Drona Parva: Chapter 120

ದ್ರೋಣ ಪರ್ವ: ಜಯದ್ರಥವಧ ಪರ್ವ

೧೨೦

ಸಂಜೆಯಾಗುತ್ತಿರುವುದರಿಂದ ಬೇಗನೇ ರಥವನ್ನು ಜಯದ್ರಥನಲ್ಲಿಗೆ ಕೊಂಡೊಯ್ಯಿ ಎಂದು ಅರ್ಜುನನು ಕೃಷ್ಣನಿಗೆ ಹೇಳಿದುದು (೧-೯). ಸಂಜೆಯಾಗುವುದರೊಳಗೆ ಜಯದ್ರಥನನ್ನು ನಾವು ರಕ್ಷಿಸಿದರೆ ಸಾಕು. ಯುದ್ಧದಲ್ಲಿ ನಾವು ಗೆದ್ದಂತೆಯೇ ಎಂದು ದುರ್ಯೋಧನನು ಕರ್ಣನಿಗೆ ಅರ್ಜುನನನ್ನು ಎದುರಿಸಿ ಯುದ್ಧಮಾಡಲು ಹೇಳಿದುದು (೧೦-೨೨). ಭೀಮನ ಬಾಣಗಳ ಪ್ರಹಾರಗಳಿಂದ ಬಳಲಿದ್ದರೂ ಅರ್ಜುನನ್ನು ತಡೆಯುತ್ತೇನೆ; ಆದರೆ ಜಯವು ದೈವಾಧೀನವಾದದ್ದು ಎಂದು ಹೇಳಿ ಕರ್ಣನು ಅರ್ಜುನನನ್ನು ಆಕ್ರಮಣಿಸಿದ್ದುದು (೨೩-೩೦). ಸಂಕುಲಯುದ್ಧ (೩೧-೮೯).

07120001 ಧೃತರಾಷ್ಟ್ರ ಉವಾಚ|

07120001a ತದವಸ್ಥೇ ಹತೇ ತಸ್ಮಿನ್ಭೂರಿಶ್ರವಸಿ ಕೌರವೇ|

07120001c ಯಥಾ ಭೂಯೋಽಭವದ್ಯುದ್ಧಂ ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಆ ಅವಸ್ಥೆಯಲ್ಲಿ ಕೌರವ ಭೂರಿಶ್ರವನು ಹತನಾಗಲು, ಪುನಃ ಯುದ್ಧವು ಹೇಗೆ ನಡೆತು ಎನ್ನುವುದನ್ನು ನನಗೆ ಹೇಳು.”

07120002 ಸಂಜಯ ಉವಾಚ|

07120002a ಭೂರಿಶ್ರವಸಿ ಸಂಕ್ರಾಂತೇ ಪರಲೋಕಾಯ ಭಾರತ|

07120002c ವಾಸುದೇವಂ ಮಹಾಬಾಹುರರ್ಜುನಃ ಸಮಚೂಚುದತ್||

ಸಂಜಯನು ಹೇಳಿದನು: “ಭಾರತ! ಭೂರಿಶ್ರವನು ಪರಲೋಕಕ್ಕೆ ಹೊರಟುಹೋಗಲು ಮಹಾಬಾಹು ಅರ್ಜುನನು ವಾಸುದೇವನನ್ನು ಒತ್ತಾಯಿಸಿ ಹೇಳಿದನು:

07120003a ಚೋದಯಾಶ್ವಾನ್ಭೃಶಂ ಕೃಷ್ಣ ಯತೋ ರಾಜಾ ಜಯದ್ರಥಃ|

07120003c ಅಸ್ತಮೇತಿ ಮಹಾಬಾಹೋ ತ್ವರಮಾಣೋ ದಿವಾಕರಃ||

“ಕೃಷ್ಣ! ರಾಜಾ ಜಯದ್ರಥನಿರುವಲ್ಲಿಗೆ ಕುದುರೆಗಳನ್ನು ಓಡಿಸು. ಮಹಾಬಾಹೋ! ದಿವಾಕರನು ಅಸ್ತನಾಗುತ್ತಿದ್ದಾನೆ. ತ್ವರೆಮಾಡು!

07120004a ಏತದ್ಧಿ ಪುರುಷವ್ಯಾಘ್ರ ಮಹದಭ್ಯುದ್ಯತಂ ಮಯಾ|

07120004c ಕಾರ್ಯಂ ಸಂರಕ್ಷ್ಯತೇ ಚೈಷ ಕುರುಸೇನಾಮಹಾರಥೈಃ||

ಪುರುಷವ್ಯಾಘ್ರ! ಈ ಮಹಾ ಕಾರ್ಯವನ್ನು ನಾನು ಮಾಡಲೇಬೇಕಾಗಿದೆಯೆಂದು ತಿಳಿ. ಇವನಾದರೋ ಕುರುಸೇನೆಯ ಮಹಾರಥರಿಂದ ರಕ್ಷಿಸಲ್ಪಟ್ಟಿದ್ದಾನೆ.

07120005a ನಾಸ್ತಮೇತಿ ಯಥಾ ಸೂರ್ಯೋ ಯಥಾ ಸತ್ಯಂ ಭವೇದ್ವಚಃ|

07120005c ಚೋದಯಾಶ್ವಾಂಸ್ತಥಾ ಕೃಷ್ಣ ಯಥಾ ಹನ್ಯಾಂ ಜಯದ್ರಥಂ||

ಕೃಷ್ಣ! ಸೂರ್ಯನು ಅಸ್ತನಾಗುವುದರೊಳಗೆ ಜಯದ್ರಥನನ್ನು ಕೊಂದು ನನ್ನ ವಚನವನ್ನು ಸತ್ಯವಾಗಿಸುವಂತೆ ಕುದುರೆಗಳನ್ನು ಓಡಿಸು[1]!”

07120006a ತತಃ ಕೃಷ್ಣೋ ಮಹಾಬಾಹೂ ರಜತಪ್ರತಿಮಾನ್ ಹಯಾನ್|

07120006c ಹಯಜ್ಞಶ್ಚೋದಯಾಮಾಸ ಜಯದ್ರಥರಥಂ ಪ್ರತಿ||

ಆಗ ಹಯಜ್ಞ ಮಹಾಬಾಹು ಕೃಷ್ಣನು ಬೆಳ್ಳಿಯ ಪುತ್ಥಳಿಗಳಂತಿದ್ದ ಕುದುರೆಗಳನ್ನು ಜಯದ್ರಥನ ರಥದ ಕಡೆ ಓಡಿಸಿದನು.

07120007a ತಂ ಪ್ರಯಾಂತಮಮೋಘೇಷುಮುತ್ಪತದ್ಭಿರಿವಾಶುಗೈಃ|

07120007c ತ್ವರಮಾಣಾ ಮಹಾರಾಜ ಸೇನಾಮುಖ್ಯಾಃ ಸಮಾವ್ರಜನ್||

07120008a ದುರ್ಯೋಧನಶ್ಚ ಕರ್ಣಶ್ಚ ವೃಷಸೇನೋಽಥ ಮದ್ರರಾಟ್|

07120008c ಅಶ್ವತ್ಥಾಮಾ ಕೃಪಶ್ಚೈವ ಸ್ವಯಮೇವ ಚ ಸೈಂಧವಃ||

ಮಹಾರಾಜ! ಅಮೋಘ ಆಶುಗಗಳನ್ನು ದಿಕ್ಕು ದಿಕ್ಕುಗಳಲ್ಲಿ ತುಂಬಿಸುತ್ತಾ ವೇಗದಿಂದ ಬರುತ್ತಿದ್ದ ಅವನನ್ನು ಸೇನಮುಖ್ಯ ದುರ್ಯೋಧನ, ಕರ್ಣ, ವೃಷಸೇನ, ಮದ್ರರಾಜ, ಅಶ್ವತ್ಥಾಮ, ಕೃಪ ಮತ್ತು ಸ್ವಯಂ ಸೈಂಧವನೂ ಕೂಡ ಸುತ್ತುವರೆದರು.

07120009a ಸಮಾಸಾದ್ಯ ತು ಬೀಭತ್ಸುಃ ಸೈಂಧವಂ ಪ್ರಮುಖೇ ಸ್ಥಿತಂ|

07120009c ನೇತ್ರಾಭ್ಯಾಂ ಕ್ರೋಧದೀಪ್ತಾಭ್ಯಾಂ ಸಂಪ್ರೈಕ್ಷನ್ನಿರ್ದಹನ್ನಿವ||

ಎದಿರು ನಿಂತಿರುವ ಸೈಂಧವನನ್ನು ಬೀಭತ್ಸುವು ಅವನನ್ನು ಸುಟ್ಟುಬಿಡುವನೋ ಎನ್ನುವಂತೆ ಕ್ರೋಧದಿಂದ ಉರಿಯುತ್ತಿದ್ದ ಕಣ್ಣುಗಳಿಂದ ನೋಡಿದನು.

07120010a ತತೋ ದುರ್ಯೋಧನೋ ರಾಜಾ ರಾಧೇಯಂ ತ್ವರಿತೋಽಬ್ರವೀತ್|

07120010c ಅರ್ಜುನಂ ವೀಕ್ಷ್ಯ ಸಮ್ಯಾಂತಂ ಜಯದ್ರಥರಥಂ ಪ್ರತಿ||

ಅಗ ಜಯದ್ರಥನ ರಥದ ಬಳಿ ಬರುತ್ತಿದ್ದ ಅರ್ಜುನನನ್ನು ವೀಕ್ಷಿಸಿ ರಾಜಾ ದುರ್ಯೋಧನನು ತ್ವರೆಮಾಡಿ ರಾಧೇಯನಿಗೆ ಹೇಳಿದನು:

07120011a ಅಯಂ ಸ ವೈಕರ್ತನ ಯುದ್ಧಕಾಲೋ

         ವಿದರ್ಶಯಸ್ವಾತ್ಮಬಲಂ ಮಹಾತ್ಮನ್|

07120011c ಯಥಾ ನ ವಧ್ಯೇತ ರಣೇಽರ್ಜುನೇನ

         ಜಯದ್ರಥಃ ಕರ್ಣ ತಥಾ ಕುರುಷ್ವ||

“ವೈಕರ್ತನ! ಇಗೋ ಯುದ್ಧಮಾಡುವ ಸಮಯವು ಬಂದಿದೆ. ಮಹಾತ್ಮನ್! ನಿನ್ನ ಬಲವನ್ನು ಪ್ರದರ್ಶಿಸು. ಕರ್ಣ! ರಣದಲ್ಲಿ ಅರ್ಜುನನಿಂದ ಜಯದ್ರಥನು ವಧಿಸಲ್ಪಡದಂತೆ ಮಾಡು!

