Anushasana Parva: Chapter 36

ಅನುಶಾಸನ ಪರ್ವ: ದಾನಧರ್ಮ ಪರ್ವ

೩೬

ಇಂದ್ರ ಮತ್ತು ಶಂಬರರ ಸಂವಾದವನ್ನು ಉದಾಹರಿಸಿ ಭೀಷ್ಮನು ಬ್ರಾಹ್ಮಣರನ್ನು ಪ್ರಶಂಸಿಸಿದುದು (೧-೧೯).

13036001 ಭೀಷ್ಮ ಉವಾಚ|

13036001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13036001c ಶಕ್ರಶಂಬರಸಂವಾದಂ ತನ್ನಿಬೋಧ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಶಕ್ರ-ಶಂಬರರ ಸಂವಾದವನ್ನು ಉದಾಹರಿಸುತ್ತಾರೆ.

13036002a ಶಕ್ರೋ ಹ್ಯಜ್ಞಾತರೂಪೇಣ ಜಟೀ ಭೂತ್ವಾ ರಜೋರುಣಃ|

13036002c ವಿರೂಪಂ ರೂಪಮಾಸ್ಥಾಯ ಪ್ರಶ್ನಂ ಪಪ್ರಚ್ಚ ಶಂಬರಮ್||

ಶಕ್ರನು ಅಜ್ಞಾತರೂಪದಿಂದ ಜಟೆಯನ್ನು ಧರಿಸಿ, ಧೂಳುತುಂಬಿದ ವಿರೂಪವನ್ನು ತಳೆದು ಶಂಬರನಿಗೆ ಪ್ರಶ್ನೆಯನ್ನು ಕೇಳಿದನು:

13036003a ಕೇನ ಶಂಬರ ವೃತ್ತೇನ ಸ್ವಜಾತ್ಯಾನಧಿತಿಷ್ಠಸಿ|

13036003c ಶ್ರೇಷ್ಠಂ ತ್ವಾಂ ಕೇನ ಮನ್ಯಂತೇ ತನ್ಮೇ ಪ್ರಬ್ರೂಹಿ ಪೃಚ್ಚತಃ||

“ಶಂಬರ! ಯಾವ ನಡತೆಯಿಂದ ನೀನು ನಿನ್ನ ಜಾತಿಯವರನ್ನು ಮೆಟ್ಟಿ ನಿಂತಿದ್ದೀಯೆ? ಯಾವ ಕಾರಣದಿಂದ ಅವರು ನಿನ್ನನ್ನು ಶ್ರೇಷ್ಠನೆಂದು ಮನ್ನಿಸುತ್ತಾರೆ? ನಾನು ಕೇಳುವ ಪ್ರಶ್ನೆಗೆ ಉತ್ತರಿಸು!”

13036004 ಶಂಬರ ಉವಾಚ|

13036004a ನಾಸೂಯಾಮಿ ಸದಾ ವಿಪ್ರಾನ್ಬ್ರಹ್ಮಾಣಂ ಚ ಪಿತಾಮಹಮ್|

13036004c ಶಾಸ್ತ್ರಾಣಿ ವದತೋ ವಿಪ್ರಾನ್ಸಂಮನ್ಯಾಮಿ ಯಥಾಸುಖಮ್||

ಶಂಬರನು ಹೇಳಿದನು: “ವಿಪ್ರರನ್ನು ಮತ್ತು ಪಿತಾಮಹ ಬ್ರಹ್ಮನನ್ನು ಸದಾ ದೋಷವೆಣಿಸುವುದಿಲ್ಲ. ಶಾಸ್ತ್ರಗಳನ್ನು ಹೇಳುವ ವಿಪ್ರರನ್ನು ಸಮ್ಮಾನಿಸುತ್ತೇನೆ ಮತ್ತು ಅವರು ಸುಖವಾಗಿರಲು ಪ್ರಯತ್ನಿಸುತ್ತೇನೆ.

