Anushasana Parva: Chapter 140

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೦

ಅಗಸ್ತ್ಯನ ಮಹಾತ್ಮ್ಯೆ (1-14). ವಸಿಷ್ಠನ ಮಹಾತ್ಮ್ಯೆ (15-26).

13140001 ಭೀಷ್ಮ ಉವಾಚ|

13140001a ಇತ್ಯುಕ್ತಃ ಸ ತದಾ ತೂಷ್ಣೀಮಭೂದ್ವಾಯುಸ್ತತೋಽಬ್ರವೀತ್|

13140001c ಶೃಣು ರಾಜನ್ನಗಸ್ತ್ಯಸ್ಯ ಮಾಹಾತ್ಮ್ಯಂ ಬ್ರಾಹ್ಮಣಸ್ಯ ಹ||

ಭೀಷ್ಮನು ಹೇಳಿದನು: “ವಾಯುವು ಇದನ್ನು ಹೇಳಲು ರಾಜನು ಸುಮ್ಮನೇ ಇದ್ದನು. ಆಗ ವಾಯುವು ಹೇಳಿದನು: “ರಾಜನ್! ಬ್ರಾಹ್ಮಣ ಅಗಸ್ತ್ಯನ ಮಹಾತ್ಮ್ಯೆಯನ್ನು ಕೇಳು.

13140002a ಅಸುರೈರ್ನಿರ್ಜಿತಾ ದೇವಾ ನಿರುತ್ಸಾಹಾಶ್ಚ ತೇ ಕೃತಾಃ|

13140002c ಯಜ್ಞಾಶ್ಚೈಷಾಂ ಹೃತಾಃ ಸರ್ವೇ ಪಿತೃಭ್ಯಶ್ಚ ಸ್ವಧಾ ತಥಾ||

ಅಸುರರಿಂದ ಸೋತ ದೇವತೆಗಳು ನಿರುತ್ಸಾಹರಾಗಿದ್ದರು. ಅವರ ಯಜ್ಞಭಾಗಗಳನ್ನೂ ಪಿತೃಗಳ ಸ್ವಧಾ ಎಲ್ಲವನ್ನೂ ಅವರು ಅಪಹರಿಸಿದ್ದರು.

13140003a ಕರ್ಮೇಜ್ಯಾ ಮಾನವಾನಾಂ ಚ ದಾನವೈರ್ಹೈಹಯರ್ಷಭ|

13140003c ಭ್ರಷ್ಟೈಶ್ವರ್ಯಾಸ್ತತೋ ದೇವಾಶ್ಚೇರುಃ ಪೃಥ್ವೀಮಿತಿ ಶ್ರುತಿಃ||

ಹೈಹಯರ್ಷಭ! ಮಾನವರ ಕರ್ಮಗಳನ್ನೂ ಯಜ್ಞಗಳನ್ನೂ ದಾನವರು ಭ್ರಷ್ಟಗೊಳಿಸಿದರು. ಆಗ ದೇವತೆಗಳು ಭೂಮಿಯ ಮೇಲೆ ಅಲೆದಾಡುತ್ತಿದ್ದರೆಂದು ಕೇಳಿದ್ದೇವೆ.

13140004a ತತಃ ಕದಾ ಚಿತ್ತೇ ರಾಜನ್ದೀಪ್ತಮಾದಿತ್ಯವರ್ಚಸಮ್|

13140004c ದದೃಶುಸ್ತೇಜಸಾ ಯುಕ್ತಮಗಸ್ತ್ಯಂ ವಿಪುಲವ್ರತಮ್||

ರಾಜನ್! ಆಗ ಒಮ್ಮೆ ಅವರು ಆದಿತ್ಯವರ್ಚಸ್ಸಿನಿಂದ ಬೆಳಗುತ್ತಿದ್ದ ತೇಜೋಯುಕ್ತನಾದ ವಿಪುಲವ್ರತ ಅಗಸ್ತ್ಯನನ್ನು ಕಂಡರು.

