Anushasana Parva: Chapter 146

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೬

13146001 ವಾಸುದೇವ ಉವಾಚ|

13146001a ಯುಧಿಷ್ಠಿರ ಮಹಾಬಾಹೋ ಮಹಾಭಾಗ್ಯಂ ಮಹಾತ್ಮನಃ|

13146001c ರುದ್ರಾಯ ಬಹುರೂಪಾಯ ಬಹುನಾಮ್ನೇ ನಿಬೋಧ ಮೇ||

ವಾಸುದೇವನು ಹೇಳಿದನು: “ಯುಧಿಷ್ಠಿರ! ಮಹಾಬಾಹೋ! ಬಹುರೂಪನಾದ, ಬಹುನಾಮಕನಾದ ಮಹಾತ್ಮ ರುದ್ರನ ಮಹಾಭಾಗ್ಯವನ್ನು ನನ್ನಿಂದ ಕೇಳು.

13146002a ವದಂತ್ಯಗ್ನಿಂ ಮಹಾದೇವಂ ತಥಾ ಸ್ಥಾಣುಂ ಮಹೇಶ್ವರಮ್|

13146002c ಏಕಾಕ್ಷಂ ತ್ರ್ಯಂಬಕಂ ಚೈವ ವಿಶ್ವರೂಪಂ ಶಿವಂ ತಥಾ||

ಮಹಾದೇವ ಮಹೇಶ್ವರನನ್ನು ಅಗ್ನಿಯೆಂದೂ, ಏಕಾಕ್ಷನೆಂದೂ, ತ್ರ್ಯಂಬಕನೆಂದೂ, ಸ್ಥಾಣುವೆಂದೂ, ವಿಶ್ವರೂಪನೆಂದೂ ಮತ್ತು ಶಿವನೆಂದೂ ಕರೆಯುತ್ತಾರೆ.

13146003a ದ್ವೇ ತನೂ ತಸ್ಯ ದೇವಸ್ಯ ವೇದಜ್ಞಾ ಬ್ರಾಹ್ಮಣಾ ವಿದುಃ|

13146003c ಘೋರಾಮನ್ಯಾಂ ಶಿವಾಮನ್ಯಾಂ ತೇ ತನೂ ಬಹುಧಾ ಪುನಃ||

ವೇದಜ್ಞ ಬ್ರಾಹ್ಮಣರು ಆ ದೇವನಿಗೆ ಎರಡು ತನುಗಳಿವೆಯೆಂದು ತಿಳಿದದಿದ್ದಾರೆ. ಒಂದು ಘೋರಾ ಮತ್ತು ಇನ್ನೊಂದು ಶಿವಾ. ಇವುಗಳಲ್ಲಿ ಪುನಃ ಅನೇಕ ಭೇದಗಳಿವೆ.

13146004a ಉಗ್ರಾ ಘೋರಾ ತನೂರ್ಯಾಸ್ಯ ಸೋಽಗ್ನಿರ್ವಿದ್ಯುತ್ಸ ಭಾಸ್ಕರಃ|

13146004c ಶಿವಾ ಸೌಮ್ಯಾ ಚ ಯಾ ತಸ್ಯ ಧರ್ಮಸ್ತ್ವಾಪೋಽಥ ಚಂದ್ರಮಾಃ||

ಅವನ ಉಗ್ರ ಘೋರ ಶರೀರವು ಅಗ್ನಿ, ವಿದ್ಯುತ್ ಮತ್ತು ಭಾಸ್ಕರನ ರೂಪಗಳಲ್ಲಿವೆ. ಸೌಮ್ಯ ಶಿವಾ ಶರೀರವು ಧರ್ಮ, ಜಲ ಮತ್ತು ಚಂದ್ರರ ರೂಪಗಳಲ್ಲಿದೆ.