13036005a ಶ್ರುತ್ವಾ ಚ ನಾವಜಾನಾಮಿ ನಾಪರಾಧ್ಯಾಮಿ ಕರ್ಹಿ ಚಿತ್|

13036005c ಅಭ್ಯರ್ಚ್ಯಾನನುಪೃಚ್ಚಾಮಿ ಪಾದೌ ಗೃಹ್ಣಾಮಿ ಧೀಮತಾಮ್||

ಕೇಳಿ ಅವರನ್ನು ಅವಮಾನಿಸುವುದಿಲ್ಲ. ಎಂದೂ ಅವರಿಗೆ ಅಪರಾಧವನ್ನೆಸಗುವುದಿಲ್ಲ. ಅವರನ್ನು ಅರ್ಚಿಸುತ್ತೇನೆ. ಅವರ ಕುಶಲವನ್ನು ಪ್ರಶ್ನಿಸುತ್ತೇನೆ. ಧೀಮತರ ಪಾದಗಳನ್ನೂ ಹಿಡಿಯುತ್ತೇನೆ.

13036006a ತೇ ವಿಶ್ರಬ್ಧಾಃ ಪ್ರಭಾಷಂತೇ ಸಂಯಚ್ಚಂತಿ ಚ ಮಾಂ ಸದಾ|

13036006c ಪ್ರಮತ್ತೇಷ್ವಪ್ರಮತ್ತೋಽಸ್ಮಿ ಸದಾ ಸುಪ್ತೇಷು ಜಾಗೃಮಿ||

ಅವರೂ ಕೂಡ ಸದಾ ಆರಾಮದಲ್ಲಿಯೇ ಮಾತನಾಡುತ್ತಾರೆ ಮತ್ತು ನನ್ನ ಕುಶಲವನ್ನೂ ಕೇಳುತ್ತಾರೆ. ಅವರು ಪ್ರಮತ್ತರಾಗಿದ್ದರೂ ನಾನು ಅಪ್ರಮತ್ತನಾಗಿರುತ್ತೇನೆ. ಅವರು ಮಲಗಿರುವಾಗ ಸದಾ ನಾನು ಎಚ್ಚೆತ್ತಿರುತ್ತೇನೆ.

13036007a ತೇ ಮಾ ಶಾಸ್ತ್ರಪಥೇ ಯುಕ್ತಂ ಬ್ರಹ್ಮಣ್ಯಮನಸೂಯಕಮ್|

13036007c ಸಮಾಸಿಂಚಂತಿ ಶಾಸ್ತಾರಃ ಕ್ಷೌದ್ರಂ ಮಧ್ವಿವ ಮಕ್ಷಿಕಾಃ||

ಶಾಸ್ತ್ರಪಥದಲ್ಲಿರುವ ಬ್ರಹ್ಮಣ್ಯನೂ ಅನಸೂಯಕನೂ ಆದ ನನ್ನ ಮೇಲೆ ಅವರು ಜೇನುಹುಳುಗಳು ಮಧುವನ್ನು ಹೇಗೋ ಹಾಗೆ ಶಾಸ್ತ್ರಗಳನ್ನು ಸಿಂಚನಪಡಿಸುತ್ತಿರುತ್ತಾರೆ.

13036008a ಯಚ್ಚ ಭಾಷಂತಿ ತೇ ತುಷ್ಟಾಸ್ತತ್ತದ್ಗೃಹ್ಣಾಮಿ ಮೇಧಯಾ|

13036008c ಸಮಾಧಿಮಾತ್ಮನೋ ನಿತ್ಯಮನುಲೋಮಮಚಿಂತಯನ್||

ತುಷ್ಟರಾಗಿ ಅವರು ಏನೆಲ್ಲ ಹೇಳುತ್ತಾರೋ ಅವುಗಳನ್ನು ನನ್ನ ಬುದ್ಧಿಯಿಂದ ಗ್ರಹಿಸುತ್ತೇನೆ. ನನ್ನನ್ನು ಸಮಾಧಿಸ್ಥಿತಿಯಲ್ಲಿಟ್ಟುಕೊಂಡು ನಿತ್ಯವೂ ಅವರ ಕುಶಲದ ಕುರಿತು ಚಿಂತಿಸುತ್ತೇನೆ.

