ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೨೦೫
ತಾಳ್ಮೆ ಮತ್ತು ಸತ್ಯಶೀಲತೆಯಿಂದ ಶುಶ್ರೂಷೆ ಮಾಡುವುದೂ ತಪಸ್ಸೇ, ಆ ತಪಸ್ಸಿನ ಬಲದಿಂದಲೇ ಆ ಪತಿವ್ರತೆಯು ನಿನ್ನನ್ನು ಇಲ್ಲಿಗೆ ಕಳುಹಿಸಿದಳು ಎಂದು ವ್ಯಾಧನು ಕೌಶಿಕನಿಗೆ ಹೇಳಿ, ತನ್ನ ತಂದೆತಾಯಿಯರ ಬಳಿ ಹಿಂದಿರುಗಿ ಶುಶ್ರೂಷೆ ಮಾಡೆಂದು ಹೇಳುವುದು (೧-೧೦). ಧರ್ಮಾತ್ಮನಾದ ಅವನು ಶೂದ್ರಯೋನಿಯಲ್ಲಿ ಹೇಗೆ ಜನಿಸಿದನೆಂದು ಕೇಳಲು (೧೧-೨೦) ವ್ಯಾಧನು ತನ್ನ ಪೂರ್ವಜನ್ಮವೃತ್ತಾಂತವನ್ನು ಕೌಶಿಕನಿಗೆ ಹೇಳಿದುದು (೨೧-೨೯).
03205001 ಮಾರ್ಕಂಡೇಯ ಉವಾಚ|
03205001a ಗುರೂ ನಿವೇದ್ಯ ವಿಪ್ರಾಯ ತೌ ಮಾತಾಪಿತರಾವುಭೌ|
03205001c ಪುನರೇವ ಸ ಧರ್ಮಾತ್ಮಾ ವ್ಯಾಧೋ ಬ್ರಾಹ್ಮಣಮಬ್ರವೀತ್||
ಮಾರ್ಕಂಡೇಯನು ಹೇಳಿದನು: “ಹಿರಿಯರಾದ ತಂದೆ ತಾಯಂದಿರಿಬ್ಬರನ್ನೂ ವಿಪ್ರನಿಗೆ ಪರಿಚಯ ಮಾಡಿಸಿಕೊಟ್ಟು ಆ ಧರ್ಮಾತ್ಮ ವ್ಯಾಧನು ಬ್ರಾಹ್ಮಣನಿಗೆ ಪುನಃ ಹೇಳಿದನು:
03205002a ಪ್ರವೃತ್ತಚಕ್ಷುರ್ಜಾತೋಽಸ್ಮಿ ಸಂಪಶ್ಯ ತಪಸೋ ಬಲಂ|
03205002c ಯದರ್ಥಮುಕ್ತೋಽಸಿ ತಯಾ ಗಚ್ಚಸ್ವ ಮಿಥಿಲಾಮಿತಿ||
03205003a ಪತಿಶುಶ್ರೂಷಪರಯಾ ದಾಂತಯಾ ಸತ್ಯಶೀಲಯಾ|
03205003c ಮಿಥಿಲಾಯಾಂ ವಸನ್ವ್ಯಾಧಃ ಸ ತೇ ಧರ್ಮಾನ್ಪ್ರವಕ್ಷ್ಯತಿ||
“ಅಂತರ್ಗತ ದೃಷ್ಟಿಯನ್ನು ನೀಡಿರುವ ನನ್ನ ತಪಸ್ಸಿನ ಬಲವನ್ನು ನೋಡು. ಆದುದರಿಂದಲೇ ತಾಳ್ಮೆಯಿಂದ ಮತ್ತು ಸತ್ಯಶೀಲತೆಯಿಂದ ಪತಿಶುಶ್ರೂಷಣೆಯಲ್ಲಿ ನಿರತಳಾಗಿರುವ ಅವಳು ನಿನಗೆ “ಮಿಥಿಲೆಗೆ ಹೋಗು! ಮಿಥಿಲೆಯಲ್ಲಿ ವಾಸಿಸುವ ವ್ಯಾಧನು ನಿನಗೆ ಧರ್ಮಗಳ ಕುರಿತು ಹೇಳುತ್ತಾನೆ” ಎಂದು ಹೇಳಿದಳು.”
