Anushasana Parva: Chapter 53

ಅನುಶಾಸನ ಪರ್ವ: ದಾನಧರ್ಮ ಪರ್ವ

೫೩

ಚ್ಯವನನು ರಾಜದಂಪತಿಗಳಿಗೆ ಅರಮನೆಯಲ್ಲಿ ಕಾಣಿಸಿಕೊಂಡು ಪುನಃ ಇಪ್ಪತ್ತೊಂದು ದಿನಗಳು ಮಲಗಿ, ತೈಲಾಭ್ಯಂಜನವು ಬೇಕೆಂದು ಹೇಳಿ ಅದನ್ನು ಸಿದ್ಧಪಡಿಸುವಾಗ ಪುನಃ ಅಂತರ್ಧಾನನಾದುದು (೧-೧೨). ಚ್ಯವನನು ಪುನಃ ಕಾಣಿಸಿಕೊಂಡು ಭೋಜನವು ಬೇಕೆಂದು ಕೇಳಿ, ನಂತರ ರಥವನ್ನು ಹೂಡೆಂದು ಕುಶಿಕನಿಗೆ ಹೇಳಿದುದು (೧೩-೩೦). ರಥವನ್ನು ಎಳೆದುಕೊಂಡು ಹೋಗಿರೆಂದು ರಾಜದಂಪತಿಗಳಿಗೆ ಹೇಳಿ ಚ್ಯವನನು ಅವರನ್ನು ಪುನಃ ಪರೀಕ್ಷಿಸಿದುದು (೩೧-೪೯). ಚ್ಯವನನು ರಾಜದಂಪತಿಗಳಿಗೆ ವರಗಳನ್ನಿತ್ತು ಮರುದಿನ ಬರಲು ಹೇಳಿದುದು (೫೦-೬೯).

13053001 ಯುಧಿಷ್ಠಿರ ಉವಾಚ|

13053001a ತಸ್ಮಿನ್ನಂತರ್ಹಿತೇ ವಿಪ್ರೇ ರಾಜಾ ಕಿಮಕರೋತ್ತದಾ|

13053001c ಭಾರ್ಯಾ ಚಾಸ್ಯ ಮಹಾಭಾಗಾ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ವಿಪ್ರನು ಅಂತರ್ಧಾನನಾಗಲು ಮಹಾಭಾಗೆ ಪತ್ನಿಯೊಡನೆ ರಾಜನು ಏನು ಮಾಡಿದನು? ಅದನ್ನು ನನಗೆ ಹೇಳು.”

13053002 ಭೀಷ್ಮ ಉವಾಚ|

13053002a ಅದೃಷ್ಟ್ವಾ ಸ ಮಹೀಪಾಲಸ್ತಮೃಷಿಂ ಸಹ ಭಾರ್ಯಯಾ|

13053002c ಪರಿಶ್ರಾಂತೋ ನಿವವೃತೇ ವ್ರೀಡಿತೋ ನಷ್ಟಚೇತನಃ||

ಭೀಷ್ಮನು ಹೇಳಿದನು: “ಮಹೀಪಾಲನು ಭಾರ್ಯೆಯೊಡನೆ ಆ ಋಷಿಯನ್ನು ಕಾಣದೇ ಪರಿಶ್ರಾಂತನಾಗಿ, ಚೇತನವನ್ನು ಕಳೆದುಕೊಂಡು ನಾಚಿ ಹಿಂದಿರುಗಿದನು.

13053003a ಸ ಪ್ರವಿಶ್ಯ ಪುರೀಂ ದೀನೋ ನಾಭ್ಯಭಾಷತ ಕಿಂ ಚನ|

13053003c ತದೇವ ಚಿಂತಯಾಮಾಸ ಚ್ಯವನಸ್ಯ ವಿಚೇಷ್ಟಿತಮ್||

ದೀನನಾಗಿದ್ದ ಅವನು ಪುರಿಯನ್ನು ಪ್ರವೇಶಿಸಿ ಏನನ್ನೂ ಮಾತನಾಡಲಿಲ್ಲ. ಚ್ಯವನನ ವ್ಯವಹಾರವನ್ನೇ ಚಿಂತಿಸತೊಡಗಿದನು.

13053004a ಅಥ ಶೂನ್ಯೇನ ಮನಸಾ ಪ್ರವಿವೇಶ ಗೃಹಂ ನೃಪಃ|

13053004c ದದರ್ಶ ಶಯನೇ ತಸ್ಮಿನ್ಶಯಾನಂ ಭೃಗುನಂದನಮ್||

ಶೂನ್ಯ ಮನಸ್ಕನಾದ ನೃಪನು ಅರಮನೆಯನ್ನು ಪ್ರವೇಶಿಸಿ ಅಲ್ಲಿ ಶಯನದಲ್ಲಿ ಮಲಗಿದ್ದ ಭೃಗುನಂದನನನ್ನು ನೋಡಿದನು.

13053005a ವಿಸ್ಮಿತೌ ತೌ ತು ದೃಷ್ಟ್ವಾ ತಂ ತದಾಶ್ಚರ್ಯಂ ವಿಚಿಂತ್ಯ ಚ|

13053005c ದರ್ಶನಾತ್ತಸ್ಯ ಚ ಮುನೇರ್ವಿಶ್ರಾಂತೌ ಸಂಬಭೂವತುಃ||

ಅವರಿಬ್ಬರೂ ಆ ಆಶ್ಚರ್ಯವನ್ನು ನೋಡಿ ವಿಸ್ಮಿತರಾಗಿ ಯೋಚಿಸತೊಡಗಿದರು. ಆ ಮುನಿಯ ದರ್ಶನಮಾತ್ರದಿಂದಲೇ ಅವರ ಆಯಾಸವು ಹೊರಟುಹೋಯಿತು.

13053006a ಯಥಾಸ್ಥಾನಂ ತು ತೌ ಸ್ಥಿತ್ವಾ ಭೂಯಸ್ತಂ ಸಂವವಾಹತುಃ|

13053006c ಅಥಾಪರೇಣ ಪಾರ್ಶ್ವೇನ ಸುಷ್ವಾಪ ಸ ಮಹಾಮುನಿಃ||

ಅವರಿಬ್ಬರೂ ಯಥಾಸ್ಥಾನದಲ್ಲಿ ನಿಂತು ಅವನ ಕಾಲುಗಳನ್ನು ಒತ್ತತೊಡಗಿದರು. ಆಗ ಆ ಮಹಾಮುನಿಯು ಇನ್ನೊಂದು ಮಗ್ಗುಲಲ್ಲಿ ಮಲಗಿದನು.

13053007a ತೇನೈವ ಚ ಸ ಕಾಲೇನ ಪ್ರತ್ಯಬುಧ್ಯತ ವೀರ್ಯವಾನ್|

13053007c ನ ಚ ತೌ ಚಕ್ರತುಃ ಕಿಂ ಚಿದ್ವಿಕಾರಂ ಭಯಶಂಕಿತೌ||

ಅಷ್ಟೇ ಸಮಯದಲ್ಲಿ ಪುನಃ ವೀರ್ಯವಾನ್ ಚ್ಯವನನು ಎಚ್ಚೆತ್ತನು. ಭಯಶಂಕಿತರಾದ ಅವರಿಬ್ಬರೂ ಯಾವುದೇ ವಿಕಾರಗಳನ್ನೂ ಮಾಡಲಿಲ್ಲ.

