ದ್ರೋಣ ಪರ್ವ: ಜಯದ್ರಥವಧ ಪರ್ವ
Contents
Toggle೧೦೧
ದ್ರೋಣನು ಕೇಕಯದ ಬೃಹತ್ಕ್ಷತ್ರನನ್ನು ವಧಿಸಿದುದು (೧-೨೧). ದ್ರೋಣನು ಚೇದಿರಾಜ ಧೃಷ್ಟಕೇತುವನ್ನು ಸಂಹರಿಸಿದುದು (೨೨-೩೭). ಧೃಷ್ಟಕೇತುವಿನ ಮಗ, ಜರಾಸಂಧನ ಮಗ ಮತ್ತು ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನನ್ನು ಸಂಹರಿಸಿ ದ್ರೋಣನು ಚೇಕಿತಾನನನ್ನು ಪರಾಜಯಗೊಳಿಸಿದುದು (೩೮-೭೪).
07101001 ಸಂಜಯ ಉವಾಚ|
07101001a ಅಪರಾಹ್ಣೇ ಮಹಾರಾಜ ಸಂಗ್ರಾಮಃ ಸಮಪದ್ಯತ|
07101001c ಪರ್ಜನ್ಯಸಮನಿರ್ಘೋಷಃ ಪುನರ್ದ್ರೋಣಸ್ಯ ಸೋಮಕೈಃ||
ಸಂಜಯನು ಹೇಳಿದನು: “ಮಹಾರಾಜ! ಆ ದಿನದ ಅಪರಾಹ್ಣದಲ್ಲಿ ದ್ರೋಣ ಮತ್ತು ಸೋಮಕರ ನಡುವೆ ಮೋಡಗಳ ಗುಡುಗಿನಂತೆ ಮೊಳಗುತ್ತಿರುವ ಸಂಗ್ರಾಮವು ಪುನಃ ನಡೆಯಿತು.
07101002a ಶೋಣಾಶ್ವಂ ರಥಮಾಸ್ಥಾಯ ನರವೀರಃ ಸಮಾಹಿತಃ|
07101002c ಸಮರೇಽಭ್ಯದ್ರವತ್ಪಾಂಡೂನ್ಜವಮಾಸ್ಥಾಯ ಮಧ್ಯಮಂ||
ಆ ನರವೀರನು ಸಮರದಲ್ಲಿ ಸಮಾಹಿತನಾಗಿ ಕೆಂಪು ಕುದುರೆಗಳನ್ನು ಕಟ್ಟಿದ್ದ ರಥವನ್ನೇರಿ ಮಧ್ಯಮ ವೇಗವನ್ನು ಬಳಸಿ ಪಾಂಡವರನ್ನು ಆಕ್ರಮಣಿಸಿದನು.
07101003a ತವ ಪ್ರಿಯಹಿತೇ ಯುಕ್ತೋ ಮಹೇಷ್ವಾಸೋ ಮಹಾಬಲಃ|
07101003c ಚಿತ್ರಪುಂಖೈಃ ಶಿತೈರ್ಬಾಣೈಃ ಕಲಶೋತ್ತಮಸಂಭವಃ||
07101004a ವರಾನ್ವರಾನ್ ಹಿ ಯೋಧಾನಾಂ ವಿಚಿನ್ವನ್ನಿವ ಭಾರತ|
07101004c ಅಕ್ರೀಡತ ರಣೇ ರಾಜನ್ಭಾರದ್ವಾಜಃ ಪ್ರತಾಪವಾನ್||
ಭಾರತ! ರಾಜನ್! ನಿನ್ನ ಪ್ರಿಯ-ಹಿತಗಳಲ್ಲಿ ನಿರತನಾದ ಆ ಮಹೇಷ್ವಾಸ ಮಹಾಬಲ ಕಲಶೋತ್ತಮಸಂಭವ ಪ್ರತಾಪವಾನ್ ಭಾರದ್ವಾಜನು ರಣದಲ್ಲಿ ಆಟವಾಡುತ್ತಿರುವನೋ ಎಂಬಂತೆ ಬಣ್ಣದ ಪುಂಖಗಳುಳ್ಳ ನಿಶಿತ ಬಾಣಗಳಿಂದ ಶ್ರೇಷ್ಠ ಶ್ರೇಷ್ಠ ಯೋಧರನ್ನು ತುಂಡರಿಸಿದನು.
07101005a ತಮಭ್ಯಯಾದ್ಬೃಹತ್ಕ್ಷತ್ರಃ ಕೇಕಯಾನಾಂ ಮಹಾರಥಃ|
07101005c ಭ್ರಾತೄಣಾಂ ವೀರಪಂಚಾನಾಂ ಜ್ಯೇಷ್ಠಃ ಸಮರಕರ್ಕಶಃ||
ಆಗ ಕೇಕಯರ ಮಹಾರಥ ಐವರು ಸಹೋದರರ ವೀರ ಜ್ಯೇಷ್ಠ, ಸಮರ ಕರ್ಕಶ ಬೃಹತ್ಕ್ಷತ್ರನು ದ್ರೋಣನನ್ನು ಎದುರಿಸಿದನು.
07101006a ವಿಮುಂಚನ್ವಿಶಿಖಾಂಸ್ತೀಕ್ಷ್ಣಾನಾಚಾರ್ಯಂ ಚಾದಯನ್ಭೃಶಂ|
07101006c ಮಹಾಮೇಘೋ ಯಥಾ ವರ್ಷಂ ವಿಮುಂಚನ್ಗಂಧಮಾದನೇ||
ತೀಕ್ಷ್ಣವಾದ ವಿಶಿಖಗಳನ್ನು ಬಿಡುತ್ತಾ ಅವನು ಮಹಾಮೇಘವು ಗಂಧಮಾದನ ಪರ್ವತದ ಮೇಲೆ ಮಳೆಸುರಿಸುವಂತೆ ಆಚಾರ್ಯನ ಮೇಲೆ ಸುರಿಸಿ ಮುಚ್ಚಿಬಿಟ್ಟನು.
07101007a ತಸ್ಯ ದ್ರೋಣೋ ಮಹಾರಾಜ ಸ್ವರ್ಣಪುಂಖಾಂ ಶಿಲಾಶಿತಾನ್|
07101007c ಪ್ರೇಷಯಾಮಾಸ ಸಂಕ್ರುದ್ಧಃ ಸಾಯಕಾನ್ದಶ ಸಪ್ತ ಚ||
ಮಹಾರಾಜ! ಕ್ರುದ್ಧನಾದ ದ್ರೋಣನು ಅವನ ಮೇಲೆ ಸ್ವರ್ಣಪುಂಖಗಳುಳ್ಳ, ಕಲ್ಲಿನ ಮೇಲೆ ಮಸೆದ ಹದಿನೇಳು ಸಾಯಕಗಳನ್ನು ಪ್ರಯೋಗಿಸಿದನು.
07101008a ತಾಂಸ್ತು ದ್ರೋಣಧನುರ್ಮುಕ್ತಾನ್ಘೋರಾನಾಶೀವಿಷೋಪಮಾನ್|
07101008c ಏಕೈಕಂ ದಶಭಿರ್ಬಾಣೈರ್ಯುಧಿ ಚಿಚ್ಚೇದ ಹೃಷ್ಟವತ್||
ಯುದ್ಧದಲ್ಲಿ ದ್ರೋಣನು ಬಿಟ್ಟ ಆ ಘೋರ ಸರ್ಪದ ವಿಷಗಳಂತಿರುವ ಒಂದೊಂದು ಬಾಣಗಳನ್ನೂ ಬೃಹತ್ಕ್ಷತ್ರನು ಸಂತೋಷದಿಂದ ಹತ್ತು ಬಾಣಗಳಿಂದ ಕತ್ತರಿಸಿದನು.
