Anushasana Parva: Chapter 79

ಅನುಶಾಸನ ಪರ್ವ: ದಾನಧರ್ಮ ಪರ್ವ

೭೯

ಗೋ ಮತ್ತು ಗೋದಾನದ ಮಹತ್ವ (೧-೧೭).

13079001 ವಸಿಷ್ಠ ಉವಾಚ|

13079001a ಘೃತಕ್ಷೀರಪ್ರದಾ ಗಾವೋ ಘೃತಯೋನ್ಯೋ ಘೃತೋದ್ಭವಾಃ|

13079001c ಘೃತನದ್ಯೋ ಘೃತಾವರ್ತಾಸ್ತಾ ಮೇ ಸಂತು ಸದಾ ಗೃಹೇ||

13079002a ಘೃತಂ ಮೇ ಹೃದಯೇ ನಿತ್ಯಂ ಘೃತಂ ನಾಭ್ಯಾಂ ಪ್ರತಿಷ್ಠಿತಮ್|

13079002c ಘೃತಂ ಸರ್ವೇಷು ಗಾತ್ರೇಷು ಘೃತಂ ಮೇ ಮನಸಿ ಸ್ಥಿತಮ್||

13079003a ಗಾವೋ ಮಮಾಗ್ರತೋ ನಿತ್ಯಂ ಗಾವಃ ಪೃಷ್ಠತ ಏವ ಚ|

13079003c ಗಾವೋ ಮೇ ಸರ್ವತಶ್ಚೈವ ಗವಾಂ ಮಧ್ಯೇ ವಸಾಮ್ಯಹಮ್||

13079004a ಇತ್ಯಾಚಮ್ಯ ಜಪೇತ್ಸಾಯಂ ಪ್ರಾತಶ್ಚ ಪುರುಷಃ ಸದಾ|

13079004c ಯದಹ್ನಾ ಕುರುತೇ ಪಾಪಂ ತಸ್ಮಾತ್ಸ ಪರಿಮುಚ್ಯತೇ||

ವಸಿಷ್ಠನು ಹೇಳಿದನು: “ಮನುಷ್ಯನು ಸದಾ ಪ್ರಾತಃ ಮತ್ತು ಸಾಯಂಕಾಲಗಳಲ್ಲಿ ಆಚಮನ ಮಾಡಿ ಇದನ್ನು ಜಪಿಸಬೇಕು: “ಘೃತಕ್ಷೀರಪ್ರದೆ, ಘೃತಯೋನೀ, ಘೃತೋದ್ಭವೆ, ಘೃತನದಿ ಮತ್ತು ಘೃತದ ಚಿಲುಮೆ ಗೋವೇ ನೀನು ಸದಾ ನನ್ನ ಮನೆಯಲ್ಲಿರು. ನನ್ನ ಹೃದಯದಲ್ಲಿ ಘೃತವು ಸದಾ ನೆಲೆಸಿರಲಿ. ಘೃತವು ನನ್ನ ನಾಭಿಯಲ್ಲಿ ಪ್ರತಿಷ್ಠಿತಗೊಳ್ಳಲಿ. ಘೃತವು ನನ್ನ ಸರ್ವ ಅಂಗಗಳಲ್ಲಿರಲಿ. ಘೃತವು ನನ್ನ ಮನಸ್ಸಿನಲ್ಲಿ ನೆಲೆಸಿರಲಿ. ಗೋವುಗಳು ನಿತ್ಯವೂ ನನ್ನ ಎದುರಿರಲಿ. ಗೋವುಗಳು ನನ್ನ ಹಿಂದೆ ಇರಲಿ. ಗೋವುಗಳು ನನ್ನ ಸುತ್ತಲೂ ಇರಲಿ. ನಾನು ಗೋವುಗಳ ಮಧ್ಯೆ ವಾಸಿಸುವಂತಾಗಲಿ.” ಇದನ್ನು ಪ್ರತಿದಿನ ಜಪಿಸುವವನು ದಿನವಿಡೀ ಮಾಡಿದ ಪಾಪದಿಂದ ಮುಕ್ತನಾಗುತ್ತಾನೆ.