13053008a ಪ್ರತಿಬುದ್ಧಸ್ತು ಸ ಮುನಿಸ್ತೌ ಪ್ರೋವಾಚ ವಿಶಾಂ ಪತೇ|

13053008c ತೈಲಾಭ್ಯಂಗೋ ದೀಯತಾಂ ಮೇ ಸ್ನಾಸ್ಯೇಽಹಮಿತಿ ಭಾರತ||

ವಿಶಾಂಪತೇ! ಭಾರತ! ಎಚ್ಚೆತ್ತ ಮುನಿಯು ಅವರಿಗೆ “ನನಗೆ ತೈಲಾಭ್ಯಂಜನವನ್ನು ನೀಡಿ” ಎಂದನು

13053009a ತಥೇತಿ ತೌ ಪ್ರತಿಶ್ರುತ್ಯ ಕ್ಷುಧಿತೌ ಶ್ರಮಕರ್ಶಿತೌ|

13053009c ಶತಪಾಕೇನ ತೈಲೇನ ಮಹಾರ್ಹೇಣೋಪತಸ್ಥತುಃ||

ಹಸಿವು-ಆಯಾಸಗಳಿಂದ ಕೃಶರಾಗಿದ್ದ ಅವರಿಬ್ಬರೂ ಹಾಗೆಯೇ ಆಗಲೆಂದು ಹೇಳಿ, ನೂರು ಬಾರಿ ಕಾಯಿಸಿದ್ದ ಬಹುಮೂಲ್ಯ ತೈಲವನ್ನು ತಂದು ಸಿದ್ಧರಾಗಿ ನಿಂತರು.

13053010a ತತಃ ಸುಖಾಸೀನಮೃಷಿಂ ವಾಗ್ಯತೌ ಸಂವವಾಹತುಃ|

13053010c ನ ಚ ಪರ್ಯಾಪ್ತಮಿತ್ಯಾಹ ಭಾರ್ಗವಃ ಸುಮಹಾತಪಾಃ||

ಆಗ ಅವರಿಬ್ಬರೂ ಸುಖಾಸೀನನಾಗಿದ್ದ ಋಷಿಗೆ ಎಣ್ಣೆಯನ್ನು ಹಚ್ಚತೊಡಗಿದರು. ಮಹಾತಪಸ್ವಿ ಭಾರ್ಗವನು “ಸಾಕು!” ಎಂದು ಹೇಳಲೇ ಇಲ್ಲ.

13053011a ಯದಾ ತೌ ನಿರ್ವಿಕಾರೌ ತು ಲಕ್ಷಯಾಮಾಸ ಭಾರ್ಗವಃ|

13053011c ತತ ಉತ್ಥಾಯ ಸಹಸಾ ಸ್ನಾನಶಾಲಾಂ ವಿವೇಶ ಹ||

ನಿರ್ವಿಕಾರರಾಗಿ ಅವರಿಬ್ಬರೂ ಇದ್ದುದನ್ನು ಭಾರ್ಗವನು ಗಮನಿಸಿದನು. ಅನಂತರ ಒಮ್ಮೆಲೇ ಎದ್ದು ಸ್ನಾನಶಾಲೆಯನ್ನು ಪ್ರವೇಶಿಸಿದನು.

13053011e ಕ್ಲ್ವಮೇವ ತು ತತ್ರಾಸೀತ್ಸ್ನಾನೀಯಂ ಪಾರ್ಥಿವೋಚಿತಮ್|

13053012a ಅಸತ್ಕೃತ್ಯ ತು ತತ್ಸರ್ವಂ ತತ್ರೈವಾಂತರಧೀಯತ||

ಅಲ್ಲಿದ್ದ ಪಾರ್ಥಿವರಿಗೆ ಉಚಿತವಾದ ಎಲ್ಲ ಸ್ನಾನ ಸಾಮಗ್ರಿಗಳಿರುವುದನ್ನೂ ತಿರಸ್ಕರಿಸಿ ಅವನು ಅಲ್ಲಿಯೇ ಅಂತರ್ಧಾನನಾದನು.

13053012c ಸ ಮುನಿಃ ಪುನರೇವಾಥ ನೃಪತೇಃ ಪಶ್ಯತಸ್ತದಾ|

13053012e ನಾಸೂಯಾಂ ಚಕ್ರತುಸ್ತೌ ಚ ದಂಪತೀ ಭರತರ್ಷಭ||

ಭರತರ್ಷಭ! ಆ ಮುನಿಯು ಪುನಃ ನೃಪತಿಗೆ ಕಾಣಿಸಿಕೊಂಡನು. ದಂಪತಿಗಳು ಅಸೂಯೆಪಡದೇ ನಿಂತಿದ್ದರು.

13053013a ಅಥ ಸ್ನಾತಃ ಸ ಭಗವಾನ್ಸಿಂಹಾಸನಗತಃ ಪ್ರಭುಃ|

13053013c ದರ್ಶಯಾಮಾಸ ಕುಶಿಕಂ ಸಭಾರ್ಯಂ ಭೃಗುನಂದನಃ||

ಆಗ ಸ್ನಾನಮಾಡಿ ಭಗವಾನ್ ಪ್ರಭು ಭೃಗುನಂದನನು ಕುಶಿಕನಿಗೆ ಸಿಂಹಾಸನದ ಮೇಲೆ ಕಂಡನು.

13053014a ಸಂಹೃಷ್ಟವದನೋ ರಾಜಾ ಸಭಾರ್ಯಃ ಕುಶಿಕೋ ಮುನಿಮ್|

13053014c ಸಿದ್ಧಮನ್ನಮಿತಿ ಪ್ರಹ್ವೋ ನಿರ್ವಿಕಾರೋ ನ್ಯವೇದಯತ್||

ಸಂಹೃಷ್ಟವದನನಾದ ರಾಜಾ ಕುಶಿಕನು ಭಾರ್ಯೆಯೊಂದಿಗೆ ನಿರ್ವಿಕಾರನಾಗಿ “ಅನ್ನವು ಸಿದ್ಧವಾಗಿದೆ!” ಎಂದು ಮುನಿಗೆ ನಿವೇದಿಸಿದನು.

13053015a ಆನೀಯತಾಮಿತಿ ಮುನಿಸ್ತಂ ಚೋವಾಚ ನರಾಧಿಪಮ್|

13053015c ರಾಜಾ ಚ ಸಮುಪಾಜಹ್ರೇ ತದನ್ನಂ ಸಹ ಭಾರ್ಯಯಾ||

“ತೆಗೆದುಕೊಂಡು ಬಾ!” ಎಂದು ಮುನಿಯು ನರಾಧಿಪನಿಗೆ ಹೇಳಿದನು. ರಾಜನಾದರೋ ಭಾರ್ಯೆಯೊಡನೆ ಆ ಅನ್ನವನ್ನು ತೆಗೆದುಕೊಂಡು ಬಂದನು.

