ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ
Contents
Toggle೧೩
ದ್ರೋಣನ ಪರಾಕ್ರಮ; ಯುದ್ಧಭೂಮಿ ವರ್ಣನೆ (೧-೧೮). ದ್ವಂದ್ವ ಯುದ್ಧಗಳು (೧೯-೪೪). ಅಭಿಮನ್ಯು ಪರಾಕ್ರಮ (೪೫-೮೦).
07013001 ಸಂಜಯ ಉವಾಚ|
07013001a ತತಃ ಸ ಪಾಂಡವಾನೀಕೇ ಜನಯಂಸ್ತುಮುಲಂ ಮಹತ್|
07013001c ವ್ಯಚರತ್ಪಾಂಡವಾನ್ದ್ರೋಣೋ ದಹನ್ಕಕ್ಷಮಿವಾನಲಃ||
ಸಂಜಯನು ಹೇಳಿದನು: “ಆಗ ಪಾಂಡವರ ಸೇನೆಯಲ್ಲಿ ಮಹಾ ತುಮುಲವುಂಟಾಯಿತು. ದ್ರೋಣನು ಸಂಚರಿಸುತ್ತಾ ಪಾಂಡವರನ್ನು ಹುಲ್ಲುಮೆದೆಯಂತೆ ಸುಡುತ್ತಿದ್ದನು.
07013002a ನಿರ್ದಹಂತಮನೀಕಾನಿ ಸಾಕ್ಷಾದಗ್ನಿಮಿವೋತ್ಥಿತಂ|
07013002c ದೃಷ್ಟ್ವಾ ರುಕ್ಮರಥಂ ಯುದ್ಧೇ ಸಮಕಂಪಂತ ಸೃಂಜಯಾಃ||
ಭುಗಿಲೆದ್ದ ಸಾಕ್ಷಾತ್ ಅಗ್ನಿಯಂತೆ ಸೇನೆಯನ್ನು ದಹಿಸುತ್ತಿದ್ದ ರುಕ್ಮರಥನನ್ನು ನೋಡಿ ಸೃಂಜಯರು ನಡುಗಿದರು.
07013003a ಪ್ರತತಂ ಚಾಸ್ಯಮಾನಸ್ಯ ಧನುಷೋಽಸ್ಯಾಶುಕಾರಿಣಃ|
07013003c ಜ್ಯಾಘೋಷಃ ಶ್ರೂಯತೇಽತ್ಯರ್ಥಂ ವಿಸ್ಫೂರ್ಜಿತಮಿವಾಶನೇಃ||
ಸತತವಾಗಿ ಸೆಳೆಯಲ್ಪಟ್ಟು ಬಾಣಗಳನ್ನು ಬಿಡುತ್ತಿದ್ದ ಧನುಸ್ಸಿನ ಟೇಂಕಾರ ಶಬ್ಧವು ಸಿಡಿಲಿನ ಶಬ್ಧದಂತೆ ಕೇಳಿಬರುತ್ತಿತ್ತು.
07013004a ರಥಿನಃ ಸಾದಿನಶ್ಚೈವ ನಾಗಾನಶ್ವಾನ್ಪದಾತಿನಃ|
07013004c ರೌದ್ರಾ ಹಸ್ತವತಾ ಮುಕ್ತಾಃ ಪ್ರಮಥ್ನಂತಿ ಸ್ಮ ಸಾಯಕಾಃ||
ಆ ಕೈಚಳಕಿನವನು ಬಿಟ್ಟ ರೌದ್ರ ಸಾಯಕಗಳು ರಥಿಗಳನ್ನೂ, ಅಶ್ವಾರೋಹಿಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ ಹೊಡೆದುರುಳಿಸುತ್ತಿದ್ದವು.
07013005a ನಾನದ್ಯಮಾನಃ ಪರ್ಜನ್ಯಃ ಸಾನಿಲಃ ಶುಚಿಸಂಕ್ಷಯೇ|
07013005c ಅಶ್ಮವರ್ಷಮಿವಾವರ್ಷತ್ಪರೇಷಾಮಾವಹದ್ಭಯಂ||
ಮಳೆಗಾಲದ ಆರಂಭದಲ್ಲಿ ಮೋಡಗಳು ಭಿರುಗಾಳಿಯೊಡಗೂಡಿ ಗುಡುಗುತ್ತಾ ಆನೆಕಲ್ಲಿನ ಮಳೆಕರೆಯುವಂತೆ ಬಾಣಗಳ ಮಳೆಗರೆದು ಅವನು ಶತ್ರುಗಳಲ್ಲಿ ಯುದ್ಧದ ಭಯವನ್ನು ಹುಟ್ಟಿಸಿದನು.
07013006a ವ್ಯಚರತ್ಸ ತದಾ ರಾಜನ್ಸೇನಾಂ ವಿಕ್ಷೋಭಯನ್ಪ್ರಭುಃ|
07013006c ವರ್ಧಯಾಮಾಸ ಸಂತ್ರಾಸಂ ಶಾತ್ರವಾಣಾಮಮಾನುಷಂ||
ರಾಜನ್! ಆ ಪ್ರಭುವು ಸಂಚರಿಸುತ್ತಾ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿ ಶತ್ರುಗಳ ಮನಸ್ಸಿನಲ್ಲಿ ಅಮಾನುಷ ಭಯವನ್ನು ಹೆಚ್ಚಿಸಿದನು.
07013007a ತಸ್ಯ ವಿದ್ಯುದಿವಾಭ್ರೇಷು ಚಾಪಂ ಹೇಮಪರಿಷ್ಕೃತಂ|
07013007c ಭ್ರಮದ್ರಥಾಂಬುದೇ ತಸ್ಮಿನ್ದೃಶ್ಯತೇ ಸ್ಮ ಪುನಃ ಪುನಃ||
ಮೋಡದಂತೆ ಚಲಿಸುತ್ತಿರುವ ಅವನ ರಥದಿಂದ ಹೇಮಪರಿಷ್ಕೃತ ಧನುಸ್ಸು ಮೋಡದಲ್ಲಿನ ಮಿಂಚಿನಂತೆ ಫಳ ಫಳನೆ ಪುನಃ ಪುನಃ ಹೊಳೆಯುತ್ತಿರುವುದು ಕಂಡುಬಂದಿತು.
07013008a ಸ ವೀರಃ ಸತ್ಯವಾನ್ಪ್ರಾಜ್ಞೋ ಧರ್ಮನಿತ್ಯಃ ಸುದಾರುಣಃ|
07013008c ಯುಗಾಂತಕಾಲೇ ಯಂತೇವ ರೌದ್ರಾಂ ಪ್ರಾಸ್ಕಂದಯನ್ನದೀಂ||
ಆ ವೀರ, ಸತ್ಯವಾನ್, ಪ್ರಾಜ್ಞ, ಧರ್ಮನಿತ್ಯನು ಪ್ರಲಯಕಾಲದಂತೆಯೇ ರೌದ್ರವೂ ದಾರುಣವೂ ಆದ ರಕ್ತದ ನದಿಯನ್ನೇ ಸೃಷ್ಟಿಸಿದನು.
07013009a ಅಮರ್ಷವೇಗಪ್ರಭವಾಂ ಕ್ರವ್ಯಾದಗಣಸಂಕುಲಾಂ|
07013009c ಬಲೌಘೈಃ ಸರ್ವತಃ ಪೂರ್ಣಾಂ ವೀರವೃಕ್ಷಾಪಹಾರಿಣೀಂ||
ಕೋಪದ ಆವೇಗದಿಂದ ಹುಟ್ಟಿದ ಆ ನದಿಯು ಮಾಂಸಾಹಾರಿ ಪ್ರಾಣಿಸಂಕುಲಗಳಿಂದ ಕೂಡಿದ್ದು ಸೈನ್ಯಸಮೂಹದ ಪ್ರವಾಹದಿಂದ ಪೂರ್ಣವಾಗಿ, ವೀರರನ್ನೇ ವೃಕ್ಷಗಳನ್ನಾಗಿ ತೇಲಿಸಿಕೊಂಡು ಹೋಗುತ್ತಿತ್ತು.
07013010a ಶೋಣಿತೋದಾಂ ರಥಾವರ್ತಾಂ ಹಸ್ತ್ಯಶ್ವಕೃತರೋಧಸಂ|
07013010c ಕವಚೋಡುಪಸಮ್ಯುಕ್ತಾಂ ಮಾಂಸಪಂಕಸಮಾಕುಲಾಂ||
ರಕ್ತವೇ ನೀರಾಗಿತ್ತು, ರಥಗಳೇ ಸುರುಳಿಗಳಾಗಿದ್ದವು, ಆನೆ-ಕುದುರೆಗಳೇ ಅದರ ದಡಗಳಾಗಿದ್ದವು, ವೀರರ ಕವಚಗಳೇ ದೋಣಿಗಳಂತಿದ್ದವು ಮತ್ತು ಮಾಂಸರೂಪದ ಕೆಸರಿನಿಂದ ತುಂಬಿಕೊಂಡಿತ್ತು.