13079005a ಪ್ರಾಸಾದಾ ಯತ್ರ ಸೌವರ್ಣಾ ವಸೋರ್ಧಾರಾ ಚ ಯತ್ರ ಸಾ|

13079005c ಗಂಧರ್ವಾಪ್ಸರಸೋ ಯತ್ರ ತತ್ರ ಯಾಂತಿ ಸಹಸ್ರದಾಃ||

ಸಾವಿರ ಗೋವುಗಳನ್ನು ದಾನಮಾಡಿದವರು ಸುವರ್ಣ ಪ್ರಾಸಾದಗಳಿರುವ, ಸ್ವರ್ಗಗಂಗೆಯು ಹರಿಯುವ ಮತ್ತು ಗಂಧರ್ವ-ಅಪ್ಸರೆಯರಿರುವ ಸ್ವರ್ಗಲೋಕಕ್ಕೆ ಹೋಗುತ್ತಾರೆ.

13079006a ನವನೀತಪಂಕಾಃ ಕ್ಷೀರೋದಾ ದಧಿಶೈವಲಸಂಕುಲಾಃ|

13079006c ವಹಂತಿ ಯತ್ರ ನದ್ಯೋ ವೈ ತತ್ರ ಯಾಂತಿ ಸಹಸ್ರದಾಃ||

ಸಾವಿರ ಗೋವುಗಳನ್ನು ದಾನಮಾಡಿದವರು ಬೆಣ್ಣೆಯೇ ಕೆಸರಾಗಿರುವ, ಹಾಲೇ ನೀರಾಗಿರುವ ಮತ್ತು ಮೊಸರೇ ಪಾಚಿಸಂಕುಲವಾಗಿರುವ ನದಿಯು ಹರಿಯುವಲ್ಲಿಗೆ ಹೋಗುತ್ತಾರೆ.

13079007a ಗವಾಂ ಶತಸಹಸ್ರಂ ತು ಯಃ ಪ್ರಯಚ್ಚೇದ್ಯಥಾವಿಧಿ|

13079007c ಪರಾಮೃದ್ಧಿಮವಾಪ್ಯಾಥ ಸ ಗೋಲೋಕೇ ಮಹೀಯತೇ||

ಯಥಾವಿಧಿಯಾಗಿ ನೂರು ಸಾವಿರ ಗೋವುಗಳನ್ನು ದಾನಮಾಡಿದವರು ಪರಮ ವೃದ್ಧಿಯನ್ನು ಹೊಂದಿ ಗೋಲೋಕದಲ್ಲಿ ಮೆರೆಯುತ್ತಾರೆ.

13079008a ದಶ ಚೋಭಯತಃ ಪ್ರೇತ್ಯ ಮಾತಾಪಿತ್ರೋಃ ಪಿತಾಮಹಾನ್|

13079008c ದಧಾತಿ ಸುಕೃತಾಽಲ್ಲೋಕಾನ್ಪುನಾತಿ ಚ ಕುಲಂ ನರಃ||

ಅಂಥಹ ಮನುಷ್ಯನು ತನ್ನ ಮಾತಾಪಿತೃಗಳು ಈ ಎರಡೂ ಕಡೆಯ ಹತ್ತು-ಹತ್ತು ಪೀಳಿಗೆಗಳ ವರೆಗಿನ ಪಿತಾಮಹರನ್ನು ಪುಣ್ಯಲೋಕಗಳಿಗೆ ತಲುಪಿಸುತ್ತಾನೆ ಮತ್ತು ತನ್ನ ಕುಲವನ್ನೂ ಉದ್ಧರಿಸುತ್ತಾನೆ.

13079009a ಧೇನ್ವಾಃ ಪ್ರಮಾಣೇನ ಸಮಪ್ರಮಾಣಾಂ

ಧೇನುಂ ತಿಲಾನಾಮಪಿ ಚ ಪ್ರದಾಯ|

13079009c ಪಾನೀಯದಾತಾ ಚ ಯಮಸ್ಯ ಲೋಕೇ

ನ ಯಾತನಾಂ ಕಾಂ ಚಿದುಪೈತಿ ತತ್ರ||

ಗೋವಿನ ಸಮಪ್ರಮಾಣದ ಎಳ್ಳಿನ ಗೋವನ್ನು ಮಾಡಿ ದಾನಮಾಡುವವನು ಅಥವಾ ಅಷ್ಟೇ ಪ್ರಮಾಣದ ಪಾನೀಯವನ್ನು[1] ದಾನಮಾಡುವವನು ಯಮಲೋಕದಲ್ಲಿ ಯಾವುದೇ ರೀತಿಯ ಯಾತನೆಗಳನ್ನು ಅನುಭವಿಸುವುದಿಲ್ಲ.