13053016a ಮಾಂಸಪ್ರಕಾರಾನ್ವಿವಿಧಾನ್ಶಾಕಾನಿ ವಿವಿಧಾನಿ ಚ|

13053016c ವೇಸವಾರವಿಕಾರಾಂಶ್ಚ ಪಾನಕಾನಿ ಲಘೂನಿ ಚ||

13053017a ರಸಾಲಾಪೂಪಕಾಂಶ್ಚಿತ್ರಾನ್ಮೋದಕಾನಥ ಷಾಡವಾನ್|

13053017c ರಸಾನ್ನಾನಾಪ್ರಕಾರಾಂಶ್ಚ ವನ್ಯಂ ಚ ಮುನಿಭೋಜನಮ್||

13053018a ಫಲಾನಿ ಚ ವಿಚಿತ್ರಾಣಿ ತಥಾ ಭೋಜ್ಯಾನಿ ಭೂರಿಶಃ|

13053018c ಬದರೇಂಗುದಕಾಶ್ಮರ್ಯಭಲ್ಲಾತಕವಟಾನಿ ಚ||

13053019a ಗೃಹಸ್ಥಾನಾಂ ಚ ಯದ್ಭೋಜ್ಯಂ ಯಚ್ಚಾಪಿ ವನವಾಸಿನಾಮ್|

13053019c ಸರ್ವಮಾಹಾರಯಾಮಾಸ ರಾಜಾ ಶಾಪಭಯಾನ್ಮುನೇಃ||

ಮುನಿಯ ಶಾಪದ ಭಯದಿಂದ ರಾಜನು ವಿವಿಧ ಮಾಂಸಪ್ರಕಾರಗಳೂ, ವಿವಿಧ ತರಕಾರಿಗಳಿಂದ ಮಾಡಿದ ಅನೇಕ ವ್ಯಂಜನಗಳೂ, ಲಘುವಾದ ಪಾನಕಗಳೂ, ರುಚಿಕರ ಅಪೂಪಗಳೂ, ಚಿತ್ರ-ವಿಚಿತ್ರವಾದ ಮೋದಕಗಳೂ, ಮಿಠಾಯಿಗಳೂ, ನಾನಾ ಪ್ರಾಕಾರದ ರಸಗಲೂ, ಅರಣ್ಯದಲ್ಲಿ ಸಿಕ್ಕುವ ಮುನಿಭೋಜನಕ್ಕೆ ತಕ್ಕುದಾದ ವಿಚಿತ್ರ ಫಲಗಳೂ, ರಾಜರ ಭೋಜನಕ್ಕೆ ಯೋಗ್ಯವಾದವುಗಳೂ, ಗಾರೆಹಣ್ಣು, ಕುಂಕುಮಕೇಸರಿ, ಎಲಚಿ, ಭಲ್ಲಾತಕ ಫಲಗಳೂ, ಗೃಹಸ್ಥರಿಗೆ ಮತ್ತು ಮತ್ತು ವಾನಪ್ರಸ್ಥರಿಗೆ ಯೋಗ್ಯವಾದ ಭೋಜನ ಎಲ್ಲವನ್ನೂ ತರಿಸಿದನು.  

13053020a ಅಥ ಸರ್ವಮುಪನ್ಯಸ್ತಮಗ್ರತಶ್ಚ್ಯವನಸ್ಯ ತತ್|

13053020c ತತಃ ಸರ್ವಂ ಸಮಾನೀಯ ತಚ್ಚ ಶಯ್ಯಾಸನಂ ಮುನಿಃ||

13053021a ವಸ್ತ್ರೈಃ ಶುಭೈರವಚ್ಚಾದ್ಯ ಭೋಜನೋಪಸ್ಕರೈಃ ಸಹ|

13053021c ಸರ್ವಮಾದೀಪಯಾಮಾಸ ಚ್ಯವನೋ ಭೃಗುನಂದನಃ||

ಅವೆಲ್ಲವನ್ನೂ ಚ್ಯವನನ ಮುಂದೆ ತಂದು ಇಡಲಾಯಿತು. ಆಗ ಭೃಗುನಂದನ ಚ್ಯವನ ಮುನಿಯು ಹಾಸಿಗೆ, ಸಿಂಹಾಸನ, ಶುಭ ವಸ್ತ್ರಗಳು, ಹೊದಿಕೆಗಳು, ಭೋಜನ ಸಾಮಗ್ರಿಗಳೊಡನೆ ಎಲ್ಲವನ್ನೂ ಸುಟ್ಟು ಭಸ್ಮಮಾಡಿದನು.

13053022a ನ ಚ ತೌ ಚಕ್ರತುಃ ಕೋಪಂ ದಂಪತೀ ಸುಮಹಾವ್ರತೌ|

13053022c ತಯೋಃ ಸಂಪ್ರೇಕ್ಷತೋರೇವ ಪುನರಂತರ್ಹಿತೋಽಭವತ್||

ಮಹಾವ್ರತಿಗಳಾದ ಆ ದಂಪತಿಗಳಿಬ್ಬರೂ ಸ್ವಲ್ಪವೂ ಕೋಪಗೊಳ್ಳಲಿಲ್ಲ. ಆಗ ಅವರು ನೋಡುತ್ತಿದ್ದಂತೆಯೇ ಮುನಿಯು ಪುನಃ ಅಂತರ್ಧಾನನಾದನು.

13053023a ತತ್ರೈವ ಚ ಸ ರಾಜರ್ಷಿಸ್ತಸ್ಥೌ ತಾಂ ರಜನೀಂ ತದಾ|

13053023c ಸಭಾರ್ಯೋ ವಾಗ್ಯತಃ ಶ್ರೀಮಾನ್ನ ಚ ತಂ ಕೋಪ ಆವಿಶತ್||

ರಾತ್ರಿಯಿಡೀ ರಾಜರ್ಷಿಯು ಭಾರ್ಯೆಯೊಡನೆ ಅಲ್ಲಿಯೇ ನಿಂತಿದ್ದನು. ಆ ಶ್ರೀಮಾನನನ್ನು ಕೋಪವೆಂಬುದೇ ಪ್ರವೇಶಿಸಲಿಲ್ಲ.

13053024a ನಿತ್ಯಂ ಸಂಸ್ಕೃತಮನ್ನಂ ತು ವಿವಿಧಂ ರಾಜವೇಶ್ಮನಿ|

13053024c ಶಯನಾನಿ ಚ ಮುಖ್ಯಾನಿ ಪರಿಷೇಕಾಶ್ಚ ಪುಷ್ಕಲಾಃ||

13053025a ವಸ್ತ್ರಂ ಚ ವಿವಿಧಾಕಾರಮಭವತ್ಸಮುಪಾರ್ಜಿತಮ್|

13053025c ನ ಶಶಾಕ ತತೋ ದ್ರಷ್ಟುಮಂತರಂ ಚ್ಯವನಸ್ತದಾ||

ಚ್ಯವನನು ಕಾಣಿಸಿಕೊಳ್ಳುವವರೆಗೆ ನಿತ್ಯವೂ ರಾಜನರಮನೆಯಲ್ಲಿ ಭೋಜನವನ್ನು ತಯಾರಿಸಲಾಗುತ್ತಿತ್ತು; ಶಯನಗಳು ಸಿದ್ಧವಾಗಿರುತ್ತಿದ್ದವು; ಅಭಿಷೇಕಕ್ಕಾಗಿ ಬೇಕಾಗುವ ಪದಾರ್ಥ-ಸಲಕರಣೆಗಳು ಸಿದ್ಧವಾಗುತ್ತಿದ್ದವು; ವಿವಿಧಾಕಾರದ ವಸ್ತ್ರಗಳನ್ನು ಕೂಡ ತಂದು ಅವನಿಗೆ ಅರ್ಪಿಸುತ್ತಿದ್ದರು.

