Anushasana Parva: Chapter 45

ಅನುಶಾಸನ ಪರ್ವ: ದಾನಧರ್ಮ ಪರ್ವ

೪೫

ಯುಧಿಷ್ಠಿರನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಭೀಷ್ಮನು ಕನ್ಯೆಯ ವಿವಾಹದ ಹಾಗೂ ಕನ್ಯೆ ಮತ್ತು ಮಗಳ-ಮಗ ಮೊದಲಾದವರ ಉತ್ತರಾಧಿಕಾರತ್ವದ ವಿಚಾರಗಳನ್ನು ತಿಳಿಸಿದುದು (೧-೨೪).

13045001 ಯುಧಿಷ್ಠಿರ ಉವಾಚ|

13045001a ಕನ್ಯಾಯಾಃ ಪ್ರಾಪ್ತಶುಲ್ಕಾಯಾಃ ಪತಿಶ್ಚೇನ್ನಾಸ್ತಿ ಕಶ್ಚನ|

13045001c ತತ್ರ ಕಾ ಪ್ರತಿಪತ್ತಿಃ ಸ್ಯಾತ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಕನ್ಯಾಶುಲ್ಕವನ್ನು ಕೊಟ್ಟು ಪತಿಯು ಎಲ್ಲಿಯೋ ಹೊರಟುಹೋದರೆ ಆಗ ಕನ್ಯಾಪಿತೃವು ಏನು ಮಾಡಬೇಕು. ಅದನ್ನು ನನಗೆ ಹೇಳು.”

13045002 ಭೀಷ್ಮ ಉವಾಚ|

13045002a ಯಾಪುತ್ರಕಸ್ಯಾಪ್ಯರಿಕ್ಥಸ್ಯ ಪ್ರತಿಪತ್ಸಾ ತದಾ ಭವೇತ್|

13045003a ಅಥ ಚೇತ್ಸಾಹರೇಚ್ಚುಲ್ಕಂ ಕ್ರೀತಾ ಶುಲ್ಕಪ್ರದಸ್ಯ ಸಾ||

ಭೀಷ್ಮನು ಹೇಳಿದನು: “ಪುತ್ರನಿಲ್ಲದವನು ಕನ್ಯಾಶುಲ್ಕವನ್ನು ಕೊಟ್ಟಿದ್ದರೆ ಅವನು ಬರುವವರೆಗೂ ಕನ್ಯಾಪಿತೃವು ಕಾಯಬೇಕು. ಶುಲ್ಕವನ್ನು ಹಿಂದಿರುಗಿಸುವ ವರೆಗೆ ಅವಳನ್ನು ಶುಲ್ಕವನ್ನು ಇತ್ತವನಿಗೆ ಕೊಟ್ಟಂತೆಯೇ ಆಗುತ್ತದೆ.

13045003c ತಸ್ಯಾರ್ಥೇಽಪತ್ಯಮೀಹೇತ ಯೇನ ನ್ಯಾಯೇನ ಶಕ್ನುಯಾತ್|

13045004a ನ ತಸ್ಯಾ ಮಂತ್ರವತ್ಕಾರ್ಯಂ ಕಶ್ಚಿತ್ಕುರ್ವೀತ ಕಿಂ ಚನ||

ಆ ಶುಲ್ಕವನ್ನು ಕೊಟ್ಟ ಮಕ್ಕಳಿಲ್ಲದವನು ಬಾರದೆಯೇ ಇದ್ದರೆ ಕನ್ಯೆಯು ವಿಧಿವತ್ತಾಗಿ ಬೇರೆಯವರಿಂದ ಸಂತಾನವನ್ನು ಪಡೆದುಕೊಳ್ಳಬಹುದು. ಬೇರೆ ಯಾರೂ ಮಂತ್ರವತ್ತಾಗಿ ಅವಳನ್ನು ವಿವಾಹವಾಗಬಾರದು.