13079010a ಪವಿತ್ರಮಗ್ರ್ಯಂ ಜಗತಃ ಪ್ರತಿಷ್ಠಾ

ದಿವೌಕಸಾಂ ಮಾತರೋಽಥಾಪ್ರಮೇಯಾಃ|

13079010c ಅನ್ವಾಲಭೇದ್ದಕ್ಷಿಣತೋ ವ್ರಜೇಚ್ಚ

ದದ್ಯಾಚ್ಚ ಪಾತ್ರೇ ಪ್ರಸಮೀಕ್ಷ್ಯ ಕಾಲಮ್||

ಗೋವು ಎಲ್ಲದಕ್ಕಿಂತಲೂ ಅಧಿಕ ಪವಿತ್ರವು. ಜಗತ್ತಿನ ಆಧಾರವು. ದೇವತೆಗಳ ಮಾತೆಯು. ಅದರ ಮಹಿಮೆಯು ಅಪ್ರಮೇಯವು. ಅದನ್ನು ಸಾದರದಿಂದ ಸನ್ಮಾನಿಸಬೇಕು. ಅದನ್ನು ಎಡಭಾಗಕ್ಕೆ ಬಿಟ್ಟುಕೊಂಡು ನಡೆಯಬೇಕು. ಸಮಯನೋಡಿ ಅದನ್ನು ಸತ್ಪಾತ್ರನಿಗೆ ದಾನಮಾಡಬೇಕು.

13079011a ಧೇನುಂ ಸವತ್ಸಾಂ ಕಪಿಲಾಂ ಭೂರಿಶೃಂಗಾಂ

ಕಾಂಸ್ಯೋಪದೋಹಾಂ ವಸನೋತ್ತರೀಯಾಮ್|

13079011c ಪ್ರದಾಯ ತಾಂ ಗಾಹತಿ ದುರ್ವಿಗಾಹ್ಯಾಂ

ಯಾಮ್ಯಾಂ ಸಭಾಂ ವೀತಭಯೋ ಮನುಷ್ಯಃ||

ಉದ್ದ ಕೋಡುಗಳಿರುವ ಮತ್ತು ಕರುವಿರುವ ಕಪಿಲ ಧೇನುವನ್ನು ವಸ್ತ್ರಗಳನ್ನು ಹೊದಿಸಿ ಹಾಲುಕರೆಯುವ ಪಾತ್ರೆಗಳೊಂದಿಗೆ ದಾನಮಾಡುವವನು ಯಮರಾಜನ ದುರ್ಗಮ ಸಭೆಯನ್ನು ನಿರ್ಭಯನಾಗಿ ಪ್ರವೇಶಿಸಬಹುದು.

13079012a ಸುರೂಪಾ ಬಹುರೂಪಾಶ್ಚ ವಿಶ್ವರೂಪಾಶ್ಚ ಮಾತರಃ|

13079012c ಗಾವೋ ಮಾಮುಪತಿಷ್ಠಂತಾಮಿತಿ ನಿತ್ಯಂ ಪ್ರಕೀರ್ತಯೇತ್||

“ಸುರೂಪೀ ಬಹುರೂಪೀ ವಿಶ್ವರೂಪೀ ಗೋಮಾತೆಯು ನನ್ನ ಬಳಿ ಬರಲಿ” ಎಂದು ನಿತ್ಯವೂ ಪ್ರಾರ್ಥಿಸಬೇಕು.

13079013a ನಾತಃ ಪುಣ್ಯತರಂ ದಾನಂ ನಾತಃ ಪುಣ್ಯತರಂ ಫಲಮ್|

13079013c ನಾತೋ ವಿಶಿಷ್ಟಂ ಲೋಕೇಷು ಭೂತಂ ಭವಿತುಮರ್ಹತಿ||

ಗೋದಾನಕ್ಕಿಂತ ಪುಣ್ಯಕರ ದಾನವಿಲ್ಲ. ಗೋದಾನದಿಂದ ದೊರೆಯುವ ಪುಣ್ಯದಷ್ಟು ಫಲವು ಇತರ ದಾನಗಳಿಂದ ದೊರೆಯುವುದಿಲ್ಲ. ಮತ್ತು ಲೋಕಗಳಲ್ಲಿ ಗೋವಿಗಿಂತ ವಿಶಿಷ್ಟವಾದ ಬೇರೆ ಜೀವಿಯು ಇಲ್ಲ.

