ರಾಣಹಾರಿಣೀ|
07159013e ವಧ್ಯತಾಂ ಚ ತಥಾ ತೇಷಾಂ ಕ್ಷತಾನಾಂ ಚ ವಿಶೇಷತಃ||
ಮೂರುಯಾಮಗಳ ಆ ಘೋರರೂಪೀ ಭಯಾನಕ ರಾತ್ರಿಯು ಪ್ರಾಣಹಾರಿಣಿಯಾದ – ವಿಶೇಷವಾಗಿ ವಧಿಸಲ್ಪಡುತ್ತಿರುವವರಿಗೆ ಮತ್ತು ಗಾಯಗೊಂಡಿರುವವರಿಗೆ – ಸಹಸ್ರಯಾಮಗಳಂತೆ ತೋರಿತು.
07159014a ಅಹೋ ರಾತ್ರಿಃ ಸಮಾಜಜ್ಞೇ ನಿದ್ರಾಂಧಾನಾಂ ವಿಶೇಷತಃ|
07159014c ಸರ್ವೇ ಹ್ಯಾಸನ್ನಿರುತ್ಸಾಹಾಃ ಕ್ಷತ್ರಿಯಾ ದೀನಚೇತಸಃ|
07159014e ತವ ಚೈವ ಪರೇಷಾಂ ಚ ಗತಾಸ್ತ್ರಾ ವಿಗತೇಷವಃ||
ಹಗಲು ರಾತ್ರಿ ಎಚ್ಚೆತ್ತಿದ್ದ ಅವರು ವಿಶೇಷವಾಗಿ ನಿದ್ರೆಯಿಂದ ಕಣ್ಣು ಕಾಣದಂತಾಗಿದ್ದರು. ಎಲ್ಲ ಕ್ಷತ್ರಿಯರೂ ನಿರುತ್ಸಾಹರಾಗಿ, ದೀನಚೇತಸರಾಗಿದ್ದರು. ನಿನ್ನವರ ಮತ್ತು ಶತ್ರುಗಳ ಕೈಗಳಿಂದ ಅಸ್ತ್ರ ಮತ್ತು ಬಾಣಗಳು ಜಾರಿಬೀಳುತ್ತಿದ್ದವು.
07159015a ತೇ ತಥಾ ಪಾರಯಂತಶ್ಚ ಹ್ರೀಮಂತಶ್ಚ ವಿಶೇಷತಃ|
07159015c ಸ್ವಧರ್ಮಮನುಪಶ್ಯಂತೋ ನ ಜಹುಃ ಸ್ವಾಮನೀಕಿನೀಂ||
ಹಾಗೆ ನಿದ್ದೆ ಬರುತ್ತಿದ್ದರೂ ವಿಶೇಷವಾಗಿ ನಾಚಿಗೊಳ್ಳುತ್ತಿದ್ದ ಅವರು ಸ್ವಧರ್ಮವನ್ನು ನೋಡುತ್ತಾ ತಮ್ಮ ಸೇನೆಗಳನ್ನು ಬಿಟ್ಟೂ ಹೋಗುತ್ತಿರಲಿಲ್ಲ.
07159016a ಶಸ್ತ್ರಾಣ್ಯನ್ಯೇ ಸಮುತ್ಸೃಜ್ಯ ನಿದ್ರಾಂಧಾಃ ಶೇರತೇ ಜನಾಃ|
07159016c ಗಜೇಷ್ವನ್ಯೇ ರಥೇಷ್ವನ್ಯೇ ಹಯೇಷ್ವನ್ಯೇ ಚ ಭಾರತ||
ಭಾರತ! ಕೆಲವು ಜನರು ನಿದ್ರೆಯಿಂದ ಕುರುಡರಾಗಿ ಅನ್ಯ ಶಸ್ತ್ರಗಳನ್ನು ವಿಸರ್ಜಿಸಿ – ಕೆಲವರು ಆನೆಗಳ ಮೇಲೆ, ಕೆಲವರು ರಥದಲ್ಲಿ ಮತ್ತು ಕೆಲವರು ಕುದುರೆಗಳ ಮೇಲೆ ನಿದ್ದೆಮಾಡುತ್ತಿದ್ದರು.