07013011a ಮೇದೋಮಜ್ಜಾಸ್ಥಿಸಿಕತಾಮುಷ್ಣೀಷವರಫೇನಿಲಾಂ|
07013011c ಸಂಗ್ರಾಮಜಲದಾಪೂರ್ಣಾಂ ಪ್ರಾಸಮತ್ಸ್ಯಸಮಾಕುಲಾಂ||
ಮೇಧಸ್ಸು-ಮಜ್ಜೆ-ಮೂಳೆಗಳೇ ಮರಳಿನ ರಾಶಿಯಾಗಿದ್ದವು, ಶಿರಸ್ತ್ರಾಣಗಳು ನೊರೆಯ ರೂಪದಲ್ಲಿದ್ದವು, ಸಂಗ್ರಾಮವೆಂಬ ಮೋಡಗಳಿಂದ ಸುರಿದ ರಕ್ತದಿಂದ ತುಂಬಿಹೋಗಿತ್ತು ಮತ್ತು ಪ್ರಾಸಾಯುಧಗಳೇ ಮೀನುಗಳ ಸಮಾಕುಲದಂತಿದ್ದವು.
07013012a ನರನಾಗಾಶ್ವಸಂಭೂತಾಂ ಶರವೇಗೌಘವಾಹಿನೀಂ|
07013012c ಶರೀರದಾರುಶೃಂಗಾಟಾಂ ಭುಜನಾಗಸಮಾಕುಲಾಂ||
ನರ-ಗಜ-ಅಶ್ವಗಳಿಂದ ತುಂಬಿದ್ದ ಆ ನದಿಗೆ ಶರವೇಗಗಳೇ ಪ್ರವಾಹಗಳಾಗಿದ್ದವು. ಶರೀರಗಳು ಅದರ ಗಟ್ಟಗಳಾಗಿದ್ದರೆ ರಥಗಳೇ ಆಮೆಗಳಾಗಿದ್ದವು.
07013013a ಉತ್ತಮಾಂಗೋಪಲತಲಾಂ ನಿಸ್ತ್ರಿಂಶಝಷಸೇವಿತಾಂ|
07013013c ರಥನಾಗಹ್ರದೋಪೇತಾಂ ನಾನಾಭರಣನೀರಜಾಂ||
ತಲೆಗಳು ಕಮಲದ ಪುಷ್ಪಗಳಂತಿದ್ದವು. ಖಡ್ಗಗಳೇ ಮೀನುಗಳಾಗಿ ತುಂಬಿಹೋಗಿದ್ದವು. ರಥಗಳು ಮತ್ತು ಆನೆಗಳ ಅದರ ಮಡುವಿನಂತಿದ್ದವು. ನಾನಾಭರಣಗಳೇ ನೀರಜ ಪುಷ್ಪಗಳಾಗಿದ್ದವು.
07013014a ಮಹಾರಥಶತಾವರ್ತಾಂ ಭೂಮಿರೇಣೂರ್ಮಿಮಾಲಿನೀಂ|
07013014c ಮಹಾವೀರ್ಯವತಾಂ ಸಂಖ್ಯೇ ಸುತರಾಂ ಭೀರುದುಸ್ತರಾಂ||
ನೂರಾರು ಮಹಾರಥಗಳು ಸುಳಿಗಳಿಂತಿದ್ದವು. ಭೂಮಿಯಿಂದ ಹುಟ್ಟಿದ ಧೂಳೇ ಅದರ ಅಲೆಗಳ ಮಾಲೆಗಳಾಗಿದ್ದವು. ಯುದ್ಧದಲ್ಲಿ ಮಹಾವೀರರಿಗೆ ಅದು ಸುಲಭವೂ ರಣಹೇಡಿಗಳಿಗೂ ದುಸ್ತರವೂ ಆಗಿದ್ದಿತು.
07013015a ಶೂರವ್ಯಾಲಸಮಾಕೀರ್ಣಾಂ ಪ್ರಾಣಿವಾಣಿಜಸೇವಿತಾಂ|
07013015c ಚಿನ್ನಚ್ಚತ್ರಮಹಾಹಂಸಾಂ ಮುಕುಟಾಂಡಜಸಂಕುಲಾಂ||
ಶೂರರ ಶರೀರಗಳಿಂದ ತುಂಬಿದ್ದ ಅದಕ್ಕೆ ಪ್ರಾಣಿಗಳ ಗುಂಪುಗಳು ಮುತ್ತಿದ್ದವು. ಹರಿದುಹೋದ ಚತ್ರಗಳು ಹಂಸಗಳಂತೆ ತೇಲುತ್ತಿದ್ದವು. ಮುಕುಟಗಳು ಪಕ್ಷಿಸಂಕುಲಗಳಂತೆ ತೋರುತ್ತಿದ್ದವು.
07013016a ಚಕ್ರಕೂರ್ಮಾಂ ಗದಾನಕ್ರಾಂ ಶರಕ್ಷುದ್ರಝಷಾಕುಲಾಂ|
07013016c ಬಡಗೃಧ್ರಸೃಗಾಲಾನಾಂ ಘೋರಸಂಘೈರ್ನಿಷೇವಿತಾಂ||
ಚಕ್ರಗಳು ಆಮೆಗಳಂತಿದ್ದವು, ಗದೆಗಳು ಮೊಸಳೆಗಳಂತಿದ್ದವು, ಶರಗಳೆಂಬ ಸಣ್ಣ ಸಣ್ಣ ಮೀನುಗಳಿಂದ ತುಂಬಿಹೋಗಿತ್ತು. ಘೋರವಾದ ಹದ್ದು, ಬಕ ಮತ್ತು ಗುಳ್ಳೇನರಿಗಳ ಗುಂಪುಗಳಿಂದ ಕೂಡಿತ್ತು.
07013017a ನಿಹತಾನ್ಪ್ರಾಣಿನಃ ಸಂಖ್ಯೇ ದ್ರೋಣೇನ ಬಲಿನಾ ಶರೈಃ|
07013017c ವಹಂತೀಂ ಪಿತೃಲೋಕಾಯ ಶತಶೋ ರಾಜಸತ್ತಮ||
ದ್ರೋಣನ ಬಲಶಾಲಿ ಶರಗಳು ಯುದ್ಧದಲ್ಲಿ ಪ್ರಾಣಿಗಳನ್ನು ಕೊಂದು ನೂರಾರು ರಾಜಸತ್ತಮರನ್ನು ಪಿತೃಲೋಕಕ್ಕೆ ತೇಲಿಸಿಕೊಂಡು ಹೋಗುತ್ತಿದ್ದವು.
07013018a ಶರೀರಶತಸಂಬಾಧಾಂ ಕೇಶಶೈವಲಶಾದ್ವಲಾಂ|
07013018c ನದೀಂ ಪ್ರಾವರ್ತಯದ್ರಾಜನ್ಭೀರೂಣಾಂ ಭಯವರ್ಧಿನೀಂ||
ರಾಜನ್! ನೂರಾರು ಶರೀರಗಳಿಂದ ಸಮಾಕುಲವಾಗಿದ್ದ ಕೂದಲುಗಳೆಂಬ ಹುಲ್ಲಿನಿಂದಲೂ ಪಾಚಿಯಿಂದಲೂ ಕೂಡಿದ್ದ ಭೀರುಗಳಿಗೆ ಭಯವನ್ನು ಹೆಚಿವಿಸುತ್ತಿದ್ದ ಆ ರಕ್ತನದಿಯು ಹರಿಯುತ್ತಿತ್ತು.
07013019a ತಂ ಜಯಂತಮನೀಕಾನಿ ತಾನಿ ತಾನ್ಯೇವ ಭಾರತ|
07013019c ಸರ್ವತೋಽಭ್ಯದ್ರವನ್ದ್ರೋಣಂ ಯುಧಿಷ್ಠಿರಪುರೋಗಮಾಃ||
ಭಾರತ! ಅಲ್ಲಲ್ಲಿ ಸೇನೆಗಳನ್ನು ಜಯಿಸುತ್ತಿದ್ದ ದ್ರೋಣನನ್ನು ಯುಧಿಷ್ಠಿರನೇ ಮೊದಲಾದವರು ಎಲ್ಲಕಡೆಗಳಿಂದ ಆಕ್ರಮಣಿಸಿದರು.