03205004 ಬ್ರಾಹ್ಮಣ ಉವಾಚ|
03205004a ಪತಿವ್ರತಾಯಾಃ ಸತ್ಯಾಯಾಃ ಶೀಲಾಢ್ಯಾಯಾ ಯತವ್ರತ|
03205004c ಸಂಸ್ಮೃತ್ಯ ವಾಕ್ಯಂ ಧರ್ಮಜ್ಞ ಗುಣವಾನಸಿ ಮೇ ಮತಃ||
ಬ್ರಾಹ್ಮಣನು ಹೇಳಿದನು: “ಧರ್ಮಜ್ಞ! ಯತವ್ರತ! ಆ ಪತಿವ್ರತೆ, ಸತ್ಯೆ, ಶೀಲಾಧ್ಯೆಯು ತಿಳಿದೇ ಹೇಳಿರಬೇಕು. ಏಕೆಂದರೆ ಅವೆಲ್ಲ ಗುಣಗಳೂ ನಿನ್ನಲ್ಲಿವೆ ಎಂದು ನನಗನ್ನಿಸುತ್ತದೆ.”
03205005 ವ್ಯಾಧ ಉವಾಚ|
03205005a ಯತ್ತದಾ ತ್ವಂ ದ್ವಿಜಶ್ರೇಷ್ಠ ತಯೋಕ್ತೋ ಮಾಂ ಪ್ರತಿ ಪ್ರಭೋ|
03205005c ದೃಷ್ಟಮೇತತ್ತಯಾ ಸಮ್ಯಗೇಕಪತ್ನ್ಯಾ ನ ಸಂಶಯಃ||
ವ್ಯಾಧನು ಹೇಳಿದನು: “ದ್ವಿಜಶ್ರೇಷ್ಠ! ಪ್ರಭೋ! ನನ್ನ ಕುರಿತು ಅವಳು ನಿನಗೆ ಏನು ಹೇಳಿದ್ದಾಳೋ ಅದನ್ನು ಅವಳು ಎಲ್ಲವನ್ನು ನೋಡಿಯೇ ಹೇಳಿದ್ದಾಳೆ ಎನ್ನುವುದರಲ್ಲಿ ಸಂಶಯವಿಲ್ಲ.
03205006a ತ್ವದನುಗ್ರಹಬುದ್ಧ್ಯಾ ತು ವಿಪ್ರೈತದ್ದರ್ಶಿತಂ ಮಯಾ|
03205006c ವಾಕ್ಯಂ ಚ ಶೃಣು ಮೇ ತಾತ ಯತ್ತೇ ವಕ್ಷ್ಯೇ ಹಿತಂ ದ್ವಿಜ||
ವಿಪ್ರ! ದ್ವಿಜ! ಮಿತ್ರ! ಅನುಗ್ರಹಿಸಲೆಂದೇ ನಾನು ನಿನಗೆ ಇವೆಲ್ಲವನ್ನೂ ತಿಳಿಸಿದ್ದೇನೆ. ಈಗ ಕೇಳು. ನಿನಗೆ ಹಿತವಾದುದು ಏನೆಂದು ಹೇಳುತ್ತೇನೆ.
03205007a ತ್ವಯಾ ವಿನಿಕೃತಾ ಮಾತಾ ಪಿತಾ ಚ ದ್ವಿಜಸತ್ತಮ|
03205007c ಅನಿಸೃಷ್ಟೋಽಸಿ ನಿಷ್ಕ್ರಾಂತೋ ಗೃಹಾತ್ತಾಭ್ಯಾಮನಿಂದಿತ|
03205007e ವೇದೋಚ್ಚಾರಣಕಾರ್ಯಾರ್ಥಮಯುಕ್ತಂ ತತ್ತ್ವಯಾ ಕೃತಂ||
ದ್ವಿಜಸತ್ತಮ! ನೀನು ನಿನ್ನ ತಾಯಿ-ತಂದೆಯರೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ. ಅನಿಂದಿತ! ಅವರಿಗೆ ಹೇಳದೇ ನೀನು ವೇದೋಚ್ಛಾರಣಕ್ಕೆಂದು ಮನೆಯಿಂದ ಹೊರಗೆ ಹೋದೆ.