07159017a ನಿದ್ರಾಂಧಾ ನೋ ಬುಬುಧಿರೇ ಕಾಂ ಚಿಚ್ಚೇಷ್ಟಾಂ ನರಾಧಿಪಾಃ|
07159017c ತೇಽನ್ಯೋನ್ಯಂ ಸಮರೇ ಯೋಧಾಃ ಪ್ರೇಷಯಂತ ಯಮಕ್ಷಯಂ||
ನಿದ್ರಾಂಧರಾದ ನರಾಧಿಪರಿಗೆ ಎಲ್ಲಿ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಸಮರದಲ್ಲಿ ಆ ಯೋಧರು ಅನ್ಯೋನ್ಯರನ್ನು ಯಮಕ್ಷಯಕ್ಕೆ ಕಳುಹಿಸುತ್ತಿದ್ದರು.
07159018a ಸ್ವಪ್ನಾಯಮಾನಾಸ್ತ್ವಪರೇ ಪರಾನಿತಿ ವಿಚೇತಸಃ|
07159018c ಆತ್ಮಾನಂ ಸಮರೇ ಜಘ್ನುಃ ಸ್ವಾನೇವ ಚ ಪರಾನಪಿ||
ಸ್ವಪ್ನದಲ್ಲಿ ಕೆಲವರು ತಮ್ಮವರು ಮತ್ತು ಶತ್ರುಗಳು ಎಂದು ತಿಳಿಯದೇ ಸಮರದಲ್ಲಿ ಶತ್ರುಗಳನ್ನೂ ಸಂಹರಿಸುತ್ತಿದ್ದರು. ತಾವೂ ಸಾಯುತ್ತಿದ್ದರು. ತಮ್ಮ ಕಡೆಯವರನ್ನೂ ಸಂಹರಿಸುತ್ತಿದ್ದರು.
07159019a ನಾನಾವಾಚೋ ವಿಮುಂಚಂತೋ ನಿದ್ರಾಂಧಾಸ್ತೇ ಮಹಾರಣೇ|
07159019c ಯೋದ್ಧವ್ಯಮಿತಿ ತಿಷ್ಠಂತೋ ನಿದ್ರಾಸಂಸಕ್ತಲೋಚನಾಃ||
ಮಹಾರಣದಲ್ಲಿ ನಿದ್ರೆಯಿಂದ ವಿವೇಚನರಹಿತರಾದ ಕೆಲವರು ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರು. ನಿದ್ದೆಯಿಂದ ಕಣ್ಣುಗಳು ಕೆಂಪಾಗಿದ್ದರೂ ನಿದ್ರೆಯಿಂದ ಕುರುಡರಾದ ನಮ್ಮವರು ಯುದ್ಧಮಾಡಬೇಕೆಂದು ನಿಷ್ಠೆಯಿಂದ ನಿಂತಿದ್ದರು.
07159020a ಸಮ್ಮರ್ದ್ಯಾನ್ಯೇ ರಣೇ ಕೇ ಚಿನ್ನಿದ್ರಾಂಧಾಶ್ಚ ಪರಸ್ಪರಂ|
07159020c ಜಘ್ನುಃ ಶೂರಾ ರಣೇ ರಾಜಂಸ್ತಸ್ಮಿಂಸ್ತಮಸಿ ದಾರುಣೇ||
ರಾಜನ್! ಆ ದಾರುಣ ಕತ್ತಲೆಯಲ್ಲಿ ಕೂಡ ನಿದ್ರಾಂಧರಾಗಿದ್ದರೂ ಕೆಲವರು ರಣದಲ್ಲಿ ಪರಸ್ಪರರನ್ನು ಸದೆಬಡಿಯುತ್ತಾ ಶೂರರನ್ನು ಸಂಹರಿಸುತ್ತಿದ್ದರು.
07159021a ಹನ್ಯಮಾನಂ ತಥಾತ್ಮಾನಂ ಪರೇಭ್ಯೋ ಬಹವೋ ಜನಾಃ|
07159021c ನಾಭ್ಯಜಾನಂತ ಸಮರೇ ನಿದ್ರಯಾ ಮೋಹಿತಾ ಭೃಶಂ||
ಬಹಳ ನಿದ್ರೆಯಿಂದ ತೂಕಡಿಸುತ್ತಿದ್ದ ಅನೇಕರು ಎದುರಾಳಿಗಳು ತಮ್ಮನ್ನು ಸಂಹರಿಸಿದರೂ ಅವರಿಗೆ ಅದು ತಿಳಿಯುತ್ತಲೇ ಇರಲಿಲ್ಲ.