07120012a ಅಲ್ಪಾವಶಿಷ್ಟಂ ದಿವಸಂ ನೃವೀರ

         ವಿಘಾತಯಸ್ವಾದ್ಯ ರಿಪುಂ ಶರೌಘೈಃ|

07120012c ದಿನಕ್ಷಯಂ ಪ್ರಾಪ್ಯ ನರಪ್ರವೀರ

         ಧ್ರುವಂ ಹಿ ನಃ ಕರ್ಣ ಜಯೋ ಭವಿಷ್ಯತಿ||

ನರವೀರ! ಸ್ವಲ್ಪವೇ ಹಗಲು ಉಳಿದುಕೊಂಡಿದೆ. ಇಂದು ಶರೌಘಗಳಿಂದ ಶತ್ರುವನ್ನು ಸಂಹರಿಸು! ನರಪ್ರವೀರ! ಕರ್ಣ! ಹಗಲು ಮುಗಿಯಿತೆಂದರೆ ನಮಗೆ ಖಂಡಿತವಾಗಿಯೂ ಜಯವಾಗುತ್ತದೆ!

07120013a ಸೈಂಧವೇ ರಕ್ಷ್ಯಮಾಣೇ ತು ಸೂರ್ಯಸ್ಯಾಸ್ತಮಯಂ ಪ್ರತಿ|

07120013c ಮಿಥ್ಯಾಪ್ರತಿಜ್ಞಃ ಕೌಂತೇಯಃ ಪ್ರವೇಕ್ಷ್ಯತಿ ಹುತಾಶನಂ||

ಸೂರ್ಯಾಸ್ತವಾಗುವ ವರೆಗೆ ಸೈಂಧವನನ್ನು ರಕ್ಷಿಸಿದೆವೆಂದಾದರೆ ಪ್ರತಿಜ್ಞೆಯನ್ನು ಸುಳ್ಳಾಗಿಸಿದ ಕೌಂತೇಯನು ಅಗ್ನಿಯನ್ನು ಪ್ರವೇಶಿಸುತ್ತಾನೆ.

07120014a ಅನರ್ಜುನಾಯಾಂ ಚ ಭುವಿ ಮುಹೂರ್ತಮಪಿ ಮಾನದ|

07120014c ಜೀವಿತುಂ ನೋತ್ಸಹೇರನ್ವೈ ಭ್ರಾತರೋಽಸ್ಯ ಸಹಾನುಗಾಃ||

ಮಾನದ! ಭೂಮಿಯಲ್ಲಿ ಅರ್ಜುನನು ಮುಹೂರ್ತಕಾಲವೂ ಇಲ್ಲನೆಂದಾದರೆ ಅವನ ಸಹೋದರರು, ಅನುಯಾಯಿಗಳೊಂದಿಗೆ, ಜೀವಿಸಿರಲು ಬಯಸುವುದಿಲ್ಲ.

07120015a ವಿನಷ್ಟೈಃ ಪಾಂಡವೇಯೈಶ್ಚ ಸಶೈಲವನಕಾನನಾಂ|

07120015c ವಸುಂಧರಾಮಿಮಾಂ ಕರ್ಣ ಭೋಕ್ಷ್ಯಾಮೋ ಹತಕಂಟಕಾಂ||

ಕರ್ಣ! ಪಾಂಡವೇಯರು ವಿನಷ್ಟರಾಗಲು, ಕಂಟಕರು ಹತರಾಗಿ ಗಿರಿ-ವನ-ಕಾನನಗಳೊಂದಿಗೆ ಈ ವಸುಂಧರೆಯನ್ನು ನಾವು ಭೋಗಿಸಬಲ್ಲೆವು.

07120016a ದೈವೇನೋಪಹತಃ ಪಾರ್ಥೋ ವಿಪರೀತಶ್ಚ ಮಾನದ|

07120016c ಕಾರ್ಯಾಕಾರ್ಯಮಜಾನನ್ವೈ ಪ್ರತಿಜ್ಞಾಂ ಕೃತವಾನ್ರಣೇ||

ಮಾನದ! ಕಾರ್ಯಾಕಾರ್ಯಗಳನ್ನು ತಿಳಿದುಕೊಳ್ಳದೇ ರಣದಲ್ಲಿ ಈ ಪ್ರತಿಜ್ಞೆಯನ್ನು ಪಾರ್ಥನು ಮಾಡಿದ್ದಾನೆಂದರೆ ಈ ವಿಪರೀತವನ್ನು ದೈವವೇ ಅವನಿಗೆ ತಂದೊಡ್ಡಿದಂತಿದೆ.

07120017a ನೂನಮಾತ್ಮವಿನಾಶಾಯ ಪಾಂಡವೇನ ಕಿರೀಟಿನಾ|

07120017c ಪ್ರತಿಜ್ಞೇಯಂ ಕೃತಾ ಕರ್ಣ ಜಯದ್ರಥವಧಂ ಪ್ರತಿ||

ಕರ್ಣ! ಕಿರೀಟಿ ಪಾಂಡವನು ತನ್ನ ವಿನಾಶಕ್ಕಾಗಿಯೇ ಜಯದ್ರಥನ ವಧೆಯ ಕುರಿತು ಪ್ರತಿಜ್ಞೆಯನ್ನು ಮಾಡಿರಬೇಕು.

07120018a ಕಥಂ ಜೀವತಿ ದುರ್ಧರ್ಷೇ ತ್ವಯಿ ರಾಧೇಯ ಫಲ್ಗುನಃ|

07120018c ಅನಸ್ತಂಗತ ಆದಿತ್ಯೇ ಹನ್ಯಾತ್ಸೈಂಧವಕಂ ನೃಪಂ||

ರಾಧೇಯ! ನೀನು ಬದುಕಿರುವಾಗ ಹೇಗೆ ತಾನೇ ಆ ದುರ್ದರ್ಷ ಫಲ್ಗುನನು ಆದಿತ್ಯನು ಅಸ್ತಂಗತನಾಗುವುದರೊಳಗೆ ನೃಪ ಸೈಂಧವನನ್ನು ಕೊಂದಾನು?

07120019a ರಕ್ಷಿತಂ ಮದ್ರರಾಜೇನ ಕೃಪೇಣ ಚ ಮಹಾತ್ಮನಾ|

07120019c ಜಯದ್ರಥಂ ರಣಮುಖೇ ಕಥಂ ಹನ್ಯಾದ್ಧನಂಜಯಃ||

ರಣಮುಖದಲ್ಲಿ ಮದ್ರರಾಜನಿಂದ ಮತ್ತು ಮಹಾತ್ಮ ಕೃಪನಿಂದ ರಕ್ಷಿತನಾಗಿರುವ ಜಯದ್ರಥನನ್ನು ಧನಂಜಯನು ಹೇಗೆ ಕೊಲ್ಲಬಲ್ಲನು?

07120020a ದ್ರೌಣಿನಾ ರಕ್ಷ್ಯಮಾಣಂ ಚ ಮಯಾ ದುಃಶಾಸನೇನ ಚ|

07120020c ಕಥಂ ಪ್ರಾಪ್ಸ್ಯತಿ ಬೀಭತ್ಸುಃ ಸೈಂಧವಂ ಕಾಲಚೋದಿತಃ||

ದ್ರೌಣಿ, ನಾನು ಮತ್ತು ದುಃಶಾಸನರಿಂದ ರಕ್ಷಿಸಲ್ಪಡುತ್ತಿರುವ ಸೈಂಧವನನ್ನು ಕಾಲಚೋದಿತ ಬೀಭತ್ಸುವು ಹೇಗೆ ತಾನೇ ತಲುಪಬಲ್ಲನು?

07120021a ಯುಧ್ಯಂತೇ ಬಹವಃ ಶೂರಾ ಲಂಬತೇ ಚ ದಿವಾಕರಃ|

07120021c ಶಂಕೇ ಜಯದ್ರಥಂ ಪಾರ್ಥೋ ನೈವ ಪ್ರಾಪ್ಸ್ಯತಿ ಮಾನದ||

ಮಾನದ! ಅನೇಕ ಶೂರರು ಯುದ್ಧಮಾಡುತ್ತಿದ್ದಾರೆ. ದಿವಾಕರನು ಇಳಿಯುತ್ತಿದ್ದಾನೆ. ಹೀಗಿರುವ ಪಾರ್ಥನು ಜಯದ್ರಥನನ್ನು ತಲುಪುವುದೇ ಶಂಕೆಯಾಗಿಬಿಟ್ಟಿದೆ.

07120022a ಸ ತ್ವಂ ಕರ್ಣ ಮಯಾ ಸಾರ್ಧಂ ಶೂರೈಶ್ಚಾನ್ಯೈರ್ಮಹಾರಥೈಃ|

07120022c ಯುಧ್ಯಸ್ವ ಯತ್ನಮಾಸ್ಥಾಯ ಪರಂ ಪಾರ್ಥೇನ ಸಂಯುಗೇ||

ಕರ್ಣ! ಸಂಯುಗದಲ್ಲಿ ನೀನು ನನ್ನ ಮತ್ತು ಇತರ ಶೂರ ಮಹಾರಥರೊಂದಿಗೆ ಪರಮ ಯತ್ನವನ್ನು ಮಾಡಿ ಪಾರ್ಥನೊಡನೆ ಯುದ್ಧಮಾಡು!”

