Anushasana Parva: Chapter 145

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೫

ಈಶ್ವರಪ್ರಶಂಸಾ

ಶ್ರೀಕೃಷ್ಣನು ಶಿವನ ಮಹಾತ್ಮೆಗಳನ್ನು ವರ್ಣಿಸಿದುದು (1-41).

13145001 ಯುಧಿಷ್ಠಿರ ಉವಾಚ|

13145001a ದುರ್ವಾಸಸಃ ಪ್ರಸಾದಾತ್ತೇ ಯತ್ತದಾ ಮಧುಸೂದನ|

13145001c ಅವಾಪ್ತಮಿಹ ವಿಜ್ಞಾನಂ ತನ್ಮೇ ವ್ಯಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಮಧುಸೂದನ! ಆಗ ದುರ್ವಾಸನ ಪ್ರಸಾದದಿಂದ ನೀನು ಪಡೆದುಕೊಂಡ ವಿಜ್ಞಾನದ ಕುರಿತು ನನಗೆ ಹೇಳಬೇಕು.

13145002a ಮಹಾಭಾಗ್ಯಂ ಚ ಯತ್ತಸ್ಯ ನಾಮಾನಿ ಚ ಮಹಾತ್ಮನಃ|

13145002c ತತ್ತ್ವತೋ ಜ್ಞಾತುಮಿಚ್ಚಾಮಿ ಸರ್ವಂ ಮತಿಮತಾಂ ವರ||

ಮತಿಮತರಲ್ಲಿ ಶ್ರೇಷ್ಠ! ಆ ಮಹಾತ್ಮನ ಮಹಾಭಾಗ್ಯವನ್ನೂ, ನಾಮಗಳೆಲ್ಲವನ್ನೂ ತತ್ತ್ವತಃ ತಿಳಿದುಕೊಳ್ಳಲು ಬಯಸುತ್ತೇನೆ.”

13145003 ವಾಸುದೇವ ಉವಾಚ|

13145003a ಹಂತ ತೇ ಕಥಯಿಷ್ಯಾಮಿ ನಮಸ್ಕೃತ್ವಾ ಕಪರ್ದಿನೇ|

13145003c ಯದವಾಪ್ತಂ ಮಹಾರಾಜ ಶ್ರೇಯೋ ಯಚ್ಚಾರ್ಜಿತಂ ಯಶಃ||

ವಾಸುದೇವನು ಹೇಳಿದನು: “ಮಹಾರಾಜ! ನಿಲ್ಲು! ಕಪರ್ದಿನಿಗೆ ನಮಸ್ಕರಿಸಿ ಅವನಿಂದ ಪಡೆದುಕೊಂಡ ಶ್ರೇಯಸ್ಸು ಮತ್ತು ಯಶಸ್ಸನ್ನು ನಿನಗೆ ಹೇಳುತ್ತೇನೆ.

13145004a ಪ್ರಯತಃ ಪ್ರಾತರುತ್ಥಾಯ ಯದಧೀಯೇ ವಿಶಾಂ ಪತೇ|

13145004c ಪ್ರಾಂಜಲಿಃ ಶತರುದ್ರೀಯಂ ತನ್ಮೇ ನಿಗದತಃ ಶೃಣು||

ವಿಶಾಂಪತೇ! ಬೆಳಿಗ್ಗೆ ಎದ್ದು ಇಂದ್ರಿಯಗಳನ್ನು ನಿಗ್ರಹಿಸಿ ಕೈಜೋಡಿಸಿ ಪಾರಾಯಣಮಾಡುವ ಶತರುದ್ರೀಯವನ್ನು ಹೇಳುತ್ತೇನೆ. ಕೇಳು.

13145005a ಪ್ರಜಾಪತಿಸ್ತತ್ಸಸೃಜೇ ತಪಸೋಽಂತೇ ಮಹಾತಪಾಃ|

13145005c ಶಂಕರಸ್ತ್ವಸೃಜತ್ತಾತ ಪ್ರಜಾಃ ಸ್ಥಾವರಜಂಗಮಾಃ||

ತಪಸ್ಸಿನ ಅಂತ್ಯದಲ್ಲಿ ಮಹಾತಪಸ್ವಿ ಪ್ರಜಾಪತಿಯು ಇದನ್ನು ಸೃಷ್ಟಿಸಿದನು. ಅಯ್ಯಾ! ಶಂಕರನು ಸ್ಥಾವರಜಂಗಮಗಳನ್ನೂ ಪ್ರಜೆಗಳನ್ನೂ ಸೃಷ್ಟಿಸಿದನು.

