ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೨೦೪
ತನ್ನ ಧರ್ಮವನ್ನು ಪ್ರತ್ಯಕ್ಷವಾಗಿ ನೋಡೆಂದು ವ್ಯಾಧನು ಕೌಶಿಕನನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ತನ್ನ ವೃದ್ಧ ತಂದೆ-ತಾಯಿಯರನ್ನು ತೋರಿಸಿದುದು (೧-೧೫). ವೃದ್ಧ ತಂದೆತಾಯಿಯರ ಸೇವೆಯೇ ತನ್ನ ಪರಮ ಧರ್ಮವೆಂದು ವಿವರಿಸಿದುದು (೧೬-೨೭).
03204001a ಏವಂ ಸಂಕಥಿತೇ ಕೃತ್ಸ್ನೇ ಮೋಕ್ಷಧರ್ಮೇ ಯುಧಿಷ್ಠಿರ|
03204001c ದೃಢಂ ಪ್ರೀತಮನಾ ವಿಪ್ರೋ ಧರ್ಮವ್ಯಾಧಮುವಾಚ ಹ||
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಈ ರೀತಿ ಮೋಕ್ಷಧರ್ಮದ ಕುರಿತು ವಿವರಿಸಿ ಹೇಳಲು ನಿಶ್ಚಯವಾಗಿಯೂ ಸಂತೋಷಗೊಂಡ ವಿಪ್ರನು ಧರ್ಮವ್ಯಾಧನಿಗೆ ಹೇಳಿದನು:
03204002a ನ್ಯಾಯಯುಕ್ತಮಿದಂ ಸರ್ವಂ ಭವತಾ ಪರಿಕೀರ್ತಿತಂ|
03204002c ನ ತೇಽಸ್ತ್ಯವಿದಿತಂ ಕಿಂ ಚಿದ್ಧರ್ಮೇಷ್ವಿಹ ಹಿ ದೃಶ್ಯತೇ||
“ನೀನು ಹೇಳಿದುದೆಲ್ಲವೂ ನ್ಯಾಯಯುಕ್ತವಾಗಿವೆ. ಧರ್ಮದ ಕುರಿತು ನಿನಗೆ ತಿಳಿಯದೇ ಇರುವುದು ಏನೂ ಇಲ್ಲವೆಂದು ಕಾಣುತ್ತದೆ.”
03204003 ವ್ಯಾಧ ಉವಾಚ|
03204003a ಪ್ರತ್ಯಕ್ಷಂ ಮಮ ಯೋ ಧರ್ಮಸ್ತಂ ಪಶ್ಯ ದ್ವಿಜಸತ್ತಮ|
03204003c ಯೇನ ಸಿದ್ಧಿರಿಯಂ ಪ್ರಾಪ್ತಾ ಮಯಾ ಬ್ರಾಹ್ಮಣಪುಂಗವ||
ವ್ಯಾಧನು ಹೇಳಿದನು: “ದ್ವಿಜಸತ್ತಮ! ಬ್ರಾಹ್ಮಣ ಪುಂಗವ! ನನ್ನ ಧರ್ಮವೇನೆನ್ನುವುದನ್ನು ಮತ್ತು ಯಾವುದರಿಂದ ನಾನು ಈ ಸಿದ್ಧಿಯನ್ನು ಪಡೆದಿದ್ದೇನೆ ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ನೋಡು!
03204004a ಉತ್ತಿಷ್ಠ ಭಗವನ್ ಕ್ಷಿಪ್ರಂ ಪ್ರವಿಶ್ಯಾಭ್ಯಂತರಂ ಗೃಹಂ|
03204004c ದ್ರಷ್ಟುಮರ್ಹಸಿ ಧರ್ಮಜ್ಞ ಮಾತರಂ ಪಿತರಂ ಚ ಮೇ||
ಭಗವನ್! ಧರ್ಮಜ್ಞ! ಕೂಡಲೇ ಏಳು! ಮನೆಯ ಒಳಗೆ ಪ್ರವೇಶಿಸು. ನನ್ನ ತಾಯಿ-ತಂದೆಯರನ್ನು ನೀನು ನೋಡಬೇಕು.””