13036009a ಸೋಽಹಂ ವಾಗಗ್ರಸೃಷ್ಟಾನಾಂ ರಸಾನಾಮವಲೇಹಕಃ|

13036009c ಸ್ವಜಾತ್ಯಾನಧಿತಿಷ್ಠಾಮಿ ನಕ್ಷತ್ರಾಣೀವ ಚಂದ್ರಮಾಃ||

ಅವರ ವಾಣಿಯಿಂದ ಹೊರಹೊಮ್ಮುವ ಉಪದೇಶಗಳ ರಸವನ್ನು ಆಸ್ವಾದನ ಮಾಡುತ್ತಿರುತ್ತೇನೆ. ಆದುದರಿಂದಲೇ ನಾನು ನಕ್ಷತ್ರಗಳಿಗೆ ಚಂದ್ರಮನು ಹೇಗೋ ಹಾಗೆ ನನ್ನ ಜಾತಿಯವರಲ್ಲಿ ಅಧಿಕನೆನಿಸಿಕೊಂಡಿದ್ದೇನೆ.

13036010a ಏತತ್ಪೃಥಿವ್ಯಾಮಮೃತಮೇತಚ್ಚಕ್ಷುರನುತ್ತಮಮ್|

13036010c ಯದ್ಬ್ರಾಹ್ಮಣಮುಖಾಚ್ಚಾಸ್ತ್ರಮಿಹ ಶ್ರುತ್ವಾ ಪ್ರವರ್ತತೇ||

ಈ ಭೂಮಿಯಲ್ಲಿ ಬ್ರಾಹ್ಮಣರ ಮುಖದಿಂದ ಹೊರಡುವ ಶಾಸ್ತ್ರವನ್ನು ಕೇಳಿ ಜೀವನ ನಡೆಸುವುದೇ ಅಮೃತತ್ತ್ವ ಮತ್ತು ಉತ್ತಮ ದೃಷ್ಟಿ.

13036011a ಏತತ್ಕಾರಣಮಾಜ್ಞಾಯ ದೃಷ್ಟ್ವಾ ದೇವಾಸುರಂ ಪುರಾ|

13036011c ಯುದ್ಧಂ ಪಿತಾ ಮೇ ಹೃಷ್ಟಾತ್ಮಾ ವಿಸ್ಮಿತಃ ಪ್ರತ್ಯಪದ್ಯತ||

ಇದೇ ಕಾರಣವನ್ನು ತಿಳಿದು ಹಿಂದೆ ನಡೆದ ದೇವಾಸುರಯುದ್ಧವನ್ನು ನೋಡಿ ನನ್ನ ತಂದೆಯು ಹೃಷ್ಟಾತ್ಮನೂ ವಿಸ್ಮಿತನೂ ಆಗಿದ್ದನು.

13036012a ದೃಷ್ಟ್ವಾ ಚ ಬ್ರಾಹ್ಮಣಾನಾಂ ತು ಮಹಿಮಾನಂ ಮಹಾತ್ಮನಾಮ್|

13036012c ಪರ್ಯಪೃಚ್ಚತ್ಕಥಮಿಮೇ ಸಿದ್ಧಾ ಇತಿ ನಿಶಾಕರಮ್||

ಮಹಾತ್ಮ ಬ್ರಾಹ್ಮಣರ ಮಹಿಮೆಗಳನ್ನು ನೋಡಿ ಅವನು ನಿಶಾಕರ ಚಂದ್ರನಿಗೆ “ಅವರಿಗೆ ಈ ಸಿದ್ಧಿಗಳು ಹೇಗೆ ದೊರಕಿದವು?” ಎಂದು ಪ್ರಶ್ನಿಸಿದ್ದನು.