13045005a ಸ್ವಯಂ ವೃತೇತಿ ಸಾವಿತ್ರೀ ಪಿತ್ರಾ ವೈ ಪ್ರತ್ಯಪದ್ಯತ|

13045005c ತತ್ತಸ್ಯಾನ್ಯೇ ಪ್ರಶಂಸಂತಿ ಧರ್ಮಜ್ಞಾ ನೇತರೇ ಜನಾಃ||

ತಂದೆಯ ಸೂಚನೆಯಂತೆ ಸಾವಿತ್ರಿಯು ಸ್ವಯಂ ಪತಿಯನ್ನು ಆರಿಸಿಕೊಂಡಳು. ಅದನ್ನು ಕೆಲವು ಧರ್ಮಜ್ಞರು ಪ್ರಶಂಸಿಸಿದರೆ ಇನ್ನು ಕೆಲವರು ಅದನ್ನು ಸಮ್ಮತಿಸುವುದಿಲ್ಲ.

13045006a ಏತತ್ತು ನಾಪರೇ ಚಕ್ರುರ್ನ ಪರೇ ಜಾತು ಸಾಧವಃ|

13045006c ಸಾಧೂನಾಂ ಪುನರಾಚಾರೋ ಗರೀಯೋ ಧರ್ಮಲಕ್ಷಣಮ್||

ಇದನ್ನು ಬೇರೆ ಯಾರೂ ಮಾಡಿಲ್ಲ. ಸತ್ಪುರುಷರು ಹೀಗೆ ಮಾಡುವುದಿಲ್ಲ ಎಂದು ಕೆಲವರು ಹೇಳಿದರೆ ಸಾಧುಗಳ ಆಚಾರಗಳು ಧರ್ಮಲಕ್ಷಣವೂ ಮತ್ತು ಪುನಃ ಆಚರಿಸಲು ಶ್ರೇಷ್ಠವೂ ಆದುದೆಂದು ಕೆಲವರು ಹೇಳುತ್ತಾರೆ.

13045007a ಅಸ್ಮಿನ್ನೇವ ಪ್ರಕರಣೇ ಸುಕ್ರತುರ್ವಾಕ್ಯಮಬ್ರವೀತ್|

13045007c ನಪ್ತಾ ವಿದೇಹರಾಜಸ್ಯ ಜನಕಸ್ಯ ಮಹಾತ್ಮನಃ||

ಈ ಪ್ರಕರಣದ ಕುರಿತು ವಿದೇಹರಾಜ ಮಹಾತ್ಮ ಜನಕನ ಮೊಮ್ಮಗ ಸುಕ್ರತುವು ಹೀಗೆ ಹೇಳಿದ್ದಾನೆ:

13045008a ಅಸದಾಚರಿತೇ ಮಾರ್ಗೇ ಕಥಂ ಸ್ಯಾದನುಕೀರ್ತನಮ್|

13045008c ಅನುಪ್ರಶ್ನಃ ಸಂಶಯೋ ವಾ ಸತಾಮೇತದುಪಾಲಭೇತ್||

“ಅಸತ್ಪುರುಷರು ಆಚರಿಸಿದ ಮಾರ್ಗವನ್ನು ಹೇಗೆ ತಾನೇ ಅನುಮೋದಿಸಬಹುದು? ಇದರ ಕುರಿತು ಸತ್ಪುರುಷರ ಸಮಕ್ಷಮದಲ್ಲಿ ಪ್ರಶ್ನೆ ಅಥವಾ ಸಂಶಯಕ್ಕೆ ಅವಕಾಶವಿದೆ?

13045009a ಅಸದೇವ ಹಿ ಧರ್ಮಸ್ಯ ಪ್ರಮಾದೋ ಧರ್ಮ ಆಸುರಃ|

13045009c ನಾನುಶುಶ್ರುಮ ಜಾತ್ವೇತಾಮಿಮಾಂ ಪೂರ್ವೇಷು ಜನ್ಮಸು||

ಸಾವಿತ್ರಿಯ ವಿಷಯದಲ್ಲಿ ನಡೆದುದು ಧರ್ಮದ ಪ್ರಮಾದಗೊಳಿಸುವ ಅಸತ್ಪುರುಷರ ಅಥವಾ ಅಸುರೀ ಆಚಾರ. ಪೂರ್ವಕಾಲದಲ್ಲಿ ಹುಟ್ಟಿದವರಲ್ಲಿ ಈ ರೀತಿ ನಡೆದುದನ್ನು ನಾವು ಕೇಳಿಲ್ಲ.