13140005a ಅಭಿವಾದ್ಯ ಚ ತಂ ದೇವಾ ದೃಷ್ಟ್ವಾ ಚ ಯಶಸಾ ವೃತಮ್|

13140005c ಇದಮೂಚುರ್ಮಹಾತ್ಮಾನಂ ವಾಕ್ಯಂ ಕಾಲೇ ಜನಾಧಿಪ||

ಜನಾಧಿಪ! ದೇವತೆಗಳು ಯಶಸ್ಸಿನಿಂದ ಆವೃತನಾಗಿದ್ದ ಆ ಮಹಾತ್ಮನನ್ನು ನೋಡಿ ಅಭಿವಂದಿಸಿ ಕಾಲಕ್ಕೆ ತಕ್ಕುದಾದ ಈ ಮಾತನ್ನಾಡಿದರು.

13140006a ದಾನವೈರ್ಯುಧಿ ಭಗ್ನಾಃ ಸ್ಮ ತಥೈಶ್ವರ್ಯಾಚ್ಚ ಭ್ರಂಶಿತಾಃ|

13140006c ತದಸ್ಮಾನ್ನೋ ಭಯಾತ್ತೀವ್ರಾತ್ತ್ರಾಹಿ ತ್ವಂ ಮುನಿಪುಂಗವ||

“ಮುನಿಪುಂಗವ! ಯುದ್ಧದಲ್ಲಿ ನಾವು ದಾನವರಿಂದ ಭಗ್ನರಾದೆವು. ಐಶ್ವರ್ಯದಿಂದಲೂ ವಂಚಿತರಾದೆವು. ಅದರಿಂದ ನಮ್ಮಲ್ಲಿ ತೀವ್ರ ಭಯವುಂಟಾಗಿದೆ. ನೀನೇ ನಮ್ಮನ್ನು ರಕ್ಷಿಸಬೇಕು.”

13140007a ಇತ್ಯುಕ್ತಃ ಸ ತದಾ ದೇವೈರಗಸ್ತ್ಯಃ ಕುಪಿತೋಽಭವತ್|

13140007c ಪ್ರಜಜ್ವಾಲ ಚ ತೇಜಸ್ವೀ ಕಾಲಾಗ್ನಿರಿವ ಸಂಕ್ಷಯೇ||

ದೇವತೆಗಳು ಹೀಗೆ ಹೇಳಲು ಅಗಸ್ಯನು ಕುಪಿತನಾದನು. ಆ ತೇಜಸ್ವಿಯು ಯುಗಾಂತ್ಯದ ಕಾಲಾಗ್ನಿಯಂತೆ ಪ್ರಜ್ವಲಿಸಿದನು.

13140008a ತೇನ ದೀಪ್ತಾಂಶುಜಾಲೇನ ನಿರ್ದಗ್ಧಾ ದಾನವಾಸ್ತದಾ|

13140008c ಅಂತರಿಕ್ಷಾನ್ಮಹಾರಾಜ ನ್ಯಪತಂತ ಸಹಸ್ರಶಃ||

ಮಹಾರಾಜ! ಅವನಿಂದ ಹೊರಹೊಮ್ಮಿದ ಬೆಂಕಿಯ ಕಿಡಿಗಳ ಜಾಲದಿಂದಲೇ ಸಹಸ್ರಾರು ದಾನವರು ದಗ್ಧರಾಗಿ ಅಂತರಿಕ್ಷದಿಂದ ಕೆಳಕ್ಕುರುಳಿದರು.