07013020a ತಾನಭಿದ್ರವತಃ ಶೂರಾಂಸ್ತಾವಕಾ ದೃಢಕಾರ್ಮುಕಾಃ|
07013020c ಸರ್ವತಃ ಪ್ರತ್ಯಗೃಹ್ಣಂತ ತದಭೂಲ್ಲೋಮಹರ್ಷಣಂ||
ಧಾವಿಸಿ ಬರುತ್ತಿದ್ದ ಆ ಶೂರರನ್ನು ನಿನ್ನವರಾದ ದೃಢಕಾರ್ಮುಕರು ಎಲ್ಲ ಕಡೆಯಿಂದ ತಡೆದು ನಿಲ್ಲಿಸಿದರು. ಆಗ ರೋಮಾಂಚಕಾರೀ ಯುದ್ಧವು ನಡೆಯಿತು.
07013021a ಶತಮಾಯಸ್ತು ಶಕುನಿಃ ಸಹದೇವಂ ಸಮಾದ್ರವತ್|
07013021c ಸನಿಯಂತೃಧ್ವಜರಥಂ ವಿವ್ಯಾಧ ನಿಶಿತೈಃ ಶರೈಃ||
ನೂರಾರು ಮಾಯಾವಿದ್ಯೆಗಳನ್ನು ತಿಳಿದಿದ್ದ ಶಕುನಿಯು ಸಹದೇವನನ್ನು ಆಕ್ರಮಣಿಸಿ, ಅವನನ್ನೂ, ಸಾರಥಿಯನ್ನೂ, ಧ್ವಜವನ್ನೂ, ರಥವನ್ನು ನಿಶಿತ ಶರಗಳಿಂದ ಹೊಡೆದನು.
07013022a ತಸ್ಯ ಮಾದ್ರೀಸುತಃ ಕೇತುಂ ಧನುಃ ಸೂತಂ ಹಯಾನಪಿ|
07013022c ನಾತಿಕ್ರುದ್ಧಃ ಶರೈಶ್ಚಿತ್ತ್ವಾ ಷಷ್ಟ್ಯಾ ವಿವ್ಯಾಧ ಮಾತುಲಂ||
ಆಗ ಮಾದ್ರೀ ಸುತನು ಅತಿ ಕ್ರುದ್ಧನಾಗಿ ಅವನ ಧ್ವಜ, ಧನುಸ್ಸು, ಸೂತ ಮತ್ತು ಕುದುರೆಗಳನ್ನೂ ಶರಗಳಿಂದ ತುಂಡುಮಾಡಿ ಅರವತ್ತರಿಂದ ಸೋದರ ಮಾವನನ್ನು ಹೊಡೆದನು.
07013023a ಸೌಬಲಸ್ತು ಗದಾಂ ಗೃಹ್ಯ ಪ್ರಚಸ್ಕಂದ ರಥೋತ್ತಮಾತ್|
07013023c ಸ ತಸ್ಯ ಗದಯಾ ರಾಜನ್ರಥಾತ್ಸೂತಮಪಾತಯತ್||
ರಾಜನ್! ಸೌಬಲನಾದರೋ ಗದೆಯನ್ನು ಹಿಡಿದು ಉತ್ತಮ ರಥದಿಂದ ಕೆಳಗೆ ಹಾರಿ ಆ ಗದೆಯಿಂದ ಅವನ ರಥದಿಂದ ಸೂತನನ್ನು ಕೆಳಗೆ ಬೀಳಿಸಿದನು.
07013024a ತತಸ್ತೌ ವಿರಥೌ ರಾಜನ್ಗದಾಹಸ್ತೌ ಮಹಾಬಲೌ|
07013024c ಚಿಕ್ರೀಡತೂ ರಣೇ ಶೂರೌ ಸಶೃಂಗಾವಿವ ಪರ್ವತೌ||
ರಾಜನ್! ಆಗ ಅವರಿಬ್ಬರು ಮಹಾರಥ ಶೂರರೂ ರಥಗಳನ್ನು ಕಳೆದುಕೊಂಡು ಗದೆಗಳನ್ನು ಹಿಡಿದು ರಣದಿಂದ ಶಿಖರಗಳಿರುವ ಪರ್ವತಗಳಂತೆ ಹೋರಾಡಿದರು.
07013025a ದ್ರೋಣಃ ಪಾಂಚಾಲರಾಜಾನಂ ವಿದ್ಧ್ವಾ ದಶಭಿರಾಶುಗೈಃ|
07013025c ಬಹುಭಿಸ್ತೇನ ಚಾಭ್ಯಸ್ತಸ್ತಂ ವಿವ್ಯಾಧ ಶತಾಧಿಕೈಃ||
ದ್ರೋಣನು ಪಾಂಚಾಲರಾಜನನ್ನು ಹತ್ತು ಆಶುಗಗಳಿಂದ ಗಾಯಗೊಳಿಸಿದನು. ಆಗ ಅವನೂ ಕೂಡ ದ್ರೋಣನನ್ನು ಅನೇಕ ನೂರಕ್ಕೂ ಹೆಚ್ಚು ಬಾಣಗಳಿಂದ ಹೊಡೆದನು.
07013026a ವಿವಿಂಶತಿಂ ಭೀಮಸೇನೋ ವಿಂಶತ್ಯಾ ನಿಶಿತೈಃ ಶರೈಃ|
07013026c ವಿದ್ಧ್ವಾ ನಾಕಂಪಯದ್ವೀರಸ್ತದದ್ಭುತಮಿವಾಭವತ್||
ಭೀಮಸೇನನು ವಿವಿಂಶತಿಯನ್ನು ಇಪ್ಪತ್ತು ನಿಶಿತ ಶರಗಳಿಂದ ಹೊಡೆಯಲು ಆ ವೀರನು ಅಲುಗಾಡಲಿಲ್ಲ. ಅದು ನಮಗೆ ಪರಮ ಅದ್ಭುತವೆನಿಸಿತು.
07013027a ವಿವಿಂಶತಿಸ್ತು ಸಹಸಾ ವ್ಯಶ್ವಕೇತುಶರಾಸನಂ|
07013027c ಭೀಮಂ ಚಕ್ರೇ ಮಹಾರಾಜ ತತಃ ಸೈನ್ಯಾನ್ಯಪೂಜಯನ್||
ಒಡನೆಯೇ ವಿವಿಂಶತಿಯು ಭೀಮನನ್ನು ಕುದುರೆ-ಧ್ವಜ-ಬಿಲ್ಲುಗಳು ಇಲ್ಲದಂತೆ ಮಾಡಿಬಿಟ್ಟನು. ಮಹಾರಾಜ! ಆಗ ಸೈನ್ಯಗಳು ಅವನನ್ನು ಗೌರವಿಸಿದವು.
07013028a ಸ ತನ್ನ ಮಮೃಷೇ ವೀರಃ ಶತ್ರೋರ್ವಿಜಯಮಾಹವೇ|
07013028c ತತೋಽಸ್ಯ ಗದಯಾ ದಾಂತಾನ್ ಹಯಾನ್ಸರ್ವಾನಪಾತಯತ್||
ಆಹವದಲ್ಲಿ ಶತ್ರುವಿನ ವಿಜಯವನ್ನು ಸಹಿಸಿಕೊಳ್ಳಲಾಗದ ಆ ವೀರನು ಗದೆಯಿಂದ ಅವನ ಆನೆ-ಕುದುರೆಗಳೆಲ್ಲವನ್ನೂ ಅಪ್ಪಳಿಸಿ ಉರುಳಿಸಿದನು.
07013029a ಶಲ್ಯಸ್ತು ನಕುಲಂ ವೀರಃ ಸ್ವಸ್ರೀಯಂ ಪ್ರಿಯಮಾತ್ಮನಃ|
07013029c ವಿವ್ಯಾಧ ಪ್ರಹಸನ್ಬಾಣೈರ್ಲಾಡಯನ್ಕೋಪಯನ್ನಿವ||
ವೀರ ಶಲ್ಯನಾದರೋ ತನ್ನ ಪ್ರಿತಿಯ ಅಳಿಯ ನಕುಲನನ್ನು ನಗುತ್ತಾ ಆಟವಾಡುತ್ತಿದ್ದಂತೆ ಮತ್ತು ಕೋಪದಲ್ಲಿರುವಂತೆ ಬಾಣಗಳಿಂದ ಹೊಡೆದನು.
07013030a ತಸ್ಯಾಶ್ವಾನಾತಪತ್ರಂ ಚ ಧ್ವಜಂ ಸೂತಮಥೋ ಧನುಃ|
07013030c ನಿಪಾತ್ಯ ನಕುಲಃ ಸಂಖ್ಯೇ ಶಂಖಂ ದಧ್ಮೌ ಪ್ರತಾಪವಾನ್||
ಆಗ ಪ್ರತಾಪವಾನ್ ನಕುಲನು ಯುದ್ಧದಲ್ಲಿ ಅವನ ಕುದುರೆಗಳನ್ನೂ, ಧ್ವಜವನ್ನೂ, ಸೂತನನ್ನೂ, ಧನುಸ್ಸನ್ನೂ ಕೆಳಗುರುಳಿಸಿ ಶಂಖವನ್ನು ಊದಿದನು.