13045010a ಭಾರ್ಯಾಪತ್ಯೋರ್ಹಿ ಸಂಬಂಧಃ ಸ್ತ್ರೀಪುಂಸೋಸ್ತುಲ್ಯ ಏವ ಸಃ|

13045010c ರತಿಃ ಸಾಧಾರಣೋ ಧರ್ಮ ಇತಿ ಚಾಹ ಸ ಪಾರ್ಥಿವಃ||

ಪತಿ-ಪತ್ನಿಯರ ಸಂಬಂಧವು ಸ್ತ್ರೀ-ಪುರುಷರ ಸಂಬಂಧದಂತೆ. ಇಲ್ಲಿ ರತಿಸುಖವು ಒಂದು ಸಾಧಾರಣ ಧರ್ಮ” ಎಂದು ಆ ಪಾರ್ಥಿವನು ಹೇಳಿದ್ದನು.”

13045011 ಯುಧಿಷ್ಠಿರ ಉವಾಚ|

13045011a ಅಥ ಕೇನ ಪ್ರಮಾಣೇನ ಪುಂಸಾಮಾದೀಯತೇ ಧನಮ್|

13045011c ಪುತ್ರವದ್ಧಿ ಪಿತುಸ್ತಸ್ಯ ಕನ್ಯಾ ಭವಿತುಮರ್ಹತಿ||

ಯುಧಿಷ್ಠಿರನು ಹೇಳಿದನು: “ತಂದೆಗೆ ಪುತ್ರಿಯು ಪುತ್ರನ ಸಮಾನಳೇ ಆಗಿರುತ್ತಾಳೆ. ಆದರೂ ಯಾವ ಪ್ರಮಾಣದಿಂದ ಕೇವಲ ಪುರುಷನೇ ಧನಕ್ಕೆ ಅಧಿಕಾರಿಯಾಗುತ್ತಾನೆ ಎಂದು ಹೇಳುತ್ತಾರೆ?”

13045012 ಭೀಷ್ಮ ಉವಾಚ|

13045012a ಯಥೈವಾತ್ಮಾ ತಥಾ ಪುತ್ರಃ ಪುತ್ರೇಣ ದುಹಿತಾ ಸಮಾ|

13045012c ತಸ್ಯಾಮಾತ್ಮನಿ ತಿಷ್ಠಂತ್ಯಾಂ ಕಥಮನ್ಯೋ ಧನಂ ಹರೇತ್||

ಭೀಷ್ಮನು ಹೇಳಿದನು: “ಮಗನೇ! ಪುತ್ರನು ಆತ್ಮಸ್ವರೂಪ ಮತ್ತು ಮಗಳು ಪುತ್ರನ ಸಮ. ಆದುದರಿಂದ ಆತ್ಮನೇ ಇರುವಾಗ ಅನ್ಯನು ಹೇಗೆ ಧನವನ್ನು ಅಪಹರಿಸಿಕೊಳ್ಳಬಲ್ಲನು?

13045013a ಮಾತುಶ್ಚ ಯೌತಕಂ ಯತ್ಸ್ಯಾತ್ಕುಮಾರೀಭಾಗ ಏವ ಸಃ|

13045013c ದೌಹಿತ್ರ ಏವ ವಾ ರಿಕ್ಥಮಪುತ್ರಸ್ಯ ಪಿತುರ್ಹರೇತ್||

ತಾಯಿಗೆ ವಿವಾಹಸಮಯದಲ್ಲಿ ಸಿಕ್ಕಿರುವ ಧನಕ್ಕೆ ಪುತ್ರಿಯೇ ಭಾಗದಾರಳಾಗುತ್ತಾಳೆ. ಆದುದರಿಂದ ಯಾರಿಗೆ ಪುತ್ರನೇ ಇಲ್ಲವೋ ಅವರ ಧನದ ಅಧಿಕಾರವು ಅವರ ಮಗಳ ಮಗನಿಗೆ ಮಾತ್ರ ಇರುತ್ತದೆ. ಅವನೇ ಆ ಧನವನ್ನು ತೆಗೆದುಕೊಳ್ಳಬಹುದು.