03205008a ತವ ಶೋಕೇನ ವೃದ್ಧೌ ತಾವಂಧೌ ಜಾತೌ ತಪಸ್ವಿನೌ|
03205008c ತೌ ಪ್ರಸಾದಯಿತುಂ ಗಚ್ಚ ಮಾ ತ್ವಾ ಧರ್ಮೋಽತ್ಯಗಾನ್ಮಹಾನ್||
ನಿನ್ನ ಶೋಕದಿಂದ ಆ ವೃದ್ಧ ತಪಸ್ವಿಗಳು ಕುರುಡರಾಗಿದ್ದಾರೆ. ಅವರನ್ನು ಸಂತವಿಸಲು ಹೋಗು. ನೀನು ಈ ಮಹಾ ಧರ್ಮದ ಮಾರ್ಗವನ್ನು ತಪ್ಪದಿರು.
03205009a ತಪಸ್ವೀ ತ್ವಂ ಮಹಾತ್ಮಾ ಚ ಧರ್ಮೇ ಚ ನಿರತಃ ಸದಾ|
03205009c ಸರ್ವಮೇತದಪಾರ್ಥಂ ತೇ ಕ್ಷಿಪ್ರಂ ತೌ ಸಂಪ್ರಸಾದಯ||
ಮಹಾತ್ಮಾ! ನೀನು ತಪಸ್ವಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವೆ. ಆದರೆ ಇವೆಲ್ಲವೂ ನಿನಗೆ ಅಪಾರ್ಥಗಳಾಗಿವೆ. ತ್ವರೆಮಾಡಿ ಅವರೀರ್ವರನ್ನು ಸಂತವಿಸು.
03205010a ಶ್ರದ್ದಧಸ್ವ ಮಮ ಬ್ರಹ್ಮನ್ನಾನ್ಯಥಾ ಕರ್ತುಮರ್ಹಸಿ|
03205010c ಗಮ್ಯತಾಮದ್ಯ ವಿಪ್ರರ್ಷೇ ಶ್ರೇಯಸ್ತೇ ಕಥಯಾಮ್ಯಹಂ||
ಬ್ರಹ್ಮನ್! ನನ್ನಲ್ಲಿ ಶ್ರದ್ಧೆಯನ್ನಿಡು. ಅನ್ಯಥಾ ಮಾಡಬೇಡ! ವಿಪ್ರರ್ಷೇ! ಇಂದೇ ಹೋಗು. ನಿನಗೆ ಒಳ್ಳೆಯದಾಗುತ್ತದೆಯೆಂದು ನಾನು ಹೇಳುತ್ತೇನೆ.”
03205011 ಬ್ರಾಹ್ಮಣ ಉವಾಚ|
03205011a ಯದೇತದುಕ್ತಂ ಭವತಾ ಸರ್ವಂ ಸತ್ಯಮಸಂಶಯಂ|
03205011c ಪ್ರೀತೋಽಸ್ಮಿ ತವ ಧರ್ಮಜ್ಞ ಸಾಧ್ವಾಚಾರ ಗುಣಾನ್ವಿತ||
ಬ್ರಾಹ್ಮಣನು ಹೇಳಿದನು: “ನೀನು ಹೇಳುವುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮಜ್ಞ! ಸಾಧ್ವಾಚಾರ ಗುಣಾನ್ವಿತ! ನಿನ್ನಿಂದ ನಾನು ಸಂತೋಷಗೊಂಡಿದ್ದೇನೆ.”
03205012 ವ್ಯಾಧ ಉವಾಚ|
03205012a ದೈವತಪ್ರತಿಮೋ ಹಿ ತ್ವಂ ಯಸ್ತ್ವಂ ಧರ್ಮಮನುವ್ರತಃ|
03205012c ಪುರಾಣಂ ಶಾಶ್ವತಂ ದಿವ್ಯಂ ದುಷ್ಪ್ರಾಪಮಕೃತಾತ್ಮಭಿಃ||
ವ್ಯಾಧನು ಹೇಳಿದನು: “ನೀನು ದೈವತ ಪ್ರತಿಮೆಯಾಗಿದ್ದೀಯೆ. ನೀನು ಅನುಸರಿಸುವ ಧರ್ಮವು ಪುರಾಣವು, ಶಾಶ್ವತವು, ದಿವ್ಯವು. ಮತ್ತು ಕೃತಾತ್ಮರಿಗೂ ಕಷ್ಟಸಾಧ್ಯವಾದುದು.