13053026a ಪುನರೇವ ಚ ವಿಪ್ರರ್ಷಿಃ ಪ್ರೋವಾಚ ಕುಶಿಕಂ ನೃಪಮ್|

13053026c ಸಭಾರ್ಯೋ ಮಾಂ ರಥೇನಾಶು ವಹ ಯತ್ರ ಬ್ರವೀಮ್ಯಹಮ್||

ಪುನಃ ಆ ವಿಪ್ರರ್ಷಿಯು ನೃಪ ಕುಶಿಕನಿಗೆ “ನನ್ನನ್ನು ರಥದಲ್ಲಿ ಭಾರ್ಯೆಯೊಂದಿಗೆ ನಾನು ಹೇಳುವಲ್ಲಿಗೆ ಎಳೆದುಕೊಂಡು ಹೋಗು!” ಎಂದನು.

13053027a ತಥೇತಿ ಚ ಪ್ರಾಹ ನೃಪೋ ನಿರ್ವಿಶಂಕಸ್ತಪೋಧನಮ್|

13053027c ಕ್ರೀಡಾರಥೋಽಸ್ತು ಭಗವನ್ನುತ ಸಾಂಗ್ರಾಮಿಕೋ ರಥಃ||

ನಿರ್ವಿಶಂಕನಾಗಿ ಹಾಗೆಯೇ ಆಗಲೆಂದು ಹೇಳಿ ನೃಪನು ತಪೋಧನನಿಗೆ “ಭಗವನ್! ಕ್ರೀಡಾರಥವೋ ಯುದ್ಧರಥವೋ ಹೇಳು” ಎಂದನು.

13053028a ಇತ್ಯುಕ್ತಃ ಸ ಮುನಿಸ್ತೇನ ರಾಜ್ಞಾ ಹೃಷ್ಟೇನ ತದ್ವಚಃ|

13053028c ಚ್ಯವನಃ ಪ್ರತ್ಯುವಾಚೇದಂ ಹೃಷ್ಟಃ ಪರಪುರಂಜಯಮ್||

ರಾಜನ ಈ ಸಂತೋಷದ ಮಾತನ್ನು ಕೇಳಿ ಚ್ಯವನ ಮುನಿಯು ಪರಪುರಂಜಯನಿಗೆ ಉತ್ತರಿಸಿದನು:

13053029a ಸಜ್ಜೀಕುರು ರಥಂ ಕ್ಷಿಪ್ರಂ ಯಸ್ತೇ ಸಾಂಗ್ರಾಮಿಕೋ ಮತಃ|

13053029c ಸಾಯುಧಃ ಸಪತಾಕಶ್ಚ ಸಶಕ್ತಿಃ ಕಣಯಷ್ಟಿಮಾನ್||

13053030a ಕಿಂಕಿಣೀಶತನಿರ್ಘೋಷೋ ಯುಕ್ತಸ್ತೋಮರಕಲ್ಪನೈಃ|

13053030c ಗದಾಖಡ್ಗನಿಬದ್ಧಶ್ಚ ಪರಮೇಷುಶತಾನ್ವಿತಃ||

“ಯುದ್ಧರಥವೆಂದು ನೀನು ಯಾವುದನ್ನು ತಿಳಿದಿರುವೆಯೋ ಅದನ್ನೇ ಪತಾಕೆಗಳು, ಆಯುಧಗಳು, ಶಕ್ತಿ, ಸ್ವರ್ಣದಂಡ, ಶಬ್ಧಮಾಡುವ ನೂರು ಕಿಂಕಿಣಿಗಂಟೆಗಳು, ಮತ್ತು ತೋಮರಗಳಿರುವ ಸುವರ್ಣ ರಥವನ್ನು ಬೇಗನೆ ಸಜ್ಜುಗೊಳಿಸು.”

13053031a ತತಃ ಸ ತಂ ತಥೇತ್ಯುಕ್ತ್ವಾ ಕಲ್ಪಯಿತ್ವಾ ಮಹಾರಥಮ್|

13053031c ಭಾರ್ಯಾಂ ವಾಮೇ ಧುರಿ ತದಾ ಚಾತ್ಮಾನಂ ದಕ್ಷಿಣೇ ತಥಾ||

ಅವನಿಗೆ ಹಾಗೆಯೇ ಆಗಲೆಂದು ಹೇಳಿ ಅವನು ಮಹಾರಥವನ್ನು ಸಿದ್ಧಗೊಳಿಸಲು ರಥದ ಮೂತಿಯ ಎಡಭಾಗವನ್ನು ಪತ್ನಿ ಮತ್ತು ತಾನು ಬಲಭಾಗವನ್ನು ಹಿಡಿದುಕೊಂಡರು.

13053032a ತ್ರಿದಂಷ್ಟ್ರಂ ವಜ್ರಸೂಚ್ಯಗ್ರಂ ಪ್ರತೋದಂ ತತ್ರ ಚಾದಧತ್|

13053032c ಸರ್ವಮೇತತ್ತತೋ ದತ್ತ್ವಾ ನೃಪೋ ವಾಕ್ಯಮಥಾಬ್ರವೀತ್||

ಮೂರು ಹಲ್ಲುಗಳಿರುವ ವಜ್ರದ ಮೊನೆಗಳಿದ್ದ ಚಾವಟಿಯನ್ನೂ ಅವನಿಗೆ ಕೊಟ್ಟು ನೃಪನು ಈ ಮಾತನ್ನಾಡಿದನು:

13053033a ಭಗವನ್ಕ್ವ ರಥೋ ಯಾತು ಬ್ರವೀತು ಭೃಗುನಂದನಃ|

13053033c ಯತ್ರ ವಕ್ಷ್ಯಸಿ ವಿಪ್ರರ್ಷೇ ತತ್ರ ಯಾಸ್ಯತಿ ತೇ ರಥಃ||

“ಭಗವನ್! ಭೃಗುನಂದನ! ರಥವು ಎಲ್ಲಿಗೆ ಹೋಗಬೇಕೆಂದು ಹೇಳು. ವಿಪ್ರರ್ಷೇ! ನೀನು ಎಲ್ಲಿಗೆಂದು ಹೇಳುತ್ತೀಯೋ ಅಲ್ಲಿಗೆ ಈ ರಥವು ಹೋಗುತ್ತದೆ.”

13053034a ಏವಮುಕ್ತಸ್ತು ಭಗವಾನ್ಪ್ರತ್ಯುವಾಚಾಥ ತಂ ನೃಪಮ್|

13053034c ಇತಃಪ್ರಭೃತಿ ಯಾತವ್ಯಂ ಪದಕಂ ಪದಕಂ ಶನೈಃ||

ಇದನ್ನು ಕೇಳಿ ಭಗವಾನನು ಆ ನೃಪನಿಗೆ ಹೇಳಿದನು: “ಇಲ್ಲಿಂದ ಮೆಲ್ಲನೇ ಹೆಜ್ಜೆಗಳನ್ನಿಡುತ್ತಾ ಇದನ್ನು ಕೊಂಡೊಯ್ಯಬೇಕು.

13053035a ಶ್ರಮೋ ಮಮ ಯಥಾ ನ ಸ್ಯಾತ್ತಥಾ ಮೇ ಚಂದಚಾರಿಣೌ|

13053035c ಸುಖಂ ಚೈವಾಸ್ಮಿ ವೋಢವ್ಯೋ ಜನಃ ಸರ್ವಶ್ಚ ಪಶ್ಯತು||

ನನಗೆ ಶ್ರಮವಾಗದ ರೀತಿಯಲ್ಲಿ ನಾನು ಬಯಸಿದಂತೆ ಹೋಗಬೇಕು. ಸುಖಾಸೀನನಾಗಿರುವ ನನ್ನನ್ನು ಸರ್ವ ಜನರೂ ನೋಡಲಿ!