07159022a ತೇಷಾಮೇತಾದೃಶೀಂ ಚೇಷ್ಟಾಂ ವಿಜ್ಞಾಯ ಪುರುಷರ್ಷಭಃ|
07159022c ಉವಾಚ ವಾಕ್ಯಂ ಬೀಭತ್ಸುರುಚ್ಛೈಃ ಸಮ್ನಾದಯನ್ದಿಶಃ||
ಸೈನಿಕರ ಆ ವಿಧದ ದುರವಸ್ಥೆಯನ್ನು ಕಂಡು ಪುರುಷರ್ಷಭ ಬೀಭತ್ಸುವು ನಾಲ್ಕು ದಿಕ್ಕುಗಳಲ್ಲಿಯೂ ಪ್ರತಿಧ್ವನಿಸುವಂತೆ ಉಚ್ಛಧ್ವನಿಯಲ್ಲಿ ಈ ಮಾತನ್ನಾಡಿದನು:
07159023a ಶ್ರಾಂತಾ ಭವಂತೋ ನಿದ್ರಾಂಧಾಃ ಸರ್ವ ಏವ ಸವಾಹನಾಃ|
07159023c ತಮಸಾ ಚಾವೃತೇ ಸೈನ್ಯೇ ರಜಸಾ ಬಹುಲೇನ ಚ||
“ವಾಹನಸಹಿತರಾಗಿ ನೀವೆಲ್ಲರೂ ನಿದ್ರೆಯಿಂದ ಕುರುಡಾಗಿದ್ದೀರಿ! ಈ ಸೈನ್ಯವೂ ಕೂಡ ಗಾಢಾಂಧಕಾರದಿಂದ ಮತ್ತು ಬಹಳ ಧೂಳಿನಿಂದ ಆವೃತವಾಗಿಬಿಟ್ಟಿದೆ.
07159024a ತೇ ಯೂಯಂ ಯದಿ ಮನ್ಯಧ್ವಮುಪಾರಮತ ಸೈನಿಕಾಃ|
07159024c ನಿಮೀಲಯತ ಚಾತ್ರೈವ ರಣಭೂಮೌ ಮುಹೂರ್ತಕಂ||
ಸೈನಿಕರೇ! ನಿಮಗೆಲ್ಲರಿಗೂ ಸರಿಯೆನ್ನಿಸಿದರೆ ಸ್ವಲ್ಪ ಕಾಲ ಯುದ್ಧ ಮಾಡಬೇಡಿ! ಈ ರಣಭೂಮಿಯಲ್ಲಿಯೇ ಮುಹೂರ್ತಕಾಲ ಕಣ್ಣುಮುಚ್ಚಿ ನಿದ್ರಿಸಿರಿ!
07159025a ತತೋ ವಿನಿದ್ರಾ ವಿಶ್ರಾಂತಾಶ್ಚಂದ್ರಮಸ್ಯುದಿತೇ ಪುನಃ|
07159025c ಸಂಸಾಧಯಿಷ್ಯಥಾನ್ಯೋನ್ಯಂ ಸ್ವರ್ಗಾಯ ಕುರುಪಾಂಡವಾಃ||
ಕುರುಪಾಂಡವರೇ! ವಿಶ್ರಾಂತಿಯನ್ನು ಪಡೆದು ನಿದ್ರೆಯಿಂದ ಎಚ್ಚರಗೊಂಡ ನೀವು ಚಂದ್ರನು ಉದಯವಾಗಲು ಪುನಃ ಹಿಂದಿನಂತೆಯೇ ಅನ್ಯೋನ್ಯರನ್ನು ಸ್ವರ್ಗಕ್ಕೆ ಕಳುಹಿಸುವಿರಂತೆ!”
07159026a ತದ್ವಚಃ ಸರ್ವಧರ್ಮಜ್ಞಾ ಧಾರ್ಮಿಕಸ್ಯ ನಿಶಮ್ಯ ತೇ|
07159026c ಅರೋಚಯಂತ ಸೈನ್ಯಾನಿ ತಥಾ ಚಾನ್ಯೋನ್ಯಮಬ್ರುವನ್||
07159027a ಚುಕ್ರುಶುಃ ಕರ್ಣ ಕರ್ಣೇತಿ ರಾಜನ್ದುರ್ಯೋಧನೇತಿ ಚ|
07159027c ಉಪಾರಮತ ಪಾಂಡೂನಾಂ ವಿರತಾ ಹಿ ವರೂಥಿನೀ||
ಸರ್ವ ಧರ್ಮಜ್ಞ ಧಾರ್ಮಿಕ ಆ ಸೈನಿಕರು ಅವನ ಆ ಮಾತನ್ನು ಕೇಳಿ ಸರಿಯೆಂದುಕೊಂಡು ಅನ್ಯೋನ್ಯರಿಗೆ: “ಕರ್ಣ! ಕರ್ಣ! ರಾಜನ್ ದುರ್ಯೋಧನ! ಯುದ್ಧವನ್ನು ಕೂಡಲೇ ನಿಲ್ಲಿಸಿ. ಪಾಂಡವರ ಸೇನೆಯೂ ಕೂಡ ಯುದ್ಧದಿಂದ ವಿರತವಾಗಿದೆ!” ಎಂದು ಕೂಗಿ ಹೇಳಿದರು.