07120023a ಏವಮುಕ್ತಸ್ತು ರಾಧೇಯಸ್ತವ ಪುತ್ರೇಣ ಮಾರಿಷ|

07120023c ದುರ್ಯೋಧನಮಿದಂ ವಾಕ್ಯಂ ಪ್ರತ್ಯುವಾಚ ಕುರೂತ್ತಮಂ||

ಮಾರಿಷ! ನಿನ್ನ ಮಗನು ಹೀಗೆ ಹೇಳಲು ರಾಧೇಯನು ಕುರೂತ್ತಮ ದುರ್ಯೋಧನನಿಗೆ ಈ ಮಾತನ್ನಾಡಿದನು:

07120024a ದೃಢಲಕ್ಷ್ಯೇಣ ಶೂರೇಣ ಭೀಮಸೇನೇನ ಧನ್ವಿನಾ|

07120024c ಭೃಶಮುದ್ವೇಜಿತಃ ಸಂಖ್ಯೇ ಶರಜಾಲೈರನೇಕಶಃ||

“ಗುರಿಯಲ್ಲಿ ದೃಢನಾದ ಶೂರ ಧನ್ವಿ ಭೀಮಸೇನನ ಅನೇಕ ಶರಜಾಲಗಳಿಂದ ರಣದಲ್ಲಿ ನಾನು ತುಂಬಾ ನೋವನ್ನನುಭವಿಸುತ್ತಿದ್ದೇನೆ.

07120025a ಸ್ಥಾತವ್ಯಮಿತಿ ತಿಷ್ಠಾಮಿ ರಣೇ ಸಂಪ್ರತಿ ಮಾನದ|

07120025c ನೈವಾಂಗಮಿಂಗತಿ ಕಿಂ ಚಿನ್ಮೇ ಸಂತಪ್ತಸ್ಯ ರಣೇಷುಭಿಃ||

ಮಾನದ! ನನ್ನಂಥವನು ರಣದಲ್ಲಿರಬೇಕು ಎಂಬ ಒಂದೇ ಕಾರಣದಿಂದ ನಾನಿನ್ನೂ ಇಲ್ಲಿ ನಿಂತಿದ್ದೇನೆ. ರಣದಲ್ಲಿಯ ಬಾಣಗಳಿಂದ ನನ್ನ ಅಂಗಾಂಗಗಳೆಲ್ಲವೂ ಅತಿ ನೋವನ್ನು ಅನುಭವಿಸುತ್ತಿವೆ.

07120026a ಯೋತ್ಸ್ಯಾಮಿ ತು ತಥಾ ರಾಜನ್ ಶಕ್ತ್ಯಾಹಂ ಪರಯಾ ರಣೇ|

07120026c ಯಥಾ ಪಾಂಡವಮುಖ್ಯೋಽಸೌ ನ ಹನಿಷ್ಯತಿ ಸೈಂಧವಂ||

ಆದರೆ ರಾಜನ್! ನಾನು ರಣದಲ್ಲಿ ಪರಮ ಶಕ್ತಿಯನ್ನು ಬಳಸಿ ಪಾಂಡವಮುಖ್ಯನು ಸೈಂಧವನನ್ನು ಕೊಲ್ಲದಂತೆ ಯುದ್ಧಮಾಡುತ್ತೇನೆ.

07120027a ನ ಹಿ ಮೇ ಯುಧ್ಯಮಾನಸ್ಯ ಸಾಯಕಾಂಶ್ಚಾಸ್ಯತಃ ಶಿತಾನ್|

07120027c ಸೈಂಧವಂ ಪ್ರಾಪ್ಸ್ಯತೇ ವೀರಃ ಸವ್ಯಸಾಚೀ ಧನಂಜಯಃ||

ನಾನು ನಿಶಿತ ಸಾಯಕಗಳನ್ನು ಪ್ರಯೋಗಿಸಿ ಯುದ್ಧಮಾಡುವಾಗ ವೀರ ಸವ್ಯಸಾಚೀ ಧನಂಜಯನು ಸೈಂಧವನನ್ನು ತಲುಪಲಾರನು.

07120028a ಯತ್ತು ಶಕ್ತಿಮತಾ ಕಾರ್ಯಂ ಸತತಂ ಹಿತಕಾರಿಣಾ|

07120028c ತತ್ಕರಿಷ್ಯಾಮಿ ಕೌರವ್ಯ ಜಯೋ ದೈವೇ ಪ್ರತಿಷ್ಠಿತಃ||

ಕೌರವ್ಯ! ಸತತವೂ ಹಿತಕಾರಿಗಳಾಗಿರುವವರಿಗೆ ಎಷ್ಟು ಮಾಡಬೇಕೋ ಅಷ್ಟನ್ನೂ ಯಥಾಶಕ್ತಿ ಮಾಡುತ್ತೇನೆ. ಜಯವು ದೈವದ ಮೇಲೆ ನಿಂತಿದೆ!

07120029a ಅದ್ಯ ಯೋತ್ಸ್ಯೇಽರ್ಜುನಮಹಂ ಪೌರುಷಂ ಸ್ವಂ ವ್ಯಪಾಶ್ರಿತಃ|

07120029c ತ್ವದರ್ಥಂ ಪುರುಷವ್ಯಾಘ್ರ ಜಯೋ ದೈವೇ ಪ್ರತಿಷ್ಠಿತಃ||

ಪುರುಷವ್ಯಾಘ್ರ! ನನ್ನ ಪೌರುಷವನ್ನು ಆಶ್ರಯಿಸಿ ನಿನಗಾಗಿ ಇಂದು ಅರ್ಜುನನೊಡನೆ ಯುದ್ಧಮಾಡುತ್ತೇನೆ. ಆದರೆ ಜಯವು ದೈವಾಧೀನವಾದುದು.

07120030a ಅದ್ಯ ಯುದ್ಧಂ ಕುರುಶ್ರೇಷ್ಠ ಮಮ ಪಾರ್ಥಸ್ಯ ಚೋಭಯೋಃ|

07120030c ಪಶ್ಯಂತು ಸರ್ವಭೂತಾನಿ ದಾರುಣಂ ಲೋಮಹರ್ಷಣ||

ಕುರುಶ್ರೇಷ್ಠ! ಇಂದು ನನ್ನ ಮತ್ತು ಪಾರ್ಥ ಇಬ್ಬರ ನಡುವಿನ ದಾರುಣ ಲೋಮಹರ್ಷಣ ಯುದ್ಧವನ್ನು ಸರ್ವಭೂತಗಳೂ ನೋಡಲಿ!”

07120031a ಕರ್ಣಕೌರವಯೋರೇವಂ ರಣೇ ಸಂಭಾಷಮಾಣಯೋಃ|

07120031c ಅರ್ಜುನೋ ನಿಶಿತೈರ್ಬಾಣೈರ್ಜಘಾನ ತವ ವಾಹಿನೀಂ||

ರಣದಲ್ಲಿ ಹೀಗೆ ಕರ್ಣ-ಕೌರವರು ಮಾತನಾಡಿಕೊಳ್ಳುತ್ತಿರಲು ಅರ್ಜುನನು ನಿನ್ನ ಸೇನೆಯನ್ನು ನಿಶಿತ ಬಾಣಗಳಿಂದ ಹೊಡೆದನು.

07120032a ಚಿಚ್ಚೇದ ತೀಕ್ಷ್ಣಾಗ್ರಮುಖೈಃ ಶೂರಾಣಾಮನಿವರ್ತಿನಾಂ|

07120032c ಭುಜಾನ್ಪರಿಘಸಂಕಾಶಾನ್ ಹಸ್ತಿಹಸ್ತೋಪಮಾನ್ರಣೇ||

ಅವನು ತೀಕ್ಷ್ಣ ಅಗ್ರಮುಖಗಳಿಂದ ರಣದಲ್ಲಿ ಪಲಾಯನಮಾಡದಿರುವ ಶೂರರ ಪರಿಘದಂತಿದ್ದ ಮತ್ತು ಆನೆಯ ಸೊಂಡಲಿನಂತಿದ್ದ ಭುಜಗಳನ್ನು ಕತ್ತರಿಸಿದನು.

07120033a ಶಿರಾಂಸಿ ಚ ಮಹಾಬಾಹುಶ್ಚಿಚ್ಚೇದ ನಿಶಿತೈಃ ಶರೈಃ|

07120033c ಹಸ್ತಿಹಸ್ತಾನ್ ಹಯಗ್ರೀವಾ ರಥಾಕ್ಷಾಂಶ್ಚ ಸಮಂತತಃ||

ಆ ಮಹಾಬಾಹುವು ನಿಶಿತ ಶರಗಳಿಂದ ಶಿರಗಳನ್ನು, ಆನೆಗಳ ಸೊಂಡಿಲುಗಳನ್ನು, ಕುದುರೆಗಳ ಕತ್ತುಗಳನ್ನು ಮತ್ತು ರಥಗಳ ಅಚ್ಚುಮಣೆಗಳನ್ನು ಎಲ್ಲೆಡೆ ಕತ್ತರಿಸಿದನು.

07120034a ಶೋಣಿತಾಕ್ತಾನ್ಹಯಾರೋಹಾನ್ಗೃಹೀತಪ್ರಾಸತೋಮರಾನ್|

07120034c ಕ್ಷುರೈಶ್ಚಿಚ್ಚೇದ ಬೀಭತ್ಸುರ್ದ್ವಿಧೈಕೈಕಂ ತ್ರಿಧೈವ ಚ||

ಬೀಭತ್ಸುವು ಪ್ರಾಸ-ತೋಮರಗಳನ್ನು ಹಿಡಿದಿದ್ದ, ರಕ್ತದಿಂದ ತೋಯ್ದುಹೋಗಿದ್ದ ಅಶ್ವಾರೋಹಿಗಳು ಒಬ್ಬೊಬ್ಬರನ್ನೂ ಎರಡಾಗಿ ಅಥವಾ ಮೂರಾಗಿ ಕ್ಷುರಗಳಿಂದ ತುಂಡರಿಸಿದನು.