07013031a ಧೃಷ್ಟಕೇತುಃ ಕೃಪೇನಾಸ್ತಾಂ ಚಿತ್ತ್ವಾ ಬಹುವಿಧಾಂ ಶರಾನ್|
07013031c ಕೃಪಂ ವಿವ್ಯಾಧ ಸಪ್ತತ್ಯಾ ಲಕ್ಷ್ಮ ಚಾಸ್ಯಾಹರತ್ತ್ರಿಭಿಃ||
ಧೃಷ್ಟಕೇತುವು ಕೃಪನು ಪ್ರಯೋಗಿಸಿದ ಬಹುವಿಧದ ಶರಗಳನ್ನು ಕತ್ತರಿಸಿ, ಮೂರು ಬಾಣಗಳಿಂದ ಅವನ ಧ್ವಜವನ್ನು ತುಂಡರಿಸಿ ಕೃಪನನ್ನು ಎಪ್ಪತ್ತು ಬಾಣಗಳಿಂದ ಗಾಯಗೊಳಿಸಿದನು.
07013032a ತಂ ಕೃಪಃ ಶರವರ್ಷೇಣ ಮಹತಾ ಸಮವಾಕಿರತ್|
07013032c ನಿವಾರ್ಯ ಚ ರಣೇ ವಿಪ್ರೋ ಧೃಷ್ಟಕೇತುಮಯೋಧಯತ್||
ಅವನನ್ನು ಕೃಪನು ಮಹಾ ಶರವರ್ಷದಿಂದ ಮುಚ್ಚಿದನು. ರಣದಲ್ಲಿ ವಿಪ್ರನು ಧೃಷ್ಟಕೇತುವನ್ನು ತಡೆದು ಯುದ್ಧ ಮಾಡಿದನು.
07013033a ಸಾತ್ಯಕಿಃ ಕೃತವರ್ಮಾಣಂ ನಾರಾಚೇನ ಸ್ತನಾಂತರೇ|
07013033c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನರನ್ಯೈಃ ಸ್ಮಯನ್ನಿವ||
ಸಾತ್ಯಕಿಯು ಕೃತವರ್ಮನನ್ನು ನಾರಾಚದಿಂದ ಎದೆಗೆ ಹೊಡೆದು ಪುನಃ ನಗುತ್ತಾ ಇತರ ಎಪ್ಪತ್ತರಿಂದ ಹೊಡೆದನು.
07013034a ಸಪ್ತಸಪ್ತತಿಭಿರ್ಭೋಜಸ್ತಂ ವಿದ್ಧ್ವಾ ನಿಶಿತೈಃ ಶರೈಃ|
07013034c ನಾಕಂಪಯತ ಶೈನೇಯಂ ಶೀಘ್ರೋ ವಾಯುರಿವಾಚಲಂ||
ಆಗ ಭೋಜನು ಅವನನ್ನು ಎಪ್ಪತ್ತೇಳು ನಿಶಿತ ಶರಗಳಿಂದ ಹೊಡೆಯಲು ಶೈನೇಯನು ಭಿರುಗಾಳಿಗೂ ಅಲುಗಾಡದ ಪರ್ವತದಂತೆ ಕಂಪಿಸಲಿಲ್ಲ.
07013035a ಸೇನಾಪತಿಃ ಸುಶರ್ಮಾಣಂ ಶೀಘ್ರಂ ಮರ್ಮಸ್ವತಾಡಯತ್|
07013035c ಸ ಚಾಪಿ ತಂ ತೋಮರೇಣ ಜತ್ರುದೇಶೇ ಅತಾಡಯತ್||
ಸೇನಾಪತಿ ಧೃಷ್ಟದ್ಯುಮ್ನನು ಸುಶರ್ಮನನ್ನು ಶೀಘ್ರವಾಗಿ ಮರ್ಮಗಳಲ್ಲಿ ಹೊಡೆದನು. ಅವನೂ ಕೂಡ ಅವನನ್ನು ಜತ್ರುದೇಶದಲ್ಲಿ ತೋಮರದಿಂದ ಹೊಡೆದನು.
07013036a ವೈಕರ್ತನಂ ತು ಸಮರೇ ವಿರಾಟಃ ಪ್ರತ್ಯವಾರಯತ್|
07013036c ಸಹ ಮತ್ಸ್ಯೈರ್ಮಹಾವೀರ್ಯೈಸ್ತದದ್ಭುತಮಿವಾಭವತ್||
ಸಮರದಲ್ಲಿ ವೈಕರ್ತನನ್ನು ವಿರಾಟನು ಮತ್ಸ್ಯ ಮಹಾವೀರರೊಂದಿಗೆ ಎದುರಿಸಿ ತಡೆದನು. ಆಗ ಈ ಅದ್ಭುತವು ನಡೆಯಿತು.
07013037a ತತ್ಪೌರುಷಮಭೂತ್ತತ್ರ ಸೂತಪುತ್ರಸ್ಯ ದಾರುಣಂ|
07013037c ಯತ್ಸೈನ್ಯಂ ವಾರಯಾಮಾಸ ಶರೈಃ ಸನ್ನತಪರ್ವಭಿಃ||
ಸನ್ನತಪರ್ವ ಶರಗಳಿಂದ ಸೈನ್ಯವನ್ನು ತಡೆಹಿಡಿದ ಸೂತಪುತ್ರನ ದಾರುಣ ಪೌರುಷವನ್ನು ಅಲ್ಲಿ ನೋಡಲಿಕ್ಕೆ ಸಿಕ್ಕಿತು.
07013038a ದ್ರುಪದಸ್ತು ಸ್ವಯಂ ರಾಜಾ ಭಗದತ್ತೇನ ಸಂಗತಃ|
07013038c ತಯೋರ್ಯುದ್ಧಂ ಮಹಾರಾಜ ಚಿತ್ರರೂಪಮಿವಾಭವತ್|
07013038e ಭೂತಾನಾಂ ತ್ರಾಸಜನನಂ ಚಕ್ರಾತೇಽಸ್ತ್ರವಿಶಾರದೌ||
ರಾಜಾ ದ್ರುಪದನು ಸ್ವಯಂ ಭಗದತ್ತನೊಡನೆ ಯುದ್ಧಮಾಡಿದನು. ಮಹಾರಾಜ! ಅವರಿಬ್ಬರ ಯುದ್ಧವು ವಿಚಿತ್ರವಾಗಿ ಕಾಣುತ್ತಿತ್ತು. ಅವರಿಬ್ಬರು ಅಸ್ತ್ರವಿಶಾರದರೂ ಭೂತಗಳಿಗೆ ಭಯವನ್ನುಂಟುಮಾಡತೊಡಗಿದರು.
07013039a ಭೂರಿಶ್ರವಾ ರಣೇ ರಾಜನ್ಯಾಜ್ಞಸೇನಿಂ ಮಹಾರಥಂ|
07013039c ಮಹತಾ ಸಾಯಕೌಘೇನ ಚಾದಯಾಮಾಸ ವೀರ್ಯವಾನ್||
ರಾಜನ್! ರಣದಲ್ಲಿ ವೀರ್ಯವಾನ್ ಭೂರಿಶ್ರವನು ಮಹಾರಥ ಯಾಜ್ಞಸೇನಿಯನ್ನು ಮಹಾ ಸಾಯಕಗಳ ರಾಶಿಯಿಂದ ಹೊಡೆದನು.
07013040a ಶಿಖಂಡೀ ತು ತತಃ ಕ್ರುದ್ಧಃ ಸೌಮದತ್ತಿಂ ವಿಶಾಂ ಪತೇ|
07013040c ನವತ್ಯಾ ಸಾಯಕಾನಾಂ ತು ಕಂಪಯಾಮಾಸ ಭಾರತ||
ವಿಶಾಂಪತೇ! ಭಾರತ! ಆಗ ಶಿಖಂಡಿಯಾದರೋ ಕ್ರುದ್ಧನಾಗಿ ಸೌಮದತ್ತಿಯನ್ನು ತೊಂಭತ್ತು ಸಾಯಕಗಲಿಂದ ನಡುಗಿಸಿದನು.