13053036a ನೋತ್ಸಾರ್ಯಃ ಪಥಿಕಃ ಕಶ್ಚಿತ್ತೇಭ್ಯೋ ದಾಸ್ಯಾಮ್ಯಹಂ ವಸು|

13053036c ಬ್ರಾಹ್ಮಣೇಭ್ಯಶ್ಚ ಯೇ ಕಾಮಾನರ್ಥಯಿಷ್ಯಂತಿ ಮಾಂ ಪಥಿ||

ಪಥಿಕರು ಯಾರೂ ಕದಲಬಾರದು. ಅವರಿಗೆ ಮತ್ತು ನನ್ನ ಮಾರ್ಗದಲ್ಲಿ ಬಯಸಿ ಬರುವ ಬ್ರಾಹ್ಮಣರಿಗೂ ಅವರು ಕೇಳಿದುದನ್ನು ಕೊಡುತ್ತೇನೆ.

13053037a ಸರ್ವಂ ದಾಸ್ಯಾಮ್ಯಶೇಷೇಣ ಧನಂ ರತ್ನಾನಿ ಚೈವ ಹಿ|

13053037c ಕ್ರಿಯತಾಂ ನಿಖಿಲೇನೈತನ್ಮಾ ವಿಚಾರಯ ಪಾರ್ಥಿವ||

ಯಾವುದನ್ನೂ ಬಿಡದೇ ಧನ-ರತ್ನಗಳೆಲ್ಲವನ್ನೂ ಕೊಡುತ್ತೇನೆ. ಇವೆಲ್ಲವನ್ನೂ ಮಾಡಿಸು. ಪಾರ್ಥಿವ! ಇದರ ಕುರಿತು ವಿಚಾರಿಸಬೇಡ!”

13053038a ತಸ್ಯ ತದ್ವಚನಂ ಶ್ರುತ್ವಾ ರಾಜಾ ಭೃತ್ಯಾನಥಾಬ್ರವೀತ್|

13053038c ಯದ್ಯದ್ಬ್ರೂಯಾನ್ಮುನಿಸ್ತತ್ತತ್ಸರ್ವಂ ದೇಯಮಶಂಕಿತೈಃ||

ಅವನ ಆ ಮಾತನ್ನು ಕೇಳಿ ರಾಜನು ಸೇವಕರಿಗೆ ಹೇಳಿದನು: “ಶಂಕೆಯನ್ನು ತೋರದೇ ಈ ಮುನಿಯು ಏನೆಲ್ಲ ಕೇಳುತ್ತಾನೋ ಅವೆಲ್ಲವನ್ನೂ ಕೊಡಿ!”

13053039a ತತೋ ರತ್ನಾನ್ಯನೇಕಾನಿ ಸ್ತ್ರಿಯೋ ಯುಗ್ಯಮಜಾವಿಕಮ್|

13053039c ಕೃತಾಕೃತಂ ಚ ಕನಕಂ ಗಜೇಂದ್ರಾಶ್ಚಾಚಲೋಪಮಾಃ||

13053040a ಅನ್ವಗಚ್ಚಂತ ತಮೃಷಿಂ ರಾಜಾಮಾತ್ಯಾಶ್ಚ ಸರ್ವಶಃ|

13053040c ಹಾಹಾಭೂತಂ ಚ ತತ್ಸರ್ವಮಾಸೀನ್ನಗರಮಾರ್ತಿಮತ್||

ಆಗ ಅನೇಕ ರತ್ನಗಳು, ಸ್ತ್ರೀಯರು, ವಾಹನಗಳು, ಕುರಿಗಳು, ಸ್ವರ್ಣಾಭರಣಗಳು, ಮತ್ತು ಪರ್ವತಗಳಂತಿದ್ದ ಆನೆಗಳು, ಅಮಾತ್ಯರು ಎಲ್ಲರೂ ಆ ಋಷಿಯನ್ನು ಹಿಂಬಾಲಿಸಿದರು. ಆ ನಗರದಲ್ಲೆಲ್ಲಾ ಆರ್ತಸ್ವರದ ಹಾಹಾಕಾರವುಂಟಾಯಿತು.

13053041a ತೌ ತೀಕ್ಷ್ಣಾಗ್ರೇಣ ಸಹಸಾ ಪ್ರತೋದೇನ ಪ್ರಚೋದಿತೌ|

13053041c ಪೃಷ್ಠೇ ವಿದ್ಧೌ ಕಟೇ ಚೈವ ನಿರ್ವಿಕಾರೌ ತಮೂಹತುಃ||

ತೀಕ್ಷ್ಣ ಅಗ್ರಭಾಗದಿಂದ ಒಮ್ಮೆಲೇ ಪೃಷ್ಠಭಾಗ-ಸೊಂಟಗಳ ಮೇಲೆ ಜೋರಾಗಿ ಹೊಡೆಯಲ್ಪಟ್ಟರೂ ಆ ದಂಪತಿಗಳು ನಿರ್ವಿಕಾರರಾಗಿ ರಥವನ್ನು ಎಳೆದುಕೊಂಡು ಹೋಗುತ್ತಿದ್ದರು.

13053042a ವೇಪಮಾನೌ ವಿರಾಹಾರೌ ಪಂಚಾಶದ್ರಾತ್ರಕರ್ಶಿತೌ|

13053042c ಕಥಂ ಚಿದೂಹತುರ್ವೀರೌ ದಂಪತೀ ತಂ ರಥೋತ್ತಮಮ್||

ಐವತ್ತು ದಿನಗಳು ಉಪವಾಸದಿಂದ ದುರ್ಬಲರಾಗಿ ನಡುಗುತ್ತಿದ್ದ ಆ ವೀರ ದಂಪತಿಗಳು ಹೇಗೋ ಅ ಉತ್ತಮ ರಥವನ್ನು ಎಳೆದುಕೊಂಡು ಹೋಗುತ್ತಿದ್ದರು.

13053043a ಬಹುಶೋ ಭೃಶವಿದ್ಧೌ ತೌ ಕ್ಷರಮಾಣೌ ಕ್ಷತೋದ್ಭವಮ್|

13053043c ದದೃಶಾತೇ ಮಹಾರಾಜ ಪುಷ್ಪಿತಾವಿವ ಕಿಂಶುಕೌ||

ಮಹಾರಾಜ! ಅನೇಕಬಾರಿ ಜೋರಾಗಿ ಹೊಡೆಯಲ್ಪಟ್ಟು ಅದರಿಂದುಂಟಾದ ಗಾಯಗಳಿಂದ ರಕ್ತವು ಸುರಿಯುತ್ತಿರಲು ಅವರಿಬ್ಬರೂ ಹೂಬಿಟ್ಟ ಮುತ್ತುಗದ ಮರಗಳಂತೆ ತೋರಿದರು.