07120035a ಹಯವಾರಣಮುಖ್ಯಾಶ್ಚ ಪ್ರಾಪತಂತ ಸಹಸ್ರಶಃ|

07120035c ಧ್ವಜಾಶ್ಚತ್ರಾಣಿ ಚಾಪಾನಿ ಚಾಮರಾಣಿ ಶಿರಾಂಸಿ ಚ||

ಸಹಸ್ರಾರು ಪ್ರಮುಖ ಆನೆ-ಕುದುರೆಗಳು, ಧ್ವಜ-ಚತ್ರಗಳು, ಚಾಪಗಳು, ಚಾಮರಗಳು ಮತ್ತು ಶಿರಗಳು ಬೀಳುತ್ತಿದ್ದವು.

07120036a ಕಕ್ಷಮಗ್ನಿಮಿವೋದ್ಧೂತಃ ಪ್ರದಹಂಸ್ತವ ವಾಹಿನೀಂ|

07120036c ಅಚಿರೇಣ ಮಹೀಂ ಪಾರ್ಥಶ್ಚಕಾರ ರುಧಿರೋತ್ತರಾಂ||

ಬೆಂಕಿಯು ಒಣಹುಲ್ಲನ್ನು ಹೇಗೋ ಹಾಗೆ ನಿನ್ನ ಸೇನೆಯನ್ನು ಭಸ್ಮಮಾಡಿ ಪಾರ್ಥನು ಕ್ಷಣಮಾತ್ರದಲ್ಲಿ ರಣಭೂಮಿಯನ್ನು ರಕ್ತದಲ್ಲಿ ಮುಳುಗಿಸಿಬಿಟ್ಟನು.

07120037a ಹತಭೂಯಿಷ್ಠಯೋಧಂ ತತ್ಕೃತ್ವಾ ತವ ಬಲಂ ಬಲೀ|

07120037c ಆಸಸಾದ ದುರಾಧರ್ಷಃ ಸೈಂಧವಂ ಸತ್ಯವಿಕ್ರಮಃ||

ಆ ಬಲಶಾಲೀ ದುರಾಧರ್ಷ ಸತ್ಯವಿಕ್ರಮಿಯು ನಿನ್ನ ಸೇನೆಯ ಹೆಚ್ಚುಭಾಗ ಯೋಧರನ್ನು ಸಂಹರಿಸಿ ಸೈಂಧವನ ಬಳಿಬಂದನು.

07120038a ಬೀಭತ್ಸುರ್ಭೀಮಸೇನೇನ ಸಾತ್ವತೇನ ಚ ರಕ್ಷಿತಃ|

07120038c ಸ ಬಭೌ ಭರತಶ್ರೇಷ್ಠ ಜ್ವಲನ್ನಿವ ಹುತಾಶನಃ||

ಭರತಶ್ರೇಷ್ಠ! ಭೀಮಸೇನ ಮತ್ತು ಸಾತ್ವತರಿಂದ ರಕ್ಷಿತನಾದ ಬೀಭತ್ಸುವು ಪ್ರಜ್ವಲಿಸುತ್ತಿರುವ ಹುತಾಶನನಂತಿದ್ದನು.

07120039a ತಂ ತಥಾವಸ್ಥಿತಂ ದೃಷ್ಟ್ವಾ ತ್ವದೀಯಾ ವೀರ್ಯಸಮ್ಮತಾಃ|

07120039c ನಾಮೃಷ್ಯಂತ ಮಹೇಷ್ವಾಸಾಃ ಫಲ್ಗುನಂ ಪುರುಷರ್ಷಭಾಃ||

ಹಾಗಿರುವ ಫಲ್ಗುನನನ್ನು ನೋಡಿ ನಿನ್ನವರ ವೀರ್ಯಸಮ್ಮತ ಮಹೇಷ್ವಾಸ ಪುರುಷರ್ಷಭರು ಸಹಿಸಿಕೊಳ್ಳಲಿಲ್ಲ.

07120040a ದುರ್ಯೋಧನಶ್ಚ ಕರ್ಣಶ್ಚ ವೃಷಸೇನೋಽಥ ಮದ್ರರಾಟ್|

07120040c ಅಶ್ವತ್ಥಾಮಾ ಕೃಪಶ್ಚೈವ ಸ್ವಯಮೇವ ಚ ಸೈಂಧವಃ||

07120041a ಸಂರಬ್ಧಾಃ ಸೈಂಧವಸ್ಯಾರ್ಥೇ ಸಮಾವೃಣ್ವನ್ಕಿರೀಟಿನಂ|

07120041c ನೃತ್ಯಂತಂ ರಥಮಾರ್ಗೇಷು ಧನುರ್ಜ್ಯಾತಲನಿಸ್ವನೈಃ||

ದುರ್ಯೋಧನ, ಕರ್ಣ, ವೃಷಸೇನ, ಮದ್ರರಾಜ, ಅಶ್ವತ್ಥಾಮ, ಕೃಪ ಮತ್ತು ಸ್ವಯಂ ಸೈಂಧವ ಇವರು ಸೈಂಧವನಿಗಾಗಿ ಸಂರಬ್ಧರಾಗಿ ರಥಮಾರ್ಗದಲ್ಲಿ ನರ್ತಿಸುವಂತಿದ್ದ, ಜೋರಾಗಿ ಧನುಸ್ಸನ್ನು ಟೇಂಕರಿಸುತ್ತಿದ್ದ ಮತ್ತು ಚಪ್ಪಾಳೆಹಾಕುತ್ತಿದ್ದ ಕಿರೀಟಿಯನ್ನು ಸುತ್ತುವರೆದರು.

07120042a ಸಂಗ್ರಾಮಕೋವಿದಂ ಪಾರ್ಥಂ ಸರ್ವೇ ಯುದ್ಧವಿಶಾರದಾಃ|

07120042c ಅಭೀತಾಃ ಪರ್ಯವರ್ತಂತ ವ್ಯಾದಿತಾಸ್ಯಮಿವಾಂತಕಂ||

ಎಲ್ಲ ಯುದ್ಧವಿಶಾರದರೂ ಬಾಯಿಕಳೆದ ಅಂತಕನಂತಿದ್ದ ಸಂಗ್ರಾಮಕೋವಿದ ಪಾರ್ಥನನ್ನು ಸುತ್ತುವರೆದರು.

07120043a ಸೈಂಧವಂ ಪೃಷ್ಠತಃ ಕೃತ್ವಾ ಜಿಘಾಂಸಂತೋಽರ್ಜುನಾಚ್ಯುತೌ|

07120043c ಸೂರ್ಯಾಸ್ತಮಯಮಿಚ್ಚಂತೋ ಲೋಹಿತಾಯತಿ ಭಾಸ್ಕರೇ||

ಭಾಸ್ಕರನು ಕೆಂಪಾಗುತ್ತಿರಲು, ಈಗಲೇ ಸೂರ್ಯಾಸ್ತವಾಗಲೆಂದು ಬಯಸುತ್ತಾ ಅವರು ಸೈಂಧವನನ್ನು ಹಿಂದಿರಿಸಿಕೊಂಡು ಅರ್ಜುನ-ಅಚ್ಯುತರನ್ನು ಆಕ್ರಮಣಿಸಿದರು.

07120044a ತೇ ಭುಜೈರ್ಭೋಗಿಭೋಗಾಭೈರ್ಧನೂಂಷ್ಯಾಯಮ್ಯ ಸಾಯಕಾನ್|

07120044c ಮುಮುಚುಃ ಸೂರ್ಯರಶ್ಮ್ಯಾಭಾಂ ಶತಶಃ ಫಲ್ಗುನಂ ಪ್ರತಿ||

ಅವರು ತಮ್ಮ ಸರ್ಪಗಳಂತಿದ್ದ ಬಾಹುಗಳಿಂದ ಧನುಸ್ಸುಗಳನ್ನು ಎಳೆದು ಸೂರ್ಯನ ರಶ್ಮಿಗಳಂತಿದ್ದ ನೂರಾರು ಸಾಯಕಗಳನ್ನು ಫಲ್ಗುನನ ಮೇಲೆ ಪ್ರಯೋಗಿಸಿದರು.

07120045a ತಾನಸ್ತಾನಸ್ಯಮಾನಾಂಶ್ಚ ಕಿರೀಟೀ ಯುದ್ಧದುರ್ಮದಃ|

07120045c ದ್ವಿಧಾ ತ್ರಿಧಾಷ್ಟಧೈಕೈಕಂ ಚಿತ್ತ್ವಾ ವಿವ್ಯಾಧ ತಾನ್ರಣೇ||

ಯುದ್ಧದುರ್ಮದ ಕಿರೀಟಿಯು ಅವರ ಪ್ರತಿಯೊಂದು ಬಾಣವನ್ನೂ ಎರಡು-ಮೂರಾಗಿ ತುಂಡರಿಸಿ ರಣದಲ್ಲಿ ಅವರನ್ನು ಹೊಡೆದನು.

07120046a ಸಿಂಹಲಾಂಗೂಲಕೇತುಸ್ತು ದರ್ಶಯನ್ ಶಕ್ತಿಮಾತ್ಮನಃ|

07120046c ಶಾರದ್ವತೀಸುತೋ ರಾಜನ್ನರ್ಜುನಂ ಪ್ರತ್ಯವಾರಯತ್||

ರಾಜನ್! ಸಿಂಹದ ಬಾಲದ ಧ್ವಜವುಳ್ಳ ಶಾರದ್ವತೀಸುತನು ತನ್ನ ಶಕ್ತಿಯನ್ನು ತೋರಿಸುತ್ತಾ ಅರ್ಜುನನನ್ನು ಎದುರಿಸಿ ತಡೆದನು.