13146005a ಆತ್ಮನೋಽರ್ಧಂ ತು ತಸ್ಯಾಗ್ನಿರುಚ್ಯತೇ ಭರತರ್ಷಭ[1]|

13146005c ಬ್ರಹ್ಮಚರ್ಯಂ ಚರತ್ಯೇಷ[2] ಶಿವಾ ಯಾಸ್ಯ ತನುಸ್ತಥಾ||

ಭರತರ್ಷಭ! ಅವನ ಅರ್ಧ ಆತ್ಮವನ್ನು ಅಗ್ನಿಯೆಂದು ಕರೆಯುತ್ತಾರೆ. ಅವನ ಶಿವಾ ಎಂಬ ಇನ್ನೊಂದು ಅರ್ಧವು ಬ್ರಹ್ಮಚರ್ಯವನ್ನು ಪಾಲಿಸುತ್ತದೆ.

13146006a ಯಾಸ್ಯ ಘೋರತಮಾ ಮೂರ್ತಿರ್ಜಗತ್ಸಂಹರತೇ ತಯಾ|

13146006c ಈಶ್ವರತ್ವಾನ್ಮಹತ್ತ್ವಾಚ್ಚ ಮಹೇಶ್ವರ ಇತಿ ಸ್ಮೃತಃ||

ಅವನ ಘೋರತಮ ಮೂರ್ತಿಯು ಜಗತ್ತನ್ನು ಸಂಹರಿಸುತ್ತದೆ. ಅವನಲ್ಲಿರುವ ಈಶ್ವರತ್ವ ಮತ್ತು ಮಹತ್ವಗಳಿಂದಾಗಿ ಅವನು ಮಹೇಶ್ವರನೆನಿಸಿಕೊಂಡಿದ್ದಾನೆ.

13146007a ಯನ್ನಿರ್ದಹತಿ ಯತ್ತೀಕ್ಷ್ಣೋ ಯದುಗ್ರೋ ಯತ್ಪ್ರತಾಪವಾನ್|

13146007c ಮಾಂಸಶೋಣಿತಮಜ್ಜಾದೋ ಯತ್ತತೋ ರುದ್ರ ಉಚ್ಯತೇ||

ದಹಿಸುವುದರಿಂದ, ತೀಕ್ಷ್ಣನೂ, ಪ್ರತಾಪವಾನನೂ, ಮಾಂಸ-ರಕ್ತಗಳನ್ನು ಭುಂಜಿಸುವವನೂ ಆದುದರಿಂದ ಅವನನ್ನು ರುದ್ರ ಎಂದು ಕರೆಯುತ್ತಾರೆ.

13146008a ದೇವಾನಾಂ ಸುಮಹಾನ್ಯಚ್ಚ ಯಚ್ಚಾಸ್ಯ ವಿಷಯೋ ಮಹಾನ್|

13146008c ಯಚ್ಚ ವಿಶ್ವಂ ಮಹತ್ಪಾತಿ ಮಹಾದೇವಸ್ತತಃ ಸ್ಮೃತಃ||

ದೇವತೆಗಳಲ್ಲಿ ದೊಡ್ಡವನಾಗಿರುವುದರಿಂದ, ಮಹತ್ವದ ವಿಷಯವನ್ನು ಹೊಂದಿರುವುದರಿಂದ, ಮತ್ತು ಮಹಾವಿಶ್ವವನ್ನು ಸಂರಕ್ಷಿರುತ್ತಿರುವುದರಿಂದ ಅವನನ್ನು ಮಹಾದೇವನೆಂದು ಕರೆಯುತ್ತಾರೆ.

[3]13146009a ಸಮೇಧಯತಿ ಯನ್ನಿತ್ಯಂ ಸರ್ವಾರ್ಥಾನ್ಸರ್ವಕರ್ಮಭಿಃ|

13146009c ಶಿವಮಿಚ್ಚನ್ಮನುಷ್ಯಾಣಾಂ ತಸ್ಮಾದೇಷ ಶಿವಃ ಸ್ಮೃತಃ||

ಅವನು ನಿತ್ಯವೂ ಸರ್ವರಿಗೂ ಸರ್ವಕರ್ಮಗಳಿಂದ ಅಭಿವೃದ್ಧಿಯನ್ನು ಮಾಡುತ್ತಿರುವನಾದುದರಿಂದ ಮತ್ತು ಎಲ್ಲ ಮನುಷ್ಯರಿಗೂ ಕಲ್ಯಾಣವನ್ನೇ ಬಯಸುವವನಾದುದರಿಂದ ಅವನನ್ನು ಶಿವನೆಂದು ಕರೆಯುತ್ತಾರೆ.