03204005 ಮಾರ್ಕಂಡೇಯ ಉವಾಚ|
03204005a ಇತ್ಯುಕ್ತಃ ಸ ಪ್ರವಿಶ್ಯಾಥ ದದರ್ಶ ಪರಮಾರ್ಚಿತಂ|
03204005c ಸೌಧಂ ಹೃದ್ಯಂ ಚತುಃಶಾಲಮತೀವ ಚ ಮನೋಹರಂ||
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಲು ಅವನು ಒಳಗೆ ಪ್ರವೇಶಿಸಿ ಸುಂದರವಾದ ಮನೆಯನ್ನು ನೋಡಿದನು. ಅದು ನಾಲ್ಕು ಕೋಣೆಗಳಿಂದ ಕೂಡಿತ್ತು. ಅತೀವ ಮನೋಹರವಾಗಿತ್ತು.
03204006a ದೇವತಾಗೃಹಸಂಕಾಶಂ ದೈವತೈಶ್ಚ ಸುಪೂಜಿತಂ|
03204006c ಶಯನಾಸನಸಂಬಾಧಂ ಗಂಧೈಶ್ಚ ಪರಮೈರ್ಯುತಂ||
ದೇವತೆಗಳಿಂದ ಸುಪೂಜಿತವಾದ ದೇವತೆಗಳ ಮನೆಯಂತಿದ್ದ ಅದು ಸುಂದರ ಆಸನ ಹಾಸಿಗೆಗಳಿಂದ ಕೂಡಿತ್ತು. ಪರಮ ಸುಗಂಧದಿಂದ ಸೂಸುತ್ತಿತ್ತು.
03204007a ತತ್ರ ಶುಕ್ಲಾಂಬರಧರೌ ಪಿತರಾವಸ್ಯ ಪೂಜಿತೌ|
03204007c ಕೃತಾಹಾರೌ ಸುತುಷ್ಟೌ ತಾವುಪವಿಷ್ಟೌ ವರಾಸನೇ|
03204007e ಧರ್ಮವ್ಯಾಧಸ್ತು ತೌ ದೃಷ್ಟ್ವಾ ಪಾದೇಷು ಶಿರಸಾಪತತ್||
ಅಲ್ಲಿ ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಸುಪೂಜಿತರಾದ, ಊಟಮಾಡಿ ತುಷ್ಟರಾಗಿ ವರಾಸನದಲ್ಲಿ ಕುಳಿತಿದ್ದ ಅವನ ತಂದೆತಾಯಿಯರನ್ನು ಧರ್ಮವ್ಯಾಧನು ನೋಡಿ ಅವರ ಪಾದಗಳಲ್ಲಿ ತನ್ನ ಶಿರವನ್ನಿಟ್ಟನು.
03204008 ವೃದ್ಧೌ ಊಚತುಃ|
03204008a ಉತ್ತಿಷ್ಠೋತ್ತಿಷ್ಠ ಧರ್ಮಜ್ಞ ಧರ್ಮಸ್ತ್ವಾಮಭಿರಕ್ಷತು|
03204008c ಪ್ರೀತೌ ಸ್ವಸ್ತವ ಶೌಚೇನ ದೀರ್ಘಮಾಯುರವಾಪ್ನುಹಿ|
03204008e ಸತ್ಪುತ್ರೇಣ ತ್ವಯಾ ಪುತ್ರ ನಿತ್ಯಕಾಲಂ ಸುಪೂಜಿತೌ||
ವೃದ್ಧರು ಹೇಳಿದರು: “ಧರ್ಮಜ್ಞ! ಮೇಲೇಳು! ಧರ್ಮವು ನಿನ್ನನ್ನು ರಕ್ಷಿಸಲಿ. ನಿನ್ನ ಶುಚಿತ್ವದಿಂದ ಪ್ರೀತರಾಗಿದ್ದೇವೆ. ದೀರ್ಘ ಆಯುಸ್ಸನ್ನು ಹೊಂದುತ್ತೀಯೆ. ಪುತ್ರ! ಸತ್ಪುತ್ರನಾದ ನಿನ್ನಿಂದ ನಿತ್ಯಕಾಲವೂ ನಾವು ಸುಪೂಜಿತರಾಗಿದ್ದೇವೆ.
03204009a ನ ತೇಽನ್ಯದ್ದೈವತಂ ಕಿಂ ಚಿದ್ದೈವತೇಷ್ವಪಿ ವರ್ತತೇ|
03204009c ಪ್ರಯತತ್ವಾದ್ದ್ವಿಜಾತೀನಾಂ ದಮೇನಾಸಿ ಸಮನ್ವಿತಃ||
ದೇವತೆಗಳಲ್ಲಿಯೂ ಕೂಡ ನಿನಗೆ ಅನ್ಯ ದೇವತೆಗಳಿಲ್ಲ. ಪ್ರಯತ್ನಪಟ್ಟು ನೀನು ದ್ವಿಜಾತಿಯವರ ದಮಗಳಿಂದ ಸಮನ್ವಿತನಾಗಿದ್ದೀಯೆ.