07120047a ಸ ವಿದ್ಧ್ವಾ ದಶಭಿಃ ಪಾರ್ಥಂ ವಾಸುದೇವಂ ಚ ಸಪ್ತಭಿಃ|

07120047c ಅತಿಷ್ಠದ್ರಥಮಾರ್ಗೇಷು ಸೈಂಧವಂ ಪರಿಪಾಲಯನ್||

ಅವನು ಹತ್ತರಿಂದ ಪಾರ್ಥನನ್ನೂ, ಏಳರಿಂದ ವಾಸುದೇವನನ್ನೂ ಹೊಡೆದು ಸೈಂಧವನನ್ನು ಪರಿಪಾಲಿಸುತ್ತಾ ರಥಮಾರ್ಗದಲ್ಲಿ ನಿಂತನು.

07120048a ಅಥೈನಂ ಕೌರವಶ್ರೇಷ್ಠಾಃ ಸರ್ವ ಏವ ಮಹಾರಥಾಃ|

07120048c ಮಹತಾ ರಥವಂಶೇನ ಸರ್ವತಃ ಪರ್ಯವಾರಯನ್||

ಆಗ ಅವರನ್ನು ಕೌರವಶ್ರೇಷ್ಠ ಮಹಾರಥರೆಲ್ಲರೂ ಅತಿದೊಡ್ಡ ರಥಗುಂಪುಗಳೊಡನೆ ಎಲ್ಲ ಕಡೆಗಳಿಂದ ಸುತ್ತುವರೆದರು.

07120049a ವಿಸ್ಫಾರಯಂತಶ್ಚಾಪಾನಿ ವಿಸೃಜಂತಶ್ಚ ಸಾಯಕಾನ್|

07120049c ಸೈಂಧವಂ ಪರ್ಯರಕ್ಷಂತ ಶಾಸನಾತ್ತನಯಸ್ಯ ತೇ||

ಚಾಪಗಳನ್ನು ಸೆಳೆಯುತ್ತಾ, ಸಾಯಕಗಳನ್ನು ಬಿಡುತ್ತಾ ಅವರು ನಿನ್ನ ಮಗನ ಶಾಸನದಂತೆ ಸೈಂಧವನ್ನು ಪರಿರಕ್ಷಿಸುತ್ತಿದ್ದರು.

07120050a ತತ್ರ ಪಾರ್ಥಸ್ಯ ಶೂರಸ್ಯ ಬಾಹ್ವೋರ್ಬಲಮದೃಶ್ಯತ|

07120050c ಇಷೂಣಾಮಕ್ಷಯತ್ವಂ ಚ ಧನುಷೋ ಗಾಂಡಿವಸ್ಯ ಚ||

ಅಲ್ಲಿ ನಾವು ಶೂರ ಪಾರ್ಥನ ಬಾಹುಗಳ ಬಲವನ್ನೂ, ಬಾಣಗಳ ಅಕ್ಷಯತ್ವವನ್ನೂ ಮತ್ತು ಗಾಂಡೀವ ಧನುಸ್ಸಿನ ಬಲವನ್ನೂ ಕಂಡೆವು.

07120051a ಅಸ್ತ್ರೈರಸ್ತ್ರಾಣಿ ಸಂವಾರ್ಯ ದ್ರೌಣೇಃ ಶಾರದ್ವತಸ್ಯ ಚ|

07120051c ಏಕೈಕಂ ನವಭಿರ್ಬಾಣೈಃ ಸರ್ವಾನೇವ ಸಮರ್ಪಯತ್||

ಅವನು ದ್ರೌಣಿ ಮತ್ತು ಶಾರದ್ವತರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆದು, ತಲಾ ಒಂಭತ್ತರಂತೆ ಎಲ್ಲರನ್ನೂ ಬಾಣಗಳಿಂದ ಹೊಡೆದನು.

07120052a ತಂ ದ್ರೌಣಿಃ ಪಂಚವಿಂಶತ್ಯಾ ವೃಷಸೇನಶ್ಚ ಸಪ್ತಭಿಃ|

07120052c ದುರ್ಯೋಧನಶ್ಚ ವಿಂಶತ್ಯಾ ಕರ್ಣಶಲ್ಯೌ ತ್ರಿಭಿಸ್ತ್ರಿಭಿಃ||

ಅವನು ದ್ರೌಣಿಯನ್ನು ಇಪ್ಪತ್ತೈದರಿಂದ, ವೃಷಸೇನನನ್ನು ಏಳರಿಂದ, ದುರ್ಯೋಧನನನ್ನು ಇಪ್ಪತ್ತರಿಂದ ಮತ್ತು ಕರ್ಣ-ಶಲ್ಯರನ್ನು ಮೂರು-ಮೂರರಿಂದ ಹೊಡೆದನು.

07120053a ತ ಏನಮಭಿಗರ್ಜಂತೋ ವಿಧ್ಯಂತಶ್ಚ ಪುನಃ ಪುನಃ|

07120053c ವಿಧುನ್ವಂತಶ್ಚ ಚಾಪಾನಿ ಸರ್ವತಃ ಪರ್ಯವಾರಯನ್||

ಪುನಃ ಪುನಃ ಗರ್ಜಿಸುತ್ತಾ ಹೊಡೆಯುತ್ತಾ ಧನುಸ್ಸುಗಳನ್ನು ಟೇಂಕರಿಸುತ್ತಾ ಅವರು ಅವನನ್ನು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದರು.

07120054a ಶ್ಲಿಷ್ಟಂ ತು ಸರ್ವತಶ್ಚಕ್ರೂ ರಥಮಂಡಲಮಾಶು ತೇ|

07120054c ಸೂರ್ಯಾಸ್ತಮಯಮಿಚ್ಚಂತಸ್ತ್ವರಮಾಣಾ ಮಹಾರಥಾಃ||

ಸೂರ್ಯಾಸ್ತವನ್ನು ಬಯಸುತ್ತಾ ತ್ವರೆಮಾಡುತ್ತಿದ್ದ ಆ ಮಹಾರಥರು ಎಲ್ಲರೂ ಒಬ್ಬರಿಗೊಬ್ಬರು ತಾಗಿಕೊಂಡು ರಥಗಳ ಮಂಡಲವನ್ನು ಮಾಡಿಕೊಂಡು ಯುದ್ಧಮಾಡುತ್ತಿದ್ದರು.

07120055a ತ ಏನಮಭಿನರ್ದಂತೋ ವಿಧುನ್ವಾನಾ ಧನೂಂಷಿ ಚ|

07120055c ಸಿಷಿಚುರ್ಮಾರ್ಗಣೈರ್ಘೋರೈರ್ಗಿರಿಂ ಮೇಘಾ ಇವಾಂಬುಭಿಃ||

ಅವನನ್ನು ಎದುರಿಸಿ ಗರ್ಜಿಸುತ್ತಾ, ಧನುಸ್ಸುಗಳನ್ನು ಟೇಂಕರಿಸುತ್ತಾ, ಘೋರ ಮಾರ್ಗಣಗಳಿಂದ ಮೋಡಗಳು ಪರ್ವತದ ಮೇಲೆ ಮಳೆನೀರನ್ನು ಸುರಿಸುವಂತೆ ಮುಚ್ಚಿದರು.

07120056a ತೇ ಮಹಾಸ್ತ್ರಾಣಿ ದಿವ್ಯಾನಿ ತತ್ರ ರಾಜನ್ವ್ಯದರ್ಶಯನ್|

07120056c ಧನಂಜಯಸ್ಯ ಗಾತ್ರೇಷು ಶೂರಾಃ ಪರಿಘಬಾಹವಃ||

ರಾಜನ್! ಪರಿಘಗಳಂತೆ ಬಾಹುಗಳನ್ನು ಹೊಂದಿದ್ದ ಆ ಶೂರರು ಧನಂಜಯದ ಶರೀರದ ಮೇಲೆ ಮಹಾ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರು.

[2]07120057a ಹತಭೂಯಿಷ್ಠಯೋಧಂ ತತ್ಕೃತ್ವಾ ತವ ಬಲಂ ಬಲೀ|

07120057c ಆಸಸಾದ ದುರಾಧರ್ಷಃ ಸೈಂಧವಂ ಸತ್ಯವಿಕ್ರಮಃ||

ಆ ಬಲಶಾಲೀ ದುರಾಧರ್ಷ ಸತ್ಯವಿಕ್ರಮಿಯು ನಿನ್ನ ಸೇನೆಯ ಹೆಚ್ಚುಭಾಗ ಯೋಧರನ್ನು ಸಂಹರಿಸಿ ಸೈಂಧವನ ಬಳಿಬಂದನು.

07120058a ತಂ ಕರ್ಣಃ ಸಂಯುಗೇ ರಾಜನ್ಪ್ರತ್ಯವಾರಯದಾಶುಗೈಃ|

07120058c ಮಿಷತೋ ಭೀಮಸೇನಸ್ಯ ಸಾತ್ವತಸ್ಯ ಚ ಭಾರತ||

ರಾಜನ್! ಭಾರತ! ಆಗ ಕರ್ಣನು ಭೀಮಸೇನ-ಸಾತ್ಯಕಿಯರು ನೋಡುತ್ತಿದ್ದಂತೆಯೇ ಅವನನ್ನು ಆಶುಗಗಳಿಂದ ತಡೆದನು.

07120059a ತಂ ಪಾರ್ಥೋ ದಶಭಿರ್ಬಾಣೈಃ ಪ್ರತ್ಯವಿಧ್ಯದ್ರಣಾಜಿರೇ|

07120059c ಸೂತಪುತ್ರಂ ಮಹಾಬಾಹುಃ ಸರ್ವಸೈನ್ಯಸ್ಯ ಪಶ್ಯತಃ||

ಆ ಸೂತಪುತ್ರನನ್ನು ರಣಾಜಿರದಲ್ಲಿ ಮಹಾಬಾಹು ಪಾರ್ಥನು ಎಲ್ಲ ಸೈನ್ಯಗಳೂ ನೋಡುತ್ತಿದ್ದಂತೆ ಹತ್ತು ಬಾಣಗಳಿಂದ ಹೊಡೆದನು.