07101009a ತಸ್ಯ ತಲ್ಲಾಘವಂ ದೃಷ್ಟ್ವಾ ಪ್ರಹಸನ್ದ್ವಿಜಸತ್ತಮಃ|
07101009c ಪ್ರೇಷಯಾಮಾಸ ವಿಶಿಖಾನಷ್ಟೌ ಸನ್ನತಪರ್ವಣಃ||
ಅವನ ಆ ಕೈಚಳಕವನ್ನು ನೋಡಿ ನಕ್ಕ ದ್ವಿಜಸತ್ತಮನು ಎಂಟು ಸನ್ನತಪರ್ವ ವಿಶಿಖಗಳನ್ನು ಪ್ರಯೋಗಿಸಿದನು.
07101010a ತಾನ್ದೃಷ್ಟ್ವಾ ಪತತಃ ಶೀಘ್ರಂ ದ್ರೋಣಚಾಪಚ್ಯುತಾಂ ಶರಾನ್|
07101010c ಅವಾರಯಚ್ಚರೈರೇವ ತಾವದ್ಭಿರ್ನಿಶಿತೈರ್ದೃಢೈಃ||
ದ್ರೋಣನಿಂದ ಬಿಡಲ್ಪಟ್ಟ ಆ ಶರಗಳು ಬೀಳುವುದನ್ನು ನೋಡಿ ಬೃಹತ್ಕ್ಷತ್ರನು ಅವುಗಳನ್ನು ದೃಢ ನಿಶಿತ ಶರಗಳಿಂದಲೇ ತಡೆದುಬಿಟ್ಟನು.
07101011a ತತೋಽಭವನ್ಮಹಾರಾಜ ತವ ಸೈನ್ಯಸ್ಯ ವಿಸ್ಮಯಃ|
07101011c ಬೃಹತ್ಕ್ಷತ್ರೇಣ ತತ್ಕರ್ಮ ಕೃತಂ ದೃಷ್ಟ್ವಾ ಸುದುಷ್ಕರಂ||
ಮಹಾರಾಜ! ಆಗ ಬೃಹತ್ಕ್ಷತ್ರನು ಮಾಡಿದ ಆ ಸುದುಷ್ಕರ ಕೆಲಸವನ್ನು ನೋಡಿ ನಿನ್ನ ಸೈನ್ಯವು ವಿಸ್ಮಯಗೊಂಡಿತು.
07101012a ತತೋ ದ್ರೋಣೋ ಮಹಾರಾಜ ಕೇಕಯಂ ವೈ ವಿಶೇಷಯನ್|
07101012c ಪ್ರಾದುಶ್ಚಕ್ರೇ ರಣೇ ದಿವ್ಯಂ ಬ್ರಾಹ್ಮಮಸ್ತ್ರಂ ಮಹಾತಪಾಃ||
ಮಹಾರಾಜ! ಆಗ ಮಹಾತಪ ದ್ರೋಣನು ರಣದಲ್ಲಿ ಕೇಕಯನನ್ನು ಮೀರಿಸುತ್ತಾ ದಿವ್ಯ ಬ್ರಹ್ಮಾಸ್ತ್ರವನ್ನು ಹೂಡಿ ಪ್ರಯೋಗಿಸಿದನು.
07101013a ತದಸ್ಯ ರಾಜನ್ಕೈಕೇಯಃ ಪ್ರತ್ಯವಾರಯದಚ್ಯುತಃ|
07101013c ಬ್ರಾಹ್ಮೇಣೈವ ಮಹಾಬಾಹುರಾಹವೇ ಸಮುದೀರಿತಂ||
ರಾಜನ್! ಮಹಾಬಾಹು ಅಚ್ಯುತ ಕೈಕೇಯನು ರಣದಲ್ಲಿ ಅದನ್ನು ತಿರುಗಿ ಬ್ರಹ್ಮಾಸ್ತ್ರದಿಂದಲೇ ತಡೆದನು.
07101014a ಪ್ರತಿಹನ್ಯ ತದಸ್ತ್ರಂ ತು ಭಾರದ್ವಾಜಸ್ಯ ಸಂಯುಗೇ|
07101014c ವಿವ್ಯಾಧ ಬ್ರಾಹ್ಮಣಂ ಷಷ್ಟ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ||
ಸಂಯುಗದಲ್ಲಿ ಭಾರದ್ವಾಜನ ಆ ಅಸ್ತ್ರವನ್ನು ಪ್ರತಿಸಂಹರಿಸಿ ಬೃಹತ್ಕ್ಷತ್ರನು ಆ ಬ್ರಾಹ್ಮಣನನ್ನು ಅರವತ್ತು ಸ್ವರ್ಣಪುಂಖ ಶಿಲಾಶಿತಗಳಿಂದ ಹೊಡೆದನು.
07101015a ತಂ ದ್ರೋಣೋ ದ್ವಿಪದಾಂ ಶ್ರೇಷ್ಠೋ ನಾರಾಚೇನ ಸಮರ್ಪಯತ್|
07101015c ಸ ತಸ್ಯ ಕವಚಂ ಭಿತ್ತ್ವಾ ಪ್ರಾವಿಶದ್ಧರಣೀತಲಂ||
ದ್ವಿಪದರಲ್ಲಿ ಶ್ರೇಷ್ಠ ದ್ರೋಣನು ಅವನನ್ನು ನಾರಾಚದಿಂದ ಹೊಡೆಯಲು ಅದು ಅವನ ಕವಚವನ್ನು ಭೇದಿಸಿ ಧರಣೀತಲವನ್ನು ಪ್ರವೇಶಿಸಿತು.
07101016a ಕೃಷ್ಣಸರ್ಪೋ ಯಥಾ ಮುಕ್ತೋ ವಲ್ಮೀಕಂ ನೃಪಸತ್ತಮ|
07101016c ತಥಾಭ್ಯಗಾನ್ಮಹೀಂ ಬಾಣೋ ಭಿತ್ತ್ವಾ ಕೈಕೇಯಮಾಹವೇ||
ನೃಪಸತ್ತಮ! ಕೃಷ್ಣಸರ್ಪವು ಹೇಗೆ ಹುತ್ತದಿಂದ ಹೊರಬರುತ್ತದೆಯೋ ಹಾಗೆ ಆಹವದಲ್ಲಿ ಆ ಬಾಣವು ಕೈಕೇಯನನ್ನು ಭೇದಿಸಿ ಭೂಮಿಯನ್ನು ಹೊಕ್ಕಿತು.
07101017a ಸೋಽತಿವಿದ್ಧೋ ಮಹಾರಾಜ ದ್ರೋಣೇನಾಸ್ತ್ರವಿದಾ ಭೃಶಂ|
07101017c ಕ್ರೋಧೇನ ಮಹತಾವಿಷ್ಟೋ ವ್ಯಾವೃತ್ಯ ನಯನೇ ಶುಭೇ||
07101018a ದ್ರೋಣಂ ವಿವ್ಯಾಧ ಸಪ್ತತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ|
07101018c ಸಾರಥಿಂ ಚಾಸ್ಯ ಭಲ್ಲೇನ ಬಾಹ್ವೋರುರಸಿ ಚಾರ್ಪಯತ್||
ಮಹಾರಾಜ! ಅಸ್ತ್ರವಿದ ದ್ರೋಣನಿಂದ ಹಾಗೆ ತುಂಬಾ ಗಾಯಗೊಂಡ ಬೃಹತ್ಕ್ಷತ್ರನು ಮಹಾ ಕ್ರೋಧದಿಂದ ಆವಿಷ್ಟನಾಗಿ ಶುಭನಯನಗಳನ್ನು ತಿರುಗಿಸುತ್ತಾ ದ್ರೋಣನನ್ನು ಎಪ್ಪತ್ತು ಸ್ವರ್ಣಪುಂಖ ಶಿಲಾಶಿತಗಳಿಂದ ಹೊಡೆದನು ಮತ್ತು ಭಲ್ಲದಿಂದ ಅವನ ಸಾರಥಿಯ ಬಾಹು-ಎದೆಗಳಿಗೆ ಹೊಡೆದನು.