13140009a ದಹ್ಯಮಾನಾಸ್ತು ತೇ ದೈತ್ಯಾಸ್ತಸ್ಯಾಗಸ್ತ್ಯಸ್ಯ ತೇಜಸಾ|

13140009c ಉಭೌ ಲೋಕೌ ಪರಿತ್ಯಜ್ಯ ಯಯುಃ ಕಾಷ್ಠಾಂ ಸ್ಮ ದಕ್ಷಿಣಾಮ್||

ಅಗಸ್ತ್ಯನ ತೇಜಸ್ಸಿನಿಂದ ಸುಟ್ಟುಹೋಗುತ್ತಿದ್ದ ಆ ದೈತ್ಯರು ಎರಡೂ ಲೋಕಗಳನ್ನೂ ಪರಿತ್ಯಜಿಸಿ ದಕ್ಷಿಣ ದಿಕ್ಕಿಗೆ ಓಡಿ ಹೋದರು.

13140010a ಬಲಿಸ್ತು ಯಜತೇ ಯಜ್ಞಮಶ್ವಮೇಧಂ ಮಹೀಂ ಗತಃ|

13140010c ಯೇಽನ್ಯೇ ಸ್ವಸ್ಥಾ ಮಹೀಸ್ಥಾಶ್ಚ ತೇ ನ ದಗ್ಧಾ ಮಹಾಸುರಾಃ||

ಬಲಿಯಾದರೋ ಆಗ ಭೂಮಿಗೆ ಹೋಗಿ ಅಶ್ವಮೇಧಯಜ್ಞದಲ್ಲಿ ತೊಡಗಿದ್ದನು. ಆಗ ಅವನ ಜೊತೆಯಲ್ಲಿ ಭೂಮಿಯ ಮೇಲಿದ್ದ ಮಹಾಸುರರು ಸ್ವಸ್ಥರಾಗಿದ್ದರು. ಅವರು ಅಗಸ್ತ್ಯನ ತೇಜಸ್ಸಿನಿಂದ ಸುಟ್ಟುಹೋಗಲಿಲ್ಲ.

13140011a ತತೋ ಲೋಕಾಃ ಪುನಃ ಪ್ರಾಪ್ತಾಃ ಸುರೈಃ ಶಾಂತಂ ಚ ತದ್ರಜಃ|

13140011c ಅಥೈನಮಬ್ರುವನ್ದೇವಾ ಭೂಮಿಷ್ಠಾನಸುರಾನ್ ಜಹಿ||

ಅನಂತರ ಪುನಃ ತಮ್ಮ ಲೋಕಗಳನ್ನು ಪಡೆದು ಸುರರು ಶಾಂತರಾದರು. ಮತ್ತೆ ದೇವತೆಗಳು ಅವನಿಗೆ “ಭೂಮಿಯ ಮೇಲಿದ್ದ ಅಸುರರನ್ನು ಸಂಹರಿಸು!” ಎಂದು ಕೇಳಿಕೊಂಡರು.

13140012a ಇತ್ಯುಕ್ತ ಆಹ ದೇವಾನ್ಸ ನ ಶಕ್ನೋಮಿ ಮಹೀಗತಾನ್|

13140012c ದಗ್ಧುಂ ತಪೋ ಹಿ ಕ್ಷೀಯೇನ್ಮೇ ಧಕ್ಷ್ಯಾಮೀತಿ ಚ ಪಾರ್ಥಿವ||

ಪಾರ್ಥಿವ! ಆಗ ಅವನು ದೇವತೆಗಳಿಗೆ “ಭೂಮಿಯ ಮೇಲಿರುವವರನ್ನು ದಹಿಸಲು ನಾನು ಶಕ್ಯನಾಗಿಲ್ಲ. ಅವರನ್ನು ಸುಟ್ಟರೆ ನನ್ನ ತಪಸ್ಸು ಕ್ಷೀಣವಾಗುತ್ತದೆ. ಆದುರಿಂದ ಅವರನ್ನು ಸುಡುವುದಿಲ್ಲ” ಎಂದನು.