13045014a ದದಾತಿ ಹಿ ಸ ಪಿಂಡಂ ವೈ ಪಿತುರ್ಮಾತಾಮಹಸ್ಯ ಚ|

13045014c ಪುತ್ರದೌಹಿತ್ರಯೋರ್ನೇಹ ವಿಶೇಷೋ ಧರ್ಮತಃ ಸ್ಮೃತಃ||

ಏಕೆಂದರೆ ಮಗಳ ಮಗನು ತನ್ನ ತಂದೆಗೆ ಮತ್ತು ತನ್ನ ತಾಯಿಯ ತಂದೆಗೂ ಪಿಂಡವನ್ನು ನೀಡುತ್ತಾನೆ. ಧರ್ಮದ ದೃಷ್ಟಿಯಲ್ಲಿ ಮಗ ಮತ್ತು ಮಗಳ ಮಗ ಇವರಲ್ಲಿ ಯಾವ ಅಂತರವೂ ಇಲ್ಲ.

13045015a ಅನ್ಯತ್ರ ಜಾತಯಾ ಸಾ ಹಿ ಪ್ರಜಯಾ ಪುತ್ರ ಈಹತೇ|

13045015c ದುಹಿತಾನ್ಯತ್ರ ಜಾತೇನ ಪುತ್ರೇಣಾಪಿ ವಿಶಿಷ್ಯತೇ||

ಇನ್ನೊಂದೆಡೆ ಪುತ್ರಿಯನ್ನು ಪುತ್ರಕನಾಗಿಸಿಕೊಂಡ ನಂತರ ಪುತ್ರನು ಹುಟ್ಟಿದರೆ ಅವನು ಧನಕ್ಕೆ ಪುತ್ರಿಯ ಸಮಾನ ಅಧಿಕಾರಿಯಾಗುತ್ತಾನೆ. ಒಂದುವೇಳೆ ಪುತ್ರಿಯನ್ನು ಪುತ್ರಕನಾಗಿಸಿಕೊಂಡ ನಂತರ ಇನ್ನೊಬ್ಬನನ್ನು ಪುತ್ರನನ್ನಾಗಿ ದತ್ತು ತೆಗೆದುಕೊಂಡರೆ ಪುತ್ರಿಗೇ ಧನದ ಅಧಿಕಾರವು ಹೆಚ್ಚಾಗಿರುತ್ತದೆ. 

13045016a ದೌಹಿತ್ರಕೇಣ ಧರ್ಮೇಣ ನಾತ್ರ ಪಶ್ಯಾಮಿ ಕಾರಣಮ್|

13045016c ವಿಕ್ರೀತಾಸು ಚ ಯೇ ಪುತ್ರಾ ಭವಂತಿ ಪಿತುರೇವ ತೇ||

ಶುಲ್ಕ ಪಡೆದುಕೊಂಡು ಕನ್ಯೆಯನ್ನು ಮಾರಿರುವ ಸಂದರ್ಭದಲ್ಲಿ ಅವಳ ಪುತ್ರನು ಕೇವಲ ತನ್ನ ತಂದೆಯ ಉತ್ತರಾಧಿಕಾರಿಯಾಗುತ್ತಾನೆ. ದೌಹಿತ್ರಿಕ ಧರ್ಮದ ಅನುಸಾರವಾಗಿ ಅವನಿಗೆ ತಾಯಿಯ ತಂದೆಯ ಧನದ ಮೇಲೆ ಅಧಿಕಾರವಿದೆ ಎನ್ನುವುದಕ್ಕೆ ಕಾರಣವನ್ನೇ ನಾನು ಕಾಣುವುದಿಲ್ಲ.