07101019a ದ್ರೋಣಸ್ತು ಬಹುಧಾ ವಿದ್ಧೋ ಬೃಹತ್ಕ್ಷತ್ರೇಣ ಮಾರಿಷ|
07101019c ಅಸೃಜದ್ವಿಶಿಖಾಂಸ್ತೀಕ್ಷ್ಣಾನ್ಕೇಕಯಸ್ಯ ರಥಂ ಪ್ರತಿ||
ಮಾರಿಷ! ಬೃಹತ್ಕ್ಷತ್ರನಿಂದ ಬಹುವಾಗಿ ಗಾಯಗೊಂಡ ದ್ರೋಣನಾದರೋ ಕೇಕಯನ ರಥದ ಮೇಲೆ ತೀಕ್ಷ್ಣ ವಿಶಿಖಗಳನ್ನು ಬಿಟ್ಟನು.
07101020a ವ್ಯಾಕುಲೀಕೃತ್ಯ ತಂ ದ್ರೋಣೋ ಬೃಹತ್ಕ್ಷತ್ರಂ ಮಹಾರಥಂ|
07101020c ವ್ಯಸೃಜತ್ಸಾಯಕಂ ತೀಕ್ಷ್ಣಂ ಕೇಕಯಂ ಪ್ರತಿ ಭಾರತ||
ಭಾರತ! ಮಹಾರಥ ಬೃಹತ್ಕ್ಷತ್ರನನ್ನು ವ್ಯಾಕುಲಗೊಳಿಸಿ ದ್ರೋಣನು ಕೇಕಯನ ಮೇಲೆ ತೀಕ್ಷ್ಣ ಸಾಯಕವನ್ನು ಪ್ರಯೋಗಿಸಿದನು.
07101021a ಸ ಗಾಢವಿದ್ಧಸ್ತೇನಾಶು ಮಹಾರಾಜ ಸ್ತನಾಂತರೇ|
07101021c ರಥಾತ್ಪುರುಷಶಾರ್ದೂಲಃ ಸಂಭಿನ್ನಹೃದಯೋಽಪತತ್||
ಮಹಾರಾಜ! ಅದು ಅವನ ಎದೆಯನ್ನು ಗಾಢವಾಗಿ ಚುಚ್ಚಿಕೊಳ್ಳಲು ಪುರುಷಶಾರ್ದೂಲ ಬೃಹತ್ಕ್ಷತ್ರನು ಹೃದಯವು ಒಡೆದು ರಥದಿಂದ ಕೆಳಕ್ಕೆ ಬಿದ್ದನು.
07101022a ಬೃಹತ್ಕ್ಷತ್ರೇ ಹತೇ ರಾಜನ್ಕೇಕಯಾನಾಂ ಮಹಾರಥೇ|
07101022c ಶೈಶುಪಾಲಿಃ ಸುಸಂಕ್ರುದ್ಧೋ ಯಂತಾರಮಿದಮಬ್ರವೀತ್||
ರಾಜನ್! ಕೇಕಯರ ಮಹಾರಥ ಬೃಹತ್ಕ್ಷತ್ರನು ಹತನಾಗಲು ಶಿಶುಪಾಲನ ಮಗ ಧೃಷ್ಟಕೇತುವು ಸುಸಂಕ್ರುದ್ಧನಾಗಿ ತನ್ನ ಸಾರಥಿಗೆ ಹೇಳಿದನು:
07101023a ಸಾರಥೇ ಯಾಹಿ ಯತ್ರೈಷ ದ್ರೋಣಸ್ತಿಷ್ಠತಿ ದಂಶಿತಃ|
07101023c ವಿನಿಘ್ನನ್ಕೇಕಯಾನ್ಸರ್ವಾನ್ಪಾಂಚಾಲಾನಾಂ ಚ ವಾಹಿನೀಂ||
“ಸಾರಥೇ! ಕೇಕಯರೆಲ್ಲರನ್ನೂ ಮತ್ತು ಪಾಂಚಾಲರ ವಾಹಿನಿಯನ್ನೂ ಸಂಹರಿಸಿ ಕವಚಧರಿಸಿದ ದ್ರೋಣನು ಎಲ್ಲಿ ನಿಂತಿರುವನೋ ಅಲ್ಲಿಗೆ ರಥವನ್ನೊಯ್ಯಿ!”
07101024a ತಸ್ಯ ತದ್ವಚನಂ ಶ್ರುತ್ವಾ ಸಾರಥೀ ರಥಿನಾಂ ವರಂ|
07101024c ದ್ರೋಣಾಯ ಪ್ರಾಪಯಾಮಾಸ ಕಾಂಬೋಜೈರ್ಜವನೈರ್ಹಯೈಃ||
ಅವನ ಆ ಮಾತನ್ನು ಕೇಳಿ ಸಾರಥಿಯು ರಥಿಗಳಲ್ಲಿ ಶ್ರೇಷ್ಠ ಧೃಷ್ಟಕೇತುವನ್ನು ಕಾಂಬೋಜದ ವೇಗಯುಕ್ತ ಕುದುರೆಗಳ ಸಹಾಯದಿಂದ ದ್ರೋಣನಿದ್ದಲ್ಲಿಗೆ ತಲುಪಿಸಿದನು.
07101025a ಧೃಷ್ಟಕೇತುಶ್ಚ ಚೇದೀನಾಂ ಋಷಭೋಽತಿಬಲೋದಿತಃ|
07101025c ಸಹಸಾ ಪ್ರಾಪತದ್ದ್ರೋಣಂ ಪತಂಗ ಇವ ಪಾವಕಂ||
ಚೇದಿಗಳ ವೃಷಭ, ಅತಿಬಲೋದಿತ ಧೃಷ್ಟಕೇತುವಾದರೋ ಬೆಂಕಿಯನ್ನು ಹೊಗುವ ಪತಂಗದಂತೆ ಒಮ್ಮೆಲೇ ದ್ರೊಣನ ಮೇಲೆ ಎರಗಿದನು.
07101026a ಸೋಽಭ್ಯವಿಧ್ಯತ್ತತೋ ದ್ರೋಣಂ ಷಷ್ಟ್ಯಾ ಸಾಶ್ವರಥಧ್ವಜಂ|
07101026c ಪುನಶ್ಚಾನ್ಯೈಃ ಶರೈಸ್ತೀಕ್ಷ್ಣೈಃ ಸುಪ್ತಂ ವ್ಯಾಘ್ರಂ ತುದನ್ನಿವ||
ಅಶ್ವ-ರಥ-ಧ್ವಜಗಳೊಂದಿಗೆ ದ್ರೋಣನನ್ನು ಅರವತ್ತು ಬಾಣಗಳಿಂದ ಹೊಡೆದು ಅವನು ಮಲಗಿರುವ ಹುಲಿಯನ್ನು ತಿವಿದು ಎಬ್ಬಿಸುವಂತೆ ಪುನಃ ಇತರ ತೀಕ್ಷ್ಣ ಶರಗಳಿಂದ ಹೊಡೆದನು.
07101027a ತಸ್ಯ ದ್ರೋಣೋ ಧನುರ್ಮಧ್ಯೇ ಕ್ಷುರಪ್ರೇಣ ಶಿತೇನ ಹ|
07101027c ಚಿಚ್ಚೇದ ರಾಜ್ಞೋ ಬಲಿನೋ ಯತಮಾನಸ್ಯ ಸಂಯುಗೇ||
ಆಗ ಸಂಯುಗದಲ್ಲಿ ಹೋರಾಡುತ್ತಿದ್ದ ರಾಜರಲ್ಲಿಯೇ ಬಲಶಾಲೀ ಧೃಷ್ಟಕೇತುವಿನ ಧನುಸ್ಸನ್ನು ಮಧ್ಯದಲ್ಲಿಯೇ ದ್ರೋಣನು ತುಂಡರಿಸಿದನು.