13146010a ದಹತ್ಯೂರ್ಧ್ವಂ ಸ್ಥಿತೋ ಯಚ್ಚ ಪ್ರಾಣೋತ್ಪತ್ತಿಃ ಸ್ಥಿತಿಶ್ಚ ಯತ್[4]|

13146010c ಸ್ಥಿರಲಿಂಗಶ್ಚ ಯನ್ನಿತ್ಯಂ ತಸ್ಮಾತ್ ಸ್ಥಾಣುರಿತಿ ಸ್ಮೃತಃ||

ಊರ್ಧ್ವಭಾಗದಲ್ಲಿದ್ದುಕೊಂಡು ಪ್ರಾಣೋತ್ಪತ್ತಿ ಮತ್ತು ಸ್ಥಿತಿಗಳನ್ನು ನಡೆಸುವುದರಿಂದ ಮತ್ತು ನಿತ್ಯವೂ ಸ್ಥಿರಲಿಂಗನಾಗಿರುವುದರಿಂದ ಅವನನ್ನು ಸ್ಥಾಣು ಎಂದೂ ಕರೆಯುತ್ತಾರೆ.

13146011a ಯದಸ್ಯ ಬಹುಧಾ ರೂಪಂ ಭೂತಂ ಭವ್ಯಂ ಭವತ್ತಥಾ|

13146011c ಸ್ಥಾವರಂ ಜಂಗಮಂ ಚೈವ ಬಹುರೂಪಸ್ತತಃ ಸ್ಮೃತಃ||

ಭೂತ-ಭವಿಷ್ಯ-ವರ್ತಮಾನಗಳಲ್ಲಿ ಅನೇಕ ರೂಪದ ಸ್ಥಾವರ-ಜಂಗಮಗಳಾಗಿ ಪ್ರಕಟವಾಗುವುದರಿಂದ ಅವನು ಬಹುರೂಪನೆಂದಾದನು.

13146012a ಧೂಮ್ರಂ ರೂಪಂ ಚ ಯತ್ತಸ್ಯ ಧೂರ್ಜಟೀತ್ಯತ ಉಚ್ಯತೇ|

13146012c ವಿಶ್ವೇ ದೇವಾಶ್ಚ ಯತ್ತಸ್ಮಿನ್ವಿಶ್ವರೂಪಸ್ತತಃ ಸ್ಮೃತಃ||

ಅವನ ಜಟೆಯು ಧೂಮ್ರವರ್ಣದ್ದಾಗಿರುವುದರಿಂದ ಅವನನ್ನು ಧೂರ್ಜಟೀ ಎಂದು ಕರೆಯುತ್ತಾರೆ. ಸಮಸ್ತ ದೇವತೆಗಳಲ್ಲಿಯೂ ವಾಸಿಸುತ್ತಿರುವುದರಿಂದ ಅವನನ್ನು ವಿಶ್ವರೂಪನೆಂದೂ ಕರೆಯುತ್ತಾರೆ.

13146013a ಸಹಸ್ರಾಕ್ಷೋಽಯುತಾಕ್ಷೋ ವಾ ಸರ್ವತೋಕ್ಷಿಮಯೋಽಪಿ ವಾ|

13146013c ಚಕ್ಷುಷಃ ಪ್ರಭವಸ್ತೇಜೋ ನಾಸ್ತ್ಯಂತೋಽಥಾಸ್ಯ ಚಕ್ಷುಷಾಮ್||

ಅವನ ಕಣ್ಣುಗಳಿಂದ ತೇಜಸ್ಸು ಹೊರಹೊಮ್ಮುತ್ತದೆ. ಅವನ ದೃಷ್ಟಿಗೆ ಕೊನೆಎಂಬುದೇ ಇಲ್ಲ. ಆದುದರಿಂದ ಅವನನ್ನು ಸಹಸ್ರಾಕ್ಷ, ಆಯುತಾಕ್ಷ ಮತ್ತು ಸರ್ವತೋಕ್ಷಿಮಯ ಎಂದೂ ಕರೆಯುತ್ತಾರೆ.