07013041a ರಾಕ್ಷಸೌ ಭೀಮಕರ್ಮಾಣೌ ಹೈಡಿಂಬಾಲಂಬುಸಾವುಭೌ|
07013041c ಚಕ್ರಾತೇಽತ್ಯದ್ಭುತಂ ಯುದ್ಧಂ ಪರಸ್ಪರವಧೈಷಿಣೌ||
ಭೀಮಕರ್ಮಿ ರಾಕ್ಷಸರಿಬ್ಬರು ಹೈಡಿಂಬಿ-ಅಲಂಬುಸರು ಪರಸ್ಪರರನ್ನು ವಧಿಸಲು ಬಯಸಿ ಅತ್ಯದ್ಭುತವಾದ ಯುದ್ಧದಲ್ಲಿ ತೊಡಗಿದರು.
07013042a ಮಾಯಾಶತಸೃಜೌ ದೃಪ್ತೌ ಮಾಯಾಭಿರಿತರೇತರಂ|
07013042c ಅಂತರ್ಹಿತೌ ಚೇರತುಸ್ತೌ ಭೃಶಂ ವಿಸ್ಮಯಕಾರಿಣೌ||
ದೃಪ್ತರಾದ ಅವರಿಬ್ಬರೂ ನೂರಾರು ಮಾಯೆಗಳನ್ನು ಸೃಷ್ಟಿಸಿ ಒಬ್ಬರನ್ನೊಬ್ಬರ ಮಾಯೆಗಳಿಂದ ಅಂತರ್ಧಾನರಾಗಿ ತುಂಬಾ ವಿಸ್ಮಯಗಳನ್ನುಂಟುಮಾಡುತ್ತಾ ಸಂಚರಿಸುತ್ತಿದ್ದರು.
07013043a ಚೇಕಿತಾನೋಽನುವಿಂದೇನ ಯುಯುಧೇ ತ್ವತಿಭೈರವಂ|
07013043c ಯಥಾ ದೇವಾಸುರೇ ಯುದ್ಧೇ ಬಲಶಕ್ರೌ ಮಹಾಬಲೌ||
ದೇವಾಸುರರ ಯುದ್ಧದಲ್ಲಿ ಮಹಾಬಲಶಾಲಿಗಳಾದ ಬಲ ಮತ್ತು ಶಕ್ರರಂತೆ ಚೇಕಿತಾನ-ಅನುವಿಂದರು ಅತಿ ಭೈರವ ಯುದ್ಧದಲ್ಲಿ ತೊಡಗಿದರು.
07013044a ಲಕ್ಷ್ಮಣಃ ಕ್ಷತ್ರದೇವೇನ ವಿಮರ್ದಮಕರೋದ್ಭೃಶಂ|
07013044c ಯಥಾ ವಿಷ್ಣುಃ ಪುರಾ ರಾಜನ್ ಹಿರಣ್ಯಾಕ್ಷೇಣ ಸಂಯುಗೇ||
ರಾಜನ್! ಹಿಂದು ವಿಷ್ಣುವು ಸಂಯುಗದಲ್ಲಿ ಹಿರಣ್ಯಾಕ್ಷನೊಂದಿಗೆ ಹೇಗೋ ಹಾಗೆ ಲಕ್ಷ್ಮಣನು ಕ್ಷತ್ರದೇವನ ಸೇನೆಯನ್ನು ಚೆನ್ನಾಗಿ ಮರ್ದಿಸಿದನು.
07013045a ತತಃ ಪ್ರಜವಿತಾಶ್ವೇನ ವಿಧಿವತ್ಕಲ್ಪಿತೇನ ಚ|
07013045c ರಥೇನಾಭ್ಯಪತದ್ರಾಜನ್ಸೌಭದ್ರಂ ಪೌರವೋ ನದನ್||
ರಾಜನ್! ಆಗ ಚಂಚಲಸ್ವಭಾವದ ಕುದುರೆಗಳಿಂದ ವಿಧಿವತ್ತಾಗಿ ಕಲ್ಪಿತವಾಗಿದ್ದ ರಥದಲ್ಲಿ ಪೌರವನು ನಿನಾದಿಸುತ್ತಾ ಸೌಭದ್ರನನ್ನು ಆಕ್ರಮಣಿಸಿದನು.
07013046a ತತೋಽಭಿಯಾಯ ತ್ವರಿತೋ ಯುದ್ಧಾಕಾಂಕ್ಷೀ ಮಹಾಬಲಃ|
07013046c ತೇನ ಚಕ್ರೇ ಮಹದ್ಯುದ್ಧಮಭಿಮನ್ಯುರರಿಂದಮಃ||
ಆಗ ಯುದ್ಧಾಕಾಂಕ್ಷಿಯಾಗಿದ್ದ ಮಹಾಬಲ ಅರಿಂದಮ ಅಭಿಮನ್ಯುವು ತ್ವರೆಮಾಡಿ ಅವನೊಂದಿಗೆ ಮಹಾಯುದ್ಧದಲ್ಲಿ ತೊಡಗಿದನು.
07013047a ಪೌರವಸ್ತ್ವಥ ಸೌಭದ್ರಂ ಶರವ್ರಾತೈರವಾಕಿರತ್|
07013047c ತಸ್ಯಾರ್ಜುನಿರ್ಧ್ವಜಂ ಚತ್ರಂ ಧನುಶ್ಚೋರ್ವ್ಯಾಮಪಾತಯತ್||
ಪೌರವನು ಸೌಭದ್ರನನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು. ಆರ್ಜುನಿಯು ಅವನ ಧ್ವಜ, ಚತ್ರ, ಧನುಸ್ಸುಗಳನ್ನು ಕತ್ತರಿಸಿ ಬೀಳಿಸಿದನು.
07013048a ಸೌಭದ್ರಃ ಪೌರವಂ ತ್ವನ್ಯೈರ್ವಿದ್ಧ್ವಾ ಸಪ್ತಭಿರಾಶುಗೈಃ|
07013048c ಪಂಚಭಿಸ್ತಸ್ಯ ವಿವ್ಯಾಧ ಹಯಾನ್ಸೂತಂ ಚ ಸಾಯಕೈಃ||
ಸೌಭದ್ರನು ಪೌರವನನ್ನು ಅನ್ಯ ಏಳು ಆಶುಗಗಳಿಂದ ಹೊಡೆದು ಐದು ಸಾಯಕಗಳಿಂದ ಅವನ ಕುದುರೆಗಳನ್ನೂ ಸೂತನನ್ನೂ ಹೊಡೆದನು.
07013049a ತತಃ ಸಂಹರ್ಷಯನ್ಸೇನಾಂ ಸಿಂಹವದ್ವಿನದನ್ಮುಹುಃ|
07013049c ಸಮಾದತ್ತಾರ್ಜುನಿಸ್ತೂರ್ಣಂ ಪೌರವಾಂತಕರಂ ಶರಂ||
ಆಗ ಆರ್ಜುನಿಯು ಸೇನೆಗಳನ್ನು ಹರ್ಷಗೊಳಿಸುತ್ತಾ ಪುನಃ ಪುನಃ ಸಿಂಹದಂತೆ ಗರ್ಜಿಸಿದನು ಮತ್ತು ತಕ್ಷಣವೇ ಪೌರವನನ್ನು ಅಂತ್ಯಗೊಳಿಸಲು ಶರವನ್ನು ತೆಗೆದುಕೊಂಡನು.
07013050a ದ್ವಾಭ್ಯಾಂ ಶರಾಭ್ಯಾಂ ಹಾರ್ದಿಕ್ಯಶ್ಚಕರ್ತ ಸಶರಂ ಧನುಃ|
07013050c ತದುತ್ಸೃಜ್ಯ ಧನುಶ್ಚಿನ್ನಂ ಸೌಭದ್ರಃ ಪರವೀರಹಾ|
07013050e ಉದ್ಬಬರ್ಹ ಸಿತಂ ಖಡ್ಗಮಾದದಾನಃ ಶರಾವರಂ||
ಆಗ ಹಾರ್ದಿಕ್ಯನು ಎರಡು ಬಾಣಗಳಿಂದ ಅವನ ಬಿಲ್ಲು-ಬಾಣಗಳನ್ನು ಕತ್ತರಿಸಿದನು. ಪರವೀರಹ ಸೌಭದ್ರನು ಆ ತುಂಡಾದ ಧನುಸ್ಸನ್ನು ಎಸೆದು ಥಳಥಳಿಸುವ ಖಡ್ಗವನ್ನು ವರಸೆಯಿಂದ ತೆಗೆದು ಗುರಾಣಿಯನ್ನೂ ಹಿಡಿದನು.