07159028a ತಥಾ ವಿಕ್ರೋಶಮಾನಸ್ಯ ಫಲ್ಗುನಸ್ಯ ತತಸ್ತತಃ|
07159028c ಉಪಾರಮತ ಪಾಂಡೂನಾಂ ಸೇನಾ ತವ ಚ ಭಾರತ||
ಭಾರತ! ಹಾಗೆಯೇ ಫಲ್ಗುನನು ಅಲ್ಲಲ್ಲಿ ಕೂಗಿ ಹೇಳುತ್ತಿರಲು ಸ್ವಲ್ಪಸಮಯದಲ್ಲಿಯೇ ಪಾಂಡವರ ಸೇನೆ ಮತ್ತು ನಿನ್ನವರು ಯುದ್ಧವನ್ನು ನಿಲ್ಲಿಸಿದರು.
07159029a ತಾಮಸ್ಯ ವಾಚಂ ದೇವಾಶ್ಚ ಋಷಯಶ್ಚ ಮಹಾತ್ಮನಃ|
07159029c ಸರ್ವಸೈನ್ಯಾನಿ ಚಾಕ್ಷುದ್ರಾಃ ಪ್ರಹೃಷ್ಟಾಃ ಪ್ರತ್ಯಪೂಜಯನ್||
ಮಹಾತ್ಮ ಅರ್ಜುನನ ಆ ಸಲಹೆಯನ್ನು ದೇವತೆಗಳೂ, ಋಷಿಗಳೂ, ಎಲ್ಲ ಸೈನಿಕರೂ ಪರಮ ಹರ್ಷಿತರಾಗಿ ಶ್ಲಾಘಿಸಿದರು.
07159030a ತತ್ಸಂಪೂಜ್ಯ ವಚೋಽಕ್ರೂರಂ ಸರ್ವಸೈನ್ಯಾನಿ ಭಾರತ|
07159030c ಮುಹೂರ್ತಮಸ್ವಪನ್ರಾಜಂ ಶ್ರಾಂತಾನಿ ಭರತರ್ಷಭ||
ಭಾರತ! ರಾಜನ್! ಭರತರ್ಷಭ! ದಯಾಭರಿತ ಆ ಮಾತನ್ನು ಗೌರವಿಸಿ ಸರ್ವಸೇನೆಗಳೂ ಮುಹೂರ್ತಕಾಲ ರಣದಲ್ಲಿಯೇ ಮಲಗಿದರು.
07159031a ಸಾ ತು ಸಂಪ್ರಾಪ್ಯ ವಿಶ್ರಾಮಂ ಧ್ವಜಿನೀ ತವ ಭಾರತ|
07159031c ಸುಖಮಾಪ್ತವತೀ ವೀರಮರ್ಜುನಂ ಪ್ರತ್ಯಪೂಜಯತ್||
ಭಾರತ! ನಿನ್ನ ಧ್ವಜವುಳ್ಳವರು ಕೂಡ ವಿಶ್ರಾಂತಿಯನ್ನು ಪಡೆದು ಸುಖವನ್ನು ನೀಡಿದ ವೀರ ಅರ್ಜುನನನ್ನು ಪ್ರಶಂಸಿಸುತ್ತಾ ಹೇಳಿದರು:
07159032a ತ್ವಯಿ ವೇದಾಸ್ತಥಾಸ್ತ್ರಾಣಿ ತ್ವಯಿ ಬುದ್ಧಿಪರಾಕ್ರಮೌ|
07159032c ಧರ್ಮಸ್ತ್ವಯಿ ಮಹಾಬಾಹೋ ದಯಾ ಭೂತೇಷು ಚಾನಘ||
“ಅನಘ! ಮಹಾಬಾಹೋ! ನಿನ್ನಲ್ಲಿ ವೇದಗಳು, ಅಸ್ತ್ರಗಳು ಮತ್ತು ಬುದ್ಧಿ-ಪರಾಕ್ರಮಗಳು ಹಾಗೂ ಧರ್ಮ ಮತ್ತು ಭೂತಗಳ ಮೇಲೆ ದಯೆಯು ಮೂರ್ತಿಮತ್ತಾಗಿ ನೆಲೆಸಿವೆ.