03205013a ಅತಂದ್ರಿತಃ ಕುರು ಕ್ಷಿಪ್ರಂ ಮಾತಾಪಿತ್ರೋರ್ಹಿ ಪೂಜನಂ|
03205013c ಅತಃ ಪರಮಹಂ ಧರ್ಮಂ ನಾನ್ಯಂ ಪಶ್ಯಾಮಿ ಕಂ ಚನ||
ಆದರೆ ಬೇಗನೆ ಹೋಗಿ ನೀನು ನಿನ್ನ ಮಾತಾಪಿತೃಗಳ ಪೂಜನೆಯನ್ನು ಮಾಡು. ಇದಕ್ಕಿಂತ ಹೆಚ್ಚಿನ ಧರ್ಮವನ್ನು ನಾನು ಬೇರೆ ಯಾವುದರಲ್ಲಿಯೂ ಕಾಣುವುದಿಲ್ಲ.”
03205014 ಬ್ರಾಹ್ಮಣ ಉವಾಚ|
03205014a ಇಹಾಹಮಾಗತೋ ದಿಷ್ಟ್ಯಾ ದಿಷ್ಟ್ಯಾ ಮೇ ಸಂಗತಂ ತ್ವಯಾ|
03205014c ಈದೃಶಾ ದುರ್ಲಭಾ ಲೋಕೇ ನರಾ ಧರ್ಮಪ್ರದರ್ಶಕಾಃ||
ಬ್ರಾಹ್ಮಣನು ಹೇಳಿದನು: “ನಾನು ಇಲ್ಲಿಗೆ ಬಂದುದು ಒಳ್ಳೆಯದಾಯಿತು. ನಿನ್ನನ್ನು ಭೇಟಿಮಾಡಿದೆನೆಂದು ಒಳ್ಳೆಯದಾಯಿತು. ಈ ರೀತಿಯ ಧರ್ಮಪ್ರದರ್ಶಕ ನರರು ಲೋಕದಲ್ಲಿ ದುರ್ಲಭ.
03205015a ಏಕೋ ನರಸಹಸ್ರೇಷು ಧರ್ಮವಿದ್ವಿದ್ಯತೇ ನ ವಾ|
03205015c ಪ್ರೀತೋಽಸ್ಮಿ ತವ ಸತ್ಯೇನ ಭದ್ರಂ ತೇ ಪುರುಷೋತ್ತಮ||
ಸಾವಿರರಲ್ಲಿ ಒಬ್ಬ ನರನು ಧರ್ಮವನ್ನು ತಿಳಿದಿರಬಹುದು. ಪುರುಷೋತ್ತಮ! ನಿನ್ನ ಸತ್ಯದಿಂದ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ!
03205016a ಪತಮಾನೋ ಹಿ ನರಕೇ ಭವತಾಸ್ಮಿ ಸಮುದ್ಧೃತಃ|
03205016c ಭವಿತವ್ಯಮಥೈವಂ ಚ ಯದ್ದೃಷ್ಟೋಽಸಿ ಮಯಾನಘ||
ನರಕದಲ್ಲಿ ಬೀಳುತ್ತಿದ್ದ ನನ್ನನ್ನು ನೀನು ಮೇಲಕ್ಕೆತ್ತಿದ್ದೀಯೆ. ಅನಘ! ನೀನು ನನ್ನ ದಾರಿಯಲ್ಲಿ ದೊರೆಯಬೇಕೆಂದು ಮೊದಲೇ ನಿರ್ಧಿತವಾಗಿರಬೇಕು.
03205017a ರಾಜಾ ಯಯಾತಿರ್ದೌಹಿತ್ರೈಃ ಪತಿತಸ್ತಾರಿತೋ ಯಥಾ|
03205017c ಸದ್ಭಿಃ ಪುರುಷಶಾರ್ದೂಲ ತಥಾಹಂ ಭವತಾ ತ್ವಿಹ||
ಪುರುಷಶಾರ್ದೂಲ! ರಾಜಾ ಯಯಾತಿಯು ಕೆಳಗೆ ಬೀಳುತ್ತಿರುವಾಗ ಹೇಗೆ ಅವನ ಉತ್ತಮ ಮಗಳ ಮಕ್ಕಳಿಂದ ಪಾರುಗೊಳಿಸಲ್ಪಟ್ಟನೋ[1] ಹಾಗೆ ನಿನ್ನಿಂದ ನಾನು ಪಾರುಗೊಂಡೆ.