13145006a ನಾಸ್ತಿ ಕಿಂ ಚಿತ್ಪರಂ ಭೂತಂ ಮಹಾದೇವಾದ್ವಿಶಾಂ ಪತೇ|

13145006c ಇಹ ತ್ರಿಷ್ವಪಿ ಲೋಕೇಷು ಭೂತಾನಾಂ ಪ್ರಭವೋ ಹಿ ಸಃ||

ವಿಶಾಂಪತೇ! ಮಹಾದೇವನಿಗಿಂತಲೂ ಶ್ರೇಷ್ಠ ಭೂತವು ಇನ್ನೊಂದಿಲ್ಲ. ಇಲ್ಲಿ ಮತ್ತು ಮೂರೂ ಲೋಕಗಳ ಭೂತಗಳ ಸೃಷ್ಟಿಕರ್ತನೂ ಅವನೇ.

13145007a ನ ಚೈವೋತ್ಸಹತೇ ಸ್ಥಾತುಂ ಕಶ್ಚಿದಗ್ರೇ ಮಹಾತ್ಮನಃ|

13145007c ನ ಹಿ ಭೂತಂ ಸಮಂ ತೇನ ತ್ರಿಷು ಲೋಕೇಷು ವಿದ್ಯತೇ||

ಆ ಮಹಾತ್ಮನ ಎದಿರು ನಿಲ್ಲಲೂ ಕೂಡ ಯಾರೂ ಸಮರ್ಥರಲ್ಲ. ಮೂರು ಲೋಕಗಳಲ್ಲಿಯೂ ಅವನಿಗೆ ಸಮನಾದ ಯಾರೂ ಇಲ್ಲ.

13145008a ಗಂಧೇನಾಪಿ ಹಿ ಸಂಗ್ರಾಮೇ ತಸ್ಯ ಕ್ರುದ್ಧಸ್ಯ ಶತ್ರವಃ|

13145008c ವಿಸಂಜ್ಞಾ ಹತಭೂಯಿಷ್ಠಾ ವೇಪಂತಿ ಚ ಪತಂತಿ ಚ||

ಸಂಗ್ರಾಮದಲ್ಲಿ ಕ್ರುದ್ಧನಾದ ಅವನ ವಾಸನೆಯಿಂದಲೇ ಶತ್ರುಗಳು ಮೂರ್ಛಿತರಾಗುತ್ತಾರೆ. ಮೃತಪ್ರಾಯರಾಗುತ್ತಾರೆ. ಗಡಗಡನೆ ನಡಗುತ್ತಾರೆ.

13145009a ಘೋರಂ ಚ ನಿನದಂ ತಸ್ಯ ಪರ್ಜನ್ಯನಿನದೋಪಮಮ್|

13145009c ಶ್ರುತ್ವಾ ವಿದೀರ್ಯೇದ್ಧೃದಯಂ ದೇವಾನಾಮಪಿ ಸಂಯುಗೇ||

ಯುದ್ಧದಲ್ಲಿ ಮೋಡದ ಗುಡುಗಿನಂತಿರುವ ಅವನ ಘೋರ ನಿನಾದವನ್ನು ಕೇಳಿಯೇ ದೇವತೆಗಳ ಹೃದಯಗಳೂ ಕೂಡ ಸೀಳಿಹೋಗುತ್ತವೆ.

13145010a ಯಾಂಶ್ಚ ಘೋರೇಣ ರೂಪೇಣ ಪಶ್ಯೇತ್ಕ್ರುದ್ಧಃ ಪಿನಾಕಧೃಕ್|

13145010c ನ ಸುರಾ ನಾಸುರಾ ಲೋಕೇ ನ ಗಂಧರ್ವಾ ನ ಪನ್ನಗಾಃ|

13145010e ಕುಪಿತೇ ಸುಖಮೇಧಂತೇ ತಸ್ಮಿನ್ನಪಿ ಗುಹಾಗತಾಃ||

ಪಿನಾಕಧಾರಿಯು ಕ್ರುದ್ಧನಾಗಿ ತನ್ನ ಘೋರ ರೂಪದಿಂದ ಯಾರನ್ನು ನೋಡುತ್ತಾನೋ ಅವರ ಹೃದಯವು ಸೀಳಿಹೋಗುತ್ತದೆ. ಅವನು ಕುಪಿತನಾದರೆ ಸುರರಾಗಲೀ, ಅಸುರರಾಗಲೀ, ಗಂಧರ್ವರಾಗಲೀ, ಪನ್ನಗಗಳಾಗಲೀ ಈ ಲೋಕದಲ್ಲಿ ಗುಹೆಗಳಲ್ಲಿ ಅಡಗಿಕೊಂಡರೂ ಸುಖಿಗಳಾಗಿರಲಾರರು.