07159033a ಯಚ್ಚಾಶ್ವಸ್ತಾಸ್ತವೇಚ್ಚಾಮಃ ಶರ್ಮ ಪಾರ್ಥ ತದಸ್ತು ತೇ|
07159033c ಮನಸಶ್ಚ ಪ್ರಿಯಾನರ್ಥಾನ್ವೀರ ಕ್ಷಿಪ್ರಮವಾಪ್ನುಹಿ||
ಪಾರ್ಥ! ವೀರ! ಬಳಲಿದ್ದ ನಮಗೆ ನೀನು ಆಶ್ವಾಸನೆಯಿತ್ತು ನಿದ್ರೆಯ ಪರಮಸುಖವನ್ನು ಅನುಭವಿಸುವಂತೆ ಮಾಡಿದೆ. ಬೇಗನೆ ನಿನ್ನ ಮನಸ್ಸಿಗೆ ಪ್ರಿಯವಾದುದನ್ನು ಪಡೆದುಕೊಳ್ಳುವೆ!”
07159034a ಇತಿ ತೇ ತಂ ನರವ್ಯಾಘ್ರಂ ಪ್ರಶಂಸಂತೋ ಮಹಾರಥಾಃ|
07159034c ನಿದ್ರಯಾ ಸಮವಾಕ್ಷಿಪ್ತಾಸ್ತೂಷ್ಣೀಮಾಸನ್ವಿಶಾಂ ಪತೇ||
ವಿಶಾಂಪತೇ! ಈ ರೀತಿ ಮಹಾರಥರು ಆ ನರವ್ಯಾಘ್ರನನ್ನು ಪ್ರಶಂಸಿಸುತ್ತಾ ಸ್ವಲ್ಪ ಹೊತ್ತಿನಲ್ಲಿಯೇ ನಿದ್ರಾಪರವಶರಾಗಿ ಸುಮ್ಮನಾದರು.
07159035a ಅಶ್ವಪೃಷ್ಠೇಷು ಚಾಪ್ಯನ್ಯೇ ರಥನೀಡೇಷು ಚಾಪರೇ|
07159035c ಗಜಸ್ಕಂಧಗತಾಶ್ಚಾನ್ಯೇ ಶೇರತೇ ಚಾಪರೇ ಕ್ಷಿತೌ||
ಕೆಲವರು ಕುದುರೆಗಳ ಮೇಲೆಯೇ ಮಲಗಿದರು. ಇನ್ನು ಕೆಲವರು ರಥದ ಆಸನಗಳ ಮೇಲೆ, ಅನ್ಯರು ಆನೆಗಳ ಹೆಗಲಿನಮೇಲೂ ಮತ್ತು ಇನ್ನು ಕೆಲವರು ಭೂಮಿಯಮೇಲೂ ಮಲಗಿದರು.
07159036a ಸಾಯುಧಾಃ ಸಗದಾಶ್ಚೈವ ಸಖಡ್ಗಾಃ ಸಪರಶ್ವಧಾಃ|
07159036c ಸಪ್ರಾಸಕವಚಾಶ್ಚಾನ್ಯೇ ನರಾಃ ಸುಪ್ತಾಃ ಪೃಥಕ್ ಪೃಥಕ್||
ಮನುಷ್ಯರು ಆಯುಧಗಳೊಂದಿಗೆ, ಗದೆಗಳನ್ನು ಹಿಡಿದುಕೊಂಡು, ಖಡ್ಗ-ಪರಶುಗಳನ್ನು ಹಿಡಿದು, ಕೆಲವರು ಪ್ರಾಸ-ಕವಚಗಳೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮಲಗಿದ್ದರು.
07159037a ಗಜಾಸ್ತೇ ಪನ್ನಗಾಭೋಗೈರ್ಹಸ್ತೈರ್ಭೂರೇಣುರೂಷಿತೈಃ|
07159037c ನಿದ್ರಾಂಧಾ ವಸುಧಾಂ ಚಕ್ರುರ್ಘ್ರಾಣನಿಃಶ್ವಾಸಶೀತಲಾಂ||
ನಿದ್ರೆಯಿಂದ ಕುರುಡಾಗಿದ್ದ ಆನೆಗಳು ಸರ್ಪಕ್ಕೆ ಸಮಾನವಾಗಿದ್ದ ಮತ್ತು ಭೂಮಿಯ ಧೂಳಿನಿಂದ ಅವಲಿಪ್ತವಾಗಿದ್ದ ಸೊಂಡಿಲುಗಳಿಂದ ಸುದೀರ್ಘ ಶ್ವಾಸೋಚ್ಛ್ವಾಸಗಳನ್ನು ಬಿಡುತ್ತಾ ರಣಾಂಗಣವನ್ನೇ ಶೀತಲಗೊಳಿಸಿದವು.