03205018a ಮಾತಾಪಿತೃಭ್ಯಾಂ ಶುಶ್ರೂಷಾಂ ಕರಿಷ್ಯೇ ವಚನಾತ್ತವ|
03205018c ನಾಕೃತಾತ್ಮಾ ವೇದಯತಿ ಧರ್ಮಾಧರ್ಮವಿನಿಶ್ಚಯಂ||
ನಿನ್ನ ಮಾತಿನಂತೆ ಮಾತಾಪಿತೃಗಳ ಶುಶ್ರೂಷೆಯನ್ನು ಮಾಡುತ್ತೇನೆ. ಏಕೆಂದರೆ ಅಕೃತಾತ್ಮನು ಧರ್ಮಾಧರ್ಮ ವಿನಿಶ್ಚಿಯವನ್ನು ತಿಳಿದಿರಲಾರ.
03205019a ದುರ್ಜ್ಞೇಯಃ ಶಾಶ್ವತೋ ಧರ್ಮಃ ಶೂದ್ರಯೋನೌ ಹಿ ವರ್ತತಾ|
03205019c ನ ತ್ವಾಂ ಶೂದ್ರಮಹಂ ಮನ್ಯೇ ಭವಿತವ್ಯಂ ಹಿ ಕಾರಣಂ|
03205019e ಯೇನ ಕರ್ಮವಿಪಾಕೇನ ಪ್ರಾಪ್ತೇಯಂ ಶೂದ್ರತಾ ತ್ವಯಾ||
ಶೂದ್ರಯೋನಿಯಲ್ಲಿ ಜನಿಸಿದವನಿಗೆ ಶಾಶ್ವತ ಧರ್ಮವನ್ನು ಅರಿತಿರುವುದು ಅಸಾಧ್ಯವಾದುದರಿಂದ ನಾನು ನಿನ್ನನ್ನು ಶೂದ್ರನೆಂದು ಪರಿಗಣಿಸುವುದಿಲ್ಲ. ನೀನು ಯಾವ ಕರ್ಮವಿಪಾಕದಿಂದ ಈ ಶೂದ್ರತ್ವವನ್ನು ಪಡೆದಿರುವೆಯೋ ಅದೂ ಕೂಡ ಭವಿತವ್ಯದ ಕಾರಣದಿಂದಿರಬಹುದು.
03205020a ಏತದಿಚ್ಚಾಮಿ ವಿಜ್ಞಾತುಂ ತತ್ತ್ವೇನ ಹಿ ಮಹಾಮತೇ|
03205020c ಕಾಮಯಾ ಬ್ರೂಹಿ ಮೇ ತಥ್ಯಂ ಸರ್ವಂ ತ್ವಂ ಪ್ರಯತಾತ್ಮವಾನ್||
ಮಹಾಮತೇ! ಇದನ್ನು ತಿಳಿಯಲು ಬಯಸುತ್ತೇನೆ. ಪ್ರಯತಾತ್ಮವಾನ್! ಇದರ ತತ್ವವನ್ನು ನಿನಗಿಷ್ಟವಾದರೆ ಎಲ್ಲವನ್ನೂ ಇದ್ದಹಾಗೆ ನನಗೆ ಹೇಳುವವನಾಗು.”
03205021 ವ್ಯಾಧ ಉವಾಚ|
03205021a ಅನತಿಕ್ರಮಣೀಯಾ ಹಿ ಬ್ರಾಹ್ಮಣಾ ವೈ ದ್ವಿಜೋತ್ತಮ|
03205021c ಶೃಣು ಸರ್ವಮಿದಂ ವೃತ್ತಂ ಪೂರ್ವದೇಹೇ ಮಮಾನಘ||
ವ್ಯಾಧನು ಹೇಳಿದನು: “ದ್ವಿಜೋತ್ತಮ! ಬ್ರಾಹ್ಮಣರು ಅನತಿಕ್ರಮಣೀಯರಲ್ಲವೇ? ಅನಘ! ನನ್ನ ಪೂರ್ವದೇಹದ ಎಲ್ಲ ಈ ವೃತ್ತಾಂತವನ್ನೂ ಕೇಳು.