13145011a ಪ್ರಜಾಪತೇಶ್ಚ ದಕ್ಷಸ್ಯ ಯಜತೋ ವಿತತೇ ಕ್ರತೌ|

13145011c ವಿವ್ಯಾಧ ಕುಪಿತೋ ಯಜ್ಞಂ ನಿರ್ಭಯಸ್ತು ಭವಸ್ತದಾ|

13145011e ಧನುಷಾ ಬಾಣಮುತ್ಸೃಜ್ಯ ಸಘೋಷಂ ವಿನನಾದ ಚ||

ಪ್ರಜಾಪತಿ ದಕ್ಷನು ವಿಸ್ತಾರವಾದ ಯಜ್ಞವನ್ನು ಮಾಡುತ್ತಿದ್ದಾಗ ಕುಪಿತನಾದ ಭವನು ನಿರ್ಭಯನಾಗಿ ಆ ಯಜ್ಞವನ್ನು ಧ್ವಂಸಮಾಡಿದನು. ಧನುಸ್ಸಿನಿಂದ ಬಾಣವನ್ನು ಬಿಟ್ಟು ಗಂಭೀರ ಸ್ವರದಿಂದ ಸಿಂಹನಾದ ಮಾಡಿದನು.

13145012a ತೇ ನ ಶರ್ಮ ಕುತಃ ಶಾಂತಿಂ ವಿಷಾದಂ ಲೇಭಿರೇ ಸುರಾಃ|

13145012c ವಿದ್ರುತೇ ಸಹಸಾ ಯಜ್ಞೇ ಕುಪಿತೇ ಚ ಮಹೇಶ್ವರೇ||

ಮಹೇಶ್ವರನು ಕುಪಿತನಾಗಿ ಯಜ್ಞವು ಧ್ವಂಸಗೊಳ್ಳುತ್ತಿರುವಾಗ ಸುರರಿಗೆ ಎಲ್ಲಿಯ ಶಾಂತಿ? ನೆಲೆಯಿಲ್ಲದೇ ಅವರು ದುಃಖಕ್ಕೀಡಾದರು.

13145013a ತೇನ ಜ್ಯಾತಲಘೋಷೇಣ ಸರ್ವೇ ಲೋಕಾಃ ಸಮಾಕುಲಾಃ|

13145013c ಬಭೂವುರವಶಾಃ ಪಾರ್ಥ ವಿಷೇದುಶ್ಚ ಸುರಾಸುರಾಃ||

ಅವನ ಧನುಷ್ಟಂಕಾರದಿಂದ ಸರ್ವಲೋಕಗಳೂ ವ್ಯಾಕುಲಗೊಂಡು ಅವಶವಾದವು. ಪಾರ್ಥ! ಸುರಾಸುರರು ವಿಷಾದಿಸಿದರು.

13145014a ಆಪಶ್ಚುಕ್ಷುಭಿರೇ ಚೈವ ಚಕಂಪೇ ಚ ವಸುಂಧರಾ|

13145014c ವ್ಯದ್ರವನ್ಗಿರಯಶ್ಚಾಪಿ ದ್ಯೌಃ ಪಫಾಲ ಚ ಸರ್ವಶಃ||

ಸಮುದ್ರಗಳು ಅಲ್ಲೋಲಕಲ್ಲೋಲಗೊಂಡವು. ವಸುಂಧರೆಯು ಕಂಪಿಸಿತು. ಗಿರಿಗಳು ನಡುಗಿದವು. ಆಕಾಶದ ಎಲ್ಲೆಡೆ ಬಿರುಕುಬಿಟ್ಟಿತು.

13145015a ಅಂಧೇನ ತಮಸಾ ಲೋಕಾಃ ಪ್ರಾವೃತಾ ನ ಚಕಾಶಿರೇ|

13145015c ಪ್ರನಷ್ಟಾ ಜ್ಯೋತಿಷಾಂ ಭಾಶ್ಚ ಸಹ ಸೂರ್ಯೇಣ ಭಾರತ||

ಭಾರತ! ತಮಸ್ಸಿನ ಅಂಧಕಾರದಿಂದ ಲೋಕವೆಲ್ಲಾ ಮುಳುಗಿಹೋಯಿತು. ಗ್ರಹ-ನಕ್ಷತ್ರಗಳ ಬೆಳಕೂ ಸೂರ್ಯನ ಬೆಳಕಿನೊಂದಿಗೆ ನಷ್ಟವಾಗಿ ಹೋದವು.