13036013 ಸೋಮ ಉವಾಚ|

13036013a ಬ್ರಾಹ್ಮಣಾಸ್ತಪಸಾ ಸರ್ವೇ ಸಿಧ್ಯಂತೇ ವಾಗ್ಬಲಾಃ ಸದಾ|

13036013c ಭುಜವೀರ್ಯಾ ಹಿ ರಾಜಾನೋ ವಾಗಸ್ತ್ರಾಶ್ಚ ದ್ವಿಜಾತಯಃ||

ಸೋಮನು ಹೇಳಿದನು: “ತಪಸ್ಸಿನಿಂದಲೇ ಬ್ರಾಹ್ಮಣರಿಗೆ ಎಲ್ಲವೂ ಸಿದ್ಧಿಯಾಗಿವೆ. ವಾಣಿಯೇ ಅವರಿಗೆ ಸದಾ ಬಲವು. ರಾಜರಿಗೆ ಭುಜವೀರ್ಯವಿದ್ದರೆ ದ್ವಿಜಾತಿಯವರಿಗೆ ವಾಣಿಯೇ ಅಸ್ತ್ರ.

13036014a ಪ್ರವಸನ್ವಾಪ್ಯಧೀಯೀತ ಬಹ್ವೀರ್ದುರ್ವಸತೀರ್ವಸನ್|

13036014c ನಿರ್ಮನ್ಯುರಪಿ ನಿರ್ಮಾನೋ ಯತಿಃ ಸ್ಯಾತ್ಸಮದರ್ಶನಃ||

ಬ್ರಾಹ್ಮಣನಾಗಿ ಹುಟ್ಟಿದವನು ಕಷ್ಟಗಳನ್ನು ಸಹಿಸಿಕೊಂಡು ಗುರುವಿನ ಜೊತೆ ವಾಸಿಸಿ ವೇದಗಳನ್ನು ಅಧ್ಯಯನ ಮಾಡಬೇಕು. ಕೋಪಗೊಳ್ಳದೇ, ಆತ್ಮಾಭಿಮಾನವಿಲ್ಲದೇ, ನಿಯತನಾಗಿ ಎಲ್ಲವನ್ನೂ ಸಮದೃಷ್ಟಿಯಿಂದ ನೋಡುವವನಾಗಬೇಕು.

13036015a ಅಪಿ ಚೇಜ್ಜಾತಿಸಂಪನ್ನಃ ಸರ್ವಾನ್ವೇದಾನ್ಪಿತುರ್ಗೃಹೇ|

13036015c ಶ್ಲಾಘಮಾನ ಇವಾಧೀಯೇದ್ಗ್ರಾಮ್ಯ ಇತ್ಯೇವ ತಂ ವಿದುಃ||

ಉತ್ತಮ ಕುಲದಲ್ಲಿ ಹುಟ್ಟಿ, ತಂದೆಯ ಮನೆಯಲ್ಲಿಯೇ ಎಲ್ಲ ವೇದಗಳನ್ನು ಕಲಿತವನು ಪ್ರಶಂಸೆಗೆ ಪಾತ್ರನಾದರೂ ವಿದ್ವಾಂಸರು ಅವನನ್ನು ಗ್ರಾಮ್ಯನೆಂದೇ ತಿಳಿಯುತ್ತಾರೆ.