03205022a ಅಹಂ ಹಿ ಬ್ರಾಹ್ಮಣಃ ಪೂರ್ವಮಾಸಂ ದ್ವಿಜವರಾತ್ಮಜ|
03205022c ವೇದಾಧ್ಯಾಯೀ ಸುಕುಶಲೋ ವೇದಾಂಗಾನಾಂ ಚ ಪಾರಗಃ|
03205022e ಆತ್ಮದೋಷಕೃತೈರ್ಬ್ರಹ್ಮನ್ನವಸ್ಥಾಂ ಪ್ರಾಪ್ತವಾನಿಮಾಂ||
ದ್ವಿಜವರಾತ್ಮಜ! ಹಿಂದೆ ನಾನೂ ಕೂಡ ವಿದ್ಯಾಧ್ಯಾಯೀ, ಸುಕುಶಲ, ವೇದಾಂಗಗಳ ಪಾರಂಗತ ಬ್ರಾಹ್ಮಣನಾಗಿದ್ದೆ. ಬ್ರಹ್ಮನ್! ನಾನೇ ಮಾಡಿದ ದೋಷದಿಂದ ಈ ಅವಸ್ಥೆಯನ್ನು ಪಡೆದಿದ್ದೇನೆ.
03205023a ಕಶ್ಚಿದ್ರಾಜಾ ಮಮ ಸಖಾ ಧನುರ್ವೇದಪರಾಯಣಃ|
03205023c ಸಂಸರ್ಗಾದ್ಧನುಷಿ ಶ್ರೇಷ್ಠಸ್ತತೋಽಹಮಭವಂ ದ್ವಿಜ||
ದ್ವಿಜ! ಯಾರೋ ಒಬ್ಬ ಧನುರ್ವೇದಪರಾಯಣ ರಾಜನು ನನ್ನ ಸಖನಾಗಿದ್ದನು. ಅವನ ಸಂಸರ್ಗದಿಂದ ನಾನೂ ಕೂಡ ಶ್ರೇಷ್ಠ ಧನುಷಿಯಾದೆ.
03205024a ಏತಸ್ಮಿನ್ನೇವ ಕಾಲೇ ತು ಮೃಗಯಾಂ ನಿರ್ಗತೋ ನೃಪಃ|
03205024c ಸಹಿತೋ ಯೋಧಮುಖ್ಯೈಶ್ಚ ಮಂತ್ರಿಭಿಶ್ಚ ಸುಸಂವೃತಃ|
03205024e ತತೋಽಭ್ಯಹನ್ಮೃಗಾಂಸ್ತತ್ರ ಸುಬಹೂನಾಶ್ರಮಂ ಪ್ರತಿ||
ಹೀಗಿರುವಾಗ ಒಮ್ಮೆ ನೃಪನು ಸೇನಾಪತಿಗಳೊಂದಿಗೆ ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟು ಬೇಟೆಗೆ ಹೊರಟನು. ಒಂದು ಆಶ್ರಮದ ಬಳಿ ಬಹಳಷ್ಟು ಜಿಂಕೆಗಳನ್ನು ಅವನು ಬೇಟೆಯಾಡಿದನು.
03205025a ಅಥ ಕ್ಷಿಪ್ತಃ ಶರೋ ಘೋರೋ ಮಯಾಪಿ ದ್ವಿಜಸತ್ತಮ|
03205025c ತಾಡಿತಶ್ಚ ಮುನಿಸ್ತೇನ ಶರೇಣಾನತಪರ್ವಣಾ||
ದ್ವಿಜಸತ್ತಮ! ಆಗ ನಾನೂ ಕೂಡ ಘೋರವಾದ ಬಾಣವನ್ನು ಬಿಟ್ಟೆನು. ಆ ಶರವು ಒಂದು ಮುನಿಯನ್ನು ಹೊಡೆದು ಮೊಂಡಾಯಿತು.