13146014a ಸರ್ವಥಾ ಯತ್ಪಶೂನ್ ಪಾತಿ ತೈಶ್ಚ ಯದ್ರಮತೇ ಪುನಃ|

13146014c ತೇಷಾಮಧಿಪತಿರ್ಯಚ್ಚ ತಸ್ಮಾತ್ಪಶುಪತಿಃ ಸ್ಮೃತಃ||

ಸರ್ವರೀತಿಗಳಲ್ಲಿಯೂ ಪಶುಗಳನ್ನು ಪಾಲಿಸುವುದರಿಂದ ಮತ್ತು ಪಶುಗಳೊಂದಿಗೆ ರಮಿಸುವುದರಿಂದ ಆ ಪಶುಗಳಿಗೆ ಅಧಿಪತಿಯಾದವನನ್ನು ಪಶುಪತಿಯೆಂದು ಕರೆಯುತ್ತಾರೆ.

13146015a ನಿತ್ಯೇನ ಬ್ರಹ್ಮಚರ್ಯೇಣ ಲಿಂಗಮಸ್ಯ ಯದಾ ಸ್ಥಿತಮ್|

13146015c ಮಹಯಂತ್ಯಸ್ಯ ಲೋಕಾಶ್ಚ ಮಹೇಶ್ವರ ಇತಿ ಸ್ಮೃತಃ[5]||

ನಿತ್ಯವೂ ಬ್ರಹ್ಮಚರ್ಯವನ್ನು ಪರಿಪಾಲಿಸಿಕೊಂಡು ಲಿಂಗದಲ್ಲಿ ಸ್ಥಿತನಾಗಿರುವ ಅವನ ಲೋಕವು ಮಹತ್ತರವಾದುದರಿಂದ ಅವನನ್ನು ಮಹೇಶ್ವರ ಎಂದೂ ಕರೆಯುತ್ತಾರೆ.

13146016a ವಿಗ್ರಹಂ ಪೂಜಯೇದ್ಯೋ ವೈ ಲಿಂಗಂ ವಾಪಿ ಮಹಾತ್ಮನಃ|

13146016c ಲಿಂಗಂ ಪೂಜಯಿತಾ ನಿತ್ಯಂ ಮಹತೀಂ ಶ್ರಿಯಮಶ್ನುತೇ||

ಆ ಮಹಾತ್ಮನ ವಿಗ್ರಹವನ್ನು ಮತ್ತು ಲಿಂಗವನ್ನು ಪೂಜಿಸುವವರಲ್ಲಿ ನಿತ್ಯವೂ ಲಿಂಗವನ್ನು ಪೂಜಿಸುವವನು ಮಹಾ ಶ್ರೀಯನ್ನು ಪಡೆದುಕೊಳ್ಳುತ್ತಾನೆ.

13146017a ಋಷಯಶ್ಚಾಪಿ ದೇವಾಶ್ಚ ಗಂಧರ್ವಾಪ್ಸರಸಸ್ತಥಾ|

13146017c ಲಿಂಗಮೇವಾರ್ಚಯಂತಿ ಸ್ಮ ಯತ್ತದೂರ್ಧ್ವಂ ಸಮಾಸ್ಥಿತಮ್||

ಋಷಿಗಳೂ, ದೇವತೆಗಳೂ, ಗಂಧರ್ವ-ಅಪ್ಸರೆಯರೂ ಕೂಡ ಊರ್ಧ್ವಮುಖವಾಗಿರುವ ಲಿಂಗವನ್ನೇ ಅರ್ಚಿಸುತ್ತಾರೆ.