13036016a ಭೂಮಿರೇತೌ ನಿಗಿರತಿ ಸರ್ಪೋ ಬಿಲಶಯಾನಿವ|

13036016c ರಾಜಾನಂ ಚಾಪ್ಯಯೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಮ್||

ಯುದ್ಧಮಾಡದೇ ಇರುವ ಕ್ಷತ್ರಿಯನನ್ನೂ, ಪ್ರವಾಸಮಾಡದೇ ಇರುವ ಬ್ರಾಹ್ಮಣನನ್ನೂ ಇಲಿಯನ್ನು ಸರ್ಪವು ಹೇಗೋ ಹಾಗೆ ಭೂಮಿಯು ನುಂಗಿಹಾಕಿಬಿಡುತ್ತದೆ.

13036017a ಅತಿಮಾನಃ ಶ್ರಿಯಂ ಹಂತಿ ಪುರುಷಸ್ಯಾಲ್ಪಮೇಧಸಃ|

13036017c ಗರ್ಭೇಣ ದುಷ್ಯತೇ ಕನ್ಯಾ ಗೃಹವಾಸೇನ ಚ ದ್ವಿಜಃ||

ಅಲ್ಪಬುದ್ಧಿಯಾದ ಪುರುಷನ ಅಭಿಮಾನವು ಅವನ ಐಶ್ವರ್ಯವನ್ನು ಹಾಳುಮಾಡುತ್ತದೆ. ಕನ್ಯೆಯು ಗರ್ಭಧಾರಣೆಯಿಂದ ದೂಷಿತಳಾಗುತ್ತಾಳೆ. ಹಾಗೆಯೇ ಮನೆಯಲ್ಲಿಯೇ ವಾಸಿಸುವ ದ್ವಿಜನು ದೂಷಿತನಾಗುತ್ತಾನೆ.”

13036018a ಇತ್ಯೇತನ್ಮೇ ಪಿತಾ ಶ್ರುತ್ವಾ ಸೋಮಾದದ್ಭುತದರ್ಶನಾತ್|

13036018c ಬ್ರಾಹ್ಮಣಾನ್ಪೂಜಯಾಮಾಸ ತಥೈವಾಹಂ ಮಹಾವ್ರತಾನ್||

ಅದ್ಭುತದರ್ಶನ ಸೋಮನಿಂದ ಇದನ್ನು ಕೇಳಿದ ನನ್ನ ತಂದೆಯು ಮಹಾವ್ರತ ಬ್ರಾಹ್ಮಣರನ್ನು ಪೂಜಿಸತೊಡಗಿದನು. ನಾನೂ ಹಾಗೆಯೇ ಮಾಡುತ್ತೇನೆ.”

13036019 ಭೀಷ್ಮ ಉವಾಚ|

13036019a ಶ್ರುತ್ವೈತದ್ವಚನಂ ಶಕ್ರೋ ದಾನವೇಂದ್ರಮುಖಾಚ್ಚ್ಯುತಮ್|

13036019c ದ್ವಿಜಾನ್ಸಂಪೂಜಯಾಮಾಸ ಮಹೇಂದ್ರತ್ವಮವಾಪ ಚ||

ಭೀಷ್ಮನು ಹೇಳಿದನು: “ದಾನವೇಂದ್ರನ ಬಾಯಿಂದ ಬಂದ ಆ ಮಾತುಗಳನ್ನು ಕೇಳಿ ಶಕ್ರನೂ ದ್ವಿಜರನ್ನು ಪೂಜಿಸತೊಡಗಿದನು ಮತ್ತು ಮಹೇಂದ್ರತ್ವವನ್ನು ಪಡೆದುಕೊಂಡನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬ್ರಾಹ್ಮಣಪ್ರಶಂಸಾಯಾಂ ಇಂದ್ರಶಂಬರಸಂವಾದೇ ಷಟ್ತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬ್ರಾಹ್ಮಣಪ್ರಶಂಸಾಯಾಂ ಇಂದ್ರಶಂಬರಸಂವಾದ ಎನ್ನುವ ಮೂವತ್ತಾರನೇ ಅಧ್ಯಾಯವು.

Image result for flowers against white background

Comments are closed.