13079014a ತ್ವಚಾ ಲೋಮ್ನಾಥ ಶೃಂಗೈಶ್ಚ ವಾಲೈಃ ಕ್ಷೀರೇಣ ಮೇದಸಾ|

13079014c ಯಜ್ಞಂ ವಹಂತಿ ಸಂಭೂಯ ಕಿಮಸ್ತ್ಯಭ್ಯಧಿಕಂ ತತಃ||

ಚರ್ಮ, ರೋಮ, ಕೋಡು, ಬಾಲ, ಹಾಲು ಮತ್ತು ಮೇಧಸ್ಸು ಇವುಗಳಿಂದ ಅದು ಯಜ್ಞವನ್ನು ನಿರ್ವಹಿಸುತ್ತದೆ. ಆದುದರಿಂದ ಅದಕ್ಕಿಂತಲೂ ಶ್ರೇಷ್ಠವಾದ ಇನ್ನೊಂದು ಜೀವವು ಯಾವುದಿದೆ?

13079015a ಯಯಾ ಸರ್ವಮಿದಂ ವ್ಯಾಪ್ತಂ ಜಗತ್ ಸ್ಥಾವರಜಂಗಮಮ್|

13079015c ತಾಂ ಧೇನುಂ ಶಿರಸಾ ವಂದೇ ಭೂತಭವ್ಯಸ್ಯ ಮಾತರಮ್||

ಜಗತ್ತಿನ ಸ್ಥಾವರಜಂಗಮಗಳೆಲ್ಲವನ್ನೂ ವ್ಯಾಪಿಸುರುವ ಆ ಗೋಮಾತೆಗೆ ಶಿರಸಾ ನಮಸ್ಕರಿಸುತ್ತೇನೆ.

13079016a ಗುಣವಚನಸಮುಚ್ಚಯೈಕದೇಶೋ

ನೃವರ ಮಯೈಷ ಗವಾಂ ಪ್ರಕೀರ್ತಿತಸ್ತೇ|

13079016c ನ ಹಿ ಪರಮಿಹ ದಾನಮಸ್ತಿ ಗೋಭ್ಯೋ

ಭವಂತಿ ನ ಚಾಪಿ ಪರಾಯಣಂ ತಥಾನ್ಯತ್||

ನರವರ! ಇದೋ ನಾನು ಗೋವುಗಳ ಗುಣವರ್ಣನೆಯ ಸಾಹಿತ್ಯದ ಒಂದು ಚಿಕ್ಕ ಅಂಶವನ್ನು ಮಾತ್ರ ನಿನಗೆ ಹೇಳಿದ್ದೇನೆ. ಗೋದಾನಕ್ಕಿಂತ ಹೆಚ್ಚಿನ ಯಾವ ದಾನವೂ ಇಲ್ಲ. ಮತ್ತು ಅದಕ್ಕೆ ಸಮಾನ ಬೇರೆ ಯಾವ ಆಶ್ರಯವೂ ಇಲ್ಲ.””

13079017 ಭೀಷ್ಮ ಉವಾಚ|

13079017a ಪರಮಿದಮಿತಿ ಭೂಮಿಪೋ[2] ವಿಚಿಂತ್ಯ

ಪ್ರವರಮೃಷೇರ್ವಚನಂ ತತೋ ಮಹಾತ್ಮಾ|

13079017c ವ್ಯಸೃಜತ ನಿಯತಾತ್ಮವಾನ್ ದ್ವಿಜೇಭ್ಯಃ

ಸುಬಹು ಚ ಗೋಧನಮಾಪ್ತವಾಂಶ್ಚ ಲೋಕಾನ್||

ಭೀಷ್ಮನು ಹೇಳಿದನು: “ಮಹರ್ಷಿ ವಸಿಷ್ಠನ ಈ ಮಾತನ್ನು ಕೇಳಿ ಮಹಾತ್ಮಾ ನಿಯತಾತ್ಮವಾನ್ ಭೂಮಿಪ ಸೌದಾಸನು “ಇದು ಉತ್ತಮ ಪುಣ್ಯಕಾರ್ಯವು” ಎಂದು ಯೋಚಿಸಿ ದ್ವಿಜರಿಗೆ ಅನೇಕ ಗೋವುಗಳನ್ನು ದಾನಮಾಡಿ, ಪುಣ್ಯ ಲೋಕಗಳನ್ನು ಪಡೆದುಕೊಂಡನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಏಕೋನಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಪ್ಪತ್ತೊಂಭತ್ತನೇ ಅಧ್ಯಾಯವು.

[1] ಪಾನೀಯದಾತಾ ಎಂಬ ಪದಕ್ಕೆ ಜಲಧೇನು ಎಂಬ ಅನುವಾದವೂ ಇದೆ (ಗೀತಾ ಪ್ರೆಸ್).

[2] ಭೋಮಿದೋ (ಗೀತಾ ಪ್ರೆಸ್).

Comments are closed.