07159038a ಗಜಾಃ ಶುಶುಭಿರೇ ತತ್ರ ನಿಃಶ್ವಸಂತೋ ಮಹೀತಲೇ|
07159038c ವಿಶೀರ್ಣಾ ಗಿರಯೋ ಯದ್ವನ್ನಿಃಶ್ವಸದ್ಭಿರ್ಮಹೋರಗೈಃ||
ಸುದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಮಲಗಿದ್ದ ಆನೆಗಳು ಆ ರಣಾಂಗಣದಲ್ಲಿ ಭುಸುಗುಟ್ಟುವ ಸರ್ಪಗಳಿಂದ ಕೂಡಿದ ಕಡಿದು ಬಿದ್ದಿರುವ ಪರ್ವತಗಳಂತೆ ಕಾಣುತ್ತಿದ್ದವು.
07159039a ಸಮಾಂ ಚ ವಿಷಮಾಂ ಚಕ್ರುಃ ಖುರಾಗ್ರೈರ್ವಿಕ್ಷತಾಂ ಮಹೀಂ|
07159039c ಹಯಾಃ ಕಾಂಚನಯೋಕ್ತ್ರಾಶ್ಚ ಕೇಸರಾಲಂಬಿಭಿರ್ಯುಗೈಃ|
07159039e ಸುಷುಪುಸ್ತತ್ರ ರಾಜೇಂದ್ರ ಯುಕ್ತಾ ವಾಹೇಷು ಸರ್ವಶಃ||
ಕಾಂಚನದ ಕಡಿವಾಣಗಳುಳ್ಳ ಕುದುರೆಗಳು ಕತ್ತಿನ ಕೂದಲುಗಳಮೇಲೆ ಕಟ್ಟಲ್ಪಟ್ಟಿದ್ದ ನೊಗಗಳಿಂದಲೂ ಗೊರಸುಗಳ ತುದಿಯಿಂದಲೂ ಭೂಮಿಯನ್ನು ಕೆರೆಯುತ್ತಾ ಸಮವಾಗಿದ್ದ ರಣಭೂಮಿಯನ್ನು ಹಳ್ಳ-ತಿಟ್ಟುಗಳಾಗುವಂತೆ ಮಾಡಿದವು. ರಾಜೇಂದ್ರ! ಅಲ್ಲಿ ಎಲ್ಲಕಡೆ ಕುದುರೆಗಳು ರಥಗಳಿಗೆ ಕಟ್ಟಿಕೊಂಡೇ ನಿದ್ದೆಮಾಡುತ್ತಿದ್ದವು.
07159040a ತತ್ತಥಾ ನಿದ್ರಯಾ ಭಗ್ನಮವಾಚಮಸ್ವಪದ್ಬಲಂ|
07159040c ಕುಶಲೈರಿವ ವಿನ್ಯಸ್ತಂ ಪಟೇ ಚಿತ್ರಮಿವಾದ್ಭುತಂ||
ಹಾಗೆ ತಮ್ಮ ವಾಹನಗಳೊಡನೆ ಸುಮ್ಮನೇ ಚಲಿಸದೇ ಗಾಢನಿದ್ರೆಯಲ್ಲಿ ಮಲಗಿರುವುದನ್ನು ನೋಡಿದರೆ ಕುಶಲ ಚಿತ್ರಕಾರನು ಚಿತ್ರಪಟದ ಮೇಲೆ ಅದ್ಭುತ ಚಿತ್ರವನ್ನು ಬರೆದಿರುವನೋ ಎಂಬಂತೆ ತೋರುತ್ತಿತ್ತು.