03204010a ಪಿತುಃ ಪಿತಾಮಹಾ ಯೇ ಚ ತಥೈವ ಪ್ರಪಿತಾಮಹಾಃ|
03204010c ಪ್ರೀತಾಸ್ತೇ ಸತತಂ ಪುತ್ರ ದಮೇನಾವಾಂ ಚ ಪೂಜಯಾ||
ಪುತ್ರ! ನಿನ್ನ ಈ ದಮ ಮತ್ತು ಪೂಜನೆಯಿಂದ ಪಿತ ಪಿತಾಮಹರು ಮತ್ತು ಪ್ರಪಿತಾಮಹರೂ ಪ್ರೀತರಾಗಿದ್ದಾರೆ.
03204011a ಮನಸಾ ಕರ್ಮಣಾ ವಾಚಾ ಶುಶ್ರೂಷಾ ನೈವ ಹೀಯತೇ|
03204011c ನ ಚಾನ್ಯಾ ವಿತಥಾ ಬುದ್ಧಿರ್ದೃಶ್ಯತೇ ಸಾಂಪ್ರತಂ ತವ||
ಮನಸಾ, ಕರ್ಮಣಾ, ವಾಚಾ ನೀನು ನಮ್ಮ ಶುಶ್ರೂಷೆಯನ್ನು ಕಡೆಗಣಿಸಿಲ್ಲ. ಈಗಲೂ ಕೂಡ ನಿನ್ನ ಬುದ್ಧಿಯಲ್ಲಿ ಬೇರೆ ಏನೂ ಕಾಣುತ್ತಿಲ್ಲವೆಂದು ನಮಗನ್ನಿಸುತ್ತದೆ.
03204012a ಜಾಮದಗ್ನ್ಯೇನ ರಾಮೇಣ ಯಥಾ ವೃದ್ಧೌ ಸುಪೂಜಿತೌ|
03204012c ತಥಾ ತ್ವಯಾ ಕೃತಂ ಸರ್ವಂ ತದ್ವಿಶಿಷ್ಟಂ ಚ ಪುತ್ರಕ||
ಪುತ್ರಕ! ಜಾಮದಗ್ನ್ಯ ರಾಮನಿಂದ ವೃದ್ಧರು ಹೇಗೆ ಸುಪೂಜಿತರಾಗಿದ್ದರೋ ಹಾಗೆ ನೀನೂ ಕೂಡ ಎಲ್ಲ ವಿಶಿಷ್ಟಗಳನ್ನೂ ಮಾಡಿದ್ದೀಯೆ.””
03204013 ಮಾರ್ಕಂಡೇಯ ಉವಾಚ|
03204013a ತತಸ್ತಂ ಬ್ರಾಹ್ಮಣಂ ತಾಭ್ಯಾಂ ಧರ್ಮವ್ಯಾಧೋ ನ್ಯವೇದಯತ್|
03204013c ತೌ ಸ್ವಾಗತೇನ ತಂ ವಿಪ್ರಮರ್ಚಯಾಮಾಸತುಸ್ತದಾ||
ಮಾರ್ಕಂಡೇಯನು ಹೇಳಿದನು: “ಆಗ ಧರ್ಮವ್ಯಾಧನು ಆ ಬ್ರಾಹ್ಮಣನನ್ನು ಅವರಿಬ್ಬರಿಗೆ ಪರಿಚಯಿಸಿದನು. ಅವರಿಬ್ಬರೂ ಅವನನ್ನು ಸ್ವಾಗತಿಸಲು ವಿಪ್ರನೂ ಅವರನ್ನು ಗೌರವಿಸಿದನು.