13146018a ಪೂಜ್ಯಮಾನೇ ತತಸ್ತಸ್ಮಿನ್ಮೋದತೇ ಸ ಮಹೇಶ್ವರಃ|

13146018c ಸುಖಂ ದದಾತಿ ಪ್ರೀತಾತ್ಮಾ ಭಕ್ತಾನಾಂ ಭಕ್ತವತ್ಸಲಃ||

ಅವನನ್ನು ಲಿಂಗದಲ್ಲಿ ಪೂಜಿಸುವುದಾರಿಂದ ಮಹೇಶ್ವರನು ಸಂತುಷ್ಟನಾಗುತ್ತಾನೆ. ಆ ಭಕ್ತವತ್ಸಲನು ಪ್ರೀತಾತ್ಮನಾಗಿ ಭಕ್ತರಿಗೆ ಸುಖವನ್ನು ನೀಡುತ್ತಾನೆ.

13146019a ಏಷ ಏವ ಶ್ಮಶಾನೇಷು ದೇವೋ ವಸತಿ ನಿತ್ಯಶಃ[6]|

13146019c ಯಜಂತೇ ತಂ ಜನಾಸ್ತತ್ರ ವೀರಸ್ಥಾನನಿಷೇವಿಣಮ್||

ಆ ದೇವನೇ ನಿತ್ಯವೂ ಶ್ಮಶಾನಗಳಲ್ಲಿ ವಾಸವಾಗಿರುತ್ತಾನೆ. ಅಲ್ಲಿ ಅವನನ್ನು ಪೂಜಿಸುವವರು ವೀರರು ಪಡೆದುಕೊಳ್ಳುವ ಸ್ಥಾನವನ್ನು ಪಡೆಯುತ್ತಾರೆ.

13146020a ವಿಷಮಸ್ಥಃ[7] ಶರೀರೇಷು ಸ ಮೃತ್ಯುಃ ಪ್ರಾಣಿನಾಮಿಹ|

13146020c ಸ ಚ ವಾಯುಃ ಶರೀರೇಷು ಪ್ರಾಣೋಽಪಾನಃ ಶರೀರಿಣಾಮ್||

ಅವನು ಪ್ರಾಣಿಗಳ ಶರೀರಗಳಲ್ಲಿ ವಿಷಮಸ್ಥ ಮೃತ್ಯುವಾಗಿರುತ್ತಾನೆ. ಅವನು ಶರೀರಿಗಳ ಶರೀರಗಳಲ್ಲಿ ಪ್ರಾಣ-ಅಪಾನ ವಾಯುವಾಗಿಯೂ ಇರುತ್ತಾನೆ.

13146021a ತಸ್ಯ ಘೋರಾಣಿ ರೂಪಾಣಿ ದೀಪ್ತಾನಿ ಚ ಬಹೂನಿ ಚ|

13146021c ಲೋಕೇ ಯಾನ್ಯಸ್ಯ ಪೂಜ್ಯಂತೇ ವಿಪ್ರಾಸ್ತಾನಿ ವಿದುರ್ಬುಧಾಃ||

ಅವನಿಗೆ ಅನೇಕ ಘೋರ ದೀಪ್ತ ರೂಪಗಳನ್ನು ಲೋಕದಲ್ಲಿ ಜನರು ಪೂಜಿಸುತ್ತಾರೆ. ವಿದ್ವಾಂಸ ಬ್ರಾಹ್ಮಣರು ಆ ರೂಪಗಳನ್ನು ತಿಳಿದಿರುತ್ತಾರೆ.

13146022a ನಾಮಧೇಯಾನಿ ವೇದೇಷು[8] ಬಹೂನ್ಯಸ್ಯ ಯಥಾರ್ಥತಃ|

13146022c ನಿರುಚ್ಯಂತೇ ಮಹತ್ತ್ವಾಚ್ಚ ವಿಭುತ್ವಾತ್ಕರ್ಮಭಿಸ್ತಥಾ||

ಅವನ ಮಹತ್ವ, ವಿಭುತ್ವ ಮತ್ತು ಕರ್ಮಗಳನ್ನು ಯಥಾರ್ಥವಾಗಿ ಸೂಚಿಸುವ ಅನೇಕ ನಾಮಧೇಯಗಳು ವೇದಗಳಲ್ಲಿವೆ.