07120060a ಸಾತ್ವತಶ್ಚ ತ್ರಿಭಿರ್ಬಾಣೈಃ ಕರ್ಣಂ ವಿವ್ಯಾಧ ಮಾರಿಷ|

07120060c ಭೀಮಸೇನಸ್ತ್ರಿಭಿಶ್ಚೈವ ಪುನಃ ಪಾರ್ಥಶ್ಚ ಸಪ್ತಭಿಃ||

ಮಾರಿಷ! ಸಾತ್ವತನೂ ಕರ್ಣನನ್ನು ಮೂರು ಬಾಣಗಳಿಂದ, ಭೀಮಸೇನನು ಮೂರರಿಂದ ಮತ್ತು ಪಾರ್ಥನು ಪುನಃ ಏಳರಿಂದ ಹೊಡೆದರು.

07120061a ತಾನ್ಕರ್ಣಃ ಪ್ರತಿವಿವ್ಯಾಧ ಷಷ್ಟ್ಯಾ ಷಷ್ಟ್ಯಾ ಮಹಾರಥಃ|

07120061c ತದ್ಯುದ್ಧಮಭವದ್ರಾಜನ್ಕರ್ಣಸ್ಯ ಬಹುಭಿಃ ಸಹ||

ಮಹಾರಥ ಕರ್ಣನು ಅವರನ್ನು ಅರವತ್ತು-ಅರವತ್ತು ಶರಗಳಿಂದ ತಿರುಗಿ ಹೊಡೆದನು. ರಾಜನ್! ಆಗ ಅನೇಕರೊಂದಿಗೆ ಕರ್ಣನ ಯುದ್ಧವು ನಡೆಯಿತು.

07120062a ತತ್ರಾದ್ಭುತಮಪಶ್ಯಾಮ ಸೂತಪುತ್ರಸ್ಯ ಮಾರಿಷ|

07120062c ಯದೇಕಃ ಸಮರೇ ಕ್ರುದ್ಧಸ್ತ್ರೀನ್ರಥಾನ್ಪರ್ಯವಾರಯತ್||

ಮಾರಿಷ! ಸಮರದಲ್ಲಿ ಒಬ್ಬನೇ ಕ್ರುದ್ಧನಾಗಿ ಮೂರು ರಥರನ್ನು ಸುತ್ತುವರೆಯುತ್ತಿದ್ದ ಸೂತಪುತ್ರನ ಅದ್ಭುತವನ್ನು ನಾವು ನೊಡಿದೆವು.

07120063a ಫಲ್ಗುನಸ್ತು ಮಹಾಬಾಹುಃ ಕರ್ಣಂ ವೈಕರ್ತನಂ ರಣೇ|

07120063c ಸಾಯಕಾನಾಂ ಶತೇನೈವ ಸರ್ವಮರ್ಮಸ್ವತಾಡಯತ್||

ಮಹಾಬಾಹು ಫಲ್ಗುನನಾದರೋ ರಣದಲ್ಲಿ ನೂರು ಶರಗಳಿಂದ ವೈಕರ್ತನ ಕರ್ಣನ ಸರ್ವ ಮರ್ಮಗಳಿಗೆ ಹೊಡೆದನು.

07120064a ರುಧಿರೋಕ್ಷಿತಸರ್ವಾಂಗಃ ಸೂತಪುತ್ರಃ ಪ್ರತಾಪವಾನ್|

07120064c ಶರೈಃ ಪಂಚಾಶತಾ ವೀರಃ ಫಲ್ಗುನಂ ಪ್ರತ್ಯವಿಧ್ಯತ|

07120064e ತಸ್ಯ ತಲ್ಲಾಘವಂ ದೃಷ್ಟ್ವಾ ನಾಮೃಷ್ಯತ ರಣೇಽರ್ಜುನಃ||

ಸರ್ವಾಂಗಗಳೂ ರಕ್ತದಿಂದ ತೋಯ್ದ ಪ್ರತಾಪವಾನ್ ವೀರ ಸೂತಪುತ್ರನು ಐನೂರು ಶರಗಳಿಂದ ಫಲ್ಗುನನನ್ನು ತಿರುಗಿ ಹೊಡೆದನು. ರಣದಲ್ಲಿ ಅವನ ಲಾಘವವನ್ನು ಕಂಡು ಅರ್ಜುನನು ಸಹಿಸಿಕೊಳ್ಳಲಿಲ್ಲ.

07120065a ತತಃ ಪಾರ್ಥೋ ಧನುಶ್ಚಿತ್ತ್ವಾ ವಿವ್ಯಾಧೈನಂ ಸ್ತನಾಂತರೇ|

07120065c ಸಾಯಕೈರ್ನವಭಿರ್ವೀರಸ್ತ್ವರಮಾಣೋ ಧನಂಜಯಃ||

ಆಗ ತ್ವರೆಮಾಡಿ ವೀರ ಧನಂಜಯ ಪಾರ್ಥನು ಅವನ ಧನುಸ್ಸನ್ನು ತುಂಡರಿಸಿ, ಎದೆಯ ಮೇಲೆ ಒಂಭತ್ತು ಸಾಯಕಗಳಿಂದ ಹೊಡೆದನು.

07120066a ವಧಾರ್ಥಂ ಚಾಸ್ಯ ಸಮರೇ ಸಾಯಕಂ ಸೂರ್ಯವರ್ಚಸಂ|

07120066c ಚಿಕ್ಷೇಪ ತ್ವರಯಾ ಯುಕ್ತಸ್ತ್ವರಾಕಾಲೇ ಧನಂಜಯಃ||

ಸಮರದಲ್ಲಿ ಅವನ ವಧೆಗೋಸ್ಕರ ಧನಂಜಯನು ತ್ವರೆಮಾಡಿ ವೇಗವುಳ್ಳ ಸೂರ್ಯವರ್ಚಸ ಸಾಯಕವನ್ನು ಎಸೆದನು.

07120067a ತಮಾಪತಂತಂ ವೇಗೇನ ದ್ರೌಣಿಶ್ಚಿಚ್ಚೇದ ಸಾಯಕಂ|

07120067c ಅರ್ಧಚಂದ್ರೇಣ ತೀಕ್ಷ್ಣೇನ ಸ ಚಿನ್ನಃ ಪ್ರಾಪತದ್ಭುವಿ||

ವೇಗದಿಂದ ಬರುತ್ತಿದ್ದ ಆ ಸಾಯಕವನ್ನು ದ್ರೌಣಿಯು ತೀಕ್ಷ್ಣ ಅರ್ಧಚಂದ್ರದಿಂದ ಕತ್ತರಿಸಿ ಭೂಮಿಗೆ ಕೆಡವಿದನು.

07120068a ಅಥಾನ್ಯದ್ಧನುರಾದಾಯ ಸೂತಪುತ್ರಃ ಪ್ರತಾಪವಾನ್|

07120068c ಕರ್ಣೋಽಪಿ ದ್ವಿಷತಾಂ ಹಂತಾ ಚಾದಯಾಮಾಸ ಫಲ್ಗುನಂ|

07120068e ಸಾಯಕೈರ್ಬಹುಸಾಹಸ್ರೈಃ ಕೃತಪ್ರತಿಕೃತೇಪ್ಸಯಾ||

ಆಗ ಶತ್ರುಹಂತಕ ಪ್ರತಾಪವಾನ್ ಸೂತಪುತ್ರ ಕರ್ಣನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪ್ರತೀಕಾರವನ್ನು ಮಾಡಲು ಬಯಸಿ ಫಲ್ಗುನನನ್ನು ಅನೇಕ ಸಾವಿರ ಸಾಯಕಗಳಿಂದ ಮುಚ್ಚಿಬಿಟ್ಟನು.

07120069a ತೌ ವೃಷಾವಿವ ನರ್ದಂತೌ ನರಸಿಂಹೌ ಮಹಾರಥೌ|

07120069c ಸಾಯಕೌಘಪ್ರತಿಚ್ಚನ್ನಂ ಚಕ್ರತುಃ ಖಮಜಿಹ್ಮಗೈಃ|

07120069e ಅದೃಶ್ಯೌ ಚ ಶರೌಘೈಸ್ತೌ ನಿಘ್ನತಾಮಿತರೇತರಂ||

ಗೂಳಿಗಳಂತೆ ಗುರುಟುಹಾಕುತ್ತಿದ್ದ ಆ ನರಸಿಂಹ ಮಹಾರಥರು ಸಾಯಕಗಳ ಸಮೂಹಗಳಿಂದ ಪರಸ್ಪರರನ್ನು ಮತ್ತು ಜಿಹ್ಮಗಗಳಿಂದ ಆಕಾಶವನ್ನು ಮುಚ್ಚಿ, ಪರಸ್ಪರರನ್ನು ಕೊಲ್ಲಲು ಬಯಸಿ ಶರೌಘಗಳಿಂದ ಅದೃಶ್ಯರನ್ನಾಗಿಸಿದರು.

07120070a ಪಾರ್ಥೋಽಹಮಸ್ಮಿ ತಿಷ್ಠ ತ್ವಂ ಕರ್ಣೋಽಹಂ ತಿಷ್ಠ ಫಲ್ಗುನ|

07120070c ಇತ್ಯೇವಂ ತರ್ಜಯಂತೌ ತೌ ವಾಕ್ಶಲ್ಯೈಸ್ತುದತಾಂ ತಥಾ||

“ನಾನು ಪಾರ್ಥ! ನಿಲ್ಲು!” ಎಂದೂ “ನಾನು ಕರ್ಣ! ನಿಲ್ಲು ಫಲ್ಗುನ!” ಎಂದೂ ಕೂಗಿಕೊಳ್ಳುತ್ತಾ ವಾಕ್ಶಲ್ಯಗಳಿಂದ ಚುಚ್ಚುತ್ತಿರುವುದು ಕೇಳಿಬರುತ್ತಿತ್ತು.