13145016a ಭೃಶಂ ಭೀತಾಸ್ತತಃ ಶಾಂತಿಂ ಚಕ್ರುಃ ಸ್ವಸ್ತ್ಯಯನಾನಿ ಚ|

13145016c ಋಷಯಃ ಸರ್ವಭೂತಾನಾಮಾತ್ಮನಶ್ಚ ಹಿತೈಷಿಣಃ||

ಅತ್ಯಂತ ಭೀತರಾದ ಋಷಿಗಳು ಸರ್ವಭೂತಗಳ ಮತ್ತು ತಮ್ಮ ಹಿತಗಳನ್ನು ಬಯಸಿ ಶಾಂತಿಕರ್ಮಗಳನ್ನೂ ಸ್ವಸ್ತಿವಾಚನಗಳನ್ನೂ ಮಾಡತೊಡಗಿದರು.

13145017a ತತಃ ಸೋಽಭ್ಯದ್ರವದ್ದೇವಾನ್ ಕ್ರುದ್ಧೋ ರೌದ್ರಪರಾಕ್ರಮಃ|

13145017c ಭಗಸ್ಯ ನಯನೇ ಕ್ರುದ್ಧಃ ಪ್ರಹಾರೇಣ ವ್ಯಶಾತಯತ್||

ಆಗ ಕ್ರುದ್ದನಾದ ಆ ರೌದ್ರಪರಾಕ್ರಮಿಯು ದೇವತೆಗಳನ್ನು ಓಡಿಸಿಕೊಂಡು ಹೋದನು. ಕ್ರುದ್ಧನಾಗಿ ಅವನು ಭಗನ ಕಣ್ಣುಗಳನ್ನೇ ಪ್ರಹರಿಸಿ ಕಿತ್ತುಹಾಕಿದನು.

13145018a ಪೂಷಾಣಂ ಚಾಭಿದುದ್ರಾವ ಪರೇಣ ವಪುಷಾನ್ವಿತಃ|

13145018c ಪುರೋಡಾಶಂ ಭಕ್ಷಯತೋ ದಶನಾನ್ವೈ ವ್ಯಶಾತಯತ್||

ಇನ್ನೊಂದು ರೂಪವನ್ನೇ ತಾಳಿದ್ದ ಶಿವನು ಪುರೋಡಾಶವನ್ನು ತಿನ್ನುತ್ತಿದ್ದ ಪೂಷನನ್ನು ಕಾಲ್ನಡುಗೆಯಿಂದಲೇ ಅಟ್ಟಿಸಿಕೊಂಡು ಹೋಗಿ ಅವನ ಹಲ್ಲುಗಳನ್ನು ಉದುರಿಸಿದನು.

13145019a ತತಃ ಪ್ರಣೇಮುರ್ದೇವಾಸ್ತೇ ವೇಪಮಾನಾಃ ಸ್ಮ ಶಂಕರಮ್|

13145019c ಪುನಶ್ಚ ಸಂದಧೇ ರುದ್ರೋ ದೀಪ್ತಂ ಸುನಿಶಿತಂ ಶರಮ್||

ದೇವತೆಗಳು ನಡುಗುತ್ತಾ ಆ ಶಂಕರನಿಗೆ ಪ್ರಣಾಮಮಾಡತೊಡಗಿದರು. ರುದ್ರನು ಉರಿಯುತ್ತಿದ್ದ ನಿಶಿತ ಶರವೊಂದನ್ನು ಪುನಃ ಹೂಡಿದನು.

13145020a ರುದ್ರಸ್ಯ ವಿಕ್ರಮಂ ದೃಷ್ಟ್ವಾ ಭೀತಾ ದೇವಾಃ ಸಹರ್ಷಿಭಿಃ|

13145020c ತತಃ ಪ್ರಸಾದಯಾಮಾಸುಃ ಶರ್ವಂ ತೇ ವಿಬುಧೋತ್ತಮಾಃ||

ರುದ್ರನ ವಿಕ್ರಮವನ್ನು ನೋಡಿ ಭೀತರಾದ ವಿಭುದೋತ್ತಮ ದೇವತೆಗಳು ಋಷಿಗಳೊಂದಿಗೆ ಶರ್ವನನ್ನು ಪ್ರಸನ್ನಗೊಳಿಸತೊಡಗಿದರು.

13145021a ಜೇಪುಶ್ಚ ಶತರುದ್ರೀಯಂ ದೇವಾಃ ಕೃತ್ವಾಂಜಲಿಂ ತತಃ|

13145021c ಸಂಸ್ತೂಯಮಾನಸ್ತ್ರಿದಶೈಃ ಪ್ರಸಸಾದ ಮಹೇಶ್ವರಃ||

ದೇವತೆಗಳು ಕೈಮುಗಿದುಕೊಂಡು ಶತರುದ್ರೀಯವನ್ನು ಜಪಿಸತೊಡಗಿದರು. ತ್ರಿದಶರಿಂದ ಸ್ತುತಿಸಲ್ಪಟ್ಟ ಮಹೇಶ್ವರನು ಪ್ರಸನ್ನನಾದನು.