07159041a ತೇ ಕ್ಷತ್ರಿಯಾಃ ಕುಂಡಲಿನೋ ಯುವಾನಃ
ಪರಸ್ಪರಂ ಸಾಯಕವಿಕ್ಷತಾಂಗಾಃ|
07159041c ಕುಂಭೇಷು ಲೀನಾಃ ಸುಷುಪುರ್ಗಜಾನಾಂ
ಕುಚೇಷು ಲಗ್ನಾ ಇವ ಕಾಮಿನೀನಾಂ||
ಪರಸ್ಪರರ ಸಾಯಕಗಳಿಂದ ಅಂಗಾಂಗಗಳಲ್ಲಿ ಗಾಯಗೊಂಡು ಆನೆಗಳ ಕುಂಭಸ್ಥಳಗಳ ಮೇಲೆ ಮುಖವನ್ನಿಟ್ಟು ಮಲಗಿರುವ ಕುಂಡಲಗಳನ್ನು ಧರಿಸಿದ್ದ ಆ ಯುವಕರು ಕಾಮಿನಿಯರ ಕುಚಗಳ ನಡುವೆ ಮುಖವನ್ನು ಹುದುಗಿಸಿಕೊಂಡು ಮಲಗಿರುವ ಕಾಮುಕರಂತೆ ಕಾಣುತ್ತಿದ್ದರು.
07159042a ತತಃ ಕುಮುದನಾಥೇನ ಕಾಮಿನೀಗಂಡಪಾಂಡುನಾ|
07159042c ನೇತ್ರಾನಂದೇನ ಚಂದ್ರೇಣ ಮಾಹೇಂದ್ರೀ ದಿಗಲಂಕೃತಾ||
ಆಗ ಕಾಮಿನಿಯರ ಕಪೋಲಗಳಂತೆ ಬಿಳುಪಾಗಿದ್ದ ನಯನಾನಂದಕರ ಕುಮುದನಾಥ ಚಂದ್ರನು ಮಹೇಂದ್ರನ ಪೂರ್ವ ದಿಕ್ಕನ್ನು ಅಲಂಕರಿಸಿದನು.
07159043a ತತೋ ಮುಹೂರ್ತಾದ್ಭಗವಾನ್ಪುರಸ್ತಾಚ್ಚಶಲಕ್ಷಣಃ|
07159043c ಅರುಣಂ ದರ್ಶಯಾಮಾಸ ಗ್ರಸಂ ಜ್ಯೋತಿಃಷ್ಪ್ರಭಂ ಪ್ರಭುಃ||
ಆಗ ಮುಹೂರ್ತಕಾಲದಲ್ಲಿ ಮೊಲದ ಚಿಹ್ನೆಯುಳ್ಳ ಭಗವಾನ್ ಪ್ರಭು ಚಂದ್ರನು ನಕ್ಷತ್ರಗಳ ಬೆಳಕನ್ನು ತಾನೇ ಹೀರಿಕೊಳ್ಳುತ್ತಾ ಮೊದಲು ಅರುಣನನ್ನು ತೋರಿಸಿದನು.
07159044a ಅರುಣಸ್ಯ ತು ತಸ್ಯಾನು ಜಾತರೂಪಸಮಪ್ರಭಂ|
07159044c ರಶ್ಮಿಜಾಲಂ ಮಹಚ್ಚಂದ್ರೋ ಮಂದಂ ಮಂದಮವಾಸೃಜತ್||
ಅರುಣನ ಉದಯವನ್ನು ಅನುಸರಿಸಿ ಚಂದ್ರನು ಸುವರ್ಣಪ್ರಭೆಗೆ ಸಮಾನ ಪ್ರಭೆಯ ದೊಡ್ಡ ಕಿರಣಗಳ ಸಮೂಹಗಳನ್ನು ಮಂದ ಮಂದವಾಗಿ ಹೊರಹೊಮ್ಮಿಸಿದನು.
07159045a ಉತ್ಸಾರಯಂತಃ ಪ್ರಭಯಾ ತಮಸ್ತೇ ಚಂದ್ರರಶ್ಮಯಃ|
07159045c ಪರ್ಯಗಚ್ಚಂ ಶನೈಃ ಸರ್ವಾ ದಿಶಃ ಖಂ ಚ ಕ್ಷಿತಿಂ ತಥಾ||
ಚಂದ್ರನ ಆ ರಶ್ಮಿಗಳು ಪ್ರಭೆಯಿಂದ ಕತ್ತಲೆಯನ್ನು ಓಡಿಸುತ್ತಾ, ಮೆಲ್ಲ ಮೆಲ್ಲಗೆ ಎಲ್ಲ ದಿಕ್ಕುಗಳನ್ನೂ ಅಂತರಿಕ್ಷ-ಭೂಮಿಗಳನ್ನು ವ್ಯಾಪಿಸಿದವು.