07101028a ಅಥಾನ್ಯದ್ಧನುರಾದಾಯ ಶೈಶುಪಾಲಿರ್ಮಹಾರಥಃ|
07101028c ವಿವ್ಯಾಧ ಸಾಯಕೈರ್ದ್ರೋಣಂ ಪುನಃ ಸುನಿಶಿತೈರ್ದೃಢೈಃ||
ಆಗ ಮಹಾರಥ ಶೈಶುಪಾಲಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪುನಃ ದ್ರೋಣನನ್ನು ನಿಶಿತ ದೃಢ ಸಾಯಕಗಳಿಂದ ಹೊಡೆದನು.
07101029a ತಸ್ಯ ದ್ರೋಣೋ ಹಯಾನ್ ಹತ್ವಾ ಸಾರಥಿಂ ಚ ಮಹಾಬಲಃ|
07101029c ಅಥೈನಂ ಪಂಚವಿಂಶತ್ಯಾ ಸಾಯಕಾನಾಂ ಸಮಾರ್ಪಯತ್||
ಮಹಾಬಲ ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ, ಧೃಷ್ಟಕೇತುವಿನ ಮೇಲೆ ಇಪ್ಪತ್ತೈದು ಸಾಯಕಗಳನ್ನು ಪ್ರಯೋಗಿಸಿದನು.
07101030a ವಿರಥೋ ವಿಧನುಷ್ಕಶ್ಚ ಚೇದಿರಾಜೋಽಪಿ ಸಂಯುಗೇ|
07101030c ಗದಾಂ ಚಿಕ್ಷೇಪ ಸಂಕ್ರುದ್ಧೋ ಭಾರದ್ವಾಜರಥಂ ಪ್ರತಿ||
ರಣದಲ್ಲಿ ರಥ-ಧನುಸ್ಸುಗಳನ್ನು ಕಳೆದುಕೊಂಡ ಚೇದಿರಾಜನೂ ಕೂಡ ಸಂಕ್ರುದ್ಧನಾಗಿ ಭಾರಧ್ವಾಜನ ರಥದ ಮೇಲೆ ಗದೆಯನ್ನು ಎಸೆದನು.
07101031a ತಾಮಾಪತಂತೀಂ ಸಹಸಾ ಘೋರರೂಪಾಂ ಭಯಾವಹಾಂ|
07101031c ಅಶ್ಮಸಾರಮಯೀಂ ಗುರ್ವೀಂ ತಪನೀಯವಿಭೂಷಿತಾಂ|
07101031e ಶರೈರನೇಕಸಾಹಸ್ರೈರ್ಭಾರದ್ವಾಜೋ ನ್ಯಪಾತಯತ್||
ಒಮ್ಮೆಲೇ ಬೀಳುತ್ತಿರುವ ಆ ಘೋರರೂಪದ ಭಯಾವಹ ಉಕ್ಕಿನಿಂದ ಮಾಡಲ್ಪಟ್ಟ ಬಂಗಾರದಿಂದ ವಿಭೂಷಿತ ಭಾರ ಗದೆಯನ್ನು ಭಾರದ್ವಾಜನು ಒಂದೇ ಶರದಿಂದ ಸಹಸ್ರ ಚೂರುಗಳನ್ನಾಗಿಸಿ ಬೀಳಿಸಿದನು.
07101032a ಸಾ ಪಪಾತ ಗದಾ ಭೂಮೌ ಭಾರದ್ವಾಜೇನ ಸಾದಿತಾ|
07101032c ರಕ್ತಮಾಲ್ಯಾಂಬರಧರಾ ತಾರೇವ ನಭಸಸ್ತಲಾತ್||
ಭಾರದ್ವಾಜನಿಂದ ಒಡೆಯಲ್ಪಟ್ಟ ಆ ಗದೆಯು ಕೆಂಪುಮಾಲೆಯನ್ನು ಧರಿಸಿದ ತಾರೆಯು ನಭಸ್ತಲದಿಂದ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.
07101033a ಗದಾಂ ವಿನಿಹತಾಂ ದೃಷ್ಟ್ವಾ ಧೃಷ್ಟಕೇತುರಮರ್ಷಣಃ|
07101033c ತೋಮರಂ ವ್ಯಸೃಜತ್ತೂರ್ಣಂ ಶಕ್ತಿಂ ಚ ಕನಕೋಜ್ಜ್ವಲಾಂ||
ಗದೆಯು ನಾಶವಾದುದನ್ನು ನೋಡಿ ಅಮರ್ಷಣ ಧೃಷ್ಟಕೇತುವು ತಕ್ಷಣವೇ ಬಂಗಾರದಂತೆ ಪ್ರಜ್ವಲಿಸುತ್ತಿದ್ದ ತೋಮರ ಶಕ್ತಿಯನ್ನು ಎಸೆದನು.
07101034a ತೋಮರಂ ತು ತ್ರಿಭಿರ್ಬಾಣೈರ್ದ್ರೋಣಶ್ಚಿತ್ತ್ವಾ ಮಹಾಮೃಧೇ|
07101034c ಶಕ್ತಿಂ ಚಿಚ್ಚೇದ ಸಹಸಾ ಕೃತಹಸ್ತೋ ಮಹಾಬಲಃ||
ದ್ರೋಣನಾದರೋ ಮಹಾರಣದಲ್ಲಿ ಆ ತೋಮರವನ್ನು ಮೂರು ಬಾಣಗಳಿಂದ ತುಂಡರಿಸಿ ಕೂಡಲೇ ಪಳಗಿದ ಕೈಯಿದ್ದ ಆ ಮಹಾಬಲನು ಶಕ್ತಿಯನ್ನೂ ಕತ್ತರಿಸಿದನು.
07101035a ತತೋಽಸ್ಯ ವಿಶಿಖಂ ತೀಕ್ಷ್ಣಂ ವಧಾರ್ಥಂ ವಧಕಾಂಕ್ಷಿಣಃ|
07101035c ಪ್ರೇಷಯಾಮಾಸ ಸಮರೇ ಭಾರದ್ವಾಜಃ ಪ್ರತಾಪವಾನ್||
ಆಗ ಧೃಷ್ಟಕೇತುವಿನ ವಧೆಯನ್ನು ಬಯಸಿದ ಪ್ರತ್ಮವಾನ್ ಭಾರದ್ವಾಜನು ಸಮರದಲ್ಲಿ ಅವನ ವಧೆಗೋಸ್ಕರ ತೀಕ್ಷ್ಣ ವಿಶಿಖವನ್ನು ಪ್ರಯೋಗಿಸಿದನು.
07101036a ಸ ತಸ್ಯ ಕವಚಂ ಭಿತ್ತ್ವಾ ಹೃದಯಂ ಚಾಮಿತೌಜಸಃ|
07101036c ಅಭ್ಯಗಾದ್ಧರಣೀಂ ಬಾಣೋ ಹಂಸಃ ಪದ್ಮಸರೋ ಯಥಾ||
ಆ ಅಮಿತೌಜಸ ಬಾಣವು ಅವನ ಕವಚವನ್ನು ಭೇದಿಸಿ ಹೃದಯವನ್ನು ಸೀಳಿ ಹಂಸವು ಪದ್ಮಸರೋವರವನ್ನು ಹೇಗೋ ಹಾಗೆ ಭೂಮಿಯನ್ನು ಸೇರಿತು.
07101037a ಪತಂಗಂ ಹಿ ಗ್ರಸೇಚ್ಚಾಷೋ ಯಥಾ ರಾಜನ್ಬುಭುಕ್ಷಿತಃ|
07101037c ತಥಾ ದ್ರೋಣೋಽಗ್ರಸಚ್ಚೂರೋ ಧೃಷ್ಟಕೇತುಂ ಮಹಾಮೃಧೇ||
ರಾಜನ್! ಹಸಿದ ಹಲ್ಲಿಯು ಪತಂಗವನ್ನು ಹೇಗೆ ನುಂಗಿಬಿಡುತ್ತದೆಯೋ ಹಾಗೆ ಆ ಮಹಾರಣದಲ್ಲಿ ಶೂರ ದ್ರೋಣನು ಧೃಷ್ಟಕೇತುವನ್ನು ನುಂಗಿಬಿಟ್ಟನು.