13145022a ರುದ್ರಸ್ಯ ಭಾಗಂ ಯಜ್ಞೇ ಚ ವಿಶಿಷ್ಟಂ ತೇ ತ್ವಕಲ್ಪಯನ್|

13145022c ಭಯೇನ ತ್ರಿದಶಾ ರಾಜನ್ ಶರಣಂ ಚ ಪ್ರಪೇದಿರೇ||

13145023a ತೇನ ಚೈವಾತಿಕೋಪೇನ ಸ ಯಜ್ಞಃ ಸಂಧಿತೋಽಭವತ್|

13145023c ಯದ್ಯಚ್ಚಾಪಿ ಹತಂ ತತ್ರ ತತ್ತಥೈವ ಪ್ರದೀಯತೇ||

ರಾಜನ್! ಅವನ ಅತಿಕೋಪದ ಭಯದಿಂದ ತ್ರಿದಶರು ರುದ್ರನ ಶರಣು ಹೊಕ್ಕರು. ಯಜ್ಞದಲ್ಲಿ ಅವನಿಗೆ ವಿಶಿಷ್ಟ ಹವಿರ್ಭಾಗವನ್ನು ಕಲ್ಪಿಸಿದರು. ಅನಂತರ ಆ ಯಜ್ಞವು ಪೂರ್ಣಗೊಂಡಿತು. ಅಲ್ಲಿ ಹತವಾಗಿದ್ದ ಎಲ್ಲವೂ ಮತ್ತೆ ಕಾಣಿಸಿಕೊಂಡವು.

13145024a ಅಸುರಾಣಾಂ ಪುರಾಣ್ಯಾಸಂಸ್ತ್ರೀಣಿ ವೀರ್ಯವತಾಂ ದಿವಿ|

13145024c ಆಯಸಂ ರಾಜತಂ ಚೈವ ಸೌವರ್ಣಮಪರಂ ತಥಾ||

ವೀರ್ಯವಂತ ಅಸುರರಿಗೆ ದಿವಿಯಲ್ಲಿ ಮೂರು ಪುರಗಳಿದ್ದವು: ಉಕ್ಕಿನ, ಬೆಳ್ಳಿಯ ಮತ್ತು ಇನ್ನೊಂದು ಚಿನ್ನದ ಪುರಗಳು.

13145025a ನಾಶಕತ್ತಾನಿ ಮಘವಾ ಭೇತ್ತುಂ ಸರ್ವಾಯುಧೈರಪಿ|

13145025c ಅಥ ಸರ್ವೇಽಮರಾ ರುದ್ರಂ ಜಗ್ಮುಃ ಶರಣಮರ್ದಿತಾಃ||

ಇಂದ್ರನಿಗೆ ಸರ್ವಾಯುಧಗಳಿಂದಲೂ ಅವುಗಳನ್ನು ಭೇದಿಸಲು ಸಾಧ್ಯವಾಗಲಿಲ್ಲ. ಆಗ ದುಃಖಿತರಾದ ಸರ್ವ ಅಮರರೂ ರುದ್ರನಿಗೆ ಶರಣುಹೋದರು.

13145026a ತತ ಊಚುರ್ಮಹಾತ್ಮಾನೋ ದೇವಾಃ ಸರ್ವೇ ಸಮಾಗತಾಃ|

13145026c ರುದ್ರ ರೌದ್ರಾ ಭವಿಷ್ಯಂತಿ ಪಶವಃ ಸರ್ವಕರ್ಮಸು|

13145026e ಜಹಿ ದೈತ್ಯಾನ್ಸಹ ಪುರೈರ್ಲೋಕಾಂಸ್ತ್ರಾಯಸ್ವ ಮಾನದ||

ಸರ್ವ ಮಹಾತ್ಮಾ ದೇವತೆಗಳೂ ಒಂದಾಗಿ ಹೇಳಿದರು: “ರುದ್ರ! ಆ ದೈತ್ಯರು ನಮ್ಮ ಎಲ್ಲ ಕರ್ಮಗಳಲ್ಲಿಯೂ ಪಶುಗಳಂತೆ ರೌದ್ರರಾಗಿದ್ದಾರೆ. ಆದುದರಿಂದ ಮಾನದ! ಪುರಗಳೊಂದಿಗೆ ಆ ದೈತ್ಯರನ್ನು ಸಂಹರಿಸಿ ಲೋಕಗಳನ್ನು ಉದ್ಧರಿಸು!”