13045017a ಅಸೂಯವಸ್ತ್ವಧರ್ಮಿಷ್ಠಾಃ ಪರಸ್ವಾದಾಯಿನಃ ಶಠಾಃ|

13045017c ಆಸುರಾದಧಿಸಂಭೂತಾ ಧರ್ಮಾದ್ವಿಷಮವೃತ್ತಯಃ||

ಆಸುರೀ ವಿವಾಹದಲ್ಲಿ ಹುಟ್ಟಿದ ಸಂತಾನಗಳು ಅಸೂಯಾಪರರೂ, ಅಧರ್ಮಿಷ್ಠರೂ, ಪರರ ಸ್ವತ್ತನ್ನು ಅಪಹರಿಸುವವರೂ, ಶಠರೂ, ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರೂ ಆಗಿರುತ್ತಾರೆ.

13045018a ಅತ್ರ ಗಾಥಾ ಯಮೋದ್ಗೀತಾಃ ಕೀರ್ತಯಂತಿ ಪುರಾವಿದಃ|

13045018c ಧರ್ಮಜ್ಞಾ ಧರ್ಮಶಾಸ್ತ್ರೇಷು ನಿಬದ್ಧಾ ಧರ್ಮಸೇತುಷು||

ಈ ವಿಷಯದಲ್ಲಿ ಹಿಂದಿನದವುಗಳನ್ನು ತಿಳಿದಿರುವವರು ಮತ್ತು ಧರ್ಮಶಾಸ್ತ್ರಗಳಲ್ಲಿ ನಿಬದ್ಧರಾಗಿರುವ ಧರ್ಮಜ್ಞ ಧರ್ಮಸೇತುಗಳು ಯಮನ ಗೀತೆಯನ್ನು ಹೇಳುತ್ತಾರೆ.

13045019a ಯೋ ಮನುಷ್ಯಃ ಸ್ವಕಂ ಪುತ್ರಂ ವಿಕ್ರೀಯ ಧನಮಿಚ್ಚತಿ|

13045019c ಕನ್ಯಾಂ ವಾ ಜೀವಿತಾರ್ಥಾಯ ಯಃ ಶುಲ್ಕೇನ ಪ್ರಯಚ್ಚತಿ||

13045020a ಸಪ್ತಾವರೇ ಮಹಾಘೋರೇ ನಿರಯೇ ಕಾಲಸಾಹ್ವಯೇ|

13045020c ಸ್ವೇದಂ ಮೂತ್ರಂ ಪುರೀಷಂ ಚ ತಸ್ಮಿನ್ಪ್ರೇತ ಉಪಾಶ್ನುತೇ||

“ಯಾವ ಮನುಷ್ಯನು ತನ್ನ ಪುತ್ರನನ್ನು ಮಾರಾಟಮಾಡಿ ಧನವನ್ನು ಸಂಪಾದಿಸುವನೋ ಅಥವಾ ಯಾರು ಜೀವನಕ್ಕಾಗಿ ಶುಲ್ಕವನ್ನು ಪಡೆದು ಕನ್ಯೆಯನ್ನು ಕೊಡುತ್ತಾನೋ ಅವನು ಮಹಾಘೋರನರಕಗಳಲ್ಲಿ ಏಳನೆಯದಾದ ಕಾಲಸಾಹ್ವಯದಲ್ಲಿ ತನ್ನದೇ ಮಲ-ಮೂತ್ರ-ಬೆವರನ್ನು ಭಕ್ಷಿಸುತ್ತಾನೆ. 