03204014a ಪ್ರತಿಗೃಹ್ಯ ಚ ತಾಂ ಪೂಜಾಂ ದ್ವಿಜಃ ಪಪ್ರಚ್ಚ ತಾವುಭೌ|
03204014c ಸಪುತ್ರಾಭ್ಯಾಂ ಸಭೃತ್ಯಾಭ್ಯಾಂ ಕಚ್ಚಿದ್ವಾಂ ಕುಶಲಂ ಗೃಹೇ|
03204014e ಅನಾಮಯಂ ಚ ವಾಂ ಕಚ್ಚಿತ್ಸದೈವೇಹ ಶರೀರಯೋಃ||
ಅವರ ಪೂಜೆಯನ್ನು ಸ್ವೀಕರಿಸಿ ದ್ವಿಜನು ಅವರಿಬ್ಬರನ್ನೂ ಪುತ್ರರೊಂದಿಗೆ, ಸೇವಕರೊಂದಿಗೆ ಮತ್ತು ಮನೆಯಲ್ಲಿ ಉಳಿದವರೆಲ್ಲರೊಂದಿಗೆ ಅವರು ಕುಶಲವಾಗಿದ್ದಾರೆಯೇ ಮತ್ತು ಸದೈವ ಶರೀರಗಳಲ್ಲಿ ಅನಾಮಯರಾಗಿದ್ದಾರೆಯೇ ಎಂದು ಕೇಳಿದನು.
03204015 ವೃದ್ಧೌ ಊಚತುಃ|
03204015a ಕುಶಲಂ ನೋ ಗೃಹೇ ವಿಪ್ರ ಭೃತ್ಯವರ್ಗೇ ಚ ಸರ್ವಶಃ|
03204015c ಕಚ್ಚಿತ್ತ್ವಮಪ್ಯವಿಘ್ನೇನ ಸಂಪ್ರಾಪ್ತೋ ಭಗವನ್ನಿಹ||
ವೃದ್ಧರು ಹೇಳಿದರು: “ವಿಪ್ರ! ಮನೆಯಲ್ಲಿ ಎಲ್ಲರೂ, ಸೇವಕ ವರ್ಗವೂ ಕುಶಲರಾಗಿದ್ದಾರೆ. ನೀನೂ ಕೂಡ ನಿರ್ವಿಘ್ನವಾಗಿ ಇಲ್ಲಿಗೆ ಬಂದಿರುವೆಯಾ?””
03204016 ಮಾರ್ಕಂಡೇಯ ಉವಾಚ|
03204016a ಬಾಢಮಿತ್ಯೇವ ತೌ ವಿಪ್ರಃ ಪ್ರತ್ಯುವಾಚ ಮುದಾನ್ವಿತಃ|
03204016c ಧರ್ಮವ್ಯಾಧಸ್ತು ತಂ ವಿಪ್ರಮರ್ಥವದ್ವಾಕ್ಯಮಬ್ರವೀತ್||
ಮಾರ್ಕಂಡೇಯನು ಹೇಳಿದನು: “ಸಂತೋಷಗೊಂಡ ವಿಪ್ರನು “ಚೆನ್ನಾಗಿದ್ದೇನೆ” ಎಂದು ಅವರಿಬ್ಬರಿಗೆ ಉತ್ತರಿಸಿದನು. ಧರ್ಮವ್ಯಾಧನು ವಿಪ್ರನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು:
03204017a ಪಿತಾ ಮಾತಾ ಚ ಭಗವನ್ನೇತೌ ಮೇ ದೈವತಂ ಪರಂ|
03204017c ಯದ್ದೈವತೇಭ್ಯಃ ಕರ್ತವ್ಯಂ ತದೇತಾಭ್ಯಾಂ ಕರೋಮ್ಯಹಂ||
“ಭಗವನ್! ತಂದೆ ಮತ್ತು ತಾಯಿ ಇವರೇ ನನ್ನ ಪರಮ ದೇವರು. ದೇವತೆಗಳಿಗೆ ಮಾಡಬೇಕಾದುದನ್ನು ಇವರಿಬ್ಬರಿಗೆ ನಾನು ಮಾಡುತ್ತೇನೆ.
03204018a ತ್ರಯಸ್ತ್ರಿಂಶದ್ಯಥಾ ದೇವಾಃ ಸರ್ವೇ ಶಕ್ರಪುರೋಗಮಾಃ|
03204018c ಸಂಪೂಜ್ಯಾಃ ಸರ್ವಲೋಕಸ್ಯ ತಥಾ ವೃದ್ಧಾವಿಮೌ ಮಮ||
ಇಂದ್ರನ ನಾಯಕತ್ವದಲ್ಲಿರುವ ಮೂವತ್ತುಮೂರು ದೇವತೆಗಳೆಲ್ಲರನ್ನೂ[1] ಸರ್ವಲೋಕವು ಹೇಗೆ ಪೂಜಿಸುತ್ತದೆಯೋ ಹಾಗೆ ಈ ವೃದ್ಧರೀರ್ವರನ್ನು ನಾನು ಪೂಜಿಸುತ್ತೇನೆ.