07101038a ನಿಹತೇ ಚೇದಿರಾಜೇ ತು ತತ್ಖಂಡಂ ಪಿತ್ರ್ಯಮಾವಿಶತ್|
07101038c ಅಮರ್ಷವಶಮಾಪನ್ನಃ ಪುತ್ರೋಽಸ್ಯ ಪರಮಾಸ್ತ್ರವಿತ್||
ಚೇದಿರಾಜನು ಹೀಗೆ ಹತನಾಗಲು ಪರಮಾಸ್ತ್ರಗಳನ್ನು ತಿಳಿದಿದ್ದ ಅವನ ಮಗನು ತುಂಬಾ ಕೋಪದಿಂದ ಆವೇಶಗೊಂಡು ತಂದೆಯನ್ನು ಸಂಹರಿಸಿದ ದ್ರೋಣನನ್ನು ಆಕ್ರಮಣಿಸಿದನು.
07101039a ತಮಪಿ ಪ್ರಹಸನ್ದ್ರೋಣಃ ಶರೈರ್ನಿನ್ಯೇ ಯಮಕ್ಷಯಂ|
07101039c ಮಹಾವ್ಯಾಘ್ರೋ ಮಹಾರಣ್ಯೇ ಮೃಗಶಾವಂ ಯಥಾ ಬಲೀ||
ಮಹಾರಣ್ಯದಲ್ಲಿ ಮಹಾವ್ಯಾಘ್ರವೊಂದು ಜಿಂಕೆಯ ಮರಿಯನ್ನು ಹೇಗೋ ಹಾಗೆ ಬಲಶಾಲೀ ದ್ರೋಣನು ಶರಗಳಿಂದ ಅವನನ್ನು ಯಮಲೋಕಕ್ಕೆ ಕಳುಹಿಸಿದನು.
07101040a ತೇಷು ಪ್ರಕ್ಷೀಯಮಾಣೇಷು ಪಾಂಡವೇಯೇಷು ಭಾರತ|
07101040c ಜರಾಸಂಧಸುತೋ ವೀರಃ ಸ್ವಯಂ ದ್ರೋಣಮುಪಾದ್ರವತ್||
ಭಾರತ! ಪಾಂಡವರ ಸೇನೆಯು ಹಾಗೆ ಕ್ಷೀಣವಾಗುತ್ತಿರಲು ಜರಾಸಂಧನ ವೀರ ಮಗನು ಸ್ವಯಂ ತಾನೇ ದ್ರೋಣನನ್ನು ಆಕ್ರಮಣಿಸಿದನು.
07101041a ಸ ತು ದ್ರೋಣಂ ಮಹಾರಾಜ ಚಾದಯನ್ಸಾಯಕೈಃ ಶಿತೈಃ|
07101041c ಅದೃಶ್ಯಮಕರೋತ್ತೂರ್ಣಂ ಜಲದೋ ಭಾಸ್ಕರಂ ಯಥಾ||
ಮಹಾರಾಜ! ಅವನಾದರೋ ಕೂಡಲೇ ದ್ರೋಣನನ್ನು ಹರಿತ ಸಾಯಕಗಳಿಂದ ಮುಚ್ಚಿ ಮೋಡವು ಸೂರ್ಯನನ್ನು ಹೇಗೋ ಹಾಗೆ ಅವನನ್ನು ಕಾಣದಂತಾಗಿಸಿಬಿಟ್ಟನು.
07101042a ತಸ್ಯ ತಲ್ಲಾಘವಂ ದೃಷ್ಟ್ವಾ ದ್ರೋಣಃ ಕ್ಷತ್ರಿಯಮರ್ದನಃ|
07101042c ವ್ಯಸೃಜತ್ಸಾಯಕಾಂಸ್ತೂರ್ಣಂ ಶತಶೋಽಥ ಸಹಸ್ರಶಃ||
ಅವನ ಕೈಚಳಕವನ್ನು ನೋಡಿ ಕ್ಷತ್ರಿಯಮರ್ದನ ದ್ರೋಣನು ಕೂಡಲೇ ಅವನ ಮೇಲೆ ನೂರಾರು ಸಹಸ್ರಾರು ಸಾಯಕಗಳನ್ನು ಪ್ರಯೋಗಿಸಿದನು.
07101043a ಚಾದಯಿತ್ವಾ ರಣೇ ದ್ರೋಣೋ ರಥಸ್ಥಂ ರಥಿನಾಂ ವರಂ|
07101043c ಜಾರಾಸಂಧಿಮಥೋ ಜಘ್ನೇ ಮಿಷತಾಂ ಸರ್ವಧನ್ವಿನಾಂ||
ರಣದಲ್ಲಿ ರಥವನ್ನೇರಿದ್ದ ರಥಿಗಳಲ್ಲಿ ಶ್ರೇಷ್ಠ ಜರಾಸಂಧನ ಮಗನನ್ನು[1] ಸರ್ವಧನ್ವಿಗಳೂ ನೋಡುತ್ತಿರುವಂತೆಯೇ ದ್ರೋಣನು ಸಂಹರಿಸಿದನು.
07101044a ಯೋ ಯಃ ಸ್ಮ ಲೀಯತೇ ದ್ರೋಣಂ ತಂ ತಂ ದ್ರೋಣೋಽಂತಕೋಪಮಃ|
07101044c ಆದತ್ತ ಸರ್ವಭೂತಾನಿ ಪ್ರಾಪ್ತೇ ಕಾಲೇ ಯಥಾಂತಕಃ||
ಅಂತ್ಯವು ಪ್ರಾಪ್ತವಾದಾಗ ಸರ್ವಭೂತಗಳನ್ನೂ ಅಂತಕನು ಹೇಗೆ ನುಂಗುವನೋ ಹಾಗೆ ಅಂತಕನಂತಿದ್ದ ದ್ರೋಣನು ತನ್ನನ್ನು ಯಾರ್ಯಾರು ಎದುರಿಸಿದರೋ ಅವರೆಲ್ಲರನ್ನೂ ಸಂಹರಿಸಿಬಿಟ್ಟನು.
07101045a ತತೋ ದ್ರೋಣೋ ಮಹೇಷ್ವಾಸೋ ನಾಮ ವಿಶ್ರಾವ್ಯ ಸಂಯುಗೇ|
07101045c ಶರೈರನೇಕಸಾಹಸ್ರೈಃ ಪಾಂಡವೇಯಾನ್ವ್ಯಮೋಹಯತ್||
ಆಗ ಮಹೇಷ್ವಾಸ ದ್ರೋಣನು ರಣದಲ್ಲಿ ತನ್ನ ಹೆಸರನ್ನು ಕೂಗಿ ಕೇಳಿಸುತ್ತಾ ಅನೇಕ ಸಹಸ್ರ ಶರಗಳಿಂದ ಪಾಂಡವೇಯರನ್ನು ಮೂರ್ಛೆಗೊಳಿಸಿದನು.
07101046a ತತೋ ದ್ರೋಣಾಂಕಿತಾ ಬಾಣಾಃ ಸ್ವರ್ಣಪುಂಖಾಃ ಶಿಲಾಶಿತಾಃ|
07101046c ನರಾನ್ನಾಗಾನ್ ಹಯಾಂಶ್ಚೈವ ನಿಜಘ್ನುಃ ಸರ್ವತೋ ರಣೇ||
ಆಗ ಸ್ವರ್ಣಪುಂಖಗಳ ದ್ರೋಣಾಂಕಿತ ಶಿಲಾಶಿತ ಬಾಣಗಳು ರಣದ ಎಲ್ಲಕಡೆ ಮನುಷ್ಯರನ್ನು, ಆನೆಗಳನ್ನು ಮತ್ತು ಕುದುರೆಗಳನ್ನೂ ಸಂಹರಿಸಿದವು.