07013051a ಸ ತೇನಾನೇಕತಾರೇಣ ಚರ್ಮಣಾ ಕೃತಹಸ್ತವತ್|
07013051c ಭ್ರಾಂತಾಸಿರಚರನ್ಮಾರ್ಗಾನ್ದರ್ಶಯನ್ವೀರ್ಯಮಾತ್ಮನಃ||
ಅವನು ಅನೇಕ ನಕ್ಷತ್ರಗಳ ಚಿಹ್ನೆಗಳನ್ನು ಹೊಂದಿದ ಗುರಾಣಿಯನ್ನು ಹಿಡಿದು, ಅದರಲ್ಲಿ ತನ್ನ ಕೈಚಳಕವನ್ನು ಮತ್ತು ವೀರ್ಯವನ್ನು ತೋರಿಸುತ್ತಾ ರಣಾಂಗಣದ ಸುತ್ತಲೂ ತಿರುಗುತ್ತಿದ್ದನು.
07013052a ಭ್ರಾಮಿತಂ ಪುನರುದ್ಭ್ರಾಂತಮಾಧೂತಂ ಪುನರುಚ್ಚ್ರಿತಂ|
07013052c ಚರ್ಮನಿಸ್ತ್ರಿಂಶಯೋ ರಾಜನ್ನಿರ್ವಿಶೇಷಮದೃಶ್ಯತ||
ರಾಜನ್! ಭ್ರಾಮಿತ (ಕತ್ತಿ-ಗುರಾಣಿಗಳನ್ನು ಕೆಳಕ್ಕೆ ತಿರುಗಿಸುವುದು), ಉದ್ಭ್ರಾಂತ (ಕತ್ತಿಯನ್ನು ಮೇಲೆ ತಿರುಗಿಸುವುದು), ಅಧೂತ (ಸುತ್ತಲೂ ತಿರುಗಿಸುವುದು), ಉತ್ಥಿತ (ಮೇಲಕ್ಕೆ ಹಾರಿ ತಿರುಗಿಸುವುದು) – ಇತ್ಯಾದಿ ವರಸೆಗಳಿಂದ ಅವನು ಖಡ್ಗ ಗುರಾಣಿಗಳನ್ನು ತಿರುಗಿಸುತ್ತಿದ್ದು ವಿಶೇಷವಾಗಿ ಕಂಡಿತು.
07013053a ಸ ಪೌರವರಥಸ್ಯೇಷಾಮಾಪ್ಲುತ್ಯ ಸಹಸಾ ನದನ್|
07013053c ಪೌರವಂ ರಥಮಾಸ್ಥಾಯ ಕೇಶಪಕ್ಷೇ ಪರಾಮೃಶತ್||
ಅವನು ಒಮ್ಮೆಲೇ ಜೋರಾಗಿ ಗರ್ಜಿಸಿ ಪೌರವನ ರಥದ ಮೂಕಿನ ಮೇಲೆ ಹಾರಿ ರಥದಲ್ಲಿ ಕುಳಿತಿದ್ದ ಪೌರವನ ತಲೆಗೂದಲನ್ನು ಹಿಡಿದನು.
07013054a ಜಘಾನಾಸ್ಯ ಪದಾ ಸೂತಮಸಿನಾಪಾತಯದ್ಧ್ವಜಂ|
07013054c ವಿಕ್ಷೋಭ್ಯಾಂಭೋನಿಧಿಂ ತಾರ್ಕ್ಷ್ಯಸ್ತಂ ನಾಗಮಿವ ಚಾಕ್ಷಿಪತ್||
ಕಾಲಿನಿಂದ ಅವನನ್ನು ಒದೆದು, ಖಡ್ಗದಿಂದ ಸೂತ ಮತ್ತು ಧ್ವಜಗಳನ್ನು ಉರುಳಿಸಿದನು. ಅಲ್ಲೋಲಕಲ್ಲೋಲಗೊಂಡಿದ್ದ ಸಮುದ್ರದಿಂದ ಗರುಡನು ಸರ್ಪಗಳನ್ನು ಎಳೆದುಕೊಳ್ಳುವಂತೆ ಅವನನ್ನು ಸೆಳೆದುಕೊಂಡನು.
07013055a ತಮಾಕಲಿತಕೇಶಾಂತಂ ದದೃಶುಃ ಸರ್ವಪಾರ್ಥಿವಾಃ|
07013055c ಉಕ್ಷಾಣಮಿವ ಸಿಂಹೇನ ಪಾತ್ಯಮಾನಮಚೇತನಂ||
ಸಿಂಹದಿಂದ ಬೀಳಿಸಲ್ಪಟ್ಟ ಹೋರಿಯಂತೆ ಕೆಳಗೆ ಅಚೇತನನಾಗಿ ಬಿದ್ದ ಬಿಚ್ಚಿದ ಕೂದಲಿನ ಅವನನ್ನು ಸರ್ವಪಾರ್ಥಿವರೂ ನೋಡಿದರು.
07013056a ತಮಾರ್ಜುನಿವಶಂ ಪ್ರಾಪ್ತಂ ಕೃಷ್ಯಮಾಣಮನಾಥವತ್|
07013056c ಪೌರವಂ ಪತಿತಂ ದೃಷ್ಟ್ವಾ ನಾಮೃಷ್ಯತ ಜಯದ್ರಥಃ||
ಆರ್ಜುನಿಯ ವಶದಲ್ಲಿ ಬಂದು ಅನಾಥನಂತೆ ಎಳೆದಾಡಲ್ಪಟ್ಟು ಬಿದ್ದಿದ್ದ ಪೌರವನನ್ನು ನೋಡಿ ಜಯದ್ರಥನು ಸಹಿಸಿಕೊಳ್ಳಲಿಲ್ಲ.
07013057a ಸ ಬರ್ಹಿಣಮಹಾವಾಜಂ ಕಿಂಕಿಣೀಶತಜಾಲವತ್|
07013057c ಚರ್ಮ ಚಾದಾಯ ಖಡ್ಗಂ ಚ ನದನ್ಪರ್ಯಪತದ್ರಥಾತ್||
ನವಿಲುಗರಿಗಳಿಂದ ಮತ್ತು ಸಣ್ಣಸಣ್ಣ ಗಂಟೆಗಳಿಂದ ಅಲಂಕೃತಗೊಂಡಿದ್ದ ಗುರಾಣಿಯನ್ನೂ ಖಡ್ಗವನ್ನೂ ಹಿಡಿದು ಗರ್ಜಿಸುತ್ತಾ ರಥದಿಂದ ಧುಮುಕಿದನು.
07013058a ತತಃ ಸೈಂಧವಮಾಲೋಕ್ಯ ಕಾರ್ಷ್ಣಿರುತ್ಸೃಜ್ಯ ಪೌರವಂ|
07013058c ಉತ್ಪಪಾತ ರಥಾತ್ತೂರ್ಣಂ ಶ್ಯೇನವನ್ನಿಪಪಾತ ಚ||
ಆಗ ಸೈಂಧವನನ್ನು ನೋಡಿ ಕಾರ್ಷ್ಣಿಯು ಪೌರವನನ್ನು ಅಲ್ಲಿಯೇ ಬಿಟ್ಟು ತಕ್ಷಣವೇ ರಥದಿಂದ ಧುಮುಕಿ ಗಿಡುಗದಂತೆ ಮೇಲೆ ಬಿದ್ದನು.
07013059a ಪ್ರಾಸಪಟ್ಟಿಶನಿಸ್ತ್ರಿಂಶಾಂ ಶತ್ರುಭಿಃ ಸಂಪ್ರವೇರಿತಾನ್|
07013059c ಚಿಚ್ಚೇದಾಥಾಸಿನಾ ಕಾರ್ಷ್ಣಿಶ್ಚರ್ಮಣಾ ಸಂರುರೋಧ ಚ||
ಶತ್ರುಗಳು ತನ್ನ ಮೇಲೆ ಪ್ರಹರಿಸುತ್ತಿದ್ದ ಪ್ರಾಸ-ಪಟ್ಟಿಶ-ಖಡ್ಗಗಳನ್ನು ಕಾರ್ಷ್ಣಿಯು ಗುರಾಣಿಯಿಂದ ತಡೆಯುತ್ತಾ ಖಡ್ಗದಿಂದ ಅವುಗಳನ್ನು ತುಂಡರಿಸಿದನು.