07120071a ಯುಧ್ಯೇತಾಂ ಸಮರೇ ವೀರೌ ಚಿತ್ರಂ ಲಘು ಚ ಸುಷ್ಠು ಚ|

07120071c ಪ್ರೇಕ್ಷಣೀಯೌ ಚಾಭವತಾಂ ಸರ್ವಯೋಧಸಮಾಗಮೇ||

ಸಮರದಲ್ಲಿ ವಿಚಿತ್ರವಾಗಿ, ಲಘುವಾಗಿ ಮತ್ತು ದೃಢವಾಗಿ ಯುದ್ಧಮಾಡುತ್ತಿದ್ದ ಆ ವೀರ ಸರ್ವಯೋಧರ ಸಮಾಗಮದಲ್ಲಿ ಪ್ರೇಕ್ಷಣೀಯವಾಗಿತ್ತು.

07120072a ಪ್ರಶಸ್ಯಮಾನೌ ಸಮರೇ ಸಿದ್ಧಚಾರಣವಾತಿಕೈಃ|

07120072c ಅಯುಧ್ಯೇತಾಂ ಮಹಾರಾಜ ಪರಸ್ಪರವಧೈಷಿಣೌ||

ಮಹಾರಾಜ! ಸಮರದಲ್ಲಿ ಪರಸ್ಪರರನ್ನು ವಧಿಸಲು ಬಯಸಿ ಯುದ್ಧಮಾಡುತ್ತಿದ್ದ ಅವರನ್ನು ಸಿದ್ಧ-ಚಾರಣರು ಪ್ರಶಂಸಿಸಿದರು.

07120073a ತತೋ ದುರ್ಯೋಧನೋ ರಾಜಂಸ್ತಾವಕಾನಭ್ಯಭಾಷತ|

07120073c ಯತ್ತಾ ರಕ್ಷತ ರಾಧೇಯಂ ನಾಹತ್ವಾ ಸಮರೇಽರ್ಜುನಂ|

07120073e ನಿವರ್ತಿಷ್ಯತಿ ರಾಧೇಯ ಇತಿ ಮಾಮುಕ್ತವಾನ್ವೃಷಃ||

ರಾಜನ್! ಆಗ ದುರ್ಯೋಧನನು ನಿನ್ನವರಿಗೆ “ರಾಧೇಯನನ್ನು ರಕ್ಷಿಸಿರಿ! ಸಮರದಲ್ಲಿ ಅರ್ಜುನನ್ನು ಸಂಹರಿಸದೇ ಹಿಂದಿರುಗುವುದಿಲ್ಲವೆಂದು ವೃಷನೇ ನನಗೆ ಹೇಳಿದ್ದಾನೆ” ಎಂದು ಹೇಳಿದನು.

07120074a ಏತಸ್ಮಿನ್ನಂತರೇ ರಾಜನ್ದೃಷ್ಟ್ವಾ ಕರ್ಣಸ್ಯ ವಿಕ್ರಮಂ|

07120074c ಆಕರ್ಣಮುಕ್ತೈರಿಷುಭಿಃ ಕರ್ಣಸ್ಯ ಚತುರೋ ಹಯಾನ್|

07120074e ಅನಯನ್ಮೃತ್ಯುಲೋಕಾಯ ಚತುರ್ಭಿಃ ಸಾಯಕೋತ್ತಮೈಃ||

ರಾಜನ್! ಇದರ ನಡುವೆ ಕರ್ಣನ ವಿಕ್ರಮವನ್ನು ನೋಡಿ ಅರ್ಜುನನು ಆಕರ್ಣವಾಗಿ ಸೆಳೆದು ಬಿಟ್ಟ ನಾಲ್ಕು ಉತ್ತಮ ಸಾಯಕಗಳಿಂದ ಕರ್ಣನ ನಾಲ್ಕೂ ಕುದುರೆಗಳನ್ನು ಮೃತ್ಯುಲೋಕಕ್ಕೆ ಕಳುಹಿಸಿಬಿಟ್ಟನು.

07120075a ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್|

07120075c ಚಾದಯಾಮಾಸ ಚ ಶರೈಸ್ತವ ಪುತ್ರಸ್ಯ ಪಶ್ಯತಃ||

ಭಲ್ಲದಿಂದ ಅವನ ಸಾರಥಿಯನ್ನು ರಥದ ನೊಗದ ಮೇಲಿಂದ ಬೀಳಿಸಿದನು. ನಿನ್ನ ಮಗನು ನೋಡುತ್ತಿದ್ದಂತೆಯೇ ಶರಗಳಿಂದ ಅವನನ್ನು ಮುಚ್ಚಿಬಿಟ್ಟನು.

07120076a ಸ ಚಾದ್ಯಮಾನಃ ಸಮರೇ ಹತಾಶ್ವೋ ಹತಸಾರಥಿಃ|

07120076c ಮೋಹಿತಃ ಶರಜಾಲೇನ ಕರ್ತವ್ಯಂ ನಾಭ್ಯಪದ್ಯತ||

ಸಮರದಲ್ಲಿ ಹೀಗೆ ಕುದುರೆಗಳು ಮತ್ತು ಸಾರಥಿಯು ಹತರಾಗಲು, ಶರಜಾಲಗಳಿಂದ ಮುಚ್ಚಲ್ಪಟ್ಟು ಮೋಹಿತನಾದ ಅವನಿಗೆ ಏನು ಮಾಡಬೇಕೆಂದು ತೋಚದಾಯಿತು.

07120077a ತಂ ತಥಾ ವಿರಥಂ ದೃಷ್ಟ್ವಾ ರಥಮಾರೋಪ್ಯ ಸ್ವಂ ತದಾ|

07120077c ಅಶ್ವತ್ಥಾಮಾ ಮಹಾರಾಜ ಭೂಯೋಽರ್ಜುನಮಯೋಧಯತ್||

ಮಹಾರಾಜ! ಆಗ ಅವನು ವಿರಥನಾದುದನ್ನು ಕಂಡು ಅಶ್ವತ್ಥಾಮನು ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಮತ್ತೆ ಅರ್ಜುನನೊಂದಿಗೆ ಯುದ್ಧದಲ್ಲಿ ತೊಡಗಿದನು.

07120078a ಮದ್ರರಾಜಸ್ತು ಕೌಂತೇಯಮವಿಧ್ಯತ್ತ್ರಿಂಶತಾ ಶರೈಃ|

07120078c ಶಾರದ್ವತಸ್ತು ವಿಂಶತ್ಯಾ ವಾಸುದೇವಂ ಸಮಾರ್ಪಯತ್|

07120078e ಧನಂಜಯಂ ದ್ವಾದಶಭಿರಾಜಘಾನ ಶಿಲೀಮುಖೈಃ||

ಮದ್ರರಾಜನಾದರೋ ಕೌಂತೇಯನನ್ನು ಮೂವತ್ತು ಬಾಣಗಳಿಂದ ಪ್ರಹರಿಸಿದನು. ಶಾರದ್ವತನಾದರೋ ಇಪ್ಪತ್ತರಿಂದ ವಾಸುದೇವನನ್ನು ಹೊಡೆದು, ಹನ್ನೆರಡು ಶಿಲೀಮುಖಗಳಿಂದ ಹೊಡೆದನು.

07120079a ಚತುರ್ಭಿಃ ಸಿಂಧುರಾಜಶ್ಚ ವೃಷಸೇನಶ್ಚ ಸಪ್ತಭಿಃ|

07120079c ಪೃಥಕ್ಪೃಥಂ ಮಹಾರಾಜ ಕೃಷ್ಣಪಾರ್ಥಾವವಿಧ್ಯತಾಂ||

ಮಹಾರಾಜ! ಸಿಂಧುರಾಜನು ನಾಲ್ಕರಿಂದ ಮತ್ತು ವೃಷಸೇನನು ಏಳರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಕೃಷ್ಣ-ಪಾರ್ಥರನ್ನು ಹೊಡೆದರು.

07120080a ತಥೈವ ತಾನ್ಪ್ರತ್ಯವಿಧ್ಯತ್ಕುಂತೀಪುತ್ರೋ ಧನಂಜಯಃ|

07120080c ದ್ರೋಣಪುತ್ರಂ ಚತುಃಷಷ್ಟ್ಯಾ ಮದ್ರರಾಜಂ ಶತೇನ ಚ||

07120081a ಸೈಂಧವಂ ದಶಭಿರ್ಭಲ್ಲೈರ್ವೃಷಸೇನಂ ತ್ರಿಭಿಃ ಶರೈಃ|

07120081c ಶಾರದ್ವತಂ ಚ ವಿಂಶತ್ಯಾ ವಿದ್ಧ್ವಾ ಪಾರ್ಥಃ ಸಮುನ್ನದತ್||

ಹಾಗೆಯೇ ಅವರನ್ನು ಕುಂತೀಪುತ್ರ ಧನಂಜಯನು ಪ್ರತಿಯಾಗಿ ಹೊಡೆದನು. ದ್ರೋಣಪುತ್ರನನ್ನು ಅರವತ್ನಾಲ್ಕರಿಂದ, ಮದ್ರರಾಜನನ್ನು ನೂರರಿಂದ, ಸೈಂಧವನನ್ನು ಹತ್ತು ಭಲ್ಲಗಳಿಂದ, ವೃಷಸೇನನನ್ನು ಮುರು ಶರಗಳಿಂದ, ಶಾರದ್ವತನನ್ನು ಇಪ್ಪತ್ತರಿಂದ ಹೊಡೆದು ಪಾರ್ಥನು ಜೋರಾಗಿ ಗರ್ಜಿಸಿದನು.