13053044a ತೌ ದೃಷ್ಟ್ವಾ ಪೌರವರ್ಗಸ್ತು ಭೃಶಂ ಶೋಕಪರಾಯಣಃ|

13053044c ಅಭಿಶಾಪಭಯಾತ್ತ್ರಸ್ತೋ ನ ಚ ಕಿಂ ಚಿದುವಾಚ ಹ||

ಅವರಿಬ್ಬರನ್ನೂ ನೋಡಿ ಅತ್ಯಂತ ಶೋಕಪರಾಯಣರಾದ ಪೌರವರ್ಗವಾದರೋ ಅಭಿಶಾಪಭಯದಿಂದ ನಡುಗಿ ಏನನ್ನೂ ಹೇಳಲಿಲ್ಲ.

13053045a ದ್ವಂದ್ವಶಶ್ಚಾಬ್ರುವನ್ಸರ್ವೇ ಪಶ್ಯಧ್ವಂ ತಪಸೋ ಬಲಮ್|

13053045c ಕ್ರುದ್ಧಾ ಅಪಿ ಮುನಿಶ್ರೇಷ್ಠಂ ವೀಕ್ಷಿತುಂ ನೈವ ಶಕ್ನುಮಃ||

ಅವರೆಲ್ಲರಲ್ಲಿ ಒಬ್ಬಿಬ್ಬರು ಹೇಳಿಕೊಳ್ಳುತ್ತಿದ್ದರು: “ಇವನ ತಪಸ್ಸಿನ ಬಲವನ್ನು ನೋಡಿರಿ! ಕೃದ್ಧನಾದ ಮುನಿಶ್ರೇಷ್ಠನನ್ನು ನೋಡಲೂ ಕೂಡ ನಾವು ಶಕ್ಯರಾಗಿಲ್ಲ!

13053046a ಅಹೋ ಭಗವತೋ ವೀರ್ಯಂ ಮಹರ್ಷೇರ್ಭಾವಿತಾತ್ಮನಃ|

13053046c ರಾಜ್ಞಶ್ಚಾಪಿ ಸಭಾರ್ಯಸ್ಯ ಧೈರ್ಯಂ ಪಶ್ಯತ ಯಾದೃಶಮ್||

ಅಹೋ! ಭಗವತ ಭಾವಿತಾತ್ಮ ಮಹರ್ಷಿಯ ವೀರ್ಯವೇ! ಅದಕ್ಕೆ ತಕ್ಕಂತಹ ಭಾರ್ಯೆಯೊಂದಿಗಿನ ರಾಜನ ಧೈರ್ಯವನ್ನಾದರೂ ನೋಡಿ!”

13053047a ಶ್ರಾಂತಾವಪಿ ಹಿ ಕೃಚ್ಚ್ರೇಣ ರಥಮೇತಂ ಸಮೂಹತುಃ|

13053047c ನ ಚೈತಯೋರ್ವಿಕಾರಂ ವೈ ದದರ್ಶ ಭೃಗುನಂದನಃ||

ಆಯಾಸಗೊಂಡಿದ್ದರೂ ಕಷ್ಟದಿಂದ ಅವರು ರಥವನ್ನು ಎಳೆಯುತ್ತಿದ್ದರು. ಆದರೂ ಅವರಲ್ಲಿ ಯಾವುದೇ ವಿಕಾರವನ್ನೂ ಭೃಗುನಂದನನು ಕಾಣಲಿಲ್ಲ.”

13053048 ಭೀಷ್ಮ ಉವಾಚ|

13053048a ತತಃ ಸ ನಿರ್ವಿಕಾರೌ ತೌ ದೃಷ್ಟ್ವಾ ಭೃಗುಕುಲೋದ್ವಹಃ|

13053048c ವಸು ವಿಶ್ರಾಣಯಾಮಾಸ ಯಥಾ ವೈಶ್ರವಣಸ್ತಥಾ||

ಭೀಷ್ಮನು ಹೇಳಿದನು: “ಅವರಿಬ್ಬರೂ ನಿರ್ವಿಕಾರರಾಗಿರುವುದನ್ನು ನೋಡಿ ಭೃಗುನಂದನನು ವೈಶ್ರವಣನಂತೆ ಐಶ್ವರ್ಯವನ್ನು ಹಂಚತೊಡಗಿದನು.

13053049a ತತ್ರಾಪಿ ರಾಜಾ ಪ್ರೀತಾತ್ಮಾ ಯಥಾಜ್ಞಪ್ತಮಥಾಕರೋತ್|

13053049c ತತೋಽಸ್ಯ ಭಗವಾನ್ಪ್ರೀತೋ ಬಭೂವ ಮುನಿಸತ್ತಮಃ||

ಆಗಲೂ ಕೂಡ ಪ್ರೀತಾತ್ಮನಾದ ರಾಜನು ಆಜ್ಞೆಯಿದ್ದಂತೆಯೇ ಮಾಡಿದನು. ಆಗ ಭಗವಾನ್ ಮುನಿಸತ್ತಮನು ಪ್ರೀತನಾದನು.

13053050a ಅವತೀರ್ಯ ರಥಶ್ರೇಷ್ಠಾದ್ದಂಪತೀ ತೌ ಮುಮೋಚ ಹ|

13053050c ವಿಮೋಚ್ಯ ಚೈತೌ ವಿಧಿವತ್ತತೋ ವಾಕ್ಯಮುವಾಚ ಹ||

13053051a ಸ್ನಿಗ್ಧಗಂಭೀರಯಾ ವಾಚಾ ಭಾರ್ಗವಃ ಸುಪ್ರಸನ್ನಯಾ|

13053051c ದದಾನಿ ವಾಂ ವರಂ ಶ್ರೇಷ್ಠಂ ತದ್ಬ್ರೂತಾಮಿತಿ ಭಾರತ||

ಭಾರತ! ಶ್ರೇಷ್ಠ ರಥದಿಂದ ಕೆಳಗಿಳಿದು ಅವನು ಆ ದಂಪತಿಗಳನ್ನು ರಥದಿಂದ ಬಿಡಿಸಿದನು. ಅವರನ್ನು ಬಿಡಿಸಿ ಭಾರ್ಗವನು ಸುಪ್ರಸನ್ನನಾಗಿ ಬ್ರಹ್ಮನಂತೆಯೇ ಸ್ನಿಗ್ಧಗಂಭೀರ ವಾಣಿಯಲ್ಲಿ “ಶ್ರೇಷ್ಠವರವನ್ನು ನೀಡುತ್ತೇನೆ. ಕೇಳಿಕೋ!” ಎಂದನು.

13053052a ಸುಕುಮಾರೌ ಚ ತೌ ವಿದ್ವಾನ್ಕರಾಭ್ಯಾಂ ಮುನಿಸತ್ತಮಃ|

13053052c ಪಸ್ಪರ್ಶಾಮೃತಕಲ್ಪಾಭ್ಯಾಂ ಸ್ನೇಹಾದ್ಭರತಸತ್ತಮ||

ಭರತಸತ್ತಮ! ಮುನಿಸತ್ತಮನು ಸ್ನೇಹದಿಂದ ತನ್ನ ಅಮೃತಕಲ್ಪ ಕೈಗಳಿಂದ ಅವರ ಸುಕುಮಾರ ಶರೀರಗಳನ್ನು ಸವರಿದನು.