13145027a ಸ ತಥೋಕ್ತಸ್ತಥೇತ್ಯುಕ್ತ್ವಾ ವಿಷ್ಣುಂ ಕೃತ್ವಾ ಶರೋತ್ತಮಮ್|

13145027c ಶಲ್ಯಮಗ್ನಿಂ ತಥಾ ಕೃತ್ವಾ ಪುಂಖಂ ವೈವಸ್ವತಂ ಯಮಮ್|

13145027e ವೇದಾನ್ಕೃತ್ವಾ ಧನುಃ ಸರ್ವಾನ್ ಜ್ಯಾಂ ಚ ಸಾವಿತ್ರಿಮುತ್ತಮಾಮ್||

13145028a ದೇವಾನ್ರಥವರಂ ಕೃತ್ವಾ ವಿನಿಯುಜ್ಯ ಚ ಸರ್ವಶಃ|

13145028c ತ್ರಿಪರ್ವಣಾ ತ್ರಿಶಲ್ಯೇನ ತೇನ ತಾನಿ ಬಿಭೇದ ಸಃ||

ಹಾಗೆಯೇ ಆಗಲೆಂದು ಹೇಳಿ ರುದ್ರನು ವಿಷ್ಣುವನ್ನು ಉತ್ತಮಶರವನ್ನಾಗಿ ಮಾಡಿಕೊಂಡು, ಅಗ್ನಿಯನ್ನು ಬಾಣದ ತುದಿಯನ್ನಾಗಿ ಮಾಡಿಕೊಂಡು, ವೈವಸ್ವತ ಯಮನನ್ನು ಬಾಣದ ರೆಕ್ಕೆಗಳನ್ನಾಗಿಯೂ, ಸರ್ವ ವೇದಗಳನ್ನು ಧನುಸ್ಸನ್ನಾಗಿಯೂ ಮಾಡಿಕೊಂಡು, ಸಾವಿತ್ರಿಯನ್ನು ಉತ್ತಮ ಶಿಂಜಿನಿಯನ್ನಾಗಿಯೂ, ದೇವತೆಗಳನ್ನು ಶ್ರೇಷ್ಠ ರಥವನ್ನಾಗಿಯೂ ಮಾಡಿಕೊಂಡು ಎಲ್ಲರನ್ನೂ ರಥದಲ್ಲಿ ನಿಯೋಜಿಸಿ, ಮೂರು ಗಿಣ್ಣುಗಳಿದ್ದ ಮೂರು ಅಗ್ನಿಗಳಿಂದ ಕೂಡಿದ ಶರದಿಂದ ಆ ಪುರಗಳನ್ನು ಭೇದಿಸಿದನು.

13145029a ಶರೇಣಾದಿತ್ಯವರ್ಣೇನ ಕಾಲಾಗ್ನಿಸಮತೇಜಸಾ|

13145029c ತೇಽಸುರಾಃ ಸಪುರಾಸ್ತತ್ರ ದಗ್ಧಾ ರುದ್ರೇಣ ಭಾರತ||

ಭಾರತ! ಆದಿತ್ಯವರ್ಣದ ಕಾಲಾಗ್ನಿಸಮತೇಜಸ್ಸಿನ ಶರದಿಂದ ರುದ್ರನು ಪುರಗಳೊಂದಿಗೆ ಆ ಅಸುರರನ್ನು ಸುಟ್ಟು ಭಸ್ಮಮಾಡಿದನು.

13145030a ತಂ ಚೈವಾಂಕಗತಂ ದೃಷ್ಟ್ವಾ ಬಾಲಂ ಪಂಚಶಿಖಂ ಪುನಃ|

13145030c ಉಮಾ ಜಿಜ್ಞಾಸಮಾನಾ ವೈ ಕೋಽಯಮಿತ್ಯಬ್ರವೀತ್ತದಾ||

ಇನ್ನೊಮ್ಮೆ ಪಂಚಶಿಖೆಗಳನ್ನು ಧರಿಸಿ ಬಾಲಕನ ರೂಪದಲ್ಲಿ ಅವನು ಉಮೆಯ ತೊಡೆಯ ಮೇಲೆ ಕುಳಿತುಕೊಂಡಾಗ ಅವಳು ಇವನು ಯಾರೆಂದು ಜಿಜ್ಞಾಸೆ ಮಾಡುತ್ತಾ ದೇವತೆಗಳನ್ನು ಕೇಳಿದಳು.

13145031a ಅಸೂಯತಶ್ಚ ಶಕ್ರಸ್ಯ ವಜ್ರೇಣ ಪ್ರಹರಿಷ್ಯತಃ|

13145031c ಸವಜ್ರಂ ಸ್ತಂಭಯಾಮಾಸ ತಂ ಬಾಹುಂ ಪರಿಘೋಪಮಮ್||

ಅಸೂಯಾಪರನಾದ ಶಕ್ರನು ಅವನನ್ನು ವಜ್ರದಿಂದ ಪ್ರಹರಿಸಲು ರುದ್ರನು ವಜ್ರದೊಂದಿಗೆ ಅವನ ಪರಿಘೋಪಮ ಬಾಹುವನ್ನೂ ಸ್ತಂಭಗೊಳಿಸಿದನು.