07101047a ತೇ ವಧ್ಯಮಾನಾ ದ್ರೋಣೇನ ಶಕ್ರೇಣೇವ ಮಹಾಸುರಾಃ|
07101047c ಸಮಕಂಪಂತ ಪಾಂಚಾಲಾ ಗಾವಃ ಶೀತಾರ್ದಿತಾ ಇವ||
ಶಕ್ರನ ಆಕ್ರಮಣಕ್ಕೊಳಗಾದ ಮಹಾಸುರರಂತೆ ದ್ರೋಣನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು, ಛಳಿಯಿಂದ ಪೀಡಿತ ಗೋವುಗಳಂತೆ ನಡುಗತೊಡಗಿದರು.
07101048a ತತೋ ನಿಷ್ಟಾನಕೋ ಘೋರಃ ಪಾಂಡವಾನಾಮಜಾಯತ|
07101048c ದ್ರೋಣೇನ ವಧ್ಯಮಾನೇಷು ಸೈನ್ಯೇಷು ಭರತರ್ಷಭ||
ಭರತರ್ಷಭ! ದ್ರೋಣನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಗಳಲ್ಲಿ ಘೋರ ಆಕ್ರಂದನವು ಕೇಳಿ ಬಂದಿತು.
07101049a ಮೋಹಿತಾಃ ಶರವರ್ಷೇಣ ಭಾರದ್ವಾಜಸ್ಯ ಸಂಯುಗೇ|
07101049c ಊರುಗ್ರಾಹಗೃಹೀತಾ ಹಿ ಪಾಂಚಾಲಾನಾಂ ಮಹಾರಥಾಃ||
ಸಂಯುಗದಲ್ಲಿ ಭಾರದ್ವಾಜನ ಶರವರ್ಷಗಳಿಂದ ಪೀಡಿತರಾದ ಪಾಂಚಾಲ ಮಹಾರಥರು ಮೊಸಳೆಯ ಬಾಯಿಗೆ ಸಿಕ್ಕ ತೊಡೆಗಳುಳ್ಳವರಂತೆ ಸ್ತಬ್ಧರಾಗಿಬಿಟ್ಟಿದ್ದರು.
07101050a ಚೇದಯಶ್ಚ ಮಹಾರಾಜ ಸೃಂಜಯಾಃ ಸೋಮಕಾಸ್ತಥಾ|
07101050c ಅಭ್ಯದ್ರವಂತ ಸಂಹೃಷ್ಟಾ ಭಾರದ್ವಾಜಂ ಯುಯುತ್ಸಯಾ||
ಮಹಾರಾಜ! ಆಗ ಚೇದಿದೇಶದವರು, ಸೃಂಜಯರು ಮತ್ತು ಸೋಮಕರು ಯುದ್ಧದ ಉತ್ಸಾಹದಿಂದ ಸಂಹೃಷ್ಟರಾಗಿ ಭಾರದ್ವಾಜನನ್ನು ಆಕ್ರಮಣಿಸಿದರು.
07101051a ಹತ ದ್ರೋಣಂ ಹತ ದ್ರೋಣಮಿತಿ ತೇ ದ್ರೋಣಮಭ್ಯಯುಃ|
07101051c ಯತಂತಃ ಪುರುಷವ್ಯಾಘ್ರಾಃ ಸರ್ವಶಕ್ತ್ಯಾ ಮಹಾದ್ಯುತಿಂ|
07101051e ನಿನೀಷಂತೋ ರಣೇ ದ್ರೋಣಂ ಯಮಸ್ಯ ಸದನಂ ಪ್ರತಿ||
“ದ್ರೋಣನನ್ನು ಕೊಲ್ಲಿ! ದ್ರೋಣನನ್ನು ಕೊಲ್ಲಿ!” ಎಂದು ಹೇಳುತ್ತಾ ದ್ರೋಣನನ್ನು ಯಮಸದನಕ್ಕೆ ಕಳುಹಿಸಬೇಕೆಂದು ಬಯಸಿ ಪ್ರಯತ್ನಿಸುತ್ತಾ ಆ ಪುರುಷವ್ಯಾಘ್ರರು ಸರ್ವಶಕ್ತಿಯನ್ನುಪಯೋಗಿಸಿ ಮಹಾದ್ಯುತಿ ದ್ರೋಣನ ಮೇಲೆ ಎರಗಿದರು.
07101052a ಯತಮಾನಾಂಸ್ತು ತಾನ್ವೀರಾನ್ಭಾರದ್ವಾಜಃ ಶಿಲೀಮುಖೈಃ|
07101052c ಯಮಾಯ ಪ್ರೇಷಯಾಮಾಸ ಚೇದಿಮುಖ್ಯಾನ್ವಿಶೇಷತಃ||
ಪ್ರಯತಿಸುತ್ತಿದ್ದ ಆ ವೀರರನ್ನು, ಅವರಲ್ಲೂ ವಿಶೇಷವಾಗಿ ಚೇದಿಪ್ರಮುಖರನ್ನು ಭಾರದ್ವಾಜನು ಶಿಲೀಮುಖಿಗಳಿಂದ ಯಮಲೋಕಕ್ಕೆ ಕಳುಹಿಸಿದನು.
07101053a ತೇಷು ಪ್ರಕ್ಷೀಯಮಾಣೇಷು ಚೇದಿಮುಖ್ಯೇಷು ಭಾರತ|
07101053c ಪಾಂಚಾಲಾಃ ಸಮಕಂಪಂತ ದ್ರೋಣಸಾಯಕಪೀಡಿತಾಃ||
ಭಾರತ! ಚೇದಿಪ್ರಮುಖರು ಕಡಿಮೆಯಾಗುತ್ತಿರುವುದನ್ನು ಕಂಡು ದ್ರೋಣನ ಸಾಯಕಗಳಿಂದ ಪೀಡಿತರಾದ ಪಾಂಚಾಲರು ನಡುಗಿದರು.
07101054a ಪ್ರಾಕ್ರೋಶನ್ಭೀಮಸೇನಂ ತೇ ಧೃಷ್ಟದ್ಯುಮ್ನರಥಂ ಪ್ರತಿ|
07101054c ದೃಷ್ಟ್ವಾ ದ್ರೋಣಸ್ಯ ಕರ್ಮಾಣಿ ತಥಾರೂಪಾಣಿ ಮಾರಿಷ||
ಮಾರಿಷ! ದ್ರೋಣನ ಆ ರೀತಿಯ ಕೃತ್ಯಗಳನ್ನು ನೋಡಿ ಅವರು ಧೃಷ್ಟದ್ಯುಮ್ನನ ರಥದ ಬಳಿಯಿದ್ದ ಭೀಮಸೇನನನ್ನು ಕೂಗಿ ಕರೆದರು:
07101055a ಬ್ರಾಹ್ಮಣೇನ ತಪೋ ನೂನಂ ಚರಿತಂ ದುಶ್ಚರಂ ಮಹತ್|
07101055c ತಥಾ ಹಿ ಯುಧಿ ವಿಕ್ರಾಂತೋ ದಹತಿ ಕ್ಷತ್ರಿಯರ್ಷಭಾನ್||
“ಬಹಳಷ್ಟು ತಪಸ್ಸನ್ನು ಆಚರಿಸಿದ ಈ ಬ್ರಾಹ್ಮಣನು ಕೆಟ್ಟದಾಗಿ ನಡೆದುಕೊಂಡು ಯುದ್ಧದಲ್ಲಿ ವಿಕ್ರಮದಿಂದ ಕ್ಷತ್ರಿಯರ್ಷಭರನ್ನು ಸುಡುತ್ತಿದ್ದಾನೆ!
07101056a ಧರ್ಮೋ ಯುದ್ಧಂ ಕ್ಷತ್ರಿಯಸ್ಯ ಬ್ರಾಹ್ಮಣಸ್ಯ ಪರಂ ತಪಃ|
07101056c ತಪಸ್ವೀ ಕೃತವಿದ್ಯಶ್ಚ ಪ್ರೇಕ್ಷಿತೇನಾಪಿ ನಿರ್ದಹೇತ್||
ಕ್ಷತ್ರಿಯನ ಧರ್ಮ ಯುದ್ಧ. ಬ್ರಾಹ್ಮಣನ ಧರ್ಮ ತಪಸ್ಸು. ತಪಸ್ವಿಯಾದ ಮತ್ತು ಯುದ್ಧದಲ್ಲಿ ಪಾರಂಗತನಾದವನು ಕಣ್ಣಿನ ನೋಟದಿಂದಲೇ ಸುಟ್ಟುಬಿಡಬಹುದು.