07120082a ತೇ ಪ್ರತಿಜ್ಞಾಪ್ರತೀಘಾತಮಿಚ್ಚಂತಃ ಸವ್ಯಸಾಚಿನಃ|

07120082c ಸಹಿತಾಸ್ತಾವಕಾಸ್ತೂರ್ಣಮಭಿಪೇತುರ್ಧನಂಜಯಂ||

ಸವ್ಯಸಾಚಿಯ ಪ್ರತಿಜ್ಞೆಯನ್ನು ಪ್ರತೀಘಾತಗೊಳಿಸಲು ಇಚ್ಛಿಸಿ ನಿನ್ನವರೆಲ್ಲರೂ ಒಟ್ಟಿಗೇ ತಕ್ಷಣವೇ ಧನಂಜಯನ ಮೇಲೆ ಎರಗಿದರು.

07120083a ಅಥಾರ್ಜುನಃ ಸರ್ವತೋಧಾರಮಸ್ತ್ರಂ

         ಪ್ರಾದುಶ್ಚಕ್ರೇ ತ್ರಾಸಯನ್ಧಾರ್ತರಾಷ್ಟ್ರಾನ್|

07120083c ತಂ ಪ್ರತ್ಯುದೀಯುಃ ಕುರವಃ ಪಾಂಡುಸೂನುಂ

         ರಥೈರ್ಮಹಾರ್ಹೈಃ ಶರವರ್ಷಾಣ್ಯವರ್ಷನ್||

ಆಗ ಅರ್ಜುನನು ಧಾರ್ತರಾಷ್ಟ್ರರನ್ನು ಭಯಪಡಿಸುತ್ತ ಸರ್ವತ್ರ ವಾರುಣಾಸ್ತ್ರವನ್ನು ಪ್ರಕಟಪಡಿಸಿದನು. ಅದಕ್ಕೆ ಪ್ರತಿಯಾಗಿ ಕುರುಗಳು ಮಹಾಮೂಲ್ಯ ರಥಗಳ ಮೇಲಿಂದ ಪಾಂಡುಪುತ್ರನ ಮೇಲೆ ಶರವರ್ಷಗಳನ್ನು ಸುರಿಸಿದರು.

07120084a ತತಸ್ತು ತಸ್ಮಿಂಸ್ತುಮುಲೇ ಸಮುತ್ಥಿತೇ

         ಸುದಾರುಣೇ ಭಾರತ ಮೋಹನೀಯೇ|

07120084c ನಾಮುಹ್ಯತ ಪ್ರಾಪ್ಯ ಸ ರಾಜಪುತ್ರಃ

         ಕಿರೀಟಮಾಲೀ ವಿಸೃಜನ್ಪೃಷತ್ಕಾನ್||

ಭಾರತ! ಭ್ರಾಂತಗೊಳಿಸುವ, ಆ ಸುದಾರುಣ ತುಮುಲ ಯುದ್ಧವು ಪ್ರಾರಂಭವಾಗಲು ರಾಜಪುತ್ರ ಕಿರೀಟಮಾಲಿಯು ಮಾತ್ರ ಸ್ವಲ್ಪವೂ ಭ್ರಾಂತನಾಗದೇ ಬಾಣಗಳ ಸಮೂಹಗಳನ್ನು ಪ್ರಯೋಗಿಸುತ್ತಲೇ ಇದ್ದನು.

07120085a ರಾಜ್ಯಪ್ರೇಪ್ಸುಃ ಸವ್ಯಸಾಚೀ ಕುರೂಣಾಂ

         ಸ್ಮರನ್ಕ್ಲೇಶಾನ್ದ್ವಾದಶವರ್ಷವೃತ್ತಾನ್|

07120085c ಗಾಂಡೀವಮುಕ್ತೈರಿಷುಭಿರ್ಮಹಾತ್ಮಾ

         ಸರ್ವಾ ದಿಶೋ ವ್ಯಾವೃಣೋದಪ್ರಮೇಯೈಃ||

ರಾಜ್ಯವನ್ನು ಪಡೆಯಬೇಕೆಂದು ಬಯಸುತ್ತಿದ್ದ ಮಹಾತ್ಮ ಸವ್ಯಸಾಚಿಯು, ಹನ್ನೆರಡು ವರ್ಷಗಳು ಕುರುಗಳು ನೀಡಿದ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ ಗಾಂಡೀವದಿಂದ ಹೊರಟ ಬಾಣಗಳಿಂದ ಸರ್ವ ದಿಕ್ಕುಗಳನ್ನೂ ಮುಚ್ಚಿದನು.

07120086a ಪ್ರದೀಪ್ತೋಲ್ಕಮಭವಚ್ಚಾಂತರಿಕ್ಷಂ

         ದೇಹೇಷು ಭೂರೀಣ್ಯಪತನ್ವಯಾಂಸಿ|

07120086c ಯತ್ ಪಿಂಗಲಜ್ಯೇನ ಕಿರೀಟಮಾಲೀ

         ಕ್ರುದ್ಧೋ ರಿಪೂನಾಜಗವೇನ ಹಂತಿ||

ಕ್ರುದ್ಧನಾದ ಕಿರೀಟಿಯು ಪಿಂಗಳವರ್ಣದ ಮೌರ್ವಿಯಿಂದ ವೇಗವಾಗಿ ಶತ್ರುಗಳನ್ನು ಕೊಲ್ಲುತ್ತಿರುವಾಗ ಆಕಾಶವು ಉಲ್ಕೆಗಳಿಂದಲೋ ಎಂಬಂತೆ ಪ್ರದೀಪ್ತವಾಗಿತ್ತು. ಕೆಳಗೆ ಬಿದ್ದ ದೇಹಗಳ ಮೇಲೆ ಕಾಗೆಗಳು ಬಂದು ಬೀಳುತ್ತಿದ್ದವು.

07120087a ಕಿರೀಟಮಾಲೀ ಮಹತಾ ಮಹಾಯಶಾಃ

         ಶರಾಸನೇನಾಸ್ಯ ಶರಾನನೀಕಜಿತ್|

07120087c ಹಯಪ್ರವೇಕೋತ್ತಮನಾಗಧೂರ್ಗತಾನ್

         ಕುರುಪ್ರವೀರಾನಿಷುಭಿರ್ನ್ಯಪಾತಯತ್||

ಮಹಾಯಶಸ್ವೀ ಸೇನೆಗಳನ್ನು ಗೆಲ್ಲುವ ಕಿರೀಟಮಾಲಿಯು ಮಹಾ ಧನುಸ್ಸಿನಿಂದ ಬಿಟ್ಟ ಬಾಣಗಳಿಂದ ಕುದುರೆಗಳ ಮೇಲೆ ಮತ್ತು ಉತ್ತಮ ಆನೆಗಳ ಮೇಲೆ ಕುಳಿತಿದ್ದ ಕುರುಪ್ರವೀರರನ್ನು ಕೆಡವಿದನು.

07120088a ಗದಾಶ್ಚ ಗುರ್ವೀಃ ಪರಿಘಾನಯಸ್ಮಯಾನ್

         ಅಸೀಂಶ್ಚ ಶಕ್ತೀಶ್ಚ ರಣೇ ನರಾಧಿಪಾಃ|

07120088c ಮಹಾಂತಿ ಶಸ್ತ್ರಾಣಿ ಚ ಭೀಮದರ್ಶನಾಃ

         ಪ್ರಗೃಹ್ಯ ಪಾರ್ಥಂ ಸಹಸಾಭಿದುದ್ರುವುಃ||

ರಣದಲ್ಲಿ ನರಾಧಿಪರು ಭಾರ ಗದೆಗಳನ್ನೂ, ಕಬ್ಬಿಣದ ಪರಿಘಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಭೀಮದರ್ಶನ ಮಹಾ ಶಸ್ತ್ರಗಳನ್ನೂ ಹಿಡಿದು ಪಾರ್ಥನ ಮೇಲೆ ಒಮ್ಮೆಲೇ ಆಕ್ರಮಣ ಮಾಡಿದರು.

07120089a ಸ ತಾನುದೀರ್ಣಾನ್ಸರಥಾಶ್ವವಾರಣಾನ್

         ಪದಾತಿಸಂಘಾಂಶ್ಚ ಮಹಾಧನುರ್ಧರಃ|

07120089c ವಿಪನ್ನಸರ್ವಾಯುಧಜೀವಿತಾನ್ರಣೇ

         ಚಕಾರ ವೀರೋ ಯಮರಾಷ್ಟ್ರವರ್ಧನಾನ್||

ಯಮರಾಷ್ಟ್ರವರ್ಧಕ ಮಹಾಧನುರ್ಧರ ವೀರನು ನುಗ್ಗಿಬರುತ್ತಿರುವ ರಥ-ಕುದುರೆ-ಆನೆ-ಪದಾತಿಸಂಘಗಳನ್ನು ಆಯುಧರಹಿತರನ್ನಾಗಿಯೂ ಜೀವರಹಿತರನ್ನಾಗಿಯೂ ಮಾಡಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಂಕುಲಯುದ್ಧೇ ವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಇಪ್ಪತ್ತನೇ ಅಧ್ಯಾಯವು.

Image result for lotus against white background

[1] ಇಲ್ಲಿ ಮೂರು ಸಲ “ಯಥಾ” ಎಂದಿರುವುದರಿಂದ ಈ ಶ್ಲೋಕವನ್ನು ಹೀಗೂ ಅರ್ಥೈಸಿಕೊಳ್ಳಬಹುದು: “ಸೂರ್ಯನು ಅಸ್ತನಾಗದಂತೆ, ವಚನವು ಸತ್ಯವಾಗುವಂತೆ, ಮತ್ತು ಜಯದ್ರಥನನ್ನು ಸಂಹರಿಸುವಂತೆ ಕುದುರೆಗಳನ್ನು ಓಡಿಸು ಕೃಷ್ಣ!”

[2] ಈ ಶ್ಲೋಕವು ಇದೇ ಅಧ್ಯಾಯದ ೩೭ನೆಯ ಶ್ಲೋಕದ ಪುನರಾವರ್ತನವಾಗಿದೆ.

Comments are closed.