13145032a ನ ಸಂಬುಬುಧಿರೇ ಚೈನಂ ದೇವಾಸ್ತಂ ಭುವನೇಶ್ವರಮ್|

13145032c ಸಪ್ರಜಾಪತಯಃ ಸರ್ವೇ ತಸ್ಮಿನ್ಮುಮುಹುರೀಶ್ವರೇ||

ಪ್ರಜಾಪತಿಯೂ ಕೂಡಿ ಅಲ್ಲಿದ್ದ ದೇವತೆಗಳೆಲ್ಲರೂ ಈಶ್ವರನಿಂದ ಮೋಹಿತರಾಗಿ ಪಂಚಶಿಖ ಬಾಲಕನಾಗಿ ಕುಳಿತಿದ್ದ ಭುವನೇಶ್ವರನನ್ನು ಯಾರೆಂದು ತಿಳಿಯದಾದರು.

13145033a ತತೋ ಧ್ಯಾತ್ವಾಥ ಭಗವಾನ್ ಬ್ರಹ್ಮಾ ತಮಮಿತೌಜಸಮ್|

13145033c ಅಯಂ ಶ್ರೇಷ್ಠ ಇತಿ ಜ್ಞಾತ್ವಾ ವವಂದೇ ತಮುಮಾಪತಿಮ್||

ಆಗ ಭಗವಾನ್ ಬ್ರಹ್ಮನು ಧ್ಯಾನದ ಮೂಲಕ ಇವನು ಶ್ರೇಷ್ಠ ಎಂದು ತಿಳಿದು ಆ ಅಮಿತೌಜಸ ಉಮಾಪತಿಯನ್ನು ವಂದಿಸಿದನು.

13145034a ತತಃ ಪ್ರಸಾದಯಾಮಾಸುರುಮಾಂ ರುದ್ರಂ ಚ ತೇ ಸುರಾಃ|

13145034c ಬಭೂವ ಸ ತದಾ ಬಾಹುರ್ಬಲಹಂತುರ್ಯಥಾ ಪುರಾ||

ಅನಂತರ ಸುರರು ಉಮೆ ಮತ್ತು ರುದ್ರರನ್ನು ಪ್ರಸನ್ನಗೊಳಿಸಿದರು. ಆಗ ಬಲಹಂತಕ ಇಂದ್ರನ ಬಾಹುವು ಮೊದಲಿನಂತೆಯೇ ಆಯಿತು.

13145035a ಸ ಚಾಪಿ ಬ್ರಾಹ್ಮಣೋ ಭೂತ್ವಾ ದುರ್ವಾಸಾ ನಾಮ ವೀರ್ಯವಾನ್|

13145035c ದ್ವಾರವತ್ಯಾಂ ಮಮ ಗೃಹೇ ಚಿರಂ ಕಾಲಮುಪಾವಸತ್||

ಅವನೇ ದುರ್ವಾಸಾ ಎಂಬ ಹೆಸರಿನ ವೀರ್ಯವಾನ್ ಬ್ರಾಹ್ಮಣನಾಗಿ ದ್ವಾರವತಿಯ ನನ್ನ ಮನೆಯಲ್ಲಿ ಬಹುಕಾಲ ವಾಸಿಸಿಕೊಂಡಿದ್ದನು.

13145036a ವಿಪ್ರಕಾರಾನ್ ಪ್ರಯುಂಕ್ತೇ ಸ್ಮ ಸುಬಹೂನ್ಮಮ ವೇಶ್ಮನಿ|

13145036c ತಾನುದಾರತಯಾ ಚಾಹಮಕ್ಷಮಂ ತಸ್ಯ ದುಃಸಹಮ್||

ನನ್ನ ಮನೆಯಲ್ಲಿ ವಾಸಿಸುತ್ತಿರುವಾಗ ಅವನು ನನಗೆ ವಿರುದ್ಧವಾದ ಮತ್ತು ಸಹಿಸಲು ಅಸಾಧ್ಯವಾದ ಅನೇಕ ಅಪ್ರಿಯ ಕಾರ್ಯಗಳನ್ನು ಮಾಡಿದನು. ಅವೆಲ್ಲವನ್ನೂ ನಾನು ಉದಾರತೆಯಿಂದ ಸಹಿಸಿಕೊಂಡೆನು.