03204019a ಉಪಹಾರಾನಾಹರಂತೋ ದೇವತಾನಾಂ ಯಥಾ ದ್ವಿಜಾಃ|
03204019c ಕುರ್ವತೇ ತದ್ವದೇತಾಭ್ಯಾಂ ಕರೋಮ್ಯಹಮತಂದ್ರಿತಃ||
ದ್ವಿಜರು ದೇವತೆಗಳ ನೈವೇದ್ಯಕ್ಕೆ ಆಹಾರವನ್ನು ಹೇಗೆ ಶ್ರಮಪಟ್ಟು ತಯಾರಿಸುತ್ತಾರೋ ಹಾಗೆ ನಾನೂ ಕೂಡ ಇವರಿಬ್ಬರಿಗೆ ಮಾಡುತ್ತೇನೆ.
03204020a ಏತೌ ಮೇ ಪರಮಂ ಬ್ರಹ್ಮನ್ಪಿತಾ ಮಾತಾ ಚ ದೈವತಂ|
03204020c ಏತೌ ಪುಷ್ಪೈಃ ಫಲೈ ರತ್ನೈಸ್ತೋಷಯಾಮಿ ಸದಾ ದ್ವಿಜ||
ಬ್ರಹ್ಮನ್! ಈ ತಂದೆತಾಯಿಯರಿಬ್ಬರೂ ನನ್ನ ಪರಮ ದೇವರುಗಳು. ದ್ವಿಜ! ಇವರನ್ನು ನಾನು ಪುಷ್ಪ, ಫಲ ರತ್ನಗಳಿಂದ ಸಂತುಷ್ಟಗೊಳಿಸುತ್ತೇನೆ.
03204021a ಏತಾವೇವಾಗ್ನಯೋ ಮಹ್ಯಂ ಯಾನ್ವದಂತಿ ಮನೀಷಿಣಃ|
03204021c ಯಜ್ಞಾ ವೇದಾಶ್ಚ ಚತ್ವಾರಃ ಸರ್ವಮೇತೌ ಮಮ ದ್ವಿಜ||
ಮನೀಷಿಣರು ಹೇಳುವ ಮೂರು ಅಗ್ನಿಗಳು (ದಕ್ಷಿಣಾಗ್ನಿ, ಗಾರ್ಹಪತ್ಯ ಮತ್ತು ಆಹವನೀಯ) ನನಗೆ ಇವರೇ. ದ್ವಿಜ! ಇವರೇ ನನಗೆ ಯಜ್ಞ ಮತ್ತು ನಾಲ್ಕು ವೇದಗಳು ಮತ್ತು ಸರ್ವಸ್ವವೂ.
03204022a ಏತದರ್ಥಂ ಮಮ ಪ್ರಾಣಾ ಭಾರ್ಯಾ ಪುತ್ರಾಃ ಸುಹೃಜ್ಜನಾಃ|
03204022c ಸಪುತ್ರದಾರಃ ಶುಶ್ರೂಷಾಂ ನಿತ್ಯಮೇವ ಕರೋಮ್ಯಹಂ||
ನನ್ನ ಪ್ರಾಣಗಳಾದ ಪತ್ನಿ, ಪುತ್ರರು ಮತ್ತು ಸುಪುತ್ರರು ಇವರಿಗಾಗಿಯೇ ಇದ್ದಾರೆ. ಪುತ್ರ ಮತ್ತು ಪತ್ನಿಯೊಂದಿಗೆ ನಾನು ನಿತ್ಯವೂ ಇವರ ಶುಶ್ರೂಷೆಯನ್ನು ಮಾಡುತ್ತೇನೆ.
03204023a ಸ್ವಯಂ ಚ ಸ್ನಾಪಯಾಮ್ಯೇತೌ ತಥಾ ಪಾದೌ ಪ್ರಧಾವಯೇ|
03204023c ಆಹಾರಂ ಸಂಪ್ರಯಚ್ಚಾಮಿ ಸ್ವಯಂ ಚ ದ್ವಿಜಸತ್ತಮ||
ದ್ವಿಜಸತ್ತಮ! ಸ್ವಯಂ ನಾನೇ ಇವರಿಗೆ ಸ್ನಾನಮಾಡಿಸುತ್ತೇನೆ, ಪಾದಗಳನ್ನು ತೊಳೆಯುತ್ತೇನೆ, ಮತ್ತು ನಾನೇ ಅವರಿಗೆ ಆಹಾರವನ್ನು ಉಣಿಸುತ್ತೇನೆ.