07013060a ಸ ದರ್ಶಯಿತ್ವಾ ಸೈನ್ಯಾನಾಂ ಸ್ವಬಾಹುಬಲಮಾತ್ಮನಃ|
07013060c ತಮುದ್ಯಮ್ಯ ಮಹಾಖಡ್ಗಂ ಚರ್ಮ ಚಾಥ ಪುನರ್ಬಲೀ||
07013061a ವೃದ್ಧಕ್ಷತ್ರಸ್ಯ ದಾಯಾದಂ ಪಿತುರತ್ಯಂತವೈರಿಣಂ|
07013061c ಸಸಾರಾಭಿಮುಖಃ ಶೂರಃ ಶಾರ್ದೂಲ ಇವ ಕುಂಜರಂ||
ತನ್ನ ಬಾಹುಬಲವನ್ನು ಸೇನೆಗಳಿಗೆ ತೋರಿಸುತ್ತಾ ಆ ಬಲಿ ಶೂರನು ಪುನಃ ಮಹಾಖಡ್ಗವನ್ನೂ ಗುರಾಣಿಯನ್ನು ಮೇಲೆತ್ತಿ ವೃದ್ಧಕ್ಷತ್ರನ ಮಗ, ತನ್ನ ತಂದೆಯ ಅತ್ಯಂತ ವೈರಿಯಾಗಿದ್ದ ಜಯದ್ರಥನನ್ನು ಆನೆಯನ್ನು ಸಿಂಹವು ಹೇಗೋ ಹಾಗೆ ಸಲಿಲವಾಗಿ ಎದುರಿಸಿದನು.
07013062a ತೌ ಪರಸ್ಪರಮಾಸಾದ್ಯ ಖಡ್ಗದಂತನಖಾಯುಧೌ|
07013062c ಹೃಷ್ಟವತ್ಸಂಪ್ರಜಹ್ರಾತೇ ವ್ಯಾಘ್ರಕೇಸರಿಣಾವಿವ||
ಖಡ್ಗ, ಹಲ್ಲು ಮತ್ತು ಉಗುರುಗಳೇ ಆಯುಧಗಳಾಗಿದ್ದ ಅವರಿಬ್ಬರೂ ಪರಸ್ಪರರನ್ನು ಎದುರಿಸಿ ಸಂತೋಷಗೊಂಡು ಸಿಂಹ ಮತ್ತು ಹುಲಿಗಳಂತೆ ಹೊಡೆದಾಡಿದರು.
07013063a ಸಂಪಾತೇಷ್ವಭಿಪಾತೇಷು ನಿಪಾತೇಷ್ವಸಿಚರ್ಮಣೋಃ|
07013063c ನ ತಯೋರಂತರಂ ಕಶ್ಚಿದ್ದದರ್ಶ ನರಸಿಂಹಯೋಃ||
ಆ ಇಬ್ಬರು ನರಸಿಂಹರ ನಡುವೆ ಖಡ್ಗ-ಗುರಾಣಿಗಳ ಸಂಪಾತ-ಅಭಿಪಾತ-ನಿಪಾತಗಳಲ್ಲಿ ಯಾವ ಅಂತರವೂ ಕಾಣಲಿಲ್ಲ.
07013064a ಅವಕ್ಷೇಪೋಽಸಿನಿರ್ಹ್ರಾದಃ ಶಸ್ತ್ರಾಂತರನಿದರ್ಶನಂ|
07013064c ಬಾಹ್ಯಾಂತರನಿಪಾತಶ್ಚ ನಿರ್ವಿಶೇಷಮದೃಶ್ಯತ||
ಖಡ್ಗಪ್ರಹಾರ, ಖಡ್ಗಸಂಚಾಲನದ ಶಬ್ಧ, ಅನೇಕ ವಿಧವಾದ ವರಸೆಗಳ ಪ್ರದರ್ಶನ, ಶರೀರದ ಮುಂಬಾಗ-ಹಿಂಬಾಗಗಳಲ್ಲಿ ಸಮಯವರಿತು ಪ್ರಹರಿಸುವಿಕೆ ಇವುಗಳಲ್ಲಿ ಅವರಿಬ್ಬರ ನಡುವೆ ಅಂತರವೇ ಕಾಣಲಿಲ್ಲ.
07013065a ಬಾಹ್ಯಮಾಭ್ಯಂತರಂ ಚೈವ ಚರಂತೌ ಮಾರ್ಗಮುತ್ತಮಂ|
07013065c ದದೃಶಾತೇ ಮಹಾತ್ಮಾನೌ ಸಪಕ್ಷಾವಿವ ಪರ್ವತೌ||
ಶರೀರದ ಮುಂದೆ ಮತ್ತು ಹಿಂದೆ ತಿರುಗಿಸುತ್ತಾ, ಉತ್ತಮ ಮಾರ್ಗದಲ್ಲಿ ತಿರುಗುತ್ತಿರುವ ಆ ಇಬ್ಬರು ಮಹಾತ್ಮರು ರೆಕ್ಕೆಗಳಿರುವ ಪರ್ವತಗಳಂತೆ ಕಂಡರು.
07013066a ತತೋ ವಿಕ್ಷಿಪತಃ ಖಡ್ಗಂ ಸೌಭದ್ರಸ್ಯ ಯಶಸ್ವಿನಃ|
07013066c ಶರಾವರಣಪಕ್ಷಾಂತೇ ಪ್ರಜಹಾರ ಜಯದ್ರಥಃ||
ಆಗ ಖಡ್ಗವನ್ನು ತಿರುಗಿಸುತ್ತಿದ್ದ ಸೌಭದ್ರನ ಗುರಾಣಿಯ ಒಂದು ಭಾಗವನ್ನು ಯಶಸ್ವಿ ಜಯದ್ರಥನು ಹೊಡೆದನು.
07013067a ರುಕ್ಮಪಕ್ಷಾಂತರೇ ಸಕ್ತಸ್ತಸ್ಮಿಂಶ್ಚರ್ಮಣಿ ಭಾಸ್ವರೇ|
07013067c ಸಿಂಧುರಾಜಬಲೋದ್ಧೂತಃ ಸೋಽಭಜ್ಯತ ಮಹಾನಸಿಃ||
ಬಂಗಾರದ ತಗುಡಿನಿಂದ ಮಾಡಿದ್ದ ಗುರಾಣಿಯಲ್ಲಿ ಚುಚ್ಚಿಕೊಂಡಿದ್ದ ತನ್ನ ಮಹಾ ಖಡ್ಗವನ್ನು ಸಿಂಧುರಾಜನು ಬಲವನ್ನುಪಯೋಗಿಸಿ ಅಲ್ಲಾಡಿಸಿ ಕೀಳಲು ಹೋದಾಗ ಅದು ಅಲ್ಲಿಯೇ ತುಂಡಾಯಿತು.
07013068a ಭಗ್ನಮಾಜ್ಞಾಯ ನಿಸ್ತ್ರಿಂಶಮವಪ್ಲುತ್ಯ ಪದಾನಿ ಷಟ್|
07013068c ಸೋಽದೃಶ್ಯತ ನಿಮೇಷೇಣ ಸ್ವರಥಂ ಪುನರಾಸ್ಥಿತಃ||
ತನ್ನ ಖಡ್ಗವು ತುಂಡಾದುದನ್ನು ಗಮನಿಸಿದ ಜಯದ್ರಥನು ಒಡನೆಯೇ ಆರು ಅಡಿಗಳಷ್ಟು ಹಾರಿ ನಿಮಿಷದಲ್ಲಿ ತನ್ನ ರಥದಲ್ಲಿ ಕುಳಿತಿದ್ದುದು ಪ್ರೇಕ್ಷಣೀಯವಾಗಿತ್ತು.
07013069a ತಂ ಕಾರ್ಷ್ಣಿಂ ಸಮರಾನ್ಮುಕ್ತಮಾಸ್ಥಿತಂ ರಥಮುತ್ತಮಂ|
07013069c ಸಹಿತಾಃ ಸರ್ವರಾಜಾನಃ ಪರಿವವ್ರುಃ ಸಮಂತತಃ||
ಕಾರ್ಷ್ಣಿ ಅಭಿಮನ್ಯುವೂ ಕೂಡ ಯುದ್ಧವನ್ನು ನಿಲ್ಲಿಸಿ ತನ್ನ ಉತ್ತಮ ರಥದಲ್ಲಿ ಕುಳಿತುಕೊಂಡನು. ಆಗ ಸರ್ವ ರಾಜರೂ ಒಟ್ಟಿಗೇ ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು.
07013070a ತತಶ್ಚರ್ಮ ಚ ಖಡ್ಗಂ ಚ ಸಮುತ್ಕ್ಷಿಪ್ಯ ಮಹಾಬಲಃ|
07013070c ನನಾದಾರ್ಜುನದಾಯಾದಃ ಪ್ರೇಕ್ಷಮಾಣೋ ಜಯದ್ರಥಂ||
ಆಗ ಖಡ್ಗವನ್ನೂ ಗುರಾಣಿಯನ್ನೂ ಮೇಲೆತ್ತಿ ಮಹಾಬಲ ಅರ್ಜುನನ ಮಗನು ಜಯದ್ರಥನನ್ನು ನೋಡುತ್ತಾ ಗರ್ಜಿಸಿದನು.