[1]13145037a ಸ ದೇವೇಂದ್ರಶ್ಚ ವಾಯುಶ್ಚ ಸೋಽಶ್ವಿನೌ ಸ ಚ ವಿದ್ಯುತಃ|

13145037c ಸ ಚಂದ್ರಮಾಃ ಸ ಚೇಶಾನಃ ಸ ಸೂರ್ಯೋ ವರುಣಶ್ಚ ಸಃ||

ಅವನೇ ದೇವೇಂದ್ರ, ವಾಯು, ಅಶ್ವಿನಿಯರು ಮತ್ತು ವಿದ್ಯುತ್. ಅವನೇ ಚಂದ್ರಮ, ಈಶಾನ, ಸೂರ್ಯ ಮತ್ತು ವರುಣನೂ ಕೂಡ.

13145038a ಸ ಕಾಲಃ ಸೋಽಂತಕೋ ಮೃತ್ಯುಃ ಸ ತಮೋ ರಾತ್ರ್ಯಹಾನಿ ಚ|

13145038c ಮಾಸಾರ್ಧಮಾಸಾ ಋತವಃ ಸಂಧ್ಯೇ ಸಂವತ್ಸರಶ್ಚ ಸಃ||

ಅವನೇ ಕಾಲ, ಅಂತಕ, ಮೃತ್ಯು, ತಮಸ್ಸು ಮತ್ತು ದಿನ-ರಾತ್ರಿಗಳು. ಅವನೇ ಮಾಸ, ಪಕ್ಷ, ಋತುಗಳು, ಸಂಧ್ಯಾ ಮತ್ತು ಸಂವತ್ಸರ ಕೂಡ.

13145039a ಸ ಧಾತಾ ಸ ವಿಧಾತಾ ಚ ವಿಶ್ವಕರ್ಮಾ ಸ ಸರ್ವವಿತ್|

13145039c ನಕ್ಷತ್ರಾಣಿ ದಿಶಶ್ಚೈವ ಪ್ರದಿಶೋಽಥ ಗ್ರಹಾಸ್ತಥಾ|

13145039e ವಿಶ್ವಮೂರ್ತಿರಮೇಯಾತ್ಮಾ ಭಗವಾನಮಿತದ್ಯುತಿಃ||

ಅವನೇ ಧಾತಾ, ವಿಧಾತಾ, ವಿಶ್ವಕರ್ಮ ಮತ್ತು ಸರ್ವವನ್ನೂ ತಿಳಿದವನು. ಅವನೇ ನಕ್ಷತ್ರಗಳು, ದಿಕ್ಕುಗಳು, ಉಪದಿಕ್ಕುಗಳು ಮತ್ತು ಗ್ರಹಗಳು ಕೂಡ. ಆ ಭಗವಾನನು ವಿಶ್ವಮೂರ್ತಿ, ಅಮೇಯಾತ್ಮ ಮತ್ತು ಅಮಿತದ್ಯುತಿಯು.

13145040a ಏಕಧಾ ಚ ದ್ವಿಧಾ ಚೈವ ಬಹುಧಾ ಚ ಸ ಏವ ಚ|

13145040c ಶತಧಾ ಸಹಸ್ರಧಾ ಚೈವ ತಥಾ ಶತಸಹಸ್ರಧಾ||

ಅವನೇ ಏಕರೂಪನು. ದ್ವಿರೂಪನು. ಮತ್ತು ಬಹುರೂಪನು. ಅವನಿಗೆ ನೂರು ರೂಪಗಳಿಗೆ. ಸಹಸ್ರ ರೂಪಗಳಿವೆ ಮತ್ತು ನೂರು ಸಾವಿರ ರೂಪಗಳಿವೆ.

13145041a ಈದೃಶಃ ಸ ಮಹಾದೇವೋ ಭೂಯಶ್ಚ ಭಗವಾನತಃ|

13145041c ನ ಹಿ ಶಕ್ಯಾ ಗುಣಾ ವಕ್ತುಮಪಿ ವರ್ಷಶತೈರಪಿ||

ಆ ಮಹಾದೇವನು ಇಂಥವನು ಮತ್ತು ಇನ್ನುಹೆಚ್ಚಿನ ಪ್ರಭಾವಶಾಲಿಯು. ನೂರುವರ್ಷಗಳಾದರೂ ಅವನ ಗುಣಗಳನ್ನು ಹೇಳಲು ಶಕ್ಯವಿಲ್ಲ.””

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಈಶ್ವರಪ್ರಶಂಸಾ ನಾಮ ಪಂಚಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಈಶ್ವರಪ್ರಶಂಸಾ ಎನ್ನುವ ನೂರಾನಲ್ವತ್ತೈದನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸ ವೈ ರುದ್ರಃ ಸ ಚ ಶಿವಃ ಸೋಽಗ್ನಿಃ ಸರ್ವಃ ಸ ಸರ್ವಜಿತ್| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.