03204024a ಅನುಕೂಲಾಃ ಕಥಾ ವಚ್ಮಿ ವಿಪ್ರಿಯಂ ಪರಿವರ್ಜಯನ್|
03204024c ಅಧರ್ಮೇಣಾಪಿ ಸಮ್ಯುಕ್ತಂ ಪ್ರಿಯಮಾಭ್ಯಾಂ ಕರೋಮ್ಯಹಂ||
ವಿಪ್ರಿಯವಾದುದನ್ನು ವರ್ಜಿಸಿ ಅನುಕೂಲವಾದುದನ್ನೇ ಅವರಿಗೆ ಹೇಳುತ್ತೇನೆ. ಅಧರ್ಮವಾಗಿದ್ದರೂ ನಾನು ಇವರಿಬ್ಬರಿಗೆ ಪ್ರಿಯವಾದುದನ್ನು ನಿಜವಾಗಿಯೂ ಮಾಡುತ್ತೇನೆ.
03204025a ಧರ್ಮಮೇವ ಗುರುಂ ಜ್ಞಾತ್ವಾ ಕರೋಮಿ ದ್ವಿಜಸತ್ತಮ|
03204025c ಅತಂದ್ರಿತಃ ಸದಾ ವಿಪ್ರ ಶುಶ್ರೂಷಾಂ ವೈ ಕರೋಮ್ಯಹಂ||
ದ್ವಿಜಸತ್ತಮ! ವಿಪ್ರ! ಧರ್ಮವೇ ಗುರುವೆಂದು ತಿಳಿದು ಮಾಡುತ್ತೇನೆ. ಆಯಾಸಗೊಳ್ಳದೇ ಸದಾ ಇವರ ಶುಶ್ರೂಷೆಯನ್ನು ಮಾಡುತ್ತೇನೆ.
03204026a ಪಂಚೈವ ಗುರವೋ ಬ್ರಹ್ಮನ್ಪುರುಷಸ್ಯ ಬುಭೂಷತಃ|
03204026c ಪಿತಾ ಮಾತಾಗ್ನಿರಾತ್ಮಾ ಚ ಗುರುಶ್ಚ ದ್ವಿಜಸತ್ತಮ||
ಬ್ರಹ್ಮನ್! ದ್ವಿಜಸತ್ತಮ! ಪುರುಷನಿಗೆ ಐದೇ ಗುರುಗಳಿದ್ದಾರೆಂದು ಹೇಳುತ್ತಾರೆ: ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು.
03204027a ಏತೇಷು ಯಸ್ತು ವರ್ತೇತ ಸಮ್ಯಗೇವ ದ್ವಿಜೋತ್ತಮ|
03204027c ಭವೇಯುರಗ್ನಯಸ್ತಸ್ಯ ಪರಿಚೀರ್ಣಾಸ್ತು ನಿತ್ಯಶಃ|
03204027e ಗಾರ್ಹಸ್ಥ್ಯೇ ವರ್ತಮಾನಸ್ಯ ಧರ್ಮ ಏಷ ಸನಾತನಃ||
ದ್ವಿಜೋತ್ತಮ! ಒಳ್ಳೆಯದನ್ನು ಬಯಸುವವರು ಇವರೊಂದಿಗೆ ಸರಿಯಾಗಿ ನಡೆದುಕೊಳ್ಳಬೇಕು. ಅವರನ್ನು ಸರಿಯಾಗಿ ಪೂಜಿಸುವುದು ಗಾರ್ಹಪತ್ಯ ಅಗ್ನಿಯನ್ನು ಕಾದಿರಿಸಿಕೊಂಡ ಹಾಗೆ. ಇದು ಸನಾತನ ಧರ್ಮ.””
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ಚತುರಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾನಾಲ್ಕನೆಯ ಅಧ್ಯಾಯವು.
[1]ಮೂವತ್ತುಮೂರು ದೇವತೆಗಳು: ಅಷ್ಟ ವಸುಗಳು, ಏಕಾದಶ ರುದ್ರರು, ದ್ವಾದಶಾದಿತ್ಯರು, ಇಂದ್ರ ಮತ್ತು ಪ್ರಜಾಪತಿ.