13045021a ಆರ್ಷೇ ಗೋಮಿಥುನಂ ಶುಲ್ಕಂ ಕೇ ಚಿದಾಹುರ್ಮೃಷೈವ ತತ್|

13045021c ಅಲ್ಪಂ ವಾ ಬಹು ವಾ ರಾಜನ್ವಿಕ್ರಯಸ್ತಾವದೇವ ಸಃ||

ವಿವಾಹದಲ್ಲಿ ಗೋವುಗಳ ಜೋಡಿಯನ್ನು ಶುಲ್ಕರೂಪದಲ್ಲಿ ತೆಗೆದುಕೊಂಡರೆ ಅದು ಉತ್ತಮ ವಿವಾಹವೇ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದೂ ಮಿಥ್ಯವೇ. ಶುಲ್ಕ ಅಲ್ಪವಾಗಿರಲಿ ಅಥವಾ ಅಧಿಕವಾಗಿರಲಿ ಅದರಿಂದಲೇ ಕನ್ಯೆಯ ವಿಕ್ರಯವಾಗಿಹೋಗಿರುತ್ತದೆ.

13045022a ಯದ್ಯಪ್ಯಾಚರಿತಃ ಕೈಶ್ಚಿನ್ನೈಷ ಧರ್ಮಃ ಕಥಂ ಚನ|

13045022c ಅನ್ಯೇಷಾಮಪಿ ದೃಶ್ಯಂತೇ ಲೋಭತಃ ಸಂಪ್ರವೃತ್ತಯಃ||

ಒಂದು ವೇಳೆ ಹೀಗೆ ನಡೆದುಹೋಗಿದ್ದರೂ ಅದು ಎಂದೂ ಧರ್ಮವೆಂದೆನಿಸಿಕೊಳ್ಳುವುದಿಲ್ಲ. ಅದನ್ನು ನೋಡಿದ ಅನ್ಯರಿಗೂ ಲೋಭಪ್ರವೃತ್ತಿಯು ಬಂದಿರಬಹುದು.

13045023a ವಶ್ಯಾಂ ಕುಮಾರೀಂ ವಿಹಿತಾಂ ಯೇ ಚ ತಾಮುಪಭುಂಜತೇ|

13045023c ಏತೇ ಪಾಪಸ್ಯ ಕರ್ತಾರಸ್ತಮಸ್ಯಂಧೇಽಥ ಶೇರತೇ||

ಯಾರು ಕುಮಾರಿಯನ್ನು ಬಲಾತ್ಕಾರವಾಗಿ ತನ್ನ ವಶಮಾಡಿಕೊಂಡು ಅವಳನ್ನು ಉಪಭೋಗಿಸುತ್ತಾನೋ ಆ ಪಾಪಕರ್ಮಿಯು ಅಂಧಕಾರಪೂರ್ಣ ನರಕದಲ್ಲಿ ಬೀಳುತ್ತಾನೆ.

13045024a ಅನ್ಯೋಽಪ್ಯಥ ನ ವಿಕ್ರೇಯೋ ಮನುಷ್ಯಃ ಕಿಂ ಪುನಃ ಪ್ರಜಾಃ|

13045024c ಅಧರ್ಮಮೂಲೈರ್ಹಿ ಧನೈರ್ನ ತೈರರ್ಥೋಽಸ್ತಿ ಕಶ್ಚನ||

ಬೇರೆ ಯಾವ ಮನುಷ್ಯನನ್ನೂ ಮಾರಟಮಾಡಬಾರದು. ಹಾಗಿರುವಾಗ ಇನ್ನು ಅವನ ಸಂತಾನವನ್ನೇ ಮಾರುವುದೆಂದರೆ ಏನು? ಅಧರ್ಮದ ಮೂಲಕ ಧನವನ್ನು ಪಡೆದರೆ ಯಾವ ಧರ್ಮವೂ ಸಫಲವಾಗುವುದಿಲ್ಲ.””

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿವಾಹಧರ್ಮೇ ಯಮಗಾಥಾ ನಾಮ ಪಂಚಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿವಾಹಧರ್ಮೇ ಯಮಗಾಥಾ ಎನ್ನುವ ನಲ್ವತ್ತೈದನೇ ಅಧ್ಯಾಯವು.

Related image

Comments are closed.