07013071a ಸಿಂಧುರಾಜಂ ಪರಿತ್ಯಜ್ಯ ಸೌಭದ್ರಃ ಪರವೀರಹಾ|
07013071c ತಾಪಯಾಮಾಸ ತತ್ಸೈನ್ಯಂ ಭುವನಂ ಭಾಸ್ಕರೋ ಯಥಾ||
ಸಿಂಧುರಾಜನನ್ನು ಬಿಟ್ಟು ಪರವೀರಹ ಸೌಭದ್ರನು ಆ ಸೈನ್ಯವನ್ನು ಭುವನವನ್ನು ಭಾಸ್ಕರನು ಹೇಗೋ ಹಾಗೆ ಸುಡತೊಡಗಿದನು.
07013072a ತಸ್ಯ ಸರ್ವಾಯಸೀಂ ಶಕ್ತಿಂ ಶಲ್ಯಃ ಕನಕಭೂಷಣಾಂ|
07013072c ಚಿಕ್ಷೇಪ ಸಮರೇ ಘೋರಾಂ ದೀಪ್ತಾಮಗ್ನಿಶಿಖಾಮಿವ||
ಆಗ ಶಲ್ಯನು ಅಗ್ನಿಯ ಜ್ವಾಲೆಯಂತೆ ಪ್ರದೀಪ್ತವಾಗಿದ್ದ ಕನಭೂಷಣ ಲೋಹಮಯ ಘೋರ ಶಕ್ತಿಯನ್ನು ಅವನ ಮೇಲೆ ಎಸೆದನು.
07013073a ತಾಮವಪ್ಲುತ್ಯ ಜಗ್ರಾಹ ಸಕೋಶಂ ಚಾಕರೋದಸಿಂ|
07013073c ವೈನತೇಯೋ ಯಥಾ ಕಾರ್ಷ್ಣಿಃ ಪತಂತಮುರಗೋತ್ತಮಂ||
ಬೀಳುತ್ತಿರುವ ಉತ್ತಮ ನಾಗವನ್ನು ವೈನತೇಯನು ಹೇಗೋ ಹಾಗೆ ಕಾರ್ಷ್ಣಿಯು ಅದನ್ನು ಹಾರಿ ಹಿಡಿದು, ತನ್ನ ಒರಸೆಯಿಂದ ಖಡ್ಗವನ್ನು ಎಳೆದು ತೆಗೆದನು.
07013074a ತಸ್ಯ ಲಾಘವಮಾಜ್ಞಾಯ ಸತ್ತ್ವಂ ಚಾಮಿತತೇಜಸಃ|
07013074c ಸಹಿತಾಃ ಸರ್ವರಾಜಾನಃ ಸಿಂಹನಾದಮಥಾನದನ್||
ಆ ಅಮಿತತೇಜಸ್ವಿಯ ಸತ್ತ್ವವನ್ನೂ ಹಸ್ತಲಾಘವವನ್ನೂ ತಿಳಿದ ಸರ್ವ ರಾಜರೂ ಒಟ್ಟಿಗೇ ಸಿಂಹನಾದಗೈದರು.
07013075a ತತಸ್ತಾಮೇವ ಶಲ್ಯಸ್ಯ ಸೌಭದ್ರಃ ಪರವೀರಹಾ|
07013075c ಮುಮೋಚ ಭುಜವೀರ್ಯೇಣ ವೈಡೂರ್ಯವಿಕೃತಾಜಿರಾಂ||
ಆಗ ಶಲ್ಯನ ಅದೇ ವೈಡೂರ್ಯ ಸಮಲಂಕೃತ ಶಕ್ತಿಯನ್ನು ಪರವೀರಹ ಸೌಭದ್ರನು ತನ್ನ ಭುಜವೀರ್ಯದಿಂದ ಎಸೆದನು.
07013076a ಸಾ ತಸ್ಯ ರಥಮಾಸಾದ್ಯ ನಿರ್ಮುಕ್ತಭುಜಗೋಪಮಾ|
07013076c ಜಘಾನ ಸೂತಂ ಶಲ್ಯಸ್ಯ ರಥಾಚ್ಚೈನಮಪಾತಯತ್||
ಪೊರೆಯನ್ನು ಬಿಟ್ಟ ಸರ್ಪದಂತಿದ್ದ ಅದು ಅವನ ರಥವನ್ನು ತಲುಪಿ ಶಲ್ಯನ ಸೂತನನ್ನು ಕೊಂದು ಅವನನ್ನು ರಥದಿಂದ ಕೆಳಗೆ ಉರುಳಿಸಿತು.
07013077a ತತೋ ವಿರಾಟದ್ರುಪದೌ ಧೃಷ್ಟಕೇತುರ್ಯುಧಿಷ್ಠಿರಃ|
07013077c ಸಾತ್ಯಕಿಃ ಕೇಕಯಾ ಭೀಮೋ ಧೃಷ್ಟದ್ಯುಮ್ನಶಿಖಂಡಿನೌ|
07013077e ಯಮೌ ಚ ದ್ರೌಪದೇಯಾಶ್ಚ ಸಾಧು ಸಾಧ್ವಿತಿ ಚುಕ್ರುಶುಃ||
ಆಗ ವಿರಾಟ-ದ್ರುಪದರು, ಧೃಷ್ಟಕೇತು-ಯುಧಿಷ್ಠಿರರು, ಸಾತ್ಯಕಿ, ಕೇಕಯರು, ಭೀಮ, ಧೃಷ್ಟದ್ಯುಮ್ನ-ಶಿಖಂಡಿಯರು, ಯಮಳರು ಮತ್ತು ದ್ರೌಪದೇಯರು “ಸಾಧು! ಸಾಧು!” ಎಂದು ಕೂಗಿದರು.
07013078a ಬಾಣಶಬ್ದಾಶ್ಚ ವಿವಿಧಾಃ ಸಿಂಹನಾದಾಶ್ಚ ಪುಷ್ಕಲಾಃ|
07013078c ಪ್ರಾದುರಾಸನ್ ಹರ್ಷಯಂತಃ ಸೌಭದ್ರಮಪಲಾಯಿನಂ|
07013078e ತನ್ನಾಮೃಷ್ಯಂತ ಪುತ್ರಾಸ್ತೇ ಶತ್ರೋರ್ವಿಜಯಲಕ್ಷಣಂ||
ಯುದ್ಧದಲ್ಲಿ ಪಲಾಯನವನ್ನರಿಯದ ಸೌಭದ್ರನನ್ನು ಹರ್ಷಗೊಳಿಸುತ್ತಾ ವಿವಿಧ ಬಾಣ ಪ್ರಹಾರದ ಶಬ್ಧಗಳೂ ಪುಷ್ಕಲ ಸಿಂಹನಾದಗಳೂ ಕೇಳಿ ಬಂದವು. ಶತ್ರುಗಳ ವಿಜಯಸೂಚಕವಾದ ಅದನ್ನು ನಿನ್ನ ಪುತ್ರರು ಸಹಿಸಿಕೊಳ್ಳಲಿಲ್ಲ.
07013079a ಅಥೈನಂ ಸಹಸಾ ಸರ್ವೇ ಸಮಂತಾನ್ನಿಶಿತೈಃ ಶರೈಃ|
07013079c ಅಭ್ಯಾಕಿರನ್ಮಹಾರಾಜ ಜಲದಾ ಇವ ಪರ್ವತಂ||
ಮಹಾರಾಜ! ಆಗ ಅವರೆಲ್ಲರೂ ಅವನನ್ನು ನಿಶಿತ ಶರಗಳಿಂದ ಎಲ್ಲಕಡೆಗಳಿಂದ ಪರ್ವತವನ್ನು ಮೋಡಗಳು ಹೇಗೋ ಹಾಗೆ ಮುಸುಕಿದರು.
07013080a ತೇಷಾಂ ಚ ಪ್ರಿಯಮನ್ವಿಚ್ಚನ್ಸೂತಸ್ಯ ಚ ಪರಾಭವಾತ್|
07013080c ಆರ್ತಾಯನಿರಮಿತ್ರಘ್ನಃ ಕ್ರುದ್ಧಃ ಸೌಭದ್ರಮಭ್ಯಯಾತ್||
ತನ್ನ ಸೂತನ ಪರಾಭವದಿಂದ ಮತ್ತು ನಿನ್ನವರಿಗೆ ಪ್ರಿಯವಾದುದನ್ನು ಮಾಡಲು ಅಮಿತ್ರಘ್ನ ಶಲ್ಯನು ಕ್ರುದ್ಧನಾಗಿ ಸೌಭದ್ರನನ್ನು ಪುನಃ ಆಕ್ರಮಣಿಸಿದನು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಅಭಿಮನ್ಯುಪರಾಕ್ರಮೇ ತ್ರಯೋದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ಹದಿಮೂರನೇ ಅಧ್ಯಾಯವು.