13146023a ವೇದೇ ಚಾಸ್ಯ ವಿದುರ್ವಿಪ್ರಾಃ ಶತರುದ್ರೀಯಮುತ್ತಮಮ್|

13146023c ವ್ಯಾಸಾದನಂತರಂ[9] ಯಚ್ಚಾಪ್ಯುಪಸ್ಥಾನಂ ಮಹಾತ್ಮನಃ||

ವೇದದಲ್ಲಿರುವ ಇವನ ಉತ್ತಮ ಶತರುದ್ರೀಯವನ್ನು ವಿಪ್ರರು ತಿಳಿದಿರುತ್ತಾರೆ. ವ್ಯಾಸನೂ ಈ ಮಹಾತ್ಮನ ಸ್ತುತಿಗೈದಿದ್ದಾನೆ.

13146024a ಪ್ರದಾತಾ ಸರ್ವಲೋಕಾನಾಂ ವಿಶ್ವಂ ಚಾಪ್ಯುಚ್ಯತೇ ಮಹತ್|

13146024c ಜ್ಯೇಷ್ಠಭೂತಂ ವದಂತ್ಯೇನಂ ಬ್ರಾಹ್ಮಣಾ ಋಷಯೋಽಪರೇ||

ಅವನು ಸರ್ವಲೋಕಗಳಿಗೂ ನೀಡುವವನು. ಈ ಮಹಾ ವಿಶ್ವವು ಅವನೇ ಎಂದು ಹೇಳುತ್ತಾರೆ. ಬ್ರಾಹ್ಮಣರು ಮತ್ತು ಇತರ ಋಷಿಗಳು ಅವನನ್ನು ಜ್ಯೇಷ್ಠಭೂತನೆಂದು ಹೇಳುತ್ತಾರೆ.

13146025a ಪ್ರಥಮೋ ಹ್ಯೇಷ ದೇವಾನಾಂ ಮುಖಾದಗ್ನಿರಜಾಯತ|

13146025c ಗ್ರಹೈರ್ಬಹುವಿಧೈಃ ಪ್ರಾಣಾನ್ಸಂರುದ್ಧಾನುತ್ಸೃಜತ್ಯಪಿ||

ಇವನು ದೇವತೆಗಳಲ್ಲಿಯೇ ಪ್ರಥಮನು. ಇವನ ಮುಖದಿಂದ ಅಗ್ನಿಯು ಹುಟ್ಟಿದನು. ಗ್ರಹಗಳ ಬಹುವಿಧದ ಬಾಧೆಗೊಳಗಾದ ಪ್ರಾಣಿಗಳನ್ನು ಇವನ್ನು ದುಃಖದಿಂದ ಪಾರುಮಾಡುತ್ತಾನೆ.

13146026a ಸ ಮೋಚಯತಿ[10] ಪುಣ್ಯಾತ್ಮಾ ಶರಣ್ಯಃ ಶರಣಾಗತಾನ್|

13146026c ಆಯುರಾರೋಗ್ಯಮೈಶ್ವರ್ಯಂ ವಿತ್ತಂ ಕಾಮಾಂಶ್ಚ ಪುಷ್ಕಲಾನ್||

ಪುಣ್ಯಾತ್ಮನೂ ಶರಣ್ಯನೂ ಆದ ಅವನು ಶರಣಾಗತರಿಗೆ ಮೋಕ್ಷವನ್ನೀಯುತ್ತಾನೆ. ಅವರಿಗೆ ಆಯುರಾರೋಗ್ಯವನ್ನೂ ಐಶ್ವರ್ಯವನ್ನೂ ಮತ್ತು ಬೇಕಾದಷ್ಟು ಪುಷ್ಕಲ ವಿತ್ತವನ್ನೂ ನೀಡುತ್ತಾನೆ.

13146027a ಸ ದದಾತಿ ಮನುಷ್ಯೇಭ್ಯಃ ಸ ಏವಾಕ್ಷಿಪತೇ ಪುನಃ|

13146027c ಶಕ್ರಾದಿಷು ಚ ದೇವೇಷು ತಸ್ಯ ಚೈಶ್ವರ್ಯಮುಚ್ಯತೇ||

ಅವನು ಮನುಷ್ಯರಿಗೆ ಕೊಡುತ್ತಾನೆ ಮತ್ತು ಪುನಃ ಹಿಂತೆಗೆದುಕೊಳ್ಳುತ್ತಾನೆ. ಶಕ್ರಾದಿ ದೇವತೆಗಳಲ್ಲಿರುವ ಐಶ್ವರ್ಯವೂ ಅವನದ್ದೇ ಎಂದು ಹೇಳುತ್ತಾರೆ.