13053053a ಅಥಾಬ್ರವೀನ್ನೃಪೋ ವಾಕ್ಯಂ ಶ್ರಮೋ ನಾಸ್ತ್ಯಾವಯೋರಿಹ|

13053053c ವಿಶ್ರಾಂತೌ ಸ್ವಃ ಪ್ರಭಾವಾತ್ತೇ ಧ್ಯಾನೇನೈವೇತಿ ಭಾರ್ಗವ||

ಆಗ ನೃಪನು “ಭಾರ್ಗವ! ನಮಗಿಬ್ಬರಿಗೂ ಈಗ ಶ್ರಮವೆನ್ನುವುದೇ ಇಲ್ಲವಾಗಿದೆ. ನಿನ್ನ ಪ್ರಭಾವದಿಂದ ನಾವಿಬ್ಬರೂ ವಿಶ್ರಾಂತರಾಗಿದ್ದೇವೆ” ಎಂದನು.

13053054a ಅಥ ತೌ ಭಗವಾನ್ಪ್ರಾಹ ಪ್ರಹೃಷ್ಟಶ್ಚ್ಯವನಸ್ತದಾ|

13053054c ನ ವೃಥಾ ವ್ಯಾಹೃತಂ ಪೂರ್ವಂ ಯನ್ಮಯಾ ತದ್ಭವಿಷ್ಯತಿ||

ಆಗ ಪ್ರಹೃಷ್ಟನಾದ ಭಗವಾನ್ ಚ್ಯವನನು ಅವರಿಗೆ ಹೇಳಿದನು: “ಹಿಂದೆ ನಾನು ಹೇಳಿದುದು ವ್ಯರ್ಥವಾಗುವುದಿಲ್ಲ. ಅದು ಹಾಗೆಯೇ ಆಗುತ್ತದೆ.

13053055a ರಮಣೀಯಃ ಸಮುದ್ದೇಶೋ ಗಂಗಾತೀರಮಿದಂ ಶುಭಮ್|

13053055c ಕಂ ಚಿತ್ಕಾಲಂ ವ್ರತಪರೋ ನಿವತ್ಸ್ಯಾಮೀಹ ಪಾರ್ಥಿವ||

ಪಾರ್ಥಿವ! ಈ ಗಂಗಾತೀರ ಪ್ರದೇಶವು ರಮಣೀಯವೂ ಶುಭವೂ ಆಗಿದೆ. ಕೆಲವು ಸಮಯ ಇಲ್ಲಿ ವ್ರತಪರನಾಗಿ ವಾಸಿಸುತ್ತೇನೆ.

13053056a ಗಮ್ಯತಾಂ ಸ್ವಪುರಂ ಪುತ್ರ ವಿಶ್ರಾಂತಃ ಪುನರೇಷ್ಯಸಿ|

13053056c ಇಹಸ್ಥಂ ಮಾಂ ಸಭಾರ್ಯಸ್ತ್ವಂ ದ್ರಷ್ಟಾಸಿ ಶ್ವೋ ನರಾಧಿಪ||

ಪುತ್ರ! ನರಾಧಿಪ! ಸ್ವಪುರಕ್ಕೆ ಹೋಗಿ ವಿಶ್ರಾಂತಿಯನ್ನು ಪಡೆದುಕೋ. ಪುನಃ ಬರುವಿಯಂತೆ. ಭಾರ್ಯೆಯೊಂದಿಗೆ ನೀನು ನಾಳೆ ನನ್ನನ್ನು ಇಲ್ಲಿ ನೋಡುತ್ತೀಯೆ!

13053057a ನ ಚ ಮನ್ಯುಸ್ತ್ವಯಾ ಕಾರ್ಯಃ ಶ್ರೇಯಸ್ತೇ ಸಮುಪಸ್ಥಿತಮ್|

13053057c ಯತ್ಕಾಂಕ್ಷಿತಂ ಹೃದಿಸ್ಥಂ ತೇ ತತ್ಸರ್ವಂ ಸಂಭವಿಷ್ಯತಿ||

ಕೋಪಗೊಳ್ಳಬೇಡ! ನಿನಗೆ ಶ್ರೇಯಸ್ಸುಂಟಾಗಲಿದೆ. ನಿನ್ನ ಹೃದಯದಲ್ಲಿರುವ ಆಕಾಂಕ್ಷೆಗಳು ಎಲ್ಲವೂ ನೆರವೇರುತ್ತವೆ.”

13053058a ಇತ್ಯೇವಮುಕ್ತಃ ಕುಶಿಕಃ ಪ್ರಹೃಷ್ಟೇನಾಂತರಾತ್ಮನಾ|

13053058c ಪ್ರೋವಾಚ ಮುನಿಶಾರ್ದೂಲಮಿದಂ ವಚನಮರ್ಥವತ್||

ಇದನ್ನು ಕೇಳಿದ ಕುಶಿಕನು ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಮುನಿಶಾರ್ದೂಲನಿಗೆ ಅರ್ಥವತ್ತಾದ ಈ ಮಾತನ್ನಾಡಿದನು:

13053059a ನ ಮೇ ಮನ್ಯುರ್ಮಹಾಭಾಗ ಪೂತೋಽಸ್ಮಿ ಭಗವಂಸ್ತ್ವಯಾ|

13053059c ಸಂವೃತ್ತೌ ಯೌವನಸ್ಥೌ ಸ್ವೋ ವಪುಷ್ಮಂತೌ ಬಲಾನ್ವಿತೌ||

“ಭಗವನ್! ಮಹಾಭಾಗ! ನನಗೆ ಕೋಪವಿಲ್ಲ. ನಿನ್ನಿಂದ ನಾನು ಪವಿತ್ರನಾಗಿದ್ದೇನೆ. ನಿನ್ನಿಂದಾಗಿ ನಾವಿಬ್ಬರೂ ನವಯೌವನವನ್ನೂ, ಸುಂದರ ಶರೀರವನ್ನೂ ಮತ್ತು ಬಲವನ್ನೂ ಪಡೆದಿದ್ದೇವೆ.

13053060a ಪ್ರತೋದೇನ ವ್ರಣಾ ಯೇ ಮೇ ಸಭಾರ್ಯಸ್ಯ ಕೃತಾಸ್ತ್ವಯಾ|

13053060c ತಾನ್ನ ಪಶ್ಯಾಮಿ ಗಾತ್ರೇಷು ಸ್ವಸ್ಥೋಽಸ್ಮಿ ಸಹ ಭಾರ್ಯಯಾ||

ನಿನ್ನ ಚಾವಟಿಯ ಹೊಡೆತದಿಂದ ನನ್ನ ಮತ್ತು ಪತ್ನಿಯ ಶರೀರಗಳ ಮೇಲೆ ಉಂಟಾದ ಗಾಯಗಳನ್ನೂ ಕಾಣುತ್ತಿಲ್ಲ. ಭಾರ್ಯೆಯೊಂದಿಗೆ ನಾನು ಸ್ವಸ್ಥಚಿತ್ತನಾಗಿದ್ದೇನೆ.

13053061a ಇಮಾಂ ಚ ದೇವೀಂ ಪಶ್ಯಾಮಿ ಮುನೇ ದಿವ್ಯಾಪ್ಸರೋಪಮಾಮ್|

13053061c ಶ್ರಿಯಾ ಪರಮಯಾ ಯುಕ್ತಾಂ ಯಥಾದೃಷ್ಟಾಂ ಮಯಾ ಪುರಾ||

ನಾನು ಹಿಂದೆ ನೋಡಿದ್ದಂತೆ ಈಗಲೂ ನನ್ನ ಈ ದೇವಿಯು ಅಪ್ಸರೆಯರಂತೆ ಪರಮ ಶ್ರೀಯಿಂದ ಕೂಡಿರುವುದನ್ನು ಕಾಣುತ್ತಿದ್ದೇನೆ.