13140013a ಏವಂ ದಗ್ಧಾ ಭಗವತಾ ದಾನವಾಃ ಸ್ವೇನ ತೇಜಸಾ|

13140013c ಅಗಸ್ತ್ಯೇನ ತದಾ ರಾಜಂಸ್ತಪಸಾ ಭಾವಿತಾತ್ಮನಾ||

ರಾಜನ್! ಹೀಗೆ ಭಾವಿತಾತ್ಮ ಭಗವಾನ್ ಅಗಸ್ಯನು ತನ್ನದೇ ತೇಜಸ್ಸಿನಿಂದ ದಾನವರನ್ನು ಸುಟ್ಟುಹಾಕಿದನು.

13140014a ಈದೃಶಶ್ಚಾಪ್ಯಗಸ್ತ್ಯೋ ಹಿ ಕಥಿತಸ್ತೇ ಮಯಾನಘ|

13140014c ಬ್ರವೀಮ್ಯಹಂ ಬ್ರೂಹಿ ವಾ ತ್ವಮಗಸ್ತ್ಯಾತ್ಕ್ಷತ್ರಿಯಂ ವರಮ್||

ಅನಘ! ನಾನು ಹೇಳಿದಂತೆ ಅಗಸ್ತ್ಯನು ಹೀಗಿದ್ದನು. ಅಗಸ್ತ್ಯನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನಿದ್ದರೆ ಹೇಳು. ಅಥವಾ ನಾನು ಮುಂದುವರಿಸಿ ಹೇಳುತ್ತೇನೆ.”

13140015a ಇತ್ಯುಕ್ತಃ ಸ ತದಾ ತೂಷ್ಣೀಮಭೂದ್ವಾಯುಸ್ತತೋಽಬ್ರವೀತ್|

13140015c ಶೃಣು ರಾಜನ್ವಸಿಷ್ಠಸ್ಯ ಮುಖ್ಯಂ ಕರ್ಮ ಯಶಸ್ವಿನಃ||

ವಾಯುವು ಹೀಗೆ ಹೇಳಲು ರಾಜನು ಸುಮ್ಮನಾದನು. ಆಗ ವಾಯುವು ಹೇಳಿದನು: “ರಾಜನ್! ಯಶಸ್ವೀ ವಸಿಷ್ಠನ ಮುಖ್ಯ ಕರ್ಮದ ಕುರಿತು ಕೇಳು.

13140016a ಆದಿತ್ಯಾಃ ಸತ್ರಮಾಸಂತ ಸರೋ ವೈ ಮಾನಸಂ ಪ್ರತಿ|

13140016c ವಸಿಷ್ಠಂ ಮನಸಾ ಗತ್ವಾ ಶ್ರುತ್ವಾ ತತ್ರಾಸ್ಯ ಗೋಚರಮ್||

ವಸಿಷ್ಠಮುನಿಯ ಮಹಿಮೆಯನ್ನು ತಿಳಿದು ಮನಸಾರೆ ಅವನ ಶರಣುಹೊಕ್ಕು ಆದಿತ್ಯರು ಮಾನಸಸರೋವರದ ಬಳಿ ಸತ್ರದಲ್ಲಿ ತೊಡಗಿದ್ದರು.

13140017a ಯಜಮಾನಾಂಸ್ತು ತಾನ್ದೃಷ್ಟ್ವಾ ವ್ಯಗ್ರಾನ್ದೀಕ್ಷಾನುಕರ್ಶಿತಾನ್|

13140017c ಹಂತುಮಿಚ್ಚಂತಿ ಶೈಲಾಭಾಃ ಖಲಿನೋ ನಾಮ ದಾನವಾಃ||

ಯಜ್ಞದ ಯಜಮಾನರಾಗಿ ದೀಕ್ಷೆಯನ್ನು ಪಡೆದ ದೇವತೆಗಳು ವ್ಯಗ್ರರೂ, ದೀನರೂ, ದುರ್ಬಲರೂ ಆಗಿರುವುದನ್ನು ಕಂಡು ಪರ್ವತಗಳಂತಹ ಶರೀರವುಳ್ಳ ಖಲಿ ಎಂಬ ಹೆಸರಿನ ದಾನವರು ಅವರನ್ನು ಸಂಹರಿಸಲು ಬಯಸಿದರು.