07101057a ದ್ರೋಣಾಸ್ತ್ರಮಗ್ನಿಸಂಸ್ಪರ್ಶಂ ಪ್ರವಿಷ್ಟಾಃ ಕ್ಷತ್ರಿಯರ್ಷಭಾಃ|
07101057c ಬಹವೋ ದುಸ್ತರಂ ಘೋರಂ ಯತ್ರಾದಹ್ಯಂತ ಭಾರತ||
ಭಾರತ! ದ್ರೋಣನ ಅಸ್ತ್ರವೆಂಬ ಅಗ್ನಿಯು ತಾಗಿ ಅನೇಕ ಕ್ಷತ್ರಿಯರ್ಷಭರು ದುಸ್ತರ ಘೋರ ಅಗ್ನಿಯಲ್ಲಿ ಸುಟ್ಟುಹೋಗುತ್ತಿದ್ದಾರೆ.
07101058a ಯಥಾಬಲಂ ಯಥೋತ್ಸಾಹಂ ಯಥಾಸತ್ತ್ವಂ ಮಹಾದ್ಯುತಿಃ|
07101058c ಮೋಹಯನ್ಸರ್ವಭೂತಾನಿ ದ್ರೋಣೋ ಹಂತಿ ಬಲಾನಿ ನಃ||
ಮಹಾದ್ಯುತಿ ದ್ರೋಣನು ಬಲವಿದ್ದಷ್ಟು, ಉತ್ಸಾಹವಿದ್ದಷ್ಟು, ಸತ್ತ್ವವಿದ್ದಷ್ಟೂ ಹೋರಾಡುತ್ತಿರುವ ನಮ್ಮ ಸೇನೆಗಳಲ್ಲಿ ಸರ್ವರನ್ನೂ ಮೂರ್ಛೆಗೊಳಿಸಿ ಸಂಹರಿಸುತ್ತಿದ್ದಾನೆ.”
07101059a ತೇಷಾಂ ತದ್ವಚನಂ ಶ್ರುತ್ವಾ ಕ್ಷತ್ರಧರ್ಮಾ ವ್ಯವಸ್ಥಿತಃ|
07101059c ಅರ್ಧಚಂದ್ರೇಣ ಚಿಚ್ಚೇದ ದ್ರೋಣಸ್ಯ ಸಶರಂ ಧನುಃ||
ಅವರ ಆ ಮಾತನ್ನು ಕೇಳಿ ಅಲ್ಲಿಯೇ ನಿಂತಿದ್ದ ಕ್ಷತ್ರಧರ್ಮನು ಅರ್ಧಚಂದ್ರದಿಂದ ದ್ರೋಣನ ಧನುಸ್ಸನ್ನು ಬಾಣದೊಂದಿಗೆ ಕತ್ತರಿಸಿದನು.
07101060a ಸ ಸಂರಬ್ಧತರೋ ಭೂತ್ವಾ ದ್ರೋಣಃ ಕ್ಷತ್ರಿಯಮರ್ದನಃ|
07101060c ಅನ್ಯತ್ಕಾರ್ಮುಕಮಾದಾಯ ಭಾಸ್ವರಂ ವೇಗವತ್ತರಂ||
ಆಗ ಗಾಭರಿಗೊಂಡು ಕ್ಷತ್ರಿಯಮರ್ದನ ದ್ರೋಣನು ಇನ್ನೊಂದು ಹೊಳೆಯುವ ವೇಗವತ್ತರ ಬಿಲ್ಲನ್ನು ಎತ್ತಿಕೊಂಡನು.
07101061a ತತ್ರಾಧಾಯ ಶರಂ ತೀಕ್ಷ್ಣಂ ಭಾರಘ್ನಂ ವಿಮಲಂ ದೃಢಂ|
07101061c ಆಕರ್ಣಪೂರ್ಣಮಾಚಾರ್ಯೋ ಬಲವಾನಭ್ಯವಾಸೃಜತ್||
ಆಗ ಒಂದು ತೀಕ್ಷ್ಣ, ಭಾರವಾದುದನ್ನೂ ಹೊಡೆಯಬಲ್ಲ, ವಿಮಲ ಮತ್ತು ದೃಢ ಬಾಣವೊಂದನ್ನು ಹೂಡಿ ಆಚಾರ್ಯನು ಆಕರ್ಣಪೂರ್ಣವಾಗಿ ಎಳೆದು ಪ್ರಯೋಗಿಸಿದನು.
07101062a ಸ ಹತ್ವಾ ಕ್ಷತ್ರಧರ್ಮಾಣಂ ಜಗಾಮ ಧರಣೀತಲಂ|
07101062c ಸ ಭಿನ್ನಹೃದಯೋ ವಾಹಾದಪತನ್ಮೇದಿನೀತಲೇ||
ಅದು ಕ್ಷತ್ರಧರ್ಮನನ್ನು ಸಂಹರಿಸಿ ನೆಲವನ್ನು ಹೊಕ್ಕಿತು. ಅವನು ಹೃದಯವು ಒಡೆದು ವಾಹನದಿಂದ ಭೂಮಿಯ ಮೇಲೆ ಬಿದ್ದನು.
07101063a ತತಃ ಸೈನ್ಯಾನ್ಯಕಂಪಂತ ಧೃಷ್ಟದ್ಯುಮ್ನಸುತೇ ಹತೇ|
07101063c ಅಥ ದ್ರೋಣಂ ಸಮಾರೋಹಚ್ಚೇಕಿತಾನೋ ಮಹಾರಥಃ||
ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನು ಹಾಗೆ ಹತನಾಗಲು ಸೇನೆಗಳು ನಡುಗಿದವು. ಆಗ ಮಹಾರಥ ಚೇಕಿತಾನನು ದ್ರೋಣನ ಮೇಲೆ ಎರಗಿದನು.
07101064a ಸ ದ್ರೋಣಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ|
07101064c ಚತುರ್ಭಿಃ ಸಾರಥಿಂ ಚಾಸ್ಯ ಚತುರ್ಭಿಶ್ಚತುರೋ ಹಯಾನ್||
ಅವನು ದ್ರೋಣನ ಎದೆಗೆ ಗುರಿಯಿಟ್ಟು ಹತ್ತು ಬಾಣಗಳಿಂದ ಹೊಡೆದನು. ನಾಲ್ಕರಿಂದ ಸಾರಥಿಯನ್ನೂ ಮತ್ತು ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.
07101065a ತಸ್ಯಾಚಾರ್ಯಃ ಷೋಡಶಭಿರವಿಧ್ಯದ್ದಕ್ಷಿಣಂ ಭುಜಂ|
07101065c ಧ್ವಜಂ ಷೋಡಶಭಿರ್ಬಾಣೈರ್ಯಂತಾರಂ ಚಾಸ್ಯ ಸಪ್ತಭಿಃ||
ಆಚಾರ್ಯನು ಚೇಕಿತಾನನ ಬಲಭುಜಕ್ಕೆ ಹದಿನಾರು ಬಾಣಗಳಿಂದ ಹೊಡೆದು, ಇನ್ನೂ ಹದಿನಾರರಿಂದ ಧ್ವಜವನ್ನೂ, ಏಳರಿಂದ ಸಾರಥಿಯನ್ನೂ ಹೊಡೆದನು.