03205026a ಭೂಮೌ ನಿಪತಿತೋ ಬ್ರಹ್ಮನ್ನುವಾಚ ಪ್ರತಿನಾದಯನ್|
03205026c ನಾಪರಾಧ್ಯಾಮ್ಯಹಂ ಕಿಂ ಚಿತ್ಕೇನ ಪಾಪಮಿದಂ ಕೃತಂ||
ಭೂಮಿಯಲ್ಲಿ ಬಿದ್ದ ಬ್ರಾಹ್ಮಣನು ಜೋರಾಗಿ ಹೇಳಿದನು: “ನಾನು ಏನೂ ಅಪರಾಧವನ್ನು ಮಾಡಲಿಲ್ಲ. ಈ ಪಾಪವನ್ನು ಮಾಡಿದವನು ಯಾರು?”
03205027a ಮನ್ವಾನಸ್ತಂ ಮೃಗಂ ಚಾಹಂ ಸಂಪ್ರಾಪ್ತಃ ಸಹಸಾ ಮುನಿಂ|
03205027c ಅಪಶ್ಯಂ ತಮೃಷಿಂ ವಿದ್ಧಂ ಶರೇಣಾನತಪರ್ವಣಾ|
03205027e ತಮುಗ್ರತಪಸಂ ವಿಪ್ರಂ ನಿಷ್ಟನಂತಂ ಮಹೀತಲೇ||
03205028a ಅಕಾರ್ಯಕರಣಾಚ್ಚಾಪಿ ಭೃಶಂ ಮೇ ವ್ಯಥಿತಂ ಮನಃ|
ಅದು ಮೃಗವೆಂದು ತಿಳಿದು ನಾನು ಒಮ್ಮೆಲೇ ಮುನಿಯ ಬಳಿಸಾರಿ ಆ ಋಷಿಯ ದೇಹವನ್ನು ನನ್ನ ಬಾಣವು ಸೀಳಿದ್ದುದನ್ನು ನೋಡಿದೆ. ನನ್ನ ಈ ಕೆಟ್ಟ ಕೆಲಸದಿಂದ ಮನಸ್ಸು ತುಂಬಾ ವ್ಯಥಿತಗೊಂಡಿತು. ಆಗ ನೆಲದಮೇಲೆ ಬಿದ್ದು ನರಳುತ್ತಿದ್ದ ಆ ಉಗ್ರತಪಸ್ವಿಗೆ ಹೇಳಿದೆನು.
03205028c ಅಜಾನತಾ ಕೃತಮಿದಂ ಮಯೇತ್ಯಥ ತಮಬ್ರುವಂ|
03205028e ಕ್ಷಂತುಮರ್ಹಸಿ ಮೇ ಬ್ರಹ್ಮನ್ನಿತಿ ಚೋಕ್ತೋ ಮಯಾ ಮುನಿಃ||
“ಬ್ರಹ್ಮನ್! ತಿಳಿಯದೇ ಈ ಕೆಲಸವನ್ನು ನಾನು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಬೇಕು” ಎಂದು ಮುನಿಗೆ ಹೇಳಿದೆನು.
03205029a ತತಃ ಪ್ರತ್ಯಬ್ರವೀದ್ವಾಕ್ಯಮೃಷಿರ್ಮಾಂ ಕ್ರೋಧಮೂರ್ಚಿತಃ|
03205029c ವ್ಯಾಧಸ್ತ್ವಂ ಭವಿತಾ ಕ್ರೂರ ಶೂದ್ರಯೋನಾವಿತಿ ದ್ವಿಜ||
ಆಗ ಕ್ರೋಧಮೂರ್ಛಿತನಾದ ಋಷಿಯು ನನಗೆ ಉತ್ತರಿಸಿದನು: “ಕ್ರೂರ! ದ್ವಿಜ! ನೀನು ಶೂದ್ರ ವ್ಯಾಧನಾಗುತ್ತೀಯೆ!””
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ಪಂಚಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಐದನೆಯ ಅಧ್ಯಾಯವು.
[1]ಈ ವೃತ್ತಾಂತವು ಉದ್ಯೋಗಪರ್ವದ ಭಗವದ್ಯಾನಪರ್ವದಲ್ಲಿ ವಿಸ್ತಾರವಾಗಿ ಬರುತ್ತದೆ.