13053062a ತವ ಪ್ರಸಾದಾತ್ಸಂವೃತ್ತಮಿದಂ ಸರ್ವಂ ಮಹಾಮುನೇ|

13053062c ನೈತಚ್ಚಿತ್ರಂ ತು ಭಗವಂಸ್ತ್ವಯಿ ಸತ್ಯಪರಾಕ್ರಮ||

ಮಹಾಮುನೇ! ಭಗವನ್! ಸತ್ಯಪರಾಕ್ರಮ! ಈ ಸರ್ವವೂ ನಿನ್ನ ಪ್ರಸಾದದಿಂದಲೇ ಪ್ರಾಪ್ತವಾಗಿವೆ. ನಿನ್ನಲ್ಲಿ ಈ ಶಕ್ತಿಯಿರುವುದು ಆಶ್ಚರ್ಯವೇನಲ್ಲ.”

13053063a ಇತ್ಯುಕ್ತಃ ಪ್ರತ್ಯುವಾಚೇದಂ ಚ್ಯವನಃ ಕುಶಿಕಂ ತದಾ|

13053063c ಆಗಚ್ಚೇಥಾಃ ಸಭಾರ್ಯಶ್ಚ ತ್ವಮಿಹೇತಿ ನರಾಧಿಪ||

ಇದನ್ನು ಕೇಳಿ ಚ್ಯವನನು ಕುಶಿಕನಿಗೆ “ನರಾಧಿಪ! ಭಾರ್ಯೆಯೊಂದಿಗೆ ಇಲ್ಲಿಗೆ ಬರಬೇಕು” ಎಂದು ಹೇಳಿದನು.

13053064a ಇತ್ಯುಕ್ತಃ ಸಮನುಜ್ಞಾತೋ ರಾಜರ್ಷಿರಭಿವಾದ್ಯ ತಮ್|

13053064c ಪ್ರಯಯೌ ವಪುಷಾ ಯುಕ್ತೋ ನಗರಂ ದೇವರಾಜವತ್||

ಇದನ್ನು ಕೇಳಿ ಅನುಜ್ಞಾತನಾಗಿ ರಾಜರ್ಷಿಯು ಅವನಿಗೆ ನಮಸ್ಕರಿಸಿ ದೇವರಾಜನಂತೆ ಕಾಂತಿಯುಕ್ತನಾಗಿ ನಗರವನ್ನು ಪ್ರವೇಶಿಸಿದನು.

13053065a ತತ ಏನಮುಪಾಜಗ್ಮುರಮಾತ್ಯಾಃ ಸಪುರೋಹಿತಾಃ|

13053065c ಬಲಸ್ಥಾ ಗಣಿಕಾಯುಕ್ತಾಃ ಸರ್ವಾಃ ಪ್ರಕೃತಯಸ್ತಥಾ||

ಹಾಗೆಯೇ ಪುರೋಹಿತರೊಂದಿಗೆ ಅಮಾತ್ಯರು, ಸೇನಾಪತಿಗಳು, ವೇಶ್ಯೆಯರು ಮತ್ತು ಎಲ್ಲ ಪ್ರಜೆಗಳೂ ನಗರಕ್ಕೆ ತೆರಳಿದರು.

13053066a ತೈರ್ವೃತಃ ಕುಶಿಕೋ ರಾಜಾ ಶ್ರಿಯಾ ಪರಮಯಾ ಜ್ವಲನ್|

13053066c ಪ್ರವಿವೇಶ ಪುರಂ ಹೃಷ್ಟಃ ಪೂಜ್ಯಮಾನೋಽಥ ಬಂದಿಭಿಃ||

ಪರಮ ಶ್ರೀಯಿಂದ ಪ್ರಜ್ವಲಿಸುತ್ತಿದ್ದ ರಾಜನು ಹೃಷ್ಟನಾಗಿ ಬಂದಿಗಳಿಂದ ಪೂಜಿಸಲ್ಪಡುತ್ತಾ ಪುರವನ್ನು ಪ್ರವೇಶಿಸಿದನು.

13053067a ತತಃ ಪ್ರವಿಶ್ಯ ನಗರಂ ಕೃತ್ವಾ ಸರ್ವಾಹ್ಣಿಕಕ್ರಿಯಾಃ|

13053067c ಭುಕ್ತ್ವಾ ಸಭಾರ್ಯೋ ರಜನೀಮುವಾಸ ಸ ಮಹೀಪತಿಃ||

ನಗರವನ್ನು ಪ್ರವೇಶಿಸಿ ಸರ್ವ ಆಹ್ಣಿಕಕ್ರಿಯೆಗಳನ್ನು ಪೂರೈಸಿ  ಭೋಜನಗೈದು ಮಹೀಪತಿಯು ಪತ್ನಿಯೊಡನೆ ರಾತ್ರಿಯನ್ನು ಕಳೆದನು.

13053068a ತತಸ್ತು ತೌ ನವಮಭಿವೀಕ್ಷ್ಯ ಯೌವನಂ

ಪರಸ್ಪರಂ ವಿಗತಜರಾವಿವಾಮರೌ|

13053068c ನನಂದತುಃ ಶಯನಗತೌ ವಪುರ್ಧರೌ

ಶ್ರಿಯಾ ಯುತೌ ದ್ವಿಜವರದತ್ತಯಾ ತಯಾ||

ಶಯನಮಂದಿರಕ್ಕೆ ಹೋದ ಅವರು ದ್ವಿಜವರನು ತಮಗೆ ನೀಡಿದ ಶ್ರೀಯಿಂದ ಕೂಡಿದ ರೂಪದ ತಮ್ಮ ಶರೀರಗಳು ಅಮರರಂತೆ ವೃದ್ಧಾಪ್ಯವಿಲ್ಲದೇ ನವಯೌವನದಿಂದ ಕೂಡಿರುವುದನ್ನು ಪರಸ್ಪರ ನೋಡಿಕೊಂಡು ಆನಂದಿಸಿದರು.

13053069a ಸ ಚಾಪ್ಯೃಷಿರ್ಭೃಗುಕುಲಕೀರ್ತಿವರ್ಧನಸ್

ತಪೋಧನೋ ವನಮಭಿರಾಮಮೃದ್ಧಿಮತ್|

13053069c ಮನೀಷಯಾ ಬಹುವಿಧರತ್ನಭೂಷಿತಂ

ಸಸರ್ಜ ಯನ್ನಾಸ್ತಿ ಶತಕ್ರತೋರಪಿ||

ಭೃಗುಕುಲಕೀರ್ತಿವರ್ಧನ ಋಷಿ ತಪೋಧನ ಚ್ಯವನನಾದರೋ ಮನಸ್ಸಂಕಲ್ಪದಿಂದಲೇ ಬಹುವಿಧ ರತ್ನಗಳಿಂದ ವಿಭೂಷಿತವಾದ ಕಣ್ಣುಗಳಿಗೆ ಆನಂದವನ್ನು ನೀಡುತ್ತಿದ್ದ ಸಂಪದ್ಭರಿತ ವನವನ್ನು ಸೃಷ್ಟಿಸಿದನು. ಅಂಥಹ ವನವು ಶತಕ್ರತುವಿನಲ್ಲಿಯೂ ಇರಲಿಲ್ಲ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನಕುಶಿಕಸಂವಾದೇ ತ್ರಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ಮೂರನೇ ಅಧ್ಯಾಯವು.

Related image

Comments are closed.