07101066a ತಸ್ಯ ಸೂತೇ ಹತೇ ತೇಽಶ್ವಾ ರಥಮಾದಾಯ ವಿದ್ರುತಾಃ|
07101066c ಸಮರೇ ಶರಸಂವೀತಾ ಭಾರದ್ವಾಜೇನ ಮಾರಿಷ||
ಮಾರಿಷ! ಸಮರದಲ್ಲಿ ಭಾರದ್ವಾಜನ ಬಾಣಗಳಿಂದ ಹೊಡೆಯಲ್ಪಟ್ಟು ಚೇಕಿತಾನನ ಸೂತನು ಹತನಾಗಲು ಕುದುರೆಗಳು ಅವನ ರಥವನ್ನೊಯ್ದು ದಿಕ್ಕಾಪಾಲಾಗಿ ಓಡತೊಡಗಿದವು.
07101067a ಚೇಕಿತಾನರಥಂ ದೃಷ್ಟ್ವಾ ವಿದ್ರುತಂ ಹತಸಾರಥಿಂ|
07101067c ಪಾಂಚಾಲಾನ್ಪಾಂಡವಾಂಶ್ಚೈವ ಮಹದ್ಭಯಮಥಾವಿಶತ್||
ಸಾರಥಿಯನ್ನು ಕಳೆದುಕೊಂಡು ಒಡಿಹೋಗುತ್ತಿರುವ ಚೇಕಿತಾನನ ರಥವನ್ನು ಕಂಡು ಪಾಂಚಾಲರು ಮತ್ತು ಪಾಂಡವರನ್ನು ಮಹಾ ಭಯವು ಆವರಿಸಿತು.
07101068a ತಾನ್ಸಮೇತಾನ್ರಣೇ ಶೂರಾಂಶ್ಚೇದಿಪಾಂಚಾಲಸೃಂಜಯಾನ್|
07101068c ಸಮಂತಾದ್ದ್ರಾವಯನ್ದ್ರೋಣೋ ಬಹ್ವಶೋಭತ ಮಾರಿಷ||
ಮಾರಿಷ! ರಣದಲ್ಲಿ ಶೂರ ಪಾಂಚಾಲ-ಸೃಂಜಯರು ಒಟ್ಟಿಗೇ ಸುತ್ತಲಿನಿಂದ ಆಕ್ರಮಣ ಮಾಡಲು ದ್ರೋಣನು ತುಂಬಾ ಶೋಭಿಸಿದನು.
07101069a ಆಕರ್ಣಪಲಿತಃ ಶ್ಯಾಮೋ ವಯಸಾಶೀತಿಕಾತ್ಪರಃ|
07101069c ರಣೇ ಪರ್ಯಚರದ್ದ್ರೋಣೋ ವೃದ್ಧಃ ಷೋಡಶವರ್ಷವತ್||
ವಯಸ್ಸಿನಲ್ಲಿ ಎಂಭತ್ತು[2] ವರ್ಷಕ್ಕೂ ಹೆಚ್ಚಿನ, ಶ್ಯಾಮವರ್ಣದ, ಕಿವಿಯವರೆಗೂ ಇಳಿಬಿದ್ದಿದ್ದ ಬಿಳಿಕೂದಲಿನ ವೃದ್ಧ ದ್ರೋಣನು ಹದಿನಾರು ವರ್ಷದವನಂತೆ ರಣದಲ್ಲಿ ಸಂಚರಿಸುತ್ತಿದ್ದನು.
07101070a ಅಥ ದ್ರೋಣಂ ಮಹಾರಾಜ ವಿಚರಂತಮಭೀತವತ್|
07101070c ವಜ್ರಹಸ್ತಮಮನ್ಯಂತ ಶತ್ರವಃ ಶತ್ರುಸೂದನಂ||
ಮಹಾರಾಜ! ಭೀತಿಯಿಲ್ಲದೇ ಸಂಚರಿಸುತ್ತಿದ್ದ ಶತ್ರುಸೂದನ ದ್ರೋಣನನ್ನು ಶತ್ರುಗಳೂ ಕೂಡ ಇವನು ವಜ್ರಹಸ್ತ ಇಂದ್ರನೇ ಹೌದು ಎಂದು ಅಂದುಕೊಂಡರು.
07101071a ತತೋಽಬ್ರವೀನ್ಮಹಾರಾಜ ದ್ರುಪದೋ ಬುದ್ಧಿಮಾನ್ನೃಪ|
07101071c ಲುಬ್ಧೋಽಯಂ ಕ್ಷತ್ರಿಯಾನ್ಹಂತಿ ವ್ಯಾಘ್ರಃ ಕ್ಷುದ್ರಮೃಗಾನಿವ||
ಮಹಾರಾಜ! ಆಗ ಬುದ್ಧಿಮಾನ್ ನೃಪ ದ್ರುಪದನು ಹೇಳಿದನು: “ಲುಬ್ಧನಾಗಿರುವ ಇವನು ಹುಲಿಯು ಕ್ಷುದ್ರಮೃಗಗಳನ್ನು ಕೊಲ್ಲುವಂತೆ ಕ್ಷತ್ರಿಯರನ್ನು ಸಂಹರಿಸುತ್ತಾನೆ.
07101072a ಕೃಚ್ಚ್ರಾನ್ದುರ್ಯೋಧನೋ ಲೋಕಾನ್ಪಾಪಃ ಪ್ರಾಪ್ಸ್ಯತಿ ದುರ್ಮತಿಃ|
07101072c ಯಸ್ಯ ಲೋಭಾದ್ವಿನಿಹತಾಃ ಸಮರೇ ಕ್ಷತ್ರಿಯರ್ಷಭಾಃ||
ಯಾರ ಲೋಭದಿಂದಾಗಿ ಈ ಸಮರದಲ್ಲಿ ಕ್ಷತ್ರಿಯರ್ಷಭರು ಹತರಾಗುತ್ತಿದ್ದಾರೋ ಆ ದುರ್ಮತಿ ದುರ್ಯೋಧನನು ಪಾಪ ಲೋಕಗಳನ್ನೂ ಕಷ್ಟಗಳನ್ನೂ ಅನುಭವಿಸುತ್ತಾನೆ.
07101073a ಶತಶಃ ಶೇರತೇ ಭೂಮೌ ನಿಕೃತ್ತಾ ಗೋವೃಷಾ ಇವ|
07101073c ರುಧಿರೇಣ ಪರೀತಾಂಗಾಃ ಶ್ವಸೃಗಾಲಾದನೀಕೃತಾಃ||
ಅವನಿಂದಾಗಿಯೇ ಈ ಕ್ಷತ್ರಿಯರು ಗಾಯಗೊಂಡ ಗೂಳಿಗಳಂತೆ ರಕ್ತದಿಂದ ತೋಯ್ದು ಭೂಮಿಯ ಮೇಲೆ ಮಲಗಿ ನಾಯಿ-ನರಿಗಳ ಪಾಲಾಗಿದ್ದಾರೆ!”
07101074a ಏವಮುಕ್ತ್ವಾ ಮಹಾರಾಜ ದ್ರುಪದೋಽಕ್ಷೌಹಿಣೀಪತಿಃ|
07101074c ಪುರಸ್ಕೃತ್ಯ ರಣೇ ಪಾರ್ಥಾನ್ದ್ರೋಣಮಭ್ಯದ್ರವದ್ದ್ರುತಂ||
ಮಹಾರಾಜ! ಹೀಗೆ ಹೇಳಿ ಅಕ್ಷೌಹಿಣೀಪತಿ ದ್ರುಪದನು ರಣದಲ್ಲಿ ಪಾರ್ಥರನ್ನು ಮುಂದಿಟ್ಟುಕೊಂಡು ದ್ರೋಣನನ್ನು ಆಕ್ರಮಣಿಸಿದನು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣಪರಾಕ್ರಮೇ ಏಕಾಧಿಕಶತತಮೋಽಧ್ಯಾಯಃ ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣಪರಾಕ್ರಮ ಎನ್ನುವ ನೂರಾಒಂದನೇ ಅಧ್ಯಾಯವು.
[1] ಜರಾಸಂಧನ ಮಗ ಸಹದೇವ
[2] ಕೆಲವೊಂದು ಸಂಪುಟಗಳಲ್ಲಿ ೮೫ ವರ್ಷ ವಯಸ್ಸು ತುಂಬಿದ ಎಂದಿದೆ.