13146028a ಸ ಏವಾಭ್ಯಧಿಕೋ[11] ನಿತ್ಯಂ ತ್ರೈಲೋಕ್ಯಸ್ಯ ಶುಭಾಶುಭೇ|

13146028c ಐಶ್ವರ್ಯಾಚ್ಚೈವ ಕಾಮಾನಾಮೀಶ್ವರಃ ಪುನರುಚ್ಯತೇ||

ಅವನು ನಿತ್ಯವೂ ಅಧಿಕನು. ತ್ರೈಲೋಕ್ಯದ ಶುಭಾಶುಭ ಕರ್ಮಗಳಿಗೂ ಐಶ್ವರ್ಯಗಳಿಗೂ ಮತ್ತು ಕಾಮನೆಗಳಿಗೂ ಅವನೇ ಈಶ್ವರನೆಂದು ಪುನಃ ಹೇಳುತ್ತಾರೆ.

13146029a ಮಹೇಶ್ವರಶ್ಚ ಲೋಕಾನಾಂ ಮಹತಾಮೀಶ್ವರಶ್ಚ ಸಃ|

13146029c ಬಹುಭಿರ್ವಿವಿಧೈ ರೂಪೈರ್ವಿಶ್ವಂ ವ್ಯಾಪ್ತಮಿದಂ ಜಗತ್|

13146029e ತಸ್ಯ ದೇವಸ್ಯ ಯದ್ವಕ್ತ್ರಂ ಸಮುದ್ರೇ ವಡವಾಮುಖಮ್||

ಮಹಾಲೋಕದ ಈಶ್ವರನಾಗಿರುವುದರಿಂದ ಅವನು ಮಹೇಶ್ವರನೂ ಕೂಡ. ಅನೇಕ ವಿವಿಧ ರೂಪಗಳಿಂದ ಅವನು ಈ ಜಗತ್ತನ್ನು ವ್ಯಾಪಿಸಿಕೊಂಡಿದ್ದಾನೆ. ಸಮುದ್ರದಲ್ಲಿರುವ ವಡವಾಮುಖವೂ ಆ ದೇವನದ್ದೇ ಮುಖವು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮಹೇಶ್ವರಮಾಹಾತ್ಮ್ಯಂ ನಾಮ ಷಟ್ಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮಹೇಶ್ವರಮಾಹಾತ್ಮ್ಯ ಎನ್ನುವ ನೂರಾನಲ್ವತ್ತಾರನೇ ಅಧ್ಯಾಯವು.

 

[1] ಸೋಮೋಽರ್ಧಂ ಪುನರುಚ್ಯತೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಚರತ್ಯೇಕಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಒಂದು ಶ್ಲೋಕಾರ್ಧವು ಅಧಿಕವಾಗಿದೆ: ಧೂಮ್ರರೂಪಂ ಚ ಯತ್ತಸ್ಯ ಧೂರ್ಜಟೀತ್ಯತ ಉಚ್ಯತೇ|

[4] ಪ್ರಾಣಾನ್ನೃಣಾಂ ಸ್ಥಿರಶ್ಚ ಯತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಮಹಯತ್ಯಸ್ಯ ಲೋಕಶ್ಚ ಪ್ರಿಯಂ ಹ್ಯೇತನ್ಮಹಾತ್ಮನಃ|| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ನಿರ್ದಹನ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ವಿಷಯಸ್ಥಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ದೇವೇಷು ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ವ್ಯಾಸೇನೋಕ್ತಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[10] ವಿಮುಂಚತಿ ನ ಎಂಬ ಪಾಠಾಂತರವಿದೆ (ಭಾರತ ದರ್ಶನ).

[11] ಸ ಏವ ವ್ಯಾಪೃತೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.