13140018a ಅದೂರಾತ್ತು ತತಸ್ತೇಷಾಂ ಬ್ರಹ್ಮದತ್ತವರಂ ಸರಃ|

13140018c ಹತಾ ಹತಾ ವೈ ತೇ ತತ್ರ ಜೀವಂತ್ಯಾಪ್ಲುತ್ಯ ದಾನವಾಃ||

ಹತ್ತಿರದಲ್ಲಿಯೇ ಬ್ರಹ್ಮನು ವರವನ್ನಿತ್ತಿದ್ದ ಸರೋವರವಿತ್ತು. ಸತ್ತ ದಾನವರನ್ನು ಅಲ್ಲಿ ಹಾಕಿದಾಗ ಅವರು ಜೀವಿತರಾಗಿ ಮೇಲೇಳುತ್ತಿದ್ದರು.

13140019a ತೇ ಪ್ರಗೃಹ್ಯ ಮಹಾಘೋರಾನ್ಪರ್ವತಾನ್ ಪರಿಘಾನ್ ದ್ರುಮಾನ್|

13140019c ವಿಕ್ಷೋಭಯಂತಃ ಸಲಿಲಮುತ್ಥಿತಾಃ ಶತಯೋಜನಮ್||

ಅವರು ಮಹಾಘೋರ ಪರ್ವತಗಳನ್ನೂ, ಪರಿಘಗಳನ್ನೂ, ವೃಕ್ಷಗಳನ್ನೂ ಹಿಡಿದು ಶತಯೋಜನ ವಿಸ್ತೀರ್ಣದ ಆ ಸರೋವರವನ್ನು ಕ್ಷೋಭೆಗೊಳಿಸುತ್ತಾ ಮೇಲೇಳುತ್ತಿದ್ದರು.

13140020a ಅಭ್ಯದ್ರವಂತ ದೇವಾಂಸ್ತೇ ಸಹಸ್ರಾಣಿ ದಶೈವ ಹ|

13140020c ತತಸ್ತೈರರ್ದಿತಾ ದೇವಾಃ ಶರಣಂ ವಾಸವಂ ಯಯುಃ||

ಹತ್ತು ಸಾವಿರ ದಾನವರು ಬೆನ್ನಟ್ಟಿ ಬರಲು ಆರ್ದಿತರಾದ ದೇವತೆಗಳು ವಾಸವನ ಶರಣುಹೊಕ್ಕರು.

13140021a ಸ ಚ ತೈರ್ವ್ಯಥಿತಃ ಶಕ್ರೋ ವಸಿಷ್ಠಂ ಶರಣಂ ಯಯೌ|

13140021c ತತೋಽಭಯಂ ದದೌ ತೇಭ್ಯೋ ವಸಿಷ್ಠೋ ಭಗವಾನೃಷಿಃ||

ವ್ಯಥಿತನಾದ ಶಕ್ರನು ವಸಿಷ್ಠನ ಶರಣುಹೊಕ್ಕನು. ಆಗ ಭಗವಾನ್ ಋಷಿ ವಸಿಷ್ಠನು ಅವರಿಗೆ ಅಭಯವನ್ನಿತ್ತನು.

13140022a ತಥಾ ತಾನ್ದುಃಖಿತಾನ್ ಜಾನನ್ನಾನೃಶಂಸ್ಯಪರೋ ಮುನಿಃ|

13140022c ಅಯತ್ನೇನಾದಹತ್ಸರ್ವಾನ್ಖಲಿನಃ ಸ್ವೇನ ತೇಜಸಾ||

ಅವರು ಹಾಗೆ ದುಃಖಿತರಾದುದನ್ನು ತಿಳಿದು ಪರಮ ದಯಾಳುವಾದ ಮುನಿಯು ತನ್ನದೇ ತೇಜಸ್ಸಿನಿಂದ ಸ್ವಲ್ಪವೂ ಯತ್ನವಿಲ್ಲದೇ ಆ ಖಲಿಗಳನ್ನು ಸಂಹರಿಸಿದನು.