07159046a ತತೋ ಮುಹೂರ್ತಾದ್ಭುವನಂ ಜ್ಯೋತಿರ್ಭೂತಮಿವಾಭವತ್|
07159046c ಅಪ್ರಖ್ಯಮಪ್ರಕಾಶಂ ಚ ಜಗಾಮಾಶು ತಮಸ್ತಥಾ||
ಆಗ ಮುಹೂರ್ತಕಾಲದಲ್ಲಿ ವಿಶ್ವವೇ ಜ್ಯೋತಿರ್ಮಯವಾಗಿ ಬೆಳಗಿತು. ಹೇಳಹೆಸರಿಲ್ಲದಂತೆ ಕತ್ತಲೆಯು ಎಲ್ಲಿಗೋ ಓಡಿಹೋಯಿತು.
07159047a ಪ್ರತಿಪ್ರಕಾಶಿತೇ ಲೋಕೇ ದಿವಾಭೂತೇ ನಿಶಾಕರೇ|
07159047c ವಿಚೇರುರ್ನ ವಿಚೇರುಶ್ಚ ರಾಜನ್ನಕ್ತಂಚರಾಸ್ತತಃ||
ರಾಜನ್! ನಿಶಾಕರನು ಪೂರ್ಣಪ್ರಕಾಶದಿಂದ ಬೆಳಗುತ್ತಿರಲಾಗಿ ಹಗಲಿನಂತೆಯೇ ಲೋಕವು ಚಂದ್ರನ ಬೆಳಕಿನಿಂದ ಬೆಳಗತೊಡಗಲು ಕೆಲವು ನಕ್ತಂಚರ ಪ್ರಾಣಿಗಳು ಅಲ್ಲಲ್ಲಿ ಸಂಚರಿಸತೊಡಗಿದವು.
07159048a ಬೋಧ್ಯಮಾನಂ ತು ತತ್ಸೈನ್ಯಂ ರಾಜಂಶ್ಚಂದ್ರಸ್ಯ ರಶ್ಮಿಭಿಃ|
07159048c ಬುಬುಧೇ ಶತಪತ್ರಾಣಾಂ ವನಂ ಮಹದಿವಾಂಭಸಿ||
ರಾಜನ್! ಸೂರ್ಯನ ರಶ್ಮಿಗಳಿಂದ ಕಮಲಪುಷ್ಪಗಳ ವನವು ವಿಕಸಿತವಾಗುವಂತೆ ಚಂದ್ರಕಿರಣಗಳ ಸ್ಪರ್ಶದಿಂದ ಸೈನ್ಯವು ಎಚ್ಚರಗೊಂಡಿತು.
07159049a ಯಥಾ ಚಂದ್ರೋದಯೋದ್ಧೂತಃ ಕ್ಷುಭಿತಃ ಸಾಗರೋ ಭವೇತ್|
07159049c ತಥಾ ಚಂದ್ರೋದಯೋದ್ಧೂತಃ ಸ ಬಭೂವ ಬಲಾರ್ಣವಃ||
ಚಂದ್ರೋದಯದ ಪ್ರಭಾವದಿಂದ ಸಮುದ್ರವು ಅಲ್ಲೋಲ-ಕಲ್ಲೋಲವಾಗುವಂತೆ ಚಂದ್ರೋದಯದಿಂದ ಎಚ್ಚೆತ್ತ ಸೇನಾಸಾಗರವೂ ಕ್ಷೋಭೆಗೊಂಡಿತು.
07159050a ತತಃ ಪ್ರವವೃತೇ ಯುದ್ಧಂ ಪುನರೇವ ವಿಶಾಂ ಪತೇ|
07159050c ಲೋಕೇ ಲೋಕವಿನಾಶಾಯ ಪರಂ ಲೋಕಮಭೀಪ್ಸತಾಂ||
ವಿಶಾಂಪತೇ! ಅನಂತರ ಪರಮ ಲೋಕಗಳನ್ನು ಬಯಸಿದ್ದ ಅವರ ನಡುವೆ ಲೋಕವಿನಾಶಕಾರಿ ಆ ಯುದ್ಧವು ಪುನಃ ಪ್ರಾರಂಭವಾಯಿತು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ರಾತ್ರಿಯುದ್ಧೇ ಸೈನ್ಯನಿದ್ರಾಯಾಂ ಏಕೋನಷಷ್ಟ್ಯಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ರಾತ್ರಿಯುದ್ಧೇ ಸೈನ್ಯನಿದ್ರಾ ಎನ್ನುವ ನೂರಾಐವತ್ತೊಂಭತ್ತನೇ ಅಧ್ಯಾಯವು.