13140023a ಕೈಲಾಸಂ ಪ್ರಸ್ಥಿತಾಂ ಚಾಪಿ ನದೀಂ ಗಂಗಾಂ ಮಹಾತಪಾಃ|

13140023c ಆನಯತ್ತತ್ಸರೋ ದಿವ್ಯಂ ತಯಾ ಭಿನ್ನಂ ಚ ತತ್ಸರಃ||

ಆ ಮಹಾತಪಸ್ವಿಯು ಕೈಲಾಸದ ಕಡೆ ಹೋಗುತ್ತಿದ್ದ ಗಂಗಾನದಿಯನ್ನು ಆ ಸರೋವರಕ್ಕೆ ಕರೆತಂದನು. ದಿವ್ಯ ಗಂಗೆಯು ಆ ಸರೋವರದ ದಂಡೆಗಳನ್ನೇ ಒಡೆದು ಹಾಕಿದಳು.

13140024a ಸರೋ ಭಿನ್ನಂ ತಯಾ ನದ್ಯಾ ಸರಯೂಃ ಸಾ ತತೋಽಭವತ್|

13140024c ಹತಾಶ್ಚ ಖಲಿನೋ ಯತ್ರ ಸ ದೇಶಃ ಖಲಿನೋಽಭವತ್||

ಗಂಗಾನದಿಯಿಂದ ಆ ಸರೋವರವು ಒಡೆದುಹೋಗಿ ನದಿಯಲ್ಲಿ ಸೇರಲು ಗಂಗೆಯು ಸರಯೂ ಎಂದಾದಳು. ಖಲಿಗಳು ನಾಶವಾದ ಆ ಪ್ರದೇಶವು ಖಲಿನದೇಶವೆಂದಾಯಿತು.

13140025a ಏವಂ ಸೇಂದ್ರಾ ವಸಿಷ್ಠೇನ ರಕ್ಷಿತಾಸ್ತ್ರಿದಿವೌಕಸಃ|

13140025c ಬ್ರಹ್ಮದತ್ತವರಾಶ್ಚೈವ ಹತಾ ದೈತ್ಯಾ ಮಹಾತ್ಮನಾ||

ಹೀಗೆ ಇಂದ್ರನೊಡನೆ ದೇವತೆಗಳನ್ನು ವಸಿಷ್ಠನು ರಕ್ಷಿಸಿದನು. ಬ್ರಹ್ಮನು ವರವನ್ನು ಕೊಟ್ಟಿದ್ದರೂ ಆ ದೈತ್ಯರು ಮಹಾತ್ಮ ವಸಿಷ್ಠನಿಂದ ಹತರಾದರು.

13140026a ಏತತ್ಕರ್ಮ ವಸಿಷ್ಠಸ್ಯ ಕಥಿತಂ ತೇ ಮಯಾನಘ|

13140026c ಬ್ರವೀಮ್ಯಹಂ ಬ್ರೂಹಿ ವಾ ತ್ವಂ ವಸಿಷ್ಠಾತ್ಕ್ಷತ್ರಿಯಂ ವರಮ್||

ಅನಘ! ಇಗೋ ನಾನು ನಿನಗೆ ವಸಿಷ್ಠನ ಮಹತ್ಕರ್ಮದ ಕುರಿತು ಹೇಳಿದ್ದೇನೆ. ವಸಿಷ್ಠನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನಿದ್ದರೆ ಹೇಳು. ಅಥವಾ ನಾನು ಮುಂದುವರಿಸಿ ಹೇಳುತ್ತೇನೆ.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾನಲ್ವತ್ತನೇ ಅಧ್ಯಾಯವು.

Comments are closed.